Tuesday 8 January 2013

ಒಂದು ಬೆರಳಿನ ಸುತ್ತ...

"ದಾರಿ ಸವೆಯುವ ತನಕ ಮೆರವಣಿಗೆ.. ಬೆರಳು ಸವೆಯುವ ತನಕ ಬರವಣಿಗೆ"

ಈಗಷ್ಟೇ ಓದಿ ಮುಗಿಸಿಟ್ಟ ಜೋಗಿ ಕಾಲಂ.. ಜೋಗಿಯವರ ಅಂಕಣ ಬರಹಗಳ ಸಂಕಲನ ಪುಸ್ತಕದ ಬೆನ್ನುಡಿಯಲ್ಲಿ ಕಡೆಯದಾಗಿ ನಾವು ಓದಬಹುದಾದ ಅವರ ಅಂಕಣ ಬರಹದ ಒಂದು ತುಣುಕು ಈ ಸಾಲು. ನನ್ನನ್ನು ಬಹಳ ಸೆಳೆದ ಸಾಲು. ಬಹಳ ಅರ್ಥವಿರುವ ಸಾಲು. ನಿಜ ಬರೆಯುವವರಿಗೆಲ್ಲ ಆ ಬೆರಳುಗಳೇ ಶಕ್ತಿ. ಮನೆಗೆ ಆಧಾರ ಸ್ತಂಭವಿದ್ದಂತೆ.. ಬರಹಕೆ ಬೆರಳು. ನಮ್ಮ ಅಕ್ಷರಾಭ್ಯಾಸದ ಮೊದಲ ಬಳಪವೇ ಬೆರಳು. ನಮ್ಮ ಯಾವ ಹಿಡಿತಕ್ಕೂ ಬಲವನೀಯುವುದೇ ಬೆರಳು. ನಮ್ಮ ಯಾವ ಉದ್ವೇಗಕ್ಕೂ ಮೊದಲು ನಡುಗುವುದೇ ಬೆರಳು.

ಬೆರಳಿನ ಬಗ್ಗೆ ಯಾಕೇ ಪೀಟಿಕೆ ಅಂದ್ರೆ.. ಯಾಕೋ ಜೋಗಿ ಕಾಲಂ ಓದಿ ಮುಗುಸಿತ್ತಿದ್ದಂತೆ ಇದ್ದಕ್ಕಿದ್ದಂತೆ ನೆನಪಾದ ನನ್ನ ತೋರು ಬೆರಳು. ಅದಕಾದ ಅಪಘಾತಗಳ ನೆನಪುಗಳೆಲ್ಲ ಸಾಲಾಗಿ ಸರದಿಯಲ್ಲಿ ಸುಳಿದು ಹೋದ ಸುಸಂಧರ್ಭಕ್ಕೆ ಅದನ್ನು ಬರೆದೆ ತೀರಬೇಕೆನ್ನುವ ಹಠ ಮನಸಿನಲ್ಲಿ ಮನೆಮಾಡಿ ಜೀಕುತ್ತ ನಿಂತದ್ದು ಕಾರಣ. ಅದರಲ್ಲೂ ಬರೆಯೋರಿಗೆ ಮುಖ್ಯ ಹೆಬ್ಬೆರಳು ಮತ್ತು ತೋರುಬೆರಳು. ಬಹಳ ಜನರ ಬರವಣಿಗೆಗೆ ಈ ಎರಡು ಬೆರಳುಗಳೇ ಜೀವನಾಡಿ. ಅಂತಹ ತೋರು ಬೆರಳಿನ ಮೇಲಿನ ಪ್ರೀತಿಯ ಹಿಂದಿನ ಸಣ್ಣ ಮೆಲುಕು ಈ ಬರಹ. ಬೆರಳು.. ಈ ತೋರು ಬೆರಳಿನ ಹಿಂದೆ ಅಗಾಧವಾದ ನೆನಪುಗಳುಂಟು.. ಬಾಲ್ಯದ ಚೇಷ್ಟೆಗಳುಂಟು.

ನನಗೆ ಚಿಕ್ಕನಿಂದಲೂ ಒಂದು ಅಭ್ಯಾಸ.. ಕೆಟ್ಟದ್ದೇ ಅನ್ನಬಹುದು. ಮೂಗಿನ ಹೊಳ್ಳೆಗಳೊಳಗೆ ಬೆರಳ ತುರುಕಿ ಬ್ರಹ್ಮಾಂಡವ ಕೆದಕೋದು. ಅದರಲ್ಲಿ ಸಿಗುತ್ತಿದ ಮಜಾಕ್ಕೆ ಏನು ಹೆಸರಿಡಬೇಕೋ ತೋಚುತ್ತಿಲ್ಲ. ಮೂಗಿನ ಎರಡೂ ಹೊಳ್ಳೆಗಳ ಒಳಗೂ ತೋರು ಬೆರಳ ತುರುಕಿ ಅನವರತ ಕೆದಕುತ್ತಲೇ ಇರುತ್ತಿದ್ದೆ. ಏನೆಂದು ಕೇಳಬೇಡಿ.. ನನ್ನ ಮೂಗು ರಾಯಚೂರಿನ ಅಥವಾ ಕೋಲಾರದ ಚಿನ್ನದ ಗಣಿಯಲ್ಲ..!! ಎಲ್ಲರಿಗೂ ತಮ್ಮ ಮೂಗಿನೊಳಗೆ ಏನು ಸಿಗಬಹುದೋ ನನಗೂ ಅದೇ ಸಿಗುತ್ತಿತ್ತು. ಆದ್ರೆ ನಾನು ಎಲ್ಲರಂತಲ್ಲವಲ್ಲ..!! ಹಾಗಾಗಿ ಸದಾ ಕೆದಕುತ್ತಾ ಮೂಗು ಶುದ್ಧಿ ಮಾಡುತ್ತಲೇ ಇದ್ದೆ. 


 ಮೂಗನು ಶುದ್ಧಿ ಮಾಡೋದು ಒಳ್ಳೆಯ ಪರಿಪಾಠವೇ.. ಆದರೆ ಅದಕ್ಕಾಗಿ ಸದಾ ನಮ್ಮ ಬೆರಳನ್ನು ಮೂಗಿನೊಳಗೆ ತುರುಕಿಕೊಂಡು ಕೂರುವುದಿದೆಯಲ್ಲ ಅದೊಂಥರಾ ಚಟ. ಕೆಟ್ಟ ಚಟ. ಅದರಿಂದೇನು ಸಿಗದಿದ್ದರೂ.. ಅದರಿಂದೇನೋ ಸಿಗುತ್ತಿತ್ತು. ಈ ಚಟದಿಂದ ನನಗೆ ಸಿಕ್ಕದ್ದು ವಿವರಿಸಲಾಗದ ಉನ್ಮಾತ್ತ ಅನುಭವವೊಂದೇ ಅಲ್ಲ.. ಬೇಸರವೂ ಕೂಡ. ನೋವೂ ಕೂಡ. ನಾ ಬೇಕೆಂದೇ ಕಲಿತ ಚಟವೇನಲ್ಲ ಅದು. ಆದರೆ ನಾನು ಬೇಕು ಬೇಕಾದ ರೀತಿ ಹಟಕ್ಕೆ ಬಿದ್ದು.. ಅದನು ಬಿಡುವ ಅದೆಷ್ಟೋ ಪ್ರಯತ್ನ ಮಾಡಿದರೂ ತೀರ ಇತ್ತೀಚಿಗೆ ನಾಲ್ಕು ವರ್ಷಗಳ ಹಿಂದಿನ ತನಕ ಬಿಡಲಾರದೆ ಹೋದ ಭೂತ ಅದಾಗಿತ್ತು. ನಾ ಶಾಲೆಯೊಳಗೆ ಕಾಲಿಟ್ಟ ಕೂಡಲೇ ನನ್ನ ಅಚ್ಚು ಮೆಚ್ಚಿನ ಗೆಳೆಯರೆಲ್ಲರೂ ತಮ್ ತಮ್ಮ ಮೂಗುಗಳೊಳಗೆ ಬೆರಳಿಟ್ಟು ನನ್ನನ್ನು ಮೂದಲಿಸುತ್ತಿದ್ದರು. ಅಣಕಿಸಿ ನಗುತ್ತಿದ್ದರು. ಇದು ನನಗೆ ಕೊಳಕನೆಂಬ ಬಿರುದಾಂಕಿತ ನನ್ನಾಗಿ ಮಾಡಿತ್ತು ಎನ್ನುವುದು ಕೂಡ ನಂಬಲೇ ಬೇಕಾದ ಮಾತು.


