ಹತ್ತು ದಿನ..
ಹತ್ತಾರು ಊರು.. ಹತ್ತಾರು ನೀರು, ಹತ್ತಾರು ತರದ ಊಟ.. ಒಂದೊಂದು ಕಡೆ ಒಂದು ಒಂದೊಂದು ಹವಾಮಾನ.. ಬಿಸಿ ಗಾಳಿ.. ಟೂರ್ ಸ್ಟಾರ್ಟ್ ಆದ ಮೊದಲ ದಿನವೇ ಶುರುವಾದ ಶೀತ, ತಲೆನೋವು ಇವೆಲ್ಲದರ ನಡುವೆ ಅನಂತ ಬದಲಾಗದೆ ಉಳಿದದ್ದು ಬಿಸಿಲು ಮಾತ್ರ.
ಏನ್ರಿ ಬಿಸಿಲು ಅದು ಕಡಿಮೆ ಅಂದ್ರೆ ೩೭-೩೮ ಅಷ್ಟು ಸಾಕು ನನ್ನಂತೋನು ಉರಿದು ಹೋಗೋಕೆ..!! ತಂಪು ತಂಪು ಕೂಲ್ ಕೂಲ್ ಅನಿಸಿ ಕೊಳ್ಳೋ ಮಲೆನಾಡಿನ ಮಗ ನಾನು ಹೀಗೆ ಹತ್ತೂರಿನಲ್ಲಿ ಅರ್ಧ ಹಗಲು ಹೊತ್ತೊರಿಯುವ ಬಿಸಿಲಿನಲ್ಲಿ ಕಾರಿನಲ್ಲಿ ಪ್ರಯಾಣ.. ಇನ್ನರ್ಧ ಹಗಲು ಅದೇ ಬಿಸಿಲಿನಲ್ಲಿ ಕೆಲಸ.. ಸಾಲದಕ್ಕೆ ರಾತ್ರಿ ಕೂಡ ಕನಿಷ್ಠ ಒಂಭತ್ತೂವರೆ ಹತ್ತು ಗಂಟೆಯ ತನಕವಾದರೂ ಕೆಲಸ.. ಮಧ್ಯ ರಾತ್ರಿಯವರೆಗೂ ತಂಗಾಳಿಯ ಸುಳಿವು ಕೂಡಾ ಸಿಗಲೊಲ್ಲದು ತಮಿಳುನಾಡಿನ ಈ ಬಿಸಿಲ ದೇಶಗಳಲ್ಲಿ. ಸಹಿಸಿ ಹೇಗೆ ಬದುಕೋದು ಹೇಳಿ..??
ಕಂಪನಿ ಕೆಲಸದ ನಿಮಿತ್ತ ಹೋರಟ ಟೂರ್ ಆದ್ದರಿಂದ ಎಲ್ಲಾ ಕಡೆ ನಮಗೆ ಗೆಸ್ಟ್ ಹೌಸ್ ಸೌಲಭ್ಯವಿತ್ತು. ಬಹುತೇಕ ಎಲ್ಲಾ ಕಡೆ ಏಸಿ ರೂಮಿನ ಸೌಲಭ್ಯವಿದ್ದದ್ದರಿಂದ ರಾತ್ರಿ ಯಾವತ್ತು ರೌರವ ಎನಿಸಿರಲಿಲ್ಲ. ಕರೂರು ಕಣ್ರೀ..!! ತಮಿಳುನಾಡಿನ ಬಿಸಿಲ ನಾಡಿನ ಹಿಟ್ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು. ಕೇಳಿದ ಹಾಗೆ ತಮಿಳುನಾಡಿನ ಬಿಸಿಲ ಬಿಸಿ ಅಧಿಕವೆನಿಸಿ ಕೊಳ್ಳುವುದೇ ಇಲ್ಲಿ. ನಮ್ಮ ಗ್ರಹಚಾರಕ್ಕೆ ಅಲ್ಲಿ ಗೆಸ್ಟ್ ಹೌಸ್ ನಲ್ಲಿ ಏಸಿ ರೂಂ ಇಲ್ಲ..!! ರಾತ್ರಿ ಇಡೀ ನರಳಾಡಿ.. ಹೊರಳಾಡಿ ಮಲಗಲೆತ್ನಿಸಿದರು ಆ ಬಿಸಿಲಿಗೆ ಈ ದೇಹ ಒಗ್ಗಲೇ ಇಲ್ಲ.. ನೆಲವಾದರೂ ಕಾದ ಹೆಂಚೆ.. ಬರೀ ನೆಲದ ಮೇಲೂ ಮಲಗಲಾಗಲಿಲ್ಲ. ನನ್ನ ಮೊರೆ ಆ ವರುಣನಿಗೆ ಕೇಳಿತೇನೋ ಸಣ್ಣಗೆ ಜಿಟಿ ಮಳೆ ಶುರುವಾಯ್ತು. ಸತ್ತು ಹೋಗುವಷ್ಟು ಹಸಿದವನಿಗೆ ಸೀಬೆ ಕಾಯಿ ಸಿಕ್ಕಿದ ಹಾಗಿತ್ತು. ಆ ಮಳೆಯೂ ನನಗೆ ಅಂಥಹ ಮಹದುಪಕಾರ ಏನೂ ಮಾಡಲಿಲ್ಲ. ರಾತ್ರಿ ಇಡೀ ಮಂಪರುಗಣ್ಣಿನಲ್ಲೇ ಎದ್ದು ಕೂತು ಲ್ಯಾಪ್ ಟಾಪಿ ನಲ್ಲಿ ಒಂದೆರಡು ಹಾಡು.. ಬುಕ್ ನಲ್ಲಿ ಒಂದೆರಡು