Monday, 25 March 2013

ಹೊಸ ತಿರುವು..

ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಮೆಜೆಸ್ಟಿಕ್ ನಿಲ್ದಾಣವನ್ನ ತಲುಪಿದ ರೈಲು ಹತ್ತನೇ ಪ್ಲಾಟ್ ಫಾರ್ಮ್ ನಲ್ಲಿ ನಿಂತು, ಇನ್ನು ನನ್ ಕೈಲಿ ಆಗಲ್ರಪ್ಪ, ನನ್ ಪಾಡಿಗೆ ನನ್ನ ಬಿಟ್ಬಿಡಿ ಇಲ್ಲಿಗೆ ನನ್ನ ಕೆಲಸ ಮುಗಿಯೆತೆಂಬ ನಿಟ್ಟುಸಿರು ಬಿಟ್ಟಿತು. ಕಾಲು ಅಲ್ಲಾಡಿಸಲು ಕೂಡ ಜಾಗವಿಲ್ಲವೆಂಬಂತಿದ್ದ ಜನದಟ್ಟನೆಯೊಡನೆ ನಾನೂ ಕೊಸರಾಡಿಕೊಂಡೇ, ಆ ಜನರ ನಡುವೆ ನುಸುಳಾಡಿಕೊಂಡೇ ರೈಲಿಳಿದು ಸುತ್ತ ಕಣ್ಣಾಡಿಸಿದೆ. ರೈಲ್ವೆ ನಿಲ್ದಾಣವಾ ಇದು ನಮ್ಮೂರಿನ ರೈಲು ನಿಲ್ದಾಣದ ಜನಜಂಗುಳಿಯೇ ತಲೆಸುತ್ತುವಷ್ಟು ಇರುತ್ತದೆಂದು ಅಂದುಕೊಂಡಿದ್ದೆ.. ಇಲ್ಲಿನದು ಕನಿಷ್ಠ ಹತ್ತು ಸೋಮಪುರ ಜಾತ್ರೆಯಷ್ಟು ಜನದಟ್ಟನೆ...!! ಭಯವಾಯಿತು ಮೊದಲನೇ ಬಾರಿ ಇಷ್ಟು ಜನದ ಮಧ್ಯೆ ಕಾಣದೂರಿನಲ್ಲಿ ನಾನೊಬ್ಬನೇ ಅಸಹಾಯಕತೆಯ ಹೊತ್ತು ನಿಲ್ಲಬೇಕಾದ ಪರಿಸ್ತಿತಿಯನ್ನು ನೆನೆದು. ಒಬ್ಬರಿಗೊಬ್ಬರು ಮುಖವನ್ನೂ ನೋಡದೆ ಇಷ್ಟಗಲದ ಪ್ಲಾಟ್ ಫಾರ್ಮಿನಲ್ಲಿ ತಮ್ಮಿಷ್ಟ ಬಂದ ಕಡೆ, ತಾಳ್ಮೆ ಇಲ್ಲದವರಂತೆ ಅತ್ತಿಂದಿತ್ತ ಓಡಾಡುವ ಆ ಜನ ಸಮೂಹವನ್ನ ಕಂಡು ಕಣ್ಣುಗಳು ಹುಬ್ಬು ಹಾರಿಸಿದ್ದವು.  "ಬೆಂಗಳೂರ್ ಅಂತ ಪ್ಯಾಟೆ ನಲ್ಲಿ ಹುಟ್ಟ್ ಮೋಸಗಾರ ನನ್ ಮಕ್ಳು ಕಣ್ ಮಗ.. ನೀ ಎಸ್ಟೇ ಉಸಾರಾಗಿದ್ರೂ ನೀನ್ ಹಿಂಗೆ ಕಣ್ಮುಚ್ಚಿ ತೆಗೆಯೋದ್ರೊಳಗೆ ನಿನ್ ಚಡ್ಡಿ ಸಮೇತ ನಿನ್ನೇ ಹೊಡ್ಕೊಂಡ್ ಹೋಗ್ತಾರೆ..!! ಒಬ್ನೇ ಹೋಗ್ತಾ ಇದ್ದೀಯ ಮಗ ಉಸಾರು.. ಮನೆದೇವ್ರು ಹನುಮಂತಪ್ಪನ್ನ ನೆನೆಸ್ಕೋ.. ಒಳ್ಳೆದಾಯ್ತದೆ ಓಗ್ಬುಟ್ ಬಾ".. ಮಾಮ ಹೇಳಿದ ಅಷ್ಟೂ ಮಾತುಗಳೂ ಒಂದಕ್ಷರ ತಪ್ಪಿಲ್ಲದೆ ಜ್ಞಾಪಕ ಬಂದವು. ಉಗುಳು ನುಂಗಿದೆ. ವಿನಾಕಾರಣ ಭಯವೊಂದು ಹುಟ್ಟಿಕೊಂಡಿತ್ತು ಮನಸೊಳಗೆ. ಕಂಕುಳಿನಲ್ಲಿದ್ದ ಕೆಂಪು ಜೋಳಿಗೆ ಬ್ಯಾಗ್ ಮತ್ತು ಕೈಲಿದ್ದ ಹಳೇ ಸೂಟ್ಕೇಸ್ ನ ಮೇಲೆ ಮಿತಿ ಮೀರಿದ ಗಮನವಿಟ್ಟುಕೊಂಡು, ಅವುಗಳನ್ನ ಇನ್ನಷ್ಟು ಬಿಗಿಯಾಗಿ ಮುಷ್ಠಿ ಕಟ್ಟಿ ಹಿಡಿದು ಅಲ್ಲೇ ಹತ್ತಿರದ ಕಂಬವೊಂದರ ಬಳಿ ನಿಂತು ಶ್ರೀಧರನಿಗೆ ಕಾಯತೊಡಗಿದೆ.

ರಾತ್ರಿ ಅಲ್ಲಿಂದ ಹೊರಡುವ ಮುನ್ನ ಶ್ರೀಧರನಿಗೆ ಫೋನ್ ಮಾಡಿದ್ದು ಮಾದೇಶನ ಮೊಬೈಲ್ ಇಂದ.  ಹಿಂಗಿಂಗೆ ರಾತ್ರಿ ಹತ್ತೂವರೆ ರೈಲಿಗೆ ಹತ್ತಿ ಬರ್ತಾ ಇದೀನಿ, ಒಬ್ನೇ ಬರ್ತಾ ಇದೀನಿ ಜೊತೇಲಿ ಯಾರಿಲ್ಲ.. ನೋಡು ಬೆಂಗಳೂರ್ ನಂಗೆ ಹೊಸದು ಅಲ್ಲಿ ಬಂದು ನಿನ್ ಮನೆ ಹುಡುಕೋ ರಾಮಾಯಣ ಎಲ್ಲ ನಂಗೆ ಬೇಡಪ್ಪ ನಂಗೆ ಭಯ ಆಗ್ತದೆ.. ರೈಲ್ ಬರೋ ಮೊದ್ಲು ನನ್ನ ಕರ್ಕೊಂಡ್ ಹೋಗೋಕೆ ನೀನೆ ಸ್ಟೇಶನ್ ಗೆ ಬರ್ಬೇಕು ನೋಡು. ಆಮೇಲೆ ನೀನು ಬರೋದು ಸ್ವಲ್ಪ ತಡವಾದ್ರೂ ನಾನು ಊರು ಕಡೆ ಹೊರಡೋ ಇನ್ನ್ಯಾವದಾರು ರೈಲು ಹತ್ತಿ, ತಿರುಗಿ ಊರಿಗೇ ಹೊರಟು ಬಿಡ್ತೀನಿ ನೋಡು ಅಷ್ಟೇಯ ಅಂತ ಹೇಳಿ ಹೆದರಿಸಿ ಮಾತಾಡಿಸಿದ್ದೆ..!! ಆಯ್ತು ಆಯ್ತು ನಾನು ಬಂದಿರ್ತೀನಿ ನೀನು ಧೈರ್ಯವಾಗಿ ಹೊರಟು ಬಾ.. ಹುಷಾರು ರಾತ್ರಿ ಹೊತ್ತು ನಿಂತಿರೋ ರೈಲ್ ಇಳಿದು ರಾದ್ಧಾಂತ ಏನೂ ಮಾಡಿಕೊಳ್ಳದೆ ಜಾಗ್ರತೆಯಾಗಿ ಬಾ ಅಂತ ಶ್ರೀಧರ ಮಾತು ಮುಗಿಸಿದ್ದ ಅಷ್ಟೇ. ಅಮ್ಮ  ಸೆರಗನ್ನ ಹಿಂಡಿ ಒಣ ಹಾಕುವಷ್ಟು ಅತ್ತು, ಒಲ್ಲದ ಮನಸ್ಸಿಂದ ನನ್ನನ್ನ ಬೀಳ್ಕೊಟ್ಟಿದ್ದಳು. ಮಾಮನ ಮುಖವೂ ಮ್ಲಾನವಾಗಿತ್ತು. ಮಾದೇಶ ನೆಪ ಮಾತ್ರಕ್ಕೆ ಹಲ್ಲು ಬೀರುತ್ತಿದ್ದ. ರೈಲಿನ ಕೂಗು ಕೇಳಿದ್ದೆ ತಡ ನಾನು ಅವಸರಕ್ಕೆ ಹುಟ್ಟಿದ್ದ ಆಂಜನೇಯನಂತೆ, ದಡದಡನೆ ಒಲ್ಲದ ಮನಸ್ಸಿನಿಂದಲೇ ರೈಲು ಹತ್ತಿದ್ದೆ. ಅತ್ತು ಅಮ್ಮನನ್ನು ಇನ್ನಷ್ಟು ಗೋಳಾಡಿಸುವ ಮನಸ್ತಿತಿಯಲ್ಲಿ ಇರಲಿಲ್ಲ ನಾನಾಗ. ಅಮ್ಮನಿಗೂ, ಮಾಮನಿಗೂ, ಮಾದೆಶನಿಗೂ ಯಾವುದೇ ಸಂಭಂಧವಿಲ್ಲದ ರೈಲು ತನ್ನ ಪಾಡಿಗೆ ತಾನು ಹೊರಟಿತು. ನನಗೆ ಕಿಟಕಿಯಾಚೆ ಕೈ ಬೀಸುವ ಮನಸ್ಸಾಗಲಿಲ್ಲ. ಓರೆಯಾಗಿ ನಿಂತು ಕಿಟಕಿಯಲ್ಲಿ ಅವರನ್ನು ದಿಟ್ಟಿಸ ತೊಡಗಿದೆ ಅವರು ನಿಂತ ಜಾಗ ಮೊದಲು ಮೆಲ್ಲಗೆ, ಕ್ರಮೇಣ ತುಸು ವೇಗವಾಗಿ ದೂರ ಸರಿಯುತ್ತಾ ಹೋಯ್ತು.


ನನ್ನ ಬಳಿ ಮೊಬೈಲ್ ಫೋನ್ ಇಲ್ಲ. ಶ್ರೀಧರ ಕೊಟ್ಟ ಅವನ ಮೊಬೈಲ್ ನಂಬರನ್ನು ಒಂದು ಚಿಕ್ಕ ಹಾಳೆಯ ಮೇಲೆ ಗೀಚಿಕೊಂಡು ಅದ್ಯಾವುದೋ ಭರವಸೆಯ ಮೇಲೆ ಬಂದಿಳಿದಿದ್ದೆ ನಾನು. ಬಂದಿಳಿದ ಮೇಲೆಯೇ ಗಾಬರಿ ಬಿದ್ದು ದಿಗಿಲು ಶುರುವಾದದ್ದು..!! ಹತ್ತಿರದೆಲ್ಲೆಲ್ಲಾದರೂ ಕಾಯಿನ್ ಬೂತ್ ಫೋನ್ ಸಿಗುತ್ತದೆಯೇ ಎಂದು ಇಣುಕಿ ಸುತ್ತಿ ತಿರುಗಿ ನೋಡಿದೆ. ಕಣ್ಣಿಗೆಟುಕುವಷ್ಟು ದೂರಕೆ ಬರೀ ಟೀ ಅಂಗಡಿಗಳೇ ವಿನಃ ಟೆಲಿಫೋನ್ ಬೂತ್ ಕಾಣಿಸಲೇ ಇಲ್ಲ . ಅದಕೂ ಭಯವಾಗಿ ಎದುರುಗಡೆ ಹಾಯ್ದು ಹೋಗುತ್ತಿದ್ದ ಆಸಾಮಿಯೊಬ್ಬನ್ನನ್ನ ನಿಲ್ಲಿಸಿ ಇಲ್ಲಿ ಕಾಯಿನ್ ಬೂತ್ ಎಲ್ಲಿ ಎಂದು ವಿಚಾರಿಸಿದೆ. ಕ್ಯಾ.. ಕಾಯಿನ್ ಬೂತ್..?? ಮುಜೆ ಮಾಲೂಮ್ ನಹೀ ಕಿಸೀ ಔರ್ ಸೆ ಪೂಚೋ ಅನ್ನುವ ಅವನ ಮಾತು ಕೇಳಿ ಎದೆ ನಗಾರಿಯಾಯಿತು ಇನ್ನಿಲ್ಲದ ಭಯದಲ್ಲಿ..!! ಮಾಮ ಹೇಳಿದ ಹಿಂದಿ ಮಾತಾಡುವ ಬಿಹಾರೀ ಕಳ್ಳರು ಜಾಸ್ತಿ ಇರುತ್ತಾರೆನ್ನುವ ಮಾತು ನೆನಪಾಗಿ..!! ಅಷ್ಟು ಹೇಳಿ ಅವ ತನ್ನ ಪಾಡಿಗೆ ತಾನು ಹೊರಟು ಹೋದ. ಸ್ವಲ್ಪ ಸಮಾಧಾನ.!!. ಮತ್ತೊಬ್ಬರನ್ನ ಕರೆದು ಮಾತನಾಡಿಸೋ ಧೈರ್ಯವಿರಲಿಲ್ಲ. ಶ್ರೀಧರನ ಮೇಲೆ ಇನ್ನಿಲ್ಲದ ಸಿಟ್ಟು ಬಂದು ನಡುಗುವ ಚಳಿಯಲ್ಲಿ ಥರಗುಟುತ್ತ ನಿಂತೇ ಇದ್ದೆ. ಬಂದ ರೈಲಿನಿಂದಿಳಿದ ಜನರು ಖಾಲಿಯಾಗಿ ಪ್ಲಾಟ್ ಪಾರ್ಮ್ ಒಂದು ಮಟ್ಟಿಗೆ ಖಾಲಿಯಾದಂತೆ ಕಂಡಿತು. ಅಲ್ಲಲ್ಲಿ ಕೂರುವ ಬೆಂಚುಗಳಲ್ಲಿ ಕಂಬಳಿ ಹೊದ್ದು ಮಲಗಿರುವ ಜನ.. ಪ್ಲಾಟ್ ಫಾರಮ್ಮಿನ ಮೇಲೆಯೇ ಅಡ್ಡಾದಿಡ್ಡಿ ಬಿದ್ದುಕೊಂಡ ಭಿಕ್ಷುಕರು.. ಅಲ್ಲೆಲ್ಲೋ ಒಂದಿಷ್ಟು ದೂರದಲ್ಲಿ ಓಡಾಡುವ ಒಂದಿಬ್ಬರನ್ನು ಬಿಟ್ಟರೆ ಪ್ಲಾಟ್ ಫಾರಂ ಬಹುತೇಕ ಖಾಲಿ. ನನಗೆ ಭಯ ಇನ್ನೂ ಜಾಸ್ತಿಯಾಯ್ತು..!!


