Saturday 19 January 2013

ಹೊಸ ವರ್ಷದ ದಿನ ಮತ್ತು ದೇವಕಣದ ರಹಸ್ಯ..

ಡಿಸೆಂಬರ್ ೩೧..

ಬಹುಶ ಅಂದಿನ ದಿನ ರಾತ್ರಿಯನ್ನ ಯಾರೂ ಹಾಗೆ ಸುಮ್ಮನೆ ಯಾಥಾವತ್ ಮಾಮೂಲಿ ದಿನಗಳಂತೆ ಕಳೆದು ಬಿಡುವ ಮನಸ್ಸು ಮಾಡಲಾರರು. ಹಾಗೆ ಮಾಮೂಲಿಯಾಗಿ ಆ ರಾತ್ರಿಯ ಯಾವ ಸಂಭ್ರಮವನ್ನೂ ತಮ್ಮದಲ್ಲದೆಂದು ಧಿಕ್ಕರಿಸಿ ಬಿಡೋ ವ್ಯಕ್ತಿ,  ಒಂದು ತನ್ನಲ್ಲಿ ತನ್ನದೇ ಆದ ಅನೇಕ ಸಿದ್ಧಾಂತಗಳೋ, ತನ್ನದೇ ವರ್ಚಸ್ಸಿನ ತಳಹದಿಗೆ ಕಟ್ಟಿದ ನಿಲುವಿನ ಮೇಲೋ.. ಅಥವಾ ತನ್ನದೇ ಆದ ವಿಶೇಷ ಚಿಂತನೆಗಳನು ಹೊಂದಿದವನ ಹೊರತು ಇಂಥ ಆಚರಣೆಗಳ ಕಡೆಗೆ ವೈಮನಸ್ಸು ಹೊಂದಿರುವ ವ್ಯಕ್ತಿಯಲ್ಲಷ್ಟೇ ಸಾಧ್ಯ. ಈ ಎರಡೂ ಥರದ ವ್ಯಕ್ತಿಗಳನ್ನೂ ನಾನು ಬಲ್ಲೆ.  ಬಹಳ ಹತ್ತಿರದಲ್ಲೇ. ಅಮ್ಮ ಈ ಆಚರಣೆಗೆ ಪರವಾದರೆ.. ಅಪ್ಪ ವಿರುದ್ಧ..!! ನಮಗೆಲ್ಲ ಹೊಸ ವರ್ಷ ಯುಗಾದಿಯಂದು.. ಇದೆಲ್ಲ ಬರಿ ಬೂಟಾಟಿಕೆ ಮಾತ್ರವೆಂದು ತಗಾದೆ ತೆಗೆದು ಮನಸಿಲ್ಲದೆಯೂ ಮನಸ್ಸು ಮಾಡಿ.. ಹಲವೊರೊಡನೆ ಬೆರೆತು ಕ್ಯಾಲೆಂಡರ್ ವರ್ಷದ ಆ ಕೊನೆಯ ದಿನದ ಕೊನೆಯ ಕ್ಷಣಗಳ ಖುಷಿಯನ್ನ ಅಪ್ಯಾಯಮಾನವಾಗಿ ತೆಗೆದು ಕೊಂಡು ಬಿಡೋ ಪೈಕಿಯವರನ್ನೂ ಕೂಡ ನಾನು ಕಂಡಿದ್ದೇನೆ. ಅದೊಂದು ದಿನ ಮಾತ್ರ ಬಹುಪಾಲು ಎಂಥವರನ್ನೂ.. ಎಂಥಾ ಧರ್ಮದವರನ್ನೂ.. ಎಂಥಾ ವರ್ಗದವರನ್ನೂ ತನ್ನ ಪರಿಧಿಗೆ ಸೆಳೆದು ಸರಿ ಸಮನಾಗಿ ಸಂತಸವನ್ನ ಹಂಚಿಬಿಡೋ ಕೆಲವೊಂದು ಕ್ಷಣಗಳನ್ನು ಸೃಷ್ಟಿಸಿ ಕೊಟ್ಟು ಬಿಡುತ್ತದೆ.


ನಾವೂ ಹಾಗೆಯೇ ತೀರಾ ವಿಶೇಷತೆಯೂ ಇಲ್ಲದೆ ತೀರಾ ಸಾಧಾರಣವೂ ಅಲ್ಲದೆ ಸರಳವಾಗಿ, ಸಂತೋಷವಾಗಿ ಅಂದಿನ ದಿನವನ್ನ ಸಂಭ್ರಮಿಸಿದೆವು. ಡಿಸೆಂಬರ್ ೩೧ ರ ರಾತ್ರಿಗೆ ನಮ್ಮ ಕಾಲೋನಿಯ  [ಇಪ್ಪತ್ತು ನೌಕರರು ಮತ್ತವರ ಕುಟುಂಬ ವರ್ಗ ಒಟ್ಟು ಸರಿ ಸುಮಾರು ಅರವತ್ತರಿಂದ ಎಪ್ಪತ್ತು ಜನ] ಎಲ್ಲರಿಗೂ ರಾತ್ರಿ ವಿಶೇಷ ಭೋಜನ ಕೂಟವಿತ್ತು. ಮೈತ್ರಿ ಸಭಾಂಗಣವನ್ನ ಮದುವೆ ಮನೆಯಂತೆ ಸಿಂಗರಿಸಿದ್ದು..  ಒಂದಷ್ಟು ಹೊತ್ತು ಫನ್ ಗೇಮ್ಸ್.. ಒಂದಷ್ಟು ಹೊತ್ತು ಅಂತ್ಯಾಕ್ಷರಿ.. ಕಂಪನಿಯ ಸಾಧನೆ.. ಶೋಧನೆ.. ರೋದನೆಗಳ ಒಳನೋಟ. ಟ್ರಾನ್ಸ್ ಫಾರ್ ಆಗಿ ತಾತ್ಕಾಲಿಕವಾಗಿ ಅಗಲಿದವರ ಒಡನಾಟದ ಮೆಲುಕು.. ಆಕ್ಸಿಡೆಂಟ್ ಆಗಿ ಶಾಶ್ವತವಾಗಿ ಅಗಲಿದ ಮಾಧುಮಣಿ ಸರ್ ಅವರ ಲವಲವಿಕೆಯ ಮೆಲುಕು.. ಇವೆಲ್ಲವನ್ನೂ ಕಲೆತು ನಾವೇ ಮಾಡಿದ ಡಾಕ್ಯುಮೆಂಟರಿ ಯಂಥ ಹತ್ತು ನಿಮಿಷದ ವಿಡಿಯೋ.. ಸರಿಯಾಗಿ ಹನ್ನೆರಡಕ್ಕೆ ಮೂರು ಮಾರುದ್ದದ ಸರ ಪಟಾಕಿ ಹಚ್ಚಿದ್ದು.. ಅದನ್ನ ಹಚ್ಚುತ್ತಲೇ ಕೇಕ್ ಕತ್ತರಿಸಿದ್ದು.. ಒಬ್ಬರ ಬಾಯಿಗೊಬ್ಬರು ಕೇಕೆ ತಿನಿಸಿ.. ಮತ್ತೂ ಕೆಲವರು ಮುಖಕ್ಕೆ ಬಳಿದು ಸಂಭ್ರಮಿಸಿದ್ದು.. ಒಬ್ಬರಿಗೊಬ್ಬರು ತಬ್ಬಿ ಶುಭಾಷಯ ವಿನಿಮಯಿಸಿದ್ದು.. ಎತ್ತಿ ಕುಣಿದು ಕುಪ್ಪಳಿಸಿದ್ದು ಎಲ್ಲದರ ನಂತರ ಎಲ್ಲರೂ ಒಟ್ಟಿಗೆ ಅಲ್ಲಿಯೇ ಹಾಕಲಾದ ಕ್ಯಾಂಪ್ ಫೈರ್ ನ ಸುತ್ತ ಸುತ್ತಿ ಸಂಭ್ರಮಿಸಿ ಎಳೆಯವರಾಗಿದ್ದು.. ಕಡೆಗೆ ನಾವು ಹುಡುಗರೆಲ್ಲರೂ ಗಂಗ್ನಮ್ ಹಾಡಿಗೆ ಇಹ ಮರೆತು ಇಷ್ಟ ಬಂದಂತೆ ಕುಣಿದದ್ದು ಕುಣಿದದ್ದು.. ಹುಡುಗಿಯರು  ತಮಿಳು   ಹಾಡೊಂದಕೆ  ಮೈಮರೆತು ಕುಣಿದದ್ದು.. ಎಲ್ಲದರ ನಂತರ ನಾವ್ ಹುಡುಗರೆಲ್ಲರೂ ಸೇರಿ ಸರಿ ರಾತ್ರಿ ಒಂದಕ್ಕೆ ಹತ್ತಿರದ ಮೆಕ್ ಡೊನಾಲ್ಡ್ ಗೆ ಹೋಗಿ ಹೊಟ್ಟೆ ಬಿರಿಯೆ ತಿಂದು ಬಂದದ್ದು.. ಎಲ್ಲವೂ ಮುಗಿಸಿ ಮಲಗುವ ಹೊತ್ತಿಗೆ ಸಮಯ ಮುಂಜಾವು ಮೂರು.


 ಜನವರಿ ಒಂದು..

ನಮಗೇನು ಸರ್ಕಾರಿ ರಜೆ ಇರಲಿಲ್ಲ. ಅದು ಮಾಮೂಲಿ ದಿನವಲ್ಲದಿದ್ದರೂ ಆಫೀಸ್ ಮಾತ್ರ ಮಾಮೂಲಿಯಂತೆಯೇ ತೆರೆದಿತ್ತು. ರಾತ್ರಿ ಮಲಗಿದ್ದು ಲೇಟ್ ಅಂದ ಮೇಲೆ ಬೆಳಿಗ್ಗೆ ಎದ್ದದ್ದೂ ಲೇಟೇ.. ಹೊಸ ವರ್ಷದ ಮೊದಲ ದಿನವೇ ನಾನು ನಿದಿರೆ ತಿಳಿಯೊಡೆದು ಹಾಸಿಗೆ ಇಂದ ಎದ್ದದ್ದು ಬೆಳಿಗ್ಗೆ ಹತ್ತಕ್ಕೆ. ಸ್ನಾನ ಮುಗಿಸಿ ಕ್ಯಾಂಟೀನ್ ನಲ್ಲಿ ಸಿಕ್ಕ ಎರಡಿಡ್ಲಿ ಹೊಟ್ಟೆಗಿಳಿಸಿ ಆಫೀಸ್ ಸೇರುವ ಹೊತ್ತಿಗೆ ಸಮಯ ಹತ್ತೂವರೆ ಮೀರಿ ಐದು ನಿಮಿಷವಾಗಿತ್ತು. ಮನೆ ಮತ್ತು ಆಫೀಸ್ ಒಂದೇ ಕಾಂಪೌಂಡ್ ಒಳಗಿರುವುದರಿಂದ, ನಮಗೆ ರಜೆ ಅಥವಾ ಆಫೀಸ್ ದಿನಗಳ ಕುರಿತಾಗಿ ಅಂಥಾ ವೆತ್ಯಾಸವೇನೂ ಗೋಚರಿಸುವುದಿಲ್ಲ. ಕೆಲವೊಮ್ಮೆ ಭಾನುವಾರ ಮತ್ತು ಇತರ ರಜಾ ದಿನಗಳು ಕೂಡ ಆಫೀಸ್ ನಲ್ಲಿ ಕಳೆದದ್ದುಂಟು. ಆಫೀಸ್ ಗೆ ಲೇಟ್ ಆಗಿ ಬಂದದಕೆ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಅಸಲಿಗೆ ಯಾರೂ ಸರಿಯಾದ ಸಮಯಕೆ ಬಂದವರೇ ಅಲ್ಲ. ಒಬ್ಬರಿಗಿಂತ ಒಬ್ಬರು ಐದು ಹತ್ತು ನಿಮಿಷಗಳ ಅಂತರಗಳಲ್ಲಷ್ಟೇ ಆಫೀಸ್ ಅನ್ನುವ ಅನಿವಾರ್ಯತೆಯ ಅಖಾಡಕ್ಕೆ ಬಂದು ತಲುಪಿದ್ದು. 


