ಮೊನ್ನೆ ಅವಧಿಯಲ್ಲಿ ಅರುಣ್ ಜೋಳದ ಕೂಡ್ಲಿಗಿಯವರ ಬರಹವೊಂದನ್ನ ಓದಿದ ನನತರ ಬಹಳ ಕಾಡಿಸೋಕೆ ಶುರುವಾಯ್ತು. ಅಭಿಮಾನದ ಹಿಂದಿರುವ ಹಲವು ಮುಖವಾಡಗಳಲ್ಲಿ ಮತ್ತೊಂದು ಮುಖದ ಪರಿಚಯವಾಯ್ತಷ್ಟೇ. ಆ ಲೇಖನದಲ್ಲಿ ಅಭಿಮಾನದ ಪರಮಾಧಿಯಂತೆ ಕಾಣುವ ಜನರ ಆಚರಣೆಗಳ ಕುರಿತಾಗಿ ಅವರು ಹೇಳ್ತಾರೆ. ಈ ಶತಮಾನದ ವೀರ ಮದಕರಿ ಸಿನಿಮಾವನ್ನ ಕೊಟ್ಟೂರು ಮತ್ತು ಉತ್ತರ ಕನ್ನಡದ ಇನ್ನೂ ಹಲವು ಕಡೆ ಕುರಿ ಕೋಳಿಗಳನ್ನ ಬಲಿ ಕೊಟ್ಟು ವಿಜಯೋತ್ಸವಕ್ಕಾಗಿ ಹಾರೈಸುವ ಪದ್ಧತಿ. ಇಂಥಾ ಆಚರಣೆಗಳ ಕುರಿತಾಗಿ ನಾನು ಈವರೆಗೆ ಕೇಳಿರಲಿಲ್ಲ. ತೆಲುಗಿನ ಕೆಲವರ ಸಿನಿಮಾಗಳಿಗೆ ಹಾಗೆ ಬಲಿ ಕೊಡುವ ಸಂಪ್ರದಾಯವಿದೆ ಅಂತ ಈ ಹಿಂದೆ ಎಲ್ಲೋ ಒಂದು ಕಡೆ ಓದಿದ್ದ ನೆನಪಿದೆಯಾದರೂ.. ಕರ್ನಾಟಕದಲ್ಲಿ ಆ ತರಹದ ಒಂದು ಪದ್ಧತಿ ಆಚರಣೆಯಲ್ಲಿ ಇರುವುದರ ಕುರಿತಾಗಿ ಸುಳಿವು ಇರಲಿಲ್ಲ. ದೇವರಿಗೆ ಹಾಗೆ ಹರಕೆ ಅಂದ್ಕೊಂಡು ಬಲಿ ಕೊಡುವ ಸಂಪ್ರದಾಯವನ್ನ ಕೂಡಾ ಒಂದು ಮಟ್ಟಿಗೆ ಭಕ್ತಿ ಪರಾಧೀನ ಮೂಢನಂಬಿಕೆ ಅನ್ನೋ ಹೆಸರಿಟ್ಟು ಸಹಿಸಿಕೊಂಡು ಬಿಡೋದು ಸುಲಭ. ಆದರೆ ಹೀಗೆ ಸಿನಿಮಾವೊಂದಕ್ಕೆ ಬಲಿ ಕೊಡುವ ಪ್ರಕ್ರಿಯೆಯೆಂದರೆ ಇದು ಕೇವಲ ಆಶ್ಚರ್ಯಕರ ವಿಷಯವಷ್ಟೇ ಅಲ್ಲ ಒಂದು ಮಟ್ಟಿಗಿನ ಖೇದದ ವಿಚಾರ ಕೂಡಾ.
ಅಭಿಮಾನ ಜಾತಿ, ಧರ್ಮ, ಮತ, ದೇಶ, ರಾಷ್ಟ್ರೀಯತೆಗಳನ್ನ ಮೀರಿದ ಪ್ರೀತಿ. ಅಭಿಮಾನ ಕೂಡಾ ಹೀಗೆ ಜಾತಿ ರಾಜಕಾರಣದಲ್ಲಿ ಸಿಕ್ಕು ನರಳೋದಾದ್ರೆ ಅದು ದುರಂತವೇ ಸರಿ. ಎಲ್ಲಾ ಕಟ್ಟಲೆಗಳನ್ನ ಮೀರಿದ ಅಭಿಮಾನಕ್ಕೆ ಹಾಗೊಂದು ಸ್ಥಾನ ಇರೋದ್ರಿಂದಲೇ ಎಲ್ಲಿಯವನೋ ಮೈಕಲ್ ಜಾಕ್ಸನ್ ತೀರಾ ನಮ್ಮ ಮನೆಯ ಬೆಡ್ ರೂಂ ಗಳಲ್ಲಿ ಪೋಸ್ಟರ್ ಗಳಾಗಿ ನಿಲ್ಲೋಕೆ ಸಾಧ್ಯವಾದದ್ದು. ಎಲ್ಲಿಯವರೋ ನೆಲ್ಸನ್ ಮಂಡೇಲಾ ನಮ್ಮ ಮಕ್ಕಳಿಗೆ ಪಾಠವಾದದ್ದು. ಎಲ್ಲಿಯವನೋ ವಿಲ್ ಸ್ಮಿತ್.. ಎಲ್ಲಿಯವಳೋ ಜೆಸ್ಸಿಕಾ ಆಲ್ಬಾ ನಮಗ್ಯಾಕೆ ಇಷ್ಟ ಆಗೋದು..?? ಯಾಕೆ ಅವರ ಸಿನಿಮಾಗಳನ್ನ ಜಗತ್ತಿನೆಲ್ಲೆಡೆ ಹಾಗೆ ಮುಗಿ ಬಿದ್ದು ನೋಡೋದು..?? ಕ್ರಿಸ್ ಗೇಲ್ ಯಾಕೆ ನಮಗೆ ಅಷ್ಟಿಷ್ಟ ಆಗಬೇಕು..?? ಪೀಲೆ, ಮರಾಡೋಣ, ಡೇವಿಡ್ ಬೆಕೆಮ್, ಜಿನದೀನ್ ಜಿದಾನ್, ಅಂದರೆ ಈಗಲೂ ನಮಗ್ಯಾಕೆ ಸಂಚಲನ ಆಗತ್ತೆ.?? ಜಾನ್ ಸೀನ, ರಾಕ್ ಅಂಥವರುಗಳೆಲ್ಲ ನಾವು ಹಾಕುವ ಬಟ್ಟೆಯ ಮೇಲ್ಯಾಕೆ ಇರಬೇಕು..?? ಇವರುಗಳೆಲ್ಲ ನಮಗೆ.. ನಮ್ಮ ದೇಶಕ್ಕೆ ಕೊಟ್ಟದ್ದಾದರೂ ಏನು..?? ಆದರೂ ಇವರಿಗೊಂದು ಎಂದರೆ ನಾವು ಏಕೆ ತಲ್ಲಣಿಸುತ್ತೇವೆ..?? ಅದೇ ಅಭಿಮಾನದ ಪ್ರೀತಿ. ಅದಕ್ಕೊಂದು ಬೇಲಿಯೇ ಇಲ್ಲ. ಅಲ್ಲೆಲಿನವರು ಕೂಡಾ ನಮ್ಮವರು ಅನ್ನಿಸಿ ಬಿಡಬಲ್ಲ ಒಂದು ಮಧುರ ಅನುಭೂತಿಯನ್ನ ಕೊಂಡು ತರಬಲ್ಲ ಒಂದು ಅನನ್ಯ ಸಂಭಂಧದ ಹೆಸರೇ ಅಭಿಮಾನ ಎಂದರೆ ತಪ್ಪಲ್ಲ. ಈ ಸಂಬಂಧಕ್ಕೆ ಎರಡು ಜೀವಗಳ ನೇರಾ ನೇರ ಪರಿಚಯವೇ ಇರಬೇಕಿಲ್ಲ. ಏನನ್ನಾದರೂ ಸಾಧಿಸಬಲ್ಲ ಒಂದು ಜೀವ ಮತ್ತದನ್ನ ತನ್ನದೇ ಎನ್ನುವಷ್ಟು ಆನಂದದಿಂದ ಅನುಭವಿಸುವ ಇನ್ನೊಂದು ಜೀವದ ಉಪಸ್ತಿತಿಯಷ್ಟೇ ಸಾಕು ಈ ಜಗದೊಳಗೆ ಯಾರ ಮೇಲೆ ಯಾರಿಗಾದರೂ ಅಭಿಮಾನ ಮೂಡೋಕೆ.
ನಾವು ಅಭಿಮಾನಿಸುವ ಕ್ಷೇತ್ರಗಳು ಇಂಥವೇ ಆಗಬೇಕಿಲ್ಲ. ಸಾಧನೆ ಎನ್ನುವುದು ಯಾವ ಕ್ಷೇತ್ರಗಳಲ್ಲಿ ಸಾಧ್ಯವೋ ಆ ಎಲ್ಲಾ ಕ್ಷೇತ್ರಗಳಲ್ಲೂ ಅದಕ್ಕೆ ಪೂರಕವಾಗಿ ಅಭಿಮಾನಿಸುವ ಅಭಿಮಾನಿಗಳು ಇದ್ದೇ ಇರುತ್ತಾರೆ. ಸಾಹಿತ್ಯವಾಗಲಿ, ಸಂಗೀತವಾಗಲಿ, ಕಲೆ, ಚಿತ್ರಕಲೆ, ನಾಟಕ, ನೃತ್ಯ, ಸಿನಿಮಾ, ಕ್ರೀಡೆ, ರಾಜಕೀಯ, ತಂತ್ರಜ್ಞಾನ, ಸಮಾಜ ಸೇವೆ.. ಹೀಗೆ ಯಾವೊಂದು ಕ್ಷೆತ್ರವಾದರೂ ಸರಿ. ಯಾವ ಕ್ಷೆತ್ರವಾದರೂ ಸಾಧನೆಗೈದವರನ್ನ ಗುರುತಿಸಿ ಅವರ ಮೇಲೊಂದು ಪ್ರೀತಿ, ಆಸಕ್ತಿ ಮೂಡಿಸಿಕೊಳ್ಳುವ ಪ್ರಕ್ರಿಯೆ ನಮ್ಮ ಅಭಿಮಾನದ ಒಂದು ರೂಪ. ಆದರೂ ನಮ್ಮ ಜಗತ್ತಿನೊಳಗೆ ಅಸಂಖ್ಯಾತ ಜನರನ್ನ ಅಭಿಮಾನಿಗಳನ್ನಾಗಿಸಿಕೊಳ್ಳುವ ಜನಪ್ರಿಯ ಕ್ಷೇತ್ರಗಳೆಂದರೆ ಕ್ರೀಡೆ ಮತ್ತು ಸಿನಿಮಾ ಲೋಕ. ಸಿನಿಮಾ ಲೋಕ ಮತ್ತು ಕ್ರೀಡೆಯಲ್ಲಿ ವರ್ಚಸ್ಸು ಇನ್ನಾವುದೇ ರಂಗದಲ್ಲಿ ನಮಗೆ ಕಾಣ ಸಿಗುವುದು ಸ್ವಲ್ಪ ಅಪರೂಪ. ಅದರಲ್ಲೂ ಸಿನಿಮಾ ನಟರು ನಮ್ಮನ್ನ ಆವರಿಸಿಕೊಳ್ಳುವ ಪರಿ ಅದೆಂಥಾ ಮಾಯೆಯೋ..?? ಕೆಲವು ನಟರ ಮೇಲೆ ಅಭಿಮಾನದ ಅತಿಶಯತೆ ಅದೆಷ್ಟಿದೆ ಅಂದ್ರೆ ತಮ್ಮೆಲ್ಲಾ ಕೆಲಸವನ್ನ ಬಿಟ್ಟು ಅವರ ಸಿನಿಮಾ ರಿಲೀಸ್ ಆದ ಮೊದಲ ದಿನದ ಮೊದಲ ಷೋ ಗೆ ಹೋಗಿ ನೋಡಿಕೊಂಡು ಬರುತ್ತಾರೆ. ಸಿನಿಮಾದಲ್ಲಿ ಅವರು ಹಾಕುವ ಬಟ್ಟೆ, ವೇಷಭೂಷಣ, ಕೇಶ ವಿನ್ಯಾಸ, ಮಾತಿನ ಧಾಟಿಗೆ ಅನುಯಾಯಿಗಳಾಗ್ತಾರೆ. ತನ್ನಿಷ್ಟದ ನಟನ ಕುರಿತಾಗಿ ಜಯಘೋಷ ಕೂಗೋದು.. ಹೂಹಾರಗಳನ್ನ ಎಸೆಯೋದು.. ಅವನ ಸಿನಿಮಾ ಯಶಸ್ಸಿನ ಕುರಿತಾಗಿ ಪೂಜಿಸೋದು, ಪ್ರಾರ್ಥಿಸೋದು ಯಾವ ಪುರುಷಾರ್ಥಕ್ಕೆ..?? ಎಲ್ಲಾ ಅಭಿಮಾನ ಅನ್ನೋ ಒಂದೇ ಒಂದು ಸಂಭಂಧದ ಮೇಲಷ್ಟೇ.
