Thursday 29 November 2012

ಬ್ಲಾಗ್ ಲೋಕದೊಳಗೆನ್ನ ಮೊದಲ ಬರಹ

 ಬ್ಲಾಗು..

 

ಅದೆಷ್ಟೋ ಅಮೂಲ್ಯ, ಅಮೂರ್ತ, ಅಪೂರ್ವ, ಅವರ್ಣನೀಯ, ಅನಿಯತ, ಅಶೇಷ, ಅಗಾದ, ಅಸಂಖ್ಯಾತ, ಅತ್ತ್ಯುತ್ತಮ ಬರಹ ಸಿರಿಗಳನ್ನು ತನ್ನೊಡಲಲ್ಲಿ ಹರವಿ ಸುಂದರ ರಂಗವಲ್ಲಿಯಾಗಿಸಿ ತೋರಿಸೋ ಅಂಗಳ. ಇಂಥ ಅಂಗಳದಲ್ಲಿ ನಾನೂ ಇನ್ಮುಂದೆ ನನ್ನೊಂದೆರಡು ಪದ ಗುಚ್ಚಗಳ ಹರಡಲು ಅಣಿಯಾಗುತ್ತಿಹೆನೆಂಬ ವಿಚಾರಕ್ಕಾಗಿಯೇ ಈ ಮುನ್ನುಡಿ.

 

e-ಬ್ಲಾಗು, ನಾನೇ ಗೀಚಿದ.. ತೋಚಿದ.. ಮರೆತ.. ಹಾಳು ಕೊರೆತ.. ಅಪರೂಪಕ್ಕೆ ದೊರೆತ ಬರಹಗಳನ್ನ ತುಂಬಿಸಿಟ್ಟುಕೊಳ್ಳಲೆಂದು ಅದೆಷ್ಟೋ ಹಿಂದೆ ನಾನೇ ತಯಾರಿ ಮಾಡಿಟ್ಟು ಕೊಂಡ ಬ್ಯಾಗು. ಇದುವರೆಗೂ ನಾ ಗೀಚಿದ ಅದೆಷ್ಟೋ ಬರಹಗಳನ್ನ ಎಲ್ಲೆಲ್ಲೋ ಕಂಡ ಕಂಡ, ಕಂಡೂ ಕಾಣದ ಜಾಗಗಳಲ್ಲಿ ಹಾಕಿ ಬರುತ್ತಿದ್ದ ನಾನು, ಅದರದ್ದೊಂದು ತುಣುಕನ್ನ ಇಲ್ಲಿ ಹಾಕೋದಕ್ಕೆ ಮಾತ್ರ ಎಲ್ಲಿಲ್ಲದ ಸೋಂಬೇರಿತನ. ಬ್ಲಾಗು ಬರೆಯೋಕೆ ಪೂರ್ತಿ ಸೋಂಬೇರಿ ತನವೇನೂ ಅಲ್ಲದಿದ್ದರೂ ಇಲ್ಲಿಯತನಕ ಅದೊಂದು ಆಸಕ್ತಿ ಇಲ್ಲದ ವಿಚಾರವಾಗಿತ್ತಷ್ಟೇ ಎಂಬುದು ಸತ್ಯ.

 

೨೦೦೯ ರ ಅಕ್ಟೋಬರ್ ನಲ್ಲಿ ಹೊಸದಾಗಿ ನಮ್ಮ ಕಂಪನಿಗೆ ಕೆಲಸಕ್ಕೆ ಸೇರಿದ್ದ ನಾನು ಟ್ರೈನಿಂಗ್ ನಿಮಿತ್ತ ಮದುರೈನಲ್ಲಿ ಇರಬೇಕ್ಕಾದ್ದು ಅನಿವಾರ್ಯವಾಗಿತ್ತು. ಮದುರೈ ಹೋಗುವ ಮೊದಲು ತಿರುಚ್ಚಿ ಯಲ್ಲಾಗಲೇ ಮೂರು ತಿಂಗಳು ಟ್ರೈನಿಂಗ್ ನಲ್ಲಿದ್ದ ನಾನು ಕಂಪ್ಯೂಟರ್ ಅನ್ನು ಮೊದಲ ಬಾರಿ ಬಳಸಿದ್ದೂ ಅಲ್ಲದೆ.. ಜೀ ಮೇಲ್ & ಆರ್ಕುಟ್ ನಲ್ಲಿ ಒಂದು ಖಾತೆ ಕೂಡ ತೆಗೆದಿಟ್ಟು ಕೊಂಡಿದ್ದೆ. ಮದುರೈ ಸೇರಿ ಹತ್ತು ಹದಿನೈದು ದಿನಗಳಾಗಿದ್ದ ನಾನು.. ಆಗಾಗ ಸಿಕ್ಕ ಸಮಯದಲ್ಲೇ ಆಫೀಸ್ ಕಂಪ್ಯೂಟರ್ ನಲ್ಲೆ ಆರ್ಕುಟ್ ನೋಡುವುದು, ತಮಿಳು ಬಾರದ.. ರೂಮಿನಲ್ಲಿ ಟೀ ವಿ ಇಲ್ಲದ.. ಮೊಬೈಲ್ ನಲ್ಲಿ ಇಂಟರ್ನೆಟ್ ಇಲ್ಲದ ನನ್ನಂತಹ ಪಾಮರನಿಗೆ ಅನಿವಾರ್ಯ ಅನಿಸಿದ್ದು ಸಹಜ. ಆರ್ಕುಟ್ನಲ್ಲಿ ಆಗಾಗ ನನ್ನ ಲಿಸ್ಟ್ ನಲ್ಲಿದ್ದ ೨೫-೩೦ ಗೆಳೆಯರಿಗೆಲ್ಲ ಆಗಾಗ ಏನೇನೊ ಗೀಚುತ್ತಿದ್ದ ಕವನದಂತ ನಾಲ್ಕು ಸಾಲುಗಳನ್ನ ಟೆಸ್ಟಿಮೋನಿಯಲ್ಸ್ ಗಳನ್ನಾಗಿ ಅವರಿಗೆ ಕಳಿಸೋದು ಮಾಡ್ತಾ ಇದ್ದದ್ದುಂಟು. ಒಂದು ದಿನ ಆರ್ಕುಟ್ ನ ನನ್ನ ಮೆಸೇಜು ಇನ್ ಬಾಕ್ಸ್ ಗೆ ಕುಮಾರಸ್ವಾಮಿ ಈ-ಕವಿ ಅಂತರ್ಜಾಲ ತಾಣದ ಸಂಸ್ಥಾಪಕರು ಒಂದು ಲಿಂಕನ್ನ ಮೆಸೇಜು ಮಾಡಿದ್ದರು. ಆ ಕೊಂಡಿಯನ್ನು ಕ್ಲಿಕ್ಕಿಸಿದಾಗ ನನಗಾದ ಆನಂದಕ್ಕೆ ಬೇಲಿಯೇ ಇರಲಿಲ್ಲ. ಅಲ್ಲಿಯ ತನಕ ಆರ್ಕಟ್ ನಲ್ಲಿ ಹಾಕಿದ್ದ ಸುಮಾರು ೩೦-೪೦ ಕವನಗಳಲ್ಲಿ ಚೆಂದದ್ದು ಅನ್ನಿಸೋ ಹದಿನೈದು ಹನಿ ಕವನಗಳನ್ನು ಈ ಕವಿ ಅಂತರ್ಜಾಲ ತಾಣದ ಒಂದು ಪೇಜ್ ನಲ್ಲಿ ನನ್ನದೇ ಹೆಸರಿನಲ್ಲಿ ಪ್ರಕಟ ಮಾಡಿಸಿದ್ದರು. ನನ್ನ ಸೀನಿಯರ್ ಉದ್ಯೋಗಿಗಳಾದ ಮುರುಗಾನಂದಮ್ ಸಾರ್, ಸ್ವಾಮೀ ಸಾರ್, ದಯಾಳನ್ ಸಾರ್, ಮೀರಾ, ರಾಜೇಶ್, ಲೋಕನಾಥನ್, ಜಯಕುಮಾರ್, ನನ್ನ ಸಹವರ್ತಿಯಾದ ಕ್ರಿಸ್ಟೊಫರ್ ಎಲ್ಲರಿಗೂ ತೋರಿಸಿ ಬೀಗಿದ್ದೆ. ಹಿರಿ ಹಿರಿ ಹಿಗ್ಗಿ.. ಕುಣಿದು ಕುಪ್ಪಳಿಸಿದ್ದೆ. ನಾ ಅಷ್ಟು ಸಂತೋಷದಿಂದ ಇದ್ದುದನ್ನು ಕಂಡು ಅವರೆಲ್ಲರೂ ಸಂತಸ ಪಟ್ಟದ್ದೆ ವಿನಃ ನನ್ನ ಕವನಗಳನ್ನ ಕಂಡಲ್ಲ. ಕಾರಣ ಅಲ್ಲಿ ನನ್ನ ಹೊರತು ಮಿಕ್ಕೆಲ್ಲಾರೂ ತಮಿಳು ಮತ್ತು ಮಲೆಯಾಳಿ ಮೂಲದವರು.ಆದರು ಆ ಹದಿನೈದೂ ಕವನಗಳನ್ನು ನನಗೆ ತೋಚಿದ ಇಂಗ್ಲೀಷಿನಲ್ಲಿ ಅವರೆಲ್ಲರಿಗೂ ಅನುವಾದಿಸಿ ಅರ್ಥೈಸಿದ್ದೆ. ಏನು ಅರ್ಥವಾಗಿತ್ತ್ಹೋ..?? ವಾವ್ ವೆರಿ ನೈಸ್ ಅಂದಿದ್ದರು. ಆದರೂ ನಾನೇನೋ ಗೀಚಬಲ್ಲೆ... ಒಂದು ಅಧೀಕೃತ ಉತ್ತಮ ಅಂತರ್ಜಾಲ ತಾಣದಲ್ಲಿ ಪ್ರಕಟಣೆಗೆ ಯೋಗ್ಯವುಳ್ಳ ಬರಹಗಳನ್ನ ನಾನು ಬರೆಯ ಬಲ್ಲೆನೆಂಬ ವಿಚಾರದಿಂದಾಗಿ ಎಲ್ಲರಿಗೂ ನನ್ನ ಮೇಲೆ ಒಂಥರಾ ಅಭಿಮಾನ ಬಂದಿತ್ತು. ಈ-ಕವಿಯ ಕುಮಾರ ಸ್ವಾಮಿಯವರು.. ನಿನ್ನ ಕವನಗಳು ಬಹಳ ಚೆನ್ನಾಗಿವೆ, ನೀ ಯಾವ ಮುಜುಗರವಿಲ್ಲದೆ ಕಳುಹಿಸಿಕೊಡು ನಾ ಪ್ರಕಟಿಸುವೆ ಎಂದು ಆಮಂತ್ರಣವಿಟ್ಟಾಗ.. ಸ್ವರ್ಗ ಸೇರಲು ಒಂದು ಹಾಳೆ ಮತ್ತು ಒಂದು ಪೆನ್ನಷ್ಟೇ ಮಾಧ್ಯಮವಾಗಿತ್ತು. ಆದರೂ ಕೆಲಸದ ಒತ್ತಡ ಮತ್ತು ಕಾಲ ಕಾಲಕ್ಕೆ ಕಂಪ್ಯೂಟರ್ ನ ಅಲಭ್ಯತೆ ಇಂದಾಗಿ ಆ ತಾಣಕ್ಕೆ ಮುಂದೆಂದೂ ಬರೆಯಲಾಗಲಿಲ್ಲ. [ಈಗಲೂ ಬರೆಯಲಾಗಿಲ್ಲ].

