Sunday 17 February 2013

"ಅಪ್ಪ ಅಂದ್ರೆ ಆಕಾಶ"

ಒಂದು ಸಾಧಾರಣ ಭಾನುವಾರವೆಂದರೆ ನಾವೆಲ್ಲಾ ಏನೇನು ಮಾಡಬಹುದು..??

ನನ್ನಂಥ ಯಂಗ್ ಅಂಡ್ ಎನೆರ್ಜೆಟಿಕ್ ಸೋಂಬೇರಿ ಆದ್ರೆ.. ಅರ್ಧ ದಿನ ಪೂರ್ತಿ ನಿದ್ದೆ ಮಾಡಿ, ಇನ್ನರ್ಧ ದಿನ ನನ್ನದೇ ಮೆಂಟಾಲಿಟಿಯವರ ಜೊತೆ ಕ್ರಿಕೆಟ್ ಆಡಿ ಕಳೆದು ಬಿಡಬಹುದು. ಮತ್ತೂ ಕೆಲವರು ಫ್ರೆಂಡ್ಸ್ ಅಥವಾ ಫ್ಯಾಮಿಲಿಯ ಜೊತೆ ಹೊಸದಾಗಿ ರಿಲೀಸ್ ಆದ ಯಾವುದಾದರೊಂದು ಸಿನಿಮಾಕ್ಕೆ ಹೋಗಬಹುದು. ಮತ್ತೊಂದಿಷ್ಟು ಜನ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಹತ್ತಿರದಲ್ಲಿನ ಪಿಕ್ನಿಕ್ ಸ್ಪಾಟ್ ಗಳಿಗೆ ಹೋಗಿ, ವಿಹರಿಸಿ ಬರಬಹುದು. ಇನ್ನೂ ಕೆಲವರು.. ಟೀವಿ ಇವರನ್ನ ಬಿಡುವ ಇಚ್ಛೆ ಇಟ್ಟರೂ, ಇವರು ಟೀವಿ ಬಿಡದಂತೆ ನೆಲ ಕಚ್ಚಿ ಕೂತು ಬಿಡಬಲ್ಲರು. ಒಂದಿಷ್ಟು ಯುವಕರಾದರೆ ಹೊಸದೊ, ಹಳೆಯದೋ ತಮ್ಮ ಬೈಕ್ ಗಳನ್ನೇರಿ ಒಂದು ರೌಂಡ್ ಲಾಂಗ್ ರೈಡ್ ಹೋಗಿ ಬರಬಹುದು. ಇನ್ನು ಕೆಲವರು ಬಹಳ ದಿನ ಭೇಟಿಯಾಗದೆ ಉಳಿದ ಸಂಭಂಧಿಗಳನೋ.. ಸ್ನೇಹಿತರುಗಳನೋ ಅಥವಾ ಪರಿಚಯದವರನೋ ಭೇಟಿ ಮಾಡಲು ಅವರ ಮನೆಗಳಿಗೆ ತೆರಳಿ ಅವರೊಂದಿಗೆ, ಅವರ ಕುಟುಂಬದೊಂದಿಗೆ ಒಂದಿಷ್ಟು ಸಮಯ ಸಂತಸದಿ ಕಾಲ ಕಳೆದು ಬರಬಲ್ಲರು. ಕೆಲವರು ಊರಿಗೆ ಹೋಗಿ ಬಂದರೆ.. ಇನ್ನು ಕೆಲವರು ತಮ್ಮ ಮನೆ ಕೆಲಸಗಳಲ್ಲಿ ಬ್ಯುಸಿಯಾಗಬಹುದು. ಇನ್ನೊಂದಿಷ್ಟು ಜನ ಮದುವೆಯೋ.. ನಾಮಕರಣವೋ.. ಅಥವಾ ಗೃಹ ಪ್ರವೇಶವೋ ಯಾವುದಾದರೊಂದಕ್ಕೆ ತಮ್ಮನ್ನ ತಗುಲಿಸಿ ಕೊಂಡು, ಹೋಗಿ ಬಂದು ಬಿಡಬಲ್ಲರು. ಅಭಿರುಚಿ ಉಳ್ಳವರು ಮಿಸುಕಾಡದೆ ದಿನ ಪೂರ್ತಿ ಬರೆಯಬಲ್ಲರು.. ಅಲ್ಲಾಡದೆ ಓದಲು ಕೂತು ಬಿಡಬಲ್ಲರು. ಇದೆಲ್ಲದಕ್ಕಿಂತ ಮಿಗಿಲಾದುದನ್ನ ಬಯಸೋ ಬೆರಳೆಣಿಕೆಯಷ್ಟು ಮಂದಿ ಮಾತ್ರ.. ೧೭.೦೨.೧೩ ನೇ ದಿನದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಂತ ಕೆಲ ಕಾರ್ಯಕ್ರಮಗಳಿಗೆ ಹೃನ್ಮನ ತುಂಬಿ ಹೋಗಿ ಬರಬಲ್ಲರು. ಹೌದು ೧೭.೦೨.೧೩ ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ಹನ್ನೊಂದರಿಂದ ಮಧ್ಯಾನ ಒಂದೂವರೆಯ ತನಕ ನಡೆದ "ಅಪ್ಪ ಅಂದ್ರೆ ಆಕಾಶ".  ಎ.ಆರ್. ಮಣಿಕಾಂತ್ ರವರ ಪುಸ್ತಕ ಬಿಡುಗಡೆಯ ಸಮಾರಂಭ ಹಾಗೆ ನನ್ನ ಹಾಗೂ ನನ್ನಂಥ ಮನಸ್ತಿತಿಯುಳ್ಳ ಹಲವರ ಹೃನ್ಮನಗಳನ್ನ ಸ್ಪರ್ಶಿಸಿ, ಸಂತೋಷದ ಸ್ಪರ್ಶವನ್ನಿತ್ತು ಹಸನಾಗಿಸಿದ್ದು ಸುಳ್ಳಲ್ಲ.
 

