Monday 29 July 2013

"ಮರಿಯಾನ್" ಸಾವನ್ನು ಗೆದ್ದವನೊಬ್ಬನ ಕಥೆ..

ಒಂದು ಸಿನಿಮಾ ನಮಗ್ಯಾಕೆ ಇಷ್ಟ ಆಗತ್ತೆ ಅಂತ ಪೂರ್ತಿಯಾಗಿ ಹೇಳಲಿಕ್ಕೆ ಸಾಧ್ಯವೇ..?? ಸಾಧ್ಯ ಆದರೂ ಆಗ್ಬೋದೇನೋ.. ಆದ್ರೆ ಹಾಗೆ ಒಂದು ಸಿನಿಮಾವನ್ನ ಅಚ್ಚುಕಟ್ಟಾಗಿ ಯಾವ ಅಳುಕಿಲ್ಲದೆ.. ಯಾವ ಕೊಂಕಿಲ್ಲದೆ ವಿಮರ್ಷಣೆ ಮಾಡೋದು ಕೂಡಾ ಒಂದು ಕಲೆಯೇ. ಸಿನಿಮಾ ಮೇಲಿನ ಅಗಾಧವಾದ, ಅನನ್ಯವಾದ, ಅದ್ಭುತವಾದ ಪ್ರೀತಿಯೊಂದು ಆ ಕಲೆಯನ್ನ ಸಿದ್ಧಿಸಿ ಕೊಡಬಹುದು. ಒಂದು ಸಿನಿಮಾ ನಮಗಿಷ್ಟ ಆಗೋದು ಕೂಡ ಹಲವೊಂದು ಕಾರಣಗಳಿಂದಲೇ.. ನಟಿಸಿದ ನಟರ ಮೇಲಿನ ಅಭಿಮಾನದಿಂದಲೋ.. ಕಥೆಯ ಬಲದಿಂದಲೋ.. ಸುಮಧುರ ಸಂಗೀತದಿಂದಲೋ.. ಕಣ್ಮನ ಸೆಳೆಯುವ ದೃಶ್ಯಾವಳಿಗಳಿಂದಲೋ.. ಬಳಸಿದ ತಂತ್ರಜ್ಞಾನದಿಂದಲೋ.. ನಿರ್ದೇಶಕನ ವರ್ಚಸ್ಸಿನಿಂದಲೋ.. ಒಟ್ಟಾರೆ ಯಾವುದೋ ಒಂದು ಕಾರಣಕ್ಕೆ ಒಂದು ಸಿನಿಮಾ ನಮ್ಮನ್ನ ಸೆಳೀತಾ ಇರತ್ತೆ. ಬಹುಶಃ  ನಿರೀಕ್ಷೆ ಇಲ್ಲದೆ ಅದ್ಯಾವ ವ್ಯಕ್ತಿಯೂ ಕೂಡಾ ಒಂದು ಸಿನಿಮಾವನ್ನ ನೋಡಲಾರ. ಸಿನಿಮಾದಿಂದ ಒಂದು ನೀತಿ.. ಬದುಕುವೆಡೆಗಿನ ಒಂದು ಛಲ.. ಜೀವನ ಪ್ರೀತಿ.. ಕೆಲವೊಂದುಗಳ ಕಲಿಕೆ.. ಇದ್ಯಾವುದೂ ಇಲ್ಲದೆ ಹೋದರು ಕೂಡಾ, ಕೇವಲ ಒಂದಿಷ್ಟು ಹೊತ್ತಿನ ಮನರಂಜನೆಯ ದೃಷ್ಟಿಯಿಂದಾದರೂ ಒಂದು ಸಿನಿಮಾವನ್ನ ಹಾಗೆ ಇಷ್ಟ ಪಟ್ಟು ನೋಡ್ತೇವೆ. 

ತಮಿಳಿನ ಬಹುಪಾಲು ಚಿತ್ರಗಳು ಹೀರೋಯಿಸಂ ಅನ್ನ ಧಾರಾಳವಾಗಿ, ಬಹು ದುಬಾರಿಯಾಗಿ ತೋರಿಸುವಂತಹ ಸಿನಿಮಾಗಳೇ. ಕಿವಿ ಹರಿದು ಹೋಗುವ ಅಬ್ಬರತೆ.. ಎದೆ ನಡುಗುವ ಹಾಗೆ ಸಾಹಸ.. ಚಪ್ಪಾಳೆ ಗಿಟ್ಟಿಸಿಕೊಳ್ಳುವ ಪಂಚ್ ಡೈಲಾಗ್ ಗಳಿಂದಲೇ ಹೀರೋಗೊಂದು ವಿಚಿತ್ರ ಮ್ಯಾನರಿಸಂ ಮತ್ತು ಅವನೆಂದರೆ ಅವನ ಕುರಿತಾಗಿ ಪ್ರೇಕ್ಷಕರಲ್ಲಿ ಒಂದು ಖಾಯಂ ಭ್ರಮಾಲೋಕವನ್ನೇ ಸೃಷ್ಟಿಸಿ ಬಿಡುವ ಪರಂಪರೆ ಬಹಳ ಹಿಂದಿನಿಂದಲೂ ಇದೆ. ಇಲ್ಲಿನೊಬ್ಬ ನಟನ ಚಿತ್ರವೆಂದರೆ ಅದು ಹೀಗೆ ಇರುತ್ತದೆ ಅನ್ನುವುದನ್ನ ಯಾರು ಬೇಕಾದರೂ ಆ ಸಿನಿಮಾದ ಹತ್ತಿರ ಹತ್ತಿರಕ್ಕೆ ಊಹಿಸ ಬಹುದಾದಂತ ಟ್ರೆಂಡ್ ಇಲ್ಲಿನ ಒಬ್ಬೊಬ್ಬ ನಟನದ್ದು. ಇದು ತಮಿಳಿನಲ್ಲಿ ಮಾತ್ರವಲ್ಲ ಬಹುಪಾಲು ಎಲ್ಲಾ ಭಾಷೆಯ ಚಿತ್ರಗಳಲ್ಲೂ ಈ ಸಂಸ್ಕೃತಿ ಕಾಣ ಸಿಗಬಹುದು. ಆದರೆ ತಮಿಳಿನಲ್ಲಿ ಇಂಥಾ ಹೀರೋ ಸಿನಿಮಾವೆಂದರೆ ಹೀಗೆಯೇ.. ಇಂಥಾ ನಿರ್ದೇಶಕನ ಸಿನಿಮಾವೆಂದರೆ ಹೀಗೆಯೇ ಅಂತ ಸಾಧಾರಣ ಅಭಿಮಾನಿ ಕೂಡಾ ಸರಾಸರಿಯಾಗಿ  ಸರಿಯಾಗಿ ನಿರ್ಧರಿಸಬಲ್ಲ. ಅಂಥದ್ದೊಂದು ಟ್ರೆಂಡ್ ಇಲ್ಲಿನ ಬಹುಪಾಲು ಖ್ಯಾತ ನಟ ಮತ್ತು ನಿರ್ದೇಶಕರದ್ದು. ತಮ್ಮ ಚೌಕಟ್ಟನ್ನ ಮೀರಿದ ಪ್ರಯೋಗಾತ್ಮಕ ಚಿತ್ರಗಳನ್ನ ಅಭಿಮಾನಿಗಳೂ ಕೂಡಾ ಅಪೇಕ್ಷಿಸುವುದಾದರೆ ಅದು ಒಂದು ಹೊಸಬರ ಚಿತ್ರವಾಗಿರಬೇಕಷ್ಟೇ. 

