ಸಾರ್.. ಸಾರ್ ಕರಿತಾ ಇದಾರೆ, ಸ್ವಲ್ಪ ಬೇಗ ಬರಬೇಕಂತೆ. ಕಾಂಟ್ರಾಕ್ಟ್ ಕೆಲಸಗಾರ, ಅಟೆಂಡರ್ ವೆಂಕಟೇಶ ನನ್ನ ರೂಮಿನ ಬಾಗಿಲಿಗೊರಗಿ ನಿಂತು ಮಂದ ಸ್ಮಿತದೊಂದಿಗೆ ಉಲಿದ. ನಗುವಾಗ ಅವನೊಂಥರಾ ವಿಶೇಷವಾಗಿ ಇಷ್ಟವಾಗ್ತಾನೆ. ಪಿಯೂಸಿ ಫೇಲ್ ಆದ ಹುಡುಗ ಬಂದು ಕೆಲಸಕ್ಕೆ ಸೇರಿದ್ದು ಇಲ್ಲಿ. ಅವನ ನಗುವಲ್ಲಿ ಯಾರನ್ನಾದರೂ ಸೆಳೆಯುವಂಥಹ ಒಂದು ಮೋಹಕ ಶಕ್ತಿಯಿದೆ. ಈಗಷ್ಟೇ ಹದಿನೆಂಟು ತುಂಬಿದ ಚಿಕ್ಕ ಹುಡುಗ ಅವ ಆಗಾಗ ಮಾಡುವ ತರಲೆಗಳಿಂದಲೂ ತುಂಬಾ ಇಷ್ಟ ಆಗ್ತಿರ್ತಾನೆ.
ಯಾವ್ ಸಾರು.. ಏನ್ ಕತೆ ನೋ..??
ಅದೇ ಸಾರ್ ಟ್ರೈನಿಂಗ್ ಕೊಡೋಕೆ ಬಂದಿದಾರಲ್ಲ ಆ ಸಾರ್ ಕರಿತಾ ಇದಾರೆ ಸಾರ್.
ಏನಂತೆ ವಿಷ್ಯ..??
ಸಾರ್.. ಟ್ರೈನಿಂಗ್ ಕ್ಲಾಸ್ ರೂಮಲ್ಲಿ ಪ್ರೊಜೆಕ್ಟರ್ ವರ್ಕ್ ಆಗ್ತಿಲ್ವಂತೆ.. ಅದ್ಕೆ ಅವ್ರು ರಿಪೇರಿಗೆ ಯಾರನ್ನಾದರು ಕರಿ ಅಂದ್ರು.. ಯಾವಾಗಲೂ ಇಂಥದ್ದನ್ನೆಲ್ಲ ನೀವೇ ಆಲ್ವಾ ಸಾರ್ ರಿಪೇರಿ ಮಾಡೋದು ಅದ್ಕೆ ಬನ್ನಿ ಸಾರ್.. ಸಾರ್ ಕರಿತಾ ಇದಾರೆ.
ಬಂತಲ್ಲಪ್ಪ ನಮ್ಮ ಬುಡಕ್ಕೇ..!! ಮಧ್ಯಾನ ಊಟ ಮುಗಿಸಿ ಬಂದದ್ದು ಆಫೀಸಿಗೆ. ನಮ್ಮೆಲ್ಲ ಸಬ್ ಸ್ಟೇಶನ್ ಗಳಿಗೂ ಆಯಿಲ್ ಟೆಸ್ಟ್ ರಿಪೋರ್ಟ್ ಕಳುಹಿಸುವ ತಯಾರಿಯಲ್ಲಿದ್ದೆ.. ಕಂಪ್ಯೂಟರ್ ನಲ್ಲಿ ಎಲ್ಲಾ ಶಾಖೆಗಳಿಗೂ ಇಂಟೆರ್ ಆಫೀಸ್ ಮೆಮೋ ಟೈಪ್ ಮಾಡ್ತಾ ಇದ್ದೆ. ಸಾಮಾನ್ಯಾವಾಗಿ ಇಂಥ ಸಣ್ಣ ಪುಟ್ಟ ತೊಂದರೆಗಳನ್ನ ನಾನೂ ಅಥವಾ ಪ್ರಶಾಂತ್ ಬಗೆ ಹರಿಸೋದರಿಂದ ಹುಡುಗ ನೇರ ನನ್ನ ಬಳಿ ಬಂದು ನಿಂತಿದ್ದ. ನನ್ನನ್ನೇ ಕರೆಯಲು ಇನ್ನೂ ಒಂದು ಕಾರಣ.. ಟ್ರೈನಿಂಗ್ ಕ್ಲಾಸ್ ರೂಮು ನನ್ನ ಕೊಠಡಿಗೆ ಪಕ್ಕದಲ್ಲೇ ಇದ್ದುದರಿಂದ. ಸರಿ ಗೊಣಗಿಕೊಂಡೇ ಎದ್ದು ಹೋದೆ. ಡೋರ್ ನಾಕ್ ಮಾಡಿ ಎಕ್ಸ್ ಕ್ಯೂಸ್ ಮಿ ಸಾರ್ ಅಂದು ಒಳಗೆ ಹೋದೆ, ವಾಟ್ ಇಸ್ ದಿ ಪ್ರಾಬ್ಲೆಮ್ ವಿತ್ ಪ್ರೊಜೆಕ್ಟರ್ ಅಂದೆ. ಪ್ರೊಜೆಕ್ಟರ್ ಇಸ್ ನಾಟ್ ವರ್ಕಿಂಗ್.. ಕ್ಯಾನ್ ಯೂ ಪ್ಲೀಸ್ ಮೇಕ್ ಇಟ್ ರೆಡಿ ನವ್..?? ಇಟ್ಸ್ ಫಾರ್ ಅರ್ಜೆಂಟ್. ಶೂರ್ ಸಾರ್ ಅಂದು ಪ್ರೊಜೆಕ್ಟರ್ ಮತ್ತು ಅದಕ್ಕೆ ಲಿಂಕಿಸಿದ್ದ ಲ್ಯಾಪ್ ಟಾಪ್ ತಪಾಸಣೆಗೆ ಕೂತೆ.
