Friday 28 February 2014

ಜನುಮ ದಿನವೂ.. ಅದರ ಸಂತೋಷವೂ..

ಎಸ್ ಕೆ ಚನ್ನೇಗೌಡ್ರು  ಅಂತ ನಮ್ಮೂರ ಸೀಮೆಗೆ ದೊಡ್ಡ ಶ್ರೀಮಂತರ ಪೈಕಿ ಅನ್ನಿಸಿ ಕೊಳ್ಳೋರು. ಅವರ ಮನೆ ಇಂದ ಒಂದು ಹುಡುಗಿ ನಮ್ ಸ್ಕೂಲಿಗೆ ಬರೋಳು ಬಿಂದು ಅಂತ, ನನ್ನ ಕ್ಲಾಸ್ ಮೇಟ್. ಒಂದಿನ ಕ್ಲಾಸ್ ನಲ್ಲಿ ಎಲ್ಲರಿಗೂ ಫಾರಿನ್ ಚಾಕೊಲೆಟ್ ನ ಕೊಡ್ತಾ ಇದ್ಲು ಯಾಕೆ ಅಂತ ಕೇಳ್ದಾಗ ಅವತ್ತು ಅವಳ ಹುಟ್ಟಿದ ದಿನ ಅಂತ ಹೇಳಿದ್ಳು. ಬಿಸಿಲಿಗೆ ಫಳ ಫಳ ಹೊಳೆಯೋ ಮಿಂಚಿನ ತುಣುಕುಗಳನ್ನ ಹೊತ್ತ ನೀಲಿ ಕಲರ್ ಹೊಸಾ ಚೂಡಿದಾರದಲ್ಲಿ ಮಿಂಚ್ತಾ ಇದ್ರೆ ಎಲ್ಲರಿಗೂ ಆಶ್ಚರ್ಯ. ಆ ಹುಡುಗಿ ಮೊದಲೇ ನೋಡೋಕೆ ಅಷ್ಟು ಚೆಂದ ಇನ್ನು ಈ ತರಹ ಬಟ್ಟೆ ಹಾಕಿದ್ರೆ ಎಂಥವರಾದ್ರು ಒಂದು ಕ್ಷಣ ಕವಿ ಆಗ್ಬೇಕು ಅನ್ನಿಸಬೇಕು. ನಮಗೆಲ್ಲ ಯುಗಾದಿಗೋ, ದೀಪಾವಳಿಗೋ ಒಂದು ಹೊಸ ಬಟ್ಟೆ ಸಿಗ್ತಿತ್ತು ಅಷ್ಟೇ. ಹುಟ್ಟಿದ ದಿನ ಎಲ್ಲ ಒಂದು ಹಬ್ಬ ಅಂತ ಗೊತ್ತೇ ಇರ್ಲಿಲ್ಲ. ಅಸಲು ಹುಟ್ಟಿದ ದಿನವೇ ಗೊತ್ತಿರಲಿಲ್ಲ. ಅವಳು ಕೊಟ್ಟ ಚಾಕೊಲೆಟ್ ತಿಂದು ಅವಳಿಗೆ ಶುಭಾಷಯ ಹೇಳಿದೆವು. ನಮಗೂ ಹೀಗೆ ಬರ್ತ್ ಡೇ ಎಲ್ಲ ಇದ್ದಿದ್ರೆ ಎಷ್ಟ್ ಚೆಂದ ಇರೋದು ಅನ್ಸಿ ಅಟೆಂಡರ್ ನಾಗಮ್ಮನನ್ನ ಪುಸಲಾಯಿಸಿ ಶಾಲಾ ದಾಖಲಾತಿಯಲ್ಲಿ ದಾಖಾಲಾಗಿದ್ದ ನಮ್ಮ ಹುಟ್ಟಿದ ದಿನಾಂಕ ವನ್ನ ತಿಳಿದುಕೊಂಡ್ವು. ಅದ್ಕೂ ಮುನ್ನ ಏಳನೇ ಕ್ಲಾಸ್ ಮಾರ್ಕ್ಸ್ ಕಾರ್ಡ್ ಮತ್ತೆ ಟೀ ಸೀ ಲಿ ನಮ್ಮ ಹುಟ್ಟಿದ ದಿನಾಂಕ ನೋಡಿದ್ದಿತ್ತಾದ್ರು ಜ್ಞಾಪಕ ಇಟ್ಕೊಳೋ ಜರೂರತ್ತು ಇದೆ ಅಂತ ಯಾವತ್ತೂ ಅನ್ನಿಸೇ ಇರ್ಲಿಲ್ಲ. 