ತಮಿಳಿನಲ್ಲಿ ದನುಶ್ ಕೂಡಾ ಹಾಗೊಬ್ಬ ಟ್ರೆಂಡ್ ನಟ. ಅವನ ಚಿತ್ರಗಳೆಂದರೆ ಬೇರೆ ನಟರಿಗಿಂತ ಯಾವಾಗಲೂ ಭಿನ್ನವೇ. ನಟನೆಗೆ ಸವಾಲು ಅನ್ನಿಸುವಂಥ ಪಾತ್ರಗಳನ್ನೇ.. ವಿಭಿನ್ನ ರೀತಿಯ ಕತೆಗಳನ್ನೇ ಆಯ್ಕೆ ಮಾಡಿಕೊಳ್ಳುವ ಮತ್ತು ಅಂತ ಸಿನಿಮಾಗಳಿಂದಲೇ ಜನ ಜನಿತನಾಗಿರೋ ನಟ ದನುಶ್. ತಮಿಳು ಚಿತ್ರರಂಗದಲ್ಲಿ ಚಾಲ್ತಿಯಲ್ಲಿರಲು ಸೂಪರ್ ಸ್ಟಾರ್ ರಜನಿಕಾಂತ್ ರ ಅಳಿಯ ಅನ್ನುವ ಅದ್ಯಾವ influence ಕೂಡಾ ಇಲ್ಲದೆ ತಾನಾಗೇ ಸ್ವಂತ ಪ್ರತಿಭೆ ಇಂದ ಬೇರೂರಿ ನಿಂತ ಅಪ್ಪಟ ಪ್ರತಿಭೆ ದನುಶ್. ತನ್ನ ಸಿನಿಮಾಗಳ ಮೂಲಕ ತನ್ನದೇ ಆದ ಒಂದು ಟ್ರೆಂಡ್ ಮತ್ತು ಚಿತ್ರರಂಗದ ಅಷ್ಟೊಂದು ಜನ ಪ್ರಖ್ಯಾತರ ನಡುವೆಯೂ ತನ್ನದೇ ಆದ ಒಂದು ಸಶಕ್ತ ಅಭಿಮಾನಿಗಳ ಬಳಗವನ್ನ ಸಂಪಾದಿಸಿಕೊಂಡ ಕೀರ್ತಿ ಇವನದ್ದು. ಜೀನ್ಸ್ ಪ್ಯಾಂಟ್, ಟೀ ಶರ್ಟ್ ತೊಟ್ಟರೆ ನಗರದ ಯಾವ handsome ಹುಡುಗನಿಗೂ ಕಮ್ಮಿ ಇಲ್ಲದ ವರ್ಚಸ್ಸು ಬರಿಸಿಕೊಳ್ಳೋ ದನುಶ್.. ಪಂಚೆ ಬನಿಯನ್ ತೊಟ್ಟರೆ ನಮ್ಮದೇ ಹಳ್ಳಿಯ, ನಮ್ಮದೇ ಪಕ್ಕದ ಮನೆಯ, ನಮ್ಮಗಳ ಜೊತೆಯೇ ಮಣ್ಣು ಹೊರುವ ಹುಡುಗನ ಹಾಗೆ ಸ್ವಾಭಾವಿಕವಾಗಿ ಕಾಣಿಸಿಕೊಳ್ಳುವ ಮತ್ತೊಂದು ವರ್ಚಸ್ಸು ಅವನದ್ದು. 

ಮೊದ ಮೊದಲು ತೀರಾ ಸೈಕಿಕ್ ಅನ್ನಿಸಿಕೊಳ್ಳುವಂತೆ ಭಾಸವಾಗ್ತಿದ್ದ ಸಿನಿಮಾಗಳನ್ನೇ ಮಾಡುತ್ತಿದ್ದ ದನುಶ್ ನಟನೆಯಲ್ಲಿ ಅದ್ಯಾವಾಗ ಪಳಗಿದ ಅನ್ನುವುದನ್ನ ಊಹಿಸುವ ಮೊದಲೇ ಒಬ್ಬ ಅದ್ಭುತ ನಟನಾಗಿ ನಿಂತ ಪರಿ ಆಶ್ಚರ್ಯ ಮೂಡಿಸುತ್ತದೆ. ಅವನ ಬಹುಪಾಲು ಎಲ್ಲಾ ಸಿನಿಮಾವನ್ನು ನೋಡಿರುವ ನಾನು ಸ್ವಲ್ಪ ಮಟ್ಟಿಗೆ ಅವನ ಅಭಿನಯವನ್ನ ಇಷ್ಟ ಪಡುತ್ತಿದ್ದುದು ಕೂಡಾ ಹೌದು. ಆಡುಗಲಾಂ ಅನ್ನುವ ಚಿತ್ರದಲ್ಲಿನ ಒರಟು ಹಳ್ಳಿ ಹೈದನೊಬ್ಬನ ಪಾತ್ರವನ್ನ ಜೀವ ಕಟ್ಟಿ ಹಾಗೆ ಮೈದುಂಬಿ ನಟಿಸಿದ್ದರಿಂದಲೇ ಅವನಿಗೆ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದದ್ದು. ತೀರಾ ಅವನ ಇತ್ತೀಚಿನ ಚಿತ್ರಗಳಾದ ಮಯಕ್ಕಂ ಎನ್ನ.. ತ್ರೀ.. ಮರಿಯಾನ್ ಚಿತ್ರಗಳಲ್ಲಿ ಅವನ ಅದ್ಭುತ ನಟನೆ ದಾರ್ಷ್ಟ್ಯಕ್ಕೆ ದೊರಕುತ್ತದೆ.

