Sunday 16 June 2013

ಎಲ್ಲರಂತಲ್ಲ.. ಎಲ್ಲರಂತಿಲ್ಲ ನನ್ನಪ್ಪ..!!

ನನ್ನಿಷ್ಟದ ಪಾನಿಪುರಿ ತಿನ್ನುತ್ತಾ ಇದ್ದೆ ಹೊಸೂರಿನ ನನ್ನ ಪರಿಚಯದ ಹುಡುಗನೊಬ್ಬನ ತಳ್ಳು ಗಾಡಿಯಲ್ಲಿ. ಒಂದು ಮಸಾಲೆ ಪುರಿ, ಒಂದ್ನಾಲ್ಕು ಪಾನಿಪುರಿ ಹಾಕಿಸಿಕೊಂಡು ತಿಂದು, ಕಾಸು ಕೊಟ್ಟು ಕೈ ಬಾಯಿ ತೊಳೆದು ಕೊಂಡು ಇನ್ನೇನು ಹೊರಡಬೇಕು.. ಆಗ ಬಂತು ನೋಡಿ ಮೂರು ಜೀವಗಳು ನಾನಿದ್ದ ಅದೇ ಪಾನಿಪುರಿ ಅಂಗಡಿ ಕಡೆ.. ನಾಲ್ಕು ವರ್ಷದವನಿರಬಹುದಾದ ಒಂದು ಪುಟ್ಟ ಹುಡುಗ.. ಆರು ವರ್ಷದ ಪುಟ್ಟ ಹುಡುಗಿ ಮತ್ತವುಗಳ ಅಪ್ಪ. ನೂರು ರುಪಾಯಿಗೆ ಚೇಂಜ್ ಇಲ್ಲದೆ ಸಹಾಯಕನೊಬ್ಬನ್ನನ್ನ ನೂರು ರುಪಾಯಿಗೆ ಚೇಂಜ್ ತರಲು ಕಳಿಸಿದ ತಳ್ಳುಗಾಡಿಯ ಹುಡುಗ ಸಾರ್ ಒಂದೆರಡು ನಿಮಿಷ ತಡೀರಿ ಹುಡುಗ ಈಗ ಚೇಂಜ್ ತಂದು ಬಿಡ್ತಾನೆ ಅಂತ ನನ್ನನ್ನ ಕಾಯಲು ಹೇಳಿದ. ಎರಡು ನಿಮಿಷ ತಾನೇ ಎರಡು ಗಂಟೆಯಲ್ಲವಲ್ಲ.. ಕಾಯುತ್ತ ನಿಂತೆ.

ಅಪ್ಪ ಅಪ್ಪ ಪಾನಿಪುರಿ ಬೇಕು ಅಂತ ಹಠ ಮಾಡಿದ್ದರಿಂದಲೇ ಆ ಮಕ್ಕಳನ್ನು ಅಲ್ಲಿಗೆ ಕರೆ ತಂದಿದ್ದದ್ದೇನೋ ಆಯಪ್ಪ ಅವರನ್ನ. ಅಲ್ಲಿಗೆ ಬಂದು ಕೂತಾಗಲೂ ಆ ಹುಡುಗ ಅಪ್ಪ ಅಪ್ಪ ಪಾನಿಪುರಿ ಅನ್ನುವ ಮಂತ್ರವನ್ನ ಬಿಟ್ಟಿರಲಿಲ್ಲ.  ಅವರನ್ನೇ ನೋಡುತ್ತಾ ನಿಂತೆ. ಆ ಮಕ್ಕಳ ತಂದೆ ಸ್ವಲ್ಪ ಬಡವನೇ ಅನ್ನುವ ಹಾಗಿದ್ದ. ಹಳೆಯ ಹರಕು ಮತ್ತು ಮಾಸಲು ಪ್ಯಾಂಟ್ ಶರ್ಟ್ ಒಂದನ್ನು ತೊಟ್ಟಿದ್ದ ಅಯ್ಯಪ್ಪ, ಜೇಬಿನಲ್ಲಿ ತನ್ನ ಬಳಿಯಿದ್ದ ಚಿಲ್ಲರೆ ಹಣವನ್ನೆಲ್ಲ ಒಮ್ಮೆ ಒಟ್ಟಿಗೇ ಎಣಿಸಿ ಒಂದೇ ಒಂದು ಪ್ಲೇಟ್ ಪಾನಿಪುರಿಯನ್ನ ಕೊಡಲು ಹೇಳಿದ. ಆ ಒಂದು ಪ್ಲೇಟ್ ಪಾನಿ ಪುರಿಯನ್ನ ಒಂದೇ ಚಮಚದಿಂದ ಎರಡೂ ಮಕ್ಕಳಿಗೆ ತಿನಿಸುತ್ತಿದ್ದ ಅವನು.. ಅಪ್ಪ ಇದೇನು..?? ಅಪ್ಪ ಅದೇನು..?? ಅದ್ಯಾಕೆ ಹೀಗೆ..?? ಆ ಗೊಂಬೆ ಯಾಕೆ ಅಲ್ಲಿಟ್ಟಿದಾರೆ..?? ಅವರ್ಯಾರು..?? ಇವರ್ಯಾರು..?? ಅಂಥವೇ ಅನೇಕ.. ಆ ಮಕ್ಕಳ ಆ ಕ್ಷಣದ ಅದೆಷ್ಟೋ ಪ್ರಶ್ನೆಗಳಿಗೆ ತನಗೆ ತೋಚಿದಂತೆ ಉತ್ತರಿಸುತ್ತಾ ತಿನ್ನಿಸುವುದನ್ನ ಮುಂದುವರೆಸಿದ್ದ. ಆ ಒಂದು ದೃಶ್ಯ ಅದೆಷ್ಟು ಕಣ್ತುಂಬಿ ಕೊಳ್ತು. ಆಗಷ್ಟೇ ಅಪ್ಪನ ಬಳಿ ಮಾತಾಡಿ ಫೋನಿಟ್ಟು ಪಾನಿಪುರಿ ತಿನ್ನಲು ಬಂದಿದ್ದು ನಾನು.

ನಿನ್ನೆ ರಾತ್ರಿ ಸುಮಾರು ಹತ್ತು ಗಂಟೆ ಸುಮಾರಿಗೆ ಅಪ್ಪ ನನಗೆ ಫೋನ್ ಮಾಡಿದ್ದರು ಅನ್ನಿಸತ್ತೆ. ನಮ್ಮ ಹೊಸೂರು ಆಫೀಸಿನಿಂದ ವರ್ಗಾವಣೆಯಾದ ಹಲವರಿಗೆ ಒಂದು ವಿದಾಯ ಕೂಟ ಮತ್ತು ಅದೇ ಕೂಟವೇ ಹೊಸದಾಗಿ ಬಂದು ಹೊಸೂರು ಕೂಡಿಕೊಂಡ ಹೊಸ ವಾರ್ಗಾಯಿತ ಕಾರ್ಮಿಕರಿಗೆ ಸ್ವಾಗತ ಕೂಟವೂ ಆಗಿತ್ತು. ನಮ್ಮಗಳ ನಡುವೆ ಅಪರೂಪಕ್ಕೆ ಇಂಥದ್ದೊಂದು ಕೂಟ ನಡೆಯುತ್ತದೆ. ಸ್ವಾಗತ.. ಪರಿಚಯ.. ವಿದಾಯ.. ವಿಷಾದ.. ಊಟ.. ಹಾಡು.. ಕುಣಿತ.. ಒಂದಷ್ಟು ಖುಷಿ.. ಒಂದಷ್ಟು ಬೇಸರ.. ಹೀಗೆ ಕಾರ್ಯಕ್ರಮ ಮುಗಿಯುವುದರೊಳಗಾಗಿ ರಾತ್ರಿ ಹನ್ನೊಂದು ಗಂಟೆ. ಮೊಬೈಲ್ ಅನ್ನು ಸೈಲೆಂಟ್ ಇಟ್ಟದ್ದರ ಪರಿಣಾಮ ಅಪ್ಪನ ಫೋನ್ ಬಂದದ್ದು ಗೊತ್ತೇ ಆಗಿರಲಿಲ್ಲ. ಪಾರ್ಟಿ ಮುಗೀತು. ಯಾವುದೋ ಒಂದು ಕ್ಷಣಕ್ಕೆ ಮೊಬೈಲ್ ಕೈಗೆತ್ತಿ ನೋಡಿದರೆ ಮೂರು ಮಿಸ್ ಕಾಲ್..!! ಅಪ್ಪ, ಅಮ್ಮ, ತಮ್ಮ, ಮೂವರ ನಂಬರ್ ಇಂದಲೂ. ತಕ್ಷಣ ಮೂರು ನಂಬರಿಗೂ ಫೋನ್ ಮಾಡುವ ಪ್ರಯತ್ನ ಮಾಡಿದೆನಾದರೂ ನೆಟ್ವರ್ಕ್ ನ ಅಲಭ್ಯತೆ ಇಂದ ಫೋನ್ ಕನೆಕ್ಟ್ ಆಗಲೇ ಇಲ್ಲ. ಸರಿ ಬೆಳಿಗ್ಗೆಯಾದರೂ ಮಾತಾಡುವ ಅಂದ್ಕೊಂಡು ಮಲಗಿದ್ದೆ. ಇಂದು ಬೆಳಿಗ್ಗೆ ಅಷ್ಟು ಹೊತ್ತಿಗೆ ಬೆಂಗಳೂರು ಹೊರಟು ಬಂದೆನಾದರೂ ಫ್ರೆಂಡ್ಸ್ ಜೊತೆಗೆ ಅದೂ ಇದೂ, ಅಲ್ಲಿ ಇಲ್ಲಿ ಅಂತ ತಿರುಗುವುದರೊಳಗೆ ಸಂಜೆಯಾಗಿತ್ತು ನಡುವೆ ಮನೆಗೆ ಫೋನ್ ಮಾಡುವ ಪ್ರಯತ್ನವೇ ಮಾಡಿರಲಿಲ್ಲ. ಹೊಸೂರಿಗೆ ಬಸ್ಸೇರಿ ಕೂತು ಹೊಸೂರು ತಲುಪಿದ ಮೇಲೆ.. ಆ ಪಾನಿಪುರಿ ಅಂಗಡಿ ತಲುಪುವ ವೇಳೆಗೆ ಅಪ್ಪನ ಬಳಿ ಫೋನ್ ಮಾಡಿ ಮಾತಾಡಿದ್ದೆ.

