ಅರ್ಜೆಂಟ್ ನಲ್ಲಿದ್ದೆ..
ಹೌದು ಅರ್ಜೆಂಟ್ ಅಂದ್ರೆ ತುಂಬಾನೆ ಅರ್ಜೆಂಟ್ ನಲ್ಲಿದ್ದೆ..
ಯಾತಕ್ಕಾಗಿ ಅಷ್ಟು ಅರ್ಜೆಂಟ್ ನಲ್ಲಿದ್ದೆ ಅನ್ನೋದಕ್ಕೆ ಸ್ಪಷ್ಟ ಕಾರಣಗಳಿಲ್ಲ..!!
ಆದ್ರೆ ನಾನು ಅರ್ಜೆಂಟ್ ನಲ್ಲಿದ್ದೆ ಅನ್ನೋದಕ್ಕೆ ನನ್ನ ವರ್ತನೆಗಳು ಮೂಕ ಸಾಕ್ಷಿಯಾಗಿದ್ದವು. ಹೊರಗ್ಯಾರಿಗೂ ಕಾಣದ ಹಾಗೆ ಥರಗುಟ್ಟುತ್ತಿದ್ದೆ.. ಕೈ ಕೈಗಳ ಹಿಸುಕುತ್ತಿದ್ದೆ...!!
ಖಾಲಿ ರೋಡಿನ ಕೊನೆ ಬಿಂದುವಿನ ತನಕ ಕಣ್ಣು ನೆಟ್ಟು.. ಕಲ್ಲು ಗುಂಡಿನ ಹಾಗೆ ಅಲಾಡದೆ ಅದೇ ಜಾಗದಲ್ಲಿ ಹತ್ತು ನಿಮಿಷಕ್ಕೂ ಮಿಗಿಲಾಗಿ ನಿಂತು ಚಡಪಡಿಸುತ್ತಿದ್ದೆ..
ನಮ್ಮೂರು ಹೀಗಾಗಿ ಮೂರುವರೆ ವರ್ಷಗಳ ಮೇಲಾಯಿತು..!!
ಇದು ವಿಧಿ ಬರಹವೋ ಅಥವಾ ಜನರ ಹಣೆ ಬರಹವೋ ಅಲ್ಲ.. ಸದರೀ ಸರ್ಕಾರದ ಸೋಲಿಗ ತನ.
ಎರಡು ವರ್ಷಕ್ಕೆ ಮುಗಿಯಬೇಕಿದ್ದ NH ಎಲಿವೇಟೆಡ್ ಸೇತುವೆಯನ್ನ.. ಮೂರುವರೆ ವರ್ಷಕ್ಕೂ ಮಿಗಿಲಾಗಿ ಮೂರು ಪಿಲ್ಲರ್ ಗಳನ್ನ ಕಟ್ಟಲಿಕ್ಕಷ್ಟೇ ತನ್ನ ಸಾಮಾರ್ಥ್ಯವನ್ನ ತೋರಿದ ಘನತೆವೆತ್ತ ಸರ್ಕಾರದ ಅಖಂಡ ಬಲ ಪ್ರದರ್ಶನವದು..!!
ಶಿವಮೊಗ್ಗದಿಂದ ಬೆಂಗಳೂರಿಗೆ ಚಲಿಸುವ ಯಾವುದೇ ವಾಹನಗಳಿಗಾದರೂ ಈ ರಸ್ತೆಯೇ ರಾಜಪಥ. ಈ ರಸ್ತೆ ಯಾವತ್ತಿಗೂ ವಾಹನ ನಿಬಿಡ.
ಇನ್ನು ಮಸೀದಿಯ ಬಳಿ ರೈಲ್ವೆ ಹಳಿಯನ್ನು ಹಾದು ಹೋಗುವ ರಸ್ತೆ..!!
ಅಕ್ಷರ ಸಹ ಅದೊಂದು ಸಮಯಕ್ಕೆ ಮಾತ್ರ ಅದು ಊಹಾತೀತ ನರಕ. ರೈಲ್ ಬರುವ ಸಮಯಕ್ಕೆ ಸರಿಯಾಗಿ ಗೇಟ್ ಹಾಕಿ ನಿಲ್ಲಿಸಿದರಾಯ್ತು ಹತ್ತು ನಿಮಿಷ ವಾಹನದೊಳಗೆ ಮೌನಾಚರಣೆ..!!
ಬೆಂಗಳೂರನ್ನೊಮ್ಮೆ ನೆನಪಿಸಿ ಕೊಳ್ಳುವಂತೆ ಕಡಿಮೆ ಎಂದರೂ ನೂರಿನ್ನೂರು ಮೀಟರ್ಗೂ ಹೆಚ್ಚು ದೂರ ನಿಲ್ಲುತ್ತಿದ್ದ ವಾಹನಗಳು. ರೈಲು ಪಾಸಾಗುವುದನ್ನೇ ಜಾತಕ ಪಕ್ಷಿಗಳ ಹಾಗೆ ಕಾದು ಕುಳಿತ ವಾಹನ ಚಾಲಕರೆಲ್ಲರೂ ರೈಲು ಪಾಸಾಗಿ ಗೇಟ್ ತೆರೆಯುವುದೇ ತಡ..
ಆ ಸಮಯಕ್ಕೆ ಜಗತ್ತಿಗೆ ತಾವೇ ಸರ್ವೋತ್ತಮ ಅವಸರ ಪುರುಷರೆನೋ ಎನ್ನುವಷ್ಟರ ಮಟ್ಟಿಗೆ ಎರಡೂ ಬದಿಯಿಂದ ನಾ ಮುಂದು ತಾ ಮುಂದು ಎಂದು ಎರಡೂ ಬದಿಯಿಂದ ನುಗ್ಗಿ ರೈಲ್ವೆ ಹಳಿಯ ಮೇಲಿನ ಕಿರಿದಾದ ರಸ್ತೆಯ ಮೇಲೆ ಸಿಕ್ಕು...ಅಲ್ಲೂ ಹತ್ತು ಹದಿನೈದು ನಿಮಿಷ ಗೊಂದಲ ರಾಧಾಂತಗಳ ಸೃಷ್ಟಿಯಾಗುವಿಕೆ ಆ ರಸ್ತೆಯ ಖಾಯಂ ದೃಶ್ಯಗಳಲ್ಲೊಂದು..!!
ಇದನ್ನ ತಪ್ಪಿಸಲೆಂದೇ ಸರ್ಕಾರ ಮೂರುವರೆ ವರ್ಷಗಳ ಹಿಂದೆಯೇ ಆ ರೈಲ್ವೆ ಹಳಿ ಯನ್ನು ಕ್ರಾಸ್ ಮಾಡಲು ಎಲಿವೆಟೆಡ್ ರಸ್ತೆಗಾಗಿ ಮಂಜೂರಿಯಾಗಿ ಕೆಲಸ ಆರಂಭವಾಗಿತ್ತು. ಬಹುಷಃ ನಮ್ಮ ಶಿವಮೊಗ್ಗ ಜಿಲ್ಲೆಗೆ ಮೊದಲ ಎಲಿವೇಟೆಡ್ ರಸ್ತೆ ಇದಾಗಿರುತ್ತಿತ್ತು.. ಈ ವೇಳೆಗೆ ಕೆಲಸ ಮುಗಿದಿದ್ದರೆ.!!
