Monday 10 June 2013

ಈ ಸಾವು ನ್ಯಾಯವೇ..??

ಈ ರಸ್ತೆ..!!

ಹೊಸದಾಗಿ ನವೀಕರಣಗೊಳ್ಳುತ್ತಾ.. ಮತ್ತಷ್ಟು ಅಗಲಗೊಳ್ಳುತ್ತಾ.. ತನ್ನೆದೆಯ ಮೇಲೆ ಈವರೆಗೂ  ಬಿದ್ದ ಅದೆಷ್ಟು ರಕ್ತದ ಕಲೆಗಳನ್ನ ಮುಚ್ಚಿ ಹಾಕುತ್ತಾ.. ಕಡು ಕಪ್ಪಿನೊಂದಿಗೆ ಶೋಭಿಸುತ್ತಾ ದಿನ ದಿನಕ್ಕೂ ಹೊಸ ರೂಪ ಪಡೆದು ಕೊಳ್ಳುತ್ತಿದೆ. ಎರಡು ಪಥವಿದ್ದ ರಸ್ತೆ ನಾಲ್ಕು ವರ್ಷಗಳ ಹಿಂದೆ ನಾನು ತಮಿಳುನಾಡು ಸೇರುವ ಹೊತ್ತಿಗೆ ನಾಲ್ಕು ಪಥವಾಗಿದ್ದು.. ನಾಲ್ಕು ಪಥವೂ ಸಾಲದೇ ಈಗ ಆರು ಪಥವಾಗಿ ಬದಲಾಗುತ್ತಾ.. ಅದೆಷ್ಟು ರೈತರ ಜಾಗವನ್ನು ನುಂಗಿ.. ಅದೆಷ್ಟು ಬಡ ವ್ಯಾಪಾರಿಗಳ ಮಳಿಗೆಗಳ ಒಡೆದು.. ಅದೆಷ್ಟು ಮರಗಳ ಮಾರಣ ಹೋಮ ನಡೆಸಿ.. ಅದೆಷ್ಟು ಗುಡ್ಡ ಗಾಡುಗಳ ಎದೆ ಸೀಳಿ ಅಭಿವೃದ್ದಿಯ ನೆಪದಲ್ಲಿ ಮರಣ ದಾರಿಯೇ ಆಗಿಹುದೇನೋ ಅನ್ನಿಸುತ್ತದೆ.

ರಸ್ತೆ ಅಗಲವಾದಷ್ಟೂ ಅದರಗಲ ಮೀರಿ ಚಲಿಸುವಂತೆ ವಾಹನಗಳ ಸಂಖ್ಯೆ ಮೀರಿ ಬೆಳೆಯುತ್ತಿರುವುದು ಕೂಡ ಈಗಿನ ವಿಷಮ ಪರಿಸ್ಥಿತಿಗಳಲ್ಲೊಂದು. NH -7  AH - 45 ಎಂದೆಲ್ಲ ಕರೆಸಿಕೊಳ್ಳುವ ಈ ರಾಷ್ಟ್ರೀಯ ಹೆದ್ದಾರಿಯ ಇತಿಹಾಸಕ್ಕೆ.. ದಿನಕ್ಕೊಂದು ಅಪಘಾತ, ಆಘಾತ ಮತ್ತು ಉರುಳಿ ಬಿದ್ದು ರಸ್ತೆಗೆ ಅಂಗಾತ ಮಲಗಿಕೊಳ್ಳುವ ಹೆಣಗಳ ಸಂಖ್ಯೆ ದಿನದಿಂದ ದಿನಕ್ಕೂ ಜಾಸ್ತಿ ಯಾಗುತ್ತಲೇ ಹೋಗುತ್ತಿದೆ. ಅದರಲ್ಲೂ ಹೊಸೂರು ಮತ್ತು ಕೃಷ್ಣಗಿರಿ ನಡುವಿನ 50 ಕಿಮೀ ನಿಜಕ್ಕೂ ಸಾವಿನ ರಹದಾರಿ ಒಂದು ದಿನಕ್ಕೆ ಒಂದಾದರೂ ಸಾವಿನ, ಅಪಘಾತದ, ನೋವಿನ ಸುದ್ದಿಯನ್ನ ಈ ರಸ್ತೆ ಕೊಡದೆ ಇದ್ದದ್ದೇ ಆದರೆ, ಈ ರಸ್ತೆಯ ಎದೆಯ ಮೇಲೆ ಅಂದು ಯಾವ ವಾಹನವೂ ಚಲಿಸೇ ಇಲ್ಲವೇನೋ ಎಂದೇ ಅರ್ಥ. ಅದಕ್ಕೆ ಮೊನ್ನೆ ದಿನ ಕೂಡಾ ಹೊರತಾಗಿಲ್ಲ. 