ಕಿರ್ರ್ ಕಿರ್ರ್ ಎಂದು ವಿಚಿತ್ರ ಶಬ್ದಗಳನ್ನ ಉಲಿಯುತ್ತಾ ಆಗಾಗ ಅದ್ಯಾವುದೋ ಅಸ್ಪಷ್ಟ ಮಾತುಗಳು ಕೇಳಿಸುತ್ತಿದ್ದ ವಾಕಿ ಟಾಕಿಯನ್ನು ಕೈಲಿ ಹಿಡಿದು ಪೇದೆಗಳಿಬ್ಬರು ನನ್ನತ್ತ ಬರುತ್ತಿದ್ದರು. ನನ್ನ ಗಾಬರಿ ಇನ್ನೂ ಜಾಸ್ತಿಯಾಯ್ತು..!! ಹನುಮಂತಪ್ಪನ ಜಪಕ್ಕೆ ನಿಂತೆ. ಪೋಲೀಸ್ ಇಬ್ಬರೂ ನನ್ನ ಬಳಿ ಬಂದು ಯಾರೋ ನೀನು..?? ಇಷ್ಟೊತ್ನಲ್ಲಿ ಇಲ್ಲಿ ನಿಂತ್ಕೊಂಡು ಏನ್ ಮಾಡ್ತಾ ಇದ್ದೀಯ ಒಬ್ನೇ..?? ಎಲ್ಲಿಂದ ಬಂದೆ..?? ಯಾವೂರು ನಿಂದು..?? ಹೇಳು ಬಾಯ್ಬಿಡು..!! ಪೋಲೀಸರ ಒಂದೊಂದು ಪ್ರಶ್ನೆಗೂ ನನ್ನೆದೆಯ ಢವಗುಟ್ಟುವಿಕೆ ಜಾಸ್ತಿಯಾಗುತ್ತ.. ಆ ಚಳಿಯಲ್ಲೂ ಬಾಯಿ ಒಣಗುತ್ತಾ ಮಾತೇ ಹೊರಬಾರದೆಂಬಂತೆ ಆಗಿ ಹೋಯ್ತು. ಮುಂದೇನಾಗುವುದೋ ಅರಿಯದ ಸ್ತಿತಿ. ಪೊಲೀಸರು ಮತ್ತೇನೋ ಕೇಳಲೆಂಬಂತೆ ಬಾಯಿ ತೆರೆಯುವುದರೊಳಗೆ ಸಾರ್ ಸಾರ್ ಸಾರ್ ಸಾರ್ ಅಂತ ಶ್ರೀಧರ ಓಡೋಡಿ ಬಂದ. ಸಾರ್ ಇವ್ನು ನನ್ನ ಫ್ರೆಂಡು ಸಾರ್, ಊರಿಂದ ಇವಾಗಷ್ಟೇ ಬಂದಿದಾನೆ, ಇವನಿಗೆ ಬೆಂಗಳೂರು ಹೊಸದು ಅದೇ ಎಲ್ಲಿ ಹೋಗೋದು ಏನ್ ಮಾಡೋದು ಅಂತ ಗೊತ್ತಿಲ್ದೆ ಇಲ್ಲೇ ನಿಂತಿದಾನೆ. ಇವನ ಕೈಲಿ ಮೊಬೈಲ್ ಬೇರೆ ಇಲ್ಲ ನಂಗೆ ಫೋನ್ ಮಾಡೋಕೆ.. ನಾನೇ ಇವನನ್ನ ಇಲ್ಲೆಲ್ಲಾ ಹುಡುಕಾಡಿ ಇವನು ಕಾಣಿಸದೆ ಹೋದಾಗ ಕಡೆಗೆ ಮೇನ್ ಡೋರ್ ಹತ್ರಾನೂ ಹುಡುಕಾಡಿ ನೋಡಿದೆ. ಅಲ್ಲೆಲ್ಲೂ ಕಾಣಿಸದೆ ಹೋದಾಗ ಕಡೆಗೆ ಮತ್ತೆ ಇನ್ನೊಮ್ಮೆ ಇಲ್ಲೇ ಹುಡುಕಿ ನೋಡುವ ಅಂತ ಬಂದೆ ಸಾರ್ ಅಷ್ಟರಲ್ಲಿ ನೀವು ಅಂದ. ಯಾರೋ ನೀನು ಏನಾಗಬೇಕು ಇವನು ನಿಂಗೆ..?? ನೀನೆಲ್ಲಿಯವನು ಏನ್ ಮಾಡ್ತಿದಿಯ ಅನ್ನೋ ಪೋಲೀಸರ ಪ್ರಶ್ನೆಗೆಲ್ಲ ಶ್ರೀಧರ ಸಮರ್ಪಕ ಉತ್ತರ ಕೊಟ್ಟು ನಾವಿಬ್ಬರೂ ಅಲ್ಲಿಂದ ಹೊರಟು ಬರುವಷ್ಟರಲ್ಲಿ ನನ್ನರ್ಧ ಜೀವ ಇನ್ನೂ ಪೂರ್ತಿ ಬಂದಿರಲಿಲ್ಲ..!!

ಶ್ರೀಧರನಿಗೆ ಸರಿಯಾಗಿ ಬೈಯುವ ಮನಸ್ಸಾಗಿತ್ತು.. ನಾ ಎಂದಿಗೂ ಯಾರಿಗೂ ಸುಖಾ ಸುಮ್ಮನೆ ಬೈದವನವನಲ್ಲ. ನನ್ನ ಮುನಿಸೇನಿದ್ದರು ಒಂದಷ್ಟು ಹೊತ್ತು ಕೊಪಿಸಿಕೊಂಡವರ ಜೊತೆಗಿನ ಮೌನಕ್ಕಷ್ಟೇ ಸುಸ್ತು. ಶ್ರೀಧರನೆಡೆಗೆ ಒಂದು ಹುಸಿ ಕೋಪದ ನೋಟ ಬೀರುತ್ತಲೇ ನಡೆದೆ.. ನೋಡಿದರೆ ಶ್ರೀಧರನೇ ನನಗೆ ಬೈಯೋದೆ..!! ರೈಲ್ ಇಳಿದು ಎಲ್ಲಿ ಹೋಗಿದ್ದೆ ಮಾರಾಯ..?? ಅಷ್ಟು ಜನದ ಮಧ್ಯ ನಾನಿನ್ನ ಗುರುತಿಸೋದು ಹೆಂಗೆ..?? ನಿನಗೋ ಬೆಂಗಳೂರು ಹೊಸದು.. ನಾನಿಲ್ಲ ಅಂದ್ರೂ ನೀನು ನನ್ನ ಮನೆ ಹುಡ್ಕೊಂಡು ಬರಬಲ್ಲೆ ಅಂತಾನು ನಂಬೋ ಹಾಗಿಲ್ಲ. ಪೂರ್ತಿ ರೈಲನ್ನ ಎರೆಡೆರಡು ಸಾರಿ ಚೆಕ್ ಮಾಡಿದಿನಿ. ಎಲ್ಲೂ ಕಾಣಿಸಲಿಲ್ಲ ನೀನು. ಯಾರದ್ದಾದ್ರೂ ಮಾತು ಕೇಳಿಸ್ಕೊಂಡು ಮೇನ್ ಡೋರ್ ಹತ್ರ ಹೋಗಿರ್ತಿಯೇನೋ ಅಂತ ಅಲ್ಲೂ ಹುಡುಕಾಡಿದೆ.. ಅಲ್ಲೆಲ್ಲೋ ಕಾಣಿಸಲಿಲ್ಲ ನೀನು. ನಾನಿರೋ ಏರಿಯ ಹೆಸರು ಕೇಳಿ ಯಾರಾದ್ದಾದರು ಮಾತಿಗೆ ಹಿಂದಿನ ಸ್ಟೇಶನ್ ನಲ್ಲೇ ಇಳಕೊಂಡ್ಯಾ ಅದು ಕೂಡಾ ಗೊತ್ತಿಲ್ಲ.. ವಿಚಾರಿಸೋಣ ಅಂದ್ರೆ ನಿನ್ ಹತ್ರ ಮೊಬೈಲ್ ಇಲ್ಲ. ಹಾಳಾಗೋಗ್ಲಿ ನೀನು ಕೂಡಾ ನನಗೊಂದು ಫೋನ್ ಮಾಡೋ ಪ್ರಯತ್ನ ಮಾಡಿಲ್ಲ. ನಂಗೆಷ್ಟು ಟೆನ್ಶನ್ ಆಗಿತ್ತು ಗೊತ್ತಾ..?? ಕಡೆದಾಗೊಮ್ಮೆ ಮತ್ತೊಂದ್ ಸಾರಿ ಇಲ್ಲಿ ಹುಡುಕಿ ನೋಡೋಣ ಅಂತ ಬಂದೆ. ಇಲ್ಲಿ ನೋಡಿದ್ರೆ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದಿಯ..!! ನನಗೆ ಗಾಬರಿನೆ ಆಗೋಗಿತ್ತು ಎಲ್ಲಿ ಏನು ಆಗಬಾರದ್ದಾಗಿ, ಯಾವ ವಿಚಾರಕ್ಕೆ ಮೂಕ ಪ್ರಾಣಿ ತರಹ ನೀನು ಪೋಲೀಸರ ಕೈಗೆ ತಗುಲಾಕಿ ಕೊಂಡಿರ್ತಿಯ ಅಂತ..!! ಸಧ್ಯ ಅಂಥದ್ದೇನು ಆಗಿಲ್ಲ ನಂ ಪುಣ್ಯ. ನಾನಲ್ಲಿಗೆ ಬಂದಾಗಲೂ ನೀನಲ್ಲಿ ನಂಗೆ ಸಿಗದೇ ಹೋಗಿದ್ದಿದ್ರೆ ಖಂಡಿತ ನಾನು ವಾಪಸ್ಸು ಹೋಗಿರ್ತಿದ್ದೆ. ಬೇಕಿದ್ದೊನು ಫೋನ್ ಮಾಡ್ತೀಯ ಅನ್ಕೊಂಡು. ಅಥವಾ ನೀನು ಹೊರಡೋ ಮುಂಚೆ ಫೋನ್ ಮಾಡಿದೋನು ಅದಾದ ಮೇಲೆ ಹೊರಟ್ಯೋ ಇಲ್ವೋ ಅನ್ನೋದು ಕೂಡಾ ಗೊತ್ತಿಲ್ಲ. ನೀನು ಬಂದಿದಿಯೋ ಇಲ್ವೋ ಅನ್ನೋದು ಕೂಡ ಗೊತ್ತಿಲ್ಲ. ಇನ್ನೇನು ಮಾದೇಶನಿಗೆ ಫೋನ್ ಮಾಡೋನಿದ್ದೆ, ಅಷ್ಟರಲ್ಲಿ ನೀನು ಕಂಡೆ. ಒಳ್ಳೆ ಗಿರಾಕಿನಪ್ಪ ನೀನು. ಈ ಚಳಿನಲ್ಲೂ ನೋಡು ಹೆಂಗೆ ಬೆವರಿಳಿಸಿದ್ದೀಯ ಅಂತ..!! ಶ್ರೀಧರನ ಪೇಚಾಟ ಕಂಡು ಅಯ್ಯೋ ಅನಿಸಿತ್ತು.. ಹಾಗೆ ನನ್ನ ಪೆದ್ದುತನದ ಮೇಲಿನ ಕೋಪವೂ ಮತ್ತಷ್ಟು ಜಾಸ್ತಿಯಾಯ್ತು.
ಶ್ರೀಧರ ಮಾದೇಶನಿಗೆ ಫೋನ್ ಮಾಡಿ ನಾನು ತಲುಪಿದ ವಿಚಾರ ತಿಳಿಸಿದ.

ಮಾತಾಡುತ್ತಾ ಮಾತಾಡುತ್ತಾ ಬೀಎಂಟೀಸೀ ಬಸ್ ನಿಲ್ದಾಣ ತಲುಪಿದ್ದೆ ಗೊತ್ತಾಗಲಿಲ್ಲ. ಶ್ರೀಧರ ಸುರುಳಿಯಂತಿರೋ ಆ ಜಾಗವನ್ನ ಸುತ್ತಿಸಿಕೊಂಡು ಎಲ್ಲೆಲ್ಲೋ ಕರಕೊಂಡು ಹೋಗ್ತಾ ಇದ್ದ. ನಾನು ಬಿಟ್ಟ ಕಣ್ಣು ಹಾಗೆ ಬಿಟ್ಕೊಂಡು ಅಲ್ಲಿ ನೇತು ಹಾಕಿದ್ದ ಬೋರ್ಡು ಗಳನ್ನ ಅಲ್ಲಿದ್ದ ತರಾವರಿ ಜನರನ್ನ ಇನ್ನಿಲ್ಲದ ಅತ್ಯಾಸಕ್ತಿಯಲ್ಲಿ ಗಮನಿಸುತ್ತ ಅವನ ಹಿಂದೇನೆ ನಡೆದೆ. ಪ್ಲಾಟ್ ಫಾರಂ ಹದಿನಾಲ್ಕು ಹದಿನೈದರ ಮಧ್ಯೆ ನಿಂತಿದ್ದ ಒಂದು ಬಸ್ಸನ್ನ ಹತ್ತಿದೆವು. ಅಲ್ಲಿ ನೇತು ಹಾಕಿದ್ದ ಪ್ಲಾಟ್ ಫಾರ್ಮಿನ ಬೋರ್ಡಿನ ಹಲವು ಹೆಸರುಗಳಲ್ಲಿ ನನಗೆ ಒಂದೂ ನೆನಪಿನಲ್ಲುಳಿಯಲಿಲ್ಲ. ಟಿಕೆಟ್ ಕೇಳುತ್ತ ಬಂದ ಕಂಡಕ್ಟರ್ ಬಳಿ ಅದ್ಯಾವುದೋ ನನ್ನ ನಾಲಗೆ ತಿರುಗದ ಊರಿನ ಹೆಸರೊಂದನ್ನ ಹೇಳಿ ಎರಡು ಟಿಕೆಟ್ ತೆಗೆದು ಕೊಂಡ. ಬಸ್ಸು ಸ್ವಲ್ಪ ರಶ್ ಆಗಿತ್ತು ನಮಗೆ ಕೂರಲು ಸೀಟ್ ಸಿಕ್ಕಿರಲಿಲ್ಲ. ನಿಂತುಕೊಂಡೆ ಶ್ರೀಧರನನ್ನ ತದೇಕತೆಯಲ್ಲಿ ದಿಟ್ಟಿಸಿದೆ. ನನ್ನ ಕಣ್ಣುಗಳಲ್ಲಿ ಭಯವಿತ್ತಾ..?? ಗೊತ್ತಿಲ್ಲ. ಶ್ರೀಧರ ಏನಾಯ್ತೋ ಚೇತು ಅಂದ. ನಾನು ಏನಿಲ್ಲವೆಂದು ತಲೆಯಾಡಿಸಿದೆ. ಬಸ್ಸು ಹೊರಟಿತು.

ಬಹು ಮಹಡೀ ಕಟ್ಟಡಗಳು, ಹಲ ವಿಧದ ಕಾರ್ಖಾನೆಗಳು, ಒಂದೊಂದು ರೋಗೊಕ್ಕೊಂದು ಆಸ್ಪತ್ರೆಗಳು, ವೈವಿಧ್ಯಮಯ ಅಂಗಡಿಗಳು, ಬಾರ್ ಗಳು, ಜಿಮ್ಮುಗಳು, ಕಿಲೋ ಮೀಟರ್ ಗೊಂದು ಬಸ್ ಸ್ಟಾಪ್ ಗಳು.. ರಸ್ತೆಯ ಇಕ್ಕೆಲಗಳ ತುಂಬಾ ಬರೀ ಇಂತವೇ. ಆಗಾಗ ಬಸ್ಸು ಅಲ್ಲಲ್ಲಿ ದಿಶೆ ಬದಲಿಸುತ್ತ ಒಂದು ನಿಮಿಷಕ್ಕಾದರೂ ಒಂದು ತಿರುವು ಬದಲಿಸುತ್ತಾ ಅದೆಷ್ಟೋ ಮೇಲ್ಸೇತುವೆಗಳನ್ನ ದಾಟಿಕೊಂಡು ಚಲಿಸುತ್ತಿರೋದನ್ನ ಕಂಡು, ದಾರಿ ಗೊತ್ತಿಲ್ಲದ ನನ್ನಂಥ ಅಮಾಯಕ ಅರಿವಿಲ್ಲದೆಯೇ  ಅಲೆಯುವಂತೆ ಈ ಬಸ್ಸು ಕೂಡ ಅಲೆಯುತ್ತಿದೆಯೇನೋ ಎಂದು ಭಾಸವಾಯ್ತು..!! ಕಿರಿ ಕಿರಿ ಅನ್ನಿಸೋ ಇನ್ನೊಂದು ವಿಷಯವೊಂದರೆ ಬಸ್ಸು ವಿನಾಕಾರಣ ರಸ್ತೆ ಮಧ್ಯೆ ಆಗಾಗ ನಿಲ್ಲುತ್ತಾ ಇದ್ದದ್ದು. ಬಸ್ಸು ಮಾತ್ರವಲ್ಲ ಬೇರೆ ವಾಹನಗಳು ಕೂಡ. ಇದ್ಯಾಕೋ ಏನಾಯ್ತು ಹಿಂಗ್ಯಾಕೆ ನಿಂತಿದೆ ಈ ವಾಹನಗಳೆಲ್ಲ ಅಂತ ಶ್ರೀಧರನನ್ನ. ಥೂ ನಿನ್ನ ಅಷ್ಟು ಗೊತ್ತಿಲ್ವಾ ಇದೆ ಕಣೋ ಟ್ರಾಫಿಕ್ ಅಂದ್ರೆ ಅಂದಿದ್ದ ಅವನು. ಓಹ್.. ಅಂದೋನು ನಾನು ಮುಂದೇನು ಮಾತಾಡ ಹೋಗಲಿಲ್ಲ.ರಸ್ತೆ ತುಂಬಾ ಕಣ್ಣು ಹಾಯಿಸಿದಷ್ಟು ದೂರಕೆ ಬಗೆ ಬಗೆಯ ವಾಹನಗಳೇ. ನನಗೆ ಊರಿನಲ್ಲಿನ ನನ್ನ ಸೈಕಲ್ ನೆನಪಾಯಿತು. ಬಸ್ಸು ಹಾಗೆ ಕುಂಟುತ್ತಾ ಕುಲುಕುತ್ತಾ, ಹತ್ತಿಪ್ಪತ್ತು ನಿಮಿಷಗಳ ನಂತರ ಹತ್ತಾರು ಕಡೆ ನಿಲ್ಲುವಂತೆ ಮತ್ತೂ ಒಂದು ಕಡೆ ನಿಂತಿತು. ಬಾರೋ ನಮ್ ಸ್ಟಾಪ್ ಬಂತು ಅಂತ ಶ್ರೀಧರ ಹೇಳಿದಾಗಲೇ ನಾನು ವಾಸ್ತವಕ್ಕೆ ಬಂದದ್ದು. ಬೆಂಗಳೂರೆಂಬ ಹೊಸ ಲೋಕ, ನನ್ನ ಕಲ್ಪನೆಗೆ ಎಂದೂ ನಿಲುಕದ ಒಂದು ಹೊಸ ಪ್ರಪಂಚ ನನ್ನನ್ನು ಪೂರ್ತಿ ಆವರಿಸಿಕೊಂಡು ತನ್ಮಯಗೊಳಿಸಿದ್ದ ಬಗೆ ಹಾಗಿತ್ತು.

ಅತ್ತಿತ್ತ ನೋಡುತ್ತಲೇ ಅವಸರದಿಂದ ಹೆದ್ದಾರಿಯನ್ನ ದಾಟಿ ಅದ್ಯಾವುದೋ ಕಿರು ದಾರಿಯೊಂದನ್ನ ಹಿಡಿದಿದ್ದೆವು ನಾವು. ಆ ಕಿರುದಾರಿಯೋ, ಅದಕ್ಕಂಟಿಕೊಂಡೇ ಇದ್ದ ಅಂಗಡಿಯ ಮುಂಗಟ್ಟುಗಳೋ, ಆ ಗಲ್ಲಿಗಳಲ್ಲೇ ಅಷ್ಟು ಬಿರುಸಾಗಿ ಓಡಾಡುವ ಆಟೋ ರಿಕ್ಷಾಗಳೋ, ಕೀ ಕೀ ಅನ್ನುತ್ತ ಕಸಿ ವಿಸಿ ಗೊಳಿಸುವ ಕಾರು ಸ್ಕೂಟರುಗಳೋ.. ಅಬ್ಬಬ್ಬ ನಮ್ಮೂರಿನ ಚಿಕ್ಕ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಬೆಳೆದ ಅಡಿಕೆ-ತೆಂಗಿನ ತೋಟ, ಭತ್ತ-ಕಬ್ಬಿನ ಗದ್ದೆಗಳು ಒಟ್ಟು ನೆನಪಾದವು. ಆ ರಸ್ತೆಗಳಲ್ಲಾದರೂ ಅಷ್ಟೇ.. ಐದು ನಿಮಿಷಕ್ಕೊಂದೋ ಎರಡೋ ವಾಹನಗಳು ಕಣ್ಣಿಗೆ ಬೀಳ್ತಾ ಇದ್ದದ್ದು. ಕಾರುಗಳು ಕಾಣೋದು ಪುಣ್ಯವೇ ಸರಿ..!! ಮಣ್ಣು ರೋಡುಗಳಾದರು ನಮ್ಮೂರಿನ ರಸ್ತೆಗಳ ಅಂದ ಇವಕ್ಕೆ ಬರಲಾರವು ಅಂದುಕೊಂಡೇ ಮುಂದೆ ಹೆಜ್ಜೆ ಹಾಕಿದೆವು. ಆ ಕಿರುದಾರಿಯೊಳಗೆ ಸುತ್ತಿ ಬಳಸಿ, ಆ ಗಲ್ಲಿ ಈ ಗಲ್ಲಿ, ಸಂದಿ ಗೊಂದಿಗಳನ್ನೆಲ್ಲ ಹಾಯ್ದು ಹತ್ತಿಪ್ಪತ್ತು ನಿಮಿಷಗಳ ನಂತರ ಒಂದು ಏರಿಯ ಒಳಗೆ ಕಾಲ್ನೆಟ್ಟೆವು. ರಸ್ತೆಯ ಮೇಲೆಯೇ ಹರಿಯುವ ಕೊಳಕು ರಾಡಿ. ಗಬ್ಬೆದ್ದು ನಾರುವ ತಿಪ್ಪೆ. ಅದನ್ನು ಮುತ್ತಿಕೊಂಡ ರಾಶಿ ರಾಶಿ ಸೊಳ್ಳೆ ನೊಣಗಳು. ಕೆಟ್ಟ ವಾಸನೆ ಹೊಡೆಯುವ ಅಲ್ಲೊಂದು ಚಿಕ್ಕ ಕೆರೆಯಲ್ಲಿನ ನೀರು ಮೂಗು ಮುಚ್ಚಿಕೊಂಡೇ ಅದನ್ನು ದಾಟಿ ಒಳ ನಡೆದೆವು. ಒಳಗೊಂದು ಪುಟ್ಟ ಪ್ರದೇಶ. ಆ ಪ್ರದೇಶದ ತುಂಬಾ ಗುಡಿಸಲಿನಂತಾ ಹಲವಾರು ಮನೆ, ಸೈಕಲ್ ಹೋಗುವಷ್ಟು ಜಾಗದ ದಾರಿ ಆ ಮನೆಯ ಮುಂಬಾಗಿಲುಗಳಲ್ಲೇ ಸಾಲಾಗಿ ಇತ್ತ ಖಾಲಿ ಖಾಲಿ ಕೊಡಗಳು, ದಾರಿಯ ಕೊನೆಗೊಂದು ಅರಳೀ ಮರ. ಅದರ ಬುಡಕ್ಕೊಂದು ಸಣ್ಣ ಹುತ್ತ. ಗಾಜು ಒಡೆದ, ಚಿತ್ರ ಹರಿದ ಹಲವಾರು ದೇವರುಗಳ ಫೋಟೋ, ಹರಿಶಿನ ಕುಂಕುಮ ಹಚ್ಚಿದ್ದ ಹಲವಾರು ಕಲ್ಲುಗಳು.. ಸಣ್ಣಗೆ ಉರಿಯುತ್ತಿದ್ದ ದೀಪ.. ನಮಗೆ ಅರಿವಿಲ್ಲದೆಯೇ ಅದಕ್ಕೊಂದು ನಮಸ್ಕಾರವಿಟ್ಟು ಮುನ್ನಡೆಯ ತೊಡಗಿದೆವು. ಆ ಪ್ರದೇಶದ ಕೊನೆಯಂಚಿನ ತಗ್ಗಿನಲ್ಲಿ ಒಂದೆರಡು ಚಿಕ್ಕ ಚಿಕ್ಕ ಸಿಮೆಂಟಿನ ಗೂಡುಗಳು, ಆ ಹಲವು ಗೂಡುಗಳಲ್ಲಿ ನಮ್ಮ  ಶ್ರೀಧರನದೂ ಒಂದು. ಮನೆಯ ಬೀಗ ತೆಗೆದ.. ಇಬ್ಬರು ಬಲಗಾಲಿಟ್ಟು ಒಳಗೆ ನಡೆದೆವು.

