Thursday 27 June 2013

ಸೋಲುವುದೂ ಕೂಡಾ ಗೆಲುವೇ..??

ಒಂದು ಸ್ಪರ್ಧೆ..

ಹತ್ತು ಜನ ಓಟಗಾರರು ಒಟ್ಟಿಗೆ ಓಡಬೇಕು..

ಆ ಹತ್ತು ಜನ ಓಟಗಾರರೇನು ಕಮ್ಮಿ ಓಟಗಾರರಲ್ಲ ವೃತ್ತಿಪರ ಓಟಗಾರರು. ಓಟದ ಆಟಕ್ಕಾಗಿಯೇ ತಮ್ಮ ಬದುಕನ್ನ ಮುಡಿಪಾಗಿರಿಸಿಕೊಂಡವರು. ಅಲ್ಲಿರುವವರೆಲ್ಲ ಸಾಮಾನ್ಯರಲ್ಲ.. ಇಂಥವನೇ ಗೆಲ್ಲಬಲ್ಲ ಅನ್ನೋದು ಯಾರಿಗೂ ಖಾತ್ರಿಯಿಲ್ಲ. ಯಾರೂ ಕೂಡಾ ಗೆಲ್ಲಬಹುದು. ಯಾರನ್ನೂ ನೆಚ್ಚಿಕೊಳ್ಳುವ ಹಾಗಿಲ್ಲ. ಓಡುವವರು ಕರ್ಣ ಅರ್ಜುನರಾದರೆ ಒಬ್ಬರನ್ನ ಪಕ್ಷವಾಗಿರಿಸಿಕೊಂಡು ಗೆಲ್ಲುವವನ ಕುರಿತು ನಿರೀಕ್ಷೆ ಇಟ್ಟು ಕೊಳ್ಳಬಹುದಿತ್ತು. ಹತ್ತು ಜನ ಅರ್ಜುನರೇ ಓಡುವುದಾದರೆ..??

ಆ ಸ್ಪರ್ಧೆಯನ್ನ ನೋಡಲು ಸಾವಿರಾರು ಜನ ಬಂದಿರುತ್ತಾರೆ. ಅಸಲು ಆ ಸ್ಪರ್ಧಾಳುಗಳು ಯಾರಿಗೂ ಪರಿಚಿತರೇ ಅಲ್ಲ. ಆದರು ಸ್ಪರ್ಧೆ ನೋಡಲೆಂದು ಬಂದ ಮೇಲೆ ಯಾರಿಗಾದರೂ ಸರಿ ಒಬ್ಬನ್ನನ್ನ ಬೆಂಬಲಿಸ ಬೇಕು ಅನ್ನಿಸತ್ತೆ. ಹತ್ತು ಜನರನ್ನ ನೋಡುತ್ತಾರೆ. ಒಂದೇ ಎತ್ತರ.. ಒಂದೇ ಬಣ್ಣ.. ಒಂದೇ ದೆಹಾರ್ಧಾಡ್ಯತೆ. ರೂಪ ಮಾತ್ರ ಬೇರೆ ಬೇರೆ. ಒಬ್ಬರೂ ಒಬ್ಬಬ್ಬರನ್ನ ಮೀರಿಸುವಂತೆ ಅಂದಗಾರಾರಾದದ್ದು ಮತ್ತೊಂದು ಸಮಸ್ಯೆ. ಜನಗಳ ಕೈಲಿ ಬೇರೆ ಆಯ್ಕೆಯಿಲ್ಲ. ಹೇಗೋ ಒಬ್ಬನ್ನನ್ನು ಆಯ್ಕೆ ಮಾಡಿಕೊಳ್ಳುತಾರೆ. ಆಯ್ಕೆ ಮಾಡಿಕೊಳ್ಳ ಬೇಕಾದದ್ದು ಜರೂರತ್ತು ಕೂಡಾ. ಹಾಗೆ ಆಯ್ಕೆ ಮಾಡಿಕೊಂಡರಷ್ಟೇ ಸ್ಪರ್ಧೆ ನೋಡಲೆಂದು ಬಂದ ತಮಗೂ ಒಂದು ಸಮಾಧಾನ. ತನ್ನವನು ಗೆದ್ದರೆ ತಾನೇ ಗೆದ್ದೆನೆಂಬಷ್ಟು ಸಂಭ್ರಮ.

ಸ್ಪರ್ಧೆ ಆರಂಭವಾಗುತ್ತದೆ..