ಬರಹ ಓದಿದೆನಾದರು ಸೆಕೆ ಅದಕ್ಕೂ ಸಂಯಮ ನೀಡುತ್ತಿಲ್ಲ. ಮಧ್ಯ ರಾತ್ರಿ ಇಂದಾಚೆಗೆ ಹೇಗೋ ನಾನೇ ಮಣಿದು, ದಣಿದು ಬೇರೆ ವಿಧಿ ಇಲ್ಲದೆ ಬೆಂದು ಕೊಂಡೆ ಮಲಗಿದ್ದೆ. ಅದ್ಯಾವ ಶತಮಾನಕ್ಕೆ ನಿದ್ದೆ ಬಂತೋ ತಿಳಿಯಲಿಲ್ಲ. ಅದಾಗಿ ಮಾರನೆ ದಿನ ಉಡುಮಲ ಪೇಟೆಯಲ್ಲಿ ಕೆಲಸ ಅಲ್ಲಿ ಪುಣ್ಯಕ್ಕೆ ಏಸಿ ರೂಮು ಸಿಕ್ಕಿತ್ತು. ಅದಾದ ಮರು ದಿನವೇ ಕೋಯಮತ್ತೂರಿನಲ್ಲಿ ಕೆಲಸ.
ಅಂದು ಸಂಜೆ ಉಡುಮಲ ಪೇಟೆಯಲ್ಲಿ ಕೆಲಸ ಮುಗಿಸಿ ಸ್ವಲ್ಪ ತಡವಾಗಿ ಹೊರಟದ್ದರಿಂದ. ಕೊಯಮತ್ತೂರು ತಲುಪುವುದು ಸಂಜೆ ಏಳೂವರೆಯಾಗಿತ್ತು ಹೋದವನೇ ನೇರ ಕೆಲಸ ಶುರು ಮಾಡಿದೆ. ಬಿಸಿಲ ಝಳ ಅಲ್ಲೂ ಕಮ್ಮಿ ಏನಿರಲಿಲ್ಲ. ನನ್ನ ಮತ್ತು ಅರಸೂರು ಆಫೀಸಿನ ಗೆಳೆಯ ಅಭಿಲಾಶ್ ಗೆ ಕೆಲಸದ ಮಧ್ಯೆ ಮಾತಿಗೆ ಸಿಕ್ಕಿದ ವಿಚಾರವೇ ಈ ಬಿಸಿಲು. ಆವಾ ಮಲಯಾಳಿ ಹುಡುಗ.. ನನಗೆ ಮಲಯಾಳಂ ತಕ್ಕ ಮಟ್ಟಿಗೆ ಬರುತ್ತದಾದರೂ ನಾನು ಮಲಯಾಳಂ ಮಾತಾಡಲು ಶುರುವಿಟ್ಟರೆ ಅವನು ಮಲಯಾಳದ ಮೇಲೆ ತನ್ನ ಅಭಿಮಾನ ಕಳಕೊಂಡ್ರೆ ಕಷ್ಟ..!! ದೊಡ್ಡ ಮನಸ್ಸು ಮಾಡಿ ನಾ ತಮಿಳಿನಲ್ಲಿ ಹೇಳುತ್ತಾ ಹೋದೆ..
ಏನ್ ಅಭಿ ಇದು.. ನಿಮ್ ಕಡೆ ಇರೋದು ಬಿಸಿಲಾ ಇಲ್ಲಾ ಬೆಂಕಿ ನಾ..?? ನೋಡು ಒಂದು ವಾರಕ್ಕೆ ಹೇಗೆ ಸೊರಗಿದಿನಿ ನಾನು.. ಹೇಗೆ ಸುಟ್ಟು ಕರಕಲಾಗಿ ಸಣಕಲಾಗಿದೀನಿ.. ನೀವೆಲ್ಲ ಅದು ಹೇಗಪ್ಪ ಇರ್ತೀರಾ ಇಲ್ಲಿ..?? ನಮ್ ಕಡೆ ಹೀಗಿಲ್ಲ ನೋಡಪ್ಪ.. ಹೊಸೂರು ಅಂದ್ರೆ ವಾತಾವರಣದಲ್ಲಿ ಜೆರಾಕ್ಸ್ ಕಾಪಿ ಆಫ್ ಬೆಂಗಳೂರು.. ಅಲ್ಲಿ ಯಾವುದು ಅತಿ ಅನ್ನಿಸಲ್ಲ.. ದೇಶದ ಯಾವ ಮೆಟ್ರೋ ಪಾಲಿಟನ್ ಸಿಟಿ ಗಳನ್ನಾದ್ರು ತುಲನೆಗೆ ಹಚ್ಚಿ ಇದು ದೊಡ್ಡದು.. ಇದು ಚಿಕ್ಕದು.. ಇದು ಇಷ್ಟು ಮಂದು ವರೆದಿದೆ, ಅದು ಇಷ್ಟು ಹಿಂದುಳಿದಿದೆ ಅಂತ ವಿಂಗಡಣೆ ಮಾಡಿ ಬಡಾಯಿ ಕೊಚ್ಚಿ ಕೊಂಡು ಬಿಡಬಹುದು. ಆದ್ರೆ ವಾತಾವರಣದ ವಿಚಾರದಲ್ಲಿ ಈಗಲೂ ಬೆಂಗಳೂರಂಥ ಒಂದು ನಗರ ದೇಶದಲ್ಲೆಲ್ಲೂ ಕಾಣದೆ ಇರೋದು ಅದ್ಭುತ ನೋಡು ಅಂತ ಹೇಳಿ ಬೀಗಿದೆ. ಅಭಿ ಕೂಡ ಅದು ಇದೂ ಸಮಜಾಯಿಷಿ ನೀಡುತ್ತ ಕಡೆಗೆ ನನ್ನ ಮಾತಿಗೆ ಹೂಂಕಾರವಿಟ್ಟು ಸುಮ್ಮನಾದ.