ತೊಂಭತ್ತು ಕಿ.ಮೀ ಆದರೇನಾಯ್ತು.. ಹೋಗಿ ಬಂದೇ ಬಿಡುವ ಅನ್ನೋ ಭಂಡ ಧೈರ್ಯದಿಂದ ಬೆಳಿಗ್ಗೆ ೭ ಕ್ಕೆ ಎದ್ದು ಸ್ನಾನ ಮುಗಿಸಿ, ಸೆಲೆಕ್ಟ್ ಮಾಡಿಟ್ಟ ಶರ್ಟು ಪ್ಯಾಂಟಿಗೆ ಇಸ್ತ್ರೀ ಪೆಟ್ಟಿಗೆ ತಾಕಿಸಿ, ಇಸ್ತ್ರೀ ಮಾಡಿದ ಬಟ್ಟೆ ಬಿಟ್ಟು.. ಬೇರೆ ಬಟ್ಟೆ ತೊಟ್ಟು..!! ಶೂ ಹಾಕಿ, ಹೊಸ್ತಿಲು ದಾಟಿ, ಅಮೋಘವಾಗಿ ಮನೆಯ ಮುಂಬಾಗಿಲನೆಳೆದು, ಚಿಲಕ ಜಡಿದು, ಬೀಗದ ಬಾಯಿ ಮುಚ್ಚಿ, ಝಲ್ ಝಲ್ ಎನ್ನುವ ಕೀ ಚೈನ್ ನನ್ನು ಜೇಬಿನೊಳಗಿಟ್ಟು ಟೈಮ್ ನೋಡಿದರೆ.. ನಾನ್ಯಾವತ್ತು ನಿನಗಿಂತ ಫಾಸ್ಟ್ ಅನ್ನುವುದನ್ನ ಮರೀಬೇಡ ಅಂತ ಮೊಟಕಿ ಹೇಳುವಂತೆ, ಮೊಬೈಲ್ ೮.೪೦ ನ್ನು ತೋರಿಸುತ್ತಿತ್ತು..!! ಅನೀಶನ ಸಹಾಯದಿಂದ ಬೈಕಿನಲ್ಲಿ ಹೊಸೂರಿನ ತನಕ ಡ್ರಾಪ್ ಮಾಡಿಸಿಕೊಂಡು, ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಹೈವೇ ಯ ಮೇಲೆ ಹೋಗುವ ಕೆ.ಎಸ್.ಆರ್.ಟೀ.ಸೀ ಕೆಂಪು ಬಸ್ಸನು ಅವಸರಕೆ ಹತ್ತಿ, ತಡಬಡಿಸಿ ಕೂತು, ಚಡಪಡಿಸಿ ಕಾಯುತಲಿರುವೆ.. ಬಸ್ಸು ಆಗಿಂದ ಹತ್ತು ನಿಮಿಷವಾದರೂ ಹೊರಡೋದು ಬೇಡವೇ..?? ಅಯ್ಯೋ ನನ್ನ ಕರ್ಮವೇ ಅಂತ, ಯಾವಾಗ್ರೀ ಹೊರಡೋದು ಅಂತ ಕಂಡಕ್ಟರನು ಗುರಾಯಿಸಿದರೆ.. ಇದೋ ಈಗ ಹೊರಟೇ ಬಿಟ್ವು ಅಂತ ಹಲ್ಲು ಗಿಂಜಿದ. ಮುಲಾಜಿಲ್ಲದೆ ಸರಿಯಾಗಿ ೪೩ ರುಪಾಯಿ ಕೊಟ್ಟು ಟಿಕೆಟ್ ಪಡೆದು, ಅದನ್ನು ನಾಲ್ಕು ಮಡಕೆಗೆ ಮಡಚಿ, ಶರ್ಟಿನ ಜೇಬಿನೊಳಗಿಡುವುದೇ ತಡ ಬಸ್ಸು ಸ್ಟಾರ್ಟ್ ಆಯಿತು..!! ನನ್ನ ಮುಖ ನೂರು ಕ್ಯಾಂಡಲ್ ಬಲ್ಬ್ ಆಯಿತು. ಅಲ್ಲಿ ಸ್ಟಾರ್ಟ್ ಆದ ಬಸ್ಸು ನಿಜವಾಗಿಯೂ ಸಿಲ್ಕ್ ಬೋರ್ಡಿನ ತನಕ ಎಲ್ಲಿಯೂ ನಿಲ್ಲದೆ ಓಡಿ ಬಂದಿತ್ತು.. ನನ್ನ ತಲೆಯೊಳಗೆ ಓಡಾಡುತ್ತಿದ್ದ ಸಾವಿರ ಚಿಂತನೆಗಳ ಜೊತೆಗೆ.
 

ನನ್ನ, ಅಶೋಕಣ್ಣನ, ಪ್ರದೀಪನ ಹೊರತು ನಮ್ಮ ತ್ರೀ ಕೆ ತಂಡದಿಂದ ಮತ್ತ್ಯಾರು ಬರದ ವಿಷಯ ಮೊದಲೇ ತಿಳಿದದ್ದರಿಂದ, ಗುರುತಿಸಬಲ್ಲ ಅದೆಷ್ಟು ಮುಖಗಳು ಸಿಕ್ಕ ಬಲ್ಲವು ನನಗೆ ಎಂಬ ಲೆಕ್ಕಾಚಾರದಿಂದಲೇ ಬರುವಾಗ, ಸರಿಯಾಗಿ ಟೌನ್ ಹಾಲಿನ ಸಿಗ್ನಲ್ ಬಳಿ ನಿಂತಿತು ಬಸ್ಸು. ಸಾಕ್ಷಾತ್ ಆ ಸಿಗ್ನಲ್ಲಿನಲಿ ಬಲ ಬದಿಗೆ ಹತ್ತೆಜ್ಜೆ ಹಾಯ್ದರೆ ಸಿಗುವ ರವೀಂದ್ರ ಕಲಾಕ್ಷೇತ್ರ ಕಂಡಿತು. ಹೊರಗೇನು ಅಷ್ಟು ಜನರ ಓಡಾಟವಿಲ್ಲದದ್ದನ್ನು ಕಂಡು ಬಹುಶ ಸ್ವಲ್ಪ ಬೇಗನೇ ಬಂದು ಬಿಟ್ಟೆನೇನೋ ಎನಿಸಿ, ಪೆಚಾಡಿಕೊಂಡು ಕಲಾಕ್ಷೇತ್ರದ ಮೇನ್ ಗೇಟ್ ದಾಟಿ ಒಳ ಬರುತ್ತಿದ್ದಂತೆ.. ಪ್ರದೀಪ್, ಬದರೀ ಸಾರ್, ಶ್ರೀಕಾಂತ್ ಅವರ ಸಿಹಿ ಅಪ್ಪುಗೆಯೊಡನೆ ಭಾರೀ ಸ್ವಾಗತವೇ ಸಿಕ್ಕಿತು..!! ಕುಶಲವೇ, ಕ್ಷೆಮವೇ, ಸೌಖ್ಯವೇ ಎಂದು ಹರಟುತ್ತ ರವೀಂದ್ರ ಕಲಾಕ್ಷೇತ್ರದ ಒಳ ಹೊಕ್ಕೊಡನೆ ಬಾಲು ಸಾರ್, ಪ್ರಕಾಶಣ್ಣ, ಗಿರೀಶ್, ದಿಗ್ವಾಸ್ ರವರ ನಗುಮುಖಗಳ ದರುಶನವಾಯ್ತು. ಸತೀಶ್ ನಿಮ್ಮ ಫೋಟೋ ನನ್ನ ಬಳಿ ಇಲ್ಲ ಕಣ್ರೀ ಅಂತ, ಒಳ್ಳೆ ಮಾಡೆಲ್ ಹಾಗೆ ನನ್ನ ನಿಲ್ಲಿಸಿ ಸುತ್ತಿ ಬಳಸಿ ನಾಲ್ಕೈದು ಫೋಟೋ ಕ್ಲಿಕ್ಕಿಸಿಕೊಂಡ ಪ್ರಕಾಶಣ್ಣ ಮತ್ತು ಬಾಳು ಸಾರ್ ನನ್ನಲ್ಲಿ ನಾಚಿಕೆ ಹುಟ್ಟಿಸಿದ್ದು ಸುಳ್ಳಲ್ಲ. ಮಧ್ಯೆ ಅಲ್ಲಿ ಮಣಿಕಾಂತ್ ಸಾರ್ ಒಮ್ಮೆ ಕಾಣಿಸಿ ಕೊಂಡರೂ, ಅವರು ಭಾರೀ ಅವಸರದಲ್ಲಿದ್ದುದನ್ನ ಅವರ ಹಾವಭಾವಗಳು ಭಾವ ತುಂಬಿ ಹೇಳುತ್ತಿದ್ದವು. ಅವರನ್ನ ಈ ಟೈಮ್ ಗೆ ಡಿಸ್ಟರ್ಬ್ ಮಾಡಿ ಪಾಪ ಕಟ್ಕೊಳ್ಳೋದು ಬೇಡ ಅಂತ ಸುಮ್ಮನಾದೆವು. ಅದೂ ಇದೂ ಹರಟುತ್ತ ನಮ್ಮ ಗಮನ ನೇರ ತಿಂಡಿಯ ಕಡೆ ಹೊರಳಿತ್ತು. ತಿಂಡಿ ಇರೋ ಜಾಗದ ಕಡೆ ತಿರುವು ತೆಗೆದುಕೊಂಡು ತೆರಳುವಾಗ ಸುಲತ, ಸುಷ್ಮಾ, ಶಿವೂ ಸರ್, ದೇಸಾಯಿ ಸರ್ ಇನ್ನೂ ಮುಂತಾದವರ ಮುಖವೂ ಕಂಡವು. ನನಗೊಂದಿಷ್ಟು ಹೊಸ ಪರಿಚಯಗಳ ಖುಷಿ, ಎಲ್ಲರೊಟ್ಟಿಗೆ ಒಂದು ನಗು ಬೀರಿ, ಸ್ವಲ್ಪ ಹರಟಿ, ಸೀದಾ ತಿಂಡಿ ತರುವ ಜಾಗಕ್ಕೆ ತೆರಳಿದೆವು. ಉಪ್ಪಿಟ್ಟು, ಕೇಸರಿ ಬಾತ್.. ಸ್ವಲ್ಪ ವ್ಯಾಕರಣ ಬದ್ಧವಾಗಿ ಹೇಳಿದರೆ ಚೌ ಚೌ ಬಾತ್ ಅನ್ನಿ. ಸತತ ಹುಳಿ ದೋಸೆ, ಇಡ್ಲೀ, ಪೊಂಗಲ್ ಗಳ ರುಚಿಗೆ ನರಳಿ, ರೋಸಿ ಹೋಗಿದ್ದ ನಾಲಗೆಗೆ ಏನ್ ಸುಖ ಅಂತೀರಾ..?? ಅದನ್ನ ತಿಂದೇ ಸವೀಬೇಕು. ಅಲ್ಲಿಯೇ ಗೋಪಾಲ್ ವಾಜಪೆಯ್ ಸರ್ ರವರ ದರುಶನವಾಯ್ತು.. ಪಂಚ ಪುಸ್ತಕಗಳ ಬಿಡುಗಡೆಯ ದಿನ ಅವರನ್ನು ನೋಡಿದ್ದೆನಾದರೂ ಅವರೇ ಅವರೆಂದು ಆಗ ತಿಳಿದಿರಲಿಲ್ಲ.. ಇಲ್ಲಿ ಮೈ ತಡವಿ ಮಾತನಾಡಿಸಿದರು ಪುಳಕವಾಯ್ತು.
 