ತಮಿಳು ಗೆಳೆಯನೊಬ್ಬನ ಸಣ್ಣ ಮೆಚ್ಚುಗೆಯ ವಿಮರ್ಶೆ ಇಂದ ನಾನು ಮರಿಯಾನ್ ಚಿತ್ರವನ್ನ ನೋಡಲು ಹೋಗಿದ್ದು. ಆ ಚಿತ್ರದ ಪ್ರಮುಖ ಆಕರ್ಷಣೆಯೇ ದನುಶ್ ಮತ್ತು ಪಾರ್ವತಿಯವರ ನಟನೆ. ಎ ಆರ್ ರೆಹಮಾನ್ ರ ಅದ್ಭುತ ಸಂಗೀತ ಕೂಡಾ ಚಿತ್ರದ ಪ್ರಮುಖ ಅಂಶಗಳಲ್ಲೊಂದು. ಅಷ್ಟು ಸುಲಭಕ್ಕೆ ಎಲ್ಲಾ ವರ್ಗದ ವೀಕ್ಷಕರಿಗೂ ಇಷ್ಟವಾಗಬಲ್ಲ ಚಿತ್ರವಲ್ಲ ಅದು. ಆದರೆ ನೋಡಿದ ಪ್ರತಿಯೊಬ್ಬನ ಮನಸಲ್ಲೂ ಒಂದಷ್ಟು ಕಾಲ ಕಾಡುವ ಚಿತ್ರವಾಗಿ ಉಳಿದುಕೊಳ್ಳುವುದು ಅದರ ಹಿರಿಮೆಯಲ್ಲೊಂದು. ಚಿತ್ರದ ನಿಧಾನ ಗತಿ ಚಿತ್ರದ ಹಿನ್ನಡೆಯಲ್ಲಿ ಪ್ರಮುಖ ಅಂಶ. ಕಥೆಗೆ ಆ ನಿಧಾನ ಗತಿ ಅವಶ್ಯಕವಾದರೂ ಅಷ್ಟೊಂದು ತಾಳ್ಮೆಯನ್ನ ಎಲ್ಲಾ ವರ್ಗದ ಪ್ರೇಕ್ಷಕರಿಂದಲೂ ನಿರೀಕ್ಷೆ ಮಾಡುವುದು ತಪ್ಪು. ಈ ಚಿತ್ರ ಹಾಗೆ ಬಹುಪಾಲು ಜನರಿಗೆ ಇಷ್ಟವಾಗದೇ ಉಳಿಯೋದು ಕೂಡ ಅದೇ ಕಾರಣಕ್ಕೆ. ಅದರ ಹೊರತಾಗಿ ಒಂದೊಳ್ಳೆ ಸಿನಿಮಾ ಮರಿಯಾನ್. 

ಮರಿಯಾನ್ ಅಂದರೆ ಸಾವಿಲ್ಲದವನು ಅಂತ ಅರ್ಥ. ಕಡೆಗೆ ಈ ಚಿತ್ರದ ಅಂತ್ಯದ ಮಟ್ಟಿಗೆ ಅದು ತಾತ್ಕಾಲಿಕ ನಿಜವೂ ಅನ್ನಿಸುತ್ತದೆ. ನೀರೋಡಿ ಅನ್ನುವ ಕಡಲ ತಡಿಯಲ್ಲಿನ ಊರು. ಆ ಊರಿನವರಿಗೆಲ್ಲ ಮೀನುಗಾರಿಕೆಯೇ ಕಸುಬು. ಅದೇ ಊರಲ್ಲಿ ಕಡಲ ತಡಿಯಲ್ಲಿ ಹುಟ್ಟಿ ಬೆಳೆದವ ಈ ಮರಿಯಾನ್. ಕಡಲಿನೊಳಗೆ ಯಾವ ಬಲೆಯೋ ಇಲ್ಲದೆ.. ಗಾಳವಿಲ್ಲದೆ ಬರಿ ಭರ್ಜಿ ಎಸೆದು ದೊಡ್ಡ ದೊಡ್ಡ ಮೀನು ಹಿಡಿಯುವಷ್ಟು ನಿಪುಣ. ಅವನಿಗೆ ಮನೆಯಲ್ಲಿ ಒಬ್ಬ ತಾಯಿಯಾದರೆ, ಕಡಲು ಮತ್ತೊಬ್ಬ ತಾಯಿ. ಅದೇ ಊರಿನಲ್ಲಿ ಪನಿ ಮಲರ್ ಅನ್ನುವ ಹುಡುಗಿ. ತಾಯಿ ಇಲ್ಲದೆ ಬೆಳೆದ ಬಜಾರಿ ಹುಡುಗಿ. ಅವಳು ಮಾಡುವ ಮೀನಿನ ಸಾರು ಇಡೀ ನೀರೋಡಿಯ ಬಾಯಲ್ಲಿ ನೀರು ತರಿಸುವಂಥ ಮಹಿಮೆ ಉಳ್ಳದ್ದು ಅವಳ ಕೈಗುಣ. ಅಂಥಾ ಹುಡುಗಿಗೆ ಈ ಮರಿಯನ್ ಅಂದರೆ ಪ್ರಾಣ. ಮೀನು ಹಿಡಿದು ಸಿಗುತ್ತಿದ್ದ ಅಲ್ಪ ಸ್ವಲ್ಪ ಕಾಸಿನಲ್ಲೇ ಆರಾಮು ಅಂದ್ಕೊಂಡು ಜೀವನ ಸಾಗಿಸುತ್ತಿದ್ದ ಮರಿಯಾನ್ ಗೆ ಆಫ್ರಿಕಾದ ಸೂಡಾನ್ ನಲ್ಲಿ ಕಂಪೆನಿಯೊಂದನ್ನ ಕಟ್ಟುವ ಕಡೆ ಕಾಂಟ್ರಾಕ್ಟ್ ಕೆಲಸದ ಕೂಲಿಯಾಳಾಗಿ ಹೋಗುವ ಕುರಿತಾಗಿ ಕರೆ ಬರುತ್ತದೆ. ಹುಟ್ಟೂರ ಬಿಡಲು ಮರಿಯಾನ್  ಅವನ ತಾಯಿ ಅದೆಷ್ಟು ಪುಸಲಾಯಿಸಿದರು ಆ ಕೆಲಸಕ್ಕೆ ಹೋಗದೆ ಹುಟ್ಟೂರಿನಲ್ಲೇ ಸಂತೋಷವಾಗಿರುವುದಾಗಿ ತಿಳಿಸುತ್ತಾನೆ. 