ಭದ್ರಾವತಿ ನಗರದಿಂದ ನಮ್ಮೂರಿಗೆ ಸರಿಯಾಗಿ ಮೂರು ಕಿ.ಮೀ. NH ನಲ್ಲಿ ಭದ್ರಾವತಿಯಿಂದ ಸೀದಾ ಬೆಂಗಳೂರು ಮಾರ್ಗವಾಗಿ ಎರಡು ಕಿ.ಮೀ ಚಲಿಸಿದರೆ ಅಲ್ಲಿ ಸಿಗುವ ಶಿವನಿಕ್ರಾಸ್ ಎಂಬ ಎಡಕ್ಕೆ ತಿರುಗುವ ರಸ್ತೆಯಲ್ಲಿ ಒಂದು ಕಿ.ಮೀ ಗಿಂತಲೂ ಕಮ್ಮಿ ದೂರಕ್ಕೆ ಸಿಗುವ ಊರು ನಮ್ಮೂರು ಗೌರಾಪುರ. (ನಮ್ಮೂರಿನ ಹರಿಕತೆ.. ಪುರಾಣ ಈಗ ಬೇಕಿಲ್ಲವೆನ್ನಿ)
ಈ ಎಲಿವೆಟೆಡ್ ರಸ್ತೆಯ ಕೆಲಸ ಆರಂಭವಾದಂದಿನಿಂದ.. ನಮ್ಮೂರಿನ ಮೇಲೆ ಚಲಿಸುತ್ತಿದ್ದ ಎಲ್ಲಾ ಬಸ್ಸುಗಳು & ಸಂಪರ್ಕ ವಾಹನಗಳು ಈ ಕಾರಣಕ್ಕಾಗಿ ರಸ್ತೆ ಬಂದ್ ಆದ್ದರಿಂದ ಬೇರೆ ಮಾರ್ಗದ ಮೂಲಕ ಅಂದರೆ ನಮ್ಮೂರಿಂದ ಒಂದೂವರೆ ಕಿ.ಮೀ ದೂರದ ಪಕ್ಕದೂರಿನ ಮೂಲಕ ಅಡ್ಡ ರಸ್ತೆಯಲ್ಲಿ ಚಲಿಸಲು ಶುರುವಾದವು ಅಂದಿನಿಂದ ನಮ್ಮೂರಿಗೆ ಬಸ್ ಬಂದ್.,.!!
ಕಾಮಗಾರಿ ನಡೆಯುತ್ತಿದ್ದ ಆ ಜಾಗದ ಪಕ್ಕದಲ್ಲೇ ಹರಿಯುವ ಭದ್ರೆಯ ಕೆನ್ನೆಗಂಟಿ.. ರೇಲ್ವೆ ಹಳಿ ಮೇಲ್ಸೇತುವೆಯ ಕೆಳಗೆ ಕಿರುದಾರಿಯೊಂದಿತ್ತು.. ಬೈಕು. ಆಟೋ ಅಥವಾ ಕಾರುಗಳು ಚಲಿಸಬಹುದಾಗಿತ್ತು.
ನಮ್ಮೂರಿಂದ ಮುಂದೆ ಮೂರು ಕಿ. ಮೀ ದೂರದ ಅಂತರಗಂಗೆ ಇಂದ ಮೊದಲ್ಗೊಂಡು ಆಗೀಗ ಬರುತ್ತಿದ್ದ ಆಟೋವಷ್ಟೇ ನಮಗೆ ಗತಿ. ಸ್ವಂತ ವಾಹನವಿದ್ದರೆ ಮಾತ್ರ ನೆನೆಸಿಕೊಂಡ ಸಮಯಕ್ಕೆ ಭದ್ರಾವತಿ ಸೇರಬಹುದಿತ್ತು ಇಲ್ಲವೇ ಆಟೋಗಾಗಿ ಕಾದು ಸಾಯಬೇಕು. ಇಲ್ಲವೇ ಜುಜುಬಿ ಮೂರು ಕಿ.ಮೀ ಅಲ್ಲವೇ ಎಂದು ಮರುಗಿ ನಡೆದೇ ಸಾಗಬೇಕು ಆಗಲೇ ಭದ್ರಾವತಿಯ ದರ್ಶನ.
ಇಲ್ಲವೋ ಬಸ್ ಬರುವ ಸಮಯಕ್ಕೆ ಸರಿಯಾಗಿ ಪಕ್ಕದೂರಿನವರೆಗೂ ನಡೆದು.. ಬಸು ಬರುವವರೆಗೂ ಕಾದು ಬಸ್ ಸಿಕ್ಕರೆ ಹೋಗಬಹುದಿತ್ತು..
ಆಟೋಗಳು ಕೂಡ ಯಾವಾಗಲೋ ಒಮ್ಮೆ ಬಂದರುಂಟು ಇಲ್ಲದರಿಲ್ಲ. ಬಂದರೂ ಅಂತರಗಂಗೆ ಇಂದಲೇ ಪೂರ್ತಿಯಾಗಿ ಬರುವ ಆಟೋ ಒಳಗೆ ಸೀಟ್ ಸಿಕ್ಕುವುದು ಅದೃಷ್ಟವೇ.. ಅಂದಹಾಗೆ ನಮ್ಮೂರಿನ ಆಟೋಗಳ ಸೀಟ್ ಲೆಕ್ಖ ಬಂದು ಬರೋಬ್ಬರಿ ಒಂದು ಆಟೋಗೆ ಎಂಟು ಜನ..!!
Just Imagine .. How incredible..?? ವಯಸು ಹುಡುಗರೋ.. ಹುಡುಗೀರೋ. ಹೆಂಗಸರೋ.. ಗಂಡಸರೋ. ಮುದುಕರೋ ಮಕ್ಕಳೋ.. ಯಾವುದೋ ಒಟ್ಟು ಎಂಟು ಜನ ತುಂಬಿದರೆ ಮಾತ್ರ ಆಟೋ ಕದಲೋದು..!!
ಇಂತಿಪ್ಪ ಆಟೋದೊಳಗೆ ಸೀಟ್ ಸಿಕ್ಕುವುದೇ ಅದೃಷ್ಟ. ಸೀಟ್ ಇಲ್ಲವಾದಲ್ಲಿ ಆ ಆಟೋದವ ಕೂಡ ಕ್ಯಾರೆ ಎನ್ನದೆ.. ತಿರುಗಿ ನೋಡದೆ ಮುಲಾಜಿಲ್ಲದೆ ಗಾಡಿ ನಿಲ್ಲಿಸದೆ ಹೋಗಿ ಬಿಡುತ್ತಿದ್ದ.
ಹೀಗೆ ಒಂದು ಆಟೋಗಾಗಿ ಅಥವಾ ಇನ್ನ್ಯಾವುದಾದರೂ ಗಾಡಿಗಾಗಿ ರಸ್ತೆಯ ಮಧ್ಯೆ ನಿಂತು ಹಂಬಲಿಸಿ ಚಡಪಡಿಸುತ್ತಿಹ ನಾನು..!!
ಕೈಗೆ ವಾಚ್ ಕಟ್ಟಡ ನಾನು.. ನಿಮಿಷಕ್ಕೆ ಹದಿನೈದಕ್ಕಿಂತಲೂ ಹೆಚ್ಚು ಬಾರಿ ನನ್ನ ಮೊಬೈಲಿನಲ್ಲಿ ಟೈಮ್ ನೋಡುತ್ತಾ.. ಸಮಯಕ್ಕೆ ಸರಿಯಾಗಿ ಕೈಕೊಡೋ ಸಮಯವನ್ನ ಹಳಿಯುತ್ತಾ..
