ಕಳೆದ ಒಂದು ವಾರದಿಂದ ಮೊಬೈಲ್ ಗೆ ಬರೋ ಎಪ್ಪತ್ತು ಪ್ರತಿಶತ ಎಸ್ಸೆಮ್ಮೆಸ್ ಗಳು Happy New Year in Advance ಅನ್ನೋದೇ ಆಗೋಗಿದೆ..
ಅಲ್ವಾ ..?? ಅದೊಂದು ಟ್ರೆಂಡ್.. ಎಸ್ಸೆಮ್ಮೆಸ್ ಈಗ ಮೊಬೈಲ್ ಬಳಕೆಯಲ್ಲಿನ ಬಹು ಮುಖ್ಯ ಅಂಶಗಳಲ್ಲೊಂದು.. ಅದೊಂದು ಯಾರೂ ಜಾರಿಗೊಳಿಸದಿಹ ನಿಯಮ.. ಅದೊಂದು ಪದ್ಧತಿ.. ಅದೊಂದು ಸಂಸ್ಕೃತಿ.. ಅದೊಂದು ಸಂಪ್ರದಾಯವೇ ಅನ್ನುವಂತೆ ನಾವೆಲ್ಲರೂ ಬಹಳಷ್ಟು ಪ್ರತಿನಿತ್ಯ ಒಮ್ಮಿಂದೊಮ್ಮೆ ಮಾಡಿಯೇ ತೀರುವ ಸಾಧಾರಣ ವಿಷಯ. ಆದ್ರೆ ಹಬ್ಬ ಹರಿದಿನಗಳು ಬಂತೂ ಅಂದ್ರೆ ಅಪರೂಪಕ್ಕೊಮ್ಮೆ ಯಾವತ್ತೂ ಎಸ್ಸೆಮ್ಮೆಸ್ ಮಾಡದ ಅನೇಕ ಹಿರಿಯ.. ಮಾನ್ಯ.. ಗಣ್ಯ ಮತ್ತು ಅತಿ ವಿಶಿಷ್ಟ ವ್ಯಕ್ತಿತ್ವಗಳೂ ಸಹ ಒಮ್ಮೊಮ್ಮೆ ನಮಗ ಎಸ್ಸೆಮ್ಮೆಸ್ ಕಳಿಸಿ ಶುಭ ಹಾರೈಕೆಗಳ ಜೊತೆ ಅಚ್ಚರಿಯ ಸಂತಸವನ್ನೂ ಹುಟ್ಟಿಸಿ ಬಿಡುತ್ತಾರೆ. ಒಂದು ಹಬ್ಬ.. ಹರಿದಿನ.. ಅಥವಾ ಇನ್ನ್ಯಾವುದೇ ವಿಶೇಷ ದಿನಗಳಿದ್ರೆ.. ಮೂರ್ನಾಲ್ಕು ದಿನಗಳ ಮೊದಲೇ ಹೀಗೆ ಎಸ್ಸೆಮ್ಮೆಸ್ ಗಳ ಮೂಲಕ ಶುಭಾಶಗಳನ್ನ ಕೋರೋ ಪ್ರಕ್ರಿಯೆ ಆರಂಭವಾಗಿ ಬಿಡತ್ತೆ. ಆದ್ರೆ ಇಲ್ಲಿ ಬೇಸರ ತರಿಸೋ ಒಂದು ಅಂಶ ಏನು ಅಂದ್ರೆ ಜೋಗಿಯವರು ತಮ್ಮ ಹಲಗೆ ಬಳಪ ಪುಸ್ತಕದಲ್ಲಿ ಹೇಳುವಂತೆ ನೂರ ನಲವತ್ತು ಅಕ್ಷರಗಳ ನಡುವಿನಲ್ಲೇ ನಮ್ಮ ಕವಿತ್ವ.. ಅಥವಾ ಹೇಳ ಬೇಕ್ಕಾದ್ದನ್ನ ಅಷ್ಟರಲ್ಲೇ ಹೇಳಿ ಮುಗಿಸಿ ಬಿಡುವ ಘನ ಪಾಂಡಿತ್ಯ.. ಯಾರೂ ಯಾರೊಬ್ಬರಿಗೂ ಹೇಳಿ ಕೊಡದೆಯೂ.. ಅದಾಗದೆ ನಮ್ಮೆಲ್ಲರೊಳಗೊಂದುಗೂಡಿ ಬಿಟ್ಟಿದೆ ಅಂದರೆ ತಪ್ಪಾಗಲಾರದು.
ಬರೀ ಮೊಬೈಲು ಮಾತ್ರವಲ್ಲ ಫೇಸ್ಬುಕ್.. ಆರ್ಕುಟ್.. ಟ್ವಿಟ್ಟರ್.. ಈ-ಮೇಲ್ ಎಲ್ಲದರಲ್ಲೂ ಇದೆ ಜಾಳು. ಹೆಚ್ಚೆಂದರೆ "ನಿಮಗೂ, ನಿಮ್ಮ ಕುಟುಂಬದವರೆಲ್ಲರಿಗೂ ೨೦೧೩ ರ ಈ ವರ್ಷ ಸುಖ.. ಸಂತೋಷ. ಆರೋಗ್ಯ.. ಸಮೃದ್ಧಿ ಗಳನ್ನೂ ತಂದು ನಿಮ್ಮ ಬದುಕು ಸದಾ ಕಾಲ ಹಸನಾಗಿರಲೆಂದು.. ನನ್ನ ಮತ್ತು ನನ್ನ ಕುಟುಂಬದ ಪರವಾಗಿ ಹಾರ್ಧಿಕವಾಗಿ ಹಾರೈಸುತ್ತೇನೆ" ಇದು ಆಗಲೇ ಮಾಡಿಟ್ಟು ಕೊಂಡಿರುವ ಸಿದ್ಧ ಸೂತ್ರ. ಅಲ್ಲಿ ೨೦೧೩ ಅನ್ನುವ ಪದದ ಬದಲಿಗೆ ದೀಪಾವಳಿ ಯುಗಾದಿ, ಗಣೇಶ ಚತುರ್ಥಿ, ದಸರಾ, ಮಹಾಲಕ್ಷ್ಮಿ ವ್ರತ, ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ರಾಮ ನವಮಿ, ಕನ್ನಡ ರಾಜ್ಯೋತ್ಸವ, ನಾಗರ ಪಂಚಮಿ, ಸಕ್ರಾಂತಿ, ಕ್ರಿಸ್ಮಸ್, ಗುಡ್ ಫ್ರೈಡೆ, ರಂಜಾನ್, ಬಕ್ರೀದ್, ಅಥವಾ ನಮ್ಮಗಳ ಜನುಮ ದಿನ.. ಹೀಗೆ ಸಂಧರ್ಭ ಅಥವಾ ವಿಶೇಷತೆ ಯಾವುದೇ ಇರಲಿ.. ಅಲ್ಲಿ ಪದವೊಂದನ್ನು ಬದಲಿಸಿದರೆ ಆಯ್ತು. ಮಿಕ್ಕೆಲ್ಲ ಹರಕೆ ಹಾರೈಕೆಯ ಧಾಟಿ ವರ್ಷಂಪ್ರತಿ ಒಂದೆಯೇ. ಹೆಚ್ಚೆಂದರೆ ಒಂದೆರಡು ಶುಭ ಹಾರೈಕೆಯ ಚಿತ್ರಗಳು.. ಅನಿಮೇಟೆಡ್ ಚಿತ್ರಗಳು.. ಹಿರಿಯ ಕವಿಗಳ ಅಥವಾ ಇನ್ನ್ಯಾರೋ ಗೀಚಿದ ನಾಲ್ಕು ಸಾಲಿನ ಕವನ ಇಲ್ಲವೇ ಬರಹದ ಜೊತೆ ಈ ಶುಭಾಷಯ ಪ್ರಕ್ರಿಯೆ ಮುಗಿದು ಹೋಗುತ್ತದೆ. ಎಷ್ಟೋ ಬಾರಿ ಇದು ಮಾಮೂಲಿ ಎನ್ನಿಸಿ ಆ ಶುಭ ಆಶಯದ ಮಧುರ ಅನುಭೂತಿ ನಮಗೆ ದಕ್ಕೋದೆ ಇಲ್ಲ.
