Wednesday, 12 December 2012

ಇಂದು ಸಂಜೆಯಾಗಲು ಸ್ವಲ್ಪ ತಡವಾಗಬಹುದೇನೋ..

ಏಯ್..
ಆ ಇಬ್ಬರು ಜೋಡಿಗಳು ನಮ್ಮನ್ನೇ ನೋಡ್ತಾ ಇದಾರಲ್ವಾ..?? ಅವಳಂದ್ಲು..
 
ನೋಡಲಿ ಬಿಡು ಹಾಗೆ ಕಣ್ಣಿಟ್ಟು ನೋಡೋ ಹಾಗೆ ಕೂತದ್ದು ನಮ್ಮ ತಪ್ಪು..
ಈ ಜಾಗ ನಾಲ್ಕು ಜನ ಬಂದು ಕೂತು ನೆಮ್ಮದಿ ಇಂದ ಒಂದಷ್ಟು ಹೊತ್ತು ಕೂತು ಕಳೆದು ಹೋಗ್ಲಿಕ್ಕಂತಾನೆ ಇರೋದು..
ಅದಕ್ಕೋಸ್ಕರ ಅಂತಾನೆ ಇಪ್ಪತ್ತು ರುಪಾಯ್ ಕೊಟ್ಟು ಒಳಗೆ ಬಂದಿರೋ ಅವರನ್ನ.. ಆರು ನಮ್ಮನ್ನೇ ನೋಡ್ತಿದಾರೆ ಅಂತ ಹೇಳೋದು ತಪ್ಪಾಗತ್ತೆ..
ನಮ್ಮ ಹಾಗೆ ಈ ಪಾರ್ಕಲ್ಲಿ ಅವರೂ ಒಂದು ಜೋಡಿ.. ನಾವ್ ಹೇಗೆ ಅವರನ್ನ ನೋಡ್ತೀವೋ ಅವರು ಹಾಗೆ ನಮ್ಮನ್ನೇ ನೋಡ್ತಾರೆ ಅಷ್ಟೇ.. ಇವನು.
 
ರವಿ.. ನಿನ್ನ ಒಂದ್ ಮಾತು ಕೇಳ್ಲಾ..??
 
ಕೇಳು ಶಶಿ..
 
ಅಲ್ಲಾ ರವಿ.. ನಮ್ ಗಾರ್ಮೆಂಟ್ಸ್ ನಲ್ಲಿ ಅಷ್ಟೊಂದು ಜನ ಹುಡುಗೀರಿದ್ರೂ.. ನೀನ್ ಬಂದು ನನ್ನನ್ನೇ ಯಾಕೆ ಪ್ರೀತಿಸಿದ್ದು..??
 
ನಾನ್ ನಿನಗೋದು ಮಾತು ಕೇಳ್ಲಾ..?? ಅವನು..
 
ಹಾಂ ಕೇಳು.. ಆದ್ರೆ ಮೊದಲು ನನ್ನ ಈ ಪ್ರಶ್ನೆಗೆ ಉತ್ತರ ಕೊಟ್ಟು ಕೇಳು..
 
ನಿನ್ ಪ್ರಶ್ನೆಗೆ ಉತ್ತರ ಈಗ ನಾ ಕೇಳೋ ಪ್ರಶ್ನೆಲೇ ಇದೆ...
 
ಏನದು..??
 
ಜಗತ್ತಲ್ಲಿ ಅಷ್ಟೊಂದು ಜನ ತಾಯಂದಿರಿದ್ರೂ.. ನೀನ್ ಯಾಕೆ ನಿಮ್ಮಮ್ಮನ ಹೊಟ್ಟೇಲೇ ಹುಟ್ದೆ..??
 
ಆಂ..?? ಅವಳು ಅವಕ್ಕಾದಳು..!!
 
ಅವನೇ ಮುಂದುವರಿದು..ಈ ಜಗತ್ತಲ್ಲಿ ಅಷ್ಟೊಂದು ಜಾಗಗಳಿದ್ರೂ.. ಭಾರತದಲ್ಲೇ ನೀನು ಯಾಕೆ ಹುಟ್ಟಿದೆ..?? ಹೋಗ್ಲಿ ಬೆನ್ನು ಬೆನ್ನಿಗೆ ಬೆಚ್ಚಿ ಬೀಳೋ ಥರ ಜಪಾನ್ ನಲ್ಲೆ ಯಾಕೆ ಮತ್ತೆ ಮತ್ತೆ ಭೂಕಂಪ ಸುನಾಮಿಗಳಾಗ್ತವೆ..??
 
ಅವಳಿಗದು ಅರ್ಥವಾದಂತೆ ತೋರಲಿಲ್ಲ.
 
ಅವನೇ ಮುಂದುವರೆದು..
 
ಶಶಿ ನನ್ ಪ್ರಶ್ನೆಗೆ ಉತ್ತರ ಇದೇನೇ.. ಕೆಲವರು ಇಂಥವರ ಹೊಟ್ಟೇಲೇ ಹುಟ್ಬೇಕು.. ಹೀಗೆ ಬದುಕಬೇಕು.. ಹೀಗೆ ಸಾಯಬೇಕು.. ಇಂಥವರೇ ಇವರ ಬಾಳ ಸಂಗಾತಿ ಆಗ್ಬೇಕು.. ಇಂಥಾ ಜಾಗದಲ್ಲಿ ಇಂಥಾದ್ದೇ ಆಗಬೇಕು ಅನ್ನೋದು ನಮಗ್ಯಾರಿಗೂ ಕಾಣದ ವಿಧಿ ಲಿಖಿತ ಅನ್ಕೊಬೋದು..
ಕೆಲವೊಂದಕ್ಕೆ ಕಾರಣಗಳು ಮುಖ್ಯ ಅನ್ಸೋದಿಲ್ಲ..
ಹಾಗೇನೆ ನಮ್ ಫ್ಯಾಕ್ಟರಿ ಯಲ್ಲಿ ಅಷ್ಟೊಂದು ಜನ ಹುಡುಗಿಯರಿದ್ರೂ ನನ್ ಹೃದಯ ನಿನ್ನನ್ನೇ ಯಾಕ್ ಹುಡುಕಿ ಕೊಳ್ತು ಅನ್ನೋದು ಕೂಡ ಯಾವುದೋ ಪ್ರೇರಣೆ ಇಂದಲೇ ಇರ್ಬೇಕು.. ಯಾಕಂದ್ರೆ ಕೆಲವೊಂದು ಅನುಬಂಧಗಳು ಅದೃಷ್ಟ ಇದ್ದವರಿಗೆ ಮಾತ್ರ ಸಿಗೋಕೆ ಸಾಧ್ಯ.. ನನಗೆ ನೀನು ಸಿಕ್ಕ ಹಾಗೆ.
ನೀನು ಸೇರೋ ಎರಡು ವಾರಗಳ ಮುಂಚೆ ಅಷ್ಟೇ ನಾನು ಈ ಗಾರ್ಮೆಂಟ್ ಸೇರಿದ್ದು.. ಅದಕ್ಕೂ ಮೊದಲು ಎಲ್ಲೋ ಇದ್ದವ. ಇಲ್ಲಿ ಇಲ್ಲಿವರ್ಗು ನನಗೆ ಫ್ರೆಂಡ್ ಅಂತ ಆಗಿದ್ದು ರಾಮ್.. ರಘು, ಗೋಪಾಲ್, ನಿತಿನ್ ಬಿಟ್ರೆ.. ಹುಡುಗೀರಲ್ಲಿ ನಾನು ಫ್ರೆಂಡ್ಶಿಪ್ ಮಾಡಿದ್ದು ನೀನು ಮತ್ತೆ ನಿನ್ನ ಫ್ರೆಂಡ್ ಲತಾ ಹತ್ರ ಮಾತ್ರ..
 