ಪೂರ್ತಿ ತುಂಬಿ ತುಳುಕುತ್ತಾ ನಿಲ್ಲಿಸದೆ ಹೊರಟ ಆಟೋಗಳ ಹಳಿಯುತ್ತಾ.. ರಸ್ತೆಯಲ್ಲಿ ಸಾಗುತ್ತಿದ್ದ ಟೂ ವೀಲರ್ಗಳ ಕಡೆಗೆ ಕೈ ನೀಟಿ ಅವುಗಳನ್ನ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದೆ.
ನನ್ನ ಅದೃಷ್ಟದ ಅದೃಷ್ಟ ನನಗಿಂತಲೂ ಮೊದಲೇ ಹಳ್ಳ ಹಿಡಿದಿತ್ತೇನೋ..??
ಆ ಮಾರ್ಗವಾಗಿ ಬಂದ ಯಾವ ಬೈಕುಗಳೂ ಸಿಂಗಲ್ಲಾಗಿ ಬರದೇ ಎಲ್ಲವೂ engaged..!!
ಸರೀ ಅವುಗಳನ್ನೂ ಹಳಿಯುತ್ತಾ ನನ್ನ ಧರ್ಮ ಕಾಯಕವನ್ನು ನಾನು ಮುಂದುವರೆಸುತ್ತಲೇ ನಿಂತೆ.
ಛೆ.. ಹಿಂಗೆ ಅಂತ ಗೊತ್ತಿದ್ದಿದ್ರೆ ನಡಕೊಂಡ್ ಆದರೂ ಹೋಗಬಹುದಿತ್ತು.. ಮನಸೊಳಗೆ ಗೊಣಗಾಟ..
ಮನೇಲಿ ಸೈಕಲ್ ಬೇರೆ ಪಂಚರ್..!!
ಆದರೂ ಮತ್ತ್ಯಾರದ್ದಾದ್ರೂ ಸೈಕಲ್ ಈಸ್ಕೊಂಡು ಹೋಗೋಣ ಅಂದ್ರೆ.. ಈಗ ಸರ್ಕಾರಿ ನೌಕರನೆಂಬ ಕಿರೀಟ ಬೇರೆ..!!
ಸೈಕಲ್ ಬಗ್ಗೆ ಅಷ್ಟು ಸುಲಭಕ್ಕೆ ಯೋಚಿಸಿದ ಬುದ್ಧಿ ಅಷ್ಟೇ ಸುಲಭಕ್ಕೆ ಹತ್ತಲು ಬಿಟ್ಟೀತೆ..??
ನೀಟಾಗಿ ಇನ್ಶರ್ಟ್ ಮಾಡಿ.. ಬಿಳಿ ಪ್ಯಾಂಟ್ ಹಾಕಿ ಟಾಕು ಟೀಕಾಗಿ ನಿಂತಿರೋ ನನ್ನ ಅಲಂಕಾರ ಕೆಟ್ಟರೆ.??
ಬೆವರಿದರೆ ಮಾಯವಾಗಿ ಬಿಡೋ ತಾಜಾತನ.. ಬಿಳಿ ಪ್ಯಾಂಟಿಗೆ ಸ್ವಲ್ಪ ಕರೆಯಾದರು ಎದ್ದು ಕಾಣಿಸೋ ಫೀಲಿಂಗು..!!
ಎಲ್ಲವನ್ನೂ ತಲೆಯ ಒಳಗೆ ಹಾಕಿಕೊಂಡು ಮಿಕ್ಸಿ ಆಡಿಸುತ್ತಾ ಹತ್ತು ನಿಮಿಷಕ್ಕೂ ಮಿಗಿಲಾದ ಉದ್ವೇಗದಲ್ಲಿ ಉನ್ಮತ್ತನಾಗಿ ಕುದಿಯುತ್ತಿದ್ದೆ.
ರಾಹುಕಾಲ ಕಳೆದಿರಬೇಕು..!!
ಅಗೋ ರಸ್ತೆಯ ಕೊನೆಯಂಚಿನ ಬಿಂದುವಿನಲ್ಲಿ ಗೋಚರಿಸಿದ ಕೆಂಪು ಕಾರು..
ಹತ್ತಿರ ಬರು ಬರುತ್ತಾ ಅದು ಆಲ್ಟೋ ಕಾರೆಂದು ಖಾತ್ರಿಯಾಯ್ತು...!! ಮನಸೊಳಗೆ ನೂರು ಕ್ಯಾಂಡಲ್ ಗಳನ್ನ ಹೊತ್ತಿಸಿ ಉರಿಯಲು ಬಿಟ್ಟ ಹಾಗಾಯ್ತು..!!
ಆಟೋ ಗೆ ಗತಿ ಇರದ ನಾನು.. ಆಲ್ಟೊ ಕಾರಿನ ಕನಸು ಕಾಣೋದು ಸರಿಯೇ..?? ಅತಿಯಾಸೆ ಗತಿಗೇಡು..!!
ಸಾಯಲಿ ಮಾರಾಯ.. ನನ್ನದು ಆಸೆಯಲ್ಲ.. ಯಾವುದಾರೂ ಒಂದು ಗಾಡಿ ಸಿಕ್ಕಲೆಂಬ ಪರಾಕಾಷ್ಠೆಯ ಹಂಬಲ.. ಆ ಕ್ಷಣಕ್ಕಿನ ಅನಿವಾರ್ಯತೆ.. ಆಪತ್ತಿಗಾದವನೇ ನೆಂಟ..
ಊರ ದೇವಿ ತಾಯಿ ಕೆಂಚಮ್ಮ ನಿಗೊಂದು ಉಘೆ ಹೇಳಿ ಕೈ ನೀಟಿದೆ.. ತಾಯಿ ಕೆಂಚಮ್ಮನ ಕೃಪೆ.. ಕಾರು ನನ್ನಿಂದ ಹತ್ತು ಮೀಟರ್ನಷ್ಟು ದೂರದಲ್ಲಿ ಹೋಗಿ ನಿಂತಿತು.
ನಮ್ಮ ಪಕ್ಕದಲ್ಲಿ ಸಾಮಾನ್ಯವಾಗಿ ಶ್ರೀ ಸಾಮಾನ್ಯರ್ಯಾರೂ ಕಾರಿಗೆ ಕೈ ಹಾಕೋ ಗೋಜಿಗೆ ಹೋಗೋದೇ ಇಲ್ಲ..
ಅಂತಸ್ತಿನ ಅಳತೆಯ ಅರಿವು ಇವರಿಗೂ ಇರಬಹುದು.. ಅಥವಾ ಕಾರಿನವರೇ ಮಾಡಿಕೊಡಬಹುದು..!!
ಸಾಮಾನ್ಯವಾಗಿ ಲಿಫ್ಟ್ ಅಂತ ಕೇಳೋಕೆ ಹೋದ್ರೆ ಆದು ಕೇವಲ ಬೈಕ್ ಗಳಿಗೆ ಮಾತ್ರ.. ಒಮ್ಮೊಮ್ಮೆ ಸೈಕಲ್ಲುಗಳಿಗೂ ಕೈ ನೀಟುವುದು ಅನಿವಾರ್ಯ.. ಕಾರ್ಯದೊತ್ತಡ..!!
