ನಮ್ಮೂರು ಭದ್ರಾವತಿ ಮಲೆನಾಡಿನ ಭಾಗವಾದರೂ ಪೂರ್ತಿ ಮಲೆನಾಡು ಅನಿಸಿ ಕೊಳ್ಳೋದೇ ಇಲ್ಲ. ನಮ್ಮೂರಿನ ಸುತ್ತ ಕಾಡಿದೆ, ಮೇಡಿದೆ, ಬೆಟ್ಟ ಗುಡ್ಡ ಗಳಿದೆ.. ಆರು ತಿಂಗಳು ಮೈತುಂಬಿ.. ಇನ್ನಾರು ತಿಂಗಳು ಸ್ವಲ್ಪ ಬಡಕಲಾದರೂ ಸಾವಕಾಶವಾಗಿ ಹರಿವ ಭದ್ರಾ ನದಿ ಇದೆ.. ಕಣ್ಣು ತಂಪಾಗಿಸಿ ಹಾಯ್ ಅನಿಸುವಷ್ಟು ಅಳತೆಗೆ ತೆಂಗು & ಅಡಿಕೆ ತೋಟಗಳಿವೆ. ಬೇಕಾದಷ್ಟು ಭತ್ತ ಕಬ್ಬು ರಾಗಿ.. ಸ್ವಲ್ಪ ಮಟ್ಟಿಗೆ ಜೋಳ ಎಲ್ಲವೂ ಬೆಳೆಯಲ್ಪಡ್ತವೆ. ರಾಷ್ಟ್ರೀಯ ಮಟ್ಟಕ್ಕೆ ಹೆಸರು ಮಾಡಿರೋ, ವಿಶ್ವೆಶ್ವರಾಯರ ಹೆಸರನ್ನ ಎದೆ ನಿಮಿರಿಸಿ ಹೇಳೋ ಎರಡು ದೊಡ್ಡ ಕಾರ್ಖಾನೆಗಳಿವೆ. ಶಿವಮೊಗ್ಗ ಭಧ್ರಾವತಿಗೆ ನಡುವೆ ಒಂದಿಷ್ಟು ಪ್ರಮಾಣದ ಕೈಗಾರಿಕಾ ಕ್ರಾಂತಿಯೂ ಆಗ್ತಾ ಇದೆ. ಇಂತಿಪ್ಪ ನಮ್ಮ ಊರಿಗೆ ಸುತ್ತ ಮುತ್ತಲ ಜಿಲ್ಲೆಗೆ ಹೋಲಿಸಿದರೆ ಸ್ವಲ್ಪ ವಲಸಿಗರು ಜಾಸ್ತಿಯೇ.
ಭದ್ರಾವತಿಯಿಂದ ಎರಡು ಕಿಲೋ ಮೀಟರ್ ಗೆ ನನ್ನ ಹುಟ್ಟೂರು ಗೌರಾಪುರ. ಬ್ರಾಹ್ಮಣ, ಲಿಂಗಾಯತ, ದೇವಾಂಗ, ಗೌಡ, ಗಾಣಿಗ, ಮೇಧ, ಶೆಟ್ಟಿ, ಮಾದಿಗ, ಲಂಬಾಣಿ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ನಾ ಹುಟ್ಟುವ ಮೊದಲಿಂದ ಇದ್ದರೂ ಇನ್ನೂ ಕನ್ನಡ ಕಲಿಯದಂಥ ತಮಿಳರು.. ಕನ್ನಡ ಬಲ್ಲ ಮಲಯಾಳಿ.. ಉರ್ದು ಇದಿಷ್ಟೂ ವಿವಿಧತೆಯಲ್ಲಿ ಏಕತೆಯನ್ನ ನೂರೈವತ್ತು ಮನೆಗಳ ನನ್ನ ಹುಟ್ಟೂರಿನಲ್ಲಿ ಕಾಣಲಿಕ್ಕೆ ಸಾಧ್ಯ.
ಭದ್ರಾವತಿ ತಾಲೂಕು ಕಬ್ಬಿಣದಂತೆಯೇ ಕಬ್ಬಿಗೂ ಸ್ವಲ್ಪ ಹೆಸರು ಹೊಂದಿರುವಂಥದ್ದು. ಸಕ್ಕರೆಯನ್ನ ತಯಾರಿಸುವ ಒಂದು ದೊಡ್ಡ ಕಂಪನಿ ಮತ್ತು ಹದವಾದ ಬೆಲ್ಲ ತಯಾರಿಸುವ ಸಾಕಷ್ಟು ಆಲೆಮನೆಗಳು ಭದ್ರಾವತಿಯಲ್ಲಿ ಕಾಣಸಿಗುತ್ತವೆ. ಈ ಕಬ್ಬು ಕಡಿಯಲು, ಆಲೆಮನೆಯ ಕೆಲಸ ಮಾಡಲು ಮತ್ತು ಇತರ ಕೈಗಾರಿಕೆ ಕೆಲಸಕ್ಕಾಗಿ ನಮ್ಮೂರುಗಳ ಕಡೆ ಸುತ್ತ ಮುತ್ತಲ ಜಿಲ್ಲೆಯ ವಲಸಿಗರು ಜಾಸ್ತಿ. ಬಂದ ವಲಸಿಗರೆಲ್ಲ ಮನೆ ಮಟ ಮಾಡಿಕೊಂಡು ಸಂಸಾರ ಸಮೇತ ಬೇರು ಬಿಟ್ಟು ಶಾಶ್ವತವಾಗಿ ಸ್ಥಾಪಿತರಾಗಿದ್ದೂ ಇದೆ.