 

ಮದುರೈ ಮುಗಿಸಿ ಮುಂದಿನ ಟ್ರೈನಿಂಗ್ ತೂತುಕುಡಿಯಲ್ಲಿ ಮಾಡುವಾಗಲೂ ಹಾಗೆಯೇ ಸಿಕ್ಕ ಕೆಲ ಸಂಧರ್ಭಗಳಲ್ಲಿ ಒಂದಷ್ಟು ದಿನ ಕನ್ನಡ ಹನಿಗಳು ಡಾಟ್ ಕಾಂ ನಲ್ಲಿ ನನ್ನ ಕೆಲವು ಕವನಗಳನ್ನು ಕೆಲವು ವಾರಗಳಷ್ಟು ಕಾಲ ಪ್ರಕಟಣೆ ಮಾಡಿಸಿದ್ದೆ.. ಕೊನೆಗೆ ಕೆಲಸದೊತ್ತಡ ಅದರ ಕಥೆಯೂ ಮುಗಿಯಿತು. ಟ್ರೈನಿಂಗ್ ಎಲ್ಲ ಮುಗಿದು ಪೋಸ್ಟಿಂಗ್ ಆರ್ಡರ್ ಬಂತು. ನನ್ನ ಪೋಸ್ಟಿಂಗ್ ಹೊಸೂರಿನಲ್ಲಿ. ನನ್ನ ಗ್ರೂಪ್ ನ ೨೯ ಜನರ ಪೈಕಿ, ೧೧ ಕರ್ನಾಟಕ ಹುಡುಗರ ಪೈಕಿ ಎಲ್ಲರಿಗೂ ಬೆಂಗಳೂರು, ಮೈಸೂರು, ಹಾಸನ, ಕೋಲಾರ ಸೇರಿದಂತೆ ಕರ್ನಾಟಕದ ಹಲವಾರು ಕಡೆ ಪೋಸ್ಟಿಂಗ್ ಸಿಕ್ಕಿತ್ತು. ನಾನು & ಪ್ರಶಾಂತ್ ಅನ್ನೋ ಮಡಿಕೇರಿ ಹುಡುಗ ಮಾತ್ರ ಹೊಸೂರಿಗೆ ಪೋಸ್ಟಿಂಗ್ ಆದದ್ದು. ಅದೂ ಬೆಂಗಳೂರಿಗೆ ಸ್ವಲ್ಪ ಹತ್ತಿರ ಅನ್ನೋ ಸಮಾಧಾನಕರ ವಿಚಾರದ ಮೇಲೆಯೇ ಮರು ಮಾತಿಲ್ಲದೆ ಹೊಸೂರನ್ನು ನಮ್ಮೂರೆಂಬ ಭಾವನೆಯಲ್ಲೇ ಬಿಗಿದಪ್ಪಿದೆವು.