ಕೆಲಸದ ನಿಮಿತ್ತ ಹೊಸೂರು ಪೇಟೆಯ ಕಡೆ ಹೋಗಿದ್ದೆ.. ದಿನವೂ ಹೋಗುವೆ.. ಪ್ರತಿ ದಿನವೂ ಒಂದಿಲ್ಲೊಂದು ಅಪಘಾತದ ದೃಶ್ಯಗಳಿಗೆ ನನ್ನ ಕಣ್ಣು ತೆರೆದುಕೊಳ್ಳುವ ಪರಿ ನನ್ನ ದುರಾದೃಷ್ಟವೇ ಸರಿ. ಹೊಸದಾಗಿ ನಮ್ಮ ಆಫೀಸಿ ಟ್ರಾನ್ಸ್ಫರ್ ಆಗಿ ಬಂದು ಸೇರಿಕೊಂಡ ಸಂತೋಷ್ ಅವರ ತಂದೆ ತಾಯಿಯವರನ್ನ, ಹೊಸೂರು ಬಸ್ ಸ್ಟಾಂಡ್ ನಲ್ಲಿ ಕಾಟ್ಪಾಡಿ ಯಲ್ಲಿ ಹೈದರಾಬಾದ್ ರೈಲು ಹಿಡಿಯುವ ಸಲುವಾಗಿ ಬಸ್ಸು ಹತ್ತಿಸಿ.. ನ್ಯಾಷನಲ್ ಇನ್ಸೂರೆನ್ಸ್ ನಲ್ಲಿ ಕಂಪೆನಿಯ ಕೆಲಸವನ್ನ ಮುಗಿಸಿಕೊಂಡು ಅಲ್ಲೇ ಹತ್ತಿರವಿದ್ದ ಆರ್ಯಭವನ್ ಸ್ವೀಟ್ಸ್ ನಲ್ಲಿ ಒಂದೊಂದು ಚಂಪಾಕಲಿ ಚಪ್ಪರಿಸುತ್ತಾ, ನಾನು ಮತ್ತು ಡ್ರೈವರ್ ಬಾಲಕೃಷ್ಣ ತಮಾಷೆಯ ಮಾತುಗಳೊಂದಿಗೆ ಕಾರನೇರಿ ಹೊಸೂರಿನಿಂದ ಇಪ್ಪತೊಂದು ಕಿಲೋ ಮೀಟರ್ ದೂರದಲ್ಲಿನ ನಮ್ಮ ಆಫೀಸಿನ ಕಡೆಗೆ ಸಾಗುತ್ತಿದ್ದೆವು. ಹೊಸೂರು ನಗರ ವಲಯವನ್ನ ಇನ್ನು ದಾಟೆ ಇಲ್ಲ. ಚಂದ್ರ ಚೂಡೆಶ್ವರ ದೇವಸ್ಥಾನಕ್ಕೊಂದು ಬಲ ತಿರುವಿದೆ ಆ ರಾಷ್ಟ್ರೀಯ ಹೆದ್ದಾರಿಯೊಳಗೆ. ಆ ತಿರುವಿನಲ್ಲಿ ಬಲಕ್ಕೆ ತಿರುಗಿಸುತ್ತಿದ್ದ ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ನ ಇಪ್ಪತೈದು ಲೀಟರುಗಳ ತುಂಬಿದ ಬಾಟಲಿಗಳನ್ನ ಹೊತ್ತು ಸಾಗುತ್ತಿದ್ದ "ಟಾಟ ಏಸ್" ಮಿನಿ ಸಾಮಾಗ್ರಿ ಸರಬರಾಜು ವಾಹನಕ್ಕೆ ಹೋಗಿ ಅಪ್ಪಳಿಸಿದ್ದು ಒಂದು ಬೈಕು..!!

ಸತ್ಯವಾಗಲೂ ನಮಗೂ ಆ ಬೈಕಿಗೂ ಹೆಚ್ಚೆಂದರೆ ಹತ್ತು ಮೀಟರುಗಳಷ್ಟು ದೂರವಿದ್ದಿರಬಹುದೇನೋ. ಆಗಷ್ಟೇ ಕೊಂಡ ಹೊಸ ಅಪಾಚೆ ಗಾಡಿ. ನಂಬರ್ ಕೂಡ ಟೆಂಪರರಿ ರಿಜಿಸ್ಟರ್ಡ್ ನಂಬರ್.. ಬೆಂಗಳೂರಿನದ್ದು. ಹುಡುಗ ನನ್ನದೇ ವಯೋಮಾನದ.. ನನ್ನದೇ ದೇಹ ಧೃಡತೆಯ.. ಸ್ವಲ್ಪ ಕಪ್ಪಗಿನ ಬಣ್ಣದ ಹೋಲಿಕೆಯ ವ್ಯಕ್ತಿ. ಹೋಗಿ ಹೊಡೆದದ್ದೇ ತಡ ಅವನ ತಲೆಗೆ ಹಾಕಿದ್ದ ಹೆಲ್ಮೆಟ್ ನಾಲ್ಕು ಚೂರು ಗಳಾಗಿತ್ತು. ಬೈಕಿನ ಮುಂಭಾಗದ ಚಕ್ರ ಹೊಡೆದ ರಭಸಕ್ಕೆ ಬೆಂಡಾಗಿ ಆಕಾರ ಕಳೆದು ಕೊಂಡು ನುಜ್ಜು ಗುಜ್ಜಾಗಿ ಹೆಡ್ ಲೈಟ್ ಒಡೆದು ಅಸಂಖ್ಯಾತ ಚೂರುಗಳಾಗಿ ಹೋಗಿ ಬೈಕ್ ಅವನ ಸಮೇತ ಜಾರಿ ಕೊಂಡು ಆ ಲಗೇಜು ಗಾಡಿಯ ಅಡಿ ಹೋಗಿ ಬಿತ್ತು. ಬೈಕ್ ಜಾರುತ್ತಾ ಅದರ ಮೇಲೆ ಕೂತಿದ್ದ ಅವನನ್ನು ಎಳಕೊಂಡು ಅದರಡಿಗೆ ಬಿದ್ದದ್ದು ಸಾಲದೆಂಬಂತೆ ಇನ್ನು ಅದರ ಸೊಕ್ಕಡಗದ ಹಾಗೆ ಶಬ್ದ ಮಾಡುತ್ತಲೇ ಇತ್ತು.!!. ಹಾಗೆ ಬೈಕಿನೊಡನೆ ಜಾರಿ ಆ ಗಾಡಿಯ ತಳ ಸೇರಿದ ಆ ವ್ಯಕ್ತಿಯ ಎದೆ ಭಾಗ ಮತ್ತು ಕೈಗಳಲ್ಲಿ ರಕ್ತ ಧಾರೆ. ಒಬ್ಬ ವ್ಯಕ್ತಿಯ ದೇಹದಿಂದ ಹಾಗೆ ಆ ಪ್ರಮಾಣದಲ್ಲಿ ರಕ್ತ ಹರಿಯುವುದನ್ನು ಕಂಡದ್ದು ಅದೇ ಮೊದಲು..!!- ತರಕಾರಿ ಹೆಚ್ಚುವಾಗ ಕೊಯ್ದು ಕೊಂಡ ಚಿಕ್ಕ ಗಾಯಕ್ಕೇ ಪ್ರಾಣ ಹೋಗುವಂತೆ ನರಳುವ ಮನುಷ್ಯನಿಗೆ ಅಂತ ಪರಿಸ್ತಿತಿಯಲ್ಲಿ ಹೇಗಾಗಿರಬೇಡ...!!