ಹೀಗೆ ಬಂದ ವಲಸಿಗರಲ್ಲಿ ಹೆಚ್ಚಿನವರು ಚೆನ್ನಗಿರಿ, ದಾವಣಗೆರೆ, ಹರಪ್ಪನಹಳ್ಳಿ ಮತ್ತು ರಾಣಿ ಬೆನ್ನೂರಿನ ಕಡೆಯವರು. ಊರಿನ ಜನಸಂಖ್ಯೆಯ ಅರ್ಧ ಪಾಲಿಗಿನ್ಥಲೂ ಹೆಚ್ಚಿನ ಜನ ಈಗ ಇವರುಗಳ ಲೆಕ್ಖವೆ. ಹೀಗೆ ವಲಸೆ ಬಂದವರ ಜೊತೆ ಅವರ ಭಾಷೆಯೂ ವಲಸೆ ಬಂದಿದ್ದು ಸಹಜ. ನಾವೂ ಅದನ್ನ ಕೇಳಿ ಕಲಿತು ಬೆಳೆದದ್ದು ಸಹಜ. ಗಂಡಸರು ಕುಡಿದು ಬೈದಾಡಿ ಕೊಳುವಾಗ.. ಮನೆಗೆ ಬಂದು ಹೆಂಡತಿಯನ್ನ ಹೊಡೆಯುವಾಗ.. ಅಕ್ಕ ಪಕ್ಕದ ಮನೆಯವರುಗಳ ಜೊತೆ ಜಗಳ ಆಡುವಾಗ, ನೀರಿಗೆ, ಸೀಮೆ ಎಣ್ಣೆಗೆ, ನ್ಯಾಯಬೆಲೆ ಅಂಗಡಿಗೆ ಸಾಲುಗಟ್ಟಿ ನಿಂತ ಹೆಂಗಸರು ಸಣ್ಣ ಸಣ್ಣ ಜಗಳಗಳಲ್ಲೂ ಬರುವ ಬೈಗುಳಗಳನ್ನ ಸಹಜವೆಂಬಂತೆ ಕೇಳಿ ಸಹಿಸಿಕೊಂಡಿದ್ದೇವೆ.
ಮೊನ್ನೆ ಸಖಾರಾಮ್ ನಾಟಕ ನೋಡುವಾಗ ಹಾಗೆ ಬೈದು ಜಗಳಾಡಿ ಕೊಳ್ಳುವ ಅಷ್ಟೂ ಜನ ಕಣ್ಮುಂದೆ ಸುಳಿದು ಹೋದರು. ಒಂದು ಭಾಷೆಯ ಸೊಗಡಿಗೆ ಇರೋ ಶಕ್ತಿ ಅಂಥದ್ದು. ನಾವು ಅವಾಚ್ಯ, ಅಸಹ್ಯ ಅಂತ ಕರಿಯಲ್ಪಡೋ ಎಷ್ಟೋ ಬೈಗುಳ ಪದಗಳು ಊರಿನ ಜನರ ಅಥವಾ ಒಂದು ಸೀಮೆಯ ಜನರ ನಾಲಿಗೆಗಳಲ್ಲಿ ಸಾಮಾನ್ಯ ಭಾಷೆಯಷ್ಟೇ. ಕೆಟ್ಟದ್ದು ನಾವು ಕೇಳಿ ಕಂಡುಕೊಳ್ಳೋದರಲ್ಲಿ ಇರತ್ತೆ. ಕೋಪದಲ್ಲಿ ಹೇಳಿ ಬಿಡೋ ಅವರಿಗೆ ಇದ್ಯಾವುದೂ ಅವರಿಗೆ ನೆನಪಾಗುವುದೇ ಇಲ್ಲ. ಸಂಧರ್ಭ ಸೂಚಕವಾಗಿ ಬಳಕೆಯಾಗುವ ಆ ಪದಗಳು ಎಜುಕೇಟೆಡ್ ವರ್ಗಕ್ಕೋ.. ಸಾಹಿತ್ಯ ಪ್ರೀತಿಯನ್ನ ಹೊಂದಿರುವಂಥವರಿಗೋ ಅಥವಾ ಭಾಷೆಯ ಪ್ರತೀ ಹುಳುಕುಗಳನ್ನ ಇಡಿಯಾಗಿ ಅವಲೋಕಿಸೋ ವಿದ್ವಾಂಸರಿಗಷ್ಟೇ ಅಪ್ರಿಯ. ಇನ್ನು ಜಗತ್ತಿನ ಮುಂದೆ ಶುದ್ಧ ಭಾಷಿಕನಾಗಿ, ತನ್ನ ವೈಯುಕ್ತಿಕ ವಲಯದಲ್ಲಿ ಹೀಗೆ ಅವಾಚ್ಯ ಭಾಷೆಯನ್ನ ಬಳಸಲ್ಪಡೋ, ಅದರಿಂದ ವಿಕೃತ ಸಂತೋಷವನ್ನು ಹೊಂದುವ ಅದೆಷ್ಟು ವ್ಯಕ್ತಿತ್ವಗಳನ್ನ ಕೂಡಾ ನಾನು ಖುದ್ದು ನೋಡಿಲ್ಲ. ಸಖಾರಾಮ್ ಬೈಂಡರ್ ನಾಟಕದ ಸಖಾರಾಮ್, ಲಕ್ಷ್ಮಿ ಮತ್ತು ಚಂಪಾ ಪಾತ್ರಗಳು ಕೂಡಾ ಹೀಗೆ ಒಂದು ಪ್ರಾದೇಶಿಕ ಸೀಮೆಯ ದೈನಿಕ ಭಾಷೆಯನಾಡುವ ಪ್ರತಿನಿಧಿಗಳಂತೆ ಕಂಡರೆ ಹೊರತು ನಾಟಕದಲ್ಲಿ ಭಾಷೆಯನ್ನ ತಮ್ಮಿಚ್ಚೆಗೆ ಬಳಸಿಕೊಂಡಂತೆ ತೋರಲಿಲ್ಲ.