ಫೋನ್ ಮಾಡಿದೆ.. ಮಾಮೂಲಿನಂತೆ ಉಭಯ ಕುಶೋಲಪರಿ ಆಯ್ತು. ಚೆನಾಗಿದಿಯಾ.. ಚೆನಾಗಿದಿನಿ. ಕಾಫಿ ಆಯ್ತಾ.. ಆಯ್ತು. ಆ ಕಡೆ ಮಳೆನಾ..?? ಇಲ್ಲ. ಈಗೊಂದೆರಡು ದಿನದಿಂದ ಅಂಥಾ ಮಳೆ ಏನಿಲ್ಲ.. ಹೊಸೂರ್ ನಲ್ಲಿ..?? ಹೊಸೂರಲ್ಲಿ ಕೂಡ ಈಗ ಸುಮಾರು ಹದಿನೈದು ದಿನದಿಂದಲೂ ಇಲ್ಲ. ಮಾತು ಹೀಗೆ ಸಾಗಿತ್ತು. ಊರಿಂದ ಬಂದ ಒಂದು ವಾರಕ್ಕೆ ಇವತ್ತು ಫೋನ್ ಮಾಡಿ ಮಾತಾಡಿದ್ದೆ ಮನೆಗೆ. ಅಮ್ಮನ ಬಳಿ ಇದೇ ವಾರದಲ್ಲಿ ಮೂರು ಬಾರಿ ಮಾತಾಡಿದ್ದೆನಾದರೂ ಅಪ್ಪನ ಬಳಿ ಇದೆ ಮೊದಲು. ಹಬ್ಬಕ್ಕೆಂದು ಊರಿಗೆ ಹೋಗಿದ್ದ ನಾನು ತಿರುಗಿ ಬರುವಾಗ ಸಾಧಾರಣವಾಗಿ ಏನು ಬಂದಿರಲಿಲ್ಲ. ಮನೆಯಲ್ಲೊಂದು ಮಹಾ ಕದನಕ್ಕೆ ವಿರಾಮವಿತ್ತು ಅಸಾಮಾಧಾನದ ಅಲ್ಪ ಮನಸ್ಸಿಂದಲೇ ಬಂದಿದ್ದೆನಷ್ಟೇ..!!

ಆಗಿದ್ಡಿಷ್ಟೇ.. ವರುಷಕ್ಕೊಮ್ಮೆ ಮಾಡುವ ಊರ ಹಬ್ಬ. ಮೂರು ದಿನಗಳ ಉತ್ಸವ. ಈ ಸಾರಿ ಮಾಮೂಲಿನಂತೆ ಅದ್ಧೂರಿಯಾಗಿ ಹಬ್ಬ ಜರುಗಲಿಲ್ಲವಾದರೂ ಸಂಪ್ರದಾಯದಂತೆ ಪೂಜೆ ಪುನಸ್ಕಾರಗಳಿಗೆ ಕೊರತೆ ಇರಲಿಲ್ಲ. ಹಬ್ಬಕ್ಕೆ ಹತ್ತಿರದ ಊರುಗಳಿಂದ ಬಂದಿದ್ದ ನೆಂಟರಿಷ್ಟರು, ಸ್ನೇಹಿತರೆಲ್ಲ ಹಬ್ಬದ ಎರಡನೇ ದಿನವೇ ಹೋಗಿದ್ದರಿಂದ.. ನಾನು, ಅಕ್ಕ ಮತ್ತು ಭಾವ ಮಾತ್ರವೇ ಅತಿಥಿಗಳಾಗಿ ಉಳಿದು ಕೊಂಡದ್ದು. ಕೆಲಸ ಸಿಕ್ಕು ಬದುಕು ಕಟ್ಟಿ ಕೊಳ್ಳಲು ತಮಿಳುನಾಡು ಸೇರಿದಮೇಲೆ ನನ್ನ ಮನೆಗೆ ಆಗಾಗಷ್ಟೇ ಹೋಗುವ ನಾನೇ ಅತಿಥಿಯಾಗಬೇಕಾದ್ದು ಅನಿವಾರ್ಯತೆ ಕೂಡ..!! ಅವತ್ತು ಹಬ್ಬದ ಮೂರನೇ ದಿನ. ಊರೊಳಗೆ ಊರ ದೇವಿಯ ಉತ್ಸವ ಮೆರವಣಿಗೆ. ಮೊದಲೆಲ್ಲ ಮೂರನೇ ದಿನಕ್ಕೆ ಸರಿಯಾಗಿ ನಾಟಕವೋ.. ಆರ್ಕೆಷ್ಟ್ರವೋ ಇರುತ್ತಿತ್ತು. ಈ ಸಾರಿ ಊರಲ್ಲಿ ದೇವಸ್ಥಾನಕ್ಕೊಂದು ಕಲ್ಯಾಣ ಮಂಟಪ ಕಟ್ಟುತ್ತಿರುವ ಕೆಲಸ ನಡೆಯುತ್ತಿದ್ದರಿಂದ, ಅಷ್ಟು ವಿಜ್ರುಂಭಣೆ ಇಂದ ಆಚರಿಸೋದು ಸಾಧ್ಯವಾಗಿರಲಿಲ್ಲ. ಆದ್ರಿಂದ ಕೆಂಚಮ್ಮ, ಕರಿಯಮ್ಮ ದೇವಿಯರ ವಿಗ್ರಹಗಳನ್ನ ಟ್ರಾಕ್ಟರ್ ಮೇಲೆ ಕೂರಿಸಿ ಅಲಂಕರಿಸಿ ಬೀದಿ ಬೀದಿಯೋಳಗೂ ಕೊಂಡೊಯುತ್ತಾ ಮನೆಮನೆಯಲ್ಲೂ ಪೂಜೆಯೊಂದಿಗೆ ಮೆರವಣಿಗೆ ಸಾಗ್ತಾ ಇತ್ತು. ಆರ್ಕೆಷ್ಟ್ರ ಇಲ್ಲವಲ್ಲ..!! ಊರ ಹುಡುಗರೆಲ್ಲ ಸೇರಿ ತಾವೇ ಕೈ ಇಂದ ಒಂದಿಷ್ಟು ಹಣ ಹಾಕಿ, ದೊಡ್ಡ ದೊಡ್ಡ ಸ್ಪೀಕರ್ ಬಾಕ್ಸ್ ಗಳ ಜೊತೆ ಒಂದು ರೆಕಾರ್ಡ್ ಪ್ಲೇಯರ್ ಕೂಡಾ ಬಾಡಿಗೆಗೆ ತಂದು ತಮ್ಮಿಷ್ಟದ ಹಾಡುಗಳನ್ನ ಹಾಕಿಕೊಂಡು ಮೆರವಣಿಗೆಯಲ್ಲಿ ತಮಗಿಷ್ಟದ ಹಾಗೆ ಕುಣಿಯೋಕೆ ಶುರು ಮಾಡಿದರು..!! ಹೀಗೆ ಕುಣಿಯೋಕೆ ಶುರು ಮಾಡಿದ ಮೇಲೆ ಒಂದಿಷ್ಟು ಸಣ್ಣ ಪುಟ್ಟ ರಗಳೆ.. ಜಗಳ ಬರದೆ ಇರುತ್ತದೆಯೇ..?? ಅದೂ ಕುಡಿದು ಪಾನಮತ್ತರಾಗಿ ತೂರಾಡುವ ಹುಡುಗರೆಂದ ಮೇಲೆ..?? ಒಂದು ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರು ಆಯ್ತು. ಇಬ್ಬರದು ಎರಡು ಗುಂಪಾಯ್ತು. ಈಗ ಇದು ಎರಡು ಗುಂಪುಗಳ ಜಗಳ..!! ಒಂದಿಷ್ಟು ಊರ ಹಿರಿಯರು ಜಗಳ ನಿಲ್ಲಿಸುವ ಪ್ರಯತ್ನ ಮಾಡಿದರಾದರೂ.. ಪರಿಸ್ತಿತಿ ಹದಕ್ಕೆ ಬರಲಿಲ್ಲ. ನಾನು ಮನೆಯಿಂದ ಮೆರವಣಿಗೆಯ ಜಾಗಕ್ಕೆ ಬರುವ ಹೊತ್ತಿಗಾಗಲೇ ಜಗಳ ಸ್ವಲ್ಪ ತೀವ್ರ ಗತಿಯನ್ನೇ ಪಡೆದಿತ್ತು. ನನ್ನ ಜೊತೆ ಅಮ್ಮನೂ ಬಂದಿದ್ರು. ಗುದ್ದಾಡುತ್ತಿರುವ ಒಂದು ಗುಂಪಲ್ಲಿ ನನ್ನ ತಮ್ಮನು ಕೂಡಾ.. ಅಮ್ಮ ನಾನು ಎಷ್ಟು ತಡೆದರೂ ಪುಸಲಾಯಿಸಿ ಕರೆದರೂ ಜಗಳ ಬಿಟ್ಟು ಬರಲೊಲ್ಲ..!! ನಾನೂ ಅವನ ಮಾತ್ರವಲ್ಲದೆ ಜಗಳವನ್ನ ಬಿಡಿಸುವ ಪ್ರಯತ್ನ ಮಾಡಿದೆನಾದರೂ ಪ್ರಯೋಜನವಾಗಲಿಲ್ಲ. ಎಲ್ಲರೂ ಕುಡಿದಿದ್ದರು.. ತಮ್ಮನೂ ಕೂಡ..!! ಯಾರ ಹಟಕ್ಕೆ ಬಗ್ಗಿಯಾರು..?? ಯಾರ ತಹಂಬದಿಗೆ ಸಿಕ್ಕಾರು..?? ಅವರಾಡಿದ್ದೆ ಆಟವಾಗಿತ್ತು ಆ ಕ್ಷಣಕ್ಕೆ. ಹೆದರಿದ ಅಮ್ಮ ಅಪ್ಪನಿಗೆ ಫೋನ್ ಮಾಡಿ ಕರೆದಿದ್ರು. ಅಲ್ಲೆಲ್ಲೋ ಭದ್ರಾವತಿಯಲ್ಲಿ ಗೆಳೆಯರೊಬ್ಬರ ಮನೆಯಲಿದ್ದ ಅಪ್ಪ ಓಡೋಡಿ ಬಂದಿದ್ದರು.

