Friday 5 April 2013

ಪಾನಿಪುರಿಯ ಪ್ರಸಂಗ..

ನಿಜವಾಗಲೂ ಕಳೆದು ಹೋಗಿರುವೆ..!! ಹೆಚ್ಚೇನಿಲ್ಲ ಬರೀ ಎಪ್ಪತ್ತೆಂಟು ಎಕರೆ ಜಾಗದ ಸುತ್ತ ನಾವೇ ಕಟ್ಟಿ ಕೊಂಡಿರೋ ಸಿಮೆಂಟು ಕಾಂಪೌಂಡಿನ ಒಳಗಿನ ಸಾಮ್ರಾಜ್ಯದಲ್ಲಿ.. ನಾಲ್ಕು ಕೋಣೆಗಳಿರೋ ಒಂದು ಕಟ್ಟಡದ ಕೋಣೆಯೊಂದರಲ್ಲಿ ಎಲ್ಲರಿಗೂ ಗೊತ್ತಿದ್ದೂ ಯಾರ ಕೈಗೆ ಸಿಗಲಾರದಷ್ಟು ಸುಲಭಕ್ಕೆ ಕಳೆದು ಹೋಗಿದಿವಿ. ಅಷ್ಟು ಕೆಲಸ..!! ಅಂಥಾದ್ದೇನು ಘನಂದಾರಿ ಕೆಲಸ ಏನಲ್ಲ.. ಆಫೀಸಿನದೆ ಹಲವು ಕೆಲಸವಷ್ಟೇ..
ಈ ಕಾಂಪೌಂಡ್ ಅನ್ನೋ ಬೇಲಿ ದಾಟಿ ಹೊರ ಪ್ರಪಂಚಕ್ಕೆ ಕಾಲಿಟ್ಟು ಸುಮಾರು ಐದು ದಿನವಾಯ್ತು. ಸತ್ಯವಾಗ್ಲೂ..!! ಕಳೆದ ಭಾನುವಾರ ನಟರಾಜು ಸೀಗೆ ಕೋಟೆಯವರ ಪುಸ್ತಕ ಬಿಡುಗಡೆ ಸಮಾರಂಭ ಮತ್ತು ನಮ್ಮ ಸ್ನೇಹ ಲೋಕದ ಸ್ನೇಹಜ್ಯೋತಿ ಆಶ್ರಮದ್ದೊಂದು ಸಣ್ಣ ಕಾರ್ಯಕ್ರಮವನ್ನ ಮುಗಿಸಿಕೊಂಡು ಸರಿ ರಾತ್ರಿ ಸುಮಾರು ಹತ್ತೂವರೆ ಗೆ ಹೊಸೂರಿನಿಂದ ಸುಮಾರು ೨೨ ಕಿ.ಮೀ ದೂರದಲ್ಲಿರೋ ನಮ್ಮ ಗೂಡುಗಳ ಕಾಂಪೌಂಡ್ ಸೇರಿದ್ದಷ್ಟೇ.. ಆನಂತರ ಇವತ್ತಿನವರೆಗೂ ಮತ್ತೆ ಕಾಂಪೌಂಡ್ ದಾಟುವ ಸಾಹಸ ಮಾಡಲೇ ಇಲ್ಲ..!! ಮಾಡಬೇಕು ಅನಿಸಲೇ ಇಲ್ಲ.
ನಾಳಿದ್ದು ಭಾನುವಾರ ತಂಗೀ (ಚಿಕ್ಕಪ್ಪನ ಮಗಳ ) ಮದುವೆ.. ಸ್ವಲ್ಪ ನೀಟಾಗಿ ಒಳ್ಳೆ ಹುಡುಗನ ಥರ ಕಾಣಿಸಿ ಕೊಳ್ಳುವ ಹಾಗೆ ಹೋಗಬೇಕಲ್ಲ..!! ಅದ್ಕೆ ಮುಖದ ಮೇಲಿನ ಕಾಲಿಂಚು ಗಡ್ಡವನ್ನ ಕೆರೆಸಿ ಬರೋಣ ಅನ್ಕೊಂಡು ಇಲ್ಲೇ ಹತ್ತಿರದ ಶೂಲಗಿರಿ ಅನ್ನೋ ಸಣ್ಣ ಪೇಟೆಯ ಬಳಿ ಹೋಗಿದ್ದೆನಷ್ಟೇ.. ಅಲ್ಲಿ ಹೋದರೆ ನನ್ನ ಏಳೇಳು ಜನ್ಮದ ಪುಣ್ಯದ ಫಲ ಕರೆಂಟು ತೆಗೆದು ಕೂತಿದಾರೆ..!! ನಾನು ಯಾವತ್ತಿಗೂ ಶೇವಿಂಗ್ ಮಾಡಿಸಿದವನಲ್ಲ.. ನಮ್ಮದೇನಿದ್ದರೂ ಮಶೀನಿನಲ್ಲಿ ಸಣ್ಣಗೆ ಒಂದು ಟ್ರಿಮ್ಮಿoಗ್ ಅಷ್ಟೇ. ಶೇವಿಂಗ್ ಮಾಡಿಸಿದರೆ ಅಷ್ಟಾಗಿ ಚೆಂದ ಕಾಣುವುದಿಲ್ಲವೆಂಬ ಸತ್ಯ ಗೊತ್ತಿರೋದರಿಂದ. ಅಷ್ಟೇ ಶುಕ್ರವಾರ ಸಂಜೆ ಒಳ್ಳೆ ಮುಹೂರ್ತವಿಲ್ಲ ನಮ್ಮ ಗಡ್ಡ ಕೆರೆಸೋಕೆ ಅನ್ಕೊಂಡು.. ನಾಳೆ ಬೆಳಿಗ್ಗೆ ಸ್ವಲ್ಪ ಬೇಗ ಬಂದು ಮಾಡಿಸ್ಕೊಂಡು ಹೋದರಾಯ್ತು ಅನ್ಕೊಂಡು ಸೆಲೂನ್ ನಿಂದ ಹೊರ ಬಂದು ಕಣ್ಣಾಡಿಸಿದರೆ ಪಾನಿಪುರಿಯ ತಳ್ಳು ಗಾಡಿ ಬೀಳೋದೇ ಕಣ್ಣಿಗೆ..!!
ಆಸೆಗೆ ಒಂದೇ ಹೆಜ್ಜೆಗೆ ಹಾರಿದ್ದವು ಕಾಲು ಅಲ್ಲಿಗೆ..!! ಹೋಗಿ ಒಂದು ಮಸಾಲೆ ಪುರಿ ಆರ್ಡರ್ ಮಾಡಿ ಎರಡು ಸೆಕೆಂಡ್ ಆಗಲಿಲ್ಲ ಮಳೆ..!! ಮೂರು ದಿನದಿಂದ ಫೇಸ್ಬುಕ್ ನ ಹಲವಾರು ಗೆಳೆಯರ ಅಪ್ಡೇಟ್.. ಇಲ್ಲಿ ಮಳೆ, ಅಲ್ಲಿ ಮಳೆ ಅನ್ನೋದು ಕೇಳಿ ಕೇಳಿ ಸಾಕಾಗಿ ನಮಗೂ ಆಸೆಯಾಗಿತ್ತು.. ನಾವೂ ಮಳೆಯ ಮುಖ ನೋಡ್ಬೇಕು.. ಬಹಳ ದಿನದ ನಂತರ ಬಿದ್ದ ಮಳೆ ಹನಿಗೆ ಒಣ ಮಣ್ಣು ಸಮ್ಮಿಳಿತವಾಗಿ ಹುಟ್ಟಿದ ಅದೊಂದು ಸಿಹಿ ಸಿಹಿ ವಾಸನೆಗೆ ಮೂಗು ಹಿಡಿಯಬೇಕು ಅಂತ. ತಗೊಳ್ಳಿ ಈ ಅನಿರೀಕ್ಷಿತ ಮಳೆಯಿಂದಾಗಿ ಆ ಆಸೆಯೂ ಈಡೇರಿ ಹೋಯ್ತು.