ನಾನು ಬಂದ ನಂತರವೂ ನನಗಿಂತಲೂ ಲೇಟ್ ಆಗಿ ಬಂದವರ ಕಂಡ ನನಗೂ ಏನು ಅನ್ನಿಸಲಿಲ್ಲ. ಯಾರಿಗೂ ಈ ದಿನ ಆಫೀಸಿಗೆ ಬರುವ ಮನಸ್ಸಿಲ್ಲವೆಂದು ಯಾರೊಬ್ಬರೂ ಬಾಯ್ತೆರೆದು ಹೇಳದೇ.. ಎಲ್ಲರಿಗೆ ಎಲ್ಲರೂ ಹೇಳಿ ಕೊಳ್ಳುತ್ತಿರುವಂತಿತ್ತು ಎಲ್ಲರ ಮುಖಭಾವ. ಸರಿಯಾಗಿ ಹನ್ನೊಂದಕ್ಕೆ ಸೇಫ್ಟಿ ಪ್ಲೆಡ್ಜ್.. ನಮ್ಮ ಕಂಪನಿಯ ಹೊಸ ವರುಷಕ್ಕಾಗಿ ರೆಸಲೂಶನ್ ಅಂತಲೇ ಅಂದು ಕೊಳ್ಳಬಹುದಾದ ಹಾಗೆ ಸುರಾಕ್ಷತಾ ನಿಯಮಗಳ ಅನುಸರಣೆಯ ಕುರಿತಾಗಿ ಪ್ರತಿಜ್ಞೆ ಯನ್ನು ಮಾಡಿದ್ದು. ಅದಾದ ನಂತರ ಹೊಸ ವರುಷದ ನೆನಪಿನಾರ್ಥವಾಗಿ, ಸುಂದರ ಪಾರ್ಕ್ ಒಂದಕೆ ಯಾವುದೇ ರೀತಿಯಲ್ಲೂ ಕಮ್ಮಿ ಇಲ್ಲದ ನಮ್ಮ ಆಫೀಸ್ ಕ್ಯಾಂಪಸ್ಸಿನ ಸುಂದರ ಸುಂದರವೆನಿಸಿ ಕೊಳ್ಳುವ ಜಾಗಗಳಲ್ಲಿ ಎಲ್ಲರೂ ನಿಂತು ನಗಲಾರದೆಯೂ ನಕ್ಕು.. ಹಲವು ಫೋಟೋ ತೆಗೆಸಿ ಕೊಂಡದ್ದು. ಹೊಸ ವರುಷದ ದಿನ ಆಫೀಸಿನಲ್ಲಿ ಆದ ಹೊಸ ಮಧುರ ಕ್ಷಣಗಳಿಗೆ ಸಾಕ್ಷಿಯಾದವು.


ಅಂದು ಮಾಕ್ ಡ್ರಿಲ್ ಬೇರೆ..!! ಸರಿಯಾಗಿ ಹನ್ನೆರಡಕ್ಕೆ ಕಂಪನಿಯ ಸೈರನ್ ತನಗೆ ದಿನದ ಮೂರು ಹೊತ್ತಿನ ಬಳಿಕವೂ ಕೂಗಲು ಬರುತ್ತದೆ ಎಂಬುದನ್ನು ಕೂಗಿ ಸಾರಿತ್ತು. ಮಾಕ್ ಡ್ರಿಲ್ ಎಂದರೆ ಯಾವುದೇ ಅನಾಹುತ ಅಥವಾ ಅಫಘಾತದ ಸಮಯದಲ್ಲಿ ಆಫೀಸ್ ಕ್ಯಾಂಪಸ್ಸಿನ ಒಳಗಣ ಜನರೆಲ್ಲರೂ ಆ ಅಕಾಲಿಕ ಸೈರನ್ ಶಬ್ದ ಕೇಳಿಸಿದೊಡನೆ ಆಗಿರಬಹುದಾದ ಅನಾಹುತದ ಕುರಿತಾಗಿ ಎಚ್ಚೆತ್ತು ಕೊಂಡು ಓಡಿ ಬಂದು ಕಂಟ್ರೋಲ್ ರೂಮ್ ಮುಂದಿನ ಅಸ್ಸೆಂಬ್ಲಿ ಪಾಯಿಂಟ್ ನ ಬಳಿ ಒಂದು ಗೂಡುವ ಒಂದು ಪ್ರಕ್ರಿಯೆ. ಯಾರೂ ಎಷ್ಟೇ ಮಹತ್ವದ ಕೆಲಸವಿರಲಿ ಆ ಸೈರನ್ ಶಬ್ದ ಕೇಳಿಸಿಕೊಂಡ ಐದು ನಿಮಿಷಗಳ ಒಳಗೆ ಅಸ್ಸೆಂಬ್ಲಿ ಪಾಯಿಂಟ್ ನಲ್ಲಿ ಅಸ್ಸೆಂಬ್ಲಿ ಯಾಗಬೇಕಿರುವುದು ಕಂಪನಿಯ ಸುರಕ್ಷತಾ ನಿಯಮ ಗಳಲ್ಲೊಂದು. ಮಾಕ್ ಡ್ರಿಲ್ ಅನ್ನುವುದು ಒಂದು ಅಫಘಾತಕ್ಕೆ.. ಅನಾಹುತದ ಸಂಧರ್ಭಕ್ಕೆ ಅಲ್ಲಿನ ಪರಿಸರಕ್ಕೆ ಸೇರಿದ ಕಾರ್ಮಿಕ ವರ್ಗ ಪ್ರತಿಕ್ರಿಯಿಸ ಬಹುದಾದ ತ್ವರಿತತೆಯನ್ನು ಅಳೆಯುವ ಒಂದು ಸಣ್ಣ ಡೆಮೋ ಪ್ರಕ್ರಿಯೆ ಅಷ್ಟೇ. ಅಂದುಕೊಂಡತೆಯೇ ಐದು ನಿಮಿಷದ ಆಸುಪಾಸಿಗೆ, ಕಂಪನಿಯ ಕಾರ್ಮಿಕ ವರ್ಗ.. ಕ್ಯಾಂಟೀನ್ ಸಿಬ್ಬಂಧಿ.. ಕಾಂಟ್ರಾಕ್ಟ್ ಸಿಬ್ಬಂಧಿ.. ಕೂಲಿ ಕಾರ್ಮಿಕರು ಎಲ್ಲರೂ ಸೇರಿ ಸುರಕ್ಷತಾ ರಿಜಿಸ್ಟರ್ ನಲ್ಲಿ ನಮ್ಮ ನಮ್ಮಗಳ ಹಾಜರಾತಿಯನ್ನ ದಾಖಲಿಸಿ ನಿಂತೆವು. ನಮ್ಮ ಬಾಸ್ ಸುರಕ್ಷತಾ ನಿಯಮಗಳ ಕುರಿತಾಗಿ ಒಂದೆರಡು ಮಾತನಾಡಿ ಎಲ್ಲರನ್ನೂ ಬೀಳ್ಕೊಟ್ಟರು.


ಕ್ಯಾಂಟೀನ್, ಕಾಂಟ್ರಾಕ್ಟ್ ಮತ್ತು ಕೂಲಿ ಕಾರ್ಮಿಕರೆಲ್ಲರೂ ಹೋದ ಬಳಿಕ ನಾವು ಕಂಪನಿ ನೌಕರರು ಮಾತ್ರ ಅಲ್ಲಿಯೇ ನಾಲ್ಕೈದು ಗುಂಪುಗಳಾಗಿ ನಿಂತು ಬಾಯಿಗೆ ಸಿಕ್ಕ ವಿಚಾರಗಳನ್ನ ಚರ್ಚಿಸುತ್ತಾ ನಿಂತೆವು. ನಾನು ಎಲ್ಲರ ಮತ್ತು ಎಲ್ಲದರ ಫೋಟೋ ಕ್ಲಿಕ್ಕಿಸುತ್ತಿದ್ದೆ.. ಬಳಿಕ ನಾನು ನನ್ನ ಬಾಸ್ ಇದ್ದ ಗ್ರೂಪ್ ಗೆ ಹೋಗಿ ಸೇರಿ ಕೊಂಡೆ. ಬಾಸ್ ಕೆಲವು ವೈಜ್ಞಾನಿಕ ವಿಚಾರಗಳ ಕುರಿತು ಚರ್ಚೆ ಮಾಡುತ್ತಿದ್ದರು. ನಾ ಹೋದೊಡನೆ ನನಗೊಂದು ಪ್ರಶ್ನೆ ಮುಂದಿಟ್ಟರು. ರಾತ್ರಿ ವೇಳೆಗೆ ಒಂದು ಕೆಂಪು ಗುಲಾಬಿಗೆ ನೀಲಿ ಬೆಳಕನ್ನ ಹಾಯಿಸಿದರೆ ಅದು ಯಾವ ಬಣ್ಣದಲ್ಲಿ ನಮ್ಮ ಕಣ್ಣಿಗೆ ಗೋಚರಿಸುತ್ತದೆ ಅನ್ನುವುದು ಪ್ರಶ್ನೆ. ಕೆಂಪು ಮತ್ತು ನೀಲಿ ಬಣ್ಣಗಳನ್ನು ಬೆರೆಸಿದಾಗ ಹುಟ್ಟುವ ಮಜಂತ ಕಲರ್ ಎನ್ನುವುದೇ ಎಲ್ಲರ ಉತ್ತರವಾಗಿತ್ತು. ನಾನೂ ಎಲ್ಲರಿಗಿಂತ ಡಿಫರೆಂಟ್ ಅನ್ನುವುದನ್ನು ತೋರಿಸಿ ಕೊಳ್ಳುವ ಸಲುವಾಗಿ ಅದು ಕೆಂಪು ಬಣ್ಣದಲ್ಲೇ ಕಾಣುತ್ತದೆ ಸಾರ್ ಅಂದಿದ್ದೆ. ನಮ್ಮ ಬಾಸ್ ಬಣ್ಣಗಳು & ನಮ್ಮ ಕಣ್ಣುಗಳು ಅವುಗಳನ್ನು ಗುರುತಿಸಬಲ್ಲ ಸಾಮರ್ಥ್ಯಕ್ಕೆ ಪೂರಕವಾದ ಥಿಯರಿಯನ್ನು ವಿವರಿಸುತ್ತಾ ಅದು ಕಪ್ಪು ಬಣ್ಣದಲ್ಲಿ ಕಾಣುತ್ತದೆಂಬ ಉತ್ತರವಿಟ್ಟರು. ಅದು ನಮಗೆಲ್ಲರಿಗೂ ಸರಿ ಅನಿಸಿತ್ತು. ಅವರು ಹೇಳಿದಷ್ಟು ಸುಲಭಕ್ಕೆ ನಾನದನ್ನು ಇಲ್ಲಿ ವಿವರಿಸಲಾಗದೆ ಇರುವ ನನ್ನ ದೌರ್ಬಲ್ಯಕ್ಕೆ ನಾನು ಕ್ಷಮೆ ಕೋರುತ್ತೇನೆ. ನಂತರ ಮತ್ತೊಂದು ಪ್ರಶ್ನೆ.. ನಂತರ ಮಗದೊಂದು.. ಅವರು ಕೇಳುವ ಯಾವ ಪ್ರಶ್ನೆಗೂ ನಮ್ಮ ಬಳಿ ಸರಿ ಉತ್ತರವಿಲ್ಲ.. ಕೆಲ ಉತ್ತರಗಳು ಸರಿಯುತ್ತರದ ಆಸು ಪಾಸಿನಲ್ಲಿದ್ದರೂ ಪೂರ್ತಿ ಸರಿಯಾಗಿರಲಿಲ್ಲ. ನಾವೆಲ್ಲಾ ಅಪ್ಡೇಟ್ ಆಗಬೇಕಿದೆ..!! ಬಾಸ್ ನಕ್ಕು ಹೇಳಿದರು. 