ಅಪ್ಪ ಬಂದವರೇ ಜಗಳದ ಕೂಟದೊಳಗೆ ತೂರಿ, ತಮ್ಮನ ಕೈ ಹಿಡಿದು ದರ ದರ ಎಳೆದು ಕೊಂಡು ಮನೆಗೆ ಬಂದವರೇ ಕುಡಿದು ರೋಷದಲ್ಲಿದ್ದ ತಮ್ಮನ ಕೆನ್ನಿಗೆ ಮತ್ತು ಬೆನ್ನಿಗೆ ಏಟು ಕೊಟ್ಟು, ಸಿಕ್ಕ ಸಿಕ್ಕಲ್ಲಿಗೆ ಝಾಡಿಸಿ ಒದೆಯೋಕೆ ಶುರು ಮಾಡಿದ್ರು..!! ನಾವೆಲ್ಲಾ ಓಡಿ ಬಂದು ಬಿಡಿಸುವುದರೋಳಗಾಗಿ ಕನಿಷ್ಠ ಹತ್ತು ಏಟಾದರೂ ಹೊಡೆದಿದ್ದರು..!! ನನಗಿಂತ ಎರಡು ವರ್ಷ ಚಿಕ್ಕವನಾದ ತಮ್ಮನಿಗೆ ಈಗ ಇಪ್ಪತ್ಮೂರು ವರುಷ. ನನ್ನಂತೆ ಸಾಧುವಲ್ಲ. ಶಾಂತ ಸ್ವಭಾವ ಅವನದ್ದಲ್ಲ. ತನ್ ಮೇಲೆ ಕೈ ಮಾಡುವ ಯಾರಾದರೂ ತಿರುಗಿ ಬೀಳುವ ಕೋಪಿಷ್ಠ..!! ಕುಡಿದಿದ್ದ ಬೇರೆ ಏನು ಮಾಡುತ್ತಿರುವೆ ಎಂಬ ಪರಿಜ್ಞಾನ ಬೇರೆ ಇಲ್ಲ. ಒಂದು ಕ್ಷಣ ಏನು ಮಾಡುತ್ತಿರುವೆ ಎಂದು ತೋಚದೆ ಅಪ್ಪನ ಮೇಲೆ ಕೈ ಎತ್ತಿ ಮುಂದಕ್ಕೆ ಹೋದ..!! ನಾನು ಗಟ್ಟಿಯಾಗಿ ಹಿಡಿದು ಕೊಂಡೆ. ತನ್ನತ್ತಲೇ ಕೈ ಎತ್ತಿ ಬಂದ ಮಗನ ಮೇಲೆ ಇನ್ನೂ ಸಿಟ್ಟಾದ ಅಪ್ಪ.. ತಾವೂ ಅವನನ್ನ ಹೊಡೆಯುವುದಕ್ಕೆ ಮುಂದೆ ಬಂದರು. ನಾನು ತಮ್ಮನನ್ನು ಹಿಡಕೊಂಡೆ.. ಅಳುತ್ತಲೇ ಇದ್ದ ಅಮ್ಮ ಮತ್ತು ಭಾವ ಅಪ್ಪನನ್ನ ಹಿಡಿದು ಸುಧಾರಿಸುವ ಪ್ರಯತ್ನ ಮಾಡುತ್ತಿದ್ದರು. ಅಕ್ಕ ಮತ್ತು ಅಕ್ಕನ ಮಕ್ಕಳದ್ದು ಒಂದೇ ಸಮನೆ ಅಳು. ಕುಡಿದು ತನ್ ಮೇಲೆ ಕೈ ಮಾಡಲು ಬಂದ ತಮ್ಮನ ಮೇಲೆ ಅಪ್ಪ ಕೆಂಡಾಮಂಡಲ ಕೋಪದಿಂದ ಬಾಯಿಗೆ ಬಂದಂತೆ ತುಚ್ಚವಾಗಿ ಬೈಯೋಕೆ ಶುರು ಮಾಡಿದ್ದರು. ಕುಡಿದು ಏಟು ತಿಂದು ಪರಿಜ್ಞಾನ ಕಳೆದುಕೊಂಡ ತಮ್ಮನದು ಒಂದೇ ಹಠ.. ಇನ್ನು ನಾನಿನ್ನು ಈ ಮನೇಲಿ ಇರೋಲ್ಲ ನಾಳೆನೆ ಬಿಜಾಪುರಕ್ಕೆ ಹೋಗ್ತೀನಿ. ಅಲ್ಲಿ ಇಡೀ ತಾಲೂಕಿನ ಎಲೆಕ್ಟ್ರಿಕಲ್ ಮೀಟರ್ ಚೇಂಜ್ ಮಾಡುವ ಟೆಂಡರ್ ಸಿಕ್ಕಿದೆ.. ನಾನು ಮತ್ತು ಇನ್ನು ನಾಲ್ಕು ಜನ ಹೋಗ್ತಾ ಇದಿವಿ. ಎದೆ ಮಟ್ಟಕ್ಕೆ ಬೆಳೆದ ಮಗನ ಮೇಲೆ ಕೈ ಮಾಡುವ ಇಂಥೋರ ಜೊತೆ ಯಾರ್ ಇರ್ತಾರೆ..?? ಇನ್ನು ನನ್ ದಾರಿ ನಂದು.. ನಿಮ್ ದಾರಿ ನಿಮ್ದು..!! 

ತಮ್ಮನ ಈ ವರಸೆ ಹೊಸದೇನಲ್ಲ. ಹತ್ತೊಂಭತ್ತನೇ ವಯಸ್ಸಿಗೆ ಯಾರಿಗೂ ಹೇಳದೆ ಮನೆ ಬಿಟ್ಟು ಓಡಿ ಹೋಗಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿ ತಿಂಗಳ ನಂತರ ಫೋನ್ ಮಾಡಿ ತಿಳಿಸಿದ್ದ. ಪೀಯೂಸಿ ಓದಲಾಗದೆ ಓಡಿ ಹೋಗಿದ್ದ. ಹಾಗೆ ಕೈ ಮೀರಿ ಹೋದ, ಇಂಥಾ ನಿರ್ಧಾರಗಳನ್ನ ತನ್ನಷ್ಟಕ್ಕೆ ತಾನೇ ತೆಗೆದುಕೊಳ್ಳುವಷ್ಟು ದೊಡ್ಡವನಾದ ಮಗನ ಇಂಥಾ ವರ್ತನೆಗಳನ್ನ ಕಂಡು ಯಾರಿಗೆ ತಾನೇ ನೋವಾಗುವುದಿಲ್ಲ..?? ಅಪ್ಪ ಅಮ್ಮನಿಗೆ ನೋವಾದರೂ ಹೇಗೋ ಒಂದು ಕಡೆ ಕೆಲಸ ಮಾಡ್ಕೊಂಡು ಚೆನ್ನಾಗಿದ್ದಾನಲ್ಲಾ ಬಿಡು ಅಂತ ಸಮಾಧಾನ ಮಾಡಿ ಕೊಳ್ಳುವಷ್ಟರಲ್ಲೇ, ಎರಡನೇ ತಿಂಗಳಿಗಾಗಲೇ ಕೆಲಸ ಬಿಟ್ಟು ಮನೆಗೆ ವಾಪಸು ಬಂದಿದ್ದ..!! ಬಂದವನನ್ನ ಹೇಗೋ ಮನವೊಲಿಸಿ, ನಲವತ್ತು ಐವತ್ತು ಸಾವಿರ ಖರ್ಚು ಮಾಡಿ ಐ ಟಿ ಐ ಸೇರಿಸಿ ಕಳಿಸಿದರೆ.. ಅಲ್ಲೂ ಮೂರು ತಿಂಗಳಿಗೆ ನಾನು ಕಾಲೇಜು ಹೋಗೋದಿಲ್ಲ ಅಂತ ಕೂತ. ಮಗ ಕೈ ತಪ್ಪಿದ್ದಾಗಿದೆ, ಹಾದಿ ತಪ್ಪುವುದು ಬೇಡ ಅಂತ ಅಮ್ಮ ತಮ್ಮ ಜೊತೆಯಲ್ಲೇ ತಮ್ಮನನ್ನೂ ಕೆಲಸಕ್ಕೆ ಕರೆದುಕೊಂಡು ಹೋಗಲು ಶುರು ಮಾಡಿದ್ದರು. ಮನೆಯ ಎಲೆಕ್ಟ್ರಿಕಲ್ ವೈರಿಂಗ್ ಕೆಲಸ. ಒಂದೂವರೆ ವರ್ಷ ಅಪ್ಪನ ಜೊತೆಯಲ್ಲೇ ಕೆಲಸ ಮಾಡಿದ್ದ ತಮ್ಮ, ಕೆಲಸದ ಆದಿ ಅಂತ್ಯಗಳನ್ನು ಚೆನ್ನಾಗಿ ಬಲ್ಲವನ್ನಾದ್ದರಿಂದ, ಈಗ ತಾನೇ ಸ್ವಂತಕ್ಕೆ ಅದೇ ಕೆಲಸವನ್ನ ಸ್ವತಂತ್ರವಾಗಿ ಮಾಡುವಷ್ಟು ಯೋಚಿಸಿ ಮುಂದುವರೆದಿದ್ದ..!! 