ಕೆಲವೊಮ್ಮೆ ನನ್ನ ಮೇಲೆ ನನಗೆ ಹೇಸಿಗೆ ಎನಿಸಿ.. ಅದೆಷ್ಟು ಕಷ್ಟಪಟ್ಟು ತಡೆದು ಕೂತಿರುತ್ತಿದ್ದೆ. ಆದರು ಮನಸ್ಸು ಮತ್ತು ಬುದ್ಧಿ ಯಾವತ್ತು ತಟಸ್ಥವಲ್ಲ.. ನನ್ನ ಬೆರಳೂ ಕೂಡ. ನನ್ನ ನಿಯಂತ್ರಣ ತಪ್ಪುವುದೇ ತಡ ನನ್ನ ಬೆರಳು ನನ್ನ ಮೂಗು ಸೇರುತ್ತಿತ್ತು. ಬೇಕರಿಯೊಳಗೆ ನೊಣ ಸೇರಿದಂತೆ. ನಾಯಿಗೆ ಹೇಸಿಗೆ ಎಡೆಗಿನ ಮೋಹದ ಹಾಗೆ. ಕ್ರಮೇಣ ಕಷ್ಟ ಪಟ್ಟು ಹಿಡಿತಕ್ಕೆ ತಂದು ಆ ಖಾಯಿಲೆಯನ್ನು ಪೂರ್ತಿ  ಮಾಡಿಸಿಕೊಳ್ಳುವುದರೊಳಗಾಗಿ ಹರೆಯ ನನ್ನ ಪ್ರೌಡಾವಸ್ತೆಯನ್ನು ನುಂಗುತ್ತ ಬಂದಿತ್ತು. ಹರೆಯದಲ್ಲೂ ಅವರಿವರೆದುರು ಈ ಪರಿಪಾಟ ಚಲಾವಣೆಯಲ್ಲಿಲ್ಲದೇ ಎಲ್ಲರೂ ನನ್ನನ್ನು ವಿಶೇಷವಾಗಿ ನೋಡಲು ಆರಂಭಿಸಿದ್ದರೂ.. ಈ ಹಠ, ಈ ಚಟ ನನ್ನ ಒಂಟಿತನದಲ್ಲಿ ಮಾತ್ರ ಯಾವತ್ತಿಗೂ ನನ್ನ ಬಿಟ್ಟಿರುತ್ತಿರಲಿಲ್ಲ. ನನ್ನ ನೆರಳಿನಂತೆ. ನನ್ನ ಉಸಿರಿನಂತೆ. ಎಲ್ಲದಕ್ಕೂ ಅಂತ್ಯವೊಂದಿದೆಯಲ್ಲಾ.. ಹಾಗೆ ಈ ಚಟಕ್ಕೂ ಒಂದು ಗತಿ ಕಾಣಿಸುವಷ್ಟರಲ್ಲಿ ನನ್ನ ವಯಸ್ಸು ಇಪ್ಪತ್ತು ದಾಟಿರಬೇಕೆಂದು ಬ್ರಹ್ಮ ಲಿಖಿತವಾಗಿತ್ತೇನೋ..?? ಅಂತೂ ನಾನದರಿಂದ ಈಗ ಋಣಮುಕ್ತ.

ಈ ಬೆರಳು ಕೇವಲ ಮೂಗಿನೊಳಗೆ ತುರುಕುವುದಕ್ಕಷ್ಟೇ ಅಲ್ಲ.. ಶಾಲೆಯಲಿ ಪಕ್ಕದಲಿ ಕೂತ ಗೆಳೆಯರನು ತಿವಿಯೋಕೆ.. ಜಿಗುಟೋಕೆ.. ಗಾಳಿಪಟದ ಸೂತ್ರವ ತೋರುಬೆರಳ ತುತ್ತ ತುದಿಯಲಿ ಸುತ್ತಿಸಿ ಗಗನದಂಚಿಗೆ ಎತ್ತರಿಸಿ ಆಡಿಸೋಕೆ.. ಚಾಟಿಯ ಬಿಡಿಯಾಗಿ ಹಿಡಿದು ಬಲವಾಗಿ ಸುತ್ತಿ ಎತ್ತಿ ಜೋರಾಗಿ ಬೀಸಿ ಘುಮ್ ಎನ್ನುವ ಶಬ್ದ ಬರುವ ಹಾಗೆ ತಿರುಗಿಸೋಕೆ.. ಕೇರಮ್  ಆಟದಲಿ ಹಠ ಮಾಡಿ ಕೆಂಪು ರಾಣಿಯ ಹಿಂದೆ ಬಿದ್ದ ಮೋಹಕೆ.. ಬೇಲಿಯೊಳಗಣ ಸಣ್ಣ ಜೇನನು ಓಡಿಸಿ, ಅದರ ಆಯಿಲ್ ಮೆತ್ತಿಕೊಂಡ ಕಾಟನ್ ವೇಸ್ಟ್ ನಂತಿದ್ದ ಗೂಡಿನೊಳಗೆ ತೋರು ಬೆರಳ ಬಿಟ್ಟು ಸಿಹಿ ಒಗರು ಜೇನು ನೆಕ್ಕಿ ಚಪ್ಪರಿಸಿ ಸವಿಯೋಕೆ.. ಆಲೆಮನೆಯ ಅಂಟು ಬೆಲ್ಲವ ತೊಂಡೇ ಕಬ್ಬಿಗೆ [ಎಳೆ ಕಬ್ಬು] ಮೆತ್ತಿಸಿ ಒಂಚೂರು ಬಿಡದೆ ತೋರು ಬೆರಳ ಉಗುರೊಳಗೂ ಕೆರೆದು ತಿಂದು ತೃಪ್ತಿಗೊಂಡದ್ದಕ್ಕೆ.. ಬೇವಿನ ಮರ, ನುಗ್ಗೆ ಮರ, ಹುಣಸೇ ಮರ.. ಮರ ಮರಗಳ ಅಂಟುರಾಳವ ಕೆರೆದು ತೋರು ಬೆರಳಲಿ ಹಿಡಿದು.. ಹರಿದ ಪುಸ್ತಕಗಳ ಹಾಳೆಯ ಹಳೆಯ ನಂಟನು ಭದ್ರ ಪಡಿಸುವ ಸಲುವಾಗಿ ಅಂಟಿಸುತ್ತಿದ್ದ ಸಂಭ್ರಮಕೆ.. ನೊಂದ ಗೆಳೆಯರ ಕಣ್ಣೀರು ಒರೆಸೋಕೆ.. ಕಬ್ಬಿನ  ಬೆಂಡನು ಬೀಡಿಯಂತೆ ಹಿಡಿದು ಮೊದಲು ಘಾಟು ಹೊಗೆ ಕುಡಿದ ಮೊದಲ ಅನುಭವಕೆ.. ಎಳನೀರ ಗಂಜಿಯನು ಕೆರೆದು ತಿಂದದಕೆ..  ಹೊಳೆ ತೀರದ ಮರಳಿನಲಿ ನನ್ನ ಮತ್ತು ಹತ್ತಿಪ್ಪತ್ತು  ಗೆಳೆಯರ ಹೆಸರುಗಳ ಕೂಡಿಸಿ ಬರೆದಾಗ ಸಿಗುತ್ತಿದ್ದ ಸಂತಸಕೆ.. ಹೀಗೆ ಅಸಂಖ್ಯಾತ ಸವಿ ನೆನಪುಗಳಿಗೆ ಈ ತೋರು ಬೆರಳು ಸಾಕ್ಷಿಯಾಗಿ ನಿಲ್ಲುತ್ತದೆ.