ಪುಟ್ಟದಾಗೊಂದು ಕೋಣೆಯಷ್ಟೇ. ದೇವರ ಮನೆಯಂತಹ ಒಂದು ಅಡುಗೆ ಮನೆ.. ಅದಕ್ಕಿಂತಲೂ ಸಣ್ಣ ಸ್ನಾನದ ಮನೆ. ಶೌಚಾಲಯ ಆ ಸಿಮೆಂಟು ಗೂಡುಗಳ ಕೊನೆಯೆರಡು ಗೂಡುಗಳೇ.. ಅಲ್ಲಿದ್ದ ಆರು ಗೂಡುಗಳಿಗೆ ಸೇರಿ ಕಟ್ಟಲಾಗಿದ್ದ ಶೌಚಾಲಯಗಳು..!! ಸಿಮೆಂಟು ಮೆತ್ತಿದ ಗೋಡೆ.. ಅದಕ್ಕೆ ಬಳಿದ ಹಸಿರು ಬಣ್ಣದ ಮಾಸಲು ಬಣ್ಣ.. ತಂಪೆನಿಸುವ ಕಪ್ಪು ಗಾರೆ ನೆಲ.. ಗೋಡೆಯ ಮೇಲೆ ಹಲಗೆಯೊಂದನ್ನು ಜಡಿದು ಅಲ್ಲೇ ಪ್ರತಿಷ್ಟಾಪಿಸಲಾಗಿದ್ದ ಈಶ್ವರನ ಮತ್ತು ಆಂಜನೇಯನ ಒಂದೊಂದು ಫೋಟೋ. ಹಲಗೆಯ ಹೊರಗೊಂದು ಸಣ್ಣ ತೂತಿಗೆ ಸಿಕ್ಕಿಸಲಾಗಿದ್ದ ನಿನ್ನೆ ಉರಿದು ಉಳಿದಿದ್ದ ಊದುಬತ್ತಿಯ ಪಳೆಯುಳಿಕೆಗಳು. ಉರಿದು ಕೆಟ್ಟು ಹೋಗಿದ್ದ ಸಣ್ಣ ಮಣ್ಣಿನ ಹಣತೆ.  ಶ್ರೀಧರ ಚಾಪೆ ಹಾಸಿದ. ಬಾ ಚೇತು ಕೂತ್ಕೋ ಅಂದ. ನಾನು ಹೋಗಿ ಕೂತೆ. ದಿನಾ ಇಷ್ತೊತ್ತಿಗಾದ್ರೆ ಇದೆ ಟೈಮ್ ನಲ್ಲಿ ಎದ್ದು ಸ್ನಾನ ಮುಗಿಸಿ ತೋಚಿದ ಹಾಗೆ ಏನಾದ್ರೂ ಬೇಯಿಸ್ಕೊಂಡು ತಿಂದು ಹೋಗ್ತಿದ್ದೆ, ಇವತ್ತು ನೀನ್ ಬಂದ್ಯಲ್ಲ ಅದ್ಕೆ ಅದೇನು ಆಗ್ಲಿಲ್ಲ. ಇರು ಒಂದ್ನಿಮ್ಷ ಸ್ನಾನ ಮುಗಿಸ್ ಬರ್ತೀನಿ ಅಂತ ತಾನು ತೊಟ್ಟಿದ್ದ ಟೀ ಶರ್ಟ್ ಬಿಚ್ಚುತ್ತಾ ಹೊರಟ. ನಾನು ಮನೆಯ ಸುತ್ತ ಕಣ್ಣಾಡಿಸಿದೆ.. ಎದ್ದು ಒದ್ದಾಡಿಕೊಂಡೆ ಸುತ್ತಿ ನೋಡಬೇಕೆನ್ನುವಷ್ಟು ದೊಡ್ಡ ಮನೆಯೇನಲ್ಲ.. ಕೂತಲ್ಲಿಂದಲೇ ಎಟುಕಿ ನೋಡಿದರೆ ಮನೆಯ ಯಾವ ಪಾರ್ಶ್ವವಾದರೂ ಗೋಚರಿಸುತ್ತಿತ್ತು. ಸಣ್ಣ ಸಣ್ಣ ತೂತು ಹಿಡಿದ ಬಾಗಿಲಿಂದ ಸ್ನಾನದ ಮನೆಯ ಒಳಗಿನದೂ ಕೂಡ.. ಅಸ್ಪಷ್ಟವಾಗಿ..!! ನಾನೂ ಅದೂ ಇದು ಚಿಂತಿಸುತ್ತಲೇ ಕುಳಿತೆ. ಐದು ನಿಮಿಷಗಳ ಒಳಗೆಯೇ ಸ್ನಾನ ಮುಗಿಸಿ ಬಂದ ಶ್ರೀಧರ, ಪಟ್ಟೆ ಪಟ್ಟೆ ಗೆರೆಗಳುಳ್ಳ ಒಂದು ನೀಲಿ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ತೊಟ್ಟು ಇನ್ಶರ್ಟ್ ಮಾಡಿ.. ಗೋಡೆಗೆ ತೂಗು ಹಾಕಲಾಗಿದ್ದ ಸಣ್ಣ ಕನ್ನಡಿಯ ಮುಂದೆ ನಿಂತು ತಲೆ ಬಾಚಿ ಕೊಳ್ಳಲಾರಂಭಿಸಿದ್ದ. ನೀನು ಮುಖ ತೊಳ್ಕೊಂಡು ಬಾ ಚೇತು ನಾ ಕೆಲಸಕ್ಕೆ ಹೋದ ಮೇಲೆ ಸ್ನಾನ ಮಾಡುವಿಯಂತೆ, ಇಲ್ದಿದ್ರೆ ನನಗೆ ಕೆಲಸಕ್ಕೆ ಲೇಟ್ ಆಗತ್ತೆ. ಹಾಗೆ ದಾರಿ ಮಧ್ಯ ಇಬ್ರು ತಿಂಡಿ ತಿನ್ನೋಣ ಅಂದ. ನಾನೂ ಎದ್ದು ಬ್ಯಾಗಿನಿಂದ ಬ್ರಸ್ಶು ಪೇಸ್ಟು ತೆಗೆದು ಹಲ್ಲುಜ್ಜಿ ಸೋಪು ಹಾಕದೆ ಮುಖ ತೊಳೆದು ಅಲ್ಲೇ ದಾರಕ್ಕೆ ನೇತು ಹಾಕಿದ್ದ ಟವೆಲಿನಲ್ಲಿ ಒರೆಸಿಕೊಂಡು ಬಂದು ಕನ್ನಡಿಯ ಮುಂದೆ ನಿಂತು ತಲೆ ಬಾಚಿಕೊಂಡೆ. ಬಟ್ಟೆ ಬದಲಿಸಲಿಲ್ಲ.

ಮನೆಯ ಮುಂಬಾಗಿಲನ್ನ ಎಳೆದು ಬೀಗ ಜಡಿದು ಶ್ರೀಧರ ಕೀಲಿಯನ್ನ ನನ್ನ ಕೈಗಿತ್ತ. ಈ ರಸ್ತೆಯನ್ನ ಮರೀಬೇಡ.. ಇದರ ಕೊನೆಗೆ ಒಂದು ಸಣ್ಣ ತಳ್ಳು ಗಾಡಿಯಿದೆ. ಅಲ್ಲಿ ಒಳ್ಳೆ ಇಡ್ಲಿ ಸಾಂಬಾರ್ ಮತ್ತೆ ಚಿತ್ರಾನ್ನ ಸಿಗತ್ತೆ ಬಾ ಹೋಗೋಣ ಅಂತ ಕರಕೊಂಡು ಹೋದ. ವಯಸ್ಸಾದ ಅಜ್ಜ ಅಜ್ಜಿಯರಿಬ್ಬರು ಇಟ್ಕೊಂಡ ಸಣ್ಣ ತಳ್ಳು ಗಾಡಿಯ ಅಂಗಡಿಯದು. ಇಡ್ಲಿ ಸಾಂಬಾರ್ ಮತ್ತು ಚಟ್ನಿ ನಿಜಕ್ಕೂ ತುಂಬಾ ಚೆನ್ನಾಗಿತ್ತು. ನಾಲ್ಕು ನಾಲ್ಕು ಇಡ್ಲಿ ತಿಂದು ನಾಷ್ಟಾ ಮುಗಿಸಿದೆವು. ಶ್ರೀಧರ ಅಜ್ಜನಿಗೆ ಇಪ್ಪತ್ತು ರೂಪಾಯಿ ಕೊಟ್ಟ. ಸರಿ ಚೇತು ನಾ ಹೊರಡ್ತೀನಿ ನೀನು ಹುಷಾರಾಗಿ ಮನೆಗೆ ಹೋಗಿ ರೆಸ್ಟ್ ತಗೋ. ನಿನ್ ಬಗ್ಗೆ ನನ್ ಫ್ರೆಂಡ್ ಒಬ್ಬನ ಹತ್ರ ಕೆಲಸಕ್ಕೆ ಹೇಳಿದ್ದೆ. ಅವ್ನು ಇವತ್ತು ಹೇಳ್ತೀನಿ ಅಂದಿದಾನೆ.. ನೋಡೋಣ ಏನಾಗತ್ತೆ ಅಂತ. ಆಗಲೇ ಟೈಮ್ ಎಂಟೂ ಕಾಲಾಗಿದೆ.. ಇನ್ನರ್ಧ ಗಂಟೆಗೆ ನಾನಲ್ಲಿ ಇರ್ಬೇಕು, ನಾನಿನ್ನು ಹೊರಡ್ತೀನಿ. ನೀನು ಹುಷಾರಾಗಿ ಹೋಗು, ಮಧ್ಯಾನ ಊಟಕ್ಕೆ ಇಲ್ಲಿಗೆ ಬಾ, ಅನ್ನ ಸಾಂಬಾರ್ ಸಿಗತ್ತೆ ತುಂಬಾ ಚೆನ್ನಾಗಿರತ್ತೆ ಅಂತ ಹೇಳುತ್ತಾ ಶ್ರೀಧರ ಹೊರಟು ಹೋದ. ಗೊತ್ತಿಲ್ಲದ ಊರು ಪರಿಚಯವಿಲ್ಲದ ಊರು ನನಗಾದರೂ ಮೊದಲ ದಿನಕೆ ಹೇಗೆ ಆಪ್ತವಾದೀತು..?? ನಾನು ಇಡಲಾರದ ಹೆಜ್ಜೆ ಇಡುತ್ತಲೇ ಮನೆಯ ಕಡೆ ನಡೆದೆ. ನೇರ ಒಂದೇ ರಸ್ತೆ ಎರಡನೇ ಬಲಕ್ಕೆ ತಿರುಗಿದರೆ ಕಣ್ಣಂಚಿಗೆ ಕಾಣೋ ಮನೆ. ಮನೆ ತಲುಪಿಕೊಂಡೆ. ಒಳ ಹೊಕ್ಕು ರೂಮಿನೊಳಗಿಂದ ಚಿಲಕ ಜಡಿದು ಕೊಂಡೆ. ಪ್ರಯಾಣ ಮಾಡಿದ್ದ ಆಯಾಸ.. ಕಣ್ಣು ತೂಗುತ್ತಿದ್ದವು, ಹಾಗೇ ಚಾಪೆಯ ಮೇಲೆ ಹೊರಳಿದೆ.. ನಿದ್ದೆ ಬಂದಿದ್ದೇ ತಿಳಿಯಲಿಲ್ಲ.