ತಮ್ಮ ಗುಟಖಾ ಹಾಕುವುದು.. ಕುಡಿಯುವುದು ನಮ್ಮೆಲ್ಲರಿಗೂ (ಬಹುಷಃ ಅಪ್ಪನಿಗೂ) ಗೊತ್ತಿತ್ತಾದರೂ ಯಾರೂ ನೇರ ಕೇಳಲಿಕ್ಕೆ ಹೋಗಿರಲಿಲ್ಲ. ಮುನಿಸಿಕೊಂಡು ಮತ್ತೆ ಮನೆ ಬಿಟ್ಟು ಹೋದರೆ..?? ನಾನೊಂದೆರಡು ಬಾರಿ ಬುದ್ಧಿ ಹೇಳೋ ಪ್ರಯತ್ನ ಮಾಡಿದೆನಾದರೂ ನಾನು ಕುಡಿತಿನಿ, ಪಾನ್ ಪರಾಗ್ ಹಾಕ್ತೀನಿ ಅಂತ ಯಾರ್ ಹೇಳಿದ್ದು ನಿಂಗೆ..?? ಕರ್ಕೊಂಡ್ ಬಾ ಅವನ್ಯಾರು ಅಂತ ನಾನೂ ಕೇಳ್ತೀನಿ.. ಅವನು ಹಾಗೆ ಹೇಳಿದ್ದೆ ಆದ್ರೆ ಆಮೇಲೆ ನೀನು ಹೇಳಿದ ಹಾಗೆ ಕೇಳ್ತೀನಿ ಅಂತ ನನ್ನನ್ನೇ ಸಮಾಧಾನ ಪಡಿಸಲು ನೋಡಿದ. .!! ಅಪ್ಪನಿಗೆ ಈ ವಿಚಾರ ಗೊತ್ತಿದ್ದೋ ಗೊತ್ತಿಲ್ಲದೆಯೋ ಇದರ ಕುರಿತಾದ ಯಾವ ರಗಳೆಗಳೂ ತೆಗೆಯಲು ಹೋಗಿರಲಿಲ್ಲ. ತಮ್ಮನ ಮೇಲಿದ್ದ ಅದಷ್ಟೂ ದಿನದ ಕೋಪ.. ಬೇಸರ, ನಿರಾಸೆ, ನಿಟ್ಟುಸಿರು,, ಸಿಟ್ಟು ಸೆಡವುಗಳನ್ನೆಲ್ಲ ಅಪ್ಪ ಅವತ್ತು ಅವನನ್ನ ಹೊಡೆದು ತೀರಿಸಿಕೊಂಡರೋ ಏನೋ..?? ಅಪ್ಪ ಮತ್ತು ತಮ್ಮನ ವಾಗ್ವಾದ ನಡೆಯುತ್ತಲೇ ಇತ್ತು. ಅಕ್ಕ ಪಕ್ಕದ ಮನೆಯವರೆಲ್ಲ ಬಂದು ಮನೆಯ ಮುಂದೆ ಜಡಾಯಿಸಿದ್ದರು..!! ಪುಣ್ಯಕ್ಕೆ ದೇವರ ಉತ್ಸವದ ಮೆರವಣಿಗೆ ಎರಡು ಬೀದಿಗಳ ಆಚೆಗೆ ಇದ್ದದ್ದರಿಂದ ಊರಿನ ಅಷ್ಟು ಜನ ಮನೆ ಮುಂದೆ ಸೇರೋದು ತಪ್ಪಿತ್ತು..!! ಇಲ್ದಿದ್ರೆ ಇಡೀ ಊರಿನ ಮುಂದೆ ಮಾನ ಹೋಗ್ತಾ ಇತ್ತು. ತಮ್ಮ ಮತ್ತು ಅಪ್ಪನನ್ನ ತಹಂಬದಿಗೆ ತರುವುದರೊಳಗೆ ಸಾಕು ಸಾಕಾಗಿ ಹೋಯ್ತು..!! ಅಪ್ಪನಿಗೆ ಇವನು ಕೆಲಸ ಮಾಡೋ ವಿಚಾರವಾಗಿ ಯಾವ ತಕರಾರಿಲ್ಲ ಆದರೆ ಇವನು ಕೆಲಸ ಮಾಡುವ ಆ ಜಾಗದ ಕುರಿತಾಗಿ, ಆ ಕಾಂಟ್ರಾಕ್ಟ್ ದಾರನ, ಆ ಟೆಂಡರ್ ಕೆಲಸದ ಮಾಹಿತಿಯ ಕುರಿತಾಗಿ ಯಾವ ಮಾಹಿತಿಯೂ ಇವನಿಗೂ ಗೊತ್ತಿಲ್ಲ. ಸುಮ್ನೆ ಅದ್ಯಾರೋ ಏನೋ ಹೇಳಿದ್ದನ್ನೇ ನೆನಪಿನಲ್ಲಿಟ್ಟುಕೊಂಡು ಈಗ ಅಪ್ಪ ಕೈ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡು ಮನೆ ಬಿಟ್ಟು ಓದಿ ಹೋಗುವ ಹೊಂಚು ಹಾಕುತ್ತಿರುವ ತಮ್ಮನ ನಿಲುವು ಅಪ್ಪನಿಗೆ ಸ್ವಲ್ಪವೂ ಹಿಡಿಸಲಿಲ್ಲ. ಎಲ್ಲೆಲ್ಲೊ ಹೋಗಿ ಏನೇನೋ ಆಗುವುದರ ಬದಲು.. ಯಾರದ್ದೋ ಮೋಸಕ್ಕೆ ಬಲಿಯಾಗಿ ನಮ್ಮದಲ್ಲದ ಊರಲ್ಲಿ ಕೂಲಿಯೂ ಇಲ್ಲ, ಕವಡೆಯೂ ಇಲ್ಲ ಅನ್ನೋ ಹಾಗೆ ಆಗೋದರ ಬದಲು.. ಮಗ ಸೋಂಬೇರಿಯಾಗಿ ಆದರೂ ಕಣ್ಮುಂದೆ ಇರುವುದೇ ಲೇಸು ಅನ್ನುವ ಲೆಕ್ಖಾಚಾರ ಅಪ್ಪನದು. ಹಾಗೋ ಹೀಗೋ ಸಂಧಾನದ.. ಸಮಾಧಾನದ ಅರ್ಧ ಗಂಟೆಯ ಮಾತುಕತೆಯ ಬಳಿಕ ತಮ್ಮನಿಂದ ಅಪ್ಪನ ಬಳಿ ಕ್ಷಮೆ ಕೇಳಿಸಿದ್ದಾಯ್ತು. ಹೊಡೆದದ್ದಾದರೂ ಯಾರು ಅಪ್ಪ.. ಅದು ತಾಳದೆ ಹೋದರೆ ಹೇಗೆ..?? ಮನೆ ಮುಂದೆ ಬಂದ ದೇವಿಯ ಪೂಜೆಗೆ ಸಕುಟುಂಬ ಸಮೇತರಾಗಿ ನಿಂತು ಪೂಜೆ ಮಾಡಿಸಿದ್ವು. ಎಲ್ಲರ ಹಾರೈಕೆಯೂ ಹರಕೆಯೂ ತಮ್ಮನ ಒಳಿತಿನ ಕುರಿತೇ ಆಗಿತ್ತು. ತಮ್ಮ ಅದೆಷ್ಟೋ ತಿಳುವಳಿಕೆ ಹೇಳಿದ ನಂತರ ಮನೆ ಬಿಟ್ಟು ಹೋಗುವ ಇರಾದೆ ಇಂದ ಹೊರ ಬಂದಿದ್ದ. ಅದೇ ಧೈರ್ಯದ ಮೇಲೆಯೇ ನಾನು ಮಾರನೆ ದಿನ ಹೊಸೂರಿಗೆ ಹೊರಟಿದ್ದೆ. 