ತಲೆಗೆ ಒಂಚೂರು ಏಟು ಬೀಳದ ಆ ವ್ಯಕ್ತಿ ಪ್ರಾಯಶಃ ಬದುಕ ಬಲ್ಲ ಅನ್ನೋ ಒಂದು ಸಣ್ಣ ನಿರೀಕ್ಷೆ ಇತ್ತು. ಅಷ್ಟೇ.. ಹೋಗಿ ಆ ಲಗೇಜು ಗಾಡಿಯ ತಳ ಸೇರಿದ ಆ ದೇಹ ಎರಡೇ ಎರಡು ಕ್ಷಣ ಕಂಪಿಸಿದ್ದಷ್ಟೇ.. ಆಮೇಲೆ ಮಿಸುಕಾಡಲೇ ಇಲ್ಲ..!! ಅಕ್ಕ ಪಕ್ಕದ ಜನ ಓಡಿ ಹೋಗಿ ಆ ದೇಹವನ್ನ ಹೊರಗೆಳೆದು ಆರೈಕೆ ಮಾಡುವಷ್ಟರಲ್ಲೇ ಆ ಜೀವ ಇಹವನ್ನ ತ್ಯಜಿಸಿತ್ತು. ಕಷ್ಟ ಕೊಟ್ಟು ಹುಟ್ಟಿ.. ಇಷ್ಟ ಪಟ್ಟು ಇಪ್ಪತ್ತೈದು ವರ್ಷ ಬದುಕಿ.. ಹೀಗೆ ಎರಡು ನಿಮಿಷ ಒದ್ದಾಡಿ, ಎರಡು ಕ್ಷಣದೊಳಗೆ ರಸ್ತೆಯ ಮಧ್ಯದಲ್ಲಿ ಅನಾಥ ಹೆಣವಾಗಿ ಮಲಗ ಬೇಕಾದರೆ ನಮ್ಮ ಹಣೆಬರಹವೋ.. ದುರಾದೃಷ್ಟವೋ ಅದೆಷ್ಟು ಕ್ರೂರವಿರಬೇಡ..!!

ಆ ವ್ಯಕ್ತಿ ಯಾರೋ ಏನೋ..?? ಎಲ್ಲಿಯವನೋ..?? ಇಲ್ಲಿಗೇಕೆ ಬಂದನೋ..?? ಮನೆಯವರ ಕಥೆಯೇನು,..?? ನಂಬಿಕೊಂಡವರ ವ್ಯಥೆಯೇನು..?? ಮನದಲ್ಲಿ ಆ ಕ್ಷಣಕ್ಕೆ ಹುಟ್ಟಿದ ಈ ಪ್ರಶ್ನೆಗಳಿಗೆಲ್ಲ ಉತ್ತರ ಕೊಡಬಲ್ಲ ಆ ಜೀವ ಮಾತ್ರವೇ ಅಲ್ಲಿ ಮೂಕವಾದದ್ದು. ರೋಡಿನ ತುಂಬಾ ಮೇಳೈಸಿದ ಜನ.. ರಸ್ತೆಯ ಉದ್ದುದ್ದಕೆ ನಿಂತ ಅಷ್ಟೂ ವಾಹನಗಳಿಗಿದು ನೇರ ದೃಶ್ಯ. ಮೊಟ್ಟ ಮೊದಲಿಗೆ ಇಂಥಾ ಘೋರ ದೃಶ್ಯಕ್ಕೆ ನಾನೂ ನೇರ ಸಾಕ್ಷಿಯಾಗಿದ್ದೆ. ಆಗೊಮ್ಮೆ ಈಗೊಮ್ಮೆ ಸಣ್ಣ ಪುಟ್ಟ ಅಫಘಾತಗಳನ್ನ ನಾನು ಕಂಡಿರುವವನೆ ಆದರು.. ಇಷ್ಟು ಘೋರ ಯಾವತ್ತೂ ಕಂಡಿರಲಿಲ್ಲ. ಅಥವಾ ಘೋರ ಅನಿಸಿಕೊಂಡ ಅಫಘಾತಗಳ ಅವಶೇಷಗಳನ್ನು ರಸ್ತೆಯಲ್ಲಿ ಹೋಗುವಾಗ ಅದೆಷ್ಟೋ ತಡವಾಗಿ ನೋಡಿದ ಉದಾಹರಣೆ ಇತ್ತೇ ವಿನಃ ಇಂಥಾ ಘಟನೆಗೆ ನಾನೆಂದು ಸಾಕ್ಷಿಯಾಗಿರಲಿಲ್ಲ.