ಒಂದು ಪ್ರಶ್ನೆ..

ನಿಮಗೆಲ್ಲಾ ನಿಮ್ಮ ಮೊದಲನೇ ಪಾನಿ ಪೂರಿ ತಿಂದದ್ದು ಯಾವತ್ತು ಅಂತ ಜ್ಞಾಪಕ ಇದೆಯಾ..?? ಪಾನಿಪುರಿಗೆ ಸುತ್ತಿಕೊಂಡ ಅಮೂಲ್ಯ ನೆನಪುಗಳ್ಯಾವುದಾದ್ರೂ ಇದೆಯಾ..??
ನನಗಿದೆ.. ಸುಮಾರು ಹತ್ತು ವರ್ಷಗಳ ಹಿಂದಿನ ಇತಿಹಾಸ ಇದು..!!


ಅದು ೨೦೦೩ ರ ವರ್ಷ ನಾನಾಗ ಹತ್ತನೇ ತರಗತಿ. ನಮ್ಮ ಶಾಲೆಗೇ ಸಂಗೀತ ಮಾಸ್ಟರ್ ಆಗಿ ರವೀಂದ್ರ ಮಳಗಿ ಸಾರ್ ಬಂದಿದ್ದು ಕೂಡಾ ಅದೇ ವರ್ಷ. ಆದರೆ ಅವರು ಬರುವ ಹೊತ್ತಿಗೆ ಶೈಕ್ಷಣಿಕ ವರ್ಷದ ಮೊದಲ ಮೂರು ತಿಂಗಳು ಕಳೆದು ಹೋಗಿದ್ದವು.. ನಂ ಬದುಕಿನ ಹೆವಿ ಲಾಸು ಆ ಮೂರು ತಿಂಗಳು ಕಣ್ರೀ.. ಆ ಕತೆ ಆಮೇಲೆ. ಮೊದಲು ಈ ವಿಷಯ ಮುಗಿಸೋಣ. ಸಂಗೀತ ಮಾಸ್ಟರ್ ಬಂದು ನಮ್ಮನ್ನೆಲ್ಲ ತಯಾರು ಮಾಡಿದ್ದರು.. ನಮ್ಮನ್ನೆಲ್ಲ ಅಂದರೆ ಸುಮಾರು ಇಪ್ಪತ್ತು ಜನರನ್ನ..!! ಸೆಪ್ಟೆಂಬರ್ ತಿಂಗಳಿನ ಕೊನೆಗೋ..ಅಕ್ಟೋಬರ್ ತಿಂಗಳಿನ ಮೊದಲಿಗೋ ಭದ್ರಾವತಿಯ ಆಕಾಶವಾಣಿ ಆಯೋಜಿಸಿದ್ದ ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆಗೆ.
ಇಪ್ಪತ್ತು ಜನರ ಹೆಸರು ಹಾಕೋ ಕಷ್ಟ ನಾನೂ ಪಡಲ್ಲ. ಅದನ್ನ ಓದೋ ಕಷ್ಟ ನಿಮಗೂ ಕೊಡಲ್ಲ ಯೋಚನೆ ಮಾಡ್ಬೇಡಿ. ಒಂದು ಕನ್ನಡ.. ಒಂದು ಹಿಂದಿ ದೇಶ ಭಕ್ತಿಯೊಂದಿಗೆ ನಾವೆಲ್ಲರೂ ಅಂದ್ರೆ ನಾನೂ ಸೇರಿ ನಾವಿಪ್ಪತ್ತು ಜನ ಹುಡುಗ್ರು (ಹುಡುಗರಿಗಿಂತ ಜಾಸ್ತೀ ಹುಡುಗೀರೆ ಇದ್ರೂ.. ಕಾಮನ್ ಆಗಿ ಹುಡುಗ್ರು ಅಂತ ಹೇಳ್ತಾ ಇದೀನಿ.. ಅರ್ಥ ಮಾಡ್ಕೊಬೇಕಾಗಿ ವಿನಂತಿ..) ಜಯಾ ಟೀಚರ್.. ನಾಗರತ್ನಾ ಟೀಚರ್ ಮತ್ತು ನಮ್ಮ ಸಂಗೀತ ಮಾಸ್ಟರ್ ಒಟ್ಟು ಇಪ್ಪತ್ಮೂರು ಜನ ಆಕಾಶವಾಣಿಗೆ ದಂಡಯಾತ್ರೆ ಕೈಗೊಂಡಿದ್ವಿ. ಬಹುಷಃ ನಾವೀಪತ್ತು ಮಂದಿಗೆ ಮೊದಲ ಬಾರಿಗೆ ಆಕಾಶವಾಣಿಯಲ್ಲಿ ಹಾಡಬಹುದಾದ ಸಂದರ್ಭ ಒದಗಿ ಬಂದ ಸುದೈವ ಅದು.
ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸುಮಾರು ಐದಾರು ಶಾಲೆಗಳ ಜೊತೆ ಸೆಣಸಿ ನಮ್ಮ ತಂಡ ಜಯಶಾಲಿಯಾಗಿ ಮುಂದಿನ ಹಂತಕ್ಕೆ ತಲುಪಿತ್ತು. ಮುಂದಿನ ಹಂತ ಅಂದರೆ ಅದು ಸ್ಪರ್ಧೆಯಲ್ಲ.. ಅದೊಂದು ಲೈವ್ ರೆಕಾರ್ಡಿಂಗ್. ನಮ್ಮ ಜೀವಮಾನದ ಮೊಟ್ಟ ಮೊದಲ ಹಾಡಿನ ಕ್ಯಾಸೆಟ್ ಅದು. ನಮ್ಮ ಸಂಗೀತ ಮಾಸ್ಟರ್ ರವರ ತಂದೆಯವರೇ ಬರೆದು (ಮೇಜರ್ ಬೀ ಎನ್ ಮಳಗಿ ಪ್ರಸ್ತುತ ಹಾವೆರಿಯಲ್ಲಿದ್ದಾರೆ) ಅವರೇ ಸಂಗೀತ ಸಂಯೋಜಿಸಿದ್ದ ಆ ಎರಡು ಅದ್ಭುತ ಗೀತೆಗಳನ್ನು ನಿಜಕ್ಕೂ ಯಾರೂ ಕೇಳಿಸಿ ಕೊಳ್ಳುವವರಿಲ್ಲದಿದ್ದರೂ ಅಕ್ಷರಸಹ ಎದೆ ತುಂಬಿ ಹಾಡಿದ್ದೆವು. ನಾವಿಪತ್ತು ಜನರೇನು ಶಾಸ್ತ್ರೋಕ್ತವಾಗಿ ಸಂಗೀತ ಕಲಿತವರಲ್ಲ. ಇಪ್ಪತ್ತು ಜನರ ಧ್ವನಿಯೂ ಒಟ್ಟು ಕೂಡಿದ್ದೇ ವಿಸ್ಮಯ..!! ಅಂಥದ್ದರಲ್ಲಿ ಶ್ರುತಿ ತಪ್ಪುವುದು.. ತಾಳ ತಪ್ಪುವುದು ಎಂಬ ಸಣ್ಣ ಸಣ್ಣ ತಪ್ಪುಗಳು ಮಾಡದೆ ಹೋದ್ರೆ ಹೆಂಗೆ..?? ಅವತ್ತಿಡೀ ಒಬ್ಬೊಬ್ಬರ ಶೃತಿ ತಪ್ಪುವಿಕೆ.. ತಾಳ ತಪ್ಪುವಿಕೆಯ ಫಲವಾಗಿ.. ಬೆಳಿಗ್ಗೆ ಹತ್ತೂವರೆ ಸರಿ ಸುಮಾರಿಗೆ ಶುರುವಾದ ರೆಕಾರ್ಡಿಂಗ್ ಸಂಜೆ ಆರುವರೆಯವರೆಗೂ ರೆಕಾರ್ಡಿಂಗ್ ಮುಗಿಯಲಿಲ್ಲ.
ಕಡೆಗೂ ದಿ ಪರ್ಫೆಕ್ಟ್ ಅನ್ನುವಂತೆ ಯಾವ ಕೊರೆಯೂ ಇಲ್ಲದೆ ಅದೆರಡೂ ಹಾಡುಗಳು ಅದ್ಭುತವಾಗಿ ಮೂಡಿ ಬಂದವು. ಲೆಕ್ಕವಿಲ್ಲದಷ್ಟು ಸಲ ಹಾಡಿ ಹಾಡು ಅದ್ಭುತವಾಗಿ ಮೂಡಿದ್ದು ನಮಗೂ ಇನ್ನಿಲ್ಲದ ಸಮಾಧಾನ ತಂದಿತ್ತು ಮತ್ತು ಸಂತಸವನ್ನು ತಂದಿತ್ತು. ನಾನಾಗಲೇ ಹೇಳಿದ ಹಾಗೆ ನಮ್ಮ ತಂಡದಲ್ಲಿ ಹುಡುಗಿಯರೇ ಜಾಸ್ತಿ ಇದ್ದರಲ್ವೇ..?? ನಾವಿಪ್ಪತ್ತು ಜನರೇನು ಒಂದೇ ಊರಿನವರಲ್ಲ.. ಅಂತರಗಂಗೆ ಎಂಬ ಊರಿನ ಆ ಶಾಲೆಗೆ ಸುತ್ತು ಅಕ್ಕ ಪಕ್ಕದ ಹತ್ತಾರು ಮೈಲಿಗಳಿಂದೆಲ್ಲ ಬರುತ್ತಿದ್ದರು. ಈಗಾಗಲೇ ಸಂಜೆ ಏಳಾಗ್ತಾ ಇದೆ. ನಮ್ಮ ಹಾಡಿನ ಮಾಧುರ್ಯಕ್ಕೆ ಸೋತು (ತಲೆ ಕೆಟ್ಟು..??) ಅಕಾಲಿಕ ಮಳೆಯೂ ಶುರುವಾಯ್ತು. ಜಾಸ್ತಿ ಜೋರೂ ಅಲ್ಲದ.. ಸೋನೆಯೂ ಅಲ್ಲದ ಮಳೆ. ದೂರದ ತಮ್ಮೂರುಗಳಿಗೆ ಹೋಗುವವರಿಗೆಲ್ಲ ಹೊರಡುವ ಧಾವಂತದ ಜೊತೆಗೆ ಮಳೆಯ ಭೀತಿ. ಅವಸರಕ್ಕೆ ಸಿಕ್ಕ ಬಸ್ಸೇರಿ ಆಕಾಶವಾಣಿಯಿಂದ ಭದ್ರಾವತಿಯ ಮುಖ್ಯ ನಿಲ್ದಾಣಕ್ಕೆ ಬಂದ ನಾವು.. ಅಲ್ಲೊಂದಷ್ಟು ಗೆಳೆಯರನ್ನ ಅವರ ಸಮಯಕ್ಕನುಸಾರವಾಗಿ ಸಿಗುವ ಬಸ್ಸುಗಳ ಲೆಕ್ಕಾಚಾರದ ಮೇಲೆ ಉಳಿಸಿ.. ಮಿಕ್ಕ ಹತ್ತು ಹನ್ನೆರಡು ಜನ ಹೊಳೆಯಿಂದೀಚೆಗಿನ ತರೀಕೆರೆ ನಗರಸಭೆ ಬಸ್ ನಿಲ್ದಾಣದ ಬಳಿ ಬಂದೆವು. ನಮ್ಮೂರಿಗೆ ಮತ್ತು ಆ ದಿಕ್ಕಿನ ಹಲವೂರಿಗೆ ಬಸ್ಸು ಮಿಸ್ಸಾದರೂ ಅಲ್ಲಿಂದ ಆಟೋಗಳು