ನಿಜ ನಾವೆಲ್ಲಾ ಅಪ್ಡೇಟ್ ಆಗ ಬೇಕಿದೆ. ಪ್ರಚಲಿತ ವಿದ್ಯಾಮಾನಗಳು, ವೈಜ್ಞಾನಿಕ ವಿಚಾರಗಳು, ರಾಜಕೀಯ, ಸಿನಿಮಾ, ಕಲೆ, ಸಾಹಿತ್ಯ, ಸಂಸ್ಕೃತಿ,ಸಧ್ಯದ ಪರಿಸ್ಥಿತಿ ಯಾವುದರ ಪೂರ್ಣ ವಿವರಗಳೂ ನಮ್ಮಲ್ಲಿ ಪೂರ್ಣ ಪ್ರಮಾಣದಲ್ಲಿಲ್ಲ. ಎಲ್ಲರೂ ಅವರದೆ ಪರಿಧಿಯ.. ಅವರದೇ ಬದುಕಿನ. ಅವರದೇ ಆಸುಪಾಸಿನ ಪ್ರಪಂಚಕ್ಕಷ್ಟೇ ಪರಿಚಿತರು.. ತಾವಾಯಿತು ತಮ್ಮ ಬದುಕಾಯಿತು ಅನ್ನುವುದು  ನನ್ನನ್ನೂ  ಸೇರಿ  ಬಹುತೇಕ ಎಲ್ಲರ ಉಮೇದು ಅದೇ ಆಗಿರುತ್ತದೆ. ಒಂದು ಕೆಲಸವಿದೆ ಅದನು ಮಾಡಿದರಾಯ್ತು.. ಸಂಬಳ ಬರುತ್ತದೆ ತೆಗೆದು ಕೊಂಡು ನಮ್ ಇತಿ ಮಿತಿಗಳ ಒಳಗೆ.. ನಮ್ಮ ಸಂವಹನದ ಒಳಗೆ ಬದುಕಿದರಾಯ್ತು. ಇಷ್ಟೇ.. ನಮಗಾಗಿ ನಾವು ಎಳೆದು ಕೊಂಡ ಪರಿಧಿ. ಇದರಾಚೆಗೆ ಇಂದು ಯಾವುದೂ ನಮ್ಮನ್ನ ಅತಿಯಾಗಿ ಬಾಧಿಸುವುದಿಲ್ಲ.. ಕಾಡಿಸುವುದಿಲ್ಲ.. ಪೀಡಿಸುವುದಿಲ್ಲ. ಅಷ್ಟು ಸುಲಭಕ್ಕೆ ನಿಲುಕುವುದೂ ಇಲ್ಲ.


ಒಂದು ಕಾಲಕ್ಕೆ ಹೇಗಿದ್ದವರು ನಾವೆಲ್ಲ..!! ಶಾಲೆಯಲ್ಲಿ ಮೇಷ್ಟ್ರು ಕೇಳುತ್ತಿದ್ದ ಯಾವ ಪ್ರಶ್ನೆಗಾದರು ಮೊದಲು ನಮ್ಮ ಕೈ ಮೇಲೇರುತ್ತಿತ್ತು. ಭಾಗಶಃ ಸರಿಯುತ್ತರವೇ ಆಗಿರುತ್ತಿತ್ತು. ನಾನು ಸ್ಕೂಲ್ ಮತ್ತು ಕಾಲೇಜುಗಳಲ್ಲಿ ಕ್ವಿಜ್.. ಚರ್ಚಾ ಸ್ಪರ್ಧೆ.. ಪ್ರಬಂಧ.. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಲೆ ಮತ್ತು ಕಾಲೇಜನ್ನು ಪ್ರತಿನಿಧಿಸುತ್ತಿದ್ದವನೂ ಕೂಡ. ಆಗೆಲ್ಲ ಜನರಲ್ ನಾಲೆಡ್ಜ್ ಪುಸ್ತಕವನ್ನ ನಮ್ಮ ಇತರ ಪಟ್ಯ ಪುಸ್ತಕಗಳ ಹಾಗೆಯೇ ನಿರಂತರ ಓದುತ್ತಿದ್ದೆವು. ದೇಶದ ಅಷ್ಟೂ ರಾಜ್ಯದ.. ಅಷ್ಟೂ ರಾಜಧಾನಿಗಳ.. ಅಷ್ಟೂ ನದಿಗಳ.. ಅಷ್ಟೂ ಪ್ರಧಾನ ಮಂತ್ರಿಗಳ.. ಅಷ್ಟೂ ರಾಷ್ಟ್ರಪತಿಗಳ ಹೆಸರಿಂದ ಹಿಡಿದೂ.. ರಾಜ್ಯದ ಅಷ್ಟೂ ಮುಖ್ಯ ಮಂತ್ರಿಗಳ ಪಟ್ಟಿಯಿಂದ ಹಿಡಿದು.. ದೇಶ ವಿದೇಶದ ಹಲವು ಪ್ರಥಮಗಳ.. ಹಲವು ವೈವಿಧ್ಯಗಳ.. ಹಲವು ಅದ್ಭುತಗಳ.. ಹಲವು ಸಾಧನೆಗಳ.. ಹಲವು ಸಂಶೋಧನೆಗಳ.. ತಾರಾ ಮಂಡಲದ, ವೈಜ್ಞಾನಿಕ ವಿಚಾರಗಳ.. ಪ್ರಚಲಿತ ರಾಜಕೀಯ & ದೈನಿಕ ವಿಚಾರಗಳ ಕುರಿತಾಗಿ ಕನಿಷ್ಠ ಮಾಹಿತಿಯಾದರೂ ನಮಗೆ ತಿಳಿದಿರುತ್ತಿತ್ತು. ನ್ಯೂಸ್ ಗಳನ್ನೇ ಬಿಡದೆ ನೋಡುತ್ತಿದ್ದೆವು.. ಪೇಪರ್ ಗಳ ಇಂಚು ಇಂಚೂ ಬಿಡದೆ ಓದುತ್ತಿದ್ದೆವು.. ಶಾಲಾ ಕಾಲೇಜುಗಳಿಗೆ ಏರ್ಪಡಿಸುತ್ತಿದ್ದ ಎಕ್ಸಿಬಿಷನ್ ಗಳಲ್ಲಿ ದಂಗು ಬಡಿಸುವಂತಹ ಪ್ರಶ್ನೆಗಳು ನಮ್ಮಿಂದ ಮೂಡುತ್ತಿತ್ತು. ಎಲ್ಲದರೊಳಗೊಂದು ಕುತೂಹಲ ತಾನಾಗಿಯೇ ಮೈದಳೆಯುತ್ತಿತ್ತು. ಅವೆಲ್ಲ ಆಗ ಪಟ್ಯದ ಒಂದು ಭಾಗವಾಗಿತ್ತೆಂದರೂ ತಪ್ಪಿಲ್ಲ. ಅದು ನಮ್ಮ ಇಷ್ಟದ, ಅಚ್ಚು ಮೆಚ್ಚಿನ ಸಂಗತಿಯಾಗಿತ್ತೆನ್ನುವುದು ಕೂಡ ಅಷ್ಟೇ ನಿಜ.


ಸ್ಕೂಲು ಕಾಲೇಜು ಮುಗಿದು ನಮ್ಮ ಯಾಂತ್ರಿಕ ಜೀವನ ಆರಂಭವಾದವು. ನಮ್ಮ & ನಮ್ಮ ಓದಿನ ಯೋಗ್ಯತೆಗನುಗುಣವಾದ ಕೆಲಸಗಳು ಸಿಕ್ಕು ತಮ್ಮ ಪರಿಧಿಯೊಳಗೆ ನಮ್ಮನ್ನ ಬಂಧಿಸಿ ಬಿಟ್ಟವು. ಅದರೊಳಗೆ ನಾವುಗಳು ಅದಾವ ಮಟ್ಟಿಗೆ ಮುಳುಗಿದೆವೆಂದರೆ.. ನಾವಾಯಿತು ನಮ್ಮ ಪಾಡಾಯಿತು. ಪರ ವಸ್ತುವಿನ & ಪರರ ಚಿಂತೆ ನಮಗೇಕೆ ಅನ್ನುವ ಯಾರೂ ಮಾಡದ ಸೂತ್ರವೊಂದನ್ನ ನಾವಾಗಿ ನಾವೇ ಮೈಗೂಡಿಸಿ ಕೊಂಡು ಬಿಟ್ಟೆವು. ದಿನಾ ಹಾಕುವ ಹಾಲಿನ ರೇಟ್ ಕೂಡ ಸರಿಯಾಗಿ ಗೊತ್ತಿಲ್ಲ.. ತಿಂಗಳಿಗೊಮ್ಮೆ ಇಡಿಯಾಗಿ ಅದರ ಹಣ ಕಟ್ಟಿ ಬಿಡುವ ಹಲವರಿಗೆ ಅದರ ಗೊಡವೆ ಬೇಕಿಲ್ಲ. ಅಮ್ಮನೋ ಅಥವಾ ಹೆಂಡತಿಯೋ ಹೊತ್ತು ತರುವ ದಿನಸಿಗಳ ಬೆಲೆಯಾಗಲಿ.. ಸೊಪ್ಪು ತರಕಾರಿಗಳ ಮೌಲ್ಯವಾಗಲಿ.. ಎಣ್ಣೆ-ಬೆಣ್ಣೆ-ತುಪ್ಪಗಳಾಗಲಿ.. ಹಣ್ಣು ಹಂಪಲುಗಳಾಗಲಿ.. ಕೇಬಲ್ ಟೀವಿ ಗಳ ರೇಟ್ ಆಗಲಿ.. ಡಿಶ್ ಟೀವಿಗಳ ಉಪಯುಕ್ತ ಪ್ಯಾಕೇಜುಗಳ ರೇಟ್ ಆಗಲಿ.. ಊಹುಂ ಯಾವುದೊಂದರ ಕುರಿತಾಗಿಯೂ ಯಾರಿಗೂ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ. ನಮಗೆ ಗೊತ್ತಿರುವ ಖಚಿತ ಮಾಹಿತಿ ಗಳೆಂದರೆ ಇಷ್ಟೇ.. ಒಂದು ದಿನಕ್ಕೊಂದು ಬಣ್ಣ ಬದಲಿಸುವ ಪ್ರಸಕ್ತ ರಾಜಕೀಯದ ನಾಟಕ & ರಂಗಿನಾಟ.. ಎರಡನೆಯದು ಸದಾ ಬದಲಾಗುತ್ತಾ ಸುದ್ದಿಯಲ್ಲಿರುತ್ತಲೇ ಇರುವ ಪೆಟ್ರೋಲ್ ಡೀಸೆಲ್ & ಗ್ಯಾಸ್ ಗಳ ಬೆಲೆ ಏರಿಕೆ..!! 