ಸಖಾರಾಮ್ ನಾಟಕದ ವಿವಾದ ಶುರುವಾಗಿ ಅದು ಬಹಿಷ್ಕರಿಸಲ್ಪಟ್ಟದ್ದು 1974 ರಲ್ಲಿ. ಮರಾಠಿಯ ವಿಜಯ್ ತೆಂಡೂಲ್ಕರ್ ರವರ ಈ ನಾಟಕ ಕೃತಿಯನ್ನ ರಂಗ ರೂಪಕ್ಕೆ ತಂದವರು ಕಮಲಾಕರ್ ಸಾರಂಗ್. 1972 ರಲ್ಲಿ ಈ ನಾಟಕ ರಚಿಸಲ್ಪಟ್ಟಿದೆ. ಈ ನಾಟಕದ ವಿವಾದಾತ್ಮಕ ಅಂಶ ಬಹುಶಃ ಕಥೆಯಲ್ಲಲ್ಲದೆ ರಂಗದ ಮೇಲೆ ತಂದ ರೂಪಕದಲ್ಲಿ ಕಾಣಿಸಿರಬಹುದು. ಹೆಣ್ಣಿಗೆ ಕೊಡುವ ಹಿಂಸೆ, ಅವಳ ಮೇಲೆ ಬಳಸಲ್ಪಡುವ ಭಾಷೆ, ಅವಳ ಮೇಲೆಸಗುವ ದೌರ್ಜನ್ಯ ಇವೆಲ್ಲದರ ಎಲ್ಲೇ ಮೀರಿ ನಿಂತದ್ದರಿಂದ ಅಂಥಹ ಒಂದು ಬಹಿಷ್ಕಾರವನ್ನ ವಿಧಿಸಲಾಗಿದ್ದು ನ್ಯಾಯವೇ ಅನಿಸಬಹುದು. ಕಥೆಯನ್ನ ನಾಟಕಕ್ಕೆ ಯಥಾವತ್ ಬಳಸಿಕೊಂಡಿರೋದರಿಂದ ಕಥೆಗೆ ಪೂರಕವಾಗಿ ಭಾಷೆಯನ್ನ ಮತ್ತು ಸಂಭಾಷಣೆಯನ್ನ ಹೆಣೆಯಲ್ಪಟ್ಟಿದೆ. ಅದೇ ಕಥೆ ಒರಟು ಭಾಷೆ, ಒರಟು ಪಾತ್ರಗಳ ಮೂಲಕವೇ ಮರಾಠಿ, ಹಿಂದಿ ಯಲ್ಲಿ ಹಲವಾರು ಯಶಸ್ವಿ ಪ್ರದರ್ಶನಗಳನ್ನ ಕಂಡಿರೋ ಈ ನಾಟಕ ಕನ್ನಡಕ್ಕೂ ಅದೇ ವರ್ಚಸ್ಸಿನೊಂದಿಗೆ ಬಂದದ್ದು ಸ್ವಾಗತಾರ್ಹ ಮತ್ತು ಅಭಿನಂದನೀಯ. ಈಗಿನ ಹಲವು ಧಾರಾವಾಹಿಗಳಲ್ಲಿ ಕಾಣುವಂಥ ಸಾಹಿತ್ಯಿಕ ಅನಿಸುವಂತ ಕನ್ನಡ ಅಥವಾ ಸಾಧಾರಣ ಕನ್ನಡ ಭಾಷೆಯ ಬಳಕೆ ಆಗಿದ್ದಿದ್ದರೆ.. ಬಹುಶಃ ಈ ರೀತಿಯ ಭಾಷಾ ಬಳಕೆ ಇರದಿದ್ದರೆ ನಾಟಕ ಅಷ್ಟು ಪರಿಣಾಮಕಾರಿಯಾಗಿ ಕಾಣಿಸುತ್ತಿರಲಿಲ್ಲವೋ ಏನೋ..??
ಕಥಾ ನಾಯಕ ಸಖಾರಾಮ್, ಬೈಂಡರ್ ಕೆಲಸ ಮಾಡುವ ಒಬ್ಬ ಸಾಮಾನ್ಯ ಪ್ರಜೆ. ಸಖಾರಾಮ್ ನ ವಿಚಾರಧಾರೆಗಳನ್ನ ಕಂಡಾಗ ಆತ ಉಪೇಂದ್ರ ಸಿನಿಮಾದ ಉಪೇಂದ್ರನ ಪಾತ್ರಧಾರಿಯಂತೆ ಭಾಸವಾಗುತ್ತಾನೆ. ಸಮಾಜದ ಕಟ್ಟುಪಾಡುಗಳನ್ನ ಪಾಲಿಸದೆ ತನ್ನಿಷ್ಟದಂತೆ ತನಗೆ ಬೇಕಾಂದಂತೆ ಬದುಕುವ ಸ್ವತಂತ್ರ ಜೀವಿ. ಲೋಕದ ಯಾವ ಕೊಂಕು ನುಡಿಗಳೂ ಅವನನ್ನು ಬಾಧಿಸಲಾರವು ಅವನ ಬದುಕು ಅವನ ಪಾಲಿಗಷ್ಟೇ.. ಅವನು ಬದುಕುವ ಬದುಕು ಅವನದಷ್ಟೇ. ಅವನ ಬದುಕಿನೊಳಗೆ ಅವನದೇ ಒಂದಿಷ್ಟು ರೀತಿ ರಿವಾಜು.. ಅವನದೇ ಒಂದು ಜೀವನ ಶೈಲಿ. ಮದುವೆಯಾಗದ ಮಾತ್ರಕ್ಕೆ ಸಖಾರಾಮ್ ಸಾಂಸಾರಿಕ ಜಗತ್ತಿನ ಯಾವ ಲೌಕಿಕ ಸುಖದಿಂದಲೂ ವಂಚಿತನಲ್ಲ. ಅವನ ಬದುಕಿನಲ್ಲಿ ಬಂದು ಹೋದದ್ದು ಏಳು ಜನ ಹೆಂಗಸರು. ಎಲ್ಲರೂ ಅಬಲೆಯರು.. ಗಂಡ ಬಿಟ್ಟವರು, ಗಂಡ ಸತ್ತವರು, ಗಂಡನಿಂದ ಒತ್ತೆ ಇಡಲ್ಪಟ್ಟವರು, ಮಾರಲ್ಪಟ್ಟವರು ಇಂಥವರುಗಳೇ ಸಖಾರಾಮ್ ಬದುಕಿನಲ್ಲಿ ಬಂದ ಆ ಏಳು ಜನ ಹೆಣ್ಣುಗಳು.