ಎಲ್ಲರು ಮಿಂಚಿನಂತೆ ಓಡುತ್ತಾರೆ. ಯಾರಿಗೂ ಸೋಲುವ ಮನವಿಲ್ಲ. ಸೋಲುವುದಕ್ಕೆಂದು ಯಾರೂ ಆ ಸ್ಪರ್ಧೆಗೆ ಬಂದದ್ದೇ ಅಲ್ಲ. ಎಲ್ಲರ ನಿರೀಕ್ಷೆಯೂ ಗೆಲುವೇ. ಆ ಒಂದು ಕ್ಷಣ ಜಗತ್ತನ್ನೇ ಮರೆತು ಓಡುತ್ತಾರೆ. ತಮ್ಮ ಪೂರ್ವಾಪರ, ಇತಿಹಾಸ, ಭೂಗೋಳ, ಎಲ್ಲವನ್ನೂ ಓಟ ಮರೆಸುತ್ತದೆ. ಓಡುತ್ತಾರೆ.. ಓಡುತ್ತಾರೆ.. ಓಡುತ್ತಾರೆ. ತಮ್ಮ ಸ್ವಶಕ್ತಿ ಸಾಮರ್ಥ್ಯಗಳನ್ನ ಮೀರುವಷ್ಟು ಓಡುತ್ತಾರೆ. ಓಡುವವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಿಲ್ಲ. ಕೀಲಿ ಕೊಟ್ಟ ಬೊಂಬೆಗಳಂತೆ ಓದುವುದಷ್ಟೇ ಅವರ ಕೆಲಸ. ಕೊನೆಯದಾಗಿ ಅವರ ಗುರಿ ಅಲ್ಲಿ ನಿಗದಿ ಮಾಡಿ ಮಾಡಿರುವ ಸ್ಥಳದಲ್ಲಿ ಎಳೆದ ಗೆರೆಯನ್ನ ಮೊದಲು ದಾಟುವುದಷ್ಟೇ.

ಆ ಗೆರೆಯನ್ನ ಮೊದಲು ದಾಟುವುದಷ್ಟೇ ಸ್ಪರ್ಧೆ. ಅಸಲು ಓಡುವುದು ಅಲ್ಲಿ ಮುಖ್ಯವೇ ಅಲ್ಲ. ಓಡುವುದು ಮುಖ್ಯವಲ್ಲ ಅಂದ ಮಾತ್ರಕ್ಕೆ ಅಲ್ಲಿ ನಡೆಯುವುದು ಕಾನೂನು ಬಾಹಿರ. ಅದು ಸ್ಪರ್ಧೆಯ ನಿಯಮವಲ್ಲ. ಓಟದ ಸ್ಪರ್ಧೆ.. ಹಾಗಾಗಿ ಓಡಲೇ ಬೇಕು. ಆದರೆ ಇಷ್ಟೇ ವೇಗದಲ್ಲಿ ಓಡ ಬೇಕೆಂಬುದು ಯಾರ ಮಾನ ದಂಡವೂ ಅಲ್ಲ. ಅದು ಓಡುವವನ ಆಯ್ಕೆ. ಅವರಿಗೆ ಪೂರ್ಣ ಸ್ವಾತಂತ್ರ್ಯವಿದೆ ತಮ್ಮಗಳ ವೇಗದ ಮೇಲೆ. ಮನಸ್ಸು ಮಾಡಿ ಎಲ್ಲರೂ ಮೆತ್ತಗೆಯೇ ಓಡ ಬಹುದಿತ್ತು. ಮೆತ್ತಗೂ ಓಡಬಹುದೆಂದು ಯಾರಿಗೂ ತೋಚುವುದಿಲ್ಲ. ಎಲ್ಲರೂ ಮೆತ್ತಗೆ ಓಡಿ ಎಲ್ಲಿ ಒಬ್ಬೇ ಒಬ್ಬ ವೇಗವಾಗಿ ಓಡಿಬಿಡುವನೋ ಎಂಬ ಆತಂಕ. ಎಲ್ಲರೂ ವೇಗವಾಗಿ ಓಡಿ, ತಾನು ಮಾತ್ರ ಮೆತ್ತಗಾಗಿ ಬಿಡುವೆನೋ ಎಂಬ ಕಳವಳ. ಅಲ್ಲಿಗೆ ವೇಗ ಅವನ ಶಕ್ತಿಗೆ ಮನೋ ಸ್ಥೈರ್ಯಕ್ಕೆ ಪೂರಕವಾದದ್ದು. ಓಡ ಹೇಳಿದೊಡನೆ ತನ್ನ ಕೈಲಾಗುವಷ್ಟು ವೇಗಕ್ಕೆ ಓಡುತ್ತಾನೆ. ಪ್ರತಿಯೊಬ್ಬನಿಗೂ ಪ್ರತಿಯೊಬ್ಬನು ಜಿಂಕೆಯೂ ಆಗುತ್ತಾನೆ. ಪ್ರತಿಯೊಬ್ಬನೂ ಚಿರತೆಯೂ ಆಗುತ್ತಾನೆ. ತಾನು ಚಿರತೆಯಾಗಬೇಕು ಮಿಕ್ಕವರು ಜಿಂಕೆಯಾಗಬೇಕೆಂಬ ಛಲ ಎಲ್ಲರಲೂ. ಜಿಂಕೆಯಾದವರಿಗೂ ತಾನು ಚಿರತೆಯಾಗುವ ಹಠ. ಓಟ ಮುಂದುವರೆಯುತ್ತದೆ.