ಸಚಿನ್ ಏಕದಿನದಿಂದ ನಿವೃತ್ತಿ ಆದ ಕೂಡಲೇ ಪರಿತಪಿಸಿದವರಲ್ಲಿ ನಾನೂ ಕೂಡಾ ಒಬ್ಬ. ಯಾಕಾಗಿ ನಾವೆಲ್ಲಾ ಅವರಿಗಾಗಿ ಮರುಗಬೇಕು..?? ಅವನು ನೂರು ಶತಕ ಹೊಡೆದ ಕ್ಷಣಕೆ ಇದೇ ಜಗತ್ತೇ ಗೆದ್ದವರಂತೆ ನಾವೆಲ್ಲಾ ಕುಣಿದಾಡಿದ್ದು ಯಾಕೆ..?? ಅದ್ಯಾಕೆ ಅವನ ರೆಕಾರ್ಡುಗಳ ಮೇಲೆ ನಮಗೊಂದು ಹೆಮ್ಮೆ..?? ಗಂಗೂಲಿಯ ಸ್ವಭಾವ, ದ್ರಾವಿಡ್ ನ ಸಂಯಮ, ಲಕ್ಷ್ಮಣನ ಶೈಲಿ, ಯುವರಾಜನ ಆರ್ಭಟ, ಸೆಹವಾಗ್ ನ ಸೆಣಸಾಟ, ಧೋನಿಯ ಧೋರಣೆ, ಕೊಹ್ಲಿಯ ಆಟ, ರೈನಾನ ಪ್ರಬುದ್ಧತೆ.. ಕುಂಬ್ಳೆಯ ಗಿರಕಿಗಳು, ಶ್ರೀನಾಥನ ವೇಗ.. ಯಾಕಾಗಿ ನಾವಿವರಿಗೆಲ್ಲಾ ಭಕ್ತರ ಹಾಗಿರಬೇಕು..?? ವಂಚಕನಾದರೂ ಪಾಂಟಿಂಗ್ ನ ಇಷ್ಟ ಪಡುವವರೆಷ್ಟು..?? ಗಿಲ್ಕ್ರಿಸ್ಟ್ ನ ಆಟ ಮೆಚ್ಚದವರುಂಟೇ..?? ನಮ್ಮವನಲ್ಲದಿದ್ದರೂ ಗೇಲ್ ಹತ್ತಿರ ಅನಿಸೋದು ಯಾಕೆ..?? ಭಾಷೆ, ಧರ್ಮ, ಜಾಗ, ಸಂಸ್ಕೃತಿ, ರೀತಿ ನೀತಿಗಳನ್ನೆಲ್ಲ ದಾಟಿ ಕೇವಲ ಅಭಿಮಾನ ಅನ್ನುವ ಸಂಬಂಧದೊಂದಿಗೆ ಮಾತ್ರವೇ ಇವರೆಲ್ಲ ನಮ್ಮವರು ಅನ್ನುವ ಒಂದು ಸದ್ಭಾವ ಮೂಡುತ್ತದೆ. ಕೇವಲ ಇವರಷ್ಟೇ ಅಲ್ಲ ನಾನಾ ಕ್ಷೇತ್ರಗಳಲ್ಲಿ ನಾನಾ ಸ್ಥರದ ಸಾಧನೆಗಳನ್ನ ಮಾಡಿದ ಅದೆಷ್ಟೋ ಸಹಸ್ರ ಸಾಧಕರುಗಳಿಗೆಲ್ಲ ಜಗತ್ತಿನಾದ್ಯಂತ ಅದೆಷ್ಟು ಸಹಸ್ರ ಮಿಲಿಯನ್ ಗಳ ಸಂಖ್ಯೆಯಲ್ಲಿ ಶುಭ ಹಾರೈಕೆಗಳು, ಆಶಿರ್ವಾದಗಳು ಸಿಗುತ್ತವೆಂದರೆ ಅಭಿಮಾನ ಅನ್ನುವ ಅಧಿಕಾರದ ಮೇಲೆಯೇ.
ಇಂಥವೇ ಕೆಲವು ಅಭಿಮಾನದ, ಅಭಿಮಾನಿಗಳ ವಿಚಿತ್ರ ವರ್ತನೆಗಳನ್ನ ನಾವೆಲ್ಲಾ ಕಂಡಿರುತ್ತೇವೆ. ಭಾರತ ಕ್ರಿಕೆಟ್ ಆಡುವಲ್ಲೆಲ್ಲ ತಲೆ ಬೋಳಿಸಿ ತಿರಂಗ ಬಾವುಟದ ಬಣ್ಣವನ್ನ ಮುಖದ ಮೇಲೆ ಬಳಿದುಕೊಂಡು, ಬೆನ್ನಮೇಲೆ ತೆಂಡೂಲ್ಕರ್ ಹೆಸರು ಬರೆಸಿಕೊಂಡು, ತಂಡ ಹೋದಲ್ಲೆಲ್ಲಾ ಹೋಗಿ ತಂಡವನ್ನು ಹುರಿದುಂಬಿಸೋ ಸುಧೀರ್ ಗೌತಮ್ ಅನ್ನುವ ವ್ಯಕ್ತಿ ಅದ್ಯಾವಾಗಲೂ ನಮಗೊಂದು ಆಶ್ಚರ್ಯ ಸೂಚಕ ಚಿಹ್ನೆಯೇ..!! ಒಂದಿಡೀ ಬದುಕನ್ನ ಕೇವಲ ಅದಕ್ಕಾಗಿ ಮೀಸಲಿಡುವುದೆಂದರೆ ಸುಲಭದ ಮಾತಲ್ಲ. ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಅಭಿಮಾನಿ ಅನ್ನುವ ಪಟ್ಟ ಅವನದ್ದು. ಅವನಷ್ಟೇ ಅಲ್ಲ ಅವನಂತೆ ವಿಚಿತ್ರ ಮ್ಯಾನರಿಸಂ ನಿಂದ ತಮ್ಮ ಅಭಿಮಾನವನ್ನ ಪ್ರದರ್ಶಿಸಿಕೊಳ್ಳುವ ಅದೆಷ್ಟು ತರಹದ ಜನರನ್ನ ನಾವು ನೋಡಿಲ್ಲ. ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗಿಬಿಡುತ್ತದೆ. ಯಾರೋ ಗೊತ್ತಿಲ್ಲದವರೇ ಯಾಕೇ..?? ಕ್ರಿಕೆಟ್ ಕಂಡರೆ ಆಗದು ಅನ್ನುವಂಥ ಧೋರಣೆಯುಳ್ಳ ಅಪ್ಪನೇ ಭಾರತ ವರ್ಲ್ಡ್ ಕಪ್ ಗೆದ್ದ ದಿನ ಖುಷಿ ಖುಷಿ ಇಂದ ಇದ್ದದ್ದು. ದೀಪಾವಳಿಗೆ ಅಳಿದುಳಿದ ಪಟಾಕಿ ಗಳನ್ನೆಲ್ಲ ನಾವು ಆ ಖುಷಿಗೆ ಹಚ್ಚುವಾಗ ತಾನೂ ಬಂದು ನಮ್ಮನ್ನು ಕೂಡಿಕೊಂಡದ್ದು ತೋರಗೊಡದ ಅಭಿಮಾನದ ಸಂಕೇತವೇ.
ಅಭಿಮಾನ ಅನ್ನುವ ಹೆಸರಿನ ಮೇಲೆ ಇಷ್ಟೆಲ್ಲಾ ನಮ್ಮನ್ನ ನಾವು ತೊಡಗಿಸಿ ಕೊಳ್ತೀವಲ್ಲ..?? ಅವರಿಂದ ನಮಗೇನಾದರೂ ಪ್ರಯೋಜನ ಇದೆಯೇ..?? ಅಂಥಾ ಒಂದು ಪ್ರಶ್ನೆ ಯಾವ ಅಭಿಮಾನಿಯ ಮನಸಲ್ಲೂ ಮೂಡುವುದಿಲ್ಲ.. ಅಭಿಮಾನದ ಬಂಧಕ್ಕಿರೋ ಉನ್ನತ ಮೌಲ್ಯಗಳಲ್ಲಿ ಅದೂ ಒಂದು. ಅವರ ಬರ್ತ್ ಡೇ ಅಂದರೆ ನಮಗೆ ಖುಷಿ. ಆ ದಿನ ಸ್ಕೂಲ್ ಕಾಲೇಜು, ಆಫೀಸು, ಇಂಟರ್ನೆಟ್ಟು ಪೂರ್ತಿ ಎಲ್ಲಾ ಕಡೆ ಅವರುಗಳಿಗೆ ಶುಭ ಹಾರೈಕೆಗಳೇ. ಇನ್ನು ವಿಶೇಷವಾಗಿ ಪೂಜೆ ಮಾಡಿಸುವವರು ಸಹ ಇದ್ದಾರೆ. ೨೦೦೩ ರ ವರ್ಲ್ಡ್ ಕಪ್ ಅನ್ನ ಭಾರತ ಗೆಲ್ಲಲಿ ಅಂತ ಅದ್ಯಾರೋ ಹೋಮ ಹವನ ಮಾಡಿಸಿದ ವಿಚಾರವೂ ಸುದ್ಧಿಯಾಗಿತ್ತು. ಇವತ್ತು ಶಾರುಖ್ ಖಾನ್ ಬರ್ತ್ ಡೇ ಅಂತ ಸ್ವೀಟ್ ಕೊಡುತ್ತಿದ ಗೆಳತಿ ಬಿಂದು, ರಾತ್ರಿ ಅವನು ಕನಸಲ್ಲಿ ಬರಲಿ ಅಂತ ಪರಿತಪಿಸ್ತಾ ಇರ್ತಿದ್ಳು. ನಾವು ಪ್ರೀತಿಸುವವರು ನಮ್ಮ ಸ್ವಂತದವರು ಕೂಡಾ ನಮಗೇನಾದರೂ ಇಷ್ಟವಾಗುವಂಥದ್ದು ಮಾಡಿದರಷ್ಟೇ ಅವರ ಜೊತೆಗೆ ಸಲುಗೆ ತೋರಿಸುವ ನಾವು.. ನಮಗ್ಯಾರೂ ಅಲ್ಲದ.. ನಮಗೇನೂ ಮಾಡದ ಇವರುಗಳ ಮೇಲೆ ಇಂಥಾ ಒಂದು ಪ್ರೀತಿಯನ್ನ ಇಟ್ಟುಕೊಂಡಿರೋ ಬಗೆಯೇ ಆಶ್ಚರ್ಯ ಪಡುವಂತೆ ಮಾಡುತ್ತದೆ. ಕೆಲವೊಮ್ಮೆ ಅಭಿಮಾನದ ಹೆಸರಲ್ಲಿ ಜಗಳಗಳಾದ ಪ್ರಕರಣಗಳೂ ಏನು ಕಮ್ಮಿ ಇಲ್ಲ.. ಇಲ್ಲಿ ತಮಿಳುನಾಡಿನಲ್ಲಿ ನಟ ವಿಜಯ್ ಮತ್ತು ಅಜಿತ್ ರ ನಡುವೆ ಯಾವ ಸಮಾಚಾರಗಳು ಘಟಿಸುತ್ತವೆಯೋ ಇಲ್ಲವೋ ಆದರೆ ಅವರುಗಳ ಅಭಿಮಾನಿಗಳ ಹೊಡೆದಾಟ ಮಾತ್ರ ಯಾವತ್ತಿಗೂ ಜೀವಂತ. ಆಗಾಗ ಅಂಥದ್ದೊಂದು ಪ್ರಕರಣಗಳ ಸುದ್ಧಿ ಕಿವಿಗೆ ಆಹಾರವಾಗುತ್ತಲೇ ಇರುತ್ತದೆ. ಇಲ್ಲಿನ ಕಾಲೇಜುಗಳಲ್ಲಿ ಹತ್ತು ಜನ ಹುಡುಗರ ಬೆಸ್ಟ್ ಫ್ರೆಂಡ್ಸ್ ಅನ್ನುವ ಗುಂಪೊಂದು ಇರುತ್ತದಾದರೆ ಖಂಡಿತ ಅದರಲ್ಲಿ ಕೆಲವರು ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಇದ್ದೆ ಇರುತ್ತಾರೆ. ಮತ್ತು ಆ ಅಭಿಮಾನದ ವಿಚಾರದಲ್ಲಷ್ಟೇ ಅವರುಗಳ ಮಧ್ಯೆ ಒಂದು ನಿರಾಕಾರ ವೈಮನಸ್ಯ ಇರುತ್ತದೆ. ಹೀಗೆ ಅಭಿಮಾನದ ಹೆಸರಿನಲ್ಲಿ ಒಂದು ಗುಂಪು ಮತ್ತೊಂದು ಗುಂಪುಗಳ ನಡುವಿನ ಕಲಹವಾದ ಘಟನೆಗಳಿಗೂ ಕೊರತೆಗಳೇನಿಲ್ಲ. ಹುಡುಕಿದರೆ ಎಲ್ಲಾ ಕಡೆಯೂ ಸಿಗುತ್ತದೆ.