ಅಭಿ ಇಲ್ಲಿ ಗೆಸ್ಟ್ ಹೌಸ್ ನಲ್ಲಿ ಏಸಿ ಇದೆ ತಾನೇ.. ಕರೂರ್ ನಲ್ಲಿ ಸಾಕು ಸಾಕಾಗಿ.. ಎಷ್ಟ್ ಬೇಗ ಇಲ್ಲಿಂದ ಕಾಲು ಕಿತ್ತೇನು ಅಂತ ಅವಸರಕ್ಕೆ ಬಿಟ್ಟು ಓಡಿ ಬಂದಿದೀನಿ. ಇಲ್ಲೂ ಹಂಗಾದ್ರೆ ಬಹಳ ಕಷ್ಟ ನೋಡಪ್ಪ. ಹಗಲು ರಾತ್ರಿ ಕೆಲಸ ಮಾಡಿ ರಾತ್ರಿ ನೆಮ್ಮದಿಯಾಗಿ ನಾಲ್ಕು ಗಂಟೆ ನಿದ್ದೆ ಮಾಡದೆ ಹೋದ್ರೆ ಹೆಂಗೆ ಹೇಳು..?? ಅಭಿಯನ್ನ ಕೇಳಿದೆ. ಏಸಿ ಇದೆಯಪ್ಪ ಡೋಂಟ್ ವರಿ.. ಅಭಿ ಕಡೆಯಿಂದ ಸಮಾಧಾನಕರ ಉತ್ತರ. ನಾನು ಮಾತು ಮುಂದುವರೆಸುತ್ತಾ ಹೇಳಿದೆ ಹಿಂಗೆ ಆದ್ರೆ ನಮ್ಮ ಮುಂದಿನ ಬದುಕು ಹೆಂಗಪ್ಪ.. ಗ್ಲೋಬಲ್ ವಾರ್ಮಿಂಗ್ ಈ ರೀತಿ ಏರ್ತಾ ಹೋದ್ರೆ ಬದುಕೋದು ಹೇಗೆ.. ಭೂಮಿ ಮಂಗಳ ಗ್ರಹ ಆಗೋಕೆ ಬಹಳ ಕಾಲ ಬೇಕಿಲ್ಲ ನೋಡು..!!
ನಮ್ಮ ಮಾತಿನ ಮಧ್ಯೆ ನಮ್ಮ ಸಹಾಯಕ್ಕೆಂದು ಬಂದಿದ್ದ ಸೆಕ್ಯೂರಿಟಿ ಯೊಬ್ಬರ ಮಾತುಗಳು ತೂರಿದವು.. ಅದು ಕೂಡ ಅಚ್ಚ ಕನ್ನಡದಲ್ಲಿ..!! ನನಗೆ ಅಚ್ಚರಿ..!! ಅವರ ಹೆಸರು ಶ್ರೀನಿವಾಸ.. ಮೂಲ ಊಟಿಯವರು. ಊಟಿಯಲ್ಲಿ ಅರ್ಧ ಭಾಗದಷ್ಟು ಜನ ಕನ್ನಡಿಗರೇ ತುಂಬಿಹರೆಂದು ಅವರು ಹೇಳಿದ್ದು ಕೇಳಿ ತುಂಬಾನೇ ಖುಷಿಯಾಯ್ತು. ಮಿಲಿಟರಿ ಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ತಗೊಂಡ ನಂತರ ಇಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡ್ತಾ ಇದಾರೆ. ಅವರು ಹೇಳ್ತಾ ಹೋದರು.. ಏನ್ ಸಾರ್ ನಾಲ್ಕು ದಿನಕ್ಕೆ ನೀವು ಇಷ್ಟು ಪರದಾಡಿ ಕಂಗಾಲು ಆಗಿದ್ದೀರಲ್ಲ.. ಇಲ್ಲಿ ದಿನ ಬದುಕೋರು ನಾವು ನಮಗೆ ಹೇಗಿರಬೇಡ..?? ಸ್ವಲ್ಪ ತಾಳಿ ಸಾರ್.. "ತಾಳಿದವನು ಬಾಳಿಯಾನು" ತಾಳೋದು ಅಂದ್ರೆ ಇಲ್ಲಿ ಕಾಯೋದು ಅಂತ ಅಲ್ಲ.. ತಡೆದು