ಅಂಥಾ ವಿಶೇಷ ಏನಿದೆಯಪ್ಪಾ ನನ್ನಲ್ಲಿ..?? ನನ್ ಅಂದ ನೋಡಿ ಇಷ್ಟ ಪಟ್ಟದ್ದಾ..??
 
ಶಶಿ ಹುಡುಗೀರಿಗೆ ಬರಿ ಅಂದ ಮಾತ್ರ ಶೋಭೆ ಅಲ್ಲ.. ಗುಣ ಮತ್ತು ನಡತೆ ಕೂಡ..
ಅವತ್ತು ನಿನ್ ಎರಡನೆ ತಿಂಗಳ ಸಂಬಳದ ದಿನ.. ರೇಣುಕ ಬಂದು ನಿನ್ ಹತ್ರ ಎರಡು ಸಾವಿರ ದುಡ್ಡು ಕೇಳಿದ್ಲು ನೆನಪಿದೆಯಾ.??
 
ಹಾಂ.. ನಿಜ..
 
ಅವನು ಮುಂದುವರಿದು..
 
ಅವತ್ತು ಅವ್ಳು ಕೇವಲ ನಿನ್ ಹತ್ರ ಮಾತ್ರ ದುಡ್ಡು ಕೇಳಿದ್ದಲ್ಲ.. ನಿನ್ ಹಾಗೆ ಇನ್ನು ನಾಲ್ಕು ಜನ ಹುಡುಗೀರ ಹತ್ರ ಕೇಳಿದ್ಲು.. ಯಾರು ಕೊಟ್ಟಿರಲಿಲ್ಲ..
ಯಾರೂ ಕೊಡಲಿಲ್ಲ ಅಂದ ಮಾತ್ರಕ್ಕೆ ಅವರು ಕೆಟ್ಟವರು ಅಂತ ನಾ ಹೇಳ್ತಿಲ್ಲ.. ಇಂಥ ಬೆಂಗಳೂರಲ್ಲಿ ತಿಂಗಳಿಗೆ ನಮಗೇ ಅಂತ ಬರೋ ನಾಲ್ಕೂವರೆ ಸಾವಿರ ಸಂಪಾದನೆಯನ್ನ ಮೀರಿ ಖರ್ಚು ಬರೋದೆ ರೂಡಿ..
ಎಲ್ಲರಿಗೂ ಅವರ ಕಷ್ಟಗಳೇ ಮೇಲು ಅನ್ನಿಸಿ ಕೊಳ್ಳುವಾಗ ಯಾರೂ ಇನ್ನೊಬ್ಬರಿಗೆ ಕನಿಕರ ತೋರಿಸೋ ಇಚ್ಛೆ ಇದ್ದೂ.. ಸಹಾಯ ಮಾಡೋ ಮನಸಿದ್ದೂ.. ಮಾಡದೆ ಹೋಗೋದು ಅವರ ಅನಿವಾರ್ಯತೆ & ಅಸಹಾಯಕತೆ..
ಆ ದಿನ ರೇವತಿಯ ಅಮ್ಮನಿಗೆ ಹೊಟ್ಟೆ ನೋವು ಅಂತ ಅಸ್ಸ್ಪತ್ರೆ ಸೇರಿದಾಗ.. ಅಪೆಂಡಿಕ್ಸ್ ಐದೇ ಇಪ್ಪತ್ತು ಸಾವಿರ ಖರ್ಚಾಗತ್ತೆ ಅಂತ ಡಾಕ್ಟ್ರು ಹೇಳಿದ ನಂತರ.. ತಾನಿಷ್ಟು ದಿನ ದುಡಿದಿದ್ರಲ್ಲಿ ಅಷ್ಟೋ ಇಷ್ಟೋ ಉಳಿಸಿ ಕೂಡಿಟ್ಟಿದ್ದ ಐದು ಸಾವಿರ ದುಡ್ಡು.. ಕಿವಿಯಲ್ಲಿದ್ದ ಓಲೆ.. ಅವರಿವರ ಹತ್ರ ಕಾಡಿ ಬೇಡಿ ಪಡೆದ ಒಣದಷ್ಟು ಹಣ ಎಲ್ಲಾ ಸೇರಿ ಹದಿನೈದು ಸಾವಿರ ಸೇರಿಸಿ ಅಡ್ವಾನ್ಸ್ ಅಂತ ಕಟ್ಟಿ ಅವರಮ್ಮನ್ನ ಆಸ್ಪತ್ರೆಗೆ ಸೇರಿಸಿದ್ಲು..
 
 
ಮಿಕ್ಕ ಹಣವನ್ನ ಹೇಗಾದರೂ ಹೊಂದಿಸಬೇಕು ಅಂತ ನಮ್ಮ ಮ್ಯಾನೇಜರ್ ಹತ್ರ ಬಂದು ಸಹಾಯಕ್ಕೆ ಅಂತ ಸ್ವಲ್ಪ ದುಡ್ಡು ಕೇಳಿದ್ರೆ.. ಇಪ್ಪತ್ತೈದು ಸಾವಿರ ಸಂಬಳ ತೆಗೆಯೋ ಆ ಮನುಷ್ಯ ಅವಳಿಗೆ ಹೇಳಿದ್ದು ಏನು ಗೊತ್ತಾ..??
ಹೋಗಮ್ಮ ದಿನಾ ಬೆಳಗಾದ್ರೆ ಇಂಥ ಇಪ್ಪತ್ತು ಕಥೆ ಕೇಳ್ತಾನೆ ಇರ್ತೀನಿ.. ಕೇಳಿದೋರಿಗೆಲ್ಲಾ ಸಹಾಯ ಅಂತ ಮಾಡ್ತಾ ಇದ್ರೆ ನಾವ್ ಬದುಕೋದು ಹೇಗೆ ಅಂತ ಹೇಳಿ ತನ್ನ ಪಾಡಿಗೆ ತಾನು ಜಾರ್ಕೊಂಡಿದ್ದ.. ಆ ಹೊತ್ತಲ್ಲಿ ನಾನು ಅವರ ರೂಂ ನಲ್ಲೇ ಕೆಲಸ ಮಾಡ್ತಿದ್ದೆ.. ಪಾಪ ರೇವತಿ ನ ನೋಡೋಕ್ಕಾಗ್ತಿರ್ಲಿಲ್ಲ..
ಹುಡುಗರ ಹತ್ರ ಮಾತಾಡೋಕೆ ಮುಜುಗರ ಪಡೋ ಆ ಹುಡುಗಿ ಯಾವ ಹುಡುಗರ ಹತ್ರಾನೂ ಹೋಗಿ ಹತ್ರನು ದುಡ್ಡು ಕೇಳಿರಲಿಲ್ಲ.. ಕೊನೆಗೆ ನಾನೇ ಕರೆದು ಮಾತಾಡ್ಸಿ.. ನಾ ನಿಮಗೆ ಹಣ ಕೊಡ್ತೀನಿ ಆದ್ರೆ ಈಗಿಲ್ಲ ನಾಳೆ ಬೆಳಿಗ್ಗೆ ಕೊಡ್ತೀನಿ.. ಆದ್ರೆ ನನ್ನಿಂದ ಪೂರ್ತಿ ಐದು ಸಾವಿರ ಎಲ್ಲ ಕೊಡೋಕ್ಕಾಗಲ್ಲ ಬೇಕಿದ್ರೆ ಮೂರು ಸಾವಿರ ಅಡ್ಜಸ್ಟ್ ಮಾಡ್ತೀನಿ ಅಂದಿದ್ದೆ..
 
