Thursday 10 April 2014

ನಾನು ಕಂಡ ಉಳಿದವರು ಕಂಡಂತೆ..

ಒಂದು ಸಿನಿಮಾ ಕೂಡಾ ಹಾಗಿರಬೇಕು.. ಎಷ್ಟೋ ಸಾರಿ ಹೀಗಂದುಕೊಂಡಿದ್ದಿದೆ ನಾನು..

ನಾಟುವ ನಾಟಕದಂತೆ, ಕಾಡಿಸುವ ಕಾದಂಬರಿಯಂತೆ, ಕನವರಿಸಿಕೊಳ್ಳುವಂತೆ ಮಾಡಬಲ್ಲ  ಕಥಾ ಪುಸ್ತಕದಂತೆ ಒಂದು ಸಿನಿಮಾ ನಮ್ಮನ್ನು ಆವರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಕಥೆ ಕಾದಂಬರಿ ಅಥವಾ ನಾಟಕಗಳಲ್ಲಿ ಸಿಗುವ ಒಂದು ಅನುಭೂತಿ ಸಿನಿಮಾ ನೋಡುವಾಗ ನಮಗೆ ದಕ್ಕುವುದೇ ಇಲ್ಲ. ಸಿನಿಮಾ ನಮ್ಮನ್ನು ಕಾಡಿಸದೇ ಇರುವುದಕ್ಕೆ ನೈಜ ಕಾರಣವೇ ಅದರಲ್ಲಿನ ನೈಜತೆಯ ಅನುಪಸ್ತಿತಿ. ಹೌದು ಎಷ್ಟೋ ಸಾರಿ ಸಿನಿಮಾ ಸತ್ಯದಿಂದ ದೂರ ಅನ್ನಿಸಿ ಬಿಟ್ಟಿರುತ್ತದೆ. ಈಗಿನ ಸಿನಿಮಾಗಳು ಸಾಮಾನ್ಯ ಮನುಷ್ಯನೊಳಗೆ ಕಾಣಸಿಗದ ಅಸಾಧಾರಣ ಶಕ್ತಿಯನ್ನ, ಅಸಾಮಾನ್ಯತೆಗಳನ್ನ, ಅಸಹಜ ಮುಟ್ಟಾಳ ತನವನ್ನ, ಮನುಷ್ಯ ಸಾಮಾನ್ಯನಾಗಿ ಜೀವಿಸಲು ಕೂಡಾ ಬಲು ಕಷ್ಟ ಪಡುವಂತಹ ಚಿತ್ರಣವನ್ನ ಮಾತ್ರ ಕಟ್ಟಿ ಕೊಡುತ್ತಿರುವ ಅಸಹಜ ದೃಶ್ಯಾವಳಿಗಳ ಮಾಧ್ಯಮದಂತೆ ಈಗಿನ  ಹಲವು ಸಿನಿಮಾಗಳು ಅನ್ನಿಸುತ್ತವೆ. ಸಿನಿಮಾ ಎಂದರೆ ಕೇವಲ ನಾಯಕನ ವಿಜ್ರುoಭಣೆ..  ನಾಯಕಿಯ ಅಂದ ಚೆಂದದ ಪ್ರದರ್ಶನ, ಖಳನ ಅಬ್ಬರ ಬೊಬ್ಬಿರಿತಗಳ ನಡುವಿನ ಕಾಲ ಹರಣ ಅನ್ನುವಷ್ಟು ಸಾಧಾರಣ ಚಿಂತನೆಯನ್ನ ಮೂಡಿಸುವಷ್ಟು ಮಟ್ಟಿಗೆ ಸಿನಿಮಾ ಇಂದಿಗೆ ಪ್ರಚಲಿತ.

ಈಗಿನ ಸಿನಿಮಾ ವಸ್ತುಗಳಾದರೂ ಅಂತಹದ್ದೇ.. ಪ್ರೀತಿ ಪ್ರೇಮದ ಸುತ್ತ ಸುತ್ತುತ್ತಾ ಅದಕ್ಕೆ ಪೂರಕವಾದ ಕತೆ ಹೆಣೆದು, ಪ್ರೀತಿ ಗೆದ್ದಾಗ ಅದರ ಶ್ರೇಷ್ಟತೆಯನ್ನ ಸಾರುವಂಥ, ಸೋತಾಗ ಅದನ್ನ ಜರಿದು ಬಾಳುವಂಥ ಸಂದೇಶಗಳನ್ನ ಭಿತ್ತರಿಸುತ್ತಾ ಮನುಷ್ಯನನ್ನು ಭಾವನಾತ್ಮಕವಾಗಿ ಹಿಡಿದಿಡುವ, ಮಚ್ಚು ಕೊಚ್ಚು, ಬಾಂಬು ಬಂದೂಕು ಗಳ ಭರಾಟೆಯಲ್ಲಿ ಮನುಷ್ಯತ್ವವನ್ನು ಮರೆತು ಕೇವಲ ಸೇಡಿಗೆ ತನ್ನಿಡೀ ಜೀವನವನ್ನ ಬದಲಾಯಿಸಿಕೊಂಡು ಕ್ರೌರ್ಯವನ್ನ ಕೈಂಕರಿಸೀಕೊಂಡ ಕಥಾವಸ್ತು ಹಿಂಸಾತ್ಮಕವಾಗಿ ಆಕರ್ಶಿಸಲ್ಪಡುವ, ಯಾವತ್ತು ನೆನೆಸಿಕೊಂಡರೂ ಹೇಕರಿಕೆ ತರಿಸುವಂತೆ ರಾಜಕೀಯದ ಅರಾಜಕತೆಗಳನ್ನ, ವ್ಯವಸ್ಥೆಯಲ್ಲಿನ ನ್ಯೂನತೆಗಳ ಸಾವಿರ ಪಟ್ಟು ವೈಭವೀಕರಣದ ಪ್ರಯೋಗದಂತೆ ಕಾಣುವ, ಸಮಾಜ ವಿರೋಧಿ ಕಥಾನಕಗಳನ್ನ ಕೇಂದ್ರವಾಗಿರಿಸಿಕೊಂಡು ವಿಲಕ್ಷಣ ಮನಸ್ಥಿತಿಯಲ್ಲಿ ಪ್ರೇಕ್ಷಕ ಅದನ್ನ ಆನಂದಿಸುವಂತೆ ಮಾಡುವ ಪ್ರಯತ್ನ ಮಾಡಿ ವೀಕ್ಷಕರುಗಳನ್ನ ಚಿತ್ರಮಂದಿರದ ಕಡೆ ಎಳೆದು  ತರುವಂತಹ ಪ್ರಯತ್ನಗಳೇ ಭಾರತದ ಯಾವುದೇ ಭಾಷೆಯ ಚಲನಚಿತ್ರಗಳಲ್ಲಿ ಬಹುಭಾಗ ಆವರಿಸಿಕೊಂಡಿರುವಂಥದ್ದು. ಇದಕ್ಕೆ ಅಪವಾದ ಎನ್ನುವಂತೆ ಬದುಕಿತ ನೈಜತೆಯನ್ನ, ವ್ಯಕ್ತಿ ಚಿತ್ರಣಗಳನ್ನ ಬಿಂಬಿಸುವಂತಹ ಕಲಾತ್ಮಕ ಚಿತ್ರಗಳು ಕೂಡಾ ವರಸೆಯಲ್ಲಿ ಬಂದು ನಿಲ್ಲುತ್ತವಾದರೂ ಅವುಗಳ ಸಂಖ್ಯೆ ಇಂಥಹ ಕಮರ್ಷಿಯಲ್ ಸಿನಿಮಾಗಳ ಮುಂದೆ ತೀರಾ ಕಮ್ಮಿ. ಅಂಥಹ ಚಿತ್ರಗಳು ಬಂದರೂ ಗೊತ್ತಾಗುವುದಿಲ್ಲ.. ಅಥವಾ ಸಾಮಾನ್ಯ ಜನರು ಅಂತಹ ಚಿತ್ರಗಳನ್ನು ನೋಡುವುದಿಲ್ಲ.. ಸಾಮಾನ್ಯ ಜನರಿಗೆ ಅದನ್ನ ನೋಡಿಸುವ ಪ್ರಯತ್ನ ಆಗುವುದೂ ಇಲ್ಲ. ಕೇವಲ ಪ್ರಶಸ್ತಿ ಪುರಸ್ಕಾರಗಳಿಗೆ ಮಾತ್ರ ಅಂಥಹ ಸಿನಿಮಾಗಳನ್ನ ಮಾಡುತ್ತಾರೆನೋ ಅನ್ನುವಂತಹ ತೀರ್ಮಾನಕ್ಕೆ ಎಂಥಹ ಶ್ರೀ ಸಾಮಾನ್ಯನೂ ಸಾಧಾರಣವಾಗಿ ಯೋಚಿಸಿ ಬಿಡಬಲ್ಲ ಸ್ಥಿತಿ ಅದರದ್ದು. ಇವತ್ತಿನ ಸಿನಿಮಾ ಕೇವಲ ಮನರಂಜನೆಯ ಮಾಧ್ಯಮ ಅಷ್ಟೇ. ಟಾಮ್ ಅಂಡ್ ಜೆರ್ರಿ ನೋಡಿದಷ್ಟೇ ನಿರಾಳ ಮನಸ್ಸಿಂದ ಒಂದು ಸಿನಿಮಾವನ್ನ ನೋಡಿ ಸಮಯ ಕಳೆದು ಬಿಡಬಲ್ಲ ಒಂದು ಸಾಧಾರಣಕಾರ್ಯಕ್ರಮ ಇಂದಿನ ಸಿನಿಮಾ. ಈಗಿನ ಸಿನಿಮಾಗಳ ಮೂಲ ಆಶಯವೂ ಉದ್ದೇಶವೂ ಅದಕ್ಕೆ ಪೂರಕವಾಗಿರೋದು ಕೂಡಾ ಈ ಎಲ್ಲಾ ಪರಿಸ್ಥಿತಿಗೆ ಕಾರಣವೆಂದರೆ ತಪ್ಪಲ್ಲ. ಇವತ್ತಿನ ಸಿನಿಮಾಗಳು ಮನರಂಜನಾ ಉಧ್ಯಮದ ಬಿಕರಿ ವಸ್ತುಗಳಷ್ಟೇ.. ಕಲೆಯ ಮಾಧ್ಯಮವಲ್ಲ.

