Thursday, 10 April 2014

ನಾನು ಕಂಡ ಉಳಿದವರು ಕಂಡಂತೆ..

ಒಂದು ಸಿನಿಮಾ ಕೂಡಾ ಹಾಗಿರಬೇಕು.. ಎಷ್ಟೋ ಸಾರಿ ಹೀಗಂದುಕೊಂಡಿದ್ದಿದೆ ನಾನು..

ನಾಟುವ ನಾಟಕದಂತೆ, ಕಾಡಿಸುವ ಕಾದಂಬರಿಯಂತೆ, ಕನವರಿಸಿಕೊಳ್ಳುವಂತೆ ಮಾಡಬಲ್ಲ  ಕಥಾ ಪುಸ್ತಕದಂತೆ ಒಂದು ಸಿನಿಮಾ ನಮ್ಮನ್ನು ಆವರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಕಥೆ ಕಾದಂಬರಿ ಅಥವಾ ನಾಟಕಗಳಲ್ಲಿ ಸಿಗುವ ಒಂದು ಅನುಭೂತಿ ಸಿನಿಮಾ ನೋಡುವಾಗ ನಮಗೆ ದಕ್ಕುವುದೇ ಇಲ್ಲ. ಸಿನಿಮಾ ನಮ್ಮನ್ನು ಕಾಡಿಸದೇ ಇರುವುದಕ್ಕೆ ನೈಜ ಕಾರಣವೇ ಅದರಲ್ಲಿನ ನೈಜತೆಯ ಅನುಪಸ್ತಿತಿ. ಹೌದು ಎಷ್ಟೋ ಸಾರಿ ಸಿನಿಮಾ ಸತ್ಯದಿಂದ ದೂರ ಅನ್ನಿಸಿ ಬಿಟ್ಟಿರುತ್ತದೆ. ಈಗಿನ ಸಿನಿಮಾಗಳು ಸಾಮಾನ್ಯ ಮನುಷ್ಯನೊಳಗೆ ಕಾಣಸಿಗದ ಅಸಾಧಾರಣ ಶಕ್ತಿಯನ್ನ, ಅಸಾಮಾನ್ಯತೆಗಳನ್ನ, ಅಸಹಜ ಮುಟ್ಟಾಳ ತನವನ್ನ, ಮನುಷ್ಯ ಸಾಮಾನ್ಯನಾಗಿ ಜೀವಿಸಲು ಕೂಡಾ ಬಲು ಕಷ್ಟ ಪಡುವಂತಹ ಚಿತ್ರಣವನ್ನ ಮಾತ್ರ ಕಟ್ಟಿ ಕೊಡುತ್ತಿರುವ ಅಸಹಜ ದೃಶ್ಯಾವಳಿಗಳ ಮಾಧ್ಯಮದಂತೆ ಈಗಿನ  ಹಲವು ಸಿನಿಮಾಗಳು ಅನ್ನಿಸುತ್ತವೆ. ಸಿನಿಮಾ ಎಂದರೆ ಕೇವಲ ನಾಯಕನ ವಿಜ್ರುoಭಣೆ..  ನಾಯಕಿಯ ಅಂದ ಚೆಂದದ ಪ್ರದರ್ಶನ, ಖಳನ ಅಬ್ಬರ ಬೊಬ್ಬಿರಿತಗಳ ನಡುವಿನ ಕಾಲ ಹರಣ ಅನ್ನುವಷ್ಟು ಸಾಧಾರಣ ಚಿಂತನೆಯನ್ನ ಮೂಡಿಸುವಷ್ಟು ಮಟ್ಟಿಗೆ ಸಿನಿಮಾ ಇಂದಿಗೆ ಪ್ರಚಲಿತ.

ಈಗಿನ ಸಿನಿಮಾ ವಸ್ತುಗಳಾದರೂ ಅಂತಹದ್ದೇ.. ಪ್ರೀತಿ ಪ್ರೇಮದ ಸುತ್ತ ಸುತ್ತುತ್ತಾ ಅದಕ್ಕೆ ಪೂರಕವಾದ ಕತೆ ಹೆಣೆದು, ಪ್ರೀತಿ ಗೆದ್ದಾಗ ಅದರ ಶ್ರೇಷ್ಟತೆಯನ್ನ ಸಾರುವಂಥ, ಸೋತಾಗ ಅದನ್ನ ಜರಿದು ಬಾಳುವಂಥ ಸಂದೇಶಗಳನ್ನ ಭಿತ್ತರಿಸುತ್ತಾ ಮನುಷ್ಯನನ್ನು ಭಾವನಾತ್ಮಕವಾಗಿ ಹಿಡಿದಿಡುವ, ಮಚ್ಚು ಕೊಚ್ಚು, ಬಾಂಬು ಬಂದೂಕು ಗಳ ಭರಾಟೆಯಲ್ಲಿ ಮನುಷ್ಯತ್ವವನ್ನು ಮರೆತು ಕೇವಲ ಸೇಡಿಗೆ ತನ್ನಿಡೀ ಜೀವನವನ್ನ ಬದಲಾಯಿಸಿಕೊಂಡು ಕ್ರೌರ್ಯವನ್ನ ಕೈಂಕರಿಸೀಕೊಂಡ ಕಥಾವಸ್ತು ಹಿಂಸಾತ್ಮಕವಾಗಿ ಆಕರ್ಶಿಸಲ್ಪಡುವ, ಯಾವತ್ತು ನೆನೆಸಿಕೊಂಡರೂ ಹೇಕರಿಕೆ ತರಿಸುವಂತೆ ರಾಜಕೀಯದ ಅರಾಜಕತೆಗಳನ್ನ, ವ್ಯವಸ್ಥೆಯಲ್ಲಿನ ನ್ಯೂನತೆಗಳ ಸಾವಿರ ಪಟ್ಟು ವೈಭವೀಕರಣದ ಪ್ರಯೋಗದಂತೆ ಕಾಣುವ, ಸಮಾಜ ವಿರೋಧಿ ಕಥಾನಕಗಳನ್ನ ಕೇಂದ್ರವಾಗಿರಿಸಿಕೊಂಡು ವಿಲಕ್ಷಣ ಮನಸ್ಥಿತಿಯಲ್ಲಿ ಪ್ರೇಕ್ಷಕ ಅದನ್ನ ಆನಂದಿಸುವಂತೆ ಮಾಡುವ ಪ್ರಯತ್ನ ಮಾಡಿ ವೀಕ್ಷಕರುಗಳನ್ನ ಚಿತ್ರಮಂದಿರದ ಕಡೆ ಎಳೆದು  ತರುವಂತಹ ಪ್ರಯತ್ನಗಳೇ ಭಾರತದ ಯಾವುದೇ ಭಾಷೆಯ ಚಲನಚಿತ್ರಗಳಲ್ಲಿ ಬಹುಭಾಗ ಆವರಿಸಿಕೊಂಡಿರುವಂಥದ್ದು. ಇದಕ್ಕೆ ಅಪವಾದ ಎನ್ನುವಂತೆ ಬದುಕಿತ ನೈಜತೆಯನ್ನ, ವ್ಯಕ್ತಿ ಚಿತ್ರಣಗಳನ್ನ ಬಿಂಬಿಸುವಂತಹ ಕಲಾತ್ಮಕ ಚಿತ್ರಗಳು ಕೂಡಾ ವರಸೆಯಲ್ಲಿ ಬಂದು ನಿಲ್ಲುತ್ತವಾದರೂ ಅವುಗಳ ಸಂಖ್ಯೆ ಇಂಥಹ ಕಮರ್ಷಿಯಲ್ ಸಿನಿಮಾಗಳ ಮುಂದೆ ತೀರಾ ಕಮ್ಮಿ. ಅಂಥಹ ಚಿತ್ರಗಳು ಬಂದರೂ ಗೊತ್ತಾಗುವುದಿಲ್ಲ.. ಅಥವಾ ಸಾಮಾನ್ಯ ಜನರು ಅಂತಹ ಚಿತ್ರಗಳನ್ನು ನೋಡುವುದಿಲ್ಲ.. ಸಾಮಾನ್ಯ ಜನರಿಗೆ ಅದನ್ನ ನೋಡಿಸುವ ಪ್ರಯತ್ನ ಆಗುವುದೂ ಇಲ್ಲ. ಕೇವಲ ಪ್ರಶಸ್ತಿ ಪುರಸ್ಕಾರಗಳಿಗೆ ಮಾತ್ರ ಅಂಥಹ ಸಿನಿಮಾಗಳನ್ನ ಮಾಡುತ್ತಾರೆನೋ ಅನ್ನುವಂತಹ ತೀರ್ಮಾನಕ್ಕೆ ಎಂಥಹ ಶ್ರೀ ಸಾಮಾನ್ಯನೂ ಸಾಧಾರಣವಾಗಿ ಯೋಚಿಸಿ ಬಿಡಬಲ್ಲ ಸ್ಥಿತಿ ಅದರದ್ದು. ಇವತ್ತಿನ ಸಿನಿಮಾ ಕೇವಲ ಮನರಂಜನೆಯ ಮಾಧ್ಯಮ ಅಷ್ಟೇ. ಟಾಮ್ ಅಂಡ್ ಜೆರ್ರಿ ನೋಡಿದಷ್ಟೇ ನಿರಾಳ ಮನಸ್ಸಿಂದ ಒಂದು ಸಿನಿಮಾವನ್ನ ನೋಡಿ ಸಮಯ ಕಳೆದು ಬಿಡಬಲ್ಲ ಒಂದು ಸಾಧಾರಣಕಾರ್ಯಕ್ರಮ ಇಂದಿನ ಸಿನಿಮಾ. ಈಗಿನ ಸಿನಿಮಾಗಳ ಮೂಲ ಆಶಯವೂ ಉದ್ದೇಶವೂ ಅದಕ್ಕೆ ಪೂರಕವಾಗಿರೋದು ಕೂಡಾ ಈ ಎಲ್ಲಾ ಪರಿಸ್ಥಿತಿಗೆ ಕಾರಣವೆಂದರೆ ತಪ್ಪಲ್ಲ. ಇವತ್ತಿನ ಸಿನಿಮಾಗಳು ಮನರಂಜನಾ ಉಧ್ಯಮದ ಬಿಕರಿ ವಸ್ತುಗಳಷ್ಟೇ.. ಕಲೆಯ ಮಾಧ್ಯಮವಲ್ಲ.

ಕನ್ನಡವಾಗಲಿ ಅಥವಾ ಯಾವುದೇ ಇನ್ನಿತರ ಭಾರತೀಯ ಭಾಷೆಗಳ ಚಿತ್ರವಾಗಲಿ ನಮ್ಮಲ್ಲಿ ಸಿನಿಮಾ ಮಾಡಲಿಕ್ಕೊಂದು ಅಘೋಷಿತ ಸಿದ್ಧ ಸೂತ್ರವಿದೆ. ಒಂದು ಸಿನಿಮಾ ಎಂದರೆ ಐದು ಹಾಡು, ಅದರಲ್ಲೆರಡು ಡುಯೆಟ್ಟು, ಒಂದು ಶೋಕಗೀತೆ, ಒಂದು ಐಟಂ ಹಾಡು, ಇನ್ನೊಂದು ಎದ್ದು ಕುಣಿವಂತೆ ಉದ್ದೀಪಿಸುವ ಟಪ್ಪಾಂಗುಚ್ಚಿ ಹಾಡು. ನಾಲ್ಕೈದು ಫೈಟು (ಅಗತ್ಯವಿಲ್ಲದ ಕಾರಣಗಳಿಗೂ), ಸಿನಿಮಾ ಕಥೆಗೆ ಸಂಭಂಧವೇ ಪಡದ ಹಾಸ್ಯ ಸನ್ನಿವೇಶಗಳು (ಹೇರಿಕೆ), ನಾಯಕ ನಾಯಕಿ.. ಅದರಲ್ಲೋಬ್ಬರಿಗೆ ಬಡತನ ಅಥವಾ ರೌಡಿಸಂ ನ ಹಿನ್ನಲೆ.. ಅವರಿಬ್ಬರ ನಡುವೆ ಪ್ರೇಮಾಂಕುರ.. ಅವರಿಬ್ಬರ ಕುಟುಂಬಗಳ ನಡುವಿನ ಕಲಹ.. ಕೊನೆಗೆ ವೀರಾವೇಶದಿಂದ ಹೋರಾಡಿ ವಿಲನ್ ನನ್ನು ಸೆದೆಬಡೆದು ಜಯಿಸುವ ಹೀರೋ.. ಇಂಥ ಕಥೆ, ಇದಿಷ್ಟೇ ಸಿದ್ಧ ಸೂತ್ರಗಳನ್ನ ಇಟ್ಟುಕೊಂಡು ಅದೆಷ್ಟು ಸಿನಿಮಾಗಳು ಬಂದಿಲ್ಲ..?? ದೃಶ್ಯಾವಳಿಗಳು ಬೇರೆ ಬೇರೆಯಷ್ಟೇ. ಇಂಥಾ ಸಿನಿಮಾಗಳಿಗೆ ಅದೆಷ್ಟು ಒಗ್ಗಿ ಹೋಗಿಹೆವೆಂದರೆ ಈ ಸಿದ್ಧ ಸೂತ್ರಗಾಳಾಚೆಗಿನ ಪ್ರಯೋಗ ಶೀಲ ಸಿನಿಮಾಗಳನ್ನು ಸುಲಭವಾಗಿ ದಕ್ಕಿಸಿಕೊಳ್ಳಲಾಗದಷ್ಟು. 

ನಮ್ಮಲ್ಲಿ ಇನ್ನೂ ಒಂದು ಪದ್ದತಿಯಿದೆ.. ಹೋಲಿಸುವಿಕೆ.  ಸಿನಿಮಾ ಸಿನಿಮಾಗಳ ನಡುವೆ ತುಲನೆ ಮಾಡುವುದು. ರೀಮೇಕ್ ಸಿನಿಮಾಗಳನ್ನ ಹೊರತುಪಡಿಸಿದ ವಿಚಾರ ಇದು. ಒಂದು ಭಾಷೆಯ ಸಿನಿಮಾದಲ್ಲಿ ಕಾಣಸಿಗುವ ಒಂದು ಸಾಮಾನ್ಯ ವಿಚಾರ ಮತ್ತೊಂದು ಭಾಷೆಯ ಸಿನಿಮಾದಲ್ಲಿ ಕಾಣಸಿಕ್ಕಾಗ ಅವೆರಡನ್ನೂ ಸಮೀಕರಿಸಿ ಮಾತಾಡೋದು. ಅದು ಒಂದಷ್ಟು ದೃಶ್ಯಗಳ ಕುರಿತಾಗಿ ಇರಬಹುದು ಅಥವಾ ಮೇಕಿಂಗ್ ವಿಧಾನದಲ್ಲಿ ಇರಬಹುದು.. ನಿರೂಪಣಾ ವಿಧಾನಕ್ಕಿರಬಹುದು.. ಅಥವಾ ನೇರ ಕಥೆಗೆ ಸಂಭಂಧಪಟ್ಟದ್ದಾಗಿರಬಹುದು. ಅಂಥಹ ಬಹಳಷ್ಟು ಉದಾಹರಣೆಗಳನ್ನ ನಾನು ಕೇಳಿದ್ದೇನೆ ನೋಡಿದ್ದೇನೆ ಕೂಡಾ. ತಮಿಳಿನ ಸೂಪರ್ ಹಿಟ್ ರೋಬೋಟ್ ಸಿನಿಮಾ ಬಂದಾಗ ಕನ್ನಡದ ಹಾಲಿವುಡ್ ಚಿತ್ರದೊಂದಿಗೆ ಕಥಾವಿಚಾರದಲ್ಲಿ ಚರ್ಚೆಗೆ ಬಿದ್ದಿತ್ತು. ಕಮಲ ಹಾಸನ್ ರ ದಶಾವತಾರ ಚಿತ್ರದ ಕಲ್ಪನೆ ತನ್ನದು ಎಂದು ಅದ್ಯಾರೋ ಕೋರ್ಟ್ ಮೆಟ್ಟಿಲೇರಿದ್ದು.. ತೀರಾ ಇತ್ತೀಚಿಗೆ ಬಂದು ತಮಿಳಿನಲ್ಲಿ ಫ್ಯಾಮಿಲಿ ಎಂಟರ್ ಟೈನರ್ ಎಂದು ಹಿಟ್ ಆದ ರಾಜ ರಾಣಿ ಕನ್ನಡದ ಮಿಲನ ಚಿತ್ರದಿಂದ ಪ್ರೇರಿತವಾದುದೆಂದು.. ತಮಿಳಿನ ಘಜಿನಿ ಮತ್ತು ಎಂಗೇಯುಮ್ ಎಪ್ಪೋದುಂ ಚಿತ್ರಗಳು ಬೇರೆ ಬೇರೆ ಇಂಗ್ಲಿಷ್ ಚಿತ್ರವೊಂದರ ಪ್ರೇರಣೆ ಎಂದು.. ಕಳೆದ ವರ್ಷದ ಬಹು ಚರ್ಚಿತ ಹಿಟ್ ಕನ್ನಡ ಚಿತ್ರ ಲೂಸಿಯಾ ಇನ್ಸೆಪ್ಶನ್ ಎನ್ನುವ ಇಂಗ್ಲಿಶ್  ಸಿನಿಮಾದ ನಿರೂಪಣೆಯ ಶೈಲಿಗೆ ಪ್ರೆರಿತವಾಗಿದೆಯೆಂದೂ.. ಇತ್ತೀಚಿನ ಸಲ್ಮಾನ್ ಖಾನ್ ನ ಜೈ ಹೊ ಚಿತ್ರ ತೆಲುಗಿನ ಸ್ಟಾಲಿನ್ ಚಿತ್ರದ ಪ್ರೇರಿತವೆಂದೂ ಹೀಗೆ ಬಹಳಷ್ಟು ಸಿನಿಮಾಗಳ ವಿಚಾರಗಳು, ವಿಡಂಬನೆಗಳನ್ನ ಕಂಡಿದ್ದುಂಟು. ಇವುಗಳೆಲ್ಲದರ ಕುರಿತಾಗಿ ಪೂರ್ಣ ವಿವರಗಳು ಗೊತ್ತಿಲ್ಲವಾದರೂ ಹೀಗೆ ಸಿನಿಮಾಗಳನ್ನ ತುಲನೆ ಮಾಡಿ ವಿಮರ್ಶೆ ಮಾಡಲ್ಪಟ್ಟ ಹಲವಾರು ಭಾಷೆಯ ಹಲವು ಚಿತ್ರಗಳು ಉದಾಹರಣೆಯಾಗಿ ಕಣ್ಣೆದುರಿಗೆ ನಿಲ್ಲುತ್ತವೆ. 

ಉಳಿದವರು ಕಂಡಂತೆ  ಕೂಡಾ ಇಂಥಾ ವಿವಾದಕ್ಕೆ ಹೊರತಾದ ಚಿತ್ರವೇನಲ್ಲ. ಈ ಚಿತ್ರದ ನಿರೂಪಣಾ ಅಂಶಗಳನ್ನ ತಮಿಳಿನ ಕಮಲಾ ಹಾಸನ್ ಅಭಿನಯದ ವೀರುಮಾಂಡಿ ಮತ್ತು ಹಿಂದಿಯ ಯುವ ಚಿತ್ರದ ಜೊತೆಗೆ ತುಲನೆ ಮಾಡಿ ಮಾತಾಡಿದ ಉದಾಹರಣೆಗಳನ್ನ ಈಚೆಗೆ ಫೇಸ್ಬುಕ್ ನಲ್ಲಿ ನೋಡಿದ್ದೇನೆ. ಹಾಗೆ ನೋಡಿದರೆ ಒಂದು ಸಿನಿಮಾ ನಿರ್ದೇಶಕನ ಕಲ್ಪನೆಯಲ್ಲಿ ತಯಾರಾಗುವುದೇ ಹಾಗೆ. ಯಾವುದೋ ಒಂದು ಕಥೆಯ ಅಥವಾ ಸಿನಿಮಾದ ಅಂಶದ ಒಂದು ಹೊಳಹಿನಿಂದ. ಒಂದು ಸಿನಿಮಾ ಮತ್ತೊಂದು ಸಿನಿಮಾಗೆ ಪೂರಕವಲ್ಲದೆ ಜಗತ್ತಿನಲ್ಲಿ ಇಷ್ಟೊಂದು ಸಿನಿಮಾ ಕೃಷಿ ಸಾಧ್ಯವೇ ಆಗುತ್ತಿರಲಿಲ್ಲ. ಇರಬಹುದು.. ಈ ಅಂಶಗಳನ್ನ ಒಳಗೊಂಡಂತ ಸಿನಿಮಾ ಇದಾಗಿರಬಹುದು. ಆದರೆ ಕನ್ನಡದ ಮಟ್ಟಿಗೆ ಒಂದು ಅಪೂರ್ವವಾದ, ಅದ್ಭುತವಾದ ಪ್ರಯತ್ನ ಈ ಸಿನಿಮಾ. ಕನ್ನಡ ಸಿನಿಮಾಗಳಿಂದ ಪ್ರೇರಿತರಾಗಿ ಇತರ ಸಿನಿಮಾಗಳು ತಯಾರಾದ ವಿಷಯ ಅಷ್ಟು ಪ್ರಚಲಿತಕ್ಕೆ ಬಾರದೆ ಹೋದರು, ಬೇರೆ ಭಾಷೆಯ ಸಿನಿಮಾದ ಸಾಮ್ಯತೆಗಳನ್ನ ಒಳಗೊಂಡ ನಮ್ಮ ಸಿನಿಮಾಗಳ ಯಶಸ್ಸಿನ ಕುರಿತಾಗಿ ಭಯಂಕರ ಚರ್ಚೆಯಾಗುವುದು ಕಂಡಾಗ ಬೇಸರ ಅನ್ನಿಸುತ್ತದೆ. 

ಕಳೆದೊಂದು ವರ್ಷದಿಂದ ನಾನು ನೋಡಿರುವ ಹಲವು ಭಾಷೆಯ ಹಲವಾರು ಚಿತ್ರಗಳಲ್ಲಿ ನನಗೆ ಅತಿ ಮೆಚ್ಚಿಗೆಯಾದದ್ದು ನಮ್ಮ ಕನ್ನಡ ಸಿನಿಮಾ ಉಳಿದವರು ಕಂಡಂತೆ. ಈ ಸಿನಿಮಾದಲ್ಲಿ ಅಂಥದ್ದೇನಿದೆ ಅನ್ನುವುದನ್ನ ನಾಲ್ಕು ಸಾಲಿನ ವಿಮರ್ಶೆಯಲ್ಲಿ ನಾವು ತೂಗಿ ಬರೆದುಬಿಡಬಹುದಾದರೂ.. ಸಿನಿಮಾ ನೋಡುವಾಗ ನಮಗೆ ದಕ್ಕುವ ಅನುಭೂತಿ.. ಮನಸೊಳಗೆ ಒಡಮೂಡುವ ಚಿತ್ರಣಗಳು.. ಪಾತ್ರಗಳ ಕುರಿತಾಗಿ ಮೂಡುವ ಭಾವುಕತೆಗಳನ್ನು ಮಾತ್ರ ಎಂಥಾ ನುರಿತ ಕಲೆಗಾರನಿಗೂ ಕಲೆ ಹಾಕುವುದು ಕಷ್ಟ ಸಾಧ್ಯ. ಈ ಸಿನಿಮಾದ ಕುರಿತಾಗಿ ನಾ ಕೇಳಲ್ಪಟ್ಟ ಬಹುದೊಡ್ಡ ಹಿನ್ನಡೆಯ ಅಂಶವೆಂದರೆ ಈ ಸಿನಿಮಾದಲ್ಲಿ ಗಟ್ಟಿ ಕಥೆಯಿಲ್ಲ. ಹೌದು ನಾನಿದನ್ನ ಒಪ್ಪುತ್ತೇನೆ. ಈ ಸಿನಿಮಾದಲ್ಲಿ ಈ ತನಕ ನಾವೆಲ್ಲರೂ ನೋಡಿಕೊಂಡು ಬಂದಂಥ ಇತರೆ ಸಿನಿಮಾಗಳ ಶೈಲಿಯ ಕಥೆಯಿಲ್ಲ. ಈ ಸಿನಿಮಾದ ಪಾತ್ರಗಳಲ್ಲಿ ಸಾಮಾನ್ಯ ಮನುಷ್ಯನ ದೈನಿಕ ಜೀವನದೊಳಗಿರಬಹುದಾದಂಥ ಹಲವಾರು ಚಿತ್ರಣಗಳ ಜ್ವಲಂತ ಕಥೆಗಳಿವೆ. ಮತ್ತು ಆ ಕಥೆ ಸಿನಿಮಾ ಕಥೆಯಾಗಿರದೇ ನಿಜವಾಗಿದ್ದು ವಾಸ್ತವಕ್ಕೆ ಹತ್ತಿರವಾಗುವಂತಿದೆ. ಒಂದು ಸಿನಿಮಾ ಕಥೆಯಾಗುವಲ್ಲಿ ಈ ಸಿನಿಮಾದ ಕಥೆ ವಿಫಲವಾಗಿಹುದೇನೋ ಅಂದುಕೊಂಡರೂ ಅದೇ ಕಾರಣಕ್ಕೆ ಸಿನಿಮಾ ಮತ್ತೆ ಮತ್ತೆ ಆಪ್ತವೆನಿಸುತ್ತದೆ. 

ಈ ಸಿನಿಮಾ ವಿಭಿನ್ನ ಮತ್ತು ವಿಶಿಷ್ಟ ಯಾಕಂದ್ರೆ.. ಈ ಸಿನಿಮಾದ ಕಥೆ ಒಂದು ಮರ ಇದ್ದಂತೆ. ಸಿನಿಮಾದ ಎಲ್ಲಾ ಪಾತ್ರಗಳೂ ಆ ಮರದಿಂದ ಚದುರಿದ ಕಾಂಡಗಳೇ. ಎಲ್ಲಾ ಪಾತ್ರವರ್ಗವೂ ಕಥೆಗೆ ನೇರ ಮತ್ತು ಎಲ್ಲಾ ಪಾತ್ರಗಳಷ್ಟೇ ಶಕ್ತ ಸಂಭಂಧಿತ. ರಿವರ್ಸ್ ಸೀಕ್ವೆಲ್ ತಂತ್ರವನ್ನ ಬಳಸಿ ಸಿನಿಮಾದ ಕಥೆಯನ್ನ ಐದು ಹಂತಗಳಲ್ಲಿ ಬಿಡಿಸಿ ಬಿಡಿಸಿ ಹೇಳುವಂಥ ಪ್ರಯತ್ನ ಇದರಲ್ಲಿ ಆಗಿದೆಯಾದರೂ, ಆ ಐದೂ ಆಯಾಮಗಳನ್ನ ಒಂದಕ್ಕೊಂದು ಪೂರಕವೆಂಬಂತೆ ಬೆಸೆದಂಥ ಪರಿ ಅದ್ಭುತ. ಪ್ರತಿಯೊಂದು ಪಾತ್ರವೂ ಕಥೆಗೆ ಪೂರಕವೂ ಹೌದು, ಪೋಷಕವೂ ಹೌದು. ಇಲ್ಲಿ ಕೇವಲ ನಾಯಕ ಮೆರೆದಾಡುವುದಿಲ್ಲ.. ನಾಯಕನ ಪಾತ್ರದಷ್ಟೇ ಶಕ್ತವಾಗಿ ಇತರ ಪಾತ್ರಗಳೂ ಮೆರೆದಾಡುತ್ತವೆ. ಯಾವ ಪಾತ್ರವೂ ಕಥೆಯ ಹೊರತಾಗಿರದೆ ಯಾವೊಂದು ಅಂಶವೂ ಕಥೆಗೆ ಅಪಭ್ರಂಶ ಅನ್ನಿಸದೆ ಇರೋದು ಸಿನಿಮಾದ ಶುದ್ಧತೆ ಮತ್ತು ಹೆಗ್ಗಳಿಕೆಯ ಅಂಶ. ಎಲ್ಲರ ಬದುಕಿಗೂ ಕೊಂಡಿಯಂತಹ ಒಂದು ಘಟನೆಯನ್ನ & ಆ ಘಟನೆಗೆ ತಳುಕು ಹಾಕಿ ಕೊಂಡಂತೆ ಸಂಭವಿಸುವ ಮೂರು ಸಾವುಗಳನ್ನ ಹೇಗೆ ಉಳಿದ ಪಾತ್ರಗಳು ಸಾಕ್ಷೀಕರಿಸಿದೆ ಅನ್ನೋದು ಈ ಚಿತ್ರದ ಒನ್ ಲೈನ್  ಕಥೆ.

ಈ ಸಿನಿಮಾದಲ್ಲಿ ಅಬ್ಬರಿಸುವ ಹೊಡೆದಾಟಗಳಿಲ್ಲ. ರಿಚಿ ಪಾತ್ರ ಅಬ್ಬರಿಸುತ್ತದಾದರೂ ಅದು ಕಥೆಯ ಒಂದು ಶಕ್ತಿಶಾಲಿ ಭಾಗವೆನಿಸಿ ಸಹ್ಯ ಅನಿಸಿಕೊಳ್ಳುತ್ತದೆ. ಗಂಟಲು ಹರಿವಂತೆ ಬೊಬ್ಬಿರಿಯುವ ಅಥವಾ ಉದಾಸೀನತೆಯ ಪರಮಾವಧಿಯಂತೆ ತೋಚಿದ್ದನ್ನೆಲ್ಲಾ ತತ್ವವಾಗಿ ಹೇಳುವ ನಿರರ್ಥಕ ಸಂಭಾಷಣೆಗಳಿಲ್ಲ. ಮಲ್ಪೆಯ ಸುತ್ತ ಮುತ್ತಲಿನ ಪ್ರಾದೇಶಿಕ ತುಳು, ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ, ಅಲ್ಲಲ್ಲಿ ಸಹಜ ಕನ್ನಡ ಮತ್ತೂ ಕೆಲವೊಂದು ಕಡೆ ಕುಂದಾಪುರ ಕನ್ನಡದಲ್ಲಿ ಕೇಳಲ್ಪಡುವ ಸಂಭಾಷಣೆಗಳು ತೀರಾ ಸಹಜವಾಗಿರುವ ಕಾರಣಕ್ಕೆ ಅಷ್ಟು ಆಪ್ತವೆನಿಸುತ್ತವೆ. ಚಿತ್ರದ ಸಂಗೀತ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಅಪರೂಪದ ಪ್ರಯತ್ನ. ಈ ಚಿತ್ರದ ಹಾಡುಗಳು ಕೂಡಾ ಇತರೆ ಚಿತ್ರಗಳ ಹಾಡುಗಳ ಸಿದ್ಧಸೂತ್ರದ ಪರಿಧಿಯನ್ನ ದಾಟಿ ಯಶಸ್ವಿಯಾದದ್ದು ಮೆಚ್ಚುವ ಅಂಶಗಳಲ್ಲೊಂದು. ಹಾಡುಗಳೂ ಕೂಡಾ ಚಿತ್ರದ ಹೊರತಾಗಿ ಎಲ್ಲೂ ಹೊರ ನಿಂತಂತೆ ಕಾಣುವುದಿಲ್ಲ. ಸಾಹಿತ್ಯ ಕಥೆಗೆ ಪೂರಕವಾಗಿದ್ದು ಎಲ್ಲರಿಗೂ ಮೆಚ್ಚಿಗೆಯಾಗುವ ಅಂಶಗಳಲ್ಲೊಂದು. ಚಿತ್ರದ ಹಾಡುಗಳ ಅಥವಾ ಇತರೆ ದೃಶ್ಯಗಳ ಚಿತ್ರೀಕರಣಕ್ಕೆ ಯಾವುದೇ ಹೊರಾಂಗಣ ಅಥವಾ ವಿದೇಶ ಅಥವಾ ಇತರೆ ಪ್ರವಾಸೀ ತಾಣಗಳನ್ನ ಆಯ್ಕೆ ಮಾಡಿಕೊಳ್ಳದೆ.. ಮಲ್ಪೆಯಸುತ್ತ ಮುತ್ತಣ ಪರಿಸರ ಮತ್ತು ಸಾಗರ ತೀರದ ಜಾಗಗಳನ್ನು ಬಳಸಿರುವುದರಿಂದ ಸಿನಿಮಾಗೆ ಒಂದು ಪ್ರಾದೇಶಿಕ ಸೊಗಡು ಬಲವಾಗಿ ದೊರಕುತ್ತದೆ. ಇಲ್ಲಿ ಖಳರು ಅಸಲಿಗೆ ಕಾಣಿಸುವುದೇ ಇಲ್ಲ. ಇನ್ನು ಅಬ್ಬರಿಸುವುದೆಲ್ಲಿ..?? ರಿಚ್ಚಿ ಅಬ್ಬರಿಸುತ್ತಾನದರೂ.. ಇನ್ನೊಬ್ಬರ ಮೂಗು ಜಜ್ಜುವ ದುರುಳನಾದರೂ ಅವ ದುರುಳ ಅನಿಸುವುದೇ ಇಲ್ಲ. ಅಂಥದ್ದೊಂದು ಮ್ಯಾನರಿಸಂನಿಂದಲೇ ರಿಚಿ ಎಲ್ಲರ ಕಣ್ಮಣಿಯಾಗುತ್ತಾನೆ.

ಈ ಚಿತ್ರದಲ್ಲಿ ಮೆಚ್ಚಿಕೊಳ್ಳುವಂಥ ಸಣ್ಣ ಸಣ್ಣದೆ ಅನ್ನಿಸುವ ವಿಚಾರಗಳು ಬಹಳಷ್ಟಿವೆ. ಚಿತ್ರದಲ್ಲಿ ನಗುವುದಕ್ಕೆ ಬಹಳಷ್ಟು ಅವಕಾಶಗಳಿವೆ. ಆದರೆ ಎಲ್ಲೂ ಹಾಸ್ಯ ನಟರ ಬಳಕೆಯಾಗಿಲ್ಲ. ನಗಿಸುವ ಜವಾಬ್ದಾರಿಯನ್ನ ರಿಚಿ ಮತ್ತು ಡೆಮಾಕ್ರೆಸಿ ಪಾತ್ರಗಳು ಸಮರ್ಥವಾಗಿ ನಿಭಾಯಿಸಿವೆ. ಡೆಮಾಕ್ರೆಸಿ ಎಂಬ ಎಂಟು ಹತ್ತು ವರ್ಷ ವಯಸ್ಸಿನ ಹುಡುಗನ ತುಂಟತನ, ಮುಗ್ಧತೆ, ನೈಜ ಅನ್ನಿಸುವ ಅವನ ಅಭಿನಯ ಎಲ್ಲರ ಮನಸೂರೆಗೊಂಡು ಅವನು ಎಲ್ಲರ ಮುದ್ದಿನ ಕಣ್ಮಣಿ ಆಗಿಬಿಡುವಂತೆ ಮಾಡಿದೆ. ಯಕ್ಷಗಾನ ಹುಲಿವೇಶದ ಕುಣಿತದ ದೃಶ್ಯಗಳು ಸಿನಿಮಾ ಎಂಬ ಚೌಕಟ್ಟಿನಿಂದ ಹೊರಗಿನದ್ದು ಎನ್ನುವಂತೆ ಭಾಸವಾಗಿ ಜೀವಂತಿಕೆ ಮೆರೆಯುತ್ತವೆ. ನಾವೇ ಎದ್ದು ಕುಣಿಯ ಬೇಕೆನಿಸುವಷ್ಟು ಉದ್ದೀಪಿಸುತ್ತದೆ ಹುಲಿ ವೇಷದ ಕುಣಿತ. ಚಿತ್ರದಲ್ಲಿ ಪ್ರದರ್ಶಿಸದ, ಪ್ರಕಟಿಸದ ಆಯಾಮಗಳ ಎರಡು ಅಮೂರ್ತ ಪ್ರೇಮಕಥೆಯಿದೆ. ಬೋಟ್ ರಿಪೇರಿ ಮಾಡುವ ಮುನ್ನ ಮತ್ತು ಮೀನು ಮಾರುವ ಶಾರದ ನಡುವಿನ ಅವ್ಯಕ್ತ, ಮೂಕ ಭಾವಗಳ ಮಧುರ ಪ್ರೇಮ ನಮ್ಮನ್ನು ಕಾಡಿಸುತ್ತದೆ. ಅವರು ಕೈ ಹಿಡಿದು ಮರ ಸುತ್ತುವುದಿಲ್ಲ.. ಅಪ್ಪಿ ಮುದ್ದಾಡುವುದಿಲ್ಲ.. ಡಾನ್ಸ್ ಮಾಡುವುದಿಲ್ಲ. ಇದೆಲ್ಲದರ ಹೊರತಾಗಿಯೂ ಅವರಿಬ್ಬರ ಪ್ರೇಮದ ಮಧುರ ಭಾವನೆಗಳು ಎಲ್ಲರ ಎದೆಯೊಳಗಿಳಿದು ಒಂದು ಮಧುರ ಅನುಭೂತಿಯನ್ನು ಅನುಭವಿಸುವಂತೆ ಮಾಡುತ್ತವೆ. ಉರಿವ ರಿಚಿ ಮತ್ತು ಸಹನಶೀಲ ಪತ್ರಕರ್ತೆ ರೆಜಿನ ನಡುವಿನ ಕಾಲೆಳೆದಾಟದ ಪ್ರಸಂಗಗಳು ಮುದ ನೀಡುವಂಥವು. ಅವನ ಚಿಕ್ಕಂದಿನ ಫೋಟೊವನ್ನ ಇವನಿಗೆ ಕೊಡದೆ ಸತಾಯಿಸುವ ಅವಳು.. ಅದಕ್ಕಾಗಿ ಅವಳ ಬೆನ್ನು ಬಿದ್ದು ಸತಾಯಿಸುವ ಇವನು.. ಇಬ್ಬರ ಕೋಳಿ ಜಗಳದಲ್ಲಿ ಎಂದೂ ಪ್ರಕಟವಾಗದ ಒಂದು ಅದೃಶ್ಯ ಪ್ರೇಮದ ಮೊಳಕೆ ಕುಡಿಯೊಡೆವ ಮೊದಲೇ ಒಂದು ಅಂತ್ಯಕ್ಕೆ ಬಂದು ಬಿಡುವ ಪ್ರಸಂಗ ನೋವು ತರಿಸುತ್ತದೆ. ಚಿಕ್ಕಂದಿನಿಂದಲ್ಲೇ ಮನಸಲ್ಲಿ ನೆಲೆ ನಿಂತ ನೋವೊಂದು ಅದೆಷ್ಟು ಕಾಲವಾದರು ಮಾಯದೆ ಕಡೆಗೆ ನಡು ಪ್ರಾಯದ ವಯಸ್ಸಿನಲ್ಲಿ ಅದರ ಕುರಿತಾಗಿ ಸೇಡು ತೀರಿಸಿಕೊಂಡು ಸಮಾಧಾನ ಪಟ್ಟುಕೊಳ್ಳುವ ಮನುಷ್ಯನ ತಣ್ಣಗಿನ ರಕ್ತದೊಳಗಿನ ಕ್ರೌರ್ಯ ನಮ್ಮನ್ನ ಆಶ್ಚರ್ಯ ಪಡುವಂತೆ ಮಾಡಿ ಎಚ್ಚರಿಸುತ್ತದೆ.