ಓಡುವ ಕಾಲನ ಚಕ್ರದ ಮೇಲೆ.. ಕಾಲಿನ ಮೇಲೆ ಬಿಸಿ ನೀರು ಬಿದ್ದವರಂತೆ ತಲ್ಲಣಿಸಿ ಓಡುವ ನಮಗೆಲ್ಲ.. ಈ ಸಿದ್ಧ ಸೂತ್ರಗಳನ್ನು ಹೊರತು ಪಡಿಸಿ ಬೇರೆ ವಿಧದಲ್ಲಿ ಶುಭಾಶಗಳನ್ನು ಕೋರುವ ಮಧುರ ಅನುಭೂತಿಯನ್ನು ಅನುಭವಿಸಲು ಮನಸ್ಸಿದ್ದರೂ ಮಾರ್ಗವಿಲ್ಲ.. ಮಾರ್ಗವಿದ್ದರೂ ಸಮಯವಿಲ್ಲ. ಒಂದು ಶುಭಾಷಯ ತಾನೇ ಹೇಗೂ ತಿಳಿಸಬೇಕು.. ಹೇಗೆ ತಿಳಿಸಿದರೇನು..?? ಒಟ್ಟು ತಿಳಿಸಿದರಾಯ್ತು ಅನ್ನೋ ಉಡಾಫೆಯ ಮಾತಲ್ಲ. ಪ್ರಸ್ತುತಕ್ಕೆ.. ಪ್ರಸ್ತುತತೆಯ ಪ್ರಭಾವಕ್ಕೆ ಹೊಂದಿಕೊಂಡ ನಮ್ಮೆಲ್ಲರ ಸಹಜ ವರ್ತನೆ ಇದು ಅಂದರೆ ಅಕ್ಷರ ಸಹ ತಪ್ಪಾಗಲಾರದೇನೋ. ಇನ್ನೂ ಹಲವು ಜನ ಇಷ್ಟನ್ನೂ ಹೇಳುವುದಿಲ್ಲ.. ವಿಶ್ ಯೂ ದಿ ಸೇಮ್.. ಸೇಮ್ ಟೂ ಯೂ.. ಅನ್ನುವಷ್ಟರಲ್ಲೇ ಮುಗಿಸಿ ಬಿಡ್ತಾರೆ.. ಅದು ಕೂಡ ಸೋಗಲಾಡಿತನವೇನಲ್ಲ.. ಅದೂ ಕೂಡ ಒಂದು ಬಗೆಯ ಸಿದ್ಧಸೂತ್ರವಷ್ಟೇ.
ಒಂದು ಹಬ್ಬ ಹರಿದಿನಗಳ ಆಚರಣೆಗೆ ಹೇಗೆ ಹೂವು, ಹಣ್ಣು, ಫಲ ತಾಂಬೂಲ.. ಅರಿಶಿನ ಕುಂಕುಮ ಗಳಿಗೆಲ್ಲ ಹೇಗೆ ತಮ್ಮದೇ ಆದ ವಿಶೇಷ ಪಾತ್ರಗಳಿವೆಯೋ.. ಹಾಗೆ ಈ ಶುಭ ಹಾರೈಕೆಗಳಿಗೂ ತಮ್ಮದೇ ಆದ ವರ್ಚಸ್ಸಿದೆ ಅನ್ನುವುದು ನನ್ನ ಅಂಬೋಣ. ಹಿರಿಯರ ಆಶಿರ್ವಾದವಿಲ್ಲದೆ.. ನೆರೆ ಮನೆಯ ಹರಕೆಗಳಿಲ್ಲದೆ.. ಬಂಧು ಬಳಗದ ಹಾರೈಕೆ ಗಳಿಲ್ಲದೆ.. ಮಿತ್ರ ವೃಂದದ ಶುಭಾಕಾಂಕ್ಷೆಗಳಿಲ್ಲದೆ ಯಾವ ವಿಶೇಷ ದಿನವೂ ಅಪೂರ್ಣ. ಸಿಹಿ ಇಲ್ಲದ ಸಂಭ್ರಮದ ಹಾಗೆ. ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾದೆ.. ನನಗೆ ಕೆಲಸ ಸಿಕ್ಕಿತು.. ಪ್ರಮೋಶನ್.. ಮದುವೆ.. ಮಗು.. ಮಗುವಿನ ನಾಮಕರಣ... ಫಾರಿನ್ ಟ್ರಿಪ್.. ರಿಟೈರ್ಮೆಂಟ್.. ಹೊಸ ಮನೆ ಕಟ್ಟಿದ್ದು.. ಕಾರು ಕೊಂಡದ್ದು.. ಮಗ-ಮಗಳ ಮದುವೆ.. ನಮ್ಮ ಆರಾಧ್ಯ ಸಮಾನ ಕೆಲಗಣ್ಯ ವ್ಯಕ್ತಿಗಳ ಭೇಟಿಯಾದ ದಿನ.. ಜನುಮದಿನ.. ಹೀಗೆ ಸಂತಸ ಸಂಹ್ರಮದ ಕ್ಷಣ ಯಾವುದೇ ಇರಲಿ ನಮ್ಮ ಆತ್ಮೀಯರ ಶುಭಾಶಯಗಳಿಲ್ಲದೆ ಯಾವ ಸಂಭ್ರಮಗಳ ಸಾರ್ಥಕತೆ ಅಥವಾ ಸಂತೃಪ್ತಿ ಯಾವತ್ತಿಗೂ ಅಪೂರ್ಣವೇ.
ಹೀಗೆ ಮೊನ್ನೆ ಬೆಳಿಗ್ಗೆ ಕಲಾ ಫೋನ್ ಮಾಡಿದ್ದಳು..
ಕಲಾ ಅಂದ್ರೆ ಚಂದ್ರಕಲಾ ಅನ್ನುವ ಹೆಸರನ್ನ ಕತ್ತರಿಸಿ ನಾವೆಲ್ಲಾ ಪ್ರೀತಿಯಿಂದ ಕರೆಯುವ ಅವಳ ಹೆಸರು. ಈಗಷ್ಟೇ ೨ನೆ PUC ಓದ್ತಾ ಇದಾಳೆ. ಸುಮಾರು ಹದಿನಾರು ವರುಷ ನಮ್ಮ ಮನೆಯ ಪಕ್ಕದಲ್ಲೇ ನಮ್ಮ ಮನೆಯ ಮಗಳಂತೆಯೇ ಬೆಳೆದ ಹುಡುಗಿ. ನಮ್ಮನೆಗೆ ಅಷ್ಟೇ ಅಲ್ಲ.. ನಮ್ಮ ಓಣಿಗೆ.. ನಮ್ಮ ಊರಿಗೆ ಇಷ್ಟವಾದಂಥ ಹುಡುಗಿ. ಅದ್ಭುತ ಮಾತುಗಾರ್ತಿ. ಅವಳ ತಂಗಿ ಅನಿತಾ ಮತ್ತು ಅನುಷಾ ರನ್ನು ಕಂಡರೆ ಕೂಡ ಅಷ್ಟೇ ಮುದ್ದು. ಒಳ್ಳೆ ನಾಟ್ಯಗಾರ್ತಿ. ಈಚೆಗೆ ಮಿಲಿಟರಿ ಇಂದ ಸ್ವಯಂ ನಿವೃತ್ತಿ ತಗೊಂಡು ಬಂಡ ಅವರಪ್ಪ ಶಂಕರಣ್ಣ ನನ್ನ ಕಾರಣಗಳಿಂದ ಪಕ್ಕದೂರಲ್ಲಿ ಮತ್ತೊಂದು ಭವ್ಯ ಮನೆಯನ್ನು ಕಟ್ಟಿ ಇಡೀ ಪರಿವಾರವೇ ಪಕ್ಕದೂರಿಗೆ ಗುಳೆ ಹೋಗಿ ಒಂದು ವರ್ಷವಾಯ್ತು. ನಾನಾದರೂ ಸರಿಯೇ ಯಾವಾಗ ಊರಿಗೆ ಹೋದರು ಅವರ ಮನೆಗೊಂದು ಖಾಯಂ ಭೇಟಿ ಖಡಾ ಖಚಿತ. ನಮ್ಮಗಳ ಮನೆಗಳು ಮಾತ್ರ ಸ್ವಲ್ಪ ದೂರವಾಗಿರಬಹುದು.. ಆದ್ರೆ ಮನಸ್ಸಿನ ದೂರ ಇಂಚು ಕೂಡ ಹೆಚ್ಚಾಗಿಲ್ಲ.
