Saturday, 19 January 2013

ಹೊಸ ವರ್ಷದ ದಿನ ಮತ್ತು ದೇವಕಣದ ರಹಸ್ಯ..

ಡಿಸೆಂಬರ್ ೩೧..

ಬಹುಶ ಅಂದಿನ ದಿನ ರಾತ್ರಿಯನ್ನ ಯಾರೂ ಹಾಗೆ ಸುಮ್ಮನೆ ಯಾಥಾವತ್ ಮಾಮೂಲಿ ದಿನಗಳಂತೆ ಕಳೆದು ಬಿಡುವ ಮನಸ್ಸು ಮಾಡಲಾರರು. ಹಾಗೆ ಮಾಮೂಲಿಯಾಗಿ ಆ ರಾತ್ರಿಯ ಯಾವ ಸಂಭ್ರಮವನ್ನೂ ತಮ್ಮದಲ್ಲದೆಂದು ಧಿಕ್ಕರಿಸಿ ಬಿಡೋ ವ್ಯಕ್ತಿ,  ಒಂದು ತನ್ನಲ್ಲಿ ತನ್ನದೇ ಆದ ಅನೇಕ ಸಿದ್ಧಾಂತಗಳೋ, ತನ್ನದೇ ವರ್ಚಸ್ಸಿನ ತಳಹದಿಗೆ ಕಟ್ಟಿದ ನಿಲುವಿನ ಮೇಲೋ.. ಅಥವಾ ತನ್ನದೇ ಆದ ವಿಶೇಷ ಚಿಂತನೆಗಳನು ಹೊಂದಿದವನ ಹೊರತು ಇಂಥ ಆಚರಣೆಗಳ ಕಡೆಗೆ ವೈಮನಸ್ಸು ಹೊಂದಿರುವ ವ್ಯಕ್ತಿಯಲ್ಲಷ್ಟೇ ಸಾಧ್ಯ. ಈ ಎರಡೂ ಥರದ ವ್ಯಕ್ತಿಗಳನ್ನೂ ನಾನು ಬಲ್ಲೆ.  ಬಹಳ ಹತ್ತಿರದಲ್ಲೇ. ಅಮ್ಮ ಈ ಆಚರಣೆಗೆ ಪರವಾದರೆ.. ಅಪ್ಪ ವಿರುದ್ಧ..!! ನಮಗೆಲ್ಲ ಹೊಸ ವರ್ಷ ಯುಗಾದಿಯಂದು.. ಇದೆಲ್ಲ ಬರಿ ಬೂಟಾಟಿಕೆ ಮಾತ್ರವೆಂದು ತಗಾದೆ ತೆಗೆದು ಮನಸಿಲ್ಲದೆಯೂ ಮನಸ್ಸು ಮಾಡಿ.. ಹಲವೊರೊಡನೆ ಬೆರೆತು ಕ್ಯಾಲೆಂಡರ್ ವರ್ಷದ ಆ ಕೊನೆಯ ದಿನದ ಕೊನೆಯ ಕ್ಷಣಗಳ ಖುಷಿಯನ್ನ ಅಪ್ಯಾಯಮಾನವಾಗಿ ತೆಗೆದು ಕೊಂಡು ಬಿಡೋ ಪೈಕಿಯವರನ್ನೂ ಕೂಡ ನಾನು ಕಂಡಿದ್ದೇನೆ. ಅದೊಂದು ದಿನ ಮಾತ್ರ ಬಹುಪಾಲು ಎಂಥವರನ್ನೂ.. ಎಂಥಾ ಧರ್ಮದವರನ್ನೂ.. ಎಂಥಾ ವರ್ಗದವರನ್ನೂ ತನ್ನ ಪರಿಧಿಗೆ ಸೆಳೆದು ಸರಿ ಸಮನಾಗಿ ಸಂತಸವನ್ನ ಹಂಚಿಬಿಡೋ ಕೆಲವೊಂದು ಕ್ಷಣಗಳನ್ನು ಸೃಷ್ಟಿಸಿ ಕೊಟ್ಟು ಬಿಡುತ್ತದೆ.


ನಾವೂ ಹಾಗೆಯೇ ತೀರಾ ವಿಶೇಷತೆಯೂ ಇಲ್ಲದೆ ತೀರಾ ಸಾಧಾರಣವೂ ಅಲ್ಲದೆ ಸರಳವಾಗಿ, ಸಂತೋಷವಾಗಿ ಅಂದಿನ ದಿನವನ್ನ ಸಂಭ್ರಮಿಸಿದೆವು. ಡಿಸೆಂಬರ್ ೩೧ ರ ರಾತ್ರಿಗೆ ನಮ್ಮ ಕಾಲೋನಿಯ  [ಇಪ್ಪತ್ತು ನೌಕರರು ಮತ್ತವರ ಕುಟುಂಬ ವರ್ಗ ಒಟ್ಟು ಸರಿ ಸುಮಾರು ಅರವತ್ತರಿಂದ ಎಪ್ಪತ್ತು ಜನ] ಎಲ್ಲರಿಗೂ ರಾತ್ರಿ ವಿಶೇಷ ಭೋಜನ ಕೂಟವಿತ್ತು. ಮೈತ್ರಿ ಸಭಾಂಗಣವನ್ನ ಮದುವೆ ಮನೆಯಂತೆ ಸಿಂಗರಿಸಿದ್ದು..  ಒಂದಷ್ಟು ಹೊತ್ತು ಫನ್ ಗೇಮ್ಸ್.. ಒಂದಷ್ಟು ಹೊತ್ತು ಅಂತ್ಯಾಕ್ಷರಿ.. ಕಂಪನಿಯ ಸಾಧನೆ.. ಶೋಧನೆ.. ರೋದನೆಗಳ ಒಳನೋಟ. ಟ್ರಾನ್ಸ್ ಫಾರ್ ಆಗಿ ತಾತ್ಕಾಲಿಕವಾಗಿ ಅಗಲಿದವರ ಒಡನಾಟದ ಮೆಲುಕು.. ಆಕ್ಸಿಡೆಂಟ್ ಆಗಿ ಶಾಶ್ವತವಾಗಿ ಅಗಲಿದ ಮಾಧುಮಣಿ ಸರ್ ಅವರ ಲವಲವಿಕೆಯ ಮೆಲುಕು.. ಇವೆಲ್ಲವನ್ನೂ ಕಲೆತು ನಾವೇ ಮಾಡಿದ ಡಾಕ್ಯುಮೆಂಟರಿ ಯಂಥ ಹತ್ತು ನಿಮಿಷದ ವಿಡಿಯೋ.. ಸರಿಯಾಗಿ ಹನ್ನೆರಡಕ್ಕೆ ಮೂರು ಮಾರುದ್ದದ ಸರ ಪಟಾಕಿ ಹಚ್ಚಿದ್ದು.. ಅದನ್ನ ಹಚ್ಚುತ್ತಲೇ ಕೇಕ್ ಕತ್ತರಿಸಿದ್ದು.. ಒಬ್ಬರ ಬಾಯಿಗೊಬ್ಬರು ಕೇಕೆ ತಿನಿಸಿ.. ಮತ್ತೂ ಕೆಲವರು ಮುಖಕ್ಕೆ ಬಳಿದು ಸಂಭ್ರಮಿಸಿದ್ದು.. ಒಬ್ಬರಿಗೊಬ್ಬರು ತಬ್ಬಿ ಶುಭಾಷಯ ವಿನಿಮಯಿಸಿದ್ದು.. ಎತ್ತಿ ಕುಣಿದು ಕುಪ್ಪಳಿಸಿದ್ದು ಎಲ್ಲದರ ನಂತರ ಎಲ್ಲರೂ ಒಟ್ಟಿಗೆ ಅಲ್ಲಿಯೇ ಹಾಕಲಾದ ಕ್ಯಾಂಪ್ ಫೈರ್ ನ ಸುತ್ತ ಸುತ್ತಿ ಸಂಭ್ರಮಿಸಿ ಎಳೆಯವರಾಗಿದ್ದು.. ಕಡೆಗೆ ನಾವು ಹುಡುಗರೆಲ್ಲರೂ ಗಂಗ್ನಮ್ ಹಾಡಿಗೆ ಇಹ ಮರೆತು ಇಷ್ಟ ಬಂದಂತೆ ಕುಣಿದದ್ದು ಕುಣಿದದ್ದು.. ಹುಡುಗಿಯರು  ತಮಿಳು   ಹಾಡೊಂದಕೆ  ಮೈಮರೆತು ಕುಣಿದದ್ದು.. ಎಲ್ಲದರ ನಂತರ ನಾವ್ ಹುಡುಗರೆಲ್ಲರೂ ಸೇರಿ ಸರಿ ರಾತ್ರಿ ಒಂದಕ್ಕೆ ಹತ್ತಿರದ ಮೆಕ್ ಡೊನಾಲ್ಡ್ ಗೆ ಹೋಗಿ ಹೊಟ್ಟೆ ಬಿರಿಯೆ ತಿಂದು ಬಂದದ್ದು.. ಎಲ್ಲವೂ ಮುಗಿಸಿ ಮಲಗುವ ಹೊತ್ತಿಗೆ ಸಮಯ ಮುಂಜಾವು ಮೂರು.


 ಜನವರಿ ಒಂದು..

ನಮಗೇನು ಸರ್ಕಾರಿ ರಜೆ ಇರಲಿಲ್ಲ. ಅದು ಮಾಮೂಲಿ ದಿನವಲ್ಲದಿದ್ದರೂ ಆಫೀಸ್ ಮಾತ್ರ ಮಾಮೂಲಿಯಂತೆಯೇ ತೆರೆದಿತ್ತು. ರಾತ್ರಿ ಮಲಗಿದ್ದು ಲೇಟ್ ಅಂದ ಮೇಲೆ ಬೆಳಿಗ್ಗೆ ಎದ್ದದ್ದೂ ಲೇಟೇ.. ಹೊಸ ವರ್ಷದ ಮೊದಲ ದಿನವೇ ನಾನು ನಿದಿರೆ ತಿಳಿಯೊಡೆದು ಹಾಸಿಗೆ ಇಂದ ಎದ್ದದ್ದು ಬೆಳಿಗ್ಗೆ ಹತ್ತಕ್ಕೆ. ಸ್ನಾನ ಮುಗಿಸಿ ಕ್ಯಾಂಟೀನ್ ನಲ್ಲಿ ಸಿಕ್ಕ ಎರಡಿಡ್ಲಿ ಹೊಟ್ಟೆಗಿಳಿಸಿ ಆಫೀಸ್ ಸೇರುವ ಹೊತ್ತಿಗೆ ಸಮಯ ಹತ್ತೂವರೆ ಮೀರಿ ಐದು ನಿಮಿಷವಾಗಿತ್ತು. ಮನೆ ಮತ್ತು ಆಫೀಸ್ ಒಂದೇ ಕಾಂಪೌಂಡ್ ಒಳಗಿರುವುದರಿಂದ, ನಮಗೆ ರಜೆ ಅಥವಾ ಆಫೀಸ್ ದಿನಗಳ ಕುರಿತಾಗಿ ಅಂಥಾ ವೆತ್ಯಾಸವೇನೂ ಗೋಚರಿಸುವುದಿಲ್ಲ. ಕೆಲವೊಮ್ಮೆ ಭಾನುವಾರ ಮತ್ತು ಇತರ ರಜಾ ದಿನಗಳು ಕೂಡ ಆಫೀಸ್ ನಲ್ಲಿ ಕಳೆದದ್ದುಂಟು. ಆಫೀಸ್ ಗೆ ಲೇಟ್ ಆಗಿ ಬಂದದಕೆ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಅಸಲಿಗೆ ಯಾರೂ ಸರಿಯಾದ ಸಮಯಕೆ ಬಂದವರೇ ಅಲ್ಲ. ಒಬ್ಬರಿಗಿಂತ ಒಬ್ಬರು ಐದು ಹತ್ತು ನಿಮಿಷಗಳ ಅಂತರಗಳಲ್ಲಷ್ಟೇ ಆಫೀಸ್ ಅನ್ನುವ ಅನಿವಾರ್ಯತೆಯ ಅಖಾಡಕ್ಕೆ ಬಂದು ತಲುಪಿದ್ದು. 


ನಾನು ಬಂದ ನಂತರವೂ ನನಗಿಂತಲೂ ಲೇಟ್ ಆಗಿ ಬಂದವರ ಕಂಡ ನನಗೂ ಏನು ಅನ್ನಿಸಲಿಲ್ಲ. ಯಾರಿಗೂ ಈ ದಿನ ಆಫೀಸಿಗೆ ಬರುವ ಮನಸ್ಸಿಲ್ಲವೆಂದು ಯಾರೊಬ್ಬರೂ ಬಾಯ್ತೆರೆದು ಹೇಳದೇ.. ಎಲ್ಲರಿಗೆ ಎಲ್ಲರೂ ಹೇಳಿ ಕೊಳ್ಳುತ್ತಿರುವಂತಿತ್ತು ಎಲ್ಲರ ಮುಖಭಾವ. ಸರಿಯಾಗಿ ಹನ್ನೊಂದಕ್ಕೆ ಸೇಫ್ಟಿ ಪ್ಲೆಡ್ಜ್.. ನಮ್ಮ ಕಂಪನಿಯ ಹೊಸ ವರುಷಕ್ಕಾಗಿ ರೆಸಲೂಶನ್ ಅಂತಲೇ ಅಂದು ಕೊಳ್ಳಬಹುದಾದ ಹಾಗೆ ಸುರಾಕ್ಷತಾ ನಿಯಮಗಳ ಅನುಸರಣೆಯ ಕುರಿತಾಗಿ ಪ್ರತಿಜ್ಞೆ ಯನ್ನು ಮಾಡಿದ್ದು. ಅದಾದ ನಂತರ ಹೊಸ ವರುಷದ ನೆನಪಿನಾರ್ಥವಾಗಿ, ಸುಂದರ ಪಾರ್ಕ್ ಒಂದಕೆ ಯಾವುದೇ ರೀತಿಯಲ್ಲೂ ಕಮ್ಮಿ ಇಲ್ಲದ ನಮ್ಮ ಆಫೀಸ್ ಕ್ಯಾಂಪಸ್ಸಿನ ಸುಂದರ ಸುಂದರವೆನಿಸಿ ಕೊಳ್ಳುವ ಜಾಗಗಳಲ್ಲಿ ಎಲ್ಲರೂ ನಿಂತು ನಗಲಾರದೆಯೂ ನಕ್ಕು.. ಹಲವು ಫೋಟೋ ತೆಗೆಸಿ ಕೊಂಡದ್ದು. ಹೊಸ ವರುಷದ ದಿನ ಆಫೀಸಿನಲ್ಲಿ ಆದ ಹೊಸ ಮಧುರ ಕ್ಷಣಗಳಿಗೆ ಸಾಕ್ಷಿಯಾದವು.


ಅಂದು ಮಾಕ್ ಡ್ರಿಲ್ ಬೇರೆ..!! ಸರಿಯಾಗಿ ಹನ್ನೆರಡಕ್ಕೆ ಕಂಪನಿಯ ಸೈರನ್ ತನಗೆ ದಿನದ ಮೂರು ಹೊತ್ತಿನ ಬಳಿಕವೂ ಕೂಗಲು ಬರುತ್ತದೆ ಎಂಬುದನ್ನು ಕೂಗಿ ಸಾರಿತ್ತು. ಮಾಕ್ ಡ್ರಿಲ್ ಎಂದರೆ ಯಾವುದೇ ಅನಾಹುತ ಅಥವಾ ಅಫಘಾತದ ಸಮಯದಲ್ಲಿ ಆಫೀಸ್ ಕ್ಯಾಂಪಸ್ಸಿನ ಒಳಗಣ ಜನರೆಲ್ಲರೂ ಆ ಅಕಾಲಿಕ ಸೈರನ್ ಶಬ್ದ ಕೇಳಿಸಿದೊಡನೆ ಆಗಿರಬಹುದಾದ ಅನಾಹುತದ ಕುರಿತಾಗಿ ಎಚ್ಚೆತ್ತು ಕೊಂಡು ಓಡಿ ಬಂದು ಕಂಟ್ರೋಲ್ ರೂಮ್ ಮುಂದಿನ ಅಸ್ಸೆಂಬ್ಲಿ ಪಾಯಿಂಟ್ ನ ಬಳಿ ಒಂದು ಗೂಡುವ ಒಂದು ಪ್ರಕ್ರಿಯೆ. ಯಾರೂ ಎಷ್ಟೇ ಮಹತ್ವದ ಕೆಲಸವಿರಲಿ ಆ ಸೈರನ್ ಶಬ್ದ ಕೇಳಿಸಿಕೊಂಡ ಐದು ನಿಮಿಷಗಳ ಒಳಗೆ ಅಸ್ಸೆಂಬ್ಲಿ ಪಾಯಿಂಟ್ ನಲ್ಲಿ ಅಸ್ಸೆಂಬ್ಲಿ ಯಾಗಬೇಕಿರುವುದು ಕಂಪನಿಯ ಸುರಕ್ಷತಾ ನಿಯಮ ಗಳಲ್ಲೊಂದು. ಮಾಕ್ ಡ್ರಿಲ್ ಅನ್ನುವುದು ಒಂದು ಅಫಘಾತಕ್ಕೆ.. ಅನಾಹುತದ ಸಂಧರ್ಭಕ್ಕೆ ಅಲ್ಲಿನ ಪರಿಸರಕ್ಕೆ ಸೇರಿದ ಕಾರ್ಮಿಕ ವರ್ಗ ಪ್ರತಿಕ್ರಿಯಿಸ ಬಹುದಾದ ತ್ವರಿತತೆಯನ್ನು ಅಳೆಯುವ ಒಂದು ಸಣ್ಣ ಡೆಮೋ ಪ್ರಕ್ರಿಯೆ ಅಷ್ಟೇ. ಅಂದುಕೊಂಡತೆಯೇ ಐದು ನಿಮಿಷದ ಆಸುಪಾಸಿಗೆ, ಕಂಪನಿಯ ಕಾರ್ಮಿಕ ವರ್ಗ.. ಕ್ಯಾಂಟೀನ್ ಸಿಬ್ಬಂಧಿ.. ಕಾಂಟ್ರಾಕ್ಟ್ ಸಿಬ್ಬಂಧಿ.. ಕೂಲಿ ಕಾರ್ಮಿಕರು ಎಲ್ಲರೂ ಸೇರಿ ಸುರಕ್ಷತಾ ರಿಜಿಸ್ಟರ್ ನಲ್ಲಿ ನಮ್ಮ ನಮ್ಮಗಳ ಹಾಜರಾತಿಯನ್ನ ದಾಖಲಿಸಿ ನಿಂತೆವು. ನಮ್ಮ ಬಾಸ್ ಸುರಕ್ಷತಾ ನಿಯಮಗಳ ಕುರಿತಾಗಿ ಒಂದೆರಡು ಮಾತನಾಡಿ ಎಲ್ಲರನ್ನೂ ಬೀಳ್ಕೊಟ್ಟರು.


ಕ್ಯಾಂಟೀನ್, ಕಾಂಟ್ರಾಕ್ಟ್ ಮತ್ತು ಕೂಲಿ ಕಾರ್ಮಿಕರೆಲ್ಲರೂ ಹೋದ ಬಳಿಕ ನಾವು ಕಂಪನಿ ನೌಕರರು ಮಾತ್ರ ಅಲ್ಲಿಯೇ ನಾಲ್ಕೈದು ಗುಂಪುಗಳಾಗಿ ನಿಂತು ಬಾಯಿಗೆ ಸಿಕ್ಕ ವಿಚಾರಗಳನ್ನ ಚರ್ಚಿಸುತ್ತಾ ನಿಂತೆವು. ನಾನು ಎಲ್ಲರ ಮತ್ತು ಎಲ್ಲದರ ಫೋಟೋ ಕ್ಲಿಕ್ಕಿಸುತ್ತಿದ್ದೆ.. ಬಳಿಕ ನಾನು ನನ್ನ ಬಾಸ್ ಇದ್ದ ಗ್ರೂಪ್ ಗೆ ಹೋಗಿ ಸೇರಿ ಕೊಂಡೆ. ಬಾಸ್ ಕೆಲವು ವೈಜ್ಞಾನಿಕ ವಿಚಾರಗಳ ಕುರಿತು ಚರ್ಚೆ ಮಾಡುತ್ತಿದ್ದರು. ನಾ ಹೋದೊಡನೆ ನನಗೊಂದು ಪ್ರಶ್ನೆ ಮುಂದಿಟ್ಟರು. ರಾತ್ರಿ ವೇಳೆಗೆ ಒಂದು ಕೆಂಪು ಗುಲಾಬಿಗೆ ನೀಲಿ ಬೆಳಕನ್ನ ಹಾಯಿಸಿದರೆ ಅದು ಯಾವ ಬಣ್ಣದಲ್ಲಿ ನಮ್ಮ ಕಣ್ಣಿಗೆ ಗೋಚರಿಸುತ್ತದೆ ಅನ್ನುವುದು ಪ್ರಶ್ನೆ. ಕೆಂಪು ಮತ್ತು ನೀಲಿ ಬಣ್ಣಗಳನ್ನು ಬೆರೆಸಿದಾಗ ಹುಟ್ಟುವ ಮಜಂತ ಕಲರ್ ಎನ್ನುವುದೇ ಎಲ್ಲರ ಉತ್ತರವಾಗಿತ್ತು. ನಾನೂ ಎಲ್ಲರಿಗಿಂತ ಡಿಫರೆಂಟ್ ಅನ್ನುವುದನ್ನು ತೋರಿಸಿ ಕೊಳ್ಳುವ ಸಲುವಾಗಿ ಅದು ಕೆಂಪು ಬಣ್ಣದಲ್ಲೇ ಕಾಣುತ್ತದೆ ಸಾರ್ ಅಂದಿದ್ದೆ. ನಮ್ಮ ಬಾಸ್ ಬಣ್ಣಗಳು & ನಮ್ಮ ಕಣ್ಣುಗಳು ಅವುಗಳನ್ನು ಗುರುತಿಸಬಲ್ಲ ಸಾಮರ್ಥ್ಯಕ್ಕೆ ಪೂರಕವಾದ ಥಿಯರಿಯನ್ನು ವಿವರಿಸುತ್ತಾ ಅದು ಕಪ್ಪು ಬಣ್ಣದಲ್ಲಿ ಕಾಣುತ್ತದೆಂಬ ಉತ್ತರವಿಟ್ಟರು. ಅದು ನಮಗೆಲ್ಲರಿಗೂ ಸರಿ ಅನಿಸಿತ್ತು. ಅವರು ಹೇಳಿದಷ್ಟು ಸುಲಭಕ್ಕೆ ನಾನದನ್ನು ಇಲ್ಲಿ ವಿವರಿಸಲಾಗದೆ ಇರುವ ನನ್ನ ದೌರ್ಬಲ್ಯಕ್ಕೆ ನಾನು ಕ್ಷಮೆ ಕೋರುತ್ತೇನೆ. ನಂತರ ಮತ್ತೊಂದು ಪ್ರಶ್ನೆ.. ನಂತರ ಮಗದೊಂದು.. ಅವರು ಕೇಳುವ ಯಾವ ಪ್ರಶ್ನೆಗೂ ನಮ್ಮ ಬಳಿ ಸರಿ ಉತ್ತರವಿಲ್ಲ.. ಕೆಲ ಉತ್ತರಗಳು ಸರಿಯುತ್ತರದ ಆಸು ಪಾಸಿನಲ್ಲಿದ್ದರೂ ಪೂರ್ತಿ ಸರಿಯಾಗಿರಲಿಲ್ಲ. ನಾವೆಲ್ಲಾ ಅಪ್ಡೇಟ್ ಆಗಬೇಕಿದೆ..!! ಬಾಸ್ ನಕ್ಕು ಹೇಳಿದರು. 


ನಿಜ ನಾವೆಲ್ಲಾ ಅಪ್ಡೇಟ್ ಆಗ ಬೇಕಿದೆ. ಪ್ರಚಲಿತ ವಿದ್ಯಾಮಾನಗಳು, ವೈಜ್ಞಾನಿಕ ವಿಚಾರಗಳು, ರಾಜಕೀಯ, ಸಿನಿಮಾ, ಕಲೆ, ಸಾಹಿತ್ಯ, ಸಂಸ್ಕೃತಿ,ಸಧ್ಯದ ಪರಿಸ್ಥಿತಿ ಯಾವುದರ ಪೂರ್ಣ ವಿವರಗಳೂ ನಮ್ಮಲ್ಲಿ ಪೂರ್ಣ ಪ್ರಮಾಣದಲ್ಲಿಲ್ಲ. ಎಲ್ಲರೂ ಅವರದೆ ಪರಿಧಿಯ.. ಅವರದೇ ಬದುಕಿನ. ಅವರದೇ ಆಸುಪಾಸಿನ ಪ್ರಪಂಚಕ್ಕಷ್ಟೇ ಪರಿಚಿತರು.. ತಾವಾಯಿತು ತಮ್ಮ ಬದುಕಾಯಿತು ಅನ್ನುವುದು  ನನ್ನನ್ನೂ  ಸೇರಿ  ಬಹುತೇಕ ಎಲ್ಲರ ಉಮೇದು ಅದೇ ಆಗಿರುತ್ತದೆ. ಒಂದು ಕೆಲಸವಿದೆ ಅದನು ಮಾಡಿದರಾಯ್ತು.. ಸಂಬಳ ಬರುತ್ತದೆ ತೆಗೆದು ಕೊಂಡು ನಮ್ ಇತಿ ಮಿತಿಗಳ ಒಳಗೆ.. ನಮ್ಮ ಸಂವಹನದ ಒಳಗೆ ಬದುಕಿದರಾಯ್ತು. ಇಷ್ಟೇ.. ನಮಗಾಗಿ ನಾವು ಎಳೆದು ಕೊಂಡ ಪರಿಧಿ. ಇದರಾಚೆಗೆ ಇಂದು ಯಾವುದೂ ನಮ್ಮನ್ನ ಅತಿಯಾಗಿ ಬಾಧಿಸುವುದಿಲ್ಲ.. ಕಾಡಿಸುವುದಿಲ್ಲ.. ಪೀಡಿಸುವುದಿಲ್ಲ. ಅಷ್ಟು ಸುಲಭಕ್ಕೆ ನಿಲುಕುವುದೂ ಇಲ್ಲ.


ಒಂದು ಕಾಲಕ್ಕೆ ಹೇಗಿದ್ದವರು ನಾವೆಲ್ಲ..!! ಶಾಲೆಯಲ್ಲಿ ಮೇಷ್ಟ್ರು ಕೇಳುತ್ತಿದ್ದ ಯಾವ ಪ್ರಶ್ನೆಗಾದರು ಮೊದಲು ನಮ್ಮ ಕೈ ಮೇಲೇರುತ್ತಿತ್ತು. ಭಾಗಶಃ ಸರಿಯುತ್ತರವೇ ಆಗಿರುತ್ತಿತ್ತು. ನಾನು ಸ್ಕೂಲ್ ಮತ್ತು ಕಾಲೇಜುಗಳಲ್ಲಿ ಕ್ವಿಜ್.. ಚರ್ಚಾ ಸ್ಪರ್ಧೆ.. ಪ್ರಬಂಧ.. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಲೆ ಮತ್ತು ಕಾಲೇಜನ್ನು ಪ್ರತಿನಿಧಿಸುತ್ತಿದ್ದವನೂ ಕೂಡ. ಆಗೆಲ್ಲ ಜನರಲ್ ನಾಲೆಡ್ಜ್ ಪುಸ್ತಕವನ್ನ ನಮ್ಮ ಇತರ ಪಟ್ಯ ಪುಸ್ತಕಗಳ ಹಾಗೆಯೇ ನಿರಂತರ ಓದುತ್ತಿದ್ದೆವು. ದೇಶದ ಅಷ್ಟೂ ರಾಜ್ಯದ.. ಅಷ್ಟೂ ರಾಜಧಾನಿಗಳ.. ಅಷ್ಟೂ ನದಿಗಳ.. ಅಷ್ಟೂ ಪ್ರಧಾನ ಮಂತ್ರಿಗಳ.. ಅಷ್ಟೂ ರಾಷ್ಟ್ರಪತಿಗಳ ಹೆಸರಿಂದ ಹಿಡಿದೂ.. ರಾಜ್ಯದ ಅಷ್ಟೂ ಮುಖ್ಯ ಮಂತ್ರಿಗಳ ಪಟ್ಟಿಯಿಂದ ಹಿಡಿದು.. ದೇಶ ವಿದೇಶದ ಹಲವು ಪ್ರಥಮಗಳ.. ಹಲವು ವೈವಿಧ್ಯಗಳ.. ಹಲವು ಅದ್ಭುತಗಳ.. ಹಲವು ಸಾಧನೆಗಳ.. ಹಲವು ಸಂಶೋಧನೆಗಳ.. ತಾರಾ ಮಂಡಲದ, ವೈಜ್ಞಾನಿಕ ವಿಚಾರಗಳ.. ಪ್ರಚಲಿತ ರಾಜಕೀಯ & ದೈನಿಕ ವಿಚಾರಗಳ ಕುರಿತಾಗಿ ಕನಿಷ್ಠ ಮಾಹಿತಿಯಾದರೂ ನಮಗೆ ತಿಳಿದಿರುತ್ತಿತ್ತು. ನ್ಯೂಸ್ ಗಳನ್ನೇ ಬಿಡದೆ ನೋಡುತ್ತಿದ್ದೆವು.. ಪೇಪರ್ ಗಳ ಇಂಚು ಇಂಚೂ ಬಿಡದೆ ಓದುತ್ತಿದ್ದೆವು.. ಶಾಲಾ ಕಾಲೇಜುಗಳಿಗೆ ಏರ್ಪಡಿಸುತ್ತಿದ್ದ ಎಕ್ಸಿಬಿಷನ್ ಗಳಲ್ಲಿ ದಂಗು ಬಡಿಸುವಂತಹ ಪ್ರಶ್ನೆಗಳು ನಮ್ಮಿಂದ ಮೂಡುತ್ತಿತ್ತು. ಎಲ್ಲದರೊಳಗೊಂದು ಕುತೂಹಲ ತಾನಾಗಿಯೇ ಮೈದಳೆಯುತ್ತಿತ್ತು. ಅವೆಲ್ಲ ಆಗ ಪಟ್ಯದ ಒಂದು ಭಾಗವಾಗಿತ್ತೆಂದರೂ ತಪ್ಪಿಲ್ಲ. ಅದು ನಮ್ಮ ಇಷ್ಟದ, ಅಚ್ಚು ಮೆಚ್ಚಿನ ಸಂಗತಿಯಾಗಿತ್ತೆನ್ನುವುದು ಕೂಡ ಅಷ್ಟೇ ನಿಜ.


ಸ್ಕೂಲು ಕಾಲೇಜು ಮುಗಿದು ನಮ್ಮ ಯಾಂತ್ರಿಕ ಜೀವನ ಆರಂಭವಾದವು. ನಮ್ಮ & ನಮ್ಮ ಓದಿನ ಯೋಗ್ಯತೆಗನುಗುಣವಾದ ಕೆಲಸಗಳು ಸಿಕ್ಕು ತಮ್ಮ ಪರಿಧಿಯೊಳಗೆ ನಮ್ಮನ್ನ ಬಂಧಿಸಿ ಬಿಟ್ಟವು. ಅದರೊಳಗೆ ನಾವುಗಳು ಅದಾವ ಮಟ್ಟಿಗೆ ಮುಳುಗಿದೆವೆಂದರೆ.. ನಾವಾಯಿತು ನಮ್ಮ ಪಾಡಾಯಿತು. ಪರ ವಸ್ತುವಿನ & ಪರರ ಚಿಂತೆ ನಮಗೇಕೆ ಅನ್ನುವ ಯಾರೂ ಮಾಡದ ಸೂತ್ರವೊಂದನ್ನ ನಾವಾಗಿ ನಾವೇ ಮೈಗೂಡಿಸಿ ಕೊಂಡು ಬಿಟ್ಟೆವು. ದಿನಾ ಹಾಕುವ ಹಾಲಿನ ರೇಟ್ ಕೂಡ ಸರಿಯಾಗಿ ಗೊತ್ತಿಲ್ಲ.. ತಿಂಗಳಿಗೊಮ್ಮೆ ಇಡಿಯಾಗಿ ಅದರ ಹಣ ಕಟ್ಟಿ ಬಿಡುವ ಹಲವರಿಗೆ ಅದರ ಗೊಡವೆ ಬೇಕಿಲ್ಲ. ಅಮ್ಮನೋ ಅಥವಾ ಹೆಂಡತಿಯೋ ಹೊತ್ತು ತರುವ ದಿನಸಿಗಳ ಬೆಲೆಯಾಗಲಿ.. ಸೊಪ್ಪು ತರಕಾರಿಗಳ ಮೌಲ್ಯವಾಗಲಿ.. ಎಣ್ಣೆ-ಬೆಣ್ಣೆ-ತುಪ್ಪಗಳಾಗಲಿ.. ಹಣ್ಣು ಹಂಪಲುಗಳಾಗಲಿ.. ಕೇಬಲ್ ಟೀವಿ ಗಳ ರೇಟ್ ಆಗಲಿ.. ಡಿಶ್ ಟೀವಿಗಳ ಉಪಯುಕ್ತ ಪ್ಯಾಕೇಜುಗಳ ರೇಟ್ ಆಗಲಿ.. ಊಹುಂ ಯಾವುದೊಂದರ ಕುರಿತಾಗಿಯೂ ಯಾರಿಗೂ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ. ನಮಗೆ ಗೊತ್ತಿರುವ ಖಚಿತ ಮಾಹಿತಿ ಗಳೆಂದರೆ ಇಷ್ಟೇ.. ಒಂದು ದಿನಕ್ಕೊಂದು ಬಣ್ಣ ಬದಲಿಸುವ ಪ್ರಸಕ್ತ ರಾಜಕೀಯದ ನಾಟಕ & ರಂಗಿನಾಟ.. ಎರಡನೆಯದು ಸದಾ ಬದಲಾಗುತ್ತಾ ಸುದ್ದಿಯಲ್ಲಿರುತ್ತಲೇ ಇರುವ ಪೆಟ್ರೋಲ್ ಡೀಸೆಲ್ & ಗ್ಯಾಸ್ ಗಳ ಬೆಲೆ ಏರಿಕೆ..!! 

ಈಗ ಗಮನವಿಟ್ಟು ನ್ಯೂಸ್ ಕೇಳುವುದಿಲ್ಲ. ಪೆಪರ್ರೋ ಮುಖ ಪುಟ & ಕಡೆಯ ಪುಟ ಕ್ರೀಡಾ ಕಾಲಂ ಗಳು ತಮ್ಮನ್ನ ತಾವು ಪೂರ್ತಿಯಾಗಿ ಓದಿಸಿ ಕೊಂಡರೆ ಹೆಚ್ಚು. ಪುಸ್ತಕಗಳ ಮೇಲಣ ಅಭಿಮಾನ ಎಷ್ಟು ಜನರಿಗಿದ್ದೀತು..?? ಕಲೆ ಸಂಸ್ಕೃತಿಯ ಕುರಿತಾದ ಕಾರ್ಯಕ್ರಮಗಳನ್ನ ಟೀವಿ ಯಲ್ಲಿ ಮಗ್ನರಾಗಿ ನೋಡುವವರೆಷ್ಟು ಜನ..?? ಒಂದೊಳ್ಳೆ ಸಾಹಿತ್ಯ ಸಂವಾದಕ್ಕೆ.. ಅಥವಾ ಅಂಥಹ ಕಾರ್ಯಕ್ರಮಗಳಿಗೆ ಮನಸಿಟ್ಟು ಹೋಗುವವರೆಷ್ಟು ಜನ..?? ಎಷ್ಟು ಜನ ನಾಟಕ ನೋಡುವ ಹಂಬಲ ಉಳ್ಳವರು..?? ಎಷ್ಟು ಜನ ಕಲಾತ್ಮಕ ಸಿನಿಮಾಗಳನ್ನು ಕೊಂಕಿಲ್ಲದೆ ವೀಕ್ಷಿಸ ಬಲ್ಲರು..?? ಎಷ್ಟು ಜನ ಸಿನಿಮಾ ಮಂದಿಯ ಬಣ್ಣ ಬಣ್ಣದ ಗಾಸಿಪ್ ಗಳ ಕುರಿತಾಗಿ ಹರಟದೆ ಉಳಿಯಬಲ್ಲವರು..??ಎಷ್ಟು ಜನ ಇಪ್ಪತ್ತರ ತನಕದ ಮಗ್ಗಿಯನ್ನ ಈಗಲೂ ತಪ್ಪಿಲ್ಲದೆ ಹೇಳ ಬಲ್ಲರು..?? ಎಷ್ಟು ಜನ ತಪ್ಪಿಲ್ಲದೆ ಈಗಲೂ ಕನ್ನಡ ಪದಗಳನ್ನ ಅಂದವಾಗಿ ಬರೆಯ ಬಲ್ಲರು..?? ಜನಗಣತಿ.. ಪ್ರಸಕ್ತ ಸಾಧಕರು.. ಊಹೂಂ ಇದರ ಕುರಿತಾಗಿಯೂ.. ಯಾವುದರ ಕುರಿತಾಗಿಯೂ ನಿಖರ ಮಾಹಿತಿ ಯಾರಿಗೂ ಇಲ್ಲದಿಲ್ಲ. ಹಾಗೆ ಇದರ ಬಗ್ಗೆ ಜ್ಞಾನ ಉಳ್ಳವರು ಕೂಡ ತಮ್ಮನ್ನ ತಾವು ಬದಲಾಯಿಸಿ ಕೊಳ್ಳದೆ ಹಾಗೆ ಉಳಿದು ಬಂದ ಮಹಾನ್ ಸಾಧಕರೆ ಸರಿ.. ಅಂಥವರಾದರೂ ಎಷ್ಟು ಜನ..?? ಕೇವಲ ಎಗ್ಸಾಮ್ ಗಳ ಸಲುವಾಗಿ ಅಷ್ಟೇ ಜನರಲ್ ನಾಲೆಡ್ಜ್ ಪುಸ್ತಕಗಳನ್ನು ಮುಟ್ಟುವ ನಾವೆಲ್ಲಾ ನಿಜವಾಗಿಯೂ ಪ್ರಾಮಾಣಿಕವಾಗಿ ಅಪ್ಡೇಟ್ ಆಗ ಬೇಕಿದೆ.