ಕೊಳ್ಳೋದು ಅಂತ. ನೋಡಿ ನಮ್ಮ ವಾತಾವರಣ ನೀರು ಗಾಳಿ ಎಲ್ಲ ಈ ಹಿಂದಿಗಿಂತ ದೂಷಿತ.. ಹಿಂದೆ ಇದ್ದ ಹಾಗೆ ಈಗಿಲ್ಲ.. ಈಗಿರೋ ಹಾಗೆ ಇನ್ಮುಂದೆ ಕೂಡ ಇರೋಲ್ಲ. ಇನ್ಮುಂದೆ ಕೂಡ ಪರಿಸ್ತಿತಿ ಹೀಗೆ ಇರುತ್ತೆ ಅನ್ನೋ ಹಾಗಿಲ್ಲ. ಈಗಾಗಲೇ ನೀರಿಗೆ ಬರ.. ಬಿಸಿಲಿಗೆ ಜ್ವರ.. ಇನ್ನು ಮುಂದಿನ ದಿನಗಳು ಇವಕ್ಕಿಂತ ಘೋರ.. ಬರೀ ಮೂವತ್ತೇಳು ಡಿಗ್ರೀ ಗೆ ಹೀಗಂತೀರಲ್ಲ ಅರಬ್ ದೇಶಗಳಲ್ಲೆಲ್ಲ ಬಿಸಿ ನಲವತ್ತೈದು ಡಿಗ್ರಿ ಗಳ ಮೇಲೇನೆ.. ಅಲ್ಲೆಲ್ಲ ಜನ ಹೇಗೆ ಬದುಕುತ್ತಿಲ್ಲ ಹೇಳಿ..?? ಮೂವತ್ತೈದು ಡಿಗ್ರೀ ನೆ ತಡೆದು ಕೊಳ್ಳದ ನೀವು.. ನಾಳೆ ದಿನ ನಮ್ಮ ದೇಶ ಕೂಡ ನಲವತ್ತು ನಲವತ್ತೈದು ಡಿಗ್ರಿ ಬಿಸಿಲಿಗೆ ತುತ್ತಾದರೆ ಹೇಗೆ ಬದುಕ್ತೀರಿ..?? ಆಗೇನು ಏಸಿ ಯನ್ನ ಬೆನ್ನಿಗೆ ಕಟ್ಟಿ ಕೊಂಡೇ ಓಡಾಡೋಕ್ ಆಗತ್ಯೆ..?? ಬಿಸಿಲಿಗೆ ಸ್ವಲ್ಪ ಒಗ್ಗಿ ಕೊಳ್ಳಿ ಸಾರ್.. ಯಾವ ಕಾಲಕ್ಕೂ ಅದು ಒಳ್ಳೆಯ ಬದಲಾವಣೆಯೇ.. ಈಗ ನೋಡಿ ತಮಿಳು ನಾಡಲ್ಲಿ ಇಷ್ಟು ಪವರ್ ಕಟ್ ಪ್ರಾಬ್ಲೆಮ್ ಇದೆ.. ಹಿಂಗಿರುವಾಗ ಏಸಿ ಇದ್ದು ತಾನೇ ಏನು ಪ್ರಯೋಜನ...?? ಕರೆಂಟ್ ಇಲ್ಲದೆ ಏಸಿ ಇಟ್ಕೊಂಡು ಏನ್ ಮಾಡ್ತೀರಿ..?? ಕೊಡೊ ಅರ್ಧ ಗಂಟೆ ಕರೆಂಟ್ ಗೆ ಏಸಿ ಹಾಕ್ಕೊಂಡು ಏನ್ ಮಾಡ್ತೀರಿ..?? ಇಲ್ಲಿ ಬದುಕಬೇಕು ಅಂದ್ರೆ ಇಲ್ಲಿನ ನೀರು ಗಾಳಿ ಬಿಸಿಲು ಎಲ್ಲದಕ್ಕೂ ಹೊಂದಿ ಕೊಳ್ಳದೇ ವಿಧಿ ಇಲ್ಲ. ಇಡೀ ತಮಿಳು ನಾಡಿನ ತೊಂಭತ್ತು ಪ್ರತಿಶತ ಜನ ಬದುಕ್ತಿರೋದೆ ಹಾಗೆ. ದೇಶದ ಉತ್ತರ ಭಾಗದ ಕಡೆ ಪರಿಸ್ತಿತಿ ಇದಕ್ಕಿಂತಲೂ ವ್ಯತಿರಿಕ್ತ. ಅವರೆಲ್ಲರೂ ಬದುಕ್ತಿರೋದು ಇಂಥಾ ಹವಾಮನದಲ್ಲೇ ಅಲ್ವೇ..?? ಉಳ್ಳವರು ಏಸಿ.. ಕೂಲರ್ ಅಂತ ಹಾಕಿಸಿಕೊಂಡು