 

ಹೊಸೂರ್ ನಲ್ಲಿ Transformer Oil Testing Laboratory ಯಲ್ಲಿ ಪೋಸ್ಟಿಂಗ್ ಸಿಕ್ಕ ನನಗೆ ಕೆಲಸಕ್ಕೊಂದು ಕಂಪ್ಯೂಟರ್ ಕೂಡ ಸಿಕ್ಕಿತು. ಇನ್ನೇನು ರೋಗಿ ಬಯಸಿದ್ದೂ ಹಾಲು ಅನ್ನ, ಡಾಕ್ಟರ್ ಹೇಳಿದ್ದೂ ಹಾಲು ಅನ್ನ ಅಂದ ಹಾಗಾಯ್ತು. ಕಂಪ್ಯೂಟರ್ ಸಿಕ್ಕಂದಿನಿಂದ ಆಮೆ ವೇಗದಲ್ಲಿದ್ದ ಆರ್ಕುಟ್ ಬಳಕೆ ಜಿಂಕೆ ವೇಗಕ್ಕೆ ಬದಲಾಯಿತು. ಜೊತೆಗೆ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಬರೆಯುತ್ತಿದ್ದ ನನ್ನ ಜಾಳು ಕ್ರಮೇಣ ದೈನಿಕವಾಯಿತು. ಆರ್ಕುಟ್ ನಲ್ಲೆ ಸುಮಾರು ಇನ್ನೂರಕ್ಕೂ ಹೆಚ್ಚು ಹನಿಗಳನ್ನ, ಮೂವತ್ತಕ್ಕೂ ಹೆಚ್ಚು ನೀಳ್ಗವನಗಳನ್ನ ಸುರಿದ ನಾನು.. ನನ್ನದೇ ಒಂದು ಪ್ರತ್ಯೇಕ ಬ್ಲಾಗ್ ಇರಿಸುವ ಬಗ್ಗೆ ಚಿಂತೆ ಮಾಡಲೇ ಇಲ್ಲ.

 

ಆರ್ಕುಟ್ ನಲ್ಲಿ ಬರೆದು ಬರೆದು.. ಬರೆಯಬಲ್ಲ ಕೆಲ ವ್ಯಕ್ತಿಗಳ ಪರಿಚಯದಿಂದಾಗಿ, ಬರೆಯೋಕ್ಕೆಂದೇ ಮೀಸಲಿಟ್ಟ ಕೆಲ ಗ್ರೂಪ್ ಗಳ ಸಹಚರ್ಯದಿಂದಾಗಿ ನಾನೂ ಬದಲಾದದ್ದು.. ನನ್ನ ಬರಹ ಶೈಲಿಯೂ ಬದಲಾದದ್ದು ತಿಳಿಯಲೇ ಇಲ್ಲ. ಕವನಗಳನ್ನ ಇಷ್ಟ ಪಟ್ಟವರು, ಪ್ರೋತ್ಸಾಹಿಸುತ್ತ ಬಂದವರು, ಬರೆದದ್ದನ್ನು ವಿಮರ್ಶಿಸುತ್ತಾ ಬಂದವರು, ಮೆಚ್ಚಿ ಹರಸುತ್ತಾ ಬಂದವರು, ನನ್ನ ಕವನಗಳನ್ನ ಕಂಡು ನನ್ನ ಸ್ನೇಹಿತರಾದವರು ಮಾರ್ಗದರ್ಶನ ವಿತ್ತವರು, ಸಲಹೆಗಳನಿತ್ತವರು, ಇವರೆಲ್ಲರ ಆತ್ಮೀಯ ಸ್ನೇಹದೊರತೆಯಿಂದಾಗಿ ನಾ ಕೂಡ ಬರೆಯಬಹುದೆಂದೂ.. ಬರೆಯಬಲ್ಲೆನೆಂದೂ ನನ್ನಲ್ಲೇ ವಿಶ್ವಾಸ ಮೂಡಿದ್ದು ಸುಳ್ಳಲ್ಲ.

 

ಮೊನ್ನೆ ಮೊನ್ನೆ [ಕಳೆದ ವರ್ಷದ ನವಂಬರ್] ೩ಕ ಯನ್ನು ಸೇರುವ ತನಕ ಯಾರೂ ಪ್ರಶ್ನೆ ಮಾಡದ ನನಗೆ ನಂತರ ೩ಕ ಯಲ್ಲಿ ನನ್ನ ಕವನಗಳನ್ನ ಹಾಕುವುದಕ್ಕೆ ನಿಂತ ನಂತರ ಹಲವಾರು ಮಂದಿ ಕೆಲ ತೊಡಗಿದ್ದು ಒಂದೇ ಸತೀಶ್ ನಿಮ್ಮ ಬ್ಲಾಗ್ ಲಿಂಕ್ ಕೊಡಿ..!! ನನ್ನ ಬ್ಲಾಗ್ ಇಲ್ಲದ ನಾನು ಎಲ್ಲರಿಗೂ ಹೇಳ ತೊಡಗಿದ್ದೊಂದೇ..ನಾ ಬರೆದಿದ್ದೆಲ್ಲಾ ತಂದು ಸುರಿಯೋಕೆ ಬ್ಲಾಗ್ ಬೇರೆ ಬೇಕಾ..?? ಹಿಂಗೆ ಜಾಗ ಸಿಕ್ಕ ಕಡೆ ಸುರಿದರೆ ಸಾಕಲ್ವೆ..?? ಹಾಗಲ್ಲ ಸತೀಶ್, ಎಂಥೆಂಥವರೋ ಒಂದು ಬ್ಲಾಗ್ ಇಟ್ಕೊಂಡು ಖಾಲೀ ಜೋಕ್ಸ್ ಗಳನ್ನ.. ಕೇಳಿದ ಶಾಯರಿಗಳನ್ನ.. ಚಿತ್ರ ಗೀತೆಗಳನ್ನ ತಮ್ಮದೇ ಬ್ಲಾಗ್ ನಲ್ಲಿ ಹಾಕೊಂಡು ಪ್ರಕಟಿಸುವಾಗ.. ಹಲವು ಸಭ್ಯ, ಅರ್ಥಪೂರ್ಣ, ಸರಳವಾಗಿಹ ನಿಮ್ಮ ಕವನಗಳಿಗಾಗಿ ನೀವೊಂದು ಬ್ಲಾಗ್ ಇದ್ದೆ ಹೋದದ್ದು ಖೇದದ ವಿಚಾರ, ಅಕಸ್ಮಾತ್ ನಿಮ್ಮ ಹಳೆಯ ಕವನಗಳನ್ನ ಒಮ್ಮೆಗೆ ಹುಡುಕ ಬೇಕೆಂದಾಗಲೂ ಇಂಥ ತಾಣಗಳಲ್ಲಿ ಅವು ಅಷ್ಟು ಸುಲಭಕ್ಕೆ ಕೈಗೆ ಸಿಕ್ಕೋದಿಲ್ಲ, ಪ್ಲೀಸ್ ಒಂದು ಬ್ಲಾಗ್ ಮಾಡಿ ಅಂದಾಗಲೂ ನಾ ಅದರ ಬಗ್ಗೆ ಅಷ್ಟು ಉತ್ಸಾಹಿತನಾಗದೆ ನಿರುಮ್ಮಳನಾಗಿಬಿಟ್ಟೆ.