ಸಿಗುತ್ತಿತ್ತು. ನಮ್ಮೂರಿನ ದಿಕ್ಕಿಗೆ ಇನ್ನೂ ಎರಡು ಬಸ್ಸುಗಳು ಇದ್ದವು ರಾತ್ರು ಎಂಟೂ ಮುಕ್ಕಾಲು ಮತ್ತು ಒಂಭತ್ತೂವರೆಗೆ. ಸಮಯ ಎಂಟಷ್ಟೇ ಆದರು ತಡವಾಗುತ್ತದೆ ಎಂದು ಒಂದಷ್ಟು ಹುಡುಗೀರು ಸಿಕ್ಕ ಆಟೋದಲ್ಲಿ ಜಯಾ ಟೀಚರ್ ಜೊತೆಗೆ ಹೊರಟೇ ಬಿಟ್ರು. ಉಳಿದದ್ದು ನಾನು, ಸೀನ, ಬಿಂದು, ಆಶಾ, ರಾಧ, ನಿರ್ಮಲ, ಲತಾ, ವೀಣಾ, ಪ್ರಮೀಳ, ನಮ್ ಸಂಗೀತ ಮಾಸ್ಟರ್ ಎಲ್ಲರೂ ಎದುರಿಗಿದ್ದ ಪಾನಿಪುರಿ ಅಂಗಡಿ ಹೊಕ್ಕೆವು.
ಸತ್ಯವಾಗ್ಲೂ ಪಾನಿಪುರಿ ಎಂಬ ಅತಿ ವಿಶಿಷ್ಟ ತಿಂಡಿಯೊಂದನ್ನ ಜೀವನದಲ್ಲಿ ಮೊದಲ ಬಾರಿ ತಿಂದದ್ದು ಅದೇ ಮೊದಲು. ನಾನು ಮಾತ್ರ..!! ಅಲ್ಲಾಗಲೇ ಹಲವರು ಹಲವಾರು ಬಾರಿ ತಿಂದ ತಮ್ಮ ಅನುಭವಗಳನ್ನ ಬಹಳ ರಸಮಯವಾಗಿ ವಿವರಿಸಲು ಆರಂಭಿಸಿದರು ಬಿಂದು ಮತ್ತು ರಾಧ. ನನಗೆ ಹೊಟ್ಟೆ ಕಿಚ್ಚಿನ ಜೊತೆಗೆ ವಿಶಿಷ್ಟ ಕುತೂಹಲ..!! ಪಾನಿಪುರಿ ಹೇಗಿರತ್ತೋ ಏನೋ..?? ಅಲ್ಲಿಯ ತನಕ ಊರಿಂದ ಕೇವಲ ಎರಡು ಕಿಲೋ ಮೀಟರ್ ಇದ್ದರೂ ಭದ್ರಾವತಿಗೆ ಬಂದದ್ದು ಬೆರಳೆಣಿಕೆಯಷ್ಟು ಬಾರಿ ಮಾತ್ರ. ಅದ್ಯಾವಗಲೋ ಅಮ್ಮನ ಜೊತೆ ಸಂತೆಗೆ ಬಂದರೂ ಬೇಂದು ಬತ್ತಾಸು, ಖಾರ ಮಂಡಕ್ಕಿ, ಜಿಲೇಬಿ ಮೈಸೂರು ಪಾಕುಗಳ ಮುಖಾ ಮುಖಿಯೇ ಹಲವು ಬಾರಿ ಆಗಿತ್ತೇ ವಿನಃ ಪಾನೀಪುರಿಯ ಬಗ್ಗೆ ಕೇಳಿದ್ದೂ ಇಲ್ಲ. ಅಂದು ಮೊದಲ ಬಾರಿ ಪಾನಿಪುರಿಯ ಜೊತೆ ಕೈ ಮಿಲಾಸುತ್ತಿದ್ದ ಮುಹೂರ್ತ.. ಕೌತುಕ ಹೇಗಿರಬೇಡ ಹೇಳಿ..??
ಕಡೆಗೂ ಪಾನಿಪುರಿ ಕೈಗೆ ಬಂತು. ಅತಿ ಹವಣಿಕೆಯಿಂದಲೇ ಬಾಯಿಗಿಟ್ಟೆ. ಬಿಸಿ ಬಿಸಿಯಿತ್ತು. ಊಹುಂ ಮೊದಲನೇ ಪಾನಿಪುರಿ ರುಚಿ ಅನ್ನಿಸಲೇ ಇಲ್ಲ..!! ಎಲ್ಲರು ಸವಿದು ಸವಿದು ತಿಂದರೂ ನಾನು ಮಾತ್ರ ಅರ್ಧ ಬಿಟ್ಟಿದ್ದೆ. ಪಾನಿಪುರಿ ತಿಂದು ಮುಗಿಸಿ ಮಾಸ್ಟರ್ ಹಣ ಕೊಟ್ಟು ನಾವೆಲ್ಲರೂ ನಮ್ಮ ಬಸ್ ಹಿಡಿದು ಮನೆ ಸೇರಿದ್ದು ಆಯ್ತು. ನಮ್ಮ ಹಾಡಿನ ಕ್ಯಾಸೆಟ್ ದೆಹಲಿ ಕೇಂದ್ರದಲ್ಲಿ ಪ್ರಸಾರವಾಗಿ ಪ್ರಶಂಸೆ ಗಿಟ್ಟಿಸಿಕೊಂಡಿದೆ ಅನ್ನೋ ಸಿಹಿ ವಿಷಯ ಕೇಳಿ ಕುಣಿದದ್ದೂ ಆಯ್ತು. ಅದೆಲ್ಲ ಮರೆಯುವಷ್ಟರಲ್ಲೇ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆದು ಸಿಹಿ ನೆನಪುಗಳ ಜೊತೆ ಶಾಲೆ ಇಂದ ಹೊರ ಬಿದ್ದದ್ದೂ ಆಯ್ತು.