ಅಷ್ಟೇ ಜೀವ ಉಳಿದಿದ್ದರೆ ಉಳಿಸುವ ಪ್ರಯತ್ನ ಮಾಡ ಬಹುದಿತ್ತು. ಬಿದ್ದೊಡನೆ ಹಾರಿದ ಪ್ರಾಣ ಪಕ್ಷಿ ಇಲ್ಲದ ಆ ದೇಹಕ್ಕೆ ಇನ್ನಾವ ಆರೈಕೆ ಚೈತನ್ಯ ಕೊಟ್ಟೀತು..?? ಒಂದು ಅತೀವ ಶೋಕ.. ಅಗೋಚರ ಭ್ರಮೆ.. ಅದಮ್ಯ ನೋವು.. ಅನಾಗರೀಕ ಭಯ.. ಅಮಾನುಷ ಗಾಭರಿ..  ಅಶೇಷ ನಿರ್ಭಾವುಕತೆಯ ಜೊತೆ ನನ್ನ ಪಾಡಿಗೆ ನಾನಿರುವಾಗ ಬಾಲ ತನ್ನ ಪಾಡಿಗೆ ತಾನು ಕಾರು ಚಲಿಸಲು ಶುರು ಮಾಡಿದ. ಅಷ್ಟಾದರೂ ಕಾರಿನಲ್ಲಿ ತನ್ನ ಪಾಡಿಗೆ ತಾನು ಹಾದಿ ಕೊಳ್ತಾ ಇದ್ದ ಆ ಮ್ಯೂಸಿಕ್ ಪ್ಲೇಯರ್ ಸುಮ್ಮನಾಗಿರಲಿಲ್ಲ. ಈ ಪ್ಲೇಯರ್ ನಂತೆಯೇ ಅಲ್ಲವೇ ನಮ್ಮೆಲ್ಲರ ಜೀವನ.??. ಹಾಡುವ ತನಕ ಅದಾವ ಪರಿಸ್ತಿತಿಯಾದರೂ ಹಾಡಲೇ ಬೇಕು.. ಹಾಡಲಾಗದ, ಅಥವಾ ಮರಳಿ ಹಾಡುವಂತೆ ರಿಪೇರಿಯಾಗದ ಹಾಗಿನ ಯಾವುದಾದರೂ ದೋಷವಾದಲ್ಲಿ ತನ್ನ ಇರವನ್ನ ತ್ಯಜಿಸಿ ನಾಶವಾಗಬೇಕು. ಈ ಕಾರಿಗಾದರೆ ಹೊಸ ಪ್ಲೇಯರ್ ಬಂದೀತು ನಮ್ಮ ಬದುಕಿಗಾದರೆ ನಮ್ಮ ಸ್ಥಾನಕ್ಕೆ ಮತ್ತೊಬ್ಬರು..?? ಈಗಿನ ಲೆಕ್ಖಾಚಾರಕ್ಕೆ ಕಡಿಮೆ ಎಂದರು ೫೦- ೬೦ ವರುಷ ಗಳಷ್ಟಾದರೂ ಇರಬಹುದಾದ ಮನುಷ್ಯನ ಆಯಸ್ಸು ಹೀಗೆ ಎರಡು ಕ್ಷಣದಲ್ಲಿ ಹೋಗಿ ಬಿಡ ಬಹುದಾದರೆ ಸಾವು ಅದೆಂಥ ಕ್ರೂರಿ..!!

ಹೆಚ್ಚೆಂದರೆ ನಲವತ್ತರ ಆಸುಪಾಸಿನಲ್ಲಿ ಮಂದವಾಗಿ ಚಲಿಸುತ್ತಿರುವ ಕಾರು.. ಅಫಘಾತದ ಕುರಿತು.. ಸತ್ತ ವ್ಯಕ್ತಿಯ ಕುರಿತು ಅನವರತ ಮಾತಾಡುತ್ತಲೇ ಇದ್ದ ಬಾಲನ ಅಸ್ಪಷ್ಟ ಮಾತುಗಳ ನಡುವೆ ನನ್ನ ತಲೆಯೊಳಗೆ ನನ್ನದೇ ಒಂದು ಯೋಚನಾ ಲಹರಿ..!! ನನ್ನದೇ ಒಂದು ಚಿಂತೆಗಳ ಕಂತೆ. ಸತ್ತವನ ಜಾಗದಲ್ಲಿ ನಾನೇ ಇದ್ದಿದ್ದರೆ..?? ಮನೆಗೆ ಊರುಗೋಲು ಅನಿಸಿಕೊಂಡ ನಾನೇ ಇಲ್ಲವಾದರೆ..?? ನನ್ನನ್ನ ನಂಬಿ ಪೋಲಿ ಬಿದ್ದಿರುವ ತಮ್ಮನ ಭವಿಷ್ಯದ ಬಗ್ಗೆ ಉಜ್ವಲ ಕನಸುಗಳನು ಹೊತ್ತ ಅಪ್ಪ ಅಮ್ಮನ ಆಸೆಗಳೇ ಮಣ್ಣಾದರೆ..?? ನನಗಾದರೂ ಅವನು ಪ್ರೀತಿಯ ತಮ್ಮ.. ಅವನ ಏಳ್ಗೆ ನನ್ನ ಅತೀವ ಸಾರ್ಥಕತೆಯ ಸಾಧನೆಗಳಲ್ಲಿ ಒಂದು. ಹೊಸದೊಂದು ಚೆಂದದ ಮನೆ ಕಟ್ಟಬೇಕು.. ಅಲ್ಲಿ ನಾವೆಲ್ಲರೂ ಸಂತೋಷವಾಗಿ ಬದುಕಬೇಕು ಎಂಬ ಅದೆಷ್ಟೋ ವರುಷದ ನಮ್ಮೆಲ್ಲರ ಕನಸು ಕನಸಾಗೇ ಉಳಿದು ಹೋದರೆ..?? ಅಪ್ಪ ಅಮ್ಮ ಹಾಗೆ ಮತ್ತೆ ಕೂಲಿ ಮಾಡೇ ಬದುಕಬೇಕೆ..?? ನಾನಿಲ್ಲವೆಂಬ ನೋವ ದಿನವೂ ನೆನೆದು ನೆನೆದೇ ಬದುಕಬೇಕೇ..?? ನಾನು ಕನಸು ಕಟ್ಟಿದ ಬದುಕು ಹೀಗೆ ಒಂದು ಕ್ಷಣದಲ್ಲಿ ಹುಡಿಯಾಗ ಬಲ್ಲದೇ..?? ಛೆ ಇಪ್ಪನ್ತಾಲ್ಕು ವರುಷ ಅದೇನೇನೋ ಅನುಭವಿಸಿ ಕಂಡು, ಕಾಣದಂತೆ, ಇದ್ದೂ ಇಲ್ಲದಂತೆ, ಬದುಕಿಯೂ ಬದುಕದಂತೆ ಇದ್ದ ದಿನಗಳನ್ನೆಲ್ಲ ದಾಟಿ ಈಗೊಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟು ಬದುಕುವ ಕಾಲಕ್ಕೆ ಹೀಗೊಂದು ಭಯ ಕಾಡುವುದು ಬೇಕೇ..??

ಅಸಲು ಈ ಅಫಘಾತದ ತಪ್ಪಾದರೂ ಯಾರದ್ದು..?? ಕಾನೂನು ಬದ್ದವಾಗಿ ಅಲ್ಲಿ ತಿರುವಿದ್ದ ಜಾಗದಲ್ಲಿ ತಿರುವಲ್ಲಿ ನಿಂತಿದ್ದ ಆ ಲಗೇಜು ಗಾಡಿಯದ್ದೋ ಅಥವಾ ನಗರ ವಲಯ ಅನ್ನುವುದನ್ನು ಮರೆತು ಕೂಡಾ ಅಷ್ಟು ವೇಗವಾಗಿ ಬಂದು ನಿಯಂತ್ರಣ ತಪ್ಪಿ ಅಪ್ಪಳಿಸಿ ಅಸುನೀಗಿದ ಬೈಕ್ ಸವಾರನದ್ದೋ..?? ನಿಸ್ಸಂದೇಹವಾಗಿ ಇಲ್ಲಿ ಯಾರಾದರೂ ಸರಿ ತಪ್ಪು ಯಾರದ್ದೆಂದು ಹೇಳಿ ಬಿಡಬಹುದು. ಅದರಿ ತಪ್ಪು ಸರಿ ತಿಳಿದು ಈಗ ಆಗ ಬಹುದಾದರೂ ಏನು..?? ಒಂದು ಕ್ಷಣದ ಪರಿಜ್ಞಾನ, ಒಂದು ಕ್ಷಣದ ರೋಮಾಂಚಕತೆ, ಒಂದು ಕ್ಷಣದ ಉನ್ಮಾದ ನಮ್ಮನ್ನ ಈ ರೀತಿಯ ಹಂತಕ್ಕೆ ನೂಕಿ ಬಿಡಬಹುದೇ..?? ಹೌದು ನಾನೇನು ಕಮ್ಮಿಯಲ್ಲ.. ಹೊಂಡಾ ಯೂನಿಕಾರ್ನ್ ಅನ್ನುವ ದೈತ್ಯ ಬೈಕ್ ಒಂದರ ಮಾಲೀಕನಾದ ನಾನು, ಅದರ ಅದಮ್ಯ ಅಭಿಮಾನಿಯಾದ ನಾನು, ಅದನ್ನ ನನ್ನ ಗರ್ಲ್ ಫ್ರೆಂಡ್ ಅಂತಲೇ ಕರೆದು ಕೊಳ್ಳುವ ನಾನು.. ಅದರ ಮೇಲೆ ಕೂತೊಡನೆ ಸಾವಿರ ಕುದುರೆಗಳ ಮೇಲೆ ಕೂತ ಚೈತನ್ಯ ಬಂದಂತಾಗುವ ನಾನು.. ಬೈಕ್ ಸ್ಟಾರ್ಟ್ ಮಾಡಿ ಐದೇ ಸೆಕೆಂಡಿಗೆ ಕಿಮೀ ಎಂಭತ್ತರ ಗಡಿಯನ್ನ ದಾಟಿಸುವಷ್ಟು ಚುರುಕಾಗಿ ಗಾಡಿ ಓಡಿಸುವ ನಾನು ಇದನ್ನೆಲ್ಲಾ ಯೋಚಿಸಬೇಕ್ಕಾದ್ದು ಈ ಕ್ಷಣಕ್ಕೆ ಅನಿವಾರ್ಯವೇ. 

ನನ್ನ ಬೈಕ್ ಅನ್ನು ಕೊಂಡ ಮೊದಲ ದಿನವೇ ನೂರಿಪ್ಪತ್ತರ ಗಡಿ ದಾಟಿಸುವಷ್ಟು ರಭಸದಲ್ಲಿ ಚಲಿಸಿದ ಕುಖ್ಯಾತಿ ನನ್ನದು..!! ನೀವು ನಂಬಲೇ ಬೇಕು ನನ್ನ ಬೈಕ್ ತೆಗೆದು ಕೊಂಡ ದಿನವೇ ನಾನು ಸರಿಯಾಗಿ ಬೈಕ್ ಓಡಿಸುವುದನ್ನ ಕಲಿತದ್ದು ಅನ್ನೋದನ್ನ.!!. ಅಂದೇ ಕಲಿತು ಅಂದೇ ನೂರರ ಗಡಿ ದಾಟಿ ಒಂದು ಹುಚ್ಚು ಆವೇಗದಲ್ಲಿ ಬೈಕ್ ಓಡಿಸುವ ಖಯಾಲಿ ನನಗದ್ಯಾಕೆ ಬಂತೋ ನಾ ಕಾಣೆ. ನನಗೆ ನಾನೇ ಹೇಳಿ ಕೊಳ್ಳಬೇಕು ಅನ್ನುವಷ್ಟು ಮಿಕ್ಕೆಲ್ಲಾ ವಿಚಾರಗಳಲ್ಲೂ ಸೌಮ್ಯನಾದ ನಾನು.. ಈ ಬೈಕಿನ ವೇಗದಲ್ಲಿ ಮಾತ್ರ ಸಹನೆಯನ್ನ, ಇತಿಯನ್ನ,ಮಿತಿಯನ್ನ ಮೀರುವಂಥ ಹುಚ್ಚನ್ನು ಹೊಂದಿದ್ದೇನೋ ಕಾಣೆ..!! ನಿಜ ಆ ಪ್ರಚಂಡ ವೇಗದಲ್ಲಿ ಒಂಥರಾ ಉನ್ಮಾದ ಸಿಗುತ್ತದೆ, ಬಣ್ಣಿಸಲಾಗದ ಒಂದು ಅದಮ್ಯ ಸಂತೋಷ ಸಿಗುತ್ತದೆ. ಅದರಲ್ಲೂ ಗಾಡಿ ಚಲಿಸೋದು ನಾವೇ ಆದರಂತೂ ಅದರ ಆನಂದವನ್ನ ಪದಗಳಲ್ಲಿ ಕಟ್ಟಿ ಕೊಡುವುದು ಅಸಾಧ್ಯ ಅನ್ನಬೇಕು. ಹಾಗೆ ಗಾಳಿಯಲ್ಲಿ ತೇಲಾಡಿ ದಂತಹ ಅನುಭವ. 