ಹಲವಾರು ವೈಜ್ಞಾನಿಕ ವಿಚಾರಗಳನ್ನು ಚರ್ಚಿಸುತ್ತ ಬಾಸ್ ಕಡೆಗೆ ನಮ್ಮ ಮೈ ನವಿರೇಳಿಸುವಂತಹ ವಿದ್ಯಾಮಾನವೊಂದರ ಕುರಿತಾಗಿ ಮಾತನಾಡ ತೊಡಗಿದರು.. ಕ್ವಾರ್ಕ್ಸ್ [Quarks]. ನಮ್ಮ ಬಾಸ್ ಅಜಯ ಕುಮಾರ್ ಒಬ್ಬ ಅದ್ಭುತ ಸೈನ್ಸ್ ಲವರ್. ನಾವು ತೀರ ಇತ್ತೀಚಿಗೆ ಬದಲಾದ ಫಿಲಾಸಫಿಕಲ್ ಥಾಟ್ಸ್ ಲವರ್ಸ್. ನಮ್ಮ ಬಾಸ್ ಹೇಳುತ್ತಾ ಹೋದರು.. ವಿಜ್ಞಾನದ ಒಂದು ವಿಶೇಷತೆ ಎಂದರೆ ನಿನ್ನೆ ಯಾರೋ ಒಬ್ಬ ವಿಜ್ಞಾನಿ ಮಾಡಿಟ್ಟ ಸಿದ್ಧಾಂತಗಳು ಇವತ್ತಿನ ವರೆಗೂ ಸತ್ಯವೆನಿಸಿ ಕೊಳ್ಳುತ್ತವೆ. ಇವತ್ತು ಅದನ್ನು ಬದಲಾಯಿಸಿ ಅದು ತಪ್ಪು.. ಅದು ಅದಲ್ಲ, ಅದು ಇದು ಎನ್ನುವ ಸಿದ್ಧಾಂತಗಳನ್ನ ಕೂಡ ನಾವು ಅಷ್ಟೇ ಮುಕ್ತವಾಗಿ ಅಷ್ಟೇ ಸತ್ಯವೆಂದು ನಂಬಿ ಬಿಡುತ್ತೇವೆ. ಕಾರಣ ಅದಕೆ ಸಾಕ್ಷಿ ಪುರಾವೆಗಳಿವೆ.. ಹಿಂದಿನದಕೂ ಇತ್ತು. ಆದರೆ ಈಗಿನದರ ಬಲ ಮತ್ತು ಪ್ರಾಶಸ್ತತೆ ಹೆಚ್ಚು. ಅದನ್ನೆಲ್ಲಾ ಅವರು ಸಾಧಿಸಲು ಶುರುವಾಗಿದ್ದು ಕೂಡ ಹಿಂದಿನವರ ಸಿದ್ಧಾಂತಗಳ ಮೂಲಗಳಿಂದಲೇ. 


ಬಾಸ್ ಕ್ವಾರ್ಕ್ಸ್ ಗಳ ಬಗ್ಗೆ ಹೇಳುತ್ತಾ ಹೋದರು.. ನಾವೂ ಕುತೊಹಲ ಭರಿತರಾಗಿ ಕೇಳುತ್ತಾ ಹೋದೆವು. ಯಾವುದೇ ಒಂದು ಮೂಲ ಧಾತುವಿನ.. ಒಂದು ಅಣುವನ್ನು ವಿಂಗಡಿಸಿದಾಗ ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಗಳು ಸಿಗುತ್ತವೆ ಅನ್ನುವುದು ಸಾಮಾನ್ಯವಾಗಿ ಹೈಸ್ಕೂಲ್ ವರೆಗೂ ಓದಿರಬಹುದಾದ ಯಾರಿಗಾದರೂ ತಿಳಿದಿರಬಹುದಾದ ವಿಷಯ. ಇಲ್ಲಿಯ ತನಕ ಒಂದು ಅಣುವೆಂದರೆ ಇನ್ನು ವಿಭಜಿಸಲಾಗದ, ಆ ಮೂರು ಶಕ್ತಿಗಳ ಒಂದು ಚಿಕ್ಕ ಕಣ ಅನ್ನುವುದಷ್ಟೇ ಆಗಿತ್ತು. ಬಾಸ್ ಹೇಳುತ್ತಾ ಹೋದರು.. ವಿಜ್ಞಾನಿಗಳ ಇತ್ತೀಚಿನ ಅನ್ವೇಷಣೆಗಳ ಪ್ರಕಾರ ಅಣುವನ್ನು ಇನ್ನೂ ಚಿಕ್ಕದಾಗಿ ವಿಭಜಿಸಬಹುದು.. ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್ ಗಳ ಆಚೆಗೂ ಅಣುವಿನೊಳಗೆ ಅದಕಿಂತಲೂ ಸೂಕ್ಷ್ಮವಾದ ಶಕ್ತಿ ಇದೆ ಅದರ ಹೆಸರೇ ಕ್ವಾರ್ಕ್ಸ್. 


ಈ ಕ್ವಾರ್ಕ್ಸ್ ಎನ್ನುವ ಧಾತುವಿನ ಶಕ್ತಿ ಮತ್ತು ಅದರ ಕಾರ್ಯವನ್ನು ಅವರು ಹೇಳುವಾಗ ಅದನ್ನು ಅಷ್ಟು ತನ್ಮಯತೆ ಇಂದ ಕೇಳಿಸಿ ಕೊಂಡ ಬಗೆ ಇದೆಯಲ್ಲಾ..!! ಅದು ಎಷ್ಟೋ ವರುಷಗಳ ನಂತರ ನನ್ನನ್ನು ನನ್ನ ಶಾಲಾ ದಿನಗಳ ಅನುಭವಕೆ ಎಳೆದೊಯ್ದಿತ್ತು. ಕ್ವಾರ್ಕ್ಸ್ ಕಣಕ್ಕೆ ಮೂಲಭೂತವಾಗಿ ಎರಡು ಗುಣಗಳು, ಗುಣಗಳು ಅನ್ನುವುದಕ್ಕಿಂತ ಅದರ ಕಾರ್ಯ ರೀತಿ ಅನ್ನಬಹುದು. ಕನ್ನಡ ದಲ್ಲಿ ಇದನ್ನ ಹೇಳಲು ಹೋದರೆ ಸ್ವಲ್ಪ ಕಷ್ಟ ಅನಿಸ ಬಹುದು ಮತ್ತು ಅಷ್ಟು ಸುಲಭಕೆ ಅರ್ಥಕ್ಕೆ ನಿಲುಕದೆಯೂ ಇರಬಹುದು. ಕ್ಷಮೆ ಇರಲಿ ಅದನ್ನ ಇಂಗ್ಲಿಶ್ ನಲ್ಲೆ ಹೇಳುತ್ತೇನೆ..


A quark is a fundamental constituent of a matter. There are two things which can be seen as particles. But there are certain things such as energy which can only be felt. These are two states in which Quark appears. It highly fluctuates between being a visible particle to a felt energy. Hence it cannot be directly observed. There are certain tough theroies and jargons of Science used like Color confinement to describe this. He even said that its a concept which is scientifically proved and very similar to what we call Maaya. As in spirituality, there is aakar and niraakar... Like that a quark is existing and non existing. 

ಇದನ್ನ ಕನ್ನಡದಲ್ಲಿ ಹೇಳುವುದಾದರೆ ಈ ಕ್ವಾರ್ಕ್ ಅನ್ನುವ ಈ ಕಣ, ಇರುವಿಕೆ ಮತ್ತು ಇಲ್ಲದಿರುವಿಕೆ ಗಳ ನಡುವೆ ನಿರಂತರವಾಗಿ ತೊಯ್ದಾಡುವ ಒಂದು ಶಕ್ತಿ. ಎಲೆಕ್ಟ್ರಿಕಲ್ ಫ್ರೀಕ್ವೆನ್ಸಿಯ ಹಾಗೆ, ಒಂದು ಸೆಕೆಂಡ್ ಗೆ ಐವತ್ತು ಪರಿಪೂರ್ಣ ಕಂಪನಗಳನ್ನ ಒಂದು ಎಲೆಕ್ಟ್ರಾನ್ ಕಣ ಪೂರ್ಣ ಗೊಳಿಸುವುದಾದರೆ, ಅದು ನಮ್ಮ ಭಾರತೀಯ ಎಲೆಕ್ಟ್ರಿಕಲ್ ಫ್ರೀಕ್ವೆನ್ಸಿಗೆ ಸಮ. ಇದನ್ನ ನಾವು ಹರ್ಟ್ಜ್ ಮೀಟರ್ ನಲ್ಲಿ ನೋಡ ಬಹುದು. ಹರ್ಟ್ಜ್ ಮೀಟರ್ ನ್ನು ನಾವು ೨೩೦ ವೋಲ್ಟು ಗಳ ವಿದ್ಯುತ್ ಶಕ್ತಿಗೆ ಒಳ ಪಡಿಸಿದಾಗ ಅದರ ಒಳಗಣ ತಂತು ಸೂಚಕಗಳು ೪೯ ಅಥವಾ ಐವತ್ತರ ಸಂಖ್ಯೆಗೆ ತರಂಗಾಂತರ ಗಳನ್ನ ಸೃಷ್ಟಿಸುತ್ತವೆ. ಅದೊಂಥರ ವೈಬ್ರೇಶನ್. ಅದು ಪೂರ್ತಿ ನಿಲ್ಲುವುದೂ ಇಲ್ಲ.. ಹಾಗೆ ಹೆಚ್ಚು ದೂರಕೆ ಕ್ರಮಿಸುವುದೇ ಇಲ್ಲ. ಒಂದು ಸೆಕೆಂಡ್ ಗೆ ಐವತ್ತು ಸಾರಿ ಕಂಪಿಸಿ ಕೊಳ್ಳುತ್ತವೆ. ಅದು ನಿಂತಂತೆಯೂ ತೋರುವುದಿಲ್ಲ.. ಚಲಿಸುವಂತೆಯೂ ತೋರುವುದಿಲ್ಲ. ನಮ್ಮ ಜೇನು ಹುಳು, ನೊಣ, ಅಥವಾ ಸೊಳ್ಳೆಗಳ ರೆಕ್ಕೆಗಳ ಕಂಪನ ಇದಕ್ಕಿಂತಲೂ ಹೆಚ್ಚು. ಬರಿಗಣ್ಣಿಂದ ಅವುಗಳನ್ನು ನೋಡಲಾಗದು. ನಮ್ಮ ರೇಡಿಯೋ ತರಂಗಾಂತರಗಳು ಕೂಡ ಇದಕ್ಕಿಂತಲೂ ಸೂಕ್ಷ್ಮ. ಮೊಬೈಲ್ ನೆಟ್ವರ್ಕ್ ಮತ್ತು ರೇಡಿಯೋ, ಸ್ಯಾಟಲೈಟ್ ತರಂಗಾಂತರಗಳು ಮೆಗಾ ಹರ್ಟ್ಜ್ ಗಳಲ್ಲಿ ಅಲೆಯಲ್ಪಡುತ್ತವೆ. ಒಂದು ಸೆಕೆಂಡಿನ ಒಂದು ಲಕ್ಷದ ಒಳಗಿನ ಒಂದು ಭಾಗ ನಮ್ಮ ರೇಡಿಯೋ ತರಂಗಗಳ ಕಂಪನಗಳು. ಈ ಕ್ವಾರ್ಕ್ ಗಳ ಕಂಪನ ಅದಕ್ಕಿಂತಲೂ ಸಾವಿರಾರು ಪಟ್ಟು ಕಡಿಮೆ ಸಮಯಕ್ಕೆ ಪೂರ್ತಿಯಾಗುತ್ತದಂತೆ. ಜಸ್ಟ್ ಇಮ್ಯಾಜಿನ್..!! ಅಷ್ಟು ಸೂಕ್ಷ್ಮವಾಗಿ ಇದ್ದು ಇಲ್ಲವಾಗುವ ವಸ್ತುಗಳನ್ನು ಬರಿಗಣ್ಣಲ್ಲಿರಲಿ ಇಲ್ಲಿಯ ತನಕ ಸೃಷ್ಟಿಯಾದ ಸೂಕ್ಷ್ಮಾತಿ ಸೂಕ್ಷ್ಮವಾದ ಮೈಕ್ರೋಸ್ಕೋಪ್ ಗಳಿಂದಲೂ ನೋಡಲು ಸಾಧ್ಯವಿಲ್ಲ. ಮನುಷ್ಯನಾಗಲೀ, ಯಾವ ಜಂತುವಾಗಲಿ, ಯಾವ ವಸ್ತುವಾಗಲಿ, ಯಾವ ಧಾತುವೆ ಆಗಲಿ ಎಲ್ಲವೂ ಒಂದು ಅಣುವಿಂದಲೇ ರೂಪುಗೊಂಡದ್ದು. ಹೀಗೆ ಇದ್ದು ಇಲ್ಲದಂತಿರುವುದು ಕೂಡ ಎಲ್ಲ ವಸ್ತುಗಳಲ್ಲೂ ನಡೆಯುತ್ತಿದೆ.. ಕೇವಲ ಅದು ನಮಗೆ ಗೋಚರಿಸುತ್ತಿಲ್ಲವಷ್ಟೇ. ಇದ್ದು ಇಲ್ಲವಾಗುವಿಕೆಯ ನಡುವಿನದೆ ಬದುಕು..!! ಕಣ್ಣೆದುರಿಗೆ ಈಗಷ್ಟೇ ಇದ್ದು ಈಗಷ್ಟೇ ಇಲ್ಲವಾಗುವಿಕೆಯೇ ಅಲ್ಲವೇ ಮಾಯೆ..?? ಹಾಗೆ ಮಾಡುವವರೇ ಅಲ್ಲವೇ ಜಾದೂಗಾರರು. ಹಾಗೆ ನೋಡಿದರೆ ಇದೇ ಸೃಷ್ಟಿಗೆ ಸೃಷ್ಟಿಯೇ ಈ ಮಾಯಾ ಮತ್ತು ಪ್ರತ್ಯಕ್ಷ್ಯವಾಗುವಿಕೆಯ ಆಟದಲ್ಲಿಯೇ ಸ್ಥಾಪಿತವಾಗಿದೆ ಅನ್ನುವುದು ತಕ್ಷಣಕೆ ನಂಬಲಾರದ ಅಸಾಧ್ಯ ಆಶ್ಚರ್ಯಕರ ವಿಷಯವೆನಿಸಬಹುದು.

ಬಾಸ್ ಹೇಳುತ್ತಾ ಹೋದರು.. ಐನ್ ಸ್ಟೀನ್ ಕೂಡ ತನ್ನ ಮೆದುಳಿನ ಕೇವಲ ಹದಿಮೂರು ಪ್ರತಿಶತ ಮಾತ್ರ ಉಪಯೋಗಿಸಿಕೊಂಡ ಬುದ್ಧಿ ಜೀವಿ. ಅದಕಿಂತ ಜಾಸ್ತಿ ಅವರಿಗೂ ಸಾಧ್ಯವಾಗಲಿಲ್ಲ. ವಿಶ್ವೇಶ್ವರಾಯ ರಾಗಲಿ, ಗೆಲಿಲಿಯೋ, ನ್ಯೂಟನ್, ಎಡಿಸನ್, ಡಾರ್ವಿನ್, ಗ್ರಹಂಬೇಲ್ ಯಾವ ವಿಜ್ಞಾನಿಯೇ ಆದರೂ ಇದಕ್ಕಿಂತ ಹೆಚ್ಚು ಮೆದುಳನ್ನು ಉಪಯೋಗಿಸಿದ್ದೇ ಇಲ್ಲವಂತೆ. ಮಹಾತಿಮಹಾ ಬುದ್ಧಿಜೇವಿಗಳೇ ಅಷ್ಟೆಂದ ಮೇಲೆ ನಮ್ಮ  ನಿಮ್ಮಗಳ ಮೆದುಳಿನ ಶಕ್ತಿ ಅಂದಾಜಿಗೆ ನಿಲುಕಬಹುದೇ..?? ನಮ್ಮ ಪೂರ್ವಿಕರು, ಪುರಾತನ ಕಾಲದ ಪ್ರಾಚೀನರು ಇವರೆಲ್ಲರಿಗಿಂತಲೂ ಬುದ್ಧಿಮತ್ತೆ ಉಳ್ಳವರಾಗಿದ್ದವರು ಎನಿಸುತ್ತದೆ. ಅವರು ಗೀಚಿದ ಪಂಚಾಗ, ತಾರ ಭವಿಷ್ಯ, ಯಾವ ಉಪಕರಣಗಳೂ ಇಲ್ಲದೆ ಅಂಥಂಥಹ ಬೃಹತ್ ಗಳನ್ನ ನಿರ್ಮಿಸಿದ ಅವರ ಕ್ಷಮತೆ ಇವರಿಗಿಂತಲೂ ಹೆಚ್ಚೇ ಸರಿ. ಮನುಷ್ಯ ತನ್ನ ಮೆದುಳಿನ ನಿಯಂತ್ರಣವನ್ನು ಪೂರ್ತಿ ತನ್ನ ಹತೋಟಿಯಲ್ಲಿಟ್ಟುಕೊಂಡು ಅದನ್ನು ಪೂರ್ತಿಯಾಗಿ ಉಪಯೋಗಿಸಿ ಕೊಳ್ಳುವವನಾದರೆ ಅವನಿಗೆ ದೇವರಿಗೂ  ಮಿಗಿಲಾದ ಶಕ್ತಿಗಳು ಲಭ್ಯವಾಗಬಹುದಂತೆ. 

ಅದೇ ಪ್ರಯತ್ನದಲ್ಲೇ ಈ ಹಿಂದೆ ಹಲವಾರು ಋಷಿ ಮುನಿಗಳು ಏಕಾಗ್ರತೆಯಿಂದ ವರುಷಾನುಗಟ್ಟಲೆ  ಬರೀ ಗಾಳಿ ಸೇವನೆಯಲ್ಲೇ ಬದುಕುತ್ತಾ ತಪ್ಪಸ್ಸು ಮಾಡುತ್ತಾ ಆ ಶಕ್ತಿಯ ಅನ್ವೇಷಣೆಯಲ್ಲಿ ತೊಡಗಿ ಕೊಂಡಿರಬಹುದೆಂದು ಹೇಳಬಹುದು ಎನ್ನುತ್ತಾರೆ ಬಾಸ್. ಅದು ನಿಜವಾಗಿರಲೂ ಬಹುದಲ್ಲವೇ..? ದೇವರು ಅವರ ತಪಸ್ಸಿಗೆ ಮೆಚ್ಚಿ ಅವರ ಇಚ್ಚಾನುಸಾರ ನೆರವೇರುವ ಹಾಗೆ ವರವನೀಯುತ್ತ ಇದ್ದ ಕತೆ ನಮ್ಮ ಪುರಾಣಗಳಲ್ಲಿ ಅದೆಷ್ಟಿಲ್ಲ..?? ಈಗಲೂ ನಮ್ಮ ಹಿರಿಯರು, ಗುರುಗಳು, ಮಾರ್ಗದರ್ಶಕರು ಅದನ್ನೇ ಅಲ್ಲವೇ ಹೇಳುವುದು, concentrate ..!! ಮನಸ್ಸು & ಬುದ್ಧಿಯನ್ನ ಹತೊಟಿಯಲ್ಲಿಟ್ಟುಕೋ.. ಅತ್ತಿಂದಿತ್ತ ಹರಿಯ ಬಿಟ್ಟರೆ ಯಾವ ಸಿದ್ಧಿಯೂ ಸಿದ್ಧಿಸಲಾರದು. ಪರೀಕ್ಷೆಗಳ ಸಮಯದಲಿ ಬೇರಾವ ಕಡೆಗೂ ನಾವು ಗಮನ ಕೊಡದೆ ತಲ್ಲೀನರಾಗಿ ಗಮನ ಕೊಟ್ಟು ಓದುವುದನ್ನು ಕಲಿಸಿ ಕೊಟ್ಟಿದುದರ ಮೂಲ ಈ ಚಿಂತನೆಯೇ ಇರಬಹುದಲ್ಲವೇ..?? ಹೀಗೆ ಒಂದಷ್ಟು ತಿಂಗಳ ಹಿಂದೆ ಬಿಡುಗಡೆಯಾದ ದೇವಕಣದ ಇತಿಹಾಸವನ್ನೂ ಬಾಸ್ ಹೇಳಿದ ಈ ರೋಚಕ ಧಾತುವಿನ ಮೂಲವನ್ನು ಪರಿಶೀಲಿಸಲು ಇಂಟರ್ನೆಟ್ ಅನ್ನು ಜಾಲಾಡಿದಾಗ ನನಗೆ ಸಿಕ್ಕಿದ್ದು ಎರಡರ ನಡುವೆ ಬಹುಪಾಲು ಸಾಮ್ಯತೆಗಳು ಬಿಟ್ಟರೆ.. ಮಿಕ್ಕದ್ದು ಅಸಂಭದ್ದ ಮಾತ್ರ. 


ನಾನು ಈ ಕ್ವಾರ್ಕ್ ಕಣವೇ ದೇವ ಕಣವಿರಬಹುದಾ ಎಂದು ಭಾವಿಸಿದ್ದೆ. ದೇವ ಕಣಗಳ ಕುರಿತಾದ ರಹಸ್ಯ ಸುದ್ದಿ ಬಿಡುಗಡೆಯಾದ ದಿನ ನಾನ್ಯಾವುದೋ ಪ್ರವಾಸದಲ್ಲಿದ್ದೆ. ಅದರ ಪೂರ್ಣ ವಿವರಗಳು ನನಗೆ ತಿಳಿದಿರಲಿಲ್ಲ. ಆದರೆ ಇಂಟರ್ನೆಟ್ ಮೂಲಗಳ ಪ್ರಕಾರ ದೇವಕಣದ ಹೆಸರು ಹಿಗ್ಗಿನ್ಸ್ ಬೋಸೋಮ್ಸ್. ಅದು ಹಲವಾರು ಗತ್ಯಂತರಗಳ ಕುರಿತು ಬೆಳಕು ಚೆಲ್ಲುತ್ತಾ ಹೋಯಿತು. ಹದಿನೈದು ಸಾವಿರ ಬಿಲಿಯನ್ ವರ್ಷಗಳ ಆಚೆಗೆ ನಡೆದಿರಬಹುದಾದ ಮಹಾ ಸ್ಪೋಟ [Big Bang theory] ದಿಂದಾಗಿ ಈ ಜಗತ್ತು ಉದ್ಭವ ಆಗಿರಬಹುದು ಅನ್ನುವ ಪುರಾವೆಗಳು ಸಿಗುತ್ತವೆ. ಆ ಮಹಾ ಸ್ಪೋಟಕ್ಕೆ ಕಾರಣವಾದ ಶಕ್ತಿಯ ಮೂಲ ಕಣವೇ ದೇವ ಕಣ. ಅದನ್ನ ವಿವರಿಸಲು ಖಂಡಿತ ನನ್ನಿಂದ ಸಾಧ್ಯವಿಲ್ಲ. ಲಿಂಕ್ ಕೊಡುತ್ತೇನೆ ಟೀವೀ ೯ ರ ಈ ವಿಶೇಷ ವರದಿಯನ್ನ ನೀವೇ ನೋಡಿ.


ಆ ಮೂಲ ಅಣುವಿನ, ಮೂಲ ಧಾತುವಿನ ಒಳಗೆ ಇಷ್ಟೆಲ್ಲಾ ಶಕ್ತಿಯಿದೆಯಾ..?? ಸೃಷ್ಟಿ ರಹಸ್ಯಗಳೇ ಬಲು ವಿಚಿತ್ರ ಮತ್ತು ಸದಾ ಆಶ್ಚರ್ಯಕರ. ದೇವರು ಕೇವಲ ಒಂದು ಕಣದಲ್ಲಿರುವನೆ..?? ದೇವರು ಹಿರಣ್ಯ ಕಷ್ಯಪು ಒಡೆದ ಕಂಬದಲ್ಲಿದ್ದುದನ್ನು ಕೇಳಿದ್ದ ನಾವು, ಭೂ ತಾಯಿಯ ಸಂರಕ್ಷಿಸಲು ಸಾಗರದಡಿಯಲ್ಲಿ ಕುಳಿತದ್ದು ಕೇಳಿದ ನಾವು, ಹಲವಾರು ಅವತಾರವೆತ್ತಿ, ಅವನ ಹಲವಾರು ಲೀಲೆಗಳ ಕೇಳಿದ ನಾವು, ಸಾಮಾನ್ಯ ಮಾನವನಂತೆಯೇ ಬದುಕಿ ನಾ ಕೇವಲ ದೇವದೂತನಷ್ಟೇ ಎಂದು ಜಗದೊಳಗಿನ ಎಲ್ಲಾ ಕಷ್ಟ ನೋವುಗಳನ್ನು ಸಾಮಾನ್ಯ ಮನುಷ್ಯನಂತೆ ಅನುಭವಿಸಿದ ಅವನ ಸಿಂಪ್ಲಿಸಿಟಿ ಯನ್ನ ನೋಡಿದ ನಾವು, ದೇವರು ಕಣದೊಳಗೂ ಇರಬಲ್ಲ ಎಂಬುದನ್ನು ನಂಬಲು ಅಷ್ಟು ಚರ್ಚೆ ಮಾಡುವುದಾದರೂ ಅಗತ್ಯವಿದೆಯೇ..?? ಅಗತ್ಯವಿದೆ.. ಅದೇ ವಿಜ್ಞಾನ. ದೇವರ ಇರುವಿಕೆ ಮತ್ತು ಇಲ್ಲದಿರುವಿಕೆಯ ಕುರಿತಾದ ಚರ್ಚೆ ಇಂದು ನಿನ್ನೆಯದಲ್ಲ. ನಾಳೆಗೆ ಮುಗಿಯುವುದೂ ಇಲ್ಲ. ಅದು ನಿರಂತರ. ಕವಿರಾಜರು ಹೇಳುವಂತೆ ಕಣ ಕಣದೆ ಶಾರದೆ [ದೇವರು].. ಕಲೆತಿಹಳು ಕಾಣದೆ..!!

ಜಗತ್ತಿನ ಸೃಷ್ಟಿಗಳಲಿ ಮಾನವನೇ ಶ್ರೇಷ್ಟ, ಮಾನವನಿಗಿಂತ ಬುದ್ಧಿಜೀವಿ ಇಲ್ಲ, ಮಾನವನಿಗಿಂತ ದಡ್ದನಿಲ್ಲ. ಮನುಷ್ಯರಿಗಿಂತ ಸುಂದರರಿಲ್ಲ.. ಮನುಷ್ಯರಿಗಿಂತ ಕುರೂಪಿಗಳಿಲ್ಲ. ಮನುಷ್ಯನಿಗಿಂತ ದಾನಿಗಳಿಲ್ಲ, ಮನುಷ್ಯನಿಗಿಂತ ಜಿಪುಣರಿಲ್ಲ. ಮನುಷ್ಯನಿಗಿಂತ ಸಿರಿವಂತನಿಲ್ಲ, ಮನುಷ್ಯನಿಗಿಂತ ಭಿಕ್ಷುಕನಿಲ್ಲ. ಮನುಷ್ಯನಿಗಿಂತ ಕ್ರಿಯಾಶಾಲಿ ಇಲ್ಲ, ಮನುಷ್ಯನಿಗಿಂತ ಸೋಂಬೇರಿಯೂ ಇಲ್ಲ. ಮನುಷ್ಯನಿಗಿಂತ ಅಹಂಕಾರಿಯೂ ಇಲ್ಲ, ಮನುಷ್ಯನಿಗಿಂತ ಸಾಧುವೂ ಇಲ್ಲ. ಮನುಷ್ಯನಿಗಿಂತ ರಾಕ್ಷಸನೂ ಇಲ್ಲ, ಮನುಷ್ಯನಿಗಿಂತ ನಿರುಪದ್ರವಿಯೂ ಇಲ್ಲ. ಮನುಷ್ಯನಿಗಿಂತ ಜವಾಬ್ದಾರನೂ ಇಲ್ಲ, ಮನುಷ್ಯನಿಗಿಂತ ಬೇಜವಬ್ದಾರಿಯವನೂ ಇಲ್ಲ. ಒಮ್ಮೊಮ್ಮೆ ಮನುಷ್ಯನ ಕೈಲಿ ಏನೆಲ್ಲಾ ಆಗುವುದಿಲ್ಲ.. ಕೆಲವೊಮ್ಮೆ ಏನೂ ಆಗುವುದಿಲ್ಲ. ಮನುಷ್ಯನಿಗಿಂತ ಶ್ರೆಷ್ಟನೂ ಇಲ್ಲ.. ಮನುಷ್ಯನಿಗಿಂತ ದುಷ್ಟನೂ ಇಲ್ಲ. ಮನುಷ್ಯನಿಗಿಂತ ಜ್ಞಾನಿಯೂ ಇಲ್ಲ.. ಅವನಿಗಿಂತ ಅಜ್ಞಾನಿಯೂ ಇಲ್ಲ. ಮನುಷ್ಯನಂತೆ ಕಲಿಸುವವನಿಲ್ಲ.. ಮನುಷ್ಯನಂತೆ ಕಲಿಯುವವರೂ ಇಲ್ಲ. ಮನುಷ್ಯನಂತ ಬೋದಕನಿಲ್ಲ.. ಮನುಷ್ಯನಂತೆ ಅದನ್ನೆಲ್ಲಾ ಬೇಡವೆಂದು ಧಿಕ್ಕರಿಸಿ ಬಿಡುವ ಜೀವವೂ ಇಲ್ಲ. ಮನುಷ್ಯನಿಗಿಂತ ಅಪ್ರತಿಮ ಬೇಟೆಗಾರನಿಲ್ಲ.. ಮನುಷ್ಯನಿಗಿಂತ ಸುಲಭಕ್ಕೆ ಬೇಟೆಗೆ ಸಿಕ್ಕಿ ಬಿಡೋ ಜೀವವೂ ಇಲ್ಲ. ಮನುಷ್ಯ ಒಂದು ಅನನ್ಯ ಸೃಷ್ಟಿ, ಈವರೆಗೂ ಕಂಡ ಜಗದೊಳಗೆ ಸರ್ವೋತ್ತಮ ಬುದ್ಧಿಶಾಲಿ. ಮನುಷ್ಯನೊಳಗೆ ಕ್ಷಮತೆ ಇದೆ, ಧ್ರುಡತೆ ಇದೆ, ದಕ್ಷತೆ ಇದೆ, ಅದಕೆ ಪೂರಕವಾಗಿ ಕೊರತೆಯೂ ಇದೆ. ಅದೆಲ್ಲವನ್ನು ಮೀರಿದವನು ಸಾಧಿಸಬಲ್ಲ. ಹಾಗೆ ಸಾಧಿಸುತ್ತ ಹೊರತವನಿಗಷ್ಟೇ ಗುಟ್ಟುಗಳ ಗಂಟು ಬಿಚ್ಚಿ ಕೊಳ್ಳುತ್ತಾ ಹೋಗುತ್ತವೆ. ಆ ಗುಟ್ಟುಗಳ ಅರ್ಥ ಮಾಡಿ ಕೊಂಡರಷ್ಟೇ ಮನುಷ್ಯ.. ಮನುಷ್ಯರಾಚೆಗಿನ ಸ್ಥಾನವನ್ನ ಗಿಟ್ಟಿಸಿ ಕೊಳ್ಳಬಲ್ಲ.

ನಮ್ಮ ಬಾಸ್ ದಿನಕ್ಕೊಮ್ಮೆಯಾದರೂ ನಮ್ಮ ಬಳಿ  ಇಂತಹ ವಿಚಾರಗಳ ಕುರಿತು ಒಂದಷ್ಟು ಹೊತ್ತು ಹರಟುತ್ತಲೇ ಇರುತ್ತಾರೆ. ಇಂತಹುದ್ದೆ ಅಲ್ಲ.. ನಮ್ಮ ಕೆಲಸಕ್ಕೆ ಪೂರಕವಾದ ತಾಂತ್ರಿಕ & ಐಟೀ ಸಂಭಂಧಿತ ವಿಚಾರಗಳನ್ನೂ ಅಷ್ಟೇ ಸೂಪರ್ ಆಗಿ ವಿಶ್ಲೇಷಿಸುತ್ತಾರೆ. off course he is a genious. ನಮಗೆ ಅವರು ಹೇಳುವಾಗಲೆಲ್ಲ ಕೇಳಲು ಅದಮ್ಯ ಉತ್ಸುಕತೆ. ಒಂದು ಕಾಲಕ್ಕೆ ಎಲ್ಲವನ್ನೂ ವಿಜ್ಞಾನಕ್ಕೆ ಪರಾಮರ್ಶಿಸಿ ಹೊಲಿಸುತ್ತಿದ್ದ ನಾವು ಈಗ ಭಾವ ಜೀವಿಗಳು. ಎಲ್ಲವನ್ನೂ ಭಾವುಕತೆಯ ಪರಿಧಿಯೊಳಗೆ ನೋಡುವುದು ನಮ್ಮ ಈಗಿನ ದೌರ್ಬಲ್ಯಗಳಲ್ಲೊಂದು. 

ನಾನು ಈ ಹಿಂದೆ ಅಪ್ರತಿಮ ಸೈನ್ಸ್ ಲವರ್. ಶಾಲೆಯಲ್ಲಿ ಪಾಠ ಕೇಳಿದ ನಂತರ ರಾತ್ರಿ ಹನ್ನೊಂದರವರೆಗೂ ಆಗಸವನ್ನ ನೋಡುತ್ತಾ ಕೂತಿರುತ್ತಿದ್ದೆ. ಚಿಟ್ಟೆ ಪ್ರಾಣಿ ಪಕ್ಷಿಗಳ ಜೀವನ ಕ್ರಮಗಳನ್ನ ಕೂಲಂಕುಶವಾಗಿ ಗಮನಿಸುತ್ತಿದ್ದೆ. ಅನ್ನದ ಗಂಜಿಯೋಳಗೂ ಏನೋ ಹುಡುಕುತ್ತಿರುತ್ತಿದ್ದೆ. ಆಲೆಮನೆಯ ಬೆಲ್ಲ, ಅಚ್ಚು ಸಕ್ಕರೆ, ಬಣ್ಣದ ಮಿಟಾಯಿ, ತೆಂಗಿನ ಮರದೆಲೆಯ ಗಿರಗಿಟ್ಲೆ, ತಗಡು ಸೈಕಲ್, ಸಂತೆಯಲ್ಲಿ ಸಿಗುವ ಗಾಳಿಗೆ ತಿರುಗುವ ಬಣ್ಣದ ಚಕ್ರ..  ಕೊಳಾಯಿ ಇಂದ ಉಸಿರ ಹೊರ ದಬ್ಬುತ್ತ ಬರುತ್ತಿದ್ದ ನೀರು, ರೈಲು, ಬಾವಿಯ ತೊಲೆಯಂಚಿಗೆ ನೇಣು ಹಾಕಿಕೊಂಡು ಸುತ್ತುತ್ತಲೇ ಇರುವ ರಾಟೆ, ಮರು ಭೂಮಿಯ ಒಂಟೆ, ಸತ್ತವನ ಮನೆ ಮುಂದೆ ಹಾಕಿದ ಹೋಗೆ, ಸಗಣಿಯ ಗುಣ, ತುಂಬೆ ಹೂವಿನ ಹಿರಿಮೆ, ಕಾಂಗ್ರೆಸ್ ಗಿಡದ ಕೆಟ್ಟತನ, ಮಲ್ಲಿಗೆ ಸಂಪಿಗೆಗಳ ಸುಗಂಧ, ಹೂಗಳ ನಾನಾ ಬಾಣಗಳು, ಸಮುದ್ರದ ನೀರು ನೀಲಿಯೇಕೆ..?? ಬಣ್ಣ ಬಣ್ಣದ ಗಣೇಶ ಮೂರ್ತಿ, ಪಿಂಗಾಣಿ ಸ್ಮೈಲಿಂಗ್ ಬುದ್ಧ, ನಿಂಬೆ ಹಣ್ಣಿನ ರಸ [ಸಿಟ್ರಿಕ್ ಆಸಿಡ್], ಕಿತ್ತಳೆ ಹಣ್ಣಿನ ಸಿಪ್ಪೆ ಯೋಳಗಿರುತ್ತಿದ್ದ ಪೆಟ್ರೋಲಿನಂಥ ದ್ರಾವಣ, ಅತ್ತಾಗ ಬರುತ್ತಿದ್ದ ಕಣ್ಣೀರು, ಹಾಲು ಮೊಸರಾಗುವುದು, ಬೆಣ್ಣೆ ತುಪ್ಪವಾಗುವುದು, ಚಳಿಯಾದಾಗ ಬಳಸಿ ಹೊದೆಯುವ ಕಂಬಳಿ, ಚಿಟ್ಟೆ ಕಂಬಳಿ ಹುಳುವಾಗಿ ಇದ್ದ ಕಥೆ,  ಹೀಗೆ ವಿಜ್ಞಾನ ಸಿಕ್ಕದ ಜಾಗವೇ ಇರಲಿಲ್ಲ. ಈಗ ವಿಜ್ಞಾನ ತುಂಬಿದ್ದ ಬಹುಪಾಲು ಜಾಗವನ್ನ ಭಾವುಕತೆ ಆರಿಸಿ ಕೊಂಡಿದೆ. ಈಗ ಫೇಸ್ಬುಕ್ ಕೂಡ ನಮ್ಮ ಭಾವುಕತೆಯನ್ನ ಹಲವೊಮ್ಮೆ ತೆರೆದಿಡಲು ಸಿಗುವ ಜಾಗವಷ್ಟೇ. ಭಾವುಕತೆ ಮತ್ತು ವಿಜ್ಞಾನವನ್ನು ಸಮೀಕರಿಸುವುದು ಅಷ್ಟು ಸುಲಭವಲ್ಲ. ಅಷ್ಟರ ಮಟ್ಟಿಗೆ ಅದು ಸಾದ್ಯವೂ ಅಲ್ಲ. ಕೊನಗೆ ವಿಜ್ಞಾನದ ಪಾತ್ರವೇ ಗಟ್ಟಿ, ಭಾವುಕತೆ ಒಂದಿಷ್ಟು ಗಟ್ಟಿತನ ಹೊಂದಿದ ಜೊಳ್ಳು ಎಂಬುದನ್ನ ಕೂಡ ಒಪ್ಪದೇ ಇರಲಾಗುವುದಿಲ್ಲ.

ಇದು ಕೇವಲ ನಮ್ಮ ಮತ್ತು ನಮ್ಮ ಬಾಸ್ ನಡುವೆ ಆದ ಒಂದೆರಡು ಚರ್ಚೆಗಳ ಸಂಕ್ಷಿಪ್ತ ರೂಪವಷ್ಟೇ. ಇದರ ಸತ್ಯಾಸತ್ಯತೆಗಳ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಅಷ್ಟು ಸುಲಭಕ್ಕೆ ದಕ್ಕಿಸಿಕೊಳ್ಳಲು ನಾನು ವಿಜ್ಞಾನಿಯೂ ಅಲ್ಲ. ಈ ಚರ್ಚೆಯನ್ನ ಸಾರ್ವಕಾಲಿಕವಾಗಿ ನೆನಪಿನಲ್ಲುಳಿಸಿಕೊಳ್ಳುವ ಸಲುವಾಗಿ ಇದನ್ನು ಗೀಚಿರುವೆ. ಇದು ಚರ್ಚೆಗೆ ಈಡು ಮಾಡಬಲ್ಲ ವಿಷಯವಾದರೂ ಅದನ್ನ ಪರಾಮರ್ಶಿಸುವ ಜ್ಞಾನ ಖಂಡಿತ ನನ್ನಲ್ಲಿಲ್ಲ. ಇದನ್ನ ಕೇವಲ ಒಂದು ಲೇಖನವಾಗಿ ಅಷ್ಟೇ ಸ್ವೀಕರಿಸಬೇಕಾಗಿ ವಿನಂತಿ.

ಹೊಸ ವರ್ಷದ ದಿನ ಒಂದು ಒಳ್ಳೆಯ ವಿಚಾರವನ್ನು ತಿಳಿದು ಕೊಂಡ ಸಮಾಧಾನ, ಸಂತೋಷ ಮತ್ತು ತೃಪ್ತಿ ನನಗೆ ದೊರಕಿತ್ತು. ಇನ್ನು ಮುಂದಾದರೂ ಜನರಲ್ ನಾಲೆಡ್ಜ್ ಹೆಚ್ಚಿಸಿ ಕೊಳ್ಳುವತ್ತ ಪ್ರಯತ್ನ  ಮಾಡಬೇಕು.  ಬೋರ್ ಹೊಡೆಸಿದೆ ಅನ್ನಿಸಿದ್ದಲ್ಲಿ ಕ್ಷಮೆ ಇರಲಿ, ಆಗಾಗ ಬರುತ್ತಿರಿ. ಧನ್ಯವಾದಗಳು.