ಇಂತಿಪ್ಪ ಕಲಾ ಮೊನ್ನೆ ಬೆಳಿಗ್ಗೆ ಫೋನ್ ಮಾಡಿದ್ದಾದ್ರು ಯಾಕೆ..??
ಹೇ ಕಲಾ.. ಏನಪ್ಪಿ ಇದ್ದಕ್ಕಿದ್ದ ಹಾಗೆ ಅಪರೂಪಕ್ಕೆ ನೆನೆಸ್ಕೊಂಡು ಫೋನ್ ಮಾಡಿದಿಯ..?? ನಮ್ದೆಲ್ಲ ಇವತ್ತು ನೆನಪಾಯ್ತ ಅಂದೆ.
ಏನಿಲ್ಲ ಸತೀಶಣ್ಣ ಸುಮ್ನೆ ಹಾಗೆ ಮಾಡಿದೆ ಅಷ್ಟೇ. ಚೆನ್ನಾಗಿದಿಯಾ..?? ನಿನ್ ಕೆಲಸ ಎಲ್ಲ ಹೇಗಿದೆ..??
ನಾ ಆರಾಮು ಕಣಪ್ಪಿ.. ಕೆಲಸ ಕೂಡಾ ಆರಾಮು.. ಹೇಳು ನೀ ಹೇಗಿದ್ದೀಯ..?? ಹೇಗೆ ಓದ್ತಾ ಇದಿಯ..?? ಮನೇಲೆಲ್ಲ ಹೇಗಿದಾರೆ..??
ಎಲ್ಲಾ ಆರಾಮು ಸತೀಶಣ್ಣ.. ನನ್ ಓದಿಗೇನು ಬಿಂದಾಸ್..
ಅದೂ ಇದೂ.. ಊರು ಕೇರಿ.. ಕಂತೆ ಪುರಾಣ.. ಮಣ್ಣು ಮಸಿ.. ಎಲ್ಲ ಅಂತ ಒಂದೈದು ನಿಮಿಷ ಮಾತಾಡಿದ ಮೇಲೆ ಕಲಾ ಅಂದ್ಲು..
ಸತೀಶಣ್ಣ ನಿನ್ ಆಫಿಸ್ ಅಡ್ರೆಸ್ ಕಳ್ಸೋ..
ನಂ ಆಫಿಸ್ ಅಡ್ರೆಸ್ಸಾ ಯಾಕೆ..??
ನೀ ಕಳ್ಸು ನಾ ಹೇಳ್ತೀನಿ..
ಇಲ್ಲ ನೀ ಹೇಳು ನಾ ಕಳಿಸ್ತೀನಿ..
ಏನಿಲ್ಲ ಸತೀಶಣ್ಣ ನ್ಯೂ ಇಯರ್ ಹತ್ರ ಬಂತಲ್ಲ. ಅದ್ಕೆ ನಿನಗೊಂದು ಗ್ರೀಟಿಂಗ್ ಕಳ್ಸೋಣ ಅನ್ನಿಸ್ತು ಅದ್ಕೆ ಕೇಳ್ದೆ.. ಇಲ್ಲ ಗಿಲ್ಲ ಅನ್ನದೆ ಕಳ್ಸು ಅಷ್ಟೇ.. ರಾಖಿ ಹಬ್ಬಕ್ಕೆ ರಾಖಿ ಕಳಿಸ್ತೀನಿ ಅಡ್ರೆಸ್ಸ್ ಕಳ್ಸು ಅಂದಿದ್ದೆ ಆಗ ಕಳಿಸಲಿಲ್ಲ.. ಹಾಗಂತ ಈಗ್ಲೂ ಕಳಿಸದೆ ಇದ್ರೆ ಇನ್ಮೇಲೆ ನಿಂಜೊತೆ ಮಾತೆ ಆಡಲ್ಲ ನೋಡು ಅಂತ ಹೆದರಿಸಿದ್ಳು.
ಹೂಂ ಆಯ್ತು ತಗೋ ಕಳಿಸ್ತೀನಿ. ನೀ ಫೋನ್ ಇಟ್ಟ ಕೂಡ್ಲೇ ಮೆಸೇಜ್ ಮಾಡ್ತೀನಿ ಬಿಡು.. ಹಾಗೆ ನಾನು ನಿನಗೊಂದು ಗ್ರೀಟಿಂಗ್ ಕಳಿಸ್ತೀನಿ ನೋಡ್ತಾ ಇರು ಅಂದೆ.
ಹುಮ್ಮ್ ಸರಿ.. ಸತೀಶಣ್ಣ ಹಾಗೆ ನಮ್ ನಾಗಣ್ಣ & ಪ್ರಭಣ್ಣ ( ಮಿಲಿಟರಿ ಯಲ್ಲಿರೋ ಅವರ ಸೋದರ ಸಂಭಂಧಿಗಳು ) ನಿಗೂ ಗ್ರೀಟಿಂಗ್ಸ್ ಕಳಿಸಬೇಕು.. ಹಾಗೆ ಅಣ್ಣಂದಿರ ಮೇಲೆ ಬರೆಯ ಬಹುದಾದ ಒಂದೆರಡು ಚಿಕ್ ಚಿಕ್ಕ ಕವನ ಗಳನ್ನ ಕಳ್ಸು ಮರೀಬೇಡ ಅಂತ ಫೋನ್ ಇಟ್ಳು.
ಗ್ರೀಟಿಂಗ್ಸ್... ಕೇಳಿದೊಡನೆ ನನ್ ಮನಸ್ಸು ಹಳೆ ನೆನಪುಗಳತ್ತ ಹಾಗೆ ಹೊರಳಿ ಕೊಳ್ತು.
ಹೊಸ ವರ್ಷದಾಚರಣೆ..