ಹೌದು ಈಗ ಅನ್ನಿಸುತ್ತದೆ ಅಂಥಹ ಸಂತೋಷ ಯಾಕಾದರೂ ಬೇಕು..?? ಅಂಥಹ ಅನುಭವ ಯಾಕಾದರೂ ಬೇಕು..?? ಯಕಶ್ಚಿತ್ ಬೈಕ್ ಕಂಟ್ರೋಲ್ ಮಾಡದೆ ನಾಯಿಗೆ ಗುದ್ದಿ ನಿಯಂತ್ರಣ ತಪ್ಪಿ ಬಿದ್ದು ಕೈ ಕಾಲು ಮುರಿದು ಕೊಂಡ ಬೆಸ್ಟ್ ಫ್ರೆಂಡ್ ಸುಬ್ರಮಣಿಯ ಉದಾಹರಣೆ ಇನ್ನು ನೆನಪಿದೆ. ಸಣ್ಣ ತಿರುವಲ್ಲಿ ಯಾರಾದರೂ ನಕ್ಕುಬಿಡುವಂತೆ ಬಿದ್ದು ಮೈ ಕೈ ಪರಚಿಕೊಂಡ ಪ್ರಶಾಂತನ ಘಟನೆ ಇನ್ನು ಕಣ್ಮುಂದೆ ಹಾಗೆ ಇದೆ.. ಸಾಮಾನ್ಯ ವೇಗದ ಇವರದ್ದೇ ಇಂಥ ಕಥೆಯಾದರೆ ಪ್ರಚಂಡ ವೇಗದ ಪ್ರಕರಣಗಳ ಅಂತ್ಯ ಹೀಗೆ ಆಗಬೇಕೆನೋ..?? ಹಾಗೆ ಯೋಚಿಸುತ್ತೇನೆ.. ಅದೇ ವೇಗದಲ್ಲಿ ಆಯ ತಪ್ಪಿ ನಾನೇ ಯಾರಿಗಾದರೂ ಡಿಕ್ಕಿ ಹೊಡೆದರೆ..?? ಅಥವಾ ನನ್ನದೇ ವೇಗವನ್ನ ಅನುಸರಿಸಿ ಬರುತ್ತಿರೋ ಇನ್ನ್ಯಾವುದೋ ವಾಹನದವನು ಯಾವುದೋ ಕಾರಣಕ್ಕೆ ವಾಹನ ವೇಗ ತಗ್ಗಿಸಿ ಚಲಿಸುವ ನನ್ನ ಮೆಲೆಯೇ ಹಾಯ್ದು ಹೋದರೆ ಗತಿ..?? ಅಯ್ಯಪ್ಪ ಜೀವದ ಕುರಿತಾಗಿ ಯೋಚಿಸುವಾಗ.. ಬದುಕಿನ ಮತ್ತು ಸಾವಿನ ಕುರಿತಾದ ಅದೆಷ್ಟು ಕಲ್ಪನೆಗಳು.. ಅದೆಷ್ಟು ಯೋಚನೆಗಳು..?? ಅದೆಷ್ಟು ಕ್ರೂರ ದಾರಿಗಳು..?? ನಾನು ಡಿಕ್ಕಿ ಹೊಡೆದರೂ ಸರಿ.. ಅಥವಾ ನನಗೆ ಯಾರಾದರೂ ಡಿಕ್ಕಿ ಹೊಡೆದರೂ ಸರಿ ಅಪಾಯ ಇಬ್ಬರಿಗೇನೆ.. ಹಾನಿ ಎರಡೂ ಕುಟುಂಬಕ್ಕೇನೆ. ನನ್ನಂಥದ್ದೇ ಬಡ ಕುಟುಂಬ ದಿಂದ ಬಂದ ಹುಡುಗನಾಗಿದ್ದರೆ ಅವನ ಮನೆಯವರ ಗತಿ..?? ಒಬ್ಬನೇ ಮಗನಾಗಿದ್ದರೆ ಮುಂದಿನ ಅವರ ಜೀವನ..?? ವಯಸ್ಸಾದ ತಂದೆ ತಾಯಿಯರಿದ್ದರೆ..?? ಮದುವೆಯಾಗದ ಅಕ್ಕ ತಂಗಿಯರಿದ್ದರೆ..?? ಪ್ರಾಣಕ್ಕೆ ಪ್ರಾಣ ಕೊಡೋ ಜೀವದ ಗೆಳೆಯರಿದ್ದರೆ..?? ಸಾಯುವಷ್ಟು ಪ್ರೀತಿಸುವ ಪ್ರೇಮಿಯೊಬ್ಬಳಿದ್ದರೆ..?? ಅಷ್ಟೆಲ್ಲ ಕನಸು ಕಟ್ಟಿಕೊಂಡು ಬದುಕೋ ನಾನೇ ಅಥವಾ ನನ್ನಂಥವನೆ ಅಲ್ಲವೇ ಅವನು..!! ಅಯ್ಯಪ್ಪ ಇದನ್ನೆಲ್ಲಾ ತೊರೆದು ಇದನ್ನೆಲ್ಲಾ ಮರೆತು ವಿನಾಕಾರಣ ಕ್ಷುಲ್ಲಕ ಕಾರಣಕ್ಕಾಗಿ ನಮ್ಮ ಅಮೂಲ್ಯ ಬದುಕನ್ನ ಬಲಿ ಕೊಡಬೇಕೇ..?? ಒಂದೇ ಒಂದು ಕ್ಷಣ ಯೋಚಿಸಿದ್ದರೆ, ಹದಿನೈದು ಸೆಕೆಂಡ್ ತಡವಾಗಿದ್ದರೆ, ಒಂದು ಕ್ಷಣ ಪರಿಜ್ಞಾನ ಕೆಲಸ ಮಾಡಿದ್ದರೆ ಅವನು ಬದುಕುತ್ತಿದ್ದ. ಅವನಂತೆ ಇರುವ ನನಗಿನ್ನೂ ಅವಕಾಶವಿದೆ. ನಾನು ತಿದ್ದಿ ಕೊಳ್ಳಬೇಕು.. ತಿದ್ದಿ ಕೊಳ್ಳುತ್ತೇನೆ.. ವಿನಾಕಾರಣ ಸತ್ತು ಬಿಡಲು ಬದುಕು ಪೂರ್ತಿ ನನ್ನದಲ್ಲ. ನನ್ನನ್ನ ನಂಬಿ ಒಂದಷ್ಟು ಜೀವಗಳಿವೆ. ಆ ಜೀವಗಳ ಖುಶಿಗಿಂತ ನನ್ನ ವೇಗದ ಉನ್ಮಾದ ನನ್ನನ್ನ ಸಂತೋಷಗೊಳಿಸಲಾರದು, ಕುಡಿತ ಜೂಜು, ತಂಬಾಕಿನಂತೆ.. ವೇಗ, ಉದ್ವೇಗ, ಉದ್ವೇಗ, ಆವೇಗವೂ ಒಂದು ಚಟವೇ..!! ಇಷ್ಟು ದಿನ ಎಲ್ಲರ ಬಳಿಯೂ ಎದೆಯುಬ್ಬಿ ಹೇಳುತ್ತಿದ್ದೆ ನನಗಾವ ಚಟವು ಇಲ್ಲವೆಂದು. ಇಲ್ಲಿನ ತನಕ ನನಗೆ ಈ ರೀತಿಯದ್ದೊಂದು ಚಟವಿತ್ತು..!! ಇನ್ಮುಂದೆ ಅದು ಇರಲಾರದೆಂಬ ಧೃಡ ನಂಬಿಕೆ ಇಟ್ಟು ನನ್ನ ಬೈಕ್ ಏರುವ ಪ್ರಯತ್ನ ಮಾಡುತ್ತೇನೆ. ಕೇವಲ ಬೈಕ್ ಮಾತ್ರವಲ್ಲ ವಾಹನ ಯಾವುದೇ ಇರಲಿ ಪರಿಸ್ತಿತಿ ಏನೇ ಇರಲಿ ಎರಡು ನಿಮಿಷದಲ್ಲಿ ಇಲ್ಲವಾಗದೆ ಹೋಗೋದಕ್ಕಿಂತ, ಎರಡು ನಿಮಿಷ ತಡವಾಗಿ ಹೋಗೋದೇ ಸೂಕ್ತ. ನಾವು ತಡವಾಗಿ ಬಂದರೇನೆ ತಲ್ಲಣಿಸುವ ಜೀವಗಳು.. ನಾವಿಲ್ಲದೇ ಹೋದಲ್ಲಿ ಹೇಗಿರಬೇಡ..??