ಹುಟ್ಟಿದ ದಿನಾಂಕ ತಿಳ್ಕೊಂಡ ಮೇಲೆ ನಮಗಾದ ಪುಳಕ ಅಷ್ಟಿಷ್ಟಲ್ಲ. ಶಾಲೇಲಿ ಬರ್ತ್ ಡೇ ನೆಪದಲ್ಲಿ ವಾರಕ್ಕೆ ಒಬ್ಬರಾದರೂ ಚಾಕೊಲೆಟ್ ಕೊಡ್ತಾರೇನೋ ಅಂತ ಆಸೆ. ಸರ್ಕಾರಿ ಶಾಲೆಗೇ ಬರ್ತಿದ್ದವರಲ್ಲಿ ಬಹಳಷ್ಟು ಜನ ಬಡವರೇ ಆಗಿದ್ರಿಂದ ಯಾರು ಅಂತ ಆಚರಣೆಗಳ ಕಡೆ ಆಸಕ್ತಿ ಇರ್ಲಿಲ್ಲ. ಒಂದಿನ ನನ್ನ ಹುಟ್ಟಿದ ದಿನ ಬಂತಾದರೂ ಕೈಲಿ ದುಡ್ಡಿಲ್ಲದೆ.. ಮನೇಲಿ ಕೇಳಿದರೆ ಅದೆಲ್ಲ ದುಡ್ಡಿರೋರಿಗೆ ನಮ್ಮಂತೋರಿಗಲ್ಲ ಅಂತ ಸಬೂಬು ಹೇಳಿ ಅಪ್ಪ ಆವತ್ತಿನ ಕಾಲಕ್ಕೆ ಅವತ್ತು ಒಂದು ರುಪಾಯಿ ಕೊಟ್ಟಿದ್ದರು. ಒಂದು ರುಪಾಯಿ ಇಡೀ ತರಗತಿಗೆ ಮಿಟಾಯಿ ಎಲ್ಲಿ ಕೊಡಿಸೋಕ್ಕಾಗ್ತಿತ್ತು..?? ಬೇಕಿದ್ದ ಹತ್ತು ಹದಿನೈದು ಹುಡುಗರಿಗೆ ನಿಂಬೆ ಹುಳಿ ಮಿಟಾಯಿ ಅಷ್ಟೇ ಕೊಡಿಸಿದ್ದೆ ಅವತ್ತು. ಆನಂತರ ಕಾಲೇಜಾಗಲೀ ITI ಆಗಲಿ ನನ್ನ ಹುಟ್ಟಿದ ದಿನವನ್ನ ಒಂದು ಸಂಭ್ರಮದ ದಿನ ಆಗಿಸುವಲ್ಲಿ ವೇದಿಕೆ ಆಗ್ಲೇ ಇಲ್ಲ. ಗೊತ್ತಿದ್ದ ನಾಲ್ಕಾರು ಹುಡುಗರು ಶುಭಾಷಯ ಹೇಳ್ತಿದ್ರು ಬಿಟ್ರೆ ಅವತ್ತಿನ ದಿನವೂ ನಮ್ಮ ಪಾಲಿಗೆ ಅಂಥಾ ವೆತ್ಯಾಸದ ದಿನವೇನೂ ಆಗಿರ್ತಿರ್ಲಿಲ್ಲ. 


ITI ಮುಗಿಸಿ ಟ್ರೈನಿಂಗ್ ಗೆ ಅಂತ ಬೆಂಗಳೂರಿಗೆ ಬಂದಿದ್ದಾಯ್ತು. ಫ್ರೆಂಡ್ಸ್ ಜೊತೆ ಬೇರೆ ಮನೇಲಿ ಉಳಿದುಕೊಂಡರೆ ಕೆಟ್ಟು ಹೋಗ್ತೀನಿ ಅಂತ ಅಮ್ಮ ತನ್ನ ತಮ್ಮ ಅಂದ್ರೆ ನನ್ನ ಸೋದರ ಮಾವನ ಮನೇಲಿ  ಇರೋ ಹಾಗೆ ಮಾಡಿದ್ರು. ಆ ಟೈಮಿಗೆ ಮಾಮಿಗೆ ಎರಡನೇ ಮಗುವಿನ ಸಮಯ ಫೆಬ್ರವರಿಯ ಕೊನೆ ವಾರದಲ್ಲಿ ಡೆಲಿವೆರಿ ಗೆ ಅಂತ ಎಲ್ಲ ಊರಿಗೆ ಹೊರಟ್ರು. ನಾನ್ ಮಾತ್ರ ಒಬ್ನೇ ಉಳಿದುಕೊಂಡೆ ಮಾಮನ ಮನೇಲಿ  ಟ್ರೈನಿಂಗ್ ನಿಮಿತ್ತ. ಮಾಮನ ಮನೆ ಗಾರ್ವೆ ಬಾವಿ ಪಾಳ್ಯದ ಒಳಗೆ ಬೇಗೂರು ರಸ್ತೆಯ ಶ್ರೀರಾಮ ನಗರದಲ್ಲಿ. ಎರಡು ಅಂತಸ್ತು, ಆರು