ಕನ್ನಡವಾಗಲಿ ಅಥವಾ ಯಾವುದೇ ಇನ್ನಿತರ ಭಾರತೀಯ ಭಾಷೆಗಳ ಚಿತ್ರವಾಗಲಿ ನಮ್ಮಲ್ಲಿ ಸಿನಿಮಾ ಮಾಡಲಿಕ್ಕೊಂದು ಅಘೋಷಿತ ಸಿದ್ಧ ಸೂತ್ರವಿದೆ. ಒಂದು ಸಿನಿಮಾ ಎಂದರೆ ಐದು ಹಾಡು, ಅದರಲ್ಲೆರಡು ಡುಯೆಟ್ಟು, ಒಂದು ಶೋಕಗೀತೆ, ಒಂದು ಐಟಂ ಹಾಡು, ಇನ್ನೊಂದು ಎದ್ದು ಕುಣಿವಂತೆ ಉದ್ದೀಪಿಸುವ ಟಪ್ಪಾಂಗುಚ್ಚಿ ಹಾಡು. ನಾಲ್ಕೈದು ಫೈಟು (ಅಗತ್ಯವಿಲ್ಲದ ಕಾರಣಗಳಿಗೂ), ಸಿನಿಮಾ ಕಥೆಗೆ ಸಂಭಂಧವೇ ಪಡದ ಹಾಸ್ಯ ಸನ್ನಿವೇಶಗಳು (ಹೇರಿಕೆ), ನಾಯಕ ನಾಯಕಿ.. ಅದರಲ್ಲೋಬ್ಬರಿಗೆ ಬಡತನ ಅಥವಾ ರೌಡಿಸಂ ನ ಹಿನ್ನಲೆ.. ಅವರಿಬ್ಬರ ನಡುವೆ ಪ್ರೇಮಾಂಕುರ.. ಅವರಿಬ್ಬರ ಕುಟುಂಬಗಳ ನಡುವಿನ ಕಲಹ.. ಕೊನೆಗೆ ವೀರಾವೇಶದಿಂದ ಹೋರಾಡಿ ವಿಲನ್ ನನ್ನು ಸೆದೆಬಡೆದು ಜಯಿಸುವ ಹೀರೋ.. ಇಂಥ ಕಥೆ, ಇದಿಷ್ಟೇ ಸಿದ್ಧ ಸೂತ್ರಗಳನ್ನ ಇಟ್ಟುಕೊಂಡು ಅದೆಷ್ಟು ಸಿನಿಮಾಗಳು ಬಂದಿಲ್ಲ..?? ದೃಶ್ಯಾವಳಿಗಳು ಬೇರೆ ಬೇರೆಯಷ್ಟೇ. ಇಂಥಾ ಸಿನಿಮಾಗಳಿಗೆ ಅದೆಷ್ಟು ಒಗ್ಗಿ ಹೋಗಿಹೆವೆಂದರೆ ಈ ಸಿದ್ಧ ಸೂತ್ರಗಾಳಾಚೆಗಿನ ಪ್ರಯೋಗ ಶೀಲ ಸಿನಿಮಾಗಳನ್ನು ಸುಲಭವಾಗಿ ದಕ್ಕಿಸಿಕೊಳ್ಳಲಾಗದಷ್ಟು. 