ಹೀಗೆ ಅಭಿಮಾನದ ವಿಚಾರಕ್ಕೆ ಬಂದರೆ.. ನಮ್ಮ ಅಭಿಮಾನದ ಮೇಲೆ ನಾಚಿಕೆ ಬರಿಸುವಂಥ.. ಅಭಿಮಾನದ ಮೇಲಿನ ಪ್ರೀತಿಯೇ ಸುಳ್ಳು ಅನ್ನಿಸುವಂಥ ಒಂದು ಘಟನೆ ನನ್ನನ್ನ ಯಾವಾಗಲೂ ಕಾಡುತ್ತದೆ. ಮೊನ್ನೆ ಅರುಣ್ ಜೋಳದ ಕೂಡ್ಲಿಗಿಯವರ ಬರಹ ಓದುತ್ತಿದ ಹಾಗೆ ಅದೆಲ್ಲ ಮತ್ತೊಮ್ಮೆ ನೆನಪಾಯ್ತು.
ಎರಡು ವರ್ಷದ ಹಿಂದೆ. ನಾಗಪುರದಿಂದ ಕಂಪನಿ ಆಯೋಜಿತ ಕ್ರಿಕೆಟ್ ಟೂರ್ನಮೆಂಟ್ ಮುಗಿಸಿಕೊಂಡು ಬೆಂಗಳೂರಿಗೆ ಹೈದರಾಬಾದ್ ಮೂಲಕ ಬರೋದಿತ್ತು. ರಾತ್ರಿ ಎಂಟೂವರೆ ಗಂಟೆಗೆ ಬೆಂಗಳೂರಿಗೆ ಟ್ರೈನ್, ಬೆಳಿಗ್ಗೆ ಒಂಭತ್ತೂವರೆಗೆ ಹೈದರಾಬಾದ್ ತಲುಪಿದ ನಾವು ಅಷ್ಟೊತ್ತು ಏನ್ ಮಾಡುವುದು ಅನ್ನೋದು ಗೊತ್ತಾಗದೆ ಸಿಕಂದರಾಬಾದ್ ನ ಶಾಪಿಂಗ್ ಮಾಲ್ ಒಂದರಲ್ಲಿ ನಾನು ಮತ್ತು ನಮ್ಮ ತಂಡದ ಇತರ ಆಟಗಾರರೆಲ್ಲರೂ ಪ್ಲೇಯರ್ಸ್ ಅನ್ನೋ ಹಿಂದಿ ಸಿನಿಮಾಗಾಗಿ ಹೊರಟೆವು. ನಮ್ಮ ಲಗೆಜುಗಳನ್ನೆಲ್ಲ ಅಲ್ಲೇ ಕ್ಲಾಕ್ ರೂಮಲ್ಲಿ ಲಾಕ್ ಮಾಡಿಟ್ಟು ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಬಾಜು ಹೋಟೆಲ್ ಒಂದರಲ್ಲೇ ತಿಂಡಿ ತಿಂದು ಹೊರಟ ನನಗೆ ಮನೆಯಿಂದ ಫೋನ್. ರಿಸೀವ್ ಮಾಡಿ ಮಾತಾಡಿದರೆ ಹೀಗ್ ಹೀಗೆ ಚಂದ್ರಣ್ಣನ ಮಗ ಸಂತು ಹೋಗ್ಬಿಟ್ಟ ಕಣಪ್ಪ ಅಂತ ಅಮ್ಮ ಗದ್ಗದಿತರಾಗಿ ಹೇಳಿದ್ದಷ್ಟೇ. ಮುಂದೆ ಮಾತಾಡುವ ಯೋಚನೆ ನಮ್ಮಿಬ್ಬರಲ್ಲೂ ಇಲ್ಲ. ಹೇಗಾಯ್ತು ಅಂತ ಕೇಳಿದ್ರೆ ಸೈಕಲ್ ನಲ್ಲಿ ಟೌನ್ ಗೆ ಹೋಗೋವಾಗ ಮಸೀದಿ ಬಳಿ ಹೋಗ್ತಾ ಇದ್ದ ಟ್ರ್ಯಾಕ್ಟರ್ ಕೆಳಗೆ ಬಿದ್ದು. ಟ್ರ್ಯಾಕ್ಟರ್ ಚಕ್ರ ತಲೆ ಮೇಲೆ ಹತ್ತಿ......!! ಸಾಕು ಬಿಡಮ್ಮ ಮುಂದಕ್ಕೆನು ಹೇಳಬೇಡ.. ನಾನೇ ಆಮೇಲೆ ಫೋನ್ ಮಾಡ್ತೀನಿ ಅಂತ ಫೋನ್ ಇಟ್ಟೆ. ಅವತ್ತೆಲ್ಲ ಮನಸಿಗೂ, ಮೈಗೂ ಚೈತನ್ಯವೇ ಇಲ್ಲ. ಆ ಕ್ಷಣವೇ ಊರಿಗೆ ಹೊರಟು ಬಿಡುವ ಮನಸ್ಸಾಯ್ತು. ಹೇಗೆ ಹೊರಟರೂ ಊರು ತಲುಪಲಿಕ್ಕೆ ಒಂದೂವರೆ ದಿನವಾದರೂ ಬೇಕು ಅಲ್ಲಿಯ ತನಕ ಯಾರೂ ಕಾಯುವ ಹಾಗಿಲ್ಲ. ನೀನು ಅಲ್ಲಿ ಹೋಗಿಯೂ ಮಾಡಬೇಕ್ಕಾದ್ದು ಏನಿಲ್ಲ.. ಸಮಾಧಾನ ಮಾಡ್ಕೋ ಅಂತ ಅದು ಇದು ಹೇಳಿ ನನ್ನ ಗೆಳೆಯರೆಲ್ಲ ಸಾಂತ್ವನ ಹೇಳಿಕೊಂಡೇ ನನ್ನನ್ನ ಸಿನಿಮಾ ಮಂದಿರದೊಳಗೆ ಕರೆದೊಯ್ದರು. ಒಲ್ಲದ ಮನಸ್ಸಿಂದಲೇ ಸಿನಿಮಾ ನೋಡಿದ್ದೆ.
ತಮ್ಮನಂತಹ ಹುಡುಗ ಸಂತು ಅಂದ್ರೆ ಶಾಂತಕುಮಾರ. ತಮ್ಮನಂತಹ ಏನು ತಮ್ಮನೇ ಅನ್ನಬಹುದಾದ ಹುಡುಗ. ನಾವೆಲ್ಲಾ ಅವನನ್ನ ನನ್ನ ತಮ್ಮನನ್ನ ಕರೆಯೋ ಹಾಗೆ ಶಾರ್ಟ್ ಆಗಿ ಕೆಲವೊಮ್ಮೆ ಸಂತು, ಕೆಲವೊಮ್ಮೆ ಶಾಂತ ಅಂತಲೇ ಕರೀತಾ ಇದ್ವಿ. ನಮ್ಮ ಮನೆಯಿಂದ ಮೂರು ಮನೆ ದಾಟಿದರೆ ಅವನ ಮನೆ. ಇಬ್ಬರು ಅಣ್ಣ, ಅಪ್ಪ ಅಮ್ಮ, ಮತ್ತವನು. ಹೀಗೆ ಐದು ಜನರ ಸಂತೃಪ್ತ ಕುಟುಂಬ ಅವರದ್ದು. ಅವರಪ್ಪ ಚಂದ್ರಣ್ಣ ಕೊಡಿಹಳ್ಳಿಯ ೨-೩ ಆಲೆಮನೆಗಳಲ್ಲಿ ಬೆಲ್ಲ ಹದ ಮಾಡುವ ಹದಗಾರರಾಗಿ ಕೆಲಸ ಮಾಡುತ್ತಿದ್ದರು. ಅವರಮ್ಮನೂ ಹಾಗೆಯೇ ಒಂದಷ್ಟು ದಿನ ಬೆಲ್ಲದ ಗೋಲಿ ಹಾಕುತ್ತಿದ್ದವರು ಆಲೆಮನೆ ವಾತಾವರಣ ಹೀಟು ಅನ್ನುವ ಕಾರಣಕ್ಕೆ ಅದನ್ನ ಬಿಟ್ಟು ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರಣ್ಣ ಶಿವೂ, ಶಿವಕುಮಾರ ನನ್ನ ಜೊತೆ ಓದಿ, ಆಡಿ ಬೆಳೆದವ. ಓದು ತಲೆಗೆ ಹತ್ತದೆ ಏಳನೇ ತರಗತಿಗೆ ಶಾಲೆ ಬಿಟ್ಟು, ಗಾರೆ ಕೆಲಸ, ಕಬ್ಬು ಕಡಿಯೋದು, ಗ್ಯಾರೇಜು ಅದೂ ಇದೂ ಅಂತ ಕೆಲಸ ಮಾಡುತ್ತಿದ್ದ. ಇನ್ನು ಎರಡನೆಯವ ಚೆನ್ನಕೇಶವ.. ಚಂಕಿ. ಅವನಿಗೂ ಎಂಟನೆ ತರಗತಿಯ ಮೇಲೆ ಓದುವ ಮನಸ್ಸಿಲ್ಲದೆ ಪೆಟ್ರೋಲು ಬಂಕ್ ಒಂದಕ್ಕೆ ಸೇರಿಕೊಂಡ. ಇನ್ನು ನನ್ನ ತಮ್ಮನ ಸಹವರ್ತಿ ಅವನದೇ ವಯಸ್ಸಿನ ಶಾಂತ ಆ ಮನೆಯಲ್ಲಿ ಹತ್ತನೇ ತರಗತಿಯ ವರೆಗೆ ಓದಿದ ಮಹಾನ್ ಪದವೀದರ.. ಆದರೆ ಹತ್ತನೇ ತರಗತಿ ಫೇಲ್..!! ಒಟ್ನಲ್ಲಿ ಅವರುಗಳ್ಯಾರಿಗೂ ಹೈಸ್ಕೂಲು ದಾಟುವ ಸೌಭಾಗ್ಯವೇ ದೊರಕಲಿಲ್ಲ.