ನಾಟಕದ ಕಥಾವಸ್ತು ಸಖಾರಾಮ್ ಮತ್ತು ಅವನು ಕರೆದು ಕೊಂಡು ಬರುವ ಕಡೆಯ ಎರಡು ಹೆಂಗಸರ ನಡುವಿನ ಘಟನೆಗಳದ್ದು. ಗಂಡನಿಂದ ತ್ಯಜಿಸಲ್ಪಡೋ ಲಕ್ಷ್ಮಿಯನ್ನ ತನ್ನ ಮನೆಗೆ ಕರೆದು ಕೊಂಡು ಬರುವ ಸಖಾರಾಮ್ ಲಕ್ಷ್ಮಿಗೆ ಆಸರೆಯಾಗಿ ನಿಲ್ಲುತ್ತಾನೆ. ಆ ಅಸರೆಯೊಳಗೆ ಇರಬೇಕಾದಲ್ಲಿ ಅವಳು ಸಹಿಸಿ ಕೊಳ್ಳ ಬೇಕಾದ ಕಷ್ಟ ಕೋಟಲೆಗಳನ್ನ ವಿವರವಾಗಿ ಹೇಳುತ್ತಾನೆ. ತನ್ನಿಚ್ಚೆಯಂತೆ ಅವಳು ನಡೆದು ಕೊಳ್ಳುವುದಿದ್ದರೆ ಮಾತ್ರ ಅವಳು ಆ ಮನೆಯಲ್ಲಿ ಉಳಿಯಬಹುದು ಎನ್ನುವ ಕರಾರು ಮಾಡುತ್ತಾನೆ. ಆ ಕರಾರಿಗೆ ಅವಳಿಗೆ ಒಪ್ಪಿಗೆ ಇರದಿದ್ದಲಿ ಆ ಕೂಡಲೇ ಅವಳು ಆ ಮನೆಯನ್ನು ಬಿಟ್ಟು ಹೊರಡ ಬಹುದಾಗಿಯೂ, ತಾನೇ ಅದಕ್ಕೆ ಅನುವು ಮಾಡಿಕೊಟ್ಟು ಅವಳಿಗೆ ಎರಡು ಸೀರೆಯೂ ಮತ್ತು ಐವತ್ತು ರೂಪಾಯಿಗಳಷ್ಟು ಹಣವನ್ನ ನೀಡಿ ಕಳುಹಿಸಿ ಕೊಡುವುದಾಗಿಯೂ ತಿಳಿಸುತ್ತಾನೆ. ಅವನ ಎಲ್ಲಾ ಕರಾರಿಗೆ ಒಪ್ಪಿಕೊಳ್ಳುವ ಲಕ್ಷ್ಮಿ ಅವನೊಂದಿಗೆ ಇರಲು ಒಪ್ಪಿ ಉಳಿದುಕೊಳ್ಳುತ್ತಾಳೆ.
ಲಕ್ಷ್ಮಿ ಮೂಲತಹ ಸಾಧ್ವಿಯಂತಹ ಹೆಣ್ಣುಮಗಳು. ಗಂಡ ತನ್ನನು ತ್ಯಜಿಸಿ ಕಳುಹಿಸಿದರು ಗಂಡನ ಶ್ರೆಯೋಭಿಲಾಷೆಗೆ ಹಾರೈಸುವವಳು. ಆ ಹೆಂಗಸರನ್ನ ಮಾತಾಡಿಸುವಾಗ ಹೋಗ್ರಿ ಬನ್ರಿ ಎಂದು ಮರ್ಯಾದೆ ಕೊಟ್ಟು ಮಾತಾಡಿಸುವ ಮರ್ಯಾದಾ ಪುರುಷ ಸಖಾರಾಮ್.. ಅವರನ್ನ ನಡೆಸಿಕೊಳ್ಳುವ ಪದ್ಧತಿ ಮಾತ್ರ ಘೋರ. ಎಷ್ಟು ತುಚ್ಛ ಮಾತುಗಳಿಂದ ಬೈಯುತ್ತಾನೆ.. ಮೃಗ ಕ್ಕಿಂತಲೂ ಕೀಳಾಗಿ ಹೊಡೆದು ಬಡಿದು ಹಿಂಸಿಸುತ್ತಾನೆ. ಎಲ್ಲವನ್ನೂ ಸಹಿಸಿಕೊಳ್ಳುವ ಲಕ್ಷಿ ಆಶ್ರಯ ಕೊಟ್ಟ ಸಖಾರಾಮ್ ನಲ್ಲಿ ದೇವರನ್ನು ಕಾಣುತ್ತಾಳೆ.. ಮತ್ತು ದೇವರಂತೆಯೇ ಪೂಜಿಸುತ್ತಾಳೆ. ಸಖಾರಾಮನ ಹೆಸರಲ್ಲಿ ತಾನೇ ತಾಳಿ ಕಟ್ಟಿಕೊಳ್ಳುತ್ತಾಳೆ. ಯಾವ ಹೆಣ್ಣನ್ನೂ ತನ್ನ ಬದುಕು ಪೂರ್ತಿ ಇರಿಸಿಕೊಳ್ಳದ ಸಖಾರಾಮ್ ಒಂದು ದಿನ ಲಕ್ಷ್ಮಿಯನ್ನೂ ಮನೆಯಿಂದ ಹೊರಗೆ ಹಾಕುತ್ತಾನೆ. ಲಕ್ಷ್ಮಿಯ ಜಾಗಕ್ಕೆ ಚಂಪಾಳನ್ನು ಕರೆದು ತರುತ್ತಾನೆ.