 
ಅದರ ನಂತರ ಆ ಹುಡುಗಿ ನಿನ್ ಹತ್ರ ಬಂದು ಮಿಕ್ಕ ಎರಡು ಸಾವಿರ ರುಪಾಯಿ ಕೇಳಿತ್ತು.. ನಿನ್ ಮನೇಲಿ ಅಷ್ಟು ಕಷ್ಟ ಇದ್ರೂ ನೀನ್ ಕೂಡ ಇಲ್ಲ ಅನ್ನದೆ ಕೊಡ್ತೀನಿ ಅಂದೆ..
ಅಲ್ಲೇ ನೀನ್ ನಂಗೆ ಮೊದಲು ಇಷ್ಟ ಆಗಿದ್ದು..
ಬೇರೆ ಹುಡುಗೀರ ಥರ ಒಣ ಪೋಗರಿಲ್ಲ..ಜಂಭ ಇಲ್ಲದ ನಿನ್ನ ವರ್ತನೆ.. ತುಂಬಾನೆ ಇಷ್ಟ ಆಗೋ ನಿನ್ನ ನಾಚಿಕೆ.. ಸದಾ ನಿನ್ನ ಅಭರಣವಾಗಿರೋ ಮೌನ.. ಚಿಕ್ ವಯಸ್ಸಲ್ಲೇ ಜವಾಬ್ದಾರಿಗಳು ಹೆಚ್ಚಿದರೂ ಬದುಕನ್ನ ಸಮರ್ಥವಾಗಿ ನಿಭಾಯಿಸೋ ನಿನ್ನ ಜಾಣ್ಮೆ.. ಸ್ನೇಹಿತರ ಜೊತೆ ನಿನ್ನ ಒಡನಾಟ.. ಅದೆಲ್ಲ ಆದ್ಮೇಲೆ ನೋಡ್ತಿದ್ದ ಹಾಗೆ ಎಂಥವರನ್ನ ಬೇಕಿದ್ರೂ ಉಲ್ಲಾಸಗೊಳಿಸೋ ನಿನ್ ಮುದ್ದು ನಗು ಮುಖ.. ಇದೆಲ್ಲವನ್ನ ಗಮನಿಸಿದ ಮೇಲೇನೆ ನೀನು ನನ್ನನ್ನ ಅಷ್ಟು ಸೆಳೆದದ್ದು..
 
ರವಿ.. ದೇವ್ರು ನಮ್ಮಂತೋರಿಗೆ ಯಾಕಿಷ್ಟು ಕಷ್ಟ.. ಒದ್ದಾಟ.. ಪರದಾಟ.. ಪರೀಕ್ಷೆಗಳನ್ನ ಕೊಡ್ತಾನೆ..??
 
ಶಶಿ ಎಲ್ಲರ ಬದುಕಲ್ಲೂ ಭಗವಂತ ಪರೀಕ್ಷೆಗಳನ್ನ ಕೊಟ್ಟೆ ಕೊಡ್ತಾನೆ... ಆದ್ರೆ ನಮಗೆದುರಾಗೋ ಪ್ರಶ್ನೆಗಳು ಮಾತ್ರವೇ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರ್ತವೆ..
ಯಾರು ಕಷ್ಟ ಪಡುವುದಿಲ್ವೋ ಬದುಕು ಅವರಿಗೆ ಅಷ್ಟು ಸುಲಭಕ್ಕೆ ಅರ್ಥ ಆಗಲ್ಲ.. ಕಾದು ತಟ್ಟಿಸಿ ಕೊಂದ ಕಬ್ಬಿಣ ಒಂದು ರೂಪಾಂತರಗೊಳ್ಳುವ ಹಾಗೇನೆ ಮನುಷ್ಯನ ಬದುಕು.. ನೋವು ತಿಂದಷ್ಟೂ ಮಾಗುತ್ತಾನೆ.. ಕಷ್ಟ ಪಟ್ಟಷ್ಟು ಬಾಗುತ್ತಾನೆ..
 
ಈಗ ನನ್ನನ್ನೇ ತಗೋ..
 
ಮನೇಲಿ ಹುಟ್ಟು ಕುಡುಕ ಅಪ್ಪ.. ಮೂಗೆತ್ತಿನಂತಿರೋ ಅಮ್ಮ..
ಅಲ್ಲಿ ಇಲ್ಲಿ.. ಅವರಿವರ ಮನೇಲಿ ಹೊಲದಲ್ಲಿ ಅವಳು ಕೂಲಿ ಮಾಡುತ್ತಿದ್ದರಿಂದಲೇ ಹೇಗೋ ನಡೀತಿತ್ತು..
ನಾನು ಹತ್ತನೇ ತರಗತಿ ಪಾಸಾಗೋ ಹೊತ್ತಿಗೆ ಹಾಳಾಗಲಿಕ್ಕೆ ಅಂತ ಇದ್ದ ಅಷ್ಟೂ ಚಟಗಳನ್ನ ಕಲಿತು.. ಊರು ಪುಂಡು ಪೋಕರಿಗಳ ಜೊತೆ ನನ್ನ ಪಾಡಷ್ಟೇ ನಾನು ನೋಡ್ಕೊಂಡಿದ್ದೆ..
ಅಷ್ಟಿದ್ದರೂ ಮನೆಯ ಜವಾಬ್ದಾರಿ ಹೊರದ ನಾನು ಕಾಲೇಜಿಗೆ ಅಂತ ಕಾಲಿಟ್ಟು ಅಲ್ಲೂ ದರಬಾರು ನಡೆಸೋಕೆ ಶುರು ಮಾಡಿದ್ದೆ... ಕೆಟ್ಟ ಹುಡುಗ ಅಂತ ಬಿರುದು ತಗೊಳ್ಳೋಕೆ ಅಂತ ಇದ್ದ ಅಷ್ಟೂ ಕೆಲಸಗಳನ್ನ ಮಾಡಿ ಎಲ್ಲಾ ಮೇಷ್ಟರ ಬಳಿಯೂ ಛೀಮಾರಿ ಹಾಕಿಸಿ ಕೊಂಡಿದ್ದೆ..
PUC ಫೇಲ್ ಆದ ದಿನ ಅಮ್ಮ ಬೈದದ್ದನ್ನ ಸಹಿಸಲಾರದೆ ಮನೆ ಬಿಟ್ಟು ಬೆಂಗಳೂರು ಸೇರಿದ ನಾ ಮತ್ತೆ ಆ ಕಡೆ ತಿರುಗಿ ನೋಡೋ ಪ್ರಯತ್ನ ಕೂಡ ಮಾಡಿರಲಿಲ್ಲ..
ಬೆಂಗಳೂರಿಗೆ ಬಂದು ಒಂದು ಲಾರಿ ಕ್ಲೀನರ್ ಆಗಿ ಕೆಲಸಕ್ಕೆ ಸೇರ್ಕೊಂಡ ನನ್ನ ಜೀವನ ಹೇಗೋ ನಡಿತಾ ಇತ್ತು..
 