ಶಿಕ್ಷಣ ಅವರ ತಲೆಗೆ ಹತ್ತಲಿಲ್ಲವಷ್ಟೇ. ಬದುಕಲು ಬಹಳ ವಿಧ್ಯೆಗಳನ್ನ ಬಲ್ಲವರಾಗಿದ್ದರು ಅವರೆಲ್ಲ. ಶಾಂತ ಕೂಡ ಅವರಪ್ಪನ ಜೊತೆ ಬೆಲ್ಲ ಹದ ಹಿಡಿಯುವುದಕ್ಕೆ.. ಆಲೆಮನೆಯಲ್ಲಿ ಹರಟೆ (ಕಬ್ಬಿನ ಹಾಲು ತೆಗೆದ ನಂತರ ಉಳಿವ ತ್ಯಾಜ್ಯ ಜಲ್ಲೇ) ಹೊರುವುದಕ್ಕೆ.. ಬೆಲ್ಲ ಬೇಯಿಸುವುದಕ್ಕೆ ಹೋಗುತ್ತಿದ್ದ. ಒಂದಷ್ಟು ದಿನ ಅದನ್ನು ಮಾಡಿ ನಂತರ ಅಮ್ಮನ ಜೊತೆ ಕಬ್ಬು ಕಡಿಯುವುದೋ ಸ್ವಲ್ಪ ದಿನದ ನಂತರ ಯಾವುದಾದರೂ ಮೆಕ್ಯಾನಿಕ್ ಶಾಪಿಗೋ ಹೋಗಿ ಕೆಲಸ ಮಾಡುತ್ತಿದ್ದ. ಯಾವೊಂದನ್ನೂ ಪರ್ಮನೆಂಟ್ ಅಂದುಕೊಳ್ಳದ ಅವ ಯಾವುದಾದರೊಂದನ್ನ ಮಾಡಿಕೊಂಡೇ ಇರುತ್ತಿದ್ದ. ಮನೆಯ ಅಷ್ಟೂ ಜನ ಮಾಡುವುದು ಕೂಲಿಯೇ. ತಮ್ಮ ದುಡಿಮೆಯ ತಾಕತ್ತು ಅವರಿಗೆ ಗೊತ್ತಿತ್ತು. ವಿದ್ಯೆ ಕಲಿಯಲಿಲ್ಲ ಅಂತ ಚಂದ್ರಣ್ಣ ಯಾವತ್ತು ತನ್ನ ಮಕ್ಕಳನ್ನ ಮೂದಲಿಸಲಿಲ್ಲ. ಅವರನ್ನ ದ್ವೇಷಿಸಲಿಲ್ಲ. ಹೇಗೋ ಬದುಕೋದು ಕಲಿತರಾಯ್ತು ತಮ್ಮನ್ನ ತಾವು ಸಾಕಿಕೊಳ್ಳುವುದು ಕಲಿತರಾಯ್ತು ಅನ್ನುವ ಧನ್ಯತೆಯೊಂದಿಗಷ್ಟೇ ಬದುಕುತ್ತಿದ್ದರು. ಚಂದ್ರಣ್ಣನ ಹೆಂಡತಿ ಗೌರಕ್ಕನಿಗೂ ಇದು ಅಷ್ಟಾಗಿ ನೋವು ಕೊಡುವ ವಿಚಾರವೆನಿಸಲಿಲ್ಲ. ಬರದ ಓದನ್ನ ಮಕ್ಕಳ ಕುತ್ತಿಗೆಗೆ ಕಟ್ಟಿದರಷ್ಟೇ ತಾನೇ ಏನು ಫಲ. ಅವರ ಹಣೆಯಲ್ಲಿ ಬರೆದ ಹಾಗಾಗುತ್ತೆ ಅನ್ನುವ ನಂಬಿಕೆಯೊಂದಿಗೆ ಸಂತೋಷವಾಗಿಯೇ ಇದ್ದರು. ಇವರುಗಳೋ ಬದುಕೋಕೊಂದು ದಾರಿ.. ಅದು ಓದಿನಿಂದಲೇ ದೊರೆಯಬೇಕಾದ್ದಿಲ್ಲ ಅನ್ನುವ ಧೋರಣೆಯಿಂದ ಇವರೂ ಹಾಗೆಯೇ ಅಲ್ಲಿಲ್ಲಿ ಕೂಲಿ ಮಾಡಿದರೂ ಸಂತೋಷದಿಂದ, ನೆಮ್ಮದಿ ಇಂದ ಇದ್ದರು. ಐದು ಜನರ ದುಡಿಮೆಯಿಂದ ಕುಟುಂಬ ನಿರ್ವಹಣೆ ಸಾಂಘವಾಗಿಯೇ ನಡೆಯುತ್ತಿತ್ತು.
ಇವರ ಕುಟುಂಬದ ಬಗ್ಗೆ ಎಲ್ಲರಿಗೂ ಆಶ್ಚರ್ಯವೆನಿಸುತ್ತಿದ್ದ ಒಂದು ವಿಚಾರವೆಂದರೆ ಎಲ್ಲರೂ ಈಗಿನ ಕನ್ನಡ ಸಿನಿಮಾದ ಪ್ರಖ್ಯಾತ ಹೀರೋ ಒಬ್ಬನ ಅನನ್ಯ ಅಭಿಮಾನಿಗಳು. ಗೌರಕ್ಕ ಕೂಡಾ. ಆದರೆ ಅಪ್ಪ ಮಕ್ಕಳಲ್ಲಿ ಅವರ ವರ್ತನೆಗಳಿಂದಾಗಿ ಸುಲಭಕ್ಕೆ ಅದು ಕಾಣಿಸುತ್ತಿದ್ದಂತೆ ಗೌರಕ್ಕನಲ್ಲಿ ಕಾಣಿಸುತ್ತಿರಲಿಲ್ಲವಷ್ಟೇ. ಆ ಹೀರೋ ಯಾವುದೇ ಸಿನಿಮಾ ಬಂದರೂ ಅಪ್ಪ ಮಕ್ಕಳು ಪ್ಲಾನ್ ಮಾಡಿ ಒಟ್ಟಿಗೆ ಹೋಗಿ ನೋಡಿ ಬರುತ್ತಿದ್ದರು. ಗೌರಕ್ಕ ಅವರ ಜೊತೆ ಟಾಕೀಸ್ ಗೆಲ್ಲ ಹೋಗುತ್ತಿರಲಿಲ್ಲ, ಟೀವಿಯಲ್ಲಿ ಅವನ ಚಿತ್ರಗಳು ಬಂದರೆ ಕಣ್ಣು ಮಿಟುಕಿಸದೆ ನೋಡ್ತಾ ಇದ್ದರು. ಆದರೆ ಈ ಶಾಂತ ಮಾತ್ರ ಅವರಷ್ಟೂ ಜನರಲ್ಲಿ ಎಲ್ಲರನ್ನೂ ಮೀರಿದ ಅಭಿಮಾನಿ. ಅಪ್ಪ ಅಣ್ಣರೊಂದಿಗೆ ಮತ್ತೊಮ್ಮೆ ನೋಡಿದರೂ ಪರವಾಗಿಲ್ಲ ತಾನು ಮಾತ್ರ ಆ ಹೀರೋ ಸಿನಿಮಾವನ್ನ ಬಿಡುಗಡೆಯ ದಿನ, ಮೊದಲ ಪ್ರದರ್ಶನವೇ ನೋಡಬೇಕಿತ್ತು. ಟಿಕೆಟ್ ಸಿಗದೇ ಚಿತ್ರ ಮಂದಿರ ತುಂಬಿ ತುಳುಕುತ್ತಿದ್ದರೂ ಪೂರ್ತಿ ನಿಂತೋ ಅಥವಾ ನೆಲದ ಮೇಲೆ ಕೂತೋ ಕೂಡಾ ಸಿನಿಮಾ ನೋಡಿಕೊಂಡು ಬಂದು ಬಿಡುತ್ತಿದ್ದ. ತಾನು ನೋಡಿಬಂದ ಆ ಹೀರೋ ಸಿನಿಮಾ ಕತೆಯನ್ನ, ಅವನ ಹಾಡು ಫೈಟ್ ಡ್ಯಾನ್ಸ್ ಗಳ ಕುರಿತಾಗಿ ರೋಚಕವಾಗಿ ಕತೆ ಹೇಳಿ ಅವರಿಗೂ ಸಿನಿಮಾ ನೋಡುವಂತೆ ಅಸೆ ಹುಟ್ಟಿಸಿ ಬಿಡುತ್ತಿದ್ದ. ಅವನ ಸಿನಿಮಾ ಡೈಲಾಗ್ ಗಳನ್ನ ತನ್ನ ಸಾಮಾನ್ಯ ಮಾತುಕತೆಯ ನಡುವೆ ಸೇರಿಸಿ ಮಾತಾಡುವ ವಿಚಿತ್ರ ಖಯಾಲಿ ಬೆಳೆಸಿಕೊಂಡಿದ್ದ. ತನ್ನ ದುಡಿಮೆಯಲ್ಲಿ ಅಷ್ಟಿಷ್ಟು ಉಳಿಸಿ, ಮೂವರು ಅಣ್ಣ ತಮ್ಮಂದಿರು ಸೇರಿ ಮನೆಗೊಂದು ಡಕ್, ಡೀವೀಡಿ, ಸ್ಪೀಕರ್ಗಳನ್ನ ತಂದಿಟ್ಟರು. ಅದರಲ್ಲಿ ಇಡೀ ಬೀದಿಗೆ ಕೇಳಿಸುವಂತೆ ಜೋರಾಗಿ ಕೇಳಿಸುವಂತೆ ಸೌಂಡ್ ಕೊಟ್ಟು ಆ ಹೀರೋ ಹಾಡುಗಳನ್ನ ಕೇಳಿ, ಕೇಳಿಸುತ್ತಿದ್ದರು. ಮನೆಯ ತುಂಬಾ ಬರೀ ಆ ಹೀರೋನದ್ದೇ ಪೋಸ್ಟರ್ ಗಳು. ಎಷ್ಟೋ ಸಾರಿ ಶಾಂತ ಸಿನಿಮಾಗಳಿಗೆ ಒಬ್ಬನೇ ಹೋಗಲಿಕ್ಕೆ ಬೇಜಾರಾಗಿ.. ಅಥವಾ ತನ್ನ ಗುರು ಆ ಹೀರೋನ ಸಿನಿಮಾವನ್ನ ಮತ್ತೊಬ್ಬರಿಗೆ ತೋರಿಸಬೇಕೆನ್ನುವ ಹಟಕ್ಕಾಗಿ ತನ್ನ ಸ್ವಂತ ಖರ್ಚಿನಿಂದಲೇ ಅದೆಷ್ಟೋ ಜನರಿಗೆ ಸಿನಿಮಾ ತೋರಿಸಿದ್ದಿದೆ..!! ಆ ಹೀರೋನ ಒಂದು ಪ್ರಖ್ಯಾತ ಚಿತ್ರವನ್ನ ಒಟ್ಟಿಗೆ ಏಳು ಜನರನ್ನ ಸೇರಿಸಿಕೊಂಡು ಅಷ್ಟೂ ಜನರ ದುಡ್ಡನ್ನ ತಾನೇ ಕೊಟ್ಟು ಸಿನಿಮಾ ತೋರಿಸಿದ್ದನಂತೆ..!! ಆ ಹೀರೋನ ಹುಟ್ಟು ಹಬ್ಬ ಬಂದರೆ ತನ್ನದೇ ಹುಟ್ಟು ಹಬ್ಬವೆಂಬಂತೆ ಇಡೀ ಬೀದಿ ಬೀದಿಗೆ ಸಿಹಿ ಹಂಚುತ್ತಿದ್ದ. ಅಂಥಾ ಅಭಿಮಾನ ಅವನದ್ದು..!!