ಅದು ನಮ್ಮ ಕಂಪನಿಯ ಸೀನಿಯರ್ ಇಂಜಿನಿಯರ್ ಹುದ್ದೆಯ ಮೇಲ್ಪಟ್ಟ ವರ್ಗದವರಿಗಾಗಿ ಇರಿಸಿದ್ದ "ವ್ಯಕ್ತಿತ್ವ ವಿಕಸನ"ದ ಕುರಿತಾಗಿನ ಮೂರು ದಿನದ ತರಬೇತಿ ಕಾರ್ಯಶಾಲಾ ಕಾರ್ಯಕ್ರಮ. ನಮ್ಮ ಕಂಪನಿಯ ಬೇರೆ ಬೇರೆ ಕಡೆಯಿಂದ.. ದೂರದೂರದಿಂದ.. ಹಲವರು ಉತ್ತರ ಭಾರತದಿಂದ ಸುಮಾರು ಇಪ್ಪತ್ನಾಲ್ಕು ಜನ ಟ್ರೈನಿಂಗ್ ನಿಮಿತ್ತ ಬಂದಿದ್ದರು. ಉತ್ತರ ಭಾರತದವರ ಮುಖದ ಹೊರತಾಗಿ ದಕ್ಷಿಣದ (ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ) ಬಹುಪಾಲು ಎಲ್ಲಾ ಸಹವರ್ತಿಗಳ ಮುಖ ಪರಿಚಯ ನನಗುಂಟು. ಕೆಲವರ ಬಳಿ ಗಾಢ ಮೈತ್ರಿಯೂ ಉಂಟು ಕಾರಣ ಈ ಮೊದಲು ಇಲ್ಲಿರುವ ಹಲವರ ಮಾರ್ಗದರ್ಶನದಡಿಯಲ್ಲಿ ನಾನು ಕೆಲಸ ಮಾಡಿದ್ದೇನೆ. ಅದೂ ಅಲ್ಲದೆ ಟೆಸ್ಟಿಂಗ್ ನಿಮಿತ್ತ ದಕ್ಷಿಣ ಭಾರತದ ಎಲ್ಲಾ ಉಪ ಕೇಂದ್ರಗಳಿಗೂ (ಸ್ಯಾಟಿಲೈಟ್ ಅನ್ಕೊಂಡು ಬಿಟ್ಟೀರ.. ಅದು ವಿದ್ಯತ್ ಉಪಕೇಂದ್ರ) ನಾನು ಆಗಾಗ ಭೇಟಿ ನೀಡುತ್ತಲೇ ಇರುತ್ತೆನಾದ್ದರಿಂದ ದಕ್ಷಿಣದ ಬಹುಪಾಲು ಆಫೀಸರ್ ಗಳ ಪರಿಚಯ ನನಗುಂಟು.
ನಲವತ್ತೈದು ಐವತ್ತು ವರ್ಷದೊಳಗಿನ ಆ ವ್ಯಕ್ತಿಯ ಇಂಗ್ಲಿಶ್ ಉಚ್ಚಾರಣೆಯ ಧಾಟಿ ಯಾವತ್ತಿಗೂ ನನ್ನನ್ನ ಅತೀವ ಅನ್ನುವಷ್ಟು ಮೋಡಿ ಮಾಡುತ್ತದೆ. ಅಷ್ಟೊಂದು ಸ್ಪಷ್ಟ, ಸರಾಗ ಮತ್ತು ನಿರರ್ಗಳವಾಗಿ ಇಂಗ್ಲೀಷು ಮಾತನಾಡುತ್ತಾರೆ ಆ ವ್ಯಕ್ತಿ. ಅವರ ಹೆಸರು ಕ್ಸೇವಿಯರ್ ಈ ಟ್ರೈನಿಂಗ್ ಪ್ರೋಗ್ರಾಮ್ ನ.. ಆ ದಿನದ, ಮಧ್ಯಾನದ ಸೆಶನ್ ನ ಫ್ಯಾಕಲ್ಟಿ (ಒಂದರ್ಥದಲ್ಲಿ ಅತಿಥಿ ಉಪನ್ಯಾಸಕರು ಅಂದ್ಕೋಬಹುದು) ಅವರಾಗಿದ್ದರು. ಕ್ಸೇವಿಯರ್ ಸಾರ್ ಅನ್ನು ನಾನು ಮೊದಲಿಂದಲೂ ಬಲ್ಲೆ. ನಮ್ಮ ಕಂಪನಿಯ ಹಲ ವರ್ಗದ, ಹಲ ವಿಭಾಗದ, ಹಲ ನಮೂನೆಯ ಕಾರ್ಯಶಾಲೆಗಳಿಗೆ ಹಲವು ಬಾರಿ ಅವರು ಅತಿಥಿ ಉಪನ್ಯಾಸಕರಾಗಿ ಬಂದಿದ್ದಾರೆ. ನಾನೂ ಕೂಡ "communication skills in role effectiveness" ಅನ್ನುವ ಒಂದು ಕಾರ್ಯಶಾಲೆಯಲ್ಲಿ ಅವರ ಉಪನ್ಯಾಸಕ್ಕೆ ಕೆಳುಗನಾಗಿದ್ದೆ. ಅವರ ಪಾಠಕ್ಕೆ ಮೈ ಮರೆತು ಮನಸೋತಿದ್ದೆ. ಅದಲ್ಲದೆಯೂ ಹಲವು ಕಾರ್ಯಶಾಲೆಗಳಲ್ಲಿ ಇಂತ ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳನ್ನ ಬಗೆ ಹರಿಸಿ ಕೊಡುವುದರಲ್ಲಿ ಆಗಾಗ ಅವರಿಗೆ ಮುಖಾಮುಖಿಯಾಗಿದ್ದೆ. ಅವತ್ತಿಂದಲೂ ಅವರೆಂದರೆ.. ಅವರ ಉಪನ್ಯಾಸವೆಂದರೆ ಅಂತಹ ಒಂದು ಅಭಿಮಾನ. ಅವರ ಉಪನ್ಯಾಸವನ್ನೊಮ್ಮೆ ಕೇಳಿದವರಿಗೆಲ್ಲ ಅವರನ್ನು ಇಷ್ಟಪಡದೆ ಇರಲಾರರು ಅನ್ನುವಷ್ಟು ನಂಬಿಕೆ ಅವರ ಮಾತುಗಳಲ್ಲಿ, ಅವರ ವರ್ಚಸ್ಸಿನಲ್ಲಿ ಕಾಣಿಸುತ್ತದೆ.