Tuesday, 8 January 2013

ಒಂದು ಬೆರಳಿನ ಸುತ್ತ...

"ದಾರಿ ಸವೆಯುವ ತನಕ ಮೆರವಣಿಗೆ.. ಬೆರಳು ಸವೆಯುವ ತನಕ ಬರವಣಿಗೆ"

ಈಗಷ್ಟೇ ಓದಿ ಮುಗಿಸಿಟ್ಟ ಜೋಗಿ ಕಾಲಂ.. ಜೋಗಿಯವರ ಅಂಕಣ ಬರಹಗಳ ಸಂಕಲನ ಪುಸ್ತಕದ ಬೆನ್ನುಡಿಯಲ್ಲಿ ಕಡೆಯದಾಗಿ ನಾವು ಓದಬಹುದಾದ ಅವರ ಅಂಕಣ ಬರಹದ ಒಂದು ತುಣುಕು ಈ ಸಾಲು. ನನ್ನನ್ನು ಬಹಳ ಸೆಳೆದ ಸಾಲು. ಬಹಳ ಅರ್ಥವಿರುವ ಸಾಲು. ನಿಜ ಬರೆಯುವವರಿಗೆಲ್ಲ ಆ ಬೆರಳುಗಳೇ ಶಕ್ತಿ. ಮನೆಗೆ ಆಧಾರ ಸ್ತಂಭವಿದ್ದಂತೆ.. ಬರಹಕೆ ಬೆರಳು. ನಮ್ಮ ಅಕ್ಷರಾಭ್ಯಾಸದ ಮೊದಲ ಬಳಪವೇ ಬೆರಳು. ನಮ್ಮ ಯಾವ ಹಿಡಿತಕ್ಕೂ ಬಲವನೀಯುವುದೇ ಬೆರಳು. ನಮ್ಮ ಯಾವ ಉದ್ವೇಗಕ್ಕೂ ಮೊದಲು ನಡುಗುವುದೇ ಬೆರಳು.

ಬೆರಳಿನ ಬಗ್ಗೆ ಯಾಕೇ ಪೀಟಿಕೆ ಅಂದ್ರೆ.. ಯಾಕೋ ಜೋಗಿ ಕಾಲಂ ಓದಿ ಮುಗುಸಿತ್ತಿದ್ದಂತೆ ಇದ್ದಕ್ಕಿದ್ದಂತೆ ನೆನಪಾದ ನನ್ನ ತೋರು ಬೆರಳು. ಅದಕಾದ ಅಪಘಾತಗಳ ನೆನಪುಗಳೆಲ್ಲ ಸಾಲಾಗಿ ಸರದಿಯಲ್ಲಿ ಸುಳಿದು ಹೋದ ಸುಸಂಧರ್ಭಕ್ಕೆ ಅದನ್ನು ಬರೆದೆ ತೀರಬೇಕೆನ್ನುವ ಹಠ ಮನಸಿನಲ್ಲಿ ಮನೆಮಾಡಿ ಜೀಕುತ್ತ ನಿಂತದ್ದು ಕಾರಣ. ಅದರಲ್ಲೂ ಬರೆಯೋರಿಗೆ ಮುಖ್ಯ ಹೆಬ್ಬೆರಳು ಮತ್ತು ತೋರುಬೆರಳು. ಬಹಳ ಜನರ ಬರವಣಿಗೆಗೆ ಈ ಎರಡು ಬೆರಳುಗಳೇ ಜೀವನಾಡಿ. ಅಂತಹ ತೋರು ಬೆರಳಿನ ಮೇಲಿನ ಪ್ರೀತಿಯ ಹಿಂದಿನ ಸಣ್ಣ ಮೆಲುಕು ಈ ಬರಹ. ಬೆರಳು.. ಈ ತೋರು ಬೆರಳಿನ ಹಿಂದೆ ಅಗಾಧವಾದ ನೆನಪುಗಳುಂಟು.. ಬಾಲ್ಯದ ಚೇಷ್ಟೆಗಳುಂಟು.

ನನಗೆ ಚಿಕ್ಕನಿಂದಲೂ ಒಂದು ಅಭ್ಯಾಸ.. ಕೆಟ್ಟದ್ದೇ ಅನ್ನಬಹುದು. ಮೂಗಿನ ಹೊಳ್ಳೆಗಳೊಳಗೆ ಬೆರಳ ತುರುಕಿ ಬ್ರಹ್ಮಾಂಡವ ಕೆದಕೋದು. ಅದರಲ್ಲಿ ಸಿಗುತ್ತಿದ ಮಜಾಕ್ಕೆ ಏನು ಹೆಸರಿಡಬೇಕೋ ತೋಚುತ್ತಿಲ್ಲ. ಮೂಗಿನ ಎರಡೂ ಹೊಳ್ಳೆಗಳ ಒಳಗೂ ತೋರು ಬೆರಳ ತುರುಕಿ ಅನವರತ ಕೆದಕುತ್ತಲೇ ಇರುತ್ತಿದ್ದೆ. ಏನೆಂದು ಕೇಳಬೇಡಿ.. ನನ್ನ ಮೂಗು ರಾಯಚೂರಿನ ಅಥವಾ ಕೋಲಾರದ ಚಿನ್ನದ ಗಣಿಯಲ್ಲ..!! ಎಲ್ಲರಿಗೂ ತಮ್ಮ ಮೂಗಿನೊಳಗೆ ಏನು ಸಿಗಬಹುದೋ ನನಗೂ ಅದೇ ಸಿಗುತ್ತಿತ್ತು. ಆದ್ರೆ ನಾನು ಎಲ್ಲರಂತಲ್ಲವಲ್ಲ..!! ಹಾಗಾಗಿ ಸದಾ ಕೆದಕುತ್ತಾ ಮೂಗು ಶುದ್ಧಿ ಮಾಡುತ್ತಲೇ ಇದ್ದೆ. 


 ಮೂಗನು ಶುದ್ಧಿ ಮಾಡೋದು ಒಳ್ಳೆಯ ಪರಿಪಾಠವೇ.. ಆದರೆ ಅದಕ್ಕಾಗಿ ಸದಾ ನಮ್ಮ ಬೆರಳನ್ನು ಮೂಗಿನೊಳಗೆ ತುರುಕಿಕೊಂಡು ಕೂರುವುದಿದೆಯಲ್ಲ ಅದೊಂಥರಾ ಚಟ. ಕೆಟ್ಟ ಚಟ. ಅದರಿಂದೇನು ಸಿಗದಿದ್ದರೂ.. ಅದರಿಂದೇನೋ ಸಿಗುತ್ತಿತ್ತು. ಈ ಚಟದಿಂದ ನನಗೆ ಸಿಕ್ಕದ್ದು ವಿವರಿಸಲಾಗದ ಉನ್ಮಾತ್ತ ಅನುಭವವೊಂದೇ ಅಲ್ಲ.. ಬೇಸರವೂ ಕೂಡ. ನೋವೂ ಕೂಡ. ನಾ ಬೇಕೆಂದೇ ಕಲಿತ ಚಟವೇನಲ್ಲ ಅದು. ಆದರೆ ನಾನು ಬೇಕು ಬೇಕಾದ ರೀತಿ ಹಟಕ್ಕೆ ಬಿದ್ದು.. ಅದನು ಬಿಡುವ ಅದೆಷ್ಟೋ ಪ್ರಯತ್ನ ಮಾಡಿದರೂ ತೀರ ಇತ್ತೀಚಿಗೆ ನಾಲ್ಕು ವರ್ಷಗಳ ಹಿಂದಿನ ತನಕ ಬಿಡಲಾರದೆ ಹೋದ ಭೂತ ಅದಾಗಿತ್ತು. ನಾ ಶಾಲೆಯೊಳಗೆ ಕಾಲಿಟ್ಟ ಕೂಡಲೇ ನನ್ನ ಅಚ್ಚು ಮೆಚ್ಚಿನ ಗೆಳೆಯರೆಲ್ಲರೂ ತಮ್ ತಮ್ಮ ಮೂಗುಗಳೊಳಗೆ ಬೆರಳಿಟ್ಟು ನನ್ನನ್ನು ಮೂದಲಿಸುತ್ತಿದ್ದರು. ಅಣಕಿಸಿ ನಗುತ್ತಿದ್ದರು. ಇದು ನನಗೆ ಕೊಳಕನೆಂಬ ಬಿರುದಾಂಕಿತ ನನ್ನಾಗಿ ಮಾಡಿತ್ತು ಎನ್ನುವುದು ಕೂಡ ನಂಬಲೇ ಬೇಕಾದ ಮಾತು.


ಕೆಲವೊಮ್ಮೆ ನನ್ನ ಮೇಲೆ ನನಗೆ ಹೇಸಿಗೆ ಎನಿಸಿ.. ಅದೆಷ್ಟು ಕಷ್ಟಪಟ್ಟು ತಡೆದು ಕೂತಿರುತ್ತಿದ್ದೆ. ಆದರು ಮನಸ್ಸು ಮತ್ತು ಬುದ್ಧಿ ಯಾವತ್ತು ತಟಸ್ಥವಲ್ಲ.. ನನ್ನ ಬೆರಳೂ ಕೂಡ. ನನ್ನ ನಿಯಂತ್ರಣ ತಪ್ಪುವುದೇ ತಡ ನನ್ನ ಬೆರಳು ನನ್ನ ಮೂಗು ಸೇರುತ್ತಿತ್ತು. ಬೇಕರಿಯೊಳಗೆ ನೊಣ ಸೇರಿದಂತೆ. ನಾಯಿಗೆ ಹೇಸಿಗೆ ಎಡೆಗಿನ ಮೋಹದ ಹಾಗೆ. ಕ್ರಮೇಣ ಕಷ್ಟ ಪಟ್ಟು ಹಿಡಿತಕ್ಕೆ ತಂದು ಆ ಖಾಯಿಲೆಯನ್ನು ಪೂರ್ತಿ  ಮಾಡಿಸಿಕೊಳ್ಳುವುದರೊಳಗಾಗಿ ಹರೆಯ ನನ್ನ ಪ್ರೌಡಾವಸ್ತೆಯನ್ನು ನುಂಗುತ್ತ ಬಂದಿತ್ತು. ಹರೆಯದಲ್ಲೂ ಅವರಿವರೆದುರು ಈ ಪರಿಪಾಟ ಚಲಾವಣೆಯಲ್ಲಿಲ್ಲದೇ ಎಲ್ಲರೂ ನನ್ನನ್ನು ವಿಶೇಷವಾಗಿ ನೋಡಲು ಆರಂಭಿಸಿದ್ದರೂ.. ಈ ಹಠ, ಈ ಚಟ ನನ್ನ ಒಂಟಿತನದಲ್ಲಿ ಮಾತ್ರ ಯಾವತ್ತಿಗೂ ನನ್ನ ಬಿಟ್ಟಿರುತ್ತಿರಲಿಲ್ಲ. ನನ್ನ ನೆರಳಿನಂತೆ. ನನ್ನ ಉಸಿರಿನಂತೆ. ಎಲ್ಲದಕ್ಕೂ ಅಂತ್ಯವೊಂದಿದೆಯಲ್ಲಾ.. ಹಾಗೆ ಈ ಚಟಕ್ಕೂ ಒಂದು ಗತಿ ಕಾಣಿಸುವಷ್ಟರಲ್ಲಿ ನನ್ನ ವಯಸ್ಸು ಇಪ್ಪತ್ತು ದಾಟಿರಬೇಕೆಂದು ಬ್ರಹ್ಮ ಲಿಖಿತವಾಗಿತ್ತೇನೋ..?? ಅಂತೂ ನಾನದರಿಂದ ಈಗ ಋಣಮುಕ್ತ.

ಈ ಬೆರಳು ಕೇವಲ ಮೂಗಿನೊಳಗೆ ತುರುಕುವುದಕ್ಕಷ್ಟೇ ಅಲ್ಲ.. ಶಾಲೆಯಲಿ ಪಕ್ಕದಲಿ ಕೂತ ಗೆಳೆಯರನು ತಿವಿಯೋಕೆ.. ಜಿಗುಟೋಕೆ.. ಗಾಳಿಪಟದ ಸೂತ್ರವ ತೋರುಬೆರಳ ತುತ್ತ ತುದಿಯಲಿ ಸುತ್ತಿಸಿ ಗಗನದಂಚಿಗೆ ಎತ್ತರಿಸಿ ಆಡಿಸೋಕೆ.. ಚಾಟಿಯ ಬಿಡಿಯಾಗಿ ಹಿಡಿದು ಬಲವಾಗಿ ಸುತ್ತಿ ಎತ್ತಿ ಜೋರಾಗಿ ಬೀಸಿ ಘುಮ್ ಎನ್ನುವ ಶಬ್ದ ಬರುವ ಹಾಗೆ ತಿರುಗಿಸೋಕೆ.. ಕೇರಮ್  ಆಟದಲಿ ಹಠ ಮಾಡಿ ಕೆಂಪು ರಾಣಿಯ ಹಿಂದೆ ಬಿದ್ದ ಮೋಹಕೆ.. ಬೇಲಿಯೊಳಗಣ ಸಣ್ಣ ಜೇನನು ಓಡಿಸಿ, ಅದರ ಆಯಿಲ್ ಮೆತ್ತಿಕೊಂಡ ಕಾಟನ್ ವೇಸ್ಟ್ ನಂತಿದ್ದ ಗೂಡಿನೊಳಗೆ ತೋರು ಬೆರಳ ಬಿಟ್ಟು ಸಿಹಿ ಒಗರು ಜೇನು ನೆಕ್ಕಿ ಚಪ್ಪರಿಸಿ ಸವಿಯೋಕೆ.. ಆಲೆಮನೆಯ ಅಂಟು ಬೆಲ್ಲವ ತೊಂಡೇ ಕಬ್ಬಿಗೆ [ಎಳೆ ಕಬ್ಬು] ಮೆತ್ತಿಸಿ ಒಂಚೂರು ಬಿಡದೆ ತೋರು ಬೆರಳ ಉಗುರೊಳಗೂ ಕೆರೆದು ತಿಂದು ತೃಪ್ತಿಗೊಂಡದ್ದಕ್ಕೆ.. ಬೇವಿನ ಮರ, ನುಗ್ಗೆ ಮರ, ಹುಣಸೇ ಮರ.. ಮರ ಮರಗಳ ಅಂಟುರಾಳವ ಕೆರೆದು ತೋರು ಬೆರಳಲಿ ಹಿಡಿದು.. ಹರಿದ ಪುಸ್ತಕಗಳ ಹಾಳೆಯ ಹಳೆಯ ನಂಟನು ಭದ್ರ ಪಡಿಸುವ ಸಲುವಾಗಿ ಅಂಟಿಸುತ್ತಿದ್ದ ಸಂಭ್ರಮಕೆ.. ನೊಂದ ಗೆಳೆಯರ ಕಣ್ಣೀರು ಒರೆಸೋಕೆ.. ಕಬ್ಬಿನ  ಬೆಂಡನು ಬೀಡಿಯಂತೆ ಹಿಡಿದು ಮೊದಲು ಘಾಟು ಹೊಗೆ ಕುಡಿದ ಮೊದಲ ಅನುಭವಕೆ.. ಎಳನೀರ ಗಂಜಿಯನು ಕೆರೆದು ತಿಂದದಕೆ..  ಹೊಳೆ ತೀರದ ಮರಳಿನಲಿ ನನ್ನ ಮತ್ತು ಹತ್ತಿಪ್ಪತ್ತು  ಗೆಳೆಯರ ಹೆಸರುಗಳ ಕೂಡಿಸಿ ಬರೆದಾಗ ಸಿಗುತ್ತಿದ್ದ ಸಂತಸಕೆ.. ಹೀಗೆ ಅಸಂಖ್ಯಾತ ಸವಿ ನೆನಪುಗಳಿಗೆ ಈ ತೋರು ಬೆರಳು ಸಾಕ್ಷಿಯಾಗಿ ನಿಲ್ಲುತ್ತದೆ.

ಒಮ್ಮೆ ನಾವೆಲ್ಲಾ ಹೊಳೆಯಲಿ ಈಜಾಡಿ ಎದ್ದು ಮನೆಗೆ ನಡೆದು ಬರುವಾಗ.. ನೆರೆಯಲ್ಲಿದ್ದ ಕಬ್ಬಿನ ಗದ್ದೆಯ ಒಳಗಿಂದ ಎಲ್ಲರೂ ಒಂದೊಂದು ಕಬ್ಬಿನ ಕೋಲು ಮುರಿದು.. ಯಾರು ಬೇಗ ತಿಂದು ಮುಗಿಸುತ್ತಾರೆನ್ನುವ ಸ್ಪರ್ಧೆಗೆ ಇಳಿದು.. ಕಬ್ಬು ತಿನ್ನಲು ಶುರು ಮಾಡಿದ ಎರಡನೇ ನಿಮಿಷಕ್ಕೇ ಅದಾಗಿ ಹೋಗಿತ್ತು..!! ತುಂಬಾ ಹೊತ್ತು ಈಜಾಡಿ ನೆಂದು ಮೃದುವಾಗಿದ್ದ ಕೈ ಬೆರಳುಗಳು. ಐದು ಗೇಣಿನ ಆ ಕಬ್ಬನು ಸುಲಿದು ತಿನ್ನುವಾಗ ಐದೂ ಗೇಣನು ಸೇರಿಸಿ ಸುಲಿದ ಸಿಪ್ಪೆ.. ತೋರು ಬೆರಳಿನ ಬುಡದಿಂದ ಉಗುರು ತುದಿಯವರೆಗೂ ಕೊಯ್ದು.. ಚರ್ಮದೊಂದಿಗೆ ಎದ್ದು ಬಂದಿದ್ದ ಮಾಂಸದ ತುಣುಕು ಜೋಲಾಡುತ್ತಿದ್ದ ದೃಶ್ಯ ನೆನೆಸಿಕೊಂಡಾಗ ಈಗಲೂ ಭಯ ಮೂಡುತ್ತದೆ. ಮಾರಿಯಮ್ಮನ ಮಗ ಮಂಜ ಒಡನೆಯೇ ನನ್ನ ಬೆರಳನ್ನ ಅವನ ಬಾಯಿಯ ಒಳಗೆ ಮುಚ್ಚಿ ಹಿಡಿದಿದ್ದ. ಅವನ ಬಾಯೆಲ್ಲಾ ರಕ್ತ. ಎಲ್ಲರಿಗೂ ಭಯ. ಅದು ರಕ್ತ ಸೋರಿಕೆಯಲ್ಲ.. ರಕ್ತ ಧಾರೆ. ಒಡನೆಯೇ ಒರೆಸಿಕೊಳ್ಳುವುದಕ್ಕೆಂದು ಅರುಣ ತಂದಿದ್ದ ಪಂಚೆಯ ತುದಿ ಹರಿದು ಹರಿದ ಚರ್ಮದ ತುಂಡು & ಬೆರಳನ್ನು ಸೇರಿಸಿ ಕಟ್ಟಿ.. ನಮ್ಮ ಬಳಿ ಇದ್ದ ಸೈಕಲ್ ಒಂದನು ಏರಿ.. ಸರ್ಕಾರಿ ಆಸ್ಪತ್ರೆಗೆ ಹೋಗಿ ಬ್ಯಾಂಡೇಜ್ ಕಟ್ಟಿಸಿ ಕೊಂಡು ಬಂದ ಘಟನೆ ಈಗಲೂ ಕಣ್ಣ ಮುಂದೆ ಹಸಿರೇ. ಅಂದು ಅಮ್ಮನ ಬಾಯಲ್ಲೂ ಮಳೆ.. ಕಣ್ಣಲ್ಲೂ ಮಳೆ. ಇನ್ಮುಂದೆ ಊರ್ ಹುಡುಗರ ಜೊತೆ ಸೇರಕೂಡದು ಅನ್ನುವ ಹಠ. ಅಮ್ಮ ಹಾಗೆ ಗೆರೆ ಎಳೆಯುವುದೂ ನಿರಂತರ.. ನಾವದನು ದಾಟುವುದೂ ನಿರಂತರ. ಈಗಲೂ. ಮಾವಿನ ಕಾಯಿ ಹೆಚ್ಚುವಾಗ.. ಅದಕೆ ಕೊಯ್ಯುವಾಗ.. ಕಬ್ಬು ಕಡಿಯುವಾಗ ಬೆರಳುಗಳಿಗಾದ ಗಾಯಗಳಿಗೆ ಲೆಕ್ಖವಿಟ್ಟಿದ್ದರೆ ಗಾಯಗಳ ಲೆಕ್ಖದಲಿ ಇಂದು ಗಿನ್ನೆಸ್ ದಾಖಲೆ ಸೇರಬಹುದಿತ್ತು.

ಬೆರಳಿನ ಅಪಘಾತದಲಿ ನಾನು ಮರೆಯಲೇ ಬಾರದ ಇನ್ನೊಂದು ಘಟನೆಯಿದೆ. ಬಹುಷಃ ನನ್ನ ಜೀವವಾದರೂ ಹೋಗಬಹುದಾಗಿದ್ದ ಅಪಘಾತವದು. ನನ್ ಅದೃಷ್ಟದ & ಇಷ್ಟುದ್ದದ್ದ ಆಯುರ್ ರೇಖೆಯ ಮರ್ಯಾದೆಯನು ಉಳಿಸುವ ಸಲುವಾಗಿಯೇ ಅಂದು ನನ್ನ ಜೀವ ಉಳಿದಿರಬಹುದೇನೋ..??!! ನಿಮಗಿದು ಅರ್ಥವಾಗ ಬೇಕಾದರೆ, ನನ್ನ ಕಂಪನಿಯ ಒಂಚೂರು ಪರಿಚಯ ಮಾಡಿ ಕೊಡುವುದು ಉತ್ತಮ.

ನನ್ನದು ಪವರ್ ಗ್ರಿಡ್ ಅನ್ನುವ ಒಂದು ಕೇಂದ್ರ ಸರ್ಕಾರದ ಕಂಪನಿ. ಭಾರತದ ಶೇಕಡಾ ೬೦ ಭಾಗ ವಿದ್ಯುತ್ ಅನ್ನು ನಾವೇ ಪ್ರಹರಿಸೋದು. ಎಲ್ಲಾ ರಾಜ್ಯಗಳಿಗೂ. ಪವರ್  ಜೆನೆರೆಟಿಂಗ್ ಕೇಂದ್ರ ಸ್ಥಾನಗಳಿಂದ ಪವರ್ ಡಿಸ್ಟ್ರಿಬ್ಯೂಶನ್ ಸ್ಥಾನಗಳಿಗೆ [ದೇಶದ ಎಲ್ಲಾ ರಾಜ್ಯ & ಕೆಲ ಖಾಸಗೀ ಸ್ವಾಯುತ್ತತೆಗಳಿಗೂ] ವಿದ್ಯುತ್ತನ್ನು ಹೊತ್ತೊಯ್ಯುವ ಹೊಣೆ ನಮ್ಮ ಕಂಪೆನಿಯದ್ದು. ದೊಡ್ಡ ದೊಡ್ಡ ಟವರ್ ಗಳ ಮೂಲಕ ಸಾವಿರಾರು ಕಿಲೋ ಮೀಟರ್ ದೂರಗಳನ್ನು ಹಾದು ಒಂದು ಮೂಲೆಯಲ್ಲಿ ತಯಾರಾದ ವಿದ್ಯುತ್.. ದೇಶದ ಮತ್ತೊಂದು ಮೂಲೆಯನ್ನು ಸೇರುತ್ತಿದೆ ಅನ್ನುವುದಾದರೆ ಅದನ್ನು ೯೯% ಯಶಸ್ವಿಯಾಗಿ ತಲುಪಿಸುತ್ತಿರೋ ನಮ್ಮ ಕಂಪನಿಯ ಶ್ರಮ ಬಹಳ ಮಹತ್ವದ್ದು. ಒಂದು ಲಕ್ಷ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭಾರತ ದೇಶ ಈಗ ಬಳಸುತ್ತಿರುವ ಒಟ್ಟು ವಿದ್ಯುತ್ತಿನ ಶೇಕಡಾ ೬೬ ಭಾಗ ಅಂದರೆ.. ಸುಮಾರು ಒಂದೂವರೆ ಲಕ್ಷ ಮೆಗಾ ವ್ಯಾಟ್ ಗೂ ಹೆಚ್ಚು ವಿದ್ಯುತ್ ಶಕ್ತಿಯನ್ನು ಇಡೀ ದೇಶಕ್ಕೇ ಪೂರೈಸುತ್ತಿರೋ ಬೃಹತ್ ಕಂಪನಿ ನಮ್ಮದು. ಮಿಕ್ಕ ೪೦ ಭಾಗ ಖಾಸಗೀ ಕಂಪನಿಗಳ ಅಥವಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಸೇರುವ ವಿದ್ಯುತ್ ತಯಾರಿಕಾ ಘಟಕಗಳಿಂದ ಪೂರೈಸಲಾಗುತ್ತಿದೆ. ದೇಶದ ಯಾವ ರಾಜ್ಯದಲ್ಲಿ ವಿದ್ಯುತ್ ಕೈ ಕೊಟ್ಟರೂ ಅದರ ಹೊಣೆ ನಾವೇ ಹೊರಬೇಕಾಗುತ್ತದೆ. ಮತ್ತು ಅದರ ಪರಿಣಾಮ ದೇಶದ ಎಲ್ಲಾ ಮೂಲೆಗೂ ತಟ್ಟುತ್ತದೆ. ಎಲ್ಲಾ ಮೂಲೆಗಳಲ್ಲಿನ ನಮ್ಮ ಉಪಕೇಂದ್ರಗಳಿಗೂ. ಕಡೆಗೆ ನಮ್ಮ ಸಂಬಳಕೂ..!! ಆದರೆ ತಪ್ಪು ನಮ್ಮದಲ್ಲ. ಅದರಲ್ಲಿ ಬಹಳಷ್ಟು ಒಳ ಒಪ್ಪಂದಗಳಿವೆ. ಅವನ್ನು ಬಿಡಿಸಿ ಹೇಳಲು ಒಬ್ಬ ಅರ್ಥ ಶಾಸ್ತ್ರಜ್ಞ ನೇ ಬರಬೇಕು. ದೇಶದಾಧ್ಯಂತ ಸುಮಾರು ೧೬೦ ಉಪ ಕೇಂದ್ರಗಳನ್ನು ಹೊಂದಿದ್ದು ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಸುಮಾರು ೮-೧೦ ಉಪ ಕೇಂದ್ರಗಳನ್ನು ಹೊಂದಿರುವ ನಮ್ಮ ಕಂಪನಿ ಜಾಗತಿಕವಾಗಿ ಮೂರನೇ ಬೃಹತ್ ವಿದ್ಯುತ್ ಪ್ರಸಾರಣಾ ಕಂಪನಿ.

ಇಂತಿಪ್ಪ ಕಂಪನಿಯ ಹೊಸದೊಂದು ಉಪಕೇಂದ್ರ ಕಾರೈಕುಡಿಯಲ್ಲಿ ಉದ್ಘಾಟನೆಯಾಗುವುದರಲ್ಲಿತ್ತು.. ಜೂನ್ ೨೦೦೯. ಆಗಷ್ಟೇ ಕಂಪನಿ ಸೇರಿ ಎರಡನೆ ತಿಂಗಳು. ತಿರುಚಿಯಲ್ಲಿ ಟ್ರೈನಿಂಗ್ ನಲ್ಲಿದ್ದ ನಾನು & ಸುಮಾರು ನಾಲ್ಕು ಜನ ಟೆಸ್ಟಿಂಗ್ ಗ್ರೂಪಾಗಿ ಹೋಗಿ ಉಪಕೇಂದ್ರದಲ್ಲಿ ಹಲವು ತಪಾಸಣೆಗಳನ್ನು ಕೈಗೊಳ್ಳಬೇಕಿತ್ತು. ನನ್ನದು OFL ತಪಾಸಣೆ. ಅಂದರೆ ಆಫ್ ಲೈನ್ ಫಾಲ್ಟ್ ಲೊಕೇಟರ್ ಟೆಸ್ಟಿಂಗ್. ಅಂದ್ರೆ ಒಂದು ವಿದ್ಯುತ್ ಪ್ರಸರಣ ಲೈನ್ ನಲ್ಲಿ ಯಾವುದಾದರೂ ತೊಂದರೆ ಇಂದಾಗಿ ವಿದ್ಯುತ್ ಕಡಿತವಾದರೆ ಈ ಯಂತ್ರದ ಮೂಲಕ ಅದು ಅಂದಾಜು ಎಷ್ಟು ದೂರದಲ್ಲಿ ಆಗಿರ ಬಹುದು ಎಂಬುದನ್ನು ಪತ್ತೆ ಹಚ್ಚುವ ಟೆಸ್ಟಿಂಗ್ ಇದಾಗಿತ್ತು. ನಮ್ಮ ಕಂಪನಿಯ ಸಾಧಾರಣ ವರ್ಕಿಂಗ್ ವೋಲ್ಟೇಜ್ ನಾಲ್ಕು ಲಕ್ಷ ವೋಲ್ಟು ಗಳು..!! ಇದು ಸಾಧಾರಣ ಉಪಕೇಂದ್ರಗಳಲ್ಲಷ್ಟೇ. ಈಗ ಎಂಟು ಲಕ್ಷ.. ಹತ್ತು ಲಕ್ಷ.. ಹನ್ನೆರಡು ಲಕ್ಷ ವೋಲ್ಟ್ಗಳನ್ನೂ ಮೀರಿದ ತಂತ್ರಜ್ಞಾನವನ್ನು ನಾವು ಬಳಸುತ್ತಿದ್ದೇವೆ..!! ಅಷ್ಟು ಲಕ್ಷ ವೋಲ್ಟು ಗಳ ಒಳಗೆ ಇಳಿದು ಕೂಡ ಕೆಲಸ ಮಾಡುವ ತಂತ್ರಜ್ಞಾನವನ್ನ ಹೊಂದಿದ್ದೇವೆ. ನೆನಪಿಡಿ ನಾವು ಮನೆಯಲ್ಲಿ ಬಳಸುವ ವಿದ್ಯುತ್ತಿನ ಹರಿವು ಸಾಧಾರಣ ೨೩೦ ವೋಲ್ಟ್ ಗಳು. ಎಲ್ಲಿಯ ೨೩೦ ಎಲ್ಲಿಯ ನಾಲ್ಕು ಲಕ್ಷ..!! ಇಂತಿಪ್ಪ ನಮ್ಮ ವಿದ್ಯುತ್ ತಂತಿಗಳು ವಿದ್ಯುತ್ ಇಲ್ಲದೆಯೂ ಸುಮಾರು ೧೫-೨೦ ಸಾವಿರ ವೋಲ್ಟ್ ಗಳ ಶಕ್ತಿಯನ್ನು ಹೊಂದಿರುತ್ತದೆ. ಇದಕ್ಕೆ ಸ್ಥಾಯಿ ವಿದ್ಯುತ್ [ Static Electricity ] ಎನ್ನುತ್ತಾರೆ. ಹವಾಮಾನ ವೈಪರಿತ್ಯ & ಇನ್ನು ಅನೇಕ ಕಾರಣಗಳಿಂದ ಉಂಟಾಗುವ ಈ ವಿದ್ಯುತ್ ಶಕ್ತಿಗೆ ನಾವು ಇಂಡಕ್ಶನ್  ವೋಲ್ಟೇಜ್ ಎನ್ನುತ್ತೇವೆ. 

 ಟೆಸ್ಟಿಂಗ್ ಮಾಡುವ ಮುನ್ನ ಆ ಸ್ಥಾಯಿ ವಿದ್ಯುತ್ತನ್ನು ನ್ಯೂಟ್ರಲ್ ಗೊಳಿಸಿ [ಅರ್ತ್ ಮಾಡಿ] ಪರೀಕ್ಷಣೆ ಮಾಡಲಾಗುತ್ತದೆ. ಹೀಗೆ OFL ಯಂತ್ರವನ್ನು ಬಳಸಿ ಪ್ರಾಥಮಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿ ಇನ್ನೇನು ಯಂತ್ರಗಳಿಗೆ ಕನೆಕ್ಟ್ ಮಾಡಲಾಗಿದ್ದ ವೈರ್ ಗಳನ್ನೂ ತೆಗೆಯುವಷ್ಟರಲ್ಲೇ ಅಚಾನಕ್ಕಾಗಿ ನ್ಯೂಟ್ರಲ್ ಗೊಳಿಸಲು ಹಾಕಲಾಗಿದ್ದ ಅರ್ತ್ ವೈರ್ ಹಿಂದಿ ಕೂಲಿ ಕಾರ್ಮಿಕನೊಬ್ಬ  ಅಜಾಗರೂಕತೆ ಇಂದಾಗಿ ತೆಗೆದು ಬಿಟ್ಟ.. ಕಡೆಯ ವೈರ್ ಒಂದನ್ನು ಬಿಚ್ಚುತ್ತಿದ್ದ ನನಗೆ ಹೆವಿ ಶಾಕ್. ಇದೇ ನನ್ನ ದೇಹವೇ ದೇದಿಪ್ಯ ಮಾನವಾಗಿ ಹೊಳೆದದ್ದನ್ನು ನಾನು ಕಂಡೆ. ಮಿಂಚು ಹೊಡೆದರೆ ಏನಾಗಬಹುದೆಂಬುದರ ಸಾಕ್ಷಾತ್ ಅನುಭವ ನನಗಾಗಿತ್ತು. ಅಮ್ಮಾ ಎಂದು ಕಿರುಚಿದ್ದಷ್ಟೇ ನೆನಪು. ೧೫-೨೦ ಸಾವಿರ ವೋಲ್ಟು ಗಳ ಶಕ್ತಿ ಎಂದರೆ ಕಮ್ಮಿಯೇ. ೨೩೦ ವೋಲ್ಟು ಗಳೇ ಆಗ ಬೇಕಿಲ್ಲ.. ಒಬ್ಬ ಮನುಷ್ಯನಿಗೆ ಕೇವಲ ಅರವತ್ತು ವೋಲ್ಟು ಗಳಲಿ ೨೦ ಮಿಲಿ ಅಂಪಿಯರ್ ಕರೆಂಟು ಅವನ ದೇಹದ ಮೂಲಕ ಹಾದು ಹೋದರೆ ಸಾಕು ಅವನು ಸಾಯಲಿಕ್ಕೆ. ಪುಣ್ಯಕ್ಕೆ ನಮ್ಮ ಕಂಪನಿಯ ಸೇಫ್ಟಿ ಷೂ ಗಳನ್ನು ಧರಿಸಿದ್ದೆ. ಅವು ೧೧-೧೫ ಸಾವಿರ ವೋಲ್ಟು ಗಳ ವರೆಗೂ ರೋಧ [resistant] ನೀಡ ಬಲ್ಲವು. 

ಯಾರ ಹಾರೈಕೆಯೋ ನಾನು ಆ ಶಾಕ್ ನಿಂದ.. ಮೇಲಾಗಿ ಸಾವಿನಿಂದ ತಪ್ಪಿಸಿ ಕೊಂಡು ಬಂದದ್ದು. ಅಂಥಾ ಆಕಸ್ಮಿಕಗಳಲ್ಲಿ ಸಾಮಾನ್ಯವಾಗಿ ಬದುಕುಳಿಯುವುದು ಕಡಿಮೆ. ಬದುಕಿದರೂ ಬೆಂದೋ ಇಲ್ಲವೇ ಅಂಗ ಹೀನರಾಗಬೇಕಾದ ಭಾಗ್ಯ. ಅಲ್ಲಿದ್ದವರಿಗೆಲ್ಲ ಒಂದು ಕ್ಷಣದಲ್ಲಿ ಏನಾಯಿತೆಂಬುದರ ಕಲ್ಪನೆಯೇ ಇರಲಿಲ್ಲ. ನಾನು ಐದಡಿ ದೂರಕ್ಕೆ ತಳ್ಳಿ ಹಾರಿದ್ದಷ್ಟೇ ನೆನಪು. ಮೂರ್ಛೆ ಹೋಗಿದ್ದೆ. ನನ್ನನ್ನು ಜೀಪಿನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲೇ ನನಗೆ ಎಚ್ಚರವಾಯಿತು. ನನ್ನ ಸಹವರ್ತಿಗಳು ಉಪಕರಣ ಗಳಿಗಾದ ಹಾನಿ.. ಸುಟ್ಟು ಹೋದ ಕೇಬಲ್.. ಇನ್ನೂ ಮುಂತಾದವುಗಳ ಕುರಿತು ಮಾತನಾಡುತ್ತಿದರು. ನನಗೆ ಕೈ ಎತ್ತಲಾಗುತ್ತಿಲ್ಲ. ಉರಿ.. ನೋವು. ನನ್ನ ಬಲಗೈ ಯ ತೋರು ಬೆರಳು ಎರಡಿಂಚಿನ ತನಕ ಪೂರ್ತಿ ಬೆಂದು ಬೊಬ್ಬೆಗಳ ಹಾಗೆ ಊದಿಕೊಂಡು ಆಗಾಗ ಒಂದು ಹನಿ ನೀರು ಒಸರುತ್ತಿತ್ತು. ನಡು ಬೆರಳಿಗೂ ಸ್ವಲ್ಪ ಏಟು ಬಿದ್ದು ಅದೂ ಅರ್ಧ ಇಂಚು ಬೆಂದಿತ್ತು.