 
ಅದೊಂದು ದಿನ ಹುಬ್ಬಳ್ಳಿ ಗೆ ಹೋಗ್ತಿದ್ದ ನಮ್ಮ ಲಾರಿ.. ರಾತ್ರಿ ಡ್ರೈವರ್ ನ ಮಂಪರು ನಿದ್ದೆ ಗಣ್ಣಿಗೆ ಆಯಾ ತಪ್ಪಿ ಬಿದ್ದದ್ದೊಂದೇ ನೆನಪು..
ನಾ ಕಣ್ಬಿಟ್ಟು ನೋಡಿದಾಗ ಅದ್ಯಾವುದೋ ಸರ್ಕಾರಿ ಆಸ್ಪತ್ರೆಯ ನೆಲದ ಮೇಲಿದ್ದ ಬೆಡ್ ಒಂದರ ಮೇಲಿದ್ದೆ..
ಅಲ್ಲೇ ಪಕ್ಕದಲ್ಲಿ ಕೂತಿದ್ದ ಅಮ್ಮನ ವಯಸ್ಸಿನ ಹೆಂಗಸೊಂದು ನನ್ನ ಬಳಿ ಬಂದು ನನ್ನ ಲಾರೀ ಡ್ರೈವರ್ ಸ್ಥಳದಲ್ಲೇ ಸತ್ತ ವಿಷಯ ತಿಳಿಸಿ.. ಅವನ ಹೆಣವನ್ನ ಸಂಸ್ಕಾರ ಗೊಳಿಸಿ ಎರಡು ದಿನವಾಯ್ತು ಅನ್ನೋ ವಿಚಾರ ತಿಳಿಸಿದ್ಲು..
ಅಷ್ಟರಲ್ಲೇ ವಾರ್ಡ್ ನ ಒಳಗೆ ಬಂದ ಡಾಕ್ಟರ್.. ಆ ತಾಯಿ ಬಳಿ ಹೇಳಿದ್ರು.. ಅಮ್ಮ ನಿಮ್ ಮಗಳಿಗೆ ಹೆಣ್ಣು ಮಗು.. ಮಗು ಏನೋ ಆರೋಗ್ಯಕರವಾಗೆ ಹುಟ್ಟಿತು.. ಆದ್ರೆ ತಾಯಿ ನ ಉಳಿಸೋಕ್ಕಾಗ್ಲಿಲ್ಲ ಸಾರಿ ಅಂದು ಬಿಟ್ರು..
 
 
ಆ ತಾಯಿ ರೋದನ ಹೇಳ ತೀರದಾಗಿತ್ತು.. ಅವಳಿಗೆ ಇದ್ದ ಆಸರೆ ಅವಳ ಮಗಳೊಬ್ಬಳೆ ಅಂತೆ.. ಆ ತಾಯಿಯ ಗಂಡ ಅವರಿಗೆ ಮಗುವಾಗಿ ಆರು ವರ್ಷಕ್ಕೆ ತೀರಿಕೊಂಡಿದ್ದರಂತೆ..
ಅಂದಿನಿಂದ ತಾವೇ ಕಷ್ಟ ಪಟ್ಟು ಕೂಲಿ ನಾಲಿ ಮಾಡಿ ಮಗಳನ್ನ ಬೆಳೆಸಿ ಒಂದು ಕಡೆ ಮಾಡುವೆ ಮಾಡಿ ಕೊಟ್ರೆ.. ವರದಕ್ಷಿಣೆ ನೆಪದಲ್ಲಿ ಅವಳ ಗಂಡ ಅವಳನ್ನ ವರ್ಷ ತುಂಬುವುದರೊಳಗೆ ಗರ್ಭಿಣಿಯಾಗಿದ್ದ ಸಮಯದಲ್ಲೇ ವರದಕ್ಷಿಣೆ ಕಿರುಕುಳ ಕೊಟ್ಟು ತವರಿಗಟ್ಟಿದವ ಆಗಲೂ ಬಂದು ತಿರುಗಿ ನೋಡಿರಲಿಲ್ಲವಂತೆ.. ಬಹಳ ಕರುಣಾಜನಕ ಆ ತಾಯಿಯ ವ್ಯಥೆ..
ಆಗ ಈ ಎಳೆ ಕಂದನನ್ನ ಸಾಕುವ ಹೊಣೆ ಆ ತಾಯಿಯ ಮೇಲೆ ಬಿದಿತ್ತು.. ಬಹಳ ರೋಧಿಸುತ್ತಿದ್ದ ಆ ತಾಯಿಯನ್ನ ಅಲ್ಲಿದ್ದ ಸುಮಾರು ಹೆಂಗಸರು ಸಮಾಧಾನ ಮಾಡುತ್ತಿದ್ದರು..
 
ನನಗೆ ಅಮ್ಮನ ನೆನಪಾಯಿತು..
ನಾನು ಮನೆ ಬಿಟ್ಟು ಬಂದಂದಿನಿಂದ ಯಾವತ್ತೂ ಆ ಕಡೆ ತಲೆ ಹಾಕಿರಲಿಲ್ಲ..
ಊರಿಗೆ ಹೋದೆ.. ಅಪ್ಪ ಅದಾಗಲೇ ಸತ್ತು ಎರಡು ತಿಂಗಳಾಗಿತ್ತು.. ಹಾಸಿಗೆ ಹಿಡಿದು ಮಲಗಿದ್ದ ಅಮ್ಮ ಜೀವಂತ ಶವವಾಗಿದ್ದಳು..
ಅಂದೇ ನನ್ನ ಹೇಯ ಜನ್ಮಕ್ಕೊಂದು ಧಿಕ್ಕಾರವಿಟ್ಟುಕೊಂಡೆ.. ಅಮ್ಮನನ್ನ ಊರು ಬಿಡಿಸಿ ಕರಕೊಂಡು ಬಂದು ಹೀಗೆ ಬೆಂಗಳೂರು ಸೇರಿ ದುಡಿಯಲು ಆರಂಭಿಸಿದೆ..
ದುಡಿತವೊಂದೆ ತುಡಿತವಾಗಿದ್ದ ನಾನು ಬದಲಾಗುತ್ತ ಹೋದದ್ದೇ ನನಗೆ ತಿಳಿಯಲಿಲ್ಲ..
ನನಗಾಗ ಯಾವ ಚಟದ ಅವಶ್ಯಕತೆಯೂ ಬೇಕಿರಲಿಲ್ಲ.. ನನ್ನಲೀಗ ಅದರ ಕುರುಹೂ ಇಲ್ಲ..
ನಾ ಈ ಮೊದಲು ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚುವ ಹಂತಕ್ಕೆ ಬಂದು ನಾ ಈ ಕಂಪನಿ ಸೇರಿದ್ದೆ.. ಅದಾಗಿ ಎರಡು ವಾರಕ್ಕೆ ನಿನ್ನನ್ನು ಕಂಡಿದ್ದೆ..
 