ಒಮ್ಮೆ ನಾವೆಲ್ಲಾ ಹೊಳೆಯಲಿ ಈಜಾಡಿ ಎದ್ದು ಮನೆಗೆ ನಡೆದು ಬರುವಾಗ.. ನೆರೆಯಲ್ಲಿದ್ದ ಕಬ್ಬಿನ ಗದ್ದೆಯ ಒಳಗಿಂದ ಎಲ್ಲರೂ ಒಂದೊಂದು ಕಬ್ಬಿನ ಕೋಲು ಮುರಿದು.. ಯಾರು ಬೇಗ ತಿಂದು ಮುಗಿಸುತ್ತಾರೆನ್ನುವ ಸ್ಪರ್ಧೆಗೆ ಇಳಿದು.. ಕಬ್ಬು ತಿನ್ನಲು ಶುರು ಮಾಡಿದ ಎರಡನೇ ನಿಮಿಷಕ್ಕೇ ಅದಾಗಿ ಹೋಗಿತ್ತು..!! ತುಂಬಾ ಹೊತ್ತು ಈಜಾಡಿ ನೆಂದು ಮೃದುವಾಗಿದ್ದ ಕೈ ಬೆರಳುಗಳು. ಐದು ಗೇಣಿನ ಆ ಕಬ್ಬನು ಸುಲಿದು ತಿನ್ನುವಾಗ ಐದೂ ಗೇಣನು ಸೇರಿಸಿ ಸುಲಿದ ಸಿಪ್ಪೆ.. ತೋರು ಬೆರಳಿನ ಬುಡದಿಂದ ಉಗುರು ತುದಿಯವರೆಗೂ ಕೊಯ್ದು.. ಚರ್ಮದೊಂದಿಗೆ ಎದ್ದು ಬಂದಿದ್ದ ಮಾಂಸದ ತುಣುಕು ಜೋಲಾಡುತ್ತಿದ್ದ ದೃಶ್ಯ ನೆನೆಸಿಕೊಂಡಾಗ ಈಗಲೂ ಭಯ ಮೂಡುತ್ತದೆ. ಮಾರಿಯಮ್ಮನ ಮಗ ಮಂಜ ಒಡನೆಯೇ ನನ್ನ ಬೆರಳನ್ನ ಅವನ ಬಾಯಿಯ ಒಳಗೆ ಮುಚ್ಚಿ ಹಿಡಿದಿದ್ದ. ಅವನ ಬಾಯೆಲ್ಲಾ ರಕ್ತ. ಎಲ್ಲರಿಗೂ ಭಯ. ಅದು ರಕ್ತ ಸೋರಿಕೆಯಲ್ಲ.. ರಕ್ತ ಧಾರೆ. ಒಡನೆಯೇ ಒರೆಸಿಕೊಳ್ಳುವುದಕ್ಕೆಂದು ಅರುಣ ತಂದಿದ್ದ ಪಂಚೆಯ ತುದಿ ಹರಿದು ಹರಿದ ಚರ್ಮದ ತುಂಡು & ಬೆರಳನ್ನು ಸೇರಿಸಿ ಕಟ್ಟಿ.. ನಮ್ಮ ಬಳಿ ಇದ್ದ ಸೈಕಲ್ ಒಂದನು ಏರಿ.. ಸರ್ಕಾರಿ ಆಸ್ಪತ್ರೆಗೆ ಹೋಗಿ ಬ್ಯಾಂಡೇಜ್ ಕಟ್ಟಿಸಿ ಕೊಂಡು ಬಂದ ಘಟನೆ ಈಗಲೂ ಕಣ್ಣ ಮುಂದೆ ಹಸಿರೇ. ಅಂದು ಅಮ್ಮನ ಬಾಯಲ್ಲೂ ಮಳೆ.. ಕಣ್ಣಲ್ಲೂ ಮಳೆ. ಇನ್ಮುಂದೆ ಊರ್ ಹುಡುಗರ ಜೊತೆ ಸೇರಕೂಡದು ಅನ್ನುವ ಹಠ. ಅಮ್ಮ ಹಾಗೆ ಗೆರೆ ಎಳೆಯುವುದೂ ನಿರಂತರ.. ನಾವದನು ದಾಟುವುದೂ ನಿರಂತರ. ಈಗಲೂ. ಮಾವಿನ ಕಾಯಿ ಹೆಚ್ಚುವಾಗ.. ಅದಕೆ ಕೊಯ್ಯುವಾಗ.. ಕಬ್ಬು ಕಡಿಯುವಾಗ ಬೆರಳುಗಳಿಗಾದ ಗಾಯಗಳಿಗೆ ಲೆಕ್ಖವಿಟ್ಟಿದ್ದರೆ ಗಾಯಗಳ ಲೆಕ್ಖದಲಿ ಇಂದು ಗಿನ್ನೆಸ್ ದಾಖಲೆ ಸೇರಬಹುದಿತ್ತು.

ಬೆರಳಿನ ಅಪಘಾತದಲಿ ನಾನು ಮರೆಯಲೇ ಬಾರದ ಇನ್ನೊಂದು ಘಟನೆಯಿದೆ. ಬಹುಷಃ ನನ್ನ ಜೀವವಾದರೂ ಹೋಗಬಹುದಾಗಿದ್ದ ಅಪಘಾತವದು. ನನ್ ಅದೃಷ್ಟದ & ಇಷ್ಟುದ್ದದ್ದ ಆಯುರ್ ರೇಖೆಯ ಮರ್ಯಾದೆಯನು ಉಳಿಸುವ ಸಲುವಾಗಿಯೇ ಅಂದು ನನ್ನ ಜೀವ ಉಳಿದಿರಬಹುದೇನೋ..??!! ನಿಮಗಿದು ಅರ್ಥವಾಗ ಬೇಕಾದರೆ, ನನ್ನ ಕಂಪನಿಯ ಒಂಚೂರು ಪರಿಚಯ ಮಾಡಿ ಕೊಡುವುದು ಉತ್ತಮ.