ಅಭಿನಯದ ವಿಚಾರಕ್ಕೆ ಬಂದರೆ ಯಾರಿಗೂ ಕೊರೆ ಹೇಳುವ ಹಾಗೆ ಇಲ್ಲ. ರಿಚಿಯಾಗಿ ರಕ್ಷಿತ್ ಶೆಟ್ಟಿ ನಿಜಕ್ಕೂ ವಿಸ್ಮಯ. ಅವನು ಒರಟನಾದರೂ ಒರಟನಲ್ಲ, ದುರುಳನಾದರೂ ದುರುಳನಲ್ಲ. ಕ್ಯೂಬನ್ ಕಿಡ್ ಮತ್ತು ಮಾಂಡ್ವ ಹುಡುಗನ ಕಥೆ ಹೇಳುವಾಗಿನ ಅವರ ಮ್ಯಾನರಿಸಂ ನಿಜಕ್ಕೂ ಆ ಕಥೆಯಂತೆಯೇ ಬಹಳ ಕಾಲ ನೆನಪಿನಲ್ಲಿ ಉಳಿಯುವಂಥದ್ದು. ಮಂಡ್ಯ ಹೈದನಾಗಿ, ಶಾರದೆಯ ಒಂದು ಮುದ್ದು ನಗುವಿಗೆ ಮಾರು ಹೋಗಿ ಮೈ ಮರೆಯುವ, ಅಣ್ಣನಿಗೊದಗಿದ ಪರಿಸ್ಥಿತಿಯ ಕಂಡು ದುಃಖಿಸುವ ಅವಳ ನೋವಿಗೆ ಪರಿಹಾರವೆಂಬಂತೆ ಅದಕ್ಕೆ ಕಾರಣನಾದವನನ್ನು ಕೊಲ್ಲುವಷ್ಟು ಪ್ರೀತಿಸುವ ಮುಗ್ಧನಾಗಿ ಕಿಶೋರ್ ಅಭಿನಯ ಸೂಪರ್. ಟೀವಿ ೯ ರ ವಾರ್ತಾ ನಿರೂಪಕಿಯಾಗಿದ್ದ ಕಾಲದಿಂದಲೂ ನಾನು ಶೀತಲ್ ಅಭಿಮಾನಿ. ಇಲ್ಲವರ ಸಹಜ ಅಭಿನಯಕ್ಕೆ ಸಲ್ಯೂಟ್. ಅಷ್ಟು ಕ್ಯೂಟ್ ಕ್ಯೂಟ್ ಶೀತಲ್ ಒಂದೆರಡು ದೃಶ್ಯಗಳ ಹೊರತಾಗಿ ಇಡೀ ಚಿತ್ರದಲ್ಲಿ ಮತ್ತೆಲ್ಲೂ ನಗದೆ ಇರಲಾಗದಿದ್ದುದಕೆ ಖಂಡಿತ ಬೇಸರವಿದೆ. ಸಿಕ್ಕ ಸಣ್ಣ ಪಾತ್ರದಲ್ಲೇ ಯಜ್ಞಾ ಶೆಟ್ಟಿ ಆವರಿಸಿಕೊಳ್ಳುತ್ತಾರೆ . ರಘು ಪಾತ್ರಧಾರಿ ರಿಶಬ್ ಶೆಟ್ಟಿ ಯ ಅಭಿನಯ ಕೂಡಾ ಮೆಚ್ಚುವಂಥದ್ದು. ಆತಂಕದ ಕ್ಷಣಗಳ ಮುಖಭಾವಗಳಲ್ಲಿ ಅವರ ಅಭಿನಯ ಸಹಜವೆಂಬಂತೆ ತೋರುತ್ತದೆ. ಅಚ್ಯತರಾವ್ ಈ ಚಿತ್ರದ ಮತ್ತೊಂದು ಅದ್ಭುತ. ಸಾಗರದಾಳದಲ್ಲಿ ಸಿಕ್ಕ ವಸ್ತುವಿನ ಮೇಲೆ ಕುತೂಹಲ ತೋರುವ  & ಕಾಗೆಯ ಕಾಟಕ್ಕೆ ಬೇಸತ್ತ ನಟನೆಯಲ್ಲಿ ಅಚ್ಯುತರಾವ್ ನಿಜವಾಗಿಯೂ ಬೆರಗು ಮೂಡಿಸುತ್ತಾರೆ. ಈಗ ಚಿತ್ರದಲ್ಲಿ ಸುದೀಪ್ ನೊಣದ ಕುರಿತಾಗಿ ಮೂಡಿಸಿದಷ್ಟೇ ಬೆರಗು ಇಲ್ಲಿ ಅವರದು ಕೂಡಾ. ತಾಯಿಯಾಗಿ ತಾರಾ ಅವರ ನಟನೆ ನಿಜಕ್ಕೂ ಮಿನುಗುವಂಥ ತಾರೆಯ ಹೊಳಪಿನಂಥಹದ್ದು. ಬಹಳ ವರ್ಷಗಳ ನಂತರ ಮಗನನ್ನು ಕಂಡ ಸಂತಸವನ್ನ ವ್ಯಕ್ತಪಡಿಸುವ ಅವರ ಭಾವಗಳು ಮಾತ್ರ ಎಂಥವರ ಕಣ್ಣoಚಲ್ಲೂ ಸಣ್ಣ ಪಸೆಯನ್ನು ಮೂಡಿಸುವಷ್ಟು ಮಂತ್ರಮುಗ್ಧರನ್ನಾಗಿಸುತ್ತದೆ. ಕಚಗುಳಿ ಇಡುವಂತೆ ನಟಿಸಿರುವ ಡೆಮಾಕ್ರೆಸಿ ಒಂದು ಅದ್ಭುತ ಶೋಧ. ಪೇಪರ್ ಪೇಪರ್ ಮೆಣಸಿನ ಪೇಪರ್ ಹಾಡಿನಷ್ಟೇ ಆಕರ್ಷಕ ಆ ಪುಟ್ಟ ಮಕ್ಕಳ ಅಭಿನಯ ಆ ಹಾಡಿನಲ್ಲಿ. ಅವನನ್ನು ಮೆಚ್ಚದೆ ಇರಲು ಸಾಧ್ಯವೇ ಇಲ್ಲ. 

ತಾಂತಿಕ ವರ್ಗದವರ ಎಲ್ಲರ ಶ್ರಮ ಅಭಿನಂದನೀಯ. ನೆರಳು ಬೆಳಕು, ಬಿಸಿಲು ಮಳೆ, ಎಲ್ಲ ದೃಶ್ಯಗಳಲ್ಲೂ ಸಿನಿಮಾ ಪರ್ಫೆಕ್ಟ್. ನಿರ್ದೇಶಕನಾಗಿ ರಕ್ಷಿತ್ ಮತ್ತೊಂದು ವಿಸ್ಮಯ. ಕೇವಲ ಎರಡು ಸಿನಿಮಾ ಮಾಡಿದ ಹುಡುಗನಲ್ಲಿ ಇಂಥದ್ದೊಂದು ಪರಿಕಲ್ಪನೆ ಮೂಡಲು ಸಾಧ್ಯವ..?? ಆ ಪರಿಕಲ್ಪನೆಯನ್ನು ಇಷ್ಟು ಶಕ್ತವಾಗಿ, ಅದ್ಭುತವಾಗಿ ತೆರೆಯ ಮೇಲೆ ತರಲು ಆ ನವ ನಟನಿಗೆ, ನಿರ್ದೇಶಕನಿಗೆ ಸಾಧ್ಯವಾ..? ಈ ಪ್ರಶ್ನೆಗಳಿಗೆ ನೇರ ಉತ್ತರ ರಕ್ಷಿತ್. ಕನ್ನಡ ಚಿತ್ರ ರಂಗದ ಒಬ್ಬ ಅಪರೂಪದ ಕಲಾವಿದ, ತಂತ್ರಜ್ಞ, ಮತ್ತು ನಿರ್ದೇಶಕನಾಗುವ ಛಾಪು ಅವರಲ್ಲಿ ಕಾಣಲು ಸಾಧ್ಯ. ಹೀ ಇಸ್ ಜಸ್ಟ್ ಬ್ರಿಲಿಯಂಟ್. ಈ ಸಿನಿಮಾದ ಮೂಲಕ ರಕ್ಷಿತ್ ತಮ್ಮ ಹೆಗಲ ಮೇಲೆ ಅಪಾರ ಭರವಸೆಗಳ ದೊಡ್ಡ ನೊಗವಿರಿಸಿಕೊಂಡದ್ದು ನಿಜ. ಸಂಗೀತ ಮತ್ತೆ ಮತ್ತೆ ಮೆಲುಕು ಹಾಕುವಷ್ಟು ಮಧುರ. ಪ್ರತೀ ಸಾರಿ ಕೇಳಿದಾಗಲೂ ಹಾಯೆನಿಸುವಷ್ಟು ಆಹ್ಲಾದಕರ. ಮಲ್ಪೆಯೆಂಬ ಚಿಕ್ಕ ಪ್ರದೇಶದ ಸುತ್ತುವರಿದು ಅದ್ಭುತ ಬ್ರಹ್ಮಾಂಡವನ್ನೇ ತೆರೆದಿಟ್ಟ ಛಾಯಾಗ್ರಹಣ ಮನೋಹರ. ಹಿನ್ನಲೆ ಸಂಗೀತದ ಅಬ್ಬರಕೆ ಅಲ್ಲಲ್ಲಿ ಸಂಭಾಷಣೆಗಳು ಕೇಳಿಸದಿದ್ದರೂ ಹಿನ್ನಲೆ ಸಂಗೀತ ಪರಿಣಾಮಕಾರಿ ಎನಿಸಿ ಕಥೆಗೆ ಪೂರಕ ಅನಿಸಿಕೊಳ್ಳುತ್ತದೆ. ಧ್ವನಿಗ್ರಹಣದಲ್ಲಿ ಒಂಚೂರು ಕೆಲಸ ಮಾಡಿದ್ದರೆ ಒಳ್ಳೆಯದಿತ್ತೇನೋ. 

ಕನ್ನಡ ಚಿತ್ರರಂಗದ ಇತ್ತೀಚಿನ ಕೆಲ ಚಿತ್ರಗಳು ಇಡೀ ಭಾರತವನ್ನೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದು ನಿಜ. ಒಲವೆ ಮಂದಾರ, ಟೋನಿ, ದ್ಯಾವ್ರೆ, ಲೂಸಿಯಾ, ಎದೆಗಾರಿಕೆ, ವಿಕ್ಟರಿ, ಉಗ್ರಂ ನಂಥ ಚಿತ್ರಗಳು ತಾಂತ್ರಿಕವಾಗಿ ಉತ್ತಮವಾಗಿದ್ದು ಕನ್ನಡಕ್ಕೊಂದು ಮೆರುಗು ತಂದುಕೊಟ್ಟದ್ದು ಸುಳ್ಳಲ್ಲ. ಕನ್ನಡ ಸಿನಿಮಾಗಳ ಗುಣಮಟ್ಟಕ್ಕೆ ಯಶಸ್ವಿ ಉದಾಹರಣೆಗಳಾಗಿ ಈ ಚಿತ್ರಗಳು ನಿಲ್ಲುತ್ತವೆ. ಆ ಸಾಲಿಗೆ ಉಳಿದವರು ಕಂಡಂತೆ ಕೂಡಾ ಸೇರ್ಪಡೆಯಾಗುತ್ತದೆ. ಇಡೀ ಭಾರತ ಈ ಒಂದು ಕನ್ನಡ ಸಿನಿಮಾದೆಡೆಗೆ ತಿರುಗಿ ನೋಡುವಂತೆ ಮಾಡಿದ ಛಾತಿಯುಳ್ಳ ಈ ಸಿನಿಮಾವನ್ನ ಕನ್ನಡಿಗರೆಲ್ಲರೂ ಸಾಕ್ಷೀಕರಿಸಬೇಕ್ಕಾದ್ದು ನಮ್ಮ ಕರ್ತವ್ಯವೂ ಹೌದು. ಈ ಹಿಂದೆ ಕನ್ನಡ ಚಿತ್ರಗಳ ಕುರಿತಾಗಿ ನನ್ನ ಇತರ ಭಾಷೆಯ ಸ್ನೇಹಿತರ ವಲಯದಲ್ಲಿ ಅಪಹಾಸ್ಯಕ್ಕೆ ಈಡಾಗಿದ್ದ ನಾ.. ಈಗ ಈ ಕೆಲ ಚಿತ್ರಗಳ ಕುರಿತಾಗಿ ಎದೆ ನಿಮಿರಿ ಮಾತನಾಡಬಲ್ಲೆ. ಇತರೆ ನೆಲೆಗಳಲ್ಲಿ ಕನ್ನಡ ಚಿತ್ರಗಳ ಕುರಿತಾಗಿ ಅಲ್ಲಲ್ಲಿ ಅಭಿನಂದನೀಯ ಮಾತುಗಳನ್ನು ಕೇಳುವಾಗ ನಿಜಕ್ಕೂ ಅದೆಷ್ಟು ಖುಷಿ ಅನ್ನಿಸುತ್ತದೆ. 

Tuesday, 25 March 2014

ಸಖಾರಾಮ್ ಬೈಂಡರ್..

ನಮ್ಮೂರು ಭದ್ರಾವತಿ ಮಲೆನಾಡಿನ ಭಾಗವಾದರೂ ಪೂರ್ತಿ ಮಲೆನಾಡು ಅನಿಸಿ ಕೊಳ್ಳೋದೇ ಇಲ್ಲ. ನಮ್ಮೂರಿನ ಸುತ್ತ ಕಾಡಿದೆ, ಮೇಡಿದೆ, ಬೆಟ್ಟ ಗುಡ್ಡ ಗಳಿದೆ.. ಆರು ತಿಂಗಳು ಮೈತುಂಬಿ.. ಇನ್ನಾರು ತಿಂಗಳು ಸ್ವಲ್ಪ ಬಡಕಲಾದರೂ ಸಾವಕಾಶವಾಗಿ ಹರಿವ ಭದ್ರಾ ನದಿ ಇದೆ.. ಕಣ್ಣು ತಂಪಾಗಿಸಿ ಹಾಯ್ ಅನಿಸುವಷ್ಟು ಅಳತೆಗೆ ತೆಂಗು & ಅಡಿಕೆ ತೋಟಗಳಿವೆ. ಬೇಕಾದಷ್ಟು ಭತ್ತ ಕಬ್ಬು ರಾಗಿ.. ಸ್ವಲ್ಪ ಮಟ್ಟಿಗೆ ಜೋಳ ಎಲ್ಲವೂ ಬೆಳೆಯಲ್ಪಡ್ತವೆ. ರಾಷ್ಟ್ರೀಯ ಮಟ್ಟಕ್ಕೆ ಹೆಸರು ಮಾಡಿರೋ, ವಿಶ್ವೆಶ್ವರಾಯರ ಹೆಸರನ್ನ ಎದೆ ನಿಮಿರಿಸಿ ಹೇಳೋ ಎರಡು ದೊಡ್ಡ ಕಾರ್ಖಾನೆಗಳಿವೆ. ಶಿವಮೊಗ್ಗ ಭಧ್ರಾವತಿಗೆ ನಡುವೆ ಒಂದಿಷ್ಟು ಪ್ರಮಾಣದ ಕೈಗಾರಿಕಾ ಕ್ರಾಂತಿಯೂ ಆಗ್ತಾ ಇದೆ. ಇಂತಿಪ್ಪ ನಮ್ಮ ಊರಿಗೆ ಸುತ್ತ ಮುತ್ತಲ ಜಿಲ್ಲೆಗೆ ಹೋಲಿಸಿದರೆ ಸ್ವಲ್ಪ ವಲಸಿಗರು ಜಾಸ್ತಿಯೇ.

ಭದ್ರಾವತಿಯಿಂದ ಎರಡು ಕಿಲೋ ಮೀಟರ್ ಗೆ ನನ್ನ ಹುಟ್ಟೂರು ಗೌರಾಪುರ. ಬ್ರಾಹ್ಮಣ, ಲಿಂಗಾಯತ, ದೇವಾಂಗ, ಗೌಡ, ಗಾಣಿಗ, ಮೇಧ, ಶೆಟ್ಟಿ, ಮಾದಿಗ, ಲಂಬಾಣಿ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ನಾ ಹುಟ್ಟುವ ಮೊದಲಿಂದ ಇದ್ದರೂ ಇನ್ನೂ ಕನ್ನಡ ಕಲಿಯದಂಥ ತಮಿಳರು.. ಕನ್ನಡ ಬಲ್ಲ ಮಲಯಾಳಿ.. ಉರ್ದು ಇದಿಷ್ಟೂ ವಿವಿಧತೆಯಲ್ಲಿ ಏಕತೆಯನ್ನ ನೂರೈವತ್ತು ಮನೆಗಳ ನನ್ನ ಹುಟ್ಟೂರಿನಲ್ಲಿ ಕಾಣಲಿಕ್ಕೆ ಸಾಧ್ಯ.

ಭದ್ರಾವತಿ ತಾಲೂಕು ಕಬ್ಬಿಣದಂತೆಯೇ ಕಬ್ಬಿಗೂ ಸ್ವಲ್ಪ ಹೆಸರು ಹೊಂದಿರುವಂಥದ್ದು. ಸಕ್ಕರೆಯನ್ನ ತಯಾರಿಸುವ ಒಂದು ದೊಡ್ಡ ಕಂಪನಿ ಮತ್ತು ಹದವಾದ ಬೆಲ್ಲ ತಯಾರಿಸುವ ಸಾಕಷ್ಟು ಆಲೆಮನೆಗಳು ಭದ್ರಾವತಿಯಲ್ಲಿ ಕಾಣಸಿಗುತ್ತವೆ. ಈ ಕಬ್ಬು ಕಡಿಯಲು, ಆಲೆಮನೆಯ ಕೆಲಸ ಮಾಡಲು ಮತ್ತು ಇತರ ಕೈಗಾರಿಕೆ ಕೆಲಸಕ್ಕಾಗಿ ನಮ್ಮೂರುಗಳ ಕಡೆ ಸುತ್ತ ಮುತ್ತಲ ಜಿಲ್ಲೆಯ ವಲಸಿಗರು ಜಾಸ್ತಿ. ಬಂದ ವಲಸಿಗರೆಲ್ಲ ಮನೆ ಮಟ ಮಾಡಿಕೊಂಡು ಸಂಸಾರ ಸಮೇತ ಬೇರು ಬಿಟ್ಟು ಶಾಶ್ವತವಾಗಿ ಸ್ಥಾಪಿತರಾಗಿದ್ದೂ ಇದೆ. 

ಹೀಗೆ ಬಂದ ವಲಸಿಗರಲ್ಲಿ ಹೆಚ್ಚಿನವರು ಚೆನ್ನಗಿರಿ, ದಾವಣಗೆರೆ, ಹರಪ್ಪನಹಳ್ಳಿ ಮತ್ತು ರಾಣಿ ಬೆನ್ನೂರಿನ ಕಡೆಯವರು. ಊರಿನ ಜನಸಂಖ್ಯೆಯ ಅರ್ಧ ಪಾಲಿಗಿನ್ಥಲೂ ಹೆಚ್ಚಿನ ಜನ ಈಗ ಇವರುಗಳ ಲೆಕ್ಖವೆ. ಹೀಗೆ ವಲಸೆ ಬಂದವರ ಜೊತೆ ಅವರ ಭಾಷೆಯೂ ವಲಸೆ ಬಂದಿದ್ದು ಸಹಜ. ನಾವೂ ಅದನ್ನ ಕೇಳಿ ಕಲಿತು ಬೆಳೆದದ್ದು ಸಹಜ. ಗಂಡಸರು ಕುಡಿದು ಬೈದಾಡಿ ಕೊಳುವಾಗ.. ಮನೆಗೆ ಬಂದು ಹೆಂಡತಿಯನ್ನ ಹೊಡೆಯುವಾಗ.. ಅಕ್ಕ ಪಕ್ಕದ ಮನೆಯವರುಗಳ ಜೊತೆ ಜಗಳ ಆಡುವಾಗ, ನೀರಿಗೆ, ಸೀಮೆ ಎಣ್ಣೆಗೆ, ನ್ಯಾಯಬೆಲೆ ಅಂಗಡಿಗೆ ಸಾಲುಗಟ್ಟಿ ನಿಂತ ಹೆಂಗಸರು ಸಣ್ಣ ಸಣ್ಣ ಜಗಳಗಳಲ್ಲೂ ಬರುವ ಬೈಗುಳಗಳನ್ನ ಸಹಜವೆಂಬಂತೆ ಕೇಳಿ ಸಹಿಸಿಕೊಂಡಿದ್ದೇವೆ. 

ಮೊನ್ನೆ ಸಖಾರಾಮ್ ನಾಟಕ ನೋಡುವಾಗ ಹಾಗೆ ಬೈದು ಜಗಳಾಡಿ ಕೊಳ್ಳುವ ಅಷ್ಟೂ ಜನ ಕಣ್ಮುಂದೆ ಸುಳಿದು ಹೋದರು. ಒಂದು ಭಾಷೆಯ ಸೊಗಡಿಗೆ ಇರೋ ಶಕ್ತಿ ಅಂಥದ್ದು. ನಾವು ಅವಾಚ್ಯ, ಅಸಹ್ಯ ಅಂತ ಕರಿಯಲ್ಪಡೋ ಎಷ್ಟೋ ಬೈಗುಳ ಪದಗಳು ಊರಿನ ಜನರ ಅಥವಾ ಒಂದು ಸೀಮೆಯ ಜನರ ನಾಲಿಗೆಗಳಲ್ಲಿ ಸಾಮಾನ್ಯ ಭಾಷೆಯಷ್ಟೇ. ಕೆಟ್ಟದ್ದು ನಾವು ಕೇಳಿ ಕಂಡುಕೊಳ್ಳೋದರಲ್ಲಿ ಇರತ್ತೆ. ಕೋಪದಲ್ಲಿ ಹೇಳಿ ಬಿಡೋ ಅವರಿಗೆ ಇದ್ಯಾವುದೂ ಅವರಿಗೆ ನೆನಪಾಗುವುದೇ ಇಲ್ಲ.  ಸಂಧರ್ಭ ಸೂಚಕವಾಗಿ ಬಳಕೆಯಾಗುವ ಆ ಪದಗಳು ಎಜುಕೇಟೆಡ್ ವರ್ಗಕ್ಕೋ.. ಸಾಹಿತ್ಯ ಪ್ರೀತಿಯನ್ನ ಹೊಂದಿರುವಂಥವರಿಗೋ ಅಥವಾ ಭಾಷೆಯ ಪ್ರತೀ ಹುಳುಕುಗಳನ್ನ ಇಡಿಯಾಗಿ ಅವಲೋಕಿಸೋ ವಿದ್ವಾಂಸರಿಗಷ್ಟೇ ಅಪ್ರಿಯ. ಇನ್ನು ಜಗತ್ತಿನ ಮುಂದೆ ಶುದ್ಧ ಭಾಷಿಕನಾಗಿ, ತನ್ನ ವೈಯುಕ್ತಿಕ ವಲಯದಲ್ಲಿ ಹೀಗೆ ಅವಾಚ್ಯ ಭಾಷೆಯನ್ನ ಬಳಸಲ್ಪಡೋ, ಅದರಿಂದ ವಿಕೃತ ಸಂತೋಷವನ್ನು ಹೊಂದುವ ಅದೆಷ್ಟು ವ್ಯಕ್ತಿತ್ವಗಳನ್ನ ಕೂಡಾ ನಾನು ಖುದ್ದು ನೋಡಿಲ್ಲ. ಸಖಾರಾಮ್ ಬೈಂಡರ್ ನಾಟಕದ ಸಖಾರಾಮ್, ಲಕ್ಷ್ಮಿ ಮತ್ತು ಚಂಪಾ ಪಾತ್ರಗಳು ಕೂಡಾ ಹೀಗೆ ಒಂದು ಪ್ರಾದೇಶಿಕ ಸೀಮೆಯ ದೈನಿಕ ಭಾಷೆಯನಾಡುವ ಪ್ರತಿನಿಧಿಗಳಂತೆ ಕಂಡರೆ ಹೊರತು ನಾಟಕದಲ್ಲಿ ಭಾಷೆಯನ್ನ ತಮ್ಮಿಚ್ಚೆಗೆ ಬಳಸಿಕೊಂಡಂತೆ ತೋರಲಿಲ್ಲ. 

ಸಖಾರಾಮ್ ನಾಟಕದ ವಿವಾದ ಶುರುವಾಗಿ ಅದು ಬಹಿಷ್ಕರಿಸಲ್ಪಟ್ಟದ್ದು 1974 ರಲ್ಲಿ. ಮರಾಠಿಯ ವಿಜಯ್ ತೆಂಡೂಲ್ಕರ್ ರವರ ಈ ನಾಟಕ ಕೃತಿಯನ್ನ ರಂಗ ರೂಪಕ್ಕೆ ತಂದವರು ಕಮಲಾಕರ್ ಸಾರಂಗ್. 1972 ರಲ್ಲಿ ಈ ನಾಟಕ ರಚಿಸಲ್ಪಟ್ಟಿದೆ. ಈ ನಾಟಕದ ವಿವಾದಾತ್ಮಕ ಅಂಶ ಬಹುಶಃ ಕಥೆಯಲ್ಲಲ್ಲದೆ ರಂಗದ ಮೇಲೆ ತಂದ ರೂಪಕದಲ್ಲಿ ಕಾಣಿಸಿರಬಹುದು. ಹೆಣ್ಣಿಗೆ ಕೊಡುವ ಹಿಂಸೆ, ಅವಳ ಮೇಲೆ ಬಳಸಲ್ಪಡುವ ಭಾಷೆ, ಅವಳ ಮೇಲೆಸಗುವ ದೌರ್ಜನ್ಯ ಇವೆಲ್ಲದರ ಎಲ್ಲೇ ಮೀರಿ ನಿಂತದ್ದರಿಂದ ಅಂಥಹ ಒಂದು ಬಹಿಷ್ಕಾರವನ್ನ ವಿಧಿಸಲಾಗಿದ್ದು ನ್ಯಾಯವೇ ಅನಿಸಬಹುದು. ಕಥೆಯನ್ನ ನಾಟಕಕ್ಕೆ ಯಥಾವತ್ ಬಳಸಿಕೊಂಡಿರೋದರಿಂದ ಕಥೆಗೆ ಪೂರಕವಾಗಿ ಭಾಷೆಯನ್ನ ಮತ್ತು ಸಂಭಾಷಣೆಯನ್ನ ಹೆಣೆಯಲ್ಪಟ್ಟಿದೆ. ಅದೇ ಕಥೆ ಒರಟು ಭಾಷೆ, ಒರಟು ಪಾತ್ರಗಳ ಮೂಲಕವೇ ಮರಾಠಿ, ಹಿಂದಿ ಯಲ್ಲಿ ಹಲವಾರು ಯಶಸ್ವಿ ಪ್ರದರ್ಶನಗಳನ್ನ ಕಂಡಿರೋ ಈ ನಾಟಕ ಕನ್ನಡಕ್ಕೂ ಅದೇ ವರ್ಚಸ್ಸಿನೊಂದಿಗೆ ಬಂದದ್ದು ಸ್ವಾಗತಾರ್ಹ ಮತ್ತು ಅಭಿನಂದನೀಯ. ಈಗಿನ ಹಲವು ಧಾರಾವಾಹಿಗಳಲ್ಲಿ ಕಾಣುವಂಥ ಸಾಹಿತ್ಯಿಕ ಅನಿಸುವಂತ ಕನ್ನಡ ಅಥವಾ ಸಾಧಾರಣ ಕನ್ನಡ ಭಾಷೆಯ ಬಳಕೆ ಆಗಿದ್ದಿದ್ದರೆ.. ಬಹುಶಃ ಈ ರೀತಿಯ ಭಾಷಾ ಬಳಕೆ ಇರದಿದ್ದರೆ ನಾಟಕ ಅಷ್ಟು ಪರಿಣಾಮಕಾರಿಯಾಗಿ ಕಾಣಿಸುತ್ತಿರಲಿಲ್ಲವೋ ಏನೋ..??

ಕಥಾ ನಾಯಕ ಸಖಾರಾಮ್, ಬೈಂಡರ್ ಕೆಲಸ ಮಾಡುವ ಒಬ್ಬ ಸಾಮಾನ್ಯ ಪ್ರಜೆ. ಸಖಾರಾಮ್ ನ ವಿಚಾರಧಾರೆಗಳನ್ನ ಕಂಡಾಗ ಆತ ಉಪೇಂದ್ರ ಸಿನಿಮಾದ ಉಪೇಂದ್ರನ ಪಾತ್ರಧಾರಿಯಂತೆ ಭಾಸವಾಗುತ್ತಾನೆ.  ಸಮಾಜದ ಕಟ್ಟುಪಾಡುಗಳನ್ನ ಪಾಲಿಸದೆ ತನ್ನಿಷ್ಟದಂತೆ ತನಗೆ ಬೇಕಾಂದಂತೆ ಬದುಕುವ ಸ್ವತಂತ್ರ ಜೀವಿ. ಲೋಕದ ಯಾವ ಕೊಂಕು ನುಡಿಗಳೂ ಅವನನ್ನು ಬಾಧಿಸಲಾರವು ಅವನ ಬದುಕು ಅವನ ಪಾಲಿಗಷ್ಟೇ.. ಅವನು ಬದುಕುವ ಬದುಕು ಅವನದಷ್ಟೇ. ಅವನ ಬದುಕಿನೊಳಗೆ ಅವನದೇ ಒಂದಿಷ್ಟು ರೀತಿ ರಿವಾಜು.. ಅವನದೇ ಒಂದು ಜೀವನ ಶೈಲಿ. ಮದುವೆಯಾಗದ ಮಾತ್ರಕ್ಕೆ ಸಖಾರಾಮ್ ಸಾಂಸಾರಿಕ ಜಗತ್ತಿನ ಯಾವ ಲೌಕಿಕ ಸುಖದಿಂದಲೂ ವಂಚಿತನಲ್ಲ. ಅವನ ಬದುಕಿನಲ್ಲಿ ಬಂದು ಹೋದದ್ದು ಏಳು ಜನ ಹೆಂಗಸರು. ಎಲ್ಲರೂ ಅಬಲೆಯರು.. ಗಂಡ ಬಿಟ್ಟವರು, ಗಂಡ ಸತ್ತವರು, ಗಂಡನಿಂದ ಒತ್ತೆ ಇಡಲ್ಪಟ್ಟವರು, ಮಾರಲ್ಪಟ್ಟವರು ಇಂಥವರುಗಳೇ ಸಖಾರಾಮ್ ಬದುಕಿನಲ್ಲಿ ಬಂದ ಆ ಏಳು ಜನ ಹೆಣ್ಣುಗಳು. 

ನಾಟಕದ ಕಥಾವಸ್ತು ಸಖಾರಾಮ್ ಮತ್ತು ಅವನು ಕರೆದು ಕೊಂಡು ಬರುವ ಕಡೆಯ ಎರಡು ಹೆಂಗಸರ ನಡುವಿನ ಘಟನೆಗಳದ್ದು. ಗಂಡನಿಂದ ತ್ಯಜಿಸಲ್ಪಡೋ ಲಕ್ಷ್ಮಿಯನ್ನ ತನ್ನ ಮನೆಗೆ ಕರೆದು ಕೊಂಡು ಬರುವ ಸಖಾರಾಮ್ ಲಕ್ಷ್ಮಿಗೆ ಆಸರೆಯಾಗಿ ನಿಲ್ಲುತ್ತಾನೆ. ಆ ಅಸರೆಯೊಳಗೆ  ಇರಬೇಕಾದಲ್ಲಿ ಅವಳು ಸಹಿಸಿ ಕೊಳ್ಳ ಬೇಕಾದ ಕಷ್ಟ ಕೋಟಲೆಗಳನ್ನ ವಿವರವಾಗಿ ಹೇಳುತ್ತಾನೆ. ತನ್ನಿಚ್ಚೆಯಂತೆ ಅವಳು ನಡೆದು ಕೊಳ್ಳುವುದಿದ್ದರೆ ಮಾತ್ರ ಅವಳು ಆ ಮನೆಯಲ್ಲಿ ಉಳಿಯಬಹುದು ಎನ್ನುವ ಕರಾರು ಮಾಡುತ್ತಾನೆ. ಆ ಕರಾರಿಗೆ ಅವಳಿಗೆ ಒಪ್ಪಿಗೆ ಇರದಿದ್ದಲಿ ಆ ಕೂಡಲೇ ಅವಳು ಆ ಮನೆಯನ್ನು ಬಿಟ್ಟು ಹೊರಡ ಬಹುದಾಗಿಯೂ, ತಾನೇ ಅದಕ್ಕೆ ಅನುವು ಮಾಡಿಕೊಟ್ಟು ಅವಳಿಗೆ ಎರಡು ಸೀರೆಯೂ ಮತ್ತು ಐವತ್ತು ರೂಪಾಯಿಗಳಷ್ಟು ಹಣವನ್ನ ನೀಡಿ ಕಳುಹಿಸಿ ಕೊಡುವುದಾಗಿಯೂ ತಿಳಿಸುತ್ತಾನೆ. ಅವನ ಎಲ್ಲಾ ಕರಾರಿಗೆ ಒಪ್ಪಿಕೊಳ್ಳುವ ಲಕ್ಷ್ಮಿ ಅವನೊಂದಿಗೆ ಇರಲು ಒಪ್ಪಿ ಉಳಿದುಕೊಳ್ಳುತ್ತಾಳೆ.