 

ಪ್ರದಕ್ಷಿಣೆಯಲ್ಲಿ ರೂಪಕ್ಕನ ರೂಪಾಂತರಂಗದಲ್ಲಿನ ದೈನಂದಿನ ಬದುಕಿನ ಸಹಜ ಘಟನೆಗಳ ಕುರಿತಾದ ಬರಹಗಳು & ಅವುಗಳ ನಿರೂಪಣೆಯಿಂದಾಗಿ ಪ್ರೇರೇಪಿತನಾದ ನಾನು, ಕವನವಲ್ಲದೆ ಇತರ ಪ್ರಕಾರಗಳನ್ನು ಕೂಡ ಬರೆಯೋ ಪ್ರಯತ್ನ ಮಾಡಿ, ಒಂದೆರಡು ಬರಹಗಳನ್ನ ಅನುಭವವುಳ್ಳ ಒಂದಷ್ಟು ಜನರ ಬಳಿ ಹಂಚಿಕೊಂಡು, ಅವರ ಮುಕ್ತ ಅನಿಸಿಕೆ & ಸಲಹೆಗಳನ್ನ ಸ್ವೀಕರಿಸಿ, ಪ್ರಾಯೋಗಿಕವಾಗಿ ನಾನೇ ಹಲವು ಲೇಖನ ಅಥವಾ ಕಥೆಗಳ ತರಹದ ಬರಹ ಗಳನ್ನು ಬರೆದು, ನಾನೇ ಮೊದಲ ಓದುಗನಾಗಿ ನನಗೆ ಕಾಣಿಸುತ್ತಿದ್ದ ತಪ್ಪು ಒಪ್ಪುಗಳ ಕಡೆ ಗಮನ ಕೊಟ್ಟು ತಿದ್ದುಪಡಿ ಮಾಡಿ ಒಂದು ಮಟ್ಟದ ನಂಬಿಕೆಯನ್ನ ನನ್ನ ಮೇಲೆ ನಾನೇ ಬೆಳೆಸಿಕೊಳ್ಳುವವರೆಗೆ ಕಾದು ಕೂತೆ, ಈಗೀಗ ವಿಶ್ವಾಸ ಬಂದಂತಿದೆ ಎದ್ದು ನಿಂತೆ. ಸುಮಾರು ಆರೇಳು ತಿಂಗಳಿಗೂ ಹೆಚ್ಚು ಕಾಲ ಅವರಿವರ ಬ್ಲಾಗ್ ಗಳನ್ನೂ ಅವಲೋಕಿಸುತ್ತಾ.. ಅವುಗಳ ವಿಚಾರ, ನಿರೂಪಣಾ ಶೈಲಿ, ಬರವಣಿಗೆಯ ಧಾಟಿಯನ್ನ ಅವಲೋಕಿಸುತ್ತಿದ್ದೆ. ಈಗಲೂ ಅವಲೋಕಿಸುತ್ತಲೇ ಇರುವೆ. ಇನ್ನು ಅವಲೋಕಿಸುವುದು ಬೇಡ "ಪ್ರಯತ್ನವಿಲ್ಲದ ಕಲಿಕೆ, ಬಂಡವಾಳವಿಲ್ಲದ ವ್ಯವಹಾರದ ತರಹ" ಎಂಬಂತೆ, ಇನ್ಮುಂದೆ ಬ್ಲಾಗ್ ನಲ್ಲೆ ಬರೆಯೋಣ ಕಲಿಯೋದಿದ್ರೆ ಬ್ಲಾಗ್ ಬರ್ಕೊಂಡೆ ಕಲಿಯೋಣ ಅನ್ನೋ ಆಶಯದೊಂದಿಗೆ ಬ್ಲಾಗ್ ಲೋಕದ ಹೊಸ್ತಿಲ ಬಳಿ ನಿಂತಿರುವೆ.

 

"ಚೆಂದಗೆ ಬರೀತೀಯೋ, ಹಿಂಗೆ ಸುಮ್ಸುಮ್ನೆ ಎಲ್ಲೆಂದರಲ್ಲಿ ಹಾಕ್ತಾ ಇದ್ರೆ ಯಾರೂ ಅಷ್ಟು ಗುರ್ತಿಸೋಲ್ಲ.. ನಿಮ್ಮಂತೋರಿಗೆಲ್ಲಾ ಒಂದು ವೇದಿಕೆ ಸಿಗಲ್ಲ, ನೀ ಬ್ಲಾಗ್ ಮಾಡು, ಮಾಡದೆ ಇದ್ರೆ ಕತ್ತೆ ಬಾಲ.. ನೀ ಮಾಡೋದು ಬೇಡ ಬಾ ಮಾರಾಯ ಈಚೆಗೆ ನಂಗೇನು ಬರೆಯೋಕಾಗ್ತಿಲ್ಲ, ಅಷ್ಟು ಚಂದಗೆ ಬರೆಯೋ ಆ ನಿನ್ನ ಬರಹಗಳನ್ನ ಹಿಂಗೆ ಎಲ್ಲೆಂದರಲ್ಲಿ ಎಸೀಬೇಡ, ನನ್ ಬ್ಲಾಗ್ ಗೆ ಪಾರ್ಟ್ನರ್ ಆಗು, ಬಹಳ ದಿನದಿಂದ ಏನೂ ಬರೆಯದ ಹಾಗೆ ಖಾಲಿ ಕೂತಿರೋ ನನ್ನ ಬ್ಲಾಗಿಗೊಂದು ಮುಕ್ತಿ ಕೊಡು. ಆಗಾಗ ನನ್ನ ಹೊಟ್ಟೆ ಉರಿಯೋ ಹಾಗೆ ಬರೆದು ಹಾಕೋ ನೀನು, ಆ ನಿನ್ನ ಬರಹವನ್ನ ನನ್ನ ಬ್ಲಾಗ್ ನಲ್ಲೆ ಹಾಕು. ಅಷ್ಟೂ ಆಗ್ಲಿಲ್ವಾ.. ನೀನೆ ಒಂದು ಬ್ಲಾಗ್ ಮಾಡಿ ಐ ಡೀ ಪಾಸ್ವರ್ಡ್ ನಂಗೆ ಕೊಡು ನಾನೇ ಹಾಕಿ ಮುಂದುವರೆಸ್ತೀನಿ ಅಂತ ಹೆಚ್ಚು ಕಡಿಮೆ ನಾಲ್ಕೈದು ತಿಂಗಳಿಂದ ನನ್ನನ್ನ ಕುಟ್ಟುತ್ತಾ ಇರೋ ರಾಘವ ಚಂದ್ರ, ನನ್ನ ಜೀವ ಹಿಂಡಿ ಹಿಪ್ಪೆ ಮಾಡ್ತಿರೋ ಅವನ ಪ್ರಯತ್ನ ಇಲ್ಲದೆ ಹೋಗಿದ್ರೆ.. ಈವತ್ತಿಗೂ ನಾನು ಬ್ಲಾಗ್ ಮಾಡೋ ಕಡೆ ಮನಸ್ಸು ಮಾಡೋದು ಅಷ್ಟರಲ್ಲೇ ಇತ್ತು. ಈಗ ನಂ ಬ್ಲಾಗ್ ಹುಟ್ಕೊಂಡಿದ್ದೆ ಆದ್ರೆ, ಚೆನಾಗಿ ಬೆಳೆದದ್ದೇ ಆದ್ರೆ, ಖಂಡಿತ ಅದಕ್ಕೆ ರಾಘವನೇ ದೊಡ್ದಪ್ಪನಾಗ್ತಾನೆ.