ಲಕ್ಷ್ಮಿಗೆ ತದ್ವಿರುದ್ಧ ಗುಣದ ಚಂಪಾ ಬಜಾರಿಯಂಥಾ ಹೆಣ್ಣು. ಗಂಡಸನ್ನು ಯಕಶ್ಚಿತ್ ಎಂದು ತಿಳಿದು ಅವನಿಗೆ ಯಾವ ರೀತಿಯಿಂದಲೂ ಸೊಪ್ಪು ಹಾಕದ ದಿಟ್ಟ ತನದ ಮಹಿಳೆ. ಅವಳನ್ನು ಮನೆಗೆ ಕರೆದುಕೊಂಡು ಬರುವ ಸಖಾರಾಮ್ ತನ್ನ ರೀತಿ ರಿವಾಜುಗಳನ್ನೆಲ್ಲ ತಿಳಿಸುತ್ತಾನೆ. ಅದೆಲ್ಲವನ್ನು ಕೇಳಿಯೂ ಕೇಳದಂತೆ ಇದ್ದುಬಿಡುವ ಚಂಪಾ ಸಖಾರಾಮ್ ನನ್ನು ತನ್ನ ಇಶಾರೆಗೆ ಕುಣಿಯ ಬಲ್ಲವನಂತೆ ಮಾಡಿಕೊಳ್ಳುತ್ತಾಳೆ. ಮೂಲತಹ ಸೂಕ್ಷ್ಮ ಮನಿಸ್ಸಿನ ಮುಗ್ಧ ಹುಡುಗಿಯಾಗಿದ್ದ ಚಂಪಾ ಗಂಡನ ಕಿರುಕುಳ.. ಮಾನಸಿಕ ಹಿಂಸೆ ಮತ್ತು ಲೈಂಗಿಕ ಹಿಂಸೆಗಳಿಂದ ಒರಟಾಗಿ ಬದಲಾಗಿರುತ್ತಾಳೆ. ರಾಕ್ಷಸ ಗುಣದವರಿಗೆ ರಾಕ್ಷಸ ಗುಣದವರೇ ಆಪ್ತ ಅನ್ನುವಂತೆ ಚಂಪಾ ಸಖಾರಾಮನಿಗೆ ಮೆಚ್ಚಿಗೆಯಾಗುತ್ತಾಳೆ. ಚಂಪಾಳ ಒರಟುತನ ಒರಟ ಸಖಾರಾಮನಿಗೆ ಮೆಚ್ಚಿಗೆಯಾಗುತ್ತದೆ.
ಚಂಪಾಳ ಗಂಡ ವೃತ್ತಿಯಿಂದ ಪೋಲೀಸ್ ಆದರೂ ಮನುಷ್ಯನಲ್ಲದ ವ್ಯಕ್ತಿತ್ವ. ಪುರುಷತ್ವವಿಲ್ಲದ ಚಂಪಾಳ ಗಂಡ ಚಂಪಾಳನ್ನ ದೈಹಿಕವಾಗಿ ಬಹಳ ಹಿಂಸಿಸಿರುತ್ತಾನೆ. ಅವನ ಈ ಮನೋವೈಕಲ್ಯದಿಂದಾಗಿ ಒಂದು ದಿನ ಅವನು ಕೆಲಸ ಕಳೆದು ಕೊಂಡು ಅರೆ ಹುಚ್ಚನಾಗಿ ಬೀದಿ ಬೀದಿ ಅಲೆದು ಮಡದಿ ಚಂಪಾಳ ಆಸರೆಗಾಲಿ ಹಾತೊರೆಯುತ್ತಾನೆ. ಗಂಡನ ಮೇಲೆ ಲವಲೇಶವೂ ಕರುಣೆ ಪ್ರೀತಿ ಇರದ ಚಂಪಾ ಅವನು ಅವಳ ಹತ್ತಿರಕ್ಕೆ ಬಂದಷ್ಟೂ ಅವನನ್ನು ಬೈದು ಹೊಡೆದು ದೂರ ತಳ್ಳುತಾಳೆ.