ಲ್ಯಾಪ್ ಟಾಪ್ ನ ಡಿಸ್ ಪ್ಲೇ ಸೆಟ್ಟಿಂಗ್ಸ್ ನೊಳಗೆ ಕನೆಕ್ಟ್ ಎ ಪ್ರೊಜೆಕ್ಟರ್ ಅನ್ನುವ ಸೆಟ್ಟಿಂಗ್ ಮಾಡಿದೊಡನೆ ಲ್ಯಾಪ್ ಟಾಪಿನಲ್ಲಿ ಬಿತ್ತರವಾಗುತ್ತಿದ್ದ ಪವರ್ ಪಾಯಿಂಟ್ ಒಂದರ ಸ್ಲೈಡ್ ಸ್ಕ್ರೀನಿನಲ್ಲಿ ಪ್ರತ್ಯಕ್ಷವಾಯಿತು. ಆ ಸ್ಲೈಡ್ ನಲ್ಲಿ ಎರಡು ಒಂದೇ ಬಗೆಯ ಚಿತ್ರಗಳಿದ್ದು.. ಆ ಚಿತ್ರದ ತಲೆ ಬರಹ "Find the 12 difference among these image" ಎಂದಿತ್ತು. ಸಿಂಪಲ್.. ಒಂದೇ ಥರವಿದ್ದ ಆ ಎರಡು ಚಿತ್ರಗಳಲ್ಲಿದ್ದ ಹನ್ನೆರಡು ವೆತ್ಯಾಸಗಳನ್ನ ಅಲ್ಲಿ ಕಂಡು ಹಿಡಿಯ ಬೇಕಿತ್ತು. ಇದು ನನಗೂ ಆಕರ್ಷಕವೆನಿಸಿ ಅಲ್ಲೇ ಮೂಲೆಯೊಂದರಲ್ಲಿ ಆಸಕ್ತಿಯಿಂದ ನಿಂತೆ. ನಾನಲ್ಲಿ ನಿಂತದ್ದು ಯಾರಿಗೂ ತೊಂದರೆ ಏನು ಅನ್ನಿಸಲಿಲ್ಲ. ಕ್ಸೇವಿಯರ್ ಸಾರ್ ಆ ಚಿತ್ರದ ಕುರಿತಾಗಿ ಅದರ ಸವಾಲಿನ ಕುರಿತಾಗಿ ಹೇಳಲು ಶುರು ಮಾಡಿದರು.
ನೀವು ಮಾಡ ಬೇಕಿರೋದು ಇಷ್ಟೇ. ನೋಡೋಕೆ ಒಂದೇ ಥರವಿರುವ ಈ ಎರಡೂ ಚಿತ್ರಗಳಲ್ಲಿ ಸಣ್ಣ ಸಣ್ಣದೆ ಎಂಬಂತೆ ಹನ್ನೆರಡು ವೆತ್ಯಾಸಗಳಿವೆ.. ನೀವದನ್ನ ಕಂಡು ಹಿಡಿದು ಹೇಳಬೇಕು. ಅವರು ಹಾಗೆ ಹೇಳಿ ಮುಗಿಸಿದ್ದೇ ತಡ ಟ್ರೈನಿಂಗ್ ಬಂದಿದ್ದ ಹಲವರು ಅದರೊಳಗಿನ ಒಂದೊಂದೇ ತಪ್ಪುಗಳನ್ನ ಎತ್ತಿ ತೋರಿಸಿ ಹೇಳಲು ಶುರು ಮಾಡಿದರು. ಕ್ಸೇವಿಯರ್ ಸಾರ್ ಮತ್ತೆ ಮಾತಿಗೆ ಶುರುವಿಟ್ಟು wait I will give a competition among you ಎಂದರು. ಮೊದಲು ಅಲ್ಲಿದ್ದ ಇಪ್ಪತ್ನಾಲ್ಕು ಜನರನ್ನ ಆರು ಜನರ ಒಂದು ತಂಡದಂತೆ ನಾಲ್ಕು ತಂಡವನ್ನಾಗಿ ವಿಂಗಡಿಸಿ, ಒಂದೊಂದು ತಂಡವನ್ನೂ ಒಂದೊಂದು ಮೂಲೆಗೆ ನಿಲ್ಲಿಸಿದರು. ಪ್ರತೀ ತಂಡಕ್ಕೂ ಅಲ್ಲಿ ಸ್ಕ್ರೀನಿನಲ್ಲಿ ಕಾಣುತ್ತಿದ್ದ ಚಿತ್ರದ ಒಂದೊಂದು ಪ್ರತಿಯನ್ನು ಕೈಗಿತ್ತು ಎರಡೂ ಚಿತ್ರಗಳಲ್ಲಿನ ಸಾಮ್ಯತೆ & ವೆತ್ಯಾಸವನ್ನ ಆ ಪ್ರತಿಯಲ್ಲಿ ಗುರುತಿಸಿ ಕೊಡಬೇಕೆಂದು ಆ ಸ್ಪರ್ಧೆಗೆ ನಿಯಮಗಳನ್ನು ಹೇಳಲು ಶುರುವಿಟ್ಟರು.
ಆ ಸ್ಪರ್ಧೆಯಲ್ಲಿನ ನಿಯಮಗಳು ಹೀಗಿದ್ವು..
* ಯಾವ ಗುಂಪೂ ಮತ್ತೊಂದು ಗುಂಪಿನ ಜೊತೆ ಮಾತನಾಡುವಂತಿಲ್ಲ.
* ಸ್ಪರ್ಧೆಗೆ ಕಾಲಾವಕಾಶ ಹತ್ತು ನಿಮಿಷ.
* ಹತ್ತು ನಿಮಿಷದ ಒಳಗೆ ಅವೆರಡು ಚಿತ್ರಗಳಲ್ಲಿನ ಎಲ್ಲಾ ಸಾಮ್ಯತೆಗಳನ್ನು ಮೊದಲು ಕಂಡು ಹಿಡಿವ ತಂಡ ವಿಜಯೀ..
* ಹನ್ನೆರಡಕ್ಕೆ ಹನ್ನೆರಡೂ ಸಾಮ್ಯತೆಗಳನ್ನ ಕಂಡು ಹಿಡಿದ ತಂದ ಮಾತ್ರವೇ ವಿಜಯಿ.
* ಒಂದು ವೇಳೆ ವಿಜಯೀ ತಂಡ ಕಂಡು ಹಿಡಿದ ಸಾಮ್ಯತೆಗಳಲ್ಲಿ ಯಾವುದಾದರೂ ತಪ್ಪುಗಳು ಗೋಚರಿಸಿದಲ್ಲಿ ಆ ತಂಡಕ್ಕೆ ಪ್ರತೀ ತಪ್ಪಿಗೆ ಒಂದೊಂದು ನೆಗೆಟಿವ್ ಮಾರ್ಕ್ ನೀಡಲಾಗುವುದು.
* ಅತಿ ಹೆಚ್ಚು ನೆಗೆಟಿವ್ ಮಾರ್ಕ್ ಪಡೆದ ತಂಡ ಸೋತಂತೆ ಲೆಕ್ಖ.