ಸಮಯ ಸುಮಾರು ಹನ್ನೊಂದೂವರೆ ಇರಬಹುದು. ನನಗೆ ಎಚ್ಚರವಾಯ್ತು. ಪ್ರಯಾಣಿಸಿ ದಣಿದಿದ್ದ ದೇಹಕ್ಕೆ ಆ ಕುಟುಕು ನಿದ್ದೆ  ತಾಜಾತನವನ್ನ ಕೊಟ್ಟಿತ್ತು. ಎದ್ದ ಮೇಲೆ ಏಕೋ ಮೈಕೈ ನೋವೆನಿಸಿ ಸ್ನಾನ ಮಾಡಿದೆ. ಸ್ನಾನ ಮುಗಿಸಿ ಅಲ್ಲಿದ್ದ ದೇವರಿಗೊಂದು ದೀಪ ಹಚ್ಚಿ,  ಕಡ್ಡಿ ಹಚ್ಚಿ ಕೈ ಮುಗಿದು ಮತ್ತೆ ಚಾಪೆಯ ಮೇಲೆ ಹೊರಳಿ ಕೊಂಡೆ. ಈ ಸಾರಿ ನಿದ್ದೆ ಬರಲಿಲ್ಲ. ನನ್ನ ಗಮನ ಮೂಲೆಯಲ್ಲಿ ಜೋಡಿಸಿಟ್ಟಿದ್ದ ಹಳೆಯ ಪೇಪರ್ ರಾಶಿಗಳ ಮೇಲೆ ಬಿತ್ತು. ಹಾಗೆ ಎದ್ದು  ಅದರೊಳಗೆ ಕೈಯಾಡಿಸಿ ಹುಡುಕಾಡಿದೆ.. ಹಳೆಯದ್ಯಾವುದಾದರೂ ಪುರವಣಿ ಸಿಗಬಹುದೇ ಅಂತ. ಮೇಲಿನ ಒಂದೆರಡು ಪೇಪರ್ ಗಳನ್ನ ಸರಿಸುತ್ತಲೇ ಒಂದಷ್ಟು ಹಳೆಯ ಸುಧಾ, ಮಂಗಳ ಮತ್ತು ತರಂಗಗಳು ಸಿಕ್ಕವು. ಎಲ್ಲವನ್ನು ಒಟ್ಟಾಗಿಸಿ ಕೊಂಡು ಮತ್ತೆ ಚಾಪೆಯಲ್ಲಿ ಅಲಂಕೃತನಾದೆ. ಸುಧಾ, ಮಂಗಳ, ತರಂಗಗಳನ್ನೆಲ್ಲ ತಿರುವಿ ಇಂಟೆರೆಸ್ಟಿಂಗ್ ಅನ್ನಿಸೋ ಪುಟಗಳನ್ನೆಲ್ಲಾ ಓದಿದೆ. ಪುಸ್ತಕಗಳೂ ಖಾಲಿಯಾಗಿವೆ ಅನ್ನಿಸ್ತು. ಪುಸ್ತಕದೊಳಗಿನ ಕೆಲವು ಕಥೆಗಳನ್ನ ಓದಿ ತೀರಾ ಭಾವುಕನಾದೆನೇನೋ ಅನ್ನಿಸಿತು. ಎರಡೂ ಕಾಲು ನೀಟಿ ಗೋಡೆಗೊರಗಿ ಕೂತ ನಾನು.. ನನ್ನ ಹಿನ್ನಲೆಗಳನ್ನ ಮೆಲುಕು ಹಾಕುವವನಿದ್ದೆ. ಬದುಕು ಎಲ್ಲಿಂದ ಎಲ್ಲಿಗೆ ನನ್ನನ್ನು ಕರೆ ತಂದು ಬಿಟ್ಟದ್ದು..!!

ನಾನೂ ಶ್ರೀಧರ ಒಟ್ಟಿಗೆ ಓದಿದ್ದು. ನಮ್ಮೂರಿನಲ್ಲೇ ಇದ್ದ ಹೈಸ್ಕೂಲಿನ ತನಕ. ಹತ್ತನೇ ತರಗತಿ ಫೇಲ್ ಆದ ಒಡನೆ ಶ್ರೀಧರ ಮನೆಯವರ ಚುಚ್ಚುಮಾತನು ಸಹಿಸಲಾಗದೆ ಬೆಂಗಳೂರು ಬಂದು ಸೇರಿದ್ದ. ಇಲ್ಲೇ ಯಾವುದೋ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ. ಅವನು ಬೆಂಗಳೂರಿನಲ್ಲಿರೋದು ಅವನ ಮನೆಯವರಿಗೂ ಏನೂ ಆತಂಕದ ವಿಷಯವಾಗಿರಲಿಲ್ಲ. ನನಗೆ ಒಬ್ಬ ಒಳ್ಳೆ ಗೆಳೆಯ ದೂರಾದ ನೋವು. ಹತ್ತು ಪಾಸಾದ ನಾನು ಸ್ವಲ್ಪವೇ ದೂರದಲ್ಲಿದ್ದ ಸರ್ಕಾರಿ ಕಾಲೇಜೊಂದರಲ್ಲಿ ಪೀಯೂಸಿ ಸೇರಿದ್ದೆ. ಕಲಾ ವಿಭಾಗ. ಹೇಳಿಕೊಳ್ಳಲು ಅಂಥಾ ಯಾವ ತೊಂದರೆಗಳೂ ಇಲ್ಲದ ಸಮಯವದು. ಇಂಥಾ ಸಮಯದಲ್ಲೇ ಅಪ್ಪನಿಗೊಂದು ವಿಚಿತ್ರ ಖಾಯಿಲೆ ಶುರುವಾದದ್ದು. ಸಾಹುಕಾರರ ರೈಸ್ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ ತುಂಬಾ ಕುಡಿಯುತ್ತಿದ್ದ ಅನ್ನೋದು ಬಿಟ್ಟರೆ ಅಪ್ಪನಿಂದ ಬೇರಾವ ತಾಪತ್ರಯದ ವಿಷಯವನ್ನೂ ನಾವು ಕಂಡಿರಲಿಲ್ಲ.
ತೌಡು ಮೂಟೆ ಕಟ್ಟುವ ಅಪ್ಪ ಇಡೀ ದಿನ ಗಿರಣಿಯ ಧೂಳಿನಲ್ಲಿ ಎಗ್ಗಿಲ್ಲದೆ ಕೆಲಸ ಮಾಡುತ್ತಿದ್ದ, ಅದರ ನೋವನ್ನ ಮರೆಸಲೆಂದೇ ದಿನಾ ಕುಡಿಯುತ್ತಿದ್ದ. ಅಪ್ಪ ಒಂದೊಂದು ಸಾರಿ ಉಸಿರಾಡಲು ತುಂಬಾ ಕಷ್ಟ ಪಡುತ್ತಿದ್ದ. ಕ್ಷಯ ರೋಗಿಗಳ ತರಹ ಕೆಮ್ಮಿ ಕೆಮ್ಮಿ ಉಸಿರಾಡುತ್ತಿದ್ದ. ನಮ್ಮ ನೆಮ್ಮದಿಯ ದಿನಗಳ ಆಯಸ್ಸು, ಅಪ್ಪನ ಆರೋಗ್ಯ ಹದಗೆಟ್ಟ ದಿನದ ಆಸುಪಾಸಿನಲ್ಲೇ ಮುಗಿದು ಹೋಗಿದ್ದವು. ಅಪ್ಪನನ್ನ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದೆವು. ಈ ಖಾಯಿಲೆಗೆ ಇಲ್ಲಿ ಚಿಕಿತ್ಸೆ ಇಲ್ಲಮ್ಮ ಬೆಂಗಳೂರಲ್ಲಿ ಯಾವ್ದಾರು ಒಳ್ಳೆ ಡಾಕ್ಟರ ಗೆ ತೋರ್ಸಿ, ಅದಕೆಲ್ಲ ತುಂಬಾ ಹಣ ಖರ್ಚಾಗ್ತದೆ ಅಂದು ಬಿಟ್ಟರು. ನಮ್ಮ ಕುಟುಂಬದ ಮೂಲ ಆದಾಯವೇ ಅಪ್ಪನ ದುಡಿಮೆ. ಅಮ್ಮನ ಬುದ್ಧಿ ಕೊಂಚ ಮಂದ. ಏನು ಮಾಡುವುದೆಂದೇ ತೋಚಲಿಲ್ಲ. ಹೇಗೋ ಊರೊಳಗಿನ ನೆಂಟರಿಷ್ಟರ ಬಳಿ ಬೇಡಿ, ಅಪ್ಪನ ಗೆಳೆಯರನ್ನ ಕಾಡಿ, ನಾಳೆಯ ದಿನ ಅಪ್ಪನ್ನನ್ನ ಬೆಂಗಳೂರಿಗೆ ಕರಕೊಂಡು ಹೋಗಬೇಕು ಅಂತ ಮಾಮನನ್ನು ಒಪ್ಪಿಸಿದ ರಾತ್ರಿ ಅಪ್ಪನಿಗೆ ವಿಪರೀತ ಕೆಮ್ಮು..!! ಸರಿ ರಾತ್ರಿಯಲ್ಲಿ ಏನೂ ಮಾಡುವಂತಿರಲಿಲ್ಲ. ಬೆಳಿಗ್ಗೆ ಎದ್ದೊಡನೆ ಅಪ್ಪನನ್ನ ಬೆಂಗಳೂರಿಗೆ ಕರೆದೊಯ್ಯುವ ನಿರ್ಧಾರ ಮಾಡಿ ಅಪ್ಪನ ಆರೈಕೆಯಲ್ಲಿ ರಾತ್ರಿ ಇಡೀ ಕೂತೆ. ಅಪ್ಪ ಕೆಮ್ಮಿ ಗೊರಲಾಡುತ್ತ, ನರಲಾಡುತ್ತಲೇ ಇದ್ದ. ನಾನೂ, ಅಮ್ಮನೂ ಅಳುತ್ತಲೇ ಅಪ್ಪನ ಆರೈಕೆ ಮಾಡುತ್ತಿದ್ದೆವು. ಮಧ್ಯರಾತ್ರಿಗೆ ಅಪ್ಪ ನಿದ್ದೆ ಹೋದ ಎನ್ನಿಸಿತ್ತು. ನಾವೂ ಎದ್ದು ಬಂದು ಮಲಗಿದೆವಷ್ಟೇ. ಬೆಳಿಗ್ಗೆ ಎದ್ದು ನೋಡಿದರೆ ಅಪ್ಪ ನಮ್ಮೆಲ್ಲರಿಗಿಂತ ಮೊದಲೇ ನಮ್ಮ್ಯಾರನ್ನೂ ಎಬ್ಬಿಸದೆ ಹೊರಟು ಹೋಗಿದ್ದ. ತನ್ನ ಇಹವ ತ್ಯಜಿಸಿ. ಶಾಂತ ಸಾವು ಅಪ್ಪನದು..!!

ಅಪ್ಪ ಹೋದ ಮೇಲೆ ಜೀವನ ತುಂಬಾ ಕಷ್ಟ ಅನ್ನಿಸಿತ್ತು. ನಾನೂ ಕಾಲೇಜು ಬಿಟ್ಟು ಇನ್ನ್ಯಾವುದಾರು ಕೆಲಸ ಹಿಡಿಯಬೇಕು ಅನ್ನುವಷ್ಟರಲ್ಲೇ ಸಿದ್ದಣ್ಣನ ತೋಟ ಮತ್ತು ಮನೆಯನ್ನ ಕಾಯುವ ಕೆಲಸ ಸಿಕ್ಕಿತು. ಈ ಹಿಂದೆ ಆ ತೋಟವನ್ನ ಕಾಯುತ್ತಿದ್ದ ಮುದುಕ ತೀರಿ ಹೋಗಿದ್ದ ಪಾಪ. ಮಾಮ ಹೇಗೋ ಸಿದ್ದಣ್ಣ ನವರನ್ನ ಒಪ್ಪಿಸಿ ಆ ಕೆಲಸವನ್ನ ನಮಗೆ ದಕ್ಕುವಂತೆ ಮಾಡಿದ್ದ. ಸಿದ್ದಣ್ಣನವರು ಕೂಡಾ ನಾನು ಮಧ್ಯಾನದವರೆಗೂ ಕಾಲೇಜು ಮುಗಿಸಿ ನಂತರ ತೋಟದ ಕೆಲಸ ನೋಡಿಕೊಂಡರೂ ಸಾಕೆಂದು ಉತ್ತೆಜಿಸಿದರು. ಎರಡಾಳಿನ ಕೂಲಿಯ ಲೆಕ್ಖಕ್ಕೆ ನಮ್ಮನ್ನ ಕೆಲಸಕ್ಕೆ ಇಟ್ಟುಕೊಂಡರು. ತಮ್ಮ ಮನೆಯ ಹಳೆಯ ಸೈಕಲ್ ಒಂದನ್ನು ನಾನು ಕಾಲೇಜ್ ಹೋಗುವ ಸಲುವಾಗಿ ಕೊಟ್ಟಿದ್ದರು. ಖುಷಿಯಾಗಿ ಅದನ್ನೊಪ್ಪಿಕೊಂಡು ಅಮ್ಮ, ಮಾಮ ಮತ್ತು ನಾನು ಸಿದ್ದಣ್ಣನವರ ತೋಟದ ಮನೆ ಸೇರಿ ಕೊಂಡೆವು. ಸಂತಸದ ದಿನಗಳು ಮತ್ತೆ ಶುರುವಾದವು. ನಾನೂ ಕಾಲೇಜು ಮುಗಿಸಿದ ಕೂಡಲೇ ತೋಟಕ್ಕೆ ಬಂದು ತೋಟದ ತಂಪಿನಲ್ಲಿ ಆಟವಾಡುತ್ತ, ಅಮ್ಮನ ಕೈತುತ್ತು ತಿನ್ನುತ್ತಾ, ತೋಟದ ಕೆಲಸದಲ್ಲಿ ಮಾಮನಿಗೆ ಸಹಾಯ ಮಾಡುತ್ತಲಿರುತ್ತಿದ್ದೆ. ಗೆಳೆಯರ ಬಳಿ ಆಗೀಗ ಕೊಂಡು ತರುತ್ತಿದ್ದ ಸುಧಾ, ಮಂಗಳ, ಅಥವಾ ಹೆಸರು ನೆನಪಿಲ್ಲದ ಅನೇಕ ಪತ್ತೇದಾರಿ ಕಾದಂಬರಿಗಳನ್ನ ಇದೆ ತೋಟದ ನೆರಳಲ್ಲಿ ತೆಂಗಿನ ಮರದ ಬುಡಕ್ಕೊರಗಿ ತನ್ಮಯನಾಗಿ ಓದುತ್ತಿರುತ್ತಿದ್ದೆ. ಮಾಮನಿಗೆ ತೋಟದಲ್ಲಿ ನೀರು ಕಟ್ಟುವುದರಲ್ಲಿ. ತೆಂಗಿನ ಕಾಯಿ ಸುಲಿಸುವುದರಲ್ಲಿ. ಅಡಕೆ ಸುಲಿಸುವುದರಲ್ಲಿ ಕೈಲಾದಷ್ಟು ಸಹಾಯ ಮಾಡುತ್ತಿದ್ದೆ. ತೋಟದಲ್ಲಿ ಸಿಗುತ್ತಿದ್ದ, ಮಾವಿನ ಕಾಯಿ, ಸೀಬೇಕಾಯಿ, ನೇರಳೆ ಹಣ್ಣು, ಬಾಲೆ ಹನ್ನುಗಳನ್ನ ಇಷ್ಟಂಪ್ರತಿ ತಿಂದು ಓಡಾಡಿ ಕೊಂಡಿರುತ್ತಿದ್ದೆ. ಸಂತಸದ ದಿನಗಳು ಆಗಸ್ತೆ ಮತ್ತೆ ಚಿಗುರಲಾರಂಭಿಸಿದ್ದವು.