ಹೊರ ಜಗತ್ತಿನಲ್ಲಿ ಇನ್ನ್ಯಾವ ಆಸರೆಯೂ ಸಿಗದ ಲಕ್ಷ್ಮಿ ಆಸರೆಗಾಗಿ ಮತ್ತೆ ಸಖಾರಾಮನನ್ನು ಅರಸಿ ಬರುತ್ತಾಳೆ. ಸಖಾರಮನ ವಿರೋಧದ ಹೊರತಾಗಿಯೂ ಚಂಪಾಳ ದಯೆಯಿಂದಾಗಿ ಲಕ್ಷ್ಮಿ ಸಖಾರಾಮನ ಮನೆಯಲ್ಲಿ ಆಸರೆ ಪಡೆಯುತ್ತಾಳೆ. ಚಂಪಾ ಸಖಾರಮನ ಸಖಿಯಾಗಿ ಲಕ್ಷ್ಮಿ ಮನೆ ಕೆಲಸದ ಸಾಧ್ವಿಯಾಗಿ ಮೂವರೂ ಒಟ್ಟಿಗೆ ಒಂದೇ ಸೂರಿನಡಿ ಬದುಕುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಅದೊಂದು ದಿನ ಲಕ್ಷ್ಮಿ ನೋಡಬಾರದ ಒಂದು ಸನ್ನಿವೇಶವನ್ನ ನೋಡಿ ಬಿಡುತ್ತಾಳೆ. ಸಖಾರಾಮನ ಸ್ನೇಹಿತ ದಾವೂದ್ ನೊಂದಿಗೆ ಚಂಪಾಳ ಅನೈತಿಕ ಸಂಬಂಧವನ್ನ. ಅಲ್ಲಿ ಯಾರೂ ಯಾರಿಗೂ ಗಂಡ ಹೆಂಡಿರಲ್ಲದಿದ್ದರೂ.. ಅಸಲು ಅವರುಗಳ ಸಂಬಂಧಗಳೇ ಅನೈತಿಕತೆಯ ತಳಹದಿಯ ಮೇಲೆ ನಿಂತಿದ್ದರೂ ಲಕ್ಷ್ಮಿ ಸಖಾರಾಮನ ಆಸರೆ ದೊರೆತಂದಿನಿಂದಲೇ ಸಖಾರಾಮನಿಗೆ ನಿಷ್ಠಳಾಗಿರುತ್ತಾಳೆ. ಮತ್ತು ಆ ನಿಷ್ಠೆಯನ್ನ ಚಂಪಾಳಿಂದಲೂ ಎದುರು ನೋಡಿರುತ್ತಾಳೆ. ಸಖಾರಾಮನನ್ನು ವಂಚಿಸಿ ದಾವೂದ್ ನೊಂದಿಗೆ ಅನೈತಿಕತೆಯಲ್ಲಿ ತೊಡಗುವ ಚಂಪಾಳ ಗುಣ ಹಿಡಿಸಿದ ಲಕ್ಷ್ಮಿ ಸಖರಾಮನಿಗೆ ಆಗುತ್ತಿರುವ ಮೋಸವನ್ನ ತಾಳಲಾರದೆ ಸಖರಾಮನಿಗೆ ವಿಷಯ ತಿಳಿಸಿ ಬಿಡುತ್ತಾಳೆ. ಕ್ರುದ್ಧನಾಗುವ ಸಖಾರಾಮ್ ಅವಸರದಲ್ಲಿ ಚಂಪಾಳನ್ನು ಕೊಂದು ಬಿಡುತ್ತಾನೆ. ಚಂಪಾಳನ್ನ ಕೊಂದ ಆಘಾತದಲ್ಲಿ ಸಖಾರಾಮ್ ಭ್ರಾಂತಿಗೆ ಬಿದ್ದು ನಿಶ್ಚಳನಾಗುವ ಸಖಾರಾಮ್ ಗೆ ಒತ್ತಾಸೆಯಾಗಿ ನಿಲ್ಲುವ ಲಕ್ಷ್ಮಿ ತಾನೇ ಚಂಪಾಳ ಹೆಣವನ್ನ ಸಖಾರಾಮನ ಮನೆಯಲ್ಲಿ ಹೂಳಲು ಪ್ರಯತ್ನಿಸುವ ಘಟನೆಯೊಂದಿಗೆ ನಾಟಕ ಮುಕ್ತಾಯವಾಗುತ್ತದೆ.
ನಾಟಕದಲ್ಲಿ ಈ ಕೆಲವೊಂದು ಸನ್ನಿವೇಶಗಳು ಬಹಳ ಕಾಲ ನೆನಪಿನಲ್ಲುಳಿದು ಕಾಡಿಸುವಂಥವು.
* ಲಕ್ಷ್ಮಿ ಮನೆಗೆ ಬಂದೊಡನೆ ಸಖಾರಾಮನಲ್ಲಿ ಕೆಲವೊಂದು ಬದಲಾವಣೆಗಳು ಉಂಟಾಗುತ್ತವೆ. ಯಾವತ್ತಿಗೂ ದೇವರನ್ನು ಪೂಜಿಸದ ಸಖಾರಾಮ್ ದೇವರನ್ನ ಪೂಜಿಸಲು ಇಷ್ಟಪಡುತ್ತಾನೆ. ಲಕ್ಷ್ಮಿಗಾಗಿ ತನ್ನ ಹಲವು ಚಟಗಳನ್ನ ನಿಯಂತ್ರಿಸಿಕೊಂಡು ಅವುಗಳ ಬಳಕೆಯನ್ನ ಕಮ್ಮಿಮಾಡಿಕೊಂಡು ಬರುತ್ತಾನೆ. ಒಂದು ಒಡನಾಟದ ಶಕ್ತಿ.. ಪ್ರೀತಿಯ ಅನುಭೂತಿ ಮಾತ್ರ ಹಾಗೆ ಎಂಥಾ ಮನುಷ್ಯನನ್ನೂ ಬದಲಾಯಿಸಲು ಸಾಧ್ಯ.