ಭದ್ರಾವತಿ ನಗರದ ಸಿಲ್ವರ್ ಜ್ಯೂಬಿಲಿ ಕಾಲೇಜಿನಲ್ಲಿ ಪೀಯೂ ಸೇರಿ ಕೊಂಡೆ. ನನ್ನ ಕೈಗೊಂಡು ಸೈಕಲ್ಲು ಬಂತು. ಕಾಲೇಜಿನ ಬಾಜುವಿನಲ್ಲೇ ಅಕ್ಕ ಭಾವರ (ದೊಡ್ಡಪ್ಪನ ಮಗಳು) ಮನೆಯಿತ್ತು. ಕಾಲೇಜು ಮುಗಿಸಿಕೊಂಡು ಒಂದೊಂದು ದಿನ ಅಕ್ಕನ ಮನೆಯಲ್ಲಿ ಸಂಜೆಯ ತನಕ ಉಳಿದು ಅಕ್ಕನ ಮಕ್ಕಳ ಜೊತೆ ಆಡಿ ಕುಣಿದು ಬರುತ್ತಿದ್ದ ನನಗೆ ಸಂಜೆ ಸಮಯಕೆ ಮತ್ತೆ ಪಾನಿಪುರಿ ಗೂಡುಗಳು ಆಸಕ್ತಿ ಕೆರಳಿಸಲಾರಂಭಿಸಿದವು. ಕಾಲೇಜಿಗೆ ಹೋಗುತ್ತಿದ್ದೆನಾದರೂ ಆ ದಿನಗಳಲ್ಲಿ ಸತ್ಯವಾಗಲೂ ಕಿಸೆಯಲ್ಲಿ ಒಂದು ಪೈಸೆ ಇರುತ್ತಿರಲಿಲ್ಲ. ಅದೆಷ್ಟೋ ದಿನಕ್ಕೆ ಕೂಡಿಟ್ಟ ಐದು ಆರು ರೂಪಾಯಿಗಳಿಂದ ಅಪರೂಪಕ್ಕೊಮ್ಮೆ ಪಾನಿಪೂರಿ ತಿನ್ನಲು ಶುರುವಿಟ್ಟೆ. ಪಾನಿ ಪುರಿ ಅಂಗಡಿಯವನ ಪರಿಚಯವಾಯ್ತು. ತುಸು ಆಪ್ತವೆ ಆಯ್ತು. ಒಮ್ಮೊಮ್ಮೆ ಆಸೆಗೆ ತಿಂದು ದುಡ್ಡು ನಾಳೆ ಕೊಡ್ತೀನಿ.. ನಾಳಿದ್ದು ಕೊಡ್ತೀನಿ ಅಂತ ಅವನ ಅಂಗಡಿಯ ಬಳಿ ತಿಂಗಳಾದರೂ ಸುಳಿಯುತ್ತಿರಲಿಲ್ಲ. ಅವನಿಗೂ ಬೇಸರವೇನೂ ಇರುತ್ತಿರಲಿಲ್ಲ. ಕಾಸು ಹೊಂದಿಕೆಯಾದ ದಿನ ಮತ್ತೆ ಅವನಿಗೆ ದರ್ಶನ ಕೊಡುತ್ತಿದ್ದೆ. ಹಳೆಯ ಬಾಕಿಯನ್ನ ಚುಕ್ತಾ ಮಾಡಿ ಹೊಸಾ ಲೆಕ್ಖವನ್ನ ಬರೆಸುತ್ತಿದ್ದೆ..!!
ಹೀಗೆ ದಿನಗಳು ಕಳೆದವು.. ನನ್ನ ಕಾಲೇಜು ಮುಗೀತು.. ಐ ಟೀ ಐ ಮುಗೀತು.. ಆ ನಾಲ್ಕು ವರ್ಷದಲ್ಲಿ ಹೊಟ್ಟೆ ಸೇರಿದ ಪಾನಿ ಪುರಿಗಳಿಗೆ ಲೆಕ್ಖವಿಲ್ಲ. ಈಗಲೂ ಸೇರುತ್ತಿವೆ ಅವಕ್ಕೂ ಲೆಕ್ಖವಿಲ್ಲ. ನನಗೆ ಕೆಲಸವೂ ಸಿಕ್ತು. ಭದ್ರಾವತಿಯನ್ನ ತೊರೆದದ್ದೂ ಆಯ್ತು. ಭದ್ರಾವತಿಯ ನನ್ನ ಆಪ್ತ ಗೆಳೆಯರಲ್ಲಿ ಪಾನೀಪುರಿ ಅಂಗಡಿಯ ರಾಜುವೂ ಒಬ್ಬ. ಈಗ ನಾನ್ಯಾವಾಗ ಅವನ ಅಂಗಡಿಗೆ ಹೋದರು.. ನನ್ನ ಹೊಟ್ಟೆ ಬಿರಿಯೆ ಪಾನಿ ಪುರಿ ಕೊಟ್ಟರೂ ದುಡ್ಡು ಮಾತ್ರ ತೆಗೆದು ಕೊಳ್ಳಲೋಲ್ಲ..!! ನಾನು ಬಿಡಲೊಲ್ಲೆ. ಅವನ ಕೈಗೆ ಕಾಸು ಕೊಡದೆ, ಅವನ ಕಾಸಿನ ಡಬ್ಬಕ್ಕೆ ದುಡ್ಡು ಹಾಕಿ ಬಿಡ್ತೀನಿ..!! ಅವನಿಗೋ ಕಾಸು ತೆಗೆದುಕೊಳ್ಳೋಕೆ ಮುಜುಗರ.. ನನಗೆ ಕೊಡೋಕೆ ಸಡಗರ. ಒಂದು ಕಾಲಕ್ಕೆ ಐದು ರುಪಾಯಿ ಇದ್ದ ಪಾನೀಪುರಿ ಈಗ ಹದಿನೈದು ರುಪಾಯಿ ಪ್ಲೇಟು. ಸರಿಯಾಗಿ ಹತ್ತು ವರ್ಷಕ್ಕೆ ಹತ್ತು ರುಪಾಯಿ ಏರಿಕೆಯಾಗಿದೆ.
ಪಾನಿಪುರಿಯ ವ್ಯಾಮೋಹ ಈಗಲೂ ಕಮ್ಮಿ ಆಗಿಲ್ಲ. ಅದನ್ನು ತಿನ್ನಲೆಂದೇ ಎಷ್ಟೋ ಬಾರಿ ಸಮಯ ಹೊಂದಿಸಿ ಕೊಂಡು ಹೊರಗೆ ಹೋಗೋದುಂಟು. ತಿಂದು ಖುಷಿ ಖುಷಿ ಅನ್ನಿಸಿ ಬರೋದುಂಟು. ಇಂಥಾ ಜಿಡಿ ಮಳೆ ಜೊತೆ ಮೊದಲ ಪಾನಿಪುರಿಯ.. ಆಕಾಶವಾಣಿಯ ಮೊದಲ ಸುದಿನಗಳ ನೆನಪು ಯಾವತ್ತಿಗೂ ಹಚ್ಚಸಿರು. ಇಂದು ಈ ಸಂಜೆ ಮಳೆಯ ಜೊತೆ ಅದು ಮತ್ತೆ ನವಿರಾಗಿ ಮಣ್ಣ ಕಂಪಿನೊಡನೆ ಸುರುಳಿ ಸುರುಳಿಯಾಗಿ ಕಣ್ಮುಂದೆ ಸುಳಿದು ಹೋಯ್ತು. ಆ ಹಾಡುಗಳನ್ನ ಮತ್ತೆ ಗುನುಗುತ್ತಲೇ ಹೊರಟೆ.  ಜಿಡಿ ಮಳೆಯಲ್ಲೇ ಬಹಳ ದಿನದ ಮೇಲೆ ನೆಂದು ಮನೆ ತಲುಪಿಕೊಂಡೆ. ಇದನ್ನು ಗೀಚಿ ಮುಗಿಸಿದರೂ ಪಾನೀಪುರಿಯ ರುಚಿ ನಾಲಗೆಯಿಂದ ಇನ್ನೂ ಮಾಸಿಲ್ಲ.