ಸಣ್ಣ ಸಣ್ಣ ಮನೆಗಳಿದ್ದಂಥ ಕಟ್ಟಡ ಅದು. ಮಾಮನ ಮನೆ ಮೊದಲ ಅಂತಸ್ತಿನಲ್ಲಿ. ಮೇಲಂತಸ್ತಿನ ಸಾಲಿನ ಕೊನೆಯ ಮನೆಯಲ್ಲಿ ಬಾಡಿಗೆ ಇದ್ದವರು ಒಬ್ಬ ತೆಲುಗು ಕುಟುಂಬ. ಅದರಲ್ಲಿ ಪ್ರೀತಿ ಅನ್ನುವ ಪೀಯೂಸಿ ಓದುವ ಹುಡುಗಿ. ಮುದ್ದಾಗಿದ್ಳು. ಫೆಬ್ರವರಿ ಇಪ್ಪತ್ನಾಲ್ಕು ಅವಳ ಹುಟ್ಟಿದ ದಿನ. ಅವತ್ತು ಸಂಜೆ ಕೆಲಸ ಮುಗಿಸಿ ಮನೆಗೆ ಬಂದದ್ದೇ ಆ ಮನೆಯ ಆಂಟಿ ಬಂದು ತಮ್ಮ ಮಗಳ ಹುಟ್ಟಿದ ಹಬ್ಬದ ಸೆಲೆಬ್ರೇಶನ್ ಗೆ ಕರೆದು ಹೋದ್ರು. ಬರ್ತ್ ಡೇ ಪಾರ್ಟಿ ಅಂದ್ರೆ ಸುಮ್ನೆ ಹೊಗೊಕಾದೀತೇ ಏನಾದ್ರೂ ತಗೊಂಡು ಹೋಗಬೇಕಲ್ವೆ ಗಿಫ್ಟ್ ಅಂತ ಅಂದುಕೊಂಡೆ . ಆಗ ಸ್ಟೈಪೆಂಡ್ ಅಂತ ಬರ್ತಿದ್ದ ಎರಡು ಸಾವಿರದಲ್ಲಿ ಒಂದು ಸಾವಿರವನ್ನ ಮನೆಗೂ, ಎಂಟು ನೂರು ರುಪಾಯಿಯನ್ನ ಮಾಮನಿಗೂ, ನನ್ನ ಅತಿ ಅಗತ್ಯದ ಖರ್ಚುಗಳಿಗೆ ಅಂತ ಇನ್ನೂರು ರುಪಾಯಿಗಳನ್ನೂ ಇಟ್ಕೋತಾ ಇದ್ದೆ. ಅದು ತಿಂಗಳ ಕೊನೆ. ನನ್ ಕೈಲಿ ಇದ್ದದ್ದು ಕೇವಲ ಮೂವತ್ತು ರುಪಾಯಿ. ಪೀಯೂಸಿ ಓದೋ ಹುಡುಗೀಗೆ ಮೂವತ್ತು ರುಪಾಯಿಗೆ ಏನು ಗಿಫ್ಟ್ ಕೊಡಿಸೋಕಾದೀತು ಅಂತ ಒಂದು ಡೈರಿ ಮಿಲ್ಕ್ ಚಾಕೊಲೆಟನ್ನ ತಗೊಂಡು ಹೋದೆ ಅಷ್ಟೇ. 


ನಮ್ಮ ಬಿಲ್ಡಿಂಗ್ ನಲ್ಲಿ  ಆರು ಮನೆಗಳಲ್ಲಿ ಒಟ್ಟು ಎಂಟು ಜನ ಮಕ್ಕಳಿದ್ರು ಅದರಲ್ಲಿ ಪೀಯೂಸಿ ಓದೋರು ಇಬ್ರು, ಇನ್ನು ಎಂಟರಿಂದ ಹತ್ತರವರೆಗೆ ನಾಲ್ಕು.. ಐದರಿಂದ ಏಳನೇ ತರಗತಿ ವರೆಗೆ ಎರಡು ಮಕ್ಳು. ದಿನಾ ಸಂಜೆ ಎಲ್ಲರ ಜೊತೆ ಬೀದೀಲಿ ಶಟಲ್, ಮಹಡಿಯಲಿ ಕೇರಂ, ಹಾವು ಏಣಿ ಆಟ, ಭಾನುವಾರದಂದು ಕ್ರಿಕೆಟ್ ಆಡ್ತಿದ್ದ ನಾನು ಎಲ್ಲ ಹುಡುಗರಿಗೂ ಆಪ್ತನಾಗಿದ್ದೆ. ನಾನು ಪ್ರೀತಿಯ ಬರ್ತ್ ಡೇ ಪಾರ್ಟಿ ಗೆ ಹೋಗಿದ್ದು ನೋಡಿ ಅವಳು ತುಂಬಾ ಖುಷಿಯಾದಳು. ಕೇಕ್ ಕಟ್ ಮಾಡಿದ್ದಾಯ್ತು. ಎಲ್ಲರಿಗೂ ಕೇಕ್ ಹಂಚುತ್ತಾ ಬಂದಳು. ನಂಗೆ ಕೇಕ್ ಕೊಟ್ಳು ನಾನು ಅವಳಿಗೆ ಚಾಕಲೇಟ್ ಕೊಟ್ಟೆ. ನಿಮ್ ಬರ್ತ್ ಡೇ ಯಾವಾಗ ಅಣ್ಣ ಅಂತ ಕೇಳಿದ್ಳು ಮುಜುಗರದಿಂದ ನಾಳೆನೇ ಕಣಮ್ಮ ಅಂದಿದ್ದೆ. ಮೊದ್ಲೇ ಹೇಳಿದ್ರೆ ಇಬ್ರು ಒಟ್ಟಿಗೆ ಕೇಕ್ ಕಟ್ ಮಾಡ್ಬೋದಿತ್ತಾ, ಈಗ ನೋಡಿ ನಿಮ್ಮನೇಲಿ ಯಾರು ಇಲ್ಲ, ಪರವಾಗಿಲ್ಲ ಇದನ್ನೇ ನಿಮ್ ಬರ್ತ್ ಡೇ ಸೆಲೆಬ್ರೇಶನ್ ಅಂದ್ಕೊಳಿ ಅಂತು ಆ ಹುಡುಗಿ. ಬಹಳ ಸಂತೋಷ ವಾಗಿತ್ತು ನಂಗೆ.. ನನ್ನ ಬರ್ತ್ ಡೇ ಮಾಡಿಕೊಂಡಷ್ಟೇ ಖುಷಿ ಇಂದಿದ್ದೆ ಅಂದು. ಅವತ್ತು ರಾತ್ರಿ ಅವರ ಮನೆಲಿಯೇ ಊಟ ಮಾಡಿಯಾದ ನಾನು ತುಂಬಾ ಭಾವುಕನಾಗಿದ್ದೆ. ಮಾರನೆ ದಿನ ನನ್ನ ಹುಟ್ಟಿದ ದಿನ, ಸ್ನೇಹಿತನ ಬಳಿ ನೂರು ರುಪಾಯಿ ಸಾಲ ತಗೊಂಡು ಅದರಲ್ಲಿ ಬೇಕಿದ್ದ ಕೆಲವು ಸ್ನೇಹಿತರಿಗೆ ಬೇಕರಿಯಲ್ಲಿ ಕೇಕ್ ಕೊಡಿಸಿ, ಮಿಕ್ಕ ಹಣದಲ್ಲಿ ಮನೆ ಸುತ್ತಣ ಮಕ್ಕಳಿಗೆಲ್ಲ ಚಾಕೊಲೆಟ್ ತಂದು ಹಂಚಿ ಸಂಭ್ರಮಿಸಿದ್ದೆ. 

ಇನ್ನು ಟ್ರೈನಿಂಗ್ ಮುಗೀತು ಟ್ರೈನಿಂಗ್ ಮುಗಿದು ವಾಪಾಸು ಊರಿಗೆ ಹೋದೆ. ಮಧ್ಯೆ ಎರಡ್ಮೂರು ಕಂಪನಿಗಳಿಗೆ ಎಕ್ಸಾಮು ಬರೆದಿದ್ದೆ. ಊರಲಿದ್ದ ಒಂದಷ್ಟು ದಿನಗಳ ನಂತರ ನನಗೆ ಕೆಲಸವೂ ಸಿಕ್ತು ಈ ಕಂಪನಿಯಲ್ಲಿ. ಕೆಲಸ ಸಿಕ್ಕದ್ದೇ ತಮಿಳುನಾಡಿನ ತಿರುಚಿರಾಪಳ್ಳಿಗೆ ಹೋಗ ಬೇಕಾಯ್ತು ಟ್ರೈನಿಂಗ್ ನಿಮಿತ್ತ. ಹೊಸ ಜಾಗ, ಹೊಸ ಜನ ಹೊಸ ಥರದ ಅನುಭವ ಆರು ಕರ್ನಾಟಕ, ನಾಲ್ಕು ತಮಿಳುನಾಡು, ಏಳು ಮಲಯಾಳಿ ಹುಡುಗರು ನಮ್ಮ ಬ್ಯಾಚ್ ನೊಳಗಿದ್ದದ್ದು. ಮೊದಲ ಮೂರು ತಿಂಗಳ ನಂತರ ತಲಾ ಇಬ್ಬಿಬ್ಬರನ್ನಾಗಿ ಕರ್ನಾಟಕ ಕೇರಳ ತಮಿಳುನಾಡಿನ ಹಲವು ಕಡೆ ನಮ್ಮನ್ನ ಟ್ರೈನಿಂಗ್ ನಿಮಿತ್ತ ಕಳಿಸಲಾಯ್ತು. ನನಗೆ ತಿರುಚಿಯಲ್ಲಿಯೇ ಇರಬೇಕಾಯ್ತು. ಆಗ ನನ್ನ ಜೊತೆ ಇದ್ದವನು ಮಂಗಳೂರಿನ ಹುಡುಗ ಪ್ರಶಾಂತ್. ೨೦೧೦ ರ ನನ್ನ ಜನ್ಮ ದಿನವನ್ನ ನಾನು ಅವನು ಇಬ್ಬರೇ ಆಚರಿಸಿದ್ವು ಒಂದು ಸಣ್ಣ ಕೇಕ್ ಕಟ್ ಮಾಡಿ. ಈ ಮಧ್ಯೆ ಅಲ್ಪ ಸ್ವಲ್ಪ ಕಂಪ್ಯೂಟರ್ ಕಲಿತಿದ್ದ ನಾನು ಆರ್ಕುಟ್ ಸೇರಿದ್ದೇ ಅಲ್ಲಿ ಸ್ನೇಹಲೋಕ ಅನ್ನುವ ಒಂದು ಗುಂಪಿನ ಸ್ನೇಹಿತರ ಪರಿಚಯವಾಗಿತ್ತು. ಟ್ರೈನಿಂಗ್ ಮುಗಿದು ೨೦೧೧ ರಲ್ಲಿ ನನ್ನ ಪೋಸ್ಟಿಂಗ್ ಹೊಸೂರ್ ನಲ್ಲಾಯ್ತು. ಆ ವರ್ಷದ ಫೆಬ್ರುವರಿ ಕೊನೆಯ ವಾರ ನಾನು ಕೆಲಸದ ನಿಮಿತ್ತ ಪ್ರವಾಸದಲ್ಲಿ ಇದ್ದದ್ರಿಂದ ಆಚರಣೆ ಏನು ಸಾಧ್ಯವಾಗಿರಲಿಲ್ಲ. ಆದ್ರೆ ಆರ್ಕುಟ್ ನಲ್ಲಿ ನನ್ನ ಜನ್ಮದಿನಾಂಕ ಗೊತ್ತು ಮಾಡ್ಕೊಂಡು ನನಗೆ ಫೋನ್ ಮಾಡಿ ಹಲವಾರು ಜನ ಸ್ನೇಹಿತರು ವಿಶ್ ಮಾಡಿದ್ದು ನೋಡಿ ಖುಷಿಯಾಗಿದ್ದೆ. 

೨೦೧೨ ರ ನನ್ನ ಜನ್ಮ ದಿನವನ್ನ ಎರಡು ಬಾರಿ ಆಚರಿಸಿ ಸಂಭ್ರಮಿಸಿದ್ದೆ. ನನ್ನ ಜೊತೆಗೆ ಹೊಸೂರಿಗೆ ಪೋಸ್ಟಿಂಗ್ ಆದಂಥ ಮತ್ತೊಬ್ಬ ಹುಡುಗ ಪ್ರಶಾಂತ್. ಮಡಿಕೇರಿಯವನು. ಅವನ ಜನ್ಮದಿನ ನನ್ನದರ ಮರುದಿನಕ್ಕೆ ಅಂದರೆ ಫೆಬ್ರವರಿ ಇಪ್ಪತ್ತಾರಕ್ಕೆ. ನಮ್ಮ ಕಂಪನಿಯ ಕ್ಯಾಂಟೀನ್ ಕಾಂಟ್ರಾಕ್ಟ್ ಮ್ಯಾನೇಜರ್ ಅನೀಶ್ ಕೂಡ ನಮ್ಮ ಗೆಳೆಯನಾಗಿದ್ದ. ಅವನ ಬರ್ತ್ ಡೇ ಫೆಬ್ರವರಿ ಇಪ್ಪತ್ತೆಂಟಕ್ಕೆ. ನಾವು ಮೂರು ಜನ ಸೇರಿ ನಮ್ಮ ಜನ್ಮದಿನವನ್ನ ಒಟ್ಟಿಗೆ ಇಪ್ಪತ್ತಾರರ ರಾತ್ರಿ ಕ್ಯಾಂಟೀನ್ ಹುಡುಗರ ಜೊತೆ ಸೇರಿ ಸಂಭ್ರಮದಿಂದ ಆಚರಿಸಿದ್ವಿ. ಅದಾದ ಕೆಲವು ದಿನಗಳ ನಂತರ ಸ್ನೇಹಲೋಕ ತಂಡದ ಜೊತೆ ಲಾಲ್ ಬಾಗಿನಲ್ಲಿ ಆಚರಿಸಿದ್ದು ನನ್ನ ಇನ್ನೂ ಒಂದು ಮರೆಯಲಾಗದ ಸವಿ ನೆನಪು. ಅವತ್ತು ನನ್ನ ಜೊತೆಗೆ ಇನ್ನೂ ಇಬ್ಬರು ತಮ್ಮ ಬರ್ತ್ ಡೇ ಆಚರಣೆ ಮಾಡಿ ಕೊಂಡಿದ್ರು. ಒಂದು ಮುಕ್ತ ಸಂಭ್ರಮಾಚರಣೆ. ಅದೇ ಮೊದಲು ಜೀವನದಲ್ಲಿ ಅಷ್ಟು ಜನ ನನ್ನ ಜನ್ಮ ದಿನದ ಸಂತೋಷವನ್ನ ನನ್ನ ಜೊತೆ ಸಂಭ್ರಮಿಸಿದ್ದು. ಇನ್ನು ೨೦೧೩ ರ ಜನುಮ ದಿನವನ್ನ ನಾನು ಅನೀಶ್ ಮತ್ತು ಪ್ರಶಾಂತ್ ಮೂರೂ ಜನ ನಮ್ಮಿಡೀ ಕಚೇರಿ ಸಿಬ್ಬಂಧಿಯೊಂದಿಗೆ ಆಚರಿಸಿ ಕೊಂಡಿದ್ವು. ರಾಜಿನಾಮೆ ಕೊಟ್ಟು ಹೋಗಲಿದ್ದ ಸಹವರ್ತಿ ಲಾವಣ್ಯ, ಟ್ರಾನ್ಸ್ಫೆರ್ ಆಗಿ ಹೋಗಲಿದ್ದ ಬಾಸ್ ಅಜಯಕುಮಾರ್ ಮತ್ತು ಸಂಧ್ಯಾ ಮೇಡಂ ಅವರುಗಳ ಜೊತೆ, ನಮ್ಮಿಡೀ ಕಾರ್ಮಿಕ ಪರಿವಾರದ ಸಮಕ್ಷಮದಲ್ಲಿ ಎಲ್ಲರೊಂದಿಗೆ ಸೇರಿ ಸಂಭ್ರಮಿಸಿದ್ದ ಹುಟ್ಟು ಹಬ್ಬದ ಸಂತೋಷ ಚಿರಕಾಲ ನೆನಪಿನಲ್ಲುಳಿಯುವಂಥದ್ದು. 

ಬಹುಮುಖ್ಯವಾದ ಪ್ರಾಜೆಕ್ಟ್ ಒಂದರ ತುರಾತುರಿಯಲ್ಲಿದ್ದ ನಾವೆಲ್ಲಾ ಈ ವರ್ಷ ನಮ್ಮ ಜನ್ಮ ದಿನದ  ಯೋಚಿಸುವಷ್ಟು ತಾಳ್ಮೆ ಕೂಡಾ ಇರಲಿಲ್ಲ. ಮುನ್ನೂರ ಹದಿನೈದು ಮೆಗಾ ವ್ಯಾಟ್ ಶಕ್ತಿಯ ಬಹು ದೊಡ್ಡ ಟ್ರಾನ್ಸ್ ಫಾರ್ಮರ್ ನ ಮೂರನೇ ಘಟಕವನ್ನ ಕೇವಲ ಹತ್ತು ದಿನಗಳೊಳಗಾಗಿ ಮುಗಿಸಬೇಕ್ಕಾದ್ದರಿಂದ ಎಲ್ಲರಿಗೂ ಗುರುತರ ಜವಾಬ್ದಾರಿಗಳಿದ್ವು. ಟೆಸ್ಟಿಂಗ್ ಉಸ್ತುವಾರಿಯನ್ನ ನನಗೆ ವಹಿಸಲಾಗಿತ್ತು. ಫೆಬ್ರವರಿಯ ಕೊನೆಯ ಹತ್ತು ದಿನ ನಾವು ಪೂರ್ತಿ ಇದರಲ್ಲೇ ಮುಳುಗಿ ಹೋಗಿದ್ವು. ಬೆಳಿಗ್ಗೆ ಎಂಟು ಗಂಟೆಗೆ ಕಾರ್ಯ ಸ್ಥಳ ತಲುಪಿದರೆ ವಾಪಾಸು ಮನೆ ಬಂದು ಸೇರುವುದು ರಾತ್ರಿ ಹನ್ನೊಂದಾದರೂ ಆಗುತ್ತಿತ್ತು. ಬಹಳ ಒತ್ತಡದ ಕೆಲಸವಾದ್ದರಿಂದ ಯಾವ ಕರ್ಮಚಾರಿಗೂ ರಜೆ ಸಿಕ್ಕಿರಲಿಲ್ಲ. ಅಂತಹ ಬಿಗಿ ಒತ್ತಡದಲ್ಲೇ ಜನುಮ ದಿನದಂದೂ ಕೂಡಾ ಬೆಳಿಗ್ಗೆ ಎಂಟರಿಂದ ಸಂಜೆ ಏಳರ ತನಕ ಕೆಲಸ ಮಾಡಿದ್ದ ನನಗೆ ಒಂಚೂರು ಬೇಸರವಾಗದಂತೆ ಮಾಡಿದ್ದು ಸ್ನೇಹಿತರ ಶುಭ ಹಾರೈಕೆಗಳು. ಇಪ್ಪತ್ತೈದರ ಮಧ್ಯರಾತ್ರಿಯಿಂದ ಇಪ್ಪತ್ತೇಳರ ಮಧ್ಯಾನದ ತನಕ ಬರುತ್ತಲೇ ಇದ್ದ ಫೋನ್ ಗಳಿಂದ ಉಬ್ಬಿ ಹೋಗಿದ್ದೆ ನಾನು. 