ಒಮ್ಮೊಮ್ಮೆ ಅದೃಷ್ಟ ಖುಲಾಯಿಸಿ ಕಾರಿನವರೆ ಹತ್ತಿಸಿ ಕೂರಿಸಿ ಕೊಂಡೂ ಹೋಗೋದುಂಟು..!! ಆದರೆ ಕೇವಲ ಪರಿಚಯದವರನ್ನ ಮಾತ್ರ..
ನನಗೆ ಕಾರುಳ್ಳ ಯಾವ ವ್ಯಕ್ತಿಯೂ ಸುತ್ತ ಮುತ್ತಕ್ಕೆ ಪರಿಚಯವಿಲ್ಲ.. ಪರಿಚಯವಿದ್ದರೂ ನನ್ನನು ತಮ್ಮ ಕಾರಿನಲ್ಲಿ ಹತ್ತಿಸಿ ಕೂರಿಸಿಕೊಂಡು ಹೋಗುವಷ್ಟು ಗಾಢ ಮೈತ್ರಿ ಇಲ್ಲ. ಹಾಗಿರುವಾಗ ಯಾವುದೋ ಆಶಾ ಭಾವನೆಯಿಂದ ಕೈ ನೀಟಿದೊಡನೆ ನಿಲ್ಲಿಸಿದ ಆ ಆಲ್ಟೋವಿನ ಹಿಂದೆ.. ಆಶ್ಚರ್ಯಚಕಿತನಾಗಿ, ಆನಂದ ತುಂದಿಲನಾಗಿ ಓಡಿದೆ.
ಕಾರಿನ ಮುಂಬಾಗಿಲು ತೊರೆದು.. ಸಾರ್ ತುಂಬಾ ಅರ್ಜೆಂಟ್.. ಸ್ವಲ್ಪ ಭದ್ರಾವತಿಯ ತನಕ...
ಮಾತಿನ್ನೂ ಮುಗಿದಿರಲಿಲ್ಲ.. ಕಣ್ಣು ಗಳಲ್ಲೊಂದು ಮಿಂಚು..!! ಬಾಯಿ ತಂತಾನೇ ಸುಮ್ಮನಾಯಿತು..!! ನನ್ನನ್ನು ತಬ್ಬಿಬ್ಬಾಗ್ಗಿಸಿದ್ದು ಆ ವ್ಯಕ್ತಿಯ ಮುಖ..!!
ಸಾಕ್ಷಾತ್ ಪ್ರಕಾಶಣ್ಣ.. (ನಮ್ ಇಟ್ಟಿಗೆ ಸಿಮೆಂಟು ಪ್ರಕಾಶಣ್ಣ)..!!
ಆ ಕ್ಷಣಕ್ಕೆ ನನಗಿದ್ದ ತಳಮಳಕ್ಕೆ.. ನನಗಿದ್ದ ಉದ್ವೇಗಕ್ಕೆ.. ನನಗಿದ್ದ ತರಾತುರಿಗೆ ನಾ ಹೇಗೆ ವರ್ತಿಸಿದೇನೋ..?? ಮುಖದಲ್ಲಿ ಯಾವ ಭಾವವಿತ್ತೋ..?? ನೆನಪಿಲ್ಲ.
ಕೂತ್ಕೋ ಅಂತ ಪ್ರಕಾಶಣ್ಣ ಹೇಳುವ ಮೊದಲೇ ಕಾರಿನ ಮುಂಬಾಗದ ಸೀಟಿನಲ್ಲಿ ಕೂತುಬಿಟ್ಟ ನಾ ಪೂರ್ತಿ ಕಾರನ್ನೊಮ್ಮೆ ನೋಡಿದೆ.. ಪ್ರಕಾಶಣ್ಣನ ಹೊರತು ಕಾರು ಖಾಲಿ ಖಾಲಿ..
ಪ್ರಕಾಶಣ್ಣ ನೀವಾ..?? ದೇವರು ಬಂದ ಹಾಗೆ ಬಂದ್ರಿ.. ಸ್ವಲ್ಪ ಅರ್ಜೆಂಟಿದೆ.. ನನ್ನ ಭದ್ರಾವತಿ ವರೆಗೂ ಸ್ವಲ್ಪ ಡ್ರಾಪ್ ಮಾಡಿ ಬಿಡಿ. ಪ್ರಕಾಶಣ್ಣ ನನ್ನನ್ನ ಗುರುತು ಹಿಡಿಯಲಿಲ್ಲ ಅನ್ನಿಸತ್ತೆ..!!
ಗುರುತು ಹಿಡಿದಿದ್ದರೆ ಅವರೇ ಸತೀಶು ಅಂದಿರುತ್ತಿದ್ದರು. ಪ್ರಕಾಶಣ್ಣ ನನ್ನನ್ನ ಒಂಥರಾ ನೋಡುತ್ತಲೇ ಗಾಡಿ ಚಾಲೂ ಮಾಡಿ ಹೊರಟೆವು..!!
ಪಕ್ಕದಲ್ಲಿ ಕೂತಿರೋದು ಪ್ರಕಾಶಣ್ಣ.. ಏನು ಮಾತಾಡ್ಲೀ.??
ಈ ಮೊದಲು ಕೂಡ ಪ್ರಕಾಶಣ್ಣ ನ ಬಳಿ ನೇರವಾಗಿ ಅಷ್ಟೊಂದು ಮಾತಾಡಿದ ಉದಾಹರಣೆಯಿಲ್ಲ. ಅವರ ಪುಸ್ತಕ ಬಿಡುಗಡೆಯ ದಿನದೊಂದು ನೋಡಿ ನಕ್ಕು ಒಂದು ಹಲೋ ಹೇಳಿದ್ದಷ್ಟೇ..
ಅದಕ್ಕೂ ಮೊದಲು ೩K ಯ ಸಮಾರಂಭದ ದಿನ ಮುಖ ಪರಿಚಯವಷ್ಟೇ..
ಅವರ "ಇದರ ಹೆಸರು ಇದಲ್ಲ" ಬಹುವಾಗಿ ಮೆಚ್ಚಿ.. ಒಂದೇ ಓದಿಗೆ ಒಂದು ನಿಮಿಷ ಗ್ಯಾಪು ಕೊಡದೆ ಆ ಪುಸ್ತಕ ಓದಿ ಮುಗಿಸಿದ್ದ ರೀತಿಗೆ.. ಅವರ ಮೇಲೆ ಮೂಡಿದ್ದ ಆ ಕ್ಷಣದ (ಈ ಕ್ಷಣಕ್ಕೂ ಇರುವ) ಅದಮ್ಯ ಅಭಿಮಾನಕ್ಕೆ ತಕ್ಷಣವೇ ಫೋನಾಯಿಸಿ ಅವರ ಜೊತೆ ಫೋನಿನಲ್ಲಿ ಸುಮರು ಅರ್ಧಗಂಟೆಗೂ ಹೆಚ್ಚು ಕಾಲ ಮಾತಾಡಿದ್ದು ಬಿಟ್ಟರೆ..
ಒಂದೆರಡು ಬಾರಿ ಕತೆ ಕವನದ ವಿಚಾರದಲ್ಲಿ.. ಕಾಮೆಂಟುಗಳಲ್ಲಿ ಫೇಸ್ಬುಕ್ ನಲ್ಲಿ ಹರಟಿದ್ದ ನೆನಪು..