 

ಟಾಮ್ ಬ್ಲಾಗ್ ಬರೆಯೋ, ಪ್ಲೀಸ್ ಕಣೋ ಅಷ್ಟು ಚೆನ್ನಾಗಿ ಬರೆಯೋ ನೀನು, ಅಲ್ಲಿ ಇಲ್ಲಿ ಹಾಕಿ ಕಾಣದ ಕಾಲದಲ್ಲಿ ಕೈಗೆ ಸಿಗದ ಹಾಗೆ ಮಾಡ್ಕೊಳ್ಳೋ ಬದಲು, ನಿಂದಲ್ಲ ಅಂತ ನಿಂದೆ ಬ್ಲಾಗ್ ಒಳಗಡೆ ಒಂದ್ಕಡೆ ಹಾಕಿ ಇಟ್ಬಿಡು ಅಂತ ಪ್ರಾಣ ತಿಂತಾನೆ ಇದ್ದ, ಮೊನ್ನೆ ಮೊನ್ನೆಯಷ್ಟೇ ತಾನೇ ಒಂದು ಬ್ಲಾಗ್ ಮಾಡಿ, ವಾರದೊಳಗೆ ನಾಲ್ಕೈದು ನಿಬ್ಬೆರಗಗಿಸುವಂಥ ಪೋಸ್ಟ್ ಗಳನ್ನ ಹಾಕಿ, ನನ್ ಹೊಟ್ಟೆಯನ್ನ ನಾಲ್ಕೈದು ಜನ್ಮಕ್ಕಾಗುವಷ್ಟು ಉರಿಸಿ.. ನೋಡು ನಾನೇ ಬ್ಲಾಗ್ ಮಾಡಿದಿನಿ.. ಇನ್ನು ನಿಂಗೇನು ಧಾಡಿ ಅಂತ ಮೊಟಕಿ, ಪ್ಲೀಸ್ ಕಣೋ ಅಂತ ದುಂಬಾಲು ಬಿದ್ದ ಜೆರ್ರಿ ಅಲಿಯಾಸ್ ವೈಶಾಲಿ ಶೇಷಪ್ಪ. ನಾನೇನೆ ಬರೆದರೂ ಹಾಕುವ ಮೊದಲೇ ಮೆಚ್ಚುವ.. ಮೊದಲು ವಿಮರ್ಶಿಸುವ ನೆಚ್ಚಿನ ಗೆಳೆಯ ಅರುಣ್ ನವಲಿ. ಆರ್ಕುಟ್ ಗೆ ಬಂದಂದಿನಿಂದಲೂ ನಾನು ಕವನ ಹಾಕೋಕೆ ಶುರು ಮಾಡಿದಂದಿನಿಂದಲೂ ನಾನು ನಿಮ್ಮ ಕವನಗಳ ಅಭಿಮಾನಿ ಸತೀಶ್ ಅಂತ ನನ್ನನ್ನ ಹುರಿದುಂಬಿಸಿದ ಮಂಜುಳಾ. ಸತೀಶ್ ನಿಮ್ ಬರವಣಿಗೆಯಲ್ಲಿ ಧೃಡತೆ ಇದೆ, ನಿಮ್ಮಲ್ಲಿ ಬರೆಯೋ ಕ್ಷಮತೆ ಇದೆ, ನೀವೊಂದು ಬ್ಲಾಗ್ ಬರೀರಿ ಅಂತ ಆಗಾಗ ಹಠಕ್ಕಿಳಿಯೋ ರೂಪಕ್ಕ. ಬ್ರೋ.. ಪ್ಲೀಸ್ ಒಂದು ಬ್ಲಾಗು ಅಂತ ಮಾಡಿ, ಇಲ್ದಿದ್ರೆ ನಿಮ್ ಕವನಗಳು, ಬೇರೆಯವರ ಹೆಸರಲ್ಲಿ ರಾರಾಜಿಸೋದು ನೋಡಿ ಬೇಸರ ಪಟ್ಕೊಳೋ ಕಾಲ ಬರ್ತದೆ ಅಂತ ತಿಳಿ ಹೇಳಿದ ಅಶೋಕಣ್ಣ. ಆರ್ಕುಟ್ ಪರಿಚಯದ ದಿನದಿಂದಲೇ ಬ್ಲಾಗ್ ಬರೀರಿ ಅಂತ ಬೆನ್ನು ಬಿದ್ದಿರೋ ಸಿರಿ ಅಕ್ಕ. ಚೆಂದ ಬರೀತೀರಿ ಸಾರ್, ಒಂದು ಬ್ಲಾಗ್ ಮಾಡೋದಲ್ವೆ ಅಂತ ಆಗಾಗ ಪ್ರಶ್ನೆ ಮಾಡೋ ಬಾಗಲಕೋಟೆ ವಿಜಿ. ಸತೀಶು ಪ್ಲೀಸ್ ಒಂದು ಬ್ಲಾಗು ಅಂತ ಮಾಡಿ.. ನೀವೆಲ್ಲ ಫೆಸ್ ಬುಕ್ ನಿಂದಾಚೆ ನಮ್ಮ ಬ್ಲಾಗ್ ಲೋಕಕ್ಕೂ ಬೇಕು, ಚೆನ್ನಾಗಿ ಬರೆಯೋದು ಗೊತ್ತು ನಿಮಗೆ ಅಲ್ಲಿ ಬಂದು ಬಹಳ ಜನರ ಬಳಿ ಕಲಿಯಬಹುದು ಅಂತ ಭರವಸೆ ಕೊಟ್ಟ ಪ್ರಕಾಶಣ್ಣ. ಲೋ ತಮ್ಮಯ್ಯ ಒಂದು ಬ್ಲಾಗ್ ಅಂತ ಮಾಡಿ ಅತ್ಲಾಗೆ ಕೈ ತೊಳ್ಕೊಂಡ್ ಬಿಡೋ ಅಂದ ಮಹೇಶಣ್ಣ.. ಲೋ ಸತೀಶ ಎಲ್ರೂ ಹೇಳ್ತಿದಾರೆ, ಒಂದು ಬ್ಲಾಗ್ ಮಾಡೋ ಮಾರಾಯ.. ನಿನ್ನಾಸ್ತಿ ಏನು ಕರಗಿ ಹೋಗಲ್ಲ.. ಇಷ್ಟೇ ಮಾಡಿ ಹೊಟ್ಟೆ ಉರಿಸ್ತೀಯಂತೆ, ಇನ್ನು ಒಂದು ಬ್ಲಾಗ್ ಅಂತ ಮಾಡಿ ಅದನ್ನ ತೋರ್ಸಿ ಹೊಟ್ಟೆ ಉರಿಸೋದನ್ನ ಆಕೆ ಬ್ಯಾಲೆನ್ಸ್ ಇಟ್ಕೊಂಡಿದಿಯ.. ಅದ್ನೂ ಮಾಡಿ ಪುಣ್ಯ ಕಟ್ಕೋ ಅಂತ ರೇಗಿಸೋ ಜಗನ್. ಸತಿ ಒಂದು ಬ್ಲಾಗ್ ಮಾಡಿ ಬಿಡೋ ಪುಟ್ಟ ಅನ್ನೋ ಸತೀಶ್ ಬೀ ಕನ್ನಡಿಗ. ಲಿಂಕ್ ಕೊಡಿ ಅಂತ ಪದೇ ಪದೇ ನನ್ನೊಳ ಮನಸಿಗೆ ಬ್ಲಾಗ್ ಆಸೆ ಬಿತ್ತಿ ಪರೋಕ್ಷವಾಗಿ ಬ್ಲಾಗ್ ಮಾಡುವತ್ತ ಚಿಂತಿಸುವಂತೆ ಮಾಡಿದ ಅಸಂಖ್ಯಾತ ಸ್ನೇಹಿತರೆಲ್ಲರಿಗೂ ನನ್ನ ಬ್ಲಾಗ್ ನ ಈ ಮೊದಲ ಬರಹ ಅರ್ಪಣೆ.