ಈಗ ಗಮನವಿಟ್ಟು ನ್ಯೂಸ್ ಕೇಳುವುದಿಲ್ಲ. ಪೆಪರ್ರೋ ಮುಖ ಪುಟ & ಕಡೆಯ ಪುಟ ಕ್ರೀಡಾ ಕಾಲಂ ಗಳು ತಮ್ಮನ್ನ ತಾವು ಪೂರ್ತಿಯಾಗಿ ಓದಿಸಿ ಕೊಂಡರೆ ಹೆಚ್ಚು. ಪುಸ್ತಕಗಳ ಮೇಲಣ ಅಭಿಮಾನ ಎಷ್ಟು ಜನರಿಗಿದ್ದೀತು..?? ಕಲೆ ಸಂಸ್ಕೃತಿಯ ಕುರಿತಾದ ಕಾರ್ಯಕ್ರಮಗಳನ್ನ ಟೀವಿ ಯಲ್ಲಿ ಮಗ್ನರಾಗಿ ನೋಡುವವರೆಷ್ಟು ಜನ..?? ಒಂದೊಳ್ಳೆ ಸಾಹಿತ್ಯ ಸಂವಾದಕ್ಕೆ.. ಅಥವಾ ಅಂಥಹ ಕಾರ್ಯಕ್ರಮಗಳಿಗೆ ಮನಸಿಟ್ಟು ಹೋಗುವವರೆಷ್ಟು ಜನ..?? ಎಷ್ಟು ಜನ ನಾಟಕ ನೋಡುವ ಹಂಬಲ ಉಳ್ಳವರು..?? ಎಷ್ಟು ಜನ ಕಲಾತ್ಮಕ ಸಿನಿಮಾಗಳನ್ನು ಕೊಂಕಿಲ್ಲದೆ ವೀಕ್ಷಿಸ ಬಲ್ಲರು..?? ಎಷ್ಟು ಜನ ಸಿನಿಮಾ ಮಂದಿಯ ಬಣ್ಣ ಬಣ್ಣದ ಗಾಸಿಪ್ ಗಳ ಕುರಿತಾಗಿ ಹರಟದೆ ಉಳಿಯಬಲ್ಲವರು..??ಎಷ್ಟು ಜನ ಇಪ್ಪತ್ತರ ತನಕದ ಮಗ್ಗಿಯನ್ನ ಈಗಲೂ ತಪ್ಪಿಲ್ಲದೆ ಹೇಳ ಬಲ್ಲರು..?? ಎಷ್ಟು ಜನ ತಪ್ಪಿಲ್ಲದೆ ಈಗಲೂ ಕನ್ನಡ ಪದಗಳನ್ನ ಅಂದವಾಗಿ ಬರೆಯ ಬಲ್ಲರು..?? ಜನಗಣತಿ.. ಪ್ರಸಕ್ತ ಸಾಧಕರು.. ಊಹೂಂ ಇದರ ಕುರಿತಾಗಿಯೂ.. ಯಾವುದರ ಕುರಿತಾಗಿಯೂ ನಿಖರ ಮಾಹಿತಿ ಯಾರಿಗೂ ಇಲ್ಲದಿಲ್ಲ. ಹಾಗೆ ಇದರ ಬಗ್ಗೆ ಜ್ಞಾನ ಉಳ್ಳವರು ಕೂಡ ತಮ್ಮನ್ನ ತಾವು ಬದಲಾಯಿಸಿ ಕೊಳ್ಳದೆ ಹಾಗೆ ಉಳಿದು ಬಂದ ಮಹಾನ್ ಸಾಧಕರೆ ಸರಿ.. ಅಂಥವರಾದರೂ ಎಷ್ಟು ಜನ..?? ಕೇವಲ ಎಗ್ಸಾಮ್ ಗಳ ಸಲುವಾಗಿ ಅಷ್ಟೇ ಜನರಲ್ ನಾಲೆಡ್ಜ್ ಪುಸ್ತಕಗಳನ್ನು ಮುಟ್ಟುವ ನಾವೆಲ್ಲಾ ನಿಜವಾಗಿಯೂ ಪ್ರಾಮಾಣಿಕವಾಗಿ ಅಪ್ಡೇಟ್ ಆಗ ಬೇಕಿದೆ.


ಹಲವಾರು ವೈಜ್ಞಾನಿಕ ವಿಚಾರಗಳನ್ನು ಚರ್ಚಿಸುತ್ತ ಬಾಸ್ ಕಡೆಗೆ ನಮ್ಮ ಮೈ ನವಿರೇಳಿಸುವಂತಹ ವಿದ್ಯಾಮಾನವೊಂದರ ಕುರಿತಾಗಿ ಮಾತನಾಡ ತೊಡಗಿದರು.. ಕ್ವಾರ್ಕ್ಸ್ [Quarks]. ನಮ್ಮ ಬಾಸ್ ಅಜಯ ಕುಮಾರ್ ಒಬ್ಬ ಅದ್ಭುತ ಸೈನ್ಸ್ ಲವರ್. ನಾವು ತೀರ ಇತ್ತೀಚಿಗೆ ಬದಲಾದ ಫಿಲಾಸಫಿಕಲ್ ಥಾಟ್ಸ್ ಲವರ್ಸ್. ನಮ್ಮ ಬಾಸ್ ಹೇಳುತ್ತಾ ಹೋದರು.. ವಿಜ್ಞಾನದ ಒಂದು ವಿಶೇಷತೆ ಎಂದರೆ ನಿನ್ನೆ ಯಾರೋ ಒಬ್ಬ ವಿಜ್ಞಾನಿ ಮಾಡಿಟ್ಟ ಸಿದ್ಧಾಂತಗಳು ಇವತ್ತಿನ ವರೆಗೂ ಸತ್ಯವೆನಿಸಿ ಕೊಳ್ಳುತ್ತವೆ. ಇವತ್ತು ಅದನ್ನು ಬದಲಾಯಿಸಿ ಅದು ತಪ್ಪು.. ಅದು ಅದಲ್ಲ, ಅದು ಇದು ಎನ್ನುವ ಸಿದ್ಧಾಂತಗಳನ್ನ ಕೂಡ ನಾವು ಅಷ್ಟೇ ಮುಕ್ತವಾಗಿ ಅಷ್ಟೇ ಸತ್ಯವೆಂದು ನಂಬಿ ಬಿಡುತ್ತೇವೆ. ಕಾರಣ ಅದಕೆ ಸಾಕ್ಷಿ ಪುರಾವೆಗಳಿವೆ.. ಹಿಂದಿನದಕೂ ಇತ್ತು. ಆದರೆ ಈಗಿನದರ ಬಲ ಮತ್ತು ಪ್ರಾಶಸ್ತತೆ ಹೆಚ್ಚು. ಅದನ್ನೆಲ್ಲಾ ಅವರು ಸಾಧಿಸಲು ಶುರುವಾಗಿದ್ದು ಕೂಡ ಹಿಂದಿನವರ ಸಿದ್ಧಾಂತಗಳ ಮೂಲಗಳಿಂದಲೇ. 


ಬಾಸ್ ಕ್ವಾರ್ಕ್ಸ್ ಗಳ ಬಗ್ಗೆ ಹೇಳುತ್ತಾ ಹೋದರು.. ನಾವೂ ಕುತೊಹಲ ಭರಿತರಾಗಿ ಕೇಳುತ್ತಾ ಹೋದೆವು. ಯಾವುದೇ ಒಂದು ಮೂಲ ಧಾತುವಿನ.. ಒಂದು ಅಣುವನ್ನು ವಿಂಗಡಿಸಿದಾಗ ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಗಳು ಸಿಗುತ್ತವೆ ಅನ್ನುವುದು ಸಾಮಾನ್ಯವಾಗಿ ಹೈಸ್ಕೂಲ್ ವರೆಗೂ ಓದಿರಬಹುದಾದ ಯಾರಿಗಾದರೂ ತಿಳಿದಿರಬಹುದಾದ ವಿಷಯ. ಇಲ್ಲಿಯ ತನಕ ಒಂದು ಅಣುವೆಂದರೆ ಇನ್ನು ವಿಭಜಿಸಲಾಗದ, ಆ ಮೂರು ಶಕ್ತಿಗಳ ಒಂದು ಚಿಕ್ಕ ಕಣ ಅನ್ನುವುದಷ್ಟೇ ಆಗಿತ್ತು. ಬಾಸ್ ಹೇಳುತ್ತಾ ಹೋದರು.. ವಿಜ್ಞಾನಿಗಳ ಇತ್ತೀಚಿನ ಅನ್ವೇಷಣೆಗಳ ಪ್ರಕಾರ ಅಣುವನ್ನು ಇನ್ನೂ ಚಿಕ್ಕದಾಗಿ ವಿಭಜಿಸಬಹುದು.. ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್ ಗಳ ಆಚೆಗೂ ಅಣುವಿನೊಳಗೆ ಅದಕಿಂತಲೂ ಸೂಕ್ಷ್ಮವಾದ ಶಕ್ತಿ ಇದೆ ಅದರ ಹೆಸರೇ ಕ್ವಾರ್ಕ್ಸ್. 


ಈ ಕ್ವಾರ್ಕ್ಸ್ ಎನ್ನುವ ಧಾತುವಿನ ಶಕ್ತಿ ಮತ್ತು ಅದರ ಕಾರ್ಯವನ್ನು ಅವರು ಹೇಳುವಾಗ ಅದನ್ನು ಅಷ್ಟು ತನ್ಮಯತೆ ಇಂದ ಕೇಳಿಸಿ ಕೊಂಡ ಬಗೆ ಇದೆಯಲ್ಲಾ..!! ಅದು ಎಷ್ಟೋ ವರುಷಗಳ ನಂತರ ನನ್ನನ್ನು ನನ್ನ ಶಾಲಾ ದಿನಗಳ ಅನುಭವಕೆ ಎಳೆದೊಯ್ದಿತ್ತು. ಕ್ವಾರ್ಕ್ಸ್ ಕಣಕ್ಕೆ ಮೂಲಭೂತವಾಗಿ ಎರಡು ಗುಣಗಳು, ಗುಣಗಳು ಅನ್ನುವುದಕ್ಕಿಂತ ಅದರ ಕಾರ್ಯ ರೀತಿ ಅನ್ನಬಹುದು. ಕನ್ನಡ ದಲ್ಲಿ ಇದನ್ನ ಹೇಳಲು ಹೋದರೆ ಸ್ವಲ್ಪ ಕಷ್ಟ ಅನಿಸ ಬಹುದು ಮತ್ತು ಅಷ್ಟು ಸುಲಭಕೆ ಅರ್ಥಕ್ಕೆ ನಿಲುಕದೆಯೂ ಇರಬಹುದು. ಕ್ಷಮೆ ಇರಲಿ ಅದನ್ನ ಇಂಗ್ಲಿಶ್ ನಲ್ಲೆ ಹೇಳುತ್ತೇನೆ..


A quark is a fundamental constituent of a matter. There are two things which can be seen as particles. But there are certain things such as energy which can only be felt. These are two states in which Quark appears. It highly fluctuates between being a visible particle to a felt energy. Hence it cannot be directly observed. There are certain tough theroies and jargons of Science used like Color confinement to describe this. He even said that its a concept which is scientifically proved and very similar to what we call Maaya. As in spirituality, there is aakar and niraakar... Like that a quark is existing and non existing. 