ಡಾಕ್ಟರ್ ಹೇಗಾಯಿತೆಂದು ಕೇಳಿದರು.. ನನ್ನ ಸಹವರ್ತಿಗಳೂ.. ಸೂಪರ್ ವೈಸರ್ ಗಳು ಹೇಗೋ ಸಂಭಾಳಿಸಿ.. ಸಣ್ಣ ಕರೆಂಟ್ ಶಾಕ್ ಎಂದಷ್ಟೇ ಹೇಳಿ ಟ್ರೀಟ್ ಮೆಂಟ್ ಮಾಡಿಸಿಕೊಂಡು ರೆಸ್ಟ್ ಗಾಗಿ ನೇರ ನನ್ನನ್ನು ನನ್ನ ಊರಿಗೆ ಕಳಿಸಿಕೊಟ್ಟರು. ಅದನ್ನೊಂದು ದೊಡ್ಡ ವಿಚಾರ ಮಾಡಬೇಕಾದದ್ದು ಯಾರಿಗೂ ಬೇಕಾಗಿರಲಿಲ್ಲ. ಮೇಲಾಗಿ ನನಗೂ. ಅದರಿಂದ ಆ ಸಮಯಕೆ ಡ್ಯೂಟಿಯಲ್ಲಿದ್ದ  ಸರ್ವರಿಗೂ ಸಮನ್ಸ್ ಅಥವಾ ವಾರ್ನಿಂಗ್  ಲೆಟರ್ ಬರುವ  ಅಪಾಯವಿತ್ತು.  ನನ್ನ ಬದುಕಿಗೂ ಇದು ಒಂದು ಕಪ್ಪು ಚುಕ್ಕೆಯಾಗಬಲ್ಲ ಘಟನೆಯಾದ್ದರಿಂದ ಯಾರಿಗೂ ಇದನ್ನು ಹೊರಗೆ ತರುವ ಕಾಳಜಿ ಇರಲಿಲ್ಲ. ನನ್ನ ಜೋತೆಯಲ್ಲೊಬ್ಬ ತಮಿಳು ಕೂಲಿ ಕಾರ್ಮಿಕನನ್ನು ನನ್ನೊತ್ತಾಸೆಯಾಗಿ ಕಳುಹಿಸಿದ್ದರು. ನಾನು ಊರ ಹೆಬ್ಬಾಗಿಲ ವರೆಗೂ ಅವನೊಟ್ಟಿಗೆ ಬಂದು ಊರಿನಲ್ಲಿ ಯಾರಿಗೂ ಅನುಮಾನ ಬರಕೂಡದೆಂದು ಅವನನ್ನು ವಾಪಸು ಕಳಿಸಿದೆ. ಮನೆಯಲ್ಲಿ ಎಲ್ಲರಿಗೂ ಗಾಬರಿ.. ಇದೇನಾಯ್ತು ನನ್ನ ಕೈಗೆಂದು..?? ನಾನು ಸುಮ್ಮನೆ ಒಂದು ಕಥೆ ಹೇಳಿದ್ದೆ ಹೀಗೆ ಅಲ್ಲಿನ ಫ್ರೆಂಡ್ ಒಬ್ಬನ ಊರಲ್ಲಿ ಉತ್ಸವ.. ನಾನೂ ಅಲ್ಲಿಗೆ ಹೋಗಿ ಅವನೊಟ್ಟಿಗೆ ಸಣ್ಣ ಪುಟ್ಟ ಕೆಲಸ ಮಾಡುವಾಗ ಆಯ ತಪ್ಪಿ ಬಿದ್ದು, ಅಲ್ಲೇ ಇದ್ದ ಒಲೆಗೆ ಕೈ ನೀಟಿದೆ ಸ್ವಲ್ಪ ತೋರು ಬೆರಳು ಸುಟ್ಟಿದೆ ಅಷ್ಟೇ.. ನಾಲ್ಕು ದಿನ ಎಲ್ಲಾ ಸರಿ ಹೋಗುತ್ತದೆ ಎನ್ನುವ ಸಮಜಾಯಿಷಿ ನೀಡಿದೆ. ಅಮ್ಮನ ಕಣ್ಣಲ್ಲಿ ಮಳೆ.. ಕೆಲಸಕ್ಕೆ ಸೇರಿದ ಎರಡನೇ ತಿಂಗಳಲ್ಲೇ ಕೈ ಗೆ ಹೀಗೆ ಮಾಡಿ ಕೊಂಡೆನಲ್ಲಾ..?? ಅತ್ತೆಗೆ ಅಮ್ಮನಿಗಿಂತಲೂ ಜೋರು ಅಳು.. ನಾನೆಂದರೆ ಅಷ್ಟಿಷ್ಟ ಅವರಿಗೆ. ಅಪ್ಪನಿಗೆ ಅನುಮಾನ. ಅಪ್ಪ ಒಬ್ಬ ಎಲೆಕ್ಟ್ರಿಷಿಯನ್..!! 

ಅಪ್ಪನಿಗೆ ಬೆಂಕಿಯಲ್ಲಿ ಸುಟ್ಟ ಗಾಯಗಳಿಗೂ ಕರೆಂಟ್ ಶಾಕುಗಳಿಂದ ಆದ ಗಾಯಯಗಳಿಗೂ ನಡುವಿನ ಸಾಮ್ಯದ ಪರಿಚಯವಿದೆ. ಏಕಾಂಗಿಯಾಗಿ ಬಂದು ನನ್ನ ಬಳಿ ನಿಜ ವಿಚಾರಿಸಿದರು. ನಾನೂ ಆ ಘಟನೆಯನ್ನು ಹೇಳದೆ ಹಾಗೆ ಕ್ಯಾಂಟೀನ್ ನಲ್ಲಿ ಎಲೆಕ್ಟ್ರಿಕ್ ಸ್ಟವ್ ರಿಪೇರಿ ಮಾಡುವಾಗ ಅಕಸ್ಮಾತ್ ಹೀಗಾಯಿತೆಂದು ಸಬೂಬು ಹೇಳಿದೆ. ಅಪ್ಪ ಬಹಳ ನೊಂದು ಈ ಕೆಲಸ ಕಷ್ಟ ವಾದರೆ ಬಿಟ್ಟು ಬಿಡು ಮಗ.. ನಾನಿಲ್ಲೇ ನಿಂಗೆ ಕೆಲಸ ಕೊಡಿಸ್ತೀನಿ ಅಂತ ದುಃಖ ತುಂಬಿ ಧೈರ್ಯ ಹೇಳಿದ್ರು. ನಾನವರಿಗೆ ತೋಚಿದ ಹಾಗೆ ಸಮಾಧಾನ ಮಾಡುತ್ತಲಿದ್ದೆ. ಕೆಲಸ ಬಿಡುವ ಪ್ರಮೇಯವೇ ಇಲ್ಲ.. ಇದು ನಾನು ಕನಸಿಟ್ಟು ನನಸಾಗಿಸಿ ಕೊಂಡ ಕೆಲಸ. ಇಂಥ ಚಿಕ್ಕ ಪುಟ್ಟದ್ದಕ್ಕೆಲ್ಲ ಹೆದರಲಾದೀತೇ..?? ನನಗಾಗಿದ್ದು ಚಿಕ್ಕದೆ..!!?? ಆದರು ನಾನು ಧೃತಿಗೆಡಲಿಲ್ಲ. ಆಗಿದ್ದು ಆಗಿ ಹೋಯಿತು.. ಜೀವನದಲಿ ಆಗಬೇಕಾದ್ದು ಬಹಳವಿದೆ ಈ ಕೆಲಸ ಅದಕೆ ಒತ್ತಾಸೆ ಎನ್ನುವುದರಲಿ ಅನುಮಾನವಿಲ್ಲ. 

ಹದಿನೈದು ದಿನ ತೋರು ಬೆರಳಿಗೆ ನೀರು ಮುಟ್ಟಿಸದೆ ಪ್ಲಾಸ್ಟಿಕ್ ಕಟ್ಟಿಕೊಂಡೆ ಬದುಕಬೇಕಾಯ್ತು. ಭಯಂಕರ ನೋವು. ಗಾಯ ಆಗಾಗ ರಕ್ತ ಕೀವುಗಳನ್ನು ಒಸರುತ್ತಿತ್ತು. ತುಂಬಾನೇ ನೋವಾಗುತ್ತಿತ್ತು. ಪ್ರಪಂಚದ ಎಲ್ಲಾ ಸಂತೋಷಗಳನ್ನು  ಬೇಕಿದ್ರೆ ಪದಗಳಲ್ಲಿ  ಸಾಧ್ಯವಾದ ಮಟ್ಟಿಗೆ ಕಟ್ಟಿ ಹಾಕಬಹುದು. ಆದರೆ ಎಲ್ಲಾ ನೋವುಗಳನ್ನಲ್ಲ. ನನ್ನ ನೋವು ನನ್ನ ಅನುಭವ. ಪರರ ನೋವು ಪರರ ಅನುಭವ. ಊಹೆ ಮಾಡ ಬಹುದಷ್ಟೇ. ಊಹೆಯಲಿ ಅನುಭವಿಸಲಾಗುವುದಿಲ್ಲ. ಕ್ರಮೇಣ ನನ್ನ ಗಾಯ ಮಾಗುತ್ತಾ ಬಂತು.. ಹೊಸ ಮಾಂಸ ಬಂತು.. ಹೊಸ ಚರ್ಮ ಬಂತು. ನನಗೆ ಬೆರಳು ಹೋಗಲಿಲ್ಲ.. ಬೆರಳಿಗಿಂತ ಮುಖ್ಯ ಜೀವ ಹೋಗಲಿಲ್ಲ..!!  ಹೊಸ ಹುರುಪು ಬಂತು. ಹೊಸ ಚರ್ಮ ಬಂದರೂ ನೋವು ಒಂದೆರಡು ತಿಂಗಳು ಹಾಗೆ ಇತ್ತು. ತಿರುಚಿ ಕಳೆದು ಮದುರೈ ಬರೋವರೆಗೂ. ನನ್ನ ಬೆರಳಿಗೂ ಒಂದು ಹೊಸ ನೋವು.. ಹೊಸ ಬದುಕು.. ಹೊಸ ಅನುಭವ.. ಹೊಸ ಜೀವ ದಕ್ಕಿತ್ತು.

ಅದಾದ ಮೇಲೂ ಈವರೆಗೂ ಅನೇಕ ಕಾರಣಗಳಿಂದ ಬೆರಳಿಗೆ ಸಣ್ಣ ಪುಟ್ಟ ಗಾಯಗಳು ಹೊಡೆತಗಳು ಬೀಳುತ್ತಲೇ ಇವೆ.. ಏನು ಆಗುತ್ತಲೇ ಇಲ್ಲವೇನೋ ಎಂಬಂತೆ ಮಾಯುತ್ತಲೇ ಇವೆ. ಈಗೀಗ ನನಗೆ ನನ್ನ ತೋರು ಬೆರಳಿನ ಮೇಲೆ ವಿಪರೀತ ಮೋಹ. ಕಂತೆಯಷ್ಟು ಓದ್ತಾ ಇದೀನಿ.. ಕಡ್ಡಿಯಷ್ಟು ಬರೀತಾ ಇದ್ದೀನಿ. ಈಗೀಗ ಬರವಣಿಗೆ ಅಂದ್ರೆ ಒಂದು ಹೊಸ ದಾಹ. ಕುಡಿದಷ್ಟೂ ತಣಿಯದ ದಾಹ. ಗೀಚಿದಷ್ಟೂ ಮಣಿಯದ ಮೋಹ. ಜೊತೆಗೆ ಹಳೆಯ ಸೋಂಬೇರಿ ತನವೂ ಇನ್ನೂ ಪೂರ್ತಿ ಮಾಸಿಲ್ಲ. ನನ್ನ ಇಷ್ಟು ಬರವಣಿಗೆಗಾದರೂ ನನ್ನ ಮೂರಿಂಚು ಬೆರಳು ಬೇಕೇ ಬೇಕು. ಮತ್ತೊಮ್ಮೆ ಹೇಳುತ್ತೇನೆ ನನಗೆ ಹೊಸ ಎರಡು ಬೆರಳುಗಳಿಂದ ಮತ್ತೆ ಬರೆಯೋದನ್ನ ಕಲಿಯೋಕೆ ಮನಸಿಲ್ಲ. ಕಂಪ್ಯೂಟರ್ ಕೀ ಬೋರ್ಡ್ ಒತ್ತುವಲ್ಲಿ ನಾನು ಹೆಚ್ಚು ಉಪಯೋಗಿಸೋದು ಇದೇ ತೋರು ಬೆರಳನ್ನ. ಅದ್ಕೆ ನಂಗೆ ಈ ಬೆರಳಂದ್ರೆ ವಿಪರೀತ ಮೋಹ. ಬೆರಳು ಗಳಲ್ಲಿ ಅರಳುವ ಭಾವಗಳ ಮಾಂತ್ರಿಕ ಅನುಭವ ಈಗಷ್ಟೇ ಪರಿಚಯವಾಗಿದೆ. ಅದನ್ನು ಅನುಭವಿಸಲು ಇನ್ನು ಅನವರತ ಪ್ರಯತ್ನ ನಡೆಸಬೇಕಿದೆ.

ನನ್ನ ಕೆಲವು ಗೆಳೆಯರು ಯಾವಾಗಲು ಎಚ್ಚರಿಕೆ ನೀಡ್ತಾ ಇರ್ತಾರೆ. ಗುಂಪಿನಲ್ಲಿ ನಿಂತು ಯಾರ ಎಡೆಗೂ ಬೆರಳು ತೋರಿಸಿ ಮಾತಾಡಬೇಡ. ಅದು ಅಷ್ಟು ಒಳ್ಳೆಯದಲ್ಲ. ಯಾರಾದರೂ ತಪ್ಪಾಗಿ ತಿಳಿದು ರಾದ್ಧಾಂತಗಳಾದರೆ ಕಷ್ಟ ಅಂತ. ಅದ ಮೀರಿಯೂ ನಾ ನನ್ನ ತೋರು ಬೆರಳನ್ನ ಒಬ್ಬರೆಡೆಗೆ ನೀಟಿ ಮತ್ತೊಬರ ಬಳಿ ಅವರ ಬಗ್ಗೆ ಮಾತಾಡುತ್ತೇನೆಂದರೆ.. ಅದು ಅವರ ಮೇಲಣ ಅಧಮ್ಯ ಅಭಿಮಾನ  ಮತ್ತು ಅಧಮ್ಯ ಪ್ರೀತಿ ಇಂದ ಮಾತ್ರ. ಪ್ರೈಮರಿ ಶಾಲೆಯ ನಮ್ಮ ಶಿವರುದ್ರಪ್ಪ ಮಾಸ್ಟರ್ ಯಾವಾಗಲೂ ಹೇಳ್ತಾ ಇದ್ರು.. ನೀನು ಮತ್ತೊಬ್ಬರೆಡೆಗೆ ನಿನ್ನ ಒಂದು ಬೆರಳು ತೋರಿಸಿ ಹೀನವಾಗಿ ಮಾತಾಡ್ತಿ ಅನ್ನೋದಾದ್ರೆ.. ಇನ್ನೂ ಮೂರು ಬೆರಳು ನಿನ್ನೆಡೆಗೆ ತಿರುಗಿ ನೀನು ಅವರಿಗಿಂತ ಮೂರು ಪಟ್ಟು ಅಧಮ ಎಂಬುದನ್ನ ಸಾರುತ್ತದೆ ನೆನಪಿಟ್ಟುಕೋ ಅಂತ. ನನಗೆ ಈಗಲೂ ಆ ಪಾಠ ನೆನಪಿದೆ. ಆದ್ದರಿಂದಲೇ ನಾನು ನನ್ನಿಷ್ಟದವರ.. ನನ್ನ ಪ್ರೀತಿ ಪಾತ್ರರ.. ನನ್ನ ಆರಾಧ್ಯ ಸಮಾನರ ಕಡೆಗೆ ಒಂದು ಬೆರಳು ತೋರಿಸಿ ಮಾತಾಡುವ ಪ್ರಯತ್ನ ಮಾಡುತ್ತೇನೆ. ಮಿಕ್ಕ ಮೂರು ಬೆರಳುಗಳು ನನ್ನೆಡೆಗೆ ತಿರುಗಿರುವಂತೆ.. ಅವರ ಮೂರು ಪಟ್ಟು ಪ್ರೀತಿ & ವಿಶ್ವಾಸ ನನ್ನನ್ನು ಸೇರಿಕೊಳ್ಳಲಿ ಅನ್ನುವ ಸದಾಶಯದಿಂದ.

ನೆನಪಿರಲಿ ನನ್ನ ತೋರು ಬೆರಳು ಯಾವತ್ತಿಗೂ ನಿಮ್ಮ ಕಡೆಗೆ ಮುಖ ಮಾಡಿರುತ್ತದೆ...!! ಈಗಲೂ ಸಹ.

Tuesday, 1 January 2013

ಗ್ರೀಟಿಂಗ್ ಕಾರ್ಡುಗಳಿಗೂ.. ನನ್ನ ಬಾಲ್ಯಕ್ಕೂ.. ನಿತ್ಯ ಹರಿದ್ವರ್ಣದ ನೆನಪು.

ಕಳೆದ ಒಂದು ವಾರದಿಂದ ಮೊಬೈಲ್ ಗೆ ಬರೋ ಎಪ್ಪತ್ತು ಪ್ರತಿಶತ ಎಸ್ಸೆಮ್ಮೆಸ್ ಗಳು  Happy New Year in Advance ಅನ್ನೋದೇ ಆಗೋಗಿದೆ..
 
ಅಲ್ವಾ ..?? ಅದೊಂದು ಟ್ರೆಂಡ್.. ಎಸ್ಸೆಮ್ಮೆಸ್ ಈಗ ಮೊಬೈಲ್ ಬಳಕೆಯಲ್ಲಿನ ಬಹು ಮುಖ್ಯ ಅಂಶಗಳಲ್ಲೊಂದು.. ಅದೊಂದು ಯಾರೂ ಜಾರಿಗೊಳಿಸದಿಹ ನಿಯಮ.. ಅದೊಂದು ಪದ್ಧತಿ.. ಅದೊಂದು ಸಂಸ್ಕೃತಿ.. ಅದೊಂದು ಸಂಪ್ರದಾಯವೇ ಅನ್ನುವಂತೆ ನಾವೆಲ್ಲರೂ ಬಹಳಷ್ಟು ಪ್ರತಿನಿತ್ಯ ಒಮ್ಮಿಂದೊಮ್ಮೆ ಮಾಡಿಯೇ ತೀರುವ ಸಾಧಾರಣ ವಿಷಯ. ಆದ್ರೆ ಹಬ್ಬ ಹರಿದಿನಗಳು ಬಂತೂ ಅಂದ್ರೆ ಅಪರೂಪಕ್ಕೊಮ್ಮೆ ಯಾವತ್ತೂ ಎಸ್ಸೆಮ್ಮೆಸ್ ಮಾಡದ ಅನೇಕ ಹಿರಿಯ.. ಮಾನ್ಯ.. ಗಣ್ಯ ಮತ್ತು ಅತಿ ವಿಶಿಷ್ಟ ವ್ಯಕ್ತಿತ್ವಗಳೂ ಸಹ ಒಮ್ಮೊಮ್ಮೆ ನಮಗ ಎಸ್ಸೆಮ್ಮೆಸ್ ಕಳಿಸಿ ಶುಭ ಹಾರೈಕೆಗಳ ಜೊತೆ ಅಚ್ಚರಿಯ ಸಂತಸವನ್ನೂ ಹುಟ್ಟಿಸಿ ಬಿಡುತ್ತಾರೆ. ಒಂದು ಹಬ್ಬ.. ಹರಿದಿನ.. ಅಥವಾ ಇನ್ನ್ಯಾವುದೇ ವಿಶೇಷ ದಿನಗಳಿದ್ರೆ.. ಮೂರ್ನಾಲ್ಕು ದಿನಗಳ ಮೊದಲೇ ಹೀಗೆ ಎಸ್ಸೆಮ್ಮೆಸ್ ಗಳ ಮೂಲಕ ಶುಭಾಶಗಳನ್ನ ಕೋರೋ ಪ್ರಕ್ರಿಯೆ ಆರಂಭವಾಗಿ ಬಿಡತ್ತೆ. ಆದ್ರೆ ಇಲ್ಲಿ ಬೇಸರ ತರಿಸೋ ಒಂದು ಅಂಶ ಏನು ಅಂದ್ರೆ ಜೋಗಿಯವರು ತಮ್ಮ ಹಲಗೆ ಬಳಪ ಪುಸ್ತಕದಲ್ಲಿ ಹೇಳುವಂತೆ ನೂರ ನಲವತ್ತು ಅಕ್ಷರಗಳ ನಡುವಿನಲ್ಲೇ ನಮ್ಮ ಕವಿತ್ವ.. ಅಥವಾ ಹೇಳ ಬೇಕ್ಕಾದ್ದನ್ನ ಅಷ್ಟರಲ್ಲೇ ಹೇಳಿ ಮುಗಿಸಿ ಬಿಡುವ ಘನ ಪಾಂಡಿತ್ಯ.. ಯಾರೂ ಯಾರೊಬ್ಬರಿಗೂ ಹೇಳಿ ಕೊಡದೆಯೂ.. ಅದಾಗದೆ ನಮ್ಮೆಲ್ಲರೊಳಗೊಂದುಗೂಡಿ ಬಿಟ್ಟಿದೆ ಅಂದರೆ ತಪ್ಪಾಗಲಾರದು.
 
ಬರೀ ಮೊಬೈಲು ಮಾತ್ರವಲ್ಲ ಫೇಸ್ಬುಕ್.. ಆರ್ಕುಟ್.. ಟ್ವಿಟ್ಟರ್.. ಈ-ಮೇಲ್ ಎಲ್ಲದರಲ್ಲೂ ಇದೆ ಜಾಳು. ಹೆಚ್ಚೆಂದರೆ "ನಿಮಗೂ, ನಿಮ್ಮ ಕುಟುಂಬದವರೆಲ್ಲರಿಗೂ ೨೦೧೩ ರ ಈ ವರ್ಷ ಸುಖ.. ಸಂತೋಷ. ಆರೋಗ್ಯ.. ಸಮೃದ್ಧಿ ಗಳನ್ನೂ ತಂದು ನಿಮ್ಮ ಬದುಕು ಸದಾ ಕಾಲ ಹಸನಾಗಿರಲೆಂದು.. ನನ್ನ ಮತ್ತು ನನ್ನ ಕುಟುಂಬದ ಪರವಾಗಿ ಹಾರ್ಧಿಕವಾಗಿ ಹಾರೈಸುತ್ತೇನೆ" ಇದು ಆಗಲೇ ಮಾಡಿಟ್ಟು ಕೊಂಡಿರುವ ಸಿದ್ಧ ಸೂತ್ರ. ಅಲ್ಲಿ ೨೦೧೩ ಅನ್ನುವ ಪದದ ಬದಲಿಗೆ ದೀಪಾವಳಿ ಯುಗಾದಿ, ಗಣೇಶ ಚತುರ್ಥಿ, ದಸರಾ, ಮಹಾಲಕ್ಷ್ಮಿ ವ್ರತ, ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ರಾಮ ನವಮಿ, ಕನ್ನಡ ರಾಜ್ಯೋತ್ಸವ, ನಾಗರ ಪಂಚಮಿ, ಸಕ್ರಾಂತಿ, ಕ್ರಿಸ್ಮಸ್, ಗುಡ್ ಫ್ರೈಡೆ, ರಂಜಾನ್, ಬಕ್ರೀದ್, ಅಥವಾ ನಮ್ಮಗಳ ಜನುಮ ದಿನ.. ಹೀಗೆ ಸಂಧರ್ಭ ಅಥವಾ ವಿಶೇಷತೆ ಯಾವುದೇ ಇರಲಿ.. ಅಲ್ಲಿ ಪದವೊಂದನ್ನು ಬದಲಿಸಿದರೆ ಆಯ್ತು. ಮಿಕ್ಕೆಲ್ಲ ಹರಕೆ ಹಾರೈಕೆಯ ಧಾಟಿ ವರ್ಷಂಪ್ರತಿ ಒಂದೆಯೇ. ಹೆಚ್ಚೆಂದರೆ ಒಂದೆರಡು ಶುಭ ಹಾರೈಕೆಯ ಚಿತ್ರಗಳು.. ಅನಿಮೇಟೆಡ್ ಚಿತ್ರಗಳು.. ಹಿರಿಯ ಕವಿಗಳ ಅಥವಾ ಇನ್ನ್ಯಾರೋ ಗೀಚಿದ ನಾಲ್ಕು ಸಾಲಿನ ಕವನ ಇಲ್ಲವೇ ಬರಹದ ಜೊತೆ ಈ ಶುಭಾಷಯ ಪ್ರಕ್ರಿಯೆ ಮುಗಿದು ಹೋಗುತ್ತದೆ. ಎಷ್ಟೋ ಬಾರಿ ಇದು ಮಾಮೂಲಿ ಎನ್ನಿಸಿ ಆ ಶುಭ ಆಶಯದ ಮಧುರ ಅನುಭೂತಿ ನಮಗೆ ದಕ್ಕೋದೆ ಇಲ್ಲ.
 
ಓಡುವ ಕಾಲನ ಚಕ್ರದ ಮೇಲೆ.. ಕಾಲಿನ ಮೇಲೆ ಬಿಸಿ ನೀರು ಬಿದ್ದವರಂತೆ ತಲ್ಲಣಿಸಿ ಓಡುವ ನಮಗೆಲ್ಲ.. ಈ ಸಿದ್ಧ ಸೂತ್ರಗಳನ್ನು ಹೊರತು ಪಡಿಸಿ ಬೇರೆ ವಿಧದಲ್ಲಿ ಶುಭಾಶಗಳನ್ನು ಕೋರುವ ಮಧುರ ಅನುಭೂತಿಯನ್ನು ಅನುಭವಿಸಲು ಮನಸ್ಸಿದ್ದರೂ ಮಾರ್ಗವಿಲ್ಲ.. ಮಾರ್ಗವಿದ್ದರೂ ಸಮಯವಿಲ್ಲ. ಒಂದು ಶುಭಾಷಯ ತಾನೇ ಹೇಗೂ ತಿಳಿಸಬೇಕು.. ಹೇಗೆ ತಿಳಿಸಿದರೇನು..?? ಒಟ್ಟು ತಿಳಿಸಿದರಾಯ್ತು ಅನ್ನೋ ಉಡಾಫೆಯ ಮಾತಲ್ಲ. ಪ್ರಸ್ತುತಕ್ಕೆ.. ಪ್ರಸ್ತುತತೆಯ ಪ್ರಭಾವಕ್ಕೆ ಹೊಂದಿಕೊಂಡ ನಮ್ಮೆಲ್ಲರ ಸಹಜ ವರ್ತನೆ ಇದು ಅಂದರೆ ಅಕ್ಷರ ಸಹ ತಪ್ಪಾಗಲಾರದೇನೋ. ಇನ್ನೂ ಹಲವು ಜನ ಇಷ್ಟನ್ನೂ ಹೇಳುವುದಿಲ್ಲ.. ವಿಶ್ ಯೂ ದಿ ಸೇಮ್.. ಸೇಮ್ ಟೂ ಯೂ.. ಅನ್ನುವಷ್ಟರಲ್ಲೇ ಮುಗಿಸಿ ಬಿಡ್ತಾರೆ.. ಅದು ಕೂಡ ಸೋಗಲಾಡಿತನವೇನಲ್ಲ.. ಅದೂ ಕೂಡ ಒಂದು ಬಗೆಯ ಸಿದ್ಧಸೂತ್ರವಷ್ಟೇ.
 
ಒಂದು ಹಬ್ಬ ಹರಿದಿನಗಳ ಆಚರಣೆಗೆ ಹೇಗೆ ಹೂವು, ಹಣ್ಣು, ಫಲ ತಾಂಬೂಲ.. ಅರಿಶಿನ ಕುಂಕುಮ ಗಳಿಗೆಲ್ಲ ಹೇಗೆ ತಮ್ಮದೇ ಆದ ವಿಶೇಷ ಪಾತ್ರಗಳಿವೆಯೋ.. ಹಾಗೆ ಈ ಶುಭ ಹಾರೈಕೆಗಳಿಗೂ ತಮ್ಮದೇ ಆದ ವರ್ಚಸ್ಸಿದೆ ಅನ್ನುವುದು ನನ್ನ ಅಂಬೋಣ. ಹಿರಿಯರ ಆಶಿರ್ವಾದವಿಲ್ಲದೆ.. ನೆರೆ ಮನೆಯ ಹರಕೆಗಳಿಲ್ಲದೆ.. ಬಂಧು ಬಳಗದ ಹಾರೈಕೆ ಗಳಿಲ್ಲದೆ.. ಮಿತ್ರ ವೃಂದದ ಶುಭಾಕಾಂಕ್ಷೆಗಳಿಲ್ಲದೆ ಯಾವ ವಿಶೇಷ ದಿನವೂ ಅಪೂರ್ಣ. ಸಿಹಿ ಇಲ್ಲದ ಸಂಭ್ರಮದ ಹಾಗೆ. ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾದೆ.. ನನಗೆ ಕೆಲಸ ಸಿಕ್ಕಿತು.. ಪ್ರಮೋಶನ್.. ಮದುವೆ.. ಮಗು.. ಮಗುವಿನ ನಾಮಕರಣ... ಫಾರಿನ್ ಟ್ರಿಪ್.. ರಿಟೈರ್ಮೆಂಟ್.. ಹೊಸ ಮನೆ ಕಟ್ಟಿದ್ದು.. ಕಾರು ಕೊಂಡದ್ದು.. ಮಗ-ಮಗಳ ಮದುವೆ.. ನಮ್ಮ ಆರಾಧ್ಯ ಸಮಾನ ಕೆಲಗಣ್ಯ ವ್ಯಕ್ತಿಗಳ ಭೇಟಿಯಾದ ದಿನ.. ಜನುಮದಿನ.. ಹೀಗೆ ಸಂತಸ ಸಂಹ್ರಮದ ಕ್ಷಣ ಯಾವುದೇ ಇರಲಿ ನಮ್ಮ ಆತ್ಮೀಯರ ಶುಭಾಶಯಗಳಿಲ್ಲದೆ ಯಾವ ಸಂಭ್ರಮಗಳ ಸಾರ್ಥಕತೆ ಅಥವಾ ಸಂತೃಪ್ತಿ ಯಾವತ್ತಿಗೂ ಅಪೂರ್ಣವೇ.
 
ಹೀಗೆ ಮೊನ್ನೆ ಬೆಳಿಗ್ಗೆ ಕಲಾ ಫೋನ್ ಮಾಡಿದ್ದಳು..
ಕಲಾ ಅಂದ್ರೆ ಚಂದ್ರಕಲಾ ಅನ್ನುವ ಹೆಸರನ್ನ ಕತ್ತರಿಸಿ ನಾವೆಲ್ಲಾ ಪ್ರೀತಿಯಿಂದ ಕರೆಯುವ ಅವಳ ಹೆಸರು. ಈಗಷ್ಟೇ ೨ನೆ PUC ಓದ್ತಾ ಇದಾಳೆ. ಸುಮಾರು ಹದಿನಾರು ವರುಷ ನಮ್ಮ ಮನೆಯ ಪಕ್ಕದಲ್ಲೇ ನಮ್ಮ ಮನೆಯ ಮಗಳಂತೆಯೇ ಬೆಳೆದ ಹುಡುಗಿ. ನಮ್ಮನೆಗೆ ಅಷ್ಟೇ ಅಲ್ಲ.. ನಮ್ಮ ಓಣಿಗೆ.. ನಮ್ಮ ಊರಿಗೆ ಇಷ್ಟವಾದಂಥ ಹುಡುಗಿ. ಅದ್ಭುತ ಮಾತುಗಾರ್ತಿ. ಅವಳ ತಂಗಿ ಅನಿತಾ ಮತ್ತು ಅನುಷಾ ರನ್ನು ಕಂಡರೆ ಕೂಡ ಅಷ್ಟೇ ಮುದ್ದು. ಒಳ್ಳೆ ನಾಟ್ಯಗಾರ್ತಿ. ಈಚೆಗೆ ಮಿಲಿಟರಿ ಇಂದ ಸ್ವಯಂ ನಿವೃತ್ತಿ ತಗೊಂಡು ಬಂಡ ಅವರಪ್ಪ ಶಂಕರಣ್ಣ ನನ್ನ ಕಾರಣಗಳಿಂದ ಪಕ್ಕದೂರಲ್ಲಿ ಮತ್ತೊಂದು ಭವ್ಯ ಮನೆಯನ್ನು ಕಟ್ಟಿ ಇಡೀ ಪರಿವಾರವೇ ಪಕ್ಕದೂರಿಗೆ ಗುಳೆ ಹೋಗಿ ಒಂದು ವರ್ಷವಾಯ್ತು. ನಾನಾದರೂ ಸರಿಯೇ ಯಾವಾಗ ಊರಿಗೆ ಹೋದರು ಅವರ ಮನೆಗೊಂದು ಖಾಯಂ ಭೇಟಿ ಖಡಾ ಖಚಿತ. ನಮ್ಮಗಳ ಮನೆಗಳು ಮಾತ್ರ ಸ್ವಲ್ಪ ದೂರವಾಗಿರಬಹುದು.. ಆದ್ರೆ ಮನಸ್ಸಿನ ದೂರ ಇಂಚು ಕೂಡ ಹೆಚ್ಚಾಗಿಲ್ಲ.
 
ಇಂತಿಪ್ಪ ಕಲಾ ಮೊನ್ನೆ ಬೆಳಿಗ್ಗೆ ಫೋನ್ ಮಾಡಿದ್ದಾದ್ರು ಯಾಕೆ..??
ಹೇ ಕಲಾ.. ಏನಪ್ಪಿ ಇದ್ದಕ್ಕಿದ್ದ ಹಾಗೆ ಅಪರೂಪಕ್ಕೆ ನೆನೆಸ್ಕೊಂಡು ಫೋನ್ ಮಾಡಿದಿಯ..?? ನಮ್ದೆಲ್ಲ ಇವತ್ತು ನೆನಪಾಯ್ತ ಅಂದೆ.
ಏನಿಲ್ಲ ಸತೀಶಣ್ಣ ಸುಮ್ನೆ ಹಾಗೆ ಮಾಡಿದೆ ಅಷ್ಟೇ. ಚೆನ್ನಾಗಿದಿಯಾ..?? ನಿನ್ ಕೆಲಸ ಎಲ್ಲ ಹೇಗಿದೆ..??
ನಾ ಆರಾಮು ಕಣಪ್ಪಿ.. ಕೆಲಸ ಕೂಡಾ ಆರಾಮು.. ಹೇಳು ನೀ ಹೇಗಿದ್ದೀಯ..?? ಹೇಗೆ ಓದ್ತಾ ಇದಿಯ..?? ಮನೇಲೆಲ್ಲ ಹೇಗಿದಾರೆ..??
ಎಲ್ಲಾ ಆರಾಮು ಸತೀಶಣ್ಣ.. ನನ್ ಓದಿಗೇನು ಬಿಂದಾಸ್..
ಅದೂ ಇದೂ.. ಊರು ಕೇರಿ.. ಕಂತೆ ಪುರಾಣ.. ಮಣ್ಣು ಮಸಿ.. ಎಲ್ಲ ಅಂತ ಒಂದೈದು ನಿಮಿಷ ಮಾತಾಡಿದ ಮೇಲೆ ಕಲಾ ಅಂದ್ಲು..
ಸತೀಶಣ್ಣ ನಿನ್ ಆಫಿಸ್ ಅಡ್ರೆಸ್ ಕಳ್ಸೋ..
ನಂ ಆಫಿಸ್ ಅಡ್ರೆಸ್ಸಾ ಯಾಕೆ..??
ನೀ ಕಳ್ಸು ನಾ ಹೇಳ್ತೀನಿ..
ಇಲ್ಲ ನೀ ಹೇಳು ನಾ ಕಳಿಸ್ತೀನಿ..
ಏನಿಲ್ಲ ಸತೀಶಣ್ಣ ನ್ಯೂ ಇಯರ್ ಹತ್ರ ಬಂತಲ್ಲ. ಅದ್ಕೆ ನಿನಗೊಂದು ಗ್ರೀಟಿಂಗ್ ಕಳ್ಸೋಣ ಅನ್ನಿಸ್ತು ಅದ್ಕೆ ಕೇಳ್ದೆ.. ಇಲ್ಲ ಗಿಲ್ಲ ಅನ್ನದೆ ಕಳ್ಸು ಅಷ್ಟೇ.. ರಾಖಿ ಹಬ್ಬಕ್ಕೆ ರಾಖಿ ಕಳಿಸ್ತೀನಿ ಅಡ್ರೆಸ್ಸ್ ಕಳ್ಸು ಅಂದಿದ್ದೆ ಆಗ ಕಳಿಸಲಿಲ್ಲ.. ಹಾಗಂತ ಈಗ್ಲೂ ಕಳಿಸದೆ ಇದ್ರೆ ಇನ್ಮೇಲೆ ನಿಂಜೊತೆ ಮಾತೆ ಆಡಲ್ಲ ನೋಡು ಅಂತ ಹೆದರಿಸಿದ್ಳು.
ಹೂಂ ಆಯ್ತು ತಗೋ ಕಳಿಸ್ತೀನಿ. ನೀ ಫೋನ್ ಇಟ್ಟ ಕೂಡ್ಲೇ ಮೆಸೇಜ್ ಮಾಡ್ತೀನಿ ಬಿಡು.. ಹಾಗೆ ನಾನು ನಿನಗೊಂದು ಗ್ರೀಟಿಂಗ್ ಕಳಿಸ್ತೀನಿ ನೋಡ್ತಾ ಇರು ಅಂದೆ.
ಹುಮ್ಮ್ ಸರಿ.. ಸತೀಶಣ್ಣ ಹಾಗೆ ನಮ್ ನಾಗಣ್ಣ & ಪ್ರಭಣ್ಣ ( ಮಿಲಿಟರಿ ಯಲ್ಲಿರೋ ಅವರ ಸೋದರ ಸಂಭಂಧಿಗಳು ) ನಿಗೂ ಗ್ರೀಟಿಂಗ್ಸ್ ಕಳಿಸಬೇಕು.. ಹಾಗೆ ಅಣ್ಣಂದಿರ ಮೇಲೆ ಬರೆಯ ಬಹುದಾದ ಒಂದೆರಡು ಚಿಕ್ ಚಿಕ್ಕ ಕವನ ಗಳನ್ನ ಕಳ್ಸು ಮರೀಬೇಡ ಅಂತ ಫೋನ್ ಇಟ್ಳು.
 
ಗ್ರೀಟಿಂಗ್ಸ್... ಕೇಳಿದೊಡನೆ ನನ್ ಮನಸ್ಸು ಹಳೆ ನೆನಪುಗಳತ್ತ ಹಾಗೆ ಹೊರಳಿ ಕೊಳ್ತು.
 
ಹೊಸ ವರ್ಷದಾಚರಣೆ..
ಇದೊಂದು ಪ್ರಕ್ರಿಯೆ ಮಾತ್ರ ನಮ್ಮದಲ್ಲದ.. ನಮ್ಮ ಇತಿಹಾಸಕ್ಕೆ ಸಂಭಂಧ ಪಡದ.. ನಮ್ಮ ಬೇರುಗಳಲ್ಲಿ ಹುಟ್ಟದ ಆಚರಣೆಯಾದರೂ ನಮ್ಮದೇ ಎನ್ನುವಷ್ಟರ ಮಟ್ಟಿಗೆ ಧಾಂ ಧೂಮ್ ಎಂದು ಸಂಭ್ರಮಿಸಲ್ಪಡುವ ಆಚರಣೆ. ಕನ್ನಡ ರಾಜ್ಯೋತ್ಸವ ಕೂಡ ಪ್ರತೀ ಊರು.. ಪ್ರತಿ ಬೀದಿಗಳು ಆಚರಿಸೋದು ಅನುಮಾನವೇ.. ಆದರೆ ಇದೊಂದು ಆಚರಣೆಗೆ ಮಾತ್ರ ಹಿರಿಯರಿಂದ ಕಿರಿಯರ ತನಕ ಸರ್ವ ಜನ ಸಮ್ಮೇಳನ ಖಾತ್ರಿ. ನಮಗೆಲ್ಲಾ ಗೊತ್ತು.. ಭಾರತೀಯರಿಗೆಲ್ಲ ಹೊಸ ವರುಷಾಚರಣೆ ಯುಗಾದಿಯಲ್ಲಿ ಅಂತ. ಆದರು ಈ ಸಂಭ್ರಮದ ಮುಂದೆ ಅದು ಕೆವೆಲ ಒಂದು ಹಬ್ಬವೇನೋ.. ಒಂದು ಸಾಂಕೇತಿಕ ಆಚರಣೆ ಏನೋ ಅನ್ನುವಷ್ಟರ ಮಟ್ಟಿಗೆ ಈ ಜನವರಿ ಒಂದರ ನ್ಯೂ ಇಯರ್ ಆಚರಣೆಯನ್ನ ನಮ್ಮ ನೇಟಿವಿಟಿ ಗೆ ಒಗ್ಗಿಸಿ ಕೊಂಡು ಬಿಟ್ಟಿದ್ದೇವೆ. ಜಾತಿ ಧರ್ಮಗಳ ಬೇಲಿಯನ್ನು ದಾಟಿ ಸಂಭ್ರಮಿಸುತ್ತೇವೆ. ನಮ್ಮ ವಿಶಾಲ ಮನಸ್ಸಿಗೆ ಸಾಕ್ಷಿಯಾಗಿ ಎರಡೂ ಹೊಸ ವರ್ಷಾಚರಣೆ ಗಳೂ ಬಹಳ ಸಂಭ್ರಮದಿಂದ ಆಚರಿಸಲ್ಪಡುತ್ತವೆ.. ಆದರೆ ರೀತಿ ನೀತಿ ಬೇರೆಯಷ್ಟೇ.. ಈ ಎರಡೂ ಆಚರಣೆಗಳ ಸಂಭ್ರಮಿಸುವಿಕೆ ನಮ್ಮ ವಿವಿಧತೆಯಲ್ಲಿನ ಏಕತೆಗೆ ಒಂದು ಸಣ್ಣ ಉದಾಹರಣೆಯಾಗಿ ನಿಲ್ಲುತ್ತವೆ.
ಜನವರಿ ಒಂದರ ಈ ಹೊಸ ವರ್ಷಾಚರಣೆಯ ಹಲವು ರೀತಿಯ ಆಚರಣೆ ಅಥವಾ ಸಿದ್ಧತೆಗಳ ಪೈಕಿ ಗ್ರೀಟಿಂಗ್ಸ್ ಗಳ ಮೂಲಕ ಶುಭಾಶಯಗಳನ್ನ ವಿನಿಮಯಿಸಿ ಕೊಳ್ಳುವುದು ಕೂಡ ಬಹುಮುಖ್ಯ ಅಂಶಗಳಲ್ಲೊಂದು. ಭಾಗಶಃ ಅವಸಾನದ ಅಂಚಿಗೆ ತಲುಪಿರೋ ಈ ಗ್ರೀಟಿಂಗ್ ಕಾರ್ಡುಗಳ ವಿನಿಮಯದ ಪದ್ಧತಿ ಒಂದು ಕಾಲದಲ್ಲಿ ಕೊಡುತ್ತಿದ್ದ ಮಧುರ ಅನುಭೂತಿಗಳನ್ನ ಈಗ ಮೆಲುಕು ಹಾಕುವುದಕ್ಕಷ್ಟೇ ಸಾಧ್ಯ.
 