 

ನನ್ನ ಬರಹಗಳನ್ನ ಇಲ್ಲಿಯ ತನಕ ಅಲ್ಲಿ, ಇಲ್ಲಿ, ಎಲ್ಲಿ ಸಿಕ್ಕಿದರೂ ಹರಸಿದ್ದೀರಿ. ಇನ್ಮುಂದೆ ಎಲ್ಲಿ ಸಿಕ್ಕಿಲ್ಲವಾದರೂ ಇಲ್ಲಿ ಸಿಕ್ಕಿಸಿ ಕೊಡೊ ಪ್ರಯತ್ನ ಮಾಡ್ತೀನಿ.. ಅಲ್ಲಿ ಹರಸಿದಂತೆ ಇಲ್ಲೂ ಹರಸಿ.. ಅಲ್ಲಿ ಚೈತನ್ಯ ತುಂಬುವಂತೆ ಇಲ್ಲೂ ತುಂಬಿ. ಅದೆಷ್ಟೋ ಬ್ಲಾಗಿಗರ ಪಾಲಿಗೆ ಅಪರಿಚಿತನಾಗೆ ಉಳಿದು ಕೊಂಡಿಹ ನನ್ನ.. ನಿಮ್ಮೊಳಗೂ ಒಬ್ಬನನ್ನಾಗಿಸಿಕೊಳ್ಳಿ.

 

ಇಂತಿ ನಿಮ್ಮವ

 

-ಸತೀಶ್ ನಾಯ್ಕ್.
ಭದ್ರಾವತಿ.

24 comments:

  1. ತುಂಬಾ ಖುಷಿಯಾಯ್ತು ಕೊನೆಗೂ ನಿನ್ನದು ಅಂತ ಒಂದು ಅಡ್ರೆಸ್ ಮಾಡಿ ನಮಗೆಲ್ಲ ಅಹ್ವಾನ ಪತ್ರಿಕೆ ಕೊಟ್ಟಿದಕ್ಕೆ!:D ಸ್ವಲ್ಪ ತಡವಾಗಿದ್ದರೂ ರಾಘನೆ ನಿನ್ನ ಬ್ಲಾಗ್ ಮನೆ ಕಟ್ಟಿ ಕೈ ತೊಳ್ಕೊತ ಇದ್ದ.:P ನಿನ್ನಂತೆ ನನ್ನ ಬ್ಲಾಗಿಗೂ ರಾಘನೆ ದೊಡ್ಡಪ್ಪನಪ್ಪ!!!:)ಟಾಮ್ ನಮಗೆಲ್ಲಾ ಹೊಟ್ಟೆಕಿಚ್ಚು ತರಿಸುವ ನಿನ್ನ ಕವನಗಳು ಇಲ್ಲೂ ಹರಿದಾಡಲಿ.ನಿನ್ನಿಂದ ಇನ್ನು ಉತ್ತಮ ಬರಹಗಳು ಮೂಡಿ ಬರಲಿ ಎಂಬ ಆಶಯದೊಂದಿಗೆ ನನ್ನ ಎರಡು ಮಾತನ್ನ ಮುಗಿಸುತ್ತೇನೆ.Im new here so are u..together lets grow old(writing)... welcome to the blog world.:)

    ReplyDelete
    Replies
    1. ನಿಜ ವೈಶು.. ನೆಇಬ್ಬರು ಬೆನ್ನು ಹತ್ತಿದ ಬೆಥಾಳಗಲಾಗದ ಹೊರತು. ನಾನೊಂದು ಬ್ಲಾಗ್ ಮನೆ ಕಟ್ಟೋದು ಕನಸೇ ಆಗಿರ್ತಿತ್ತು.

      Thank u Jerry..

      Yes offcourse.. lets grow together.. :)

      Delete
  2. Sathish
    I read your first post....very nice. You have very very good writing talent in you..please post your articles... waiting for it

    ReplyDelete
    Replies
    1. ಅರೆಹೊಳೆ ಸಾರ್.. Thank you very much.. :) ಖಂಡಿತ ಇನ್ಮುಂದೆ ಸತತವಾಗಿ ಬರ್ಯೋ ಪ್ರಯತ್ನ ಮಾಡ್ತೀನಿ.. ಬ್ಲಾಗ್ ಕಡೆ ಆಗಾಗ ಬರ್ತಾ ಇರಿ.

      Delete
  3. ಅಯ್ಯೋ ದೇವಾ ಇಷ್ಟೊತ್ಟಿನವರೆಗೂ ನಿನ್ನ ಹೆಸರಲ್ಲಿ ಬ್ಲಾಗ್ ಇಲ್ಲ ಅಂತಾ ನಂಗೊತ್ತೇ ಇರಲಿಲ್ಲ ಕಣೋ ನೀನಿಲ್ಲದ ಬ್ಲಾಗ್ ಲೋಕನಾ ನಾ ಎಣೀಸಿಯೇ ಇಲ್ಲ ಅಂತೂ ಕೊನೆಗೂ ಬಂದಿದ್ದಿಯ ಬಾ ಎಲ್ಲ ಕಡೆಯಲ್ಲೂ ನಿನ್ನದೆ ಹವಾ ಇರುವಾಗ ಇಲ್ಲೂ ಕೂಡ ಅದೇ ಹವಾ(ಗಾಳಿ) ಬೀಸಲಿ ಒಳ್ಳೇದಾಗ್ಲೀ ಕಣೋ ............ ಬರವಣಿಗೆಯ ದೈತ್ಯ ಪ್ರತಿಭೆಯೊಂದು ಬ್ಲಾಗ್ ಲೋಕದ ತೆಕ್ಕೆಗೆ ಜಾರಿದನೆಂದು ತಿಳಿದು ನಿಜವಾಗಿಯೂ ಸಂತೋಷ ಆಗ್ತಿದೆ ADB......

    ReplyDelete
    Replies
    1. ಸತಿ.. ದೊಡ್ಡ ದೊಡ್ಡ ಮಾತುಗಳು. ನಾನೀಗಷ್ಟೇ ಕಲೀಲಿಕ್ಕಂತಲೇ ಬ್ಲಾಗ್ ಗೆ ಬಂದಿರೋದು ಅನ್ನೋದು ಮಾತ್ರ ಸತ್ಯ. ನಿನ್ನಭಿಮಾನಕ್ಕೆ ನಾ ಯಾವತ್ತಿಗೂ ಋಣಿ. :)

      Delete
  4. Wow...! namma Sathish du Blog....super idhe kano...ninna writing talent namge modle gothitu...ivaga innu hechu hechu baravanige barali...all the very best
    -Rammy

    ReplyDelete
  5. ಪ್ರೀತಿಯ ಸತೀಶ್ ,
    ನೀವು ಬ್ಲಾಗ್ ಲೋಕದೊಳಗೆ ಇಳಿದದ್ದು ತುಂಬಾ ಸಂತೋಷ ಮತ್ತು ನಿಮ್ಮ ಕವನಗಳನ್ನು ಬೇಕಾದಾಗ ಓದಲು ,ಹುಡುಕಲು ಸಿಕ್ಕ ಅಪರೂಪದ ಅವಕಾಶ ಮತ್ತು ಒಳ್ಳೆಯ ಬರವಣಿಗೆಗಳನ್ನು ,ಚಿಂತನೆಗಳನ್ನು ,ಇಲ್ಲಿ ಹಚ್ಹ್ಚಿಬಿಡಿ . ಖುಷಿ ಪಡಲು ನಾವೆಲ್ಲಾ ತಯಾರಾಗಿ ಇದ್ದೇವೆ ....ಸ್ವಾಗತ

    ReplyDelete
    Replies
    1. ರಾಜೇಶ್ ಸಾರ್.. ನೀವು ನನ್ನ ಬ್ಲಾಗ್ ಕಡೆ ಬಂದಿದ್ದು ನೋಡಿ ಬಹಳ ಸಂತೋಷ ಆಯ್ತು. ತುಂಬಾ ಥ್ಯಾಂಕ್ಸ್ ಸಾರ್. ಖಂಡಿತ ನನ್ನ ಕವನ & ಇತರ ಬರಹಗಳನ್ನ ಇಲ್ಲಿ ನೀವು ಕಾಣಬಹುದು. ಆಗಾಗ ಬರ್ತಾ ಇರಿ. ಧನ್ಯವಾದಗಳು.