 
ನನಗೂ ನನ್ನ ಬದುಕ ನೊಗವೆಳೆಯಲು ಒಂದು ಹೆಗಲು ಬೇಕಿತ್ತು.. ಅದು ನೀನಾಗಬಲ್ಲೆ ಎಂಬ ನಂಬಿಕೆ ಮೂಡಿತ್ತು..
ಯಾಕಂದೆರೆ ನೀನ್ ನನ್ನ ಹಾಗೆ ಕಷ್ಟ ಅನುಭವಿಸಿ ಬಂದವಳೇ.. ಯಜಾಮನ ಎನಿಸಿ ಕೊಳ್ಳೋ ಅಪ್ಪನಿಲ್ಲದ ನಿನ್ನ ಮನೆ.. ಪೋಲಿಯೋ ಹಿಡಿದು ಕಾಲು ಕಳೆದು ಕೊಂಡಿರೋ ತಮ್ಮ... ಖಾಯಿಲೆ ಬಿದ್ದಿರೋ ನಿನ್ನಮ್ಮ.. ಇದೆಲ್ಲದರ ನಡವೆ ಕಷ್ಟ ಪಡೋ ನಿನ್ನ ಜೀವ ಇನ್ನೊಬ್ಬರ ಕಷ್ಟಕ್ಕೆ ಮಿಡಿವ ನಿನ್ನ ಮನಸು ನನ್ನನ್ನು ಬಹುವಾಗಿ ಸೆಳೆದಿತ್ತು..
ನನ್ನಮ್ಮ ನನ್ನು ನೀನು ಪ್ರೀತಿಯಿಂದ ನೋಡಿಕೊಳ್ಳ ಬಲ್ಲೆ ಎಂಬ ವಿಶ್ವಾಸ ಮೂಡಿತ್ತು..
ನಮ್ಮಿಬ್ಬರಿಗೆ ಆಸರೆಯಾಗಬಲ್ಲ ಶಕ್ತಿ ನಮ್ಮಿಬ್ಬರಿಗೆ ಮಾತ್ರ ಇರಬಹುದೆಂಬ ನಂಬಿಕೆ ನನ್ನಲ್ಲಿ ಮೂಡಿತ್ತು.
 
ಆಗಲೇ ನಾನು ನಿನ್ನ ಬಳಿ ಬಂದು ಪ್ರಪೋಸ್ ಮಾಡಿದ್ದೆ.. ನೀನು ಮೊದ ಮೊದಲು ಒಪ್ಪಿರಲಿಲ್ಲ..
ನಿನ್ನ ನೆನಪಲ್ಲಿ ನಾನು ಪ್ರೀತಿಗಾಗಿ ಹಠ ಹಿಡಿದು ಕೂರಲಿಲ್ಲ.. ದೇವದಾಸನಂತೆ ಕೊರಗಲಿಲ್ಲ.. ನನಗೆ ಬದುಕೋಕೆ ಬೇರೆಯದೇ ಕಾರಣಗಳಿದ್ವು.. ಬೇರೆಯದೇ ಜವಾಬ್ದಾರಿಗಳಿದ್ವು..
ನಿನ್ನ ಮೇಲೆನಗೆ ಪ್ರೀತಿ ಕರಗಿರಲಿಲ್ಲ. ಆದರು ನನ್ನ ಪಾಡಿಗೆ ನಾನಿದ್ದೆ.. ಅದೊಂದು ದಿನ ನೀನಾಗೆ ಬಂದು ಅದನ್ನ ಒಪ್ಪಿದೆ.. ನನಗೆ ನಂಬಿಕೆ ಇತ್ತು.
 
ರವಿ ನೀ ಎಷ್ಟೆಲ್ಲಾ ತಿಳಿದು ಕೊಂಡಿದ್ದೀಯ.. ಬದುಕನ್ನ ಎಷ್ಟೆಲ್ಲಾ ಅರ್ಥ ಮಾಡ್ಕೊಂಡಿದ್ದೀಯ.. ಅದನ್ನೆಲ್ಲಾ ಎಷ್ಟು ಚೆನ್ನಾಗಿ ಅರ್ಥ ಮಾಡಿಸ್ತೀಯ..
ಆದರು ನನಗೆ ನಿನ್ನ ಮೇಲೆ ಸಣ್ಣ ಅಪನಂಬಿಕೆಯೊಂದಿತ್ತು.. ಯಾಕಂದ್ರೆ ಪ್ರೀತಿ ಗೀತಿ ಅಂತ ಓಡಾಡುವ ಅವಶ್ಯಕತೆ ನನಗೂ ಇಲ್ಲದ ಪರಿಸ್ಥಿತಿಯಾಗಿತ್ತು..
ನನ್ನ ನಂಬಿ ಮನೆಯಲ್ಲಿ ಬದುಕುತ್ತಿರೋ ಎರಡು ಜೀವಗಳ ಮೇಲಿನ ಸೆಳೆತವಿತ್ತು.. ಆದರು ಅದೆಲ್ಲದರಾಚೆಗೂ ನಿನ್ನ ಮಾನವೀಯ ಮೌಲ್ಯ & ನಿನ್ನ ಪ್ರೀತಿ ನನ್ನನ್ನ ನಿನ್ನೆಡೆಗೆ ಸೆಳೆಯುತ್ತಿತ್ತು..
ನನ್ನಿಂದ ನಿನ್ನ ಪ್ರೀತಿ ಮಾಡದೆ ಇರಲಾಗಲಿಲ್ಲ.. ಆದರೆ ಒಂದು ಭಯ ಎಲ್ಲಿ ನಾನು ಮೋಸ ಹೋಗಿ ಬಿಡುತ್ತೀನೋ..
 
ಶಶಿ ಎಲ್ಲಿ ನಂಬಿಕೆ ಇರುವುದಿಲ್ಲವೋ.. ಅಲ್ಲಿ ಯಾವತ್ತಿಗೂ ಯಾವ ಸಂಭಂಧಗಳು ಶಾಶ್ವತವಲ್ಲ.. ನಿನ್ನನ್ನು ಪ್ರೀತಿಸೋ ವಿಚಾರ ಹುಡುಗಾಟವೂ ಅಲ್ಲ..
ಯಾಕಂದ್ರೆ ನಿನ್ನಂಥ ಹುಡುಗಿ ಬಾಳಲ್ಲಿ ಹುಡುಗಾಟ ಆಡುವ ಯಾವ ಮನುಷ್ಯನ ಬಾಳಲ್ಲೂ ಭಗವಂತ ಒಳ್ಳೇದು ಬರೆದಿರೋಲ್ಲ..
ನೋಡು ನಿನಗೆ ನನ್ನ ಮೇಲೆ ನಂಬಿಕೆ ಬರೋವರೆಗೂ ಯಾವತ್ತಿಗೂ ನಾನು ನಿನ್ನನ್ನ ಪೀಡಿಸಲಾರೆ.. ನಿನಗ್ಯಾವತ್ತು ನನ್ನ ಮೇಲೆ ಪೂರ್ತಿ ವಿಶ್ವಾಸ ಬಂದು ನನ್ನನ್ನ ಮದುವೆಯಾಗೋ ಇಚ್ಛೆ ಮೂಡುತ್ತದೋ.. ಅಂದು ನಮ್ಮೆರಡು ಮನೆಗಳ ಒಮ್ಮತದಲ್ಲೇ ನಾ ನಿನ್ನ ಮದುವೆಯಾಗ್ತೀನಿ..
 