ನಮ್ಮಲ್ಲಿ ಇನ್ನೂ ಒಂದು ಪದ್ದತಿಯಿದೆ.. ಹೋಲಿಸುವಿಕೆ.  ಸಿನಿಮಾ ಸಿನಿಮಾಗಳ ನಡುವೆ ತುಲನೆ ಮಾಡುವುದು. ರೀಮೇಕ್ ಸಿನಿಮಾಗಳನ್ನ ಹೊರತುಪಡಿಸಿದ ವಿಚಾರ ಇದು. ಒಂದು ಭಾಷೆಯ ಸಿನಿಮಾದಲ್ಲಿ ಕಾಣಸಿಗುವ ಒಂದು ಸಾಮಾನ್ಯ ವಿಚಾರ ಮತ್ತೊಂದು ಭಾಷೆಯ ಸಿನಿಮಾದಲ್ಲಿ ಕಾಣಸಿಕ್ಕಾಗ ಅವೆರಡನ್ನೂ ಸಮೀಕರಿಸಿ ಮಾತಾಡೋದು. ಅದು ಒಂದಷ್ಟು ದೃಶ್ಯಗಳ ಕುರಿತಾಗಿ ಇರಬಹುದು ಅಥವಾ ಮೇಕಿಂಗ್ ವಿಧಾನದಲ್ಲಿ ಇರಬಹುದು.. ನಿರೂಪಣಾ ವಿಧಾನಕ್ಕಿರಬಹುದು.. ಅಥವಾ ನೇರ ಕಥೆಗೆ ಸಂಭಂಧಪಟ್ಟದ್ದಾಗಿರಬಹುದು. ಅಂಥಹ ಬಹಳಷ್ಟು ಉದಾಹರಣೆಗಳನ್ನ ನಾನು ಕೇಳಿದ್ದೇನೆ ನೋಡಿದ್ದೇನೆ ಕೂಡಾ. ತಮಿಳಿನ ಸೂಪರ್ ಹಿಟ್ ರೋಬೋಟ್ ಸಿನಿಮಾ ಬಂದಾಗ ಕನ್ನಡದ ಹಾಲಿವುಡ್ ಚಿತ್ರದೊಂದಿಗೆ ಕಥಾವಿಚಾರದಲ್ಲಿ ಚರ್ಚೆಗೆ ಬಿದ್ದಿತ್ತು. ಕಮಲ ಹಾಸನ್ ರ ದಶಾವತಾರ ಚಿತ್ರದ ಕಲ್ಪನೆ ತನ್ನದು ಎಂದು ಅದ್ಯಾರೋ ಕೋರ್ಟ್ ಮೆಟ್ಟಿಲೇರಿದ್ದು.. ತೀರಾ ಇತ್ತೀಚಿಗೆ ಬಂದು ತಮಿಳಿನಲ್ಲಿ ಫ್ಯಾಮಿಲಿ ಎಂಟರ್ ಟೈನರ್ ಎಂದು ಹಿಟ್ ಆದ ರಾಜ ರಾಣಿ ಕನ್ನಡದ ಮಿಲನ ಚಿತ್ರದಿಂದ ಪ್ರೇರಿತವಾದುದೆಂದು.. ತಮಿಳಿನ ಘಜಿನಿ ಮತ್ತು ಎಂಗೇಯುಮ್ ಎಪ್ಪೋದುಂ ಚಿತ್ರಗಳು ಬೇರೆ ಬೇರೆ ಇಂಗ್ಲಿಷ್ ಚಿತ್ರವೊಂದರ ಪ್ರೇರಣೆ ಎಂದು.. ಕಳೆದ ವರ್ಷದ ಬಹು ಚರ್ಚಿತ ಹಿಟ್ ಕನ್ನಡ ಚಿತ್ರ ಲೂಸಿಯಾ ಇನ್ಸೆಪ್ಶನ್ ಎನ್ನುವ ಇಂಗ್ಲಿಶ್  ಸಿನಿಮಾದ ನಿರೂಪಣೆಯ ಶೈಲಿಗೆ ಪ್ರೆರಿತವಾಗಿದೆಯೆಂದೂ.. ಇತ್ತೀಚಿನ ಸಲ್ಮಾನ್ ಖಾನ್ ನ ಜೈ ಹೊ ಚಿತ್ರ ತೆಲುಗಿನ ಸ್ಟಾಲಿನ್ ಚಿತ್ರದ ಪ್ರೇರಿತವೆಂದೂ ಹೀಗೆ ಬಹಳಷ್ಟು ಸಿನಿಮಾಗಳ ವಿಚಾರಗಳು, ವಿಡಂಬನೆಗಳನ್ನ ಕಂಡಿದ್ದುಂಟು. ಇವುಗಳೆಲ್ಲದರ ಕುರಿತಾಗಿ ಪೂರ್ಣ ವಿವರಗಳು ಗೊತ್ತಿಲ್ಲವಾದರೂ ಹೀಗೆ ಸಿನಿಮಾಗಳನ್ನ ತುಲನೆ ಮಾಡಿ ವಿಮರ್ಶೆ ಮಾಡಲ್ಪಟ್ಟ ಹಲವಾರು ಭಾಷೆಯ ಹಲವು ಚಿತ್ರಗಳು ಉದಾಹರಣೆಯಾಗಿ ಕಣ್ಣೆದುರಿಗೆ ನಿಲ್ಲುತ್ತವೆ. 

ಉಳಿದವರು ಕಂಡಂತೆ  ಕೂಡಾ ಇಂಥಾ ವಿವಾದಕ್ಕೆ ಹೊರತಾದ ಚಿತ್ರವೇನಲ್ಲ. ಈ ಚಿತ್ರದ ನಿರೂಪಣಾ ಅಂಶಗಳನ್ನ ತಮಿಳಿನ ಕಮಲಾ ಹಾಸನ್ ಅಭಿನಯದ ವೀರುಮಾಂಡಿ ಮತ್ತು ಹಿಂದಿಯ ಯುವ ಚಿತ್ರದ ಜೊತೆಗೆ ತುಲನೆ ಮಾಡಿ ಮಾತಾಡಿದ ಉದಾಹರಣೆಗಳನ್ನ ಈಚೆಗೆ ಫೇಸ್ಬುಕ್ ನಲ್ಲಿ ನೋಡಿದ್ದೇನೆ. ಹಾಗೆ ನೋಡಿದರೆ ಒಂದು ಸಿನಿಮಾ ನಿರ್ದೇಶಕನ ಕಲ್ಪನೆಯಲ್ಲಿ ತಯಾರಾಗುವುದೇ ಹಾಗೆ. ಯಾವುದೋ ಒಂದು ಕಥೆಯ ಅಥವಾ ಸಿನಿಮಾದ ಅಂಶದ ಒಂದು ಹೊಳಹಿನಿಂದ. ಒಂದು ಸಿನಿಮಾ ಮತ್ತೊಂದು ಸಿನಿಮಾಗೆ ಪೂರಕವಲ್ಲದೆ ಜಗತ್ತಿನಲ್ಲಿ ಇಷ್ಟೊಂದು ಸಿನಿಮಾ ಕೃಷಿ ಸಾಧ್ಯವೇ ಆಗುತ್ತಿರಲಿಲ್ಲ. ಇರಬಹುದು.. ಈ ಅಂಶಗಳನ್ನ ಒಳಗೊಂಡಂತ ಸಿನಿಮಾ ಇದಾಗಿರಬಹುದು. ಆದರೆ ಕನ್ನಡದ ಮಟ್ಟಿಗೆ ಒಂದು ಅಪೂರ್ವವಾದ, ಅದ್ಭುತವಾದ ಪ್ರಯತ್ನ ಈ ಸಿನಿಮಾ. ಕನ್ನಡ ಸಿನಿಮಾಗಳಿಂದ ಪ್ರೇರಿತರಾಗಿ ಇತರ ಸಿನಿಮಾಗಳು ತಯಾರಾದ ವಿಷಯ ಅಷ್ಟು ಪ್ರಚಲಿತಕ್ಕೆ ಬಾರದೆ ಹೋದರು, ಬೇರೆ ಭಾಷೆಯ ಸಿನಿಮಾದ ಸಾಮ್ಯತೆಗಳನ್ನ ಒಳಗೊಂಡ ನಮ್ಮ ಸಿನಿಮಾಗಳ ಯಶಸ್ಸಿನ ಕುರಿತಾಗಿ ಭಯಂಕರ ಚರ್ಚೆಯಾಗುವುದು ಕಂಡಾಗ ಬೇಸರ ಅನ್ನಿಸುತ್ತದೆ. 