7 comments:

 1. ವಾಹ್! ಪಾನೀಪುರಿಯಷ್ಟೇ ರುಚಿಯಾಗಿದೆ ನಿಮ್ಮ ವರ್ಣನೆ!

  ReplyDelete
 2. ಅಸಲು ಪಾನೀ ಪುರಿ ತಿನ್ನುವುದೇ ಒಂದು ಆರ್ಟು ಕಣಪ್ಪಿ! ಯಾವತ್ತೂ ಗಾಡಿಯವನನ್ನು ಪ್ಲೇಟಿನಲ್ಲಿ ಜೋಡಿಸಿಕೊಡು ಅಂತ ಕೇಳಲೇ ಬಾರದು. ಅವನು ಪೂರಿಗೆ ತೂತು ಮಾಡಿ ಬಟಾಣಿ, ಈರುಳ್ಳಿ ಮತ್ತು ಮಸಾಲ ತುಂಬಿಸಿ ಮಡಕೆಯಲ್ಲಿ ಪಾನಿಯನ್ನು ಮುಳುಗಿಸಿ ಮುಳುಗಿಸಿ ಕೊಡಬೇಕು. ಆಮೇಲೆ ನಾವು ಅದನ್ನು ಬಾಯಲ್ಲಿ ತುಂಬಿಸಿಕೊಳ್ಳಬೇಕು (!) ಪಾನಿ ನುಂಗಿದ ಮೇಲೆ ಪೂರಿ ಅಗೆದರೆ ಲಾಸೇ, ಅದು ನಿದ್ದೇ ಮಂಪರಿನಲ್ಲಿ ಹೆಂಡತಿ ತೆಕ್ಕೆಯಲ್ಲಿದ್ದಾಗ ಪ್ರೇಯಸಿ ಹೆಸರನ್ನು ಬಾಯ್ತಪ್ಪಿ ಹೇಳಿದಷ್ಟೇ ಘೋರ ಅಪರಾಧ. ಆದ್ದರಿಂದ ಪಾನಿ + ಪೂರಿ + ಬಟಾಣಿ ಸಮೇತ ಸಮಪ್ರಮಾಣದಲ್ಲಿ ಅಗೆದು ಅಗೆದು ರುಚಿ ಅನುಭವಿಸಿ ಸೇವಿಸಬೇಕು. ಆಗಲೇ ಸ್ವರ್ಗ ಪ್ರಾಪ್ತಿಯೂ.