ಇದನ್ನ ಕನ್ನಡದಲ್ಲಿ ಹೇಳುವುದಾದರೆ ಈ ಕ್ವಾರ್ಕ್ ಅನ್ನುವ ಈ ಕಣ, ಇರುವಿಕೆ ಮತ್ತು ಇಲ್ಲದಿರುವಿಕೆ ಗಳ ನಡುವೆ ನಿರಂತರವಾಗಿ ತೊಯ್ದಾಡುವ ಒಂದು ಶಕ್ತಿ. ಎಲೆಕ್ಟ್ರಿಕಲ್ ಫ್ರೀಕ್ವೆನ್ಸಿಯ ಹಾಗೆ, ಒಂದು ಸೆಕೆಂಡ್ ಗೆ ಐವತ್ತು ಪರಿಪೂರ್ಣ ಕಂಪನಗಳನ್ನ ಒಂದು ಎಲೆಕ್ಟ್ರಾನ್ ಕಣ ಪೂರ್ಣ ಗೊಳಿಸುವುದಾದರೆ, ಅದು ನಮ್ಮ ಭಾರತೀಯ ಎಲೆಕ್ಟ್ರಿಕಲ್ ಫ್ರೀಕ್ವೆನ್ಸಿಗೆ ಸಮ. ಇದನ್ನ ನಾವು ಹರ್ಟ್ಜ್ ಮೀಟರ್ ನಲ್ಲಿ ನೋಡ ಬಹುದು. ಹರ್ಟ್ಜ್ ಮೀಟರ್ ನ್ನು ನಾವು ೨೩೦ ವೋಲ್ಟು ಗಳ ವಿದ್ಯುತ್ ಶಕ್ತಿಗೆ ಒಳ ಪಡಿಸಿದಾಗ ಅದರ ಒಳಗಣ ತಂತು ಸೂಚಕಗಳು ೪೯ ಅಥವಾ ಐವತ್ತರ ಸಂಖ್ಯೆಗೆ ತರಂಗಾಂತರ ಗಳನ್ನ ಸೃಷ್ಟಿಸುತ್ತವೆ. ಅದೊಂಥರ ವೈಬ್ರೇಶನ್. ಅದು ಪೂರ್ತಿ ನಿಲ್ಲುವುದೂ ಇಲ್ಲ.. ಹಾಗೆ ಹೆಚ್ಚು ದೂರಕೆ ಕ್ರಮಿಸುವುದೇ ಇಲ್ಲ. ಒಂದು ಸೆಕೆಂಡ್ ಗೆ ಐವತ್ತು ಸಾರಿ ಕಂಪಿಸಿ ಕೊಳ್ಳುತ್ತವೆ. ಅದು ನಿಂತಂತೆಯೂ ತೋರುವುದಿಲ್ಲ.. ಚಲಿಸುವಂತೆಯೂ ತೋರುವುದಿಲ್ಲ. ನಮ್ಮ ಜೇನು ಹುಳು, ನೊಣ, ಅಥವಾ ಸೊಳ್ಳೆಗಳ ರೆಕ್ಕೆಗಳ ಕಂಪನ ಇದಕ್ಕಿಂತಲೂ ಹೆಚ್ಚು. ಬರಿಗಣ್ಣಿಂದ ಅವುಗಳನ್ನು ನೋಡಲಾಗದು. ನಮ್ಮ ರೇಡಿಯೋ ತರಂಗಾಂತರಗಳು ಕೂಡ ಇದಕ್ಕಿಂತಲೂ ಸೂಕ್ಷ್ಮ. ಮೊಬೈಲ್ ನೆಟ್ವರ್ಕ್ ಮತ್ತು ರೇಡಿಯೋ, ಸ್ಯಾಟಲೈಟ್ ತರಂಗಾಂತರಗಳು ಮೆಗಾ ಹರ್ಟ್ಜ್ ಗಳಲ್ಲಿ ಅಲೆಯಲ್ಪಡುತ್ತವೆ. ಒಂದು ಸೆಕೆಂಡಿನ ಒಂದು ಲಕ್ಷದ ಒಳಗಿನ ಒಂದು ಭಾಗ ನಮ್ಮ ರೇಡಿಯೋ ತರಂಗಗಳ ಕಂಪನಗಳು. ಈ ಕ್ವಾರ್ಕ್ ಗಳ ಕಂಪನ ಅದಕ್ಕಿಂತಲೂ ಸಾವಿರಾರು ಪಟ್ಟು ಕಡಿಮೆ ಸಮಯಕ್ಕೆ ಪೂರ್ತಿಯಾಗುತ್ತದಂತೆ. ಜಸ್ಟ್ ಇಮ್ಯಾಜಿನ್..!! ಅಷ್ಟು ಸೂಕ್ಷ್ಮವಾಗಿ ಇದ್ದು ಇಲ್ಲವಾಗುವ ವಸ್ತುಗಳನ್ನು ಬರಿಗಣ್ಣಲ್ಲಿರಲಿ ಇಲ್ಲಿಯ ತನಕ ಸೃಷ್ಟಿಯಾದ ಸೂಕ್ಷ್ಮಾತಿ ಸೂಕ್ಷ್ಮವಾದ ಮೈಕ್ರೋಸ್ಕೋಪ್ ಗಳಿಂದಲೂ ನೋಡಲು ಸಾಧ್ಯವಿಲ್ಲ. ಮನುಷ್ಯನಾಗಲೀ, ಯಾವ ಜಂತುವಾಗಲಿ, ಯಾವ ವಸ್ತುವಾಗಲಿ, ಯಾವ ಧಾತುವೆ ಆಗಲಿ ಎಲ್ಲವೂ ಒಂದು ಅಣುವಿಂದಲೇ ರೂಪುಗೊಂಡದ್ದು. ಹೀಗೆ ಇದ್ದು ಇಲ್ಲದಂತಿರುವುದು ಕೂಡ ಎಲ್ಲ ವಸ್ತುಗಳಲ್ಲೂ ನಡೆಯುತ್ತಿದೆ.. ಕೇವಲ ಅದು ನಮಗೆ ಗೋಚರಿಸುತ್ತಿಲ್ಲವಷ್ಟೇ. ಇದ್ದು ಇಲ್ಲವಾಗುವಿಕೆಯ ನಡುವಿನದೆ ಬದುಕು..!! ಕಣ್ಣೆದುರಿಗೆ ಈಗಷ್ಟೇ ಇದ್ದು ಈಗಷ್ಟೇ ಇಲ್ಲವಾಗುವಿಕೆಯೇ ಅಲ್ಲವೇ ಮಾಯೆ..?? ಹಾಗೆ ಮಾಡುವವರೇ ಅಲ್ಲವೇ ಜಾದೂಗಾರರು. ಹಾಗೆ ನೋಡಿದರೆ ಇದೇ ಸೃಷ್ಟಿಗೆ ಸೃಷ್ಟಿಯೇ ಈ ಮಾಯಾ ಮತ್ತು ಪ್ರತ್ಯಕ್ಷ್ಯವಾಗುವಿಕೆಯ ಆಟದಲ್ಲಿಯೇ ಸ್ಥಾಪಿತವಾಗಿದೆ ಅನ್ನುವುದು ತಕ್ಷಣಕೆ ನಂಬಲಾರದ ಅಸಾಧ್ಯ ಆಶ್ಚರ್ಯಕರ ವಿಷಯವೆನಿಸಬಹುದು.

ಬಾಸ್ ಹೇಳುತ್ತಾ ಹೋದರು.. ಐನ್ ಸ್ಟೀನ್ ಕೂಡ ತನ್ನ ಮೆದುಳಿನ ಕೇವಲ ಹದಿಮೂರು ಪ್ರತಿಶತ ಮಾತ್ರ ಉಪಯೋಗಿಸಿಕೊಂಡ ಬುದ್ಧಿ ಜೀವಿ. ಅದಕಿಂತ ಜಾಸ್ತಿ ಅವರಿಗೂ ಸಾಧ್ಯವಾಗಲಿಲ್ಲ. ವಿಶ್ವೇಶ್ವರಾಯ ರಾಗಲಿ, ಗೆಲಿಲಿಯೋ, ನ್ಯೂಟನ್, ಎಡಿಸನ್, ಡಾರ್ವಿನ್, ಗ್ರಹಂಬೇಲ್ ಯಾವ ವಿಜ್ಞಾನಿಯೇ ಆದರೂ ಇದಕ್ಕಿಂತ ಹೆಚ್ಚು ಮೆದುಳನ್ನು ಉಪಯೋಗಿಸಿದ್ದೇ ಇಲ್ಲವಂತೆ. ಮಹಾತಿಮಹಾ ಬುದ್ಧಿಜೇವಿಗಳೇ ಅಷ್ಟೆಂದ ಮೇಲೆ ನಮ್ಮ  ನಿಮ್ಮಗಳ ಮೆದುಳಿನ ಶಕ್ತಿ ಅಂದಾಜಿಗೆ ನಿಲುಕಬಹುದೇ..?? ನಮ್ಮ ಪೂರ್ವಿಕರು, ಪುರಾತನ ಕಾಲದ ಪ್ರಾಚೀನರು ಇವರೆಲ್ಲರಿಗಿಂತಲೂ ಬುದ್ಧಿಮತ್ತೆ ಉಳ್ಳವರಾಗಿದ್ದವರು ಎನಿಸುತ್ತದೆ. ಅವರು ಗೀಚಿದ ಪಂಚಾಗ, ತಾರ ಭವಿಷ್ಯ, ಯಾವ ಉಪಕರಣಗಳೂ ಇಲ್ಲದೆ ಅಂಥಂಥಹ ಬೃಹತ್ ಗಳನ್ನ ನಿರ್ಮಿಸಿದ ಅವರ ಕ್ಷಮತೆ ಇವರಿಗಿಂತಲೂ ಹೆಚ್ಚೇ ಸರಿ. ಮನುಷ್ಯ ತನ್ನ ಮೆದುಳಿನ ನಿಯಂತ್ರಣವನ್ನು ಪೂರ್ತಿ ತನ್ನ ಹತೋಟಿಯಲ್ಲಿಟ್ಟುಕೊಂಡು ಅದನ್ನು ಪೂರ್ತಿಯಾಗಿ ಉಪಯೋಗಿಸಿ ಕೊಳ್ಳುವವನಾದರೆ ಅವನಿಗೆ ದೇವರಿಗೂ  ಮಿಗಿಲಾದ ಶಕ್ತಿಗಳು ಲಭ್ಯವಾಗಬಹುದಂತೆ. 

ಅದೇ ಪ್ರಯತ್ನದಲ್ಲೇ ಈ ಹಿಂದೆ ಹಲವಾರು ಋಷಿ ಮುನಿಗಳು ಏಕಾಗ್ರತೆಯಿಂದ ವರುಷಾನುಗಟ್ಟಲೆ  ಬರೀ ಗಾಳಿ ಸೇವನೆಯಲ್ಲೇ ಬದುಕುತ್ತಾ ತಪ್ಪಸ್ಸು ಮಾಡುತ್ತಾ ಆ ಶಕ್ತಿಯ ಅನ್ವೇಷಣೆಯಲ್ಲಿ ತೊಡಗಿ ಕೊಂಡಿರಬಹುದೆಂದು ಹೇಳಬಹುದು ಎನ್ನುತ್ತಾರೆ ಬಾಸ್. ಅದು ನಿಜವಾಗಿರಲೂ ಬಹುದಲ್ಲವೇ..? ದೇವರು ಅವರ ತಪಸ್ಸಿಗೆ ಮೆಚ್ಚಿ ಅವರ ಇಚ್ಚಾನುಸಾರ ನೆರವೇರುವ ಹಾಗೆ ವರವನೀಯುತ್ತ ಇದ್ದ ಕತೆ ನಮ್ಮ ಪುರಾಣಗಳಲ್ಲಿ ಅದೆಷ್ಟಿಲ್ಲ..?? ಈಗಲೂ ನಮ್ಮ ಹಿರಿಯರು, ಗುರುಗಳು, ಮಾರ್ಗದರ್ಶಕರು ಅದನ್ನೇ ಅಲ್ಲವೇ ಹೇಳುವುದು, concentrate ..!! ಮನಸ್ಸು & ಬುದ್ಧಿಯನ್ನ ಹತೊಟಿಯಲ್ಲಿಟ್ಟುಕೋ.. ಅತ್ತಿಂದಿತ್ತ ಹರಿಯ ಬಿಟ್ಟರೆ ಯಾವ ಸಿದ್ಧಿಯೂ ಸಿದ್ಧಿಸಲಾರದು. ಪರೀಕ್ಷೆಗಳ ಸಮಯದಲಿ ಬೇರಾವ ಕಡೆಗೂ ನಾವು ಗಮನ ಕೊಡದೆ ತಲ್ಲೀನರಾಗಿ ಗಮನ ಕೊಟ್ಟು ಓದುವುದನ್ನು ಕಲಿಸಿ ಕೊಟ್ಟಿದುದರ ಮೂಲ ಈ ಚಿಂತನೆಯೇ ಇರಬಹುದಲ್ಲವೇ..?? ಹೀಗೆ ಒಂದಷ್ಟು ತಿಂಗಳ ಹಿಂದೆ ಬಿಡುಗಡೆಯಾದ ದೇವಕಣದ ಇತಿಹಾಸವನ್ನೂ ಬಾಸ್ ಹೇಳಿದ ಈ ರೋಚಕ ಧಾತುವಿನ ಮೂಲವನ್ನು ಪರಿಶೀಲಿಸಲು ಇಂಟರ್ನೆಟ್ ಅನ್ನು ಜಾಲಾಡಿದಾಗ ನನಗೆ ಸಿಕ್ಕಿದ್ದು ಎರಡರ ನಡುವೆ ಬಹುಪಾಲು ಸಾಮ್ಯತೆಗಳು ಬಿಟ್ಟರೆ.. ಮಿಕ್ಕದ್ದು ಅಸಂಭದ್ದ ಮಾತ್ರ. 