ಇದೊಂದು ಪ್ರಕ್ರಿಯೆ ಮಾತ್ರ ನಮ್ಮದಲ್ಲದ.. ನಮ್ಮ ಇತಿಹಾಸಕ್ಕೆ ಸಂಭಂಧ ಪಡದ.. ನಮ್ಮ ಬೇರುಗಳಲ್ಲಿ ಹುಟ್ಟದ ಆಚರಣೆಯಾದರೂ ನಮ್ಮದೇ ಎನ್ನುವಷ್ಟರ ಮಟ್ಟಿಗೆ ಧಾಂ ಧೂಮ್ ಎಂದು ಸಂಭ್ರಮಿಸಲ್ಪಡುವ ಆಚರಣೆ. ಕನ್ನಡ ರಾಜ್ಯೋತ್ಸವ ಕೂಡ ಪ್ರತೀ ಊರು.. ಪ್ರತಿ ಬೀದಿಗಳು ಆಚರಿಸೋದು ಅನುಮಾನವೇ.. ಆದರೆ ಇದೊಂದು ಆಚರಣೆಗೆ ಮಾತ್ರ ಹಿರಿಯರಿಂದ ಕಿರಿಯರ ತನಕ ಸರ್ವ ಜನ ಸಮ್ಮೇಳನ ಖಾತ್ರಿ. ನಮಗೆಲ್ಲಾ ಗೊತ್ತು.. ಭಾರತೀಯರಿಗೆಲ್ಲ ಹೊಸ ವರುಷಾಚರಣೆ ಯುಗಾದಿಯಲ್ಲಿ ಅಂತ. ಆದರು ಈ ಸಂಭ್ರಮದ ಮುಂದೆ ಅದು ಕೆವೆಲ ಒಂದು ಹಬ್ಬವೇನೋ.. ಒಂದು ಸಾಂಕೇತಿಕ ಆಚರಣೆ ಏನೋ ಅನ್ನುವಷ್ಟರ ಮಟ್ಟಿಗೆ ಈ ಜನವರಿ ಒಂದರ ನ್ಯೂ ಇಯರ್ ಆಚರಣೆಯನ್ನ ನಮ್ಮ ನೇಟಿವಿಟಿ ಗೆ ಒಗ್ಗಿಸಿ ಕೊಂಡು ಬಿಟ್ಟಿದ್ದೇವೆ. ಜಾತಿ ಧರ್ಮಗಳ ಬೇಲಿಯನ್ನು ದಾಟಿ ಸಂಭ್ರಮಿಸುತ್ತೇವೆ. ನಮ್ಮ ವಿಶಾಲ ಮನಸ್ಸಿಗೆ ಸಾಕ್ಷಿಯಾಗಿ ಎರಡೂ ಹೊಸ ವರ್ಷಾಚರಣೆ ಗಳೂ ಬಹಳ ಸಂಭ್ರಮದಿಂದ ಆಚರಿಸಲ್ಪಡುತ್ತವೆ.. ಆದರೆ ರೀತಿ ನೀತಿ ಬೇರೆಯಷ್ಟೇ.. ಈ ಎರಡೂ ಆಚರಣೆಗಳ ಸಂಭ್ರಮಿಸುವಿಕೆ ನಮ್ಮ ವಿವಿಧತೆಯಲ್ಲಿನ ಏಕತೆಗೆ ಒಂದು ಸಣ್ಣ ಉದಾಹರಣೆಯಾಗಿ ನಿಲ್ಲುತ್ತವೆ.
ಜನವರಿ ಒಂದರ ಈ ಹೊಸ ವರ್ಷಾಚರಣೆಯ ಹಲವು ರೀತಿಯ ಆಚರಣೆ ಅಥವಾ ಸಿದ್ಧತೆಗಳ ಪೈಕಿ ಗ್ರೀಟಿಂಗ್ಸ್ ಗಳ ಮೂಲಕ ಶುಭಾಶಯಗಳನ್ನ ವಿನಿಮಯಿಸಿ ಕೊಳ್ಳುವುದು ಕೂಡ ಬಹುಮುಖ್ಯ ಅಂಶಗಳಲ್ಲೊಂದು. ಭಾಗಶಃ ಅವಸಾನದ ಅಂಚಿಗೆ ತಲುಪಿರೋ ಈ ಗ್ರೀಟಿಂಗ್ ಕಾರ್ಡುಗಳ ವಿನಿಮಯದ ಪದ್ಧತಿ ಒಂದು ಕಾಲದಲ್ಲಿ ಕೊಡುತ್ತಿದ್ದ ಮಧುರ ಅನುಭೂತಿಗಳನ್ನ ಈಗ ಮೆಲುಕು ಹಾಕುವುದಕ್ಕಷ್ಟೇ ಸಾಧ್ಯ.
ತಂತ್ರಜ್ಞಾನದ ಅಭಿವೃದ್ಧಿಯಡಿ ಸಿಕ್ಕು ರೂಪಾಂತರಗೊಂಡ ನಮ್ಮ ಜೀವನ ಶೈಲಿಯಲ್ಲಿ ಇಂಥಾ ಅವೆಷ್ಟೋ ಅಂಶಗಳು ಅರಿವಿಗೆ ಬರುವ ಮೊದಲೇ ಅಳಿಸಿ ಹೋಗಲಾರಂಭಿಸಿದ್ದು ಸುಳ್ಳಲ್ಲ. ಈ ಅಭಿವೃದ್ಧಿ ಎಂಬುದರ ಎತ್ತರದ ಅಟ್ಟಕೆ ಮೊದಲ ಮೆಟ್ಟಿಲಾದ ಕೀರ್ತಿ ಈ ಮೊಬೈಲ್ ಫೋನ್ ಗಳದ್ದು ಎಂದರೆ ತಪ್ಪಾಗಲಾರದು. ನಂತರದ ಸ್ಥಾನ ಮಾನಗಳನ್ನ.. ಫೇಸ್ಬುಕ್.. ಆರ್ಕುಟ್.. ಈ ಮೇಲ್ ಅಥವಾ ಇನ್ನಿತರ ಇಂಟರ್ನೆಟ್ ಮಾದರಿಗಳು ಆಕ್ರಮಿಸಿ ಕೊಳ್ಳುತ್ತವೆ. ನನಗಿನ್ನೂ ನೆನಪಿದೆ.. ನಮ್ಮೂರಿಗೆ ಮೊಟ್ಟ ಮೊದಲ ಮೊಬೈಲ್ ಫೋನ್ ಬಂದದ್ದು ಶಿವರಾಮಣ್ಣ ನ ಮನೆಗೆ. ಕಪ್ಪು ಬಣ್ಣದ ದಪ್ಪ ದಪ್ಪ ಕೀಲಿಗಳನ್ನು ಹೊಂದಿದ್ದ ಅದು ಥೇಟ್ ವಾಕಿ ಟಾಕಿ ಯೊಂದರ ಮುತ್ತಾತನ ರೂಪಧಾರಿಯಂತಿತ್ತು. ಅದರ ಮೊದಲು ಸಂಪರ್ಕಕ್ಕೆಂದು ಇದ್ದ ಅತ್ಯಾಧುನಿಕ ವ್ಯವಸ್ಥೆ ಎಂದರೆ ಶಿವರಾಮಣ್ಣ, ಹಾಲೇಶಣ್ಣ ಮತ್ತು ನಂಜಪ್ಪನವರ ಮನೆಗಳಲ್ಲಿದ್ದ ಲ್ಯಾಂಡ್ ಲೈನ್ ಫೋನುಗಳು ಮಾತ್ರ. ಈ ಮೂರು ಮನೆಗಳಿಂದ ಒಂಭತ್ತು ಬೀದಿಗಳ ನಮ್ಮೂರು.. ತಲಾ ಮೂರು ಬೀದಿಗಳಿಗೊಂದು ಮನೆಯ ಫೋನ್ ಎಂಬಂತೆ ಅನಧೀಕೃತವಾಗಿ ಹರಿದು ಹಂಚಿ.. ಅಪರೂಪಕ್ಕೊಮ್ಮೆ ನಮ್ಮ ದೂರದೂರಿನ ಕರುಳು ಬಳ್ಳಿಗಳ ನಡುವೆ ಧ್ವನಿಗಳ ಮುಖಾ ಮುಖಿಯಾಗುತ್ತಿತ್ತು. ಹಬ್ಬ ಹರಿದಿನ ಅಥವಾ ವಿಶೇಷ ದಿನಗಳಂದು ಆಗಾಗ ಇವರುಗಳ ಮನೆಯಲ್ಲಿ ತಮ್ ತಮ್ಮ ನಂಟರುಗಳ ಫೋನ್ ಕಾಲ್ ಗಳಿಗೆ ಅದೆಷ್ಟು ಜನ..!! ಅದೆಷ್ಟು ಹೊತ್ತು ಸರದಿಯಲ್ಲಿ ಕಾದು ನಿಂತು ಮಾತಾಡಿದ ಉದಾಹರಣೆಗಳಿಲ್ಲ..?! ಅಲ್ಲಿ ನಡೆದ ಅದೆಷ್ಟು ಸ್ವಾರಸ್ಯಕರ ಘಟನೆಗಳಿಲ್ಲ..?? ಫೋನಿಗಾಗಿ ಮುತ್ತಿಕ್ಕುವ ಜನದಂಗುಳಿ ಕಂಡು ಇತ್ತ ಹೂಂ ಅಥವಾ ಊಹೂಂ ಅನ್ನಲಾರದ ಇಕ್ಕಟ್ಟು ಮತ್ತು ಬಿಕ್ಕಟ್ಟಿನ ಪರಿಸ್ತಿತಿ ಆ ಮೂರು ಮನೆಗಳದ್ದು. ಇರಲಿ ಅದರ ಬಗ್ಗೆ ಮತ್ತೊಮ್ಮೆ ಬರೆಯುವ.