ಕಳೆದೊಂದು ವರ್ಷದಿಂದ ನಾನು ನೋಡಿರುವ ಹಲವು ಭಾಷೆಯ ಹಲವಾರು ಚಿತ್ರಗಳಲ್ಲಿ ನನಗೆ ಅತಿ ಮೆಚ್ಚಿಗೆಯಾದದ್ದು ನಮ್ಮ ಕನ್ನಡ ಸಿನಿಮಾ ಉಳಿದವರು ಕಂಡಂತೆ. ಈ ಸಿನಿಮಾದಲ್ಲಿ ಅಂಥದ್ದೇನಿದೆ ಅನ್ನುವುದನ್ನ ನಾಲ್ಕು ಸಾಲಿನ ವಿಮರ್ಶೆಯಲ್ಲಿ ನಾವು ತೂಗಿ ಬರೆದುಬಿಡಬಹುದಾದರೂ.. ಸಿನಿಮಾ ನೋಡುವಾಗ ನಮಗೆ ದಕ್ಕುವ ಅನುಭೂತಿ.. ಮನಸೊಳಗೆ ಒಡಮೂಡುವ ಚಿತ್ರಣಗಳು.. ಪಾತ್ರಗಳ ಕುರಿತಾಗಿ ಮೂಡುವ ಭಾವುಕತೆಗಳನ್ನು ಮಾತ್ರ ಎಂಥಾ ನುರಿತ ಕಲೆಗಾರನಿಗೂ ಕಲೆ ಹಾಕುವುದು ಕಷ್ಟ ಸಾಧ್ಯ. ಈ ಸಿನಿಮಾದ ಕುರಿತಾಗಿ ನಾ ಕೇಳಲ್ಪಟ್ಟ ಬಹುದೊಡ್ಡ ಹಿನ್ನಡೆಯ ಅಂಶವೆಂದರೆ ಈ ಸಿನಿಮಾದಲ್ಲಿ ಗಟ್ಟಿ ಕಥೆಯಿಲ್ಲ. ಹೌದು ನಾನಿದನ್ನ ಒಪ್ಪುತ್ತೇನೆ. ಈ ಸಿನಿಮಾದಲ್ಲಿ ಈ ತನಕ ನಾವೆಲ್ಲರೂ ನೋಡಿಕೊಂಡು ಬಂದಂಥ ಇತರೆ ಸಿನಿಮಾಗಳ ಶೈಲಿಯ ಕಥೆಯಿಲ್ಲ. ಈ ಸಿನಿಮಾದ ಪಾತ್ರಗಳಲ್ಲಿ ಸಾಮಾನ್ಯ ಮನುಷ್ಯನ ದೈನಿಕ ಜೀವನದೊಳಗಿರಬಹುದಾದಂಥ ಹಲವಾರು ಚಿತ್ರಣಗಳ ಜ್ವಲಂತ ಕಥೆಗಳಿವೆ. ಮತ್ತು ಆ ಕಥೆ ಸಿನಿಮಾ ಕಥೆಯಾಗಿರದೇ ನಿಜವಾಗಿದ್ದು ವಾಸ್ತವಕ್ಕೆ ಹತ್ತಿರವಾಗುವಂತಿದೆ. ಒಂದು ಸಿನಿಮಾ ಕಥೆಯಾಗುವಲ್ಲಿ ಈ ಸಿನಿಮಾದ ಕಥೆ ವಿಫಲವಾಗಿಹುದೇನೋ ಅಂದುಕೊಂಡರೂ ಅದೇ ಕಾರಣಕ್ಕೆ ಸಿನಿಮಾ ಮತ್ತೆ ಮತ್ತೆ ಆಪ್ತವೆನಿಸುತ್ತದೆ. 

ಈ ಸಿನಿಮಾ ವಿಭಿನ್ನ ಮತ್ತು ವಿಶಿಷ್ಟ ಯಾಕಂದ್ರೆ.. ಈ ಸಿನಿಮಾದ ಕಥೆ ಒಂದು ಮರ ಇದ್ದಂತೆ. ಸಿನಿಮಾದ ಎಲ್ಲಾ ಪಾತ್ರಗಳೂ ಆ ಮರದಿಂದ ಚದುರಿದ ಕಾಂಡಗಳೇ. ಎಲ್ಲಾ ಪಾತ್ರವರ್ಗವೂ ಕಥೆಗೆ ನೇರ ಮತ್ತು ಎಲ್ಲಾ ಪಾತ್ರಗಳಷ್ಟೇ ಶಕ್ತ ಸಂಭಂಧಿತ. ರಿವರ್ಸ್ ಸೀಕ್ವೆಲ್ ತಂತ್ರವನ್ನ ಬಳಸಿ ಸಿನಿಮಾದ ಕಥೆಯನ್ನ ಐದು ಹಂತಗಳಲ್ಲಿ ಬಿಡಿಸಿ ಬಿಡಿಸಿ ಹೇಳುವಂಥ ಪ್ರಯತ್ನ ಇದರಲ್ಲಿ ಆಗಿದೆಯಾದರೂ, ಆ ಐದೂ ಆಯಾಮಗಳನ್ನ ಒಂದಕ್ಕೊಂದು ಪೂರಕವೆಂಬಂತೆ ಬೆಸೆದಂಥ ಪರಿ ಅದ್ಭುತ. ಪ್ರತಿಯೊಂದು ಪಾತ್ರವೂ ಕಥೆಗೆ ಪೂರಕವೂ ಹೌದು, ಪೋಷಕವೂ ಹೌದು. ಇಲ್ಲಿ ಕೇವಲ ನಾಯಕ ಮೆರೆದಾಡುವುದಿಲ್ಲ.. ನಾಯಕನ ಪಾತ್ರದಷ್ಟೇ ಶಕ್ತವಾಗಿ ಇತರ ಪಾತ್ರಗಳೂ ಮೆರೆದಾಡುತ್ತವೆ. ಯಾವ ಪಾತ್ರವೂ ಕಥೆಯ ಹೊರತಾಗಿರದೆ ಯಾವೊಂದು ಅಂಶವೂ ಕಥೆಗೆ ಅಪಭ್ರಂಶ ಅನ್ನಿಸದೆ ಇರೋದು ಸಿನಿಮಾದ ಶುದ್ಧತೆ ಮತ್ತು ಹೆಗ್ಗಳಿಕೆಯ ಅಂಶ. ಎಲ್ಲರ ಬದುಕಿಗೂ ಕೊಂಡಿಯಂತಹ ಒಂದು ಘಟನೆಯನ್ನ & ಆ ಘಟನೆಗೆ ತಳುಕು ಹಾಕಿ ಕೊಂಡಂತೆ ಸಂಭವಿಸುವ ಮೂರು ಸಾವುಗಳನ್ನ ಹೇಗೆ ಉಳಿದ ಪಾತ್ರಗಳು ಸಾಕ್ಷೀಕರಿಸಿದೆ ಅನ್ನೋದು ಈ ಚಿತ್ರದ ಒನ್ ಲೈನ್  ಕಥೆ.