ಇತ್ತ ಜನ ಉದ್ವೇಗಿತರಾಗುತ್ತಾರೆ. ತಾನು ಗುರುತಿಸಿ ಕೊಂಡವನು ಗೆಲ್ಲಬೇಕಿದೆ. ಆ ಮೂಲಕ ತಾನು ಗೆಲ್ಲಬೇಕಿದೆ. ಅವನ ಗೆಲುವು ತನ್ನ ಗೆಲುವೇ ಆಗಿದೆ. ಆ ಹತ್ತು ಜನರಲ್ಲಿ ತಾನು ನಂಬಿಕೊಂಡವನು ಮಾತ್ರ ಪ್ರಖರವಾಗಿ ಗೋಚರಿಸುತ್ತಾನೆ. ಮಿಕ್ಕವರೆಲ್ಲ ಗೌಣ. ತಾನು ನೆಚ್ಚಿ ಕೊಂಡವನಷ್ಟೇ.. ತನ್ನ ಮೆಚ್ಚಿನ ಓಟಗಾರನಷ್ಟೇ.. ತನ್ನ ಆಯ್ಕೆಗೆ ಮಾನದಂಡ ಆದವನಷ್ಟೇ.. ಅಲ್ಲಿ ತನ್ನವನಾಗಿ ಗೋಚರಿಸುತ್ತಾ ಹೋಗುತ್ತಾನೆ. ಬಾಕಿಯವರು ಯಾರೂ ಅಲ್ಲಿ ಯಾರಿಗೂ ಏನೂ ಅಲ್ಲದಿದ್ದರೂ.. ಯಾರಿಗೂ ಏನೂ ಮಾಡದಿದ್ದರೂ ತಿರಸ್ಕೃತಗೊಳ್ಳುತಾರೆ. ತನ್ನವನು ಗೆಲ್ಲಲಿ ಎಂಬ ಒಂದೇ ಒಂದು ಆಸೆಗೆ ಮಿಕ್ಕವರೆಲ್ಲ ಸೋಲಲೆಂಬ ಶಾಪಕ್ಕೆ ಗುರಿಯಾಗುತ್ತಾರೆ. ಅನಿವಾರ್ಯ ಅಲ್ಲಿ ಶಾಪಕ್ಕೆ ಯಾರೂ ಗುರಿಯಾಗ ಬಹುದು. ಹೆಚ್ಚಿನವರ ಶಾಪ ಯಾರಿಗೆ ತಟ್ಟಲಿದೆಯೋ ಅವನಲ್ಲೇನೋ ಕೊರತೆ ಇದೆ. ಅಥವಾ ಅವನಲ್ಲೇನೂ ಕೊರತೆ ಇಲ್ಲದಿದ್ದರೂ ಜನ ತಮ್ಮ ಆಯ್ಕೆಯ ಮಾನದಂಡಕ್ಕನುಗುನವಾಗಿ ಮಿಕ್ಕವರಲ್ಲಿ ಕೊರತೆಗಳನ್ನ ಕಾಣುತ್ತಾ ಹೋಗುತ್ತಾರೆ. ಆ ಮೂಲಕ ಆ ವ್ಯಕ್ತಿ ಆ ಕೊರತೆಗಳಿಗೆಲ್ಲ ಹಕ್ಕುದಾರನಾಗಿ ಹೋಗುತ್ತಾನೆ. ತನ್ನವನು ಗೆಲ್ಲಲೆಂದು ಹಾರೈಸುತ್ತಾರೆ.. ಕೂಗುತ್ತಾರೆ.. ಕಿರುಚುತ್ತಾರೆ.. ಅರಚುತ್ತಾರೆ.. ಜಯಘೋಶಗಳನ್ನು ಹೇಳುತ್ತಾರೆ. ಒಂದಷ್ಟು ಜನ ಮೊರೆಯುತ್ತಾರೆ.. ದೇವರ ಬಳಿ ಹರಕೆಯನ್ನೂ ಹೊರುತ್ತಾರೆ. ಅನಾವಶ್ಯಕವಾಗಿ ಅವನು ತನ್ನವನಾಗಿ ಹೋಗುತ್ತಾನೆ. ಅವನು ಹತ್ತಿರದವನಾಗಿ ಹೋಗುತ್ತಾನೆ.