ಅವನ ಹಾಗೆಯೇ ನಮ್ಮೂರಿನಲ್ಲಿ ಆ ಹೀರೋಗೆ ಅಂತ ಅದೆಷ್ಟು ಅಭಿಮಾನಿಗಳಿಲ್ಲ..?? ನಮ್ಮೂರಿನಲ್ಲಿ ಆ ಹೀರೋಗಿರುವಷ್ಟು ಅಭಿಮಾನಿಗಳು ಬೇರೆ ಯಾವ ಊರಲ್ಲಿಯೂ ಇಲ್ಲವೇನೋ..?? ಸಾಬರ ಅಯ್ಯೂಬ & ಅವರಣ್ಣ ಮುಬಾರಕ್ ಆ ಹೀರೋ ಅಂದರೆ ಜೀವವೇ ಬಿಡುತ್ತಿದ್ದರು. ಪ್ರವೀಣ, ಲಾಲೂ, ಅರುಣ, ಗಿರೀಶ, ನನ್ನ ಮೈದುನ ಮೋನ, ಗೊಳ್ಳೆ ಅರುಣ, ಪರ್ಸ, ನರೇಶ, ಮಂಜ, ಹೇಮಿ, ನನ್ನ ತಮ್ಮ ಸಂತು ಹೀಗೆ ಇಡೀ ಊರಿಗೂರೇ ಆ ಹೀರೋ ಅಭಿಮಾನಿಗಳು ಅನ್ನಬೇಕೇನೋ..!! ಅಪ್ಪ ರಾಜ್ ಕುಮಾರ್ & ವಿಷ್ಣುವರ್ಧನ್ ಅಭಿಮಾನಿಯಾದರೆ ನಾನು ಕೂಡಾ ಅಪ್ಪನ ಹಾಗೆ ರಾಜ್ ಕುಮಾರ್, ವಿಷ್ಣುವರ್ಧನ್ & ಪುನೀತ್ ನ ಅಭಿಮಾನಿಯಾಗಿದ್ದೆ. ಬರೀ ಊರ ಯುವಕರು ಹುಡುಗರು ಮಾತ್ರವಲ್ಲ, ಇಳಿ ಮುದುಕರಲ್ಲೂ, ನಡು ವಯಸ್ಸಿನ ಗಂಡಸರಲ್ಲೂ ಆ ಹೀರೋಗೆ ನಮ್ಮೂರಿನಲ್ಲಿ ಅದಮ್ಯ ಅಭಿಮಾನಿಗಳ ಕೂಟವುಂಟು.
ಹೀಗೆ ಆ ವರ್ಷದ ರ ಜನವರಿಯಲ್ಲಿ ಆ ಹೀರೋನ ಒಂದು ಸಿನಿಮಾ ರಿಲೀಸ್ ಆಗಿತ್ತಂತೆ. ಅದರ ಬಿಡುಗಡೆಯ ದಿನದ ಮೊದಲ ಶೋಗೆಂದೇ ಶಾಂತ ತನ್ನ ಸೈಕಲ್ ಓಡಿಸ್ಕೊಂಡು ಆ ಸಿನಿಮಾವನ್ನ ನೋಡೋಕೆ ಹೋಗ್ತಾ ಇದ್ನಂತೆ. ಮಸೀದಿ ಬಳಿ ವೇಗವಾಗಿ ಸಾಗುತ್ತಿದ್ದ ಸೈಕಲ್ ಆಯತಪ್ಪಿ ರಸ್ತೆಯಲ್ಲಿನ ದೊಡ್ಡ ಗುಂಡಿಯೊಂದಕ್ಕೆ ಇಳಿದು ಬ್ಯಾಲೆನ್ಸ್ ತಪ್ಪಿ ಇವನು ಸೈಕಲ್ ಇಂದ ರಸ್ತೆಗೆ ಬಿದ್ದು ಬಿಟ್ಟನಂತೆ. ತಕ್ಷಣಕ್ಕೆ ಹಿಂದೆಯೇ ಬರುತ್ತಿದ್ದ ಟ್ರ್ಯಾಕ್ಟರ್ ಒಂದರ ಹಿಂದಿನ ಟ್ರೈಲರ್ ಚಕ್ರಕ್ಕೆ ಇವನ ತಲೆ ಸಿಕ್ಕು, ಚಕ್ರ ಅವನ ತಲೆ ಮೇಲೆ ಹತ್ತಿ.. ಅಲ್ಲಿಯೇ ಅವನ ತಲೆಯೊಡೆದು.....!!
ಛೇ.. ನನಗೆ ಅದನ್ನ ವಿವರಿಸೋಕೆ ಹಿಂಸೆ ಅನ್ನಿಸುತ್ತಿದೆ..!
ಅದಾಗಿಯೂ ಮಿಡಿ ಜೀವ ಮಿಡುಕುತ್ತಿದ್ದ ಶಾಂತನನ್ನ ಬದುಕಿಸಿ ಕೊಳ್ಳುವ ಸಲುವಾಗಿ ಕಾರ್ ಒಂದನ್ನ ಹಿಡಿದು ಶಿವಮೊಗ್ಗ ಆಸ್ಪತ್ರೆಗೆಂದು ಕೊಂಡೊಯ್ಯುವಾಗಲೇ ಶಾಂತ ಒಂದೆರಡು ನಿಮಿಷದಲ್ಲೇ ತನ್ನ ಇಹವನ್ನ ತ್ಯಜಿಸಿ ಬಿಟ್ಟಿದ್ದನಂತೆ. ಅವರ ಕುಟುಂಬದ ಆಕ್ರಂದನ ಕೇಳಲಾಗದಷ್ಟು ರೌರವವಂತೆ. ಇಡೀ ಊರಿಗೆ ಊರೇ ಅವತ್ತು ಅವನ ಸಾವು ಕಂಡು ಅನ್ನಾಹಾರ ತ್ಯಜಿಸಿ ಮೌನಕ್ಕೆ ಶರಣಾಗಿತ್ತಂತೆ. ಈ ವಿಚಾರವನ್ನ ಶಾಂತ ಸತ್ತು ಅದೆಷ್ಟೋ ದಿನದ ಮೇಲೆ ಅಮ್ಮ ನನಗೆ ತಿಳಿಸಿದ್ದರು. ನನಗೂ ಅವನ ಸಾವಿನ ರೀತಿ & ನೋವು ಕೆಲ ಕಾಲ ಮನಭ್ರಮಣೆಯನ್ನ ಉಂಟು ಮಾಡಿದ್ದು ಸುಳ್ಳಲ್ಲ.
ಛೇ.. ನನಗೆ ಅದನ್ನ ವಿವರಿಸೋಕೆ ಹಿಂಸೆ ಅನ್ನಿಸುತ್ತಿದೆ..!
ಅದಾಗಿಯೂ ಮಿಡಿ ಜೀವ ಮಿಡುಕುತ್ತಿದ್ದ ಶಾಂತನನ್ನ ಬದುಕಿಸಿ ಕೊಳ್ಳುವ ಸಲುವಾಗಿ ಕಾರ್ ಒಂದನ್ನ ಹಿಡಿದು ಶಿವಮೊಗ್ಗ ಆಸ್ಪತ್ರೆಗೆಂದು ಕೊಂಡೊಯ್ಯುವಾಗಲೇ ಶಾಂತ ಒಂದೆರಡು ನಿಮಿಷದಲ್ಲೇ ತನ್ನ ಇಹವನ್ನ ತ್ಯಜಿಸಿ ಬಿಟ್ಟಿದ್ದನಂತೆ. ಅವರ ಕುಟುಂಬದ ಆಕ್ರಂದನ ಕೇಳಲಾಗದಷ್ಟು ರೌರವವಂತೆ. ಇಡೀ ಊರಿಗೆ ಊರೇ ಅವತ್ತು ಅವನ ಸಾವು ಕಂಡು ಅನ್ನಾಹಾರ ತ್ಯಜಿಸಿ ಮೌನಕ್ಕೆ ಶರಣಾಗಿತ್ತಂತೆ. ಈ ವಿಚಾರವನ್ನ ಶಾಂತ ಸತ್ತು ಅದೆಷ್ಟೋ ದಿನದ ಮೇಲೆ ಅಮ್ಮ ನನಗೆ ತಿಳಿಸಿದ್ದರು. ನನಗೂ ಅವನ ಸಾವಿನ ರೀತಿ & ನೋವು ಕೆಲ ಕಾಲ ಮನಭ್ರಮಣೆಯನ್ನ ಉಂಟು ಮಾಡಿದ್ದು ಸುಳ್ಳಲ್ಲ.
ಬಹಳ ದಿನಗಳ ಕಳೆದ ಮೇ ತಿಂಗಳಿನಲ್ಲಿ ಊರ ಹಬ್ಬದ ಸಲುವಾಗಿ ಊರಿಗೆ ಹೋಗಿದ್ದೆ. ಊರ ಹಬ್ಬಕ್ಕೆ ಇನ್ನೂ ಎರಡು ದಿನ ಮುಂಚೆಯೇ ಹೋಗಿದ್ದರಿಂದ ಬೋರ್ ಹೊಡೆಯುತ್ತಿತ್ತು. ಆವತ್ತಷ್ಟೇ ಬೆಂಗಳೂರಿನಿಂದ ಬಂದ ಚೇತು, ಬಾ ಸತೀ ಬೇಜಾರಾಗ್ತಿದೆ ಆ ಹೀರೋನ ಇತ್ತೀಚಿನ ಫಿಲಂಗೆ ಹೋಗಿ ಬರೋಣ ಅಂತ ಕರೆದು ಕೊಂಡು ಹೋದ. ನೆಚ್ಚಿನ ಗೆಳೆಯ ಅರುಣ್ ನವಲಿಯ ಜೊತೆ ಶತಮಾನಂಭವತಿ ಕವನ ಸಂಕಲನ ಬಿಡುಗಡೆಯಾದ ಮಾರನೆ ದಿನವೇ ಆ ಚಿತ್ರವನ್ನ ನೋಡಿದ್ದೆನಾದರೂ, ಮನೆಯಲ್ಲಿ ಬೇಜಾರಾಗ್ತಿದೆಯಲ್ಲ ಅನ್ನೋ ಕಾರಣಕ್ಕೆ ಚೇತು ಜೊತೆ ಮತ್ತೆ ಆ ಸಿನಿಮಾಕ್ಕೆ ಹೋದೆ. ಚಿತ್ರ ಲವಲವಿಕೆ ಇಂದ ಕೂಡಿದ್ದರಿಂದ ಎರಡನೇ ಸಾರಿ ನೋಡುವುದಕ್ಕೇನು ಅಭ್ಯಂತರವಿಲ್ಲವೆನಿಸಿ ಹೋಗಿದ್ದೆ. ಸಿನಿಮಾ ನೋಡಿಕೊಂಡು ಚೇತು ಜೊತೆ ಮಾತಾಡಿಕೊಂಡು ವಾಪಾಸು ಬರುವಾಗ ಚೇತು ಶಾಂತನ ವಿಚಾರವನ್ನ ಮಾತಿಗೆಳೆದ. ಶಾಂತ ಈ ಟೈಮ್ ಗೆ ಇದ್ದಿದ್ರೆ ಈ ಫಿಲಂ ನೋಡಿ ಎಷ್ಟು ಖುಷಿ ಪಡ್ತಿದ್ದ ಆಲ್ವಾ ಸತಿ ಅಂದ. ನನಗೂ ಹೌದೆನಿಸಿ ಹೂಂ ಅಂದೇ. ಅವನು ಹಿಂಗೆ ಆ ಹೀರೋ ಫಿಲಂ ನೋಡೋಕೆ ಹೋಗೋವಾಗ್ಲೇ ಆಕ್ಸಿಡೆಂಟ್ ಆಗಿ ಸತ್ತಿದಂತೆ ಅಂದ ಚೇತು. ಹಾಂ ಗೊತ್ತಾಯ್ತು.. ಅಮ್ಮ ಫೋನ್ ಮಾಡಿ ಹೇಳಿದ್ರು ಅಂದೇ. ಆ ಟೈಮ್ ನಲ್ಲಿ ನಾನೂ ಊರಲ್ಲಿ ಇರಲಿಲ್ಲ ಹಾಗಾಗಿ ನನಗೆ ಅವನನ್ನ ಕೊನೆಗೂ ನೋಡೋಕೆ ಆಗ್ಲಿಲ್ಲ ಸತಿ ಅಂದ. ನಾನು ಕೂಡಾ ನನ್ನ ಪರಿಸ್ತಿತಿಯನ್ನ ಹೇಳಿಕೊಂಡೆ. ನಿನಗೆ ಮತ್ತೊಂದು ವಿಚಾರ ಗೊತ್ತಾ ಸತಿ ಅಂದ..!! ಏನು ಅಂದೇ..?? ಆ ಹೀರೋ ಅಂದ್ರೆ ಜೀವ ಬಿಡ್ತಿದ್ದ.. ಆ ಹೀರೋ ಫಿಲಂ ನೋಡೋಕೆ ಹೋಗಿನೇ ಜೀವ ಬಿಟ್ಟ ಶಾಂತನ ಹೆಣವನ್ನ ಒಂದ್ಸಾರಿ ಆ ಹೀರೋಗೆ ತೋರಿಸಿದರೆ.. ಅವನ ಆತ್ಮಕ್ಕೆ ಶಾಂತಿ ಸಿಗ್ಬೋದು ಅನ್ನಿಸಿ ಅದ್ಯಾರ್ಯಾರದ್ದೋ ಮೂಲಕ ಆ ಹೀರೋನ ಹಿಡಿದು ಹಿಂಗ್ ಹಿಂಗೆ ಅಂತ ಹೇಳಿ.. ಬಂದು ಶಾಂತನನ್ನ ನೋಡ್ಲಿಕ್ಕೆ ಕೇಳಿಕೊಂಡ್ರೆ ಆ ಹೀರೋ ಏನ್ ಅಂದ್ನಂತೆ ಗೊತ್ತಾ..?? ಐದು ಲಕ್ಷ ಕೊಟ್ರೆ ನೋಡೋಕೆ ಬರ್ತೀನಿ ಅಂದನಂತೆ..!! ಚೇತು ಹಾಗಂದು ಮಾತು ಮುಗಿಸಿದ ಕೂಡಲೇ ನನ್ನೆದೆಯಲ್ಲಿ ಒಂದು ಮಹಾಸ್ಪೋಟವಾದಷ್ಟೇ ಗಂಭೀರವಾದ ಒಂದು ಸ್ಪೋಟದ ಶಬ್ದ ಕೇಳಿದ ಹಾಗಾಯ್ತು. ಚೇತುವಿಗೆ ಅದು ನಿಜವೋ ಅಥವಾ ಸುಳ್ಳೋ ಅಂತ ಕೇಳಿದೆ. ಈ ವಿಚಾರದಲ್ಲಿ ಯಾರಾದರೂ ಸುಳ್ಳು ಹೇಳ್ತಾರಾ ಅಂದ.