* ಮನುಷ್ಯನಿಗೆ ಸುಖ ಎನ್ನುವುದು ಯಾವ ಯಾವ ಕ್ರಿಯೆಗಳಿಂದ ಕ್ರಿಯಾ ಮೂಲಗಳಿಂದ ಸಿಗುತ್ತದೆ ಅನ್ನುವುದೇ ಆಶ್ಚರ್ಯ. ಲಕ್ಷ್ಮಿಯ ಒಂದು ಮೋಹಕ ನಗುವೆಂದರೆ ಸಖಾರಾಮನಿಗೆ ಅಂಥದ್ದೊಂದು ಸುಖ. ದೈಹಿಕವಾಗಿ ಅವಳನ್ನು ಯಾವತ್ತೂ ಹೊಂದದ ಸಖಾರಾಮ್ ಅವಳ ಆ ನಗುವಿಗೆ ಮಾತ್ರ ಭಿಕ್ಷುಕನಂತೆ ಹಂಬಲಿಸುತ್ತಾನೆ. ಮತ್ತು ಆ ನಗುವಿಗಾಗಿ ಅವಳನ್ನು ಇನ್ನಿಲ್ಲದಂತೆ ಹಿಂಸಿಸುತ್ತಾನೆ. ಲಕ್ಷ್ಮಿಯ ನಗುವಿನಂತೆಯೇ ಚಂಪಾಳ ಒರಟುತನವೂ ಸಖಾರಮನಿಗೆ ಸುಖವನೀಯುವ ಕ್ರಿಯೆ.
* ಲಕ್ಷ್ಮಿಯ ಭಾವುಕತೆ.. ಇರುವೆಯೊಂದಿಗಿನ ಅವಳ ಸರಸ, ಕಾಗೆಯೊಂದಿಗಿನ ನಂಟು.. ಭೂಮಿಯಂತ ಸಹನೆ, ತಾಯಿಯಂಥ ಮಮತೆ.. ಅವಳ ಅದ್ಭುತ ನಗೆ.. ಸಖಾರಾಮನನ್ನು ಮಾತ್ರವಲ್ಲ ವೀಕ್ಷಕರನ್ನೂ ಕಾಡುತ್ತದೆ.
* ಚಂಪಾಳ ಹಿನ್ನಲೆ ಮತ್ತು ಅವಳ ಕಥೆ ಎಂಥವರ ಹೃದಯವನ್ನೂ ಆರ್ದ್ರವಾಗಿಸುತ್ತದೆ ಹೂವಿನಂಥವಳು ಮುಳ್ಳಾದ ಅವಳ ಕಥೆ ನಿಜಕ್ಕೂ ಘೋರವೆನಿಸುತ್ತದೆ. ಚಂಪಾಳ ಒರಟುತನ, ಬಜಾರಿತನ ಆಶ್ಚರ್ಯ ಹುಟ್ಟಿಸಿಯೂ ಕಾಡುತ್ತದೆ.
* ಚಂಪಾಳ ಪುರುಷನ ಪಾತ್ರ ಈ ಕಾಲದ ಅನೇಕ ಹೀನ ಮನಸ್ಸಿನ ಗಂಡಸರ ಪ್ರತಿನಿಧಿಯಂಥದ್ದು. ಅವನ ಪಾಪಕ್ಕೆ ಅವನಿಗೆ ಶಾಸ್ತಿಯಾಗುತ್ತದೆ. ವ್ಯಗ್ರನಾಗಿದ್ದವನು ಮಗುವಂತೆ ಚಂಪಾಳ ಕಾಲ ಸುತ್ತಿಕೊಳ್ಳಲು ಹಂಬಲಿಸುವ ಪರಿ ಒಂದು ಸಂದೇಶದಂತೆ ತೋರುತ್ತದೆ.
* ಸಖಾರಾಮನ ಸ್ನೇಹಿತನ ಪಾತ್ರಧಾರಿ ದಾವೂದ್. ಒಂದಷ್ಟು ದೃಶ್ಯಗಳಲ್ಲಿ ನಗು ತರಿಸುತ್ತದೆ. " ಗಜಂದು ಮುಖದ ಗಣದು ಪತಿಯೇ ನಿನಗೆ ವಂದನೆ" ಅವನ ಈ ಹಾಡು ಈಗಲೂ ನಗು ತರಿಸುತ್ತದೆ.
* ಕಡೆಯ ದೃಶ್ಯಗಳಲ್ಲಿ ಸಖಾರಾಮನ ಭಯ ದುಗುಡ ಭ್ರಾಂತಿ ನಿಷ್ಕ್ರಿಯತೆ.. ಆ ಸಮಯಕ್ಕೆ ಲಕ್ಷ್ಮಿಯ ದಿಟ್ಟತನ.. ಸಖಾರಾಮನನ್ನ ಕಾಪಾಡಿಕೊಳ್ಳುವ ಹಂಬಲವೂ ಕಾಡಿಸುತ್ತದೆ.
ಈ ನಾಟಕದಿಂದ ಯಾವ ಸಂದೇಶವೂ ದೊರಕುವುದಿಲ್ಲ ನಿಜ. ಆದರೆ ಮನುಷ್ಯನ ಅಸಹಾಯಕತೆ, ಹಿಂಸೆ, ವಿಕೃತಿ ಮತ್ತು ಅನೈತಿಕತೆಯ ವರ್ತನೆಗಳ ಹಲವು ಮುಖಗಳು ಗೋಚರಿಸುತ್ತವೆ. ಒಂದು ಮನರಂಜನಾ ಮಾಧ್ಯಮವಾಗಿ ನಾಟಕ ಮನಸ್ಸನ್ನ ಆವರಿಸಿಕೊಳ್ಳುವುದು ನಿಜ.