ಆ ಊರಿನಲ್ಲಿ ಸ್ವಲ್ಪ ಹಣವುಳ್ಳ.. ಸಣ್ಣ ಅಧಿಕಾರದ ಬಲವುಳ್ಳ ವ್ಯಕ್ತಿ ತೀಕುರುಸ್ಸಿ. ಅವನಿಗೆ ಪನಿ ಮಲರ್ ಮೇಲೆ ಆಸೆ. ಬೇರೆ  ಹೆಣ್ಣಾದರೂ ಸರಿ ಅನುಭವಿಸಿ ಬಿಟ್ಟು ಬಿಡುವ ಇವನಿಗೆ ಪನಿ ಮಲರ್ ಳನ್ನು ಮಾತ್ರ ಹೆಂಡತಿಯಾಗಿಸಿ ಕೊಳ್ಳುವ ಬಯಕೆ. ಅದರ ಕುರಿತಾಗಿ ಅವಳ ಜೊತೆ ಮಾತು ಕತೆಯಾಡಿದರೂ ಅವಳು ಒಪ್ಪದೇ ತಾನು ಇರುವುದಾದರೆ ಅದು ಮರಿಯನ್ ಗೆ ಮಾತ್ರವೇ ಅಂದು ಬಿಡುತ್ತಾಳೆ. ಮೊದಮೊದಲು ಪನಿಮಲರ್ ನ ಅದ್ಯಾವ ಮೋಹದ ಬಾಣಗಳಿಗೂ ಮರುಳಾಗದ ಮರಿಯಾನ್ ಗೂ ಕಾಲಕ್ರಮೇಣ ಪನಿಮಲರ್ ಮೇಲೆ ಪ್ರೀತಿ ಉಂಟಾಗುತ್ತದೆ. ಆ ಪ್ರೀತಿ ಮದುವೆಯ ಮಾತುಕತೆಗೆ ಬರುವ ತನಕವೂ ಅವರ ಪ್ರೇಮಕ್ಕೆ ಯಾವ ತೊಡಕೂ ಇರುವುದಿಲ್ಲ. ತೀಕುರಿಸ್ಸಿ ಯ ಬಳಿ ಪನಿಮಲರ್ ಳ ತಂದೆ ಎರಡು ಲಕ್ಷ ಸಾಲ ಪಡೆದಿರುತ್ತಾನೆ ಅವನ ಹೆಂಡತಿಯ ಚಿಕಿತ್ಸೆಗಾಗಿ. ಆದರೆ ಅಷ್ಟು ಕರ್ಚು ಮಾಡಿದರೂ ಅವಳು ಬದುಕುಳಿಯುವುದಿಲ್ಲ. ಮೀನುಗಾರಿಕೆ & ಸಣ್ಣ ಮನೆಯೊಂದನ್ನ ಹೊರತು ಅವರಿಗೆ ಬೇರೆ ಆಸ್ತಿಯೂ ಇಲ್ಲ. ತೀಕುರಿಸ್ಸಿ ತಕ್ಷಣಕ್ಕೆ ಆ ಹಣವನ್ನ ಹಿಂದಿರಿಗಿಸುವಂತೆ ಅಥವಾ ತನ್ನ ಮಗಳನ್ನ ಮದುವೆ ಮಾಡಿಕೊಡುವಂತೆ ಷರತ್ತು ಹಾಕುತ್ತಾನೆ. ಕೊಟ್ಟ ಹಣ ವಾಪಾಸು ಕೊಡಲಾಗದೆ ಇರಲಾಗುವುದಿಲ್ಲ.. ಹಾಗಂತ ಕಡು ಬಡವರಾದ ಅವರು ತಕ್ಷಣಕ್ಕೆ ಕೊಡುವುದಾದರೂ ಹೇಗೆ..?? ಹಣ ಕೊಡಲಾಗುವುದಿಲ್ಲ ಅಂತ ಮಗಳನ್ನ ಆ ಕಟುಕನಿಗೆ ಕಟ್ಟಿ ಕೊಡುವ ಹಾಗೆಯೂ ಇಲ್ಲ. ಇಂಥಾ ಸಂಧಿಗ್ಧತೆಯಲ್ಲಿ ಇರುವಾಗಲೇ ಮರಿಯಾನ್ ಆಫ್ರಿಕಾಗೆ ಹೋಗುವ ಸಂಕಲ್ಪ ಮಾಡಿ ಆ ಕಂಪನಿಯಿಂದ ಎರಡು ಲಕ್ಷ ರುಪಾಯಿ ಪಡೆದು ಅವರ ಸಾಲ ತೀರಿಸಿ ಆಫ್ರಿಕಾಗೆ ಹೊರಡುತ್ತಾನೆ. ಆಫ್ರಿಕಾಗೆ ಬಂದು ಕಷ್ಟಪಟ್ಟು ದುಡಿಯುವ ಮರಿಯಾನ್ ಕಂಪನಿಯ ನಿಯಮಗಳಂತೆ ಎರಡು ವರ್ಷದ ತನಕ ಮನೆಯ ಕಡೆ ಬರುವಂತಿರಲಿಲ್ಲ. ಈಗವನ ಎರಡು ವರ್ಷಗಳ ಅವಧಿ ಮುಗಿದು ಊರು ಸೇರುವ ತನ್ನ ಜೀವದ ಪನಿಮಲರ್ ಳನ್ನು ಸೇರುವ ತವಕದಿಂದ ಆಫ್ರಿಕಾದಲ್ಲಿ ಕೊನೆಯ ಮೂರ್ನಾಲ್ಕು ದಿನವನ್ನ ಕಳೆಯುತ್ತಿರುತ್ತಾನೆ.