ಸಂಪರ್ಕ ವ್ಯವಸ್ಥೆಯಲ್ಲಿ ಈ ಮೂರು ದೂರವಾಣಿಗಳು.. ಆಪದ್ಭಾಂದವರಂತೆ.. ಅಪರೂಪದ ಸುದ್ದಿಗಳಿಗೆ.. ಅತ್ಯಾವಶ್ಯಕ ಸುದ್ದಿಗಳಿಗೆ.. ತುರ್ತು ಸುದ್ದಿಗಳಿಗೆ ವರದಾಯಕವಾಗಿದ್ದವು ಅನ್ನೋದು ಬಿಟ್ಟರೆ.. ಪತ್ರಗಳ ಮೂಲಕ ನಡೆಯುತ್ತಿದ್ದ ಸಂವಹನಕ್ಕೆ ಆಗಲೂ ಪರ್ವಕಾಲ. ಈಗಿನ ಕಾಲಕ್ಕೆ ಅದು ಅಷ್ಟೇನೂ ಹಿಂದಿನ ಮಾತೂ ಅಲ್ಲ. ೨೦೦೦-೨೦೦೧ ನೆ ಇಸವಿಯ ಸಾಲಿಗೂ ಈ ಪ್ರಕ್ರಿಯೆ ಅಷ್ಟೇ ನಳ ನಳಿಸುತ್ತಿತ್ತು ಅನ್ನೋಕೆ ಯಾವ ಸಂಶಯವೂ ಇಲ್ಲ. ನಮ್ಮೂರಿನ ಅದೆಷ್ಟು ಜನರ ಮಾತುಗಳಿಗೆ ನಾನು ಕಿವಿಯಾಗಿಲ್ಲ..?? ಅದೆಷ್ಟು ಜನರಿಗೆ ನಾನು ನನ್ನ ಕೈಯಾರೆ ಪತ್ರ ಬರೆದು ಕೊಟ್ಟಿಲ್ಲ.?? ಅವರು ಹೇಳ್ತಾ ಹೇಳ್ತಾ ಹೋಗೋಕೆ.. ನಾನು ಬರೀತಾ ಬರೀತಾ ಹೋಗೋಕೆ.. ಅದೆಷ್ಟು ಜನರ ಅದೆಷ್ಟು ನೋವು ನಲಿವುಗಳು.. ಸಿಹಿ ಕಹಿಗಳು ನನಗೆ ಆಗಲೇ ಪರಿಚಯವಾಗಿಲ್ಲ..??
ಪತ್ರ ಬರೆಯುವಿಕೆ ಅಂತಹುದ್ದೊಂದು ಮುದ ಕೊಡುತ್ತಿತ್ತು. ಅದಕ್ಕಿಂತಲೂ ಮುದ ಕೊಡುವ ಮತ್ತೊಂದು ಅಂಶವೆಂದರೆ ಈ ಗ್ರೀಟಿಂಗ್ ಕಾರ್ಡುಗಳ ಗೀಚುವಿಕೆ. ಪತ್ರಗಳಾದರು ಒಮ್ಮೆ ಬಂದು ತಲುಪಿದುದರ ಬೆನ್ನಿಗೋ..?? ತಿಂಗಳಿಗೂ.?? ಮೂರು ತಿಂಗಳಿಗೋ ಒಮ್ಮೆ ಚಲಾವಣೆಯಾಗುತ್ತಲೇ ಇತ್ತೆನ್ನಿ.. ಆದರೆ ಈ ಗ್ರೀಟಿಂಗ್ ಕಾರ್ಡುಗಳ ಜನನ ಡಿಸೆಂಬರ್ ತಿಂಗಳ ಕೊನೆಯ ವಾರ ಬಿಟ್ಟರೆ.. ಅಪರೂಪಕ್ಕೊಮ್ಮೆ ಬೇರೆ ವಿಶೇಷ ಸಂಧರ್ಭಗಳಿಗೆ ಮಾತ್ರ. ಈ ಗ್ರೀಟಿಂಗ್ ಕಾರ್ಡುಗಳಿಗೂ.. ನನ್ನ ಬಾಲ್ಯಕ್ಕೂ.. ನಿತ್ಯ ಹರಿದ್ವರ್ಣದ ನೆನಪು.
ಹೈಸ್ಕೂಲ್.. ನಮ್ಮ ಗ್ರೀಟಿಂಗ್ ಕಾರ್ಡುಗಳನು ಹಂಚುವ ಪ್ರಕ್ರಿಯೆಯ ಪರಮಾವಧಿಯನ್ನ ಕಂಡ ಪರ್ವಕಾಲ. ಆ ದಿನಗಳಲ್ಲಿ ನಾವು ಅದೆಷ್ಟೋ ದಿನಗಳಿಂದ ಕೂಡಿಟ್ಟ ಅದೆಷ್ಟು ಬೆರಳೆಣಿಕೆಯ ರೂಪಾಯಿಗಳಲ್ಲಿ.. ನಾಲ್ಕಾಣೆ, ಎಂಟಾಣೆಗೊಂದರಂತೆ ಸಿಗುತ್ತಿದ್ದ.. ಹೂವಿನ.. ಮರಗಳ.. ಗೊಂಬೆಗಳ.. ದೇವರ ಚಿತ್ರದ.. ವಿವೇಕಾನಂದರ ಚಿತ್ರದ ಅದೆಷ್ಟು ಗ್ರೀಟಿಂಗ್ ಕಾರ್ಡುಗಳನ್ನು ಕೊಂಡು ಗೀಚಿ ನಮ್ಮದೇ ಶಾಲೆಯ.. ನಮ್ಮದೇ ತರಗತಿಯ.. ನಮ್ಮದೇ ಬೆಂಚಿನ ಅದೆಷ್ಟು ಹುಡುಗರಿಗೆ ಹಂಚಿಲ್ಲ.?? ಅದರಲ್ಲೊಂದು ಸುಖ ಸಿಗುತ್ತಿತ್ತು.. ಅದ ಹೇಳಲು ನನ್ನಲ್ಲಿ ಪದವಿಲ್ಲ. ಹುಡುಗಿಯರಿಗಾದರೆ ಯಾವುದಾದರು ಹೂವಿನ.. ಬಹಳ ಹತ್ತಿರದ ತುಂಬಾ ಆಪ್ತ ಗೆಳತಿ ಎನಿಸಿದರೆ ಗುಲಾಬಿ ಹೂವಿನ.. ಹುಡುಗರಿಗಾದರೆ ಮೊಲ ಅಥವಾ ಜೋಡಿ ಪ್ರಾಣಿಗಳ.. ನಮಗಿಂತ ಚಿಕ್ಕವರಿಗೆ ಗೊಂಬೆಗಳ.. ವಿಜ್ಞಾನದ ಟೀಚರ್ ಗಳಿಗೆ ಮರ, ಪ್ರಾಣಿ ಪಕ್ಷಿಗಳ.. ಕನ್ನಡ & ಇನ್ನಿತರ ಭಾಷೆಗಳ ಟೀಚರ್ ಗಳಿಗೆ ದೇವರ ಚಿತ್ರದ ಅಥವಾ ಇನ್ನ್ಯಾವುದೇ ಉಕ್ತಿಯುಳ್ಳ ಕಾರ್ಡು.. ಸ್ವಲ್ಪ ಭಯ ಸೃಜಿಸಿದ್ದ ಮೇಷ್ಟರಿಗೆಲ್ಲ ವಿವೇಕಾನಂದರ ಚಿತ್ರವುಳ್ಳ ಕಾರ್ಡುಗಳನ್ನು ನೀಡುತ್ತಿದ್ದೆವು.