ಲಕ್ಷ್ಮಿ ಮೂಲತಹ ಸಾಧ್ವಿಯಂತಹ ಹೆಣ್ಣುಮಗಳು. ಗಂಡ ತನ್ನನು ತ್ಯಜಿಸಿ ಕಳುಹಿಸಿದರು ಗಂಡನ ಶ್ರೆಯೋಭಿಲಾಷೆಗೆ ಹಾರೈಸುವವಳು. ಆ ಹೆಂಗಸರನ್ನ ಮಾತಾಡಿಸುವಾಗ ಹೋಗ್ರಿ ಬನ್ರಿ ಎಂದು ಮರ್ಯಾದೆ ಕೊಟ್ಟು ಮಾತಾಡಿಸುವ ಮರ್ಯಾದಾ ಪುರುಷ ಸಖಾರಾಮ್.. ಅವರನ್ನ ನಡೆಸಿಕೊಳ್ಳುವ ಪದ್ಧತಿ ಮಾತ್ರ ಘೋರ. ಎಷ್ಟು ತುಚ್ಛ ಮಾತುಗಳಿಂದ ಬೈಯುತ್ತಾನೆ.. ಮೃಗ ಕ್ಕಿಂತಲೂ ಕೀಳಾಗಿ ಹೊಡೆದು ಬಡಿದು ಹಿಂಸಿಸುತ್ತಾನೆ. ಎಲ್ಲವನ್ನೂ ಸಹಿಸಿಕೊಳ್ಳುವ ಲಕ್ಷಿ ಆಶ್ರಯ ಕೊಟ್ಟ ಸಖಾರಾಮ್ ನಲ್ಲಿ ದೇವರನ್ನು ಕಾಣುತ್ತಾಳೆ.. ಮತ್ತು ದೇವರಂತೆಯೇ ಪೂಜಿಸುತ್ತಾಳೆ. ಸಖಾರಾಮನ ಹೆಸರಲ್ಲಿ ತಾನೇ ತಾಳಿ ಕಟ್ಟಿಕೊಳ್ಳುತ್ತಾಳೆ. ಯಾವ ಹೆಣ್ಣನ್ನೂ ತನ್ನ ಬದುಕು ಪೂರ್ತಿ ಇರಿಸಿಕೊಳ್ಳದ ಸಖಾರಾಮ್ ಒಂದು ದಿನ ಲಕ್ಷ್ಮಿಯನ್ನೂ ಮನೆಯಿಂದ ಹೊರಗೆ ಹಾಕುತ್ತಾನೆ. ಲಕ್ಷ್ಮಿಯ ಜಾಗಕ್ಕೆ ಚಂಪಾಳನ್ನು ಕರೆದು ತರುತ್ತಾನೆ. 

ಲಕ್ಷ್ಮಿಗೆ ತದ್ವಿರುದ್ಧ ಗುಣದ ಚಂಪಾ ಬಜಾರಿಯಂಥಾ ಹೆಣ್ಣು. ಗಂಡಸನ್ನು ಯಕಶ್ಚಿತ್ ಎಂದು ತಿಳಿದು ಅವನಿಗೆ ಯಾವ ರೀತಿಯಿಂದಲೂ ಸೊಪ್ಪು ಹಾಕದ ದಿಟ್ಟ ತನದ ಮಹಿಳೆ. ಅವಳನ್ನು ಮನೆಗೆ ಕರೆದುಕೊಂಡು ಬರುವ ಸಖಾರಾಮ್ ತನ್ನ ರೀತಿ ರಿವಾಜುಗಳನ್ನೆಲ್ಲ ತಿಳಿಸುತ್ತಾನೆ. ಅದೆಲ್ಲವನ್ನು ಕೇಳಿಯೂ ಕೇಳದಂತೆ ಇದ್ದುಬಿಡುವ ಚಂಪಾ ಸಖಾರಾಮ್ ನನ್ನು ತನ್ನ ಇಶಾರೆಗೆ ಕುಣಿಯ ಬಲ್ಲವನಂತೆ ಮಾಡಿಕೊಳ್ಳುತ್ತಾಳೆ. ಮೂಲತಹ ಸೂಕ್ಷ್ಮ ಮನಿಸ್ಸಿನ ಮುಗ್ಧ ಹುಡುಗಿಯಾಗಿದ್ದ ಚಂಪಾ ಗಂಡನ ಕಿರುಕುಳ.. ಮಾನಸಿಕ ಹಿಂಸೆ ಮತ್ತು ಲೈಂಗಿಕ ಹಿಂಸೆಗಳಿಂದ ಒರಟಾಗಿ ಬದಲಾಗಿರುತ್ತಾಳೆ. ರಾಕ್ಷಸ ಗುಣದವರಿಗೆ ರಾಕ್ಷಸ ಗುಣದವರೇ ಆಪ್ತ ಅನ್ನುವಂತೆ ಚಂಪಾ ಸಖಾರಾಮನಿಗೆ ಮೆಚ್ಚಿಗೆಯಾಗುತ್ತಾಳೆ. ಚಂಪಾಳ ಒರಟುತನ ಒರಟ ಸಖಾರಾಮನಿಗೆ ಮೆಚ್ಚಿಗೆಯಾಗುತ್ತದೆ.

ಚಂಪಾಳ ಗಂಡ ವೃತ್ತಿಯಿಂದ ಪೋಲೀಸ್ ಆದರೂ ಮನುಷ್ಯನಲ್ಲದ ವ್ಯಕ್ತಿತ್ವ. ಪುರುಷತ್ವವಿಲ್ಲದ ಚಂಪಾಳ ಗಂಡ ಚಂಪಾಳನ್ನ ದೈಹಿಕವಾಗಿ ಬಹಳ ಹಿಂಸಿಸಿರುತ್ತಾನೆ. ಅವನ ಈ ಮನೋವೈಕಲ್ಯದಿಂದಾಗಿ ಒಂದು ದಿನ ಅವನು ಕೆಲಸ ಕಳೆದು ಕೊಂಡು ಅರೆ ಹುಚ್ಚನಾಗಿ ಬೀದಿ ಬೀದಿ ಅಲೆದು ಮಡದಿ ಚಂಪಾಳ ಆಸರೆಗಾಲಿ ಹಾತೊರೆಯುತ್ತಾನೆ. ಗಂಡನ ಮೇಲೆ ಲವಲೇಶವೂ ಕರುಣೆ ಪ್ರೀತಿ ಇರದ ಚಂಪಾ ಅವನು ಅವಳ ಹತ್ತಿರಕ್ಕೆ ಬಂದಷ್ಟೂ ಅವನನ್ನು ಬೈದು ಹೊಡೆದು ದೂರ ತಳ್ಳುತಾಳೆ.

ಹೊರ ಜಗತ್ತಿನಲ್ಲಿ ಇನ್ನ್ಯಾವ ಆಸರೆಯೂ ಸಿಗದ ಲಕ್ಷ್ಮಿ ಆಸರೆಗಾಗಿ ಮತ್ತೆ ಸಖಾರಾಮನನ್ನು ಅರಸಿ ಬರುತ್ತಾಳೆ. ಸಖಾರಮನ ವಿರೋಧದ ಹೊರತಾಗಿಯೂ ಚಂಪಾಳ ದಯೆಯಿಂದಾಗಿ ಲಕ್ಷ್ಮಿ ಸಖಾರಾಮನ ಮನೆಯಲ್ಲಿ ಆಸರೆ ಪಡೆಯುತ್ತಾಳೆ. ಚಂಪಾ ಸಖಾರಮನ ಸಖಿಯಾಗಿ ಲಕ್ಷ್ಮಿ ಮನೆ ಕೆಲಸದ ಸಾಧ್ವಿಯಾಗಿ ಮೂವರೂ ಒಟ್ಟಿಗೆ ಒಂದೇ ಸೂರಿನಡಿ ಬದುಕುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಅದೊಂದು ದಿನ ಲಕ್ಷ್ಮಿ ನೋಡಬಾರದ ಒಂದು ಸನ್ನಿವೇಶವನ್ನ ನೋಡಿ ಬಿಡುತ್ತಾಳೆ. ಸಖಾರಾಮನ ಸ್ನೇಹಿತ ದಾವೂದ್ ನೊಂದಿಗೆ ಚಂಪಾಳ ಅನೈತಿಕ ಸಂಬಂಧವನ್ನ. ಅಲ್ಲಿ ಯಾರೂ ಯಾರಿಗೂ ಗಂಡ ಹೆಂಡಿರಲ್ಲದಿದ್ದರೂ.. ಅಸಲು ಅವರುಗಳ ಸಂಬಂಧಗಳೇ ಅನೈತಿಕತೆಯ ತಳಹದಿಯ ಮೇಲೆ ನಿಂತಿದ್ದರೂ ಲಕ್ಷ್ಮಿ ಸಖಾರಾಮನ ಆಸರೆ ದೊರೆತಂದಿನಿಂದಲೇ ಸಖಾರಾಮನಿಗೆ ನಿಷ್ಠಳಾಗಿರುತ್ತಾಳೆ. ಮತ್ತು ಆ ನಿಷ್ಠೆಯನ್ನ ಚಂಪಾಳಿಂದಲೂ ಎದುರು ನೋಡಿರುತ್ತಾಳೆ. ಸಖಾರಾಮನನ್ನು ವಂಚಿಸಿ ದಾವೂದ್ ನೊಂದಿಗೆ ಅನೈತಿಕತೆಯಲ್ಲಿ ತೊಡಗುವ ಚಂಪಾಳ ಗುಣ ಹಿಡಿಸಿದ ಲಕ್ಷ್ಮಿ ಸಖರಾಮನಿಗೆ ಆಗುತ್ತಿರುವ ಮೋಸವನ್ನ ತಾಳಲಾರದೆ ಸಖರಾಮನಿಗೆ ವಿಷಯ ತಿಳಿಸಿ ಬಿಡುತ್ತಾಳೆ. ಕ್ರುದ್ಧನಾಗುವ ಸಖಾರಾಮ್ ಅವಸರದಲ್ಲಿ ಚಂಪಾಳನ್ನು ಕೊಂದು ಬಿಡುತ್ತಾನೆ. ಚಂಪಾಳನ್ನ ಕೊಂದ ಆಘಾತದಲ್ಲಿ ಸಖಾರಾಮ್ ಭ್ರಾಂತಿಗೆ ಬಿದ್ದು ನಿಶ್ಚಳನಾಗುವ ಸಖಾರಾಮ್ ಗೆ ಒತ್ತಾಸೆಯಾಗಿ ನಿಲ್ಲುವ ಲಕ್ಷ್ಮಿ ತಾನೇ ಚಂಪಾಳ ಹೆಣವನ್ನ ಸಖಾರಾಮನ ಮನೆಯಲ್ಲಿ ಹೂಳಲು ಪ್ರಯತ್ನಿಸುವ ಘಟನೆಯೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ನಾಟಕದಲ್ಲಿ ಈ ಕೆಲವೊಂದು ಸನ್ನಿವೇಶಗಳು ಬಹಳ ಕಾಲ ನೆನಪಿನಲ್ಲುಳಿದು ಕಾಡಿಸುವಂಥವು.

* ಲಕ್ಷ್ಮಿ ಮನೆಗೆ ಬಂದೊಡನೆ ಸಖಾರಾಮನಲ್ಲಿ ಕೆಲವೊಂದು ಬದಲಾವಣೆಗಳು ಉಂಟಾಗುತ್ತವೆ. ಯಾವತ್ತಿಗೂ ದೇವರನ್ನು ಪೂಜಿಸದ ಸಖಾರಾಮ್ ದೇವರನ್ನ ಪೂಜಿಸಲು ಇಷ್ಟಪಡುತ್ತಾನೆ. ಲಕ್ಷ್ಮಿಗಾಗಿ ತನ್ನ ಹಲವು ಚಟಗಳನ್ನ ನಿಯಂತ್ರಿಸಿಕೊಂಡು ಅವುಗಳ ಬಳಕೆಯನ್ನ ಕಮ್ಮಿಮಾಡಿಕೊಂಡು ಬರುತ್ತಾನೆ. ಒಂದು ಒಡನಾಟದ ಶಕ್ತಿ.. ಪ್ರೀತಿಯ ಅನುಭೂತಿ ಮಾತ್ರ ಹಾಗೆ ಎಂಥಾ ಮನುಷ್ಯನನ್ನೂ ಬದಲಾಯಿಸಲು ಸಾಧ್ಯ.

* ಮನುಷ್ಯನಿಗೆ ಸುಖ ಎನ್ನುವುದು ಯಾವ ಯಾವ ಕ್ರಿಯೆಗಳಿಂದ ಕ್ರಿಯಾ ಮೂಲಗಳಿಂದ ಸಿಗುತ್ತದೆ ಅನ್ನುವುದೇ ಆಶ್ಚರ್ಯ. ಲಕ್ಷ್ಮಿಯ ಒಂದು ಮೋಹಕ ನಗುವೆಂದರೆ ಸಖಾರಾಮನಿಗೆ ಅಂಥದ್ದೊಂದು ಸುಖ. ದೈಹಿಕವಾಗಿ ಅವಳನ್ನು ಯಾವತ್ತೂ ಹೊಂದದ ಸಖಾರಾಮ್ ಅವಳ ಆ ನಗುವಿಗೆ ಮಾತ್ರ ಭಿಕ್ಷುಕನಂತೆ ಹಂಬಲಿಸುತ್ತಾನೆ. ಮತ್ತು ಆ ನಗುವಿಗಾಗಿ ಅವಳನ್ನು ಇನ್ನಿಲ್ಲದಂತೆ ಹಿಂಸಿಸುತ್ತಾನೆ. ಲಕ್ಷ್ಮಿಯ ನಗುವಿನಂತೆಯೇ ಚಂಪಾಳ ಒರಟುತನವೂ ಸಖಾರಮನಿಗೆ ಸುಖವನೀಯುವ ಕ್ರಿಯೆ.

* ಲಕ್ಷ್ಮಿಯ ಭಾವುಕತೆ.. ಇರುವೆಯೊಂದಿಗಿನ ಅವಳ ಸರಸ, ಕಾಗೆಯೊಂದಿಗಿನ ನಂಟು.. ಭೂಮಿಯಂತ ಸಹನೆ, ತಾಯಿಯಂಥ ಮಮತೆ.. ಅವಳ ಅದ್ಭುತ ನಗೆ.. ಸಖಾರಾಮನನ್ನು ಮಾತ್ರವಲ್ಲ ವೀಕ್ಷಕರನ್ನೂ ಕಾಡುತ್ತದೆ.

* ಚಂಪಾಳ ಹಿನ್ನಲೆ ಮತ್ತು ಅವಳ ಕಥೆ ಎಂಥವರ ಹೃದಯವನ್ನೂ ಆರ್ದ್ರವಾಗಿಸುತ್ತದೆ ಹೂವಿನಂಥವಳು ಮುಳ್ಳಾದ ಅವಳ ಕಥೆ ನಿಜಕ್ಕೂ ಘೋರವೆನಿಸುತ್ತದೆ. ಚಂಪಾಳ ಒರಟುತನ, ಬಜಾರಿತನ ಆಶ್ಚರ್ಯ ಹುಟ್ಟಿಸಿಯೂ ಕಾಡುತ್ತದೆ.

* ಚಂಪಾಳ ಪುರುಷನ ಪಾತ್ರ ಈ ಕಾಲದ ಅನೇಕ ಹೀನ ಮನಸ್ಸಿನ ಗಂಡಸರ ಪ್ರತಿನಿಧಿಯಂಥದ್ದು. ಅವನ ಪಾಪಕ್ಕೆ ಅವನಿಗೆ ಶಾಸ್ತಿಯಾಗುತ್ತದೆ. ವ್ಯಗ್ರನಾಗಿದ್ದವನು ಮಗುವಂತೆ ಚಂಪಾಳ ಕಾಲ ಸುತ್ತಿಕೊಳ್ಳಲು ಹಂಬಲಿಸುವ ಪರಿ ಒಂದು ಸಂದೇಶದಂತೆ ತೋರುತ್ತದೆ.

* ಸಖಾರಾಮನ ಸ್ನೇಹಿತನ ಪಾತ್ರಧಾರಿ ದಾವೂದ್. ಒಂದಷ್ಟು ದೃಶ್ಯಗಳಲ್ಲಿ ನಗು ತರಿಸುತ್ತದೆ. " ಗಜಂದು ಮುಖದ ಗಣದು ಪತಿಯೇ ನಿನಗೆ ವಂದನೆ" ಅವನ ಈ ಹಾಡು ಈಗಲೂ ನಗು ತರಿಸುತ್ತದೆ. 

* ಕಡೆಯ ದೃಶ್ಯಗಳಲ್ಲಿ ಸಖಾರಾಮನ ಭಯ ದುಗುಡ ಭ್ರಾಂತಿ ನಿಷ್ಕ್ರಿಯತೆ.. ಆ ಸಮಯಕ್ಕೆ ಲಕ್ಷ್ಮಿಯ ದಿಟ್ಟತನ.. ಸಖಾರಾಮನನ್ನ ಕಾಪಾಡಿಕೊಳ್ಳುವ ಹಂಬಲವೂ ಕಾಡಿಸುತ್ತದೆ.

ಈ ನಾಟಕದಿಂದ ಯಾವ ಸಂದೇಶವೂ ದೊರಕುವುದಿಲ್ಲ ನಿಜ. ಆದರೆ ಮನುಷ್ಯನ ಅಸಹಾಯಕತೆ, ಹಿಂಸೆ, ವಿಕೃತಿ ಮತ್ತು ಅನೈತಿಕತೆಯ ವರ್ತನೆಗಳ ಹಲವು ಮುಖಗಳು ಗೋಚರಿಸುತ್ತವೆ. ಒಂದು ಮನರಂಜನಾ ಮಾಧ್ಯಮವಾಗಿ ನಾಟಕ ಮನಸ್ಸನ್ನ ಆವರಿಸಿಕೊಳ್ಳುವುದು ನಿಜ. 

ಈ ನಾಟಕದಲ್ಲಿ ಭಾಷೆಯ ಬಳಕೆ ಮತ್ತು ಹೆಂಗಸರನ್ನು ಹೊಡೆದು ಹಿಂಸಿಸುವ ವಿಚಾರದಲ್ಲಿ, ದೈಹಿಕ  ಕಾಮನೆಗಳ ರೂಪಕಗಳನ್ನ ರಂಗದ ಮೇಲೆ ಮುಕ್ತವಾಗಿ ಸಾದರ ಪಡಿಸುವ ವಿಚಾರದಲ್ಲಿ ಕಾಣಸಿಗುವ ರಿಯಲಿಸ್ಟಿಕ್ ಸನ್ನಿವೇಶಗಳು ನಿಜಕ್ಕೂ ಖಂಡನೀಯ. ಪ್ರಯತ್ನಿಸಿದರೆ ಅವುಗಳನ್ನ ನಿಯಂತ್ರಿಸಿಯೂ ನಾಟಕವನ್ನ ಇಷ್ಟು ಪಾರಿಣಾಮಕಾರಿಯಾಗಿ ಇರಿಸಿಕೊಳ್ಳಲು ಖಂಡಿತ ಸಾಧ್ಯ.

ನಾಟಕದ ಅಂತ್ಯ ಅನಿರೀಕ್ಷಿತ ಹಂತದಲ್ಲಿ ಬಂದು ಬಿಡುತ್ತದೆ. ಯಾರೂ ಊಹಿಸದ ರೀತಿ ನಾಟಕ ಮುಗಿದು ಬಿಡುತ್ತದೆ. ಇನ್ನೇನೋ ಇದೆ.. ಮುಂದೇನೋ ಆಗುತ್ತದೆ ಅನ್ನುವ ಕಾತುರ ಹಿಡಿದು ಕೂತಂತೆಯೇ ನಾಟಕ ಮುಗಿದು ಬಿಡುತ್ತದೆ. ಅಂತ್ಯವನ್ನ ಸ್ವಲ್ಪ ಪರಿಷ್ಕರಿಸಿದರೆ ಒಳ್ಳೆಯದು.

ನಾಟಕದ ಕಥಾವಸ್ತು 1972 ಕಾಲದ ವ್ಯಾಪ್ತಿಗೆ ಒಳಪಟ್ಟಿರೋದರಿಂದ ಅದನ್ನ ಈಗಿನ ಸಾಮಾಜಿಕ ಸ್ಥಿತಿ ಗತಿಗೆ ಹೋಲಿಸಿ ನೋಡಿ ಅಳೆದರೆ ತಪ್ಪಾಗುತ್ತದೆ. ನಾಟಕವನ್ನ ಈಗಿನ ಸಾಮಾಜಿಕ ಸ್ಥಿತಿಗತಿಗೆ ಅನುಗುಣವಾಗಿ ಪರಿವರ್ತಿಸಿ ರಂಗದ ಮೇಲೆ ತರುವ ಪ್ರಯತ್ನ ನಡೆದರೂ ಅದು ಶ್ಲಾಘಿಸುವ ಕಾರ್ಯವಾಗಬಹುದು.

ಸಖಾರಾಮ್ ಬೈಂಡರ್ ನನ್ನ ಮಟ್ಟಿಗೆ ನಿಜಕ್ಕೂ ಖುಷಿ ಕೊಟ್ಟ ನಾಟಕ. ಒಂದು ಸಾಮಾಜಿಕ ಸಮಸ್ಯೆಯ ಕಥಾ ಹಂದರ.. ಪ್ರದೀಪ್ ಕುಮಾರ್, ರಾಜೇಶ್ವರಿ ತಳವಾರ್, ಪ್ರಜ್ಞಾ ಬ್ರಹ್ಮಾವರ್, ದರ್ಶನ್ ತುಮಕೂರು, ಮತ್ತು ಸತೀಶ್ ಎಂ ವೀ ಅವರುಗಳ ಮನ ಮುಟ್ಟುವ ಮನೋಜ್ಞ ಅಭಿನಯ. ಸನ್ನಿವೇಶಕ್ಕೆ ಪೂರಕ ಸಂಗೀತ ಮತ್ತು ಬೆಳಕು. ಇಡೀ ನಾಟಕ ಸಖಾರಾಮ್ ಮನೆಯ ಎರಡು ಕೋಣೆಯ ಮಧ್ಯೆ ನಡೆಯುವ ಒಂದು ನಿಯಂತ್ರಿತ ಕಥಾ ಹಂದರದ ವಿಶೇಷತೆಗೆ. ಕನ್ನಡಕ್ಕೆ ಇದನ್ನ ತಂದುಕೊಟ್ಟ ಗೀತಾ ತಕ್ಕವಾರಿ.. ರಂಗದ ಮೇಲೆ ಇದನ್ನು ಸಾದರಿ ಪಡಿಸಲು ಕಾರಣರಾದ ಸರ್ವಸ್ವ ತಂದ ಮತ್ತು ಅದರ ರೂವಾರಿ ನಾಗರಾಜ ಸೋಮಯಾಜಿ.. ಈ ನಾಟಕದ ನಿರ್ವಹಣೆ ಹೊತ್ತ ಗೆಳೆಯ ಮಹೇಶ್ ಪಲ್ಲಕ್ಕಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಮುಂದೇನಾದರು ಈ ನಾಟಕದ ಮರು ಪ್ರದರ್ಶನ ಇದ್ದಲ್ಲಿ ಖಂಡಿತ ಮಿಸ್ ಮಾಡ್ಕೋಬೇಡಿ ಅನ್ನೋದು ನನ್ನ ಕರೆಯಷ್ಟೇ.

Friday, 28 February 2014

ಜನುಮ ದಿನವೂ.. ಅದರ ಸಂತೋಷವೂ..

ಎಸ್ ಕೆ ಚನ್ನೇಗೌಡ್ರು  ಅಂತ ನಮ್ಮೂರ ಸೀಮೆಗೆ ದೊಡ್ಡ ಶ್ರೀಮಂತರ ಪೈಕಿ ಅನ್ನಿಸಿ ಕೊಳ್ಳೋರು. ಅವರ ಮನೆ ಇಂದ ಒಂದು ಹುಡುಗಿ ನಮ್ ಸ್ಕೂಲಿಗೆ ಬರೋಳು ಬಿಂದು ಅಂತ, ನನ್ನ ಕ್ಲಾಸ್ ಮೇಟ್. ಒಂದಿನ ಕ್ಲಾಸ್ ನಲ್ಲಿ ಎಲ್ಲರಿಗೂ ಫಾರಿನ್ ಚಾಕೊಲೆಟ್ ನ ಕೊಡ್ತಾ ಇದ್ಲು ಯಾಕೆ ಅಂತ ಕೇಳ್ದಾಗ ಅವತ್ತು ಅವಳ ಹುಟ್ಟಿದ ದಿನ ಅಂತ ಹೇಳಿದ್ಳು. ಬಿಸಿಲಿಗೆ ಫಳ ಫಳ ಹೊಳೆಯೋ ಮಿಂಚಿನ ತುಣುಕುಗಳನ್ನ ಹೊತ್ತ ನೀಲಿ ಕಲರ್ ಹೊಸಾ ಚೂಡಿದಾರದಲ್ಲಿ ಮಿಂಚ್ತಾ ಇದ್ರೆ ಎಲ್ಲರಿಗೂ ಆಶ್ಚರ್ಯ. ಆ ಹುಡುಗಿ ಮೊದಲೇ ನೋಡೋಕೆ ಅಷ್ಟು ಚೆಂದ ಇನ್ನು ಈ ತರಹ ಬಟ್ಟೆ ಹಾಕಿದ್ರೆ ಎಂಥವರಾದ್ರು ಒಂದು ಕ್ಷಣ ಕವಿ ಆಗ್ಬೇಕು ಅನ್ನಿಸಬೇಕು. ನಮಗೆಲ್ಲ ಯುಗಾದಿಗೋ, ದೀಪಾವಳಿಗೋ ಒಂದು ಹೊಸ ಬಟ್ಟೆ ಸಿಗ್ತಿತ್ತು ಅಷ್ಟೇ. ಹುಟ್ಟಿದ ದಿನ ಎಲ್ಲ ಒಂದು ಹಬ್ಬ ಅಂತ ಗೊತ್ತೇ ಇರ್ಲಿಲ್ಲ. ಅಸಲು ಹುಟ್ಟಿದ ದಿನವೇ ಗೊತ್ತಿರಲಿಲ್ಲ. ಅವಳು ಕೊಟ್ಟ ಚಾಕೊಲೆಟ್ ತಿಂದು ಅವಳಿಗೆ ಶುಭಾಷಯ ಹೇಳಿದೆವು. ನಮಗೂ ಹೀಗೆ ಬರ್ತ್ ಡೇ ಎಲ್ಲ ಇದ್ದಿದ್ರೆ ಎಷ್ಟ್ ಚೆಂದ ಇರೋದು ಅನ್ಸಿ ಅಟೆಂಡರ್ ನಾಗಮ್ಮನನ್ನ ಪುಸಲಾಯಿಸಿ ಶಾಲಾ ದಾಖಲಾತಿಯಲ್ಲಿ ದಾಖಾಲಾಗಿದ್ದ ನಮ್ಮ ಹುಟ್ಟಿದ ದಿನಾಂಕ ವನ್ನ ತಿಳಿದುಕೊಂಡ್ವು. ಅದ್ಕೂ ಮುನ್ನ ಏಳನೇ ಕ್ಲಾಸ್ ಮಾರ್ಕ್ಸ್ ಕಾರ್ಡ್ ಮತ್ತೆ ಟೀ ಸೀ ಲಿ ನಮ್ಮ ಹುಟ್ಟಿದ ದಿನಾಂಕ ನೋಡಿದ್ದಿತ್ತಾದ್ರು ಜ್ಞಾಪಕ ಇಟ್ಕೊಳೋ ಜರೂರತ್ತು ಇದೆ ಅಂತ ಯಾವತ್ತೂ ಅನ್ನಿಸೇ ಇರ್ಲಿಲ್ಲ. 

ಹುಟ್ಟಿದ ದಿನಾಂಕ ತಿಳ್ಕೊಂಡ ಮೇಲೆ ನಮಗಾದ ಪುಳಕ ಅಷ್ಟಿಷ್ಟಲ್ಲ. ಶಾಲೇಲಿ ಬರ್ತ್ ಡೇ ನೆಪದಲ್ಲಿ ವಾರಕ್ಕೆ ಒಬ್ಬರಾದರೂ ಚಾಕೊಲೆಟ್ ಕೊಡ್ತಾರೇನೋ ಅಂತ ಆಸೆ. ಸರ್ಕಾರಿ ಶಾಲೆಗೇ ಬರ್ತಿದ್ದವರಲ್ಲಿ ಬಹಳಷ್ಟು ಜನ ಬಡವರೇ ಆಗಿದ್ರಿಂದ ಯಾರು ಅಂತ ಆಚರಣೆಗಳ ಕಡೆ ಆಸಕ್ತಿ ಇರ್ಲಿಲ್ಲ. ಒಂದಿನ ನನ್ನ ಹುಟ್ಟಿದ ದಿನ ಬಂತಾದರೂ ಕೈಲಿ ದುಡ್ಡಿಲ್ಲದೆ.. ಮನೇಲಿ ಕೇಳಿದರೆ ಅದೆಲ್ಲ ದುಡ್ಡಿರೋರಿಗೆ ನಮ್ಮಂತೋರಿಗಲ್ಲ ಅಂತ ಸಬೂಬು ಹೇಳಿ ಅಪ್ಪ ಆವತ್ತಿನ ಕಾಲಕ್ಕೆ ಅವತ್ತು ಒಂದು ರುಪಾಯಿ ಕೊಟ್ಟಿದ್ದರು. ಒಂದು ರುಪಾಯಿ ಇಡೀ ತರಗತಿಗೆ ಮಿಟಾಯಿ ಎಲ್ಲಿ ಕೊಡಿಸೋಕ್ಕಾಗ್ತಿತ್ತು..?? ಬೇಕಿದ್ದ ಹತ್ತು ಹದಿನೈದು ಹುಡುಗರಿಗೆ ನಿಂಬೆ ಹುಳಿ ಮಿಟಾಯಿ ಅಷ್ಟೇ ಕೊಡಿಸಿದ್ದೆ ಅವತ್ತು. ಆನಂತರ ಕಾಲೇಜಾಗಲೀ ITI ಆಗಲಿ ನನ್ನ ಹುಟ್ಟಿದ ದಿನವನ್ನ ಒಂದು ಸಂಭ್ರಮದ ದಿನ ಆಗಿಸುವಲ್ಲಿ ವೇದಿಕೆ ಆಗ್ಲೇ ಇಲ್ಲ. ಗೊತ್ತಿದ್ದ ನಾಲ್ಕಾರು ಹುಡುಗರು ಶುಭಾಷಯ ಹೇಳ್ತಿದ್ರು ಬಿಟ್ರೆ ಅವತ್ತಿನ ದಿನವೂ ನಮ್ಮ ಪಾಲಿಗೆ ಅಂಥಾ ವೆತ್ಯಾಸದ ದಿನವೇನೂ ಆಗಿರ್ತಿರ್ಲಿಲ್ಲ. 


ITI ಮುಗಿಸಿ ಟ್ರೈನಿಂಗ್ ಗೆ ಅಂತ ಬೆಂಗಳೂರಿಗೆ ಬಂದಿದ್ದಾಯ್ತು. ಫ್ರೆಂಡ್ಸ್ ಜೊತೆ ಬೇರೆ ಮನೇಲಿ ಉಳಿದುಕೊಂಡರೆ ಕೆಟ್ಟು ಹೋಗ್ತೀನಿ ಅಂತ ಅಮ್ಮ ತನ್ನ ತಮ್ಮ ಅಂದ್ರೆ ನನ್ನ ಸೋದರ ಮಾವನ ಮನೇಲಿ  ಇರೋ ಹಾಗೆ ಮಾಡಿದ್ರು. ಆ ಟೈಮಿಗೆ ಮಾಮಿಗೆ ಎರಡನೇ ಮಗುವಿನ ಸಮಯ ಫೆಬ್ರವರಿಯ ಕೊನೆ ವಾರದಲ್ಲಿ ಡೆಲಿವೆರಿ ಗೆ ಅಂತ ಎಲ್ಲ ಊರಿಗೆ ಹೊರಟ್ರು. ನಾನ್ ಮಾತ್ರ ಒಬ್ನೇ ಉಳಿದುಕೊಂಡೆ ಮಾಮನ ಮನೇಲಿ  ಟ್ರೈನಿಂಗ್ ನಿಮಿತ್ತ. ಮಾಮನ ಮನೆ ಗಾರ್ವೆ ಬಾವಿ ಪಾಳ್ಯದ ಒಳಗೆ ಬೇಗೂರು ರಸ್ತೆಯ ಶ್ರೀರಾಮ ನಗರದಲ್ಲಿ. ಎರಡು ಅಂತಸ್ತು, ಆರು ಸಣ್ಣ ಸಣ್ಣ ಮನೆಗಳಿದ್ದಂಥ ಕಟ್ಟಡ ಅದು. ಮಾಮನ ಮನೆ ಮೊದಲ ಅಂತಸ್ತಿನಲ್ಲಿ. ಮೇಲಂತಸ್ತಿನ ಸಾಲಿನ ಕೊನೆಯ ಮನೆಯಲ್ಲಿ ಬಾಡಿಗೆ ಇದ್ದವರು ಒಬ್ಬ ತೆಲುಗು ಕುಟುಂಬ. ಅದರಲ್ಲಿ ಪ್ರೀತಿ ಅನ್ನುವ ಪೀಯೂಸಿ ಓದುವ ಹುಡುಗಿ. ಮುದ್ದಾಗಿದ್ಳು. ಫೆಬ್ರವರಿ ಇಪ್ಪತ್ನಾಲ್ಕು ಅವಳ ಹುಟ್ಟಿದ ದಿನ. ಅವತ್ತು ಸಂಜೆ ಕೆಲಸ ಮುಗಿಸಿ ಮನೆಗೆ ಬಂದದ್ದೇ ಆ ಮನೆಯ ಆಂಟಿ ಬಂದು ತಮ್ಮ ಮಗಳ ಹುಟ್ಟಿದ ಹಬ್ಬದ ಸೆಲೆಬ್ರೇಶನ್ ಗೆ ಕರೆದು ಹೋದ್ರು. ಬರ್ತ್ ಡೇ ಪಾರ್ಟಿ ಅಂದ್ರೆ ಸುಮ್ನೆ ಹೊಗೊಕಾದೀತೇ ಏನಾದ್ರೂ ತಗೊಂಡು ಹೋಗಬೇಕಲ್ವೆ ಗಿಫ್ಟ್ ಅಂತ ಅಂದುಕೊಂಡೆ . ಆಗ ಸ್ಟೈಪೆಂಡ್ ಅಂತ ಬರ್ತಿದ್ದ ಎರಡು ಸಾವಿರದಲ್ಲಿ ಒಂದು ಸಾವಿರವನ್ನ ಮನೆಗೂ, ಎಂಟು ನೂರು ರುಪಾಯಿಯನ್ನ ಮಾಮನಿಗೂ, ನನ್ನ ಅತಿ ಅಗತ್ಯದ ಖರ್ಚುಗಳಿಗೆ ಅಂತ ಇನ್ನೂರು ರುಪಾಯಿಗಳನ್ನೂ ಇಟ್ಕೋತಾ ಇದ್ದೆ. ಅದು ತಿಂಗಳ ಕೊನೆ. ನನ್ ಕೈಲಿ ಇದ್ದದ್ದು ಕೇವಲ ಮೂವತ್ತು ರುಪಾಯಿ. ಪೀಯೂಸಿ ಓದೋ ಹುಡುಗೀಗೆ ಮೂವತ್ತು ರುಪಾಯಿಗೆ ಏನು ಗಿಫ್ಟ್ ಕೊಡಿಸೋಕಾದೀತು ಅಂತ ಒಂದು ಡೈರಿ ಮಿಲ್ಕ್ ಚಾಕೊಲೆಟನ್ನ ತಗೊಂಡು ಹೋದೆ ಅಷ್ಟೇ. 