ಇಲ್ಲಿಯ ತನಕ ಎಲ್ಲವೂ ಮಾಮೂಲಿ ಕತೆಯಂತೆಯೇ ಮುಂದಿನದನ್ನ ನಾವೆಲ್ಲರೂ ಊಹಿಸಬಹುದಾದಷ್ಟು ಸುಲಭಕ್ಕೆ ಚಿತ್ರ ಸಾಗುತ್ತದೆ. ಮಧ್ಯಂತರದಲ್ಲಿ ಚಿತ್ರಕ್ಕೊಂದು ಅನಿರೀಕ್ಷಿತ ತಿರುವು. ಊರಿಗೆ ವಾಪಾಸು ಮರಳಲು ಇನ್ನೆರಡು ದಿನಗಳಿರುವಂತೆ ಸಂತೋಷದಿಂದಲೇ ಮರಿಯಾನ್ ಅವನ ಸಹಚರರ ಜೊತೆ ಕೆಲಸಕ್ಕೆ ಹೋಗುತ್ತಿರುತ್ತಾನೆ. ಆಗ ಅಲ್ಲಿಗೆ ಬರುವ ಆಫ್ರಿಕಾದ ಡಕಾಯಿತ ಗುಂಪೊಂದು ಇವರನ್ನ ಬಂಧಿಸುತ್ತಾರೆ. ಅವರ ಬ್ಯಾಗುಗಳನ್ನೆಲ್ಲಾ ಹುಡುಕುತ್ತಾರೆ.. ದುಡ್ಡಿಗಾಗಿ ಬೆದರಿಸುತ್ತಾರೆ. ದಿನಗೂಲಿಯ ಆಳುಗಳು.. ಇವರ ಬಳಿ ಆ ಕ್ಷಣಕ್ಕೆ ಎಲ್ಲಿಂದ ಬರಬೇಕು ದುಡ್ಡು. ಆಫ್ರಿಕಾದ ಗುಂಪು ಇವರನ್ನ ಅಪಹರಿಸುತ್ತಾರೆ. ಇವರನ್ನ ಅಪಹರಿಸಿ ಇವರ ಕಂಪನಿಯವರ ಬಳಿ ಹಣ ಕೇಳುವ ಹುನ್ನಾರ ಇವರದ್ದು. ಮರಿಯಾನ್ ಮತ್ತವನ ಇಬ್ಬರು ಸ್ನೇಹಿತರನ್ನ ಬಂಧಿಸಿ ಆಫ್ರಿಕಾದ ಘೋರ ಬರಡು ಜಾಗಗಳಲ್ಲಿನ ಗುಹೆಯೊಂದರಲ್ಲಿ ಇವರನ್ನ ಕಟ್ಟಿ ಹಾಕುತ್ತಾರೆ. ಬಂಧಿಸಿ ಎರಡು ಮೂರು ದಿನವಾದರೂ ತಿನ್ನಲೂ ಏನೂ ಕೊಡುವುದಿಲ್ಲ. ಬಡ ದೇಶವಾದ ಇವರ ಹಣವನ್ನ ಇವರೂ ಮತ್ತು ಇವರ ಕಂಪೆನಿಯವರು ಕೊಳ್ಳೆ ಹೊಡೆದುಕೊಂಡು ಹೋಗುತ್ತಿರುವುದಾಗಿಯೂ ಮತ್ತು ಅದು ಅವರಿಗೆ ಸೇರಬೇಕಾಗಿರುವುದಾಗಿಯೂ ಅವರ ನಿರ್ಣಯ. ಅದಕ್ಕಾಗಿ ಅವರುಗಳನ್ನ ಬಹಳ ಕ್ರೂರವಾಗಿ ಹಿಂಸಿಸುತ್ತಾರೆ.  ಕಂಗೆಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಮರಿಯಾನ್ ಸಹಚರನೊಬ್ಬನನ್ನ ಅವರ ಕಣ್ಮುಂದೆಯೇ ಬರ್ಬರವಾಗಿ ಶೂಟ್ ಮಾಡಿ ಸಾಯಿಸುತ್ತಾರೆ. ಕಂಪನಿಗೆ ಫೋನ್ ಮಾಡುವಂತೆ.. ಹಣ ತರಲು ಹೇಳುವಂತೆ ಇವರನ್ನ ಹೊಡೆದು ಹಿಂಸೆ ಕೊಡುತ್ತಾರೆ. ನಾವೂ ಬಡವರೇ ಇಲ್ಲಿ ಕೂಲಿಗಾಗಿ ದೇಶ ಬಿಟ್ಟು ದೇಶಕ್ಕೆ ಬಂದಿದ್ದೇವೆ ಅಂತ ಇಂಗ್ಲಿಷ್ ಬಾರದ ತಮಿಳಿನಲ್ಲಿ ಕಣ್ಣೀರಿಟ್ಟು ಅದೆಷ್ಟು ಗೋಗರೆದರೂ ಅವರ ಮನ ಕರಗುವುದಿಲ್ಲ. ಇಂಥದ್ದೇ ಒಂದು ರಾತ್ರಿ ಆಫ್ರಿಕನ್ ಕಳ್ಳರ ಗುಂಪು ಲಲನೆಯರ ಜೊತೆ ಮಸ್ತಿಯಲ್ಲಿ ಮೈಮರೆತಿರುವಾಗ ಅವರಿಗೆ ಸಾಮಾನುಗಳನ್ನು ಸರಬರಾಜು ಮಾಡಲು ಬಂದ ವಾಹನವೊಂದರಲ್ಲಿ ಉಪಾಯವಾಗಿ ಮರಿಯಾನ್ ಮತ್ತು ಅವನ ಸ್ನೇಹಿತ ಸಾಮಿ ತಪ್ಪಿಸಿಕೊಳ್ಳುತ್ತಾರೆ. ವಾಹನದ ಹಿಂಭಾಗದ ಎರಡು ಮೂರಿಂಚು ಜಾಗದಲ್ಲಿ ತುಂಬಾ ಹೊತ್ತು ಕೂರಲಾಗದೆ ಅದೆಲ್ಲೋ ಬಿದ್ದು ಹೋದ ಸಾಮಿಯ ಕಥೆ ಮರಿಯಾನ್ ಗೆ ಗೊತ್ತಿರುವುದಿಲ್ಲ. ಹೀಗೆ ಒಂದು ಕಡೆ ಆ ವಾಹನ ನಿಲ್ಲುತ್ತದೆ. ವಾಹನದಿಂದ ಇಳಿದು ಮರಿಯಾನ್ ಅಲ್ಲಿಂದ ತಪ್ಪಿಸಿಕೊಂಡು ತನ್ನ ಸ್ನೇಹಿತ ಸಾಮಿಗಾಗಿ ಹುಡುಕಿ ಅಲೆಯುತ್ತಾನೆ. ಅಷ್ಟರಲ್ಲೇ ಕಳ್ಳರ ಗುಂಪಿಗೆ ಇವರು ತಪ್ಪಿಸಿಕೊಂಡ ವಿಚಾರ ಗೊತ್ತಾಗಿ ಇವರನ್ನ ಹುಡುಕುವ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ನಡುವೆ ಸಾಮಿ ಅವರ ಕೈಗೆ ಸಿಕ್ಕಿಬಿಡುತ್ತಾನೆ. ಸಿಕ್ಕಲ್ಲೇ ಅವನನ್ನ ಶೂಟ್ ಮಾಡಿ ಕೊಲ್ಲುವ ಅವರು ಮರಿಯಾನ್ ಗಾಗಿ ಅನವರತ ಹುಡುಕುತ್ತಾರೆ. 