ನನಗೆ ಇಪ್ಪತ್ತು ತುಂಬುವ ತನಕ ಹುಟ್ಟಿದ ದಿನ ಕೂಡಾ ಸಾಮಾನ್ಯ ದಿನವಂಥದ್ದೆ ಆಗಿದ್ದ ನನಗೆ, ಕಳೆದ ನಾಲ್ಕು ವರ್ಷಗಳಿಂದ ನನ್ನ ಜನುಮ ದಿನ ನನಗೆ ಕೊಡುತ್ತಿರುವ ಸಂತೋಷಕ್ಕೆ ಎಣೆ ಇಲ್ಲ. ಒಮ್ಮೆ ಬೆಂಗಳೂರಿಂದ ಬಂದಿದ್ದ ನಮ್ಮ ಮನೆ ಪಕ್ಕದ ನಾಗೇಂದ್ರಣ್ಣನ ತಂಗಿ ಮಗನಿಗೆ ಹುಟ್ಟಿದ ದಿನ. ನಾಲ್ಕು ವರ್ಷದ ಆ ಮಗು ನಮ್ಮ ಬೀದಿಯ ಎಲ್ಲರಿಗೂ ಚಾಕಲೇಟ್ ಕೊಡುತ್ತಾ ಬರ್ತಾ ಇದ್ರೆ ಅದರ ಬಳಿ ಚಾಕಲೇಟ್ ತಗೊಂಡು ಅದಕ್ಕೊಂದು ಮುದ್ದು ಕೊಟ್ಟು ಶುಭ ಹಾರೈಸಿ ಆಶಿರ್ವಧಿಸುತಿದ್ರು ಬೀದಿಯ ಎಲ್ಲರೂ. ನನಗೂ ಅಂಥದ್ದೇ ಸಂತೋಷ ಮೊನ್ನೆ ದಿನ. ನನ್ನನ್ನ ಹಾರೈಸಿ ಹರಸಿದ್ದು ಅದೆಷ್ಟು ಜನ.. ಅದೆಷ್ಟು ಫೋನ್ ಕಾಲ್ ಗಳು.. ಅದೆಷ್ಟು ಮೆಸೇಜುಗಳು, ವಾಟ್ಸ್ ಅಪ್ ನಲ್ಲಿ ಅಲ್ಲಿ ತನಕ ಮಾತಾಡಿಸದ ಅದೆಷ್ಟು ಜನರ ಹಾರೈಕೆಗಳು.. ಫೆಸ್ಬುಕ್ಕಿನ ಗೋಡೆಯ ಮೇಲೆ ಮುನ್ನೂರಕ್ಕೂ ಹೆಚ್ಚು ಜನರ ಶುಭಾಕಾಂಕ್ಷೆಗಳು.. ತುಂಬಿ ಹೋದ ಫೇಸ್ಬುಕ್ ಇನ್ ಬಾಕ್ಸ್. ಹೈಕು, ವೀ ಚಾಟು, ಲೈನ್, ವೈಬರ್ ಹೀಗೆ ಎಲ್ಲೆಲ್ಲಿ ಅಂದ್ರೆ ಅಲ್ಲಲ್ಲಿ ರೇಜಿಗೆ ಹುಟ್ಟಿಸುವಷ್ಟು ಶುಭಕಾಮನೆಗಳು ಅಂದು. ಇಷ್ಟು ವರ್ಷಗಳಲ್ಲೇ ಅಧಿಕ ಅನ್ನಿಸುವಷ್ಟು. ಅಷ್ಟು ಜನರ ಆಶೀರ್ವಾದ ಸುಮ್ಮ ಸುಮ್ಮನೆ ಸಿಗಬೇಕೆಂದರೆ ಹುಡುಗಾಟವಲ್ಲ. ನಾ ಯಾರಿಗೂ ಏನೂ ಅಲ್ಲದೆಯೂ, ಯಾರಿಗಾಗಿ ಏನೂ ಮಾಡದೆಯೂ ನಾನು ಅಷ್ಟು ಜನರಿಗೆ ಪ್ರೀತಿ ಪಾತ್ರ ಅಂತಾದ್ರೆ ಅದು ನನ್ನ ನಿಜ ಸಾಧನೆಯೇ ಹೌದು. 