ಇಂದು ಫೋನ್ ಮಾಡಿದ ಅಪ್ಪ ಸಂತುಗೆ ಒಂದು ಸೆಕೆಂಡ್ ಹ್ಯಾಂಡಲ್ ಬೈಕ್ ನೋಡಿದಿನಿ.. ಪಲ್ಸರ್ ಬೈಕ್ ಚೆನ್ನಾಗಿದೆ. ನಮಗೆ ಗೊತ್ತಿರೋರ ಮಗನದ್ದೇ ಬೈಕು. ಆ ಹುಡುಗ ಈಗ ಮುಂಬೈ ನಲ್ಲಿ ಇರೋದ್ರಿಂದ ಮನೇಲಿ ಸುಮ್ನೆ ಬಿದ್ದಿದೆ ಅಂತ ಅವರಪ್ಪ ಇದನ್ನ ಮಾರ್ತಾ ಇದಾರೆ. ಅದೂ ಅಲ್ದೆ ಅವರೇನೋ ಹೊಸಾ ಬೈಕ್ ತಗೋತಾರಂತೆ. ಈ ಬೈಕ್ ಆದ್ರೆ ಅವರಿಗೆ ಓಡ್ಸೋದು ಕಷ್ಟ ಅಂತೆ. ಮಾತು ಕಥೆ ಮಾಡಿ ಸ್ವಲ್ಪ ಕಮ್ಮಿ ಬೆಲೆಗೆ ಸಿಕ್ರೆ ತಗೊಂಡು ಬಿಡೋಣ ಅಲ್ವಾ..?? ಅವನಿಗೂ ಮನೆ ಹತ್ರ ಅದೂ ಇದೂ ಕೆಲಸಕ್ಕೆ ಉಪಯೋಗ ಆಗತ್ತೆ.. ನಿನ್ನ ಒಂದು ಮಾತು ಕೇಳೋಣ ಅಂತ ಫೋನ್ ಮಾಡಿದೆ. ಏನ್ ಹೇಳ್ತೀಯ ಅಂದ್ರು ಅಪ್ಪ. ಇದು.. ಈವರೆಗೂ ನಮಗೆ ಕಾಣಿಸಿರದ ಅಪ್ಪನ ಅಪರೂಪದ ಮುಖ..!! ಅಪ್ಪ ಅದ್ಯಾವಾಗ್ಲೂ ಹಾಗೆ ತಮ್ಮ ಸಿಟ್ಟು ಸೆಡವಿನ ಮುಖದ ಹಿಂದೆ ಒಂದು ಅಪಾರ ಪ್ರೇಮದ ಮುಖವನ್ನ ಹೊತ್ತಿರೋದು. ಆದ್ರೆ ಅದು ಅಷ್ಟು ಸುಲಭಕ್ಕೆ ಅವರೂ ತೋರಗೊಡೋದಿಲ್ಲ.. ನಮಗೂ ಅಷ್ಟು ಸುಲಭಕ್ಕೆ ಗೋಚರಿಸೋಲ್ಲ. ಅಪ್ಪನದ್ದು ಕೋಪ, ಪ್ರೇಮದ್ದು ಎರಡು ಮುಖವಷ್ಟೇ.. ಅವರ ವರ್ತನೆಗಳ ರೂಪ ಬೇರೆ ಬೇರೆ..!! ಅದು ಸಂಧರ್ಭ ಮತ್ತು ಪರಿಸ್ತಿತಿಗಳ ಮೇಲೆ ನಿರ್ಧಾರಿತ. ಅವರ ವರ್ತನೆಗಳು, ಕಟ್ಟುಪಾಡುಗಳು, ರೀತಿನೀತಿಗಳು, ಮಾತು, ಸಿದ್ಧಾಂತಗಳು ಯಾರಿಗಾದರೂ ಸರಿ ಹೊಂದಿಕೊಲ್ಲೋದೆ ಇಲ್ಲ. ಬೈಕ್ ತಗೊಳ್ಳುವುದರಲ್ಲಿ ನನದ್ಯಾವ ಅಭ್ಯಂತರವೂ ಇಲ್ಲ.. ನಾಳೆನೆ ಅಕೌಂಟ್ ಗೆ ದುಡ್ಡು ಕಳಿಸ್ತೀನಿ ತಗೋಳಿ ಅಂದೆ. ಸರಿ ಅಂದು ಸುಮ್ಮನಾದ್ರು. ಮೊದಲಿಂದಲೂ ಹಾಗೆ ನಮ್ಮಗಳ ನಡುವೆ ಫೋನ್ ಅಥವಾ ನೇರ ಮಾತು ಕಥೆ ಅಂದರೆ ಅಷ್ಟೇ.. ಆ ಸಂಧರ್ಭಕ್ಕೆಷ್ಟು ಬೇಕೋ ಅಷ್ಟೇ. ಮನೆಯೊಳಗಾದರೂ ಸರಿ ಅಗತ್ಯಕ್ಕಿಂತ ಯಾರೂ ಹೆಚ್ಚು ಮಾತಾಡುವುದಿಲ್ಲ.ನಕ್ಕು ಮಾತಾಡುವ ಪರಿಪಾಟ ಕಲಿತದ್ದೇ ಇಲ್ಲ. ಬಾಲ್ಯದಿಂದಲೂ ಅಪ್ಪನ ಗಂಭೀರ ಸ್ವಭಾವವೇ ನಮಗೆ ಆಪ್ತ ಪರಿಚಿತ. ಅಪ್ಪ ನಗು ನಗುತ್ತ ಮಾತಾಡುವುದು ನೋಡುವುದಾದರೆ ಅದು ಅವರ ಗೆಳೆಯರ ಬಳಗದ ಮಾತು ಕತೆಯಲ್ಲಷ್ಟೇ. ಅವರು ನಕ್ಕಾಗ ವಿಭಿನ್ನವಾಗಿ, ಚೆನ್ನಾಗಿ ಕಾಣಿಸುತ್ತಾರೆನ್ನುವುದು ನಿಜ. 

ಕೆಲಸ ಸಿಕ್ಕು ತಮಿಳು ನಾಡು ಸೇರಿರುವ ನಾನು ಪರಿಸ್ತಿತಿಯ ಪ್ರಭಾವ ಅದೆಷ್ಟೋ ಸಾರಿ ಅಂದುಕೊಂಡ ಹಾಗೆ ಒಮ್ಮೊಮ್ಮೆ ಊರಿಗೆ ಹೋಗಲಾಗುವುದಿಲ್ಲ. ಅಂತ ಸಂಧಿಗ್ದತೆಯಲ್ಲೇ ಒಂದೆರಡು ಬಾರಿ ಯುಗಾದಿ, ಗಣೇಶ ಹಬ್ಬ, ಶಿವರಾತ್ರಿಗೆ ಊರಿಗೆ ಹೋಗದೆ ಇರುವಾಗಲೆಲ್ಲ ಅಥವಾ ಅಕ್ಕ ಪಕ್ಕದೂರಿನ ಜಾತ್ರೆಗಳಾದಾಗಲೆಲ್ಲ ಅಪ್ಪ ಫೋನ್ ಮಾಡಿ ಇಲ್ಲಿ ಹೀಗಾಯ್ತು.. ಅಲ್ಲಿ ನಿನ್ ಜೊತೆ ಯಾರೂ ಇಲ್ಲ.. ನಿನ್ ಪಾಲಿಗೆ ಹಬ್ಬಗಳು ಅದು ಹ್ಯಾಗೋ ಏನೋ..?? ಸಾಧ್ಯ ಆದ್ರೆ ಸಂಜೆ ಸ್ನಾನ ಮಾಡ್ಕೊಂಡು ದೇವಸ್ಥಾನಕ್ಕೆ ಹೋಗಿ ಬಾ ಅನ್ನುತ್ತಾರೆ. ರಜೆ ಸಿಕ್ಕದೇ ಹೋದರು ಹಬ್ಬದ ಅಡುಗೆ ಇಂದ ನಾನೇನು ವಂಚಿತನಾಗೋದಿಲ್ಲ. ಬೆಂಗಳೂರಿನ ಕೆಲ ಗೆಳೆಯರ ಮನೆಯೋ ಅಥವಾ ಕಾಲೋನಿಯಲ್ಲಿನ ಏಕೈಕ ಕನ್ನಡ ಕುಟುಂಬ ಗೆಳೆಯ ಪ್ರಶಾಂತನ ಮನೆಯಲ್ಲೋ ಊಟ ಆಗಿ ಹೋಗುತ್ತದೆ. ಆದರೆ ಅಪ್ಪ ಹೇಳಿದ ಹಾಗೆ ದೇವಸ್ಥಾನಕ್ಕೆ ಹೋಗಿ ಬಂದರೇನೆ ಹಬ್ಬದ ದಿನ ಒಂದು ವಿಶೇಷ ಸಮಾಧಾನದ ತೃಪ್ತಿ ಸಿಗೋದು. ಇವತ್ತು ಅಪ್ಪಂದಿರ ದಿನ ಅಪ್ಪನಿಗೆ ವಿಶ್ ಮಾಡುವ ಮನಸ್ಸಿತ್ತು.. ಆದರೆ ನಾವುಗಳ್ಯಾರು ಅಂಥಹ ಆಚರಣೆಗಳಿಗೆ ನಮ್ಮನ್ನ ನಾವು ತೊಡಗಿಸಿ ಕೊಂಡ ಉದಾಹರಣೆಗಳಿಲ್ಲ. ಇನ್ನು ನಾನು ಈ ಕಡೆ ಬಂದಾದ ಮೇಲೆ ಅದೂ ಇದೂ.. ಆ ದಿನ ಈ ದಿನ.. ಹುಟ್ಟಿದ ದಿನ ಅಂತೆಲ್ಲ ದಿನಗಳಿಗೆ ಸ್ಪಂದಿಸುವ ಪ್ರವೃತ್ತಿ ಬೆಳೆಸಿಕೊಂಡೆನಾದರೂ.. ನಮ್ಮ ಮನೆಯವರಿಗೆಲ್ಲ ಅದು ಈಗಲೂ ಅಪರಿಚಿತವೇ. ಅದನ್ನ ಪರಿಚಿತಗೊಳಿಸುವ ಆಸೆಯೇ.. ಆದರೆ ಅದಕ್ಕೆ ಅವರು ಸ್ಪಂದಿಸುವುದಿಲ್ಲವೆಂಬ ಬೇಸರ.. ಒಪ್ಪಿಕೊಳ್ಳುವುದಿಲ್ಲ ಎಂಬ ನಿರಾಸೆ. ಬದಲಾಗಿರೋದು ನಾನೇ ಹೊರತು ಅವರಲ್ಲ. ಫೋನ್ ಮಾಡಿದ್ದು ಸಂಜೆ ಆರು ಗಂಟೆ ಸುಮಾರಿಗಾದ್ದರಿಂದ ಅಪ್ಪ ಇನ್ನು ಮನೆಗೆ ಹೋಗಿರಲಾರರು ಗೊತ್ತು. ಎರೆಹಳ್ಳಿಯಲ್ಲಿಯೇ ಅಪ್ಪನ ದಿನದ ಬಹುಪಾಲು ಸಮಯ ಕಳಿಯೋದು. ಅಲ್ಲಿಂದ ಎರಡು ಕಿಮೀ ದೂರಕ್ಕೆ ನಮ್ಮ ತಾಲೂಕಿಗೆ ಪ್ರಸಿದ್ಧವಾದ ಸುಣ್ಣದಹಳ್ಳಿ  ಆಂಜನೇಯ ಸ್ವಾಮೀ ದೇವಸ್ಥಾನವಿದೆ. ಅಪ್ಪನಿಗೆ ಆ ದೇವಸ್ಥಾನಕ್ಕೆ ಹೋಗಿ ಬರಲು ಹೇಳಿದೆ. ಅಪ್ಪ ಯಾಕೆಂದು ಕೇಳಿದರು. ಇಂದು ಅಪ್ಪಂದಿರ ದಿನ ಅಂತ ವಿವರಿಸುವ ಧೈರ್ಯ ನನಗೆ ಬರಲಿಲ್ಲ.. ಯಾಕೋ ಮನಸ್ಸಿಗೆ ತಳಮಳ ಶುರುವಾಗಿತ್ತು ಅದಕ್ಕೆ ಒಮ್ಮೆ ಹೋಗಿ ಬನ್ನಿ ಅಂತ ಸುಳ್ಳು ಕಾರಣ ಕೊಟ್ಟೆ. ಸರಿ ಅಂದು ಫೋನ್ ಇಟ್ಟರು. 