      Delete
  6. Dear Satish

    Blog Super idhe sati nim kavanagalu facebook alle thumbha odhidini it gives lot of meaning and life to the words. All the very best dear continue writting .... :)

    ReplyDelete
    Replies
    1. Kow.. Thank You Very much for ur Support.. Please continue the same.. Do come again.. :)

      Delete
  7. ನಿಮ್ಮದೇ ಆದ ಒಂದು ಸ್ವಂತ ವಿಳಾಸ ನೋಡಿ ಮನಸ್ಸಿಗೆ ತುಂಬಾ ಖುಷಿಯಾಯಿತು..

    ತೀರಾ ಇತ್ತೀಚೆಗೆ ನೀವು ಒಂದು ಬ್ಲಾಗ್ ನಲ್ಲಿ ಕಾಮೆಂಟ್ ಮಾಡಿದ್ದನ್ನು ನೋಡಿ, ಹಿಂಬಾಲಿಸಿಕೊಂಡು ಬಂದು ನಿಮ್ಮ ಪ್ರೊಪೈಲ್ ನೋಡಿದ್ದೇ. ಕೇವಲ ವ್ಯಕ್ತಿ ಪರಿಚಯವಿತ್ತೇ ಹೊರತು ಯಾವುದೇ ಪೋಸ್ಟ್ ಗಳಿರಲಿಲ್ಲ...ಆಗಲೇ ನಿಮ್ಮನ್ನು ಕೇಳಬೇಕು ಎಂದು ಕೊಂಡಿದ್ದೇ.. ಆದರೆ ಕೆಲವೊಂದು ಒತ್ತಡಗಳಿಂದಾಗಿ ಕೇಳಲಾಗಲಿಲ್ಲ... ನಿಮ್ಮ ಬರಹಗಳ ಅಭಿಮಾನಿಗಳಲ್ಲಿ ನಾನು ಸಹ ಒಬ್ಬಳು. ಎಷ್ಟೋ ಬಾರಿ ನೀವು ಇತರೆ ಸ್ನೇಹಿತರಿಗೆಲ್ಲಾ ಟ್ಯಾಗ್ ಮಾಡಿದ್ದಾಗ ನಾನು ಇಂತಹ ಬರಹಗಳಿಂದ ವಂಚಿತಳಾದನಲ್ಲ ಅಂತ ತೀರಾ ಭಾವುಕಳಾಗಿದ್ದು ಉಂಟು.. ನನಗೆ ಅಂತರ್ಜಾಲ ಸಂಪರ್ಕದ ಕೊರತೆ ಇರುವುದರಿಂದ ಇರುವ ಅಲ್ಪ ಸಮಯದಲ್ಲೇ ನೆನಪುಮಾಡಿಕೊಂಡು ತಮ್ಮ ಎಲ್ಲಾ ಬರಹಗಳನ್ನು ಓದುತ್ತಾ ಇರುತ್ತೇನೆ(ಕೆಲವು ಕಡೆ ಕಾಮೆಂಟ್ ಮಾಡದೇ ಹಾಗೇಯೇ ತುಂಬಾ ಮೆಚ್ಚಿದ್ದುಂಟು)

    ಎಲ್ಲಾ ಕಲಾಕಾರರಿಗೂ ಪ್ರೊತ್ಸಾಹಕರು ಬಹಳ ಮುಖ್ಯ... ನಿಮ್ಮಲ್ಲಿರುವ ಕಲೆಯ ಪ್ರತಿಭೆಯನ್ನು ಹೊರತರುವ ಮೂಲಕ ನಿಮಗೆ ಮತ್ತಷ್ಟು ಬರೆಯಲು ಪ್ರೋತ್ಸಾಹ ನೀಡಿದ ಈ ಕವಿ ಅಂತರ್ಜಾಲ-ಕುಮಾರ ಸ್ವಾಮಿಯವರನ್ನು ಮೆಚ್ಚಲೇ ಬೇಕು.. ಅಂತೂ ಇಂತು ಸ್ನೇಹಿತರೆಲ್ಲರ ಒತ್ತಾಯದ ಮೇರೆಗೆ ತಮ್ಮದು ಆಂತ ಸ್ವಂತ ವಿಳಾಸ ಮಾಡಿ, ನಮಗೆ ನಿಮ್ಮ ಬರಹಗಳನ್ನು ಒದಲು ಅನುವು ಮಾಡಿಕೊಟ್ಟಿದ್ದು ಬಹಳ ಸಂತೋಷದ ವಿಷಯ...

    ReplyDelete
    Replies
    1. ಸ್ನೇಹ ಜಿ. ಆರಂಭದ ದಿನಗಳಿಂದಲೂ.. ಆರ್ಕುಟ್ ಹಳೆ ದಿನಗಳಿಂದಲೂ ನಾನೇನೆ ಗೀಚಿದರೂ ಬಿಡದೆ ಪ್ರೋತ್ಸಾಹಿಸುತ್ತ ಬಂದ ಕೆಲವರ ಪೈಕಿ ನೀವು ಕೂಡಾ ಒಬ್ಬರು.. ನಿಮ್ಮೆಲ್ಲರ ಅನವರತ ಹಾರೈಕೆ ಇಂದಲೇ ಸಣ್ಣ ಪುಟ್ಟದ್ದನ್ನು ಬರೆಯೋಕೆ ನಾ ಕೂಡ ಹಂಬಲಿಸ್ತಾ ಇರೋದು. ನಿಮ್ಮ ಈ ಅಭಿಮಾನ ಸಾರ್ವಕಾಲಿಕವಾಗಿರಲಿ. ತುಂಬು ಹೃದಯದ ಧನ್ಯವಾದಗಳು. ಇಂದು ನಿಮ್ಮ ಜನುಮ ದಿನ.. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. :)

      Delete
  8. ಏನೆಲ್ಲಾ ಹೇಳ್ಬೇಕು ಅಂತಾ ಬಂದೆ... ಏನೂ ಹೇಳದೆ ಹಾಗೆ ಹೋಗ್ತಾ ಇದೀನಿ .......

    ಇಂತಿ ನಿನ್ನ ಬ್ಲಾಗಿನ "ಸೊ ಕಾಲ್ಡ್ ದೊಡ್ಡಪ್ಪ" ರಾಘವ್ {huh :/ xd }
    @ Vaishu, :/ :X

    ReplyDelete
  9. ಏನೇನೊ ಹೇಳೋ ಆಸೆ ನಂಗೂ.. ಆದ್ರೆ ಅದನ್ನ ಇಲ್ಲಿ ಹೇಳಲ್ಲ.. ಎಲ್ಲಾ ಒಟ್ಟಿಗೆ ಕೂಡಾ ಹೇಳಲ್ಲ.. ಯಾರು ಒಪ್ಪಿ ಕೊಳ್ಳಲಿ ಬಿಡಲಿ.. ನೀನು ನನ್ ಬ್ಲಾಗಿನ ದೊಡ್ಡಪ್ಪ ಅನ್ನೋದು ಮಾತ್ರ ಸುಳ್ಳಲ್ಲ.