ನಾಲ್ಕಾಣೆ.. ಎಂಟಾಣೆಗೆ ಸಿಗುತ್ತಿದ್ದ ಆ ಕಾರ್ಡುಗಳಿಗೆಲ್ಲ ಜಪ್ಪಯ್ಯ ಎಂದರೂ ಎನ್ವಲಪ್ ಕವರ್ಗಳು ಸಿಗುತ್ತಿರಲಿಲ್ಲ.. ಅವಕ್ಕೆ ಖುದ್ದು ನಾವೇ ನಮ್ಮ ಅನ್ ರೂಲ್ದ್ ನೋಟ್ ಪುಸ್ತಕದ ಅಚ್ಚ ಬಿಳಿ ಹಾಳೆಯ ಹರಿದು.. ಆ ಚಿಕ್ಕಳತೆಯ ಗ್ರೀಟಿಂಗ್ ಕಾರ್ಡಿಗೆ ಬೇಕಾದ ಅಳತೆಗ ಆ ಹಾಳೆಯನ್ನು ಮಡಚಿ ಕತ್ತರಿಸಿ.. ಅಮ್ಮ ಅನ್ನ ಬಸಿಯುವುದನ್ನೇ ಕಾದು.. ಆ ಸುಡು ಸುಡು ಬಿಸಿ ಅನ್ನದ ಗಂಜಿಯೋ.. ಇಲ್ಲವೋ ಹಳೆಯ ತಂಗಳನ್ನದ ಅಗುಳೋ.. ಇಲ್ಲವೇ ರಾಗಿ ಮುದ್ದೆಯ ತುಣುಕನ್ನೋ ಬಳಸಿ ಬಹಳ ನೀಟಾಗಿ ಹರಿದ ಪೇಪರ್ ತುಣುಕುಗಳನ್ನ ಅಂಟಿಸಿ.. ನಾವೇ ಎನ್ವಲಪ್ ಕವರುಗಳನ್ನು ಬಹಳ ನಾಜೂಕಾಗಿ ತಯಾರಿಸುತ್ತಿದ್ದೆವು. ಆ ಅನುಭವಗಳು & ಅದರ ಹಿತವೇ ಬೇರೆ ಬಿಡಿ. ತಯಾರಾದ ಎನ್ವಲಪ್ ಕವರುಗಳ ಮೇಲೆ ಬಣ್ಣದ ಪೆನ್ಸಿಲ್ ಅಥವಾ ಸ್ಕೆಚ್ ಪೆನ್ ಗಳನ್ನೂ ಬಳಸಿ ಹೂವಿನ.. ಅಥವಾ ರಂಗೋಲಿಯ ಅಥವಾ ತೋಚದ ರೀತಿಯ ನಾನಾ ರಂಗೋಲಿಯನ್ನು ಬಿಡಿಸಿ ಬಹಳ ಸುಂದರವಾಗಿ ತಯಾರಿ ಮಾಡಿಟ್ಟು ಕೊಳ್ಳುತ್ತಿದ್ದೆವು.. ಆ ಎನ್ವಲಪ್ ಕವರುಗಳಿಗೆ ನಾನಾ ಬಗೆಯ ಬಾರ್ಡರ್ ಗೆರೆಗಳನ್ನ ಕೂಡ ಎಳೆಯುತ್ತಿದ್ದೆವು. ಇನ್ನು ಎಂಟಾಣೆ ಯ ಆ ಬರಿಯ ಗ್ರೀಟಿಂಗ್ ಕಾರ್ಡಿನ ಒಳಗೆ ನಾವು ಅಚ್ಚ ಬಿಳಿ ಬಣ್ಣದ ಹಾಳೆಯ ತುಣುಕೊಂದನ್ನಿರಿಸಿ ನಮಗೆ ತೋಚಿದ ರೀತಿಯಲ್ಲಿ ಕವನವೋ ಅಥವಾ ಶುಭಾಷಯ ಬರಹವನ್ನೂ ಗೀಚುತ್ತಿದ್ದೆವು. ಆ ಹೊತ್ತಿಗೆ ಚಿಕ್ಕಂದಿನಿಂದಲೇ ಚುಟುಕುಗಳನ್ನು ಗೀಚಿ ಅಭ್ಯಾಸವಿದ್ದ ನಾನು ಹಲವಾರು ಹನಿಕವನ ಗಳನ್ನೂ ಗೀಚಿ ಕೊಡುತ್ತಿದ್ದೆ. ವಿಶೇಷವೆಂದರೆ ಒಬ್ಬರಿಗೆ ಗೀಚಿದ ಕವನವನ್ನ ಮತ್ತೊಬ್ಬರಿಗೆ ಗೀಚುತ್ತಿರಲಿಲ್ಲ.
ಗ್ರೀಟಿಂಗ್ಸ್ ಕೊಟ್ಟಾಯಿತಲ್ಲ.. ಇನ್ನು ಯಾರ್ಯಾರು.. ಯಾರ್ಯಾರಿಗೆ.. ಯಾವ್ ಯಾವ ತರಹದ ಗ್ರೀಟಿಂಗ್ ಗಳಿಗೆ ಏನೇನು ಗೀಚಿ ಕೊಟ್ಟಿರಬಹುದೆನ್ನುವ ಕೌತುಕ. ಒಬ್ಬಬ್ಬರೂ ಒಬ್ಬೊಬ್ಬರದನ್ನು ಇಸಿದುಕೊಂಡು.. ಕೊಡದಿದ್ದರೆ ಕಸಿದು ಕೊಂಡು ಓದಿ ಸಂತಸ ಪಡುತ್ತಿದ್ದೆವು. ಅದರಲ್ಲೂ ಹುಡುಗಿಯರಿಗೆ ಬರುತ್ತಿದ್ದ ಕಾರ್ಡುಗಳ ಮೇಲೆ ಎಲ್ಲಿಲ್ಲದ ಆಸಕ್ತಿ. ಹುಡುಗ ತನ್ನ ನೆಚ್ಚಿನದೆಂದು ಗುರುತು ಮಾಡಿಟ್ಟುಕೊಂಡ ಹುಡುಗಿಗೆ ಯಾವ ರೀತಿಯ ಗ್ರೀಟಿಂಗ್ ಗೆ ಏನು ಗೀಚಿ ಕೊಟ್ಟಿರ ಬಹುದೆಂಬುದರಿಂದ ಹಿಡಿದು..ಬೇರೆ ತರಗತಿಯ ಅಥವಾ ಬೇರೆ ಸೆಕ್ಷನ್ನಿನ್ನ ಹುಡುಗ ಕೊಟ್ಟ ಗ್ರೀಟಿಂಗ್ ನೊಳಗೆ ಏನಿರಬಹುದು ಎಂಬ ಕೆಟ್ಟ ಕುತೂಹಲದ ಹೊಟ್ಟೆ ಕಿಚ್ಚಿನ ಭಾವದವರೆಗೂ ನಮ್ಮ ಅನ್ಯರ ಗ್ರೀಟಿಂಗ್ ಗಳನ್ನ ಓದುವ ಅತಿ ಕೆಟ್ಟ ಮತ್ತು ಅತಿ ಇಷ್ಟದ ಚಟ ಮುಂದುವರೆಯುತ್ತಿತ್ತು, ಅಪ್ಪಿ ತಪ್ಪಿ ಹುಡುಗ ಹುಡುಗಿ ತಮಗೆ ಬಂದ ಗ್ರೀಟಿಂಗ್ ಕಾರ್ಡುಗಳಲ್ಲಿ ನಾವು ಅನುಮಾನಿಸುವಂತೆ ಅಥವಾ ಚೇಡಿಸುವಂತೆ ಯಾವುದಾದರೂ ಅಂಶ ಕಂಡು ಬಂತೋ.. ಅವತ್ತಿಂದ ಅವರಿಬ್ಬರ ಹೆಸರಿನಲ್ಲೊಂದು ಅಮರ ಪ್ರೇಮ ಕಾವ್ಯ ಆರಂಭವೆಂತಲೇ ಅರ್ಥ. ಮತ್ತೊಂದು ವಿಚಾರವಿದೆ.. ಶಾಲೆ ಬಿಟ್ಟ.. ಅಥವಾ ಶಾಲೆಗೇ ಬಾರದ ಅಥವಾ ಶಾಲೆಯವನಲ್ಲದ ಹುಡುಗನಿಂದ.. ಹುಡುಗಿಯರಿಗೆ ಪೋಸ್ಟ್ ನಿಂದ ಬರುವ ಅಥವಾ ಖುದ್ದಾಗಿ ಬರುವ ಗ್ರೀಟಿಂಗ್ ಕಾರ್ಡುಗಳಿಗೆಲ್ಲ ಹೆಡ್ ಮಾಸ್ಟರ್ ಕೊಠಡಿಯಲ್ಲಿ ಚರ್ಚೆ ಮತ್ತು ತನಿಖೆ ನಡೆಯುತ್ತಿತ್ತು. ಆ ಹುಡುಗಿಯರ ಪಾಡು ಹೇಳ ತೀರಲಾರದ್ದು. ಅವರುಗಳ ಮನೆಯವರಿಗೆ ಈ ವಿಚಾರ ಗೊತ್ತಾಗಿ ಎಷ್ಟೋ ಬಾರಿ ರಾದ್ಧಾಂತಗಳಾಗಿದ್ದುಂಟು. ಆದ್ರೆ ತನ್ನ ಜೊತೆ ಓದುವ ಹುಡುಗ ಕೊಟ್ಟ ಗ್ರೀಟಿಂಗ್ ಗಳಿಗೆ ಅಷ್ಟು ಸಮಸ್ಯೆ ಇರುತ್ತಿರಲಿಲ್ಲ.