ಇತ್ತ ಈ ಸ್ಪಾರ್ಧಾಳುಗಳು ಓಡುತ್ತಲೇ ಇದ್ದಾರೆ. ಗುರಿಯೆಡೆಗೆ ನಿರ್ಧರಿಸಿ ಬಿಟ್ಟ ಬಾಣಗಳಂತೆ. ಗುರಿ ಮುಟ್ಟುವ ತನಕ ಅವರ ಓಟಕ್ಕೊಂದು ಅರ್ಥ ಸಿಗುವುದಿಲ್ಲ. ಅವರ ಓಡುವಿಕೆಗೊಂದು ಬೆಲೆ ದಕ್ಕುವುದಿಲ್ಲ. ಅಲ್ಲಿ ಯಾವುದೋ ಒಂದು ಬಾಣ ಮೊದಲು ತಲುಪುವುದು ನಿಶ್ಚಿತ. ಆ ಮೊದಲ ಬಾಣ ಯಾವುದು..?? ಆ ಮೊದಲ ಓಟಗಾರ ಯಾರು ಅನ್ನುವುದು ಅಲ್ಲಿ ಎಲ್ಲರ ಕುತೂಹಲ. ಆ ಮೊದಲು ಬಂದ ಓಟಗಾರ ಆ ಕ್ಷಣಕ್ಕೆ ಜಗದೇಕ ವೀರನಾಗುತ್ತಾನೆ. ಇಲ್ಲಿ ಓಡುವವನಿಗೆ ತಾನು ಜಗದೇಕ ವೀರನಾಗಬೇಕಿದೆ. ಅಲ್ಲಿ ಈ ಓಟಗಾರನನ್ನ ಬೆಂಬಲಿಸುವವನಿಗೆ ತಾನು ಜಗದೇಕ ವೀರನ ಸ್ವಂತದವನಾಗ ಬೇಕಿದೆ.