ನನ್ನದು ಪವರ್ ಗ್ರಿಡ್ ಅನ್ನುವ ಒಂದು ಕೇಂದ್ರ ಸರ್ಕಾರದ ಕಂಪನಿ. ಭಾರತದ ಶೇಕಡಾ ೬೦ ಭಾಗ ವಿದ್ಯುತ್ ಅನ್ನು ನಾವೇ ಪ್ರಹರಿಸೋದು. ಎಲ್ಲಾ ರಾಜ್ಯಗಳಿಗೂ. ಪವರ್  ಜೆನೆರೆಟಿಂಗ್ ಕೇಂದ್ರ ಸ್ಥಾನಗಳಿಂದ ಪವರ್ ಡಿಸ್ಟ್ರಿಬ್ಯೂಶನ್ ಸ್ಥಾನಗಳಿಗೆ [ದೇಶದ ಎಲ್ಲಾ ರಾಜ್ಯ & ಕೆಲ ಖಾಸಗೀ ಸ್ವಾಯುತ್ತತೆಗಳಿಗೂ] ವಿದ್ಯುತ್ತನ್ನು ಹೊತ್ತೊಯ್ಯುವ ಹೊಣೆ ನಮ್ಮ ಕಂಪೆನಿಯದ್ದು. ದೊಡ್ಡ ದೊಡ್ಡ ಟವರ್ ಗಳ ಮೂಲಕ ಸಾವಿರಾರು ಕಿಲೋ ಮೀಟರ್ ದೂರಗಳನ್ನು ಹಾದು ಒಂದು ಮೂಲೆಯಲ್ಲಿ ತಯಾರಾದ ವಿದ್ಯುತ್.. ದೇಶದ ಮತ್ತೊಂದು ಮೂಲೆಯನ್ನು ಸೇರುತ್ತಿದೆ ಅನ್ನುವುದಾದರೆ ಅದನ್ನು ೯೯% ಯಶಸ್ವಿಯಾಗಿ ತಲುಪಿಸುತ್ತಿರೋ ನಮ್ಮ ಕಂಪನಿಯ ಶ್ರಮ ಬಹಳ ಮಹತ್ವದ್ದು. ಒಂದು ಲಕ್ಷ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭಾರತ ದೇಶ ಈಗ ಬಳಸುತ್ತಿರುವ ಒಟ್ಟು ವಿದ್ಯುತ್ತಿನ ಶೇಕಡಾ ೬೬ ಭಾಗ ಅಂದರೆ.. ಸುಮಾರು ಒಂದೂವರೆ ಲಕ್ಷ ಮೆಗಾ ವ್ಯಾಟ್ ಗೂ ಹೆಚ್ಚು ವಿದ್ಯುತ್ ಶಕ್ತಿಯನ್ನು ಇಡೀ ದೇಶಕ್ಕೇ ಪೂರೈಸುತ್ತಿರೋ ಬೃಹತ್ ಕಂಪನಿ ನಮ್ಮದು. ಮಿಕ್ಕ ೪೦ ಭಾಗ ಖಾಸಗೀ ಕಂಪನಿಗಳ ಅಥವಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಸೇರುವ ವಿದ್ಯುತ್ ತಯಾರಿಕಾ ಘಟಕಗಳಿಂದ ಪೂರೈಸಲಾಗುತ್ತಿದೆ. ದೇಶದ ಯಾವ ರಾಜ್ಯದಲ್ಲಿ ವಿದ್ಯುತ್ ಕೈ ಕೊಟ್ಟರೂ ಅದರ ಹೊಣೆ ನಾವೇ ಹೊರಬೇಕಾಗುತ್ತದೆ. ಮತ್ತು ಅದರ ಪರಿಣಾಮ ದೇಶದ ಎಲ್ಲಾ ಮೂಲೆಗೂ ತಟ್ಟುತ್ತದೆ. ಎಲ್ಲಾ ಮೂಲೆಗಳಲ್ಲಿನ ನಮ್ಮ ಉಪಕೇಂದ್ರಗಳಿಗೂ. ಕಡೆಗೆ ನಮ್ಮ ಸಂಬಳಕೂ..!! ಆದರೆ ತಪ್ಪು ನಮ್ಮದಲ್ಲ. ಅದರಲ್ಲಿ ಬಹಳಷ್ಟು ಒಳ ಒಪ್ಪಂದಗಳಿವೆ. ಅವನ್ನು ಬಿಡಿಸಿ ಹೇಳಲು ಒಬ್ಬ ಅರ್ಥ ಶಾಸ್ತ್ರಜ್ಞ ನೇ ಬರಬೇಕು. ದೇಶದಾಧ್ಯಂತ ಸುಮಾರು ೧೬೦ ಉಪ ಕೇಂದ್ರಗಳನ್ನು ಹೊಂದಿದ್ದು ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಸುಮಾರು ೮-೧೦ ಉಪ ಕೇಂದ್ರಗಳನ್ನು ಹೊಂದಿರುವ ನಮ್ಮ ಕಂಪನಿ ಜಾಗತಿಕವಾಗಿ ಮೂರನೇ ಬೃಹತ್ ವಿದ್ಯುತ್ ಪ್ರಸಾರಣಾ ಕಂಪನಿ.

ಇಂತಿಪ್ಪ ಕಂಪನಿಯ ಹೊಸದೊಂದು ಉಪಕೇಂದ್ರ ಕಾರೈಕುಡಿಯಲ್ಲಿ ಉದ್ಘಾಟನೆಯಾಗುವುದರಲ್ಲಿತ್ತು.. ಜೂನ್ ೨೦೦೯. ಆಗಷ್ಟೇ ಕಂಪನಿ ಸೇರಿ ಎರಡನೆ ತಿಂಗಳು. ತಿರುಚಿಯಲ್ಲಿ ಟ್ರೈನಿಂಗ್ ನಲ್ಲಿದ್ದ ನಾನು & ಸುಮಾರು ನಾಲ್ಕು ಜನ ಟೆಸ್ಟಿಂಗ್ ಗ್ರೂಪಾಗಿ ಹೋಗಿ ಉಪಕೇಂದ್ರದಲ್ಲಿ ಹಲವು ತಪಾಸಣೆಗಳನ್ನು ಕೈಗೊಳ್ಳಬೇಕಿತ್ತು. ನನ್ನದು OFL ತಪಾಸಣೆ. ಅಂದರೆ ಆಫ್ ಲೈನ್ ಫಾಲ್ಟ್ ಲೊಕೇಟರ್ ಟೆಸ್ಟಿಂಗ್. ಅಂದ್ರೆ ಒಂದು ವಿದ್ಯುತ್ ಪ್ರಸರಣ ಲೈನ್ ನಲ್ಲಿ ಯಾವುದಾದರೂ ತೊಂದರೆ ಇಂದಾಗಿ ವಿದ್ಯುತ್ ಕಡಿತವಾದರೆ ಈ ಯಂತ್ರದ ಮೂಲಕ ಅದು ಅಂದಾಜು ಎಷ್ಟು ದೂರದಲ್ಲಿ ಆಗಿರ ಬಹುದು ಎಂಬುದನ್ನು ಪತ್ತೆ ಹಚ್ಚುವ ಟೆಸ್ಟಿಂಗ್ ಇದಾಗಿತ್ತು. ನಮ್ಮ ಕಂಪನಿಯ ಸಾಧಾರಣ ವರ್ಕಿಂಗ್ ವೋಲ್ಟೇಜ್ ನಾಲ್ಕು ಲಕ್ಷ ವೋಲ್ಟು ಗಳು..!! ಇದು ಸಾಧಾರಣ ಉಪಕೇಂದ್ರಗಳಲ್ಲಷ್ಟೇ. ಈಗ ಎಂಟು ಲಕ್ಷ.. ಹತ್ತು ಲಕ್ಷ.. ಹನ್ನೆರಡು ಲಕ್ಷ ವೋಲ್ಟ್ಗಳನ್ನೂ ಮೀರಿದ ತಂತ್ರಜ್ಞಾನವನ್ನು ನಾವು ಬಳಸುತ್ತಿದ್ದೇವೆ..!! ಅಷ್ಟು ಲಕ್ಷ ವೋಲ್ಟು ಗಳ ಒಳಗೆ ಇಳಿದು ಕೂಡ ಕೆಲಸ ಮಾಡುವ ತಂತ್ರಜ್ಞಾನವನ್ನ ಹೊಂದಿದ್ದೇವೆ. ನೆನಪಿಡಿ ನಾವು ಮನೆಯಲ್ಲಿ ಬಳಸುವ ವಿದ್ಯುತ್ತಿನ ಹರಿವು ಸಾಧಾರಣ ೨೩೦ ವೋಲ್ಟ್ ಗಳು. ಎಲ್ಲಿಯ ೨೩೦ ಎಲ್ಲಿಯ ನಾಲ್ಕು ಲಕ್ಷ..!! ಇಂತಿಪ್ಪ ನಮ್ಮ ವಿದ್ಯುತ್ ತಂತಿಗಳು ವಿದ್ಯುತ್ ಇಲ್ಲದೆಯೂ ಸುಮಾರು ೧೫-೨೦ ಸಾವಿರ ವೋಲ್ಟ್ ಗಳ ಶಕ್ತಿಯನ್ನು ಹೊಂದಿರುತ್ತದೆ. ಇದಕ್ಕೆ ಸ್ಥಾಯಿ ವಿದ್ಯುತ್ [ Static Electricity ] ಎನ್ನುತ್ತಾರೆ. ಹವಾಮಾನ ವೈಪರಿತ್ಯ & ಇನ್ನು ಅನೇಕ ಕಾರಣಗಳಿಂದ ಉಂಟಾಗುವ ಈ ವಿದ್ಯುತ್ ಶಕ್ತಿಗೆ ನಾವು ಇಂಡಕ್ಶನ್  ವೋಲ್ಟೇಜ್ ಎನ್ನುತ್ತೇವೆ. 