ತಂತ್ರಜ್ಞಾನದ ಅಭಿವೃದ್ಧಿಯಡಿ ಸಿಕ್ಕು ರೂಪಾಂತರಗೊಂಡ ನಮ್ಮ ಜೀವನ ಶೈಲಿಯಲ್ಲಿ ಇಂಥಾ ಅವೆಷ್ಟೋ ಅಂಶಗಳು ಅರಿವಿಗೆ ಬರುವ ಮೊದಲೇ ಅಳಿಸಿ ಹೋಗಲಾರಂಭಿಸಿದ್ದು ಸುಳ್ಳಲ್ಲ. ಈ ಅಭಿವೃದ್ಧಿ ಎಂಬುದರ ಎತ್ತರದ ಅಟ್ಟಕೆ ಮೊದಲ ಮೆಟ್ಟಿಲಾದ ಕೀರ್ತಿ ಈ ಮೊಬೈಲ್ ಫೋನ್ ಗಳದ್ದು ಎಂದರೆ ತಪ್ಪಾಗಲಾರದು. ನಂತರದ ಸ್ಥಾನ ಮಾನಗಳನ್ನ.. ಫೇಸ್ಬುಕ್.. ಆರ್ಕುಟ್.. ಈ ಮೇಲ್ ಅಥವಾ ಇನ್ನಿತರ ಇಂಟರ್ನೆಟ್ ಮಾದರಿಗಳು ಆಕ್ರಮಿಸಿ ಕೊಳ್ಳುತ್ತವೆ. ನನಗಿನ್ನೂ ನೆನಪಿದೆ.. ನಮ್ಮೂರಿಗೆ ಮೊಟ್ಟ ಮೊದಲ ಮೊಬೈಲ್ ಫೋನ್ ಬಂದದ್ದು ಶಿವರಾಮಣ್ಣ ನ ಮನೆಗೆ. ಕಪ್ಪು ಬಣ್ಣದ ದಪ್ಪ ದಪ್ಪ ಕೀಲಿಗಳನ್ನು ಹೊಂದಿದ್ದ ಅದು ಥೇಟ್ ವಾಕಿ ಟಾಕಿ ಯೊಂದರ ಮುತ್ತಾತನ ರೂಪಧಾರಿಯಂತಿತ್ತು. ಅದರ ಮೊದಲು ಸಂಪರ್ಕಕ್ಕೆಂದು ಇದ್ದ ಅತ್ಯಾಧುನಿಕ ವ್ಯವಸ್ಥೆ ಎಂದರೆ ಶಿವರಾಮಣ್ಣ, ಹಾಲೇಶಣ್ಣ ಮತ್ತು ನಂಜಪ್ಪನವರ ಮನೆಗಳಲ್ಲಿದ್ದ ಲ್ಯಾಂಡ್ ಲೈನ್ ಫೋನುಗಳು ಮಾತ್ರ. ಈ ಮೂರು ಮನೆಗಳಿಂದ ಒಂಭತ್ತು ಬೀದಿಗಳ ನಮ್ಮೂರು.. ತಲಾ ಮೂರು ಬೀದಿಗಳಿಗೊಂದು ಮನೆಯ ಫೋನ್ ಎಂಬಂತೆ ಅನಧೀಕೃತವಾಗಿ ಹರಿದು ಹಂಚಿ.. ಅಪರೂಪಕ್ಕೊಮ್ಮೆ ನಮ್ಮ ದೂರದೂರಿನ ಕರುಳು ಬಳ್ಳಿಗಳ ನಡುವೆ ಧ್ವನಿಗಳ ಮುಖಾ ಮುಖಿಯಾಗುತ್ತಿತ್ತು. ಹಬ್ಬ ಹರಿದಿನ ಅಥವಾ ವಿಶೇಷ ದಿನಗಳಂದು ಆಗಾಗ ಇವರುಗಳ ಮನೆಯಲ್ಲಿ ತಮ್ ತಮ್ಮ ನಂಟರುಗಳ ಫೋನ್ ಕಾಲ್ ಗಳಿಗೆ ಅದೆಷ್ಟು ಜನ..!! ಅದೆಷ್ಟು ಹೊತ್ತು ಸರದಿಯಲ್ಲಿ ಕಾದು ನಿಂತು ಮಾತಾಡಿದ ಉದಾಹರಣೆಗಳಿಲ್ಲ..?! ಅಲ್ಲಿ ನಡೆದ ಅದೆಷ್ಟು ಸ್ವಾರಸ್ಯಕರ ಘಟನೆಗಳಿಲ್ಲ..?? ಫೋನಿಗಾಗಿ ಮುತ್ತಿಕ್ಕುವ ಜನದಂಗುಳಿ ಕಂಡು ಇತ್ತ ಹೂಂ ಅಥವಾ ಊಹೂಂ ಅನ್ನಲಾರದ ಇಕ್ಕಟ್ಟು ಮತ್ತು ಬಿಕ್ಕಟ್ಟಿನ ಪರಿಸ್ತಿತಿ ಆ ಮೂರು ಮನೆಗಳದ್ದು. ಇರಲಿ ಅದರ ಬಗ್ಗೆ ಮತ್ತೊಮ್ಮೆ ಬರೆಯುವ.
 
ಸಂಪರ್ಕ ವ್ಯವಸ್ಥೆಯಲ್ಲಿ ಈ ಮೂರು ದೂರವಾಣಿಗಳು.. ಆಪದ್ಭಾಂದವರಂತೆ.. ಅಪರೂಪದ ಸುದ್ದಿಗಳಿಗೆ.. ಅತ್ಯಾವಶ್ಯಕ ಸುದ್ದಿಗಳಿಗೆ.. ತುರ್ತು ಸುದ್ದಿಗಳಿಗೆ ವರದಾಯಕವಾಗಿದ್ದವು ಅನ್ನೋದು ಬಿಟ್ಟರೆ.. ಪತ್ರಗಳ ಮೂಲಕ ನಡೆಯುತ್ತಿದ್ದ ಸಂವಹನಕ್ಕೆ ಆಗಲೂ ಪರ್ವಕಾಲ. ಈಗಿನ ಕಾಲಕ್ಕೆ ಅದು ಅಷ್ಟೇನೂ ಹಿಂದಿನ ಮಾತೂ ಅಲ್ಲ. ೨೦೦೦-೨೦೦೧ ನೆ ಇಸವಿಯ ಸಾಲಿಗೂ ಈ ಪ್ರಕ್ರಿಯೆ ಅಷ್ಟೇ ನಳ ನಳಿಸುತ್ತಿತ್ತು ಅನ್ನೋಕೆ ಯಾವ ಸಂಶಯವೂ ಇಲ್ಲ. ನಮ್ಮೂರಿನ ಅದೆಷ್ಟು ಜನರ ಮಾತುಗಳಿಗೆ ನಾನು ಕಿವಿಯಾಗಿಲ್ಲ..?? ಅದೆಷ್ಟು ಜನರಿಗೆ ನಾನು ನನ್ನ ಕೈಯಾರೆ ಪತ್ರ ಬರೆದು ಕೊಟ್ಟಿಲ್ಲ.?? ಅವರು ಹೇಳ್ತಾ ಹೇಳ್ತಾ ಹೋಗೋಕೆ.. ನಾನು ಬರೀತಾ ಬರೀತಾ ಹೋಗೋಕೆ.. ಅದೆಷ್ಟು ಜನರ ಅದೆಷ್ಟು ನೋವು ನಲಿವುಗಳು.. ಸಿಹಿ ಕಹಿಗಳು ನನಗೆ ಆಗಲೇ ಪರಿಚಯವಾಗಿಲ್ಲ..??
 
ಪತ್ರ ಬರೆಯುವಿಕೆ ಅಂತಹುದ್ದೊಂದು ಮುದ ಕೊಡುತ್ತಿತ್ತು. ಅದಕ್ಕಿಂತಲೂ ಮುದ ಕೊಡುವ ಮತ್ತೊಂದು ಅಂಶವೆಂದರೆ ಈ ಗ್ರೀಟಿಂಗ್ ಕಾರ್ಡುಗಳ ಗೀಚುವಿಕೆ. ಪತ್ರಗಳಾದರು ಒಮ್ಮೆ ಬಂದು ತಲುಪಿದುದರ ಬೆನ್ನಿಗೋ..?? ತಿಂಗಳಿಗೂ.?? ಮೂರು ತಿಂಗಳಿಗೋ ಒಮ್ಮೆ ಚಲಾವಣೆಯಾಗುತ್ತಲೇ ಇತ್ತೆನ್ನಿ.. ಆದರೆ ಈ ಗ್ರೀಟಿಂಗ್ ಕಾರ್ಡುಗಳ ಜನನ ಡಿಸೆಂಬರ್ ತಿಂಗಳ ಕೊನೆಯ ವಾರ ಬಿಟ್ಟರೆ.. ಅಪರೂಪಕ್ಕೊಮ್ಮೆ ಬೇರೆ ವಿಶೇಷ ಸಂಧರ್ಭಗಳಿಗೆ ಮಾತ್ರ. ಈ ಗ್ರೀಟಿಂಗ್ ಕಾರ್ಡುಗಳಿಗೂ.. ನನ್ನ ಬಾಲ್ಯಕ್ಕೂ.. ನಿತ್ಯ ಹರಿದ್ವರ್ಣದ ನೆನಪು.
 
ಹೈಸ್ಕೂಲ್.. ನಮ್ಮ ಗ್ರೀಟಿಂಗ್ ಕಾರ್ಡುಗಳನು ಹಂಚುವ ಪ್ರಕ್ರಿಯೆಯ ಪರಮಾವಧಿಯನ್ನ ಕಂಡ ಪರ್ವಕಾಲ. ಆ ದಿನಗಳಲ್ಲಿ ನಾವು ಅದೆಷ್ಟೋ ದಿನಗಳಿಂದ ಕೂಡಿಟ್ಟ ಅದೆಷ್ಟು ಬೆರಳೆಣಿಕೆಯ ರೂಪಾಯಿಗಳಲ್ಲಿ.. ನಾಲ್ಕಾಣೆ, ಎಂಟಾಣೆಗೊಂದರಂತೆ ಸಿಗುತ್ತಿದ್ದ.. ಹೂವಿನ.. ಮರಗಳ.. ಗೊಂಬೆಗಳ.. ದೇವರ ಚಿತ್ರದ.. ವಿವೇಕಾನಂದರ ಚಿತ್ರದ ಅದೆಷ್ಟು ಗ್ರೀಟಿಂಗ್ ಕಾರ್ಡುಗಳನ್ನು ಕೊಂಡು ಗೀಚಿ ನಮ್ಮದೇ ಶಾಲೆಯ.. ನಮ್ಮದೇ ತರಗತಿಯ.. ನಮ್ಮದೇ ಬೆಂಚಿನ ಅದೆಷ್ಟು ಹುಡುಗರಿಗೆ ಹಂಚಿಲ್ಲ.?? ಅದರಲ್ಲೊಂದು ಸುಖ ಸಿಗುತ್ತಿತ್ತು.. ಅದ ಹೇಳಲು ನನ್ನಲ್ಲಿ ಪದವಿಲ್ಲ. ಹುಡುಗಿಯರಿಗಾದರೆ ಯಾವುದಾದರು ಹೂವಿನ.. ಬಹಳ ಹತ್ತಿರದ ತುಂಬಾ ಆಪ್ತ ಗೆಳತಿ ಎನಿಸಿದರೆ ಗುಲಾಬಿ ಹೂವಿನ.. ಹುಡುಗರಿಗಾದರೆ ಮೊಲ ಅಥವಾ ಜೋಡಿ ಪ್ರಾಣಿಗಳ.. ನಮಗಿಂತ ಚಿಕ್ಕವರಿಗೆ ಗೊಂಬೆಗಳ.. ವಿಜ್ಞಾನದ ಟೀಚರ್ ಗಳಿಗೆ ಮರ, ಪ್ರಾಣಿ ಪಕ್ಷಿಗಳ.. ಕನ್ನಡ & ಇನ್ನಿತರ ಭಾಷೆಗಳ ಟೀಚರ್ ಗಳಿಗೆ ದೇವರ ಚಿತ್ರದ ಅಥವಾ ಇನ್ನ್ಯಾವುದೇ ಉಕ್ತಿಯುಳ್ಳ ಕಾರ್ಡು.. ಸ್ವಲ್ಪ ಭಯ ಸೃಜಿಸಿದ್ದ ಮೇಷ್ಟರಿಗೆಲ್ಲ ವಿವೇಕಾನಂದರ ಚಿತ್ರವುಳ್ಳ ಕಾರ್ಡುಗಳನ್ನು ನೀಡುತ್ತಿದ್ದೆವು.
 
ನಾಲ್ಕಾಣೆ.. ಎಂಟಾಣೆಗೆ ಸಿಗುತ್ತಿದ್ದ ಆ ಕಾರ್ಡುಗಳಿಗೆಲ್ಲ ಜಪ್ಪಯ್ಯ ಎಂದರೂ ಎನ್ವಲಪ್ ಕವರ್ಗಳು ಸಿಗುತ್ತಿರಲಿಲ್ಲ.. ಅವಕ್ಕೆ ಖುದ್ದು ನಾವೇ ನಮ್ಮ ಅನ್ ರೂಲ್ದ್ ನೋಟ್ ಪುಸ್ತಕದ ಅಚ್ಚ ಬಿಳಿ ಹಾಳೆಯ ಹರಿದು.. ಆ ಚಿಕ್ಕಳತೆಯ ಗ್ರೀಟಿಂಗ್ ಕಾರ್ಡಿಗೆ ಬೇಕಾದ ಅಳತೆಗ ಆ ಹಾಳೆಯನ್ನು ಮಡಚಿ ಕತ್ತರಿಸಿ.. ಅಮ್ಮ ಅನ್ನ ಬಸಿಯುವುದನ್ನೇ ಕಾದು.. ಆ ಸುಡು ಸುಡು ಬಿಸಿ ಅನ್ನದ ಗಂಜಿಯೋ.. ಇಲ್ಲವೋ ಹಳೆಯ ತಂಗಳನ್ನದ ಅಗುಳೋ.. ಇಲ್ಲವೇ ರಾಗಿ ಮುದ್ದೆಯ ತುಣುಕನ್ನೋ ಬಳಸಿ ಬಹಳ ನೀಟಾಗಿ ಹರಿದ ಪೇಪರ್ ತುಣುಕುಗಳನ್ನ ಅಂಟಿಸಿ.. ನಾವೇ ಎನ್ವಲಪ್ ಕವರುಗಳನ್ನು ಬಹಳ ನಾಜೂಕಾಗಿ ತಯಾರಿಸುತ್ತಿದ್ದೆವು. ಆ ಅನುಭವಗಳು & ಅದರ ಹಿತವೇ ಬೇರೆ ಬಿಡಿ. ತಯಾರಾದ ಎನ್ವಲಪ್ ಕವರುಗಳ ಮೇಲೆ ಬಣ್ಣದ ಪೆನ್ಸಿಲ್ ಅಥವಾ ಸ್ಕೆಚ್ ಪೆನ್ ಗಳನ್ನೂ ಬಳಸಿ ಹೂವಿನ.. ಅಥವಾ ರಂಗೋಲಿಯ ಅಥವಾ ತೋಚದ ರೀತಿಯ ನಾನಾ ರಂಗೋಲಿಯನ್ನು ಬಿಡಿಸಿ ಬಹಳ ಸುಂದರವಾಗಿ ತಯಾರಿ ಮಾಡಿಟ್ಟು ಕೊಳ್ಳುತ್ತಿದ್ದೆವು.. ಆ ಎನ್ವಲಪ್ ಕವರುಗಳಿಗೆ ನಾನಾ ಬಗೆಯ ಬಾರ್ಡರ್ ಗೆರೆಗಳನ್ನ ಕೂಡ ಎಳೆಯುತ್ತಿದ್ದೆವು. ಇನ್ನು ಎಂಟಾಣೆ ಯ ಆ ಬರಿಯ ಗ್ರೀಟಿಂಗ್ ಕಾರ್ಡಿನ ಒಳಗೆ ನಾವು ಅಚ್ಚ ಬಿಳಿ ಬಣ್ಣದ ಹಾಳೆಯ ತುಣುಕೊಂದನ್ನಿರಿಸಿ ನಮಗೆ ತೋಚಿದ ರೀತಿಯಲ್ಲಿ ಕವನವೋ ಅಥವಾ ಶುಭಾಷಯ ಬರಹವನ್ನೂ ಗೀಚುತ್ತಿದ್ದೆವು. ಆ ಹೊತ್ತಿಗೆ ಚಿಕ್ಕಂದಿನಿಂದಲೇ ಚುಟುಕುಗಳನ್ನು ಗೀಚಿ ಅಭ್ಯಾಸವಿದ್ದ ನಾನು ಹಲವಾರು ಹನಿಕವನ ಗಳನ್ನೂ ಗೀಚಿ ಕೊಡುತ್ತಿದ್ದೆ. ವಿಶೇಷವೆಂದರೆ ಒಬ್ಬರಿಗೆ ಗೀಚಿದ ಕವನವನ್ನ ಮತ್ತೊಬ್ಬರಿಗೆ ಗೀಚುತ್ತಿರಲಿಲ್ಲ.
 
ಗ್ರೀಟಿಂಗ್ಸ್ ಕೊಟ್ಟಾಯಿತಲ್ಲ.. ಇನ್ನು ಯಾರ್ಯಾರು.. ಯಾರ್ಯಾರಿಗೆ.. ಯಾವ್ ಯಾವ ತರಹದ ಗ್ರೀಟಿಂಗ್ ಗಳಿಗೆ ಏನೇನು ಗೀಚಿ ಕೊಟ್ಟಿರಬಹುದೆನ್ನುವ ಕೌತುಕ. ಒಬ್ಬಬ್ಬರೂ ಒಬ್ಬೊಬ್ಬರದನ್ನು ಇಸಿದುಕೊಂಡು.. ಕೊಡದಿದ್ದರೆ ಕಸಿದು ಕೊಂಡು ಓದಿ ಸಂತಸ ಪಡುತ್ತಿದ್ದೆವು. ಅದರಲ್ಲೂ ಹುಡುಗಿಯರಿಗೆ ಬರುತ್ತಿದ್ದ ಕಾರ್ಡುಗಳ ಮೇಲೆ ಎಲ್ಲಿಲ್ಲದ ಆಸಕ್ತಿ. ಹುಡುಗ ತನ್ನ ನೆಚ್ಚಿನದೆಂದು ಗುರುತು ಮಾಡಿಟ್ಟುಕೊಂಡ ಹುಡುಗಿಗೆ ಯಾವ ರೀತಿಯ ಗ್ರೀಟಿಂಗ್ ಗೆ ಏನು ಗೀಚಿ ಕೊಟ್ಟಿರ ಬಹುದೆಂಬುದರಿಂದ ಹಿಡಿದು..ಬೇರೆ ತರಗತಿಯ ಅಥವಾ ಬೇರೆ ಸೆಕ್ಷನ್ನಿನ್ನ ಹುಡುಗ ಕೊಟ್ಟ ಗ್ರೀಟಿಂಗ್ ನೊಳಗೆ ಏನಿರಬಹುದು ಎಂಬ ಕೆಟ್ಟ ಕುತೂಹಲದ ಹೊಟ್ಟೆ ಕಿಚ್ಚಿನ ಭಾವದವರೆಗೂ ನಮ್ಮ ಅನ್ಯರ ಗ್ರೀಟಿಂಗ್ ಗಳನ್ನ ಓದುವ ಅತಿ ಕೆಟ್ಟ ಮತ್ತು ಅತಿ ಇಷ್ಟದ ಚಟ ಮುಂದುವರೆಯುತ್ತಿತ್ತು, ಅಪ್ಪಿ ತಪ್ಪಿ ಹುಡುಗ ಹುಡುಗಿ ತಮಗೆ ಬಂದ ಗ್ರೀಟಿಂಗ್ ಕಾರ್ಡುಗಳಲ್ಲಿ ನಾವು ಅನುಮಾನಿಸುವಂತೆ ಅಥವಾ ಚೇಡಿಸುವಂತೆ ಯಾವುದಾದರೂ ಅಂಶ ಕಂಡು ಬಂತೋ.. ಅವತ್ತಿಂದ ಅವರಿಬ್ಬರ ಹೆಸರಿನಲ್ಲೊಂದು ಅಮರ ಪ್ರೇಮ ಕಾವ್ಯ ಆರಂಭವೆಂತಲೇ ಅರ್ಥ. ಮತ್ತೊಂದು ವಿಚಾರವಿದೆ.. ಶಾಲೆ ಬಿಟ್ಟ.. ಅಥವಾ ಶಾಲೆಗೇ ಬಾರದ ಅಥವಾ ಶಾಲೆಯವನಲ್ಲದ ಹುಡುಗನಿಂದ.. ಹುಡುಗಿಯರಿಗೆ ಪೋಸ್ಟ್ ನಿಂದ ಬರುವ ಅಥವಾ ಖುದ್ದಾಗಿ ಬರುವ ಗ್ರೀಟಿಂಗ್ ಕಾರ್ಡುಗಳಿಗೆಲ್ಲ ಹೆಡ್ ಮಾಸ್ಟರ್ ಕೊಠಡಿಯಲ್ಲಿ ಚರ್ಚೆ ಮತ್ತು ತನಿಖೆ ನಡೆಯುತ್ತಿತ್ತು. ಆ ಹುಡುಗಿಯರ ಪಾಡು ಹೇಳ ತೀರಲಾರದ್ದು. ಅವರುಗಳ ಮನೆಯವರಿಗೆ ಈ ವಿಚಾರ ಗೊತ್ತಾಗಿ ಎಷ್ಟೋ ಬಾರಿ ರಾದ್ಧಾಂತಗಳಾಗಿದ್ದುಂಟು. ಆದ್ರೆ ತನ್ನ ಜೊತೆ ಓದುವ ಹುಡುಗ ಕೊಟ್ಟ ಗ್ರೀಟಿಂಗ್ ಗಳಿಗೆ ಅಷ್ಟು ಸಮಸ್ಯೆ ಇರುತ್ತಿರಲಿಲ್ಲ.
 
ಬರಿ ಸ್ಕೂಲ್ ನಲ್ಲಿ ಮಾತ್ರವಲ್ಲದೆ ಆಗ ನಾನು.. ಅಜ್ಜಿಯ ಊರಿಗೆ.. ಮಾಮನ ಮಕ್ಕಳಿಗೆ.. ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಿಗೆ.. ಊರು ಬಿಟ್ಟು ಬೇರೆ ಊರು ಸೇರಿದ ಆತ್ಮೀಯರಿಗೆ.. ನಮ್ಮ ಶಾಲೆ ಬಿಟ್ಟು ಬೇರೊಂದು ಪೇಟೆಯಲ್ಲಿ ಹಾಸ್ಟೆಲ್ ಸೇರಿ ಕಾನ್ವೆಂಟ್ ಓದುತ್ತಿದ್ದ ಗೆಳೆಯರಿಗೆ.. ಟ್ರಾನ್ಸ್ ಫಾರ್ ಆದ ಟೀಚರ್ ಗಳಿಗೆ.. ಇನ್ನು ಯಾರ್ಯಾರಿಗೆಲ್ಲ ಗ್ರೀಟಿಂಗ್ಸ್ ಕಳಿಸುತ್ತಿದ್ದ ನೆನಪು ಈಗಲೂ ಹಚ್ಚ ಹಸಿರು. ಕಾಲ ಕ್ರಮೇಣ ಎಲ್ಲವೂ ಬದಲಾಗಬೇಕ್ಕಾದ್ದು ಅನಿವಾರ್ಯವೇ ಆಗೋಯ್ತು. ಈಚೆಗೆ ಐದಾರು ವರ್ಷಗಳಲ್ಲಿ ಯಾರಿಗೂ ನಾನೊಂದು ಗ್ರೀಟಿಂಗ್ ಕಳಿಸಿಲ್ಲ.. ನನಗೆ ನೆನಪಿದೆ. ಅದರ ಜೊತೆ ಗ್ರೀಟಿಂಗ್ ಕಳಿಸುವ ಹಂಬಲವೂ ಇದೆ. ಮೊಬೈಲ್ ಇಂದ ಒಂದು ಮೆಸೇಜು ಕಳಿಸುವಷ್ಟು.. ಫೇಸ್ಬುಕ್ ನಲ್ಲಿ ಒಂದು ಸ್ಟೇಟಸ್ ಹಾಕುವಷ್ಟು ಸಮಯವಿಲ್ಲದ ಬಿಜಿ ಜೀವನದಲ್ಲಿ ಅಂತ ಹಂಬಲಗಳಿಗೆ ಅವಲಂಬನೆಯೇ ಇರುವುದಿಲ್ಲ ಅನ್ನೋದು ಅಷ್ಟೇ ನಿಜ.
 
ಕಲಾಳಿಗೆ ಕಳಿಸೋಕ್ಕೆಂದು ಒಂದು ಗ್ರೀಟಿಂಗ್ ಕೊಂಡು ತಂದದ್ದಾಗಿದೆ.
ಅನೇಕ ಕಟಿಂಗ್.. ವಿವಿಧ ನಮೂನೆಯ ಹೂಗಳ ಚಿತ್ರಗಳನ್ನೊಳಗೊಂಡ ಆ ಗ್ರೀಟಿಂಗ್ ನೋಡೋಕೆ ಸ್ವಲ್ಪ ಚೆನ್ನಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಬಹಳ ದಿನಗಳ ನಂತರ ಗ್ರೀಟಿಂಗ್ ಬರಯುವ ಹಠ ಮಾಡಿರುವೆ. ಬರೆದು ಕಳಿಸುವುದು ಬಾಕಿ ಇದೆ. ನಾನು ಖಂಡಿತ ಬರೆದು ತೀರುವವನೆ ಖಾತ್ರಿ ಇದೆ. ನೋಡುವ ಮುಂದೆ ಸಾಧ್ಯವಾದಲ್ಲಿ ನಿಮ್ಮೆಲ್ಲರಿಗೂ ಗ್ರೀಟಿಂಗ್ ಕಳುಹಿಸುವ ಬಯಕೆ ಇದೆ. ಕೇಳಿದ್ರೆ ಅಡ್ರೆಸ್ಸ್ ಕೊಡ್ತೀರಲ್ವಾ..??
 
ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.. :) :)

Friday, 21 December 2012

ಅಸಂಬದ್ಧ...

 
ಅರ್ಜೆಂಟ್ ನಲ್ಲಿದ್ದೆ..
 
ಹೌದು ಅರ್ಜೆಂಟ್ ಅಂದ್ರೆ ತುಂಬಾನೆ ಅರ್ಜೆಂಟ್ ನಲ್ಲಿದ್ದೆ..
 
ಯಾತಕ್ಕಾಗಿ ಅಷ್ಟು ಅರ್ಜೆಂಟ್ ನಲ್ಲಿದ್ದೆ ಅನ್ನೋದಕ್ಕೆ ಸ್ಪಷ್ಟ ಕಾರಣಗಳಿಲ್ಲ..!!
ಆದ್ರೆ ನಾನು ಅರ್ಜೆಂಟ್ ನಲ್ಲಿದ್ದೆ ಅನ್ನೋದಕ್ಕೆ ನನ್ನ ವರ್ತನೆಗಳು ಮೂಕ ಸಾಕ್ಷಿಯಾಗಿದ್ದವು. ಹೊರಗ್ಯಾರಿಗೂ ಕಾಣದ ಹಾಗೆ ಥರಗುಟ್ಟುತ್ತಿದ್ದೆ.. ಕೈ ಕೈಗಳ ಹಿಸುಕುತ್ತಿದ್ದೆ...!!
ಖಾಲಿ ರೋಡಿನ ಕೊನೆ ಬಿಂದುವಿನ ತನಕ ಕಣ್ಣು ನೆಟ್ಟು.. ಕಲ್ಲು ಗುಂಡಿನ ಹಾಗೆ ಅಲಾಡದೆ ಅದೇ ಜಾಗದಲ್ಲಿ ಹತ್ತು ನಿಮಿಷಕ್ಕೂ ಮಿಗಿಲಾಗಿ ನಿಂತು ಚಡಪಡಿಸುತ್ತಿದ್ದೆ..
 
ನಮ್ಮೂರು ಹೀಗಾಗಿ ಮೂರುವರೆ ವರ್ಷಗಳ ಮೇಲಾಯಿತು..!!
ಇದು ವಿಧಿ ಬರಹವೋ ಅಥವಾ ಜನರ ಹಣೆ ಬರಹವೋ ಅಲ್ಲ.. ಸದರೀ ಸರ್ಕಾರದ ಸೋಲಿಗ ತನ.
ಎರಡು ವರ್ಷಕ್ಕೆ ಮುಗಿಯಬೇಕಿದ್ದ NH ಎಲಿವೇಟೆಡ್ ಸೇತುವೆಯನ್ನ.. ಮೂರುವರೆ ವರ್ಷಕ್ಕೂ ಮಿಗಿಲಾಗಿ ಮೂರು ಪಿಲ್ಲರ್ ಗಳನ್ನ ಕಟ್ಟಲಿಕ್ಕಷ್ಟೇ ತನ್ನ ಸಾಮಾರ್ಥ್ಯವನ್ನ ತೋರಿದ ಘನತೆವೆತ್ತ ಸರ್ಕಾರದ ಅಖಂಡ ಬಲ ಪ್ರದರ್ಶನವದು..!!
ಶಿವಮೊಗ್ಗದಿಂದ ಬೆಂಗಳೂರಿಗೆ ಚಲಿಸುವ ಯಾವುದೇ ವಾಹನಗಳಿಗಾದರೂ ಈ ರಸ್ತೆಯೇ ರಾಜಪಥ. ಈ ರಸ್ತೆ ಯಾವತ್ತಿಗೂ ವಾಹನ ನಿಬಿಡ.
ಇನ್ನು ಮಸೀದಿಯ ಬಳಿ ರೈಲ್ವೆ ಹಳಿಯನ್ನು ಹಾದು ಹೋಗುವ ರಸ್ತೆ..!!
ಅಕ್ಷರ ಸಹ ಅದೊಂದು ಸಮಯಕ್ಕೆ ಮಾತ್ರ ಅದು ಊಹಾತೀತ ನರಕ. ರೈಲ್ ಬರುವ ಸಮಯಕ್ಕೆ ಸರಿಯಾಗಿ ಗೇಟ್ ಹಾಕಿ ನಿಲ್ಲಿಸಿದರಾಯ್ತು ಹತ್ತು ನಿಮಿಷ ವಾಹನದೊಳಗೆ ಮೌನಾಚರಣೆ..!!
ಬೆಂಗಳೂರನ್ನೊಮ್ಮೆ ನೆನಪಿಸಿ ಕೊಳ್ಳುವಂತೆ ಕಡಿಮೆ ಎಂದರೂ ನೂರಿನ್ನೂರು ಮೀಟರ್ಗೂ ಹೆಚ್ಚು ದೂರ ನಿಲ್ಲುತ್ತಿದ್ದ ವಾಹನಗಳು. ರೈಲು ಪಾಸಾಗುವುದನ್ನೇ ಜಾತಕ ಪಕ್ಷಿಗಳ ಹಾಗೆ ಕಾದು ಕುಳಿತ ವಾಹನ ಚಾಲಕರೆಲ್ಲರೂ ರೈಲು ಪಾಸಾಗಿ ಗೇಟ್ ತೆರೆಯುವುದೇ ತಡ..
ಆ ಸಮಯಕ್ಕೆ ಜಗತ್ತಿಗೆ ತಾವೇ ಸರ್ವೋತ್ತಮ ಅವಸರ ಪುರುಷರೆನೋ ಎನ್ನುವಷ್ಟರ ಮಟ್ಟಿಗೆ ಎರಡೂ ಬದಿಯಿಂದ ನಾ ಮುಂದು ತಾ ಮುಂದು ಎಂದು ಎರಡೂ ಬದಿಯಿಂದ ನುಗ್ಗಿ ರೈಲ್ವೆ ಹಳಿಯ ಮೇಲಿನ ಕಿರಿದಾದ ರಸ್ತೆಯ ಮೇಲೆ ಸಿಕ್ಕು...ಅಲ್ಲೂ ಹತ್ತು ಹದಿನೈದು ನಿಮಿಷ ಗೊಂದಲ ರಾಧಾಂತಗಳ ಸೃಷ್ಟಿಯಾಗುವಿಕೆ ಆ ರಸ್ತೆಯ ಖಾಯಂ ದೃಶ್ಯಗಳಲ್ಲೊಂದು..!!
ಇದನ್ನ ತಪ್ಪಿಸಲೆಂದೇ ಸರ್ಕಾರ ಮೂರುವರೆ ವರ್ಷಗಳ ಹಿಂದೆಯೇ ಆ ರೈಲ್ವೆ ಹಳಿ ಯನ್ನು ಕ್ರಾಸ್ ಮಾಡಲು ಎಲಿವೆಟೆಡ್ ರಸ್ತೆಗಾಗಿ ಮಂಜೂರಿಯಾಗಿ ಕೆಲಸ ಆರಂಭವಾಗಿತ್ತು. ಬಹುಷಃ ನಮ್ಮ ಶಿವಮೊಗ್ಗ ಜಿಲ್ಲೆಗೆ ಮೊದಲ ಎಲಿವೇಟೆಡ್ ರಸ್ತೆ ಇದಾಗಿರುತ್ತಿತ್ತು.. ಈ ವೇಳೆಗೆ ಕೆಲಸ ಮುಗಿದಿದ್ದರೆ.!!
 
ಭದ್ರಾವತಿ ನಗರದಿಂದ ನಮ್ಮೂರಿಗೆ ಸರಿಯಾಗಿ ಮೂರು ಕಿ.ಮೀ. NH ನಲ್ಲಿ ಭದ್ರಾವತಿಯಿಂದ ಸೀದಾ ಬೆಂಗಳೂರು ಮಾರ್ಗವಾಗಿ ಎರಡು ಕಿ.ಮೀ ಚಲಿಸಿದರೆ ಅಲ್ಲಿ ಸಿಗುವ ಶಿವನಿಕ್ರಾಸ್ ಎಂಬ ಎಡಕ್ಕೆ ತಿರುಗುವ ರಸ್ತೆಯಲ್ಲಿ ಒಂದು ಕಿ.ಮೀ ಗಿಂತಲೂ ಕಮ್ಮಿ ದೂರಕ್ಕೆ ಸಿಗುವ ಊರು ನಮ್ಮೂರು ಗೌರಾಪುರ. (ನಮ್ಮೂರಿನ ಹರಿಕತೆ.. ಪುರಾಣ ಈಗ ಬೇಕಿಲ್ಲವೆನ್ನಿ)
 
ಈ ಎಲಿವೆಟೆಡ್ ರಸ್ತೆಯ ಕೆಲಸ ಆರಂಭವಾದಂದಿನಿಂದ.. ನಮ್ಮೂರಿನ ಮೇಲೆ ಚಲಿಸುತ್ತಿದ್ದ ಎಲ್ಲಾ ಬಸ್ಸುಗಳು & ಸಂಪರ್ಕ ವಾಹನಗಳು ಈ ಕಾರಣಕ್ಕಾಗಿ ರಸ್ತೆ ಬಂದ್ ಆದ್ದರಿಂದ ಬೇರೆ ಮಾರ್ಗದ ಮೂಲಕ ಅಂದರೆ ನಮ್ಮೂರಿಂದ ಒಂದೂವರೆ ಕಿ.ಮೀ ದೂರದ ಪಕ್ಕದೂರಿನ ಮೂಲಕ ಅಡ್ಡ ರಸ್ತೆಯಲ್ಲಿ ಚಲಿಸಲು ಶುರುವಾದವು ಅಂದಿನಿಂದ ನಮ್ಮೂರಿಗೆ ಬಸ್ ಬಂದ್.,.!!
ಕಾಮಗಾರಿ ನಡೆಯುತ್ತಿದ್ದ ಆ ಜಾಗದ ಪಕ್ಕದಲ್ಲೇ ಹರಿಯುವ ಭದ್ರೆಯ ಕೆನ್ನೆಗಂಟಿ.. ರೇಲ್ವೆ ಹಳಿ ಮೇಲ್ಸೇತುವೆಯ ಕೆಳಗೆ ಕಿರುದಾರಿಯೊಂದಿತ್ತು.. ಬೈಕು. ಆಟೋ ಅಥವಾ ಕಾರುಗಳು ಚಲಿಸಬಹುದಾಗಿತ್ತು.
ನಮ್ಮೂರಿಂದ ಮುಂದೆ ಮೂರು ಕಿ. ಮೀ ದೂರದ ಅಂತರಗಂಗೆ ಇಂದ ಮೊದಲ್ಗೊಂಡು ಆಗೀಗ ಬರುತ್ತಿದ್ದ ಆಟೋವಷ್ಟೇ ನಮಗೆ ಗತಿ. ಸ್ವಂತ ವಾಹನವಿದ್ದರೆ ಮಾತ್ರ ನೆನೆಸಿಕೊಂಡ ಸಮಯಕ್ಕೆ ಭದ್ರಾವತಿ ಸೇರಬಹುದಿತ್ತು ಇಲ್ಲವೇ ಆಟೋಗಾಗಿ ಕಾದು ಸಾಯಬೇಕು. ಇಲ್ಲವೇ ಜುಜುಬಿ ಮೂರು ಕಿ.ಮೀ ಅಲ್ಲವೇ ಎಂದು ಮರುಗಿ ನಡೆದೇ ಸಾಗಬೇಕು ಆಗಲೇ ಭದ್ರಾವತಿಯ ದರ್ಶನ.
ಇಲ್ಲವೋ ಬಸ್ ಬರುವ ಸಮಯಕ್ಕೆ ಸರಿಯಾಗಿ ಪಕ್ಕದೂರಿನವರೆಗೂ ನಡೆದು.. ಬಸು ಬರುವವರೆಗೂ ಕಾದು ಬಸ್ ಸಿಕ್ಕರೆ ಹೋಗಬಹುದಿತ್ತು..
ಆಟೋಗಳು ಕೂಡ ಯಾವಾಗಲೋ ಒಮ್ಮೆ ಬಂದರುಂಟು ಇಲ್ಲದರಿಲ್ಲ. ಬಂದರೂ ಅಂತರಗಂಗೆ ಇಂದಲೇ ಪೂರ್ತಿಯಾಗಿ ಬರುವ ಆಟೋ ಒಳಗೆ ಸೀಟ್ ಸಿಕ್ಕುವುದು ಅದೃಷ್ಟವೇ.. ಅಂದಹಾಗೆ ನಮ್ಮೂರಿನ ಆಟೋಗಳ ಸೀಟ್ ಲೆಕ್ಖ ಬಂದು ಬರೋಬ್ಬರಿ ಒಂದು ಆಟೋಗೆ ಎಂಟು ಜನ..!!
Just Imagine .. How incredible..?? ವಯಸು ಹುಡುಗರೋ.. ಹುಡುಗೀರೋ. ಹೆಂಗಸರೋ.. ಗಂಡಸರೋ. ಮುದುಕರೋ ಮಕ್ಕಳೋ.. ಯಾವುದೋ ಒಟ್ಟು ಎಂಟು ಜನ ತುಂಬಿದರೆ ಮಾತ್ರ ಆಟೋ ಕದಲೋದು..!!
ಇಂತಿಪ್ಪ ಆಟೋದೊಳಗೆ ಸೀಟ್ ಸಿಕ್ಕುವುದೇ ಅದೃಷ್ಟ. ಸೀಟ್ ಇಲ್ಲವಾದಲ್ಲಿ ಆ ಆಟೋದವ ಕೂಡ ಕ್ಯಾರೆ ಎನ್ನದೆ.. ತಿರುಗಿ ನೋಡದೆ ಮುಲಾಜಿಲ್ಲದೆ ಗಾಡಿ ನಿಲ್ಲಿಸದೆ ಹೋಗಿ ಬಿಡುತ್ತಿದ್ದ.
 