ಓಟ ಮುಗಿಯುತ್ತದೆ. ಯಾರೋ ಒಬ್ಬ ಗೆದ್ದಿರುತ್ತಾನೆ. ಗೆದ್ದಿರುತ್ತಾನೆಂದರೆ ತನ್ನ ಹಿಂದಿನವನಿಗಿಂಥ ಒಂದೆರಡು ಮಿಲಿ ಸೆಕೆಂಡ್ ಗಳಷ್ಟು ಮುಂಚೆ ಗುರಿ ತಲುಪಿರುತ್ತಾನೆ. ಗೆದ್ದವನ ಹಿಂದೆ ತಲುಪಿದವನು ತನಗಿಂತ ಹಿಂದೆ ಇದ್ದವನಿಗಿಂತ ಒಂದೆರಡು ಮಿಲಿ ಸೆಕೆಂಡ್ ಗಳಷ್ಟು ಮುಂದೆ ಇರುತ್ತಾನೆ. ಹೀಗೆ ಪ್ರತಿಯೊಬ್ಬರೂ ಒಬ್ಬಬ್ಬರಿಗಿಂಥ ಒಂಚುಚೂರು ಕಾಲಾವಕಾಶದಲ್ಲಿ ಹಿಂದೆ ಉಳಿದಿರುತ್ತಾರೆ. ಅಥವಾ ಮುಂದೆ ನಡೆದಿರುತ್ತಾರೆ. ಇಲ್ಲಿ ಕೊನೆಯವನನ್ನು ಗೆದ್ದವನ್ನನು ಮತ್ತೊಬ್ಬ ಗೆದ್ದಿರುತ್ತಾನೆ. ಆ ಮತ್ತೊಬ್ಬನನ್ನು ಇನ್ನೊಬ್ಬ. ಹಾಗೆ ಉಳಿದ ಇನ್ನೊಬ್ಬರನ್ನು ಹೀಗೆ ಮೊದಲು ಬಂದವ ಗೆದ್ದಿರುತ್ತಾನೆ. ಹಾಗೆ ನೋಡಿದರೆ ಮೊದಲು ತಲುಪಿದವ ಮೊದಲೆನೆಯದಾಗಿ ಗೆದ್ದಿರುತ್ತಾನೆ. ಎರಡನೆಯವ ಎರಡನೆಯನವನಾಗಿ.. ಮೂರನೆಯವ ಮೂರನೆಯನವನಾಗಿ.. ಕೊನೆಯವ ಕೊನೆಯದಾಗಿ ಗೆದ್ದಿರುತ್ತಾನೆ. ಎಲ್ಲರೂ ಗೆಲ್ಲಬಲ್ಲ ಕಲಿಗಳೇ. ಎಲ್ಲರೂ ಗೆದ್ದಿರುತ್ತಾರೆ. ಆದರೆ ಎಲ್ಲರೂ ಗೆದ್ದವರಾಗಬಾರದೆಂಬುದೇ ಸ್ಪರ್ಧೆಯ ನಿಯಮ. ಹಾಗಾಗಿ ಮೊದಲು ಗೆದ್ದವನು ವಿಜಯಿಯಾಗುತ್ತಾನೆ. ನಂತರದವರದ್ದೆಲ್ಲ ಸೋಲು. ಎರಡನೆಯ ವನೂ ಸೋತವನೇ ಆದರೆ ಕೊನೆಯವನಷ್ಟು ಹೀನ ಸೊಲುಗಾರ ಅಲ್ಲ. ಅಲ್ಲಿ ಕೊನೆಯವನು ಕೀಳಾಗಿ ಕಾಣಿಸಲಾರಂಭಿಸುತ್ತಾನೆ. ಅವನನ್ನು ಅನುಸರಿಸಿದವರೆಲ್ಲರೂ ಅವನಿಗೆ ಮೂದಲಿಸುತ್ತಾರೆ. ಶಾಪ ಹಾಕುತ್ತಾರೆ. ಅದು ಅವನ ಸ್ವಯಾರ್ಜಿತ ಅಲ್ಲದಿದ್ದರೂ ಅದು ಅವನು ಮಾಡಿದ ತಪ್ಪೇ ಆಗುತ್ತದೆ. ಅವನು ಎಲ್ಲರಂತೆ ಕ್ಷಮತೆ ಉಳ್ಳವನಾದರೂ.. ಬಲವಂತನಾದರೂ.. ಸೋತವನೆಂಬ ಹಣೆ ಪಟ್ಟಿ ಹೊತ್ತು ಕೊಳ್ಳುವುದು ಅನಿವಾರ್ಯತೆ ಆಗುತ್ತದೆ. ಮೊದಲು ಗೆದ್ದವನ ಅನುಸರಿಸಿದವರೆಲ್ಲಾ ಸಂಭ್ರಮಿಸುತ್ತಾರೆ. ತಮ್ಮ ಆಯ್ಕೆಯ ಬಗ್ಗೆ ಹೆಮ್ಮೆ ಪಡುತ್ತಾರೆ. ತಮ್ಮ ಹಾರೈಕೆಯ ಬಗ್ಗೆ ಆನಂದಿತರಾಗುತ್ತಾರೆ. ಸೋತವರ ಅನುಯಾಯಿಗಳಲ್ಲಿ ಹಲವರು ಈಗ ಸೋತವನನ್ನು ಮರೆತು, ಗೆದ್ದವನ್ನನ್ನ ಅಭಿಮಾನಿಸಲು ಶುರು ಮಾಡುತ್ತಾರೆ. ಗೆದ್ದವನು ಅವರ ಕಣ್ಣಲ್ಲಿ ಹೀರೋ ಆಗುತ್ತಾನೆ. ಅತಿ ಮಾನುಷ ಅನಿಸಿ ಕೊಳ್ಳುತಾನೆ. ಅವನ ಸಂಘದಿಂದ.. ಅವನ ಸ್ನೇಹದಿಂದ ತಮಗೊಂದು ವರ್ಚಸ್ಸು ದೊರಕುತ್ತದೆ ಅಂದು ಕೊಳ್ಳುತ್ತಾರೆ. ಸೋತವನನ್ನು ಕಡೆಗಣಿಸುತ್ತಾರೆ. ಅವನ ಜೊತೆ ಇದ್ದರೆ ತಮ್ಮ ಘನತೆಗೆ ಕುಂದು ಎಂದು ಅವನನ್ನ ದೂರ ಇಡುತ್ತಾರೆ. ಸೋತವನು ಮತ್ತೊಮ್ಮೆ ಗೆಲ್ಲುವ ತನಕ ಹಾಗೆ ಕೀಳಾಗೆ ಕಾಣಿಸಿ ಕೊಳ್ಳುವುದು ಅನಿವಾರ್ಯ ಆಗುತ್ತದೆ.