ನಮ್ಮ ಬಿಲ್ಡಿಂಗ್ ನಲ್ಲಿ  ಆರು ಮನೆಗಳಲ್ಲಿ ಒಟ್ಟು ಎಂಟು ಜನ ಮಕ್ಕಳಿದ್ರು ಅದರಲ್ಲಿ ಪೀಯೂಸಿ ಓದೋರು ಇಬ್ರು, ಇನ್ನು ಎಂಟರಿಂದ ಹತ್ತರವರೆಗೆ ನಾಲ್ಕು.. ಐದರಿಂದ ಏಳನೇ ತರಗತಿ ವರೆಗೆ ಎರಡು ಮಕ್ಳು. ದಿನಾ ಸಂಜೆ ಎಲ್ಲರ ಜೊತೆ ಬೀದೀಲಿ ಶಟಲ್, ಮಹಡಿಯಲಿ ಕೇರಂ, ಹಾವು ಏಣಿ ಆಟ, ಭಾನುವಾರದಂದು ಕ್ರಿಕೆಟ್ ಆಡ್ತಿದ್ದ ನಾನು ಎಲ್ಲ ಹುಡುಗರಿಗೂ ಆಪ್ತನಾಗಿದ್ದೆ. ನಾನು ಪ್ರೀತಿಯ ಬರ್ತ್ ಡೇ ಪಾರ್ಟಿ ಗೆ ಹೋಗಿದ್ದು ನೋಡಿ ಅವಳು ತುಂಬಾ ಖುಷಿಯಾದಳು. ಕೇಕ್ ಕಟ್ ಮಾಡಿದ್ದಾಯ್ತು. ಎಲ್ಲರಿಗೂ ಕೇಕ್ ಹಂಚುತ್ತಾ ಬಂದಳು. ನಂಗೆ ಕೇಕ್ ಕೊಟ್ಳು ನಾನು ಅವಳಿಗೆ ಚಾಕಲೇಟ್ ಕೊಟ್ಟೆ. ನಿಮ್ ಬರ್ತ್ ಡೇ ಯಾವಾಗ ಅಣ್ಣ ಅಂತ ಕೇಳಿದ್ಳು ಮುಜುಗರದಿಂದ ನಾಳೆನೇ ಕಣಮ್ಮ ಅಂದಿದ್ದೆ. ಮೊದ್ಲೇ ಹೇಳಿದ್ರೆ ಇಬ್ರು ಒಟ್ಟಿಗೆ ಕೇಕ್ ಕಟ್ ಮಾಡ್ಬೋದಿತ್ತಾ, ಈಗ ನೋಡಿ ನಿಮ್ಮನೇಲಿ ಯಾರು ಇಲ್ಲ, ಪರವಾಗಿಲ್ಲ ಇದನ್ನೇ ನಿಮ್ ಬರ್ತ್ ಡೇ ಸೆಲೆಬ್ರೇಶನ್ ಅಂದ್ಕೊಳಿ ಅಂತು ಆ ಹುಡುಗಿ. ಬಹಳ ಸಂತೋಷ ವಾಗಿತ್ತು ನಂಗೆ.. ನನ್ನ ಬರ್ತ್ ಡೇ ಮಾಡಿಕೊಂಡಷ್ಟೇ ಖುಷಿ ಇಂದಿದ್ದೆ ಅಂದು. ಅವತ್ತು ರಾತ್ರಿ ಅವರ ಮನೆಲಿಯೇ ಊಟ ಮಾಡಿಯಾದ ನಾನು ತುಂಬಾ ಭಾವುಕನಾಗಿದ್ದೆ. ಮಾರನೆ ದಿನ ನನ್ನ ಹುಟ್ಟಿದ ದಿನ, ಸ್ನೇಹಿತನ ಬಳಿ ನೂರು ರುಪಾಯಿ ಸಾಲ ತಗೊಂಡು ಅದರಲ್ಲಿ ಬೇಕಿದ್ದ ಕೆಲವು ಸ್ನೇಹಿತರಿಗೆ ಬೇಕರಿಯಲ್ಲಿ ಕೇಕ್ ಕೊಡಿಸಿ, ಮಿಕ್ಕ ಹಣದಲ್ಲಿ ಮನೆ ಸುತ್ತಣ ಮಕ್ಕಳಿಗೆಲ್ಲ ಚಾಕೊಲೆಟ್ ತಂದು ಹಂಚಿ ಸಂಭ್ರಮಿಸಿದ್ದೆ. 

ಇನ್ನು ಟ್ರೈನಿಂಗ್ ಮುಗೀತು ಟ್ರೈನಿಂಗ್ ಮುಗಿದು ವಾಪಾಸು ಊರಿಗೆ ಹೋದೆ. ಮಧ್ಯೆ ಎರಡ್ಮೂರು ಕಂಪನಿಗಳಿಗೆ ಎಕ್ಸಾಮು ಬರೆದಿದ್ದೆ. ಊರಲಿದ್ದ ಒಂದಷ್ಟು ದಿನಗಳ ನಂತರ ನನಗೆ ಕೆಲಸವೂ ಸಿಕ್ತು ಈ ಕಂಪನಿಯಲ್ಲಿ. ಕೆಲಸ ಸಿಕ್ಕದ್ದೇ ತಮಿಳುನಾಡಿನ ತಿರುಚಿರಾಪಳ್ಳಿಗೆ ಹೋಗ ಬೇಕಾಯ್ತು ಟ್ರೈನಿಂಗ್ ನಿಮಿತ್ತ. ಹೊಸ ಜಾಗ, ಹೊಸ ಜನ ಹೊಸ ಥರದ ಅನುಭವ ಆರು ಕರ್ನಾಟಕ, ನಾಲ್ಕು ತಮಿಳುನಾಡು, ಏಳು ಮಲಯಾಳಿ ಹುಡುಗರು ನಮ್ಮ ಬ್ಯಾಚ್ ನೊಳಗಿದ್ದದ್ದು. ಮೊದಲ ಮೂರು ತಿಂಗಳ ನಂತರ ತಲಾ ಇಬ್ಬಿಬ್ಬರನ್ನಾಗಿ ಕರ್ನಾಟಕ ಕೇರಳ ತಮಿಳುನಾಡಿನ ಹಲವು ಕಡೆ ನಮ್ಮನ್ನ ಟ್ರೈನಿಂಗ್ ನಿಮಿತ್ತ ಕಳಿಸಲಾಯ್ತು. ನನಗೆ ತಿರುಚಿಯಲ್ಲಿಯೇ ಇರಬೇಕಾಯ್ತು. ಆಗ ನನ್ನ ಜೊತೆ ಇದ್ದವನು ಮಂಗಳೂರಿನ ಹುಡುಗ ಪ್ರಶಾಂತ್. ೨೦೧೦ ರ ನನ್ನ ಜನ್ಮ ದಿನವನ್ನ ನಾನು ಅವನು ಇಬ್ಬರೇ ಆಚರಿಸಿದ್ವು ಒಂದು ಸಣ್ಣ ಕೇಕ್ ಕಟ್ ಮಾಡಿ. ಈ ಮಧ್ಯೆ ಅಲ್ಪ ಸ್ವಲ್ಪ ಕಂಪ್ಯೂಟರ್ ಕಲಿತಿದ್ದ ನಾನು ಆರ್ಕುಟ್ ಸೇರಿದ್ದೇ ಅಲ್ಲಿ ಸ್ನೇಹಲೋಕ ಅನ್ನುವ ಒಂದು ಗುಂಪಿನ ಸ್ನೇಹಿತರ ಪರಿಚಯವಾಗಿತ್ತು. ಟ್ರೈನಿಂಗ್ ಮುಗಿದು ೨೦೧೧ ರಲ್ಲಿ ನನ್ನ ಪೋಸ್ಟಿಂಗ್ ಹೊಸೂರ್ ನಲ್ಲಾಯ್ತು. ಆ ವರ್ಷದ ಫೆಬ್ರುವರಿ ಕೊನೆಯ ವಾರ ನಾನು ಕೆಲಸದ ನಿಮಿತ್ತ ಪ್ರವಾಸದಲ್ಲಿ ಇದ್ದದ್ರಿಂದ ಆಚರಣೆ ಏನು ಸಾಧ್ಯವಾಗಿರಲಿಲ್ಲ. ಆದ್ರೆ ಆರ್ಕುಟ್ ನಲ್ಲಿ ನನ್ನ ಜನ್ಮದಿನಾಂಕ ಗೊತ್ತು ಮಾಡ್ಕೊಂಡು ನನಗೆ ಫೋನ್ ಮಾಡಿ ಹಲವಾರು ಜನ ಸ್ನೇಹಿತರು ವಿಶ್ ಮಾಡಿದ್ದು ನೋಡಿ ಖುಷಿಯಾಗಿದ್ದೆ. 

೨೦೧೨ ರ ನನ್ನ ಜನ್ಮ ದಿನವನ್ನ ಎರಡು ಬಾರಿ ಆಚರಿಸಿ ಸಂಭ್ರಮಿಸಿದ್ದೆ. ನನ್ನ ಜೊತೆಗೆ ಹೊಸೂರಿಗೆ ಪೋಸ್ಟಿಂಗ್ ಆದಂಥ ಮತ್ತೊಬ್ಬ ಹುಡುಗ ಪ್ರಶಾಂತ್. ಮಡಿಕೇರಿಯವನು. ಅವನ ಜನ್ಮದಿನ ನನ್ನದರ ಮರುದಿನಕ್ಕೆ ಅಂದರೆ ಫೆಬ್ರವರಿ ಇಪ್ಪತ್ತಾರಕ್ಕೆ. ನಮ್ಮ ಕಂಪನಿಯ ಕ್ಯಾಂಟೀನ್ ಕಾಂಟ್ರಾಕ್ಟ್ ಮ್ಯಾನೇಜರ್ ಅನೀಶ್ ಕೂಡ ನಮ್ಮ ಗೆಳೆಯನಾಗಿದ್ದ. ಅವನ ಬರ್ತ್ ಡೇ ಫೆಬ್ರವರಿ ಇಪ್ಪತ್ತೆಂಟಕ್ಕೆ. ನಾವು ಮೂರು ಜನ ಸೇರಿ ನಮ್ಮ ಜನ್ಮದಿನವನ್ನ ಒಟ್ಟಿಗೆ ಇಪ್ಪತ್ತಾರರ ರಾತ್ರಿ ಕ್ಯಾಂಟೀನ್ ಹುಡುಗರ ಜೊತೆ ಸೇರಿ ಸಂಭ್ರಮದಿಂದ ಆಚರಿಸಿದ್ವಿ. ಅದಾದ ಕೆಲವು ದಿನಗಳ ನಂತರ ಸ್ನೇಹಲೋಕ ತಂಡದ ಜೊತೆ ಲಾಲ್ ಬಾಗಿನಲ್ಲಿ ಆಚರಿಸಿದ್ದು ನನ್ನ ಇನ್ನೂ ಒಂದು ಮರೆಯಲಾಗದ ಸವಿ ನೆನಪು. ಅವತ್ತು ನನ್ನ ಜೊತೆಗೆ ಇನ್ನೂ ಇಬ್ಬರು ತಮ್ಮ ಬರ್ತ್ ಡೇ ಆಚರಣೆ ಮಾಡಿ ಕೊಂಡಿದ್ರು. ಒಂದು ಮುಕ್ತ ಸಂಭ್ರಮಾಚರಣೆ. ಅದೇ ಮೊದಲು ಜೀವನದಲ್ಲಿ ಅಷ್ಟು ಜನ ನನ್ನ ಜನ್ಮ ದಿನದ ಸಂತೋಷವನ್ನ ನನ್ನ ಜೊತೆ ಸಂಭ್ರಮಿಸಿದ್ದು. ಇನ್ನು ೨೦೧೩ ರ ಜನುಮ ದಿನವನ್ನ ನಾನು ಅನೀಶ್ ಮತ್ತು ಪ್ರಶಾಂತ್ ಮೂರೂ ಜನ ನಮ್ಮಿಡೀ ಕಚೇರಿ ಸಿಬ್ಬಂಧಿಯೊಂದಿಗೆ ಆಚರಿಸಿ ಕೊಂಡಿದ್ವು. ರಾಜಿನಾಮೆ ಕೊಟ್ಟು ಹೋಗಲಿದ್ದ ಸಹವರ್ತಿ ಲಾವಣ್ಯ, ಟ್ರಾನ್ಸ್ಫೆರ್ ಆಗಿ ಹೋಗಲಿದ್ದ ಬಾಸ್ ಅಜಯಕುಮಾರ್ ಮತ್ತು ಸಂಧ್ಯಾ ಮೇಡಂ ಅವರುಗಳ ಜೊತೆ, ನಮ್ಮಿಡೀ ಕಾರ್ಮಿಕ ಪರಿವಾರದ ಸಮಕ್ಷಮದಲ್ಲಿ ಎಲ್ಲರೊಂದಿಗೆ ಸೇರಿ ಸಂಭ್ರಮಿಸಿದ್ದ ಹುಟ್ಟು ಹಬ್ಬದ ಸಂತೋಷ ಚಿರಕಾಲ ನೆನಪಿನಲ್ಲುಳಿಯುವಂಥದ್ದು. 

ಬಹುಮುಖ್ಯವಾದ ಪ್ರಾಜೆಕ್ಟ್ ಒಂದರ ತುರಾತುರಿಯಲ್ಲಿದ್ದ ನಾವೆಲ್ಲಾ ಈ ವರ್ಷ ನಮ್ಮ ಜನ್ಮ ದಿನದ  ಯೋಚಿಸುವಷ್ಟು ತಾಳ್ಮೆ ಕೂಡಾ ಇರಲಿಲ್ಲ. ಮುನ್ನೂರ ಹದಿನೈದು ಮೆಗಾ ವ್ಯಾಟ್ ಶಕ್ತಿಯ ಬಹು ದೊಡ್ಡ ಟ್ರಾನ್ಸ್ ಫಾರ್ಮರ್ ನ ಮೂರನೇ ಘಟಕವನ್ನ ಕೇವಲ ಹತ್ತು ದಿನಗಳೊಳಗಾಗಿ ಮುಗಿಸಬೇಕ್ಕಾದ್ದರಿಂದ ಎಲ್ಲರಿಗೂ ಗುರುತರ ಜವಾಬ್ದಾರಿಗಳಿದ್ವು. ಟೆಸ್ಟಿಂಗ್ ಉಸ್ತುವಾರಿಯನ್ನ ನನಗೆ ವಹಿಸಲಾಗಿತ್ತು. ಫೆಬ್ರವರಿಯ ಕೊನೆಯ ಹತ್ತು ದಿನ ನಾವು ಪೂರ್ತಿ ಇದರಲ್ಲೇ ಮುಳುಗಿ ಹೋಗಿದ್ವು. ಬೆಳಿಗ್ಗೆ ಎಂಟು ಗಂಟೆಗೆ ಕಾರ್ಯ ಸ್ಥಳ ತಲುಪಿದರೆ ವಾಪಾಸು ಮನೆ ಬಂದು ಸೇರುವುದು ರಾತ್ರಿ ಹನ್ನೊಂದಾದರೂ ಆಗುತ್ತಿತ್ತು. ಬಹಳ ಒತ್ತಡದ ಕೆಲಸವಾದ್ದರಿಂದ ಯಾವ ಕರ್ಮಚಾರಿಗೂ ರಜೆ ಸಿಕ್ಕಿರಲಿಲ್ಲ. ಅಂತಹ ಬಿಗಿ ಒತ್ತಡದಲ್ಲೇ ಜನುಮ ದಿನದಂದೂ ಕೂಡಾ ಬೆಳಿಗ್ಗೆ ಎಂಟರಿಂದ ಸಂಜೆ ಏಳರ ತನಕ ಕೆಲಸ ಮಾಡಿದ್ದ ನನಗೆ ಒಂಚೂರು ಬೇಸರವಾಗದಂತೆ ಮಾಡಿದ್ದು ಸ್ನೇಹಿತರ ಶುಭ ಹಾರೈಕೆಗಳು. ಇಪ್ಪತ್ತೈದರ ಮಧ್ಯರಾತ್ರಿಯಿಂದ ಇಪ್ಪತ್ತೇಳರ ಮಧ್ಯಾನದ ತನಕ ಬರುತ್ತಲೇ ಇದ್ದ ಫೋನ್ ಗಳಿಂದ ಉಬ್ಬಿ ಹೋಗಿದ್ದೆ ನಾನು. 

ನನಗೆ ಇಪ್ಪತ್ತು ತುಂಬುವ ತನಕ ಹುಟ್ಟಿದ ದಿನ ಕೂಡಾ ಸಾಮಾನ್ಯ ದಿನವಂಥದ್ದೆ ಆಗಿದ್ದ ನನಗೆ, ಕಳೆದ ನಾಲ್ಕು ವರ್ಷಗಳಿಂದ ನನ್ನ ಜನುಮ ದಿನ ನನಗೆ ಕೊಡುತ್ತಿರುವ ಸಂತೋಷಕ್ಕೆ ಎಣೆ ಇಲ್ಲ. ಒಮ್ಮೆ ಬೆಂಗಳೂರಿಂದ ಬಂದಿದ್ದ ನಮ್ಮ ಮನೆ ಪಕ್ಕದ ನಾಗೇಂದ್ರಣ್ಣನ ತಂಗಿ ಮಗನಿಗೆ ಹುಟ್ಟಿದ ದಿನ. ನಾಲ್ಕು ವರ್ಷದ ಆ ಮಗು ನಮ್ಮ ಬೀದಿಯ ಎಲ್ಲರಿಗೂ ಚಾಕಲೇಟ್ ಕೊಡುತ್ತಾ ಬರ್ತಾ ಇದ್ರೆ ಅದರ ಬಳಿ ಚಾಕಲೇಟ್ ತಗೊಂಡು ಅದಕ್ಕೊಂದು ಮುದ್ದು ಕೊಟ್ಟು ಶುಭ ಹಾರೈಸಿ ಆಶಿರ್ವಧಿಸುತಿದ್ರು ಬೀದಿಯ ಎಲ್ಲರೂ. ನನಗೂ ಅಂಥದ್ದೇ ಸಂತೋಷ ಮೊನ್ನೆ ದಿನ. ನನ್ನನ್ನ ಹಾರೈಸಿ ಹರಸಿದ್ದು ಅದೆಷ್ಟು ಜನ.. ಅದೆಷ್ಟು ಫೋನ್ ಕಾಲ್ ಗಳು.. ಅದೆಷ್ಟು ಮೆಸೇಜುಗಳು, ವಾಟ್ಸ್ ಅಪ್ ನಲ್ಲಿ ಅಲ್ಲಿ ತನಕ ಮಾತಾಡಿಸದ ಅದೆಷ್ಟು ಜನರ ಹಾರೈಕೆಗಳು.. ಫೆಸ್ಬುಕ್ಕಿನ ಗೋಡೆಯ ಮೇಲೆ ಮುನ್ನೂರಕ್ಕೂ ಹೆಚ್ಚು ಜನರ ಶುಭಾಕಾಂಕ್ಷೆಗಳು.. ತುಂಬಿ ಹೋದ ಫೇಸ್ಬುಕ್ ಇನ್ ಬಾಕ್ಸ್. ಹೈಕು, ವೀ ಚಾಟು, ಲೈನ್, ವೈಬರ್ ಹೀಗೆ ಎಲ್ಲೆಲ್ಲಿ ಅಂದ್ರೆ ಅಲ್ಲಲ್ಲಿ ರೇಜಿಗೆ ಹುಟ್ಟಿಸುವಷ್ಟು ಶುಭಕಾಮನೆಗಳು ಅಂದು. ಇಷ್ಟು ವರ್ಷಗಳಲ್ಲೇ ಅಧಿಕ ಅನ್ನಿಸುವಷ್ಟು. ಅಷ್ಟು ಜನರ ಆಶೀರ್ವಾದ ಸುಮ್ಮ ಸುಮ್ಮನೆ ಸಿಗಬೇಕೆಂದರೆ ಹುಡುಗಾಟವಲ್ಲ. ನಾ ಯಾರಿಗೂ ಏನೂ ಅಲ್ಲದೆಯೂ, ಯಾರಿಗಾಗಿ ಏನೂ ಮಾಡದೆಯೂ ನಾನು ಅಷ್ಟು ಜನರಿಗೆ ಪ್ರೀತಿ ಪಾತ್ರ ಅಂತಾದ್ರೆ ಅದು ನನ್ನ ನಿಜ ಸಾಧನೆಯೇ ಹೌದು. 

ಮೊನ್ನೆ ಜನುಮದಿನದ ಶುಭಾಶಾಗಳ ಮಹಾ ಪೂರವನ್ನೇ ಗಮನಿಸಿದ ನಂತರ ಒಂದು ಸಾರ್ಥಕತೆ ಮಾತ್ರ ಮನಸು ತುಂಬಿ ಕೊಂಡಿದ್ದು ನಿಜ. ಜೀವನದಲ್ಲಿ ಈವರೆಗೆ ಅದೇನನ್ನೂ ಸಾಧಿಸದೆ ಹೋದ್ರೂ ನನ್ನನ್ನ ಪ್ರೀತಿಸುವ, ಆದರಿಸುವ, ಹಾರೈಸುವ ನೂರಾರು ಜನರನ್ನ ಸಂಪಾದಿಸಿ ಕೊಂಡಿದ್ದೇನೆ ಅನ್ನುವ ಸಂತೋಷ ಅದು. ಜನರ ಒಡನಾಟ ಮನಸ್ಸಿಗೆ ಕೊಡುವ ತೃಪ್ತಿಯೇ ಅಂತಹದ್ದೊಂದು ವಿಶಿಷ್ಟ ರೀತಿಯದ್ದು. ನಾನು ಅಭಿಮಾನಿಸುವ ಅದೆಷ್ಟು ಹಿರಿಯ, ಹೆಮ್ಮೆವೆತ್ತ ವ್ಯಕ್ತಿತ್ವಗಳಿಂದ ಹಿಡಿದು ನಾನು ಬಲು ಪ್ರೀತಿಸುವ ನನ್ನ ಬಹಳಷ್ಟು ಜನ ಎಲ್ಲರೂ ನನಗಾಗಿ ಹಾರೈಸಿದ್ದು ಆ ದಿನವನ್ನ ನನ್ನದೇ ದಿನವನ್ನಾಗಿ ಮಾಡಿತ್ತು. ಇಲ್ಲಿಯ ತನಕ ಕೇವಲ ನನ್ನ ಕೆಲವು ಗೀಚುವಿಕೆಗಷ್ಟೇ ವೇದಿಕೆಯಾಗಿದ್ದ ನನ್ನ ಫೇಸ್ಬುಕ್ ಗೋಡೆಯಂಗಳ ಸಾರ್ವತ್ರಿಕ ದಾಖಲೆ ಎಂಬಂತೆ ಅಷ್ಟು ಜನರ ಶುಭ ಹಾರೈಕೆಗಳಿಂದ ತುಂಬಿ ಹೋಗಿತ್ತು. ಸಣ್ಣ ಸಣ್ಣ ಸಂತೋಷವನ್ನೂ ಬಹಳ ಸಡಗರದಿಂದ ಆನಂದಿಸುವ ನನಗೆ ನನ್ನ ಕಾಲು ನೆಲದ ಮೇಲೆ ಇರದೇ ಇರಲು ಇಷ್ಟು ಸಾಕಿತ್ತು. 

ಟ್ರಾನ್ಸ್ ಫಾರ್ಮರ್ ಕೆಲಸ ನಿನ್ನೆಯಷ್ಟೇ ಯಶಸ್ವಿಯಾಗಿ ಮುಗೀತು. ನಾಲ್ಕೈದು ದಿನದ ನಂತರ ನಿನ್ನೆಯಷ್ಟೇ ಫೇಸ್ಬುಕ್ ತೆರೆದು ನೋಡಿದ್ದ ನಾನು ನಿಜಕ್ಕೂ ಮೂಕನಾಗಿದ್ದೆ ಹಾರೈಕೆಗಳನ್ನ ಕಂಡು. ಧನ್ಯವಾದಗಳನ್ನ ಹೇಳೋದು ಅದಕ್ಕೊಂದು ಕೃತಜ್ಞತೆ ಸಲ್ಲಿಸುವ ವಿಧಾನ ಅಲ್ಲವೇ ಅಲ್ಲ ಅನ್ನೋದು ನನ್ನ ಅಭಿಮತ. ಈ ಪ್ರೀತಿಯ ಋಣ ಅಷ್ಟು ಸುಲಭಕ್ಕೆ ತೀರಬಾರದಂಥದ್ದು ಕೂಡಾ. ನಿಮ್ಮೆಲ್ಲರ ಪ್ರೀತಿಯ ಋಣ ನನ್ನ ಮೇಲೆ ಯಾವತ್ತಿಗೂ ಹೀಗೆ ಇರಲಿ. ನಾನು ನಿಮ್ಮನ್ನ ಯಾವತ್ತಿಗೂ ಪ್ರೀತಿಸುವಂತೆ ಆ ಋಣ ನನ್ನನ್ನ ಆವರಿಸಿ ಕೊಳ್ಳಲಿ. 

Monday, 16 December 2013

ಕ್ಷಮೆ ಯಾಚಿಸುತ್ತಾ..

ಪುರುಷನ ಅತಿ ಒತ್ತಾಯದ ಮೇರೆಗೆ ಈ ಬರಹವನ್ನ ಅಳಿಸಿ ಹಾಕಿದ್ದೇನೆ.. ದಯವಿಟ್ಟು ಕ್ಷಮೆ ಇರಲಿ ಗೆಳೆಯರೇ.. 

Wednesday, 30 October 2013

ವ್ಯಾನಿಟಿ ಬ್ಯಾಗು..

ವ್ಯಾನಿಟಿ ಬ್ಯಾಗಿನಲ್ಲಿ ಏನೇನು ಇರಬಹುದು ಇಣುಕಿ ನೋಡದಿರಿ ಗಂಡಸರೇ..!! ಹಿಂಗನ್ನುವ ಹಾಡಿನಿಂದಲೇ ಶುರುವಾದ ನಾಟಕ ಅರೆರೆ ಅಂಥದ್ದೆನಿರಬಹುದು ನಾವು ನೋಡ ಕೂಡದ್ದು ಆ ವ್ಯಾನಿಟಿ ಬ್ಯಾಗಿನೊಳಗೆ ಅನ್ನುವ ಕುತೂಹಲವನ್ನ ಹುಟ್ಟಿಸಿಕೊಂಡು ಕಣ್ಣುಗಳನ್ನ ಮತ್ತಷ್ಟು ಅಗಲಿಸುತ್ತಾ ಹೋಯ್ತು.

ದಸರಾ ನೋ ದೀಪಾವಳಿ ನೋ.. ಸಿಕ್ಕ ಬೋನಸ್ಸು ಮತ್ತು ಎಕ್ಸ್ ಕ್ರೀಶಿಯ ಗಳ ಲೆಕ್ಖದ ಮೇಲೆ.. ಹಬ್ಬದ ಶಾಪಿಂಗ್ ಗೆ ಅಂತ ಹೋಗೋ ನಾವು ಹೆಣ್ಮಕ್ಕಳು ಆಸೆ ಪಟ್ರು ಅಂತ ಒಂದೊಳ್ಳೆ ಚೆಂದದ ವ್ಯಾನಿಟಿ ಬ್ಯಾಗನ್ನೇನೋ ಕೊಡಿಸಿ ಬಿಡಬಹುದು.. ಆದರೆ ಆ ನಂತರದಲ್ಲಿ ಆ ವ್ಯಾನಿಟಿ ಬ್ಯಾಗಿನೊಳಗೊಂದು ಅದೆಂಥ ಅದ್ಭುತ ಲೋಕವನ್ನ ಹೊಂದಿರುತ್ತಾರೆ ಈ ಹೆಣ್ಣು ಮಕ್ಕಳು ಅನ್ನೋ ವಿಚಾರಕ್ಕೆ ಅಚ್ಚರಿಯ ಜೊತೆಗೆ ಅಸೂಯೆಯೂ ಆಯ್ತು. ಹಾಗೆ ಅಸೂಯೆ ಪಡುವಂತೆ ಮಾಡಿದ್ದು ನಿನ್ನೆಯ ವ್ಯಾನಿಟಿ ಬ್ಯಾಗಿನ ದರ್ಶನ.

ಜೋಳಿಗೆಯ ಹಾಗಿನ ಬ್ಯಾಗ್ ಒಂದನ್ನ ಹೆಗಲಿಗೆ.. ಬಗಲಿಗೆ ತಗುಲಾಕಿಕೊಂಡೆ ಓಡಾಡುವ ಅಸಂಖ್ಯ ಗಂಡು ಮಕ್ಕಳನ್ನ ಕೂಡಾ ನಾವು ಕಾಣ ಬಹುದಾದರೂ ಈ ವ್ಯಾನಿಟಿ ಬ್ಯಾಗಿನೊಳಗಿನಷ್ಟು ದೊಡ್ಡ ಪ್ರಪಂಚ ಬಹುಷಃ ಆ ಜೋಳಿಗೆಯೊಳಗೆ ಇರಲಾರದು. ನಮಗೋ ಇದ್ದರೆ ಎರಡು ಪುಸ್ತಕ.. ಕನ್ನಡಕದ ಸೂಟ್ ಕೇಸು.. ಹಳೆಯ ಡೈರಿ.. ಅರ್ಧ ಖಾಲಿಯಾದ ನೀರಿನ ಬಾಟಲಿ.. ಎರಡೋ ಮೂರೋ ಸಿಗರೆಟ್ ಉಳ್ಳ ಪ್ಯಾಕೆಟ್.. ಒಂದೆರಡು ಮಾತ್ರೆ.. ಆಪ್ತರ ಎರಡು ಫೋಟೋ.. ಎರಡ್ಮೂರು ಮುರುಕು ಪೆನ್ನುಗಳ ಹೊರತಾಗಿ ಬೇರೆ ಏನನ್ನಾದರೂ ಇರಿಸಿ ಕೊಳ್ಳೋ ಜಾಯಮಾನವೂ ಹುಡುಗರದ್ದಲ್ಲ. ಆದರೆ ವ್ಯಾನಿಟಿ ಬ್ಯಾಗಿನೊಳಗಿನ ಹೆಣ್ಣು ಮಕ್ಕಳ ಪ್ರಪಂಚ ಮತ್ತೊಂದು ಬ್ರಹ್ಮಾಂಡ. 

ಚೆಂದದ ಹುಡುಗೀರು.. ಅಂದದ ಹುಡುಗರು ಅವರಿಗೆಲ್ಲ ಸಾರಥಿಯಂತೆ ನಡುವಯಸ್ಸಿನ ಹೆಣ್ಣು ಮಗಳೊಬ್ಬರು.. ವೈದೇಹಿಯವರ ಅಷ್ಟು ಕವನಗಳನ್ನ ನಿರರ್ಗಳವಾಗಿ ಕಂಠ ಪಾಠಮಾಡಿ ಸುಶ್ರಾವ ಕಂಠದಲಿ ಒಕ್ಕೊರಲಿನಿಂದ ಆ ರಂಗಗೀತೆಗಳು ಈಗಲೂ ಕಿವಿಯಲ್ಲಿ ಗುಯ್ ಗುಡುವಷ್ಟು ಸುಶ್ರಾವ್ಯವಾಗಿ ಹಾಡಿ ಆಡುತ್ತ ನಾಟಕವನ್ನ ಮತ್ತಷ್ಟೂ ಹತ್ತಿರವಾಗಿಸಿದರು. ಒಂದೊಂದು ಮಣಿಯೂ ಸೇರಿ ಅಷ್ಟು ಚೆಂದಗೆ ಕಾಣುವ ಸುಂದರ ಮಣಿ ಹಾರದಂತೆ.. ಒಬ್ಬೊಬರ ದನಿಯೂ ಮಿಳಿತವಾಗಿ ರಂಗಗೀತೆಗಳು ಅಷ್ಟು ಚೆಂದಗೆ ಮೈದಳೆದಿದ್ದವು.

ಹಾಸ್ಯ.. ಲಾಸ್ಯ.. ಲಜ್ಜೆ.. ವಿನೋದ.. ನೋವು.. ನಲಿವು.. ವಿರಹ.. ಸರಸ.. ಆತುರ.. ಕಾತುರ.. ದುಗುಡ.. ದುಮ್ಮಾನ.. ಕನಸು.. ಕಲ್ಪನೆ.. ಕಾಯುವಿಕೆ.. ಧೇನಿಸುವಿಕೆ.. ಪ್ರೇಮಿಸುವಿಕೆ.. ರಮಿಸುವಿಕೆ.. ಓಲೈಸುವಿಕೆ.. ಆರೈಕಿಸುವಿಕೆ.. ಅಬ್ಬಾ ಇವನ್ನೆಲ್ಲಾ ಒಳಗೊಂಡಂತೆ ಮತ್ತೂ ಅದೆಷ್ಟು ಭಾವಗಳನ್ನ ಮುಖದೊಳಗೆ.. ಅಭಿನಯದೊಳಗೆ ಅದೆಷ್ಟು ಸಹಜವೆಂಬಂತೆ ತೋರಿಸಿ ಬಿಟ್ಟರು ಅವರೆಲ್ಲ. ಅವರುಗಳ ಆಟವನ್ನ ಮೆಚ್ಚದೆ ಉಳಿಯಲು ಸಾಧ್ಯವೇ ಇಲ್ಲ ಅನ್ನುವ ಶಾಸನ ಬರೆಸಿಡಬಹುದು ಅನ್ನುವಂಥ ವಿಶ್ವಾಸದ ನುಡಿಗಳನ್ನ ಯಾರ ಮುಂದಾದರೂ ನಂಬಿ ನುಡಿಯಬಹುದಾದಂಥ  ಮನಸ್ಥಿತಿಯನ್ನ ತಂದೊಡ್ಡಿ ಬಿಟ್ಟರು.

ಒಂದುಕಡೆ ದೃಶ್ಯ ಸಿರಿ.. ಮತ್ತೊಂದು ಕಡೆ ಶ್ರಾವ್ಯ ಸಿರಿ.. ಇವೆರಡೂ ಸೇರಿದ ಇದೇ ನಾಟಕ ಒಟ್ಟಾರೆ ಐಸಿರಿ. ಆ ಕವನಗಳನ್ನ ಬರಿಯ ಹಾಳೆಗಳ ಮೇಲೆ ಓದಿಕೊಳ್ಳುವಾಗ ಅದೇನು ಮಹಾ.. ಅದೇನು ಕವನ ಅನಿಸಬಹುದು.. ಕೆಲವು ಕವನಗಳು ಅನಿಸಿದ್ದೂ ಇದೆ. ಆದರೆ ನಾಟಕದೊಳಗೆ ಸಂಧರ್ಭಕ್ಕನುಸಾರವಾಗಿ, ಇಂಪಾದ ರಾಗದೊಂದಿಗೆ ಅವು ಹೊರಬರುವಾಗ ಆ ಸನ್ನಿವೇಶದ ಸೂಕ್ಷ್ಮತೆಯನ್ನ ಎಷ್ಟು ಸರಳವಾಗಿ ಪರಿಚಯಿಸ್ತಾ ಹೋಗ್ತಿದೆಯಲ್ಲ ಈ ಕವನಗಳು ಅನ್ನಿಸುತ್ತವೆ. ಪ್ರಥಮ ಪೀಯೂಸಿ ಓದುವಾಗ ಇದ್ದ ಅಡುಗೆ ಮನೆಯ ಹುಡುಗಿ ಕವನ ಅಲ್ಲಿ ನೀರಸವೆನಿಸಿ ಇಲ್ಲಿ ಆಪ್ತವಾಗಿದ್ದೇ ಬೇರೆ ತರಹ. ಅಷ್ಟಕ್ಕೇ ಅಷ್ಟೂ ಕವನಗಳು ಇಷ್ಟವಾಗುತ್ತವೆ.. ಆಪ್ತವಾಗುತ್ತವೆ. ಗಂಗೆ ಗೌರಿಯರ ಕಾಲದಿಂದ.. ರಾಜ ಮಹಾರಾಜರುಗಳಿದ್ದ ಕಾಲದಿಂದ.. ಆದಿಕಾಲದ ಘಟ್ಟದಿಂದ.. ಪ್ರಸ್ತುತ ಜಗತ್ತಿನ ಹೆಣ್ಣುಮಕ್ಕಳ ಪ್ರಪಂಚದ ಸಣ್ಣ ವಿಶ್ವರೂಪ ಈ ವ್ಯಾನಿಟಿ ಬ್ಯಾಗು ಅನ್ನಬೇಕು. ಆ ವಿಶ್ವರೂಪವನ್ನ ಮತ್ತೂ ಅದ್ಭುತವೆಂಬಂತೆ ಕಾಣಿಸಿ ಕೊಟ್ಟದ್ದು ಎಲ್ಲರ ಲವಲವಿಕೆಯ ಮತ್ತು ಮನೋಜ್ಞ ಅಭಿನಯ. 

ಕೆಲವೊಂದು ಸನ್ನಿವೇಶಗಳು.. ಕೆಲವೊಂದು ಸಾಲುಗಳು ಮನಸ್ಸಿನೊಳಗೆ ಹಾಗೆ ಅಚ್ಚುಹಾಕಿ ಕೂತು ಬಿಟ್ವು. 

* ಮೂರ್ ಜಗವ ಸುತ್ತಿ ದಣಿದು ಬಂದ ಶಿವನ ಒಲಿಸಿ ಕಾಲೊತ್ತುವ ನೆಪದಲ್ಲಿ ಶಿವನ ಕಾಲ್ ಧೂಳ ಮುಟ್ಟಿ.. ಯಾರ ಮನೆ ಹೊಸ್ತಿಲ ತುಳಿದು ಬಂದಿರಬಹುದು ಇವನು ಎನ್ನುವ ತುಂಟ ಸಂಶಯವನ್ನಿಟ್ಟುಕೊಂಡು ಅವನನ್ನ ಸ್ನಾನ ಮಾಡಿಸುವಾಗ ಗೌರಿಯಾಡುವ ಕೊಂಕಿನ ನುಡಿಗಳು.