ನಾನು ಈ ಕ್ವಾರ್ಕ್ ಕಣವೇ ದೇವ ಕಣವಿರಬಹುದಾ ಎಂದು ಭಾವಿಸಿದ್ದೆ. ದೇವ ಕಣಗಳ ಕುರಿತಾದ ರಹಸ್ಯ ಸುದ್ದಿ ಬಿಡುಗಡೆಯಾದ ದಿನ ನಾನ್ಯಾವುದೋ ಪ್ರವಾಸದಲ್ಲಿದ್ದೆ. ಅದರ ಪೂರ್ಣ ವಿವರಗಳು ನನಗೆ ತಿಳಿದಿರಲಿಲ್ಲ. ಆದರೆ ಇಂಟರ್ನೆಟ್ ಮೂಲಗಳ ಪ್ರಕಾರ ದೇವಕಣದ ಹೆಸರು ಹಿಗ್ಗಿನ್ಸ್ ಬೋಸೋಮ್ಸ್. ಅದು ಹಲವಾರು ಗತ್ಯಂತರಗಳ ಕುರಿತು ಬೆಳಕು ಚೆಲ್ಲುತ್ತಾ ಹೋಯಿತು. ಹದಿನೈದು ಸಾವಿರ ಬಿಲಿಯನ್ ವರ್ಷಗಳ ಆಚೆಗೆ ನಡೆದಿರಬಹುದಾದ ಮಹಾ ಸ್ಪೋಟ [Big Bang theory] ದಿಂದಾಗಿ ಈ ಜಗತ್ತು ಉದ್ಭವ ಆಗಿರಬಹುದು ಅನ್ನುವ ಪುರಾವೆಗಳು ಸಿಗುತ್ತವೆ. ಆ ಮಹಾ ಸ್ಪೋಟಕ್ಕೆ ಕಾರಣವಾದ ಶಕ್ತಿಯ ಮೂಲ ಕಣವೇ ದೇವ ಕಣ. ಅದನ್ನ ವಿವರಿಸಲು ಖಂಡಿತ ನನ್ನಿಂದ ಸಾಧ್ಯವಿಲ್ಲ. ಲಿಂಕ್ ಕೊಡುತ್ತೇನೆ ಟೀವೀ ೯ ರ ಈ ವಿಶೇಷ ವರದಿಯನ್ನ ನೀವೇ ನೋಡಿ.


ಆ ಮೂಲ ಅಣುವಿನ, ಮೂಲ ಧಾತುವಿನ ಒಳಗೆ ಇಷ್ಟೆಲ್ಲಾ ಶಕ್ತಿಯಿದೆಯಾ..?? ಸೃಷ್ಟಿ ರಹಸ್ಯಗಳೇ ಬಲು ವಿಚಿತ್ರ ಮತ್ತು ಸದಾ ಆಶ್ಚರ್ಯಕರ. ದೇವರು ಕೇವಲ ಒಂದು ಕಣದಲ್ಲಿರುವನೆ..?? ದೇವರು ಹಿರಣ್ಯ ಕಷ್ಯಪು ಒಡೆದ ಕಂಬದಲ್ಲಿದ್ದುದನ್ನು ಕೇಳಿದ್ದ ನಾವು, ಭೂ ತಾಯಿಯ ಸಂರಕ್ಷಿಸಲು ಸಾಗರದಡಿಯಲ್ಲಿ ಕುಳಿತದ್ದು ಕೇಳಿದ ನಾವು, ಹಲವಾರು ಅವತಾರವೆತ್ತಿ, ಅವನ ಹಲವಾರು ಲೀಲೆಗಳ ಕೇಳಿದ ನಾವು, ಸಾಮಾನ್ಯ ಮಾನವನಂತೆಯೇ ಬದುಕಿ ನಾ ಕೇವಲ ದೇವದೂತನಷ್ಟೇ ಎಂದು ಜಗದೊಳಗಿನ ಎಲ್ಲಾ ಕಷ್ಟ ನೋವುಗಳನ್ನು ಸಾಮಾನ್ಯ ಮನುಷ್ಯನಂತೆ ಅನುಭವಿಸಿದ ಅವನ ಸಿಂಪ್ಲಿಸಿಟಿ ಯನ್ನ ನೋಡಿದ ನಾವು, ದೇವರು ಕಣದೊಳಗೂ ಇರಬಲ್ಲ ಎಂಬುದನ್ನು ನಂಬಲು ಅಷ್ಟು ಚರ್ಚೆ ಮಾಡುವುದಾದರೂ ಅಗತ್ಯವಿದೆಯೇ..?? ಅಗತ್ಯವಿದೆ.. ಅದೇ ವಿಜ್ಞಾನ. ದೇವರ ಇರುವಿಕೆ ಮತ್ತು ಇಲ್ಲದಿರುವಿಕೆಯ ಕುರಿತಾದ ಚರ್ಚೆ ಇಂದು ನಿನ್ನೆಯದಲ್ಲ. ನಾಳೆಗೆ ಮುಗಿಯುವುದೂ ಇಲ್ಲ. ಅದು ನಿರಂತರ. ಕವಿರಾಜರು ಹೇಳುವಂತೆ ಕಣ ಕಣದೆ ಶಾರದೆ [ದೇವರು].. ಕಲೆತಿಹಳು ಕಾಣದೆ..!!

ಜಗತ್ತಿನ ಸೃಷ್ಟಿಗಳಲಿ ಮಾನವನೇ ಶ್ರೇಷ್ಟ, ಮಾನವನಿಗಿಂತ ಬುದ್ಧಿಜೀವಿ ಇಲ್ಲ, ಮಾನವನಿಗಿಂತ ದಡ್ದನಿಲ್ಲ. ಮನುಷ್ಯರಿಗಿಂತ ಸುಂದರರಿಲ್ಲ.. ಮನುಷ್ಯರಿಗಿಂತ ಕುರೂಪಿಗಳಿಲ್ಲ. ಮನುಷ್ಯನಿಗಿಂತ ದಾನಿಗಳಿಲ್ಲ, ಮನುಷ್ಯನಿಗಿಂತ ಜಿಪುಣರಿಲ್ಲ. ಮನುಷ್ಯನಿಗಿಂತ ಸಿರಿವಂತನಿಲ್ಲ, ಮನುಷ್ಯನಿಗಿಂತ ಭಿಕ್ಷುಕನಿಲ್ಲ. ಮನುಷ್ಯನಿಗಿಂತ ಕ್ರಿಯಾಶಾಲಿ ಇಲ್ಲ, ಮನುಷ್ಯನಿಗಿಂತ ಸೋಂಬೇರಿಯೂ ಇಲ್ಲ. ಮನುಷ್ಯನಿಗಿಂತ ಅಹಂಕಾರಿಯೂ ಇಲ್ಲ, ಮನುಷ್ಯನಿಗಿಂತ ಸಾಧುವೂ ಇಲ್ಲ. ಮನುಷ್ಯನಿಗಿಂತ ರಾಕ್ಷಸನೂ ಇಲ್ಲ, ಮನುಷ್ಯನಿಗಿಂತ ನಿರುಪದ್ರವಿಯೂ ಇಲ್ಲ. ಮನುಷ್ಯನಿಗಿಂತ ಜವಾಬ್ದಾರನೂ ಇಲ್ಲ, ಮನುಷ್ಯನಿಗಿಂತ ಬೇಜವಬ್ದಾರಿಯವನೂ ಇಲ್ಲ. ಒಮ್ಮೊಮ್ಮೆ ಮನುಷ್ಯನ ಕೈಲಿ ಏನೆಲ್ಲಾ ಆಗುವುದಿಲ್ಲ.. ಕೆಲವೊಮ್ಮೆ ಏನೂ ಆಗುವುದಿಲ್ಲ. ಮನುಷ್ಯನಿಗಿಂತ ಶ್ರೆಷ್ಟನೂ ಇಲ್ಲ.. ಮನುಷ್ಯನಿಗಿಂತ ದುಷ್ಟನೂ ಇಲ್ಲ. ಮನುಷ್ಯನಿಗಿಂತ ಜ್ಞಾನಿಯೂ ಇಲ್ಲ.. ಅವನಿಗಿಂತ ಅಜ್ಞಾನಿಯೂ ಇಲ್ಲ. ಮನುಷ್ಯನಂತೆ ಕಲಿಸುವವನಿಲ್ಲ.. ಮನುಷ್ಯನಂತೆ ಕಲಿಯುವವರೂ ಇಲ್ಲ. ಮನುಷ್ಯನಂತ ಬೋದಕನಿಲ್ಲ.. ಮನುಷ್ಯನಂತೆ ಅದನ್ನೆಲ್ಲಾ ಬೇಡವೆಂದು ಧಿಕ್ಕರಿಸಿ ಬಿಡುವ ಜೀವವೂ ಇಲ್ಲ. ಮನುಷ್ಯನಿಗಿಂತ ಅಪ್ರತಿಮ ಬೇಟೆಗಾರನಿಲ್ಲ.. ಮನುಷ್ಯನಿಗಿಂತ ಸುಲಭಕ್ಕೆ ಬೇಟೆಗೆ ಸಿಕ್ಕಿ ಬಿಡೋ ಜೀವವೂ ಇಲ್ಲ. ಮನುಷ್ಯ ಒಂದು ಅನನ್ಯ ಸೃಷ್ಟಿ, ಈವರೆಗೂ ಕಂಡ ಜಗದೊಳಗೆ ಸರ್ವೋತ್ತಮ ಬುದ್ಧಿಶಾಲಿ. ಮನುಷ್ಯನೊಳಗೆ ಕ್ಷಮತೆ ಇದೆ, ಧ್ರುಡತೆ ಇದೆ, ದಕ್ಷತೆ ಇದೆ, ಅದಕೆ ಪೂರಕವಾಗಿ ಕೊರತೆಯೂ ಇದೆ. ಅದೆಲ್ಲವನ್ನು ಮೀರಿದವನು ಸಾಧಿಸಬಲ್ಲ. ಹಾಗೆ ಸಾಧಿಸುತ್ತ ಹೊರತವನಿಗಷ್ಟೇ ಗುಟ್ಟುಗಳ ಗಂಟು ಬಿಚ್ಚಿ ಕೊಳ್ಳುತ್ತಾ ಹೋಗುತ್ತವೆ. ಆ ಗುಟ್ಟುಗಳ ಅರ್ಥ ಮಾಡಿ ಕೊಂಡರಷ್ಟೇ ಮನುಷ್ಯ.. ಮನುಷ್ಯರಾಚೆಗಿನ ಸ್ಥಾನವನ್ನ ಗಿಟ್ಟಿಸಿ ಕೊಳ್ಳಬಲ್ಲ.