ನಮ್ಮ ಬದುಕೂ ಹಾಗೆ.. ಇಲ್ಲಿ ಎಲ್ಲರೂ ಸ್ಪರ್ಧಾಳುಗಳೇ. ಭೂಮಿಗೆಂದು ಬಂದ ಮೇಲೆ ಬದುಕೋದು ಒಂದು ಸ್ಪರ್ಧೆಯೇ. ಇಲ್ಲಿ ಎಲ್ಲರೂ ತಮ್ಮ ಸ್ಪರ್ಧೆಗನುಸಾರವಾಗಿ ಸ್ಪರ್ಧಿಸುತ್ತಾರೆ.. ಅವರ ಶಕ್ತಿಗನುಸಾರವಾಗಿ ಗೆಲ್ಲುತ್ತಾ ಹೋಗುತ್ತಾರೆ. ಆದರೆ ಸ್ಪರ್ಧೆಯಲ್ಲಿ ಮೊದಲು ಬಂದವನಷ್ಟೇ ಗೆದ್ದವ ಎಂಬ ಪಟ್ಟಕ್ಕೆ ಅರ್ಹ ಎಂಬುದು ನಿಯಮವಾದ್ದರಿಂದ ಗೆದ್ದ ಮಿಕ್ಕೆಲ್ಲರೂ ಸೋತವ ಎಂಬ ಹಣೆ ಪಟ್ಟಿ ಹೊರುವುದು ಅನಿವಾರ್ಯವಾಗುತ್ತದೆ.

ಮನುಷ್ಯ ಸೋಲಿಗೆ ಕಂಗೆಡುತ್ತಾನೆ.. ಭೀತನಾಗುತ್ತಾನೆ.. ಆ ಪಟ್ಟ ಹೊರಲು ಅಳುಕುತ್ತಾನೆ.. ಅಂಜುತ್ತಾನೆ. ಇದೆ ಕಾರಣಕ್ಕೆ. ನಾವು ಮಾಡಿಕೊಂಡ ನಿಯಮ ಅಂತಹದ್ದು, ಸೋತವ ಕೀಳು ಎಂಬ ಪದ್ಧತಿ ನಮ್ಮನ್ನ ಕೊರಗಿಸುತ್ತದೆ. ಅವನದಲ್ಲದ ಪಟ್ಟವನ್ನ ಅವನು ಅನಿವಾರ್ಯ ಅಲ್ಲದೆಯೂ ಹೊರಬೇಕಾಗುತ್ತಾದೆ. ಹಾಗಾಗಿಯೇ ಸೋಲುವುದಕ್ಕೆ ಹೆದರುತ್ತಾನೆ. ಸೊಲುವುದಕ್ಕಲ್ಲ.. ಕಡೆಯದಾಗಿ ಗೆಲ್ಲುವುದಕ್ಕೆ. ಕಡೆಯದಾಗಿ ಗೆಲ್ಲುವುದು ಅವನ ಧ್ಯೇಯ ಆಗುವುದಿಲ್ಲ ಮೊದಲು ಗೆಲ್ಲಬೇಕೆಂಬುದು ಆಧ್ಯತೆ ಆಗುತ್ತದೆ. ಗುರಿ ಆಗುತ್ತದೆ ಬಾಧ್ಯತೆ ಆಗುತ್ತದೆ. ಗೆದ್ದವನಿಗೆ ಅಭಿಮಾನ ಸಿಗುತ್ತದೆ.. ಪ್ರೀತಿ ಸಿಗುತ್ತದೆ.. ಅಧಿಕಾರ ಸಿಗುತ್ತದೆ.. ವರ್ಚಸ್ಸು ಮೊಳೆಯುತ್ತದೆ. ಹಾಗಾಗಿಯೇ ಗೆಲ್ಲುವುದು ಎಲ್ಲರ ಗುರಿ ಯಾಗುತ್ತದೆ. ಎಲ್ಲರ ಹಪಾ ಹಪಿಯಾಗುತ್ತದೆ.

ಮ ಬಲ ಉಳ್ಳ ಹತ್ತು ಜನರಿದ್ದರೂ ಹತ್ತು ಜನರನ್ನ ಮೀರಿಸಬಲ್ಲ ಒಬ್ಬನನ್ನಷ್ಟೇ ಜಗತ್ತು ಗುರುತಿಸುವುದರಿಂದ ಆ ಒಬ್ಬನಾಗಲು ನಾವು ಹೆಣಗುತ್ತೇವೆ, ಹೋರಾಡುತ್ತೇವೆ. ಅದೆಷ್ಟು ಬಾರಿ ಸೋತರೂ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಹೋಗುತ್ತೇವೆ. ಆ ಸೋತವ ಎಂಬ ಸುಳ್ಳು ಹಣೆಪಟ್ಟಿಯ ಮೇಲಿನ ಭಯದಿಂದ, ಕೊನೆಯದಾಗಿ ಗೆದ್ದವ ಎಂಬ ಸಿಹಿ ಆನಂದವನ್ನ ಅನುಭವಿಸದೆ ಕೊರಗುತ್ತೇವೆ. ಮೊದಲನೆಯವನಾಗುವ ಭ್ರಮೆಯಲ್ಲಿ ಹೋರಾಡುತ್ತಲೇ ಹೋಗುತ್ತೇವೆ.