ಹಾಗೆ ತಿಂಡಿ ಮೆಲ್ಲುತ್ತಲೆ ಎಲ್ಲರ ಹರಟೆ, ಬ್ಲಾಗುಗಳ ಯೋಗಕ್ಷೇಮ, ಬರಹಗಳ ತೂಕಧಾರಣೆ ನಡೆಯುವ ಸಮಯದಲ್ಲಿ ಪ್ರಕಾಶಣ್ಣ, ಬದರೀ ಸಾರ್, ಬಾಲು ಸರ್, ಶ್ರೀಕಾಂತ್ ಸಾರ್ ಗಳ ಬಾಯಿಂದ ಬಂದ "ಸತೀಶ್ ಏನೆ ಹೇಳಿ ನೀವ್ ತುಂಬಾ ಚೆನ್ನಾಗಿ ಬರೀತೀರಿ.. ಹೀಗೆ ಅಂತ ಗೊತ್ತಿರಲಿಲ್ಲ ಬಿಡಿ.. ಅದರಲ್ಲೂ ಪ್ರಕಾಶಣ್ಣ ನ ಕುರಿತು ಬರೆದ ಬರಹ.. ನಿಜಕ್ಕೂ ಗಾಬರಿ ಹುಟ್ಟಿಸಿ ಬಿಟ್ರಪ್ಪ" ಹೀಗೆ ಹೇಳಿ ಮುಗಿಸುವುದರೊಳಗೆ ಅಕ್ಷರ ಸಹ ಹೊಟ್ಟೆ ತುಂಬಿತ್ತು. ಪ್ಲೇಟ್ ನೊಳಗಿದ್ದ ಚೌ ಚೌ ಬಾತ್ ಪೂರ್ತಿ ಖಾಲಿಯಾಗದೆಯೇ..!! ಬ್ಲಾಗ್ ಶುರುಮಾಡಿ ಬರೆಯಲಾರಂಭಿಸಿದ್ದೂ ಸಾರ್ಥಕವಾಯ್ತು ಅನ್ನುವ ಸಮಾಧಾನ. ಅದೇ ಖುಷಿಗೆ ಮತ್ತೊಂದು ರೌಂಡ್ ಕೇಸರಿಬಾತ್ ಹಾಕಿಸಿಕೊಂಡೆ. ಕೇಸರಿಬಾತ್ ಹಾಕುವವ ಕೂಡಾ ನಗುತ್ತಲೇ ಹಾಕಿದ್ದ. ಅದನು ತಿಂದು ಕಾಫಿ ಕುಡಿದು, ಕಪ್ ಎಸೆಯುವುದರೊಳಗಾಗಿ ಕಲಾಕ್ಷೇತ್ರದ ಒಳಗಿನ ಮೈಕ್ ಗಳು ಕುಯ್ಯ್ ಅನ್ನಲಾರಂಭಿಸಿದವು. ಅಲರ್ಟ್ ಆದ ನಾವು ಒಳ ಹೆಜ್ಜೆ ಇಟ್ಟು ನಮಗನುಗುಣವಾದ ಸೀಟ್ ಹುಡುಕುವಾಗಲೇ ಪುಷ್ಪರಾಜ್ ಚೌಟ, ಅತ್ರಾಡಿ ಸುರೇಶ ಹೆಗಡೆ ಸಾರ್, ಪ್ರವೀಣ್, ಅಶೋಕಣ್ಣ, ಸಂಧ್ಯಾ ಇನ್ನು ಮುಂತಾದವರನ್ನು ಕಂಡು ಮುಖ ಅರಳಿ ನಿಂತ ಕಮಲವಾಗಿತ್ತು. ವಾಡಿಯ ಹಾಲ್ ನಲ್ಲಿ ನಡೆದ ಪಂಚ ಪುಸ್ತಕಗಳ ಸಮಯಕೆ ಕೇವಲ ಮುಖ ಪರಿಚಯಕಷ್ಟೇ ಸೀಮಿತವಾಗಿದ್ದ ಇವರೆಲ್ಲರ ನಂಟು ಇಂದು ಆತ್ಮೀಯತೆಯ ಕೊಂಡಿಯ ಬೆಸೆದು ಕೊಂಡಿತ್ತು.
 