ಬರಿ ಸ್ಕೂಲ್ ನಲ್ಲಿ ಮಾತ್ರವಲ್ಲದೆ ಆಗ ನಾನು.. ಅಜ್ಜಿಯ ಊರಿಗೆ.. ಮಾಮನ ಮಕ್ಕಳಿಗೆ.. ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಿಗೆ.. ಊರು ಬಿಟ್ಟು ಬೇರೆ ಊರು ಸೇರಿದ ಆತ್ಮೀಯರಿಗೆ.. ನಮ್ಮ ಶಾಲೆ ಬಿಟ್ಟು ಬೇರೊಂದು ಪೇಟೆಯಲ್ಲಿ ಹಾಸ್ಟೆಲ್ ಸೇರಿ ಕಾನ್ವೆಂಟ್ ಓದುತ್ತಿದ್ದ ಗೆಳೆಯರಿಗೆ.. ಟ್ರಾನ್ಸ್ ಫಾರ್ ಆದ ಟೀಚರ್ ಗಳಿಗೆ.. ಇನ್ನು ಯಾರ್ಯಾರಿಗೆಲ್ಲ ಗ್ರೀಟಿಂಗ್ಸ್ ಕಳಿಸುತ್ತಿದ್ದ ನೆನಪು ಈಗಲೂ ಹಚ್ಚ ಹಸಿರು. ಕಾಲ ಕ್ರಮೇಣ ಎಲ್ಲವೂ ಬದಲಾಗಬೇಕ್ಕಾದ್ದು ಅನಿವಾರ್ಯವೇ ಆಗೋಯ್ತು. ಈಚೆಗೆ ಐದಾರು ವರ್ಷಗಳಲ್ಲಿ ಯಾರಿಗೂ ನಾನೊಂದು ಗ್ರೀಟಿಂಗ್ ಕಳಿಸಿಲ್ಲ.. ನನಗೆ ನೆನಪಿದೆ. ಅದರ ಜೊತೆ ಗ್ರೀಟಿಂಗ್ ಕಳಿಸುವ ಹಂಬಲವೂ ಇದೆ. ಮೊಬೈಲ್ ಇಂದ ಒಂದು ಮೆಸೇಜು ಕಳಿಸುವಷ್ಟು.. ಫೇಸ್ಬುಕ್ ನಲ್ಲಿ ಒಂದು ಸ್ಟೇಟಸ್ ಹಾಕುವಷ್ಟು ಸಮಯವಿಲ್ಲದ ಬಿಜಿ ಜೀವನದಲ್ಲಿ ಅಂತ ಹಂಬಲಗಳಿಗೆ ಅವಲಂಬನೆಯೇ ಇರುವುದಿಲ್ಲ ಅನ್ನೋದು ಅಷ್ಟೇ ನಿಜ.
ಕಲಾಳಿಗೆ ಕಳಿಸೋಕ್ಕೆಂದು ಒಂದು ಗ್ರೀಟಿಂಗ್ ಕೊಂಡು ತಂದದ್ದಾಗಿದೆ.
ಅನೇಕ ಕಟಿಂಗ್.. ವಿವಿಧ ನಮೂನೆಯ ಹೂಗಳ ಚಿತ್ರಗಳನ್ನೊಳಗೊಂಡ ಆ ಗ್ರೀಟಿಂಗ್ ನೋಡೋಕೆ ಸ್ವಲ್ಪ ಚೆನ್ನಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಬಹಳ ದಿನಗಳ ನಂತರ ಗ್ರೀಟಿಂಗ್ ಬರಯುವ ಹಠ ಮಾಡಿರುವೆ. ಬರೆದು ಕಳಿಸುವುದು ಬಾಕಿ ಇದೆ. ನಾನು ಖಂಡಿತ ಬರೆದು ತೀರುವವನೆ ಖಾತ್ರಿ ಇದೆ. ನೋಡುವ ಮುಂದೆ ಸಾಧ್ಯವಾದಲ್ಲಿ ನಿಮ್ಮೆಲ್ಲರಿಗೂ ಗ್ರೀಟಿಂಗ್ ಕಳುಹಿಸುವ ಬಯಕೆ ಇದೆ. ಕೇಳಿದ್ರೆ ಅಡ್ರೆಸ್ಸ್ ಕೊಡ್ತೀರಲ್ವಾ..??
ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.. :) :)
ಸೂಪರ್ಬ್ ನಾಯ್ಕರೇ ನಿಮ್ಮ ಬರಹ... ಓದಿ ತುಂಬಾ ಖುಷಿಯಾಯಿತು.ನಿಮ್ಮ ಈ ಲೇಖನ ಓದಿದ ಮೇಲೆ ನನಗೂ ಬಾಲ್ಯದ ಹಳೆಯ ನೆನಪುಗಳು ಮತ್ತೆ ನೆನಪಾಯಿತು.ನಿಮ್ಮಿಂದ ಇನ್ನು ಇನ್ನು ಇಂಥ ಉತ್ತಮ ಬರಹಗಳು ಮೂಡಿ ಬರಲಿ.
ReplyDeleteಹೊಸವರ್ಷದ ಹಾರ್ದಿಕ ಶುಭಾಶಯಗಳು ನಿಮಗೆ.
ರಾಜೇಶ್ ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು.
Deleteಸತೀಶ್ ,
ReplyDeleteಒಳ್ಳೆಯ ಬರಹ ಕಣ್ರಿ...
ಇಲ್ಲಿ ತನಕ ನಿಮ್ಮ ಕಥೆಯಗಳನ್ನಷ್ಟೇ ಓದಿದ್ದೆ....
ಒಳ್ಳೆಯ ಬರಹ...
ನನಗೂ ಗ್ರೀಟಿಂಗಿನ ನೆನಪು ಬಂತು..ಜೊತೆಗೊಂದಿಷ್ಟು ಸಂಕ್ರಾಂತಿ ಕಾಳು ಬೇರೆ..