ಈ ಸಿನಿಮಾದಲ್ಲಿ ಅಬ್ಬರಿಸುವ ಹೊಡೆದಾಟಗಳಿಲ್ಲ. ರಿಚಿ ಪಾತ್ರ ಅಬ್ಬರಿಸುತ್ತದಾದರೂ ಅದು ಕಥೆಯ ಒಂದು ಶಕ್ತಿಶಾಲಿ ಭಾಗವೆನಿಸಿ ಸಹ್ಯ ಅನಿಸಿಕೊಳ್ಳುತ್ತದೆ. ಗಂಟಲು ಹರಿವಂತೆ ಬೊಬ್ಬಿರಿಯುವ ಅಥವಾ ಉದಾಸೀನತೆಯ ಪರಮಾವಧಿಯಂತೆ ತೋಚಿದ್ದನ್ನೆಲ್ಲಾ ತತ್ವವಾಗಿ ಹೇಳುವ ನಿರರ್ಥಕ ಸಂಭಾಷಣೆಗಳಿಲ್ಲ. ಮಲ್ಪೆಯ ಸುತ್ತ ಮುತ್ತಲಿನ ಪ್ರಾದೇಶಿಕ ತುಳು, ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ, ಅಲ್ಲಲ್ಲಿ ಸಹಜ ಕನ್ನಡ ಮತ್ತೂ ಕೆಲವೊಂದು ಕಡೆ ಕುಂದಾಪುರ ಕನ್ನಡದಲ್ಲಿ ಕೇಳಲ್ಪಡುವ ಸಂಭಾಷಣೆಗಳು ತೀರಾ ಸಹಜವಾಗಿರುವ ಕಾರಣಕ್ಕೆ ಅಷ್ಟು ಆಪ್ತವೆನಿಸುತ್ತವೆ. ಚಿತ್ರದ ಸಂಗೀತ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಅಪರೂಪದ ಪ್ರಯತ್ನ. ಈ ಚಿತ್ರದ ಹಾಡುಗಳು ಕೂಡಾ ಇತರೆ ಚಿತ್ರಗಳ ಹಾಡುಗಳ ಸಿದ್ಧಸೂತ್ರದ ಪರಿಧಿಯನ್ನ ದಾಟಿ ಯಶಸ್ವಿಯಾದದ್ದು ಮೆಚ್ಚುವ ಅಂಶಗಳಲ್ಲೊಂದು. ಹಾಡುಗಳೂ ಕೂಡಾ ಚಿತ್ರದ ಹೊರತಾಗಿ ಎಲ್ಲೂ ಹೊರ ನಿಂತಂತೆ ಕಾಣುವುದಿಲ್ಲ. ಸಾಹಿತ್ಯ ಕಥೆಗೆ ಪೂರಕವಾಗಿದ್ದು ಎಲ್ಲರಿಗೂ ಮೆಚ್ಚಿಗೆಯಾಗುವ ಅಂಶಗಳಲ್ಲೊಂದು. ಚಿತ್ರದ ಹಾಡುಗಳ ಅಥವಾ ಇತರೆ ದೃಶ್ಯಗಳ ಚಿತ್ರೀಕರಣಕ್ಕೆ ಯಾವುದೇ ಹೊರಾಂಗಣ ಅಥವಾ ವಿದೇಶ ಅಥವಾ ಇತರೆ ಪ್ರವಾಸೀ ತಾಣಗಳನ್ನ ಆಯ್ಕೆ ಮಾಡಿಕೊಳ್ಳದೆ.. ಮಲ್ಪೆಯಸುತ್ತ ಮುತ್ತಣ ಪರಿಸರ ಮತ್ತು ಸಾಗರ ತೀರದ ಜಾಗಗಳನ್ನು ಬಳಸಿರುವುದರಿಂದ ಸಿನಿಮಾಗೆ ಒಂದು ಪ್ರಾದೇಶಿಕ ಸೊಗಡು ಬಲವಾಗಿ ದೊರಕುತ್ತದೆ. ಇಲ್ಲಿ ಖಳರು ಅಸಲಿಗೆ ಕಾಣಿಸುವುದೇ ಇಲ್ಲ. ಇನ್ನು ಅಬ್ಬರಿಸುವುದೆಲ್ಲಿ..?? ರಿಚ್ಚಿ ಅಬ್ಬರಿಸುತ್ತಾನದರೂ.. ಇನ್ನೊಬ್ಬರ ಮೂಗು ಜಜ್ಜುವ ದುರುಳನಾದರೂ ಅವ ದುರುಳ ಅನಿಸುವುದೇ ಇಲ್ಲ. ಅಂಥದ್ದೊಂದು ಮ್ಯಾನರಿಸಂನಿಂದಲೇ ರಿಚಿ ಎಲ್ಲರ ಕಣ್ಮಣಿಯಾಗುತ್ತಾನೆ.

ಈ ಚಿತ್ರದಲ್ಲಿ ಮೆಚ್ಚಿಕೊಳ್ಳುವಂಥ ಸಣ್ಣ ಸಣ್ಣದೆ ಅನ್ನಿಸುವ ವಿಚಾರಗಳು ಬಹಳಷ್ಟಿವೆ. ಚಿತ್ರದಲ್ಲಿ ನಗುವುದಕ್ಕೆ ಬಹಳಷ್ಟು ಅವಕಾಶಗಳಿವೆ. ಆದರೆ ಎಲ್ಲೂ ಹಾಸ್ಯ ನಟರ ಬಳಕೆಯಾಗಿಲ್ಲ. ನಗಿಸುವ ಜವಾಬ್ದಾರಿಯನ್ನ ರಿಚಿ ಮತ್ತು ಡೆಮಾಕ್ರೆಸಿ ಪಾತ್ರಗಳು ಸಮರ್ಥವಾಗಿ ನಿಭಾಯಿಸಿವೆ. ಡೆಮಾಕ್ರೆಸಿ ಎಂಬ ಎಂಟು ಹತ್ತು ವರ್ಷ ವಯಸ್ಸಿನ ಹುಡುಗನ ತುಂಟತನ, ಮುಗ್ಧತೆ, ನೈಜ ಅನ್ನಿಸುವ ಅವನ ಅಭಿನಯ ಎಲ್ಲರ ಮನಸೂರೆಗೊಂಡು ಅವನು ಎಲ್ಲರ ಮುದ್ದಿನ ಕಣ್ಮಣಿ ಆಗಿಬಿಡುವಂತೆ ಮಾಡಿದೆ. ಯಕ್ಷಗಾನ ಹುಲಿವೇಶದ ಕುಣಿತದ ದೃಶ್ಯಗಳು ಸಿನಿಮಾ ಎಂಬ ಚೌಕಟ್ಟಿನಿಂದ ಹೊರಗಿನದ್ದು ಎನ್ನುವಂತೆ ಭಾಸವಾಗಿ ಜೀವಂತಿಕೆ ಮೆರೆಯುತ್ತವೆ. ನಾವೇ ಎದ್ದು ಕುಣಿಯ ಬೇಕೆನಿಸುವಷ್ಟು ಉದ್ದೀಪಿಸುತ್ತದೆ ಹುಲಿ ವೇಷದ ಕುಣಿತ. ಚಿತ್ರದಲ್ಲಿ ಪ್ರದರ್ಶಿಸದ, ಪ್ರಕಟಿಸದ ಆಯಾಮಗಳ ಎರಡು ಅಮೂರ್ತ ಪ್ರೇಮಕಥೆಯಿದೆ. ಬೋಟ್ ರಿಪೇರಿ ಮಾಡುವ ಮುನ್ನ ಮತ್ತು ಮೀನು ಮಾರುವ ಶಾರದ ನಡುವಿನ ಅವ್ಯಕ್ತ, ಮೂಕ ಭಾವಗಳ ಮಧುರ ಪ್ರೇಮ ನಮ್ಮನ್ನು ಕಾಡಿಸುತ್ತದೆ. ಅವರು ಕೈ ಹಿಡಿದು ಮರ ಸುತ್ತುವುದಿಲ್ಲ.. ಅಪ್ಪಿ ಮುದ್ದಾಡುವುದಿಲ್ಲ.. ಡಾನ್ಸ್ ಮಾಡುವುದಿಲ್ಲ. ಇದೆಲ್ಲದರ ಹೊರತಾಗಿಯೂ ಅವರಿಬ್ಬರ ಪ್ರೇಮದ ಮಧುರ ಭಾವನೆಗಳು ಎಲ್ಲರ ಎದೆಯೊಳಗಿಳಿದು ಒಂದು ಮಧುರ ಅನುಭೂತಿಯನ್ನು ಅನುಭವಿಸುವಂತೆ ಮಾಡುತ್ತವೆ. ಉರಿವ ರಿಚಿ ಮತ್ತು ಸಹನಶೀಲ ಪತ್ರಕರ್ತೆ ರೆಜಿನ ನಡುವಿನ ಕಾಲೆಳೆದಾಟದ ಪ್ರಸಂಗಗಳು ಮುದ ನೀಡುವಂಥವು. ಅವನ ಚಿಕ್ಕಂದಿನ ಫೋಟೊವನ್ನ ಇವನಿಗೆ ಕೊಡದೆ ಸತಾಯಿಸುವ ಅವಳು.. ಅದಕ್ಕಾಗಿ ಅವಳ ಬೆನ್ನು ಬಿದ್ದು ಸತಾಯಿಸುವ ಇವನು.. ಇಬ್ಬರ ಕೋಳಿ ಜಗಳದಲ್ಲಿ ಎಂದೂ ಪ್ರಕಟವಾಗದ ಒಂದು ಅದೃಶ್ಯ ಪ್ರೇಮದ ಮೊಳಕೆ ಕುಡಿಯೊಡೆವ ಮೊದಲೇ ಒಂದು ಅಂತ್ಯಕ್ಕೆ ಬಂದು ಬಿಡುವ ಪ್ರಸಂಗ ನೋವು ತರಿಸುತ್ತದೆ. ಚಿಕ್ಕಂದಿನಿಂದಲ್ಲೇ ಮನಸಲ್ಲಿ ನೆಲೆ ನಿಂತ ನೋವೊಂದು ಅದೆಷ್ಟು ಕಾಲವಾದರು ಮಾಯದೆ ಕಡೆಗೆ ನಡು ಪ್ರಾಯದ ವಯಸ್ಸಿನಲ್ಲಿ ಅದರ ಕುರಿತಾಗಿ ಸೇಡು ತೀರಿಸಿಕೊಂಡು ಸಮಾಧಾನ ಪಟ್ಟುಕೊಳ್ಳುವ ಮನುಷ್ಯನ ತಣ್ಣಗಿನ ರಕ್ತದೊಳಗಿನ ಕ್ರೌರ್ಯ ನಮ್ಮನ್ನ ಆಶ್ಚರ್ಯ ಪಡುವಂತೆ ಮಾಡಿ ಎಚ್ಚರಿಸುತ್ತದೆ.