ಮೊನ್ನೆ ಜನುಮದಿನದ ಶುಭಾಶಾಗಳ ಮಹಾ ಪೂರವನ್ನೇ ಗಮನಿಸಿದ ನಂತರ ಒಂದು ಸಾರ್ಥಕತೆ ಮಾತ್ರ ಮನಸು ತುಂಬಿ ಕೊಂಡಿದ್ದು ನಿಜ. ಜೀವನದಲ್ಲಿ ಈವರೆಗೆ ಅದೇನನ್ನೂ ಸಾಧಿಸದೆ ಹೋದ್ರೂ ನನ್ನನ್ನ ಪ್ರೀತಿಸುವ, ಆದರಿಸುವ, ಹಾರೈಸುವ ನೂರಾರು ಜನರನ್ನ ಸಂಪಾದಿಸಿ ಕೊಂಡಿದ್ದೇನೆ ಅನ್ನುವ ಸಂತೋಷ ಅದು. ಜನರ ಒಡನಾಟ ಮನಸ್ಸಿಗೆ ಕೊಡುವ ತೃಪ್ತಿಯೇ ಅಂತಹದ್ದೊಂದು ವಿಶಿಷ್ಟ ರೀತಿಯದ್ದು. ನಾನು ಅಭಿಮಾನಿಸುವ ಅದೆಷ್ಟು ಹಿರಿಯ, ಹೆಮ್ಮೆವೆತ್ತ ವ್ಯಕ್ತಿತ್ವಗಳಿಂದ ಹಿಡಿದು ನಾನು ಬಲು ಪ್ರೀತಿಸುವ ನನ್ನ ಬಹಳಷ್ಟು ಜನ ಎಲ್ಲರೂ ನನಗಾಗಿ ಹಾರೈಸಿದ್ದು ಆ ದಿನವನ್ನ ನನ್ನದೇ ದಿನವನ್ನಾಗಿ ಮಾಡಿತ್ತು. ಇಲ್ಲಿಯ ತನಕ ಕೇವಲ ನನ್ನ ಕೆಲವು ಗೀಚುವಿಕೆಗಷ್ಟೇ ವೇದಿಕೆಯಾಗಿದ್ದ ನನ್ನ ಫೇಸ್ಬುಕ್ ಗೋಡೆಯಂಗಳ ಸಾರ್ವತ್ರಿಕ ದಾಖಲೆ ಎಂಬಂತೆ ಅಷ್ಟು ಜನರ ಶುಭ ಹಾರೈಕೆಗಳಿಂದ ತುಂಬಿ ಹೋಗಿತ್ತು. ಸಣ್ಣ ಸಣ್ಣ ಸಂತೋಷವನ್ನೂ ಬಹಳ ಸಡಗರದಿಂದ ಆನಂದಿಸುವ ನನಗೆ ನನ್ನ ಕಾಲು ನೆಲದ ಮೇಲೆ ಇರದೇ ಇರಲು ಇಷ್ಟು ಸಾಕಿತ್ತು. 

ಟ್ರಾನ್ಸ್ ಫಾರ್ಮರ್ ಕೆಲಸ ನಿನ್ನೆಯಷ್ಟೇ ಯಶಸ್ವಿಯಾಗಿ ಮುಗೀತು. ನಾಲ್ಕೈದು ದಿನದ ನಂತರ ನಿನ್ನೆಯಷ್ಟೇ ಫೇಸ್ಬುಕ್ ತೆರೆದು ನೋಡಿದ್ದ ನಾನು ನಿಜಕ್ಕೂ ಮೂಕನಾಗಿದ್ದೆ ಹಾರೈಕೆಗಳನ್ನ ಕಂಡು. ಧನ್ಯವಾದಗಳನ್ನ ಹೇಳೋದು ಅದಕ್ಕೊಂದು ಕೃತಜ್ಞತೆ ಸಲ್ಲಿಸುವ ವಿಧಾನ ಅಲ್ಲವೇ ಅಲ್ಲ ಅನ್ನೋದು ನನ್ನ ಅಭಿಮತ. ಈ ಪ್ರೀತಿಯ ಋಣ ಅಷ್ಟು ಸುಲಭಕ್ಕೆ ತೀರಬಾರದಂಥದ್ದು ಕೂಡಾ. ನಿಮ್ಮೆಲ್ಲರ ಪ್ರೀತಿಯ ಋಣ ನನ್ನ ಮೇಲೆ ಯಾವತ್ತಿಗೂ ಹೀಗೆ ಇರಲಿ. ನಾನು ನಿಮ್ಮನ್ನ ಯಾವತ್ತಿಗೂ ಪ್ರೀತಿಸುವಂತೆ ಆ ಋಣ ನನ್ನನ್ನ ಆವರಿಸಿ ಕೊಳ್ಳಲಿ.