ನಿಜ ಹೇಳಬೇಕೆಂದರೆ ನಾವು ಅಪ್ಪನಿಂದ ಕಂಡ ಸಂತೋಷ ಅಷ್ಟಕ್ಕಷ್ಟೇ. ಒಂದು ಬೇಲಿ ಬಿಗಿದ ವಾತಾವರಣದಲ್ಲೇ ಬೆಳೆದ ನಾವು ಬೇಲಿ ದಾಟುವ ಅವಕಾಶವನ್ನೇ ಅಪ್ಪ ನಮಗೆ ಮಾಡಿ ಕೊಡಲಿಲ್ಲ. ಬೇಲಿ ಎಂದರೆ ನಮ್ಮ ಇಚ್ಚೆಗನುಸಾರವೆಂದಲ್ಲ ಸಾಮಾನ್ಯ ಮಕ್ಕಳ ದೈನಂದಿಕ ಜೀವನದ ಹಾಗಿನದ್ದು. ಮನೆಯಲ್ಲಿ ತಾನು ನಡೆಸಿದ್ದೇ ಆಗಬೇಕು ಅನ್ನುವ ಹಠ. ಅವರ ನಿರ್ಧಾರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಎದುರಾಡುವಂತಿಲ್ಲ. ಸಾಮಾನ್ಯ ಜನರೊಡನೆ ಅಷ್ಟಾಗಿ ಬೇರೆಯುವಂತಿಲ್ಲ. ನಾವುಗಳು ಮಕ್ಕಳಾದರೆ ಊರ ಮಕ್ಕಳ ಜೊತೆ ಹೆಚ್ಚಾಗಿ ಬೇರೆಯುವಂತಿಲ್ಲ. ನಾನಾಗ ಹತ್ತನೇ ತರಗತಿ.. ಒಮ್ಮೆ ಸರೋಜಮ್ಮನ ಹೋಟೆಲಿನ ಕಟ್ಟೆಯ ಮೇಲೆ ನಾಲ್ಕಾರು ಹಿರಿಯರು ಚೌಕಾಬಾರ ಆಡುತ್ತಿದ್ದನ್ನ ನಿಂತು ನೋಡುತ್ತಿದ್ದ ನನ್ನನ್ನ, ಹಸಿ ಬಾಳೆ ದಿಂಡಿನಿಂದ ಊರೆಲ್ಲ ಓಡಾಡಿಸಿ ಹೊಡೆದಿದ್ದರು..!! ಮೈಯೆಲ್ಲಾ ಕೆಂಪು ಬಾರೆ..!! ಈಗಲೇ ಜೂಜು ಬೇಕಾ ನಿಂಗೆ..?? ಜೂಜು ಕೋರರ ಸಹವಾಸ ಮಾಡ್ತೀಯ ಅಂತ ಅಣಕಿಸಿ ಅಣಕಿಸಿ ಹೊಡೆದಿದ್ದರು..!! ತೀರ ಇತ್ತೀಚೆಗೂ ಕೂಡಾ ಒಂದು ವರ್ಷದ ಕೆಳಗೆ ಅವರ ಅಷ್ಟೂ ಧೋರಣೆಗಳಿಗೆ ಬೇಸತ್ತು ಅವರ ಅದ್ಯಾವುದೋ ಯೋಜನೆಯೊಂದಕ್ಕೆ ನಕಾರ ಸೂಚಿಸಿ ಅವರಿಗೆ ಎದುರಾಡಿದ್ದ ನನಗೂ ಮತ್ತು ಅಮ್ಮನಿಗೂ ಇಬ್ಬರಿಗೂ ನಡು ರಾತ್ರಿಯಲ್ಲಿ ಮನೆ ಬಿಟ್ಟು ಹೋಗುವಂತೆ ರಾದ್ಧಾಂತ ರಂಪಾಟಗಳನ್ನ ಮಾಡಿದ್ದರು. ಅದನ್ನ ಬಗೆ ಹರಿಸಿದ್ದು ಮತ್ತೊಂದು ಗೋಳಿನ ಕಥೆ. ಇದ್ದ ಒಬ್ಬಳೇ ಹೆಣ್ಣು ಮಗಳು ಅಕ್ಕ ಎಂದರೆ ಮತ್ತು ಅಕ್ಕನ ಎರಡು ಮುದ್ದು ಮುದ್ದು ಪುಟಾಣಿ ಮಕ್ಕಳೆಂದರೆ ಬಲು ಪ್ರೀತಿ. ಅವರೊಂದಿಗಿರುವಾಗ ಮಾತ್ರ ಅವರ ಮಗು ಮೊಗವ.. ನಗು ಮೊಗವ ಕಾಣಲು ಸಾಧ್ಯ. ಇಷ್ಟು ವರ್ಷ ಅಪ್ಪನೊಂದಿಗೆ ಹೆಣಗುತ್ತಿರುವ ಅಮ್ಮನಿಗೆ ಅಪ್ಪ ಅದೊಂದೇ ಸಮಯದಲ್ಲಿ ಇಷ್ಟವಾಗೋದು ಮಕ್ಕಳ ಜೊತೆ ಮಗುವಾದಾಗ..!!