ಅಭಿನಯದ ವಿಚಾರಕ್ಕೆ ಬಂದರೆ ಯಾರಿಗೂ ಕೊರೆ ಹೇಳುವ ಹಾಗೆ ಇಲ್ಲ. ರಿಚಿಯಾಗಿ ರಕ್ಷಿತ್ ಶೆಟ್ಟಿ ನಿಜಕ್ಕೂ ವಿಸ್ಮಯ. ಅವನು ಒರಟನಾದರೂ ಒರಟನಲ್ಲ, ದುರುಳನಾದರೂ ದುರುಳನಲ್ಲ. ಕ್ಯೂಬನ್ ಕಿಡ್ ಮತ್ತು ಮಾಂಡ್ವ ಹುಡುಗನ ಕಥೆ ಹೇಳುವಾಗಿನ ಅವರ ಮ್ಯಾನರಿಸಂ ನಿಜಕ್ಕೂ ಆ ಕಥೆಯಂತೆಯೇ ಬಹಳ ಕಾಲ ನೆನಪಿನಲ್ಲಿ ಉಳಿಯುವಂಥದ್ದು. ಮಂಡ್ಯ ಹೈದನಾಗಿ, ಶಾರದೆಯ ಒಂದು ಮುದ್ದು ನಗುವಿಗೆ ಮಾರು ಹೋಗಿ ಮೈ ಮರೆಯುವ, ಅಣ್ಣನಿಗೊದಗಿದ ಪರಿಸ್ಥಿತಿಯ ಕಂಡು ದುಃಖಿಸುವ ಅವಳ ನೋವಿಗೆ ಪರಿಹಾರವೆಂಬಂತೆ ಅದಕ್ಕೆ ಕಾರಣನಾದವನನ್ನು ಕೊಲ್ಲುವಷ್ಟು ಪ್ರೀತಿಸುವ ಮುಗ್ಧನಾಗಿ ಕಿಶೋರ್ ಅಭಿನಯ ಸೂಪರ್. ಟೀವಿ ೯ ರ ವಾರ್ತಾ ನಿರೂಪಕಿಯಾಗಿದ್ದ ಕಾಲದಿಂದಲೂ ನಾನು ಶೀತಲ್ ಅಭಿಮಾನಿ. ಇಲ್ಲವರ ಸಹಜ ಅಭಿನಯಕ್ಕೆ ಸಲ್ಯೂಟ್. ಅಷ್ಟು ಕ್ಯೂಟ್ ಕ್ಯೂಟ್ ಶೀತಲ್ ಒಂದೆರಡು ದೃಶ್ಯಗಳ ಹೊರತಾಗಿ ಇಡೀ ಚಿತ್ರದಲ್ಲಿ ಮತ್ತೆಲ್ಲೂ ನಗದೆ ಇರಲಾಗದಿದ್ದುದಕೆ ಖಂಡಿತ ಬೇಸರವಿದೆ. ಸಿಕ್ಕ ಸಣ್ಣ ಪಾತ್ರದಲ್ಲೇ ಯಜ್ಞಾ ಶೆಟ್ಟಿ ಆವರಿಸಿಕೊಳ್ಳುತ್ತಾರೆ . ರಘು ಪಾತ್ರಧಾರಿ ರಿಶಬ್ ಶೆಟ್ಟಿ ಯ ಅಭಿನಯ ಕೂಡಾ ಮೆಚ್ಚುವಂಥದ್ದು. ಆತಂಕದ ಕ್ಷಣಗಳ ಮುಖಭಾವಗಳಲ್ಲಿ ಅವರ ಅಭಿನಯ ಸಹಜವೆಂಬಂತೆ ತೋರುತ್ತದೆ. ಅಚ್ಯತರಾವ್ ಈ ಚಿತ್ರದ ಮತ್ತೊಂದು ಅದ್ಭುತ. ಸಾಗರದಾಳದಲ್ಲಿ ಸಿಕ್ಕ ವಸ್ತುವಿನ ಮೇಲೆ ಕುತೂಹಲ ತೋರುವ  & ಕಾಗೆಯ ಕಾಟಕ್ಕೆ ಬೇಸತ್ತ ನಟನೆಯಲ್ಲಿ ಅಚ್ಯುತರಾವ್ ನಿಜವಾಗಿಯೂ ಬೆರಗು ಮೂಡಿಸುತ್ತಾರೆ. ಈಗ ಚಿತ್ರದಲ್ಲಿ ಸುದೀಪ್ ನೊಣದ ಕುರಿತಾಗಿ ಮೂಡಿಸಿದಷ್ಟೇ ಬೆರಗು ಇಲ್ಲಿ ಅವರದು ಕೂಡಾ. ತಾಯಿಯಾಗಿ ತಾರಾ ಅವರ ನಟನೆ ನಿಜಕ್ಕೂ ಮಿನುಗುವಂಥ ತಾರೆಯ ಹೊಳಪಿನಂಥಹದ್ದು. ಬಹಳ ವರ್ಷಗಳ ನಂತರ ಮಗನನ್ನು ಕಂಡ ಸಂತಸವನ್ನ ವ್ಯಕ್ತಪಡಿಸುವ ಅವರ ಭಾವಗಳು ಮಾತ್ರ ಎಂಥವರ ಕಣ್ಣoಚಲ್ಲೂ ಸಣ್ಣ ಪಸೆಯನ್ನು ಮೂಡಿಸುವಷ್ಟು ಮಂತ್ರಮುಗ್ಧರನ್ನಾಗಿಸುತ್ತದೆ. ಕಚಗುಳಿ ಇಡುವಂತೆ ನಟಿಸಿರುವ ಡೆಮಾಕ್ರೆಸಿ ಒಂದು ಅದ್ಭುತ ಶೋಧ. ಪೇಪರ್ ಪೇಪರ್ ಮೆಣಸಿನ ಪೇಪರ್ ಹಾಡಿನಷ್ಟೇ ಆಕರ್ಷಕ ಆ ಪುಟ್ಟ ಮಕ್ಕಳ ಅಭಿನಯ ಆ ಹಾಡಿನಲ್ಲಿ. ಅವನನ್ನು ಮೆಚ್ಚದೆ ಇರಲು ಸಾಧ್ಯವೇ ಇಲ್ಲ. 