ನನಗೆ ಹೇಗೆ ಬಾಯ್ತೆರೆಯಬೇಕೆಂಬ ವಿಚಾರ ತಿಳಿಯದೆ.. ಪ್ರಕಾಶಣ್ಣ ನೇ ಬಾಯ್ತೆರೆಯಲಿ ಅನ್ನೋ ಆಸೆ (ದುರಾಸೆ)ಯೊಂದಿಗೆ ಗಪ್ ಚುಪ್ ಕುಳಿತುಬಿಟ್ಟೆ..!! ಕಡೆಗೆ ಪ್ರಕಾಶಣ್ಣ ನೆ ಬಾಯ್ತೆರೆದರು..!!
ಪ್ರಕಾಶಣ್ಣನ ದನಿ ಪ್ರಕಾಶಣ್ಣನ ದನಿಯಲ್ಲ..!!?? ಇದು ನನಗೆ ಹೊಸ ದನಿ..!!
ಯಾಕಿಷ್ಟು ಅರ್ಜೆಂಟು..?? ಪ್ರಕಾಶಣ್ಣ ಕೇಳಿದರು..
ಶಿವಮೊಗ್ಗಕ್ಕೆ ಹೋಗೋದಿದೆ ಪ್ರಕಾಶಣ್ಣ..
ಸಮಾಜ ಕಲ್ಯಾಣ ಇಲಾಖೆ ಆಫೀಸ್ ಹತ್ರ ಹೋಗಿ ಬರಬೇಕು ಸ್ವಲ್ಪ..
ಇವತ್ತು ಶನಿವಾರ ಬೇರೆ.. ಸಮಾಜ ಕಲ್ಯಾಣ ಇಲಾಖೆ ಮಧ್ಯಾನಕ್ಕೆ ಮುಚ್ಚಿ ಬಿಡ್ತಾರೆ..
ನಾಳೆ ಬೇರೆ ಭಾನುವಾರ ರಜೆ..
ಅದೂ ಅಲ್ದೆ ನಾಳೆ ನಾನು ಹೊಸೂರ್ ಗೆ ವಾಪಸ್ ಹೊರಟೆ.. ಸ್ವಲ್ಪ ಅರ್ಜೆಂಟ್ ಇತ್ತು ಅದ್ಕೆ...
ಓಹ್ ಹಾಗೇನು..?? ಮತ್ತೆ ಇಷ್ಟ್ ಅರ್ಜೆಂಟ್ ಇದ್ದೂ ಸ್ವಲ್ಪ ಬೇಗ ಹೊರಡೋದಲ್ವೇನು..?? ಪ್ರಕಾಶಣ್ಣ ನ ಪ್ರಶ್ನೆ..!!
ಅಯ್ಯೋ ಬೆಂಗಳೂರ್ ಹೋಗೋ ಮೊದಲು.. ನನ್ನ ಮಾರ್ಕ್ಸ್ ಕಾರ್ಡ್.. ಜಾತಿ ದೃಡೀಕರಣ ಪತ್ರ ಮತ್ತೆ ಇನ್ನಿತರ ನನ್ನ ಹಳೆ ರೆಕಾರ್ಡ್ಸ್ ನೆಲ್ಲ ಒಂದು ಫೈಲ್ ನಲ್ಲಿ ಹಾಕಿ ಮನೇಲಿಟ್ಟಿದ್ದೆ ಪ್ರಕಾಶಣ್ಣ.. ಈಗ ಬಂದು ಹುಡುಕಿದರೆ ಅರ್ಜೆಂಟ್ ಗೆ ಯಾವುದೊಂದೂ ನೆಟ್ಟಗೆ ಸಿಗಲಿಲ್ಲ.. ಅದ್ಕೆ ಹುಡ್ಕೋಕೆ ಸ್ವಲ್ಪ ಲೇಟ್ ಆಯ್ತು..
ಓಹ್ ಸರಿ ಸರಿ..
ಮೂರು ಕಿ.ಮೀ ದೂರವಿರೋ ಭದ್ರಾವತಿಯನ್ನ ಸೇರೋಕೆ ಕಾರೆಂದರೆ ಮೂರು ನಿಮಿಷ ಸಾಕು.
ಇನ್ನೇನು ಅರ್ಧ ಕಿ.ಮೀ ದೂರವಿರಬೇಕು.. ಭದ್ರಾವತಿ ಸಿಟಿ..
ತರೀಕೆರೆ ರಸ್ತೆ.. ಜೂನಿಯರ್ ಕಾಲೇಜು, ಮಹಾತ್ಮ ಗಾಂಧೀ ಶಿಲೆ ಇರುವ ಸರ್ಕಲ್ ನಲ್ಲಿ ಎಡಕ್ಕೆ ತಗೊಂಡ ಕಾರು ಸುಮಾರು ಅರವತ್ತು ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಿರಬಹುದು..
ಗಾಂಧೀ ಶಿಲೆ ದಾಟಿ.. ಇಪ್ಪತ್ತು ಮೀಟರ್ ಹೋಗುವಷ್ಟರಲ್ಲೇ ಅಲ್ಲೇ SKC ಆಫೀಸ್ ಎದುರಿನಿಂದ ಪಾರ್ಕಿಂಗ್ ನಲ್ಲಿ ನಿಂತಿದ್ದ ಸ್ವಿಫ್ಟ್ ಕಾರು ಏಕಾ ಏಕಿ ಸ್ಟಾರ್ಟ್ ಆಗಿ.. ಮೂವ್ ಆಗಿ.. ನಾವ್ ಬರುವ ಹೊತ್ತಿಗೆ ರೋಡಿನ ಮಧ್ಯಕ್ಕೆ ಬಂದು ಬಿಟ್ಟಿತು..!!
ವೇಗ ತಗ್ಗಿಸದ ಪ್ರಕಾಶಣ್ಣ ಗಲಿಬಿಲಿಯಲ್ಲಿ ಸ್ವಲ್ಪ ಬಲಭಾಗಕ್ಕೆ ಸ್ಟೇರಿಂಗ್ ತಿರುಗಿಸಿದರು..
ಬಲಭಾಗದಲ್ಲೋ..!!!
ಅಂಡರ್ ಗ್ರೌಂಡ್ ಪೈಪ್ ಲೈನ್ ಸೋರಿಕೆಯ ಪರಿಣಾಮವಾಗಿ ಅದರ ರಿಪೇರಿಗೆಂದು ಸುಮಾರು ನಾಲ್ಕಡಿ ಅಗಲ.. ಮೂರಡಿ ಆಳಕ್ಕೆ ಗುಂಡಿ ತೋಡಿ ಪೂರ್ತಿ ಮುಗಿಸದೆ ಆ ಗುಂಡಿಯ ಬದಿಯ ಸುತ್ತಲೂ ದಪ್ಪ ದಪ್ಪ ಕಲ್ಲುಗಳನಿಟ್ಟು ಹೋಗಿದ್ದರು..
ಇತ್ತಕಡೆ ಸಡನ್ನಾಗಿ ರಸ್ತೆ ಮಧ್ಯದ ವರೆಗೂ ಬಂದ ಕಾರು..!!
ಅತ್ತಕಡೆ ದೊಡ್ಡ ಹಳ್ಳ.!!
ಇವೆರಡರ ನಡುವೆ ಸಣ್ಣದಾಗಿ ಒಂದು ಆಟೋ ಹೊಗುವಷ್ಟು ಜಾಗವಿದ್ದಿದ್ದರೆ ಹೆಚ್ಚು..!!
ಇತ್ತದರಿ ಅತ್ತ ಪುಲಿ.. ಪ್ರಕಾಶಣ್ಣ ನೋಡು ನೋಡುತ್ತಿದ್ದಂತೆ ಆ ಗ್ಯಾಪಲ್ಲಿ ಕಾರು ನುಗ್ಗಿಸಿಯೇ ಬಿಟ್ಟರು..!!
SKC ಆಫೀಸಿನ ಮುಂಭಾಗದಿಂದ ಬಂದ ಆ ಕಾರಿನ ಬಲಬಾಗದ ಹೆಡ್ ಲೈಟ್ ಪಾರ್ಟ್ ಗೆ ಜೋರಾಗಿ ಹೊಡೆದ ಪ್ರಕಾಶಣ್ಣನ ಕಾರು.. ಬಲಕ್ಕೆ ಹಳ್ಳದ ಬದಿಗಿರಿಸಿದ್ದ ಆ ಕಲ್ಲುಗಳ ಮೇಲೂ ಹರಿದು..
ರಸ್ತೆಯಿಂದ ಸುಮಾರು ಒಂದೂ-ಒಂದೂವರೆ ಅಡಿ ಎತ್ತರಕ್ಕೆ ಎತ್ತಿ ಡೋಲಾಯಮಾನವಾಗಿ ತುಳುಕಾಡುತ್ತ ಆ ಇಕ್ಕಟ್ಟು ಜಾಗವನ್ನು ದಾಟಿ ಬಿಟ್ಟಿತ್ತು..!!
ಕಣ್ಮುಂದೆ ಮಿಂಚು ಹುಳ.. ಹೊಟ್ಟೆಯಲ್ಲಿ ತಳಮಳ..!!
ಹೃದಯ ಆಗಲೇ ಬಾಯಿಗೆ ಬಂದಿತ್ತು..!!
ಸ್ವರ್ಗವೋ ನರಕವೋ..?? ಆಗಲೇ ಆರ್ಧ ದಾರಿ ಸಂಚರಿಸಿದ್ದ ಜೀವ ತಿರುಗಿ ಬಂದಿತ್ತು..!!
ಎದೆಯ ಢವಗುಟ್ಟುವಿಕೆಯ ಸದ್ದು ಮೂರು ಕಿ.ಮೀ ದೂರದ ಊರಿಗೂ ಕೇಳಿದ್ದಿರಬಹುದು..!!
ಏನಾಯಿತು.. ಏನು ಮಾಡಬೇಕೆಂದು ತೋಚದ ನನ್ನ ಬುದ್ಧಿ.. ಬ್ಲ್ಯಾಂಕ್ ಬ್ಲ್ಯಾಂಕ್ ಬ್ಲ್ಯಾಂಕ್..!!
ಸ್ವಲ್ಪ ಮುಂದೆ ಬಂದು ನಂದಿ ಮೆಡಿಕಲ್ಸ್ ಎದುರಿಗೆ ಕಾರನ್ನು ಸೈಡ್ ಹಾಕಿ ನಾನು ಮತ್ತು ಪ್ರಕಾಶಣ್ಣ ಕಾರಿನಿಂದ ಇಳಿದೆವು..
ಹಾರಿ ಹೋಗಿದ್ದ ನನ್ನ ಜೀವ ತಿರುಗಿ ಬಂದಿತ್ತೆ ವಿನಃ.. ನನ್ನ ಪಂಚೇಂದ್ರಿಯಗಳ ಪೂರ್ಣ ಜ್ಞಾನ ಇನ್ನೂ ಪೂರ್ತಿ ಬಂದಿಲ್ಲವಾಗಿತ್ತೇನೋ..??
ನನ್ನ ಭಯದಲ್ಲಿ ನಾನಿದ್ದೆ..!!
ಪ್ರಕಾಶಣ್ಣ ಕಾರಿನ ಸುತ್ತಲೂ ಪರಿವೀಕ್ಷಿಸುತ್ತಿದ್ದರು.. ಕಾರಿಗೆ ಏನಾಗಿದೆಯೋ ಏನೋ ಎಂದು ನೋಡುತ್ತಿದ್ದರೆನೋ..??
ಭಯದಲ್ಲಿನ ನನಗೆ.. ಅವರ ಮುಖ ರೂಪದಲ್ಲಿ ಸಣ್ಣದಾಗಿ ವೆತ್ಯಾಸ ಕಾಣ ತೊಡಗಿತ್ತು..!! ಬಹುಶಃ ನನ್ನ ಭಯದಲ್ಲಿ ನನಗವರು ಹಾಗೆ ಕಾಣಿಸುತ್ತಿದ್ದರೋ ಏನೋ..??
ನಮಗೆ ಡಿಕ್ಕಿ ಹೊಡೆದ ಆ ಕಾರು ನಮ್ಮ ಹಿಂದೆಯೇ ಬಂದು ನಿಂತಿತು. ನನಗೆ ಭಯ.. ಎಲ್ಲಿ ಮಾರಾಮಾರಿಯಾಗುತ್ತದೋ..??
ಆ ಕಾರಿನಿಂದಿಳಿದ ಮಧ್ಯ ವಯಸ್ಕ ಡ್ರೈವರ್ ತಾನೂ ತನ್ನ ಕಾರನ್ನು ಸುತ್ತಲೂ ಪರೀಕ್ಷಿಸಿದ..
ಏನಾಶ್ಚರ್ಯ..!! ಢಿಕ್ಕಿ ಹೊಡೆದ ಎರಡೂ ಕಾರುಗಳಿಗೂ ಕೂದಲೂ ಕೂಡ ಕೊಂಕದ ಹಾಗೆ.. ಲವಲೇಶವೂ ಡ್ಯಾಮೇಜ್ ಇಲ್ಲದೆ ಇರೋದನ್ನ ನೋಡಿ ನನಗೆ ನಂಬಲಾಗುತ್ತಿಲ್ಲ..!!
ಅದಕ್ಕೂ ಮಿಗಿಲಾದ ಆಶ್ಚರ್ಯ..!! ಆ ಕಾರಿನ ಡ್ರೈವರ ನಂತರ ಏನೂ ಮಾತಾಡದೆ.. ತನ್ನ ಪಾಡಿಗೆ ತಾನು ತನ್ನ ಕಾರನ್ನೇರಿ ಹಾಗೆ ಪ್ರಕಾಶಣ್ಣ ನೆಡೆಗೆ ಒಂದು ನಗು ಬೀರಿ.. ಕಾರು ಸ್ಟಾರ್ಟ್ ಮಾಡಿ ತನ್ನ ಪಾಡಿಗೆ ತಾನು ನಗುತ್ತಾ ಹೊರಟೆ ಹೋದ..!!
I Can't Imagine..!! ನನಗೆ ನಂಬಲಾಗುತ್ತಿಲ್ಲ..!! How is it possible..??