ಹೀಗೆ ಒಂದು ಆಟೋಗಾಗಿ ಅಥವಾ ಇನ್ನ್ಯಾವುದಾದರೂ ಗಾಡಿಗಾಗಿ ರಸ್ತೆಯ ಮಧ್ಯೆ ನಿಂತು ಹಂಬಲಿಸಿ ಚಡಪಡಿಸುತ್ತಿಹ ನಾನು..!!
 
ಕೈಗೆ ವಾಚ್ ಕಟ್ಟಡ ನಾನು.. ನಿಮಿಷಕ್ಕೆ ಹದಿನೈದಕ್ಕಿಂತಲೂ ಹೆಚ್ಚು ಬಾರಿ ನನ್ನ ಮೊಬೈಲಿನಲ್ಲಿ ಟೈಮ್ ನೋಡುತ್ತಾ.. ಸಮಯಕ್ಕೆ ಸರಿಯಾಗಿ ಕೈಕೊಡೋ ಸಮಯವನ್ನ ಹಳಿಯುತ್ತಾ..
ಪೂರ್ತಿ ತುಂಬಿ ತುಳುಕುತ್ತಾ ನಿಲ್ಲಿಸದೆ ಹೊರಟ ಆಟೋಗಳ ಹಳಿಯುತ್ತಾ.. ರಸ್ತೆಯಲ್ಲಿ ಸಾಗುತ್ತಿದ್ದ ಟೂ ವೀಲರ್ಗಳ ಕಡೆಗೆ ಕೈ ನೀಟಿ ಅವುಗಳನ್ನ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದೆ.
ನನ್ನ ಅದೃಷ್ಟದ ಅದೃಷ್ಟ ನನಗಿಂತಲೂ ಮೊದಲೇ ಹಳ್ಳ ಹಿಡಿದಿತ್ತೇನೋ..??
ಆ ಮಾರ್ಗವಾಗಿ ಬಂದ ಯಾವ ಬೈಕುಗಳೂ ಸಿಂಗಲ್ಲಾಗಿ ಬರದೇ ಎಲ್ಲವೂ engaged..!!
ಸರೀ ಅವುಗಳನ್ನೂ ಹಳಿಯುತ್ತಾ ನನ್ನ ಧರ್ಮ ಕಾಯಕವನ್ನು ನಾನು ಮುಂದುವರೆಸುತ್ತಲೇ ನಿಂತೆ.
 
ಛೆ.. ಹಿಂಗೆ ಅಂತ ಗೊತ್ತಿದ್ದಿದ್ರೆ ನಡಕೊಂಡ್ ಆದರೂ ಹೋಗಬಹುದಿತ್ತು.. ಮನಸೊಳಗೆ ಗೊಣಗಾಟ..
ಮನೇಲಿ ಸೈಕಲ್ ಬೇರೆ ಪಂಚರ್..!!
ಆದರೂ ಮತ್ತ್ಯಾರದ್ದಾದ್ರೂ ಸೈಕಲ್ ಈಸ್ಕೊಂಡು ಹೋಗೋಣ ಅಂದ್ರೆ.. ಈಗ ಸರ್ಕಾರಿ ನೌಕರನೆಂಬ ಕಿರೀಟ ಬೇರೆ..!!
ಸೈಕಲ್ ಬಗ್ಗೆ ಅಷ್ಟು ಸುಲಭಕ್ಕೆ ಯೋಚಿಸಿದ ಬುದ್ಧಿ ಅಷ್ಟೇ ಸುಲಭಕ್ಕೆ ಹತ್ತಲು ಬಿಟ್ಟೀತೆ..??
ನೀಟಾಗಿ ಇನ್ಶರ್ಟ್ ಮಾಡಿ.. ಬಿಳಿ ಪ್ಯಾಂಟ್ ಹಾಕಿ ಟಾಕು ಟೀಕಾಗಿ ನಿಂತಿರೋ ನನ್ನ ಅಲಂಕಾರ ಕೆಟ್ಟರೆ.??
ಬೆವರಿದರೆ ಮಾಯವಾಗಿ ಬಿಡೋ ತಾಜಾತನ.. ಬಿಳಿ ಪ್ಯಾಂಟಿಗೆ ಸ್ವಲ್ಪ ಕರೆಯಾದರು ಎದ್ದು ಕಾಣಿಸೋ ಫೀಲಿಂಗು..!!
ಎಲ್ಲವನ್ನೂ ತಲೆಯ ಒಳಗೆ ಹಾಕಿಕೊಂಡು ಮಿಕ್ಸಿ ಆಡಿಸುತ್ತಾ ಹತ್ತು ನಿಮಿಷಕ್ಕೂ ಮಿಗಿಲಾದ ಉದ್ವೇಗದಲ್ಲಿ ಉನ್ಮತ್ತನಾಗಿ ಕುದಿಯುತ್ತಿದ್ದೆ.
 
ರಾಹುಕಾಲ ಕಳೆದಿರಬೇಕು..!!
ಅಗೋ ರಸ್ತೆಯ ಕೊನೆಯಂಚಿನ ಬಿಂದುವಿನಲ್ಲಿ ಗೋಚರಿಸಿದ ಕೆಂಪು ಕಾರು..
ಹತ್ತಿರ ಬರು ಬರುತ್ತಾ ಅದು ಆಲ್ಟೋ ಕಾರೆಂದು ಖಾತ್ರಿಯಾಯ್ತು...!! ಮನಸೊಳಗೆ ನೂರು ಕ್ಯಾಂಡಲ್ ಗಳನ್ನ ಹೊತ್ತಿಸಿ ಉರಿಯಲು ಬಿಟ್ಟ ಹಾಗಾಯ್ತು..!!
ಆಟೋ ಗೆ ಗತಿ ಇರದ ನಾನು.. ಆಲ್ಟೊ ಕಾರಿನ ಕನಸು ಕಾಣೋದು ಸರಿಯೇ..?? ಅತಿಯಾಸೆ ಗತಿಗೇಡು..!!
ಸಾಯಲಿ ಮಾರಾಯ.. ನನ್ನದು ಆಸೆಯಲ್ಲ.. ಯಾವುದಾರೂ ಒಂದು ಗಾಡಿ ಸಿಕ್ಕಲೆಂಬ ಪರಾಕಾಷ್ಠೆಯ ಹಂಬಲ.. ಆ ಕ್ಷಣಕ್ಕಿನ ಅನಿವಾರ್ಯತೆ.. ಆಪತ್ತಿಗಾದವನೇ ನೆಂಟ..
ಊರ ದೇವಿ ತಾಯಿ ಕೆಂಚಮ್ಮ ನಿಗೊಂದು ಉಘೆ ಹೇಳಿ ಕೈ ನೀಟಿದೆ.. ತಾಯಿ ಕೆಂಚಮ್ಮನ ಕೃಪೆ.. ಕಾರು ನನ್ನಿಂದ ಹತ್ತು ಮೀಟರ್ನಷ್ಟು ದೂರದಲ್ಲಿ ಹೋಗಿ ನಿಂತಿತು.
 
ನಮ್ಮ ಪಕ್ಕದಲ್ಲಿ ಸಾಮಾನ್ಯವಾಗಿ ಶ್ರೀ ಸಾಮಾನ್ಯರ್ಯಾರೂ ಕಾರಿಗೆ ಕೈ ಹಾಕೋ ಗೋಜಿಗೆ ಹೋಗೋದೇ ಇಲ್ಲ..
ಅಂತಸ್ತಿನ ಅಳತೆಯ ಅರಿವು ಇವರಿಗೂ ಇರಬಹುದು.. ಅಥವಾ ಕಾರಿನವರೇ ಮಾಡಿಕೊಡಬಹುದು..!!
ಸಾಮಾನ್ಯವಾಗಿ ಲಿಫ್ಟ್ ಅಂತ ಕೇಳೋಕೆ ಹೋದ್ರೆ ಆದು ಕೇವಲ ಬೈಕ್ ಗಳಿಗೆ ಮಾತ್ರ.. ಒಮ್ಮೊಮ್ಮೆ ಸೈಕಲ್ಲುಗಳಿಗೂ ಕೈ ನೀಟುವುದು ಅನಿವಾರ್ಯ.. ಕಾರ್ಯದೊತ್ತಡ..!!
ಒಮ್ಮೊಮ್ಮೆ ಅದೃಷ್ಟ ಖುಲಾಯಿಸಿ ಕಾರಿನವರೆ ಹತ್ತಿಸಿ ಕೂರಿಸಿ ಕೊಂಡೂ ಹೋಗೋದುಂಟು..!! ಆದರೆ ಕೇವಲ ಪರಿಚಯದವರನ್ನ ಮಾತ್ರ..
ನನಗೆ ಕಾರುಳ್ಳ ಯಾವ ವ್ಯಕ್ತಿಯೂ ಸುತ್ತ ಮುತ್ತಕ್ಕೆ ಪರಿಚಯವಿಲ್ಲ.. ಪರಿಚಯವಿದ್ದರೂ ನನ್ನನು ತಮ್ಮ ಕಾರಿನಲ್ಲಿ ಹತ್ತಿಸಿ ಕೂರಿಸಿಕೊಂಡು ಹೋಗುವಷ್ಟು ಗಾಢ ಮೈತ್ರಿ ಇಲ್ಲ. ಹಾಗಿರುವಾಗ ಯಾವುದೋ ಆಶಾ ಭಾವನೆಯಿಂದ ಕೈ ನೀಟಿದೊಡನೆ ನಿಲ್ಲಿಸಿದ ಆ ಆಲ್ಟೋವಿನ ಹಿಂದೆ.. ಆಶ್ಚರ್ಯಚಕಿತನಾಗಿ, ಆನಂದ ತುಂದಿಲನಾಗಿ ಓಡಿದೆ.
 
ಕಾರಿನ ಮುಂಬಾಗಿಲು ತೊರೆದು.. ಸಾರ್ ತುಂಬಾ ಅರ್ಜೆಂಟ್.. ಸ್ವಲ್ಪ ಭದ್ರಾವತಿಯ ತನಕ...
ಮಾತಿನ್ನೂ ಮುಗಿದಿರಲಿಲ್ಲ.. ಕಣ್ಣು ಗಳಲ್ಲೊಂದು ಮಿಂಚು..!! ಬಾಯಿ ತಂತಾನೇ ಸುಮ್ಮನಾಯಿತು..!! ನನ್ನನ್ನು ತಬ್ಬಿಬ್ಬಾಗ್ಗಿಸಿದ್ದು ಆ ವ್ಯಕ್ತಿಯ ಮುಖ..!!
ಸಾಕ್ಷಾತ್ ಪ್ರಕಾಶಣ್ಣ.. (ನಮ್ ಇಟ್ಟಿಗೆ ಸಿಮೆಂಟು ಪ್ರಕಾಶಣ್ಣ)..!!
ಆ ಕ್ಷಣಕ್ಕೆ ನನಗಿದ್ದ ತಳಮಳಕ್ಕೆ.. ನನಗಿದ್ದ ಉದ್ವೇಗಕ್ಕೆ.. ನನಗಿದ್ದ ತರಾತುರಿಗೆ ನಾ ಹೇಗೆ ವರ್ತಿಸಿದೇನೋ..?? ಮುಖದಲ್ಲಿ ಯಾವ ಭಾವವಿತ್ತೋ..?? ನೆನಪಿಲ್ಲ.
ಕೂತ್ಕೋ ಅಂತ ಪ್ರಕಾಶಣ್ಣ ಹೇಳುವ ಮೊದಲೇ ಕಾರಿನ ಮುಂಬಾಗದ ಸೀಟಿನಲ್ಲಿ ಕೂತುಬಿಟ್ಟ ನಾ ಪೂರ್ತಿ ಕಾರನ್ನೊಮ್ಮೆ ನೋಡಿದೆ.. ಪ್ರಕಾಶಣ್ಣನ ಹೊರತು ಕಾರು ಖಾಲಿ ಖಾಲಿ..
ಪ್ರಕಾಶಣ್ಣ ನೀವಾ..?? ದೇವರು ಬಂದ ಹಾಗೆ ಬಂದ್ರಿ.. ಸ್ವಲ್ಪ ಅರ್ಜೆಂಟಿದೆ.. ನನ್ನ ಭದ್ರಾವತಿ ವರೆಗೂ ಸ್ವಲ್ಪ ಡ್ರಾಪ್ ಮಾಡಿ ಬಿಡಿ. ಪ್ರಕಾಶಣ್ಣ ನನ್ನನ್ನ ಗುರುತು ಹಿಡಿಯಲಿಲ್ಲ ಅನ್ನಿಸತ್ತೆ..!!
ಗುರುತು ಹಿಡಿದಿದ್ದರೆ ಅವರೇ ಸತೀಶು ಅಂದಿರುತ್ತಿದ್ದರು. ಪ್ರಕಾಶಣ್ಣ ನನ್ನನ್ನ ಒಂಥರಾ ನೋಡುತ್ತಲೇ ಗಾಡಿ ಚಾಲೂ ಮಾಡಿ ಹೊರಟೆವು..!!
 
ಪಕ್ಕದಲ್ಲಿ ಕೂತಿರೋದು ಪ್ರಕಾಶಣ್ಣ.. ಏನು ಮಾತಾಡ್ಲೀ.??
ಈ ಮೊದಲು ಕೂಡ ಪ್ರಕಾಶಣ್ಣ ನ ಬಳಿ ನೇರವಾಗಿ ಅಷ್ಟೊಂದು ಮಾತಾಡಿದ ಉದಾಹರಣೆಯಿಲ್ಲ. ಅವರ ಪುಸ್ತಕ ಬಿಡುಗಡೆಯ ದಿನದೊಂದು ನೋಡಿ ನಕ್ಕು ಒಂದು ಹಲೋ ಹೇಳಿದ್ದಷ್ಟೇ..
ಅದಕ್ಕೂ ಮೊದಲು ೩K ಯ ಸಮಾರಂಭದ ದಿನ ಮುಖ ಪರಿಚಯವಷ್ಟೇ..
ಅವರ "ಇದರ ಹೆಸರು ಇದಲ್ಲ" ಬಹುವಾಗಿ ಮೆಚ್ಚಿ.. ಒಂದೇ ಓದಿಗೆ ಒಂದು ನಿಮಿಷ ಗ್ಯಾಪು ಕೊಡದೆ ಆ ಪುಸ್ತಕ ಓದಿ ಮುಗಿಸಿದ್ದ ರೀತಿಗೆ.. ಅವರ ಮೇಲೆ ಮೂಡಿದ್ದ ಆ ಕ್ಷಣದ (ಈ ಕ್ಷಣಕ್ಕೂ ಇರುವ) ಅದಮ್ಯ ಅಭಿಮಾನಕ್ಕೆ ತಕ್ಷಣವೇ ಫೋನಾಯಿಸಿ ಅವರ ಜೊತೆ ಫೋನಿನಲ್ಲಿ ಸುಮರು ಅರ್ಧಗಂಟೆಗೂ ಹೆಚ್ಚು ಕಾಲ ಮಾತಾಡಿದ್ದು ಬಿಟ್ಟರೆ..
ಒಂದೆರಡು ಬಾರಿ ಕತೆ ಕವನದ ವಿಚಾರದಲ್ಲಿ.. ಕಾಮೆಂಟುಗಳಲ್ಲಿ ಫೇಸ್ಬುಕ್ ನಲ್ಲಿ ಹರಟಿದ್ದ ನೆನಪು..
ನನಗೆ ಹೇಗೆ ಬಾಯ್ತೆರೆಯಬೇಕೆಂಬ ವಿಚಾರ ತಿಳಿಯದೆ.. ಪ್ರಕಾಶಣ್ಣ ನೇ ಬಾಯ್ತೆರೆಯಲಿ ಅನ್ನೋ ಆಸೆ (ದುರಾಸೆ)ಯೊಂದಿಗೆ ಗಪ್ ಚುಪ್ ಕುಳಿತುಬಿಟ್ಟೆ..!! ಕಡೆಗೆ ಪ್ರಕಾಶಣ್ಣ ನೆ ಬಾಯ್ತೆರೆದರು..!!
 
ಪ್ರಕಾಶಣ್ಣನ ದನಿ ಪ್ರಕಾಶಣ್ಣನ ದನಿಯಲ್ಲ..!!?? ಇದು ನನಗೆ ಹೊಸ ದನಿ..!!
ಯಾಕಿಷ್ಟು ಅರ್ಜೆಂಟು..?? ಪ್ರಕಾಶಣ್ಣ ಕೇಳಿದರು..
ಶಿವಮೊಗ್ಗಕ್ಕೆ ಹೋಗೋದಿದೆ ಪ್ರಕಾಶಣ್ಣ..
ಸಮಾಜ ಕಲ್ಯಾಣ ಇಲಾಖೆ ಆಫೀಸ್ ಹತ್ರ ಹೋಗಿ ಬರಬೇಕು ಸ್ವಲ್ಪ..
ಇವತ್ತು ಶನಿವಾರ ಬೇರೆ.. ಸಮಾಜ ಕಲ್ಯಾಣ ಇಲಾಖೆ ಮಧ್ಯಾನಕ್ಕೆ ಮುಚ್ಚಿ ಬಿಡ್ತಾರೆ..
ನಾಳೆ ಬೇರೆ ಭಾನುವಾರ ರಜೆ..
ಅದೂ ಅಲ್ದೆ ನಾಳೆ ನಾನು ಹೊಸೂರ್ ಗೆ ವಾಪಸ್ ಹೊರಟೆ.. ಸ್ವಲ್ಪ ಅರ್ಜೆಂಟ್ ಇತ್ತು ಅದ್ಕೆ...
 
ಓಹ್ ಹಾಗೇನು..?? ಮತ್ತೆ ಇಷ್ಟ್ ಅರ್ಜೆಂಟ್ ಇದ್ದೂ ಸ್ವಲ್ಪ ಬೇಗ ಹೊರಡೋದಲ್ವೇನು..?? ಪ್ರಕಾಶಣ್ಣ ನ ಪ್ರಶ್ನೆ..!!
ಅಯ್ಯೋ ಬೆಂಗಳೂರ್ ಹೋಗೋ ಮೊದಲು.. ನನ್ನ ಮಾರ್ಕ್ಸ್ ಕಾರ್ಡ್.. ಜಾತಿ ದೃಡೀಕರಣ ಪತ್ರ ಮತ್ತೆ ಇನ್ನಿತರ ನನ್ನ ಹಳೆ ರೆಕಾರ್ಡ್ಸ್ ನೆಲ್ಲ ಒಂದು ಫೈಲ್ ನಲ್ಲಿ ಹಾಕಿ ಮನೇಲಿಟ್ಟಿದ್ದೆ ಪ್ರಕಾಶಣ್ಣ.. ಈಗ ಬಂದು ಹುಡುಕಿದರೆ ಅರ್ಜೆಂಟ್ ಗೆ ಯಾವುದೊಂದೂ ನೆಟ್ಟಗೆ ಸಿಗಲಿಲ್ಲ.. ಅದ್ಕೆ ಹುಡ್ಕೋಕೆ ಸ್ವಲ್ಪ ಲೇಟ್ ಆಯ್ತು..
ಓಹ್ ಸರಿ ಸರಿ..
 
ಮೂರು ಕಿ.ಮೀ ದೂರವಿರೋ ಭದ್ರಾವತಿಯನ್ನ ಸೇರೋಕೆ ಕಾರೆಂದರೆ ಮೂರು ನಿಮಿಷ ಸಾಕು.
ಇನ್ನೇನು ಅರ್ಧ ಕಿ.ಮೀ ದೂರವಿರಬೇಕು.. ಭದ್ರಾವತಿ ಸಿಟಿ..
ತರೀಕೆರೆ ರಸ್ತೆ.. ಜೂನಿಯರ್ ಕಾಲೇಜು, ಮಹಾತ್ಮ ಗಾಂಧೀ ಶಿಲೆ ಇರುವ ಸರ್ಕಲ್ ನಲ್ಲಿ ಎಡಕ್ಕೆ ತಗೊಂಡ ಕಾರು ಸುಮಾರು ಅರವತ್ತು ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಿರಬಹುದು..
ಗಾಂಧೀ ಶಿಲೆ ದಾಟಿ.. ಇಪ್ಪತ್ತು ಮೀಟರ್ ಹೋಗುವಷ್ಟರಲ್ಲೇ ಅಲ್ಲೇ SKC ಆಫೀಸ್ ಎದುರಿನಿಂದ ಪಾರ್ಕಿಂಗ್ ನಲ್ಲಿ ನಿಂತಿದ್ದ ಸ್ವಿಫ್ಟ್ ಕಾರು ಏಕಾ ಏಕಿ ಸ್ಟಾರ್ಟ್ ಆಗಿ.. ಮೂವ್ ಆಗಿ.. ನಾವ್ ಬರುವ ಹೊತ್ತಿಗೆ ರೋಡಿನ ಮಧ್ಯಕ್ಕೆ ಬಂದು ಬಿಟ್ಟಿತು..!!
ವೇಗ ತಗ್ಗಿಸದ ಪ್ರಕಾಶಣ್ಣ ಗಲಿಬಿಲಿಯಲ್ಲಿ ಸ್ವಲ್ಪ ಬಲಭಾಗಕ್ಕೆ ಸ್ಟೇರಿಂಗ್ ತಿರುಗಿಸಿದರು..
ಬಲಭಾಗದಲ್ಲೋ..!!!
ಅಂಡರ್ ಗ್ರೌಂಡ್ ಪೈಪ್ ಲೈನ್ ಸೋರಿಕೆಯ ಪರಿಣಾಮವಾಗಿ ಅದರ ರಿಪೇರಿಗೆಂದು ಸುಮಾರು ನಾಲ್ಕಡಿ ಅಗಲ.. ಮೂರಡಿ ಆಳಕ್ಕೆ ಗುಂಡಿ ತೋಡಿ ಪೂರ್ತಿ ಮುಗಿಸದೆ ಆ ಗುಂಡಿಯ ಬದಿಯ ಸುತ್ತಲೂ ದಪ್ಪ ದಪ್ಪ ಕಲ್ಲುಗಳನಿಟ್ಟು ಹೋಗಿದ್ದರು..
ಇತ್ತಕಡೆ ಸಡನ್ನಾಗಿ ರಸ್ತೆ ಮಧ್ಯದ ವರೆಗೂ ಬಂದ ಕಾರು..!!
ಅತ್ತಕಡೆ ದೊಡ್ಡ ಹಳ್ಳ.!!
ಇವೆರಡರ ನಡುವೆ ಸಣ್ಣದಾಗಿ ಒಂದು ಆಟೋ ಹೊಗುವಷ್ಟು ಜಾಗವಿದ್ದಿದ್ದರೆ ಹೆಚ್ಚು..!!
ಇತ್ತದರಿ ಅತ್ತ ಪುಲಿ.. ಪ್ರಕಾಶಣ್ಣ ನೋಡು ನೋಡುತ್ತಿದ್ದಂತೆ ಆ ಗ್ಯಾಪಲ್ಲಿ ಕಾರು ನುಗ್ಗಿಸಿಯೇ ಬಿಟ್ಟರು..!!
 
SKC ಆಫೀಸಿನ ಮುಂಭಾಗದಿಂದ ಬಂದ ಆ ಕಾರಿನ ಬಲಬಾಗದ ಹೆಡ್ ಲೈಟ್ ಪಾರ್ಟ್ ಗೆ ಜೋರಾಗಿ ಹೊಡೆದ ಪ್ರಕಾಶಣ್ಣನ ಕಾರು.. ಬಲಕ್ಕೆ ಹಳ್ಳದ ಬದಿಗಿರಿಸಿದ್ದ ಆ ಕಲ್ಲುಗಳ ಮೇಲೂ ಹರಿದು..
ರಸ್ತೆಯಿಂದ ಸುಮಾರು ಒಂದೂ-ಒಂದೂವರೆ ಅಡಿ ಎತ್ತರಕ್ಕೆ ಎತ್ತಿ ಡೋಲಾಯಮಾನವಾಗಿ ತುಳುಕಾಡುತ್ತ ಆ ಇಕ್ಕಟ್ಟು ಜಾಗವನ್ನು ದಾಟಿ ಬಿಟ್ಟಿತ್ತು..!!
ಕಣ್ಮುಂದೆ ಮಿಂಚು ಹುಳ.. ಹೊಟ್ಟೆಯಲ್ಲಿ ತಳಮಳ..!!
ಹೃದಯ ಆಗಲೇ ಬಾಯಿಗೆ ಬಂದಿತ್ತು..!!
ಸ್ವರ್ಗವೋ ನರಕವೋ..?? ಆಗಲೇ ಆರ್ಧ ದಾರಿ ಸಂಚರಿಸಿದ್ದ ಜೀವ ತಿರುಗಿ ಬಂದಿತ್ತು..!!
ಎದೆಯ ಢವಗುಟ್ಟುವಿಕೆಯ ಸದ್ದು ಮೂರು ಕಿ.ಮೀ ದೂರದ ಊರಿಗೂ ಕೇಳಿದ್ದಿರಬಹುದು..!!
ಏನಾಯಿತು.. ಏನು ಮಾಡಬೇಕೆಂದು ತೋಚದ ನನ್ನ ಬುದ್ಧಿ.. ಬ್ಲ್ಯಾಂಕ್ ಬ್ಲ್ಯಾಂಕ್ ಬ್ಲ್ಯಾಂಕ್..!!
 
ಸ್ವಲ್ಪ ಮುಂದೆ ಬಂದು ನಂದಿ ಮೆಡಿಕಲ್ಸ್ ಎದುರಿಗೆ ಕಾರನ್ನು ಸೈಡ್ ಹಾಕಿ ನಾನು ಮತ್ತು ಪ್ರಕಾಶಣ್ಣ ಕಾರಿನಿಂದ ಇಳಿದೆವು..
ಹಾರಿ ಹೋಗಿದ್ದ ನನ್ನ ಜೀವ ತಿರುಗಿ ಬಂದಿತ್ತೆ ವಿನಃ.. ನನ್ನ ಪಂಚೇಂದ್ರಿಯಗಳ ಪೂರ್ಣ ಜ್ಞಾನ ಇನ್ನೂ ಪೂರ್ತಿ ಬಂದಿಲ್ಲವಾಗಿತ್ತೇನೋ..??
ನನ್ನ ಭಯದಲ್ಲಿ ನಾನಿದ್ದೆ..!!
ಪ್ರಕಾಶಣ್ಣ ಕಾರಿನ ಸುತ್ತಲೂ ಪರಿವೀಕ್ಷಿಸುತ್ತಿದ್ದರು.. ಕಾರಿಗೆ ಏನಾಗಿದೆಯೋ ಏನೋ ಎಂದು ನೋಡುತ್ತಿದ್ದರೆನೋ..??
ಭಯದಲ್ಲಿನ ನನಗೆ.. ಅವರ ಮುಖ ರೂಪದಲ್ಲಿ ಸಣ್ಣದಾಗಿ ವೆತ್ಯಾಸ ಕಾಣ ತೊಡಗಿತ್ತು..!! ಬಹುಶಃ ನನ್ನ ಭಯದಲ್ಲಿ ನನಗವರು ಹಾಗೆ ಕಾಣಿಸುತ್ತಿದ್ದರೋ ಏನೋ..??
ನಮಗೆ ಡಿಕ್ಕಿ ಹೊಡೆದ ಆ ಕಾರು ನಮ್ಮ ಹಿಂದೆಯೇ ಬಂದು ನಿಂತಿತು. ನನಗೆ ಭಯ.. ಎಲ್ಲಿ ಮಾರಾಮಾರಿಯಾಗುತ್ತದೋ..??
ಆ ಕಾರಿನಿಂದಿಳಿದ ಮಧ್ಯ ವಯಸ್ಕ ಡ್ರೈವರ್ ತಾನೂ ತನ್ನ ಕಾರನ್ನು ಸುತ್ತಲೂ ಪರೀಕ್ಷಿಸಿದ..
ಏನಾಶ್ಚರ್ಯ..!! ಢಿಕ್ಕಿ ಹೊಡೆದ ಎರಡೂ ಕಾರುಗಳಿಗೂ ಕೂದಲೂ ಕೂಡ ಕೊಂಕದ ಹಾಗೆ.. ಲವಲೇಶವೂ ಡ್ಯಾಮೇಜ್ ಇಲ್ಲದೆ ಇರೋದನ್ನ ನೋಡಿ ನನಗೆ ನಂಬಲಾಗುತ್ತಿಲ್ಲ..!!
ಅದಕ್ಕೂ ಮಿಗಿಲಾದ ಆಶ್ಚರ್ಯ..!! ಆ ಕಾರಿನ ಡ್ರೈವರ ನಂತರ ಏನೂ ಮಾತಾಡದೆ.. ತನ್ನ ಪಾಡಿಗೆ ತಾನು ತನ್ನ ಕಾರನ್ನೇರಿ ಹಾಗೆ ಪ್ರಕಾಶಣ್ಣ ನೆಡೆಗೆ ಒಂದು ನಗು ಬೀರಿ.. ಕಾರು ಸ್ಟಾರ್ಟ್ ಮಾಡಿ ತನ್ನ ಪಾಡಿಗೆ ತಾನು ನಗುತ್ತಾ ಹೊರಟೆ ಹೋದ..!!
 
I Can't Imagine..!! ನನಗೆ ನಂಬಲಾಗುತ್ತಿಲ್ಲ..!! How is it possible..??
 
ನನ್ನ ಯೋಚನಾ ಲಹರಿಯಿಂದ ನಾನು ಹೊರ ಬರುವ ಮೊದಲೇ ಪ್ರಕಾಶಣ್ಣ ಕಾರಿನ ಮುಂಬಾಗಿಲು ತೊರೆದು ಡ್ರೈವಿಂಗ್ ಸೀಟ್ನಲ್ಲಿ ಕೂತು ಕಾರನ್ನು ಸ್ಟಾರ್ಟ್ ಮಾಡೇ ಬಿಟ್ಟರು..
ಆದದ್ದು ಆಗಿ ಹೋಯಿತು.. ಪ್ರಕಾಶಣ್ಣ ನಿಗೊಂದು ಥ್ಯಾಂಕ್ಸ್ ಹೇಳುವ.. ಅವರಿಗೆನಾಯ್ತು ಕೇಳುವ.. ಎಂದು ಬಗ್ಗಿದ..
ನಾನು ಮತ್ತೆ ತಬ್ಬಿಬ್ಬಾಗದೆ ಇರಲಿಲ್ಲ..!!
ಅಲ್ಲಿಯವರೆಗೂ ನೀಲಿ ಜೀನ್ಸ್ ಪ್ಯಾಂಟ್.. ಹಸಿರು ಟೀ ಶರ್ಟ್ ತೊಟ್ಟಿದ್ದ ಪ್ರಕಾಶಣ್ಣ.. ಈಗ ಕಪ್ಪು ಕಲರ್ ನ ಶಾರ್ಟ್ ತೊಟ್ಟು.. ನೀಲಿ ಬಿಳಿ ಪಟ್ಟೆ ಪಟ್ಟೆಯ ಟೀ ಶರ್ಟ್ ತೊಟ್ಟಿದ್ದರು..!!
ಅಷ್ಟು ಮಾತ್ರವಲ್ಲದೆ ಈಗ ಪ್ರಕಾಶಣ್ಣನ ಮುಖದ ರೂಪ ಗಂಭೀರವಾಗಿ ಬದಲಾಗಿದೆ..!!
ಹೇಳ ಹೊರಟರೆ ಅವರು ಪ್ರಕಾಶಣ್ಣನೆ ಅಲ್ಲ.!!
ದೂರದಿಂದ ನೋಡಿದರೆ ಯಾವುದೋ ಒಂದು ಆಂಗಲ್ ನಿಂದ ಆ ವ್ಯಕ್ತಿ ಪ್ರಕಾಶಣ್ಣನ ಹಾಗೆ ಕಾಣ ಬಹುದಿತ್ತೇನೋ..??
 
I Can't Imagine..!! ನನಗೆ ನಂಬಲಾಗುತ್ತಿಲ್ಲ..!! How is it possible..??
 
ನಾ ಯಾವ ಮಾತನ್ನೂ. ಯಾವ ಪ್ರತಿಕ್ರಿಯೆಯನ್ನೂ ನೀಡುವ ಮೊದಲೇ ಪ್ರಕಾಶಣ್ಣ ಅಂದರೆ ಪ್ರಕಾಶಣ್ಣನ ಥರ ಇದ್ದ ಆ ವ್ಯಕ್ತಿ ಕಾರ್ ಸ್ಟಾರ್ಟ್ ಮಾಡಿ ಹೊರಟೆ
ಬಿಟ್ಟರು..!!
 
ಇದು ಹೇಗೆ ಸಾಧ್ಯ..??
ಪ್ರಕಾಶಣ್ಣ ಬದಲಾದದ್ದು ಹೇಗೆ..??
ಅವರು ಧರಿಸಿದ್ದ ಉಡುಪುಗಳು ಬದಲಾದದ್ದು ಹೇಗೆ..??
ಅಷ್ಟು ಜೋರಾಗಿ ಢಿಕ್ಕಿ ಹೊಡೆದರೂ ಎರಡೂ ಕಾರಿಗೂ ಏನು ಆಗಿಲ್ಲವೇಕೆ..??
ಭದ್ರಾವತಿಗೆ ಪ್ರಕಾಶಣ್ಣ ಯಾಕೆ ಬಂದಿರಬಹುದು..??
ಅದರಲ್ಲೂ ನಮ್ಮೂರ ದಿಕ್ಕಿಂದ ಬಂದದ್ದೇಕೆ..?? ನಮ್ಮೂರ ಪಕ್ಕದಲ್ಲಿ ಅವರಿಗೆ ಗೊತ್ತಿರುವವರು ಯಾರಿರಬಹುದು..??
ನನ್ನಲ್ಲಿ ಹುಟ್ಟುತ್ತಿದ್ದ ಪ್ರಶ್ನೆಗಳಿಗೆ ಮತ್ತು ಅವುಗಳ ವೇಗಕ್ಕೆ ಯಾವ ಮತ್ತು ಯಾರ ಉತ್ತರವೂ ಇಲ್ಲ.. ನನ್ನದೂ ಕೂಡ..!!
ಮನಸೂ ಬುದ್ಧಿ ಎರಡೂ ಬ್ಲ್ಯಾಂಕ್ ಬ್ಲ್ಯಾಂಕ್..
ಅಯ್ಯಯ್ಯೋ.. ನನ್ನ ರೆಕಾರ್ಡ್ಸ್ ಗಳನ್ನ ಕೂಡ ನಾನು ಕಾರಿನಲ್ಲೇ ಬಿಟ್ಟಿರುವೆ.!! ಅದು ಎಲ್ಲಾ ಒರಿಜಿನಲ್.. ಮಾರ್ಕ್ಸ್ ಕಾರ್ಡ್ ಕೂಡ..!!!
ನನ್ನ ಕೈ ತಲೆ ಮೇಲೆ ಹೋಗುವುದರಲ್ಲಿತ್ತು...
 