ಹೇಗೋ ಕಾಲ ಕಳೀತಾರೆ.. ತುತ್ತು ಅನ್ನಕ್ಕೂ ಕಷ್ಟ ಪಡೋ ಜನ ಹೆಂಗೆ ಬದುಕ ಬೇಕು..?? ನಮ್ಮ ದೇಶದಲ್ಲಿ ಇರೋರಿಗಿಂತ ಇಲ್ಲದವರೇ ಜಾಸ್ತಿ.. ಅಡ್ಜಸ್ಟ್ಮೆಂಟ್ ಸಾರ್ ಅಡ್ಜಸ್ಟ್ಮೆಂಟ್.. ಅಡ್ಜಸ್ಟ್ ಮಾಡಿ ಕೊಳ್ಳದೆ ಈ ದೇಶದಲ್ಲಿ ಯಾವತ್ತಿಗೂ ನೆಮ್ಮದಿ ಇಂದ ಬದುಕೋಕಾಗಲ್ಲ..ಈಗಷ್ಟೇ ಹುಟ್ಟಿದ ಎಳೆಗರು.. ಹಸುಗೂಸುಗಳೇ ಇಂಥಾ ವಾತಾವರಣದಲ್ಲಿ ಬದುಕಿ ಬೆಳೆದು ತೋರಿಸುವಾಗ ಬೆಳೆದ ನಮಗೇನು ಕಮ್ಮಿ ಸಾರ್.. ಇರೋ ತನಕ ಅನುಭವಿಸಿ ಇಲ್ಲದ ಮೇಲೆ ಹಲುಬುವ ಬದಲು.. ಇರೋವಾಗಲೇ ಇಲ್ಲದಿರುವಾಗ ಹೇಗೆ ಸಹಿಸಿ ಕೊಳ್ಳೋದು ಅನ್ನೋದನ್ನ ಕಲಿತರೆ ಒಳ್ಳೇದಲ್ವೆ..??
ಶ್ರೀನಿವಾಸಣ್ಣ ನ ಮಾತಲ್ಲೂ ಸತ್ಯವಿತ್ತು. ಸಾಮಾನ್ಯವಾಗಿ ನಮಗಿಂತ ಚಿಕ್ಕವರು, ಅಂತಸ್ತಿನಲ್ಲಿ ಕಿರಿಯರು, ಸ್ತಾನಮಾನಗಳಲ್ಲಿ ಸಾಮಾನ್ಯರಾರಾದರು ಇಂಥ ಉಪದೇಶ ಗಳನ್ನ ಕೊಟ್ಟರೆ ಅದು ಅವರ ಅಧಿಕ ಪ್ರಸಂಗಿತನ ಅಂದುಕೊಂಡು ಉಡಾಫೆ ಮಾಡುವುದೇ ಜಾಸ್ತಿ. ನಮಗೆ ಉಪದೇಶ ನೀಡುವವರು ಕೂಡ ನಮಗಿಂತ ಮೇಲ್ ಸ್ತರದವರಾಗಿರಬೇಕು, ನಮಗಿಂತ ಬುದ್ಧಿವಂತರಾಗಿರಬೇಕು, ಏನನ್ನಾದರೂ ಸಾಧಿಸಿದ ಮಹಾನುಭಾವರೇ ಆಗಿರಬೇಕು ಅನ್ನುವುದೇ ಎಲ್ಲರ ಸಾಮಾನ್ಯ ಅಪೇಕ್ಷೆ ಅಲ್ಲವೇ..?? ಶ್ರೀನಿವಾಸಣ್ಣ ಇದನ್ನೆಲ್ಲಾ ಹೇಳುವಾಗ ನನಗೂ ಹಾಗನ್ನಿಸಿದರೂ ಅವರ ಮಾತಲ್ಲಿ ಒಪ್ಪಲೇಬೇಕಾದ ಸತ್ಯವಿತ್ತು. ಅವರ ಅನುಭವ ಅಲ್ಲಿ ಮಾತಾಡ್ತಾ ಇತ್ತು. ಮಿಲಿಟರಿ ಯಲ್ಲಿ ಅವರು ಅನುಭವಿಸಿದ್ದು ಇದಕ್ಕಿಂತಲೂ ಘೋರವಿರಲಿಕ್ಕೆ ಸಾಧ್ಯವಲ್ಲವೇ..?? ಶ್ರೀನಿವಾಸಣ್ಣ ಹಾಗೆ ಹೇಳಿದ್ದು ಉಪನ್ಯಾಸ ಅನ್ನಿಸಲೇ ಇಲ್ಲ.. ನಮ್ಮಪ್ಪನೋ, ಅಜ್ಜನೋ ಬಳಿಯಲ್ಲಿ, ಬಗಲಲ್ಲಿ ಕುಳಿತು ಹೇಳಿದ ಹಾಗಿತ್ತು.