* ಮನೆಯ ಹೊಸ್ತಿಲೂ ದಾಟದ ಅಮ್ಮ ಈಗ ದಾರಿಯಿಲ್ಲದ ದಾರಿಯನು ಅರಸಿ ಹೊರಟಿದ್ದಾಳೆ.. ಅಮ್ಮನಿಗೆ ಮುಕ್ತಿ ಸಿಗಬಾರದು ಭೂಮಿ ಬರಡಾಗುತ್ತದೆ.. ಅಮ್ಮ ಮತ್ತೆ ಹುಟ್ಟಿ ಬರಬಾರದು ಸ್ವರ್ಗ ಬರಡಾಗುತ್ತದೆ ಎನ್ನುವ ಸೂಪರ್ ಸಾಲುಗಳ ದೃಶ್ಯ.

* ಸ್ವಯಂ ವರದಲಿ ತನಗಿಷ್ಟವಾಗುವ ಹಾಗಿನ ರಾಜಕುಮಾರನ ಕುರಿತಾಗಿ ರಾಜಕುಮಾರಿ ಆಡುವ ಸ್ವಗತಗಳು.. ಕಡೆಗೆ ನಾನು ಅಮ್ಮನಂತಾಗಲಾರೆ ಅನ್ನುವ ಅವಳ ಸ್ವಾಭಿಮಾನ.

* ಮದುವೆ ಮನೆ ಸಂಭ್ರಮ.. ಸರಸ.. ಸಲ್ಲಾಪ.. ನಾದಿನಿಯರ ಕನಸು ಚೆಲ್ಲಾಟ.. ಗಂಡ ಹೆಂಡಿರ ಸರಸ ಸಲ್ಲಾಪದ ಬದುಕು ಕೊನೆ ಕೊನೆಗೆ ಹೇಗೆ ಬದಲಾಗಿಬಿಡುವ ಅವರ ವ್ಯಥೆಯ ಬದುಕು.

* ಅಡುಗೆ ಮನೆ ಹುಡುಗಿಯ ಕನಸುಗಳು.. ಕನವರಿಕೆಗಳು..

* ಸೂರ್ಯನನ್ನ ಪ್ರೀತಿಸುವ ಹುಡುಗಿ.. ಅವನ್ನನ ಕಂಡು ದೃಷ್ಟಿ ಸುಟ್ಟು ಕೊಂಡಳು.. ಮನಸಿತ್ತು ದೇಹ ಸುಟ್ಟು ಕೊಂಡಳು.. ಅವನ್ನ ಕೂಗಿ ಕರೆದು ಉಸಿರ ಸುಟ್ಟು ಕೊಂಡಳು.. ಕೊನೆಗೆ ಯಾವ ಆಮಿಷಕ್ಕೂ ಒಳಗಾಗದೆ ನಿರಂತರ ಅವನನ್ನು ಪ್ರೀತಿಸುತ್ತಾ.. ಬ್ರಹ್ಮಾಂಡಕ್ಕಿಂತ ಅವನ ಬೆಲೆ ದೊಡ್ಡದು.. ಅವನನ್ನ ಪ್ರೀತಿಸುವ ನನ್ನ ಬೆಲೆ ಅವನಿಗಿಂತ ದೊಡ್ಡದು.. ಹೆಚ್ಚಿಗೆ ಸತಾಯಿಸಿದೆಯೋ ಹಪ್ಪಳ ಒಣಗಿಸಲು ಕೂರಿಸುತ್ತೇನೆ ಅನ್ನುವ ಭಾವವೂ ಎಲ್ಲವೂ ಆ ಹೆಣ್ಮನಸಿನ  ಪ್ರೀತಿಯನ್ನ ಅದೆಷ್ಟು ಎತ್ತರಕ್ಕೇರಿಸಿ ತೋರಿಸುತ್ತವೆ.

* ಬೆರಣಿ ತಟ್ಟುವ ಹುಡುಗಿ ಹುಡುಕುವ ಮುರುಕು ಚಂದಿರನ ಚೂರುಗಳು. 

ಹೀಗೆ ಕಾಡುವ ಅದೆಷ್ಟು ಸನ್ನಿವೇಶಗಳು. ಗೀಚುತ್ತಾ ಹೋದರೆ ಅಷ್ಟೂ ಸನ್ನಿವೇಶಗಳ ಕುರಿತಾಗಿ ಗೀಚಬಹುದು. ಮಧುರ ಸಂಗೀತ ಸಂಯೋಜನೆ.. ವಾದ್ಯ ಸಂಯೋಜನೆ.. ಕೋರೈಸುವ ಬೆಳಕು.. ಸುಂದರ ವ್ಯಾನಿಟಿ ಬ್ಯಾಗಿನ ಹಿನ್ನಲೆಯುಳ್ಳ ಈ ನಾಟಕ ಬಹುಕಾಲ ನೆನಪಿನಲ್ಲಿ ಉಳಿಯುವಂಥಾಯ್ತು. 

ಬಹಳ ಕಾಲದ ನಂತರ ಹೀಗೊಂದು ನಾಟಕವನ್ನ ನೋಡಿದ್ದು. ಅಕ್ಷರ ಸಹ ಒಂದು ಗಂಟೆಯಷ್ಟು ಕಾಲ ನನ್ನನ್ನೇ ಕಳೆದು ಹಾಕಿತ್ತು ಲೋಕದ ಪರಿಮಿತಿಯಿಂದ. ಸರಿಯಾಗಿ ಹತ್ತು ವರ್ಷದ ಹಿಂದೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನೋಡಿದ್ದು ನಾಟಕವನ್ನ. ಅದೇನು ಹೇಳಿದರೂ ಸಿನಿಮಾಗಳಿಗಿಂತ ನಾಟಕ ಮನ ಮುಟ್ಟುವ ಪರಿ ಭಿನ್ನ ಮತ್ತು ಅತಿ ಆಪ್ತ ಅನ್ನುವುದು ಸತ್ಯ. ಅಷ್ಟು ಚೆಂದದ ಹುಡುಗಿಯರು.. ಎಲ್ಲರ ಹೆಸರನ್ನೂ ಜ್ಞಾಪ ಇಟ್ಟುಕೊಳ್ಳಲಾಗಲಿಲ್ಲವಲ್ಲ ಅನ್ನೋ ಕೊರಗಿದೆ.. ಆದರು ಒಂದು ಹುಡುಗಿಯ ಹೆಸರು ತುಂಬಾ ಚೆನ್ನಾಗಿ ನೆನಪಿದೆ ಆದರೆ ಹೇಳಲಾರೆ. ಮದುಮಗನ ರೂಪದಲ್ಲಿ ನಮ್ಮ ನಾಗರಾಜ್ ಸೋಮಯಾಜಿ ಸೂಪರ್.. ಶಿವನ ವೇಷಧಾರಿಯೂ ಇಷ್ಟವಾದರು.. ಅವರ ಶಾರೀರ ಕೂಡಾ ಅಷ್ಟೇ ಮೋಹಕ. ನಿರ್ದೇಶಿಸಿರುವ ಮಂಗಳ ಮೇಡಂ ಅವರಿಗೊಂದು ಅಭಿನಂದನೆ ಹೇಳಲೇಬೇಕು. ನಾಟಕ ಅದೆಷ್ಟು ಸಮ್ಮೋಹಿಸಿತ್ತು ಅಂದ್ರೆ ನಂ ಹತ್ರ ಮೊಬೈಲ್ ಇರೋದು ಕೂಡಾ ಮರೆತು ಹೋಗಿ ಒಂದೆರಡು ಫೋಟೋಗಳನ್ನಾದ್ರು ತೆಗೆದು ಕೊಳ್ಳಬೇಕಿತ್ತು ಅನ್ನುವ ಕನಿಷ್ಠ ಜ್ಞಾನವೂ ಮಲಗಿ ಬಿಟ್ಟಿತ್ತು.

ಒಟ್ಟಾರೆ ಒಂದು ಸುಂದರ ಸಂಜೆ.. ಒಂದಷ್ಟು ಸುಂದರ ವ್ಯಕ್ತಿತ್ವಗಳ ಜೊತೆ. ನಾಟಕಕ್ಕೆ ಕರೆ ನೀಡಿದ ರೂಪ ಮೇಡಂ.. ಜತೆಗೂಡಿ ನಾಟಕ ಮತ್ತಷ್ಟೂ ಆಪ್ತವಾಗುವಂತ ಕೆಲವು ವಿಚಾರಗಳನ್ನ ತಿಳಿಸಿಕೊಟ್ಟ ಕುಮುದಕ್ಕ.. ಕರೆದ ಒಡನೆ ಜೊತೆಗೆ ಬಂದ ಮಹೇಶಣ್ಣ.. ಕೆಲವು ಸಂವೇದನೆಗಳನ್ನ ಆಪ್ತವಾಗಿ ಮನವರಿಕೆ ಮಾಡಿಕೊಟ್ಟ ಕಿರಣ್ ವಟಿ.. ಮೊದಲ ಭೇಟಿಯಲ್ಲೇ ಹುಷಾರ್ ಹುಡುಗಿ ಇದು ಅನ್ನಿಸಿದ ಶ್ರೀದೇವಿ.. ಅವರ ಗೆಳತಿ ರಮ್ಯಶ್ರೀ.. ಹೊಸ ಪರಿಚಯ ದತ್ತರಾಜು.. ಫೇಸ್ಬುಕ್ ನಲ್ಲಿ ಅದಾಗಲೇ ನೋಡಿದ್ದರೂ ಪ್ರತಕ್ಷವಾಗಿ ಕೆಲವರನ್ನ ನೋಡಿದಂತಾಗಿದ್ದು.. ಬಿಸಿ ಬಿಸಿ ಕಾಫಿ ವಿಥ್ ಮಂಗಳೂರು ಬೋಂಡ. ಒಂದು ಸಾರ್ಥಕ ಬುಧವಾರದ ಸಂಜೆ ನಿನ್ನೆಯದ್ದು.

ಮಿಸ್ ಮಾಡಿಕೊಂಡವರು ಖಂಡಿತ ಕೆಲವೊಂದು ಸಂಭ್ರಮಗಳನ್ನ ಸಂತಸಗಳನ್ನ ಮಿಸ್ ಮಾಡಿಕೊಂಡದ್ದು ನಿಜ. ಮತ್ತೊಮ್ಮೆ ಈ ನಾಟಕ ಎಲ್ಲಿಯಾದರೂ ಆಯೋಜಿಸಿದ್ದಾದರೆ ಖಂಡಿತ ಬಿಡಬೇಡಿ ಅನ್ನುವ ಕಿವಿಮಾತು ನನ್ನದು. 

ಚಿತ್ರ ಕೃಪೆ: ಕುಮುದಕ್ಕ 

Monday, 29 July 2013

"ಮರಿಯಾನ್" ಸಾವನ್ನು ಗೆದ್ದವನೊಬ್ಬನ ಕಥೆ..

ಒಂದು ಸಿನಿಮಾ ನಮಗ್ಯಾಕೆ ಇಷ್ಟ ಆಗತ್ತೆ ಅಂತ ಪೂರ್ತಿಯಾಗಿ ಹೇಳಲಿಕ್ಕೆ ಸಾಧ್ಯವೇ..?? ಸಾಧ್ಯ ಆದರೂ ಆಗ್ಬೋದೇನೋ.. ಆದ್ರೆ ಹಾಗೆ ಒಂದು ಸಿನಿಮಾವನ್ನ ಅಚ್ಚುಕಟ್ಟಾಗಿ ಯಾವ ಅಳುಕಿಲ್ಲದೆ.. ಯಾವ ಕೊಂಕಿಲ್ಲದೆ ವಿಮರ್ಷಣೆ ಮಾಡೋದು ಕೂಡಾ ಒಂದು ಕಲೆಯೇ. ಸಿನಿಮಾ ಮೇಲಿನ ಅಗಾಧವಾದ, ಅನನ್ಯವಾದ, ಅದ್ಭುತವಾದ ಪ್ರೀತಿಯೊಂದು ಆ ಕಲೆಯನ್ನ ಸಿದ್ಧಿಸಿ ಕೊಡಬಹುದು. ಒಂದು ಸಿನಿಮಾ ನಮಗಿಷ್ಟ ಆಗೋದು ಕೂಡ ಹಲವೊಂದು ಕಾರಣಗಳಿಂದಲೇ.. ನಟಿಸಿದ ನಟರ ಮೇಲಿನ ಅಭಿಮಾನದಿಂದಲೋ.. ಕಥೆಯ ಬಲದಿಂದಲೋ.. ಸುಮಧುರ ಸಂಗೀತದಿಂದಲೋ.. ಕಣ್ಮನ ಸೆಳೆಯುವ ದೃಶ್ಯಾವಳಿಗಳಿಂದಲೋ.. ಬಳಸಿದ ತಂತ್ರಜ್ಞಾನದಿಂದಲೋ.. ನಿರ್ದೇಶಕನ ವರ್ಚಸ್ಸಿನಿಂದಲೋ.. ಒಟ್ಟಾರೆ ಯಾವುದೋ ಒಂದು ಕಾರಣಕ್ಕೆ ಒಂದು ಸಿನಿಮಾ ನಮ್ಮನ್ನ ಸೆಳೀತಾ ಇರತ್ತೆ. ಬಹುಶಃ  ನಿರೀಕ್ಷೆ ಇಲ್ಲದೆ ಅದ್ಯಾವ ವ್ಯಕ್ತಿಯೂ ಕೂಡಾ ಒಂದು ಸಿನಿಮಾವನ್ನ ನೋಡಲಾರ. ಸಿನಿಮಾದಿಂದ ಒಂದು ನೀತಿ.. ಬದುಕುವೆಡೆಗಿನ ಒಂದು ಛಲ.. ಜೀವನ ಪ್ರೀತಿ.. ಕೆಲವೊಂದುಗಳ ಕಲಿಕೆ.. ಇದ್ಯಾವುದೂ ಇಲ್ಲದೆ ಹೋದರು ಕೂಡಾ, ಕೇವಲ ಒಂದಿಷ್ಟು ಹೊತ್ತಿನ ಮನರಂಜನೆಯ ದೃಷ್ಟಿಯಿಂದಾದರೂ ಒಂದು ಸಿನಿಮಾವನ್ನ ಹಾಗೆ ಇಷ್ಟ ಪಟ್ಟು ನೋಡ್ತೇವೆ. 

ತಮಿಳಿನ ಬಹುಪಾಲು ಚಿತ್ರಗಳು ಹೀರೋಯಿಸಂ ಅನ್ನ ಧಾರಾಳವಾಗಿ, ಬಹು ದುಬಾರಿಯಾಗಿ ತೋರಿಸುವಂತಹ ಸಿನಿಮಾಗಳೇ. ಕಿವಿ ಹರಿದು ಹೋಗುವ ಅಬ್ಬರತೆ.. ಎದೆ ನಡುಗುವ ಹಾಗೆ ಸಾಹಸ.. ಚಪ್ಪಾಳೆ ಗಿಟ್ಟಿಸಿಕೊಳ್ಳುವ ಪಂಚ್ ಡೈಲಾಗ್ ಗಳಿಂದಲೇ ಹೀರೋಗೊಂದು ವಿಚಿತ್ರ ಮ್ಯಾನರಿಸಂ ಮತ್ತು ಅವನೆಂದರೆ ಅವನ ಕುರಿತಾಗಿ ಪ್ರೇಕ್ಷಕರಲ್ಲಿ ಒಂದು ಖಾಯಂ ಭ್ರಮಾಲೋಕವನ್ನೇ ಸೃಷ್ಟಿಸಿ ಬಿಡುವ ಪರಂಪರೆ ಬಹಳ ಹಿಂದಿನಿಂದಲೂ ಇದೆ. ಇಲ್ಲಿನೊಬ್ಬ ನಟನ ಚಿತ್ರವೆಂದರೆ ಅದು ಹೀಗೆ ಇರುತ್ತದೆ ಅನ್ನುವುದನ್ನ ಯಾರು ಬೇಕಾದರೂ ಆ ಸಿನಿಮಾದ ಹತ್ತಿರ ಹತ್ತಿರಕ್ಕೆ ಊಹಿಸ ಬಹುದಾದಂತ ಟ್ರೆಂಡ್ ಇಲ್ಲಿನ ಒಬ್ಬೊಬ್ಬ ನಟನದ್ದು. ಇದು ತಮಿಳಿನಲ್ಲಿ ಮಾತ್ರವಲ್ಲ ಬಹುಪಾಲು ಎಲ್ಲಾ ಭಾಷೆಯ ಚಿತ್ರಗಳಲ್ಲೂ ಈ ಸಂಸ್ಕೃತಿ ಕಾಣ ಸಿಗಬಹುದು. ಆದರೆ ತಮಿಳಿನಲ್ಲಿ ಇಂಥಾ ಹೀರೋ ಸಿನಿಮಾವೆಂದರೆ ಹೀಗೆಯೇ.. ಇಂಥಾ ನಿರ್ದೇಶಕನ ಸಿನಿಮಾವೆಂದರೆ ಹೀಗೆಯೇ ಅಂತ ಸಾಧಾರಣ ಅಭಿಮಾನಿ ಕೂಡಾ ಸರಾಸರಿಯಾಗಿ  ಸರಿಯಾಗಿ ನಿರ್ಧರಿಸಬಲ್ಲ. ಅಂಥದ್ದೊಂದು ಟ್ರೆಂಡ್ ಇಲ್ಲಿನ ಬಹುಪಾಲು ಖ್ಯಾತ ನಟ ಮತ್ತು ನಿರ್ದೇಶಕರದ್ದು. ತಮ್ಮ ಚೌಕಟ್ಟನ್ನ ಮೀರಿದ ಪ್ರಯೋಗಾತ್ಮಕ ಚಿತ್ರಗಳನ್ನ ಅಭಿಮಾನಿಗಳೂ ಕೂಡಾ ಅಪೇಕ್ಷಿಸುವುದಾದರೆ ಅದು ಒಂದು ಹೊಸಬರ ಚಿತ್ರವಾಗಿರಬೇಕಷ್ಟೇ. 

ತಮಿಳಿನಲ್ಲಿ ದನುಶ್ ಕೂಡಾ ಹಾಗೊಬ್ಬ ಟ್ರೆಂಡ್ ನಟ. ಅವನ ಚಿತ್ರಗಳೆಂದರೆ ಬೇರೆ ನಟರಿಗಿಂತ ಯಾವಾಗಲೂ ಭಿನ್ನವೇ. ನಟನೆಗೆ ಸವಾಲು ಅನ್ನಿಸುವಂಥ ಪಾತ್ರಗಳನ್ನೇ.. ವಿಭಿನ್ನ ರೀತಿಯ ಕತೆಗಳನ್ನೇ ಆಯ್ಕೆ ಮಾಡಿಕೊಳ್ಳುವ ಮತ್ತು ಅಂತ ಸಿನಿಮಾಗಳಿಂದಲೇ ಜನ ಜನಿತನಾಗಿರೋ ನಟ ದನುಶ್. ತಮಿಳು ಚಿತ್ರರಂಗದಲ್ಲಿ ಚಾಲ್ತಿಯಲ್ಲಿರಲು ಸೂಪರ್ ಸ್ಟಾರ್ ರಜನಿಕಾಂತ್ ರ ಅಳಿಯ ಅನ್ನುವ ಅದ್ಯಾವ influence ಕೂಡಾ ಇಲ್ಲದೆ ತಾನಾಗೇ ಸ್ವಂತ ಪ್ರತಿಭೆ ಇಂದ ಬೇರೂರಿ ನಿಂತ ಅಪ್ಪಟ ಪ್ರತಿಭೆ ದನುಶ್. ತನ್ನ ಸಿನಿಮಾಗಳ ಮೂಲಕ ತನ್ನದೇ ಆದ ಒಂದು ಟ್ರೆಂಡ್ ಮತ್ತು ಚಿತ್ರರಂಗದ ಅಷ್ಟೊಂದು ಜನ ಪ್ರಖ್ಯಾತರ ನಡುವೆಯೂ ತನ್ನದೇ ಆದ ಒಂದು ಸಶಕ್ತ ಅಭಿಮಾನಿಗಳ ಬಳಗವನ್ನ ಸಂಪಾದಿಸಿಕೊಂಡ ಕೀರ್ತಿ ಇವನದ್ದು. ಜೀನ್ಸ್ ಪ್ಯಾಂಟ್, ಟೀ ಶರ್ಟ್ ತೊಟ್ಟರೆ ನಗರದ ಯಾವ handsome ಹುಡುಗನಿಗೂ ಕಮ್ಮಿ ಇಲ್ಲದ ವರ್ಚಸ್ಸು ಬರಿಸಿಕೊಳ್ಳೋ ದನುಶ್.. ಪಂಚೆ ಬನಿಯನ್ ತೊಟ್ಟರೆ ನಮ್ಮದೇ ಹಳ್ಳಿಯ, ನಮ್ಮದೇ ಪಕ್ಕದ ಮನೆಯ, ನಮ್ಮಗಳ ಜೊತೆಯೇ ಮಣ್ಣು ಹೊರುವ ಹುಡುಗನ ಹಾಗೆ ಸ್ವಾಭಾವಿಕವಾಗಿ ಕಾಣಿಸಿಕೊಳ್ಳುವ ಮತ್ತೊಂದು ವರ್ಚಸ್ಸು ಅವನದ್ದು. 

ಮೊದ ಮೊದಲು ತೀರಾ ಸೈಕಿಕ್ ಅನ್ನಿಸಿಕೊಳ್ಳುವಂತೆ ಭಾಸವಾಗ್ತಿದ್ದ ಸಿನಿಮಾಗಳನ್ನೇ ಮಾಡುತ್ತಿದ್ದ ದನುಶ್ ನಟನೆಯಲ್ಲಿ ಅದ್ಯಾವಾಗ ಪಳಗಿದ ಅನ್ನುವುದನ್ನ ಊಹಿಸುವ ಮೊದಲೇ ಒಬ್ಬ ಅದ್ಭುತ ನಟನಾಗಿ ನಿಂತ ಪರಿ ಆಶ್ಚರ್ಯ ಮೂಡಿಸುತ್ತದೆ. ಅವನ ಬಹುಪಾಲು ಎಲ್ಲಾ ಸಿನಿಮಾವನ್ನು ನೋಡಿರುವ ನಾನು ಸ್ವಲ್ಪ ಮಟ್ಟಿಗೆ ಅವನ ಅಭಿನಯವನ್ನ ಇಷ್ಟ ಪಡುತ್ತಿದ್ದುದು ಕೂಡಾ ಹೌದು. ಆಡುಗಲಾಂ ಅನ್ನುವ ಚಿತ್ರದಲ್ಲಿನ ಒರಟು ಹಳ್ಳಿ ಹೈದನೊಬ್ಬನ ಪಾತ್ರವನ್ನ ಜೀವ ಕಟ್ಟಿ ಹಾಗೆ ಮೈದುಂಬಿ ನಟಿಸಿದ್ದರಿಂದಲೇ ಅವನಿಗೆ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದದ್ದು. ತೀರಾ ಅವನ ಇತ್ತೀಚಿನ ಚಿತ್ರಗಳಾದ ಮಯಕ್ಕಂ ಎನ್ನ.. ತ್ರೀ.. ಮರಿಯಾನ್ ಚಿತ್ರಗಳಲ್ಲಿ ಅವನ ಅದ್ಭುತ ನಟನೆ ದಾರ್ಷ್ಟ್ಯಕ್ಕೆ ದೊರಕುತ್ತದೆ.

ತಮಿಳು ಗೆಳೆಯನೊಬ್ಬನ ಸಣ್ಣ ಮೆಚ್ಚುಗೆಯ ವಿಮರ್ಶೆ ಇಂದ ನಾನು ಮರಿಯಾನ್ ಚಿತ್ರವನ್ನ ನೋಡಲು ಹೋಗಿದ್ದು. ಆ ಚಿತ್ರದ ಪ್ರಮುಖ ಆಕರ್ಷಣೆಯೇ ದನುಶ್ ಮತ್ತು ಪಾರ್ವತಿಯವರ ನಟನೆ. ಎ ಆರ್ ರೆಹಮಾನ್ ರ ಅದ್ಭುತ ಸಂಗೀತ ಕೂಡಾ ಚಿತ್ರದ ಪ್ರಮುಖ ಅಂಶಗಳಲ್ಲೊಂದು. ಅಷ್ಟು ಸುಲಭಕ್ಕೆ ಎಲ್ಲಾ ವರ್ಗದ ವೀಕ್ಷಕರಿಗೂ ಇಷ್ಟವಾಗಬಲ್ಲ ಚಿತ್ರವಲ್ಲ ಅದು. ಆದರೆ ನೋಡಿದ ಪ್ರತಿಯೊಬ್ಬನ ಮನಸಲ್ಲೂ ಒಂದಷ್ಟು ಕಾಲ ಕಾಡುವ ಚಿತ್ರವಾಗಿ ಉಳಿದುಕೊಳ್ಳುವುದು ಅದರ ಹಿರಿಮೆಯಲ್ಲೊಂದು. ಚಿತ್ರದ ನಿಧಾನ ಗತಿ ಚಿತ್ರದ ಹಿನ್ನಡೆಯಲ್ಲಿ ಪ್ರಮುಖ ಅಂಶ. ಕಥೆಗೆ ಆ ನಿಧಾನ ಗತಿ ಅವಶ್ಯಕವಾದರೂ ಅಷ್ಟೊಂದು ತಾಳ್ಮೆಯನ್ನ ಎಲ್ಲಾ ವರ್ಗದ ಪ್ರೇಕ್ಷಕರಿಂದಲೂ ನಿರೀಕ್ಷೆ ಮಾಡುವುದು ತಪ್ಪು. ಈ ಚಿತ್ರ ಹಾಗೆ ಬಹುಪಾಲು ಜನರಿಗೆ ಇಷ್ಟವಾಗದೇ ಉಳಿಯೋದು ಕೂಡ ಅದೇ ಕಾರಣಕ್ಕೆ. ಅದರ ಹೊರತಾಗಿ ಒಂದೊಳ್ಳೆ ಸಿನಿಮಾ ಮರಿಯಾನ್. 

ಮರಿಯಾನ್ ಅಂದರೆ ಸಾವಿಲ್ಲದವನು ಅಂತ ಅರ್ಥ. ಕಡೆಗೆ ಈ ಚಿತ್ರದ ಅಂತ್ಯದ ಮಟ್ಟಿಗೆ ಅದು ತಾತ್ಕಾಲಿಕ ನಿಜವೂ ಅನ್ನಿಸುತ್ತದೆ. ನೀರೋಡಿ ಅನ್ನುವ ಕಡಲ ತಡಿಯಲ್ಲಿನ ಊರು. ಆ ಊರಿನವರಿಗೆಲ್ಲ ಮೀನುಗಾರಿಕೆಯೇ ಕಸುಬು. ಅದೇ ಊರಲ್ಲಿ ಕಡಲ ತಡಿಯಲ್ಲಿ ಹುಟ್ಟಿ ಬೆಳೆದವ ಈ ಮರಿಯಾನ್. ಕಡಲಿನೊಳಗೆ ಯಾವ ಬಲೆಯೋ ಇಲ್ಲದೆ.. ಗಾಳವಿಲ್ಲದೆ ಬರಿ ಭರ್ಜಿ ಎಸೆದು ದೊಡ್ಡ ದೊಡ್ಡ ಮೀನು ಹಿಡಿಯುವಷ್ಟು ನಿಪುಣ. ಅವನಿಗೆ ಮನೆಯಲ್ಲಿ ಒಬ್ಬ ತಾಯಿಯಾದರೆ, ಕಡಲು ಮತ್ತೊಬ್ಬ ತಾಯಿ. ಅದೇ ಊರಿನಲ್ಲಿ ಪನಿ ಮಲರ್ ಅನ್ನುವ ಹುಡುಗಿ. ತಾಯಿ ಇಲ್ಲದೆ ಬೆಳೆದ ಬಜಾರಿ ಹುಡುಗಿ. ಅವಳು ಮಾಡುವ ಮೀನಿನ ಸಾರು ಇಡೀ ನೀರೋಡಿಯ ಬಾಯಲ್ಲಿ ನೀರು ತರಿಸುವಂಥ ಮಹಿಮೆ ಉಳ್ಳದ್ದು ಅವಳ ಕೈಗುಣ. ಅಂಥಾ ಹುಡುಗಿಗೆ ಈ ಮರಿಯನ್ ಅಂದರೆ ಪ್ರಾಣ. ಮೀನು ಹಿಡಿದು ಸಿಗುತ್ತಿದ್ದ ಅಲ್ಪ ಸ್ವಲ್ಪ ಕಾಸಿನಲ್ಲೇ ಆರಾಮು ಅಂದ್ಕೊಂಡು ಜೀವನ ಸಾಗಿಸುತ್ತಿದ್ದ ಮರಿಯಾನ್ ಗೆ ಆಫ್ರಿಕಾದ ಸೂಡಾನ್ ನಲ್ಲಿ ಕಂಪೆನಿಯೊಂದನ್ನ ಕಟ್ಟುವ ಕಡೆ ಕಾಂಟ್ರಾಕ್ಟ್ ಕೆಲಸದ ಕೂಲಿಯಾಳಾಗಿ ಹೋಗುವ ಕುರಿತಾಗಿ ಕರೆ ಬರುತ್ತದೆ. ಹುಟ್ಟೂರ ಬಿಡಲು ಮರಿಯಾನ್  ಅವನ ತಾಯಿ ಅದೆಷ್ಟು ಪುಸಲಾಯಿಸಿದರು ಆ ಕೆಲಸಕ್ಕೆ ಹೋಗದೆ ಹುಟ್ಟೂರಿನಲ್ಲೇ ಸಂತೋಷವಾಗಿರುವುದಾಗಿ ತಿಳಿಸುತ್ತಾನೆ. 

ಆ ಊರಿನಲ್ಲಿ ಸ್ವಲ್ಪ ಹಣವುಳ್ಳ.. ಸಣ್ಣ ಅಧಿಕಾರದ ಬಲವುಳ್ಳ ವ್ಯಕ್ತಿ ತೀಕುರುಸ್ಸಿ. ಅವನಿಗೆ ಪನಿ ಮಲರ್ ಮೇಲೆ ಆಸೆ. ಬೇರೆ  ಹೆಣ್ಣಾದರೂ ಸರಿ ಅನುಭವಿಸಿ ಬಿಟ್ಟು ಬಿಡುವ ಇವನಿಗೆ ಪನಿ ಮಲರ್ ಳನ್ನು ಮಾತ್ರ ಹೆಂಡತಿಯಾಗಿಸಿ ಕೊಳ್ಳುವ ಬಯಕೆ. ಅದರ ಕುರಿತಾಗಿ ಅವಳ ಜೊತೆ ಮಾತು ಕತೆಯಾಡಿದರೂ ಅವಳು ಒಪ್ಪದೇ ತಾನು ಇರುವುದಾದರೆ ಅದು ಮರಿಯನ್ ಗೆ ಮಾತ್ರವೇ ಅಂದು ಬಿಡುತ್ತಾಳೆ. ಮೊದಮೊದಲು ಪನಿಮಲರ್ ನ ಅದ್ಯಾವ ಮೋಹದ ಬಾಣಗಳಿಗೂ ಮರುಳಾಗದ ಮರಿಯಾನ್ ಗೂ ಕಾಲಕ್ರಮೇಣ ಪನಿಮಲರ್ ಮೇಲೆ ಪ್ರೀತಿ ಉಂಟಾಗುತ್ತದೆ. ಆ ಪ್ರೀತಿ ಮದುವೆಯ ಮಾತುಕತೆಗೆ ಬರುವ ತನಕವೂ ಅವರ ಪ್ರೇಮಕ್ಕೆ ಯಾವ ತೊಡಕೂ ಇರುವುದಿಲ್ಲ. ತೀಕುರಿಸ್ಸಿ ಯ ಬಳಿ ಪನಿಮಲರ್ ಳ ತಂದೆ ಎರಡು ಲಕ್ಷ ಸಾಲ ಪಡೆದಿರುತ್ತಾನೆ ಅವನ ಹೆಂಡತಿಯ ಚಿಕಿತ್ಸೆಗಾಗಿ. ಆದರೆ ಅಷ್ಟು ಕರ್ಚು ಮಾಡಿದರೂ ಅವಳು ಬದುಕುಳಿಯುವುದಿಲ್ಲ. ಮೀನುಗಾರಿಕೆ & ಸಣ್ಣ ಮನೆಯೊಂದನ್ನ ಹೊರತು ಅವರಿಗೆ ಬೇರೆ ಆಸ್ತಿಯೂ ಇಲ್ಲ. ತೀಕುರಿಸ್ಸಿ ತಕ್ಷಣಕ್ಕೆ ಆ ಹಣವನ್ನ ಹಿಂದಿರಿಗಿಸುವಂತೆ ಅಥವಾ ತನ್ನ ಮಗಳನ್ನ ಮದುವೆ ಮಾಡಿಕೊಡುವಂತೆ ಷರತ್ತು ಹಾಕುತ್ತಾನೆ. ಕೊಟ್ಟ ಹಣ ವಾಪಾಸು ಕೊಡಲಾಗದೆ ಇರಲಾಗುವುದಿಲ್ಲ.. ಹಾಗಂತ ಕಡು ಬಡವರಾದ ಅವರು ತಕ್ಷಣಕ್ಕೆ ಕೊಡುವುದಾದರೂ ಹೇಗೆ..?? ಹಣ ಕೊಡಲಾಗುವುದಿಲ್ಲ ಅಂತ ಮಗಳನ್ನ ಆ ಕಟುಕನಿಗೆ ಕಟ್ಟಿ ಕೊಡುವ ಹಾಗೆಯೂ ಇಲ್ಲ. ಇಂಥಾ ಸಂಧಿಗ್ಧತೆಯಲ್ಲಿ ಇರುವಾಗಲೇ ಮರಿಯಾನ್ ಆಫ್ರಿಕಾಗೆ ಹೋಗುವ ಸಂಕಲ್ಪ ಮಾಡಿ ಆ ಕಂಪನಿಯಿಂದ ಎರಡು ಲಕ್ಷ ರುಪಾಯಿ ಪಡೆದು ಅವರ ಸಾಲ ತೀರಿಸಿ ಆಫ್ರಿಕಾಗೆ ಹೊರಡುತ್ತಾನೆ. ಆಫ್ರಿಕಾಗೆ ಬಂದು ಕಷ್ಟಪಟ್ಟು ದುಡಿಯುವ ಮರಿಯಾನ್ ಕಂಪನಿಯ ನಿಯಮಗಳಂತೆ ಎರಡು ವರ್ಷದ ತನಕ ಮನೆಯ ಕಡೆ ಬರುವಂತಿರಲಿಲ್ಲ. ಈಗವನ ಎರಡು ವರ್ಷಗಳ ಅವಧಿ ಮುಗಿದು ಊರು ಸೇರುವ ತನ್ನ ಜೀವದ ಪನಿಮಲರ್ ಳನ್ನು ಸೇರುವ ತವಕದಿಂದ ಆಫ್ರಿಕಾದಲ್ಲಿ ಕೊನೆಯ ಮೂರ್ನಾಲ್ಕು ದಿನವನ್ನ ಕಳೆಯುತ್ತಿರುತ್ತಾನೆ.


ಇಲ್ಲಿಯ ತನಕ ಎಲ್ಲವೂ ಮಾಮೂಲಿ ಕತೆಯಂತೆಯೇ ಮುಂದಿನದನ್ನ ನಾವೆಲ್ಲರೂ ಊಹಿಸಬಹುದಾದಷ್ಟು ಸುಲಭಕ್ಕೆ ಚಿತ್ರ ಸಾಗುತ್ತದೆ. ಮಧ್ಯಂತರದಲ್ಲಿ ಚಿತ್ರಕ್ಕೊಂದು ಅನಿರೀಕ್ಷಿತ ತಿರುವು. ಊರಿಗೆ ವಾಪಾಸು ಮರಳಲು ಇನ್ನೆರಡು ದಿನಗಳಿರುವಂತೆ ಸಂತೋಷದಿಂದಲೇ ಮರಿಯಾನ್ ಅವನ ಸಹಚರರ ಜೊತೆ ಕೆಲಸಕ್ಕೆ ಹೋಗುತ್ತಿರುತ್ತಾನೆ. ಆಗ ಅಲ್ಲಿಗೆ ಬರುವ ಆಫ್ರಿಕಾದ ಡಕಾಯಿತ ಗುಂಪೊಂದು ಇವರನ್ನ ಬಂಧಿಸುತ್ತಾರೆ. ಅವರ ಬ್ಯಾಗುಗಳನ್ನೆಲ್ಲಾ ಹುಡುಕುತ್ತಾರೆ.. ದುಡ್ಡಿಗಾಗಿ ಬೆದರಿಸುತ್ತಾರೆ. ದಿನಗೂಲಿಯ ಆಳುಗಳು.. ಇವರ ಬಳಿ ಆ ಕ್ಷಣಕ್ಕೆ ಎಲ್ಲಿಂದ ಬರಬೇಕು ದುಡ್ಡು. ಆಫ್ರಿಕಾದ ಗುಂಪು ಇವರನ್ನ ಅಪಹರಿಸುತ್ತಾರೆ. ಇವರನ್ನ ಅಪಹರಿಸಿ ಇವರ ಕಂಪನಿಯವರ ಬಳಿ ಹಣ ಕೇಳುವ ಹುನ್ನಾರ ಇವರದ್ದು. ಮರಿಯಾನ್ ಮತ್ತವನ ಇಬ್ಬರು ಸ್ನೇಹಿತರನ್ನ ಬಂಧಿಸಿ ಆಫ್ರಿಕಾದ ಘೋರ ಬರಡು ಜಾಗಗಳಲ್ಲಿನ ಗುಹೆಯೊಂದರಲ್ಲಿ ಇವರನ್ನ ಕಟ್ಟಿ ಹಾಕುತ್ತಾರೆ. ಬಂಧಿಸಿ ಎರಡು ಮೂರು ದಿನವಾದರೂ ತಿನ್ನಲೂ ಏನೂ ಕೊಡುವುದಿಲ್ಲ. ಬಡ ದೇಶವಾದ ಇವರ ಹಣವನ್ನ ಇವರೂ ಮತ್ತು ಇವರ ಕಂಪೆನಿಯವರು ಕೊಳ್ಳೆ ಹೊಡೆದುಕೊಂಡು ಹೋಗುತ್ತಿರುವುದಾಗಿಯೂ ಮತ್ತು ಅದು ಅವರಿಗೆ ಸೇರಬೇಕಾಗಿರುವುದಾಗಿಯೂ ಅವರ ನಿರ್ಣಯ. ಅದಕ್ಕಾಗಿ ಅವರುಗಳನ್ನ ಬಹಳ ಕ್ರೂರವಾಗಿ ಹಿಂಸಿಸುತ್ತಾರೆ.  ಕಂಗೆಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಮರಿಯಾನ್ ಸಹಚರನೊಬ್ಬನನ್ನ ಅವರ ಕಣ್ಮುಂದೆಯೇ ಬರ್ಬರವಾಗಿ ಶೂಟ್ ಮಾಡಿ ಸಾಯಿಸುತ್ತಾರೆ. ಕಂಪನಿಗೆ ಫೋನ್ ಮಾಡುವಂತೆ.. ಹಣ ತರಲು ಹೇಳುವಂತೆ ಇವರನ್ನ ಹೊಡೆದು ಹಿಂಸೆ ಕೊಡುತ್ತಾರೆ. ನಾವೂ ಬಡವರೇ ಇಲ್ಲಿ ಕೂಲಿಗಾಗಿ ದೇಶ ಬಿಟ್ಟು ದೇಶಕ್ಕೆ ಬಂದಿದ್ದೇವೆ ಅಂತ ಇಂಗ್ಲಿಷ್ ಬಾರದ ತಮಿಳಿನಲ್ಲಿ ಕಣ್ಣೀರಿಟ್ಟು ಅದೆಷ್ಟು ಗೋಗರೆದರೂ ಅವರ ಮನ ಕರಗುವುದಿಲ್ಲ. ಇಂಥದ್ದೇ ಒಂದು ರಾತ್ರಿ ಆಫ್ರಿಕನ್ ಕಳ್ಳರ ಗುಂಪು ಲಲನೆಯರ ಜೊತೆ ಮಸ್ತಿಯಲ್ಲಿ ಮೈಮರೆತಿರುವಾಗ ಅವರಿಗೆ ಸಾಮಾನುಗಳನ್ನು ಸರಬರಾಜು ಮಾಡಲು ಬಂದ ವಾಹನವೊಂದರಲ್ಲಿ ಉಪಾಯವಾಗಿ ಮರಿಯಾನ್ ಮತ್ತು ಅವನ ಸ್ನೇಹಿತ ಸಾಮಿ ತಪ್ಪಿಸಿಕೊಳ್ಳುತ್ತಾರೆ. ವಾಹನದ ಹಿಂಭಾಗದ ಎರಡು ಮೂರಿಂಚು ಜಾಗದಲ್ಲಿ ತುಂಬಾ ಹೊತ್ತು ಕೂರಲಾಗದೆ ಅದೆಲ್ಲೋ ಬಿದ್ದು ಹೋದ ಸಾಮಿಯ ಕಥೆ ಮರಿಯಾನ್ ಗೆ ಗೊತ್ತಿರುವುದಿಲ್ಲ. ಹೀಗೆ ಒಂದು ಕಡೆ ಆ ವಾಹನ ನಿಲ್ಲುತ್ತದೆ. ವಾಹನದಿಂದ ಇಳಿದು ಮರಿಯಾನ್ ಅಲ್ಲಿಂದ ತಪ್ಪಿಸಿಕೊಂಡು ತನ್ನ ಸ್ನೇಹಿತ ಸಾಮಿಗಾಗಿ ಹುಡುಕಿ ಅಲೆಯುತ್ತಾನೆ. ಅಷ್ಟರಲ್ಲೇ ಕಳ್ಳರ ಗುಂಪಿಗೆ ಇವರು ತಪ್ಪಿಸಿಕೊಂಡ ವಿಚಾರ ಗೊತ್ತಾಗಿ ಇವರನ್ನ ಹುಡುಕುವ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ನಡುವೆ ಸಾಮಿ ಅವರ ಕೈಗೆ ಸಿಕ್ಕಿಬಿಡುತ್ತಾನೆ. ಸಿಕ್ಕಲ್ಲೇ ಅವನನ್ನ ಶೂಟ್ ಮಾಡಿ ಕೊಲ್ಲುವ ಅವರು ಮರಿಯಾನ್ ಗಾಗಿ ಅನವರತ ಹುಡುಕುತ್ತಾರೆ. 

ಕೇವಲ ಬದುಕುವಾಸೆ ಇರುವ ಯಾವ ಮನುಷ್ಯನಾದರೂ ಆಫ್ರಿಕಾ ದಂತ ಸುಡುಗಾಡಿನ ಜಾಗದಲ್ಲಿ ಇಷ್ಟೆಲ್ಲಾ ಹೋರಾಟ ನಡೆಸಿ ಬದುಕುಳಿಯುವ ವ್ಯರ್ಥ ಪ್ರಯತ್ನ ನಡೆಸುವ ಬದಲು ಆ ಕಳ್ಳರ ಕೈಯಲ್ಲಿ ಸಿಕ್ಕು ನರಳಾಡುವುದಕ್ಕಿಂಥ ಸಾಯುವುದು ವಾಸಿ ಅಂತ ಸತ್ತೇ ಬಿಡುತ್ತಿದ್ದರೇನೋ. ಆದರೆ ಗೊತ್ತು ಗುರಿ ಇಲ್ಲದ ಊರು.. ದಿಕ್ಕು ದೆಸೆ ಅರಿಯದ ಸುಡುಗಾಡಿನಲ್ಲಿ ಇವನ ಬದುಕುವಾಸೆಯನ್ನ ಸಾವಿರ ಕಾಲಕ್ಕೂ ಜೀವಂತವಾಗಿರಿಸಿ ಕೊಳ್ಳುವಂತೆ ಚೈತನ್ಯ ತುಂಬುವುದು ಪನಿಮಲರ್ ಳ ಪ್ರೀತಿ. ಆ ಪ್ರೀತಿಯೆಡೆಗಿನ ಸೆಳೆತವೊಂದೇ ಅವನನ್ನು ಅಲ್ಲಿಂದ ತಪ್ಪಿಸಿಕೊಳ್ಳುವಂತೆ ಪ್ರೆರೆಪಿಸುತ್ತಿರುತ್ತದೆ. ಕಡೆಗೂ ಸುಡುಗಾಡು, ಮರುಭೂಮಿ ಯಾವುದ್ಯಾವುದೋ ಕಷ್ಟಗಳನ್ನೆಲ್ಲ ತಾಳಿಕೊಂಡು ಜೀವಂತ ಶವವಾಗಿ ಮರಿಯಾನ್ ಆಫ್ರಿಕಾದ ಕಡಲ ತಡಿಯೊಂದರ ತಟದಲ್ಲಿ ಬಂದು ಬೀಳುತ್ತಾನೆ. ಕಡಲನ್ನ ಕಂಡೊಡನೆ ತನ್ನ ತಾಯಿಯನ್ನೇ ಕಂಡಷ್ಟು ಸಂತಸ ಅವನದ್ದು. ಆಗ ಅಲ್ಲಿಗೆ ಖಳ ನಾಯಕ ಬರುತ್ತಾನೆ.. ನಾಲ್ಕಾರು ದಿನದಿಂದ ಹನಿ ನೀರು ಕುಡಿಯದೆ ಕೃಶವಾಗಿರುವ ನಾಯಕನನ್ನ ಮನಬಂದಂತೆ ಹೊಡೆದು ದಂಡಿಸುತ್ತಾನೆ. ಅವನನ್ನು ಕೊಲ್ಲುವ ಸಲುವಾಗಿ ಮರಿಯಾನ್ ನನ್ನು ಕಡಲಿನೊಳಗೆಳೆದು ಕೊಂಡು ಹೋಗಿ ಮುಳುಗಿಸಿ ಕೊಲ್ಲುವ ಪ್ರಯತ್ನ ಮಾಡುತ್ತಾನೆ. ಕಡಲಿಗಿಳಿದರೆ ಕಡಲ ರಾಜ ತಾನು ಅನ್ನುವ ಮರಿಯಾನ್ ಖಳ ನಾಯಕನನ್ನು ಅದೇ ಕಡಲಲ್ಲಿ ಮುಳುಗಿಸಿ ಸಾಯಿಸಿ ನಿತ್ರಾಣವಾಗಿ ಕಡಲ ದಡದಲ್ಲಿ ಬಂದು ಬೀಳುತ್ತಾನೆ. ಆ ಸಮಯಕ್ಕೆ ಅದೇ ಮಾರ್ಗವಾಗಿ ಬಂದ ಆಫ್ರಿಕಾದ ಸಾಮಾನ್ಯ ಜನ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಥಿಯೇಟರ್ ನಲ್ಲಿ ನನ್ನ ಪಕ್ಕದಲ್ಲಿ ಕೂತಿದ್ದ ಕುಟುಂಬ ಒಂದರ ಒಂದೆರಡು ಜನ  ಆಗ ಮಾತಾಡಿಕೊಂಡ ಬಗೆ ಹೀಗಿತ್ತು " ಅಲ್ಲಾ ಆಫ್ರೀಕಾದಲ್ಲೂ ಹೀಗೆ ಒಳ್ಳೆಯವರು ಇದಾರಾ" ಆ ದೃಶ್ಯ ಮಾಡಿದ ಆ ಕ್ಷಣದ  ಪರಿಣಾಮ ಅದು..!! ಮರಿಯಾನ್ ಬದುಕುಳಿಯುತ್ತಾನೆ. ಅವನ ಕಂಪನಿಯವರು ಬಂದು ಅವನನ್ನು ಕರೆದುಕೊಂಡು ಹೋಗಿ ಅವನನ್ನ ತನ್ನ ಹುಟ್ಟೂರಿಗೆ ಕಳಿಸಿ ಕೊಡುತ್ತಾರೆ. ತಾಯ್ನಾಡಿಗೆ ಬಂದು ಕಾಲಿರಿಸಿದ ಒಡನೇ ಮರಿಯಾನ್.. ತನಗಾಗಿ, ತನ್ನ ಬರುವಿಕೆಯನ್ನೇ ಕಾದು ಕಾದು ನಿತ್ರಾಣವಾದ ಪನಿಮಲರ್ ಅನ್ನು ಕೂಡುವ ಹೊತ್ತಿಗೆ ಸಿನಿಮಾ ಮುಗಿಯುತ್ತದೆ. 

ಕಥೆ ಇದಿಷ್ಟೇ ಆದರೂ ಸಿನಿಮಾ ನಮ್ಮನ್ನು ತುಂಬಾ ಕಾಡುತ್ತದೆ. ದನುಶ್ ಅಭಿನಯದ ಕುರಿತಾಗಿ ಅಷ್ಟುದ್ದ ಪೀಟಿಕೆ ಕೊರೆದಿರುವ ನಾನು ಮತ್ತೆ ಅದರ ಕುರಿತಾಗಿ ಹೇಳುವ ಅವಶ್ಯಕತೆ ಇಲ್ಲ ಅಂದುಕೊಳ್ತೇನೆ. ನಾಯಕಿಯಾಗಿ.. ಅಪ್ಪು ಅಭಿನಯದ ಮಿಲನ ಚಿತ್ರದಲ್ಲಿನ ಮುದ್ದು ನಗೆಯ ಸ್ನಿಗ್ಧ ಸುಂದರಿಯಾಗಿ ಅಭಿನಯಿಸಿದ್ದ ಪಾರ್ವತಿ ಇಲ್ಲಿ ಕಪ್ಪು ಹುಡುಗಿಯಾಗಿ.. ಬಜಾರಿಯಾಗಿ.. ಮರಿಯಾನ್ ನನ್ನು ಅದ್ಭುತವಾಗಿ ಪ್ರೀತಿಸುವ ಹುಡುಗಿಯಾಗಿ ಅಮೋಘವಾಗಿ ನಟಿಸಿದ್ದಾರೆ. ಅವರ ನಿಚ್ಚಳ ಕಣ್ಣಿನಿಂದ ಚರ್ಚಿನಲ್ಲಿ ಎವೆಯಿಕ್ಕದೆ ನಾಯಕನನ್ನು ನೋಡುವ ಪರಿ ಕೂತು ಸಿನಿಮಾವನ್ನ ನೋಡುತ್ತಿರೋ ನಮ್ಮನ್ನೂ ಕಾಡುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ಅಮೋಘ ಅನ್ನಿಸಿಕೊಳ್ಳುವಂತೆ ನಟಿಸಿದ್ದಾರೆ. ಕೆಲವೊಂದು ಪ್ರಣಯ ದೃಶ್ಯಗಳಲ್ಲಿ ಪಾರ್ವತೀ ಹೀಗೂ ನಟಿಸಬಲ್ಲರಾ ಅಂದುಕೊಳ್ಳುವಷ್ಟು ಗಾಢ ತನ್ಮಯತೆಯಿಂದ ಅಭಿನಯಿಸಿದ್ದಾರೆ. ಅವರಷ್ಟೇ ಸೌಂದರ್ಯ ಒಂದೇ ಅಲ್ಲ ಅವರ ಅಭಿನಯವೂ ನಮ್ಮನ್ನ ಆವರಿಸಿಕೊಳ್ಳುತ್ತದೆ. ಮರಿಯಾನ್ ನ ಮೊದಲಾರ್ಧದ ಭಾಗದ ಸ್ನೇಹಿತರಾಗಿ ಅಪ್ಪುಕುಟ್ಟಿ ಮತ್ತು ಇಮ್ಯಾನುಯೇಲ್ ಅಣ್ಣಾಚಿ ಅವರುಗಳು ಕಚಗುಳಿ ಇಡುತ್ತಾ ನಮ್ಮನ್ನ ಒಂದಷ್ಟು ನಗಿಸುತ್ತಾ ಉಲ್ಲಸಿತರಾಗಿಸುತ್ತಾರೆ. ಅವರಿಬ್ಬರ ನಟನೆಯಲ್ಲಿ ಕೋರೆ ಹೇಳುವ ಯಾವ ಅಂಶಗಳೂ ಇಲ್ಲ. ಇನ್ನು ಮರಿಯಾನ್ ಜೊತೆ ಆಫ್ರಿಕಾ ದಲ್ಲಿ ಸಿಕ್ಕಿ ಕೊಂಡ ಸ್ನೇಹಿತರಾಗಿ ಜಗನ್ & ಅಂಕುರ್ ವಿಕಲ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಅಪಹೃತರಾದ ಮೇಲೆ ಹಸಿವಿನಿಂದ ಕಂಗೆಟ್ಟು ಊಟ ಮಾಡುವಂತೆ ನಟಿಸುತ್ತಾ ತಮ್ಮ ಹಸಿವನ್ನ ಮರೆಯುವ ಪ್ರಯತ್ನ ಮಾಡುವ ಸನ್ನಿವೇಶದಲ್ಲಿ ಜಗನ್ ಅದ್ಭುತ ಅಭಿನಯದಿಂದ ಚಿರಕಾಲ ನೆನಪಿನಲ್ಲಿ ಆ ಪಾತ್ರ ಉಳಿದುಕೊಳ್ಳುವಂತೆ ಮಾಡುತ್ತಾರೆ. ಪನಿಮಲರ್ ಳ ತಂದೆಯ ಪಾತ್ರಧಾರಿಯಾಗಿ ಸಲೀಂ ಕುಮಾರ್ ಅವರದ್ದು ಪ್ರೌಢ ಅಭಿನಯ. ತೀಕುರಿಸ್ಸಿ ಯಾಗಿ ನಟಿಸಿರುವ ವಿನಾಯಕನ್ ಅವರದ್ದು ಕೂಡಾ ಅದ್ಭುತ ನಟನೆ. ಖಳ ನಟರಾಗಿ ಅಭಿನಯಿಸಿರುವ ಆಫ್ರಿಕಾದ ಹುಡುಗರದು ಕೂಡಾ ಅಭಿನಯದ ವಿಚಾರದಲ್ಲಿ.. ಅವರು ತೋರುವ ಅಹಿಂಸಾತ್ಮಕ ಸನ್ನಿವೇಶಗಳಲ್ಲಿ ಅವರ expression ಗಳ ವಿಚಾರದಲ್ಲಿ ಏ ಗ್ರೇಡ್ ಗಿಟ್ಟಿಸಿ ಕೊಳ್ಳುತ್ತಾರೆ.

ಈ ಸಿನಿಮಾದ ಮತ್ತೊಬ್ಬ ಹೀರೋ ಸಿನಿಮಾಟೋಗ್ರಾಫರ್ ಮಾರ್ಕ್ ಕೊನ್ನಿಂಕ್ಸ್.. ಸಾಗರದೊಳಗಣ ಸನ್ನಿವೇಶಗಳನ್ನ.. ಆಫ್ರಿಕಾದ ಬರಡು ನೆಲದ ಜೀವಂತಿಕೆಯನ್ನ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿ.. ಆಫ್ರಿಕಾ ನೆಲವನ್ನ ಅಷ್ಟು ಸುಲಭಕ್ಕೆ ಮರೆಯಲಾಗದ ಹಾಗೆ  ಅವರು ಸಫಲ. ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತ ಭರತ್ ಬಾಲ ಅವರು ಹೃದಯಕ್ಕೆ ಹತ್ತಿರವಾಗುತ್ತಾರೆ. ಕಥೆ ಎಲ್ಲೋ ಪೇಪರ್ ನಲ್ಲಿ ಓದಿದ ನೈಜ ಘಟನೆಯೊಂದರ ಎಳೆಯಾದರೂ ಅದನ್ನ ತಮಿಳಿನ ನೇಟಿವಿಟಿಗೆ ತರುವಲ್ಲಿ ಅವರ ಕೆಲಸಕ್ಕೆ ಒಂದು ಶಹಬ್ಬಾಸ್ ಹೇಳದೆ ಇರಲಾಗದು. ಸಂಭಾಷಣೆಯಲ್ಲಿ ಬದುಕಿಗೆ ಸ್ಫೂರ್ತಿ ತುಂಬುವಂಥ.. ಪ್ರೀತಿ ವಿಚಾರದಲ್ಲಿ ಮನಸ್ಸಿಗೆ ಹತ್ತಿರವಾಗುವಂಥ ಕೆಲವೊಂದು ವಿಚಾರಗಳನ್ನ ಬರೆದು ಕೊಟ್ಟಿರೋ ಜೋ ಡೀಕ್ರುಜ್ ಅವರು ಅಲ್ಲಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಸಂಗೀತದ ವಿಚಾರದಲ್ಲಿ ಎ ಆರ್ ರೆಹಮಾನರ ಬಗ್ಗೆ ಮಾತಾಡುವಂತಿಲ್ಲ. ಒಂದೆರಡು ಹಾಡುಗಳ ಭಾವ ಜೀವಕ್ಕೆ ಬಹಳ ಹತ್ತಿರವಾಗುತ್ತದೆ. ಚಿತ್ರದಲ್ಲಿನ ಹಲವು ವಿಶುಯೆಲ್ ಎಫೆಕ್ಟ್ ಗಳಿಂದ ಹಲವು ಕಡೆ ಚಿತ್ರದ ಶ್ರೀಮಂತಿಕೆ ಹೆಚ್ಚುತ್ತದೆ. ದನುಶ್ ಕೊನೆಯ ಹಾಡಿನಲ್ಲಿ ಖಳರಿಂದ ತಪ್ಪಿಸಿ ಕೊಳ್ಳುವಾಗ ಅವರನ್ನ ಸುತ್ತುವರೆಯುವ ಕಾಲ್ಪನಿಕ ಸಿಂಹಗಳು ಪರದೆಯಾಚೆಗಿನ ನಮ್ಮನ್ನೂ ಭಯಗೊಳಿಸುತ್ತವೆ. ಮನುಷ್ಯನೊಬ್ಬನ ಬದುಕುವೆಡೆಗಿನ ತುಡಿತ & ಒಂದಷ್ಟು ಪ್ರಮುಖ ಅಂಶಗಳಿಂದ ಈ ಚಿತ್ರ ಹಾಲಿವುಡ್ಡಿನ ಲೈಫ್ ಆಫ್ ಪೈ ಚಿತ್ರವನ್ನ ನೆನಪಿಗೆ ತರುತ್ತದೆ. 

ಈ ಸಿನಿಮಾದ ಬಗ್ಗೆ ಯಾಕೆ ಹೇಳಿಕೊಂಡೆ ಎಂದರೆ.. ಬೆಳಗ್ಗೆ ತುರ್ತು ಕೆಲಸದ ಮಧ್ಯೆಯೂ ಒಂದೆರಡು ನಿಮಿಷ ಫೇಸ್ಬುಕ್ ಕಡೆ ಬಂದಾಗ ನನಗೆ ಕಾಣಿಸಿದ್ದು ಶಂಕರ್ ದೇವಾಡಿಗ ಕೆಂಚನೂರರ ಈ ಸಾಲುಗಳು "ನಿನ್ನ ತಲುಪುವ ಆಸೆಯೊಂದೇ.. ನನ್ನ ಸದಾ ಚಲನೆಯಲ್ಲಿಡಬಲ್ಲ ಇಂಧನ" ಸಾಕ್ಷಾತ್ ಆ ಚಿತ್ರದ ನಾಯಕನ ಮನದ ಆಶಯವನ್ನೇ ಹೊತ್ತು ಹೆಳುವಂತಿದ್ದ ಈ ಸಾಲುಗಳು. ನಿನ್ನೆಯಷ್ಟೇ ಆ ಚಿತ್ರವನ್ನ ನೋಡಿ ಅದರ ಗುಂಗಿನಿಂದ ಹೊರ ಬರಲಾಗದ ನನ್ನನ್ನ ಇಷ್ಟು ಗೀಚುವಂತೆ ಪ್ರೇರೆಪಿಸಿದ್ದು ಈ ಸಾಲುಗಳಲ್ಲಿನ ಭಾವ. ಬಹಳ ಕಾಲ ನೆನಪಿನಲ್ಲುಳಿಯುವ ಚಿತ್ರ ಮರಿಯಾನ್. ಭಾಷೆಯ ಹಂಗಿಲ್ಲದೆ ಸಿನಿಮಾ ನೋಡುವ ಸಿನಿಮಾ ಪ್ರೀತಿ ಇರುವವರು.. ಕಲಾತ್ಮಕ & ಪ್ರಯೋಗಾತ್ಮಕ ಚಿತ್ರಗಳ ಕಡೆ ಮನಸುಳ್ಳವರು ಖಂಡಿತ ಒಮ್ಮೆ ನೋಡಬಹುದಾದ ಚಿತ್ರ ಮರಿಯಾನ್. ಖಂಡಿತ ಮರಿಯಾನ್ ನಮ್ಮನ್ನು ಕಾಡುತ್ತಾನೆ.

ಮನುಷ್ಯನೊಳಗೆ ಪ್ರೀತಿ ಇಷ್ಟೆಲ್ಲಾ ಚೈತನ್ಯವನ್ನ ತುಂಬಾ ಬಲ್ಲದಾ ಅನ್ನುವ ದೊಡ್ಡ ಪ್ರಶ್ನೆಯೊಂದನ್ನ ಚಿತ್ರ ನಮ್ಮ ಮುಂದೆ ಇಡುತ್ತದೆ. ಉತ್ತರವಾಗಿ ಮರಿಯಾನ್ ನಿಲ್ಲುತ್ತಾನೆ. ಹಲವು ಕಾರಣಗಳಿಂದ ಒಂದೊಂದು ಸಿನಿಮಾ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಹಾಗೆ ಮರಿಯಾನ್ ಕೂಡಾ ಕೆಲ ಕಾರಣಗಳಿಂದ ನನಗೆ ಇಷ್ಟವಾಗುತ್ತದೆ. 

Wednesday, 24 July 2013

ಅಭಿಮಾನವೆಂಬುದೊಂದು ಪ್ರೀತಿಯ ಕುರಿತು..

ಮೊನ್ನೆ ಅವಧಿಯಲ್ಲಿ ಅರುಣ್ ಜೋಳದ ಕೂಡ್ಲಿಗಿಯವರ ಬರಹವೊಂದನ್ನ ಓದಿದ ನನತರ ಬಹಳ ಕಾಡಿಸೋಕೆ ಶುರುವಾಯ್ತು. ಅಭಿಮಾನದ ಹಿಂದಿರುವ ಹಲವು ಮುಖವಾಡಗಳಲ್ಲಿ ಮತ್ತೊಂದು ಮುಖದ ಪರಿಚಯವಾಯ್ತಷ್ಟೇ. ಆ ಲೇಖನದಲ್ಲಿ ಅಭಿಮಾನದ ಪರಮಾಧಿಯಂತೆ ಕಾಣುವ ಜನರ ಆಚರಣೆಗಳ ಕುರಿತಾಗಿ ಅವರು ಹೇಳ್ತಾರೆ. ಈ ಶತಮಾನದ ವೀರ ಮದಕರಿ ಸಿನಿಮಾವನ್ನ ಕೊಟ್ಟೂರು ಮತ್ತು ಉತ್ತರ ಕನ್ನಡದ ಇನ್ನೂ ಹಲವು ಕಡೆ ಕುರಿ ಕೋಳಿಗಳನ್ನ ಬಲಿ ಕೊಟ್ಟು ವಿಜಯೋತ್ಸವಕ್ಕಾಗಿ ಹಾರೈಸುವ ಪದ್ಧತಿ. ಇಂಥಾ ಆಚರಣೆಗಳ ಕುರಿತಾಗಿ ನಾನು ಈವರೆಗೆ ಕೇಳಿರಲಿಲ್ಲ. ತೆಲುಗಿನ ಕೆಲವರ ಸಿನಿಮಾಗಳಿಗೆ ಹಾಗೆ ಬಲಿ ಕೊಡುವ ಸಂಪ್ರದಾಯವಿದೆ ಅಂತ ಈ ಹಿಂದೆ ಎಲ್ಲೋ ಒಂದು ಕಡೆ ಓದಿದ್ದ ನೆನಪಿದೆಯಾದರೂ.. ಕರ್ನಾಟಕದಲ್ಲಿ ಆ ತರಹದ ಒಂದು ಪದ್ಧತಿ ಆಚರಣೆಯಲ್ಲಿ ಇರುವುದರ ಕುರಿತಾಗಿ ಸುಳಿವು ಇರಲಿಲ್ಲ. ದೇವರಿಗೆ ಹಾಗೆ ಹರಕೆ ಅಂದ್ಕೊಂಡು ಬಲಿ ಕೊಡುವ ಸಂಪ್ರದಾಯವನ್ನ ಕೂಡಾ ಒಂದು ಮಟ್ಟಿಗೆ ಭಕ್ತಿ ಪರಾಧೀನ ಮೂಢನಂಬಿಕೆ ಅನ್ನೋ ಹೆಸರಿಟ್ಟು ಸಹಿಸಿಕೊಂಡು ಬಿಡೋದು ಸುಲಭ. ಆದರೆ ಹೀಗೆ ಸಿನಿಮಾವೊಂದಕ್ಕೆ ಬಲಿ ಕೊಡುವ ಪ್ರಕ್ರಿಯೆಯೆಂದರೆ ಇದು ಕೇವಲ ಆಶ್ಚರ್ಯಕರ ವಿಷಯವಷ್ಟೇ ಅಲ್ಲ ಒಂದು ಮಟ್ಟಿಗಿನ ಖೇದದ ವಿಚಾರ ಕೂಡಾ. 


ಅಭಿಮಾನ ಜಾತಿ, ಧರ್ಮ, ಮತ, ದೇಶ, ರಾಷ್ಟ್ರೀಯತೆಗಳನ್ನ ಮೀರಿದ ಪ್ರೀತಿ. ಅಭಿಮಾನ ಕೂಡಾ ಹೀಗೆ ಜಾತಿ ರಾಜಕಾರಣದಲ್ಲಿ ಸಿಕ್ಕು ನರಳೋದಾದ್ರೆ ಅದು ದುರಂತವೇ ಸರಿ. ಎಲ್ಲಾ ಕಟ್ಟಲೆಗಳನ್ನ ಮೀರಿದ ಅಭಿಮಾನಕ್ಕೆ ಹಾಗೊಂದು ಸ್ಥಾನ ಇರೋದ್ರಿಂದಲೇ ಎಲ್ಲಿಯವನೋ ಮೈಕಲ್ ಜಾಕ್ಸನ್ ತೀರಾ ನಮ್ಮ ಮನೆಯ ಬೆಡ್ ರೂಂ ಗಳಲ್ಲಿ ಪೋಸ್ಟರ್ ಗಳಾಗಿ ನಿಲ್ಲೋಕೆ ಸಾಧ್ಯವಾದದ್ದು. ಎಲ್ಲಿಯವರೋ ನೆಲ್ಸನ್ ಮಂಡೇಲಾ ನಮ್ಮ ಮಕ್ಕಳಿಗೆ ಪಾಠವಾದದ್ದು. ಎಲ್ಲಿಯವನೋ ವಿಲ್ ಸ್ಮಿತ್.. ಎಲ್ಲಿಯವಳೋ ಜೆಸ್ಸಿಕಾ ಆಲ್ಬಾ ನಮಗ್ಯಾಕೆ ಇಷ್ಟ ಆಗೋದು..?? ಯಾಕೆ ಅವರ ಸಿನಿಮಾಗಳನ್ನ ಜಗತ್ತಿನೆಲ್ಲೆಡೆ ಹಾಗೆ ಮುಗಿ ಬಿದ್ದು ನೋಡೋದು..?? ಕ್ರಿಸ್ ಗೇಲ್ ಯಾಕೆ ನಮಗೆ ಅಷ್ಟಿಷ್ಟ ಆಗಬೇಕು..?? ಪೀಲೆ, ಮರಾಡೋಣ, ಡೇವಿಡ್ ಬೆಕೆಮ್, ಜಿನದೀನ್ ಜಿದಾನ್, ಅಂದರೆ ಈಗಲೂ ನಮಗ್ಯಾಕೆ ಸಂಚಲನ ಆಗತ್ತೆ.?? ಜಾನ್ ಸೀನ, ರಾಕ್ ಅಂಥವರುಗಳೆಲ್ಲ ನಾವು ಹಾಕುವ ಬಟ್ಟೆಯ ಮೇಲ್ಯಾಕೆ ಇರಬೇಕು..?? ಇವರುಗಳೆಲ್ಲ ನಮಗೆ.. ನಮ್ಮ ದೇಶಕ್ಕೆ ಕೊಟ್ಟದ್ದಾದರೂ ಏನು..?? ಆದರೂ ಇವರಿಗೊಂದು ಎಂದರೆ ನಾವು ಏಕೆ ತಲ್ಲಣಿಸುತ್ತೇವೆ..?? ಅದೇ ಅಭಿಮಾನದ ಪ್ರೀತಿ. ಅದಕ್ಕೊಂದು ಬೇಲಿಯೇ ಇಲ್ಲ. ಅಲ್ಲೆಲಿನವರು ಕೂಡಾ ನಮ್ಮವರು ಅನ್ನಿಸಿ ಬಿಡಬಲ್ಲ ಒಂದು ಮಧುರ ಅನುಭೂತಿಯನ್ನ ಕೊಂಡು ತರಬಲ್ಲ ಒಂದು ಅನನ್ಯ ಸಂಭಂಧದ ಹೆಸರೇ ಅಭಿಮಾನ ಎಂದರೆ ತಪ್ಪಲ್ಲ. ಈ ಸಂಬಂಧಕ್ಕೆ ಎರಡು ಜೀವಗಳ ನೇರಾ ನೇರ ಪರಿಚಯವೇ ಇರಬೇಕಿಲ್ಲ. ಏನನ್ನಾದರೂ ಸಾಧಿಸಬಲ್ಲ ಒಂದು ಜೀವ ಮತ್ತದನ್ನ ತನ್ನದೇ ಎನ್ನುವಷ್ಟು ಆನಂದದಿಂದ ಅನುಭವಿಸುವ ಇನ್ನೊಂದು ಜೀವದ ಉಪಸ್ತಿತಿಯಷ್ಟೇ ಸಾಕು ಈ ಜಗದೊಳಗೆ ಯಾರ ಮೇಲೆ ಯಾರಿಗಾದರೂ ಅಭಿಮಾನ ಮೂಡೋಕೆ. 

ನಾವು ಅಭಿಮಾನಿಸುವ ಕ್ಷೇತ್ರಗಳು ಇಂಥವೇ ಆಗಬೇಕಿಲ್ಲ. ಸಾಧನೆ ಎನ್ನುವುದು ಯಾವ ಕ್ಷೇತ್ರಗಳಲ್ಲಿ ಸಾಧ್ಯವೋ ಆ ಎಲ್ಲಾ ಕ್ಷೇತ್ರಗಳಲ್ಲೂ ಅದಕ್ಕೆ ಪೂರಕವಾಗಿ ಅಭಿಮಾನಿಸುವ ಅಭಿಮಾನಿಗಳು ಇದ್ದೇ ಇರುತ್ತಾರೆ. ಸಾಹಿತ್ಯವಾಗಲಿ, ಸಂಗೀತವಾಗಲಿ, ಕಲೆ, ಚಿತ್ರಕಲೆ, ನಾಟಕ, ನೃತ್ಯ, ಸಿನಿಮಾ, ಕ್ರೀಡೆ, ರಾಜಕೀಯ, ತಂತ್ರಜ್ಞಾನ, ಸಮಾಜ ಸೇವೆ.. ಹೀಗೆ ಯಾವೊಂದು ಕ್ಷೆತ್ರವಾದರೂ ಸರಿ. ಯಾವ ಕ್ಷೆತ್ರವಾದರೂ ಸಾಧನೆಗೈದವರನ್ನ ಗುರುತಿಸಿ ಅವರ ಮೇಲೊಂದು ಪ್ರೀತಿ, ಆಸಕ್ತಿ ಮೂಡಿಸಿಕೊಳ್ಳುವ ಪ್ರಕ್ರಿಯೆ ನಮ್ಮ ಅಭಿಮಾನದ ಒಂದು ರೂಪ. ಆದರೂ ನಮ್ಮ ಜಗತ್ತಿನೊಳಗೆ ಅಸಂಖ್ಯಾತ ಜನರನ್ನ ಅಭಿಮಾನಿಗಳನ್ನಾಗಿಸಿಕೊಳ್ಳುವ ಜನಪ್ರಿಯ ಕ್ಷೇತ್ರಗಳೆಂದರೆ ಕ್ರೀಡೆ ಮತ್ತು ಸಿನಿಮಾ ಲೋಕ. ಸಿನಿಮಾ ಲೋಕ ಮತ್ತು ಕ್ರೀಡೆಯಲ್ಲಿ  ವರ್ಚಸ್ಸು ಇನ್ನಾವುದೇ ರಂಗದಲ್ಲಿ ನಮಗೆ ಕಾಣ ಸಿಗುವುದು ಸ್ವಲ್ಪ ಅಪರೂಪ. ಅದರಲ್ಲೂ ಸಿನಿಮಾ ನಟರು ನಮ್ಮನ್ನ ಆವರಿಸಿಕೊಳ್ಳುವ ಪರಿ ಅದೆಂಥಾ ಮಾಯೆಯೋ..?? ಕೆಲವು ನಟರ ಮೇಲೆ ಅಭಿಮಾನದ ಅತಿಶಯತೆ ಅದೆಷ್ಟಿದೆ ಅಂದ್ರೆ ತಮ್ಮೆಲ್ಲಾ ಕೆಲಸವನ್ನ ಬಿಟ್ಟು ಅವರ ಸಿನಿಮಾ ರಿಲೀಸ್ ಆದ ಮೊದಲ ದಿನದ ಮೊದಲ ಷೋ ಗೆ ಹೋಗಿ ನೋಡಿಕೊಂಡು ಬರುತ್ತಾರೆ. ಸಿನಿಮಾದಲ್ಲಿ ಅವರು ಹಾಕುವ ಬಟ್ಟೆ, ವೇಷಭೂಷಣ, ಕೇಶ ವಿನ್ಯಾಸ, ಮಾತಿನ ಧಾಟಿಗೆ ಅನುಯಾಯಿಗಳಾಗ್ತಾರೆ. ತನ್ನಿಷ್ಟದ ನಟನ ಕುರಿತಾಗಿ ಜಯಘೋಷ ಕೂಗೋದು.. ಹೂಹಾರಗಳನ್ನ ಎಸೆಯೋದು.. ಅವನ ಸಿನಿಮಾ ಯಶಸ್ಸಿನ ಕುರಿತಾಗಿ ಪೂಜಿಸೋದು, ಪ್ರಾರ್ಥಿಸೋದು ಯಾವ ಪುರುಷಾರ್ಥಕ್ಕೆ..?? ಎಲ್ಲಾ ಅಭಿಮಾನ ಅನ್ನೋ ಒಂದೇ ಒಂದು ಸಂಭಂಧದ ಮೇಲಷ್ಟೇ. 