ನನ್ನ ಮೊಬೈಲ್ ರಿಂಗಾಯಿತು..
ಗಲಿಬಿಲಿ ಇನ್ನೂ ತಿಳಿ ಗೊಂಡಿರಲಿಲ್ಲ.. ನಂಬರ್ ನೋಡಿದೆ..
8782 ಇಂದ ಶುರುವಾಗುವ ಅಪರಿಚಿತ ನಂಬರ್..
ರಿಸೀವ್ ಮಾಡಿ ಹಲೋ ಅಂದೇ..
ಹಲೋ ಪ್ರಭಾಕರ ನಾ..??
ಆ ಹೆಸರಿನ ವ್ಯಕ್ತಿಯನ್ನ ಕೇಳಿಕೊಂಡು ನನಗದು ಎರಡನೆ ಫೋನ್ ಕಾಲ್..
ನಿನ್ನೆ ಕೂಡ ಬೇರೆ ಅಪರಿಚಿತ ನಂಬರ್ ನಿಂದ ಅದೇ ವ್ಯಕ್ತಿಯನ್ನು ವಿಚಾರೀಕೊಂಡು ಒಂದು ಫೋನ್ ಬಂದಿತ್ತು..
ಇವತ್ತು ಕೂಡ ಅದೇ ವ್ಯಕ್ತಿಯನ್ನ ಕೇಳಿಕೊಂಡು ಮತ್ತೊಂದು ಅಪರಿಚಿತ ನಂಬರ್ ನಿಂದ ಕಾಲ್..
ನಾನು ಸ್ಸಾರಿ ರಾಂಗ್ ನಂಬರ್ ಅಂದೇ..
ಹೇ ಪ್ರಭಾಕರ ಸುಳ್ಳು ಹೇಳಬೇಡ ಅಂತು ಆಕಡೆಯ ದನಿ..
ನನ್ನ ಟೆನ್ಶನ್ ನನಗೆ.. ಹಲೋ ನಾನು ಪ್ರಭಾಕರ ಅಲ್ಲ ಪ್ಲೀಸ್ ಫೋನಿಡಿ..
ಇದು ಪ್ರಭಾಕರನ ನಂಬರ್ರೇ ನನಗೆ ಗೊತ್ತು.. ನೀವು ಪ್ರಭಾಕರ ಅಲ್ಲದಿದ್ರೆ ಮತ್ತ್ಯಾರು..?? ಆ ದನಿ..
ಹಲೋ ನಾನು ಪ್ರಭಾಕರ ಅಲ್ಲ.. ಇದು ನನ್ನ ನಂಬರ್.. ಮತ್ತು ನಾನು ಯಾರು ಅಂತ ನಿಮಗೆ ಹೇಳೋ ಅವಶ್ಯಕತೆ ಇಲ್ಲ ತಿಳ್ಕೊಳಿ ಅಂದೆ..
ನಿಮ್ ಹೆಸರೇನು..??
ಅದನ್ನ ಹೇಳಬೇಕಾದ ದರ್ದು ನನಗಿಲ್ಲ..!!
ಹೋಗ್ಲಿ ಇದು ಹೊಸದುರ್ಗಾ ಆಲ್ವಾ..??
ಅಲ್ರೀ ಇದು ಹೊಸೂರ್ ತಮಿಳ್ನಾಡು ನಂಬರ್..!!
ಹೌದು ಎಲ್ಲಿಯ ಹೊಸೂರ್ ಎಲ್ಲಿಯ ಹೊಸದುರ್ಗ..!! ಎತ್ತಣಿಂದೆತ್ತ ಸಂಬಂಧವಯ್ಯ..!!
ಇನ್ನು ನನ್ ಕೈಲಾಗಲಿಲ್ಲ.. ಅವಸರಕ್ಕೆ ಫೋನ್ ಕಟ್ ಮಾಡಿ ವಾಸ್ತವಕ್ಕೆ ಬಂದೆ..
 
ವಾಸ್ತವ ನನ್ನನ್ನು ನೇರ ನನ್ನ ಹಾಸಿಗೆಯ ಮೇಲೆ ತಂದು ಬಿಟ್ಟಿತ್ತು..!!
ಕಣ್ಣುಜ್ಜಿ.. ಮುಖವೊರೆಸಿ.. ನನ್ನ ಸುತ್ತಲೂ ಒಮ್ಮೆ ನೋಡಿದೆ..
unbeliavable ಇದು ನನ್ನದೇ so called ಬೆಡ್ ರೂಂ..
ಅಂದರೆ ಇಲ್ಲಿಯ ತನಕ ನಾ ಕಂಡದ್ದು ಕನಸು..!!
ಬೆಳಿಗ್ಗೆ ಆರೂವರೆ ಸಮಯದ ಸುಮಾರಿಗೆ.. ಚುರುಗುಟ್ಟುವ ಚಳಿಗೆ ಪೂರ್ತಿಯಾಗಿ ಹೊದ್ದು ಮಲಗಿದ್ದ ನಾನು.. ದಿಗ್ಭ್ರಾಂತನಾಗಿ ಎದ್ದು ಕನಸೊಡೆದು ಕೂರುವಂತೆ ಮಾಡಿದ್ದು ಆ ಅಪರಿಚಿತ ಫೋನ್ ಕಾಲ್..!!
ಹೌದು ಆ ಫೋನ್ ಕಾಲ್ ಮಾತ್ರವೇ ನಿಜ.. ಅದರಿಂದಾಚೆಗಿನದೆಲ್ಲ ಹಚ್ಚ ಹಸಿ ಕನಸು..
still unbelievable..!!
 
ಡಿಸೆಂಬರ್ ಒಂದನೇ ತಾರೀಕಿನ ಬೆಳ್ಳಂಬೆಳಿಗ್ಗೆ.. ನನಗೆ ಬಿದ್ದ ಕನಸಿದು..!!
ಅಷ್ಟು ಸುಲಭಕ್ಕೆ ದಾಖಲಾಗುವಂತೆ ಯಾವತ್ತೂ ನನಗೆ ಕನಸು ಬಿದ್ದಿರಲಿಲ್ಲ..
ನನ್ನ ಕನಸೊಳಗೆ ಅಷ್ಟು ಪರಿಚಯದವರೂ ಕೂಡ ಬಂದು ಗುರುತಿಸಿ ಕೊಂಡದ್ದಿಲ್ಲ..
ಅಪ್ಪ ಅಮ್ಮನೂ ಎಂದೋ ಬಂದಿರಬಹುದು.. ಆದರೆ ನಿಖರ ಘಟನೆಗಳು ನೆನಪಿಲ್ಲ..
ಆದರು ಮೊನ್ನೆ ಬಿದ್ದ ಈ ಕನಸು.. ಅಷ್ಟು ಸುಲಭಕ್ಕೆ ಮರೆಯಲಾಗದ ಆ ಘಟನೆ.. ಇನ್ನೂ ಆ ಕನಸಿನ ಜೀವಂತಿಕೆ ಉಳಿಸಿಕೊಂಡಿರುವುದು ಸುಳ್ಳಲ್ಲ..
ಆ ಕನಸಿನಲ್ಲಿ ಕಂಡಷ್ಟೇ ತಾಜಾತನದ ನೆನಪು ಆ ಘಟನೆಗಳು ನನ್ನಲ್ಲಿ..
ಕಣ್ಣು ಬಿಟ್ಕೊಂಡೆ.. ಮರೆಯಲಾಗದ ಸಾವಿರ ಹಗಲು ಕನಸುಗಳ ಕಂಡಷ್ಟೇ ರೂಡಿಯಿದ್ದ ನನಗೆ.. ಮೊನ್ನೆ ಬಿದ್ದ ಕನಸಿನ ಅರ್ಥ ಈಗಲೂ ತಿಳಿಯುತ್ತಿಲ್ಲ..
ಆದರು ಈ ಕನಸು.. ಅದಕ್ಕಿನ್ನೂ ಎಳೆ ವಯಸು..
 
ಬೆಳಿಗ್ಗೆ ಬೆಳಿಗ್ಗೆ ಬಿದ್ದ ಕನಸುಗಳು ನಿಜವಾಗ್ತವೆ ಅನ್ನೋ ಮಾತು ಬಹಳ ಹಿಂದಿನಿಂದಲೂ ಕೇಳಿದ ನೆನಪಿದೆ.. ಹಾಗಾಗುವುದಿದ್ದರೆ ನನ್ನದೊಂದು ಅಭಿಲಾಷೆ..
ಪ್ರಕಾಶಣ್ಣ ನಮ್ಮೂರಿಗೆ ಬರಲಿ.. ಇದು ನನ್ನ ಕನಸಿನ ನಿಜವಾಗುವಿಕೆಯ ತರ್ಕವಲ್ಲ. ನನ್ನ ಅಭಿಲಾಷೆಯೂ ಹೌದು..
ಆದರೆ ಪ್ರಕಾಶಣ್ಣನ ಮುಖ ಬದಲಾಗದಿರಲಿ..!!
ಮತ್ತು ಅಂಥ ಅಫಘಾತಗಳು ಕನಸಲ್ಲೂ ಆಗದಿರಲಿ..
 
 
*ಶುಭಂ*

Wednesday, 12 December 2012

ಇಂದು ಸಂಜೆಯಾಗಲು ಸ್ವಲ್ಪ ತಡವಾಗಬಹುದೇನೋ..

ಏಯ್..
ಆ ಇಬ್ಬರು ಜೋಡಿಗಳು ನಮ್ಮನ್ನೇ ನೋಡ್ತಾ ಇದಾರಲ್ವಾ..?? ಅವಳಂದ್ಲು..
 
ನೋಡಲಿ ಬಿಡು ಹಾಗೆ ಕಣ್ಣಿಟ್ಟು ನೋಡೋ ಹಾಗೆ ಕೂತದ್ದು ನಮ್ಮ ತಪ್ಪು..
ಈ ಜಾಗ ನಾಲ್ಕು ಜನ ಬಂದು ಕೂತು ನೆಮ್ಮದಿ ಇಂದ ಒಂದಷ್ಟು ಹೊತ್ತು ಕೂತು ಕಳೆದು ಹೋಗ್ಲಿಕ್ಕಂತಾನೆ ಇರೋದು..
ಅದಕ್ಕೋಸ್ಕರ ಅಂತಾನೆ ಇಪ್ಪತ್ತು ರುಪಾಯ್ ಕೊಟ್ಟು ಒಳಗೆ ಬಂದಿರೋ ಅವರನ್ನ.. ಆರು ನಮ್ಮನ್ನೇ ನೋಡ್ತಿದಾರೆ ಅಂತ ಹೇಳೋದು ತಪ್ಪಾಗತ್ತೆ..
ನಮ್ಮ ಹಾಗೆ ಈ ಪಾರ್ಕಲ್ಲಿ ಅವರೂ ಒಂದು ಜೋಡಿ.. ನಾವ್ ಹೇಗೆ ಅವರನ್ನ ನೋಡ್ತೀವೋ ಅವರು ಹಾಗೆ ನಮ್ಮನ್ನೇ ನೋಡ್ತಾರೆ ಅಷ್ಟೇ.. ಇವನು.
 
ರವಿ.. ನಿನ್ನ ಒಂದ್ ಮಾತು ಕೇಳ್ಲಾ..??
 
ಕೇಳು ಶಶಿ..
 
ಅಲ್ಲಾ ರವಿ.. ನಮ್ ಗಾರ್ಮೆಂಟ್ಸ್ ನಲ್ಲಿ ಅಷ್ಟೊಂದು ಜನ ಹುಡುಗೀರಿದ್ರೂ.. ನೀನ್ ಬಂದು ನನ್ನನ್ನೇ ಯಾಕೆ ಪ್ರೀತಿಸಿದ್ದು..??
 
ನಾನ್ ನಿನಗೋದು ಮಾತು ಕೇಳ್ಲಾ..?? ಅವನು..
 
ಹಾಂ ಕೇಳು.. ಆದ್ರೆ ಮೊದಲು ನನ್ನ ಈ ಪ್ರಶ್ನೆಗೆ ಉತ್ತರ ಕೊಟ್ಟು ಕೇಳು..
 
ನಿನ್ ಪ್ರಶ್ನೆಗೆ ಉತ್ತರ ಈಗ ನಾ ಕೇಳೋ ಪ್ರಶ್ನೆಲೇ ಇದೆ...
 
ಏನದು..??
 
ಜಗತ್ತಲ್ಲಿ ಅಷ್ಟೊಂದು ಜನ ತಾಯಂದಿರಿದ್ರೂ.. ನೀನ್ ಯಾಕೆ ನಿಮ್ಮಮ್ಮನ ಹೊಟ್ಟೇಲೇ ಹುಟ್ದೆ..??
 
ಆಂ..?? ಅವಳು ಅವಕ್ಕಾದಳು..!!
 
ಅವನೇ ಮುಂದುವರಿದು..ಈ ಜಗತ್ತಲ್ಲಿ ಅಷ್ಟೊಂದು ಜಾಗಗಳಿದ್ರೂ.. ಭಾರತದಲ್ಲೇ ನೀನು ಯಾಕೆ ಹುಟ್ಟಿದೆ..?? ಹೋಗ್ಲಿ ಬೆನ್ನು ಬೆನ್ನಿಗೆ ಬೆಚ್ಚಿ ಬೀಳೋ ಥರ ಜಪಾನ್ ನಲ್ಲೆ ಯಾಕೆ ಮತ್ತೆ ಮತ್ತೆ ಭೂಕಂಪ ಸುನಾಮಿಗಳಾಗ್ತವೆ..??
 
ಅವಳಿಗದು ಅರ್ಥವಾದಂತೆ ತೋರಲಿಲ್ಲ.
 
ಅವನೇ ಮುಂದುವರೆದು..
 
ಶಶಿ ನನ್ ಪ್ರಶ್ನೆಗೆ ಉತ್ತರ ಇದೇನೇ.. ಕೆಲವರು ಇಂಥವರ ಹೊಟ್ಟೇಲೇ ಹುಟ್ಬೇಕು.. ಹೀಗೆ ಬದುಕಬೇಕು.. ಹೀಗೆ ಸಾಯಬೇಕು.. ಇಂಥವರೇ ಇವರ ಬಾಳ ಸಂಗಾತಿ ಆಗ್ಬೇಕು.. ಇಂಥಾ ಜಾಗದಲ್ಲಿ ಇಂಥಾದ್ದೇ ಆಗಬೇಕು ಅನ್ನೋದು ನಮಗ್ಯಾರಿಗೂ ಕಾಣದ ವಿಧಿ ಲಿಖಿತ ಅನ್ಕೊಬೋದು..
ಕೆಲವೊಂದಕ್ಕೆ ಕಾರಣಗಳು ಮುಖ್ಯ ಅನ್ಸೋದಿಲ್ಲ..
ಹಾಗೇನೆ ನಮ್ ಫ್ಯಾಕ್ಟರಿ ಯಲ್ಲಿ ಅಷ್ಟೊಂದು ಜನ ಹುಡುಗಿಯರಿದ್ರೂ ನನ್ ಹೃದಯ ನಿನ್ನನ್ನೇ ಯಾಕ್ ಹುಡುಕಿ ಕೊಳ್ತು ಅನ್ನೋದು ಕೂಡ ಯಾವುದೋ ಪ್ರೇರಣೆ ಇಂದಲೇ ಇರ್ಬೇಕು.. ಯಾಕಂದ್ರೆ ಕೆಲವೊಂದು ಅನುಬಂಧಗಳು ಅದೃಷ್ಟ ಇದ್ದವರಿಗೆ ಮಾತ್ರ ಸಿಗೋಕೆ ಸಾಧ್ಯ.. ನನಗೆ ನೀನು ಸಿಕ್ಕ ಹಾಗೆ.
ನೀನು ಸೇರೋ ಎರಡು ವಾರಗಳ ಮುಂಚೆ ಅಷ್ಟೇ ನಾನು ಈ ಗಾರ್ಮೆಂಟ್ ಸೇರಿದ್ದು.. ಅದಕ್ಕೂ ಮೊದಲು ಎಲ್ಲೋ ಇದ್ದವ. ಇಲ್ಲಿ ಇಲ್ಲಿವರ್ಗು ನನಗೆ ಫ್ರೆಂಡ್ ಅಂತ ಆಗಿದ್ದು ರಾಮ್.. ರಘು, ಗೋಪಾಲ್, ನಿತಿನ್ ಬಿಟ್ರೆ.. ಹುಡುಗೀರಲ್ಲಿ ನಾನು ಫ್ರೆಂಡ್ಶಿಪ್ ಮಾಡಿದ್ದು ನೀನು ಮತ್ತೆ ನಿನ್ನ ಫ್ರೆಂಡ್ ಲತಾ ಹತ್ರ ಮಾತ್ರ..
 
ಅಂಥಾ ವಿಶೇಷ ಏನಿದೆಯಪ್ಪಾ ನನ್ನಲ್ಲಿ..?? ನನ್ ಅಂದ ನೋಡಿ ಇಷ್ಟ ಪಟ್ಟದ್ದಾ..??
 
ಶಶಿ ಹುಡುಗೀರಿಗೆ ಬರಿ ಅಂದ ಮಾತ್ರ ಶೋಭೆ ಅಲ್ಲ.. ಗುಣ ಮತ್ತು ನಡತೆ ಕೂಡ..
ಅವತ್ತು ನಿನ್ ಎರಡನೆ ತಿಂಗಳ ಸಂಬಳದ ದಿನ.. ರೇಣುಕ ಬಂದು ನಿನ್ ಹತ್ರ ಎರಡು ಸಾವಿರ ದುಡ್ಡು ಕೇಳಿದ್ಲು ನೆನಪಿದೆಯಾ.??
 
ಹಾಂ.. ನಿಜ..
 
ಅವನು ಮುಂದುವರಿದು..
 
ಅವತ್ತು ಅವ್ಳು ಕೇವಲ ನಿನ್ ಹತ್ರ ಮಾತ್ರ ದುಡ್ಡು ಕೇಳಿದ್ದಲ್ಲ.. ನಿನ್ ಹಾಗೆ ಇನ್ನು ನಾಲ್ಕು ಜನ ಹುಡುಗೀರ ಹತ್ರ ಕೇಳಿದ್ಲು.. ಯಾರು ಕೊಟ್ಟಿರಲಿಲ್ಲ..
ಯಾರೂ ಕೊಡಲಿಲ್ಲ ಅಂದ ಮಾತ್ರಕ್ಕೆ ಅವರು ಕೆಟ್ಟವರು ಅಂತ ನಾ ಹೇಳ್ತಿಲ್ಲ.. ಇಂಥ ಬೆಂಗಳೂರಲ್ಲಿ ತಿಂಗಳಿಗೆ ನಮಗೇ ಅಂತ ಬರೋ ನಾಲ್ಕೂವರೆ ಸಾವಿರ ಸಂಪಾದನೆಯನ್ನ ಮೀರಿ ಖರ್ಚು ಬರೋದೆ ರೂಡಿ..
ಎಲ್ಲರಿಗೂ ಅವರ ಕಷ್ಟಗಳೇ ಮೇಲು ಅನ್ನಿಸಿ ಕೊಳ್ಳುವಾಗ ಯಾರೂ ಇನ್ನೊಬ್ಬರಿಗೆ ಕನಿಕರ ತೋರಿಸೋ ಇಚ್ಛೆ ಇದ್ದೂ.. ಸಹಾಯ ಮಾಡೋ ಮನಸಿದ್ದೂ.. ಮಾಡದೆ ಹೋಗೋದು ಅವರ ಅನಿವಾರ್ಯತೆ & ಅಸಹಾಯಕತೆ..
ಆ ದಿನ ರೇವತಿಯ ಅಮ್ಮನಿಗೆ ಹೊಟ್ಟೆ ನೋವು ಅಂತ ಅಸ್ಸ್ಪತ್ರೆ ಸೇರಿದಾಗ.. ಅಪೆಂಡಿಕ್ಸ್ ಐದೇ ಇಪ್ಪತ್ತು ಸಾವಿರ ಖರ್ಚಾಗತ್ತೆ ಅಂತ ಡಾಕ್ಟ್ರು ಹೇಳಿದ ನಂತರ.. ತಾನಿಷ್ಟು ದಿನ ದುಡಿದಿದ್ರಲ್ಲಿ ಅಷ್ಟೋ ಇಷ್ಟೋ ಉಳಿಸಿ ಕೂಡಿಟ್ಟಿದ್ದ ಐದು ಸಾವಿರ ದುಡ್ಡು.. ಕಿವಿಯಲ್ಲಿದ್ದ ಓಲೆ.. ಅವರಿವರ ಹತ್ರ ಕಾಡಿ ಬೇಡಿ ಪಡೆದ ಒಣದಷ್ಟು ಹಣ ಎಲ್ಲಾ ಸೇರಿ ಹದಿನೈದು ಸಾವಿರ ಸೇರಿಸಿ ಅಡ್ವಾನ್ಸ್ ಅಂತ ಕಟ್ಟಿ ಅವರಮ್ಮನ್ನ ಆಸ್ಪತ್ರೆಗೆ ಸೇರಿಸಿದ್ಲು..
 
 
ಮಿಕ್ಕ ಹಣವನ್ನ ಹೇಗಾದರೂ ಹೊಂದಿಸಬೇಕು ಅಂತ ನಮ್ಮ ಮ್ಯಾನೇಜರ್ ಹತ್ರ ಬಂದು ಸಹಾಯಕ್ಕೆ ಅಂತ ಸ್ವಲ್ಪ ದುಡ್ಡು ಕೇಳಿದ್ರೆ.. ಇಪ್ಪತ್ತೈದು ಸಾವಿರ ಸಂಬಳ ತೆಗೆಯೋ ಆ ಮನುಷ್ಯ ಅವಳಿಗೆ ಹೇಳಿದ್ದು ಏನು ಗೊತ್ತಾ..??
ಹೋಗಮ್ಮ ದಿನಾ ಬೆಳಗಾದ್ರೆ ಇಂಥ ಇಪ್ಪತ್ತು ಕಥೆ ಕೇಳ್ತಾನೆ ಇರ್ತೀನಿ.. ಕೇಳಿದೋರಿಗೆಲ್ಲಾ ಸಹಾಯ ಅಂತ ಮಾಡ್ತಾ ಇದ್ರೆ ನಾವ್ ಬದುಕೋದು ಹೇಗೆ ಅಂತ ಹೇಳಿ ತನ್ನ ಪಾಡಿಗೆ ತಾನು ಜಾರ್ಕೊಂಡಿದ್ದ.. ಆ ಹೊತ್ತಲ್ಲಿ ನಾನು ಅವರ ರೂಂ ನಲ್ಲೇ ಕೆಲಸ ಮಾಡ್ತಿದ್ದೆ.. ಪಾಪ ರೇವತಿ ನ ನೋಡೋಕ್ಕಾಗ್ತಿರ್ಲಿಲ್ಲ..
ಹುಡುಗರ ಹತ್ರ ಮಾತಾಡೋಕೆ ಮುಜುಗರ ಪಡೋ ಆ ಹುಡುಗಿ ಯಾವ ಹುಡುಗರ ಹತ್ರಾನೂ ಹೋಗಿ ಹತ್ರನು ದುಡ್ಡು ಕೇಳಿರಲಿಲ್ಲ.. ಕೊನೆಗೆ ನಾನೇ ಕರೆದು ಮಾತಾಡ್ಸಿ.. ನಾ ನಿಮಗೆ ಹಣ ಕೊಡ್ತೀನಿ ಆದ್ರೆ ಈಗಿಲ್ಲ ನಾಳೆ ಬೆಳಿಗ್ಗೆ ಕೊಡ್ತೀನಿ.. ಆದ್ರೆ ನನ್ನಿಂದ ಪೂರ್ತಿ ಐದು ಸಾವಿರ ಎಲ್ಲ ಕೊಡೋಕ್ಕಾಗಲ್ಲ ಬೇಕಿದ್ರೆ ಮೂರು ಸಾವಿರ ಅಡ್ಜಸ್ಟ್ ಮಾಡ್ತೀನಿ ಅಂದಿದ್ದೆ..
 
 
ಅದರ ನಂತರ ಆ ಹುಡುಗಿ ನಿನ್ ಹತ್ರ ಬಂದು ಮಿಕ್ಕ ಎರಡು ಸಾವಿರ ರುಪಾಯಿ ಕೇಳಿತ್ತು.. ನಿನ್ ಮನೇಲಿ ಅಷ್ಟು ಕಷ್ಟ ಇದ್ರೂ ನೀನ್ ಕೂಡ ಇಲ್ಲ ಅನ್ನದೆ ಕೊಡ್ತೀನಿ ಅಂದೆ..
ಅಲ್ಲೇ ನೀನ್ ನಂಗೆ ಮೊದಲು ಇಷ್ಟ ಆಗಿದ್ದು..
ಬೇರೆ ಹುಡುಗೀರ ಥರ ಒಣ ಪೋಗರಿಲ್ಲ..ಜಂಭ ಇಲ್ಲದ ನಿನ್ನ ವರ್ತನೆ.. ತುಂಬಾನೆ ಇಷ್ಟ ಆಗೋ ನಿನ್ನ ನಾಚಿಕೆ.. ಸದಾ ನಿನ್ನ ಅಭರಣವಾಗಿರೋ ಮೌನ.. ಚಿಕ್ ವಯಸ್ಸಲ್ಲೇ ಜವಾಬ್ದಾರಿಗಳು ಹೆಚ್ಚಿದರೂ ಬದುಕನ್ನ ಸಮರ್ಥವಾಗಿ ನಿಭಾಯಿಸೋ ನಿನ್ನ ಜಾಣ್ಮೆ.. ಸ್ನೇಹಿತರ ಜೊತೆ ನಿನ್ನ ಒಡನಾಟ.. ಅದೆಲ್ಲ ಆದ್ಮೇಲೆ ನೋಡ್ತಿದ್ದ ಹಾಗೆ ಎಂಥವರನ್ನ ಬೇಕಿದ್ರೂ ಉಲ್ಲಾಸಗೊಳಿಸೋ ನಿನ್ ಮುದ್ದು ನಗು ಮುಖ.. ಇದೆಲ್ಲವನ್ನ ಗಮನಿಸಿದ ಮೇಲೇನೆ ನೀನು ನನ್ನನ್ನ ಅಷ್ಟು ಸೆಳೆದದ್ದು..
 
ರವಿ.. ದೇವ್ರು ನಮ್ಮಂತೋರಿಗೆ ಯಾಕಿಷ್ಟು ಕಷ್ಟ.. ಒದ್ದಾಟ.. ಪರದಾಟ.. ಪರೀಕ್ಷೆಗಳನ್ನ ಕೊಡ್ತಾನೆ..??
 
ಶಶಿ ಎಲ್ಲರ ಬದುಕಲ್ಲೂ ಭಗವಂತ ಪರೀಕ್ಷೆಗಳನ್ನ ಕೊಟ್ಟೆ ಕೊಡ್ತಾನೆ... ಆದ್ರೆ ನಮಗೆದುರಾಗೋ ಪ್ರಶ್ನೆಗಳು ಮಾತ್ರವೇ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರ್ತವೆ..
ಯಾರು ಕಷ್ಟ ಪಡುವುದಿಲ್ವೋ ಬದುಕು ಅವರಿಗೆ ಅಷ್ಟು ಸುಲಭಕ್ಕೆ ಅರ್ಥ ಆಗಲ್ಲ.. ಕಾದು ತಟ್ಟಿಸಿ ಕೊಂದ ಕಬ್ಬಿಣ ಒಂದು ರೂಪಾಂತರಗೊಳ್ಳುವ ಹಾಗೇನೆ ಮನುಷ್ಯನ ಬದುಕು.. ನೋವು ತಿಂದಷ್ಟೂ ಮಾಗುತ್ತಾನೆ.. ಕಷ್ಟ ಪಟ್ಟಷ್ಟು ಬಾಗುತ್ತಾನೆ..
 
ಈಗ ನನ್ನನ್ನೇ ತಗೋ..
 
ಮನೇಲಿ ಹುಟ್ಟು ಕುಡುಕ ಅಪ್ಪ.. ಮೂಗೆತ್ತಿನಂತಿರೋ ಅಮ್ಮ..
ಅಲ್ಲಿ ಇಲ್ಲಿ.. ಅವರಿವರ ಮನೇಲಿ ಹೊಲದಲ್ಲಿ ಅವಳು ಕೂಲಿ ಮಾಡುತ್ತಿದ್ದರಿಂದಲೇ ಹೇಗೋ ನಡೀತಿತ್ತು..
ನಾನು ಹತ್ತನೇ ತರಗತಿ ಪಾಸಾಗೋ ಹೊತ್ತಿಗೆ ಹಾಳಾಗಲಿಕ್ಕೆ ಅಂತ ಇದ್ದ ಅಷ್ಟೂ ಚಟಗಳನ್ನ ಕಲಿತು.. ಊರು ಪುಂಡು ಪೋಕರಿಗಳ ಜೊತೆ ನನ್ನ ಪಾಡಷ್ಟೇ ನಾನು ನೋಡ್ಕೊಂಡಿದ್ದೆ..
ಅಷ್ಟಿದ್ದರೂ ಮನೆಯ ಜವಾಬ್ದಾರಿ ಹೊರದ ನಾನು ಕಾಲೇಜಿಗೆ ಅಂತ ಕಾಲಿಟ್ಟು ಅಲ್ಲೂ ದರಬಾರು ನಡೆಸೋಕೆ ಶುರು ಮಾಡಿದ್ದೆ... ಕೆಟ್ಟ ಹುಡುಗ ಅಂತ ಬಿರುದು ತಗೊಳ್ಳೋಕೆ ಅಂತ ಇದ್ದ ಅಷ್ಟೂ ಕೆಲಸಗಳನ್ನ ಮಾಡಿ ಎಲ್ಲಾ ಮೇಷ್ಟರ ಬಳಿಯೂ ಛೀಮಾರಿ ಹಾಕಿಸಿ ಕೊಂಡಿದ್ದೆ..
PUC ಫೇಲ್ ಆದ ದಿನ ಅಮ್ಮ ಬೈದದ್ದನ್ನ ಸಹಿಸಲಾರದೆ ಮನೆ ಬಿಟ್ಟು ಬೆಂಗಳೂರು ಸೇರಿದ ನಾ ಮತ್ತೆ ಆ ಕಡೆ ತಿರುಗಿ ನೋಡೋ ಪ್ರಯತ್ನ ಕೂಡ ಮಾಡಿರಲಿಲ್ಲ..
ಬೆಂಗಳೂರಿಗೆ ಬಂದು ಒಂದು ಲಾರಿ ಕ್ಲೀನರ್ ಆಗಿ ಕೆಲಸಕ್ಕೆ ಸೇರ್ಕೊಂಡ ನನ್ನ ಜೀವನ ಹೇಗೋ ನಡಿತಾ ಇತ್ತು..
 
 
ಅದೊಂದು ದಿನ ಹುಬ್ಬಳ್ಳಿ ಗೆ ಹೋಗ್ತಿದ್ದ ನಮ್ಮ ಲಾರಿ.. ರಾತ್ರಿ ಡ್ರೈವರ್ ನ ಮಂಪರು ನಿದ್ದೆ ಗಣ್ಣಿಗೆ ಆಯಾ ತಪ್ಪಿ ಬಿದ್ದದ್ದೊಂದೇ ನೆನಪು..
ನಾ ಕಣ್ಬಿಟ್ಟು ನೋಡಿದಾಗ ಅದ್ಯಾವುದೋ ಸರ್ಕಾರಿ ಆಸ್ಪತ್ರೆಯ ನೆಲದ ಮೇಲಿದ್ದ ಬೆಡ್ ಒಂದರ ಮೇಲಿದ್ದೆ..
ಅಲ್ಲೇ ಪಕ್ಕದಲ್ಲಿ ಕೂತಿದ್ದ ಅಮ್ಮನ ವಯಸ್ಸಿನ ಹೆಂಗಸೊಂದು ನನ್ನ ಬಳಿ ಬಂದು ನನ್ನ ಲಾರೀ ಡ್ರೈವರ್ ಸ್ಥಳದಲ್ಲೇ ಸತ್ತ ವಿಷಯ ತಿಳಿಸಿ.. ಅವನ ಹೆಣವನ್ನ ಸಂಸ್ಕಾರ ಗೊಳಿಸಿ ಎರಡು ದಿನವಾಯ್ತು ಅನ್ನೋ ವಿಚಾರ ತಿಳಿಸಿದ್ಲು..
ಅಷ್ಟರಲ್ಲೇ ವಾರ್ಡ್ ನ ಒಳಗೆ ಬಂದ ಡಾಕ್ಟರ್.. ಆ ತಾಯಿ ಬಳಿ ಹೇಳಿದ್ರು.. ಅಮ್ಮ ನಿಮ್ ಮಗಳಿಗೆ ಹೆಣ್ಣು ಮಗು.. ಮಗು ಏನೋ ಆರೋಗ್ಯಕರವಾಗೆ ಹುಟ್ಟಿತು.. ಆದ್ರೆ ತಾಯಿ ನ ಉಳಿಸೋಕ್ಕಾಗ್ಲಿಲ್ಲ ಸಾರಿ ಅಂದು ಬಿಟ್ರು..
 
 
ಆ ತಾಯಿ ರೋದನ ಹೇಳ ತೀರದಾಗಿತ್ತು.. ಅವಳಿಗೆ ಇದ್ದ ಆಸರೆ ಅವಳ ಮಗಳೊಬ್ಬಳೆ ಅಂತೆ.. ಆ ತಾಯಿಯ ಗಂಡ ಅವರಿಗೆ ಮಗುವಾಗಿ ಆರು ವರ್ಷಕ್ಕೆ ತೀರಿಕೊಂಡಿದ್ದರಂತೆ..
ಅಂದಿನಿಂದ ತಾವೇ ಕಷ್ಟ ಪಟ್ಟು ಕೂಲಿ ನಾಲಿ ಮಾಡಿ ಮಗಳನ್ನ ಬೆಳೆಸಿ ಒಂದು ಕಡೆ ಮಾಡುವೆ ಮಾಡಿ ಕೊಟ್ರೆ.. ವರದಕ್ಷಿಣೆ ನೆಪದಲ್ಲಿ ಅವಳ ಗಂಡ ಅವಳನ್ನ ವರ್ಷ ತುಂಬುವುದರೊಳಗೆ ಗರ್ಭಿಣಿಯಾಗಿದ್ದ ಸಮಯದಲ್ಲೇ ವರದಕ್ಷಿಣೆ ಕಿರುಕುಳ ಕೊಟ್ಟು ತವರಿಗಟ್ಟಿದವ ಆಗಲೂ ಬಂದು ತಿರುಗಿ ನೋಡಿರಲಿಲ್ಲವಂತೆ.. ಬಹಳ ಕರುಣಾಜನಕ ಆ ತಾಯಿಯ ವ್ಯಥೆ..
ಆಗ ಈ ಎಳೆ ಕಂದನನ್ನ ಸಾಕುವ ಹೊಣೆ ಆ ತಾಯಿಯ ಮೇಲೆ ಬಿದಿತ್ತು.. ಬಹಳ ರೋಧಿಸುತ್ತಿದ್ದ ಆ ತಾಯಿಯನ್ನ ಅಲ್ಲಿದ್ದ ಸುಮಾರು ಹೆಂಗಸರು ಸಮಾಧಾನ ಮಾಡುತ್ತಿದ್ದರು..
 
ನನಗೆ ಅಮ್ಮನ ನೆನಪಾಯಿತು..
ನಾನು ಮನೆ ಬಿಟ್ಟು ಬಂದಂದಿನಿಂದ ಯಾವತ್ತೂ ಆ ಕಡೆ ತಲೆ ಹಾಕಿರಲಿಲ್ಲ..
ಊರಿಗೆ ಹೋದೆ.. ಅಪ್ಪ ಅದಾಗಲೇ ಸತ್ತು ಎರಡು ತಿಂಗಳಾಗಿತ್ತು.. ಹಾಸಿಗೆ ಹಿಡಿದು ಮಲಗಿದ್ದ ಅಮ್ಮ ಜೀವಂತ ಶವವಾಗಿದ್ದಳು..
ಅಂದೇ ನನ್ನ ಹೇಯ ಜನ್ಮಕ್ಕೊಂದು ಧಿಕ್ಕಾರವಿಟ್ಟುಕೊಂಡೆ.. ಅಮ್ಮನನ್ನ ಊರು ಬಿಡಿಸಿ ಕರಕೊಂಡು ಬಂದು ಹೀಗೆ ಬೆಂಗಳೂರು ಸೇರಿ ದುಡಿಯಲು ಆರಂಭಿಸಿದೆ..
ದುಡಿತವೊಂದೆ ತುಡಿತವಾಗಿದ್ದ ನಾನು ಬದಲಾಗುತ್ತ ಹೋದದ್ದೇ ನನಗೆ ತಿಳಿಯಲಿಲ್ಲ..
ನನಗಾಗ ಯಾವ ಚಟದ ಅವಶ್ಯಕತೆಯೂ ಬೇಕಿರಲಿಲ್ಲ.. ನನ್ನಲೀಗ ಅದರ ಕುರುಹೂ ಇಲ್ಲ..
ನಾ ಈ ಮೊದಲು ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚುವ ಹಂತಕ್ಕೆ ಬಂದು ನಾ ಈ ಕಂಪನಿ ಸೇರಿದ್ದೆ.. ಅದಾಗಿ ಎರಡು ವಾರಕ್ಕೆ ನಿನ್ನನ್ನು ಕಂಡಿದ್ದೆ..
 
 
ನನಗೂ ನನ್ನ ಬದುಕ ನೊಗವೆಳೆಯಲು ಒಂದು ಹೆಗಲು ಬೇಕಿತ್ತು.. ಅದು ನೀನಾಗಬಲ್ಲೆ ಎಂಬ ನಂಬಿಕೆ ಮೂಡಿತ್ತು..
ಯಾಕಂದೆರೆ ನೀನ್ ನನ್ನ ಹಾಗೆ ಕಷ್ಟ ಅನುಭವಿಸಿ ಬಂದವಳೇ.. ಯಜಾಮನ ಎನಿಸಿ ಕೊಳ್ಳೋ ಅಪ್ಪನಿಲ್ಲದ ನಿನ್ನ ಮನೆ.. ಪೋಲಿಯೋ ಹಿಡಿದು ಕಾಲು ಕಳೆದು ಕೊಂಡಿರೋ ತಮ್ಮ... ಖಾಯಿಲೆ ಬಿದ್ದಿರೋ ನಿನ್ನಮ್ಮ.. ಇದೆಲ್ಲದರ ನಡವೆ ಕಷ್ಟ ಪಡೋ ನಿನ್ನ ಜೀವ ಇನ್ನೊಬ್ಬರ ಕಷ್ಟಕ್ಕೆ ಮಿಡಿವ ನಿನ್ನ ಮನಸು ನನ್ನನ್ನು ಬಹುವಾಗಿ ಸೆಳೆದಿತ್ತು..
ನನ್ನಮ್ಮ ನನ್ನು ನೀನು ಪ್ರೀತಿಯಿಂದ ನೋಡಿಕೊಳ್ಳ ಬಲ್ಲೆ ಎಂಬ ವಿಶ್ವಾಸ ಮೂಡಿತ್ತು..
ನಮ್ಮಿಬ್ಬರಿಗೆ ಆಸರೆಯಾಗಬಲ್ಲ ಶಕ್ತಿ ನಮ್ಮಿಬ್ಬರಿಗೆ ಮಾತ್ರ ಇರಬಹುದೆಂಬ ನಂಬಿಕೆ ನನ್ನಲ್ಲಿ ಮೂಡಿತ್ತು.
 
ಆಗಲೇ ನಾನು ನಿನ್ನ ಬಳಿ ಬಂದು ಪ್ರಪೋಸ್ ಮಾಡಿದ್ದೆ.. ನೀನು ಮೊದ ಮೊದಲು ಒಪ್ಪಿರಲಿಲ್ಲ..
ನಿನ್ನ ನೆನಪಲ್ಲಿ ನಾನು ಪ್ರೀತಿಗಾಗಿ ಹಠ ಹಿಡಿದು ಕೂರಲಿಲ್ಲ.. ದೇವದಾಸನಂತೆ ಕೊರಗಲಿಲ್ಲ.. ನನಗೆ ಬದುಕೋಕೆ ಬೇರೆಯದೇ ಕಾರಣಗಳಿದ್ವು.. ಬೇರೆಯದೇ ಜವಾಬ್ದಾರಿಗಳಿದ್ವು..
ನಿನ್ನ ಮೇಲೆನಗೆ ಪ್ರೀತಿ ಕರಗಿರಲಿಲ್ಲ. ಆದರು ನನ್ನ ಪಾಡಿಗೆ ನಾನಿದ್ದೆ.. ಅದೊಂದು ದಿನ ನೀನಾಗೆ ಬಂದು ಅದನ್ನ ಒಪ್ಪಿದೆ.. ನನಗೆ ನಂಬಿಕೆ ಇತ್ತು.
 