    Thank You very much Ragha.. :)

    ReplyDelete
  10. ಸ್ವಾಗತ ಗೆಳೆಯ...
    ಬ್ಲಾಗ್ ಎಂಬ ದೊಡ್ಡ ಪ್ರಪಂಚಕ್ಕೆ..

    ನಿನ್ನ ಮನೆ(ನ) ಬಹಳ ಸೊಗಸಗಿದೆ....
    ನಿನ್ನ ಬರಹ ಕೂಡ ಅಷ್ಟೇ ಸೊಗಸಗಿದೆ
    ಹೆಚ್ಚು ಹೆಚ್ಚು...ನಿನ್ನ ನೆನಪಿನ ಬರಹವನ್ನ... ಎಲ್ಲರಂತೆ ನಾನು ಕಾಯುತ್ತಿದ್ದೆನೆ...
    ಶುಭವಾಗಲಿ...ನಿನಗೆ..

    ReplyDelete
  11. ನಿಮ್ಮ ಹೆಸರಲ್ಲೂ ಬ್ಲಾಗ್ ನೋಡಿ ತುಂಬಾನೇ ಸಂತಸ ಆಯಿತು ಸತೀಶ್......ನಿಮ್ಮ ಬರಹಗಳನ್ನು ಮೊದಲಿನಿಂದಲೂ ಇಷ್ಟ ಪಟ್ಟು ಓದುತ್ತಾ ಬನದವನು ನಾನು. ...ಹೀಗೆ ಅಲ್ಲಿ ಇಲ್ಲಿ ಪೋಸ್ಟ್ ಮಾಡುತಿದ್ದ ನಿಮ್ಮ ಅನೇಕ ಬರಹಗಳನ್ನು ಮಿಸ್ ಮಾಡಿಕೊಂಡಿದ್ದು ಇದೆ.....ಎಷ್ಟೋ ಸಲ ಬೇರೆಯವರ ಹತ್ತಿರ ನಿಮ್ಮ ಬಗ್ಗೆ ಮಾತಾಡುವಾಗ ಹೇಳಿದ್ದು ಇದೆ.....ನೀವೊಂದು ಬ್ಲಾಗ್ ಮಾಡಬೇಕಿತ್ತು ಅಂತ....ಹಾಗೆ ನೀವು ಮುಂಬಯಿ ಗೆ ಬಂದಾಗ ಹೇಳಿದ್ದ ನೆನಪು ....ನಿಜವಾಗಿಯೂ ತುಂಬಾನೇ ಖುಷಿ ಆಯಿತು.....ಬ್ಲಾಗ್ ಲೋಕಕ್ಕೆ ಆದರದ ಸ್ವಾಗತ..... ಶುಭವಾಗಲಿ......

    ReplyDelete
    Replies
    1. ಹೌದು ಅಶೋಕಣ್ಣ ಮುಂಬೈನಲ್ಲಿ ನೀವಾಡಿದ ಮಾತುಗಳು ಅಕ್ಷರಸಹ ನಂ ಕಿವಿಯಲ್ಲಿ ಸಣ್ಣದಾಗಿ ಕಂಪಿಸ್ತಿದೆ.. ಕೆಲವರ ಕಥೆಗಳು ಕೂಡ.. :)

      ನಿಮ್ಮೆಲ್ಲರ ಹರಕೆ ಮತ್ತು ಪ್ರೋತ್ಸಾಹ ಗಳ ಭರವಸೆ & ನಂಬಿಕೆಯ ಮೇಲೆಯೇ ಆಲ್ಲಿಲ್ಲಿ ಬರೀತಿದ್ದ ನಾ ಬ್ಲಾಗ್ ಮಾಡೋ ಮನಸ್ಸು ಮಾಡಿದ್ದು.. ಈ ಹರಕೆ ಹಾರೈಕೆ ನಿರಂತರವಿರಲಿ ಅಶೋಕಣ್ಣ.. :)

      Delete
  12. Satish,

    Congratulations.....antoo intoo blog shrusti aaytu! your writings deserve to be having one. Nimma baravanigeya parichayavide nanage, adara bagge hemme ide. Nimma baravanigeya taakattu aritava Ra-1 pattu hiDidu blog shuru maadsiddu mecchuvantaddu.

    And, Ra-1 v.gud - inspiring each-other.............Thats the way of Life :)

    Satish & Ra-1 nimma sneha heege irali - noorkaala.

    Satish - nimma blog endigoo nintalli nillade Saagali payana.

    - Roopa

    ReplyDelete
    Replies
    1. This comment has been removed by the author.

      Delete
    2. ರೂಪಕ್ಕ ಕಡೆಗೂ ಪಪ್ಪು ಪಾಸ್ ಹುವಾ..!!

      ರಾಘವ ಕಾ ಮೆಹನತ್ ಸೆ..


      ಸಹವಾಸದಿಂದ ಸನ್ಯಾಸಿ ಕೆಟ್ಟ ಅನ್ನೋ ಹಾಗೆ.. ನನ್ನ ಬ್ಲಾಗ್ ಮಾಡುವ ಲೆವೆಲ್ ಗೆ ಹಾಳು ಮಾಡಿದ್ದೇ ನಮ್ಮ ಮೂರ್ಕರ ತಂಡ.. ನಾನು ಈ ಥರ ಹಾಳಾಗಿದ್ದಕ್ಕೆ ನನಗೆ ಹೆಮ್ಮೆ ಇದೆ.. :)

      Thank You very much Roopakka.. :)

      Keep Suggestions & Corrections as always.. :)

      Delete
  13. ಈ ತಾಂತ್ರಿಕ ಯುಗದಲ್ಲಿ....ಕಂದನಿಗೆ ಹೆಸರಿಡುವ ಹಾಗೆ...ಈ ಬ್ಲಾಗ್ ಕೂಡ ಒಂದು...ಅದರ ಪಾದಾರ್ಪಣೆ ನಿಮ್ಮ ಧಾಟಿಯಲ್ಲಿ ಮೂಡಿಬಂದಿರುವುದು ಸೊಗಸಾಗಿದೆ..ಅಂತರಂಗದ ಮೃದಂಗ ಬಾರಿಸ ತೊಡಗಿದಾಗ ಕಲೆ ಕಟ್ಟುವ ಕವನಗಳು ಬರುತಿದ್ದವು ನಿಮ್ಮಿಂದ..ಇನ್ನು ನಗಾರಿ ಬಾರಿಸಲು ಶುರುವಾಗಿದೆ..ಲೇಖನಗಳು "ವರ್ಣ" ಮಾಲೆಯನ್ನೇ ಧರಿಸಿ ನಲಿಯುತ್ತವೆ..ಅಭಿನಂದನೆಗಳು ಗೆಳೆಯ..ಮತ್ತು ಬ್ಲಾಗ್ ಲೋಕಕ್ಕೆ ಸ್ವಾಗತ

    ReplyDelete
    Replies
    1. ಶ್ರೀ ಸಾರ್..


      ಧನ್ಯವಾದಗಳು..


      ನಿಮ್ಮ ಪದ ಸಂಪನ್ಮೂಲ ಅಗಾಧ.. ಅದನ್ನ ನೀವು ಉಪಯೋಗಿಸಿ ಕೊಳ್ಳೋ ರೀತಿ ಅಮೋಘ..


      ನೀವು ನನ್ನ ಬ್ಲಾಗ್ ಕಡೆ ಬಂದದ್ದು ಬಹಳ ಸಂತೋಷ ಆಯಿತು.


      ತಪ್ಪುಗಳು ಕಂಡಲ್ಲಿ ಸಲಹೆಗಳಿರಲಿ..

      ಧನ್ಯವಾದಗಳು ಸಾರ್..

      Delete