ಸ್ಪರ್ಧೆ ಆರಂಭವಾಯಿತು. ಆರು ಜನರ ಪ್ರತೀ ತಂಡವೂ ತಮ್ಮ ತಮ್ಮಲ್ಲೇ ಚರ್ಚಿಸುತ್ತಾ ಚಿತ್ರಗಳಲ್ಲಿನ ಸಾಮ್ಯತೆಗಳನ್ನ ಗುರುತಿಸುತ್ತಾ.. ಅವುಗಳನ್ನ ಪೆನ್ ಅಥವಾ ಪೆನ್ಸಿಲ್ ಗಳಿಂದ ಮಾರ್ಕ್ ಮಾಡುತ್ತಾ ಹೋದರು. ಪ್ರತೀ ಪ್ರತೀ ಸಾಮ್ಯತೆ ಸಿಕ್ಕಾಗಲೂ ಪ್ರತಿಯೊಬ್ಬರ ಮುಖದಲ್ಲಿ ಸಂತಸ ಪುಟಿದೇಳುತ್ತಿತ್ತು. ಮುಂದಿನ ಸಾಮ್ಯತೆ ಕಂಡು ಹಿಡಿಯುವುದರೆಡೆಗೆ ಅತೀ ಉತ್ಸಾಹಿತರಾಗಿ ಮುಂದುವರೆಯುತ್ತಿದ್ದರು. ನಾನು ಕೂಡಾ ಸ್ಕ್ರೀನಿನಲ್ಲಿ ಕಾಣುತ್ತಿದ್ದ ಚಿತ್ರವನ್ನೇ ದಿಟ್ಟಿಸುತ್ತ ಅವೆರಡೂ ಚಿತ್ರಗಳೊಳಗಣ ವೆತ್ಯಾಸಗಳನ್ನ ಗುರುತಿಸಲು ಶುರು ಮಾಡಿದ್ದೆ. ಕೋಳಿಯೊಂದು ತನ್ನ ಮರಿಗಳೊಂದಿಗೆ ತಿಪ್ಪೆಯೊಂದರಲ್ಲಿ ಆಹಾರ ಕೆದಕುತ್ತಿದ್ದ ಚಿತ್ರ. ಕೂಲಂಕುಶವಾಗಿ ಗುರುತಿಸಿದರೆ ಸಣ್ಣ ಸಣ್ಣ ವೆತ್ಯಾಸಗಳು ಗೋಚರಿಸುತ್ತಿದ್ದವು. ಐದು ನಿಮಿಷದ ಕಾಲಾವಧಿಯ ಒಳಗೆ ಬಹುಪಾಲು ಎಲ್ಲರೂ ಅವೆರಡು ಚಿತ್ರಗಳಲ್ಲಿನ ಗರಿಷ್ಠ ಸಾಮ್ಯತೆಗಳನ್ನು ಕಂಡು ಹಿಡಿದು ಮುಗಿಸಿದ್ದರು. ಬಹುಪಾಲು ಎಲ್ಲರೂ ಒಂಭತ್ತು ಹತ್ತು ಹನ್ನೊಂದು ಸಾಮ್ಯತೆಗಳ ಆಸುಪಾಸಿನಲ್ಲಿ ಸಿಕ್ಕು ತಮ್ಮ ತಮ್ಮಲ್ಲೇ ಮುಂದಿನ ಸಾಮ್ಯತೆಯ ಕುರಿತಾಗಿ ಚರ್ಚೆಗಿಳಿದಿದ್ದರು. ನಾನ್ನ ಕೈಲಿ ಯಾವುದೇ ಪ್ರತಿ ಇಲ್ಲವಾದರೂ.. ನಾನೂ ಸುಮ್ಮನಿರದೆ ಸ್ಕ್ರೀನಿನಲ್ಲಿ ಕಾಣುತ್ತಿದ್ದ ಚಿತ್ರವನ್ನೇ ದಿಟ್ಟಿಸಿ ಸಾಮ್ಯತೆಗಳನ್ನ ಗುರುತಿಸಲು ತೊಡಗಿದ್ದೆ. ಸ್ಪರ್ಧಾಳುಗಳ ಗಿಜಿಗು ಡುವ ಚರ್ಚೆಗೆ ವಿಚಲಿತನಾಗುತ್ತಿದ್ದ ನನಗೆ, ಸ್ಕ್ರೀನಿನಲ್ಲಿ ಕಾಣುತ್ತಿದ್ದ ಚಿತ್ರಗಳ ಸೂಕ್ಷ್ಮ ಸಾಮ್ಯತೆಗಳು ತತ್ತಕ್ಷಣಕ್ಕೆ ಮಾಯವಾಗಿ ಗೊಂದಲ ಉಂಟುಮಾಡುತ್ತಿದ್ದವು. ನಾನು ಮತ್ತೆ ಮನಸಲ್ಲೇ ಗೊಣಗುತ್ತಲೇ ಮತ್ತೆ ಅದರಲ್ಲಿನ ಸಾಮ್ಯತೆಗಳನ್ನ ಕಂಡು ಹಿಡಿಯುವಲ್ಲಿ ಪ್ರಯತ್ನ ಹಾಕುತ್ತಿದ್ದೆ. ಎಷ್ಟು ಪ್ರಯತ್ನ ಹಾಕುತ್ತಿದ್ದರೂ ಹನ್ನೊಂದರ ಗಡಿ ದಾಟಿದ ನಮ್ಮ್ಯಾರಿಗೂ ಹನ್ನೆರಡನೆ ಸಾಮ್ಯತೆ ಗೋಚರಿಸುತ್ತಲೇ ಇಲ್ಲ. ಹನ್ನೆರಡೂ ಸಾಮ್ಯತೆಗಳನ್ನು ಪತ್ತೆ ಹಚ್ಚದ ಹೊರತು ಯಾರೂ ಸ್ಪರ್ಧೆ ಮುಗಿಸುವಂತಿಲ್ಲ. ಹತ್ತು ನಿಮಿಷವಾಯಿತು ಯಾವ ತಂಡವೂ ತಮ್ಮದು ಪೂರ್ತಿಯಾಯಿತು ಎಂದು ಮುಂದೆ ಬರಲಿಲ್ಲ. ನನ್ನ ಪರಿವಿಕ್ಷಣೆಯಲ್ಲಿಯೂ ಹನ್ನೆರಡು ಸಾಮ್ಯತೆಗಳು ಪೂರ್ತಿ ಸಿಕ್ಕಿರಲಿಲ್ಲ. ಕ್ಸೇವಿಯರ್ ಸಾರ್ ಇನ್ನೂ ಎರಡು ನಿಮಿಷಗಳ ಹೆಚುವರಿ ಕಾಲಾವಕಾಶ ಕೊಟ್ಟರೂ ಯಾರಲ್ಲಿಯೂ ಕಂಡು ಹಿಡಿಯಲಾಗಲಿಲ್ಲ.