ಬಹುಷಃ ನಮ್ಮ ಆ ಸಂತಸದ ದಿನಗಳ ಆಯಸ್ಸು ಕೂಡ ಜಾಸ್ತಿ ದಿನ ಇರಲಿಲ್ಲವೇನೋ..?? ಸಿದ್ದಣನವರ ಎಳೆ ಮಗನಿಗ್ಯಾವುದೋ ವಿಚಿತ್ರ ಖಾಯಿಲೆ.. ಆ ಖಾಯಿಲೆಯನ್ನ ವಾಸಿ ಮಾಡಿಸಲು ಲಕ್ಷಾಂತರ ಹಣ ಖರ್ಚಾಗುವುದಿತ್ತಂತೆ. ನಾವು ನೋಡಿಕೊಳ್ಳುತ್ತಿದ್ದ ತೋಟವೂ ಸೇರಿ ಸುಮಾರು ಮೂರು ಕಡೆ ತೋಟವಿದ್ದ ಸಿದ್ದಣ್ಣ ನಾವಿದ್ದ ತೋಟವನ್ನ ಬೆಂಗಳೂರಿನ ಸಾಹುಕಾರನೊಬ್ಬನಿಗೆ ಮಾರಿ ಬಿಟ್ಟರು. ಮಾರಬೇಡಿ ಎಂದು ನಾವು ತಡೆಯುವುದಾದರೂ ಹೇಗೆ..?? ಆದರೆ ಮಾರುವ ಮೊದಲು ಸಿದ್ದಣ್ಣ, ನಮ್ಮ ಜೀವನದ ಬಗ್ಗೆ ಯೋಚಿಸಿಯೇ ತೋಟ ಮಾರಿದ್ದರು. ಸಾಹುಕಾರನ ಬಳಿ ನಾವು ಆ ತೋಟದಲ್ಲೇ ಇರುವಂತೆ, ನಾವೇ ಆ ತೋಟದ ಉಸ್ತುವಾರಿ ನೋಡಿಕೊಳ್ಳುವಂತೆ ಶಿಫಾರಸ್ಸು ಮಾಡಿದ್ದರು. ಸಿದ್ದಣ್ಣನವರ ಮಾತಿನಂತೆ ಆ ಸಾಹುಕಾರ ನಾವೇ ಅಲ್ಲಿದ್ದು ಆ ತೋಟವನ್ನ ನೋಡಿಕೊಳ್ಳಲು ಒಪ್ಪಿದ್ದರು. ಸಿದ್ದಣ್ಣನದು ನಮ್ಮೂ

ರು ಅಲ್ಲದಿದ್ದರೂ ಅವರು ನಮ್ಮೊರಿನವರೆ ಅನ್ನುವಷ್ಟು ಆತ್ಮೀಯರಾಗಿದ್ದರು. ಸಿದ್ದಣ್ಣ ತೋಟವನ್ನ ಮಾರಿದ್ದ ಸಾಹುಕಾರ ತೋಟವನ್ನ ನಮ್ಮ ಸುಪರ್ದಿಗೊಪ್ಪಿಸಿ, ತಾನು ಬೆಂಗಳೂರಿನಲ್ಲಿ ನೆಲೆಸಿ ಕೊಂಡಿದ್ದ. ಆಗೀಗ ಬಂದು ಮಾಮನ ಬಳಿ ತೋಟದ ವ್ಯವಹಾರ ಲೆಕ್ಕಾಚಾರಗಳ ಬಗ್ಗೆ ಚರ್ಚಿಸಿ ಹೋಗುತ್ತಿದ್ದ.

ಬರು ಬರುತ್ತಾ ಆ ಸಾಹುಕಾರನ ವರ್ತನೆ ವಿಚಿತ್ರವಾಗುತ್ತಿದೆ ಅನ್ನಿಸಿತ್ತು. ಈಗೀಗ ವಾರಕ್ಕೊಮ್ಮೆ ಬರುತ್ತಿದ್ದ. ಬಂದು ಒಂದು ದಿನ ಪೂರ್ತಿ ನಮ್ಮ ತೋಟದ ಮನೆಯಲ್ಲಿ ತಂಗಿ ಹೋಗುತ್ತಿದ್ದ. ನಾವೂ ಸಾಹುಕಾರನೆಂಬ, ಯಜಮಾನನೆಂಬ ಗೌರವದಿಂದಲೇ ಆಗಾಗ ಬರುತ್ತಲಿದ್ದ ಅವನನ್ನ ಆದರಿಸುತ್ತಿದ್ದೆವು. ಅಮ್ಮನ ಮಂದ ಬುದ್ಧಿಯ ಬಗ್ಗೆ ಆತನಿಗೆ ತಿಳಿದಿತ್ತು. ಅಮ್ಮ ನೋಡಲು ಆಗಲೂ ತುಂಬಾ ಚೆನ್ನಾಗಿದ್ದಳು. ಬುದ್ಧಿ ಮಂದವಾದರೂ ಅಂದ ಚೆಂದಕ್ಕೆ ಕೊರತೆ ಇರಲಿಲ್ಲ. ಆ ಚೆಂದವೇ ಅವನ ಕಣ್ಣು ಕುಕ್ಕಿತ್ತೇನೋ..!! ಒಂದು ದಿನ ನಾನು ಕಾಲೇಜು ಹೋಗಿದ್ದ ಸಮಯಕೆ, ಮಾಮ ತೋಟದಲ್ಲಿ ಕೆಲಸದಲ್ಲಿ ಮಗ್ನನಾಗಿದ್ದ ಸಮಯಕೆ.. ಮನೆಯಲ್ಲಿ ಅಮ್ಮನ ಹತ್ತಿರ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದ. ಜೋರಾಗಿ ಕೂಗಿ ಕೊಳ್ಳುತ್ತಿದ್ದ ಅಮ್ಮನ ಧ್ವನಿ ಕೇಳಿ ಅಲ್ಲೇ ಹತ್ತಿರದಲ್ಲೇ ಕೆಲಸ ಮಾಡುತ್ತಲಿದ್ದ ಮಾಮ ಓಡಿ ಬಂದು ಆ ಅನಾಹುತವ ತಪ್ಪಿಸಿ, ಸಾಹುಕಾರನಿಗೆ ಜಾಡಿಸಿ ಎರಡೇಟು ಒದ್ದಿದ್ದ.!!. ಸಾಹುಕಾರ ಈಗಿಂದೀಗಲೇ.. ಈ ಕೂಡಲೇ ತೋಟ ಖಾಲಿ ಮಾಡುವಂತೆ ತಾಕೀತು ಮಾಡಿದ್ದ. ಕಾಲೇಜು ಮುಗಿಸಿ ಬಂದಿದ್ದ ನನಗೆ ಎಲ್ಲಾ ವಿಷಯ ತಿಳಿದು ಅವನನ್ನು ಕೊಳ್ಳುವಷ್ಟು ಕೋಪ ಬಂದಿತ್ತು..!! ಮಾಮ ನನ್ನನ್ನು ನಿಗ್ರಹಿಸಿ ತಡೆದು ಆ ಮನೆಯನ್ನ ಖಾಲಿ ಮಾಡಿ ಮತ್ತೆ ಊರಿನೊಳಗಿನ ನಮ್ಮ ಹಳೆಯ ಮನೆಯನ್ನ ಸೇರಿಕೊಂಡೆವು. ನಮ್ಮ ಪರಿಸ್ತಿತಿಯನ್ನ ನೆನೆದು ನನಗಿನ್ನೂ ಅಲ್ಲಿ ಓದುವ ಮನಸ್ಸಾಗಲಿಲ್ಲ. ನಾನೂ ಕೆಲಸ ಮಾಡಬೇಕು.. ಅಮ್ಮನ್ನನ್ನ ಸಾಕಬೇಕು.. ಅನ್ನಿಸಿ ಬೆಂಗಳೂರಲ್ಲಿದ್ದ ಶ್ರೀಧರನನ್ನ ಮಾತಾಡಿಸಿ ಅವನನ್ನು ಕೂಡಿ ಕೊಳ್ಳುವ ಯೋಜನೆ ಹಾಕಿಕೊಂಡೆ. ಅದು ಇಂದು ಸಾಕಾರಗೊಂಡಿತ್ತು.