  ಅಂದಹಾಗೆ ನನಗೆ ಮೊದಲ ಪಾನೀ ಪೂರಿಯ ಸೇವಾಕರ್ತೆ ನನ್ನ ಕಾಲೇಜು ಸಹಪಾಠಿ ಸಂಧ್ಯಾ. ಆಕೆ ಪಾಪ ಈಗೆಲ್ಲಿದ್ದಾಳೋ ಆಗಲೇ ತನಗೆ ಬೇಗ ಮದುವೆಯಾಗಬೇಕು ಅಂತ ಹಲಬುತ್ತಿದ್ದಳು. ಪ್ರಾಯಶಃ ಈಗ ಡಜನ್ ಮಕ್ಕಳ ಸಮೇತ ಎಲ್ಲೋ ನೆನೆಸಿರಬಹುದು. ಆಗ ಬಸವನಗುಡಿ ನ್ಯಾಷನಲ್ ಕಾಲೇಜಿನ ಮೂಳೆಯ ಪಾನೀಪುರಿ 3 ರೂಪಾಯಿ!!!

  ReplyDelete
 3. ಜಂಕ್ ಫುಡ್ ಅಂತ ಎಷ್ಟೇ ಅಲ್ಲಗಳೆದರೂ ಯಾವುದೇ ಕಾಲದಲ್ಲಿ ತುಸು ಖಾರ ಹೆಚ್ಚಾದ, ಹುಳಿ ಭರಿತ ಆ ಪಾನಿಯನ್ನು ಕುಡಿಯುವುದೇ ಒಂದು ಮಜಾ. ಒಮ್ಮೆ ಯಾವುದೋ ಕಾರಣಕ್ಕೆ ಪಾನಿ ಪುರಿ ತಿನ್ನಲು ಹೋದಾಗ ನೆತ್ತಿ ಹತ್ತಿತ್ತು. ಇನ್ನೂ ಆರ್ಡರ್ ಕೂಡ ಮಾಡಿರಲಿಲ್ಲ. ಗುರುತಾಗಿದ್ದ ಆ ಅಂಗಡಿಯವ ಬನ್ನಿ ಸರ್ ಒಂದು ಲೋಟ ಪಾನಿ ಏರಿಸಿಬಿಡಿ. ನೆತ್ತಿಗೆ ಹತ್ತಿದ್ದು ಇಳಿದು ಹೋಗಿ ಬಿಡುತ್ತೆ... ಅಂದ.. ನನಗೆ ಆಶ್ಚರ್ಯ.. ಆವಾ ಹೇಳಿದ ಹಾಗೆ ಮಾಡಿದೆ.. ತಕ್ಷಣ ನೆತ್ತಿಗೆರಿದ್ದ ಕೆಮ್ಮು ಗಾಯಬ್.
  ಗಾಡಿಯಲ್ಲಿ ಸಿಗುವ ಪಾನಿಪುರಿಯ ಸ್ವಾದ ಯಾವುದೇ ಐಶಾರಾಮಿ ಹೋಟೆಲ್ನ ಪಾನಿಪುರಿಯಲ್ಲಿ ಸಿಗದು.
  ಒಂದು ಸಣ್ಣ ಸಂಗತಿಯನ್ನು ಕುತೂಹಲ ತುಂಬಿಸಿ ಬರೆಯುವ ನಿಮ್ಮ ಕಲೆಗೆ ಅಭಿನಂದನೆಗಳು ಸತೀಶ್. ಇಷ್ಟವಾಯಿತು ಪಾನೀಯಲ್ಲಿ ತೇಲಾಡಿದ ಪ್ರಸಂಗ!

  ReplyDelete
 4. ಪಾನಿಪೂರಿ ಪ್ರಸಂಗ ಸಖತ್ತಾಗಿದೆ ಸತೀಶ್ :-)
  ಬೆಂಗ್ಳೂರಿನ ಮಾಲುಗಳ ಮಧ್ಯೆ, ಜಸ್ಟ್ ೨೫ ಅನ್ನೋ ಮೆಕ್ಡಿ, ಕೆಎಫ್ಸಿಗಳ ಮಧ್ಯೆ .. ಹನ್ನೆರಡು ರೂಪಾಯಿ ಮಸಾಲೆಪುರಿ ಸಖತ್ ಖುಷಿ ಕೊಡುತ್ತೆ.. ನಿಮ್ಮ ಮಸಾಲೆಪುರಿ ಸಂದರ್ಭ ಕೇಳಿ ನನಗೂ ಮಸಾಲೆಪುರಿ ಬಗ್ಗೆ ಬರೀಬೇಕು ಅನಿಸ್ತಾ ಇದೆ :-)

  ReplyDelete
 5. yuppieeee.....ತುಂಬಾ ಚೆನ್ನಾಗಿದೆ ನಿಮ್ಮ ಈ ಪಾನಿ ಪುರಿಯ ಪ್ರಸಂಗ ....
  ಬಾಯಲ್ಲಿ ನೀರೂರಿದ್ದು ಸುಳ್ಳಲ್ಲ :)
  ಬರೀತಾ ಇರಿ ...ನಮಸ್ತೆ

  ReplyDelete
 6. ಪಾನಿಪುರಿಗೊಂದು ಜೈ...

  ReplyDelete