ಶಶಿಯ ಕಣ್ಣಲ್ಲಿ ನೀರು.. ಇಲ್ಲಿಯವರೆಗೂ ಅವ ಹೇಳಿದ್ದೆಲ್ಲ ಕೇಳಿ ಅವಳೊಳಗೆ ಮೂಡಿರಬಹುದಾದ ಭಾವಗಳೆಲ್ಲ ಕಣ್ಣೀರ ಧಾರೆಯಾಗಿ ಹೊರ ಬರುತ್ತಿರಬಹುದು..
 
ತಮ್ಮೆದುರಾಗಿ ಸುಮಾರು ಮೂವತ್ತು ಅಡಿ ದೂರಕ್ಕೆ ಕುಳಿತಿರುವ ಜೋಡಿ ಏನು ಮಾತಾಡುತ್ತಿರಬಹುದೆಂದು ಅಣಕವಾಡಿ ತೋರಿಸುತ್ತಾ.. ರವಿ ತನ್ನ ಮನಸಿನ ಭಾವಗಳನ್ನ ಶಶಿಯ ಮುಂದೆ ನಿವೇದಿಸುತ್ತಿದ್ದಾನೆ..
ತನ್ನ ಬದುಕನ್ನ ತೆರೆದಿಟ್ಟಿದ್ದಾನೆ..
ಶಶಿ ಹುಟ್ಟು ಮೂಕಿಯೆಂದು ರವಿಗೆ ಗೊತ್ತು..!!
ಶಶಿಯ ಮನಸೊಳಗಿರಬಹುದಾದ ಪ್ರಶ್ನೆಗಳ ಗೂಡನ್ನ ರವಿ ತನ್ನದೇ ಕಲ್ಪನಾ ಹಂದರದಲ್ಲಿ ತಿಳಿಸಿ.. ತಿಳಿ ಗೊಳಿಸಿದ್ದಾನೆ..
ಶಶಿಯ ಮನಸು ತಿಳಿಯಾಗಿದೆ.. ನಿರಾಳವಾಗಿದೆ..
ಅವಳ ಮೊಗದಲ್ಲೊಂದು ಉಲ್ಲಾಸ ಭಾವ..
ಕಣ್ಣೀರ ಹನಿಗಳ ಜೊತೆ ರವಿ ಎಡೆಗಿನ ಅದಮ್ಯ ಪ್ರೀತಿಗೆ ಸಾಕ್ಷಿ ಎಂಬಂತೆ ಅವಳ ಮೊಗದಲ್ಲಿ ಕಿರು ನಗೆ ಮೂಡುವ ಪ್ರಯತ್ನ ಮಾಡುತ್ತಿತ್ತು..
 
ತಮ್ಮೆದುರು ಅಷ್ಟು ದೂರ ಕುಳಿತಿದ್ದ ಜೋಡಿ ಎದ್ದು ಹೊರಟು ಹೋಗುವುದನ್ನು ಕಂಡ ಶಶಿ ರವಿಯನ್ನು ಸೆಳೆದು ಅವನ ಕೆನ್ನೆಗೊಂದು ಮುತ್ತನಿಡುತ್ತಾಳೆ..
ಇವರಿಬ್ಬರ ಕತೆಯನ್ನ ಆಲಿಸುತ್ತ ತನ್ನ ಕೆಲಸವನ್ನ ಮರೆತ ಸೂರ್ಯ.. ಪಾರ್ಕಿನ ಮರಗಳ ಎಲೆಗಳ ನಡುವೆ ಕಣ್ಣಿರಿಸಿ ಇವರೆಡೆಗೆ ಆಗೊಮ್ಮೆ ಈಗೊಮ್ಮೆ ಕದ್ದು ಇಣುಕಿತ್ತಿದ್ದಾನೆ..
 
ಬಹುಷಃ ಇಂದು ಸಂಜೆಯಾಗಲು ಸ್ವಲ್ಪ ತಡವಾಗಬಹುದೇನೋ..!!

22 comments:

  1. really super satish nijja jeevindali ನೋವು ತಿಂದಷ್ಟೂ ಮಾಗುತ್ತಾನೆ.. ಕಷ್ಟ ಪಟ್ಟಷ್ಟು ಬಾಗುತ್ತಾನೆ..thumbha cheangide....
    ಜಗತ್ತಲ್ಲಿ ಅಷ್ಟೊಂದು ಜನ ತಾಯಂದಿರಿದ್ರೂ.. ನೀನ್ ಯಾಕೆ ನಿಮ್ಮಮ್ಮನ ಹೊಟ್ಟೇಲೇ ಹುಟ್ದೆ..?? alwa kelavondu preshenegalige uttarane sigodila ..... ಈ ಜಗತ್ತಲ್ಲಿ ಅಷ್ಟೊಂದು ಜಾಗಗಳಿದ್ರೂ.. ಭಾರತದಲ್ಲೇ ನೀನು ಯಾಕೆ ಹುಟ್ಟಿದೆ..?? ಹೋಗ್ಲಿ ಬೆನ್ನು ಬೆನ್ನಿಗೆ ಬೆಚ್ಚಿ ಬೀಳೋ ಥರ ಜಪಾನ್ ನಲ್ಲೆ ಯಾಕೆ ಮತ್ತೆ ಮತ್ತೆ ಭೂಕಂಪ ಸುನಾಮಿಗಳಾಗ್ತವೆ..?? nijja satish neen writting super awesome kano

    ReplyDelete
    Replies
    1. ಕೌಸಲ್ಯ... ನಾ ಏನ್ ಬರೆದರೂ ಮೆಚ್ಚಿ ಪ್ರತಿಕ್ರಯಿಸೋ ನಿನ್ ಅಭಿಮಾನಕ್ಕೆ ನಾ ಎಷ್ಟು ಕೃತಜ್ಞತೆ ಹೇಳಿದ್ರೂ ಕಮ್ಮಿಯೇ.. :) :)

      Delete
  2. super sathish :)ನನಗೆ ಬದುಕೋಕೆ ಬೇರೆಯದೇ ಕಾರಣಗಳಿದ್ವು.. ಬೇರೆಯದೇ ಜವಾಬ್ದಾರಿಗಳಿದ್ವು..
    ee line thumba chennag ide..