ಕೇವಲ ಬದುಕುವಾಸೆ ಇರುವ ಯಾವ ಮನುಷ್ಯನಾದರೂ ಆಫ್ರಿಕಾ ದಂತ ಸುಡುಗಾಡಿನ ಜಾಗದಲ್ಲಿ ಇಷ್ಟೆಲ್ಲಾ ಹೋರಾಟ ನಡೆಸಿ ಬದುಕುಳಿಯುವ ವ್ಯರ್ಥ ಪ್ರಯತ್ನ ನಡೆಸುವ ಬದಲು ಆ ಕಳ್ಳರ ಕೈಯಲ್ಲಿ ಸಿಕ್ಕು ನರಳಾಡುವುದಕ್ಕಿಂಥ ಸಾಯುವುದು ವಾಸಿ ಅಂತ ಸತ್ತೇ ಬಿಡುತ್ತಿದ್ದರೇನೋ. ಆದರೆ ಗೊತ್ತು ಗುರಿ ಇಲ್ಲದ ಊರು.. ದಿಕ್ಕು ದೆಸೆ ಅರಿಯದ ಸುಡುಗಾಡಿನಲ್ಲಿ ಇವನ ಬದುಕುವಾಸೆಯನ್ನ ಸಾವಿರ ಕಾಲಕ್ಕೂ ಜೀವಂತವಾಗಿರಿಸಿ ಕೊಳ್ಳುವಂತೆ ಚೈತನ್ಯ ತುಂಬುವುದು ಪನಿಮಲರ್ ಳ ಪ್ರೀತಿ. ಆ ಪ್ರೀತಿಯೆಡೆಗಿನ ಸೆಳೆತವೊಂದೇ ಅವನನ್ನು ಅಲ್ಲಿಂದ ತಪ್ಪಿಸಿಕೊಳ್ಳುವಂತೆ ಪ್ರೆರೆಪಿಸುತ್ತಿರುತ್ತದೆ. ಕಡೆಗೂ ಸುಡುಗಾಡು, ಮರುಭೂಮಿ ಯಾವುದ್ಯಾವುದೋ ಕಷ್ಟಗಳನ್ನೆಲ್ಲ ತಾಳಿಕೊಂಡು ಜೀವಂತ ಶವವಾಗಿ ಮರಿಯಾನ್ ಆಫ್ರಿಕಾದ ಕಡಲ ತಡಿಯೊಂದರ ತಟದಲ್ಲಿ ಬಂದು ಬೀಳುತ್ತಾನೆ. ಕಡಲನ್ನ ಕಂಡೊಡನೆ ತನ್ನ ತಾಯಿಯನ್ನೇ ಕಂಡಷ್ಟು ಸಂತಸ ಅವನದ್ದು. ಆಗ ಅಲ್ಲಿಗೆ ಖಳ ನಾಯಕ ಬರುತ್ತಾನೆ.. ನಾಲ್ಕಾರು ದಿನದಿಂದ ಹನಿ ನೀರು ಕುಡಿಯದೆ ಕೃಶವಾಗಿರುವ ನಾಯಕನನ್ನ ಮನಬಂದಂತೆ ಹೊಡೆದು ದಂಡಿಸುತ್ತಾನೆ. ಅವನನ್ನು ಕೊಲ್ಲುವ ಸಲುವಾಗಿ ಮರಿಯಾನ್ ನನ್ನು ಕಡಲಿನೊಳಗೆಳೆದು ಕೊಂಡು ಹೋಗಿ ಮುಳುಗಿಸಿ ಕೊಲ್ಲುವ ಪ್ರಯತ್ನ ಮಾಡುತ್ತಾನೆ. ಕಡಲಿಗಿಳಿದರೆ ಕಡಲ ರಾಜ ತಾನು ಅನ್ನುವ ಮರಿಯಾನ್ ಖಳ ನಾಯಕನನ್ನು ಅದೇ ಕಡಲಲ್ಲಿ ಮುಳುಗಿಸಿ ಸಾಯಿಸಿ ನಿತ್ರಾಣವಾಗಿ ಕಡಲ ದಡದಲ್ಲಿ ಬಂದು ಬೀಳುತ್ತಾನೆ. ಆ ಸಮಯಕ್ಕೆ ಅದೇ ಮಾರ್ಗವಾಗಿ ಬಂದ ಆಫ್ರಿಕಾದ ಸಾಮಾನ್ಯ ಜನ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಥಿಯೇಟರ್ ನಲ್ಲಿ ನನ್ನ ಪಕ್ಕದಲ್ಲಿ ಕೂತಿದ್ದ ಕುಟುಂಬ ಒಂದರ ಒಂದೆರಡು ಜನ  ಆಗ ಮಾತಾಡಿಕೊಂಡ ಬಗೆ ಹೀಗಿತ್ತು " ಅಲ್ಲಾ ಆಫ್ರೀಕಾದಲ್ಲೂ ಹೀಗೆ ಒಳ್ಳೆಯವರು ಇದಾರಾ" ಆ ದೃಶ್ಯ ಮಾಡಿದ ಆ ಕ್ಷಣದ  ಪರಿಣಾಮ ಅದು..!! ಮರಿಯಾನ್ ಬದುಕುಳಿಯುತ್ತಾನೆ. ಅವನ ಕಂಪನಿಯವರು ಬಂದು ಅವನನ್ನು ಕರೆದುಕೊಂಡು ಹೋಗಿ ಅವನನ್ನ ತನ್ನ ಹುಟ್ಟೂರಿಗೆ ಕಳಿಸಿ ಕೊಡುತ್ತಾರೆ. ತಾಯ್ನಾಡಿಗೆ ಬಂದು ಕಾಲಿರಿಸಿದ ಒಡನೇ ಮರಿಯಾನ್.. ತನಗಾಗಿ, ತನ್ನ ಬರುವಿಕೆಯನ್ನೇ ಕಾದು ಕಾದು ನಿತ್ರಾಣವಾದ ಪನಿಮಲರ್ ಅನ್ನು ಕೂಡುವ ಹೊತ್ತಿಗೆ ಸಿನಿಮಾ ಮುಗಿಯುತ್ತದೆ. 