ಹಾಗೆ ಸುಮ್ಮನೆ ಒಮ್ಮೆ ಯೋಚಿಸಿದೆ.. ಹತ್ತನೇ ತರಗತಿಯಲ್ಲಿ, ಪೀಯೂಸಿ ಯಲ್ಲಿ ಓದಿದ ವಿಜ್ಞಾನದ ಪಾಟಗಳು ನೆನಪಾದವು. ಅದೆಷ್ಟು ಸುಲಭವಾಗಿ ಅದನ್ನ ಮರೆತು ಬಿಟ್ಟಿದ್ದೇವೆ..?? ಅದು ಕೇವಲ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗೊಂದು ಉತ್ತರವಾಗಿ ಬೇಕಾಯ್ತೆ ವಿನಃ.. ಒಂದು ಅಮೂಲ್ಯ ಪಾಠ ವಾಗಿ ಈಗಲೂ ಉಳಿದು ಕೊಂಡಿಲ್ಲ. " ಸೂರ್ಯನ ಅಲ್ಟ್ರಾ ವಯಲೆಟ್ ರೇಸ್ (ಅತಿ ನೇರಳೆ ಕಿರಣಗಳು), ಕಾಸ್ಮಿಕ್ ರೇಸ್ (ಕ್ಷ ಕಿರಣಗಳು) ಇವಾವುದೂ ಭೂಮಿಯನ್ನು ತಲುಪಲು ಬಿಡದಂತೆ, ಈ ದೂಷಿತ ಕಿರಣಗಳನ್ನೆಲ್ಲ ಸೋಸಿ.. ಭೂಮಿಗೆ ಆರೋಗ್ಯಕರವಾದ ಬೆಳಕು ಯಾವುದು ಬೇಕೋ ಅದನ್ನು ಮಾತ್ರ ಹರಿಸಿ ಬಿಟ್ಟು ಕೊಡ್ತಿರೋ ಓಜೋನ್ ಎಂಬ ದಿವ್ಯ ರಕ್ಷಾ ಪರದೆಯ ಪಾಲಿಗೆ ಕಂಟಕವಾಗಿರುವುದೇ ಈ ಏಸಿ & ಫ್ರಿಜ್ಜ್ ಗಳು.. ಇವುಗಳಿಂದ ಹೊರ ಬರುವ ಕ್ಲೋರೋ ಫ್ಲೋರೋ ಕಾರ್ಬನ್ ಗಳಿಂದ ಈಗಾಗಲೇ ಜಗತ್ತಿನ ಹಲವು ಕಡೆ ಓಜೋನ್ ಪದರವನ್ನ ಸಾಕಷ್ಟು ಹಾಳು ಮಾಡಿರೋ ನಾವು, ಅದನ್ನ ಸಂಪೂರ್ಣವಾಗಿ ನಾಶ ಮಾಡುವತ್ತ ಅತಿ ವೇಗವಾಗಿ ಸಾಗ್ತಾ ಇದ್ದೀವೇನೋ ಅನ್ನಿಸ್ತು. ೨೮ ಕ್ಕಿಂತ ಸ್ವಲ್ಪ ಬಿಸಿಲು ಜಾಸ್ತಿ ಯಾದರೂ ಮನೆಯಲ್ಲಿ ಏಸಿ ಆನ್ ಮಾಡುವ ನಾವು ಸ್ವಲ್ಪ ಪರಿಜ್ಞಾನದಿಂದ ಬದುಕಬೇಕಾಗಿರುವುದು ಅಗತ್ಯತೆಯಲ್ಲ ಅನಿವಾರ್ಯತೆ. ಸುಖಕರ ಜೀವನ ಅನ್ನುವುದು ನಮ್ಮ ಮುಂದಿನ ಬದುಕನ್ನ ಬರಡು ಮಾಡಬಾರದು ಅಲ್ವೇ..?? ಈಗ ಎಲ್ಲಿ ನೋಡಿದರೂ ಏಸಿ.. ಮುಂದಾಲೋಚಿಸಿ ಕೊಳ್ಳುವ ಕಾರಾಗಲಿ, ಕಟ್ಟುವ ಮನೆಯಾಗಲಿ, ಸೇರುವ ಕಂಪನಿಯಾಗಲಿ, ಓಡಾಡುವ ಸಾರಿಗೆಯಾಗಲಿ ಯಾವುದೂ ಇದರಿಂದ ಹೊರತಾಗಿಲ್ಲ. ಮನೆಯಲ್ಲಷ್ಟೇ ಅಲ್ಲ ಈಗೀಗ ಆಫೀಸು, ಅಂಗಡಿ, ತರಕಾರಿ ಮಂಡಿಗಳಲ್ಲೂ ಫ್ರಿಜ್ಜ್..!! ಇವೆಲ್ಲದರ ಹೊರತಾಗಿ ನಾವುಗಳಾರು ಬದುಕಲಾರೆವು ಅನ್ನುವಷ್ಟು ನಾವು ಕೂಡ ಬದಲಾಗಿ ಹೋಗಿದ್ದೇವೆ..!!