ಮಧ್ಯಾನ ಊಟ ಬೇಕೆನಿಸಲಿಲ್ಲ ಮತ್ತೆ ಮಲಗಿದೆ. ಸಂಜೆ ಆರೂವರೆಯಾದರೂ ಶ್ರೀಧರ ಇನ್ನೂ ಮನೆಗೆ ಬರಲಿಲ್ಲ. ಯಾವಾಗ ಬರುವನೋ ಗೊತ್ತಿಲ್ಲ ಫೋನ್ ಮಾಡೋಣವೇ ಅಂದುಕೊಂಡು ಮನೆಯ ಹೊರ ಬಂದೆ. ಪಕ್ಕದ ಮನೆಯವರನ್ನ ವಿಚಾರಿಸಿ ನೋಡಲೇ ಎನಿಸಿತ್ತು. ಪಕ್ಕದ ಮನೆಯಲ್ಲಿ ಯಾವುದೋ ನಡುವಯಸ್ಸಿನ ಹೆಣ್ಣೊಂದು ವಾಸಿಸಿತ್ತು. ನಾನು ಬಾಗಿಲು ತಟ್ಟಿ ಅವರ ಗಮನವನ್ನ ಈ ಕಡೆ ಬರುವಂತೆ ಮಾಡಿಕೊಂಡು ಕೇಳಿದೆ. ಅಕ್ಕಾ ಶ್ರೀಧರ ಎಷ್ಟ್ ಹೊತ್ತಿಗೆ ಬರ್ತಾನೆ ಅಂತ ಏನಾದ್ರು ಗೊತ್ತಾ ಅಂದೇ. ಆ ಹೆಂಗಸು ನೀನ್ಯಾರಪ್ಪ ಅಂತ ಕೇಳಿತು. ನಾನು ಅವನ ಫ್ರೆಂಡು ಅಕ್ಕ. ಇವತ್ತಷ್ಟೇ ಊರಿಂದ ಬಂದಿದಿನಿ. ಬೆಂಗಳೂರು ನಂಗೆ ಹೊಸದು. ಇವ್ನು ನೋಡಿದ್ರೆ ಇನ್ನೂ ಬರಲಿಲ್ಲ ಅದೇ ವಿಚಾರಿಸೋಣ ಅಂತ ಬಂದೆ. ಒಹ್ ಹಾಗಾ..?? ನೀನು ಬರ್ತೀಯ ಅಂತ ಶ್ರೀಧರ ಹೇಳಿದ್ನಪ್ಪ. ಇರು ಇನ್ನೇನು ಅವನು ಬರೋ ಟೈಮ್ ಬಂದು ಬಿಡ್ತಾನೆ. ಒಳಗೆ ಬಾ ಒಂದು ಕಪ್ ಕಾಫೀ ಕುಡಿ ಅಷ್ಟರಲ್ಲಿ ಅವನು ಬಂದರೂ ಬರಬಹುದು ಅಂದರು. ನನಗ್ಯಾಕೋ ಮುಜುಗರವೆನ್ನಿಸಿ ಬೇಡವೆಂದು ಮನೆಯೊಳಗೇ ತೂರಿಕೊಂಡೆ ಶ್ರೀಧರ ಅಷ್ಟರಲ್ಲೇ ಬಂದ. ನಾನು ಆ ಅಕ್ಕನ ಮನೆ ಬಾಗಿಲಿಂದ ಬಂದದ್ದನ್ನು ದೂರದಿಂದಲೇ ನೋಡಿದ ಶ್ರೀಧರ ಕೇಳಿದ ಏನೂ ಆಗಲೇ ಸಾವಿತ್ರಕ್ಕನ ಪರಿಚಯ ಆಗಿ ಹೋಯ್ತಾ..?? ಏನು ಹೇಳಿದ್ರು ಅಕ್ಕಾ..?? ಪರಿಚಯ ಏನಿಲ್ಲಪ್ಪ ನೀನ್ ಇಷ್ಟು ಹೊತ್ತಾದ್ರೂ ಬರಲಿಲ್ವಲ್ಲ.. ಅದೇ ಏನು ಎತ್ತ ಅಂತ ವಿಚಾರಿಸ್ತಿದ್ದೆ ಅಷ್ಟೇ. ಅಷ್ಟರಲ್ಲೇ ನೀನು ಬಂದೆ. ಅವ್ರು ನನಗೆ ಕಾಫೀ ಕುಡಿಯೋಕೆ ಹೇಳಿದ್ರು ನನಗ್ಯಾಕೋ ಮುಜುಗರ ಎನಿಸಿ ಹಾಗೆ ಬಂದು ಬಿಟ್ಟೆ. ಅಷ್ಟರಲ್ಲೇ ಸಾವಿತ್ರಕ್ಕ ಬಂದು ಶ್ರೀಧರ ಊರಿಂದ ಹೇಗೂ ನಿನ್ ಫ್ರೆಂಡ್ ಬಂದಿದಾನೆ ನೀನೇನು ಇವತ್ತು ಅಡಿಗೆ ಮಾಡೋ ಹಾಗೆ ಕಾಣಲ್ಲ. ಹೊರಗಡೆ ಎಲ್ಲೂ ಊಟಕ್ಕೆ ಹೋಗೋದೇನು ಬೇಡ, ಇವತ್ತು ನಮ್ಮ ಮನೆಯಲ್ಲೇ ಊಟ ಅಂತಷ್ಟೇ ಹೇಳಿದರು. ಶ್ರೀದರ ಆಯ್ತು ಎಂದ. ನನಗ್ಯಾಕೋ ಮುಜುಗರವೆನಿಸಿ ಏನೂ ಹೇಳಲಿಲ್ಲ ಸಾವಿತ್ರಕ್ಕ ನನ್ನ ಅಭಿಪ್ರಾಯಕ್ಕೆ ಕಾಯದೆ ಹೊರಟು ಹೋದರು. ಶ್ರೀಧರನಿಗೆ ನಾನಂದೆ.. ನಮ್ಮಿಂದ ಪಾಪ ಅವರಿಗ್ಯಾಕೋ ತೊಂದ್ರೆ..?? ನಾವೇ ಮಾಡ್ಕೋ ಬಹುದಿತ್ತಲ್ವಾ..?? ಈಗ ಸುಮ್ನೆ ಅವರಿಗೆ ಕಷ್ಟ ನೋಡು ಅಂತ ಗೊಣಗಿದೆ. ಶ್ರೀಧರ ಸಾವಿತ್ರಕ್ಕನ ಬಗ್ಗೆ ಹೇಳಲು ಶುರುವಿಟ್ಟು ಕೊಂಡ.

ನೋಡು ಚೇತು ಈಗ ಸಾವಿತ್ರಕ್ಕನಿಗೆ ತನ್ನವರು ಅಂತ ಹೇಳಿಕೊಳ್ಳೋಕೆ ಯಾರೂ ಇಲ್ಲ. ಇದ್ದೊಬ್ಬ ತಮ್ಮ ಕಳೆದ ವರ್ಷ ಅದ್ಯಾವುದೋ ಗಲಾಟೆಯಲ್ಲಿ ಪುಂಡ ಹುಡುಗರ ಜೊತೆ ಸೇರಿ ಕೊಲೆಯಾಗಿ ಹೋದ. ಇನ್ನು ಸಾವಿತ್ರಕ್ಕನ ಗಂಡ ಮದುವೆಯಾಗಿ ಮೂರು ವರ್ಷವಾದರೂ ತನಗೆ ಮಕ್ಕಳಾಗಲಿಲ್ಲವೆಂಬ ಸಾವಿತ್ರಕ್ಕನ ಮೇಲೆ ತಿರಸ್ಕಾರ ಮೂಡಿ, ಸಾವಿತ್ರಕ್ಕನಿಗೆ ದಿನಾ ಚಿತ್ರ ಹಿಂಸೆ ಕೊಡುತ್ತಿದ್ದವ ಒಂದು ದಿನ ಪಕ್ಕದ ಓಣಿಯ ಹುಡುಗಿಯೊಬ್ಬಳ ಜೊತೆ ನಾಪತ್ತೆಯಾದವ ಇನ್ನೂ ಪತ್ತೆ ಇಲ್ಲ. ಅಪ್ಪ ಅಮ್ಮನೂ ಇಲ್ಲದ ಸಾವಿತ್ರಕ್ಕ ಈಗ ಒಂಟಿ. ಇಲ್ಲೇ ಸ್ವಲ್ಪ ದೂರದಲ್ಲಿರುವ ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡ್ತಾರೆ. ಯಾರಿಗೊಸ್ಕರವೂ ಬದುಕದೆ ಕೇವಲ ತನಗೋಸ್ಕರವಷ್ಟೇ ಬದುಕ್ತಾ ಇದಾರೆ. ನನ್ನನ್ನೇ ಅವರ ತಮ್ಮನ ಹಾಗೆ ಅನ್ಕೊತಾರೆ, ನನ್ನ ಅಷ್ಟು ಇಷ್ಟ ಪಡ್ತಾರೆ. ಎಷ್ಟೋ ಸಾರಿ ಕೆಲಸದಿಂದ ಮನೆಗೆ ಲೇಟ್ ಆಗಿ ಬರುವ ನನಗೆ ತಾವೇ ಊಟ ಹಾಕುತ್ತಾರೆ. ಯಾವಾತ್ತಾದರೂ ಹುಷಾರಿಲ್ಲದ ದಿನ ತಾವೇ ನನ್ನ ಆರೈಕೆಗೆ ನಿಲ್ಲುತ್ತಾರೆ. ಈ ಮೊದಲು ಇದೆ ಮನೆಯಲ್ಲಿ ನನ್ನ ಜೊತೆ ಗಿರೀಶ ಎನ್ನುವ ಹುಡುಗನೊಬ್ಬನಿದ್ದ. ಅವನಿಗೆ ಒಂದು ಸರ್ಕಾರಿ ಕೆಲಸ ಸಿಕ್ಕು ಮನೆ ಖಾಲಿ ಮಾಡಿಕೊಂಡು ಹೋಗುವಾಗ ನನಗೂ ಮನೆ ಖಾಲಿ ಮಾಡಿ ಬೇರಿನ್ನೆಲ್ಲಾದರೂ, ಯಾರ ಜೊತೆಗಾದರೂ ಹೋಗಿ ಬಿಡಲೇ ಎನಿಸಿತ್ತು..!! ಸಾವಿತ್ರಕ್ಕನ ಅನುಬಂಧ ಆ ಕ್ಷಣಕ್ಕೆ ನನ್ನನ್ನು ತಡೆದು ನಿಲ್ಲಿಸಿತ್ತು. ಆಮೇಲೆ ನೀನು ನಂಜೊತೆ ಬಂದು ಇರ್ತೀಯ ಅನ್ನೋ ವಿಷಯ ಗೊತ್ತಾಗಿ ಮನೆ ಖಾಲಿ ಮಾಡುವ ಇರಾದೆಯೇ ಮನಸೊಳಗೆ ಸುಳಿಯಲಿಲ್ಲ.

ಶ್ರೀಧರ ಮನೆಯನ್ನ ಬೇರೆ ಜಾಗದಲ್ಲಿ ಎಲ್ಲಾದರು ಒಳ್ಳೆಯ ಕಡೆ ಮಾಡೋಕೆ ಸಾಧ್ಯವಿದೆಯೇ..?? ನಾನು ಕೇಳಿದೆ. ನೋಡು ಚೇತು ಇದು ಸ್ಲಂ ಅನ್ನುವ ತುಚ್ಚ ಭಾವನೆಯೇನಾದರೂ ಮನಸೋಳಗಿದ್ದರೆ ದಯವಿಟ್ಟು ತೆಗೆದು ಬಿಡು. ಸ್ಲಮ್ ಅನ್ನೋ ಪದ ನೋಡೋರ ಕಣ್ಣಿಗಷ್ಟೇ, ಬಾಳೋರ ಜೀವನಕ್ಕಲ್ಲ. ಬೆಂಗಳೂರಿನ ಹೆಚ್ಚಿನ ಜನ ಇಂಥಾ ಜಾಗದಲ್ಲೇ ಹೆಚ್ಚು ವಾಸಿಸೋದು. ಸ್ಲಂ ಅಂತ ಎಲ್ಲರೂ ಅವರವರ ಜಾಗಗಳನ್ನ ಬಿಟ್ಟು ಹೋದ್ರೆ ಬಾಳೋದಾದ್ರೂ ಎಲ್ಲಿ..?? ಇಷ್ಟು ಚಿಕ್ಕ ಜಾಗದಲ್ಲೇ ಒಂದಿಡೀ ಪರಿವಾರ ಅನ್ಯೋನ್ಯವಾಗಿ ಬಾಳುವ ಕಲೆ ಎಲ್ಲರಿಗೂ ಬರೋಲ್ಲ.  ನೋಡಲಷ್ಟೇ ಈ ಜಾಗದ ಸುತ್ತ ಕೊಳಕು, ಹೊಲಸು ಆದರೆ ಇಲ್ಲಿನವರ ಸ್ನೇಹ ವಿಶ್ವಾಸಗಳು ಮಾತ್ರ ಸದಾ ಶುದ್ಧ ಮತ್ತು ಪವಿತ್ರ. ಈ ಕೆರಿಯಿಂದಾಚೆಗೆ ಒಂದು ಬಡಾವಣೆಯಿದೆ. ಅಲ್ಲೊಂದು ದಿನ ಬದುಕಿ ಬಾ ನಿನಗೆ ಗೊತ್ತಾಗುತ್ತದೆ.. ಮನುಷ್ಯತ್ವದ ಉಳಿವು ಎಲ್ಲಿದೆ ಅನ್ನೋದು..!! ಮನೆಗೆ ಯಜಮಾನ ಬಂದರೂ ಕಿಟಕಿ ಇಂದಲೋ.. ಬಾಗಿಲಿನ ತೂತಿನಿಂದಲೋ ನೋಡಿ ಕದ ತೆಗೆಯುವ ಜನ. ಹಾಲು, ಪೇಪರಿನವ, ತರಕಾರಿಯವನಿಗಷ್ಟೇ ಹೊಸ್ತಿಲವರೆಗೂ ಜಾಗ ಕೊಡುವ ಜನ.. ಬೇರೆ ಅಡ್ರೆಸ್ಸ್ ತಪ್ಪಿ ಬಂದ ಅಪರಿಚಿತರ ಕಂಡರೆ.. ಅಥವಾ ಬಾಗಿಲಿಗೆ ಬಂದ ಸೇಲ್ಸ್ ಮೆನ್ ಗಳನ್ನ ಕಂಡರೆ ಆಕಾಶವೇ ಕಳಚಿ ಬಿದ್ದವರಂತೆ ರೇಗಾಡಿ ಬಿಡುತ್ತಾರೆ. ಮನೆಯವರನ್ನ ಬಿಟ್ಟರೆ ಮನೆ ಕೆಲಸದವಳಿಗಷ್ಟೇ ಮನೆಯೊಳಗೇ ಪ್ರವೇಶ. ಬೇರ್ಯಾರನ್ನೂ ನಂಬುವುದಿರಲಿ ಮಾತಾಡಿಸುವುದೂ ಕಷ್ಟ. ಅಕ್ಕ ಪಕ್ಕದ ಮನೆಯಲ್ಲಿದ್ದರೂ ಅವಶ್ಯಕತೆ ಇಲ್ಲದೆ ಒಂದು ವರ್ಷವಾದರೂ ಮಾತನಾಡುವುದಿಲ್ಲ..!! ಅವರದ್ದೆಲ್ಲ ಯಾಂತ್ರಿಕ ಜೀವನ. ಇಲ್ಲಿ ಹಾಗಲ್ಲ ನಿತ್ಯ ಬೆಳಗಾದರೆ ನಮ್ಮನ್ನ ನಗು ಮುಖದಲ್ಲಿ ಮಾತಾಡಿಸೋ ಹಲವು ಜನ ಸಿಕ್ತಾರೆ. ನಮಗೇನಾದರೂ ತೊಂದರೆ ಎಂದರೆ ತಾವು ಬಂದು ನಿಲ್ತಾರೆ. ಎಷ್ಟೋ ಸಾರಿ ನಾನು ಊರು ಬಿಟ್ಟು ಬಂದೋನು ನನಗ್ಯಾರು ಇಲ್ಲ ಅಂತ ಅನಿಸೋದೇ ಇಲ್ಲ. ನೋಡೋಕೆ ಕೇರಿ ಅನ್ನಿಸುತ್ತದಷ್ಟೇ, ಆದರೆ ಇಲ್ಲಿರೋರೆಲ್ಲ ನನ್ನ ಆಪ್ತ ಬಂಧುಗಳಿಗಿಂತ ಹೆಚ್ಚೇ ಅನ್ನುವಷ್ಟು ಆತ್ಮೀಯರು. ಭಾನುವಾರ ಆಯ್ತೆಂದರೆ ಕೇರಿಯ ಹುಡುಗರೆಲ್ಲ ಒಟ್ಟಾಗಿ ಬಂದು, ನನ್ನನ್ನ ಎಳಕೊಂಡು ಹೋಗಿ ಕ್ರಿಕೆಟ್ ಆಡ್ತಾರೆ. ಎಷ್ಟು ಖುಷಿ ಅನ್ಸತ್ತೆ ಗೊತ್ತಾ..?? ಎಲ್ಲರೂ ಫ್ರೀ ಇದ್ರೆ ತಿಂಗಳಿಗೊಂದೋ ಎರಡೋ ಸಿನಿಮಾಕ್ಕೆ ಹೋಗಿ ಬರ್ತೀವಿ. ಎಷ್ಟು ಖುಷಿ ಅನ್ಸತ್ತೆ ಗೊತ್ತಾ..?? ಯಾವುದಾರಡೂ ಹಬ್ಬ ಅಂದ್ರೆ ಎಲ್ಲರು ಒಟ್ಟಿಗೆ ನಿಂತು ಆಚರಿಸ್ತೀವಿ, ಹನ್ನುಮಪ್ಪನ ಹಬ್ಬ, ಗಣೇಶನ ಹಬ್ಬವಂತೂ ನಮ್ಮ ಕೇರಿಯಲ್ಲಿ ಮಾಡಿದಂತೆ ಎಲ್ಲೂ ಮಾಡುವುದಿಲ್ಲ. ಎಲ್ಲರಲ್ಲೂ ಅಷ್ಟು ಒಗ್ಗಟ್ಟು. ಯಾರಿಗಾದರೂ ತೊಂದರೆಯಾದಲ್ಲಿ ಎಲ್ಲರೂ ಒಟ್ಟಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡ್ತಾರೆ. ನಮ್ಮೊರಿಂದ ದೂರ ಇದಿವಿ ಅನ್ಸೋದೆ ಇಲ್ಲ.  ಮನುಷ್ಯತ್ವದ ಅಲ್ಪ ಸ್ವಲ್ಪ ಉಳಿವು ಇಲ್ಲಿದೆ ಅನ್ನಿಸ್ತು. ಜೀವ ಭಾವಗಳಿಗೆ ಬೆಲೆ ಮತ್ತು ನೆಲೆ ಇಲ್ಲಿ ಸಿಗುತ್ತದೆ ಅನ್ನಿಸ್ತು. ಪರಿಸರದ ಚೆಂದ ಅನ್ನೋದು ನಾವಿರೋ ಜಾಗದ ಅಂದದಿಂದ ಬರೋಲ್ಲ ಅದನ್ನ ನಾವು ಕಟ್ಟಿ ಬೆಳೆಸೋದ್ರಲ್ಲಿ ಇರತ್ತೆ. ಅದೂ ಅಲ್ದೆ ನಾವು ದುಡಿದು ಗಳಿಸೋ ಹಣಕ್ಕೆ ಇಲ್ಲಿ ಬಿಟ್ಟರೆ ಬೇರೆ ಜಾಗಗಳಲ್ಲಿ ಮನೆ ಕೂಡಾ ಸಿಕ್ಕೋದಿಲ್ಲ. ಮನೆ ಸಿಕ್ಕರೂ ತಾಪತ್ರಯಗಳು ಜಾಸ್ತಿ. ಒಮ್ಮೊಮ್ಮೆ ನಾನು ಮನೆಗೆ ಬರೋದು ಲೇಟ್ ಆದರೆ ಸಾವಿತ್ರಕ್ಕನೆ ನನ್ನಷ್ಟೂ ಕೊಡವನ್ನ ತುಂಬಿಸಿ ತಮ್ಮ ಮನೆಯಲ್ಲಿ ಇಟ್ಕೊಂಡಿರ್ತಾರೆ. ಈ ಪ್ರೀತಿ ಇನ್ನೆಲ್ಲಿ ಸಿಕ್ಕತ್ತೆ ಹೇಳು..??  ಶ್ರೀಧರ ಇನ್ನೂ ಏನೇನೋ ಹೇಳುತ್ತಾ ಹೋದ. ನಾನು ಮೌನವಾಗಿ ಅವನಿಗೆ ಕಿವಿಯಾಗಿಯೇ ಇದ್ದೆ. ಅವನ ಮಾತುಗಳು ಮನಸೊಳಗೆ ಯಾವುದೋ ಹಿತಕರ ಭಾವನೆಯನ್ನ ಮೂಡಿಸ್ತಾ ಇದ್ವು.