ನೆಚ್ಚಿನ ಗಾಯಕರಲೊಬ್ಬರಾದ ಉಪಾಸನಾ ಮೋಹನ್ ಮತ್ತು ತಂಡದವರ ಸುಲಲಿತ ಸುಗಮ ಗೀತೆಗಳ ಮೂಲಕ ಆರಂಭವಾದ ಕಾರ್ಯಕ್ರಮ ಸಭಾಂಗಣಕ್ಕೆ ಹೊಸ ಮೆರುಗು ತುಂಬಿತು. ಮೊದಲ ಹಾಡೇ ಅಷ್ಟು ತನ್ಮಯಗೊಳಿಸಿತ್ತು. "ಎಲ್ಲಾದರೂ ಇರು ಎಂತಾದರೂ ಇರು" ಕುವೆಂಪು ರವರ ಈ ಗೀತೆಯನ್ನ ರಾಜಕುಮಾರ್ ಅವರ ಸಿರಿ ಕಂಠದಲ್ಲಿ ನನ್ನ ಜನ್ಮದ ಪಾಪ ಪೂರ್ತಿ ಕಳೆದು ಹೋಗುವಷ್ಟು ಸಲ ಕೇಳಿದ್ದ ನನಗೆ.. ಇಲ್ಲಿ ಉಪಾಸನ ಮೋಹನ್ ರವರು ಹಾಡಿದ ಈ ಹಾಡು ನಿಜಕ್ಕೂ ಅಚ್ಚರಿಯ ಮೂಡಿಸಿತು. ಕಾರಣ ಅದಕ್ಕೆ ಅವರೇ ಕಂಪೋಸ್ ಮಾಡಿದ್ದ ಬೇರೆಯದೇ ಧಾಟಿಯ ರಾಗ ಮತ್ತದರ ಮಾಧುರ್ಯತೆ. ಕನ್ನಡದ ಜನಪ್ರಿಯ ಭಾವಗೀತೆಗಳನ್ನ ಒಮ್ಮೆ ನೆನಪಿಸಿಕೊಳ್ಳಿ..!! ನಿಮ್ಮ ನೆನಪಿನ ಮೊದಲ ಯಾದಿಯಲ್ಲಿ ಬರುವ ಬಹುತೇಕ ಎಲ್ಲಾ ಹಾಡುಗಳನ್ನು ಉಪಾಸನಾ ತಂಡದವರು ಹಾಡಿ ಮನಸ್ಸನ್ನು ಸಂತೃಪ್ತಿ ಗೊಳಿಸಿದರು. what a start for the program .?? ನಿಜಕ್ಕೂ ಕರ್ಣಾನಂದಮಯ.. ನಯನ ಮನೋಹರ.
 

ವೇದಿಕೆಯನ್ನಲಂಕರಿಸಿದ ವಿಶ್ವೇಶ್ವರ ಭಟ್, ನಟಿ ಭಾವನಾ, ನೆಚ್ಚಿನ ಕವಿಗಳಲ್ಲೊಬ್ಬರಾದ ಹೆಚ್ಚೆಸ್ವಿ ಮತ್ತು ಯೋಗರಾಜ್ ಭಟ್ಟರ ನಂತರ ಅತಿ ಪ್ರಿಯರಾದ ನಿರ್ದೇಶಕ ಗುರುಪ್ರಸಾದ್. ಇವರೆಲ್ಲರನ್ನು ಜೀವನದೊಳಗೆ ಮೊದಲ ಬಾರಿ ನೇರವಾಗಿ ಕಂಡ ಸಂತೋಷ. ಅದೂ ವೇದಿಕೆಯ ಮೇಲೆ. ಅವರ ಜೊತೆ ಪುಸ್ತಕದ ಕರ್ತೃ ಮಣಿಕಾಂತ್ ಸಾರ್. ಇವರೆಲ್ಲರ ಅಸೀನದ ಬಳಿಕ ವೇದಿಕೆಯ ಅಂದ ಹೆಚ್ಚಿದ್ದು ಸುಳ್ಳಲ್ಲ. ವಿಶ್ವೇಶ್ವರ ಭಟ್ಟರ ಬಗೆಗೆ ಹೇಳುವುದೇ ಬೇಡ.. ಬಹುತೇಕ ನಾಡಿನವರೆಲ್ಲರಿಗೂ ಅವರ ಮತ್ತು ಅವರ ಬರಹಗಳ ಒಂದಿಷ್ಟು ಪರಿಚಯವಾದರೂ ಇದ್ದೀತು. ಇನ್ನು ಭಾವನ.. ಇವರ ಚಂದ್ರಮುಖಿ ಪ್ರಾಣಸಖಿ ಮತ್ತು ನಂ.೧ ಚಿತ್ರಗಳ ಪಾತ್ರಗಳು ಇವತ್ತಿಗೂ ಕಾಡಿಸುತ್ತವೆ. ಕವಿ ಹೆಚ್ಚೆಸ್ವಿ ಯವರು ನನ್ನ ಬಳಿ ಇರುವ ಅಸಂಖ್ಯ ಭಾವಗೀತೆಗಳ ನೆಪದಲ್ಲಿ ದಿನಕ್ಕೊಮ್ಮೆಯಾದರೂ ಕಿವಿಯ ತಾಕಿ ಹೋಗುತ್ತಾರೆ. ಇನ್ನು ಗುರುಪ್ರಸಾದ್ ಮಾತಿನ ಮಲ್ಲ, ಬರೆಯುವುದರಲ್ಲಾದರೂ ಸರಿ, ಆಡುವುದರಲ್ಲಾದರೂ ಸರಿ. ಒಂದು ಟ್ರೆಂಡ್ ನಿರ್ದೇಶಕ. ಕನ್ನಡ ಚಿತ್ರರಂಗದಲ್ಲಿ ಭರವಸೆ ಇಡಬಹುದಾದ ಕೆಲವೇ ನಿರ್ದೇಶಕರಲ್ಲಿ ಒಬ್ಬ. ಅವರು ಕೇವಲ ಸಿನಿಮಾ ನಿರ್ದೇಶಕರಾಗಿ ಅಲ್ಲ.. ಡೈರೆಕ್ಟರ್ ಸ್ಪೆಶಲ್ ಎನ್ನುವ ಅವರ ಪುಸ್ತಕವನ್ನೋದಿದ ನಾನು ಅವರ ಸಾಹಿತ್ಯದ ಅಭಿಮಾನಿಯೂ ಹೌದು.
 