ನಮಗಿನ್ನು ನೆನಪಿದೆ.. ಒಂದು ಕಾಲಕ್ಕೆ ಕರೆಂಟ್ ಇಲ್ಲದೆ ಕೂಡ ತಿಂಗಳುಗಟ್ಟಲೆ ಅನಾಯಾಸ ಬದುಕಿದ ನಾವು.. ಈಗ ಹತ್ತು ನಿಮಿಷ ಕರೆಂಟ್ ಇಲ್ಲದೆ ನೆಮ್ಮದಿ ಇಂದ ಬದುಕಲಾರದಷ್ಟು ಪರಾವಲಂಬಿ. ಒಮ್ಮೊಮ್ಮೆ ಅನ್ನಿಸ್ತದೆ ನೀರೆಲ್ಲ ಬತ್ತಿ, ಕಲ್ಲಿದ್ದಲು ಖಾಲಿಯಾಗಿ, ಅಣು ವಿಕಿರಣ ಒಡೆದು ಘಾಸಿ ಮಾಡಿ.. ದ್ರವ ಇಂಧನ ಗಳೆಲ್ಲ ಬರಿದಾಗಿ.. ನಾವೆಲ್ಲಾ ಇಷ್ಟು ಬಲವಾಗಿ ನೆಚ್ಚಿಕೊಂಡ ವಿದ್ಯುತ್ ವ್ಯವಸ್ತೆ ಕೈ ಕೊಟ್ಟರೆ..!! ಮನುಷ್ಯ ಆಗ ಬದುಕಿದಂತೆ ಈಗ ಬದುಕಲಾರ.. ಈಗ ಬದುಕಿದಂತೆ ಮುಂದೆ ಬದುಕಲಾರ..!! ಉತ್ತರಗಳು ನಮ್ಮ ಕಲ್ಪನೆಗಳಿಂದಾಚೆಗೆ ಹರಿದಾದುತ್ತವೆಯೇ ಹೊರತು.. ನಿಖರವಾಗಿ ನಿಲುಕುವುದಿಲ್ಲ. ಇದೆಲ್ಲದರ ಹೊರತಾಗಿ ಬದುಕುವುದನ್ನು ನಾವು ಕಲಿತಿಲ್ಲ.
ಕೆಲಸ ಮುಗೀತು.. ಶ್ರೀನಿವಾಸಣ್ಣ ಹೇಳಿದ ಹಾಗೆ ಅಡ್ಜಸ್ಟ್ ಮಾಡ್ಕೊಂಡು ಬದುಕೋದು ಕಲಿಯೋಣ ಅಂದು ಕೊಂಡು ಗಟ್ಟಿ ಮನಸು ಮಾಡಿ ಏಸಿ ಆಫ್ ಮಾಡಿಟ್ಟು ಕೊಂಡೇ ಮಲಗುತ್ತೇನೆ.. ಸ್ವಲ್ಪ ಹೊತ್ತು ನಿದ್ರಿಸಿದಂತೆ ತೋರುವ ನಾನು ನಂತರ ಹೊರಳಾಡುತ್ತೇನೆ.. ನರಳಾಡುತ್ತೇನೆ.. ಮತ್ತೆ ಬೇಯುತ್ತೇನೆ.. ಹೇಗೋ ಮಲಗುತ್ತೇನೆ. ಬೆಳಿಗ್ಗೆ ಎದ್ದು ನೋಡಿದರೆ ಏಸಿ ಆನಾಗಿರುತ್ತದೆ..!! ನಿದಿರೆಯಲ್ಲಿ ಪರಿಜ್ಞಾನವಿಲ್ಲದ ನಾನು.. ನನ್ನ ಕಮಿಟ್ಮೆಂಟ್ ಅನ್ನು ಮೀರಿರುತ್ತೇನೆ..!! ತಪ್ಪಿಲ್ಲ. ಬದಲಾವಣೆ ಅನ್ನೋದು ಒಂದು ದಿನಕ್ಕೇ ಬರುವಂತದಲ್ಲ.. ಬದಲಾಯಿಸಿ ಬದಲಾಯಿಸಿ ಬರಬೇಕ್ಕಾದು..!! ನಾ ಕೆಲಸ ಮಾಡುವ ಹೊಸೂರಿನ ಎಲ್ಲಾ ಕೋಣೆಗಳೂ ಏಸಿ ನಿಯಂತ್ರಿತ.. ನಾನೇನು ಅವನ್ನು ಕಿತ್ತು ಸುಟ್ಟು ಭಸ್ಮ ಮಾಡಿ ಬಿಡಬೇಕು ಅನ್ನುವ ಸಂಕಲ್ಪ ಕೈ ಗೊಳ್ಳುವುದಿಲ್ಲ. ಅದೆಲ್ಲ ಮನುಷ್ಯರಿಗಾಗಿ ಹಾಕಿಸಿರೋದಲ್ಲ ಕೆಲವೊಂದು ಅತಿ ಸೂಕ್ಷ್ಮ ಯಂತ್ರಗಳ ಆರೋಗ್ಯಕ್ಕೆಂದು ಹಾಕಿಸಿರೋದು. ಸ್ವಾಮೀ ಕಾರ್ಯದ ಜೊತೆ ಸ್ವ ಕಾರ್ಯವೂ ಅನ್ನೋ ಹಾಗೆ ನಾವು ಅದರಲ್ಲಿ ಮಿಂದು ಕೆಲಸ ಮಾಡಿ ಖುಷಿ ಗೊಳ್ಳುತ್ತೇವೆ. ಈಗೀಗ ಅಗತ್ಯ ವಿಲ್ಲದ ಸಮಯದಲ್ಲಿ ಖಂಡಿತ ಏಸಿ ಉಪಯೋಗಿಸದ ಹಾಗೊಂದು ನಿಲುವಿಗೆ ಬಂದು ಪಾಲಿಸುತ್ತಿದ್ದೇನೆ.