ಕಥೆ ಇದಿಷ್ಟೇ ಆದರೂ ಸಿನಿಮಾ ನಮ್ಮನ್ನು ತುಂಬಾ ಕಾಡುತ್ತದೆ. ದನುಶ್ ಅಭಿನಯದ ಕುರಿತಾಗಿ ಅಷ್ಟುದ್ದ ಪೀಟಿಕೆ ಕೊರೆದಿರುವ ನಾನು ಮತ್ತೆ ಅದರ ಕುರಿತಾಗಿ ಹೇಳುವ ಅವಶ್ಯಕತೆ ಇಲ್ಲ ಅಂದುಕೊಳ್ತೇನೆ. ನಾಯಕಿಯಾಗಿ.. ಅಪ್ಪು ಅಭಿನಯದ ಮಿಲನ ಚಿತ್ರದಲ್ಲಿನ ಮುದ್ದು ನಗೆಯ ಸ್ನಿಗ್ಧ ಸುಂದರಿಯಾಗಿ ಅಭಿನಯಿಸಿದ್ದ ಪಾರ್ವತಿ ಇಲ್ಲಿ ಕಪ್ಪು ಹುಡುಗಿಯಾಗಿ.. ಬಜಾರಿಯಾಗಿ.. ಮರಿಯಾನ್ ನನ್ನು ಅದ್ಭುತವಾಗಿ ಪ್ರೀತಿಸುವ ಹುಡುಗಿಯಾಗಿ ಅಮೋಘವಾಗಿ ನಟಿಸಿದ್ದಾರೆ. ಅವರ ನಿಚ್ಚಳ ಕಣ್ಣಿನಿಂದ ಚರ್ಚಿನಲ್ಲಿ ಎವೆಯಿಕ್ಕದೆ ನಾಯಕನನ್ನು ನೋಡುವ ಪರಿ ಕೂತು ಸಿನಿಮಾವನ್ನ ನೋಡುತ್ತಿರೋ ನಮ್ಮನ್ನೂ ಕಾಡುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ಅಮೋಘ ಅನ್ನಿಸಿಕೊಳ್ಳುವಂತೆ ನಟಿಸಿದ್ದಾರೆ. ಕೆಲವೊಂದು ಪ್ರಣಯ ದೃಶ್ಯಗಳಲ್ಲಿ ಪಾರ್ವತೀ ಹೀಗೂ ನಟಿಸಬಲ್ಲರಾ ಅಂದುಕೊಳ್ಳುವಷ್ಟು ಗಾಢ ತನ್ಮಯತೆಯಿಂದ ಅಭಿನಯಿಸಿದ್ದಾರೆ. ಅವರಷ್ಟೇ ಸೌಂದರ್ಯ ಒಂದೇ ಅಲ್ಲ ಅವರ ಅಭಿನಯವೂ ನಮ್ಮನ್ನ ಆವರಿಸಿಕೊಳ್ಳುತ್ತದೆ. ಮರಿಯಾನ್ ನ ಮೊದಲಾರ್ಧದ ಭಾಗದ ಸ್ನೇಹಿತರಾಗಿ ಅಪ್ಪುಕುಟ್ಟಿ ಮತ್ತು ಇಮ್ಯಾನುಯೇಲ್ ಅಣ್ಣಾಚಿ ಅವರುಗಳು ಕಚಗುಳಿ ಇಡುತ್ತಾ ನಮ್ಮನ್ನ ಒಂದಷ್ಟು ನಗಿಸುತ್ತಾ ಉಲ್ಲಸಿತರಾಗಿಸುತ್ತಾರೆ. ಅವರಿಬ್ಬರ ನಟನೆಯಲ್ಲಿ ಕೋರೆ ಹೇಳುವ ಯಾವ ಅಂಶಗಳೂ ಇಲ್ಲ. ಇನ್ನು ಮರಿಯಾನ್ ಜೊತೆ ಆಫ್ರಿಕಾ ದಲ್ಲಿ ಸಿಕ್ಕಿ ಕೊಂಡ ಸ್ನೇಹಿತರಾಗಿ ಜಗನ್ & ಅಂಕುರ್ ವಿಕಲ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಅಪಹೃತರಾದ ಮೇಲೆ ಹಸಿವಿನಿಂದ ಕಂಗೆಟ್ಟು ಊಟ ಮಾಡುವಂತೆ ನಟಿಸುತ್ತಾ ತಮ್ಮ ಹಸಿವನ್ನ ಮರೆಯುವ ಪ್ರಯತ್ನ ಮಾಡುವ ಸನ್ನಿವೇಶದಲ್ಲಿ ಜಗನ್ ಅದ್ಭುತ ಅಭಿನಯದಿಂದ ಚಿರಕಾಲ ನೆನಪಿನಲ್ಲಿ ಆ ಪಾತ್ರ ಉಳಿದುಕೊಳ್ಳುವಂತೆ ಮಾಡುತ್ತಾರೆ. ಪನಿಮಲರ್ ಳ ತಂದೆಯ ಪಾತ್ರಧಾರಿಯಾಗಿ ಸಲೀಂ ಕುಮಾರ್ ಅವರದ್ದು ಪ್ರೌಢ ಅಭಿನಯ. ತೀಕುರಿಸ್ಸಿ ಯಾಗಿ ನಟಿಸಿರುವ ವಿನಾಯಕನ್ ಅವರದ್ದು ಕೂಡಾ ಅದ್ಭುತ ನಟನೆ. ಖಳ ನಟರಾಗಿ ಅಭಿನಯಿಸಿರುವ ಆಫ್ರಿಕಾದ ಹುಡುಗರದು ಕೂಡಾ ಅಭಿನಯದ ವಿಚಾರದಲ್ಲಿ.. ಅವರು ತೋರುವ ಅಹಿಂಸಾತ್ಮಕ ಸನ್ನಿವೇಶಗಳಲ್ಲಿ ಅವರ expression ಗಳ ವಿಚಾರದಲ್ಲಿ ಏ ಗ್ರೇಡ್ ಗಿಟ್ಟಿಸಿ ಕೊಳ್ಳುತ್ತಾರೆ.

ಈ ಸಿನಿಮಾದ ಮತ್ತೊಬ್ಬ ಹೀರೋ ಸಿನಿಮಾಟೋಗ್ರಾಫರ್ ಮಾರ್ಕ್ ಕೊನ್ನಿಂಕ್ಸ್.. ಸಾಗರದೊಳಗಣ ಸನ್ನಿವೇಶಗಳನ್ನ.. ಆಫ್ರಿಕಾದ ಬರಡು ನೆಲದ ಜೀವಂತಿಕೆಯನ್ನ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿ.. ಆಫ್ರಿಕಾ ನೆಲವನ್ನ ಅಷ್ಟು ಸುಲಭಕ್ಕೆ ಮರೆಯಲಾಗದ ಹಾಗೆ  ಅವರು ಸಫಲ. ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತ ಭರತ್ ಬಾಲ ಅವರು ಹೃದಯಕ್ಕೆ ಹತ್ತಿರವಾಗುತ್ತಾರೆ. ಕಥೆ ಎಲ್ಲೋ ಪೇಪರ್ ನಲ್ಲಿ ಓದಿದ ನೈಜ ಘಟನೆಯೊಂದರ ಎಳೆಯಾದರೂ ಅದನ್ನ ತಮಿಳಿನ ನೇಟಿವಿಟಿಗೆ ತರುವಲ್ಲಿ ಅವರ ಕೆಲಸಕ್ಕೆ ಒಂದು ಶಹಬ್ಬಾಸ್ ಹೇಳದೆ ಇರಲಾಗದು. ಸಂಭಾಷಣೆಯಲ್ಲಿ ಬದುಕಿಗೆ ಸ್ಫೂರ್ತಿ ತುಂಬುವಂಥ.. ಪ್ರೀತಿ ವಿಚಾರದಲ್ಲಿ ಮನಸ್ಸಿಗೆ ಹತ್ತಿರವಾಗುವಂಥ ಕೆಲವೊಂದು ವಿಚಾರಗಳನ್ನ ಬರೆದು ಕೊಟ್ಟಿರೋ ಜೋ ಡೀಕ್ರುಜ್ ಅವರು ಅಲ್ಲಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಸಂಗೀತದ ವಿಚಾರದಲ್ಲಿ ಎ ಆರ್ ರೆಹಮಾನರ ಬಗ್ಗೆ ಮಾತಾಡುವಂತಿಲ್ಲ. ಒಂದೆರಡು ಹಾಡುಗಳ ಭಾವ ಜೀವಕ್ಕೆ ಬಹಳ ಹತ್ತಿರವಾಗುತ್ತದೆ. ಚಿತ್ರದಲ್ಲಿನ ಹಲವು ವಿಶುಯೆಲ್ ಎಫೆಕ್ಟ್ ಗಳಿಂದ ಹಲವು ಕಡೆ ಚಿತ್ರದ ಶ್ರೀಮಂತಿಕೆ ಹೆಚ್ಚುತ್ತದೆ. ದನುಶ್ ಕೊನೆಯ ಹಾಡಿನಲ್ಲಿ ಖಳರಿಂದ ತಪ್ಪಿಸಿ ಕೊಳ್ಳುವಾಗ ಅವರನ್ನ ಸುತ್ತುವರೆಯುವ ಕಾಲ್ಪನಿಕ ಸಿಂಹಗಳು ಪರದೆಯಾಚೆಗಿನ ನಮ್ಮನ್ನೂ ಭಯಗೊಳಿಸುತ್ತವೆ. ಮನುಷ್ಯನೊಬ್ಬನ ಬದುಕುವೆಡೆಗಿನ ತುಡಿತ & ಒಂದಷ್ಟು ಪ್ರಮುಖ ಅಂಶಗಳಿಂದ ಈ ಚಿತ್ರ ಹಾಲಿವುಡ್ಡಿನ ಲೈಫ್ ಆಫ್ ಪೈ ಚಿತ್ರವನ್ನ ನೆನಪಿಗೆ ತರುತ್ತದೆ. 