ಸೋಲು ಗೆಲುವು ನಮ್ಮ ಸ್ತಿತಿ ಗತಿಗಳನ್ನು ನಿರ್ಧರಿಸುವುದರಿಂದ.. ನಮಗೊಂದು ಸ್ಥಾನ ಮಾನವನ್ನು ಕಲ್ಪಿಸಿ ಕೊಡುವುದರಿಂದ.. ನಾವೆಲ್ಲರೂ ಅನಿವಾರ್ಯವಾಗಿ ಸ್ಪರ್ಧಾಳುಗಳಾಗುತ್ತೇವೆ. ಸ್ಪರ್ಧೆ ಎಂದು ಬಂದಾಗ ನಾವೆಲ್ಲರೂ ಒಬ್ಬರಿಗೊಬ್ಬರೂ ವೈರಿಯಾಗದಿದ್ದರೂ, ಒಬ್ಬರಿಗೊಬ್ಬರು ಮೀರಿ ಬದುಕಲು ಪ್ರಯತ್ನಿಸುತ್ತೇವೆ. ಆ ಮೀರಿ ಬದುಕುವಿಕೆಯೇ ನಮ್ಮ ಸಮಾನತೆಯಲ್ಲೊಂದು ಅಂತರವನ್ನ ಸೃಷ್ಟಿಸುತ್ತವೆ. ಎಲ್ಲರೂ ಜಗತ್ತೆಂಬ ಭವ್ಯ ಅರಮನೆಯೊಳಗೆ ಇರುತ್ತರಾದರೂ ಅಲ್ಲಿ ರಾಜ ಮುಖ್ಯವೆನಿಸಿ ಕೊಳ್ಳುವುದು ಅದಕ್ಕಾಗಿಯೇ ಅಲ್ಲವೇ. ಸಿಂಹಾಸನ ರಾಜನಿಗಾಗಿಯೇ ಇರುತ್ತದೆ. ಮತ್ತು ರಾಜನಷ್ಟೇ ಸಿಂಹಾಸನದ ಮೇಲೆ ವಿರಾಜಮಾನನಾಗಲು ಯೋಗ್ಯನಾಗುತ್ತಾನೆ.

6 comments:

  1. ಶಿಕ್ಷಣದಲ್ಲಿ ಪರೀಕ್ಷೆಗಳಾಗಲಿ ಬದುಕಿನಲ್ಲಿ ಪರೀಕ್ಷೆಗಳಾಗಲೀ ಬರೀ ಗೆಲುವೇ ಮಾಪನ. ಸೋತವನು ನೆಲಮಟ್ಟ ಗೆದ್ದವನಿಗೆ ಕಿರೀಟ. ಲೋಕ ಜ್ಞಾನ ಮತ್ತು ಆಂತರ್ಯ ಸಿದ್ದತೆಯ ಶ್ರಮವೆಲ್ಲ ಸೋಲಿನ ಜೊತೆ ಮಣ್ಣು ಪಾಲು. ಗೆದ್ದವ ಹಿಂದೆ ಪಡೆ ಸೃಷ್ಟಿಯಾದರೆ ಸೋತವನು ವಾನಪ್ರಸ್ತಾಶ್ರಮಕ್ಕೆ. ಬಹುಶಃ ವ್ಯವಸ್ಥೆಯಲ್ಲೇ ಲೋಪವಿದೆ ಗೆಳೆಯ.

    ಮಮಸ್ಸಿಗೆ ತುಂಬಾ ಹಿಡಿಸಿದ ಬರಹ.

    ReplyDelete
  2. ಒಂದು ತತ್ವವನ್ನು ತುಂಬ ಸಮರ್ಥವಾಗಿ, ತಾರ್ಕಿಕವಾಗಿ ವಿವೇಚಿಸಿದ್ದೀರಿ. ಇದು ನಮ್ಮ ವಿಶ್ವದ ತತ್ವವೇ ಆಗಿದೆ! ಈ ತತ್ವಕ್ಕೆ ನಾವೆಲ್ಲರೂ ಬದ್ಧರು..