ಈ ನಾಟಕದಲ್ಲಿ ಭಾಷೆಯ ಬಳಕೆ ಮತ್ತು ಹೆಂಗಸರನ್ನು ಹೊಡೆದು ಹಿಂಸಿಸುವ ವಿಚಾರದಲ್ಲಿ, ದೈಹಿಕ ಕಾಮನೆಗಳ ರೂಪಕಗಳನ್ನ ರಂಗದ ಮೇಲೆ ಮುಕ್ತವಾಗಿ ಸಾದರ ಪಡಿಸುವ ವಿಚಾರದಲ್ಲಿ ಕಾಣಸಿಗುವ ರಿಯಲಿಸ್ಟಿಕ್ ಸನ್ನಿವೇಶಗಳು ನಿಜಕ್ಕೂ ಖಂಡನೀಯ. ಪ್ರಯತ್ನಿಸಿದರೆ ಅವುಗಳನ್ನ ನಿಯಂತ್ರಿಸಿಯೂ ನಾಟಕವನ್ನ ಇಷ್ಟು ಪಾರಿಣಾಮಕಾರಿಯಾಗಿ ಇರಿಸಿಕೊಳ್ಳಲು ಖಂಡಿತ ಸಾಧ್ಯ.
ನಾಟಕದ ಅಂತ್ಯ ಅನಿರೀಕ್ಷಿತ ಹಂತದಲ್ಲಿ ಬಂದು ಬಿಡುತ್ತದೆ. ಯಾರೂ ಊಹಿಸದ ರೀತಿ ನಾಟಕ ಮುಗಿದು ಬಿಡುತ್ತದೆ. ಇನ್ನೇನೋ ಇದೆ.. ಮುಂದೇನೋ ಆಗುತ್ತದೆ ಅನ್ನುವ ಕಾತುರ ಹಿಡಿದು ಕೂತಂತೆಯೇ ನಾಟಕ ಮುಗಿದು ಬಿಡುತ್ತದೆ. ಅಂತ್ಯವನ್ನ ಸ್ವಲ್ಪ ಪರಿಷ್ಕರಿಸಿದರೆ ಒಳ್ಳೆಯದು.
ನಾಟಕದ ಕಥಾವಸ್ತು 1972 ಕಾಲದ ವ್ಯಾಪ್ತಿಗೆ ಒಳಪಟ್ಟಿರೋದರಿಂದ ಅದನ್ನ ಈಗಿನ ಸಾಮಾಜಿಕ ಸ್ಥಿತಿ ಗತಿಗೆ ಹೋಲಿಸಿ ನೋಡಿ ಅಳೆದರೆ ತಪ್ಪಾಗುತ್ತದೆ. ನಾಟಕವನ್ನ ಈಗಿನ ಸಾಮಾಜಿಕ ಸ್ಥಿತಿಗತಿಗೆ ಅನುಗುಣವಾಗಿ ಪರಿವರ್ತಿಸಿ ರಂಗದ ಮೇಲೆ ತರುವ ಪ್ರಯತ್ನ ನಡೆದರೂ ಅದು ಶ್ಲಾಘಿಸುವ ಕಾರ್ಯವಾಗಬಹುದು.
ಸಖಾರಾಮ್ ಬೈಂಡರ್ ನನ್ನ ಮಟ್ಟಿಗೆ ನಿಜಕ್ಕೂ ಖುಷಿ ಕೊಟ್ಟ ನಾಟಕ. ಒಂದು ಸಾಮಾಜಿಕ ಸಮಸ್ಯೆಯ ಕಥಾ ಹಂದರ.. ಪ್ರದೀಪ್ ಕುಮಾರ್, ರಾಜೇಶ್ವರಿ ತಳವಾರ್, ಪ್ರಜ್ಞಾ ಬ್ರಹ್ಮಾವರ್, ದರ್ಶನ್ ತುಮಕೂರು, ಮತ್ತು ಸತೀಶ್ ಎಂ ವೀ ಅವರುಗಳ ಮನ ಮುಟ್ಟುವ ಮನೋಜ್ಞ ಅಭಿನಯ. ಸನ್ನಿವೇಶಕ್ಕೆ ಪೂರಕ ಸಂಗೀತ ಮತ್ತು ಬೆಳಕು. ಇಡೀ ನಾಟಕ ಸಖಾರಾಮ್ ಮನೆಯ ಎರಡು ಕೋಣೆಯ ಮಧ್ಯೆ ನಡೆಯುವ ಒಂದು ನಿಯಂತ್ರಿತ ಕಥಾ ಹಂದರದ ವಿಶೇಷತೆಗೆ. ಕನ್ನಡಕ್ಕೆ ಇದನ್ನ ತಂದುಕೊಟ್ಟ ಗೀತಾ ತಕ್ಕವಾರಿ.. ರಂಗದ ಮೇಲೆ ಇದನ್ನು ಸಾದರಿ ಪಡಿಸಲು ಕಾರಣರಾದ ಸರ್ವಸ್ವ ತಂದ ಮತ್ತು ಅದರ ರೂವಾರಿ ನಾಗರಾಜ ಸೋಮಯಾಜಿ.. ಈ ನಾಟಕದ ನಿರ್ವಹಣೆ ಹೊತ್ತ ಗೆಳೆಯ ಮಹೇಶ್ ಪಲ್ಲಕ್ಕಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ.
ಮುಂದೇನಾದರು ಈ ನಾಟಕದ ಮರು ಪ್ರದರ್ಶನ ಇದ್ದಲ್ಲಿ ಖಂಡಿತ ಮಿಸ್ ಮಾಡ್ಕೋಬೇಡಿ ಅನ್ನೋದು ನನ್ನ ಕರೆಯಷ್ಟೇ.