ನೆಲ್ಲಿಕಾಯಿ ಸೊಪ್ಪನ್ನು ಅಂಟಿಸಿ ಮಾಡುತ್ತಿದ್ದ ಗ್ರೀಟಿಂಗಂತೂ ನನಗೆ ತುಂಬಾ ಇಷ್ಟ...
ಜೊತೆಗೆ ಆಗ ಕ್ರಿಕೇಟಿಗರ ಫೋಟೊ ಇದ್ದ ಶುಭಾಷಯ ಪತ್ರಕ್ಕೆ ಕಿತ್ತಾಡುವುದೂ ಇತ್ತು...
ಚೆನಾಗಿದೆ..
ಬರೆಯುತ್ತಿರಿ..
ನಮಸ್ತೆ..
ಚಿನ್ಮಯ..
Deleteಬರೆಯೋ ಧಾವಂತದಲ್ಲಿ ಇನ್ನೂ ಒಂದಿಷ್ಟು ಹಾಸಿ ಸಿಹಿ ಸಿಹಿ ನೆನಪುಗಳು ಬಿಟ್ಟು ಹೋಗಿವೆ.. ಅರಳೀ ಎಲೆ.. ಗುಲಾಬಿ ಹೂವಿನ ದಳ.. ನವಿಲು ಗರಿ.. ಚಿಟ್ಟೆಗಳ ರೆಕ್ಕೆ..
ಇನ್ನೂ ಏನೇನೊ ಬಳಸಿ ಬಹಳ ನಾಜೂಕಾಗಿ ತಯಾರಿ ಮಾಡ್ತಾ ಇದ್ವು. ಎಲ್ಲ ಒಂದು ಕಾಲ
ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು ಚಿನ್ಮಯ್. ಆಗಾಗ ಬಂದು ಹೀಗೆ ಹುರುದುಂಬಿಸಿ. :)
ಸತೀಶ್,
ReplyDeleteತುಂಬಾ ಚೆನ್ನಾಗಿದೆ, ನನ್ನ ಬಾಲ್ಯದ ಫ್ಲ್ಯಾಷ್ಬ್ಯಾಕ್ ನೋಡಿದ ಹಾಗಾಯ್ತು, ಕೆಲವೊಮ್ಮೆ ನಾವೇ ಗ್ರೀಟಿಂಗ್ ಕಾರ್ಡ್ ತಯಾರು ಮಾಡಿದ್ದೂ ಇತ್ತು :)
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನಿಮಗೂ ಕೂಡ :)
ಶ್ರೀಕಾಂತ್..
Deleteಸ್ವಾಗತ ನನ್ನ ಬ್ಲಾಗ್ ಮನೆಗೆ..
ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ಬರ್ತಾ ಇರಿ.. ನೆನಪಿನ ಬುತ್ತಿಯಲಿ ಇನ್ನು ಖಾಲಿಯಾಗದ ಸಾವಿರ ತುತ್ತುಗಳಿವೆ.:)
ಸೊಗಸಾದ ಬರಹ. ನಿಮ್ಮ ಬರಹ ಓದುತ್ತಿದ್ದಂತೆ ಮನಸ್ಸು ಅರಿವಿಲ್ಲದಂತೇ ನನ್ನದೇ ಬಾಲ್ಯಕ್ಕೆ ಓಡಿತು. ಹೌದು, ಗ್ರೀಟಿಂಗುಗಳನ್ನು "ತಯಾರಿಸೋದರಲ್ಲೇ" ಅದೆಷ್ಟು ಖುಷಿಯಿತ್ತು, ಭಾವದ ಸಿರಿವಂತಿಕೆಯಿತ್ತು. ಅದೆಲ್ಲವನ್ನೂ ಸೊಗಸಾಗಿ ನಿಮ್ಮೀ ಬರಹದಲ್ಲಿ ಕಟ್ಟಿಕೊಟ್ಟಿದ್ದೀರಿ! ಮನಸ್ಸಿಗೆ ಮುದಕೊಟ್ಟ ಆಪ್ತವಾದ ಬರಹ.
ReplyDeleteಮನುನಾಥ್ ಸಾರ್..
Deleteನಿಮ್ಮನ್ನ ನನ್ನ ಬ್ಲಾಗ್ ನಲ್ಲಿ ನೋಡಿ ತುಂಬಾ ಖುಷಿಯಾಯ್ತು.
ನನ್ನ ಬ್ಲಾಗ್ ನ ವಿಚಾರವನ್ನ ನಾನೇ ನಿಮ್ಮ ಮುಂದಿಡೋಣ ಅಂತಿದ್ದೆ. ನೀವೇ ಬಂದು ಅಚಾನಕ್ ಆಶ್ಚರ್ಯಕರ ಸಿಹಿ ಕೊಟ್ರಿ.
ತುಂಬಾ ಖುಷಿ ಆಯ್ತು ಸಾರ್. ಆಗಾಗ ಬರ್ತಾಇರಿ. ನಿಮ್ಮ ಸಲಹೆ ಮತ್ತು ಮಾರ್ಗದರ್ಶನ ಸದಾ ನಮಗೆ ಬೇಕಿದೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
"ಕಾಲಕ್ಕೆ ತಕ್ಕಂತೆ ಕುಣಿಯಬೇಕು.." ಅಣ್ಣಾವ್ರು ಹೇಳಿದ ಹಾಡು...ಕಾಲ ಬದಲಾದಂತೆ ತಂತ್ರಜ್ಞಾನವು ದಾಂಗುಡಿ ಇಡುತ್ತ ಮುನ್ನುಗಿ ಬರುತ್ತದೆ ಆದ್ರೆ.ಹಳೆಯದನ್ನು ಮರೆಯಲಾಗದು. ಅಂತಹ ಒಂದು ಸಂಚಿಕೆ ನಿಮ್ಮ ಬರಹ...ಸೊಗಸಾಗಿದೆ..
ReplyDeleteಶ್ರೀ ಸಾರ್..
Deleteಮತ್ತೊಂದು ಚೆಂದದ ಪ್ರತಿಕ್ರಿಯೆ.
ನಿಮ್ಮ ಈ ಬೆನ್ನು ತಟ್ಟುವಿಕೆಯೇ ನಮ್ಮ ಮುಂದಿನಬರಹಕೆ ಸ್ಫೂರ್ತಿ. ಇದು ನಿರಂತರವಿರಲಿ ಸಾರ್..
ಬರ್ತಾ ಇರಿ. ಧನ್ಯವಾದಗಳು.
ಆ ಬಾಲ್ಯದ ಗ್ರೀಟಿಂಗ್ ಕಾರ್ಡುಗಳು ಇಂದೇಕೋ ಕಡಿಮೆಯಾಗುತ್ತಿವೆ..ಆ ಚಂದದ ಕಾರ್ಡಿನಲ್ಲಿ ಇರುವ ಅಂದದ ಶುಭಾಶಯಗಳ ಸೊಗಸೇ ಬೇರೆ
ReplyDeleteಪದ್ಮಾ ಅವರೇ ನನ್ನ ಬ್ಲಾಗ್ ಗೆ ಸ್ವಾಗತ.
ReplyDeleteನಿಜ ಗ್ರೀಟಿಂಗ್ ಕಾರ್ಡುಗಳ ಸೊಗಸೇ ಬೇರೆ. ಈಗಿನ ಯಾವ ಆಧುನಿಕ ತಂತ್ರಜ್ಞಾನವೂ ಅದರ ಮದುರ ಅನುಭೂತಿಯನ್ನು ಮರಳಿ ಗಿಟ್ಟಿಸಿ ಕೊಡುವಲ್ಲಿ ಸಾಧ್ಯವಿಲ್ಲ.
ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ಬರ್ತಾ ಇರಿ. :) :)
ನಿಮ್ಮ ಲೇಖನ ಹಳೆಯ ನೆನಪುಗಳನ್ನು ಕೆದಕಿ ಹಾಕಿತು....ಸುಂದರ ಬರಹ...
ReplyDelete