ಯಾರಾದರೂ ಸರಿ ಟ್ರಾಫಿಕ್ ನಿಯಮಗಳನ್ನ ಸರಿಯಾಗಿ ಪಾಲಿಸಿ. ಆದಷ್ಟು ಮತ್ತೊಬ್ಬರ ಬಗ್ಗೆಯೂ ಎಚ್ಚರದಿಂದಿರೋಣ. ರಸ್ತೆಗಿಳಿದರೆ  ನಮ್ಮ ಜೀವ ಕೇವಲ ನಮ್ಮ ಕೈಲಿ ಮಾತ್ರ ಇರುವುದಿಲ್ಲ. ಅದು ಮತ್ತೊಬ್ಬನ ಕೈಲಿ ಕೂಡಾ ಇರುತ್ತದೆನ್ನುವುದು ಸತ್ಯ. ಒಂದೇ ಬದುಕು.. ಒಂದೇ ಜೀವ.. ಒಂದೇ ಜೀವನ, ಒಂದೇ ಅವಕಾಶ ಪೂರ್ತಿಯಾಗಿ ಬದುಕೋಣ. ಋಣವಿಲ್ಲದೆಯೇ ಯಾರಿಗೂ ಬದುಕಿಲ್ಲ. ಬದುಕಿನ ಋಣ ತೀರಿಸಿ ಹೋಗುವ ಪ್ರಯತ್ನ ಮಾಡೋಣ. ಇಷ್ಟೆಲ್ಲಾ ಯೋಚಿಸಿ ಬರೆದು ನಿಮ್ಮ ಬಳಿ ಹಂಚಿಕೊಳ್ಳಬೇಕು ಅಂತ ಅಂದು ಕೊಳ್ಳುವಾಗಲೇ ಆಫೀಸು ಬರುತ್ತದೆ. ಆಫೀಸಿಗೆ ಬಂದವನೇ ಅವಸರಕ್ಕೆ ಬಿದ್ದವನಂತೆ ಅರೆ ಬರೆ ಬರೆದು ಕೊಳ್ಳುತ್ತೇನೆ. ಇಂದು ಪೂರ್ತಿಯಾಗಿ ಬರೆದು ನಿಮ್ಮೆಲ್ಲರ ಬಳಿ ಹಂಚಿ ಕೊಂಡಿದ್ದೇನೆ.