ಅವತ್ತೊಂದು ಮಾತುಕತೆಯಲ್ಲಿ ಅಪ್ಪನಿಗೆ ಎದುರಾಡಿದ್ದ ನಾನು ನನ್ನ ಜೀವ ಮಾನದಲ್ಲಿ ಬೇರೆ ಯಾವತ್ತಿಗೂ ಅವರ ಯಾವ ವಿಚಾರಗಳಿಗೂ ಎದುರಾಡಿದವನಲ್ಲ. ಇನ್ನು ಅಮ್ಮನ ಬಳಿ ರೇಗಾಡುತ್ತೇನೆ.. ಕೂಗಾಡುತ್ತೇನೆ.. ನಕ್ಕು ಮಾತಾಡುತ್ತೇನೆ ಬಿಟ್ರೆ ಅಪ್ಪನ ಬಳಿಯಲ್ಲ. ಅಪ್ಪನಿಗೆ ನನ್ನ ಮೇಲೆ ವಿಶೇಷ ಅಭಿಮಾನ ಗೌರವ. ಅವರ ಪ್ರಕಾರ ನಾನು ಅವರಪ್ಪನ ಅಂದರೆ ನಮ್ಮ ಅಜ್ಜನ ಅವತಾರವಂತೆ. ನಮ್ಮಜ್ಜನವರು ಶಾಂತ ಮೂರ್ತಿಯಂತೆ.. ಆ ಕಾಲಕ್ಕೆ ಬಹಳ ಜನಕ್ಕೆ ಉಪಕಾರ ಮಾಡಿದವರಂತೆ.. ಬಹಳ ಜನರ ಬಾಳಿಗೆ ಬೆಳಕು ಕೊಟ್ಟವರಂತೆ. ನನ್ನ ಮೇಲೆ ಅವರಿಗೊಂದು ಅಭಿಮಾನವೂ ಅದೇ ಕಾರಣಕ್ಕೆ ಇರಬೇಕೇನೋ.. ನಾನು ನೋಡಲು ನಮ್ಮ ತಾತನ ಹಾಗೆ ಇರುವೆನಂತೆ..! ಅವರಂತೆ ಶಾಂತ ಮೂರ್ತಿಯಂತೆ. ಇನ್ನೊಬ್ಬರ ನೋವಿಗೆ ಮಿಡಿಯುವ ಮನಸ್ಸಂತೆ.. ಮೇಲಾಗಿ ನನ್ನ ಇತ್ತೀಚಿನ ಕೆಲ ಸಣ್ಣ ಪುಟ್ಟ ಬೆಳವಣಿಗೆ.. ಸಾಧನೆಗಳನೆಲ್ಲ ಕಂಡ ಮೇಲೆ ಅವರಿಗೆ ನನ್ನ ಮೇಲೊಂದು ವಿಶೇಷ ಗೌರವ. ನನ್ನನ್ನ ಯಾವತ್ತಿಗೂ ಲೋ ಅಪ್ಪ.. ಲೋ ಪುಟ್ಟ ಅಂದದ್ದೇ ಹೆಚ್ಚು. ಹೆಸರಿಡಿದ್ದು ಕರೆದದ್ದು ಕಮ್ಮಿಯೇ. ನನ್ನ ಆಸಕ್ತಿಗಳ ಕಡೆಗೆ ಅವರ ಪ್ರೋತ್ಸಾಹಗಳೇನೂ ಇಲ್ಲದೆ ಹೋದರು ನನ್ನ ಸಣ್ಣ ಪುಟ್ಟ ಸಾಧನೆಗಳ ಕಂಡು ಸಮಾಧಾನ ಪಡುವ ಮನಸು ಅವರಿಗಿದೆ ಅದು ಸಾಕು. 

ನಮ್ಮ ಬಳಿ ಇಷ್ಟು ಒರಟಾಗಿ ಕಾಣುವ ಅಪ್ಪ ಹೊರಗಿನ ಜಗತ್ತಿಗೆ ಬಹು ಜನಕ್ಕೆ ಬಹು ಪರಿಚಿತವಾಗಿರುವ ವ್ಯಕ್ತಿ. ಸುಳ್ಳು ಹೇಳಬಾರದು.. ಅವರ ದೆಸೆಯಿಂದ ಪರಿಚಯವಾದ ಗಣ್ಯವ್ಯಕ್ತಿಗಳು ಒಬ್ಬಿಬ್ಬರಲ್ಲ.. ಅಂತಿಂಥವರಲ್ಲ. ಐ ಟಿ ಐ ಮುಗಿಸಿ ಕೆಲಸ ಸಿಗದೇ ಕಂಗಾಲಾಗಿ ಕುಳಿತಿದ್ದ ನನಗೆ, ಲೋ ಪುಟ್ಟ ಹೆದರಬೇಡ ನಿನಗೆ ನಾನು ಗೌರ್ನಮೆಂಟ್ ಕೆಲಸ ಕೊಡಿಸ್ತೀನಿ ಅಂತ ಆಶ್ವಾಸನೆ ಇತ್ತವರು ಅವರು. ಹಾಗೆ ಮಾಡ ಬಲ್ಲವರು ಕೂಡಾ. ಅವರಿಗೆ ಆ ಚೈತನ್ಯ ಇದೆ ಕೂಡಾ.. ಅವರ ಜನ ಬಳಕೆ & ಸಂಪರ್ಕ ಅಂಥಾದ್ದು. ನನ್ನ ಹುಚ್ಚು ಆಸೆ, ಆದರ್ಶ, ಸಿದ್ಧಾಂತಗಳಿಗೆ ಕಟ್ಟುಬಿದ್ದು ನನ್ನ ಈಗಿನ ಒಂದೊಳ್ಳೆಯ ಪರಿಸ್ತಿತಿಯನ್ನ ನನ್ನ ಕೈಯಾರೆ ನಾನೇ ಹಾಳು ಮಾಡಿ ಕೊಂಡಿದ್ದೆ ಆದರೆ.. ನನ್ನ ಬದುಕನ್ನ ಮತ್ತೆ ನಾನು ನನ್ನದೇ ಹಳಿಗೆ ಕೊಂಡು ಬರಲು ಆಗುತ್ತೋ ಇಲ್ಲವೋ.. ನನ್ನ ಗೆಳೆಯರ ಶ್ರಮದ ಹೊರತಾಗಿ ಕೂಡ ಅದು ಸಾಧ್ಯವೋ ಇಲ್ಲವೋ.. ಆದರೆ ನನ್ನಪ್ಪ ನನ್ನ ಬದುಕು ಕಟ್ಟಬಲ್ಲರು. ಅವರಿಗಾ ಚೈತನ್ಯವಿದೆ. ಶಕ್ತಿಯಿದೆ. ಒಂದು ಕಾಲೆಜೋ ಅಥವಾ ಐ ಟಿ ಐ ನೋ ಮುಗಿಸಿದ್ದಿದ್ದರೆ.. ನನ್ನ ತಮ್ಮನ ಜೀವನವನ್ನ ಕೂಡಾ ಅವರು ರೂಪಿಸಿ ಬಿಡುತ್ತಿದ್ದರು. ಬದುಕಿನ ಭವಿಷ್ಯದ ಕುರಿತಾದ ಯಾವುದೇ ಚಿಂತನೆಗಳಿಲ್ಲದ ನನ್ನ ತಮ್ಮನದ್ದೇ ಅವರ ಬಹು ದೊಡ್ಡ ಚಿಂತೆ ಈಗ. ಆ ಚಿಂತೆಯ ಪ್ರಭಾವವೇ ಈಚೆಗೆ ಕುಡಿಯಲು ಕಲಿತಿದ್ದಾರೆ. ಯೋಚಿಸಿ ಕೊರಗಳು ಶುರುವಿಟ್ಟಿದ್ದಾರೆ. ಅದರ ಪ್ರಭಾವ ಈಗಲೂ ಸಿಡುಕಾಡುತ್ತಾರೆ. ಕಿಡಿ ಕಾರುತ್ತಾರೆ.

ನನ್ನಪ್ಪ ಶ್ರಮ ಜೀವಿ.. ಬದುಕಲ್ಲಿ ಬಹಳ ನೋವುಂಡ ಜೀವಿ.. ಚಿಕ್ಕ ವಯಸ್ಸಲ್ಲೇ ತಂದೆ ತಾಯಿಯರನ್ನು ಕಳೆದು ಕೊಂಡು ತಮ್ಮ ತಂಗಿಯೊಡನೆ ಪರ ಊರಿಗೆ ಬಂದು ಬದುಕಿ ಬಾಳಿದ್ದು ಸಾಧನೆಯೇ ಸರಿ. ಬದುಕೋಕೆ ಬೇಕಾದ ಬಹಳ ಕೆಲಸ ಬಲ್ಲ ಜೀವಿ. ಆದರೂ ನಮ್ಮಪ್ಪನೆಂದರೆ ಅದೊಂದು ನಿರಾಶ ಭಾವವೇ ಮನದೊಳಗೆ ಮನೆ ಮಾಡುತ್ತದೆ. ಅವರ ಅದಾವ ಉಚ್ಚ ಗುಣಗಳೂ ಕೂಡ ನಮ್ಮಗಳ ಸಂಭಂಧಗಳ ನಡುವೆ ಗೌಣ. ನನಗೆ ಅಪ್ಪನ ಮೇಲೆ ವಿಶ್ವಾಸವಿದೆ, ಪ್ರೀತಿ ಇದೆ, ಅಭಿಮಾನವಿದೆ. ಆದರೂ ಅದಕ್ಕಿಂತಲೂ ಹೆಚ್ಚಿನದಾದ ನಿರಾಸೆಯಿದೆ.. ಕೋಪವಿದೆ.. ಮುನಿಸಿದೆ.. ತಾತ್ಸಾರ ಭಾವವಿದೆ..!! ಅಷ್ಟಾದರೂ ಅಪ್ಪ ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು. "ಒಬ್ಬ ಅಪ್ಪನೆಂದರೆ ಕೇವಲ ಮಕ್ಕಳೆಡೆಗಿನ ತನ್ನ ಕರ್ತವ್ಯವನ್ನ ಮಾಡಿ ಮುಗಿಸುವವನು ಮಾತ್ರವಲ್ಲ. ತನ್ನ ಮಗುವಿನ ಕಣ್ಣಲ್ಲಿ ಅವನು ಕಾಣಲಾರದ ಒಂದು ಸುಂದರ ಜಗತ್ತಿನ ಚಿತ್ರಣವನ್ನ ಕಾಣಿಸಿ ಕೊಡುವವನೂ ಕೂಡ" ನಾವು ನಿಮಗೆ ನಮ್ಮ ಕಣ್ಣೊಳಗಿನ ಜಗತ್ತು ಬದಲಾಯಿಸುವಂತೆ ಕೇಳಿ ಕೊಳ್ಳುವುದಿಲ್ಲ. ನೀವು ಸೂಪರ್ ಹೀರೋ ಆಗೋದು ಬೇಡ..!! ಆದರೆ ಜಗತ್ತಿಗನುಗುಣವಾಗಿ ಒಬ್ಬ ಸಾಮಾನ್ಯ ಮನುಷ್ಯನಂತೆ ನಡೆದುಕೊಳ್ಳಬೇಕೆಂಬ ವಿನಂತಿ ಅಷ್ಟೇ. 