ನಮ್ಮ ಬಾಸ್ ದಿನಕ್ಕೊಮ್ಮೆಯಾದರೂ ನಮ್ಮ ಬಳಿ  ಇಂತಹ ವಿಚಾರಗಳ ಕುರಿತು ಒಂದಷ್ಟು ಹೊತ್ತು ಹರಟುತ್ತಲೇ ಇರುತ್ತಾರೆ. ಇಂತಹುದ್ದೆ ಅಲ್ಲ.. ನಮ್ಮ ಕೆಲಸಕ್ಕೆ ಪೂರಕವಾದ ತಾಂತ್ರಿಕ & ಐಟೀ ಸಂಭಂಧಿತ ವಿಚಾರಗಳನ್ನೂ ಅಷ್ಟೇ ಸೂಪರ್ ಆಗಿ ವಿಶ್ಲೇಷಿಸುತ್ತಾರೆ. off course he is a genious. ನಮಗೆ ಅವರು ಹೇಳುವಾಗಲೆಲ್ಲ ಕೇಳಲು ಅದಮ್ಯ ಉತ್ಸುಕತೆ. ಒಂದು ಕಾಲಕ್ಕೆ ಎಲ್ಲವನ್ನೂ ವಿಜ್ಞಾನಕ್ಕೆ ಪರಾಮರ್ಶಿಸಿ ಹೊಲಿಸುತ್ತಿದ್ದ ನಾವು ಈಗ ಭಾವ ಜೀವಿಗಳು. ಎಲ್ಲವನ್ನೂ ಭಾವುಕತೆಯ ಪರಿಧಿಯೊಳಗೆ ನೋಡುವುದು ನಮ್ಮ ಈಗಿನ ದೌರ್ಬಲ್ಯಗಳಲ್ಲೊಂದು. 

ನಾನು ಈ ಹಿಂದೆ ಅಪ್ರತಿಮ ಸೈನ್ಸ್ ಲವರ್. ಶಾಲೆಯಲ್ಲಿ ಪಾಠ ಕೇಳಿದ ನಂತರ ರಾತ್ರಿ ಹನ್ನೊಂದರವರೆಗೂ ಆಗಸವನ್ನ ನೋಡುತ್ತಾ ಕೂತಿರುತ್ತಿದ್ದೆ. ಚಿಟ್ಟೆ ಪ್ರಾಣಿ ಪಕ್ಷಿಗಳ ಜೀವನ ಕ್ರಮಗಳನ್ನ ಕೂಲಂಕುಶವಾಗಿ ಗಮನಿಸುತ್ತಿದ್ದೆ. ಅನ್ನದ ಗಂಜಿಯೋಳಗೂ ಏನೋ ಹುಡುಕುತ್ತಿರುತ್ತಿದ್ದೆ. ಆಲೆಮನೆಯ ಬೆಲ್ಲ, ಅಚ್ಚು ಸಕ್ಕರೆ, ಬಣ್ಣದ ಮಿಟಾಯಿ, ತೆಂಗಿನ ಮರದೆಲೆಯ ಗಿರಗಿಟ್ಲೆ, ತಗಡು ಸೈಕಲ್, ಸಂತೆಯಲ್ಲಿ ಸಿಗುವ ಗಾಳಿಗೆ ತಿರುಗುವ ಬಣ್ಣದ ಚಕ್ರ..  ಕೊಳಾಯಿ ಇಂದ ಉಸಿರ ಹೊರ ದಬ್ಬುತ್ತ ಬರುತ್ತಿದ್ದ ನೀರು, ರೈಲು, ಬಾವಿಯ ತೊಲೆಯಂಚಿಗೆ ನೇಣು ಹಾಕಿಕೊಂಡು ಸುತ್ತುತ್ತಲೇ ಇರುವ ರಾಟೆ, ಮರು ಭೂಮಿಯ ಒಂಟೆ, ಸತ್ತವನ ಮನೆ ಮುಂದೆ ಹಾಕಿದ ಹೋಗೆ, ಸಗಣಿಯ ಗುಣ, ತುಂಬೆ ಹೂವಿನ ಹಿರಿಮೆ, ಕಾಂಗ್ರೆಸ್ ಗಿಡದ ಕೆಟ್ಟತನ, ಮಲ್ಲಿಗೆ ಸಂಪಿಗೆಗಳ ಸುಗಂಧ, ಹೂಗಳ ನಾನಾ ಬಾಣಗಳು, ಸಮುದ್ರದ ನೀರು ನೀಲಿಯೇಕೆ..?? ಬಣ್ಣ ಬಣ್ಣದ ಗಣೇಶ ಮೂರ್ತಿ, ಪಿಂಗಾಣಿ ಸ್ಮೈಲಿಂಗ್ ಬುದ್ಧ, ನಿಂಬೆ ಹಣ್ಣಿನ ರಸ [ಸಿಟ್ರಿಕ್ ಆಸಿಡ್], ಕಿತ್ತಳೆ ಹಣ್ಣಿನ ಸಿಪ್ಪೆ ಯೋಳಗಿರುತ್ತಿದ್ದ ಪೆಟ್ರೋಲಿನಂಥ ದ್ರಾವಣ, ಅತ್ತಾಗ ಬರುತ್ತಿದ್ದ ಕಣ್ಣೀರು, ಹಾಲು ಮೊಸರಾಗುವುದು, ಬೆಣ್ಣೆ ತುಪ್ಪವಾಗುವುದು, ಚಳಿಯಾದಾಗ ಬಳಸಿ ಹೊದೆಯುವ ಕಂಬಳಿ, ಚಿಟ್ಟೆ ಕಂಬಳಿ ಹುಳುವಾಗಿ ಇದ್ದ ಕಥೆ,  ಹೀಗೆ ವಿಜ್ಞಾನ ಸಿಕ್ಕದ ಜಾಗವೇ ಇರಲಿಲ್ಲ. ಈಗ ವಿಜ್ಞಾನ ತುಂಬಿದ್ದ ಬಹುಪಾಲು ಜಾಗವನ್ನ ಭಾವುಕತೆ ಆರಿಸಿ ಕೊಂಡಿದೆ. ಈಗ ಫೇಸ್ಬುಕ್ ಕೂಡ ನಮ್ಮ ಭಾವುಕತೆಯನ್ನ ಹಲವೊಮ್ಮೆ ತೆರೆದಿಡಲು ಸಿಗುವ ಜಾಗವಷ್ಟೇ. ಭಾವುಕತೆ ಮತ್ತು ವಿಜ್ಞಾನವನ್ನು ಸಮೀಕರಿಸುವುದು ಅಷ್ಟು ಸುಲಭವಲ್ಲ. ಅಷ್ಟರ ಮಟ್ಟಿಗೆ ಅದು ಸಾದ್ಯವೂ ಅಲ್ಲ. ಕೊನಗೆ ವಿಜ್ಞಾನದ ಪಾತ್ರವೇ ಗಟ್ಟಿ, ಭಾವುಕತೆ ಒಂದಿಷ್ಟು ಗಟ್ಟಿತನ ಹೊಂದಿದ ಜೊಳ್ಳು ಎಂಬುದನ್ನ ಕೂಡ ಒಪ್ಪದೇ ಇರಲಾಗುವುದಿಲ್ಲ.

ಇದು ಕೇವಲ ನಮ್ಮ ಮತ್ತು ನಮ್ಮ ಬಾಸ್ ನಡುವೆ ಆದ ಒಂದೆರಡು ಚರ್ಚೆಗಳ ಸಂಕ್ಷಿಪ್ತ ರೂಪವಷ್ಟೇ. ಇದರ ಸತ್ಯಾಸತ್ಯತೆಗಳ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಅಷ್ಟು ಸುಲಭಕ್ಕೆ ದಕ್ಕಿಸಿಕೊಳ್ಳಲು ನಾನು ವಿಜ್ಞಾನಿಯೂ ಅಲ್ಲ. ಈ ಚರ್ಚೆಯನ್ನ ಸಾರ್ವಕಾಲಿಕವಾಗಿ ನೆನಪಿನಲ್ಲುಳಿಸಿಕೊಳ್ಳುವ ಸಲುವಾಗಿ ಇದನ್ನು ಗೀಚಿರುವೆ. ಇದು ಚರ್ಚೆಗೆ ಈಡು ಮಾಡಬಲ್ಲ ವಿಷಯವಾದರೂ ಅದನ್ನ ಪರಾಮರ್ಶಿಸುವ ಜ್ಞಾನ ಖಂಡಿತ ನನ್ನಲ್ಲಿಲ್ಲ. ಇದನ್ನ ಕೇವಲ ಒಂದು ಲೇಖನವಾಗಿ ಅಷ್ಟೇ ಸ್ವೀಕರಿಸಬೇಕಾಗಿ ವಿನಂತಿ.

ಹೊಸ ವರ್ಷದ ದಿನ ಒಂದು ಒಳ್ಳೆಯ ವಿಚಾರವನ್ನು ತಿಳಿದು ಕೊಂಡ ಸಮಾಧಾನ, ಸಂತೋಷ ಮತ್ತು ತೃಪ್ತಿ ನನಗೆ ದೊರಕಿತ್ತು. ಇನ್ನು ಮುಂದಾದರೂ ಜನರಲ್ ನಾಲೆಡ್ಜ್ ಹೆಚ್ಚಿಸಿ ಕೊಳ್ಳುವತ್ತ ಪ್ರಯತ್ನ  ಮಾಡಬೇಕು.  ಬೋರ್ ಹೊಡೆಸಿದೆ ಅನ್ನಿಸಿದ್ದಲ್ಲಿ ಕ್ಷಮೆ ಇರಲಿ, ಆಗಾಗ ಬರುತ್ತಿರಿ. ಧನ್ಯವಾದಗಳು.

8 comments:

 1. ತಾವು ಮಾಕ್ ಡ್ರಿಲ್ ಬಗೆಗೆ ಬರೆದದ್ದು ನೋಡಿ, ಒಂದು ವಿಚಾರ ನೆನಪಿಗೆ ಬಂತು. ನಾನು ಕೆಲಸ ಮಾಡುತ್ತಿದ್ದ ಹಳೇ ಆಫೀಸಿನಲ್ಲಿಯೂ ಮಾಕ್ ಡ್ರಿಲ ಇತ್ತು. ಅದು ಪ್ರತಿ ತಿಂಗಳೂ, ಸಂಬಳ ಹಾಕಿದ್ದೇವೆ ಎನ್ನುವುದು ನಾವೆಲ್ಲ ಏ.ಟಿ.ಟಂಗೆ ಓಡಿ ಬರೀ ಕೈಲಿ ವಾಪಸಾಗುವುದು. ಹೀಗೆ!

  ಈ ಸುಧೀರ್ಘ ಬರಹದ ಪ್ರತಿ ಸಾಲಿನಲ್ಲೂ ನನಗೆ ಗೋಚರವಾದದ್ದು ಬರಹದ ಅಪ್ಪಟ ಪ್ರಾಮಾಣಿಕತೆ.