ನನ್ನ ಯೋಚನಾ ಲಹರಿಯಿಂದ ನಾನು ಹೊರ ಬರುವ ಮೊದಲೇ ಪ್ರಕಾಶಣ್ಣ ಕಾರಿನ ಮುಂಬಾಗಿಲು ತೊರೆದು ಡ್ರೈವಿಂಗ್ ಸೀಟ್ನಲ್ಲಿ ಕೂತು ಕಾರನ್ನು ಸ್ಟಾರ್ಟ್ ಮಾಡೇ ಬಿಟ್ಟರು..
ಆದದ್ದು ಆಗಿ ಹೋಯಿತು.. ಪ್ರಕಾಶಣ್ಣ ನಿಗೊಂದು ಥ್ಯಾಂಕ್ಸ್ ಹೇಳುವ.. ಅವರಿಗೆನಾಯ್ತು ಕೇಳುವ.. ಎಂದು ಬಗ್ಗಿದ..
ನಾನು ಮತ್ತೆ ತಬ್ಬಿಬ್ಬಾಗದೆ ಇರಲಿಲ್ಲ..!!
ಅಲ್ಲಿಯವರೆಗೂ ನೀಲಿ ಜೀನ್ಸ್ ಪ್ಯಾಂಟ್.. ಹಸಿರು ಟೀ ಶರ್ಟ್ ತೊಟ್ಟಿದ್ದ ಪ್ರಕಾಶಣ್ಣ.. ಈಗ ಕಪ್ಪು ಕಲರ್ ನ ಶಾರ್ಟ್ ತೊಟ್ಟು.. ನೀಲಿ ಬಿಳಿ ಪಟ್ಟೆ ಪಟ್ಟೆಯ ಟೀ ಶರ್ಟ್ ತೊಟ್ಟಿದ್ದರು..!!
ಅಷ್ಟು ಮಾತ್ರವಲ್ಲದೆ ಈಗ ಪ್ರಕಾಶಣ್ಣನ ಮುಖದ ರೂಪ ಗಂಭೀರವಾಗಿ ಬದಲಾಗಿದೆ..!!
ಹೇಳ ಹೊರಟರೆ ಅವರು ಪ್ರಕಾಶಣ್ಣನೆ ಅಲ್ಲ.!!
ದೂರದಿಂದ ನೋಡಿದರೆ ಯಾವುದೋ ಒಂದು ಆಂಗಲ್ ನಿಂದ ಆ ವ್ಯಕ್ತಿ ಪ್ರಕಾಶಣ್ಣನ ಹಾಗೆ ಕಾಣ ಬಹುದಿತ್ತೇನೋ..??
I Can't Imagine..!! ನನಗೆ ನಂಬಲಾಗುತ್ತಿಲ್ಲ..!! How is it possible..??
ನಾ ಯಾವ ಮಾತನ್ನೂ. ಯಾವ ಪ್ರತಿಕ್ರಿಯೆಯನ್ನೂ ನೀಡುವ ಮೊದಲೇ ಪ್ರಕಾಶಣ್ಣ ಅಂದರೆ ಪ್ರಕಾಶಣ್ಣನ ಥರ ಇದ್ದ ಆ ವ್ಯಕ್ತಿ ಕಾರ್ ಸ್ಟಾರ್ಟ್ ಮಾಡಿ ಹೊರಟೆ
ಬಿಟ್ಟರು..!!
ಇದು ಹೇಗೆ ಸಾಧ್ಯ..??
ಪ್ರಕಾಶಣ್ಣ ಬದಲಾದದ್ದು ಹೇಗೆ..??
ಅವರು ಧರಿಸಿದ್ದ ಉಡುಪುಗಳು ಬದಲಾದದ್ದು ಹೇಗೆ..??
ಅಷ್ಟು ಜೋರಾಗಿ ಢಿಕ್ಕಿ ಹೊಡೆದರೂ ಎರಡೂ ಕಾರಿಗೂ ಏನು ಆಗಿಲ್ಲವೇಕೆ..??
ಭದ್ರಾವತಿಗೆ ಪ್ರಕಾಶಣ್ಣ ಯಾಕೆ ಬಂದಿರಬಹುದು..??
ಅದರಲ್ಲೂ ನಮ್ಮೂರ ದಿಕ್ಕಿಂದ ಬಂದದ್ದೇಕೆ..?? ನಮ್ಮೂರ ಪಕ್ಕದಲ್ಲಿ ಅವರಿಗೆ ಗೊತ್ತಿರುವವರು ಯಾರಿರಬಹುದು..??
ನನ್ನಲ್ಲಿ ಹುಟ್ಟುತ್ತಿದ್ದ ಪ್ರಶ್ನೆಗಳಿಗೆ ಮತ್ತು ಅವುಗಳ ವೇಗಕ್ಕೆ ಯಾವ ಮತ್ತು ಯಾರ ಉತ್ತರವೂ ಇಲ್ಲ.. ನನ್ನದೂ ಕೂಡ..!!
ಮನಸೂ ಬುದ್ಧಿ ಎರಡೂ ಬ್ಲ್ಯಾಂಕ್ ಬ್ಲ್ಯಾಂಕ್..
ಅಯ್ಯಯ್ಯೋ.. ನನ್ನ ರೆಕಾರ್ಡ್ಸ್ ಗಳನ್ನ ಕೂಡ ನಾನು ಕಾರಿನಲ್ಲೇ ಬಿಟ್ಟಿರುವೆ.!! ಅದು ಎಲ್ಲಾ ಒರಿಜಿನಲ್.. ಮಾರ್ಕ್ಸ್ ಕಾರ್ಡ್ ಕೂಡ..!!!
ನನ್ನ ಕೈ ತಲೆ ಮೇಲೆ ಹೋಗುವುದರಲ್ಲಿತ್ತು...
ನನ್ನ ಮೊಬೈಲ್ ರಿಂಗಾಯಿತು..
ಗಲಿಬಿಲಿ ಇನ್ನೂ ತಿಳಿ ಗೊಂಡಿರಲಿಲ್ಲ.. ನಂಬರ್ ನೋಡಿದೆ..
8782 ಇಂದ ಶುರುವಾಗುವ ಅಪರಿಚಿತ ನಂಬರ್..
ರಿಸೀವ್ ಮಾಡಿ ಹಲೋ ಅಂದೇ..
ಹಲೋ ಪ್ರಭಾಕರ ನಾ..??
ಆ ಹೆಸರಿನ ವ್ಯಕ್ತಿಯನ್ನ ಕೇಳಿಕೊಂಡು ನನಗದು ಎರಡನೆ ಫೋನ್ ಕಾಲ್..
ನಿನ್ನೆ ಕೂಡ ಬೇರೆ ಅಪರಿಚಿತ ನಂಬರ್ ನಿಂದ ಅದೇ ವ್ಯಕ್ತಿಯನ್ನು ವಿಚಾರೀಕೊಂಡು ಒಂದು ಫೋನ್ ಬಂದಿತ್ತು..
ಇವತ್ತು ಕೂಡ ಅದೇ ವ್ಯಕ್ತಿಯನ್ನ ಕೇಳಿಕೊಂಡು ಮತ್ತೊಂದು ಅಪರಿಚಿತ ನಂಬರ್ ನಿಂದ ಕಾಲ್..
ನಾನು ಸ್ಸಾರಿ ರಾಂಗ್ ನಂಬರ್ ಅಂದೇ..
ಹೇ ಪ್ರಭಾಕರ ಸುಳ್ಳು ಹೇಳಬೇಡ ಅಂತು ಆಕಡೆಯ ದನಿ..