ಸೀ ಎನ್ ಎನ್ ನಿಂದ ರಿಯಲ್ ಹಿರೋಸ್ ಎಂಬ ಬಿರುದು ಭೂಶಿತರಾದ ನಮ್ಮ ರಿಯಲ್ ಹೀರೋಸ್ ಗಳ ಪರಿಚಯ, ಅವರುಗಳ ಕಾರ್ಯ, ಮತ್ತವರುಗಳಿಗೆ ನಡೆದ ಸನ್ಮಾನ ಬಹುಷಃ ಅಲ್ಲಿ ನೆರೆದ ಎಲ್ಲರ ಹ್ರುನ್ಮನಗಳನೂ ತಾಕಿ, ಎಲ್ಲರ ಕಣ್ಣುಗಳಲೂ ಒಂದಿಷ್ಟು ತೇವದ ಪಸೆ ಮೂಡಿಸಿದ್ದು ಖರೆ. ಸುನಾಮಿಯಲ್ಲಿ ಹೆತ್ತ ಮಕ್ಕಳ ಕಳೆದು ಕೊಂಡ ಚೂಡಾಮಣಿ ದಂಪತಿಗಳು ತದನಂತರ ಆ ದುಃಖದಿಂದ ಪ್ರೇರೇಪಿತರಾಗಿ  ಮೂವತ್ತು ಮಕ್ಕಳನ್ನು ಇಂದು ಪೋರೆಯುತ್ತಿರೋದು ನಿಜಕ್ಕೂ ನಮ್ಮಿಂದ ಒಂದು ಹಾಟ್ಸ್ ಆಫ್ ಮೂಡಿಸದೆ ಇರದು. ಮುನ್ನೂರು ಭಿಕ್ಷುಕರನ್ನು ಸಲಹಿ ಪೋರೆಯುತ್ತಿರೋ ಆಟೋ ರಾಜಣ್ಣ ನ ಮಾನವೀಯತೆ, ಸಾವಿರಾರು ಭಿಕ್ಷುಕರ ಸಾವಿನ ನಂತರದ ಅಂತ್ಯ ಸಂಸ್ಕಾರದಲಿ ಸಾರ್ಥಕತೆಯನ್ನು ಕಂಡುಕೊಂಡ ಅವರ ದೈವಿಕತೆ.. ಎಂಥವರ ಹೃದಯವನ್ನೂ ಕರಗಿಸಿ ಬಿಡಬಲ್ಲದು. ಸಾಧಾರಣ ಕ್ಶೌರಿಕರಾಗಿದ್ದ ರಮೇಶ್ ಬಾಬು.. ಇಂದು ಜಗತ್ತಿನ ಅತೀ ಐಶಾರಾಮಿ ಕಾರುಗಳನೂ ಸೇರಿ ಸುಮಾರು ೧೬೫ ಕಾರುಗಳ ಒಡೆಯರಾದ.. ೧೧೭ ಕ್ಕೂ ಹೆಚ್ಚು ಡ್ರೈವರ್ಗಳಿಗೆ ಅನ್ನದಾತರಾದ ಅವರ ಯಶೋಗಾತೆ.. ಇಷ್ಟಾದರೂ ಅವರ ಮೂಲ ವೃತ್ತಿ ತೊರೆಯದ ಅವರ ವೃತ್ತಿಪರತೆ ಎಂಥವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ. ಇನ್ನು ಹದಿನಾರು ವರುಷ ಶಾಲೆಗೇ ಹೋಗದ ಒಬ್ಬ ಹುಡುಗ ರಮೇಶ್ ಬಲ್ಲಿದ್, ಇಂದು ಇಂಗ್ಲೀಶರೆ ನಾಚುವಂತೆ ನಿರರ್ಗಳ ಇಂಗ್ಲೀಷು ಮಾತಾಡುವುದಲ್ಲದೆ.. ಖಾಸಗಿ ಬೀ ಪೀ ಒ  ಕಂಪನಿಯೊಂದರಲ್ಲಿ ಕಂಪ್ಯೂಟರ್ ವಿಭಾಗದ ಟೀಮ್ ಲೀಡರ್ ಆದ ಬಗೆ ಎಂಥವರಲ್ಲೂ ಆತ್ಮವಿಶ್ವಾಸವ ಬೇರೂರಿಸುತ್ತದೆ. ವೇದಿಕೆಯ ಮೇಲೆ ಅವರು ಪರಿಚಯಿಸಿದ ಸಾಧಕರಿಷ್ಟು.. ಕ್ಷಮಿಸಿ ಕೇವಲ ಸಾಧಕರಲ್ಲ ಮಾಹಾನ್ ಚೇತನಗಳಿಷ್ಟು. ಹಾಗೆ ಸಾಧಿಸಿದವರ ಕುರಿತ ಅಸಂಖ್ಯ ಉದಾಹರಣೆ ಈ ಹಿಂದಿನ ಅಮ್ಮ ಹೇಳಿದ ಎಂಟು ಸುಳ್ಳುಗಳು ವಿನಲ್ಲೂ ಇತ್ತು.. ಈಗ ಅಪ್ಪ ಅಂದ್ರೆ ಆಕಾಶದಲ್ಲಿಯೂ ಇದೆ. ಅದರ ಕುರಿತು ಇಲ್ಲಿ ಪ್ರಸ್ತಾಪಿಸುವುದಕ್ಕಿಂಥ ಅದನ್ನು ಓದಿಯೇ ಅದರ ಸವಿ ಅನುಭವಿಸಬೇಕು.
 

ನಿಜವಾಗಿಯೂ ಹೇಳಬೇಕೆಂದರೆ ಅಲ್ಲಿ ಇವರೆಲ್ಲರ ಹೊರತಾಗಿಯೂ ನನಗೆ ಇವರೆಲ್ಲರಿಗಿಂತ ಎತ್ತರದ ಸಾಧಕರೆನಿಸಿದ್ದು ಮಣಿಕಾಂತ್ ಸಾರ್. ಇವರಿಗೆ ಶ್ರವಣ ದೋಷವಿದ್ದ ಕುರಿತು ನಂಗೆ ತಿಳಿದಿರಲಿಲ್ಲ. ಕೇವಲ ಶೇರು ಮಾರುಕಟ್ಟೆಯ ಲೆಕ್ಖಾದಾರಿತ ಕುರಿತ ಸಣ್ಣ ವೃತ್ತಿಯಲಿ ಆರಂಭಿಸಿದ ಮಣಿಕಾಂತ್ ಸಾರ್, ಒಂದು ಸಂಚಿಕೆಯ ಸಣ್ಣ ಬರಹಗಾರರಾಗಿ, ಈಗ ಒಂದು ಯಶಸ್ವಿ ಅಂಕಣದ ರುವಾರಿಯಾಗಿ ಬೆಳೆದು ಬಂದ ಅವರ ಯಶೋಗಾತೆ.. ಇಂದು ಏರಿ ನಿಂತ ಎತ್ತರವ ಕಂಡಾಗ ಯಾರಿಗೂ ಇದು ಸಾಧನೆಯಲ್ಲದೇ ಮತ್ತಿನ್ನೇನಾಗಿಯೂ ತೋರಲಾರದು. ತಮಗೆ ಸರಿಯಾಗಿ ಕೇಳದಿದ್ದರೂ ಹೆಂಡತಿಯ, ಮಗಳ ಸಹಾಯ ಪಡೆದು ಈ ಸಾಧಕರೆಲ್ಲ ಹತ್ತಿರ ಹರಟಿ ಆ ಮಾಹಿತಿಗಳನೆಲ್ಲ ಹೆಕ್ಕಿ, ಕ್ಷಮಿಸಿ ಅದು ಕೇವಲ ಮಾಹಿತಿಗಳಲ್ಲ ಅವರ ಮನದಾಳದ ನೋವ ಮಾತುಗಳ ಹೆಕ್ಕಿ. ಅವಕೆ ಭಾವುಕತೆಯ ಸ್ಪರ್ಶವಿತ್ತು.. ಪ್ರತಿಯೊಬ್ಬರ ಎದೆ ತಟ್ಟುವಂತೆ ನಿವೇದಿಸಿ, ಪ್ರತಿಯೊಬ್ಬರಿಗೂ ಆತ್ಮ ವಿಶ್ವಾಸ ಚಿಗುರುವಂತೆ ಬರೆದಿರುವ ಮಣಿಕಾಂತ್ ಸರ್ ಅವರ ಕುರಿತಾದ ಅಭಿಮಾನದ ಎತ್ತರ ಮತ್ತು ಗಾತ್ರ ಇಂದು ಇನ್ನೂ ಒಂದು ಮಣ ಜಾಸ್ತಿಯೇ ಆಯಿತೆನ್ನಿ. ಹಾಟ್ಸ್ ಆಫ್ ಟು ಯೂ ಮಣಿ ಸಾರ್.
 