    ReplyDelete
  3. ಈ ಜಗದೊಳಗಿರುವ ಸಂತೆಯಲ್ಲಿ ನಮ್ಮ ನಮ್ಮ ಪಾಲಿನ ದಿನಸಿಗಳನ್ನು ನಾವು ತೆಗೆದುಕೊಂಡು ಅಚ್ಚುಕಟ್ಟಾದ ಅಡಿಗೆ ಮಾಡಿ..ನಾವು ತಿಂದು ನಮ್ಮವರಿಗೂ ಹಂಚುವುದಷ್ಟೇ ಕೆಲಸ ..ಈ ನೀತಿಯನ್ನು ಸೂರ್ಯ ಚಂದ್ರ ಸಾಕ್ಷಿ ತೆಗೆದುಕೊಂಡು...ಹಗಲಲ್ಲಿ ಸೂರ್ಯ ಮಾತಾಡುವಾಗ ಇರುಳಲ್ಲಿ ಬರುವ ಚಂದಿರ ಮೂಕಿಯಾಗಲೇಬೇಕು...ಎಂತಹ ಸಮೀಕರಣ...ಮನುಷ್ಯತ್ವ, ಸಾಮಾಜಿಕ ಪ್ರಜ್ಞೆ, ಹೃದಯಗಳ ತೊಳಲಾಟ..ಕಡೆಗೆ ರವಿ ಜಾರುವ ಸಮಯದಲ್ಲಿ ಶಶಿ ರವಿಗೆ ಮುತ್ತಿಡುವ ಸಾಂಕೇತಿಕ ಭಾಷೆ..ಆಹಾ ಸೂಪರ್...ಸತೀಶ್...ನಿಜಕ್ಕೂ ಇದು 3ಡಿ ಕಥೆ..ಸೂಪರ್...ನಿಮ್ಮ ಕಲೆಗೆ ನನ್ನ ನಮನಗಳು...

    ReplyDelete
    Replies
    1. ಶ್ರೀ ಸಾರ್..

      ಇದನ್ನ ಬರೆಯೋವಾಗ ನನಗೆ ಗೊತ್ತಾಗದ ಅದೆಷ್ಟೋ ವಿಚಾರಗಳು ಈಗ ನಿಮ್ಮ ಕಾಮೆಂಟ್ ಗಳನ್ನ ನೋಡೋವಾಗ ನಂಗೆ ಗೋಚರಿಸುತ್ತಾ ಇದೆ.. ಅದ್ಕೆ ಅನುಭವ ಅನ್ನೋದು.. ನಿಜ ನನಗೂ ಈಗ ಇದು 3D ಕತೆ ಅನ್ನಿಸ್ತಿದೆ..

      ನಿಮ್ಮ ಕಾಮೆಂಟುಗಳನ್ನ ಓದೋದೇ ಒಂದು ಖುಷಿ ಸಾರ್.. ಮಾತೆ ಅಂತ ಖುಷಿಯ ಪಲಕುಗಳನ್ನ ನಿರಂತರವಾಗಿ ಕೊಡ್ತಾ ಇರಿ ಅಷ್ಟೆಯಾ.. :) :)

      Delete
  4. ಮೊದಲು ನಿಮ್ಮ ಬರಹಗಳಲ್ಲಿ ನನಗೆ ನೆಚ್ಚಿಗೆಯಾಗುವುದು ಅವು ತೆರೆದುಕೊಳ್ಳುವ ಪರಿ. ಅವುಗಲ ನಿರೂಪಣಾ ಶೈಲಿ ಮತ್ತು ಅವು ಉಳಿಸುವ ಗುರುತುಗಳು.

    ಇಲ್ಲಿ ರಿಂಗಣಿಸುವ ಶಶಿ ರವಿಯರು ನಮ್ಮ ಸುತ್ತ ಮುತ್ತಲಲ್ಲೇ ಸಿಗುವರೇನೋ ಎನಿಸುತ್ತದೆ.

    ReplyDelete
    Replies
    1. ಬದರೀ ಸಾರ್..

      ತುಂಬು ಹೃದಯದ ಧನ್ಯವಾದಗಳು..

      ಏನೆ ಬರೆದರೂ ಮುಕ್ತವಾಗಿ ಶ್ಲಾಘಿಸಿ ಬೆನ್ನು ತಟ್ಟೋ ನಿಮ್ಮನ್ನ ನೋಡಿ ನಾವುಗಳು ಕಲಿಯ ಬೇಕ್ಕಾದ್ದು ಬಹಳ ಇದೆ..

      ಕಲಿಸಿ ಕೊಡ್ತಿರಿ.. :) :)

      Delete
  5. really superb satish..jeevanadalli kashta anubavisidavige mathra jeevna yenu antha artha agodu...ಕೆಲವರು ಇಂಥವರ ಹೊಟ್ಟೇಲೇ ಹುಟ್ಬೇಕು.. ಹೀಗೆ ಬದುಕಬೇಕು.. ಹೀಗೆ ಸಾಯಬೇಕು.. ಇಂಥವರೇ ಇವರ ಬಾಳ ಸಂಗಾತಿ ಆಗ್ಬೇಕು.. ಇಂಥಾ ಜಾಗದಲ್ಲಿ ಇಂಥಾದ್ದೇ ಆಗಬೇಕು ಅನ್ನೋದು ನಮಗ್ಯಾರಿಗೂ ಕಾಣದ ವಿಧಿ ಲಿಖಿತ ಅನ್ಕೊಬೋದು..howdu...yar hanel yen bardidyo...ad hange agodu...
    ಎಲ್ಲಿ ನಂಬಿಕೆ ಇರುವುದಿಲ್ಲವೋ.. ಅಲ್ಲಿ ಯಾವತ್ತಿಗೂ ಯಾವ ಸಂಭಂಧಗಳು ಶಾಶ್ವತವಲ್ಲ....nija yav sambandadalle adru nambike illandre sambhandagalu uliyalla....nijvaglu suuuuuuuuuuuuuuuuuper!! agide..

    ReplyDelete
  6. Superb Sathish..tumba andare tumba chengai baredidara odi tumba Kushi aythu..niuv edey barith eri...

    ReplyDelete
  7. ಆಹಾ! ಸುಂದರ ಅತಿ ಸುಂದರ ಕಥೆ.....ಈ ಒಂದು ಕಥೆಯಲ್ಲಿ ಎಷ್ಟೆಲ್ಲಾ ಅಂಶಗಳು ಅಡಕವಾಗಿದ್ದಾವೆ.ನಿರೂಪಣೆ ಶೈಲಿ ತುಂಬಾ ತುಂಬಾ ಇಷ್ಟವಾಯಿತು ಟಾಮ್.Beautifully presented.hats off man.ಇನ್ನಷ್ಟು ಬರಿ.

    ReplyDelete
    Replies
    1. ಟಿಪಿಕಲ್ ಸತೀಶ್ ನಾಯಿಕ್ ಬರಹ. ನಿನ್ನ ನಿರೂಪಣೆಯ ಬಗ್ಗೆಯಂತೂ ಕೆಮ್ಮೋ ಹಾಗೆ ಇಲ್ಲ.

      Someಬಂಧಗಳು ಹೇಗೆ ಅನುಬಂಧಗಳಾಗುತ್ತವೆ ಆಲ್ವಾ...?

      "
      ಬಹುಷಃ ಇಂದು ಸಂಜೆಯಾಗಲು ಸ್ವಲ್ಪ ತಡವಾಗಬಹುದೇನೋ..!!"
      ಈ ಸಾಲು, ತುಂಬಾ ಭಾರವಾಗಿದೆ...........
      ಏನೇನೋ ಹೇಳ್ತಾ ಇದೆ.
      ಧನ್ಯವಾದಗಳು

      Delete
    2. ವೈಶು..