ಆ ನಾಲ್ಕೂ ತಂಡಗಳ ಶೋಧನೆಯ ಅನುಸಾರ ಕ್ಸೇವಿಯರ್ ಸಾರ್ ಆ ಎರಡೂ ಚಿತ್ರಗಳಲ್ಲಿನ ವೆತ್ಯಾಸಗಳನ್ನು ಪವರ್ ಪಾಯಿಂಟ್ ನ ಸ್ಲೈಡ್ ನಲ್ಲಿ ಮಾರ್ಕ್ ಮಾಡುತ್ತಾ ದಾಖಲಿಸುತ್ತಾ ಹೋದರು. ಎಲ್ಲಾ ತಂಡಗಳ ಒಪ್ಪಿಗೆಯಂತೆ ಚಿತ್ರಗಳಲ್ಲಿನ ಹನ್ನೊಂದು ಸಾಮ್ಯತೆಗಳು ಪತ್ತೆಯಾದವು. ಯಾವ ತಂಡಕ್ಕೂ ಹನ್ನೆರಡನೆಯದು ನಿಲುಕಿರಲಿಲ್ಲ. ಕ್ಸೇವಿಯರ್ ಸಾರ್ ಮೂಲೆಯಲ್ಲಿ ನಿಂತಿದ್ದ ನನ್ನತ್ತ ತಿರುಗಿ.. ನಿನಗೆ ಬೇರೆ ಯಾವುದಾದರೂ ವೆತ್ಯಾಸ ಕಾಣಿಸುತ್ತೇನೆಪ್ಪ ಅಂದ್ರು. ನಾನು ಅದೆಷ್ಟು ಪ್ರಯತ್ನ ಪಟ್ಟರೂ ಹನ್ನೆರಡನೆಯ ಸಾಮ್ಯತೆ ಕಾಣಿಸಲೇ ಇಲ್ಲದರ ಸಲುವಾಗಿ ನಾನು ಕೂಡ ನನ್ನ ಸೋಲನ್ನು ಒಪ್ಪಿಕೊಳ್ಳಲೇ ಬೇಕಾಯ್ತು. ಕಡೆಗೆ ಕ್ಸೇವಿಯರ್ ಸಾರ್ ಎಲ್ಲರನ್ನೂ ಅವರವರ ಸ್ಥಳಗಳಲ್ಲಿ ಕೂರುವಂತೆ ಸೂಚಿಸಿದರು . ತದನಂತರ ಆ ಚಿತ್ರದ ಕುರಿತಾಗಿ ಮಾತನಾಡಲು ಶುರುವಿಟ್ಟರು..
ಸರಿಯಾಗಿ ನೋಡ್ತಾ, ಇಲ್ಲಿ ನೀವು ಸ್ವಲ್ಪ ನಿಮ್ಮತನವನ್ನ ಉಪಯೋಗಿಸಿದ್ದಿದ್ರೆ ಹನ್ನೊಂದನೇ ತಪ್ಪನ್ನ ಕಂಡು ಹಿಡಿದ ಮರುಕ್ಷಣವೇ ನೀವು ಗೆದ್ದಿರುತ್ತಿದ್ದಿರಿ. ಆ ಹನ್ನೆರಡನೆ ತಪ್ಪು ಬೇರೆಲ್ಲೂ ಇಲ್ಲ.. ನಿಮ್ಮೊಳಗಿದೆ..!! ನಿಮಗೆ ನಿಮ್ಮೊಳಗಿಲ್ಲದ ನಂಬಿಕೆಯಲ್ಲಿದೆ..!! ನಿಜ ಅಂದ್ರೆ ಆ ಚಿತ್ರದೊಳಗೆ ಹನ್ನೆರಡನೇ ತಪ್ಪೇ ಇಲ್ಲ. its a tricky game.. ನಾನಿಲ್ಲಿ ಸೇರಿಸಿದ ಹನ್ನೆರಡು ಅನ್ನುವ ಪದವೇ twist. ನಾನು ಕೇವಲ ಚಿತ್ರವನ್ನ ಕೊಟ್ಟು ಇದರಲ್ಲಿರುವ ಸಾಮ್ಯತೆಗಳನ್ನ ಕಂಡು ಹಿಡೀರಿ ಅಂತ ಕೊಟ್ಟಿದ್ದಿದ್ರೆ ಖಂಡಿತ ನೀವೆಲ್ಲರೂ ಐದು ನಿಮಿಷಗಳ ಒಳಗೆ ಕಂಡು ಹಿಡಿದು ಕೊಟ್ಟಿರುತ್ತಿದ್ದಿರಿ.. ಯಾಕಂದ್ರೆ ಆಗ ಅದು ಕೇವಲ ನಿಮ್ಮ ಪಾಲಿಗೊಂದು ಆಟವಾಗಿರುತ್ತಿತ್ತು.. ಆದರೆ ನಾನೊಂದು ಸಂಖ್ಯೆಯನ್ನ ಕೊಟ್ಟು ನಿಮ್ಮೊಳಗೆ ನಾಲ್ಕು ತಂಡವನ್ನಾಗಿ ಆಡಲು ಬಿಟ್ಟದ್ದೇ ಅದು ಪಂದ್ಯವಾಯ್ತು.. ಪಂದ್ಯ ಅಂದರೆ ಅಲ್ಲಿ ಗುರಿ. ಆಟಕ್ಕೂ ಪಂದ್ಯಕ್ಕೂ ನಡುವೆ ಬಹಳ ವೆತ್ಯಾಸವಿದೆ..!! ನಿಮಗೆ ನಾನು ಕೊಟ್ಟ ಗುರಿಯನ್ನ ಪೂರ್ತಿಯಾಗಿ ಮುಗಿಸೋ ಕೆಲಸವೇ ಹೊರತು ಯಾರಿಗೂ ಅನುಭವಿಸಿ ಅದನ್ನಾಡುವ ಮನಸ್ಸಿಲ್ಲ. ಎಲ್ಲರಿಗೂ ಗೆಲ್ಲಬೇಕೆನ್ನುವ ಛಲ.. ಹಠ.. ಒಬ್ಬೊಬ್ಬರ ನಡುವೆಯೂ ಸ್ಪರ್ಧೆ..!! ನಿಜವಾಗಿಯೂ ಅಲ್ಲಿ ನಾವಾಗ ಕಳೆದು ಕೊಳ್ಳೋದು ಅಂದ್ರೆ ನಮ್ಮತನವನ್ನ ಮಾತ್ರವಲ್ಲ, ಆ ಕ್ಷಣಕ್ಕೆ ನಮ್ಮೊಳಗಿರಬೇಕಾದ ಸಾಮಾನ್ಯ ಜ್ಞಾನವನ್ನ ಕೂಡಾ. ಆ ನಮ್ಮತನ, ನಮ್ಮ ಸಾಮಾನ್ಯ ಜ್ಞಾನ ನಮ್ಮೊಳಗೇ ಇಲ್ಲದೇ ಹೋಗೋದೇ ನಮ್ಮ ಸೋಲಿಗೆ ಕಾರಣ. ನಿಜ ಜಗತ್ತಿನೊಳಗೆ ಈಗ ಇಂಥವೇ ಸ್ಪರ್ಧೆಗಳು.. ಅದನ್ನ ಆಟವಾಗಿ ಆಡುವ ವ್ಯವಧಾನವಾಗಲಿ, ಸಂಯಮವಾಗಲಿ ಯಾರಲ್ಲೂ ಇಲ್ಲ. ಒಂದೊಂದು ಗುಂಪಲ್ಲೂ ನಾಲ್ಕು ಜನರಿದ್ದೂ ನಾಲ್ಕು ಜನರ ಬುದ್ಧಿಶಕ್ತಿಗೆ ಬಲವಿಲ್ಲ.. ಗೆಲುವಿಲ್ಲ. ಅದರ ಪರಿಣಾಮವೇ ನಾಲ್ಕು ಜನ ಬುದ್ಧಿವಂತರಿದ್ದೂ ಸಮಸ್ಯೆ ಬಗೆ ಹರಿಯಲಿಲ್ಲ..!! ಇಷ್ಟೆಲ್ಲಾ ಬುದ್ಧಿವಂಥರಿದ್ದೂ, ನಾಲ್ಕು ತಂಡಗಳಿದ್ದೂ ಯಾರಿಂದಲೂ ಗೆಲ್ಲಲಾಗಲಿಲ್ಲ. ಜಗತ್ತಿನಲ್ಲಿ ಇಂಥಾ ಸಮಸ್ಯೆಗಳಿಗೆ ನಾವೆಲ್ಲಾ ಆತುರ ಪಟ್ಟು ಸ್ಪಂದಿಸೋದೆ ಹೀಗೆ..!! ಸಮಸ್ಯೆ ನೋಡಿದ್ರೆ ಹೀಗೆ ತುಂಬಾ ಸಿಲ್ಲಿ..!! ಆದರೆ ಫಲಿತಾಂಶ ಸೊನ್ನೆ..!! ದೊಡ್ಡ ದೊಡ್ಡ ಬೀಗ ಯಾವತ್ತೂ ತೊರೆದು ಕೊಳ್ಳೋದು ಸಣ್ಣ ಸಣ್ಣ ಕೀಲಿಗಲಿಂದಲೇ..!!
ಇದೆಲ್ಲ ಹೇಳಿದ ನಂತರ ಕ್ಸೇವಿಯರ್ ಸಾರ್ ನಮಗೆಲ್ಲ ಒಂದು ವೀಡಿಯೋ ತೋರಿಸಲು ಶುರು ಮಾಡಿದರು..!! ತ್ರೀ ಈಡಿಯಟ್ಸ್ ಚಿತ್ರದ ಆ ದೃಶ್ಯವನ್ನ ಖಂಡಿತ ನಾವ್ಯಾರು ಮರೆಯೋ ಹಾಗಿಲ್ಲವಲ್ಲ..!! ಅದೇ FARHANITRATE.. PRERAJULISATION ಪ್ರಸಂಗ..!!
ಪ್ರಿನ್ಸಿಪಾಲ್ ನಾಯಕನನ್ನ ಎಳಕೊಂಡು ಹೋಗಿ ಬೋರ್ಡ್ ಮುಂದೆ ನಿಲ್ಲಿಸಿ, ಇವತ್ತು ನೀನು ನಮಗೆಲ್ಲ ಕಲಿಸು ಅಂತ ಬಿಟ್ಟಾಗ ಅಮೀರಖಾನ್ ಬೋರ್ಡ್ ಮೇಲೆ ಈ ಪದಗಳನ್ನ ಬರೆದು ಮೂವತ್ತು ಸೆಕೆಂಡ್ ಗಳ ಒಳಗೆ ಅದನ್ನ ಕಂಡು ಹಿಡಿಯುವ ಕೆಲಸ ಕೊಟ್ಟಾಗ ಎಲ್ಲರು ರೇಸಿಗಿಳಿಯುವ ಪ್ರಸಂಗ..!! ನಿಜಕ್ಕೂ ಆ ದೃಶ್ಯ ಎಷ್ಟು ತಾತ್ವಿಕವಾದದ್ದು ಅಲ್ವಾ..?? ಅಲ್ಲಿನ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿಗಳಂತೆ ನಮಗ್ಯಾರಿಗೂ ನಮ್ಮ ಸಮಸ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸೋ ತಾಳ್ಮೆ ಕೂಡ ಇಲ್ಲ.. ಎಲ್ಲರ ಗಮನವೂ ಅದನ್ನ ಬಗೆಹರಿಸೋದಕ್ಕೆ.. ಗೆಲ್ಲೋದಕ್ಕೆ. ಅಲ್ಲಿನ ತಪ್ಪುಗಳನ್ನ ಕಂಡು ಹಿಡಿಯೋಕೆ ಯಾರೂ ಇಂಜಿನಿಯರಿಂಗ್ ಮಾಡಿರ ಬೇಕಿರಲಿಲ್ಲ ಬುದ್ದಿವುಳ್ಳ ಯಾವ ಸಾಮಾನ್ಯ ಮನುಷ್ಯನಿಗೂ ಸಾಕು. ಆದರೆ ಯಾರೂ ತಮ್ಮ ಬುದ್ಧಿಯನ್ನ ಸರಿಯಾಗಿ ಉಪಯೋಗಿಸಿ ಕೊಳ್ಳೋದಿಲ್ಲ. ಇಂಜಿನಿಯರಿಂಗ್ ಓದ್ತಾ ಇದಿವಿ.. ಎಕ್ಸಾಮ್ ಬರೆದು ಪಾಸಾಗಿ ಒಂದು ಕೆಲಸ ಹಿಡೀಬೇಕು.. ಕೆಲಸ ಸಿಕ್ತು.. ಸಂಬಳ ತಗೊಂಡು ನಮ್ಮ ಜೀವನವನ್ನ ಅಷ್ಟರಲ್ಲೇ ಸಾಗಿಸೋದನ್ನ ಕಲೀಬೇಕು.. ಅಷ್ಟೇ ಆಗೋಯ್ತು ನಮ್ಮ ಜೀವನ. ನಮ್ಮ ಜೀವನದ ಸುತ್ತ ಒಂದು ಬೇಲಿಯನ್ನ ನಾವು ಕಟ್ಟಿಕೊಂಡಂತೆ ಜಗತ್ತು ತನ್ನ ಸುತ್ತ ಕಟ್ಟಿಕೊಂಡಿರೋದಿಲ್ಲ.. ಇಲ್ಲಿ ಸೋತವನಿಗೆ ಸುಂಕವಿಲ್ಲ.. ಎಷ್ಟೇ ಬುದ್ಧಿವಂತನಾದರೂ, ಬಲವುಳ್ಳವನಾದರೂ ಅವನು ಯಾರಿಗೂ ಬೇಡ..!! ಜಗತ್ತಿಗೆ ಬೇಕಾಗಿರೋದು ಗೆಲುವು.. ಗೆಲುವು ಕಾಣಲು ಬೇಕಿರೋದು ಗೆಲುವು ದಕ್ಕಿಸಿ ಕೊಡೋನು.. ಗೆಲುವು ದಕ್ಕಿಸಿ ಕೊಡುವವನಿಗೆ ಬೇಕಿರೋದು ಇವೆಲ್ಲ ಬೇಲಿಯನ್ನ ಮೀರಿದ ಬುದ್ಧಿಮತ್ತೆ.. ಅವನತನ.. ಅವನ ಜ್ಞಾನ..!! ಎಂಥಾ ಒತ್ತಡದಲ್ಲೂ ಅವನನ್ನು ಅವ ಸಂಭಾಳಿಸಿಕೊಳ್ಳುವಂಥ ಪ್ರಬುದ್ಧತೆ.