ಚೇತು ಹೇಳಿದ್ದು ಸತ್ಯವೋ ಸುಳ್ಳೋ ಅನ್ನುವುದನ್ನ ಪರಾಮರ್ಶಿಸಬೇಕು ಅಂತಲೂ ನನಗೆ ಅನ್ನಿಸಲಿಲ್ಲ. ಆ ಕ್ಷಣ ಆ ಆಲೋಚನೆ ನನಗೆ ಬರಲೂ ಇಲ್ಲ. ಅದೆಂಥ ಲಾಲಸೆ..?? ಅದು ಸತ್ತವರನ್ನ ನೋಡಲು ಹೋಗುವುದಕ್ಕೆ ಕೂಡಾ ಐದು ಲಕ್ಷ ಕೇಳುವುದೆಂದರೆ..?? ಅದು ಕೂಡಾ ಮನೆಯ ಐದೂ ಜನರೂ ಕೂಲಿ ಮಾಡುವಂತಹ ಪರಿಸ್ತಿತಿಯಲ್ಲಿನ ಕುಟುಂಬ. ಅವರಿಗಂತ ಸ್ವಂತ ಪುಟ್ಟದೊಂದು ಮನೆ ಬಿಟ್ಟರೆ ಬೇರಾವ ಆಸ್ತಿಯೂ ಇಲ್ಲ. ಅಂಥವರ ಬಳಿ ಧರ್ಮಕ್ಕೆ.. ಖಾಲೀ ಸತ್ತ ತನ್ ಅಭಿಮಾನಿಯನ್ನ ತಾನೇ ನೋಡುವುದಕ್ಕೆ ಐದು ಲಕ್ಷ ಕೇಳುವುದೆಂದರೆ ಹಣದ ಮೇಲೆ ಅದೆಂಥ ಮೋಹವಿರಬೇಕು..?? ಆ ಹೀರೋ ಏನು ಶಾಂತನಿಗೆ ಐದು ಲಕ್ಷ ಸಾಲವಾಗಿ ಕೊಟ್ಟಿದ್ದನೇ..?? ಸತ್ತ ಹೆಣದ ಮುಂದೆ ನಿಂತು ಕೇಳೋಕೆ..!! ತಮ್ಮ ಯಾವತ್ತಿನ ಮಾಮೂಲಿ ಡೈಲಾಗ್ ಹೇಳಿ ಕಳುಹಿಸಿದ್ದರೂ ಆಗುತ್ತಿತ್ತು. ಅಯ್ಯೋ ಸಾರಿ ನನ್ ಅಭಿಮಾನಿಯೊಬ್ಬನಿಗೆ ಈ ರೀತಿ ಆಗಿದ್ದು ನನಗೆ ತುಂಬಾ ನೋವುಂಟು ಮಾಡಿರೋ ಸಂಗತಿ. ನನಗೂ ಬರೋ ಆಸೆ ಆದ್ರೆ ವಿಪರೀತ ಬ್ಯುಸಿ ಶೂಟಿಂಗ್ ನಲ್ಲಿ.. ಬರೋಕೆ ಎಷ್ಟು ಪ್ರಯತ್ನ ಪಟ್ರೂ ಆಗಲ್ಲ. ದೇವ್ರು ಅವನ ಆತ್ಮಕ್ಕೆ ಶಾಂತಿ ಕೊಡಲಿ. ನನ್ನ ಒಬ್ಬ ಗ್ರೇಟ್ ಅಭಿಮಾನಿ ಅವ್ನು ಅಂತ ಒಂದೆರಡು ಫಿಲ್ಮೀ ಡೈಲಾಗ್ ಹೇಳಿದ್ದಿದ್ದರೂ ಅವನ ಮೇಲಿನ ಮಿಕ್ಕವರ ಅಭಿಮಾನ ಹಾಗೆ ಉಳಿಯುತ್ತಿತ್ತೇನೋ ಅನ್ನಿಸ್ತು. ಒಂದು ನಿಮಿಷದ ಒಂದು ಸಣ್ಣ ಪಾನ್ ಪರಾಗ್ ಜಾಹೀರಾತಿನಲ್ಲಿ ಕಾಣಿಸಿ ಕೊಂಡಿದ್ದಿದ್ದರೆ ಕೂಡಾ ಅವರಿಗೆ ಆ ಐದು ಲಕ್ಷಕ್ಕಿಂತ ಜಾಸ್ತಿ ಸಿಕ್ಕಿದರೂ ಸಿಕ್ಕುತ್ತಿತ್ತೇನೋ..?? ಒಬ್ಬ ಅಭಿಮಾನಿಯ ಜೀವ ಆ ಪಾನ್ ಪರಾಗ್ ಜಾಹೀರಾತಿಗಿಂತ ಕೀಳೆ..?? ಹಣಕ್ಕಾಗಿ ಬೆತ್ತಲೆ ಚಿತ್ರಗಳಲ್ಲಿ ಕೂಡಾ ನಟಿಸೋಕೆ ನಾನು ಸಿದ್ಧ ಎನ್ನುವಂಥ ಆ ಹೀರೋನ ಹೇಳಿಕೆ ಉಳ್ಳ ಪತ್ರಿಕೆಯನ್ನ ನಾನು ಬಹಳ ಹಿಂದೆ ಒಮ್ಮೆ ಓದಿದ್ದೆ. ಅದ್ಯಾಕೋ ಅವನ ಆ ಮಾತು, ಈ ಸಂಧರ್ಭಕ್ಕೆ ಬಹಳ ಪುಷ್ಟಿ ಕೊಡುವಂತಿತ್ತು. ಅವರಂಥಹ ವ್ಯಕ್ತಿಗಳಿಗೆ ಐದು ಲಕ್ಷ ಒಂದು ವಿಚಾರವೇ ಅಲ್ಲ. ಕರೆದದ್ದು ಯಾವುದೋ ರಾಜಕೀಯ ಸಮಾರಂಭಕ್ಕೋ ಅಥವಾ ಜನಪ್ರೀಯತೆಯನ್ನ ಸೆಳೆಯಬಲ್ಲ ಕಾರ್ಯಕ್ರಮಗಳಿಗೆ ಅಲ್ಲವಲ್ಲ ಗೌರವ ಧನವನ್ನ ಅಪೇಕ್ಷಿಸುವುದಕ್ಕೆ. ಸತ್ತವನನ್ನ ನೋಡುವುದಕ್ಕೆ ಲಕ್ಷಾಂತರ ರುಪಾಯಿ ದೇಣಿಗೆ ನೀಡಬೇಕೆಂದರೆ ಮನುಷ್ಯನ ಮೇಲೆ ಅದ್ಯಾವ ಮಹಾ ಗೌರವವಿದ್ದೀತು ಅವನಲ್ಲಿ..?? ಅವನ ಮನುಷ್ಯತ್ವ ಜಗಜ್ಜಾಹೀರಾಗುವಂಥ ಘಟನೆಗಳು ಕೂಡಾ ನಡೆದವೆನ್ನಿ ಕಾಲಾನುಕ್ರಮದಲ್ಲಿ. ಆದರೂ ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು ಅನ್ನುತ್ತಾರಲ್ಲ ಅದು ನಿಜ.
ಡಾಕ್ಟರ್ ರಾಜ್ ಕುಮಾರರ ವಿಚಾರದಲ್ಲಿ ಕೂಡಾ ಹಲವಾರು ಜನ ಕೆಲವೊಂದು ಥರದ ಮಾತುಗಳನ್ನಾಡುವ ಪರಿಯನ್ನ ನಾನು ಕೇಳಿದ್ದೇನೆ. ತುಂಬಾ ಜನಪ್ರಿಯ ಅಪವಾದ ಅದು. ಅಷ್ಟು ಯಶಸ್ವೀ ನಟರಾದರೂ.. ಅಷ್ಟು ಸಂಪತ್ತು ಗಳಿಸಿದರೂ ಜನಸಾಮಾನ್ಯರಿಗಾಗಿ ಅವರು ಏನು ಮಾಡಲಿಲ್ಲವೆಂಬ ಅಪವಾದ ಅದು. ಕನ್ನಡದಲ್ಲಿ ಅಂತ ಒಬ್ಬ ಮಹಾನ್ ನಟ ಜನಿಸಿದ್ದೇ ನಮ್ಮ ಪುಣ್ಯ. ಇಲ್ಲಿಯತನಕ ಅವರಂಥಾ ಒಬ್ಬ ಅದ್ಭುತ ವ್ಯಕ್ತಿತ್ವದ ನಟರನ್ನ ನಾನು ಕೂಡಾ ಎಲ್ಲಿಯೂ ಕಂಡಿಲ್ಲ. ಅವರವರ ಸ್ವಂತ ಹಣದಲ್ಲಿ ಸಮಾಜ ಸೇವೆ ಮಾಡಬೇಕಾದ ವಿಚಾರ ಅವರ ಸ್ವಂತಕ್ಕೆ ಬಿಟ್ಟದ್ದು. ಅದನ್ನಿಟ್ಟುಕೊಂಡು ಅವರ ವ್ಯಕ್ತಿತ್ವವನ್ನ ಅಳೆಯೋದು ಮಹಾ ತಪ್ಪು. ಹಾಗೆ ಅವರನ್ನ ಸಮಾಜ ಸೇವೆ ಅಥವಾ ಸುಧಾರಕರನ್ನಾಗಿಸುವ ಪ್ರೇರಣೆ ಅವರನ್ನು ಯಾವತ್ತಾದರೂ ಕಾಡಿದ್ದಲ್ಲಿ, ಖಂಡಿತ ಅವರು ನಮ್ಮ ನಾಡಿನ ರಾಜಕೀಯ ರಂಗಕ್ಕೆ ಬಂದಿರುತಿದ್ದರು. ರಾಜಕಾರಣದ ಮೂಲಕ ಸಮಾಜ ಸುಧಾರಣೆಗಾಗಿ ನಾಡೇ ಅವರಿಗೊಂದು ಮುಕ್ತ ವೇದಿಕೆ ಕೊಡುವಷ್ಟು ಭಕ್ತಿ ಇಡಿ ನಾಡಿನದ್ದಾಗಿತ್ತು ಅವರ ಮೇಲೆ. ಅವರ ಧ್ಯೇಯ ಒಂದೇ ಆಗಿತ್ತು ಕಲಾ ಸೇವೆ. ಕನ್ನಡ ನಾಡಿನ ತಾಯಿ ಭುವನೇಶ್ವರಿಯ ಸೇವೆ. ಅದಕ್ಕೆ ಸಾಕ್ಷಿಯಾಗಿ ಕನ್ನಡಪರ ಹೋರಾಟಗಳಲ್ಲಿ ಅವರು ವಹಿಸುತ್ತಿದ್ದ ಮುಂದಾಳತ್ವಗಳು ನಿಲ್ಲುತ್ತವೆ. ಅಂಥವರು ಕೂಡಾ ಅಭಿಮಾನಿಗಳನ್ನ ಮೊದ ಮೊದಲು ದೇವರಿಗೆ ಹೋಲಿಸಿದರು. ಅಭಿಮಾನಿ ದೇವರುಗಳೇ ಆ ಒಂದೇ ಮಾತಿಗೆ ಅವರು ಕನ್ನಡ ನಾಡಿನ ಕಣ್ಮಣಿಗಳಾಗಿ ಹೋದರು. ಆ ಮಾತು ಪುಷ್ಟಿಗೆ ನಿಲ್ಲುವಂತೆ ಅಭಿಮಾನಿಗಳ ಕುರಿತಾಗಿ ಅವರ ಧೋರಣೆ ಇರುತ್ತಿತ್ತು. ರಾಜ್ ಕುಮಾರ್ ಆಗಲಿ, ವಿಷ್ಣುವರ್ಧನ್ ಆಗಲಿ.. ಅಥವಾ ಇನ್ನಿತರ ಹಿರಿಯ ನಟ ಚೇತನರಾಗಲಿ ತಾವು ದೈಹಿಕವಾಗಿ ನಮ್ಮನ್ನ ಅಗಲಿ ಹೋದರು ಮಾನಸಿಕವಾಗಿ ನಮ್ಮೆಲ್ಲರಲ್ಲೂ ಚಿರಸ್ಥಾಯಿಯಾಗಿ ಉಳಿದುಕೊಂಡಿರುವುದರ ಮೂಲ ರಹಸ್ಯ ಇದೇನೇ. ಅಭಿಮಾನಿಗಳೆಡೆ ಅವರಿಗಿದ್ದ ಸಂಪ್ರೀತಿ, ಸಹೃದಯತೆ, ಸಹೋದರತ್ವ & ಅಭಿಮಾನಿಗಳೆಡೆಗಿನ ಗೌರವ. ಈಗಿನ ಬಹಳಷ್ಟು ಯುವ ನಟರು ಅವರ ಆದರ್ಶಗಳನ್ನ ಕಲಿಯಬೇಕಿದೆ.