ತಾಂತಿಕ ವರ್ಗದವರ ಎಲ್ಲರ ಶ್ರಮ ಅಭಿನಂದನೀಯ. ನೆರಳು ಬೆಳಕು, ಬಿಸಿಲು ಮಳೆ, ಎಲ್ಲ ದೃಶ್ಯಗಳಲ್ಲೂ ಸಿನಿಮಾ ಪರ್ಫೆಕ್ಟ್. ನಿರ್ದೇಶಕನಾಗಿ ರಕ್ಷಿತ್ ಮತ್ತೊಂದು ವಿಸ್ಮಯ. ಕೇವಲ ಎರಡು ಸಿನಿಮಾ ಮಾಡಿದ ಹುಡುಗನಲ್ಲಿ ಇಂಥದ್ದೊಂದು ಪರಿಕಲ್ಪನೆ ಮೂಡಲು ಸಾಧ್ಯವ..?? ಆ ಪರಿಕಲ್ಪನೆಯನ್ನು ಇಷ್ಟು ಶಕ್ತವಾಗಿ, ಅದ್ಭುತವಾಗಿ ತೆರೆಯ ಮೇಲೆ ತರಲು ಆ ನವ ನಟನಿಗೆ, ನಿರ್ದೇಶಕನಿಗೆ ಸಾಧ್ಯವಾ..? ಈ ಪ್ರಶ್ನೆಗಳಿಗೆ ನೇರ ಉತ್ತರ ರಕ್ಷಿತ್. ಕನ್ನಡ ಚಿತ್ರ ರಂಗದ ಒಬ್ಬ ಅಪರೂಪದ ಕಲಾವಿದ, ತಂತ್ರಜ್ಞ, ಮತ್ತು ನಿರ್ದೇಶಕನಾಗುವ ಛಾಪು ಅವರಲ್ಲಿ ಕಾಣಲು ಸಾಧ್ಯ. ಹೀ ಇಸ್ ಜಸ್ಟ್ ಬ್ರಿಲಿಯಂಟ್. ಈ ಸಿನಿಮಾದ ಮೂಲಕ ರಕ್ಷಿತ್ ತಮ್ಮ ಹೆಗಲ ಮೇಲೆ ಅಪಾರ ಭರವಸೆಗಳ ದೊಡ್ಡ ನೊಗವಿರಿಸಿಕೊಂಡದ್ದು ನಿಜ. ಸಂಗೀತ ಮತ್ತೆ ಮತ್ತೆ ಮೆಲುಕು ಹಾಕುವಷ್ಟು ಮಧುರ. ಪ್ರತೀ ಸಾರಿ ಕೇಳಿದಾಗಲೂ ಹಾಯೆನಿಸುವಷ್ಟು ಆಹ್ಲಾದಕರ. ಮಲ್ಪೆಯೆಂಬ ಚಿಕ್ಕ ಪ್ರದೇಶದ ಸುತ್ತುವರಿದು ಅದ್ಭುತ ಬ್ರಹ್ಮಾಂಡವನ್ನೇ ತೆರೆದಿಟ್ಟ ಛಾಯಾಗ್ರಹಣ ಮನೋಹರ. ಹಿನ್ನಲೆ ಸಂಗೀತದ ಅಬ್ಬರಕೆ ಅಲ್ಲಲ್ಲಿ ಸಂಭಾಷಣೆಗಳು ಕೇಳಿಸದಿದ್ದರೂ ಹಿನ್ನಲೆ ಸಂಗೀತ ಪರಿಣಾಮಕಾರಿ ಎನಿಸಿ ಕಥೆಗೆ ಪೂರಕ ಅನಿಸಿಕೊಳ್ಳುತ್ತದೆ. ಧ್ವನಿಗ್ರಹಣದಲ್ಲಿ ಒಂಚೂರು ಕೆಲಸ ಮಾಡಿದ್ದರೆ ಒಳ್ಳೆಯದಿತ್ತೇನೋ. 

ಕನ್ನಡ ಚಿತ್ರರಂಗದ ಇತ್ತೀಚಿನ ಕೆಲ ಚಿತ್ರಗಳು ಇಡೀ ಭಾರತವನ್ನೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದು ನಿಜ. ಒಲವೆ ಮಂದಾರ, ಟೋನಿ, ದ್ಯಾವ್ರೆ, ಲೂಸಿಯಾ, ಎದೆಗಾರಿಕೆ, ವಿಕ್ಟರಿ, ಉಗ್ರಂ ನಂಥ ಚಿತ್ರಗಳು ತಾಂತ್ರಿಕವಾಗಿ ಉತ್ತಮವಾಗಿದ್ದು ಕನ್ನಡಕ್ಕೊಂದು ಮೆರುಗು ತಂದುಕೊಟ್ಟದ್ದು ಸುಳ್ಳಲ್ಲ. ಕನ್ನಡ ಸಿನಿಮಾಗಳ ಗುಣಮಟ್ಟಕ್ಕೆ ಯಶಸ್ವಿ ಉದಾಹರಣೆಗಳಾಗಿ ಈ ಚಿತ್ರಗಳು ನಿಲ್ಲುತ್ತವೆ. ಆ ಸಾಲಿಗೆ ಉಳಿದವರು ಕಂಡಂತೆ ಕೂಡಾ ಸೇರ್ಪಡೆಯಾಗುತ್ತದೆ. ಇಡೀ ಭಾರತ ಈ ಒಂದು ಕನ್ನಡ ಸಿನಿಮಾದೆಡೆಗೆ ತಿರುಗಿ ನೋಡುವಂತೆ ಮಾಡಿದ ಛಾತಿಯುಳ್ಳ ಈ ಸಿನಿಮಾವನ್ನ ಕನ್ನಡಿಗರೆಲ್ಲರೂ ಸಾಕ್ಷೀಕರಿಸಬೇಕ್ಕಾದ್ದು ನಮ್ಮ ಕರ್ತವ್ಯವೂ ಹೌದು. ಈ ಹಿಂದೆ ಕನ್ನಡ ಚಿತ್ರಗಳ ಕುರಿತಾಗಿ ನನ್ನ ಇತರ ಭಾಷೆಯ ಸ್ನೇಹಿತರ ವಲಯದಲ್ಲಿ ಅಪಹಾಸ್ಯಕ್ಕೆ ಈಡಾಗಿದ್ದ ನಾ.. ಈಗ ಈ ಕೆಲ ಚಿತ್ರಗಳ ಕುರಿತಾಗಿ ಎದೆ ನಿಮಿರಿ ಮಾತನಾಡಬಲ್ಲೆ. ಇತರೆ ನೆಲೆಗಳಲ್ಲಿ ಕನ್ನಡ ಚಿತ್ರಗಳ ಕುರಿತಾಗಿ ಅಲ್ಲಲ್ಲಿ ಅಭಿನಂದನೀಯ ಮಾತುಗಳನ್ನು ಕೇಳುವಾಗ ನಿಜಕ್ಕೂ ಅದೆಷ್ಟು ಖುಷಿ ಅನ್ನಿಸುತ್ತದೆ. 