ನನ್ನ ಟೆನ್ಶನ್ ನನಗೆ.. ಹಲೋ ನಾನು ಪ್ರಭಾಕರ ಅಲ್ಲ ಪ್ಲೀಸ್ ಫೋನಿಡಿ..
ಇದು ಪ್ರಭಾಕರನ ನಂಬರ್ರೇ ನನಗೆ ಗೊತ್ತು.. ನೀವು ಪ್ರಭಾಕರ ಅಲ್ಲದಿದ್ರೆ ಮತ್ತ್ಯಾರು..?? ಆ ದನಿ..
ಹಲೋ ನಾನು ಪ್ರಭಾಕರ ಅಲ್ಲ.. ಇದು ನನ್ನ ನಂಬರ್.. ಮತ್ತು ನಾನು ಯಾರು ಅಂತ ನಿಮಗೆ ಹೇಳೋ ಅವಶ್ಯಕತೆ ಇಲ್ಲ ತಿಳ್ಕೊಳಿ ಅಂದೆ..
ನಿಮ್ ಹೆಸರೇನು..??
ಅದನ್ನ ಹೇಳಬೇಕಾದ ದರ್ದು ನನಗಿಲ್ಲ..!!
ಹೋಗ್ಲಿ ಇದು ಹೊಸದುರ್ಗಾ ಆಲ್ವಾ..??
ಅಲ್ರೀ ಇದು ಹೊಸೂರ್ ತಮಿಳ್ನಾಡು ನಂಬರ್..!!
ಹೌದು ಎಲ್ಲಿಯ ಹೊಸೂರ್ ಎಲ್ಲಿಯ ಹೊಸದುರ್ಗ..!! ಎತ್ತಣಿಂದೆತ್ತ ಸಂಬಂಧವಯ್ಯ..!!
ಇನ್ನು ನನ್ ಕೈಲಾಗಲಿಲ್ಲ.. ಅವಸರಕ್ಕೆ ಫೋನ್ ಕಟ್ ಮಾಡಿ ವಾಸ್ತವಕ್ಕೆ ಬಂದೆ..
ವಾಸ್ತವ ನನ್ನನ್ನು ನೇರ ನನ್ನ ಹಾಸಿಗೆಯ ಮೇಲೆ ತಂದು ಬಿಟ್ಟಿತ್ತು..!!
ಕಣ್ಣುಜ್ಜಿ.. ಮುಖವೊರೆಸಿ.. ನನ್ನ ಸುತ್ತಲೂ ಒಮ್ಮೆ ನೋಡಿದೆ..
unbeliavable ಇದು ನನ್ನದೇ so called ಬೆಡ್ ರೂಂ..
ಅಂದರೆ ಇಲ್ಲಿಯ ತನಕ ನಾ ಕಂಡದ್ದು ಕನಸು..!!
ಬೆಳಿಗ್ಗೆ ಆರೂವರೆ ಸಮಯದ ಸುಮಾರಿಗೆ.. ಚುರುಗುಟ್ಟುವ ಚಳಿಗೆ ಪೂರ್ತಿಯಾಗಿ ಹೊದ್ದು ಮಲಗಿದ್ದ ನಾನು.. ದಿಗ್ಭ್ರಾಂತನಾಗಿ ಎದ್ದು ಕನಸೊಡೆದು ಕೂರುವಂತೆ ಮಾಡಿದ್ದು ಆ ಅಪರಿಚಿತ ಫೋನ್ ಕಾಲ್..!!
ಹೌದು ಆ ಫೋನ್ ಕಾಲ್ ಮಾತ್ರವೇ ನಿಜ.. ಅದರಿಂದಾಚೆಗಿನದೆಲ್ಲ ಹಚ್ಚ ಹಸಿ ಕನಸು..
still unbelievable..!!
ಡಿಸೆಂಬರ್ ಒಂದನೇ ತಾರೀಕಿನ ಬೆಳ್ಳಂಬೆಳಿಗ್ಗೆ.. ನನಗೆ ಬಿದ್ದ ಕನಸಿದು..!!
ಅಷ್ಟು ಸುಲಭಕ್ಕೆ ದಾಖಲಾಗುವಂತೆ ಯಾವತ್ತೂ ನನಗೆ ಕನಸು ಬಿದ್ದಿರಲಿಲ್ಲ..
ನನ್ನ ಕನಸೊಳಗೆ ಅಷ್ಟು ಪರಿಚಯದವರೂ ಕೂಡ ಬಂದು ಗುರುತಿಸಿ ಕೊಂಡದ್ದಿಲ್ಲ..
ಅಪ್ಪ ಅಮ್ಮನೂ ಎಂದೋ ಬಂದಿರಬಹುದು.. ಆದರೆ ನಿಖರ ಘಟನೆಗಳು ನೆನಪಿಲ್ಲ..
ಆದರು ಮೊನ್ನೆ ಬಿದ್ದ ಈ ಕನಸು.. ಅಷ್ಟು ಸುಲಭಕ್ಕೆ ಮರೆಯಲಾಗದ ಆ ಘಟನೆ.. ಇನ್ನೂ ಆ ಕನಸಿನ ಜೀವಂತಿಕೆ ಉಳಿಸಿಕೊಂಡಿರುವುದು ಸುಳ್ಳಲ್ಲ..
ಆ ಕನಸಿನಲ್ಲಿ ಕಂಡಷ್ಟೇ ತಾಜಾತನದ ನೆನಪು ಆ ಘಟನೆಗಳು ನನ್ನಲ್ಲಿ..
ಕಣ್ಣು ಬಿಟ್ಕೊಂಡೆ.. ಮರೆಯಲಾಗದ ಸಾವಿರ ಹಗಲು ಕನಸುಗಳ ಕಂಡಷ್ಟೇ ರೂಡಿಯಿದ್ದ ನನಗೆ.. ಮೊನ್ನೆ ಬಿದ್ದ ಕನಸಿನ ಅರ್ಥ ಈಗಲೂ ತಿಳಿಯುತ್ತಿಲ್ಲ..
ಆದರು ಈ ಕನಸು.. ಅದಕ್ಕಿನ್ನೂ ಎಳೆ ವಯಸು..
ಬೆಳಿಗ್ಗೆ ಬೆಳಿಗ್ಗೆ ಬಿದ್ದ ಕನಸುಗಳು ನಿಜವಾಗ್ತವೆ ಅನ್ನೋ ಮಾತು ಬಹಳ ಹಿಂದಿನಿಂದಲೂ ಕೇಳಿದ ನೆನಪಿದೆ.. ಹಾಗಾಗುವುದಿದ್ದರೆ ನನ್ನದೊಂದು ಅಭಿಲಾಷೆ..
ಪ್ರಕಾಶಣ್ಣ ನಮ್ಮೂರಿಗೆ ಬರಲಿ.. ಇದು ನನ್ನ ಕನಸಿನ ನಿಜವಾಗುವಿಕೆಯ ತರ್ಕವಲ್ಲ. ನನ್ನ ಅಭಿಲಾಷೆಯೂ ಹೌದು..
ಆದರೆ ಪ್ರಕಾಶಣ್ಣನ ಮುಖ ಬದಲಾಗದಿರಲಿ..!!
ಮತ್ತು ಅಂಥ ಅಫಘಾತಗಳು ಕನಸಲ್ಲೂ ಆಗದಿರಲಿ..
*ಶುಭಂ*