 ಟೆಸ್ಟಿಂಗ್ ಮಾಡುವ ಮುನ್ನ ಆ ಸ್ಥಾಯಿ ವಿದ್ಯುತ್ತನ್ನು ನ್ಯೂಟ್ರಲ್ ಗೊಳಿಸಿ [ಅರ್ತ್ ಮಾಡಿ] ಪರೀಕ್ಷಣೆ ಮಾಡಲಾಗುತ್ತದೆ. ಹೀಗೆ OFL ಯಂತ್ರವನ್ನು ಬಳಸಿ ಪ್ರಾಥಮಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿ ಇನ್ನೇನು ಯಂತ್ರಗಳಿಗೆ ಕನೆಕ್ಟ್ ಮಾಡಲಾಗಿದ್ದ ವೈರ್ ಗಳನ್ನೂ ತೆಗೆಯುವಷ್ಟರಲ್ಲೇ ಅಚಾನಕ್ಕಾಗಿ ನ್ಯೂಟ್ರಲ್ ಗೊಳಿಸಲು ಹಾಕಲಾಗಿದ್ದ ಅರ್ತ್ ವೈರ್ ಹಿಂದಿ ಕೂಲಿ ಕಾರ್ಮಿಕನೊಬ್ಬ  ಅಜಾಗರೂಕತೆ ಇಂದಾಗಿ ತೆಗೆದು ಬಿಟ್ಟ.. ಕಡೆಯ ವೈರ್ ಒಂದನ್ನು ಬಿಚ್ಚುತ್ತಿದ್ದ ನನಗೆ ಹೆವಿ ಶಾಕ್. ಇದೇ ನನ್ನ ದೇಹವೇ ದೇದಿಪ್ಯ ಮಾನವಾಗಿ ಹೊಳೆದದ್ದನ್ನು ನಾನು ಕಂಡೆ. ಮಿಂಚು ಹೊಡೆದರೆ ಏನಾಗಬಹುದೆಂಬುದರ ಸಾಕ್ಷಾತ್ ಅನುಭವ ನನಗಾಗಿತ್ತು. ಅಮ್ಮಾ ಎಂದು ಕಿರುಚಿದ್ದಷ್ಟೇ ನೆನಪು. ೧೫-೨೦ ಸಾವಿರ ವೋಲ್ಟು ಗಳ ಶಕ್ತಿ ಎಂದರೆ ಕಮ್ಮಿಯೇ. ೨೩೦ ವೋಲ್ಟು ಗಳೇ ಆಗ ಬೇಕಿಲ್ಲ.. ಒಬ್ಬ ಮನುಷ್ಯನಿಗೆ ಕೇವಲ ಅರವತ್ತು ವೋಲ್ಟು ಗಳಲಿ ೨೦ ಮಿಲಿ ಅಂಪಿಯರ್ ಕರೆಂಟು ಅವನ ದೇಹದ ಮೂಲಕ ಹಾದು ಹೋದರೆ ಸಾಕು ಅವನು ಸಾಯಲಿಕ್ಕೆ. ಪುಣ್ಯಕ್ಕೆ ನಮ್ಮ ಕಂಪನಿಯ ಸೇಫ್ಟಿ ಷೂ ಗಳನ್ನು ಧರಿಸಿದ್ದೆ. ಅವು ೧೧-೧೫ ಸಾವಿರ ವೋಲ್ಟು ಗಳ ವರೆಗೂ ರೋಧ [resistant] ನೀಡ ಬಲ್ಲವು. 

ಯಾರ ಹಾರೈಕೆಯೋ ನಾನು ಆ ಶಾಕ್ ನಿಂದ.. ಮೇಲಾಗಿ ಸಾವಿನಿಂದ ತಪ್ಪಿಸಿ ಕೊಂಡು ಬಂದದ್ದು. ಅಂಥಾ ಆಕಸ್ಮಿಕಗಳಲ್ಲಿ ಸಾಮಾನ್ಯವಾಗಿ ಬದುಕುಳಿಯುವುದು ಕಡಿಮೆ. ಬದುಕಿದರೂ ಬೆಂದೋ ಇಲ್ಲವೇ ಅಂಗ ಹೀನರಾಗಬೇಕಾದ ಭಾಗ್ಯ. ಅಲ್ಲಿದ್ದವರಿಗೆಲ್ಲ ಒಂದು ಕ್ಷಣದಲ್ಲಿ ಏನಾಯಿತೆಂಬುದರ ಕಲ್ಪನೆಯೇ ಇರಲಿಲ್ಲ. ನಾನು ಐದಡಿ ದೂರಕ್ಕೆ ತಳ್ಳಿ ಹಾರಿದ್ದಷ್ಟೇ ನೆನಪು. ಮೂರ್ಛೆ ಹೋಗಿದ್ದೆ. ನನ್ನನ್ನು ಜೀಪಿನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲೇ ನನಗೆ ಎಚ್ಚರವಾಯಿತು. ನನ್ನ ಸಹವರ್ತಿಗಳು ಉಪಕರಣ ಗಳಿಗಾದ ಹಾನಿ.. ಸುಟ್ಟು ಹೋದ ಕೇಬಲ್.. ಇನ್ನೂ ಮುಂತಾದವುಗಳ ಕುರಿತು ಮಾತನಾಡುತ್ತಿದರು. ನನಗೆ ಕೈ ಎತ್ತಲಾಗುತ್ತಿಲ್ಲ. ಉರಿ.. ನೋವು. ನನ್ನ ಬಲಗೈ ಯ ತೋರು ಬೆರಳು ಎರಡಿಂಚಿನ ತನಕ ಪೂರ್ತಿ ಬೆಂದು ಬೊಬ್ಬೆಗಳ ಹಾಗೆ ಊದಿಕೊಂಡು ಆಗಾಗ ಒಂದು ಹನಿ ನೀರು ಒಸರುತ್ತಿತ್ತು. ನಡು ಬೆರಳಿಗೂ ಸ್ವಲ್ಪ ಏಟು ಬಿದ್ದು ಅದೂ ಅರ್ಧ ಇಂಚು ಬೆಂದಿತ್ತು.