ಈ ಸಿನಿಮಾದ ಬಗ್ಗೆ ಯಾಕೆ ಹೇಳಿಕೊಂಡೆ ಎಂದರೆ.. ಬೆಳಗ್ಗೆ ತುರ್ತು ಕೆಲಸದ ಮಧ್ಯೆಯೂ ಒಂದೆರಡು ನಿಮಿಷ ಫೇಸ್ಬುಕ್ ಕಡೆ ಬಂದಾಗ ನನಗೆ ಕಾಣಿಸಿದ್ದು ಶಂಕರ್ ದೇವಾಡಿಗ ಕೆಂಚನೂರರ ಈ ಸಾಲುಗಳು "ನಿನ್ನ ತಲುಪುವ ಆಸೆಯೊಂದೇ.. ನನ್ನ ಸದಾ ಚಲನೆಯಲ್ಲಿಡಬಲ್ಲ ಇಂಧನ" ಸಾಕ್ಷಾತ್ ಆ ಚಿತ್ರದ ನಾಯಕನ ಮನದ ಆಶಯವನ್ನೇ ಹೊತ್ತು ಹೆಳುವಂತಿದ್ದ ಈ ಸಾಲುಗಳು. ನಿನ್ನೆಯಷ್ಟೇ ಆ ಚಿತ್ರವನ್ನ ನೋಡಿ ಅದರ ಗುಂಗಿನಿಂದ ಹೊರ ಬರಲಾಗದ ನನ್ನನ್ನ ಇಷ್ಟು ಗೀಚುವಂತೆ ಪ್ರೇರೆಪಿಸಿದ್ದು ಈ ಸಾಲುಗಳಲ್ಲಿನ ಭಾವ. ಬಹಳ ಕಾಲ ನೆನಪಿನಲ್ಲುಳಿಯುವ ಚಿತ್ರ ಮರಿಯಾನ್. ಭಾಷೆಯ ಹಂಗಿಲ್ಲದೆ ಸಿನಿಮಾ ನೋಡುವ ಸಿನಿಮಾ ಪ್ರೀತಿ ಇರುವವರು.. ಕಲಾತ್ಮಕ & ಪ್ರಯೋಗಾತ್ಮಕ ಚಿತ್ರಗಳ ಕಡೆ ಮನಸುಳ್ಳವರು ಖಂಡಿತ ಒಮ್ಮೆ ನೋಡಬಹುದಾದ ಚಿತ್ರ ಮರಿಯಾನ್. ಖಂಡಿತ ಮರಿಯಾನ್ ನಮ್ಮನ್ನು ಕಾಡುತ್ತಾನೆ.

ಮನುಷ್ಯನೊಳಗೆ ಪ್ರೀತಿ ಇಷ್ಟೆಲ್ಲಾ ಚೈತನ್ಯವನ್ನ ತುಂಬಾ ಬಲ್ಲದಾ ಅನ್ನುವ ದೊಡ್ಡ ಪ್ರಶ್ನೆಯೊಂದನ್ನ ಚಿತ್ರ ನಮ್ಮ ಮುಂದೆ ಇಡುತ್ತದೆ. ಉತ್ತರವಾಗಿ ಮರಿಯಾನ್ ನಿಲ್ಲುತ್ತಾನೆ. ಹಲವು ಕಾರಣಗಳಿಂದ ಒಂದೊಂದು ಸಿನಿಮಾ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಹಾಗೆ ಮರಿಯಾನ್ ಕೂಡಾ ಕೆಲ ಕಾರಣಗಳಿಂದ ನನಗೆ ಇಷ್ಟವಾಗುತ್ತದೆ. 

6 comments:

  1. ಮರಿಯಾನ್ ಸಿನಿಮಾ ಇನ್ನೂ ನೋಡಿಲ್ಲ ಸತೀಶ್.. ನಿಮ್ಮ ಸಖತ್ತಾದ ವಿಮರ್ಷೆ ಓದಿದ ಮೇಲೆ ಅದನ್ನ ನೋಡಬೇಕೆನಿಸುತ್ತಿದ್ದೆ. ಓದಿದ ಮೇಲೆ ಹೇಳ್ತೀನಿ :-)

    ReplyDelete
  2. ಬೆಲ್ಜಿಯಂ ಬ್ರಸೆಲ್ಸ್ ನಗರದ ಮಾರ್ಕ್ ಕೋನಿಂಕ್ಸ್ ಅವರ ಛಾಯಾಗ್ರಹಣವಿರುವ ಈ ಸಿನಿಮಾ ನಾನೂ ನೋಡಾ ಬೇಕಿದೆ. ಒಳ್ಳೆ ಸಿನಿಮಾ ನೋಡಲು ಪ್ರೇರೇಪಿಸಿದ್ದಕ್ಕೆ ಧನ್ಯವಾದಗಳು.

    ReplyDelete
  3. ಸಿನಿಮಾಗಳೇ ಹಾಗೆ ಮನಸ್ಸನ್ನು ವಿಕಸಿತಗೊಳಿಸುತ್ತದೆ. ಎಂಥಹ ಚಿತ್ರ ನೋಡಬೇಕೆನ್ನುವ ಆಯ್ಕೆ ಸರಿಯಾಗಿರಬೇಕು ಅಷ್ಟೇ. ಸುಂದರ ಚಿತ್ರ ನಿರೂಪಣೆ. ನಿಮ್ಮ ಹಿಂದಿನ ಲೇಖನ ಈ ಲೇಖನ ಎರಡು ಬೆರೆಸಿ ಓದಿದಾಗ ಪ್ರಶ್ನೆ ಪತ್ರಿಕೆ ಉತ್ತರ ಪತ್ರಿಕೆ ಎರಡು ಒಟ್ಟಿಗೆ ಸಿಕ್ಕ ಅನುಭವಾಯಿತು.
    ಸುಂದರ ಲೇಖನ ಓದಿಸಿಕೊಂಡು ಹೋಯಿತು. ಅಭಿನಂದನೆಗಳು.

    ReplyDelete
  4. ಧನ್ಯವಾದಗಳು ಸತೀಶ್... ಚಿತ್ರ ನೋಡುವ ಆಸೆಯನ್ನು ಹೆಚ್ಚಿಸಿದಿರಿ. ಚೆಂದದ ನಿರೂಪಣೆ..

    ReplyDelete
  5. ಒಂದು ಉತ್ತಮ ಚಿತ್ರದ ಬಗೆಗೆ ತಿಳಿದುಕೊಂಡು ಸಂತೋಷವಾಯಿತು. ಧನ್ಯವಾದಗಳು.

    ReplyDelete
  6. ಮರಿಯನ್ ಸಿನೇಮಾ ನೋಡಿದಷ್ಟೇ ಖುಶಿಯಾಯಿತು ನಿಮ್ಮ ಲೇಖನ ಓದಿ. ನಾನು ಖಂಡಿತಾ ನೋಡ ಬೇಕು ಆ ಸಿನೇಮಾ.
    ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.

    ReplyDelete