ಬರೀ ಏಸಿ ಫ್ರಿಜ್ಜ್ ಮಾತ್ರವಲ್ಲ.. ಅವಶ್ಯಕತೆ ಇಲ್ಲದೆ ಬಳಸುವ ಲೈಟ್, ಫ್ಯಾನ್ ಅಥವಾ ಇನ್ನಿತರೇ ವಿದ್ಯುತ್ ಉಪಕರಣಗಳಾಗಲಿ, ಮನೆಯ ನಲ್ಲಿಯಲ್ಲಿ ಸುಮ್ಮನೆ ಹರಿಯುವ ಹನಿ ಹನಿ ನೀರಾಗಲಿ ಎಲ್ಲವೂ ಅಮೂಲ್ಯವೇ.. ಸರ್ಕಾರ ಒಂದು ಉಕ್ತಿ ಹೇಳಿದೆ.. ಒಂದು ಹನಿ ಉಳಿಸಿದ ನೀರು, ಒಂದು ಹನಿ ಸೃಷ್ಟಿಸಿದಕ್ಕೆ ಸಮ.. ಒಂದು ರುಪಾಯಿ ಉಳಿಸಿದರೆ, ಒಂದು ರುಪಾಯಿ ಗಳಿಸಿದಂತೆ, ಒಂದು ಯುನಿಟ್ ಕರೆಂಟ್ ಉಳಿಸಿದರೆ, ಒಂದು ಯುನಿಟ್ ಉತ್ಪಾದಿಸಿದಂತೆ. ನಿಜ ಉಳಿಸುವುದರಲ್ಲಿ ಉಳಿಗಾಲವಿದೆ.. ಉಳಿಸೋಣ.. ಉಳಿದು ಬದುಕೋಣ. ಪರಿಸರ ಉಳಿಸುವುದರಲ್ಲಿ, ಪರಿಸರ ಬೆಳೆಸುವುದು ಕೂಡಾ ಇದೆ. ನೀರು ಉಳಿಸುವುದು ಹೇಗೆ..?? ವಿದ್ಯುತ್ ಉಳಿಸುವುದು ಹೇಗೆ ಅನ್ನುವ ಸಾಮಾನ್ಯ ವಿಚಾರಗಳ ವಿಶ್ಲೇಷಣೆ ಇಲ್ಲಿ ಅವಶ್ಯಕವೇನೂ ಅಲ್ಲ.. ನಮಗೆಲ್ಲರಿಗೂ ಅವುಗಳನ್ನು ಉಳಿಸುವುದರೆಡೆಗಿನ ಮುಕ್ತ ದಾರಿ ಗೊತ್ತಿದೆ. ಆದರೆ ಹೋಗಲಾರದಷ್ಟು ಸೋಗಲಾಡಿ ತನವಷ್ಟೇ.
ನೂರಕ್ಕೆ ತೊಂಭತ್ತೊಂಭತ್ತು ಮಾರ್ಕುಗಳನ್ನು ಗಳಿಸುವಷ್ಟು ಬುದ್ಧಿವಂತ ಮನುಷ್ಯರು ನಾವಾಗದೇ ಹೋದರು.. ನೂರಕ್ಕೆ ಮೂವತ್ತೈದು ಮಾರ್ಕು ಗಳಿಸಿ ಪಾಸಾಗುವಷ್ಟಾದರು ಶ್ರಮಿಸೋಣ.. ಬದುಕಿನ ಮುಂದಿನ ಘಟ್ಟಕ್ಕೆ ಖಂಡಿತ ಕನಿಷ್ಠ ಮೂವತ್ತೈದು ಮಾರ್ಕುಗಳು ಅವಶ್ಯಕ. ಮೂವತ್ತರಿಂದ ನೂರರ ತನಕ ಮಾರ್ಕು ಗಳಿಸುವಷ್ಟು ಪ್ರಯತ್ನ ಪಡುವ ಯಾರಿಗಾದರು ಸರಿ ನನ್ನ ಕಡೆಯಿಂದ ಒಂದು ಸಲಾಂ.
ಪ್ರಯಾಣದ ಆಯಾಸದ ಜೊತೆಗೆ ಕೊನೆಯಲ್ಲಿನ ನಿಮ್ಮ ಆಶಯ ಇಷ್ಟವಾಯ್ತು :)
ReplyDeleteಅಂತೂ ಬಿಸಿಲ ಝಳಕ್ಕೆ ಬಾಡಿ ಬೆಂಡಾದ್ರಿ ಅಂತಾಯ್ತು :)
ಚೆನ್ನಾಗಿದೆ ಪಯಣದ ದಾರಿ
ನೂರಕ್ಕೆ ನೂರರಷ್ಟು ಸತ್ಯವಾಗಿದೆ ನಿಮ್ಮ ಮಾತು.
ReplyDeleteಉಳಿಕೆಯಲ್ಲೇ ಮುಂದಿನ ಪೀಳಿಗೆಯ ಗುಕ್ಕಿದೆ. ನಿಮ್ಮ ಆಶಯ ನಮಗೂ ತಿದ್ದಿಕೊಳ್ಳಲು ಪ್ರೇರಕವಾಗಲಿ.
ReplyDeletenaaykre nimma blog nodiralilla ivaththu modlu nodiddu thumba khushi aythu nodi. haage nimma aashaya koodaa.
ReplyDelete:) :)
ReplyDelete