ನಟ ರಜನಿಕಾಂತ್ ಕ್ಯಾನ್ಸರ್ ಪೀಡಿತ ತಮ್ಮ ಅಭಿಮಾನಿಯೊಡನೆ ಇಡೀ ಒಂದಿನ ಕಳೆಯೋ ಸರಳತೆಯನ್ನ ಮೆರೆದು ಅವರ ಎತ್ತರವನ್ನ ಇನ್ನೂ ಎತ್ತರಗೊಳಿಸಿ ಕೊಳ್ತಾರೆ. ಈಚೆಗೆ ಅಂತ ಒಂದು ಘಟನೆಯ ಕುರಿತಾಗಿ ಫೇಸ್ಬುಕ್ ನಲ್ಲಿ ಓದಿದ್ದೆ. ನಟ ವಿಷ್ಣುವರ್ಧನ್ ಬಹಳ ಹಿಂದೆ ತುಂಬು ಗರ್ಭಿಣಿಗೆ ಹೆರಿಗೆ ಸೌಲಭ್ಯಕ್ಕಾಗುವಷ್ಟು ಹಣ ಸಹಾಯ ಮಾಡಿದ್ದು.. ನಟ ಶಿವರಾಜ್ ಕುಮಾರ್ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಉತ್ತರಕಾಂಡದ ನೆರೆ ಪರಿಹಾರ ಅಭಿಮಾನಿಗಳಿಂದ ಸಂಗ್ರಹಿತ ಆರು ಲಕ್ಷ ರೂಪಾಯಿಗಳೊಂದಿಗೆ ತಮ್ಮದೂ ಐದು ಲಕ್ಷ ಸೇರಿಸಿ ಕೊಡುವುದು.. ಹೀಗೆ ಅನೇಕ ಉದಾಹರಣೆಗಳು ಅವರ ತಾರಾ ಮೌಲ್ಯವನ್ನ ಇನ್ನಷ್ಟು ಹೆಚ್ಚಿಸುತ್ತವೆ. ಇವೆಲ್ಲ ಈಚೆಗೆ ಫೇಸ್ಬುಕ್ ನಲ್ಲಿ ಓದಿದ ಒಂದೆರಡು ಘಟನೆಗಳಷ್ಟೇ. ಹಾಗೆ ಬೆಳಕಿಗೆ ಬಾರದ ಅದೆಷ್ಟೋ ಘಟನೆಗಳು ಜನಸಾಮಾನ್ಯರ ಹೃದಯದಲ್ಲಿದೆ. ಆ ಹೀರೋನ ಕುರಿತಾಗಿ ನಾ ಕೇಳಿದ ವಿಚಾರಗಳು ಸರಿಯೋ ತಪ್ಪೋ ಪರಾಮರ್ಶಿಸುವ ಪ್ರಯತ್ನ ನಾನು ಮಾಡಿದೆ. ಶಿವಕುಮಾರನನ್ನೂ ಸೇರಿ ಊರಲ್ಲಿ ಬಹಳಷ್ಟು ಹುಡುಗರು ಆ ಮಾತು ನಿಜ ಅಂತ ಅಂದರು..!! ಅದ್ಯಾಕೋ ಆ ಹೀರೋ ಅಸಹ್ಯ ಅನ್ನಿಸೋಕೆ ಶುರು ಆದ. ಅಲ್ಲಿಯ ತನಕ ಅವನ ಮೇಲಿದ್ದ ನನ್ನ ಭರವಸೆಯ ಕನಸುಗಳೆಲ್ಲ ಒಂದೇ ಸರಿ ದ್ವಂಸ ಆದವು. ಅವನಾಗಲಿ ಅಥವಾ ಅಂಥಾ ಧೋರಣೆಯುಳ್ಳ ಯಾರಿಗಾದರೂ ಈ ವಿಚಾರಗಳು ಇನ್ನಾದರೂ ಮನ ಮುಟ್ಟಲಿ. ಅಭಿಮಾನಿಗಳು ಅವರ ಸ್ವತ್ತಲ್ಲ. ಅವರಿಗೊಂದು ವರ. ಅಭಿಮಾನಿಗಳಿದ್ದರಷ್ಟೇ ಅವರಿಗೊಂದು ವರ್ಚಸ್ಸು.. ಅವರಿಗೊಂದು ಮೌಲ್ಯ.. ಅವರಿಗೊಂದು ಬೆಲೆ.. ಅವರಿಗೊಂದು ನೆಲೆ. ಒಂದೇ ಒಂದು ಸಿನಿಮಾವನ್ನ ನೂರು ದಿನ ಓಡುವಂತೆ ಮಾಡಿ ಸ್ಟಾರ್ ಪಟ್ಟ ಕೊಡಿಸಬಲ್ಲ ಶಕ್ತಿ ಅಭಿಮಾನಿಗಳಿಗೆ ಇರುವಂತೆ ಒಂದು ಸಿನಿಮಾವನ್ನ ಬಿಡುಗಡೆಯಾದ ಒಂದು ದಿನವೂ ಓಡದಂತೆ ಫ್ಲಾಪ್ ಮಾಡಬಲ್ಲ ಶಕ್ತಿಯುಂಟು.
ಅದ್ಯಾಕೋ ಈ ಬರಹವನ್ನ ಬರೆಯೋವಾಗ, ರಾತ್ರಿ ಹನ್ನೆರಡಾದರೂ ನನ್ನನ್ನ ಮಗ್ಗುಲಲ್ಲಿ ಮಲಗಿಸಿಕೊಂಡು ಅಮಿತಾಬ್, ರಿಷಿ ಕಪೂರ್, ಮಿತುನ್ ಚಕ್ರವರ್ತಿಯರ ಚಿತ್ರಗಳನ್ನ ಕಣ್ಣು ಮಿಟುಕಿಸದೆ ನೋಡುತ್ತಿದ್ದ ಅಪ್ಪ.. ಮಾಲಾಶ್ರೀಯ ಚಿತ್ರಗಳೆಂದರೆ ಚಿತ್ರ ಶುರುವಾಗುವ ಮುನ್ನ ಊಟದ ತಟ್ಟೆ ಹಿಡಿದು ಕೂತು ಚಿತ್ರ ಮುಗಿಯುವ ತನಕ ಕೈ ತೊಳೆಯದೇ ನೋಡುತ್ತಿದ್ದ ಪಕ್ಕದ ಮನೆಯ ಪುಷ್ಪಕ್ಕ.. ಸುಧಾರಾಣಿಯ ಚಿತ್ರಗಳೆಂದರೆ ಪಕ್ಕದ ಮನೆಯಾದರೂ ಬೇರೆ ಯಾವ ಪ್ರೊಗ್ರಾಮ್ ಗಳನ್ನ ನೋಡಲು ಬಿಡದೆ ಕಾಡಿ ಬೇಡಿ ಹಾಕಿಸಿಕೊಂಡು ನೋಡುತ್ತಿದ್ದ ಮಾಲಕ್ಕ. ರಾಮ್ ಕುಮಾರ್ ಎಂದರೆ ಜೀವ ಬಿಡುವ ಕಾಡಿ.. ಕಲ್ಪಾನಳನ್ನ ನೋಡಿದ ಕೂಡಲೇ ಕಲ್ಲಾಗುತ್ತಿದ್ದ ಅತ್ತೆ.. ಶೃತಿಯನ್ನ ನೋಡಿದೊಡನೆ ಕಣ್ಣೀರುಗರೆಯುತ್ತಿದ್ದ ವೀಣಕ್ಕ.. ಜಯಂತ ಕಾಯ್ಕಿಣಿಯರ ಹಾಡುಗಳನ್ನ ತನ್ನ ಜೀವ ಸ್ವರ ಎಂದುಕೊಳ್ಳುವ & ಯೋಗರಾಜಭಟ್ಟರ ಪರಮ ಶಿಷ್ಯ ಅಂದು ಕೊಳ್ಳುವ ರಾಘ.. ರಮ್ಯ ಎಂದರೆ ಎದೆಯ ಮೇಲೆ ಕೈ ಇಟ್ಟುಕೊಳ್ಳುವ ನಮ್ಮೂರಿನ ಜಗ್ಗ... ಧೋನಿಯನ್ನ ಬೈಯುವುದೇ ತಡ ಅದ್ಯಾಕೆ ಧೋನಿಯನ್ನ ದ್ವೇಷಿಸುತ್ತೀರೋ ಗೊತ್ತಿಲ್ಲಪ್ಪ ಅಂತ ಹಲುಬುವ ನನ್ ಆನ್ಲೈನ್ ಗೆಳೆಯ ಕೃಷ್ಣ... ರಾಜಕುಮಾರರ ಮತ್ತು ಇನ್ನಿತರರ ಅದ್ಭುತ ಚಿತ್ರಗಳನ್ನ ತಮ್ಮ ಬ್ಲಾಗ್ ಮೊಲಕ ಅದ್ಭುತವಾಗಿ ಪರಿಚಯಿಸಿ ಕೊಡ್ತಿರೋ ಶ್ರೀಕಾಂತ್ ಮಂಜುನಾಥ್ ಸಾರ್.. ಇಂಥವರೇ ಇನ್ನು ಅನೇಕರು ಸಾಲು ಸಾಲಿಗೆ ನೆನಪಾದರು. ಅವರದೆಂಥ ಅಭಿಮಾನ..?? ಅವರ ಅಭಿಮಾನವನ್ನೇ ಅಭಿಮಾನಿಸುವಷ್ಟು ವಿಶಿಷ್ಟ ರೀತಿಯದ್ದು ಅವರ ಅಭಿಮಾನ.