ಸಚಿನ್ ಏಕದಿನದಿಂದ ನಿವೃತ್ತಿ ಆದ ಕೂಡಲೇ ಪರಿತಪಿಸಿದವರಲ್ಲಿ ನಾನೂ ಕೂಡಾ ಒಬ್ಬ. ಯಾಕಾಗಿ ನಾವೆಲ್ಲಾ ಅವರಿಗಾಗಿ ಮರುಗಬೇಕು..?? ಅವನು ನೂರು ಶತಕ ಹೊಡೆದ ಕ್ಷಣಕೆ ಇದೇ ಜಗತ್ತೇ ಗೆದ್ದವರಂತೆ ನಾವೆಲ್ಲಾ ಕುಣಿದಾಡಿದ್ದು ಯಾಕೆ..?? ಅದ್ಯಾಕೆ ಅವನ ರೆಕಾರ್ಡುಗಳ ಮೇಲೆ ನಮಗೊಂದು ಹೆಮ್ಮೆ..?? ಗಂಗೂಲಿಯ ಸ್ವಭಾವ, ದ್ರಾವಿಡ್ ನ ಸಂಯಮ, ಲಕ್ಷ್ಮಣನ ಶೈಲಿ, ಯುವರಾಜನ ಆರ್ಭಟ, ಸೆಹವಾಗ್ ನ ಸೆಣಸಾಟ,  ಧೋನಿಯ ಧೋರಣೆ, ಕೊಹ್ಲಿಯ ಆಟ, ರೈನಾನ ಪ್ರಬುದ್ಧತೆ.. ಕುಂಬ್ಳೆಯ ಗಿರಕಿಗಳು, ಶ್ರೀನಾಥನ ವೇಗ.. ಯಾಕಾಗಿ ನಾವಿವರಿಗೆಲ್ಲಾ ಭಕ್ತರ ಹಾಗಿರಬೇಕು..?? ವಂಚಕನಾದರೂ ಪಾಂಟಿಂಗ್ ನ ಇಷ್ಟ ಪಡುವವರೆಷ್ಟು..?? ಗಿಲ್ಕ್ರಿಸ್ಟ್ ನ ಆಟ ಮೆಚ್ಚದವರುಂಟೇ..?? ನಮ್ಮವನಲ್ಲದಿದ್ದರೂ ಗೇಲ್ ಹತ್ತಿರ ಅನಿಸೋದು ಯಾಕೆ..?? ಭಾಷೆ, ಧರ್ಮ, ಜಾಗ, ಸಂಸ್ಕೃತಿ, ರೀತಿ ನೀತಿಗಳನ್ನೆಲ್ಲ ದಾಟಿ ಕೇವಲ ಅಭಿಮಾನ ಅನ್ನುವ ಸಂಬಂಧದೊಂದಿಗೆ ಮಾತ್ರವೇ ಇವರೆಲ್ಲ ನಮ್ಮವರು ಅನ್ನುವ ಒಂದು ಸದ್ಭಾವ ಮೂಡುತ್ತದೆ. ಕೇವಲ ಇವರಷ್ಟೇ ಅಲ್ಲ ನಾನಾ ಕ್ಷೇತ್ರಗಳಲ್ಲಿ ನಾನಾ ಸ್ಥರದ ಸಾಧನೆಗಳನ್ನ ಮಾಡಿದ ಅದೆಷ್ಟೋ ಸಹಸ್ರ ಸಾಧಕರುಗಳಿಗೆಲ್ಲ ಜಗತ್ತಿನಾದ್ಯಂತ ಅದೆಷ್ಟು ಸಹಸ್ರ ಮಿಲಿಯನ್ ಗಳ ಸಂಖ್ಯೆಯಲ್ಲಿ ಶುಭ ಹಾರೈಕೆಗಳು, ಆಶಿರ್ವಾದಗಳು ಸಿಗುತ್ತವೆಂದರೆ ಅಭಿಮಾನ ಅನ್ನುವ ಅಧಿಕಾರದ ಮೇಲೆಯೇ. 

ಇಂಥವೇ ಕೆಲವು ಅಭಿಮಾನದ, ಅಭಿಮಾನಿಗಳ ವಿಚಿತ್ರ ವರ್ತನೆಗಳನ್ನ ನಾವೆಲ್ಲಾ ಕಂಡಿರುತ್ತೇವೆ. ಭಾರತ ಕ್ರಿಕೆಟ್ ಆಡುವಲ್ಲೆಲ್ಲ ತಲೆ ಬೋಳಿಸಿ ತಿರಂಗ ಬಾವುಟದ ಬಣ್ಣವನ್ನ ಮುಖದ ಮೇಲೆ ಬಳಿದುಕೊಂಡು, ಬೆನ್ನಮೇಲೆ ತೆಂಡೂಲ್ಕರ್ ಹೆಸರು ಬರೆಸಿಕೊಂಡು, ತಂಡ ಹೋದಲ್ಲೆಲ್ಲಾ ಹೋಗಿ ತಂಡವನ್ನು ಹುರಿದುಂಬಿಸೋ ಸುಧೀರ್ ಗೌತಮ್ ಅನ್ನುವ ವ್ಯಕ್ತಿ ಅದ್ಯಾವಾಗಲೂ ನಮಗೊಂದು ಆಶ್ಚರ್ಯ ಸೂಚಕ ಚಿಹ್ನೆಯೇ..!! ಒಂದಿಡೀ ಬದುಕನ್ನ ಕೇವಲ ಅದಕ್ಕಾಗಿ ಮೀಸಲಿಡುವುದೆಂದರೆ ಸುಲಭದ ಮಾತಲ್ಲ. ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಅಭಿಮಾನಿ ಅನ್ನುವ ಪಟ್ಟ ಅವನದ್ದು. ಅವನಷ್ಟೇ ಅಲ್ಲ ಅವನಂತೆ ವಿಚಿತ್ರ ಮ್ಯಾನರಿಸಂ ನಿಂದ ತಮ್ಮ ಅಭಿಮಾನವನ್ನ ಪ್ರದರ್ಶಿಸಿಕೊಳ್ಳುವ ಅದೆಷ್ಟು ತರಹದ ಜನರನ್ನ ನಾವು ನೋಡಿಲ್ಲ. ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗಿಬಿಡುತ್ತದೆ. ಯಾರೋ ಗೊತ್ತಿಲ್ಲದವರೇ ಯಾಕೇ..?? ಕ್ರಿಕೆಟ್ ಕಂಡರೆ ಆಗದು ಅನ್ನುವಂಥ ಧೋರಣೆಯುಳ್ಳ ಅಪ್ಪನೇ ಭಾರತ ವರ್ಲ್ಡ್ ಕಪ್ ಗೆದ್ದ ದಿನ ಖುಷಿ ಖುಷಿ ಇಂದ ಇದ್ದದ್ದು. ದೀಪಾವಳಿಗೆ ಅಳಿದುಳಿದ ಪಟಾಕಿ ಗಳನ್ನೆಲ್ಲ ನಾವು ಆ ಖುಷಿಗೆ ಹಚ್ಚುವಾಗ ತಾನೂ ಬಂದು ನಮ್ಮನ್ನು ಕೂಡಿಕೊಂಡದ್ದು ತೋರಗೊಡದ ಅಭಿಮಾನದ ಸಂಕೇತವೇ. 

ಅಭಿಮಾನ ಅನ್ನುವ ಹೆಸರಿನ ಮೇಲೆ ಇಷ್ಟೆಲ್ಲಾ ನಮ್ಮನ್ನ ನಾವು ತೊಡಗಿಸಿ ಕೊಳ್ತೀವಲ್ಲ..?? ಅವರಿಂದ ನಮಗೇನಾದರೂ ಪ್ರಯೋಜನ ಇದೆಯೇ..?? ಅಂಥಾ ಒಂದು ಪ್ರಶ್ನೆ ಯಾವ ಅಭಿಮಾನಿಯ ಮನಸಲ್ಲೂ ಮೂಡುವುದಿಲ್ಲ.. ಅಭಿಮಾನದ ಬಂಧಕ್ಕಿರೋ ಉನ್ನತ ಮೌಲ್ಯಗಳಲ್ಲಿ ಅದೂ ಒಂದು. ಅವರ ಬರ್ತ್ ಡೇ ಅಂದರೆ ನಮಗೆ ಖುಷಿ. ಆ ದಿನ ಸ್ಕೂಲ್ ಕಾಲೇಜು, ಆಫೀಸು, ಇಂಟರ್ನೆಟ್ಟು ಪೂರ್ತಿ ಎಲ್ಲಾ ಕಡೆ ಅವರುಗಳಿಗೆ ಶುಭ ಹಾರೈಕೆಗಳೇ. ಇನ್ನು ವಿಶೇಷವಾಗಿ ಪೂಜೆ ಮಾಡಿಸುವವರು ಸಹ ಇದ್ದಾರೆ. ೨೦೦೩ ರ ವರ್ಲ್ಡ್ ಕಪ್  ಅನ್ನ ಭಾರತ ಗೆಲ್ಲಲಿ ಅಂತ ಅದ್ಯಾರೋ ಹೋಮ ಹವನ ಮಾಡಿಸಿದ ವಿಚಾರವೂ ಸುದ್ಧಿಯಾಗಿತ್ತು. ಇವತ್ತು ಶಾರುಖ್ ಖಾನ್ ಬರ್ತ್ ಡೇ ಅಂತ ಸ್ವೀಟ್ ಕೊಡುತ್ತಿದ ಗೆಳತಿ ಬಿಂದು, ರಾತ್ರಿ ಅವನು ಕನಸಲ್ಲಿ ಬರಲಿ ಅಂತ ಪರಿತಪಿಸ್ತಾ ಇರ್ತಿದ್ಳು. ನಾವು ಪ್ರೀತಿಸುವವರು ನಮ್ಮ ಸ್ವಂತದವರು ಕೂಡಾ ನಮಗೇನಾದರೂ ಇಷ್ಟವಾಗುವಂಥದ್ದು ಮಾಡಿದರಷ್ಟೇ ಅವರ ಜೊತೆಗೆ ಸಲುಗೆ ತೋರಿಸುವ ನಾವು.. ನಮಗ್ಯಾರೂ ಅಲ್ಲದ.. ನಮಗೇನೂ ಮಾಡದ ಇವರುಗಳ ಮೇಲೆ ಇಂಥಾ ಒಂದು ಪ್ರೀತಿಯನ್ನ ಇಟ್ಟುಕೊಂಡಿರೋ ಬಗೆಯೇ ಆಶ್ಚರ್ಯ ಪಡುವಂತೆ ಮಾಡುತ್ತದೆ. ಕೆಲವೊಮ್ಮೆ ಅಭಿಮಾನದ ಹೆಸರಲ್ಲಿ ಜಗಳಗಳಾದ ಪ್ರಕರಣಗಳೂ ಏನು ಕಮ್ಮಿ ಇಲ್ಲ.. ಇಲ್ಲಿ ತಮಿಳುನಾಡಿನಲ್ಲಿ ನಟ ವಿಜಯ್ ಮತ್ತು ಅಜಿತ್ ರ ನಡುವೆ ಯಾವ ಸಮಾಚಾರಗಳು ಘಟಿಸುತ್ತವೆಯೋ ಇಲ್ಲವೋ ಆದರೆ ಅವರುಗಳ ಅಭಿಮಾನಿಗಳ ಹೊಡೆದಾಟ ಮಾತ್ರ ಯಾವತ್ತಿಗೂ ಜೀವಂತ. ಆಗಾಗ ಅಂಥದ್ದೊಂದು ಪ್ರಕರಣಗಳ ಸುದ್ಧಿ ಕಿವಿಗೆ ಆಹಾರವಾಗುತ್ತಲೇ ಇರುತ್ತದೆ. ಇಲ್ಲಿನ ಕಾಲೇಜುಗಳಲ್ಲಿ ಹತ್ತು ಜನ ಹುಡುಗರ ಬೆಸ್ಟ್ ಫ್ರೆಂಡ್ಸ್ ಅನ್ನುವ ಗುಂಪೊಂದು ಇರುತ್ತದಾದರೆ ಖಂಡಿತ ಅದರಲ್ಲಿ ಕೆಲವರು ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಇದ್ದೆ ಇರುತ್ತಾರೆ. ಮತ್ತು ಆ ಅಭಿಮಾನದ ವಿಚಾರದಲ್ಲಷ್ಟೇ ಅವರುಗಳ ಮಧ್ಯೆ ಒಂದು ನಿರಾಕಾರ ವೈಮನಸ್ಯ ಇರುತ್ತದೆ. ಹೀಗೆ ಅಭಿಮಾನದ ಹೆಸರಿನಲ್ಲಿ ಒಂದು ಗುಂಪು ಮತ್ತೊಂದು ಗುಂಪುಗಳ ನಡುವಿನ ಕಲಹವಾದ ಘಟನೆಗಳಿಗೂ ಕೊರತೆಗಳೇನಿಲ್ಲ. ಹುಡುಕಿದರೆ ಎಲ್ಲಾ ಕಡೆಯೂ ಸಿಗುತ್ತದೆ.


ಹೀಗೆ ಅಭಿಮಾನದ ವಿಚಾರಕ್ಕೆ ಬಂದರೆ.. ನಮ್ಮ ಅಭಿಮಾನದ ಮೇಲೆ ನಾಚಿಕೆ ಬರಿಸುವಂಥ.. ಅಭಿಮಾನದ ಮೇಲಿನ ಪ್ರೀತಿಯೇ ಸುಳ್ಳು ಅನ್ನಿಸುವಂಥ ಒಂದು ಘಟನೆ ನನ್ನನ್ನ ಯಾವಾಗಲೂ ಕಾಡುತ್ತದೆ. ಮೊನ್ನೆ ಅರುಣ್ ಜೋಳದ ಕೂಡ್ಲಿಗಿಯವರ ಬರಹ ಓದುತ್ತಿದ ಹಾಗೆ ಅದೆಲ್ಲ ಮತ್ತೊಮ್ಮೆ ನೆನಪಾಯ್ತು. 

ಎರಡು ವರ್ಷದ ಹಿಂದೆ. ನಾಗಪುರದಿಂದ ಕಂಪನಿ ಆಯೋಜಿತ ಕ್ರಿಕೆಟ್ ಟೂರ್ನಮೆಂಟ್ ಮುಗಿಸಿಕೊಂಡು ಬೆಂಗಳೂರಿಗೆ ಹೈದರಾಬಾದ್ ಮೂಲಕ ಬರೋದಿತ್ತು. ರಾತ್ರಿ ಎಂಟೂವರೆ ಗಂಟೆಗೆ ಬೆಂಗಳೂರಿಗೆ ಟ್ರೈನ್, ಬೆಳಿಗ್ಗೆ ಒಂಭತ್ತೂವರೆಗೆ ಹೈದರಾಬಾದ್ ತಲುಪಿದ ನಾವು ಅಷ್ಟೊತ್ತು ಏನ್ ಮಾಡುವುದು ಅನ್ನೋದು ಗೊತ್ತಾಗದೆ ಸಿಕಂದರಾಬಾದ್ ನ ಶಾಪಿಂಗ್ ಮಾಲ್ ಒಂದರಲ್ಲಿ ನಾನು ಮತ್ತು ನಮ್ಮ ತಂಡದ ಇತರ ಆಟಗಾರರೆಲ್ಲರೂ ಪ್ಲೇಯರ್ಸ್ ಅನ್ನೋ ಹಿಂದಿ ಸಿನಿಮಾಗಾಗಿ ಹೊರಟೆವು. ನಮ್ಮ ಲಗೆಜುಗಳನ್ನೆಲ್ಲ ಅಲ್ಲೇ ಕ್ಲಾಕ್ ರೂಮಲ್ಲಿ ಲಾಕ್ ಮಾಡಿಟ್ಟು ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಬಾಜು ಹೋಟೆಲ್ ಒಂದರಲ್ಲೇ ತಿಂಡಿ ತಿಂದು ಹೊರಟ ನನಗೆ ಮನೆಯಿಂದ ಫೋನ್. ರಿಸೀವ್ ಮಾಡಿ ಮಾತಾಡಿದರೆ ಹೀಗ್ ಹೀಗೆ ಚಂದ್ರಣ್ಣನ ಮಗ ಸಂತು ಹೋಗ್ಬಿಟ್ಟ ಕಣಪ್ಪ ಅಂತ ಅಮ್ಮ ಗದ್ಗದಿತರಾಗಿ ಹೇಳಿದ್ದಷ್ಟೇ. ಮುಂದೆ ಮಾತಾಡುವ ಯೋಚನೆ ನಮ್ಮಿಬ್ಬರಲ್ಲೂ ಇಲ್ಲ. ಹೇಗಾಯ್ತು ಅಂತ ಕೇಳಿದ್ರೆ ಸೈಕಲ್ ನಲ್ಲಿ ಟೌನ್ ಗೆ ಹೋಗೋವಾಗ ಮಸೀದಿ ಬಳಿ ಹೋಗ್ತಾ ಇದ್ದ ಟ್ರ್ಯಾಕ್ಟರ್ ಕೆಳಗೆ ಬಿದ್ದು. ಟ್ರ್ಯಾಕ್ಟರ್ ಚಕ್ರ ತಲೆ ಮೇಲೆ ಹತ್ತಿ......!! ಸಾಕು ಬಿಡಮ್ಮ ಮುಂದಕ್ಕೆನು ಹೇಳಬೇಡ.. ನಾನೇ ಆಮೇಲೆ ಫೋನ್ ಮಾಡ್ತೀನಿ ಅಂತ ಫೋನ್ ಇಟ್ಟೆ. ಅವತ್ತೆಲ್ಲ ಮನಸಿಗೂ, ಮೈಗೂ ಚೈತನ್ಯವೇ ಇಲ್ಲ. ಆ ಕ್ಷಣವೇ ಊರಿಗೆ ಹೊರಟು ಬಿಡುವ ಮನಸ್ಸಾಯ್ತು. ಹೇಗೆ ಹೊರಟರೂ ಊರು ತಲುಪಲಿಕ್ಕೆ ಒಂದೂವರೆ ದಿನವಾದರೂ ಬೇಕು ಅಲ್ಲಿಯ ತನಕ ಯಾರೂ ಕಾಯುವ ಹಾಗಿಲ್ಲ. ನೀನು ಅಲ್ಲಿ ಹೋಗಿಯೂ ಮಾಡಬೇಕ್ಕಾದ್ದು ಏನಿಲ್ಲ.. ಸಮಾಧಾನ ಮಾಡ್ಕೋ ಅಂತ ಅದು ಇದು ಹೇಳಿ ನನ್ನ ಗೆಳೆಯರೆಲ್ಲ ಸಾಂತ್ವನ ಹೇಳಿಕೊಂಡೇ ನನ್ನನ್ನ ಸಿನಿಮಾ ಮಂದಿರದೊಳಗೆ ಕರೆದೊಯ್ದರು. ಒಲ್ಲದ ಮನಸ್ಸಿಂದಲೇ ಸಿನಿಮಾ ನೋಡಿದ್ದೆ.

ತಮ್ಮನಂತಹ ಹುಡುಗ ಸಂತು ಅಂದ್ರೆ ಶಾಂತಕುಮಾರ. ತಮ್ಮನಂತಹ ಏನು ತಮ್ಮನೇ ಅನ್ನಬಹುದಾದ ಹುಡುಗ. ನಾವೆಲ್ಲಾ ಅವನನ್ನ ನನ್ನ ತಮ್ಮನನ್ನ ಕರೆಯೋ ಹಾಗೆ ಶಾರ್ಟ್ ಆಗಿ ಕೆಲವೊಮ್ಮೆ ಸಂತು, ಕೆಲವೊಮ್ಮೆ ಶಾಂತ ಅಂತಲೇ ಕರೀತಾ ಇದ್ವಿ. ನಮ್ಮ ಮನೆಯಿಂದ ಮೂರು ಮನೆ ದಾಟಿದರೆ ಅವನ ಮನೆ. ಇಬ್ಬರು ಅಣ್ಣ, ಅಪ್ಪ ಅಮ್ಮ, ಮತ್ತವನು. ಹೀಗೆ ಐದು ಜನರ ಸಂತೃಪ್ತ ಕುಟುಂಬ ಅವರದ್ದು. ಅವರಪ್ಪ ಚಂದ್ರಣ್ಣ ಕೊಡಿಹಳ್ಳಿಯ ೨-೩ ಆಲೆಮನೆಗಳಲ್ಲಿ ಬೆಲ್ಲ ಹದ ಮಾಡುವ ಹದಗಾರರಾಗಿ ಕೆಲಸ ಮಾಡುತ್ತಿದ್ದರು. ಅವರಮ್ಮನೂ ಹಾಗೆಯೇ ಒಂದಷ್ಟು ದಿನ ಬೆಲ್ಲದ ಗೋಲಿ ಹಾಕುತ್ತಿದ್ದವರು ಆಲೆಮನೆ ವಾತಾವರಣ ಹೀಟು ಅನ್ನುವ ಕಾರಣಕ್ಕೆ ಅದನ್ನ ಬಿಟ್ಟು  ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರಣ್ಣ ಶಿವೂ, ಶಿವಕುಮಾರ ನನ್ನ ಜೊತೆ ಓದಿ, ಆಡಿ ಬೆಳೆದವ. ಓದು ತಲೆಗೆ ಹತ್ತದೆ ಏಳನೇ ತರಗತಿಗೆ ಶಾಲೆ ಬಿಟ್ಟು, ಗಾರೆ ಕೆಲಸ, ಕಬ್ಬು ಕಡಿಯೋದು, ಗ್ಯಾರೇಜು ಅದೂ ಇದೂ ಅಂತ ಕೆಲಸ ಮಾಡುತ್ತಿದ್ದ. ಇನ್ನು ಎರಡನೆಯವ ಚೆನ್ನಕೇಶವ.. ಚಂಕಿ. ಅವನಿಗೂ ಎಂಟನೆ ತರಗತಿಯ ಮೇಲೆ ಓದುವ ಮನಸ್ಸಿಲ್ಲದೆ ಪೆಟ್ರೋಲು ಬಂಕ್ ಒಂದಕ್ಕೆ ಸೇರಿಕೊಂಡ. ಇನ್ನು ನನ್ನ ತಮ್ಮನ ಸಹವರ್ತಿ ಅವನದೇ ವಯಸ್ಸಿನ ಶಾಂತ ಆ ಮನೆಯಲ್ಲಿ ಹತ್ತನೇ ತರಗತಿಯ ವರೆಗೆ ಓದಿದ ಮಹಾನ್ ಪದವೀದರ.. ಆದರೆ ಹತ್ತನೇ ತರಗತಿ ಫೇಲ್..!! ಒಟ್ನಲ್ಲಿ ಅವರುಗಳ್ಯಾರಿಗೂ ಹೈಸ್ಕೂಲು ದಾಟುವ ಸೌಭಾಗ್ಯವೇ ದೊರಕಲಿಲ್ಲ. 

ಶಿಕ್ಷಣ ಅವರ ತಲೆಗೆ ಹತ್ತಲಿಲ್ಲವಷ್ಟೇ. ಬದುಕಲು ಬಹಳ ವಿಧ್ಯೆಗಳನ್ನ ಬಲ್ಲವರಾಗಿದ್ದರು ಅವರೆಲ್ಲ. ಶಾಂತ ಕೂಡ ಅವರಪ್ಪನ ಜೊತೆ ಬೆಲ್ಲ ಹದ ಹಿಡಿಯುವುದಕ್ಕೆ.. ಆಲೆಮನೆಯಲ್ಲಿ ಹರಟೆ (ಕಬ್ಬಿನ ಹಾಲು ತೆಗೆದ ನಂತರ ಉಳಿವ ತ್ಯಾಜ್ಯ ಜಲ್ಲೇ) ಹೊರುವುದಕ್ಕೆ.. ಬೆಲ್ಲ ಬೇಯಿಸುವುದಕ್ಕೆ ಹೋಗುತ್ತಿದ್ದ. ಒಂದಷ್ಟು ದಿನ ಅದನ್ನು ಮಾಡಿ ನಂತರ ಅಮ್ಮನ ಜೊತೆ ಕಬ್ಬು ಕಡಿಯುವುದೋ ಸ್ವಲ್ಪ ದಿನದ ನಂತರ ಯಾವುದಾದರೂ ಮೆಕ್ಯಾನಿಕ್ ಶಾಪಿಗೋ ಹೋಗಿ ಕೆಲಸ ಮಾಡುತ್ತಿದ್ದ. ಯಾವೊಂದನ್ನೂ ಪರ್ಮನೆಂಟ್ ಅಂದುಕೊಳ್ಳದ ಅವ ಯಾವುದಾದರೊಂದನ್ನ ಮಾಡಿಕೊಂಡೇ ಇರುತ್ತಿದ್ದ. ಮನೆಯ ಅಷ್ಟೂ ಜನ ಮಾಡುವುದು ಕೂಲಿಯೇ. ತಮ್ಮ ದುಡಿಮೆಯ ತಾಕತ್ತು ಅವರಿಗೆ ಗೊತ್ತಿತ್ತು. ವಿದ್ಯೆ ಕಲಿಯಲಿಲ್ಲ ಅಂತ ಚಂದ್ರಣ್ಣ ಯಾವತ್ತು ತನ್ನ ಮಕ್ಕಳನ್ನ ಮೂದಲಿಸಲಿಲ್ಲ. ಅವರನ್ನ ದ್ವೇಷಿಸಲಿಲ್ಲ. ಹೇಗೋ ಬದುಕೋದು ಕಲಿತರಾಯ್ತು ತಮ್ಮನ್ನ ತಾವು ಸಾಕಿಕೊಳ್ಳುವುದು ಕಲಿತರಾಯ್ತು ಅನ್ನುವ ಧನ್ಯತೆಯೊಂದಿಗಷ್ಟೇ ಬದುಕುತ್ತಿದ್ದರು. ಚಂದ್ರಣ್ಣನ ಹೆಂಡತಿ ಗೌರಕ್ಕನಿಗೂ ಇದು ಅಷ್ಟಾಗಿ ನೋವು ಕೊಡುವ ವಿಚಾರವೆನಿಸಲಿಲ್ಲ. ಬರದ ಓದನ್ನ ಮಕ್ಕಳ ಕುತ್ತಿಗೆಗೆ ಕಟ್ಟಿದರಷ್ಟೇ ತಾನೇ ಏನು ಫಲ. ಅವರ ಹಣೆಯಲ್ಲಿ ಬರೆದ ಹಾಗಾಗುತ್ತೆ ಅನ್ನುವ ನಂಬಿಕೆಯೊಂದಿಗೆ ಸಂತೋಷವಾಗಿಯೇ ಇದ್ದರು. ಇವರುಗಳೋ ಬದುಕೋಕೊಂದು ದಾರಿ.. ಅದು ಓದಿನಿಂದಲೇ ದೊರೆಯಬೇಕಾದ್ದಿಲ್ಲ ಅನ್ನುವ ಧೋರಣೆಯಿಂದ ಇವರೂ ಹಾಗೆಯೇ ಅಲ್ಲಿಲ್ಲಿ ಕೂಲಿ ಮಾಡಿದರೂ ಸಂತೋಷದಿಂದ, ನೆಮ್ಮದಿ ಇಂದ ಇದ್ದರು. ಐದು ಜನರ ದುಡಿಮೆಯಿಂದ ಕುಟುಂಬ ನಿರ್ವಹಣೆ ಸಾಂಘವಾಗಿಯೇ ನಡೆಯುತ್ತಿತ್ತು. 

ಇವರ ಕುಟುಂಬದ ಬಗ್ಗೆ ಎಲ್ಲರಿಗೂ ಆಶ್ಚರ್ಯವೆನಿಸುತ್ತಿದ್ದ ಒಂದು ವಿಚಾರವೆಂದರೆ ಎಲ್ಲರೂ ಈಗಿನ ಕನ್ನಡ ಸಿನಿಮಾದ ಪ್ರಖ್ಯಾತ ಹೀರೋ ಒಬ್ಬನ ಅನನ್ಯ ಅಭಿಮಾನಿಗಳು. ಗೌರಕ್ಕ ಕೂಡಾ. ಆದರೆ ಅಪ್ಪ ಮಕ್ಕಳಲ್ಲಿ ಅವರ ವರ್ತನೆಗಳಿಂದಾಗಿ ಸುಲಭಕ್ಕೆ  ಅದು ಕಾಣಿಸುತ್ತಿದ್ದಂತೆ ಗೌರಕ್ಕನಲ್ಲಿ ಕಾಣಿಸುತ್ತಿರಲಿಲ್ಲವಷ್ಟೇ. ಆ ಹೀರೋ ಯಾವುದೇ ಸಿನಿಮಾ ಬಂದರೂ ಅಪ್ಪ ಮಕ್ಕಳು ಪ್ಲಾನ್ ಮಾಡಿ ಒಟ್ಟಿಗೆ ಹೋಗಿ ನೋಡಿ ಬರುತ್ತಿದ್ದರು. ಗೌರಕ್ಕ ಅವರ ಜೊತೆ ಟಾಕೀಸ್ ಗೆಲ್ಲ ಹೋಗುತ್ತಿರಲಿಲ್ಲ, ಟೀವಿಯಲ್ಲಿ ಅವನ ಚಿತ್ರಗಳು ಬಂದರೆ ಕಣ್ಣು ಮಿಟುಕಿಸದೆ ನೋಡ್ತಾ ಇದ್ದರು. ಆದರೆ ಈ ಶಾಂತ ಮಾತ್ರ ಅವರಷ್ಟೂ ಜನರಲ್ಲಿ ಎಲ್ಲರನ್ನೂ ಮೀರಿದ ಅಭಿಮಾನಿ. ಅಪ್ಪ ಅಣ್ಣರೊಂದಿಗೆ ಮತ್ತೊಮ್ಮೆ ನೋಡಿದರೂ ಪರವಾಗಿಲ್ಲ ತಾನು ಮಾತ್ರ ಆ ಹೀರೋ ಸಿನಿಮಾವನ್ನ ಬಿಡುಗಡೆಯ ದಿನ, ಮೊದಲ ಪ್ರದರ್ಶನವೇ ನೋಡಬೇಕಿತ್ತು. ಟಿಕೆಟ್ ಸಿಗದೇ ಚಿತ್ರ ಮಂದಿರ ತುಂಬಿ ತುಳುಕುತ್ತಿದ್ದರೂ ಪೂರ್ತಿ ನಿಂತೋ ಅಥವಾ ನೆಲದ ಮೇಲೆ ಕೂತೋ ಕೂಡಾ ಸಿನಿಮಾ ನೋಡಿಕೊಂಡು ಬಂದು ಬಿಡುತ್ತಿದ್ದ. ತಾನು ನೋಡಿಬಂದ ಆ ಹೀರೋ ಸಿನಿಮಾ ಕತೆಯನ್ನ, ಅವನ ಹಾಡು ಫೈಟ್ ಡ್ಯಾನ್ಸ್ ಗಳ ಕುರಿತಾಗಿ ರೋಚಕವಾಗಿ ಕತೆ ಹೇಳಿ ಅವರಿಗೂ ಸಿನಿಮಾ ನೋಡುವಂತೆ ಅಸೆ ಹುಟ್ಟಿಸಿ ಬಿಡುತ್ತಿದ್ದ. ಅವನ ಸಿನಿಮಾ ಡೈಲಾಗ್ ಗಳನ್ನ ತನ್ನ ಸಾಮಾನ್ಯ ಮಾತುಕತೆಯ ನಡುವೆ ಸೇರಿಸಿ ಮಾತಾಡುವ ವಿಚಿತ್ರ ಖಯಾಲಿ ಬೆಳೆಸಿಕೊಂಡಿದ್ದ. ತನ್ನ ದುಡಿಮೆಯಲ್ಲಿ ಅಷ್ಟಿಷ್ಟು ಉಳಿಸಿ, ಮೂವರು ಅಣ್ಣ ತಮ್ಮಂದಿರು ಸೇರಿ ಮನೆಗೊಂದು ಡಕ್, ಡೀವೀಡಿ, ಸ್ಪೀಕರ್ಗಳನ್ನ ತಂದಿಟ್ಟರು. ಅದರಲ್ಲಿ ಇಡೀ ಬೀದಿಗೆ ಕೇಳಿಸುವಂತೆ ಜೋರಾಗಿ ಕೇಳಿಸುವಂತೆ ಸೌಂಡ್ ಕೊಟ್ಟು ಆ ಹೀರೋ ಹಾಡುಗಳನ್ನ ಕೇಳಿ, ಕೇಳಿಸುತ್ತಿದ್ದರು. ಮನೆಯ ತುಂಬಾ ಬರೀ ಆ ಹೀರೋನದ್ದೇ ಪೋಸ್ಟರ್ ಗಳು. ಎಷ್ಟೋ ಸಾರಿ ಶಾಂತ ಸಿನಿಮಾಗಳಿಗೆ ಒಬ್ಬನೇ ಹೋಗಲಿಕ್ಕೆ ಬೇಜಾರಾಗಿ.. ಅಥವಾ ತನ್ನ ಗುರು ಆ ಹೀರೋನ ಸಿನಿಮಾವನ್ನ ಮತ್ತೊಬ್ಬರಿಗೆ ತೋರಿಸಬೇಕೆನ್ನುವ ಹಟಕ್ಕಾಗಿ ತನ್ನ ಸ್ವಂತ ಖರ್ಚಿನಿಂದಲೇ ಅದೆಷ್ಟೋ ಜನರಿಗೆ ಸಿನಿಮಾ ತೋರಿಸಿದ್ದಿದೆ..!! ಆ ಹೀರೋನ ಒಂದು ಪ್ರಖ್ಯಾತ ಚಿತ್ರವನ್ನ ಒಟ್ಟಿಗೆ ಏಳು ಜನರನ್ನ ಸೇರಿಸಿಕೊಂಡು ಅಷ್ಟೂ ಜನರ ದುಡ್ಡನ್ನ ತಾನೇ ಕೊಟ್ಟು ಸಿನಿಮಾ ತೋರಿಸಿದ್ದನಂತೆ..!! ಆ ಹೀರೋನ ಹುಟ್ಟು ಹಬ್ಬ ಬಂದರೆ ತನ್ನದೇ ಹುಟ್ಟು ಹಬ್ಬವೆಂಬಂತೆ ಇಡೀ ಬೀದಿ ಬೀದಿಗೆ ಸಿಹಿ ಹಂಚುತ್ತಿದ್ದ. ಅಂಥಾ ಅಭಿಮಾನ ಅವನದ್ದು..!!