ಭಾವನರವರ ಪುಸ್ತಕದ ಕುರಿತಾದ ಅವರ ಮನದ ನುಡಿಗಳು ಅವರ ದನಿಯಷ್ಟೇ ಇಂಪಾಗಿತ್ತು. ಅವರ ಸ್ನಿಗ್ಧ ಸುಂದರ ಮುಖದಷ್ಟೇ ಸುಂದರವಾಗಿತ್ತು. ಇನ್ನು ಗುರುಪ್ರಸಾದ್ ಸಾರ್ ಅವರ ಮಾತು.. ಅವರ ಮಠ ಮತ್ತು ಎದ್ದೇಳು ಮಂಜುನಾಥ ಗಳ ನಂತರ ಅವರ ಮಾತುಗಳನ್ನ ಕೇಳುವುದೆಂದರೆ ಒಂಥರಾ ಹುಚ್ಚು ಅಂತಲೇ ಅಂದುಕೊಳ್ಳಿ. ಅವರು ಮಾತು ಶುರು ಮಾಡಿದರಿಂದ ಹಿಡಿದು ಮಾತು ಮುಗಿಯುವವರೆಗೂ ಯಾರೊಬ್ಬರ ಚಪ್ಪಾಳೆಗಳು ನಿಲ್ಲಲಿಲ್ಲ. ಯಾರೊಬ್ಬರ ಮುಖದಲ್ಲಿ ನಗು ಮಾಸಿ ಹೋಗಲಿಲ್ಲ. ಅವರೇ ಹೇಳುವಂತೆ ನಮ್ಮ ಆ ಕ್ಷಣಕೆ ನಮ್ಮ ಸ್ವಂತಿಕೆಗಳೆಲ್ಲನ್ನವನ್ನೂ ಮರೆತು.. ಹುಚೆದ್ದು ಎರಡೂ ಕೈಗಳು ಬಡಿದ ನಾವು ಅಗತ್ಯಕ್ಕಿಂತಲೂ ಜಾಸ್ತಿಯೇ ಕೊಬ್ಬಿಳಿಸಿ ಕೊಂಡೆವು ಅನ್ನಿಸುತ್ತದೆ. ಕರ್ನಾಟಕವನ್ನು ಒಡೆದು ಕರ್ಣ ಗಳಿಗೆ ಅಪ್ಪಳಿಸುವ ಸಿಹಿ ತಾಗುವಿಕೆಯ ಅನುಭವದ ಭಾಷೆಯೇ ಕನ್ನಡವೆನ್ನುವ ಅಭಿಮಾನದ ಮಾತಿನಿಂದ ಹಿಡಿದು.. ಪುಸ್ತಕವನ್ನು ದಯವಿಟ್ಟು ಯಾರಿಗೂ ಫ್ರೀ ಯಾಗಿ ಕೊಡಬೇಡಿ ಇದು ನನ್ನಪ್ಪ ನಿಮಗಾಗಿ ಕೊಟ್ಟ ನೂರು ರುಪಾಯಿ ಎಂದು ಮಣಿಕಾಂತ್ ರವರ ಕೈಗೆ ನೂರು ರುಪಾಯಿ ಕೊಡುವ ತನಕ ಅವರ ಮಾತುಗಳ ಸಿಹಿಯನ್ನು ಅಸ್ವಾಧಿಸದವರಿಲ್ಲ. ಇನ್ನು ವಿಶ್ವೇಶ್ವರ ಭಟ್ ಸಾರ್ ರವರ ಮಾತುಗಳಲ್ಲಿ, ಮಣಿಕಾಂತ್ ಸಾರ್ ರವರ ಕಾರ್ಯ ರೀತಿ, ಅವರ ಶಕ್ತಿ, ಪ್ರತಿಭೆ, ದಕ್ಷತೆ ಮತ್ತವರ ಸಾಧನೆಗಳ ಅನಾವರಣ ನಿಜಕ್ಕೂ ಮಣಿಕಾಂತ್ ಸಾರ್ ಮೇಲಿನ ಅಭಿಮಾನವನ್ನ ಇಮ್ಮಡಿಗೊಳಿಸುವಂತಿತ್ತು. ಬರೀ ಅತ್ಯಾಚಾರ, ಭ್ರಷ್ಟಾಚಾರ, ಕೊಲೆ, ದರೋಡೆ, ಸುಲಿಗೆ, ಕಳ್ಳತನ, ರಾಜಕೀಯ, ರಕ್ತಪಾತ ಇವುಗಳನ್ನೇ ಮುಖ್ಯವಾಗಿ ಭಿತ್ತರಿಸುತ್ತಿಹ ಮಾಧ್ಯಮಗಳು ಇವತ್ತು ಇಂಥ ಸಾಧಕರ, ಇಂಥಾ ಮನುಷ್ಯತ್ವದ ಮಾದರಿ ರೂಪಿಗಳಾದ ಇಂಥವರ ಕುರಿತು ಮುಖಪುಟ ಅಥವಾ ಮುಖ್ಯ ಸುದ್ಧಿಯಾಗಿ ಭಿತ್ತರಿಸಬೇಕು. ಆಗಲೇ ದಯೆ, ಕರುಣೆ ಮಾನವೀಯತೆಗಳು ಜಗದೊಳಗೆ ಇನ್ನೂ ಅದೆಷ್ಟು ಜನರಲ್ಲಿದೆ ಎಂಬ ಸಮಾಧಾನಕರ ಭಾವವೊಂದನ್ನ ಮೂಡಿಸಬಹುದು. ಇಂಥಾ ಮನುಷ್ಯತ್ವದ ಮೂರ್ತಿಗಳಲ್ಲಿ ನಾವು ಖಂಡಿತ ದೇವರನ್ನು ಕಾಣಲು ಸಾಧ್ಯ ಅಕ್ಷರಸಹ ನಿಜ. ಕುರಿತು  ನೋವ ಬಳಸಿ, ಅನುಭವಿಸಿ ಬರೆದೋನೆ ಕವಿ ಎಂಬ ದಿವ್ಯ ನುಡಿಯ ಜೊತೆ ಹಲವು ಚಮತ್ಕಾರೀ ಚಿತ್ತಾಕರ್ಷಕ ಮಾತುಗಳಿಂದ ನೆಚ್ಚಿನ ಕವಿ ಹೆಚ್ಚೆಸ್ವೀ ನಮ್ಮೆಲ್ಲರನ್ನೂ ಸೆಳೆದರು.
 