ನೀವೆಲ್ಲ ಈ ಕಂಪನಿಯಲ್ಲಿ ಒಂದು ಒಳ್ಳೆಯ ಹುದ್ದೆಯಲ್ಲಿರುವವರು.. ನಿಮಗೂ ಮೇಲೆ ನಿಮ್ಮ ಬಾಸ್ ಇರ್ತಾರೆ.. ನಿಮ್ಮ ಕೆಳಗಿನವರಿಗೆ ನೀವೇ ಬಾಸ್ ಆಗಿರ್ತೀರಿ. ಇಂಥಾ ಕಂಪನಿಯೊಳಗೆ ನೀವು ನಿಮ್ಮಷ್ಟಕ್ಕೆ ಕೆಲಸ ಮಾಡೋದು ಯಾವತ್ತು ಅಷ್ಟು ಸುಲಭ ಅಲ್ಲ. ನಿಮ್ಮ ಮೇಲಿನ ಬಾಸ್ ಅನ್ನು ನೀವು ಮೆಚ್ಚಿಸಬೇಕು.. ನಿಮ್ಮನ್ನ ಮೆಚ್ಚಿಸುವಂತೆ ನಿಮ್ಮ ಕೆಳಗಿನವರನ್ನ ತಯಾರಿ ಮಾಡಬೇಕು.. ಇವೆರಡೂ ದಿಕ್ಕಿಂದಲೂ ಸಹಯೋಗವಿದ್ದರೆ ಮಾತ್ರ ನಿಮ್ಮ ಕೆಲಸ ಸರಾಗ. ನಿಮ್ಮ ಕಂಪನಿಯ ಸುಯೋಗ. ಸಮಸ್ಯೆ ಅದೇನಿದ್ರೂ ಧ್ರುತಿಗೆಡಬಾರದು, ಸಮಸ್ಯೆಯ ರೂಪಕ್ಕೆ ಹೆದರಬಾರದು, ಆಕಾರಕ್ಕೆ ಅಂಜಬಾರದು, ಸಮಸ್ಯೆಯ ಮೂಲ ಯಾವತ್ತೂ ಸಣ್ಣದರಿಂದಲೇ ಶುರುವಾಗುತ್ತದೆ. ಅದನ್ನ ಸಣ್ಣದಿರುವಾಗಲೇ ಬಗೆಹರಿಸುವಂತಾಗಬೇಕು. ಅದಕೆ ನಿಮ್ಮೊಳಗೆ ಕ್ಷಮತೆ ಬುದ್ಧಿಮತ್ತೆ, ಜ್ಞಾನ ಎಲ್ಲವೂ ಬೇಕು. ನೆನಪಿಡಿ ದೊಡ್ಡ ದೊಡ್ಡ ಬಂಡೆಗಳಿಂದ ಮನುಷ್ಯ ಯಾವತ್ತೂ ಎಡವುವುದಿಲ್ಲ.. ಎಡವುವುದೆನಿದ್ದರೂ ಚಿಕ್ಕ ಚಿಕ್ಕ ಕಲ್ಲುಗಲಿಂದಲೇ..!!
ಕ್ಸೇವಿಯರ್ ಸಾರ್ ಇನ್ನೂ ಆಸಕ್ತಿ ಎನ್ನಿಸೋ ಅದೆಷ್ಟು ಮೌಲ್ಯಗಳುಳ್ಳ ವಿಚಾರಗಳನ್ನ ತಿಳಿಸಿ ಕೊಡ್ತಾ ಇದ್ರು. ನನ್ನೂ ಸೇರಿ ಅಲ್ಲಿದ್ದವರಿಗೆಲ್ಲ ಅದೆಂಥ ಆಸಕ್ತಿ.. ಬದುಕಿನಲ್ಲಿ ನಾವು ಮಾಡಬಹುದಾದ ಸಣ್ಣ ಸಣ್ಣ ತಪ್ಪುಗಳು ಹೇಗೆಲ್ಲ ಸಮಸ್ಯೆಗಳಾಗುತ್ತವೆ ಅನ್ನೋ ಅಂದಾಜು ಮನವರಿಕೆಯಾಗುವಂತೆ ತೋರುತ್ತದೆ.. ಇಂತಹುದ್ದೆನ್ನೆಲ್ಲ ಕೇಳ್ತಾ ಇದ್ರೆ ಯಾರಿಗೆ ತಾನೇ ಆಸಕ್ತಿ ಬರಲ್ಲ..?? ಕ್ಲಾಸ್ ರೂಮಿನ ಬಾಗಿಲು ತೆರೆದುಕೊಳ್ಳುತ್ತದೆ.. ಅದೇ ವೆಂಕಟೇಶ.. ಅದೇ ನಗು ಮೊಗದೊಂದಿಗೆ..!! ನನ್ನ ಕುರಿತಾಗಿ, ಸಾರ್ ಸಾರ್ ಕರಿತಾ ಇದಾರೆ.. ನಾನು ಕ್ಲಾಸ್ ರೂಮಿಂದ ಹೊರ ಬಂದು ಯಾವ ಸಾರ್ ಎಂದು ಕೇಳುತ್ತೇನೆ.. ಡೀ ಜೀ ಎಮ್ ಸಾರ್ ಎನ್ನುತ್ತಾನೆ. ನಾನು ಬಾಸ್ ಕ್ಯಾಬಿನಿನ್ನ ಕಡೆ ಓಡುತ್ತೇನೆ. ಹೋಗಿ ಕೇಳಿದರೆ, ಆ ಆಯಿಲ್ ರಿಪೋರ್ಟ್ ಗಳನ್ನ ತಕ್ಷಣ ಕಳಿಸಬೇಕಿದೆ ಅನ್ನುತ್ತಾರೆ. ಕಳಿಸೋ ಹೊಣೆ ನನ್ನ ಮೇಲೆ ಹೊರಿಸುತ್ತಾರೆ. ಸಮಯ ಆಗಲೇ ಐದು ಮೈಮರೆತು