ಅವನ ಹಾಗೆಯೇ ನಮ್ಮೂರಿನಲ್ಲಿ ಆ ಹೀರೋಗೆ ಅಂತ ಅದೆಷ್ಟು ಅಭಿಮಾನಿಗಳಿಲ್ಲ..?? ನಮ್ಮೂರಿನಲ್ಲಿ ಆ ಹೀರೋಗಿರುವಷ್ಟು ಅಭಿಮಾನಿಗಳು ಬೇರೆ ಯಾವ ಊರಲ್ಲಿಯೂ ಇಲ್ಲವೇನೋ..?? ಸಾಬರ ಅಯ್ಯೂಬ & ಅವರಣ್ಣ ಮುಬಾರಕ್ ಆ ಹೀರೋ ಅಂದರೆ ಜೀವವೇ ಬಿಡುತ್ತಿದ್ದರು. ಪ್ರವೀಣ, ಲಾಲೂ, ಅರುಣ, ಗಿರೀಶ, ನನ್ನ ಮೈದುನ ಮೋನ, ಗೊಳ್ಳೆ ಅರುಣ, ಪರ್ಸ, ನರೇಶ, ಮಂಜ, ಹೇಮಿ, ನನ್ನ ತಮ್ಮ ಸಂತು ಹೀಗೆ ಇಡೀ ಊರಿಗೂರೇ ಆ ಹೀರೋ ಅಭಿಮಾನಿಗಳು ಅನ್ನಬೇಕೇನೋ..!! ಅಪ್ಪ ರಾಜ್ ಕುಮಾರ್ & ವಿಷ್ಣುವರ್ಧನ್ ಅಭಿಮಾನಿಯಾದರೆ ನಾನು ಕೂಡಾ ಅಪ್ಪನ ಹಾಗೆ ರಾಜ್ ಕುಮಾರ್, ವಿಷ್ಣುವರ್ಧನ್ & ಪುನೀತ್ ನ ಅಭಿಮಾನಿಯಾಗಿದ್ದೆ. ಬರೀ ಊರ ಯುವಕರು ಹುಡುಗರು ಮಾತ್ರವಲ್ಲ, ಇಳಿ ಮುದುಕರಲ್ಲೂ, ನಡು ವಯಸ್ಸಿನ ಗಂಡಸರಲ್ಲೂ ಆ ಹೀರೋಗೆ ನಮ್ಮೂರಿನಲ್ಲಿ ಅದಮ್ಯ ಅಭಿಮಾನಿಗಳ ಕೂಟವುಂಟು. 

ಹೀಗೆ ಆ ವರ್ಷದ ರ ಜನವರಿಯಲ್ಲಿ ಆ ಹೀರೋನ ಒಂದು ಸಿನಿಮಾ ರಿಲೀಸ್ ಆಗಿತ್ತಂತೆ. ಅದರ ಬಿಡುಗಡೆಯ ದಿನದ ಮೊದಲ ಶೋಗೆಂದೇ ಶಾಂತ ತನ್ನ ಸೈಕಲ್ ಓಡಿಸ್ಕೊಂಡು ಆ ಸಿನಿಮಾವನ್ನ ನೋಡೋಕೆ ಹೋಗ್ತಾ ಇದ್ನಂತೆ. ಮಸೀದಿ ಬಳಿ ವೇಗವಾಗಿ ಸಾಗುತ್ತಿದ್ದ ಸೈಕಲ್ ಆಯತಪ್ಪಿ ರಸ್ತೆಯಲ್ಲಿನ ದೊಡ್ಡ ಗುಂಡಿಯೊಂದಕ್ಕೆ ಇಳಿದು ಬ್ಯಾಲೆನ್ಸ್ ತಪ್ಪಿ ಇವನು ಸೈಕಲ್ ಇಂದ ರಸ್ತೆಗೆ ಬಿದ್ದು ಬಿಟ್ಟನಂತೆ. ತಕ್ಷಣಕ್ಕೆ ಹಿಂದೆಯೇ ಬರುತ್ತಿದ್ದ ಟ್ರ್ಯಾಕ್ಟರ್ ಒಂದರ ಹಿಂದಿನ ಟ್ರೈಲರ್ ಚಕ್ರಕ್ಕೆ ಇವನ ತಲೆ ಸಿಕ್ಕು, ಚಕ್ರ ಅವನ ತಲೆ ಮೇಲೆ ಹತ್ತಿ..  ಅಲ್ಲಿಯೇ ಅವನ ತಲೆಯೊಡೆದು.....!!
ಛೇ.. ನನಗೆ ಅದನ್ನ ವಿವರಿಸೋಕೆ ಹಿಂಸೆ ಅನ್ನಿಸುತ್ತಿದೆ..!
ಅದಾಗಿಯೂ ಮಿಡಿ ಜೀವ ಮಿಡುಕುತ್ತಿದ್ದ ಶಾಂತನನ್ನ ಬದುಕಿಸಿ ಕೊಳ್ಳುವ ಸಲುವಾಗಿ ಕಾರ್ ಒಂದನ್ನ ಹಿಡಿದು ಶಿವಮೊಗ್ಗ ಆಸ್ಪತ್ರೆಗೆಂದು ಕೊಂಡೊಯ್ಯುವಾಗಲೇ ಶಾಂತ ಒಂದೆರಡು ನಿಮಿಷದಲ್ಲೇ ತನ್ನ ಇಹವನ್ನ ತ್ಯಜಿಸಿ ಬಿಟ್ಟಿದ್ದನಂತೆ. ಅವರ ಕುಟುಂಬದ ಆಕ್ರಂದನ ಕೇಳಲಾಗದಷ್ಟು ರೌರವವಂತೆ. ಇಡೀ ಊರಿಗೆ ಊರೇ ಅವತ್ತು ಅವನ ಸಾವು ಕಂಡು ಅನ್ನಾಹಾರ ತ್ಯಜಿಸಿ ಮೌನಕ್ಕೆ ಶರಣಾಗಿತ್ತಂತೆ. ಈ ವಿಚಾರವನ್ನ ಶಾಂತ ಸತ್ತು ಅದೆಷ್ಟೋ ದಿನದ ಮೇಲೆ ಅಮ್ಮ ನನಗೆ  ತಿಳಿಸಿದ್ದರು. ನನಗೂ ಅವನ ಸಾವಿನ ರೀತಿ & ನೋವು ಕೆಲ ಕಾಲ ಮನಭ್ರಮಣೆಯನ್ನ ಉಂಟು ಮಾಡಿದ್ದು ಸುಳ್ಳಲ್ಲ. 

ಬಹಳ ದಿನಗಳ ಕಳೆದ ಮೇ ತಿಂಗಳಿನಲ್ಲಿ ಊರ ಹಬ್ಬದ ಸಲುವಾಗಿ ಊರಿಗೆ ಹೋಗಿದ್ದೆ. ಊರ ಹಬ್ಬಕ್ಕೆ ಇನ್ನೂ ಎರಡು ದಿನ ಮುಂಚೆಯೇ ಹೋಗಿದ್ದರಿಂದ ಬೋರ್ ಹೊಡೆಯುತ್ತಿತ್ತು. ಆವತ್ತಷ್ಟೇ ಬೆಂಗಳೂರಿನಿಂದ ಬಂದ ಚೇತು, ಬಾ ಸತೀ ಬೇಜಾರಾಗ್ತಿದೆ ಆ ಹೀರೋನ ಇತ್ತೀಚಿನ ಫಿಲಂಗೆ ಹೋಗಿ ಬರೋಣ ಅಂತ ಕರೆದು ಕೊಂಡು ಹೋದ. ನೆಚ್ಚಿನ ಗೆಳೆಯ ಅರುಣ್ ನವಲಿಯ ಜೊತೆ ಶತಮಾನಂಭವತಿ ಕವನ ಸಂಕಲನ ಬಿಡುಗಡೆಯಾದ ಮಾರನೆ ದಿನವೇ ಆ ಚಿತ್ರವನ್ನ ನೋಡಿದ್ದೆನಾದರೂ, ಮನೆಯಲ್ಲಿ ಬೇಜಾರಾಗ್ತಿದೆಯಲ್ಲ ಅನ್ನೋ ಕಾರಣಕ್ಕೆ ಚೇತು ಜೊತೆ ಮತ್ತೆ ಆ ಸಿನಿಮಾಕ್ಕೆ ಹೋದೆ. ಚಿತ್ರ ಲವಲವಿಕೆ ಇಂದ ಕೂಡಿದ್ದರಿಂದ ಎರಡನೇ ಸಾರಿ ನೋಡುವುದಕ್ಕೇನು ಅಭ್ಯಂತರವಿಲ್ಲವೆನಿಸಿ ಹೋಗಿದ್ದೆ. ಸಿನಿಮಾ ನೋಡಿಕೊಂಡು ಚೇತು ಜೊತೆ ಮಾತಾಡಿಕೊಂಡು ವಾಪಾಸು ಬರುವಾಗ ಚೇತು ಶಾಂತನ ವಿಚಾರವನ್ನ ಮಾತಿಗೆಳೆದ. ಶಾಂತ ಈ ಟೈಮ್ ಗೆ ಇದ್ದಿದ್ರೆ ಈ ಫಿಲಂ ನೋಡಿ ಎಷ್ಟು ಖುಷಿ ಪಡ್ತಿದ್ದ ಆಲ್ವಾ ಸತಿ ಅಂದ. ನನಗೂ ಹೌದೆನಿಸಿ ಹೂಂ ಅಂದೇ. ಅವನು ಹಿಂಗೆ ಆ ಹೀರೋ ಫಿಲಂ ನೋಡೋಕೆ ಹೋಗೋವಾಗ್ಲೇ ಆಕ್ಸಿಡೆಂಟ್ ಆಗಿ ಸತ್ತಿದಂತೆ ಅಂದ ಚೇತು. ಹಾಂ ಗೊತ್ತಾಯ್ತು.. ಅಮ್ಮ ಫೋನ್ ಮಾಡಿ ಹೇಳಿದ್ರು ಅಂದೇ. ಆ ಟೈಮ್ ನಲ್ಲಿ ನಾನೂ ಊರಲ್ಲಿ ಇರಲಿಲ್ಲ ಹಾಗಾಗಿ ನನಗೆ ಅವನನ್ನ ಕೊನೆಗೂ ನೋಡೋಕೆ ಆಗ್ಲಿಲ್ಲ ಸತಿ ಅಂದ. ನಾನು ಕೂಡಾ ನನ್ನ ಪರಿಸ್ತಿತಿಯನ್ನ ಹೇಳಿಕೊಂಡೆ. ನಿನಗೆ ಮತ್ತೊಂದು ವಿಚಾರ ಗೊತ್ತಾ ಸತಿ ಅಂದ..!! ಏನು ಅಂದೇ..?? ಆ ಹೀರೋ ಅಂದ್ರೆ ಜೀವ ಬಿಡ್ತಿದ್ದ.. ಆ ಹೀರೋ ಫಿಲಂ ನೋಡೋಕೆ ಹೋಗಿನೇ ಜೀವ ಬಿಟ್ಟ ಶಾಂತನ ಹೆಣವನ್ನ ಒಂದ್ಸಾರಿ ಆ ಹೀರೋಗೆ ತೋರಿಸಿದರೆ.. ಅವನ ಆತ್ಮಕ್ಕೆ ಶಾಂತಿ ಸಿಗ್ಬೋದು ಅನ್ನಿಸಿ ಅದ್ಯಾರ್ಯಾರದ್ದೋ ಮೂಲಕ ಆ ಹೀರೋನ ಹಿಡಿದು ಹಿಂಗ್ ಹಿಂಗೆ ಅಂತ ಹೇಳಿ.. ಬಂದು ಶಾಂತನನ್ನ ನೋಡ್ಲಿಕ್ಕೆ ಕೇಳಿಕೊಂಡ್ರೆ ಆ ಹೀರೋ ಏನ್ ಅಂದ್ನಂತೆ ಗೊತ್ತಾ..?? ಐದು ಲಕ್ಷ ಕೊಟ್ರೆ ನೋಡೋಕೆ ಬರ್ತೀನಿ ಅಂದನಂತೆ..!! ಚೇತು ಹಾಗಂದು ಮಾತು ಮುಗಿಸಿದ ಕೂಡಲೇ ನನ್ನೆದೆಯಲ್ಲಿ ಒಂದು ಮಹಾಸ್ಪೋಟವಾದಷ್ಟೇ ಗಂಭೀರವಾದ ಒಂದು ಸ್ಪೋಟದ ಶಬ್ದ ಕೇಳಿದ ಹಾಗಾಯ್ತು. ಚೇತುವಿಗೆ ಅದು ನಿಜವೋ ಅಥವಾ ಸುಳ್ಳೋ ಅಂತ ಕೇಳಿದೆ. ಈ ವಿಚಾರದಲ್ಲಿ ಯಾರಾದರೂ ಸುಳ್ಳು ಹೇಳ್ತಾರಾ ಅಂದ. 

ಚೇತು ಹೇಳಿದ್ದು ಸತ್ಯವೋ ಸುಳ್ಳೋ ಅನ್ನುವುದನ್ನ ಪರಾಮರ್ಶಿಸಬೇಕು ಅಂತಲೂ ನನಗೆ ಅನ್ನಿಸಲಿಲ್ಲ. ಆ ಕ್ಷಣ ಆ ಆಲೋಚನೆ ನನಗೆ ಬರಲೂ ಇಲ್ಲ. ಅದೆಂಥ ಲಾಲಸೆ..?? ಅದು ಸತ್ತವರನ್ನ ನೋಡಲು ಹೋಗುವುದಕ್ಕೆ ಕೂಡಾ ಐದು ಲಕ್ಷ ಕೇಳುವುದೆಂದರೆ..?? ಅದು ಕೂಡಾ ಮನೆಯ ಐದೂ ಜನರೂ ಕೂಲಿ ಮಾಡುವಂತಹ ಪರಿಸ್ತಿತಿಯಲ್ಲಿನ ಕುಟುಂಬ. ಅವರಿಗಂತ ಸ್ವಂತ ಪುಟ್ಟದೊಂದು ಮನೆ ಬಿಟ್ಟರೆ ಬೇರಾವ ಆಸ್ತಿಯೂ ಇಲ್ಲ. ಅಂಥವರ ಬಳಿ ಧರ್ಮಕ್ಕೆ.. ಖಾಲೀ  ಸತ್ತ ತನ್ ಅಭಿಮಾನಿಯನ್ನ ತಾನೇ ನೋಡುವುದಕ್ಕೆ ಐದು ಲಕ್ಷ ಕೇಳುವುದೆಂದರೆ ಹಣದ ಮೇಲೆ ಅದೆಂಥ ಮೋಹವಿರಬೇಕು..?? ಆ ಹೀರೋ ಏನು ಶಾಂತನಿಗೆ ಐದು ಲಕ್ಷ ಸಾಲವಾಗಿ ಕೊಟ್ಟಿದ್ದನೇ..?? ಸತ್ತ ಹೆಣದ ಮುಂದೆ ನಿಂತು ಕೇಳೋಕೆ..!! ತಮ್ಮ ಯಾವತ್ತಿನ ಮಾಮೂಲಿ ಡೈಲಾಗ್ ಹೇಳಿ ಕಳುಹಿಸಿದ್ದರೂ ಆಗುತ್ತಿತ್ತು. ಅಯ್ಯೋ ಸಾರಿ ನನ್ ಅಭಿಮಾನಿಯೊಬ್ಬನಿಗೆ ಈ ರೀತಿ ಆಗಿದ್ದು ನನಗೆ ತುಂಬಾ ನೋವುಂಟು ಮಾಡಿರೋ ಸಂಗತಿ. ನನಗೂ ಬರೋ ಆಸೆ ಆದ್ರೆ ವಿಪರೀತ ಬ್ಯುಸಿ ಶೂಟಿಂಗ್ ನಲ್ಲಿ.. ಬರೋಕೆ ಎಷ್ಟು ಪ್ರಯತ್ನ ಪಟ್ರೂ ಆಗಲ್ಲ. ದೇವ್ರು ಅವನ ಆತ್ಮಕ್ಕೆ ಶಾಂತಿ ಕೊಡಲಿ. ನನ್ನ ಒಬ್ಬ ಗ್ರೇಟ್ ಅಭಿಮಾನಿ ಅವ್ನು ಅಂತ ಒಂದೆರಡು ಫಿಲ್ಮೀ ಡೈಲಾಗ್ ಹೇಳಿದ್ದಿದ್ದರೂ ಅವನ ಮೇಲಿನ ಮಿಕ್ಕವರ ಅಭಿಮಾನ ಹಾಗೆ ಉಳಿಯುತ್ತಿತ್ತೇನೋ ಅನ್ನಿಸ್ತು. ಒಂದು ನಿಮಿಷದ ಒಂದು ಸಣ್ಣ ಪಾನ್ ಪರಾಗ್ ಜಾಹೀರಾತಿನಲ್ಲಿ ಕಾಣಿಸಿ ಕೊಂಡಿದ್ದಿದ್ದರೆ ಕೂಡಾ ಅವರಿಗೆ ಆ ಐದು ಲಕ್ಷಕ್ಕಿಂತ ಜಾಸ್ತಿ ಸಿಕ್ಕಿದರೂ ಸಿಕ್ಕುತ್ತಿತ್ತೇನೋ..?? ಒಬ್ಬ ಅಭಿಮಾನಿಯ ಜೀವ ಆ ಪಾನ್ ಪರಾಗ್ ಜಾಹೀರಾತಿಗಿಂತ ಕೀಳೆ..?? ಹಣಕ್ಕಾಗಿ ಬೆತ್ತಲೆ ಚಿತ್ರಗಳಲ್ಲಿ ಕೂಡಾ ನಟಿಸೋಕೆ ನಾನು ಸಿದ್ಧ ಎನ್ನುವಂಥ ಆ ಹೀರೋನ ಹೇಳಿಕೆ ಉಳ್ಳ ಪತ್ರಿಕೆಯನ್ನ ನಾನು ಬಹಳ ಹಿಂದೆ ಒಮ್ಮೆ ಓದಿದ್ದೆ. ಅದ್ಯಾಕೋ ಅವನ ಆ ಮಾತು, ಈ ಸಂಧರ್ಭಕ್ಕೆ ಬಹಳ ಪುಷ್ಟಿ ಕೊಡುವಂತಿತ್ತು. ಅವರಂಥಹ ವ್ಯಕ್ತಿಗಳಿಗೆ ಐದು ಲಕ್ಷ ಒಂದು ವಿಚಾರವೇ ಅಲ್ಲ. ಕರೆದದ್ದು ಯಾವುದೋ ರಾಜಕೀಯ ಸಮಾರಂಭಕ್ಕೋ ಅಥವಾ ಜನಪ್ರೀಯತೆಯನ್ನ ಸೆಳೆಯಬಲ್ಲ ಕಾರ್ಯಕ್ರಮಗಳಿಗೆ ಅಲ್ಲವಲ್ಲ ಗೌರವ ಧನವನ್ನ ಅಪೇಕ್ಷಿಸುವುದಕ್ಕೆ. ಸತ್ತವನನ್ನ ನೋಡುವುದಕ್ಕೆ ಲಕ್ಷಾಂತರ ರುಪಾಯಿ ದೇಣಿಗೆ ನೀಡಬೇಕೆಂದರೆ ಮನುಷ್ಯನ ಮೇಲೆ ಅದ್ಯಾವ ಮಹಾ ಗೌರವವಿದ್ದೀತು ಅವನಲ್ಲಿ..?? ಅವನ ಮನುಷ್ಯತ್ವ ಜಗಜ್ಜಾಹೀರಾಗುವಂಥ ಘಟನೆಗಳು ಕೂಡಾ ನಡೆದವೆನ್ನಿ ಕಾಲಾನುಕ್ರಮದಲ್ಲಿ. ಆದರೂ ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು ಅನ್ನುತ್ತಾರಲ್ಲ ಅದು ನಿಜ. 

ಡಾಕ್ಟರ್ ರಾಜ್ ಕುಮಾರರ ವಿಚಾರದಲ್ಲಿ ಕೂಡಾ ಹಲವಾರು ಜನ ಕೆಲವೊಂದು ಥರದ ಮಾತುಗಳನ್ನಾಡುವ ಪರಿಯನ್ನ ನಾನು ಕೇಳಿದ್ದೇನೆ. ತುಂಬಾ ಜನಪ್ರಿಯ ಅಪವಾದ ಅದು. ಅಷ್ಟು ಯಶಸ್ವೀ ನಟರಾದರೂ.. ಅಷ್ಟು ಸಂಪತ್ತು ಗಳಿಸಿದರೂ ಜನಸಾಮಾನ್ಯರಿಗಾಗಿ ಅವರು ಏನು ಮಾಡಲಿಲ್ಲವೆಂಬ ಅಪವಾದ ಅದು. ಕನ್ನಡದಲ್ಲಿ ಅಂತ ಒಬ್ಬ ಮಹಾನ್ ನಟ ಜನಿಸಿದ್ದೇ ನಮ್ಮ ಪುಣ್ಯ. ಇಲ್ಲಿಯತನಕ ಅವರಂಥಾ ಒಬ್ಬ ಅದ್ಭುತ ವ್ಯಕ್ತಿತ್ವದ ನಟರನ್ನ ನಾನು ಕೂಡಾ ಎಲ್ಲಿಯೂ ಕಂಡಿಲ್ಲ. ಅವರವರ ಸ್ವಂತ ಹಣದಲ್ಲಿ ಸಮಾಜ ಸೇವೆ ಮಾಡಬೇಕಾದ ವಿಚಾರ ಅವರ ಸ್ವಂತಕ್ಕೆ ಬಿಟ್ಟದ್ದು. ಅದನ್ನಿಟ್ಟುಕೊಂಡು ಅವರ ವ್ಯಕ್ತಿತ್ವವನ್ನ ಅಳೆಯೋದು ಮಹಾ ತಪ್ಪು. ಹಾಗೆ ಅವರನ್ನ ಸಮಾಜ ಸೇವೆ ಅಥವಾ ಸುಧಾರಕರನ್ನಾಗಿಸುವ ಪ್ರೇರಣೆ ಅವರನ್ನು ಯಾವತ್ತಾದರೂ ಕಾಡಿದ್ದಲ್ಲಿ, ಖಂಡಿತ ಅವರು ನಮ್ಮ ನಾಡಿನ ರಾಜಕೀಯ ರಂಗಕ್ಕೆ ಬಂದಿರುತಿದ್ದರು. ರಾಜಕಾರಣದ ಮೂಲಕ ಸಮಾಜ ಸುಧಾರಣೆಗಾಗಿ ನಾಡೇ ಅವರಿಗೊಂದು ಮುಕ್ತ ವೇದಿಕೆ ಕೊಡುವಷ್ಟು ಭಕ್ತಿ ಇಡಿ ನಾಡಿನದ್ದಾಗಿತ್ತು ಅವರ ಮೇಲೆ. ಅವರ ಧ್ಯೇಯ ಒಂದೇ ಆಗಿತ್ತು ಕಲಾ ಸೇವೆ. ಕನ್ನಡ ನಾಡಿನ ತಾಯಿ ಭುವನೇಶ್ವರಿಯ ಸೇವೆ. ಅದಕ್ಕೆ ಸಾಕ್ಷಿಯಾಗಿ ಕನ್ನಡಪರ ಹೋರಾಟಗಳಲ್ಲಿ ಅವರು ವಹಿಸುತ್ತಿದ್ದ ಮುಂದಾಳತ್ವಗಳು ನಿಲ್ಲುತ್ತವೆ. ಅಂಥವರು ಕೂಡಾ ಅಭಿಮಾನಿಗಳನ್ನ ಮೊದ ಮೊದಲು ದೇವರಿಗೆ ಹೋಲಿಸಿದರು. ಅಭಿಮಾನಿ ದೇವರುಗಳೇ ಆ ಒಂದೇ ಮಾತಿಗೆ ಅವರು ಕನ್ನಡ ನಾಡಿನ ಕಣ್ಮಣಿಗಳಾಗಿ ಹೋದರು. ಆ ಮಾತು ಪುಷ್ಟಿಗೆ ನಿಲ್ಲುವಂತೆ ಅಭಿಮಾನಿಗಳ ಕುರಿತಾಗಿ ಅವರ ಧೋರಣೆ ಇರುತ್ತಿತ್ತು. ರಾಜ್ ಕುಮಾರ್ ಆಗಲಿ, ವಿಷ್ಣುವರ್ಧನ್ ಆಗಲಿ.. ಅಥವಾ ಇನ್ನಿತರ ಹಿರಿಯ ನಟ ಚೇತನರಾಗಲಿ ತಾವು ದೈಹಿಕವಾಗಿ ನಮ್ಮನ್ನ ಅಗಲಿ ಹೋದರು ಮಾನಸಿಕವಾಗಿ ನಮ್ಮೆಲ್ಲರಲ್ಲೂ ಚಿರಸ್ಥಾಯಿಯಾಗಿ ಉಳಿದುಕೊಂಡಿರುವುದರ ಮೂಲ ರಹಸ್ಯ ಇದೇನೇ. ಅಭಿಮಾನಿಗಳೆಡೆ ಅವರಿಗಿದ್ದ ಸಂಪ್ರೀತಿ, ಸಹೃದಯತೆ, ಸಹೋದರತ್ವ & ಅಭಿಮಾನಿಗಳೆಡೆಗಿನ ಗೌರವ. ಈಗಿನ ಬಹಳಷ್ಟು ಯುವ ನಟರು ಅವರ ಆದರ್ಶಗಳನ್ನ ಕಲಿಯಬೇಕಿದೆ.

ನಟ ರಜನಿಕಾಂತ್ ಕ್ಯಾನ್ಸರ್ ಪೀಡಿತ ತಮ್ಮ ಅಭಿಮಾನಿಯೊಡನೆ ಇಡೀ ಒಂದಿನ ಕಳೆಯೋ ಸರಳತೆಯನ್ನ ಮೆರೆದು ಅವರ ಎತ್ತರವನ್ನ ಇನ್ನೂ ಎತ್ತರಗೊಳಿಸಿ ಕೊಳ್ತಾರೆ. ಈಚೆಗೆ ಅಂತ ಒಂದು ಘಟನೆಯ ಕುರಿತಾಗಿ ಫೇಸ್ಬುಕ್ ನಲ್ಲಿ ಓದಿದ್ದೆ. ನಟ ವಿಷ್ಣುವರ್ಧನ್ ಬಹಳ ಹಿಂದೆ ತುಂಬು ಗರ್ಭಿಣಿಗೆ ಹೆರಿಗೆ ಸೌಲಭ್ಯಕ್ಕಾಗುವಷ್ಟು ಹಣ ಸಹಾಯ ಮಾಡಿದ್ದು.. ನಟ ಶಿವರಾಜ್ ಕುಮಾರ್ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಉತ್ತರಕಾಂಡದ ನೆರೆ ಪರಿಹಾರ ಅಭಿಮಾನಿಗಳಿಂದ ಸಂಗ್ರಹಿತ ಆರು ಲಕ್ಷ ರೂಪಾಯಿಗಳೊಂದಿಗೆ ತಮ್ಮದೂ ಐದು ಲಕ್ಷ ಸೇರಿಸಿ ಕೊಡುವುದು.. ಹೀಗೆ ಅನೇಕ ಉದಾಹರಣೆಗಳು ಅವರ ತಾರಾ ಮೌಲ್ಯವನ್ನ ಇನ್ನಷ್ಟು ಹೆಚ್ಚಿಸುತ್ತವೆ. ಇವೆಲ್ಲ ಈಚೆಗೆ ಫೇಸ್ಬುಕ್ ನಲ್ಲಿ ಓದಿದ ಒಂದೆರಡು ಘಟನೆಗಳಷ್ಟೇ. ಹಾಗೆ ಬೆಳಕಿಗೆ ಬಾರದ ಅದೆಷ್ಟೋ ಘಟನೆಗಳು ಜನಸಾಮಾನ್ಯರ ಹೃದಯದಲ್ಲಿದೆ. ಆ ಹೀರೋನ  ಕುರಿತಾಗಿ ನಾ ಕೇಳಿದ ವಿಚಾರಗಳು ಸರಿಯೋ ತಪ್ಪೋ ಪರಾಮರ್ಶಿಸುವ ಪ್ರಯತ್ನ ನಾನು ಮಾಡಿದೆ. ಶಿವಕುಮಾರನನ್ನೂ ಸೇರಿ ಊರಲ್ಲಿ ಬಹಳಷ್ಟು ಹುಡುಗರು ಆ ಮಾತು ನಿಜ ಅಂತ ಅಂದರು..!! ಅದ್ಯಾಕೋ ಆ ಹೀರೋ ಅಸಹ್ಯ ಅನ್ನಿಸೋಕೆ ಶುರು ಆದ. ಅಲ್ಲಿಯ ತನಕ ಅವನ ಮೇಲಿದ್ದ ನನ್ನ ಭರವಸೆಯ ಕನಸುಗಳೆಲ್ಲ ಒಂದೇ ಸರಿ ದ್ವಂಸ ಆದವು. ಅವನಾಗಲಿ ಅಥವಾ ಅಂಥಾ ಧೋರಣೆಯುಳ್ಳ ಯಾರಿಗಾದರೂ ಈ ವಿಚಾರಗಳು ಇನ್ನಾದರೂ ಮನ ಮುಟ್ಟಲಿ. ಅಭಿಮಾನಿಗಳು ಅವರ ಸ್ವತ್ತಲ್ಲ. ಅವರಿಗೊಂದು ವರ. ಅಭಿಮಾನಿಗಳಿದ್ದರಷ್ಟೇ ಅವರಿಗೊಂದು ವರ್ಚಸ್ಸು.. ಅವರಿಗೊಂದು ಮೌಲ್ಯ.. ಅವರಿಗೊಂದು ಬೆಲೆ.. ಅವರಿಗೊಂದು ನೆಲೆ. ಒಂದೇ ಒಂದು ಸಿನಿಮಾವನ್ನ ನೂರು ದಿನ ಓಡುವಂತೆ ಮಾಡಿ ಸ್ಟಾರ್ ಪಟ್ಟ ಕೊಡಿಸಬಲ್ಲ ಶಕ್ತಿ ಅಭಿಮಾನಿಗಳಿಗೆ ಇರುವಂತೆ ಒಂದು ಸಿನಿಮಾವನ್ನ ಬಿಡುಗಡೆಯಾದ ಒಂದು ದಿನವೂ ಓಡದಂತೆ ಫ್ಲಾಪ್ ಮಾಡಬಲ್ಲ ಶಕ್ತಿಯುಂಟು. 

ಅದ್ಯಾಕೋ ಈ ಬರಹವನ್ನ ಬರೆಯೋವಾಗ, ರಾತ್ರಿ ಹನ್ನೆರಡಾದರೂ ನನ್ನನ್ನ ಮಗ್ಗುಲಲ್ಲಿ ಮಲಗಿಸಿಕೊಂಡು ಅಮಿತಾಬ್, ರಿಷಿ ಕಪೂರ್, ಮಿತುನ್ ಚಕ್ರವರ್ತಿಯರ ಚಿತ್ರಗಳನ್ನ ಕಣ್ಣು ಮಿಟುಕಿಸದೆ ನೋಡುತ್ತಿದ್ದ ಅಪ್ಪ.. ಮಾಲಾಶ್ರೀಯ ಚಿತ್ರಗಳೆಂದರೆ ಚಿತ್ರ ಶುರುವಾಗುವ ಮುನ್ನ ಊಟದ ತಟ್ಟೆ ಹಿಡಿದು ಕೂತು ಚಿತ್ರ ಮುಗಿಯುವ ತನಕ ಕೈ ತೊಳೆಯದೇ ನೋಡುತ್ತಿದ್ದ ಪಕ್ಕದ ಮನೆಯ ಪುಷ್ಪಕ್ಕ.. ಸುಧಾರಾಣಿಯ ಚಿತ್ರಗಳೆಂದರೆ ಪಕ್ಕದ ಮನೆಯಾದರೂ ಬೇರೆ ಯಾವ ಪ್ರೊಗ್ರಾಮ್ ಗಳನ್ನ ನೋಡಲು ಬಿಡದೆ ಕಾಡಿ ಬೇಡಿ ಹಾಕಿಸಿಕೊಂಡು ನೋಡುತ್ತಿದ್ದ ಮಾಲಕ್ಕ. ರಾಮ್ ಕುಮಾರ್ ಎಂದರೆ ಜೀವ ಬಿಡುವ ಕಾಡಿ.. ಕಲ್ಪಾನಳನ್ನ ನೋಡಿದ ಕೂಡಲೇ ಕಲ್ಲಾಗುತ್ತಿದ್ದ ಅತ್ತೆ.. ಶೃತಿಯನ್ನ ನೋಡಿದೊಡನೆ ಕಣ್ಣೀರುಗರೆಯುತ್ತಿದ್ದ ವೀಣಕ್ಕ.. ಜಯಂತ ಕಾಯ್ಕಿಣಿಯರ ಹಾಡುಗಳನ್ನ ತನ್ನ ಜೀವ ಸ್ವರ ಎಂದುಕೊಳ್ಳುವ & ಯೋಗರಾಜಭಟ್ಟರ ಪರಮ ಶಿಷ್ಯ ಅಂದು ಕೊಳ್ಳುವ ರಾಘ.. ರಮ್ಯ ಎಂದರೆ ಎದೆಯ ಮೇಲೆ ಕೈ ಇಟ್ಟುಕೊಳ್ಳುವ ನಮ್ಮೂರಿನ ಜಗ್ಗ... ಧೋನಿಯನ್ನ ಬೈಯುವುದೇ ತಡ ಅದ್ಯಾಕೆ ಧೋನಿಯನ್ನ ದ್ವೇಷಿಸುತ್ತೀರೋ ಗೊತ್ತಿಲ್ಲಪ್ಪ ಅಂತ ಹಲುಬುವ ನನ್ ಆನ್ಲೈನ್ ಗೆಳೆಯ ಕೃಷ್ಣ... ರಾಜಕುಮಾರರ ಮತ್ತು ಇನ್ನಿತರರ ಅದ್ಭುತ ಚಿತ್ರಗಳನ್ನ ತಮ್ಮ ಬ್ಲಾಗ್ ಮೊಲಕ ಅದ್ಭುತವಾಗಿ ಪರಿಚಯಿಸಿ ಕೊಡ್ತಿರೋ ಶ್ರೀಕಾಂತ್ ಮಂಜುನಾಥ್ ಸಾರ್.. ಇಂಥವರೇ ಇನ್ನು ಅನೇಕರು ಸಾಲು ಸಾಲಿಗೆ ನೆನಪಾದರು. ಅವರದೆಂಥ ಅಭಿಮಾನ..?? ಅವರ ಅಭಿಮಾನವನ್ನೇ ಅಭಿಮಾನಿಸುವಷ್ಟು ವಿಶಿಷ್ಟ ರೀತಿಯದ್ದು ಅವರ ಅಭಿಮಾನ. 

ಒಬ್ಬ ಅಭಿಮಾನಿಯ ಬೆಲೆಯನ್ನ ಹಾಗೆ ಅಭಿಮಾನ ವಿರಿಸಿ ಕೊಂಡವರು ತಿಳಿದು ಕೊಳ್ಳದೇ ಹೋದಲ್ಲಿ ಅದು ಅವರು ತಮಗೆ ತಾವು ಮಾಡಿಕೊಳ್ಳುವ ಬಹುದೊಡ್ಡ ನಷ್ಟವಷ್ಟೇ. ಅವರುಗಳಿಂದ ಏನೂ ನಿರೀಕ್ಷೆ ಮಾಡದೆಯೇ.. ಅವರು ನಿರೀಕ್ಷೆ ಮಾಡದುದನ್ನೆಲ್ಲ ಕೊಡಬಲ್ಲ ನಿಜವಾದ ದೇವರುಗಳೇ ಅಭಿಮಾನಿಗಳು.  ಅಟ್ ಲಾಸ್ಟ್.. ಒಬ್ಬ ಅಭಿಮಾನಿಯಾಗಿ ನಾವು ಅವರುಗಳಿಂದ ನಿರೀಕ್ಷಿಸಬಹುದಾದರೂ ಏನನ್ನ..?? ಅವರ ಜೊತೆಗೊಂದು ಫೋಟೋ.. ಬಹಳ ಆಸೆ ಪಟ್ಟು ಅವರ ಜೊತೆಗೊಂದು ಉಪಹಾರ..  ಅದೃಷ್ಟವಿದ್ದರೆ ಅವರ ಜೊತೆಗೊಂದಷ್ಟು ಹೊತ್ತು ಅಥವಾ ದಿನವಷ್ಟೇ. ಅವರಿಂದ ನಾವು ಬೇರೆ ಏನ್ನನ್ನು ತಾನೇ ನಿರೀಕ್ಷೆ ಮಾಡಿಯೇವು.. ನಮಗಾಗಿ ಅವರ ಅಷ್ಟೆಲ್ಲಾ ಸಾಧನೆಗಳು ಇರುವಾಗ ಅಲ್ಲವೇ..?? ಜಾಗೋ ಅಭಿಮಾನಿ ದೇವರುಗಳೇ ಜಾಗೋ.. ಯೋಗ್ಯತೆ ಇಲ್ಲದವನನ್ನು ಮೆರೆಸುವುದು.. ಯೋಗ್ಯತೆ ಉಳ್ಳ ಉತ್ತಮ ಪುರುಷನನ್ನು ಅವಮಾನಿಸಿದಷ್ಟೇ ದ್ರೋಹ. ಯಾಕೋ ಇವನ ಮುಂದೆ ವೀರ ಮದಕರಿ ಚಿತ್ರಕ್ಕಾಗಿ ಸುದೀಪ್ ಅಭಿಮಾನಿಗಳು ಮಾಡಿದ್ದು ದೊಡ್ಡದು ಅಂತ ಅನ್ನಿಸಲೇ ಇಲ್ಲ..!!