    ReplyDelete
  3. ಓಡುವ ಓಟದಲಿ ಶ್ರುತಿ ಸೇರಬೇಕು ಅನ್ನುವ ಹಾಗೆ ಜೀವನದ ಓಟದಲ್ಲಿ ಎಲ್ಲಾ ರೀತಿಯ ತಾಳಗಳು ಇರುತ್ತವೆ.. ಅದನ್ನೆಲ್ಲಾ ಹೊಂದಿಸಿಕೊಂಡು ಸಂಗೀತ ಸೃಷ್ಟಿಸಬೇಕು.. ಸುಂದರ ಲೇಖನ ಸತೀಶ್

    ReplyDelete
  4. ಬದುಕಿನ ಈ ರಣ ಹೋರಾಟದಲ್ಲಿ ನಿಜಕ್ಕೂ ಸೋಲು ಅಥವಾ ಗೆಲುವಿಗೆ ಮಾನದಂಡವೇ ಇಲ್ಲ. ಗೆದ್ದವನು ಗೆದ್ದೆ ಎಂದುಕೊಳ್ಳುವುದಾಗಲಿ ಸೋತವನು ಸೋತೆ ಎಂದುಕೊಳ್ಳುವುದಾಗಲೀ ಪಕ್ಕದಲ್ಲಿದ್ದವರ ಘೋಷಣೆಗಳಿಂದಷ್ಟೇ. ಇವನಿಗಿಂತ ಬಲಶಾಲಿ ಇನ್ನೊಬ್ಬನಿರುತ್ತಾನೆ! ಮತ್ತೆಲ್ಲೋ. ಆಗ ಮತ್ತೆ ಇವನು ಸೋತವನೇ ಆಗುತ್ತಾನೆ! ಈ ಸೋಲು ಗೆಲುವುಗಳ ಮೀರಿ ಬದುಕಿನ ಗುರಿಯ ಮಾತ್ರ ದೃಷ್ಟಿಯಾಗಿಸಿಕೊಂಡಾಗಲೇ ಗುರಿ ತಲುಪುವವನೇ ಶ್ರೇಷ್ಟವೆನ್ನಿಸಿಕೊಳ್ಳುತ್ತಾನೆ! ವೇಗ ಅಥವಾ ಸಮಯದ ಮಿತಿ ಅವನ ಯಶಸ್ಸಿನ ಮಾನದಂಡವಾಗುತ್ತದೆ! ನೀವು ಹೇಳಿದ ಈ ಗೆಲುವಿನ ಓಟದ ಆಟವೇ ಇಂದಿನ ಸಾಮಾನ್ಯನ ಬದುಕಾಗಿದೆ ಎಂಬುದೂ ಸತ್ಯ. ಚಂದದ ಲೇಖನ. ಇಷ್ಟವಾಯಿತು ಸತೀಶ್.

    ReplyDelete
  5. ಸುಂದರವಾದ ಅರ್ಥಗರ್ಭಿತ ಲೇಖನ ಸತೀಶ. ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂಥ ಸಶಕ್ತ ಬರಹ :)

    ನಾವು ಗುರಿ ಮತ್ತು ಓಡುವುದರ ಕಡೆಗಷ್ಟೇ ಗಮನ ಕೊಟ್ಟು, ಈ ಓಟದ "ಆನಂದವನ್ನೇ" ಮರೆಯುತ್ತಿದ್ದೆವೇನೋ ..!!

    ನನಗನಿಸುತ್ತೆ, ಓಟದಲ್ಲಿ "ಸೋಲು" ಆನುವ ಪದವನ್ನೇ ಬಳಸಬಾರದೇನೋ. "ಈ ಸೋಲು" ಅನ್ನುವ ಪದವೇ ಇಂಥದ್ದಕ್ಕೆಲ್ಲ ಕಾರಣ ಆಗ್ತಾ ಇರುತ್ತೆ.

    ReplyDelete
  6. Satish,

    Nanage thumba ishta aada mattu khushi kotta baraha idu. badukannu anubhavisade kevala badukuva, jeevanavannu race emdu tilidukondu oduttale 'badukuva' janarige chati etinantaha baraha. thumba istha aaytu. Baduku mattu Otada spardheyannu sameekarisiddu :)


    Raghav helida haage , "ನಾವು ಗುರಿ ಮತ್ತು ಓಡುವುದರ ಕಡೆಗಷ್ಟೇ ಗಮನ ಕೊಟ್ಟು, ಈ ಓಟದ "ಆನಂದವನ್ನೇ" ಮರೆಯುತ್ತಿದ್ದೆವೇನೋ"!!!!


    Bareeta iri.

    ReplyDelete