ಡಾಕ್ಟರ್ ಹೇಗಾಯಿತೆಂದು ಕೇಳಿದರು.. ನನ್ನ ಸಹವರ್ತಿಗಳೂ.. ಸೂಪರ್ ವೈಸರ್ ಗಳು ಹೇಗೋ ಸಂಭಾಳಿಸಿ.. ಸಣ್ಣ ಕರೆಂಟ್ ಶಾಕ್ ಎಂದಷ್ಟೇ ಹೇಳಿ ಟ್ರೀಟ್ ಮೆಂಟ್ ಮಾಡಿಸಿಕೊಂಡು ರೆಸ್ಟ್ ಗಾಗಿ ನೇರ ನನ್ನನ್ನು ನನ್ನ ಊರಿಗೆ ಕಳಿಸಿಕೊಟ್ಟರು. ಅದನ್ನೊಂದು ದೊಡ್ಡ ವಿಚಾರ ಮಾಡಬೇಕಾದದ್ದು ಯಾರಿಗೂ ಬೇಕಾಗಿರಲಿಲ್ಲ. ಮೇಲಾಗಿ ನನಗೂ. ಅದರಿಂದ ಆ ಸಮಯಕೆ ಡ್ಯೂಟಿಯಲ್ಲಿದ್ದ  ಸರ್ವರಿಗೂ ಸಮನ್ಸ್ ಅಥವಾ ವಾರ್ನಿಂಗ್  ಲೆಟರ್ ಬರುವ  ಅಪಾಯವಿತ್ತು.  ನನ್ನ ಬದುಕಿಗೂ ಇದು ಒಂದು ಕಪ್ಪು ಚುಕ್ಕೆಯಾಗಬಲ್ಲ ಘಟನೆಯಾದ್ದರಿಂದ ಯಾರಿಗೂ ಇದನ್ನು ಹೊರಗೆ ತರುವ ಕಾಳಜಿ ಇರಲಿಲ್ಲ. ನನ್ನ ಜೋತೆಯಲ್ಲೊಬ್ಬ ತಮಿಳು ಕೂಲಿ ಕಾರ್ಮಿಕನನ್ನು ನನ್ನೊತ್ತಾಸೆಯಾಗಿ ಕಳುಹಿಸಿದ್ದರು. ನಾನು ಊರ ಹೆಬ್ಬಾಗಿಲ ವರೆಗೂ ಅವನೊಟ್ಟಿಗೆ ಬಂದು ಊರಿನಲ್ಲಿ ಯಾರಿಗೂ ಅನುಮಾನ ಬರಕೂಡದೆಂದು ಅವನನ್ನು ವಾಪಸು ಕಳಿಸಿದೆ. ಮನೆಯಲ್ಲಿ ಎಲ್ಲರಿಗೂ ಗಾಬರಿ.. ಇದೇನಾಯ್ತು ನನ್ನ ಕೈಗೆಂದು..?? ನಾನು ಸುಮ್ಮನೆ ಒಂದು ಕಥೆ ಹೇಳಿದ್ದೆ ಹೀಗೆ ಅಲ್ಲಿನ ಫ್ರೆಂಡ್ ಒಬ್ಬನ ಊರಲ್ಲಿ ಉತ್ಸವ.. ನಾನೂ ಅಲ್ಲಿಗೆ ಹೋಗಿ ಅವನೊಟ್ಟಿಗೆ ಸಣ್ಣ ಪುಟ್ಟ ಕೆಲಸ ಮಾಡುವಾಗ ಆಯ ತಪ್ಪಿ ಬಿದ್ದು, ಅಲ್ಲೇ ಇದ್ದ ಒಲೆಗೆ ಕೈ ನೀಟಿದೆ ಸ್ವಲ್ಪ ತೋರು ಬೆರಳು ಸುಟ್ಟಿದೆ ಅಷ್ಟೇ.. ನಾಲ್ಕು ದಿನ ಎಲ್ಲಾ ಸರಿ ಹೋಗುತ್ತದೆ ಎನ್ನುವ ಸಮಜಾಯಿಷಿ ನೀಡಿದೆ. ಅಮ್ಮನ ಕಣ್ಣಲ್ಲಿ ಮಳೆ.. ಕೆಲಸಕ್ಕೆ ಸೇರಿದ ಎರಡನೇ ತಿಂಗಳಲ್ಲೇ ಕೈ ಗೆ ಹೀಗೆ ಮಾಡಿ ಕೊಂಡೆನಲ್ಲಾ..?? ಅತ್ತೆಗೆ ಅಮ್ಮನಿಗಿಂತಲೂ ಜೋರು ಅಳು.. ನಾನೆಂದರೆ ಅಷ್ಟಿಷ್ಟ ಅವರಿಗೆ. ಅಪ್ಪನಿಗೆ ಅನುಮಾನ. ಅಪ್ಪ ಒಬ್ಬ ಎಲೆಕ್ಟ್ರಿಷಿಯನ್..!! 

ಅಪ್ಪನಿಗೆ ಬೆಂಕಿಯಲ್ಲಿ ಸುಟ್ಟ ಗಾಯಗಳಿಗೂ ಕರೆಂಟ್ ಶಾಕುಗಳಿಂದ ಆದ ಗಾಯಯಗಳಿಗೂ ನಡುವಿನ ಸಾಮ್ಯದ ಪರಿಚಯವಿದೆ. ಏಕಾಂಗಿಯಾಗಿ ಬಂದು ನನ್ನ ಬಳಿ ನಿಜ ವಿಚಾರಿಸಿದರು. ನಾನೂ ಆ ಘಟನೆಯನ್ನು ಹೇಳದೆ ಹಾಗೆ ಕ್ಯಾಂಟೀನ್ ನಲ್ಲಿ ಎಲೆಕ್ಟ್ರಿಕ್ ಸ್ಟವ್ ರಿಪೇರಿ ಮಾಡುವಾಗ ಅಕಸ್ಮಾತ್ ಹೀಗಾಯಿತೆಂದು ಸಬೂಬು ಹೇಳಿದೆ. ಅಪ್ಪ ಬಹಳ ನೊಂದು ಈ ಕೆಲಸ ಕಷ್ಟ ವಾದರೆ ಬಿಟ್ಟು ಬಿಡು ಮಗ.. ನಾನಿಲ್ಲೇ ನಿಂಗೆ ಕೆಲಸ ಕೊಡಿಸ್ತೀನಿ ಅಂತ ದುಃಖ ತುಂಬಿ ಧೈರ್ಯ ಹೇಳಿದ್ರು. ನಾನವರಿಗೆ ತೋಚಿದ ಹಾಗೆ ಸಮಾಧಾನ ಮಾಡುತ್ತಲಿದ್ದೆ. ಕೆಲಸ ಬಿಡುವ ಪ್ರಮೇಯವೇ ಇಲ್ಲ.. ಇದು ನಾನು ಕನಸಿಟ್ಟು ನನಸಾಗಿಸಿ ಕೊಂಡ ಕೆಲಸ. ಇಂಥ ಚಿಕ್ಕ ಪುಟ್ಟದ್ದಕ್ಕೆಲ್ಲ ಹೆದರಲಾದೀತೇ..?? ನನಗಾಗಿದ್ದು ಚಿಕ್ಕದೆ..!!?? ಆದರು ನಾನು ಧೃತಿಗೆಡಲಿಲ್ಲ. ಆಗಿದ್ದು ಆಗಿ ಹೋಯಿತು.. ಜೀವನದಲಿ ಆಗಬೇಕಾದ್ದು ಬಹಳವಿದೆ ಈ ಕೆಲಸ ಅದಕೆ ಒತ್ತಾಸೆ ಎನ್ನುವುದರಲಿ ಅನುಮಾನವಿಲ್ಲ. 

ಹದಿನೈದು ದಿನ ತೋರು ಬೆರಳಿಗೆ ನೀರು ಮುಟ್ಟಿಸದೆ ಪ್ಲಾಸ್ಟಿಕ್ ಕಟ್ಟಿಕೊಂಡೆ ಬದುಕಬೇಕಾಯ್ತು. ಭಯಂಕರ ನೋವು. ಗಾಯ ಆಗಾಗ ರಕ್ತ ಕೀವುಗಳನ್ನು ಒಸರುತ್ತಿತ್ತು. ತುಂಬಾನೇ ನೋವಾಗುತ್ತಿತ್ತು. ಪ್ರಪಂಚದ ಎಲ್ಲಾ ಸಂತೋಷಗಳನ್ನು  ಬೇಕಿದ್ರೆ ಪದಗಳಲ್ಲಿ  ಸಾಧ್ಯವಾದ ಮಟ್ಟಿಗೆ ಕಟ್ಟಿ ಹಾಕಬಹುದು. ಆದರೆ ಎಲ್ಲಾ ನೋವುಗಳನ್ನಲ್ಲ. ನನ್ನ ನೋವು ನನ್ನ ಅನುಭವ. ಪರರ ನೋವು ಪರರ ಅನುಭವ. ಊಹೆ ಮಾಡ ಬಹುದಷ್ಟೇ. ಊಹೆಯಲಿ ಅನುಭವಿಸಲಾಗುವುದಿಲ್ಲ. ಕ್ರಮೇಣ ನನ್ನ ಗಾಯ ಮಾಗುತ್ತಾ ಬಂತು.. ಹೊಸ ಮಾಂಸ ಬಂತು.. ಹೊಸ ಚರ್ಮ ಬಂತು. ನನಗೆ ಬೆರಳು ಹೋಗಲಿಲ್ಲ.. ಬೆರಳಿಗಿಂತ ಮುಖ್ಯ ಜೀವ ಹೋಗಲಿಲ್ಲ..!!  ಹೊಸ ಹುರುಪು ಬಂತು. ಹೊಸ ಚರ್ಮ ಬಂದರೂ ನೋವು ಒಂದೆರಡು ತಿಂಗಳು ಹಾಗೆ ಇತ್ತು. ತಿರುಚಿ ಕಳೆದು ಮದುರೈ ಬರೋವರೆಗೂ. ನನ್ನ ಬೆರಳಿಗೂ ಒಂದು ಹೊಸ ನೋವು.. ಹೊಸ ಬದುಕು.. ಹೊಸ ಅನುಭವ.. ಹೊಸ ಜೀವ ದಕ್ಕಿತ್ತು.