ಒಬ್ಬ ಅಭಿಮಾನಿಯ ಬೆಲೆಯನ್ನ ಹಾಗೆ ಅಭಿಮಾನ ವಿರಿಸಿ ಕೊಂಡವರು ತಿಳಿದು ಕೊಳ್ಳದೇ ಹೋದಲ್ಲಿ ಅದು ಅವರು ತಮಗೆ ತಾವು ಮಾಡಿಕೊಳ್ಳುವ ಬಹುದೊಡ್ಡ ನಷ್ಟವಷ್ಟೇ. ಅವರುಗಳಿಂದ ಏನೂ ನಿರೀಕ್ಷೆ ಮಾಡದೆಯೇ.. ಅವರು ನಿರೀಕ್ಷೆ ಮಾಡದುದನ್ನೆಲ್ಲ ಕೊಡಬಲ್ಲ ನಿಜವಾದ ದೇವರುಗಳೇ ಅಭಿಮಾನಿಗಳು. ಅಟ್ ಲಾಸ್ಟ್.. ಒಬ್ಬ ಅಭಿಮಾನಿಯಾಗಿ ನಾವು ಅವರುಗಳಿಂದ ನಿರೀಕ್ಷಿಸಬಹುದಾದರೂ ಏನನ್ನ..?? ಅವರ ಜೊತೆಗೊಂದು ಫೋಟೋ.. ಬಹಳ ಆಸೆ ಪಟ್ಟು ಅವರ ಜೊತೆಗೊಂದು ಉಪಹಾರ.. ಅದೃಷ್ಟವಿದ್ದರೆ ಅವರ ಜೊತೆಗೊಂದಷ್ಟು ಹೊತ್ತು ಅಥವಾ ದಿನವಷ್ಟೇ. ಅವರಿಂದ ನಾವು ಬೇರೆ ಏನ್ನನ್ನು ತಾನೇ ನಿರೀಕ್ಷೆ ಮಾಡಿಯೇವು.. ನಮಗಾಗಿ ಅವರ ಅಷ್ಟೆಲ್ಲಾ ಸಾಧನೆಗಳು ಇರುವಾಗ ಅಲ್ಲವೇ..?? ಜಾಗೋ ಅಭಿಮಾನಿ ದೇವರುಗಳೇ ಜಾಗೋ.. ಯೋಗ್ಯತೆ ಇಲ್ಲದವನನ್ನು ಮೆರೆಸುವುದು.. ಯೋಗ್ಯತೆ ಉಳ್ಳ ಉತ್ತಮ ಪುರುಷನನ್ನು ಅವಮಾನಿಸಿದಷ್ಟೇ ದ್ರೋಹ. ಯಾಕೋ ಇವನ ಮುಂದೆ ವೀರ ಮದಕರಿ ಚಿತ್ರಕ್ಕಾಗಿ ಸುದೀಪ್ ಅಭಿಮಾನಿಗಳು ಮಾಡಿದ್ದು ದೊಡ್ಡದು ಅಂತ ಅನ್ನಿಸಲೇ ಇಲ್ಲ..!!
ಅಂಧಾಭಿಮಾನದ ಪರಮಾವಧಿಯನ್ನು ಸಾದೃಶ್ಯವಾಗಿ ಕಟ್ಟಿಕೊಟ್ಟಿದ್ದೀರಾ ಗೆಳೆಯ.
ReplyDeleteನನಗೆ ಬರುವ ತಮಿಳು ನಾಡಿನ ಕಡೆಯ ಮದುವೆ ಆಹ್ವಾನ ಪತ್ರಿಕೆಗಳಲ್ಲಿ ರಜನಿ, ಜಯ ಲಲಿತ ಮತ್ತು ಕರುಣಾನಿಧಿ ಕಾಣಸಿಗುತ್ತಾರೆ!
ವೀರ ಮದಕರಿ ಬಗ್ಗೆ ನೀವು ಬರೆದದ್ದು ವಾಸ್ತವಕ್ಕೆ ಹತ್ತಿರವಾಗಿದೆ.
wha! sathish. modaleradu pyaragalanthu ettittukolluvanthide. ghataneya kuritu, abhimanada visheshategala kuritu nimma baraha arthapoorna. very nice. kushiyaythu tumbaa..
ReplyDeleteಸುದೀಪ್ ಒಮ್ಮೆ ಡಾ. ಅಜಾದ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಸಿಕ್ಕಾಗ ತುಸು ವಿಪರೀತವಾಗೇ ವರ್ತಿಸಿದ್ದು ಕೇಳಿ ಬೇಸರವೆನಿಸಿತು. ಅಭಿಮಾನಿಗಳು ಏಕೆ ನಮ್ಮೊಂದಿಗೆ ಇಷ್ಟು ಆತ್ಮೀಯತೆಯೊಂದಿಗೆ ನಡೆದುಕೊಳ್ಳುತ್ತಾರೆ ಎಂಬುದು ಸ್ವಲ್ಪ ಸೌಜನ್ಯ ತೋರಿಸಿದರೆ ಸಾಕು ಅವರುಗಳಿಂದ ಯಾರು ಏನನ್ನೂ ಬಯಸುವುದಿಲ್ಲ.
ReplyDeleteನಾನು ೨ವರ್ಷದ ಹಿಂದೆ ಪುನೀತ್ ಹಾಗೂ ರಾಘವೇಂದ್ರ ರಾಜ್ ಕುಮಾರ ಇಬ್ಬರನ್ನು ಭೇಟಿಯಾಗಿದ್ದೆ ಅವರಲ್ಲಿದ್ದ ಸೌಜನ್ಯತೆ, ಅತಿಥಿ ಸತ್ಕಾರ, ಮಾತು ಗೌರವತೆಗೆ ನಾನು ಬೆರಗಾದೆ ನಿಜಕ್ಕೂ ರಾಜ್ ಕುಮಾರ್ ಮಕ್ಕಳು ಹೀಗೆಲ್ಲಾ ಇರುತ್ತಾರ ಎಂದು ನಾನು ಭಾವಿಸಿಯೇ ಇರಲಿಲ್ಲ. ಪುನೀತ್ ರಾಜ್ ಕುಮಾರ್ ತಮ್ಮ ಚಿತ್ರದ ಶೂಟಿಂಗ್ನಲ್ಲಿದ್ದರು ಅದಾಗಲೇ ತಡವಾಗಿತ್ತು ಆದರೂ ಸುಮಾರು ೩೦ ನಿಮಿಷಗಳ ಕಾಲ ಮಾತನಾಡಿ ಶೂಟಿಂಗ್ ನಡೆಯೋ ಸ್ಥಳಕ್ಕೂ ಕರೆದುಕೊಂಡು ಹೋಗಿ ಸುಮಾರು ಹೊತ್ತು ನಮ್ಮ ಜೊತೆ ಸಮಯ ಕಳೆದರು ಮರೆಯಲಾಗದ ಅನುಭವ.
ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಇದು ಅಕ್ಷರಶಃ ಸತ್ಯ. ಒಳ್ಳೆಯ ಲೇಖನ ಸತೀಶ್
ಅಭಿಮಾನದ ರೀತಿಗಳು ವಿಚಿತ್ರವಾಗಿರುತ್ತವೆ ಎನ್ನುವುದನ್ನು ಸರಾಗವಾಗಿ ನಿರೂಪಿಸಿದ್ದೀರಿ!
ReplyDeleteಸತೀಶ್ ,
ReplyDeleteಅಭಿಮಾನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ ಮತ್ತು ಮೆಚ್ಚುತ್ತೇನೆ. ನೀವು ಹೇಳಿದ ನಟನ ದಾರ್ಷ್ಟ್ಯ ಮತ್ತು ಹಣದ ಮೋಹ ಖಂಡನಾರ್ಹವೇ, ಅಭಿಮಾನಿಯೊಬ್ಬನ ಅಂತ್ಯಸಂಸ್ಕಾರಕ್ಕೆ ಬರಲು ಹಣ ಕೇಳಿದವನ ಸಂಸ್ಕಾರದ ಬಗ್ಗೆ ಅನುಮಾನ ಅಸಹ್ಯ ಮೂಡುತ್ತದೆ.
ಒಂದು ಗೊಂದಲ,ನೀವು ಹೇಳಲು ಹೊರಟಿದ್ದು ಉತ್ತರ ಕನ್ನಡ ಅಲ್ಲ ಎನ್ನಿಸುತ್ತದೆ, ಬಹುಶಃ ಅದು ಉತ್ತರ ಕರ್ನಾಟಕ ಇರಬೇಕು. ಉತ್ತರ ಕನ್ನಡದ ಜನರು ಸಂಪನ್ನರು ಅಥವ ಅಭಿಮಾನಶೂನ್ಯರು ಎಂದಲ್ಲ ನಾನು ಹೀಗೆ ಹೇಳುತ್ತಿರುವುದು, ಅಲ್ಲಿಯೇ ಹುಟ್ಟಿ ಬೆಳೆದ ನಾನು ನೋಡಿದ ಮಟ್ಟಿಗೆ ಉತ್ತರ ಕನ್ನಡದವರು ಯಾರ ಬಗ್ಗೂ ಅಷ್ಟೆಲ್ಲ ತಲೆ ಕೆಡಿಸಿಕೊಂಡವರಲ್ಲ , ಮುಂಗಾರುಮಲೆಯಂತಹ ಚಿತ್ರ ಬಂದಾಗಲೂ ಚಿತ್ರ ಮಂದಿರಕ್ಕೆ ಹೋಗಿ ನೋಡಿದವರು ಕಡಿಮೆ ನಮ್ಮಲ್ಲಿ, ಬಲಿ ಕೊಡುವುದು ಎಲ್ಲ ಆಮೇಲಿನ ಮಾತು.
ಚೆಂದದ ಬರಹ ಸತೀ, ನಾಲ್ಕು ವಾಕ್ಯಗಳ ಪುಂಜಗಳನ್ನೇ ಒಂದು ಬ್ಲಾಗ್ ಪೋಸ್ಟ್ ಎಂದು ಓದಿ ಅಭ್ಯಾಸ ಆಗಿರುವ ಮನಸ್ಸಿಗೆ ನಿಮ್ಮ ದೊಡ್ಡ ಬ್ಲಾಗ ಪೋಸ್ಟ್ ಗಳು ಇಷ್ಟ ಆಗುತ್ತವೆ. :) ಬರೀತಾ ಇರಿ.
ಅಭಿಮಾನ ಮನದಲ್ಲಿದ್ದಾಗ ರುಪಾಯಿ ಬೆಲೆ ಹೊರಬಂದಾಗ ನಾಣ್ಯಕ್ಕೆ ತಿರುಗುತ್ತದೆ ಎಂದು ಓದಿದ ವಾಕ್ಯ ನೆನಪಿಗೆ ಬಂತು. ಪಾತ್ರವನ್ನು ಪ್ರೀತಿಸಿದಾಗ ಮಾತ್ರ ಪಾತ್ರಕ್ಕೆ ಬೆಲೆ. ರಾಜ್ ಆಗಲಿ ಬಾಲಣ್ಣ ಆಗಲಿ ಇಷ್ಟವಾಗುವುದು ಅವರು ನಿರ್ವಹಿಸಿದ ಪಾತ್ರಗಳು.. ತೆರೆಯ ಮೇಲಿನ ವ್ಯಕ್ತಿಯನ್ನು ನೋಡಿ ನಿಜ ಜೀವನದಲ್ಲೂ ಹಾಗೆ ಇರಬೇಕು ಅನ್ನಿಸುವುದು ಸಹಜವಾದರೂ ಲೆಕ್ಕಾಚಾರ ತಪ್ಪಬಹುದು ಎನ್ನುವುದಕ್ಕೆ ನಿಮ್ಮ ಲೇಖನ ಉತ್ತಮ ನಿದರ್ಶನ. ಉಪಯುಕ್ತ ಲೇಖನ. ನನ್ನ ಅಚ್ಚುಮೆಚ್ಚಿನ ಸ್ನೇಹಿತರು ಹೇಳುತಿದ್ದರು "ನಾನು ಪಾತ್ರಗಳಿಗೆ ಅಭಿಮಾನ ವ್ಯಕ್ತಿಗಳಿಗಳಲ್ಲ.. ರಾಜೀವ, ಆರು ಪಡಿಯಪ್ಪ, ರಾಮಾಚಾರಿ, ವಿಜಯ್ ಇಷ್ಟವಾಗುತ್ತಾರೆ ಹೊರತು ಅದನ್ನು ನಟಿಸಿದ ತಾರೆಗಳಲ್ಲ" ಎಷ್ಟು ನಿಜ ಅಲ್ಲವೇ
ReplyDelete