      ಧನ್ಯವಾದ ಹೇಳಿ ಮುಗಿಸಿ ಬಿಡಲ್ಲ.. ಕೆಲವೊಂದು ವಿಚಾರಗಳನ್ನ ಮರೆಯಾಗಿ ನಿಂತು ನಿನ್ನ ನೋಡಿ ಕಲ್ತ್ಕೊತಾ ಇದೀನಿ ಅಂದ್ರೆ ತಪ್ಪಿಲ್ಲ. ಉಪಮೆಗಳನ್ನ ಬಳಸಿ ಬಳಸಿಕೊಳ್ಳೋ.. ಸಂಧರ್ಭಗಳಿಗೆ ಜೀವ ಭಾವಗಳನ್ನ ತುಂಬುವವರು ಒಮ್ಮೆ ನಿನ್ನ ಬರಹಗಳನ್ನ ನೋಡ್ಬೇಕು.. ಬರೀ ಮೆಚ್ಚುಗೆ ಅಷ್ಟೇ ಅಲ್ಲ.. ಸರಿ ತಪ್ಪುಗಳ ಕಡೆ ನಿನ್ನ ತೋರು ಬೆರಳು ಕೂಡ ನಂಗೆ ಬೇಕಿದೆ.. :) :)

      Delete
    3. ರಾಘ..

      ಟಿಪಿಕಲ್ ಅಲ್ಲಪ್ಪ... ಸಿಂಪಲ್ ಅಷ್ಟೇ..

      ಬರೆಯೋಕೆ ಒಂದು ವಿಭಿನ್ನ ರೀತಿ ಅಂತ ಮಾಡ್ಕೊಂಡು ಹೀಗೂ ಬರಿ ಬಹುದು ಅಂತ ತೋರಿಸಿ ಕೊಟ್ಟವ ನೀನು.. ನಾ ಹಿಡಿಯಬಲ್ಲ ಸಾಮಾನ್ಯ ಜಾಳು ಯಾರಿಗಾದರೂ ಸುಲಭಕ್ಕೆ ಸಿಗಬಹುದು..

      ಟಿಪಿಕಲ್ ಅಂದ್ರೆ ನಿನ್ನದು..!!

      ಮತ್ತೆ ನಿನ್ನ ಟಿಪಿಕಾಲಿಟಿ ಮತ್ತೊಮ್ಮೆ ಬೇಗ ಅನಾವರಣಗೊಳ್ಳಲಿ ಅಷ್ಟೇ ಸಧ್ಯದ ಬಯಕೆ..

      Delete
  8. ತುಂಬಾ ಇಷ್ಟವಾಯ್ತು ಸತೀಶ್...ಇಲ್ಲೇ ಎಲ್ಲೋ ಪಕ್ಕದಲ್ಲೇ ಆಗುವ ಘಟನೆಯಂತೆ ಅನಿಸಿತು...ಖಂಡಿತವಾಗಿಯೂ ನಿಮ್ಮ ಕಥೆಗಳಿಗೆ ಓದುಗರನ್ನು ಸೆಳೆದುಕೊಳ್ಳುವ ಶಕ್ತಿಯಿದೆ..ಮುಂದುವರೆಸಿ..
    ಇನ್ನಷ್ಟು ಕಥೆಗಳಿಗೆ ಕಾಯ್ತಿರ್ತೀನಿ...
    ಹಾಂ ಇಲ್ಲೂ ತರ್ಲೇ ಬಿಟ್ಟಿಲ್ವಾ ಗುರುಗಳೇ..ಜಗತ್ತಲ್ಲಿ ಅಷ್ಟೊಂದು ಜಾಗಗಳಿದ್ರೂ.. ಭಾರತದಲ್ಲೇ ನೀನು ಯಾಕೆ ಹುಟ್ಟಿದೆ..?? ಹೋಗ್ಲಿ ಬೆನ್ನು ಬೆನ್ನಿಗೆ ಬೆಚ್ಚಿ ಬೀಳೋ ಥರ ಜಪಾನ್ ನಲ್ಲೆ ಯಾಕೆ ಮತ್ತೆ ಮತ್ತೆ ಭೂಕಂಪ ಸುನಾಮಿಗಳಾಗ್ತವೆ..??

    ನೋಡಿ ಒಂದು ಸಲ ನಕ್ಕು ಎರಡು ಸಲ ತಲೆಕೆರೆದೆ!!!!

    ಚೆನಾಗಿದೆ...ಬರೆಯುತ್ತಿರಿ..ಓದ್ತಾ ಇರ್ತೀವಿ.....
    ನಮಸ್ತೆ

    ReplyDelete
  9. ಚಿನ್ಮಯ್..

    ಸುಸ್ವಾಗತ.. ನನ್ನ ಪುಟ್ಟ ಗೂಡಿಗೆ.

    ಪ್ರತಿಕ್ರಿಯೆಗೆ ಧನ್ಯವಾದಗಳು..

    ಬರೆಯೋ ಪ್ರಯತ್ನ ಈಗಷ್ಟೇ ಶುರುವಾಗಿದೆ.. ನಿಮ್ಮ ಹಾಗೆ ಬೆನ್ನು ತಟ್ಟೋರು ಇರೋವರ್ಗೂ ಅದು ನಿರಂತರವಾಗಿರಬಲ್ಲದು ಅನ್ನೋ ನಂಬಿಕೆ ಇದೆ.

    ReplyDelete
  10. ಅಂತು ಇಂತೂ ನಮ್ ಸತೀಶ ನ ನಿಜವಾದ ಪ್ರತಿಭೆ ಬ್ಲಾಗ್ ಮೂಲಕ ಎಲ್ಲರಿಗೂ ಪಸರಿಸುವಂತಾಯಿತು.....ನೀವು ಏನ್ ಬರೆದರೂ ಚಂದ ಅಂತ ಕೆಲವರು ಹೇಳ್ತಾರೆ.......ನೀವು ಎಲ್ಲಾನು ಚೆನ್ನಾಗೆ ಬರೀತೀರಿ ಅಂತ ನಾನ್ ಹೇಳೋದು....ತುಂಬಾ ಖುಷಿ ಕೊಟ್ಟ ಬರಹ.....ಇದು ನಿರಂತರವಾಗಿರಲಿ....ಅಭಿನಂದನೆಗಳು.....

    ReplyDelete
    Replies
    1. ಅಶೋಕಣ್ಣ ಸ್ವಲ್ಪ ಬ್ಯುಸಿ ಈ ನಡುವೆ ಅದ್ಕೆ ನಿಮ್ಮ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸೋ ಪ್ರಕ್ರಿಯೆ ಸ್ವಲ್ಪ ತಡವಾಯ್ತು ಕ್ಷಮೆ ಇರಲಿ.. :) :)

      ಚೆನ್ನಿಗರ ಸಹವಾಸ ನನ್ನನ್ನ ಚೆನ್ನಾಗಿ ತಯಾರಿ ಮಾಡಿದೆ ಅನ್ನೋದಷ್ಟೇ ಈಗ ನಾನು ಹೇಳಿ ಬಚಾವಾಗೋಕೆ ಉಳುಕೊಂಡಿರೋ ಕಾರಣ. ಆ ಚೆನ್ನಿಗರಲ್ಲಿ ನೀವೂ ಒಬ್ಬರು ಮರೆಯದಿರಿ.. ;) :)

      Delete