ನಿಜ ಗುರುಪ್ರಾಸಾದ್ ಸಾರ್ ಹೇಳುವಂತೆ ಈ ದಿನಗಳಿಗೆ ನೂರು ರುಪಾಯಿ ಅಂದ್ರೆ ನೂರು ರುಪಾಯಿಗೆ ಏನೇನೂ ಬರೋಲ್ಲ. ೨ ಕೆಜೀ ಅಕ್ಕಿ ಬರೋಲ್ಲ.. ಎರಡು ಕಿಲೋ ತರಕಾರಿ ಬರಲ್ಲ.. ಒಂದು ಕಿಲೋ ಬೇಳೆ ಬರೋಲ್ಲ.. ಒಂದು ಪ್ಯಾಕ್ ಸಿಗರೇಟ್, ಒಂದು ಕ್ವಾರ್ಟರ್ ಎಣ್ಣೆ ಯಾವುದೆಂದರೆ ಯಾವುದೋ ಬರಲ್ಲ. ನೂರು ರುಪಾಯಿಗೆ ನಿಜಕ್ಕೂ ಮಣಿ ಸಾರ್ ನಮ್ಮೆಲ್ಲರಿಗೆ ಒಂದು ಉತ್ತಮ ಪುಸ್ತಕ ಕೊಟ್ಟಿದಾರೆ. ಅದರಲ್ಲಿ ಬದುಕು ಕಟ್ಟಿಕೊಳ್ಳುವ ಕಲೆಯ ಕುರಿತ ಸ್ಫೂರ್ತಿ ಚಿಲುಮೆಗಳಿವೆ.. ಒಂದಿಷ್ಟು ಸಿದ್ಧ ಸೂತ್ರಗಳಿವೆ. ಬದುಕಲ್ಲಿ ಸೋತವರಿಗೆ ಗೆಲ್ಲುವ ಛಲ ತುಂಬುವ ಪಾಠ ಗಳಿವೆ. ಅವರು ಕೇವಲ ಒಂದಷ್ಟು ಸೋತು ಗೆದ್ದವರ ಕಥೆ ಬರೆದಿಲ್ಲ. ಇಂಟರ್ನೆಟ್ ಹುಡುಕಿದರೆ ಅಂಥವರ ಲಕ್ಷ ಲಕ್ಷ ಮಾಹಿತಿಗಳು ನಮಗೆ ಸಿಗಬಲ್ಲವು. ಕೇವಲ ಮಾಹಿತಿಯಾಗಿಯಷ್ಟೇ. ಇಲ್ಲಿ ಮಣಿಕಾಂತ್ ಸಾರ್ ರವರು ಅದನ್ನ ನಮ್ಮೆದೆಗೆ ತಾಕುವಂತೆ, ನಮ್ಮ ಮನಸನ್ನ ಸಮೀಕರಿಸುವಂತೆ ಬರೆದಿದ್ದಾರೆ. ಅವರ ಬರವಣಿಗೆಯಲ್ಲಿನ ತಾಕುವಿಕೆಯ ಮಾಂತ್ರಿಕತೆಗೆ ಸಣ್ಣ ಉದಾಹರಣೆ ಅವರ ಈ ಹಿಂದಿನ.. ದಾಖಲೆ ಮಾರಾಟದ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ. ಅದರ ಮುಂದುವರೆದ ಭಾಗವೇ ಅನ್ನಬಹುದೇನೋ ಎನ್ನುವಂತಿರುವ ಅಪ್ಪ ಅಂದ್ರೆ ಆಕಾಶ. ಅಮ್ಮ ಹೇಳಿದ ಎಂಟು ಸುಳ್ಳುಗಳು ಕೇವಲ ಕಥೆಗಳಾಗಿದ್ದರೆ ಆ ಮಟ್ಟಿನ ಯಶಸ್ಸಿಗೆ ಭಾಜನವಾಗ್ತಿರಲಿಲ್ಲ. ಅಲ್ಲಿ ಸೋತು ಗೆದ್ದವರ ನೆಮ್ಮದಿಯ ನಿಟ್ಟುಸಿರಿನ ಬೆಚ್ಚನೆಯ ಭಾವವಿತ್ತು.. ಅರಿವಿಲ್ಲದೆಯೇ ನಮ್ಮನ್ನು ತಾಕಿ ಮೂಕವಾಗಿಸೋ ಜೀವವಿತ್ತು. ಏನೋ ಹೇಳುತ್ತಾ ಇನ್ನೇನೋ ತಿಳಿಸಿ ಬಿಡುವ ಅಸಂಖ್ಯ ಮೌಲ್ಯವಿತ್ತು. ಇದು ಅದರ ಮುಂದುವರೆದ ಭಾಗ. ಒಮ್ಮೆ ಓದಿ ನೋಡಿ.. ಮಣಿ ಸಾರ್ ಅವರ ಮಾಮೂಲಿ ಎತ್ತರವನು ಮೀರಿ ನಿಲ್ಲುವುದು ಸುಳ್ಳಲ್ಲ. ಅವರ ಮೇಲೆ ಎಂಥವರಿಗಾದರೂ ಒಂದು ಸಣ್ಣ ಅಭಿಮಾನ ಮೂಡದೆ ಇರದಿರುವುದು ಸುಳ್ಳಲ್ಲ.
 

ಒಂದು ಸಾಮಾನ್ಯ ಭಾನುವಾರ ಒಂದಷ್ಟು ಬಂಗಾರದ ನೆನಪುಗಳನ್ನು ತುಂಬಿ ಕೊಟ್ಟ ಕ್ಷಣಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನನಗೆ ದೊರೆತವು. ಈ ಭಾನುವಾರ ಸಾಮಾನ್ಯವಂತೂ ಆಗಲಿಲ್ಲ.

12 comments:

 1. ಚಂದದ ನಿರೂಪಣೆ ಸತೀಶ್ .. ನಿಮ್ಮ ಭೇಟಿ ನಿಜಕ್ಕೂ ಖುಷಿ ಕೊಟ್ಟಿತು ...
  ಹ ಹ ಹ ... ಗುರುಪ್ರಸಾದ ಅವರ ಮಾತಿಂದ ಎಷ್ಟು ಪೌಂಡ್ ಕೊಬ್ಬಿಳಿದಿದ್ದು ಎಂದು ನೋಡಬೇಕಿದೆ ಅಲ್ವಾ ...:)

  ReplyDelete
  Replies

  1. ನಿಮ್ಮ ಭೇಟಿ ನನಗೂ ಖುಷಿ ಕೊಟ್ಟಿತು ಸಂಧ್ಯಾ.. ನಿಮ್ಮನ್ನ ಮೊದಲನೇ ಸಾರಿ ನೋಡಿದ್ದು ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ.. ಅವತ್ತು ನೀವ್ಯಾರು ಅಂತ ಗೊತ್ತಿಲ್ದೆ ಹೋದದ್ರಿಂದ ಮಾತಾಡ್ಸೋ ಗೋಜಿಗೆ ಬಂದಿರಲಿಲ್ಲ.
   ನಿಮ್ ಮಾತು ನಿಜ ಮನಸ್ ತುಂಬಿ ಕೊಬ್ಬಿಳಿಸಿ ಕೊಂಡಿರೋದಂತು ನಿಜ.. ಎಷ್ಟ್ ಕೇಜಿ ಅನ್ನೋದನ್ನ ಪರಿಶೀಲಿಸಬೇಕು ಈಗ. ಪ್ರತಿಕ್ರಿಯೆಗೆ ಧನ್ಯವಾದಗಳು. :)

   Delete
 2. ಧರ್ಮಸೆರೆ ಚಿತ್ರದ ಹಾಡು.."ಈ ಸಂಭಾಷಣೆ..ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ"...ಹಾಡಿನ ಹಾಗೆ ಬೆಟ್ಟದಿಂದ ವೈಯಾರವಾಗಿ ಬಳುಕುತ್ತ ಸಾಗುವ ನಿಮ್ಮ ಲೇಖನದ ಪರಿ ಇಷ್ಟವಾಗುತ್ತದೆ..ಸುಂದರ ಕಾರ್ಯಕ್ರಮದ ಬಗ್ಗೆ ಅಷ್ಟೇ ಸುಮಧುರ ನಿರೂಪಣೆ..ಅಭಿನಂದನೆಗಳು ಸತೀಶ್!