ಅದಾದ ಮೇಲೂ ಈವರೆಗೂ ಅನೇಕ ಕಾರಣಗಳಿಂದ ಬೆರಳಿಗೆ ಸಣ್ಣ ಪುಟ್ಟ ಗಾಯಗಳು ಹೊಡೆತಗಳು ಬೀಳುತ್ತಲೇ ಇವೆ.. ಏನು ಆಗುತ್ತಲೇ ಇಲ್ಲವೇನೋ ಎಂಬಂತೆ ಮಾಯುತ್ತಲೇ ಇವೆ. ಈಗೀಗ ನನಗೆ ನನ್ನ ತೋರು ಬೆರಳಿನ ಮೇಲೆ ವಿಪರೀತ ಮೋಹ. ಕಂತೆಯಷ್ಟು ಓದ್ತಾ ಇದೀನಿ.. ಕಡ್ಡಿಯಷ್ಟು ಬರೀತಾ ಇದ್ದೀನಿ. ಈಗೀಗ ಬರವಣಿಗೆ ಅಂದ್ರೆ ಒಂದು ಹೊಸ ದಾಹ. ಕುಡಿದಷ್ಟೂ ತಣಿಯದ ದಾಹ. ಗೀಚಿದಷ್ಟೂ ಮಣಿಯದ ಮೋಹ. ಜೊತೆಗೆ ಹಳೆಯ ಸೋಂಬೇರಿ ತನವೂ ಇನ್ನೂ ಪೂರ್ತಿ ಮಾಸಿಲ್ಲ. ನನ್ನ ಇಷ್ಟು ಬರವಣಿಗೆಗಾದರೂ ನನ್ನ ಮೂರಿಂಚು ಬೆರಳು ಬೇಕೇ ಬೇಕು. ಮತ್ತೊಮ್ಮೆ ಹೇಳುತ್ತೇನೆ ನನಗೆ ಹೊಸ ಎರಡು ಬೆರಳುಗಳಿಂದ ಮತ್ತೆ ಬರೆಯೋದನ್ನ ಕಲಿಯೋಕೆ ಮನಸಿಲ್ಲ. ಕಂಪ್ಯೂಟರ್ ಕೀ ಬೋರ್ಡ್ ಒತ್ತುವಲ್ಲಿ ನಾನು ಹೆಚ್ಚು ಉಪಯೋಗಿಸೋದು ಇದೇ ತೋರು ಬೆರಳನ್ನ. ಅದ್ಕೆ ನಂಗೆ ಈ ಬೆರಳಂದ್ರೆ ವಿಪರೀತ ಮೋಹ. ಬೆರಳು ಗಳಲ್ಲಿ ಅರಳುವ ಭಾವಗಳ ಮಾಂತ್ರಿಕ ಅನುಭವ ಈಗಷ್ಟೇ ಪರಿಚಯವಾಗಿದೆ. ಅದನ್ನು ಅನುಭವಿಸಲು ಇನ್ನು ಅನವರತ ಪ್ರಯತ್ನ ನಡೆಸಬೇಕಿದೆ.

ನನ್ನ ಕೆಲವು ಗೆಳೆಯರು ಯಾವಾಗಲು ಎಚ್ಚರಿಕೆ ನೀಡ್ತಾ ಇರ್ತಾರೆ. ಗುಂಪಿನಲ್ಲಿ ನಿಂತು ಯಾರ ಎಡೆಗೂ ಬೆರಳು ತೋರಿಸಿ ಮಾತಾಡಬೇಡ. ಅದು ಅಷ್ಟು ಒಳ್ಳೆಯದಲ್ಲ. ಯಾರಾದರೂ ತಪ್ಪಾಗಿ ತಿಳಿದು ರಾದ್ಧಾಂತಗಳಾದರೆ ಕಷ್ಟ ಅಂತ. ಅದ ಮೀರಿಯೂ ನಾ ನನ್ನ ತೋರು ಬೆರಳನ್ನ ಒಬ್ಬರೆಡೆಗೆ ನೀಟಿ ಮತ್ತೊಬರ ಬಳಿ ಅವರ ಬಗ್ಗೆ ಮಾತಾಡುತ್ತೇನೆಂದರೆ.. ಅದು ಅವರ ಮೇಲಣ ಅಧಮ್ಯ ಅಭಿಮಾನ  ಮತ್ತು ಅಧಮ್ಯ ಪ್ರೀತಿ ಇಂದ ಮಾತ್ರ. ಪ್ರೈಮರಿ ಶಾಲೆಯ ನಮ್ಮ ಶಿವರುದ್ರಪ್ಪ ಮಾಸ್ಟರ್ ಯಾವಾಗಲೂ ಹೇಳ್ತಾ ಇದ್ರು.. ನೀನು ಮತ್ತೊಬ್ಬರೆಡೆಗೆ ನಿನ್ನ ಒಂದು ಬೆರಳು ತೋರಿಸಿ ಹೀನವಾಗಿ ಮಾತಾಡ್ತಿ ಅನ್ನೋದಾದ್ರೆ.. ಇನ್ನೂ ಮೂರು ಬೆರಳು ನಿನ್ನೆಡೆಗೆ ತಿರುಗಿ ನೀನು ಅವರಿಗಿಂತ ಮೂರು ಪಟ್ಟು ಅಧಮ ಎಂಬುದನ್ನ ಸಾರುತ್ತದೆ ನೆನಪಿಟ್ಟುಕೋ ಅಂತ. ನನಗೆ ಈಗಲೂ ಆ ಪಾಠ ನೆನಪಿದೆ. ಆದ್ದರಿಂದಲೇ ನಾನು ನನ್ನಿಷ್ಟದವರ.. ನನ್ನ ಪ್ರೀತಿ ಪಾತ್ರರ.. ನನ್ನ ಆರಾಧ್ಯ ಸಮಾನರ ಕಡೆಗೆ ಒಂದು ಬೆರಳು ತೋರಿಸಿ ಮಾತಾಡುವ ಪ್ರಯತ್ನ ಮಾಡುತ್ತೇನೆ. ಮಿಕ್ಕ ಮೂರು ಬೆರಳುಗಳು ನನ್ನೆಡೆಗೆ ತಿರುಗಿರುವಂತೆ.. ಅವರ ಮೂರು ಪಟ್ಟು ಪ್ರೀತಿ & ವಿಶ್ವಾಸ ನನ್ನನ್ನು ಸೇರಿಕೊಳ್ಳಲಿ ಅನ್ನುವ ಸದಾಶಯದಿಂದ.

ನೆನಪಿರಲಿ ನನ್ನ ತೋರು ಬೆರಳು ಯಾವತ್ತಿಗೂ ನಿಮ್ಮ ಕಡೆಗೆ ಮುಖ ಮಾಡಿರುತ್ತದೆ...!! ಈಗಲೂ ಸಹ.