ಸಾರ್ಥಕವಾಗಿ ಬದುಕಿದ ಅದೆಷ್ಟೋ ಉದಾಹರಣೆಗಳು ನಿಲುಕಿಸದ ಅನುಭವವ, ಕಲಿಸಿ ಕೊಡದ ಪಾಠವ, ತಿಳಿಸಿ ಕೊಡದ ವಿಚಾರವ ಇಂಥದ್ದೊಂದು ಅನ್ಯಾಯಕಾರ ಸಾವು ನಮಗೆ ತಿಳಿ ಹೇಳಿ ಬಿಡತ್ತೆ. ಕೇಳಿ ಬದಲಾಗುವುದಕ್ಕು ಕಂಡು ತಿದ್ದಿ ಕೊಳ್ಳುವುದಕ್ಕೂ ಇರುವ ವೆತ್ಯಾಸ ಅಂಥದ್ದು. ಸತ್ತವನ ಆತ್ಮಕ್ಕೆ ಶಾಂತಿ ಕೋರುವುದರ ಬದಲಾಗಿ.. ಅವನ ಕುಟುಂಬಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥಿಸಿ ಕೊಳ್ಳೋಣ. 

5 comments:

 1. ನಿಯಮಗಳು ಸಡಿಲವಾದರೆ ಕಾಡಿದ್ದಾನೆ ಯಮ. ನಿಜವಾಗಲೂ ಕಣ್ಣು ತೆರೆಸುವ ಲೇಖನ. ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸುತ್ತಾ ಬಂದರೆ, ಎಷ್ಟೋ ಅವಘಡಗಳನ್ನು ಸುಲಭವಾಗಿ ತಪ್ಪಿಸಬಹುದು.

  ReplyDelete
 2. houdu satheesh, naanu PU dalli irbekidre omme nodida apaghaatadalli nammade collegina ibbaru hudgru kone usireldidru, adoo spot death! eshtu bejaaraagittu andre erdu dina oota serirlilla, avrannu allivarege nodirlilla, but munde sumaaru dina avara mukha kaadtaa ittu kanna munde. :( by following traffic we actually help ourselves, that is one thing i realised. :) as usual ond flowdalli bardiddiya, chennaagide :) bareetaa irappa :)

  ReplyDelete
 3. ಸತೀಶ್,
  ನೀವು ಕಣ್ಣಾರೆ ನೋಡಿ ಅನುಭವಿಸಿದ ದೃಷ್ಯಗಳನ್ನ ನಮ್ಮ ಕಣ್ಣ ಮುಂದೆ ನಡೆದಂತೆ ನಿರೂಪಿಸಿದ್ದೀರ. ಅದೇ ಹೊಸೂರ್ ರಸ್ತೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಓಡಾಡಿದ್ದೇನೆ - ನಿಮ್ಮ ಮಾತು ನಿಜ ಪ್ರತಿ ದಿನ ಒಂದೊಂದು ಅಪಘಾತ, ರಸ್ತೆ ದೊಡ್ಡದಾದರೂ - ದೊಡ್ಡ ದೊಡ್ಡ ಅಪಘಾತಗಳು..... ವಿಧಿಯಾಟ - ಸಾವು ನೋವುಗಳು! ನಮ್ಮ ಕೈಲಾದಮಟ್ಟಿಗೆ ರಸ್ತೆ ನಿಯಮಗಳನ್ನ ಪಾಲಿಸೋಣ.

  ReplyDelete
 4. ನೀವು ಹೇಳುವುದು ನಿಜ. ವಿವೇಕ ಕಡಿಮೆಯಾದಾಗ, ಅಪಘಾತಗಳು ಹೆಚ್ಚುತ್ತವೆ!

  ReplyDelete
 5. ಬೊಮ್ಮನಹಳ್ಳಿ ಸಿಗ್ನಲ್ ಬಳಿ ಟ್ರಾಫಿಕ್ ಪೋಲಿಸ್ ನ ಅಣತಿಯಂತೆ ನಾನು ನಿಂತಿದ್ದಾಗ ಪಕ್ಕದಲ್ಲಿ ಬಂದ ಯಮ ವೇಗದ ಯಮಹ... ಪೋಲಿಸ್ ಸಿಗ್ನಲ್ಗೆ ಕ್ಯಾರೆ ಅನ್ನದೆ ಬುರ್ರ್ ಅಂತ ಹೋಗಿ ಬಿಟ್ಟಾ.. ಪೋಲಿಸಿನವ ನೋಡ್ರಿ ಹಲ್ಕಾ @#@#$@# ... ಹೆಂಗೆ ಹೋದ ಅಂತ ಹೇಳಿದ.. ನಾನು ಸುಮ್ಮನಿರಲಾರದೆ "ಹೋಗ್ಲಿ ಬಿಡಿ ಸರ್ ಯಮ ಮಿಸ್ ಕಾಲ್ ಕೊಟ್ಟಿದ್ದಾನೆ ಅನ್ಸುತ್ತೆ" ಅಂದೆ. ಪೋಲಿಸ್ಗೆ ನಗು ಬಂತು ಆದರೆ ಹುಸಿಕೋಪ ತೋರಿಸಿಕೊಳ್ಳುತ್ತಾ ಹೋಗ್ರಿ ಹೋಗ್ರಿ ನಮ್ಮ ಪಾಡೇ ನಮಗೆ ಅದರಲ್ಲಿ ನಿಮ್ಮದು ಡಬ್ಬಾ ಜೋಕೆ ಬೇರೆ ಅಂದು ಸಿಗ್ನಲ್ ಕ್ಲಿಯರ್ ಮಾಡಿದ.
  ಹೀಗೆ ಯಮನ ಮಿಸ್ ಕಾಲ್ ಬಂದಾಗ ಹೀಗೆ ಅನಾಹುತ ಮಾಡಿಕೊಳ್ಳುತ್ತಾರೆ. ಚಂದದ ಲೇಖನ ಆದರೆ ಆ ಕುಟುಂಬದ ಬಗ್ಗೆ ನೆನೆದಾಗ ಬೇಸರವಾಗುತ್ತದೆ

  ReplyDelete