  ReplyDelete
  Replies
  1. ಶ್ರೀ ಸಾರ್ ನನ್ನ ಬರಹಗಳಿಗೆ ಯಾವತ್ತಿನ ಬೋನಸ್.. ನಿಮ್ಮದೊಂದು ಸೂಪರ್ ಪ್ರತಿಕ್ರಿಯೆ. ಈ ಪ್ರೀತಿ ನಿರಂತರವಾಗಿರಲಿ ಧನ್ಯವಾದಗಳು.

   Delete
 3. Replies
  1. Balu sir.. Heartly welcome to my Blog.. Happy to see u here. Jai ho.. :) :)

   Delete
 4. ವಾವ್ಹ್... ಚಂದದ ಭಾನುವಾರದ ಬಗ್ಗೆ ಅಷ್ಟೇ ಚಂದವಾಗಿ ಸೊಗಸಾಗಿ ವಿವರವಾಗಿ ಬರೆದಿದ್ದೀರಿ..
  ಬ್ಲಾಗ್ ಸ್ನೇಹಿತರನ್ನು ಬೇಟಿಯಾಗಿದ್ದು ಒಂದು ಮರೆಯಾಲಾಗದ ಸುಂದರ ಅನುಭವ.. ಇಂತಹ ಅವಕಾಶ ಸಿಕ್ಕಿದ್ದು ಮಣಿ ಸರ್ ನಿಂದ ಮಣಿ ಸರ್ ಗೆ ಕೃತಜ್ಞತೆಗಳು
  ನಿಮ್ಮ ಬ್ಲಾಗ್ ಗೆ ಮೊದಲ ಬೇಟಿ....ಮುಂದೆ ನಿಮ್ಮೆಲ್ಲಾ ಬರಹಗಳನ್ನು ಓದುವ ಅವಕಾಶ ನನಗೆ ಸಿಗಲಿ..
  ಧನ್ಯವಾದಗಳು..
  -ಸುಷ್ಮಾ ಮೂಡುಬಿದಿರೆ.

  ReplyDelete
  Replies
  1. ಸುಷ್ಮಾ ಜೀ ನನ್ನ ಬ್ಲಾಗ್ ಗೆ ಆತ್ಮೀಯ ಸ್ವಾಗತ.
   ನಿಮ್ಮ ಬ್ಲಾಗ್ ಬರಹಗಳನ್ನ & ಪತ್ರಿಕೆ ಬರಹಗಳನ್ನ ಮೊದಲಿಂದಲೂ ಓದ್ತಾ ಬಂದೋನು ನಾನು. ಆದ್ರೆ ಕಾಮೆಂಟ್ ಹಾಕೋ ಕೆಲಸ ಒಂದನ್ನ ಮಾಡ್ತಿರಲಿಲ್ಲ ನೋಡಿ. ಅದಕಾಗಿ ಕ್ಷಮೆ ಇರಲಿ.
   ನಿಮ್ಮನ್ನೆಲ್ಲ ನೋಡಿ ತುಂಬಾನೇ ಖುಷಿ ಆಯ್ತು.
   ಆಗಾಗ ಬರ್ತಾ ಇರಿ. ನಿಮ್ ಪ್ರತಿಕ್ರಿಯೆ ಖುಷಿ ಕೊಡ್ತು. :)

   Delete
 5. ಒಂದು ಉತ್ತಮ ಭಾನುವಾರವನ್ನು ಕಳೆದ ಆನಂದ ನನ್ನದಾಯಿತು. ನಿಮ್ಮ ಜೊತೆಗೆ ಹಲವು ಗೆಳೆಯ ಗೆಳತಿಯರ ದರ್ಶನವೂ ಆಯಿತು.

  ತುಂಬಾ ಒಳ್ಳೆಯ ಲೇಖನವಿದು, ನನಗೆ ಸಂಗ್ರಹ ಯೋಗ್ಯ...

  ReplyDelete
  Replies
  1. ಬದರೀ ಸಾರ್ ನಿಮ್ ಜೊತೆ ಇದು ಎರಡನೇ ಭೇಟಿ.. ಮೊದಲನೇ ಭೇಟಿಯಲ್ಲಿ ಒಂದು ಹಾಯ್ ಕೂಡಾ ಹೇಳಿದವರಲ್ಲ ನಾವು. ಆದ್ರೆ ಈಗ ಅದೆಷ್ಟೋ ಕಾಲದ ಪರಿಚಯದವರ ಹಾಗೆ ನೀವು ನಡ್ಕೊಂಡ ಬಗೆ ಇದೆಯಲ್ಲ ಅದು ಕೊಟ್ಟ ಮಧುರ ಅನುಭೂತಿ ಅಂತಿಂಥದ್ದಲ್ಲ. ಖುಷಿಯಾಯ್ತು ನಿಮ್ಮನ್ನೆಲ್ಲ ಒಮ್ಮೆಲೇ ಒಂದು ಕಡೆ ಅಂಥಾ ಕಾರ್ಯಕ್ರಮದಲ್ಲಿ ಭೇಟಿಯಾದದ್ದು. ಎಂದಿನಂತೆ ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ನಾನೂ ಯಾವತ್ತಿಗೂ ಅಭಾರಿ. :)

   Delete
 6. ಹಾ ಬ್ಲಾಗಿಗರ ಲೋಕದ ವರದಿ ವಾಚನಕ್ಕಾಗಿ ವಂದನೆಗಳು ಸತೀಶ್ :)...
  ಓದುತ್ತಾ ಹೋದಂತೆ ನಾನ್ಯಾಕೆ ಹೋಗಲಿಲ್ಲ ಅನಿಸಿತು...
  ಬಿಡಿ ಆಮೇಲದಕ್ಕೇನೇನೋ ಉತ್ತದಗಳು ಹೊಳೆದವು...
  ಸಿಗುವಾ ಆದಷ್ಟು ಬೇಗ :)..
  ಚೆನ್ನಾಗಿತ್ತು ನಿರೂಪಣೆ :)...
  ಬರೆಯುತ್ತಿರಿ...

  ReplyDelete
  Replies
  1. ಚಿನ್ಮಯ್ ಬರಲಾಗದೆ ಹೋದದ್ದಕ್ಕೆ ಹಲವು ಕಾರಣಗಳಿದ್ರೂ.. ಆ ಕಾರಣಗಳು ಅಂಥಾ ಒಂದು ಸಮಾರಂಭವೊಂದನ್ನ ಕಳಕೊಂಡ ನಷ್ಟದ ಪರಿಮಾಣವನ್ನ ಮಾತ್ರ ಪೂರ್ತಿಯಾಗಿ ತುಂಬಿ ಕೊಡಲಾರದು ಅನ್ನೋದಂತೂ ನಿಜ.
   ಹ್ಮ್ಮ್ ನಿಮ್ಮನ್ನ ಭೇಟಿಯಾಗೋ ಕುರಿತು ನನ್ನಲ್ಲೂ ಉತ್ಸುಕತೆ ಇದೆ.
   ಆದಷ್ಟು ಬೇಗ ಅದೂ ಒಂದು ಆಗೋಗ್ಲಿ.
   ಪ್ರತಿಕ್ರಿಯೆಗೆ ಧನ್ಯವಾದಗಳು ಗೆಳೆಯ.. :) :)

   Delete