6 comments:

 1. ಒಳ್ಳೆಯ ಲೇಖನ ಕಣೋ...ಜೋಗಿಯವರ ಲೇಖನ ಓದಿಲ್ಲ,ಆದರೆ ಇದರ ವಿಸ್ತಾರ ನೋಡಿದರೆ ಅವರು ಕೇವಲ ಬೆರಳು ತೋರಿಸಿದ್ದಾರೆ, ನೀನು ಪೂರ ಹಸ್ತವೆ ನುಂಗಿಬಿಟ್ಟಿರುವಂತಿದೆ.
  ನನ್ನ ಬೆರಳುಗಳು ಇಂತದ್ದೆ ಬಹಳ ಸಂಧರ್ಭಗಳಲ್ಲಿ ಸಾಥ್ ನೀಡಿದ್ದಾವೆ.ಸಧ್ಯಕ್ಕೆ ಚಟ ಅಂತ ಉಳಿದಿರುವುದೆಂದರೆ...ತೋರು ಬೆರಳು ಹಿಡಿಯೋದು.ಇಂದಿಗೂ ಅಪ್ಪನ ತೋರು ಬೆರಳು ಹಿಡಿದು ನಡೆಯುವುದೆಂದರೆ ನನಗೆ ಎಲ್ಲಿಲ್ಲದ ಖುಷಿ.:-)
  ಲೇಖನ ಎಂದಿನಂತೆ ತುಂಬಾ ಚೆನ್ನಾಗಿದೆ ಟಾಮ್.:-)ನಿನ್ನ ಬೆರಳುಗಳ ಪಾಡು ಯಾರ ಬೆರಳಿಗೂ ಬರದಿರಲಿ:(:D ಹಾಗೆ ಇನ್ಮುಂದಾದ್ರು ಬೆರಳುಗಳನ್ನ ಜೋಪಾನ ಮಾಡು ಅವುಗಳು ಇಂತಹ ಬಹಳಷ್ಟು ಒಳ್ಳೆಯ ಲೇಖನಗಳ ನಮಗಾಗಿ ಬರಿಯಬೇಕಿದೆ.:-) :-)

  ReplyDelete
 2. ನಿಜ ಕೆಲ ಬಾಲ ಲೀಲೆಗಳು ವಯಸ್ಸಾದಂತೆಲ್ಲ ಮರೆತೇ ಹೋಗುತ್ತವೆ.

  ತೋರು ಬೆರಳು ಅಬ್ಬ ಎಂತೆಂತ ಘನಂಧಾರಿ ಕೆಲಸಗಳನು ಮಾಡಿವೆ ಗೆಳೆಯ!

  ಅಯ್ಯೋ ಕಬ್ಬಿನ ಗದ್ದೆಯಲಿ ಸಿಪ್ಪೆ ಸುಲಿದ ಬೆರಳೇ? ಆ ಯಮ ಯಾತನಎ ಊಹಿಸ ಬಲ್ಲೆ.

  ಪವರ್ ಗ್ರಿಡ್ ಕಂಪನಿಯ ಬಗೆಗೆ ಒಳ್ಳೆಯ ಪರಿಚಯಾತ್ಮಕ ಬರಹ.

  ತೋರು ಬೆರಳಿನ ಕಥನ ಮನ ಮುಟ್ಟುವಂತಿದೆ.

  ReplyDelete
 3. ಅಬ್ಬಾ ಸತೀಶ್ ಜೀ...
  ನಿಮ್ಮ ಬರಹ ಓದಿ ಮೈ ಚುಮ್ ಎಂದಿತು..
  ಸಧ್ಯ ಪಾರಾದಿರಲ್ಲ ಆ ಶಾಕಿನಿಂದ...
  ಉಫ್...
  ಮುಂದಾದರೂ ಜಾಗೃತೆ...
  ಬರವಣಿಗೆಯಂತೂ ಓದಿಸಿಕೊಂಡು ಹೋಯಿತು...
  ಬರೆಯುತ್ತಿರಿ..
  ನಮಸ್ತೆ..

  ReplyDelete
 4. ಅಬ್ಬಾ, ಯಾವ ಪುಣ್ಯದ ಬಲದಿಂದಲೋ, ಪಾರಾಗಿರುವಿರಿ. ಬರಹವನ್ನು ಓದುತ್ತಿದ್ದಂತೆ, ನನಗೇ shock ಹೊಡೆದಂತೆ ಆಯಿತು.

  ReplyDelete
 5. ಈ ಪ್ರಕಾರವಾಗಿ ನಮ್ಮ ಸತೀಶ್ ಅವ್ರು ಯದ್ವಾ ತದ್ವಾ ಭಯಾನಕ ಶಾಕ್ ನಿಂದ, ಬೆರಳುಸಮೇತ ಸುರಕ್ಷಿತವಾಗಿ ಬದುಕಿ ಬಂದರೆಂದು ಹೇಳಲು ನಾವು ವಿಷಾದಿಸುತ್ತೇವೆ :'(

  ಥೂ... ಕೊಳಕಾ :-/ ಮೂಗಲ್ಲಿ ಬೆರಳಿಡ್ತಿಯಾ ? ನಮ್ ಬೆರಳು ಕೂಡ ಮೊದಲಿನಿಂದಾನೂ ಸಕತ್ naughty ;-) ಆದರೆ ನಿನ್ ಬೆರಳಿನ ತರಹ "ಸಂಶೋಧನೆ" ಮಾಡೋಕ್ ಯಾವತ್ತು ಹೋಗಿಲ್ಲಾ ಬಿಡಪ್ಪಾ :p ನನ್ ಬೆರಳಿನ ಕಹಾನಿಯನ್ನ ಹೇಳಲು ಅದರ ಪರವಾನಿಗೆಗೆ ಕಾಯುತ್ತಿದ್ದೇನೆ..... {ಹೇಳಲಾರದ ಮುಚ್ಚುಮರೆಯ ನಗು}

  ಬೆರಳು..........

  .

  .

  .

  ಬೆರಳು........

  .

  .

  .

  yessss ...!! ಬೆರಳು...! ಮೂರೇ ಪದ, but ಆ "ಮೂರ್ಪದ" ಎಂಥೆಂಥಾ "ಮೂರ್ಖದ" ಕೆಲಸಗಳನ್ನ ಮಾಡುತ್ತೆ ನೋಡು :d

  ಅತ್ಯಂತ ಪ್ರಮುಖವಾಗಿ, ಹೆಣ್ಣುಮಕ್ಕಳನ್ನ ಕುರಿತು ಸೀಟೀ ಹೊಡೆಯೋವಂಥಹ ಗಂಡು ಮಕ್ಕಳ ಮೂಲಭೂತ ಹಕ್ಕು, ಕರ್ತವ್ಯಕ್ಕೋಸ್ಕರ ಹಲ್ಲುಜ್ಜದ ಬಾಯಿದ್ದರೂ ಕೂಡಾ, ಬಾಯಲ್ಲಿ ಧುಮುಕಿ ಗಣನೀಯ ಪ್ರಮಾಣದ ಸೇವೆಯನ್ನ ಸಲ್ಲಿಸುತ್ತಿದ್ದುದು ಕೂಡಾ "ಈ ಬೆರಳುಗಳೇ" ಕಣೋ :d

  ವಯಸ್ಸಿಗೆ ಬಂದಿರೋ ಹುಡುಗಾ ಆಗಿ, ಈ ಪಾಯಿಂಟ್ ನ miss ಮಾಡಬಹುದೇನೋ ನೀನು...? :-/ :O

  "ಇಂಡಕ್ಶನ್ ವೋಲ್ಟೇಜ್" "ಸ್ಥಾಯಿ ವಿದ್ಯುತ್ [ Static Electricity ]" "ನ್ಯೂಟ್ರಲ್" "ಅಂಪಿಯರ್" " [resistant]" ....... ಇತ್ಯಾದಿ.. ಇತ್ಯಾದಿ ಪದಗಳು "ನನ್ನ ಅರ್ಧಾ ಯೌವ್ವನವನ್ನೇ ಹಾಳು ಮಾಡಿದಂಥವು :X :P :-/

  ಇಂಥಾ ಭಯಾನಕ ಪದಗಳನ್ನ ಬಳಸಿ, ನನ್ನ Mood out ಮಾಡಿದ ನಿನಗೆ, ನಾನು ಯಾವುದೇ ಹೊಗಳಿಕೆಯನ್ನ ಕೊಡುವುದಿಲ್ಲ ರೈಟ್ ಹೇಳೋಲೆ :P :-/ :X Huh

  ReplyDelete