  ReplyDelete
 2. ತುಂಬ ವಿಳಂಬವಾಗಿ ನಿಮ್ಮ ಲೇಖನ ಓದಿ ಪ್ರತಿಕ್ರಿಯೆ ಬರೆಯುತ್ತಿರುವುದಕ್ಕೆ ಕ್ಷಮಿಸಿ. ನಿಜಕ್ಕೂ ತುಂಬ ಹೆಮ್ಮೆ ಎನ್ನಿಸುತ್ತಿದೆ. ತುಂಬಾ ಪ್ರಬುದ್ಧವಾಗಿ ಬರೆಯತೊಡಗಿದ್ದೀರಿ ಸತೀಶ್. ಬದುಕನ್ನು ಭಾವನಾತ್ಮಕ ಹಾಗೂ ವೈಚಾರಿಕ ಎರಡೂ ಕೋನದಿಂದಲೂ ನೋಡುವ ದೃಷ್ಟಿ ನಿಮಗಿದೆ. ಅದೇ ಕಾರಣಕ್ಕೆ ಲೇಖನ ಬೋರ್ ಹೊಡೆಸದೇ ಗಂಭೀರವಿಷಯಗಳನ್ನು ಆತ್ಮೀಯವಾಗಿ ಹಂಚಿಕೊಂಡು ಆಪ್ತವೆನ್ನಿಸುತ್ತದೆ. ಬರಹಗಾರರಾಗಿ ನೀವು ಬೆಳೆಯುತ್ತಿದ್ದೀರಿ ಎಂಬುದು ನನಗೆ ತುಂಬಾ ಸಂತೋಷದ ವಿಷಯ ಕೂಡ. ಈ ಲೇಖನ ಪತ್ರಿಕೆಗಳ ಅಂಕಣಗಳನ್ನಲಂಕರಿಸುವ ಎಲ್ಲ ಸಾಮರ್ಥ್ಯವನ್ನೂ ಹೊಂದಿರುವುದರಿಂದ ನಿಮಗೆ ಸಮಯವಾದಾಗ ಮಾತಾಡಿ. ಆ ಬಗ್ಗೆ ವಿವರವಾಗಿ ಮಾತಾಡೋಣ. ಮತ್ತಷ್ಟು ಒಳ್ಳೆಯ ಲೇಖನಗಳ ನಿರೀಕ್ಷೆಯಲ್ಲಿ....

  ಸಿರಿ.

  ReplyDelete
 3. ನಮಸ್ತೆ ಸತೀಶ್ ಸರ್,

  ನಿಮ್ಮ ಆತ್ಮಜ್ಞಾನದ ಅನುಭವಿಕ ಲೇಖನ ಓದಿ ನಿಜವಾಗಲೂ ನಾನು ಸಂಭ್ರಮಿಸಿದೆ, ವಿ‌ಶಯದ ಎಲ್ಲೆಡೆಗೂ ಹರಿಯುವ ನಿಮ್ಮ ಜ್ಞಾನದರಿವಿನ ಪದಗಳು, ವಿವರಿಸುವ ಪರಿ, ನಿಜವಾಗಿಯೂ ನದಿಯೊಂದು ಎಲ್ಲಾ ತೊರೆಗಳ(ವಿ‍ಶಯ) ನೀರನ್ನು ತನ್ನೊಳಗೆ ಸೆಳೆದುಕೊಂಡು ಹರಿದಂತೆ ಭಾಸವಾಯಿತು. ತುಂಬಾ ಚೆನ್ನಾಗಿದೆ ನಿಮ್ಮ ಲೇಖನ......

  -ಜೆ.ವಿ.ಎಮ್

  ReplyDelete
 4. ಪ್ರೀತಿಯ ಸಹೋದರ,

  'ಪರೀಕ್ಷೆಗಾಗಿ ಮಾತ್ರ ಓದುವುದೆಂದರೆ ಕೂಲಿ ಕೆಲಸ ಮಾಡಿದಂತೆ' ಎಂದು ಎಲ್ಲೋ ಓದಿದ ನೆನಪು....ಇಂದಿನ ಮಕ್ಕಳು ಅದನ್ನೇ ಮಾಡುತ್ತಿರುವುದು ಕಟು ಸತ್ಯ..... ನೀವು ಕೇವಲ ಪುಸ್ತಕದ ಹುಳು ಆಗಿರಲಿಲ್ಲ, ಇತರ ಚಟುವಟಿಕೆಗಳಲ್ಲೂ ನೀವು ಪ್ರತಿಭಾವಂತರು ಎನ್ನುವುದನ್ನು ನೀವು ಹೇಳಬೇಕೆಂದು ಇಲ್ಲ ...ಈಗಾಗಲೇ ನಾವು ಅದನ್ನು ಅರ್ಥ ಮಾಡಿಕೊಂಡಿದ್ದೇವೆ.....ಎಲ್ಲಾ ವಿಷಯಗಳಲ್ಲೂ ನಿಮಗಿರುವ ಆಸಕ್ತಿ ನಿಜಕ್ಕೂ ಶ್ಲಾಘನೀಯ....ನೀವು ಬರೆದ ಲೇಖನ ಯಾರಿಗೆ ಹೇಗೆನ್ನಿಸಿತೋ ಗೊತ್ತಿಲ್ಲ....ನಾನು ಮಾತ್ರ ನಿಮ್ಮ ಲೇಖನದಿಂದ ಅನೇಕೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡೆ...ಜೀವನವೇ ಒಂದು ಪಾಠಶಾಲೆ, ಜೀವಮಾನವೆಲ್ಲಾ ಕಲಿತರೂ ಕಲಿಯಲಾರದಷ್ಟು ವಿಷಯಗಳು ತುಂಬಾ ಇರುತ್ತವೆ......ನಿಮ್ಮ ಬರಹದಲ್ಲೂ ಕೆಲವು ಉಪಯುಕ್ತ ವಿಷಯಗಳನ್ನು ತಿಳಿದುಕೊಂಡೆ.....ಸಾಮಾನ್ಯವಾಗಿ ಎಲ್ಲರಿಗೂ ಇದು 'ಬೋರಿಂಗ್' ವಿಷಯವೇ ಆದರೂ ನೀವು ಅದನ್ನು ನಿರೂಪಿಸಿದ ರೀತಿ ಎಲ್ಲಿಯೂ ಬೋರ್ ಹೊಡೆಸಲಿಲ್ಲ......ಮೌಲ್ಯಾಧಾರಿತ, ಸಂಗ್ರಹಯೋಗ್ಯ, ಪ್ರಭುದ್ದ ಬರಹ......ಧನ್ಯವಾದಗಳು ..........

  'ಅಗಾಧವಾದ ನೀರಿನಲ್ಲಿದ್ದರೂ ನೀರಿಗೆ ಜಂಭವಿಲ್ಲ' ಎಂಬ ಮಾತು ನಿಮ್ಮ ಪ್ರತಿಭೆಗೆ, ನಿಮ್ಮ ನಡವಳಿಕೆಗೆ ಅನ್ವಯಿಸುತ್ತದೆ.....

  ReplyDelete
 5. ಲೇಖನ ತುಂಬಾ ಚೆನ್ನಾಗಿದೆ ಸತೀಶರೇ.....

  ReplyDelete
 6. ವಾಮನ ಬಲಿ ಚಕ್ರವರ್ತಿಯ ಹತ್ತಿರ ಮೂರು ಹೆಜ್ಜೆಗಳನ್ನು ಬಿಟ್ಟು ನಾಲ್ಕು ಹೆಜ್ಜೆ ಭೂಮಿಯನ್ನು ಕೇಳಿದ್ದರೆ.ನಾಲ್ಕನೇ ಹೆಜ್ಜೆಯನ್ನು ನಿಮ್ಮ ಬ್ಲಾಗಿನ ಮೇಲೆಯೇ ಇಡುತಿದ್ದ ಅನ್ನಿಸುತ್ತಿದೆ..ನಿಮ್ಮ ಬ್ಲಾಗ್ನಲ್ಲಿ ಏನಿಲ್ಲ..ಏನಿದೆ ಎಂದು ಹುಡುಕುವ ಅಗತ್ಯವೇ ಇಲ್ಲ..ಸಕಲ ವಸ್ತುಗಳು ವಿಷಯಗಳಾಗಿ ಹೊರಬರುತ್ತವೆ..ಸುಂದರವಾಗಿದೆ...ಹೊಸವರ್ಷದ ಮುನ್ನಾದಿನ ಪ್ರಸಂಗ ಶುರುವಾಗಿ ಪ್ರಕೃತಿಯ ನಿರ್ಮಾಣದ ಮುನ್ನುಡಿಯ ತನಕ ಹರಿದಾಡಿದೆ. ಬರೆಯುವ ಶೈಲಿ ಸುಂದರ

  ReplyDelete
  Replies
  1. ನೀನೊಬ್ಬ "ಅಸಾಧ್ಯ ಹಂದಿ" ಕಣಪ್ಪಾ :d ವ್ಯಂಗ್ಯ, ವಿಡಂಬನೆ, ತಮಾಷೆಯೊಂದಿಗೆ ಒಂದು ವೈಚಾರಿಕ ಬರಹವನ್ನ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ :) ನಂಗೂ ಗೊತ್ತಿಲ್ಲದ ತುಂಬಾ ವಿಷಯಗಳನ್ನ, ಮಾಹಿತಿಗಳನ್ನ ಚೆನ್ನಾಗಿ ವಿವರಿಸಿದಿಯಾ. ಲೇಖನ ಸುದೀರ್ಘವೆನಿಸಿದರೂ ಕೂಡಾ, "ತಾನಾಗಿಯೇ ಓಡಿಸಿಕೊಂಡು ಹೋಗುವ ಹಾಗೆ ನಿರೂಪಿಸುವ ನಿನ್ನ ಎಂದಿನ ಕಲೆಯಲ್ಲಿ" ಅನಾಯಾಸ ಗೆಲುವು ಕಂಡಿದಿಯಾ :p

   ಇಡೀ ಬ್ಲಾಗ್-ಪೋಸ್ಟ್ ಲೀ, ನಂಗೆ ತುಂಬಾನೇ ಇಷ್ಟವಾಗಿದ್ದು ಅಂದ್ರೆ,

   ''ಅಗಾಧವಾದ ನೀರಿನಲ್ಲಿದ್ದರೂ ನೀರಿಗೆ ಜಂಭವಿಲ್ಲ' ಎಂಬ ಮಾತು ನಿಮ್ಮ ಪ್ರತಿಭೆಗೆ, ನಿಮ್ಮ ನಡವಳಿಕೆಗೆ ಅನ್ವಯಿಸುತ್ತದೆ....."

   ಅದೂ ನೀನ್ ಬರೆದಿದ್ದಲ್ಲ,:p "ನಿನ್ ಬಗ್ಗೆ ಮೆಚ್ಚಿಕೊಂಡು, Ashok bro ಬರೆದ ಕಾಮೆಂಟ್" :D

   ಕೊನೆಲೈನು: ಡಿಸೆಂಬರ್ ೩೦ ಕ್ಕೆ ನ್ಯೂ ಇಯರ್ ಪಾರ್ಟಿ ಯಾರಪ್ಪಾ ಮಾಡ್ತಾರೆ...? ಅದೂ ಕೂಡಾ ೩೦ ಆದ್ಮೇಲೆ ಡೈರೆಕ್ಟಾಗಿ ಜನೆವರಿ ೧....!!! ನಮ್ ಕ್ಯಾಲೆಂಡರ್ ಹಿಂಗಿಲ್ಲಾ ಬಿಡಪ್ಪಾ :P

   ನಿನಗಂತೂ ಗೊತ್ತಾಗ್ಲಿಲ್ಲಾ, ನಿನ್ ಬಗ್ಗೆ ಆ ಲೆವೆಲ್ಲಿಗೆಲ್ಲಾ ಹೊಗಳಿದ, Ashu bro, Vaishu ಗೂ ಗೊತ್ತಾಗೋದ್ ಬೇಡವೇ....?

   Yup ... ನೀನ್ ಬರೆದಿರೋ ಒಂದು ಸಾಲು ಅರ್ಥಪೂರ್ಣವಾಗಿದೆ.

   "ನಿಜಕ್ಕೂ ನೀವೆಲ್ಲಾ Update ಆಗಬೇಕಿದೆ" :P :D

   Delete