ಕ್ಸೇವಿಯರ್ ಸಾರ್ ಉಪನ್ಯಾಸ ಕೇಳಿದ್ದರಿಂದ ನನಗೆ ಮೂರು ಗಂಟೆ ಲಾಭ ಮತ್ತು ನಷ್ಟ..!! ನನ್ನ ಕೆಲಸದಲ್ಲಿ ಮಗ್ನನಾಗಿ ಕೂರುತ್ತೇನೆ ಒಂದು ಕಡೆ ಕ್ಲಾಸ್ ರೂಮಿನ ಉಪನ್ಯಾಸದ ಕಡೆ ಸೆಳೆತ.. ಒಂದು ಕಡೆ ಕೆಲಸದ ಹೊರೆ.. ಹೊರೆಯ ಭಾರವೇ ಜಾಸ್ತಿಯಾಗಿ ಅಲ್ಲಿಯೇ ಮನಸ್ಸಿಲ್ಲದೆ ಕೂರುತ್ತೇನೆ. ಕ್ಲಾಸ್ ಮುಗಿದು ಕ್ಸೇವಿಯರ್ ಸಾರ್ ಐದೂಕಾಲಿಗೆಲ್ಲ ಹೊರಟು ಬಿಡುತ್ತಾರೆ.. ಅವರನ್ನ ಮೀಟ್ ಮಾಡುವ ಹಂಬಲವಿತ್ತು, ಕ್ಲಾಸ್ ನಲ್ಲಿ ಅವರ ಉಪನ್ಯಾಸ ನನ್ನ ಮೇಲೆ ಮಾಡಿದ ಪ್ರಭಾವದ ಕುರಿತಾಗಿ ಅವರನ್ನಮಾತಾಡಿಸಿ ಖುಷಿಯಾಗಬೇಕು ಅಂದುಕೊಳ್ಳುತ್ತೇನೆ.. ಅದೂ ಆಗಲಿಲ್ಲವಿಲ್ಲವೆಂಬ ಪಶ್ಚಾತಾಪದಿಂದ ಮುಂದಿನ ಅವರ ಆಗಮನದ ನಿರೀಕ್ಷೆಯಲ್ಲಿಯೇ ಹಾಗೆ ಕೆಲಸದಲ್ಲಿ ಮಗ್ನನಾಗುತ್ತೇನೆ.
ನಿಮ್ಮ ಲೇಖನಗಳಲ್ಲಿ ತುಂಬಾ ಇಷ್ಟವಾದ ಲೇಖನ. ಆಸೆ ಆಕಾಂಕ್ಷೆಗಳಿಗೆ ಬೇಲಿ ಇರಬೇಕು.. ಜ್ಞಾನ ವಿಕಸನಕ್ಕೆ ಅಲ್ಲಾ. ನಮಗೆ ನಾವೇ ಗಡಿ ಹಾಕಿಕೊಂಡು ಅದರೊಳಗೆ ಇರಲಾರದೆ.. ದಾಟಲಾರದೆ ಒದ್ದಾಡುವ ಇಂದಿನ ಪರಿಸ್ಥಿತಿಯಲ್ಲಿ ಹೇಳಬೇಕಾದ್ದನ್ನು ಸರಳವಾದ ಉದಾಹರಣೆಯ ಮೂಲಕ ಹೇಳಿದ ರೀತಿ ಇಷ್ಟವಾಯಿತು. ವ್ಯಕ್ತಿ ವಿಕಸನ ಕಾರ್ಯಗಾರದಲ್ಲಿ ಹೇಳುವುದು ನಮಗೆ ಗೊತ್ತಿರುವುದನ್ನೇ.. ಆದರೆ ನಮಗೆ ಅರಿವಿವೆ ಬಂದಿರೊಲ್ಲ ಅಷ್ಟೇ. ಬಂಡೆಯೊಳಗೆ ಮೂರ್ತಿ ಆಗಲೇ ಇರುತ್ತೆ.. ಶಿಲ್ಪಿ ಅದಕ್ಕೆ ಅಂಟಿಕೊಂಡಿರುವ ಬೇಡದ ಕಲ್ಲಿನ ಚೂರುಗಳನ್ನು ಮಾತ್ರ ತೆಗೆಯೋದು. ಹಾಗೆ ನಮ್ಮಲ್ಲಿರುವ ಬೇಡದ ತುಣುಕುಗಳನ್ನು ಕಿತ್ತೆಸೆದಾಗ ಪೂರ್ಣ ಚಂದ್ರರಾಗುತ್ತೇವೆ. ಇಷ್ಟವಾಯಿತು ಸತೀಶ್ ನಿಮ್ಮ ಈ ಲೇಖನ
ReplyDeleteನಮಗೂ ತುಸು ವ್ಯಕ್ತಿತ್ವ ವಿಕಸನದ ಪೂರ್ವಾ ಪರಗಳ ಅರಿವಾಯಿತು. ಇಂತಹ ತರಗತಿಗಳಿಂದ ನಮಗೆ ಮನೋ ವಿಕಸನ ಸಾದ್ಯ. ಒಳ್ಳೆಯ ಹೂರಣ ತುಂಬಿ ಕೊಟ್ಟಿದ್ದೀರಾ ಗೆಳೆಯ.
ReplyDeleteವಾವ್..ಸೂಪರ್ ಬರಹ ಸತೀಶ್...
ReplyDeleteಮೊದಲ ವರುಷದ ಓರಿಯಂಟೇಶನ್ ಕ್ಲಾಸುಗಳ ನೆನಪಾಯ್ತು...:)
ತುಂಬ ಅರ್ಥಪೂರ್ಣವಾದ ಬರಹ. ಯಶಸ್ಸಿಗೆ ಬೇಕಾದ ತಿಳಿವನ್ನು ಚೆನ್ನಾಗಿ ನಿರೂಪಿಸಿದ್ದೀರಿ.
ReplyDelete