ಸಂತೆಗೆ ಹೋದಾಗಲೆಲ್ಲ ಮಂಡಕ್ಕಿ, ಬತ್ತಾಸು, ಮೈಸೂರು ಪಾಕು, ಜಿಲೇಬಿ ತಂದು ಕೊಟ್ಟು ನಮಗೆ ತಿನ್ನಿಸುತ್ತಿದ್ದ..  ಅದಾಗಲೇ ಊಟ ವಾಗಿ ಮಲಗಿದ್ದರೂ ಮತ್ತೊಮ್ಮೆ ಎಬ್ಬಿಸಿ ತನ್ನ ಜೊತೆ ಕೂರಿಸಿಕೊಂಡು ಮಂಪರುಗಣ್ಣಲಿದ್ದ ನಮಗೆ ತನ್ನ ಕೈ ತುತ್ತಿನಲ್ಲೇ ನಾಲ್ಕು ತುತ್ತು ತಿನ್ನಿಸುತ್ತಿದ್ದ.. ಸ್ಕೂಲ್ ನಲ್ಲಿ ಟೀಚರ್ ಬರೆ ಬರುವ ಹಾಗೆ ಹೊಡೆದರೂ ಅಂತ ಟೀಚರ್ ಮೇಲೆ ಕಂಪ್ಲೇಟ್ ಕೊಡಲು ಹೋಗಿದ್ದ ಪ್ರೀತಿಯ ಅಪ್ಪನ್ನನ್ನು ಕಳೆದುಕೊಂಡು ಅದೆಷ್ಟೋ ಕಾಲವೇ ಆಗಿ ಹೋಯ್ತು. ಈಗ ನಮ್ಮ ಜೊತೆ ಇರೋದು ತನ್ನದೇ ಸಿದ್ಧಾಂತ, ಹಠ, ಮೌಲ್ಯ, ಗುರಿ, ಹಣದಾಸೆಯ ಧೋರಣೆಯುಳ್ಳ ಅಪ್ಪನ ಆಕೃತಿ ಅಷ್ಟೇ. ಅದ್ಯಾಕೋ ಆ ಪಾನಿಪುರಿ ತಿನ್ನಿಸುತ್ತಿದ್ದ ಆ ಅಪ್ಪ ಬರಿ ಕಣ್ಣುಗಳನ್ನಷ್ಟೇ ಅಲ್ಲ.. ಮನಸ್ಸನ್ನೂ, ಹೃದಯವನ್ನೂ ತುಂಬಿಕೊಂಡ. ನನ್ನಪ್ಪನ ಬಗ್ಗೆ ಹೇಳಲು ಇನ್ನು ಬಹಳಷ್ಟಿದೆ. ಸಮಯ ಕೂಡಿ ಬಂದಾಗ, ಹೇಳಿಕೊಳ್ಳುವ ಮನಸ್ಸಾದಾಗ ಖಂಡಿತ ಹೇಳಿ ಕೊಳ್ಳುವೆ. ನನ್ನ ನೋವನಾಲಿಸುವ ತಾಳ್ಮೆ ನಿಮಗಿದೆಯಲ್ಲವೇ..?? ಪಾನಿಪುರಿಯವ ಚೇಂಜ್ ಕೊಟ್ಟ.. ಆ ಎರಡು ಮಕ್ಕಳು ಪಾನಿ ಪುರಿ ತಿಂದ ಹಣವನ್ನೂ ನಾನೇ ಕೊಟ್ಟು.. ಆ ಅಪ್ಪನ ಬಳಿ ಹಣ ತೆಗೆದು ಕೊಳ್ಳ ಬಾರದಂತೆ ಪಾನಿ ಪುರಿ ಅಂಗಡಿಯವನಿಗೆ ಹೇಳಿ, ಆ ಮಕ್ಕಳ ಮುಗ್ಧ ಪ್ರಶ್ನೆ ಕೇಳುವ ಪರಿಯನ್ನು ಕಂಡು ಖುಷಿಗೊಂಡು ಅಲ್ಲಿಂದ ಹೊರಡುತ್ತೇನೆ.

9 comments:

  1. ತಂದೆಯ ಬಗ್ಗೆ ಬರೆಯುತ್ತಾ, ತಮ್ಮನ ಸ್ವಭಾವ ವೈರುಧ್ಯವನ್ನೂ ದಾಖಲಿಸಿದ್ದೀರಿ. ಹಲಬಾರಿ ಹೀಗೆ ಅಪ್ಪಂಡಿರು ನಮಗೆ ನಿರಾಶೆಯ ಮೂಲವೇ! ನಾನು 3 ವರ್ಷ ಮಗುವಾಗಿದ್ದಾಗಲೇ ಅಪ್ಪ ತೀರಿಕೊಂಡರು. ನನಗೂ ಅಪ್ಪ ಎಂದರೆ ನಿರಾಸೆಯೇ!

    ಪಾನಿಪುರಿ ತಿನಿಸಲು ಬಂದಿದ್ದ ಆ ತಂದೆಯನ್ನು ನೆನೆದು ನನಗೆ ಮನಸ್ಸು ತುಂಬಿ ಬಂತು.

    ReplyDelete
  2. ಅಪ್ಪನ ಬಗಗ ಸಂಕೀರ್ಣ ಭಾವನೆಗಳನ್ನು ಹೊಂದಿರುವ ಮನೋಸ್ಥಿತಿಯನ್ನು ತುಂಬ ಆಪ್ತವಾಗಿ ವಿವರಿಸಿದ್ದೀರಿ.

    ReplyDelete
  3. ಈ ಲೇಖನವನ್ನು ಓದಿದೆ.. ಯಾಕೋ ತುಂಬಾ ಮನ ಬಿಚ್ಚಿ ಬರೆದಿದ್ದೀರ ಅನ್ನಿಸಿತು. ಬಹಳ ಕಾಲ ತಡೆಹಿಡಿದಿದ್ದ ನೀರನ್ನು ಒಮ್ಮೆಲೇ ಗೇಟ್ ತೆಗೆದು ಹೊರಬಿಟ್ಟಂತೆ ಅನಿಸಿತು. ಬರಹ ನಿಜವಾಗಿಯೂ ಭಾವುಕವಾಗಿದೆ.

    ReplyDelete
  4. ಸತೀಶ್,
    ನಿಮ್ಮ ಲೇಖನಗಳನ್ನ ಓದೋಕೆ ಸಮಯ ತೆಗೆದಿಟ್ಟಿರ್ತೀನಿ.... ಕಾರಣ ನಿಮಗೇ ಗೊತ್ತು, ದೊಡ್ಡ ಲೇಖನಗಳವು ನಿಧಾನವಾಗಿ ಮನಸ್ಪೂರ್ತಿ ಓದುವಾಸೆ ಅ೦ತ.
    ಪಟ ಪಟ ಅ೦ತ ಮಾತ್ನಾಡ್ಕೊ೦ಡು, ಎಲ್ಲರನ್ನ ನಗಿಸುವ ನಮ್ಮ ಸತೀಶನ ಮನಸಿನಲ್ಲಿ ಹೀಗೊ೦ದು ನೋವಿದೆ ಅ೦ತ ಊಹಿಸೋಕೆ ಸಾಧ್ಯವಿಲ್ಲ.
    ಅಪ್ಪನ ಬಗ್ಗೆ ಏನ೦ತ ಹೇಳೋದು, ನೀವು ನಿಮ್ಮ ಮಕ್ಕಳಿಗೆ ಒಬ್ಬ ಒಳ್ಳೆಯ ತ೦ದೆ ಆಗಿರ್ತೀರ ಅ೦ತ ಮಾತ್ರ ಹೇಳಬಲ್ಲೆ.
    ಹೀಗೆಲ್ಲ ಬರೆದ ನ೦ತರ ನಿಮ್ಮ ಮನಸು ಸ್ವಲ್ಪ ಮಟ್ಟಿಗೆ ನಿರಾಳವಾಗಿರಬೇಕು ಅನ್ನುವ ಭಾವನೆ....

    ReplyDelete
  5. ಅಪ್ಪನ ಬಗ್ಗೆ ಆತ್ಮೀಯ ಲೇಖನ

    ReplyDelete
  6. ತುಂಬಾ ಚೆನ್ನಾಗಿದೆ, ಅಪ್ಪನ ಬಗ್ಗೆ ಅರ್ಥಪೂರ್ಣ ಲೇಖನ,
    ಬಹುಷಃ ಗ್ರಾಮೀಣ ಪ್ರದೇಶದ ಮಧ್ಯಮವರ್ಗದ ತಂದೆಯರೆಲ್ಲರೂ ಹೀಗೆ ಗಂಭೀರ ಹಾಗು ಸ್ಟ್ರಿಕ್ಟ್ ಅನಿಸತ್ತೆ, ಅದ್ರಿಂದಾನೆ ಮಕ್ಕಳು ಶಿಷ್ಟಾಚಾರ ಕಲ್ಯೋದು ಅನ್ನೋ ಭಾವನೆ ಇರಬೇಕು. ಯಾಕಂದ್ರೆ ನಮ್ಮಪ್ಪನು ಹೀಗೆ,

    ಇಂತಹ ಸುಂದರ ಲೇಖನವೊಂದನ್ನು ಕೊಟ್ಟಿದಕ್ಕೆ ಧನ್ಯವಾದಗಳು ಸತೀಶ್ :)

    ReplyDelete
  7. ಅದ್ಭುತ ಲೇಖನ..
    ತುಂಬ ಇಷ್ಟ ಆಯ್ತು... <3

    ReplyDelete