ಸಾವಿತ್ರಕ್ಕ ಊಟ ರೆಡಿ ಅಂತ ಬಂದು ಕರೆದಾಗಲೇ ನಾವಿಬ್ಬರು ಮಾತಿಂದ ಮುಕ್ತವಾಗಿ ಈ ಲೋಕಕ್ಕೆ ಬಂದದ್ದು. ಯಾಕೋ ಸಾವಿತ್ರಕ್ಕ ಅಪರಿಚಿತರೂ ಅನ್ನಿಸಲೇ ಇಲ್ಲ..!! ನಗುತ್ತಲೇ ನಾವಿಬ್ಬರೂ ಅವರ ಮನೆಯಲ್ಲಿ ಊಟಕ್ಕೆ ಕೂತೆವು. ಸಾವಿತ್ರಕ್ಕ ಶಾವಿಗೆ ಪಾಯಸ ಬಡಿಸುವ ಹೊತ್ತಿಗೆ ಶ್ರೀಧರ ಹೇಳಿದ.. ನನ್ನ ಫ್ರೆಂಡ್ ಸಿಕ್ಕಿದ್ದ ಕಣೋ. ಅವನು ಕೆಲಸ ಮಾಡೋ ಶಾಪಿಂಗ್ ಮಾಲ್ ನಲ್ಲಿ ನಿನಗೆ ಕೆಲಸ ನೋಡಿದಾನಂತೆ. ನಾಳೇನೆ ನಿನ್ನ ಕರ್ಕೊಂಡು ಬರೋಕೆ ಹೇಳಿದಾನೆ. ಸಿಹಿ ತಿನ್ನುವ ಸಮಯಕೆ ಸಿಹಿ ಸುದ್ದಿ. ನನ್ನ ಬದುಕು ನಾಳೆಯಿಂದ ಹೊಸ ತಿರುವೊಂದು ಆರಂಭವಾಗತ್ತೆ ಅನ್ನೋ ನಿರೀಕ್ಷೆ.. ಸಾವಿತ್ರಕ್ಕ ಒಂದು ಹೂ ನಗೆ ಚೆಲ್ಲಿ ಮತ್ತೊಂದು ಚಮಚ ಪಾಯಸ ಹಾಕಿದಾಗ ಯಾಕೋ ಪಾಯಸದಲ್ಲಿ ಸಿಹಿ ಸ್ವಲ್ಪ ಜಾಸ್ತಿ ಆಯ್ತೇನೋ ಅನ್ನಿಸ್ತು. ಸಾಕು ಸಾಕು ಅನ್ನುವ ಮನಸ್ಸಾಗಲಿಲ್ಲ. ಸಾವಿತ್ರಕ್ಕ ಇನ್ಮುಂದೆ ನಿನಗೆ ಇಬ್ಬರು ತಮ್ಮಂದಿರು ಅಂದೆ. ಖುಷಿಯಲ್ಲಿ ಅರಳಿದ ಸಾವಿತ್ರಕ್ಕ ನಾನು ಸಾಕು
ಸಾಕು ಎಂದರೂ.. ಪಾಯಸ ಸುರಿಯುವುದನ್ನ ನಿಲ್ಲಿಸಲಿಲ್ಲ..!!

3 comments:

  1. ಈ ಬೆಂಗಳೂರೇ ಹಾಗೇ ಗೆಳೆಯ ಮೊದಲ ನೋಟಕೆ ಸುಲಭವಾಗಿ ಒಗ್ಗುವ ಗೆಳತಿಯೇ ಅಲ್ಲ!

    ತುಂಬಾ ಒಳ್ಳೆಯ ಲೇಖನ ಓದಿದ ಖುಷಿ ನನಗಾಯಿತು. ಹಿಂದೆಯೇ ನನ್ನ ಬದುಕಲಿ ಬೆಂಗಳೂರು ಸ್ವಾಗತಿಸಿದ ನೆನಪುಗಳೂ ಸಹ ಹಳೆಯ ಗಾಯಗಳಂತೆ....

    ReplyDelete
  2. ಇವತ್ತು ಬೆಳಿಗ್ಗೆ ಸತೀಶರ ಬರಹ ಓದಲೇ ಬೇಕೆಂಬ ದೃಡ ನಿಶ್ಚಯದೊಂದಿಗೆ ಕಂಪ್ಯೂಟರನ್ನು ಚಾಲೂ ಮಾಡಿದ್ದೆ...
    ಅಬ್ಬಾ ಓದಿದ ಮೇಲೊಂದು ಸಾರ್ಥಕತೆ ...ಧನ್ಯವಾದಗಳು ಒಂದು ಸುಂದರವಾದ ಕಥನವನ್ನು ನಮ್ಮೆದುರು ಇಟ್ಟಿದ್ದಕ್ಕಾಗಿ...
    ಮೊದಲಿಗೆ ನಗರದ ಅಬ್ಬರವನ್ನು ಬೆರಗುಗಣ್ಣಿನಿಂದ ನೋಡುವ ಮುಗ್ಧ ಹಳ್ಳಿ ಹುಡುಗನ ಭಯವನ್ನು ಹೇಳುತ್ತಾ ಬಿಚ್ಚಿಕೊಳ್ಳುವ ಈ ಭಾವ ಸರಪಣಿ,ನಂತರ ಗೆಳೆಯ ಶ್ರೀಧರನ ಮೂಲಕ ಮಾನವೀಯತೆಯ ಇನ್ನೊಂದು ಮುಖವನ್ನು ಪ್ರಚುರ ಪಡಿಸುತ್ತಾ ಹೋಗುತ್ತದೆ...ಇಲ್ಲಿ ಮೊದಲಿಗೆ ಶ್ರೀಧರ ಚೇತುವನ್ನು ಎಲ್ಲಿದ್ದೆ ಅಂತಾ ಬೈಯ್ಯುವ ಸನ್ನಿವೇಶ ಗಮನ ಸೆಳೆಯಿತು..ಬಹುಷಃ ಎಲ್ಲ ನಿಜವಾದ ಸ್ನೇಹಿತರಲ್ಲಿ ಆಗುವ ಸಂದರ್ಭವದು..ಯಾಕೋ ನನ್ನನ್ನು ತುಂಬಾ ಒಳಗಿಳಿಸಿತು ಆ ಸಂಭಾಷಣೆಗಳು....ಮುಂದೆ ಹಳ್ಳಿ ಜೀವನದತ್ತ ಮರಳುವ ನಿರೂಪಣೆ ಚಿಕ್ಕದಾಗಿ ಚೊಕ್ಕದಾಗಿದೆ...ಈ ಕಥೆಗೆ ಎಷ್ಟು ಬೇಕೋ ಅಷ್ಟನ್ನು ಚೆಂದವಾಗಿ ಹೇಳಿದ್ದು ಅದರ ವಿಶೇಷ ಅನಿಸಿತು...ನಂತರ ಬರುವ ಸಾವಿತ್ರಕ್ಕ ಅವಳ ಹಿನ್ನೆಲೆಯೂ ಸಹ ಅಷ್ಟೇ ನೈಜವಾಗಿದೆ...ಕೊನೆಯಲ್ಲಿ ನಗರ ಜೀವನದ ಬಗ್ಗೆ ಒಂದು ಸುಂದರ ಸಂದೇಶವೂ ಸಹ ಇದೆ...
    ಇವಿಷ್ಟು ನನಗನಿಸಿದ್ದು....
    ನಿಜ ಹೇಳ್ತೀನಿ ಸತೀಶ್ ಇದು ಕಥೆ ಅಂತಾ ಅನಿಸಲೇ ಇಲ್ಲ....
    ಮನದೊಳಗಿನ ಎಳೆಗಳನ್ನು ಹಾಗೇ ಬರಹದಲ್ಲಿ ಇಳಿಸಿದ್ದೀರಿ...ಅದೇ ಭಾವಜಾಲದಲ್ಲಿ ಓದುಗರನ್ನು ಕಟ್ಟಿ ಹಾಕುತ್ತೀರಿ...
    ಅದ್ಭುತ ಅನುಭವ...
    ನಿಮ್ಮ ಕಾದಂಬರಿಗಾಗಿ ಕಾಯ್ತಿರ್ತೀನಿ...
    ನಮಸ್ತೆ...

    ReplyDelete
  3. ತುಂಬಾ ಉತ್ತಮವಾದ ಲೇಖನ. ತುಂಬಾ ಇಷ್ಟವಾಯಿತು ನಾಯ್ಕರೇ...

    ReplyDelete