10 comments:

  1. "ಉಳಿದವರು ಕಂಡಂತೆ" ನಾ ಕಂಡಿಲ್ಲ, ನಾ ಕಂಡಂತೆ ಈ" ಉಳಿದವರು ಕಂಡಂತೆ" ಚಿತ್ರ ವಿಮರ್ಶೆ ಚೆನ್ನಾಗಿದೆ.
    ನಿಮ್ಮ ಪ್ರತಿಯೊಂದು ಸಾಲು ನಿಜವಾದದ್ದು. ಈ ಬರಹ ನೋಡಿದ ಮೇಲೆ ಆದಷ್ಟು ಬೇಗ ಫಿಲಂ ನೋಡಬೇಕು ಅನಿಸ್ತಾ ಇದೆ.

    ReplyDelete
  2. ತುಂಬ ಚಂದವಾಗಿ ಮಾಡಿರುವ ಚಿತ್ರ. ನನಗೂ ಇಷ್ಟವಾಯ್ತು, ಕೆಲವು ಸನ್ನಿವೇಶಗಳು, ಪಾತ್ರಗಳು ಚಿತ್ರಮಂದಿರದಿಂದ ಹೊರಬಂದಮೇಲೆಯೇ ಹೆಚ್ಚು ಕಾಡುತ್ತವೆ. ಸಿನೆಮಾವನ್ನು ಜೀವನವಾಗಿ ನೋಡುವ ಅನುಭವಿಸುವ ಮನಸ್ಸು ವ್ಯವಧಾನ ಇರಬೇಕಷ್ಟೇ. ಹರಿಬರಿಯ ಪ್ರೇಕ್ಷಕನಿಗಲ್ಲ ಈ ಚಿತ್ರ.

    ಸುಂದರ ವಿಮರ್ಶೆ ಕೂಡ. ಇನ್ನೊಮ್ಮೆ ನೋಡಿದ ಹಾಗಾಯ್ತು ಚಿತ್ರವನ್ನು, ಸ್ವಲ್ಪ ಹೆಚ್ಚು ಸೂಕ್ಷ್ಮವಾಗಿ.

    ReplyDelete
  3. ತುಂಬಾ ಚೆನ್ನಾಗಿ ಪ್ರತಿಯೊಂದು ಅಂಶವನ್ನ ವಿಶ್ಲೇಷಿಸಿ ಬರೆದಿದ್ದಿಯ ಸತ್ತಿ..ಓದಿ ತುಂಬಾ ಖುಷಿಯಾಯಿತು..

    ಈ ಚಿತ್ರದ ನಿರೂಪಣೆ ವೀರುಮಾಂಡಿ ಮತ್ತು ಯುವ ಚಿತ್ರಗಳಿಗೆ ಹೋಲುತ್ತೆ ಎನ್ನುವುದಕ್ಕಿಂತ 2008 ರಲ್ಲಿ ತೆರೆಕಂಡ ಇಂಗ್ಲಿಷ್ ನ Vantage Point ಎಂಬ ಚಿತ್ರದ ನಿರೂಪಣೆಗೆ ಚೆನ್ನಾಗಿ ಹೋಲುತ್ತೆ..ಆ ಚಿತ್ರವೇ "ಉಳಿದವರು ಕಂಡಂತೆ" ಚಿತ್ರದ ನಿರೂಪಣೆಗೆ ಪ್ರೇರಣೆಯಾಗಿರಲೂಬಹುದು..

    ReplyDelete
  4. ಕರಂ ಚಾವ್ಲಾ ಛಾಯಾಗ್ರಹಣವಿರುವ ಈ ಚಿತ್ರದ ಬಗೆಗೆ ತಮ್ಮ ಈ ಬರಹ ಓದಿದ ಮೇಲೂ ಈ ಚಿತ್ರವನ್ನು ನೋಡಲಿಲ್ಲವೆಂದರೆ ಎನಗಿಂತ ಪೆದ್ದನಿಲ್ಲ ಎನಿಸಿತು ಗೆಳೆಯ.

    ReplyDelete
  5. ಚಿತ್ರದ ಗುಣಗಳನ್ನು ಎಳೆ ಎಳೆಯಾಗಿ ಬಿಡಿಸಿ ಬರೆದಿರುವಿರಿ. ಇದೀಗ ಈ ಚಿತ್ರವನ್ನು ನೋಡಲೇ ಬೇಕಾಯಿತು.

    ReplyDelete
  6. ಉಳಿದವರು ಕಂಡಂತೆ ಚಿತ್ರದ ಬಗ್ಗೆ ಅದ್ಬುತವಾದ ವಿಮರ್ಶೆ. ನಾನು ಚಿತ್ರ ನೋಡಿ ಒಂದು ವಾರವಾಯ್ತು ಈಗಲೂ ಚಿತ್ರದ ಚಿತ್ರಗಳು, ಸನ್ನಿವೇಶಗಳು, ಎಳೆ ಎಳೆಯಾಗಿ, ಕೆಲವೊಮ್ಮೆ ಸೂಕ್ಷ್ಗ್ಮವಾಗಿ ಕಾಡುತ್ತಿದ್ದವು. ಈ ವಿಮರ್ಶೆಯನ್ನು ಓದಿದ ಮೇಲೆ ಆ ಕಾಡುವಿಕೆ ಇನ್ನಷ್ಟು ಪರಿಪಕ್ವವಾಗುವಂತಿದೆ. ಇತ್ತೀಚಿನ ಟಿವಿ ಧಾರವಾಹಿಗಳಲ್ಲಿ ಹುಲಿವೇಶ ಕುಣಿತದ ಸಂಗೀತವನ್ನು ಬಳಸುತ್ತಿದ್ದು ಆ ಸಂಗೀತದಿಂದಲೇ ಧಾರವಾಹಿ effective ಆಗುತ್ತಿರುವುದು "ಉಳಿದವರು ಕಂಡಂತೆ" ಚಿತ್ರ ಸಂಗೀತದ ಗಾಢತೆ...
    ಈ ವರ್ಷದ ಉತ್ತಮ ಚಿತ್ರವೆಂದು ನಾವು ಬೇರೆಯವರ ಜೊತೆ ಅಭಿಮಾನದಿಂದ ಮಾತಾಡಿಕೊಳ್ಳಬಹುದು.

    ReplyDelete
  7. Hi Sats,
    Bahala sogasaagi vivarisi barediddeera Sats, nanagoo saha movie bahala ishtavaaytu, aneka kaaranagaLige ishtavaaytu!
    Neeve heLidante - 2013 onwards Kannada Chitra Rangadalli prayogathmaka chitragaLadde dandu! Its a Welcome Change :) Talents, Multi-Talents, Super-Speciality-Talents ellaroo nammalle irodakke idakkinta beLavanige beka :)

    ReplyDelete
  8. Awsome movie...Awesome explanation....

    ReplyDelete
  9. thumba chennagi bare didira !!!

    ReplyDelete
  10. Inspired by
    Kill bill
    Sincity
    Roshomon

    ReplyDelete