ರವಿ ನೀ ಎಷ್ಟೆಲ್ಲಾ ತಿಳಿದು ಕೊಂಡಿದ್ದೀಯ.. ಬದುಕನ್ನ ಎಷ್ಟೆಲ್ಲಾ ಅರ್ಥ ಮಾಡ್ಕೊಂಡಿದ್ದೀಯ.. ಅದನ್ನೆಲ್ಲಾ ಎಷ್ಟು ಚೆನ್ನಾಗಿ ಅರ್ಥ ಮಾಡಿಸ್ತೀಯ..
ಆದರು ನನಗೆ ನಿನ್ನ ಮೇಲೆ ಸಣ್ಣ ಅಪನಂಬಿಕೆಯೊಂದಿತ್ತು.. ಯಾಕಂದ್ರೆ ಪ್ರೀತಿ ಗೀತಿ ಅಂತ ಓಡಾಡುವ ಅವಶ್ಯಕತೆ ನನಗೂ ಇಲ್ಲದ ಪರಿಸ್ಥಿತಿಯಾಗಿತ್ತು..
ನನ್ನ ನಂಬಿ ಮನೆಯಲ್ಲಿ ಬದುಕುತ್ತಿರೋ ಎರಡು ಜೀವಗಳ ಮೇಲಿನ ಸೆಳೆತವಿತ್ತು.. ಆದರು ಅದೆಲ್ಲದರಾಚೆಗೂ ನಿನ್ನ ಮಾನವೀಯ ಮೌಲ್ಯ & ನಿನ್ನ ಪ್ರೀತಿ ನನ್ನನ್ನ ನಿನ್ನೆಡೆಗೆ ಸೆಳೆಯುತ್ತಿತ್ತು..
ನನ್ನಿಂದ ನಿನ್ನ ಪ್ರೀತಿ ಮಾಡದೆ ಇರಲಾಗಲಿಲ್ಲ.. ಆದರೆ ಒಂದು ಭಯ ಎಲ್ಲಿ ನಾನು ಮೋಸ ಹೋಗಿ ಬಿಡುತ್ತೀನೋ..
 
ಶಶಿ ಎಲ್ಲಿ ನಂಬಿಕೆ ಇರುವುದಿಲ್ಲವೋ.. ಅಲ್ಲಿ ಯಾವತ್ತಿಗೂ ಯಾವ ಸಂಭಂಧಗಳು ಶಾಶ್ವತವಲ್ಲ.. ನಿನ್ನನ್ನು ಪ್ರೀತಿಸೋ ವಿಚಾರ ಹುಡುಗಾಟವೂ ಅಲ್ಲ..
ಯಾಕಂದ್ರೆ ನಿನ್ನಂಥ ಹುಡುಗಿ ಬಾಳಲ್ಲಿ ಹುಡುಗಾಟ ಆಡುವ ಯಾವ ಮನುಷ್ಯನ ಬಾಳಲ್ಲೂ ಭಗವಂತ ಒಳ್ಳೇದು ಬರೆದಿರೋಲ್ಲ..
ನೋಡು ನಿನಗೆ ನನ್ನ ಮೇಲೆ ನಂಬಿಕೆ ಬರೋವರೆಗೂ ಯಾವತ್ತಿಗೂ ನಾನು ನಿನ್ನನ್ನ ಪೀಡಿಸಲಾರೆ.. ನಿನಗ್ಯಾವತ್ತು ನನ್ನ ಮೇಲೆ ಪೂರ್ತಿ ವಿಶ್ವಾಸ ಬಂದು ನನ್ನನ್ನ ಮದುವೆಯಾಗೋ ಇಚ್ಛೆ ಮೂಡುತ್ತದೋ.. ಅಂದು ನಮ್ಮೆರಡು ಮನೆಗಳ ಒಮ್ಮತದಲ್ಲೇ ನಾ ನಿನ್ನ ಮದುವೆಯಾಗ್ತೀನಿ..
 
ಶಶಿಯ ಕಣ್ಣಲ್ಲಿ ನೀರು.. ಇಲ್ಲಿಯವರೆಗೂ ಅವ ಹೇಳಿದ್ದೆಲ್ಲ ಕೇಳಿ ಅವಳೊಳಗೆ ಮೂಡಿರಬಹುದಾದ ಭಾವಗಳೆಲ್ಲ ಕಣ್ಣೀರ ಧಾರೆಯಾಗಿ ಹೊರ ಬರುತ್ತಿರಬಹುದು..
 
ತಮ್ಮೆದುರಾಗಿ ಸುಮಾರು ಮೂವತ್ತು ಅಡಿ ದೂರಕ್ಕೆ ಕುಳಿತಿರುವ ಜೋಡಿ ಏನು ಮಾತಾಡುತ್ತಿರಬಹುದೆಂದು ಅಣಕವಾಡಿ ತೋರಿಸುತ್ತಾ.. ರವಿ ತನ್ನ ಮನಸಿನ ಭಾವಗಳನ್ನ ಶಶಿಯ ಮುಂದೆ ನಿವೇದಿಸುತ್ತಿದ್ದಾನೆ..
ತನ್ನ ಬದುಕನ್ನ ತೆರೆದಿಟ್ಟಿದ್ದಾನೆ..
ಶಶಿ ಹುಟ್ಟು ಮೂಕಿಯೆಂದು ರವಿಗೆ ಗೊತ್ತು..!!
ಶಶಿಯ ಮನಸೊಳಗಿರಬಹುದಾದ ಪ್ರಶ್ನೆಗಳ ಗೂಡನ್ನ ರವಿ ತನ್ನದೇ ಕಲ್ಪನಾ ಹಂದರದಲ್ಲಿ ತಿಳಿಸಿ.. ತಿಳಿ ಗೊಳಿಸಿದ್ದಾನೆ..
ಶಶಿಯ ಮನಸು ತಿಳಿಯಾಗಿದೆ.. ನಿರಾಳವಾಗಿದೆ..
ಅವಳ ಮೊಗದಲ್ಲೊಂದು ಉಲ್ಲಾಸ ಭಾವ..
ಕಣ್ಣೀರ ಹನಿಗಳ ಜೊತೆ ರವಿ ಎಡೆಗಿನ ಅದಮ್ಯ ಪ್ರೀತಿಗೆ ಸಾಕ್ಷಿ ಎಂಬಂತೆ ಅವಳ ಮೊಗದಲ್ಲಿ ಕಿರು ನಗೆ ಮೂಡುವ ಪ್ರಯತ್ನ ಮಾಡುತ್ತಿತ್ತು..
 
ತಮ್ಮೆದುರು ಅಷ್ಟು ದೂರ ಕುಳಿತಿದ್ದ ಜೋಡಿ ಎದ್ದು ಹೊರಟು ಹೋಗುವುದನ್ನು ಕಂಡ ಶಶಿ ರವಿಯನ್ನು ಸೆಳೆದು ಅವನ ಕೆನ್ನೆಗೊಂದು ಮುತ್ತನಿಡುತ್ತಾಳೆ..
ಇವರಿಬ್ಬರ ಕತೆಯನ್ನ ಆಲಿಸುತ್ತ ತನ್ನ ಕೆಲಸವನ್ನ ಮರೆತ ಸೂರ್ಯ.. ಪಾರ್ಕಿನ ಮರಗಳ ಎಲೆಗಳ ನಡುವೆ ಕಣ್ಣಿರಿಸಿ ಇವರೆಡೆಗೆ ಆಗೊಮ್ಮೆ ಈಗೊಮ್ಮೆ ಕದ್ದು ಇಣುಕಿತ್ತಿದ್ದಾನೆ..
 
ಬಹುಷಃ ಇಂದು ಸಂಜೆಯಾಗಲು ಸ್ವಲ್ಪ ತಡವಾಗಬಹುದೇನೋ..!!

Monday, 3 December 2012

ರಾಘವನ ರಗಳೆಗಳು..

ಸತ್ಯವನ್ನೇ ಹೇಳುತ್ತೇನೆ.. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಸಾಕ್ಷಾತ್ ಪಕ್ಕದಲ್ಲಿರೋ ಈ ಭಗವದ್ಗೀತೆಯ ಮೇಲೆ ಕೈ ಇರಿಸಿ ಪ್ರಮಾಣೀಕರಿಸುತ್ತೇನೆ.. ಹಾಳಾದ್ದು.. ಬರಿತಿರೋದು ರಾಘವ [ರಾಮ]ನ ಬಗ್ಗೆ.. ಪ್ರಮಾಣ ಮಾಡ್ತಿರೋದು ಭಗವದ್ಗೀತೆ ಮೇಲೆ. ನನ್ನಂತೋನು ಭಗವದ್ಗೀತೆ ಇಟ್ಟಿರೋದೆ ದೊಡ್ ವಿಷ್ಯ ಹೇಳಿ..!! ಇನ್ ರಾಮಾಯಣ ಇಟ್ಕೋಳೋ ರಾಮಾಯಣ ಯಾಕೆ ಅಲ್ವುರಾ..?? ಸೂಕ್ತ ಸಾಕ್ಷಾಧಾರ ಗಳಿಲ್ಲದ ಈ ಅಪರಿಸ್ತಿಥಿ ಯಲ್ಲಿ ಬರೆಯಲು ಕೂತ ಭಂಡತನಕ್ಕೆ ಮನವಿ ಕೋರುತ್ತ [ಕೊರೆಯುತ್ತಾ] ನಮ್ ರಾಘವನ ಕುರಿತ ಕೆಲವು [ಬೊಗಳೆ]ಮಾತುಗಳನ್ನು ಹೇಳ[ಬೊಗಳ]ಲಿದ್ದೇವೆ ಮನ್ನಿಸಿ.. ;) ;)
ವಿ.ಸೂ: ದಯವಿಟ್ಟು ಇದನ್ನ ಈ ಕಡೆ ಕಿವಿಯಲ್ಲಿ ಕೇಳಿ.. ಆ ಕಡೆ ಕಿವಿಯಲ್ಲಿ ಬಿಟ್ಟು ಬಿಡಬೇಕಾಗಿ ಕಡ್ಡಾಯವಾಗಿ ವಿನಂತಿಸಿ ಕೊಳ್ಳುತ್ತಿದ್ದೇವೆ..!!

ಕ್ರಿಸ್ತ ಶಕ 2011 ರ ಈಚೆಗೆ ಸುಮಾರು ನಾಲ್ಕೈದು ತಿಂಗಳುಗಳ ಹಿಂದೆ ಆರ್ಕುಟ್ ಎಂಬ ಕ್ಯಾಮೆ ಇಲ್ಲದ ಮಂದಿ ಕೂತು ಹರಟುವ ಅರಳೀ ಮರದ ಯೋಗ್ಯತೆಗೆ ಸರಿಸಮನಾಗಿ ಸರಿ ತೂಗುವ ಸಾಮಾಜಿಕ ಅಂತರ್ಜಾಲದ ತಾಣದಲ್ಲೊಮ್ಮೆ.. ರಾಘವ ಚಂದ್ರ ಎಂಬ ಅರ್ಧ ಹಿಂದೆ ಅರ್ಧ ಕನ್ನಡ ಹೆಸರು ಬೆರೆತ ಈ ಶಂಕಿತ ಆಸಾಮಿಯನ್ನು ಕಂಡಂದೇ ಮೊದಲು ನನಗನ್ನಿಸಿದ್ದು.. ಇದು ಖಡಾ ಖಂಡಿತ ನಮ್ ಪೂಜ್ಯ ಸಮಾನ, ಗುರುಗಳ ಸಮಾನಾರಾದ ಯೋಗರಾಜ ಭಟ್ಟರ ನಖಲೀ ಖಾತೆ ಇರಬಹುದೇನೋ ಎಂಬ ಶಂಕೆ..!!! ಯಾಕಂದ್ರೆ ನೂರಕ್ಕೆ ತೊಂಭತ್ತು ಭಾಗ ನಮ್ ಭಟ್ಟರದ್ದೇ ಅನ್ನಬಹುದಾದಷ್ಟು ಸಾಮ್ಯತೆಯ ಮಾತುಗಳನ್ನು ನುಡಿವ ಈ ಅಸಾಮಿಯ ಮಾತುಗಳನ್ನ ನೋಡಿದ ಪ್ರತಿಯೊಬ್ಬನಿಗೂ.. ನಮ್ ಊರಿನ ಅಗಸೆ ಬಾಗಿಲಾಣೆಯಾಗೂ ಹೇಳ್ತೀನಿ ಇಂತಹದ್ದೊಂದು ಅನುಮಾನ ಹುಟ್ಟದೆ ಹೋದಲ್ಲಿ ಆ ಅನುಮಾನಕ್ಕೆ ಪೆದ್ದ ರೋಗ ಎಂಬ ಅನರ್ಥ.. ಅಲ್ಲಲ್ಲ ಅನ್ವರ್ಥ ನಾಮ ಇಟ್ಟದ್ದೆ ಸರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇನೆ..!!

ನಾವ್ಗಳೂ ಭಟ್ಟರ ಅಭಿಮಾನಿಗಳೇ ಹೇಳಿ.. ಅವರ ಹಾಡುಗಳನ್ನು ಆರಾಧಿಸುವ.. ಅವರ ಡೈಲಾಗ್ಸ್ ಗಳನ್ನು ಆನಂದಿಸುವ.. ಅವರ ನಿರ್ದೇಶನವನ್ನು ಅಭಿಮಾನಿಸುವ.. ಅವರ ಕಥೆಗಳನ್ನು ಕನಸಲ್ಲೂ ಕನವರಿಸಿ ಅಭಿನಂದಿಸುವ ವಡ್ಡ ಪಡ್ಡೆ ಹುಡುಗರ ಪೈಕಿ.. ಸ್ವಲ್ಪ ಡೀಸೆಂಟ್ ಆಗಿ ಕಾಣಿಸ್ಕೊಂಡು ನೋಡಿದವರ ಕಣ್ಣಿಗೆ ನೋಡ್ತಿದ್ದ ಹಾಗೆ ವಡ್ಡರಿವರೆನ್ನುವ ಹಾಗೆ ತೋರಗೊಡದ ಮಹಾನ್ ಭಂಡ ಹುಡುಗರೂ ಅನ್ನಿ ತಪ್ಪೇ ಇಲ್ಲ.. ;) ;)

ಹುಮ್ಮ್.. ಸಿನಿಮಾ ನೋಡಲು ಥಿಯೇಟರ್ ನತ್ತ ದಾಪುಗಾಲು ಹಾಕೋದಿರ್ಲಿ.. ಸಿನಿಮಾ ಪೋಸ್ಟರ್ ಗಳನ್ನೂ ತಲೆ ಎತ್ತಿ ನೋಡದ ನನ್ನಂತೋನು ಒಂದೇ ತಿಂಗಳಲ್ಲಿ ಒಂದೇ ಸಿನಿಮಾ ವನ್ನ ಬರೋಬ್ಬರಿ ಏಳು ಸಾರಿ ನೋಡುವಂತೆ ಮಾಡಿ.. ಅಷ್ಟು ಬಾರಿ ನೋಡಿಸಿಯೂ.. ನನ್ ಸಿನಿಮಾ ನೋಡುವ ತೃಷೆಯನ್ನು ಇಂಗಿಸಲಾರದ ನತದೃಷ್ಟ ನಿರ್ದೇಶಕರ ಸಾಲಿಗೆ ಸೇರುವ ಈ ಕಾಲದ ಏಕೈಕ ಜೀವವೇ ನಮ್ ಭಟ್ಟರದ್ದು.. ಆ ಚಿತ್ರ ಯಾವ್ದು ಅಂದ್ರಾ..?? ಅದೇ ಕಣ್ರೀ.. ಭಟ್ಟರ ಜೀವನದ ಅತಿ ದೊಡ್ಡ ಅಟ್ಟರ್ ಫ್ಲಾಪ್ ಸಿನಿಮಾ ನಮ್ ಮುಂಗಾರು ಮಳೆ..!!

ಏನಿತ್ತಪ್ಪಾ ಅಂಥಾದ್ದು ಆ ಸಿನಿಮಾದಲ್ಲಿ..?? ಅದು ತಲೆಕೆಟ್ಟು ಥಿಯೇಟರ್ ನಲ್ಲಿ ಏಳು ಸಾರಿ ಪ್ಲಸ್ ಟೀವಿಯಲ್ಲಿ ಲೆಕ್ಕವಿಲ್ಲದಷ್ಟು ಸಾರಿ ನೋಡಿಯೂ.. ಆಯಪ್ಪ ಆ ಸಿನಿಮಾದಲ್ಲಿ ಅದೇನ್ ಇಟ್ಟಿದ್ದ ಅಂತ.. ಅದು ಮಾಡಿದ ಗಿಮಿಕ್ ಏನೂ ಅಂತ ಅರ್ಥ ಆಗದೇನೆ ಏಳು ಪ್ಲಸ್ ಲೆಕ್ಕವಿಲ್ಲದಷ್ಟು ಸಾರಿ ಆ ಚಿತ್ರವನ್ನ ಮತ್ತೆ ಮತ್ತೆ ನೋಡುವಂತೆ ಮಾಡಿದ ಅಮೋಘ ಇತಿಹಾಸ ಆ ಸಿನಿಮಾದ್ದು ನಮ್ ಬದುಕ್ ನಲ್ಲಿ.

ಸಿಂಪಲ್ ಬಿಡಿ ಯಾರನ್ನ ಕೇಳಿದರೂ ಹೇಳ್ತಾ ಇದ್ದದ್ದು ಇದೇ ಮಾತುಗಳನ್ನ..!! ಮೊದಲನೇದಾಗಿ ಆ ಸಿನಿಮಾದ ಹಾಡುಗಳು.. ಆಯಪ್ಪನ ಬಾಯಿಗೆ ಮೊದಲನೇ ಲಾಡು ಬಿದ್ದದ್ದೇ ಆ ಹಾಡುಗಳಿಂದ. ಏನ್ ಹಾಡುಗಳ್ರೀ ಅವು..?? ದೂಸ್ರಾ ಮಾತೆ ಬೇಡ.. ಎಂಥಾ ಕಿವುಡನಿಗೂ ಇಷ್ಟವಾಗ ಬಲ್ಲ ಅನ್ ವರ್ಣಿಸಬಲ್ ಹಾಡುಗಳವು!! ಇನ್ನು ಆಯಪ್ಪನ ಬಾಯಿಗೆ ಬಿದ್ದ ಎರಡನೇ ಲಾಡು ಅಂದ್ರೆ ಆ ಚಿತ್ರದ ಡೈಲಾಗ್ಸ್. ಹಿರಿಯರಿಂ ಕಿರಿಯರ ತನಕ ಎಲ್ಲರೂ ಚಪ್ಪರಿಸಿ ಉಗಿದ ಮಾವಿನ ಕಾಯಿ ಉಪ್ಪಿನ ಕಾಯಿಯ ಗೊರಟೆ ಯಂಥಾ ಡೈಲಾಗ್ಸ್.. :) :) ಒಂದಷ್ಟು ದಿನ ಆ ಡೈಲಾಗ್ ಗಳ ಪರಿಣಾಮ ಹೇಗಿತ್ತಂದ್ರೆ.. ಪ್ರತಿ ಜನರ ಪ್ರತಿ ಗಣದ ಪ್ರತಿ ಮನದ ಆಂತರಿಕ ಮಾತುಗಳೆನ್ನುವಷ್ಟು ಮೋಡಿ ಮಾಡಿದ ಡೈಲಾಗ್ ಗಳವು.!!

ಇದಕ್ಕೂ ಮೊದ್ಲು ಮಣಿ, ರಂಗ [SSLC ] ಮಾಡಿದ್ದ ಭಟ್ಟರನ್ನ ಕ್ಯಾರೆ ಅನ್ನದೋರೆಲ್ಲಾ .. ಧಿಡೀರ್ ಅಂತ ಯೇ ಕೌನ್ ರೆ ಅಂತ ಮೂಗು, ಬಾಯಿ, ತಲೆ, ಕೆನ್ನೆ.. ಇನ್ನೂ ಸಿಕ್ ಸಿಕ್ಕ ಕಡೆ ಕೈ ಇಟ್ಕೊಂಡು ಯೋಚನೆ ಮಾಡೋ ಲೆವೆಲ್ ಗೆ ಕರಾಮತ್ತು ತೋರ್ಸೇ ಬಿಟ್ರು ನೋಡಿ ಮುಂಗಾರು ಮಳೆಯೊಳಗೆ ನಮ್ ಭಟ್ರು..!! ಆ ಮಳೆಗೆ ನೆನೆಯದವರಿಲ್ಲ.. ಆ ಹಾಡುಗಳ ಗುನುಗದವರಿಲ್ಲ.!! ಇನ್ನು ಆ ಕತೆ ಬಗ್ಗೆ ಹೇಳೋ ಹಾಗೆ ಇಲ್ಲ..ಸರಾಸರಿ ಎಲ್ಲಾ ಹುಡುಗರ ಜೀವಮಾನದ ಕತೆಯೇ.. ಅದರ ಪ್ರೋಸೆಸ್ಸ್ ಬೇರೆ, ಪ್ರೋಗ್ರೆಸ್ ಬೇರೆ ಆದರೆ ರಿಸಲ್ಟ್ ಮಾತ್ರ ಒಂದೇ..!!

ಕತೆ, ಹಾಡು, ಡೈಲಾಗ್ಸ್ & ಗಣೇಶನ ಅಭಿನಯ.. ದೃಶ್ಯಗಳ ಸುಂದರ ಚಿತ್ರೀಕರಣ ಇದಿಷ್ಟನ್ನೂ ಬಿಟ್ಟೂ ಅದಿನ್ನೇನೋ ಇದೇ ಕಣ್ರೀ ಅದರೊಳಗೆ.. ಬಡ್ಡಿ ಮಗಂದು ಈಗ್ಲೂ ನಮ್ ಕಲ್ಪನೆಗೆ ನಿಲುಕ್ತಾ ಇಲ್ಲ..!! ಇಂತಿಪ್ಪ ಭಟ್ರು ಮುಂದೆ ಮುಟ್ಟಿದ್ದೆಲ್ಲಾ ಚಿನ್ನವೇ.. ದಿಗಂತ್ ನ ತಗೊಂಡು ಹೋಗಿ ದಿಗಂತದಲ್ಲಿ ಕೂರಿಸಿ ಬಿಟ್ರು.. ನಮ್ ಭಟ್ರು.!! ಅದನ್ನ ನೋಡಿದ್ರೆ ಗೊತ್ತಾಗಲ್ವಾ ನಮ್ ಭಟ್ಟರ ಕೈ ಚಳಕ ಎಂಥಾದ್ದು ಅಂತ. ಗಾಳಿ ಪಟ, ಮನಸಾರೆ, ಪಂಚರಂಗಿ.. ಇದೆಲ್ಲ ಅದರದ್ದೇ ಚೌಕಟ್ಟಿನಲ್ಲಿ.. ಅದರದ್ದೇ ಆಯಾಮ ಗಳಲ್ಲಿ ಜನರನ್ನ ರಂಜಿಸಿ ಹಿಟ್ ಅನಿಸಿದಂಥಾ ಸಿನಿಮಾಗಳು.. ತೀರಾ ಈಚೆಯ ಪರಮಾತ್ಮ ಕೂಡ.. ಪುನೀತ್ ಹೆಸರಿಗಂಟಿಹ ಯಶಸ್ಸಿನ ಶಿಖರದಂಚು ತಲುಪಬಲ್ಲ ಹಿಟ್ ಅಲ್ಲದ್ದಿದ್ದರೂ.. ಭಟ್ಟರನ್ನ ಇಷ್ಟ ಪಡುವ ಮಂದಿಗೆ ಭಟ್ಟರಿಂದ ಸಿಗ ಬೇಕಿದ್ದೆಲ್ಲವ ಕೊಟ್ಟ ಸಿನಿಮಾ ಅದು ಕೂಡಾ..!! ಇನ್ನು ಡ್ರಾಮ ಈ ವರ್ಷದ ಅತಿ ದೊಡ್ಡ ಹಿಟ್ ಅನ್ನಿಸಿಕೊಲ್ಲಬಲ್ಲ ಚಿತ್ರ ಡ್ರಾಮ.. ಹಾಡುಗಳಿಂದ ಹಿಡಿದು.. ಡೈಲಾಗ್ಸ್.. ಡ್ರಾಮಾಟಿಕ್ ತಿರುವುಗಳು. ಪಾತ್ರಧಾರಿಗಳ ಆಕ್ಟಿಂಗ್.. ಅಲ್ಲಲ್ಲಿ ಹೌದು ಅನ್ನಿಸೋ, ತೀರಾ ಸಿಂಪಲ್ ಸಿಂಪಲ್ ಅನ್ನಿಸೋ ದೊಡ್ಡ ದೊಡ್ಡ ಸತ್ಯಗಳು.. ಟೋಟಲಿ ಹಿಟ್ ಅಷ್ಟೇ. ಯಶ್ ಗೆ ಖಂಡಿತ ಜೀವ ಕೊಟ್ಟ ಹೆಸರು ಕೊಟ್ಟ ಸಿನಿಮಾ.

 
ಇಂತಿಪ್ಪ ಭಟ್ಟರ ಅಮೋಘ ಅಭಿಮಾನಿಯಾದ ನಾವ್ಗಳು.. ಅವರ ಮತ್ತೋರ್ವ ಅತ್ಯದ್ಭುತಪೂರ್ವಭಿಮಾನಿ ರಾಘವರನ್ನು ನೋಡಿದ ಮೇಲೆ ನಮ್ಮೊಳಗೆ ಭಟ್ಟರ ಮೇಲೆ ಸಣ್ಣ ಮತ್ಸರದ ಬೀಜ ಬಿದ್ದು ಮೊಳಕೆಯೊಡೆದು ಮರವಾಗಿ ಬೆಳೆದದ್ದು ಯಾಕೆ ಅಂತ ಗೊತ್ತಾಗಿರಲಿಕ್ಕಿಲ್ಲ ನಿಮಗೆ.. ಹೇಳ್ತೀನಿ ಕೇಳಿ..!!

ಅಲ್ಲಾ ನಾವ್ಗಳು ಕೂಡ ಅವರ ಕಟ್ಟಾ ಅಭಿಮಾನಿ ಗಳೇ.. ಹಾಡುಗಳ ಅರಾಧಕರೆ.. ಮಾತುಗಳಿಗೆ ಮಸೋತವರೆ..!! ಆದ್ರೆ ಈಚೀಚೆಗೆ ಭಟ್ಟರು ಬರೆದದ್ದು ಯಾವ್ದು.. ರಾಘವ ಬರೆದದ್ದು ಯಾವ್ದು ಅಂತ ನಮ್ಮನ್ನ ನಾವೇ ಕನ್ಫ್ಯೂಷಿಯಸ್ ಲೆವೆಲ್ ಗೆ ಕನ್ಫ್ಯೂಸ್ ಮಾಡೋ ಆ ಬರಹಗಳು & ಅಂಥಾ ಬರಹಗಳನ್ನ ಬರೀ ರಾಘವನಿಂದ ಮಾತ್ರ ಬರೆಸ ಬಹುದಾದಂಥ ಒಂದು ಅತಿರಿಕ್ತ ವರವನ್ನ ಬರೀ ರಾಘವನಿಗೆ ಮಾತ್ರ ಕೊಟ್ಟ ಭಟ್ರು,, ನಮಗೆಲ್ಲ ತೀರಾ ಮೋಸ ಮಾಡಿ ಬಿಟ್ರು[ಅನ್ನಿಸ್ತಿದೆ]..!! ನಾವೆಲ್ಲಾ ಅವರ ಅಭಿಮಾನಿಗಳು ಅಂದ್ಮೇಲೆ.. ಎಲ್ರು ಒಂದೇ ಥರ ತಾನೇ ಇರ್ಬೇಕು..?? ಇದೇನು ಒಂದ್ ಕಣ್ಣಿಗೆ ಸುಣ್ಣ.. ಒಂದ್ ಕಣ್ಣಿಗೆ ಬೆಣ್ಣೆ ಹಚ್ಚೋದೇ ನಮ್ ಭಟ್ರು.. ;) ;) ಯಾಕಂದ್ರೆ ಭಟ್ಟರೇ ಬರೆದರೇನೋ ಅನ್ನಿಸುವಷ್ಟು.. ಭಟ್ಟರನ್ನ ಆವಾಹಿಸಿಕೊಂಡೇ ಬರೆದರೇನೋ ಅನ್ನುವಷ್ಟು ಎಫೆಕ್ಟ್ ನ ಆ ಚುರುಮುರಿ ಬರಹಗಳನ್ನ ಕಂಡ ನಮ್ಮಂತ ಭಟ್ಟರ ಅಭಿಮಾನಿ ಓದುಗರ ಹೊಟ್ಟೆಯೊಳಗಿನ [ಹೊಟ್ಟೆ ಉರಿಯ] ಸಂಕಟ ಹೊಟ್ಟೆಯೊಳಗೆ ನಿಲ್ಲದೆ ಹೊರ ಬರ್ತಾ ಇರೋ ಪರಿ ಇದು..!! ನಿಮಗೆ ಹೊಗೆ ಹೊರಗೆಲ್ಲೂ ಕಾಣಿಸಿರ್ಲಿಕ್ಕಿಲ್ಲ.. ಆದ್ರೆ ಒಳಗಡೆ ಧಗೆ ಮಾತ್ರ ಆರ್ತಾ ಇಲ್ಲ..!!

ರಾಘವ ಈಗ ತೊಡೆ ತಟ್ಟಿ ಹೇಳ್ತೀನಿ ಕೇಳು .. ಹೌದು ನೀನಂದ್ರೆ ನನಗೆ ಒಂದಿಡೀ ರಾಜ್ಯವನ್ನ ಸುಟ್ಟು ಹಾಕೋ ಅಷ್ಟು ಹೊಟ್ಟೆ ಉರಿ.. ನಿನ್ ಬರಹ ಗಳನ್ನ ಕಂಡ್ರೆ.. :) :) ನೀನೇನಾದ್ರೂ ಹುಡುಗಿ ಆಗಿದ್ದಿದ್ರೆ ಬಹುಷಃ ಮಂಡಿಯೂರಿ ರೋಸ್ ಕೊಡ್ತಿದ್ದೆ.. ಹುಡುಗ ಆಗಿ ಹುಟ್ಟಿ ಬಿಟ್ನಲ್ಲ ಆ ತಪ್ಪಿಗೆ ನಿನ್ ಮುಂದೆ ನಿಂತು ಬರೀ ಪೋಸ್ ಕೊಡೋಕಷ್ಟೇ ಸಾಧ್ಯ.. ನಗಬೇಡ.. ಹೊಟ್ಟೆ ಉರಿ ಇನ್ನು ಜಾಸ್ತಿ ಆಗ್ತಾ ಇದೇ..!!

ರಾಘು ನೀನು ಬರೆಯೋದೆಲ್ಲ ನಿನ್ ರಗಳೆಗಳಾ..?? ಅಥವಾ ಭಟ್ಟರ ಬರವಣಿಗೆ ಎದುರು ನೀನ್ ನಿಂತು ಸಾರ್ತಾ ಇರೋ ರಣ ಕಹಳೆ ಗಳಾ ಅನ್ನೋದೇ ದೊಡ್ಡ ಅನುಮಾನ..?? ಅದು ನಿಜಾನೆ.. ತೀರಾ ಇತ್ತೀಚಿಗೆ ನಮ್ ಭಟ್ರು ಸ್ವಲ್ಪ ಸೋತಿದಾರೆ ಅನ್ನಿಸ್ತು [ಅನ್ಸೋದೆನು ನಿಜಾನೆ..!!]. ಆದ್ರೆ ಈಗ ಹೇಳ್ತೀನಿ ಇದರಲ್ಲಿ ಸಮ್ ತಿಂಗ್ ಸಮ್ ತಿಂಗ್ ಇದೇ.. ಯಾರದೋ ಕೈವಾಡ ಇದೇ.. ಅವ್ರು ಸೋಲ್ತಿಲ್ಲ.. ಸೋಲಿಸ್ಪಡ್ತಾ ಇದಾರೆ!! ಇದರ ಪರಿಣಾಮ ವಾಗಿ ನೀನೇನಾದ್ರೂ ಮುಂದೆ ಭಟ್ಟರ ಥರ ದೊಡ್ಡ ವ್ಯಕ್ತಿ ಆದ್ಯೋ ನಾವ್ ಸುಮ್ನಿರೋಲ್ಲ ನೋಡು.. ;) ;) ;)

ರಾಘು ನಿನ್ ಬ್ಲಾಗ್ ನೋಡಿದೆ.. ಹೊಟ್ಟೆ ಉರಿ ತಡೆಯೋಕಾಗದ ನೋವಲ್ಲಿ ಇಷ್ಟುದ್ದ ಬರೆದು ಬಿಟ್ಟೆ ಕ್ಷಮೆ ಇರಲಿ.. ;) ;) ಏನ್ ಬರಿತಿಯಪ್ಪ..!! ಅಬ್ಭಾ.. ಅಲ್ಲಿ ಇಲ್ಲಿ ಆಗೊಂದು ಈಗೊಂದು ನೀನ್ ಹಾಕೋ ಸಣ್ಣ ಸಣ್ಣ ಕಾಮೆಂಟ್ಸ್ ಗೇನೇ ನಿನ್ ಮೇಲೆ ಹೊಟ್ಟೆ ಉರಿ ಬೆಳೆಸ್ಕೊಂಡು ಮುಚ್ಚಿಟ್ಕೊಂಡು ಹಲ್ಕಿರಿತಾ ಮಾತಾಡ್ತಿದ್ದ ನನಗೆ.. ನಿನ್ ಬ್ಲಾಗ್ ತೋರ್ಸಿ.. ಎಲ್ಲೋ ಸಣ್ಣಗೆ ಹೋಗೆ ಆಡ್ತಿದ್ದ ಹೊಟ್ಟೆ ಉರಿಯ ಹೋಗೆ ಧಿಡೀರ್ ಅಂತ ಕಾಡ್ಗಿಚ್ಚಿನ ಲೆವೆಲ್ ಗೆ ವಿಸ್ತರಿಸಿದ ನಿನ್ ಬರಹ ಕಂಡು ಇನ್ನೇನು ಹೇಳೋಕಾಗ್ದೆ ತೆಪ್ಪಗೆ ಕೂರೋದೊಂದೇ ನಮ್ ಪಾಲಿಗೆ ಈಗ ಉಳ್ಕೊಂಡಿರೋ ಕೆಲಸ.. Awsome ರಾಘು.. ನಿನ್ ಬರಹಗಳು ಮೈಂಡ್ blowing .. ನಾನ್ ನಿಜವಾಗಲು ಸಂತೋಷ ಪಡ್ತೀನಿ.. To have a Friend like U. :) ಅಡ್ಡ ಬಿದ್ದೆ ಧಣೀ ನಿನ್ ಪಾಂಡಿತ್ಯಕ್ಕೆ.. ಏನೋ ಬಡುವ್ರು ಅಲ್ಲೋ ಇಲ್ಲೋ ತಿಳೀದೇ 2 ಮಾತು ದೊಡ್ಡದಾಗಿ ಆಡಿದ್ರೆ ಉಗುಳಿನ ಜೊತೆ ಹಾಗೆ ನುಂಗಿ ಕೊಂಡು ಅನ್ನೋದು ಅನ್ನೋದು ನಮ್ಮ ಮನವಿ..

ವೆಲ್.. ಹಸ್ಕೊಂಡವನ ಎದುರು ಪಂಚ ಪರಮಾನ್ನ ಇಟ್ಟಂಗೆ ಇಟ್ಟೆ ನೋಡು ನಿನ್ ಬ್ಲಾಗ್ ನ.. ಭಟ್ರು ಕನಸಲ್ಲಿ ಬಂದದ್ದು & ನಮ್ ಭಾವ ಸಿಂಚನ ಕುರಿತಾದ ಎರಡೂ ಬರಹಗಳೂ.. ಈಗ್ಲೂ ಅನ್ ಬಿಲೀವಬಲ್ ಅದನ್ನ ನೀನೇನಾ ಬರದಿದ್ದಾ ಅಂಥಾ..?? ನೆನಪಿರಲಿ ಇನ್ಮೇಲೆ ಇದೇ ಥರದ ಊಟ ಹಾಕೋದಿದ್ರೆ ಮಾತ್ರ ಊಟ ಹಾಕು.. ಇಲ್ದಿದ್ರೆ ನಿಮ್ಮನೆ ಊಟವೇ ಬೇಡ ಅಷ್ಟೇ.. :) :)

ಎಲ್ಲಾದ್ರು ಬಾಯ್ತಪ್ಪಿ.. ಆಯಾ ತಪ್ಪಿ.. ಮನಸಿನ ಹಿಡಿತ ತಪ್ಪಿದ ಮಾತುಗಳು ಕಂಡು ಬಂದಿದ್ದಲ್ಲಿ ಕ್ಷಮೆ ಇರಲಿ ರಾಘವ.. ಬರವಣಿಗೆಯ ರಭಸದಲ್ಲಿ ಅಲ್ಲಿ ಇಲ್ಲಿ ಎಡವಿರಬಹುದು ಕ್ಷಮೆ ಇರಲಿ.. ನಿನ್ನಿಂದ ಇನ್ನು ಹೆಚ್ಚೆಚ್ಚು ಬರಹಗಳ ನಿರೀಕ್ಷೆಯಲ್ಲಿಹ ನಿನ್ನ ನಿರಂತರಾನಂತಪೂರ್ವ ಅಭಿಮಾನಿ..
 
- ಸತೀಶ್ ನಾಯ್ಕ್
ಭದ್ರಾವತಿ.
 
ಮಾತುಗಳನ್ನ ಸರಾಗವಾಗಿ ಪದಕ್ಕಿಳಿಸಿ ಬಿಡೋ ಅಪರೂಪದ ಪ್ರತಿಭೆ ರಾಘವ ಚಂದ್ರನ ಬಗ್ಗೆ ಸುಮಾರು ಐದಾರು ತಿಂಗಳ ಹಿಂದೆ ರಾಘವನಿಗೆ ನಾ ಬರೆದ ಸಣ್ಣ ಪತ್ರವಿದು. ನೀವೊಮ್ಮೆ ಅವನ ಬರಹಗಳನ್ನ ಕಂಡದ್ದೇ ಆದರೆ ಖಂಡಿತ ನಿಮ್ ಕೈಲಿ ಅವನನ್ನ ಇಷ್ಟ ಪಡದೆ ಇರೋಕೆ ಸಾಧ್ಯವೇ ಇಲ್ಲ. ಅಷ್ಟು ಕ್ಯಾಚೀ & ಸಿಹಿ ಸಿಹಿಯ ಬರವಣಿಗೆ ಅವನದ್ದು. ಅಷ್ಟಿದ್ರೂ.. ನಾನೇನು ಅಲ್ಲ.. ನನಗೇನು ಗೊತ್ತಿಲ್ಲ.. ನಿಮ್ಮುಂದೆ ನಾವ್ಯಾವ ಗಿಡದ ತೊಪ್ಪಲು ಅನ್ನೋ ಮಹಾನ್ ಗುಣ ನಮ್ ರಾಘವನದ್ದು..!! ನಾ ಬ್ಲಾಗ್ ಸೃಷ್ಟಿಸಲು ಏಕ ಭಗೀರಥನಂತೆ ಕೂತು ತಪಸ್ಸು ಮಾಡಿ ನನ್ನ ಮನವೊಲಿಸಿ.. ಇಂದು ಬ್ಲಾಗ್ ಬರೆಯಲು ನನ್ನ ಅಣಿ ಮಾಡಿಹ ರಾಘವನ ಮೇಲಣ ಅಖಂಡ ಪ್ರೀತಿಗಾಗಿ ಈ ಬರಹವನ್ನ ಇದನ್ನ ನಿಮ್ಮೆಲ್ಲರ ಬಳಿ ಕೂತು ಹಂಚಿಕೊಳ್ಳುವ ಮನಸಾಯಿತು.
 
ರಾಘವನ ಸವಿ ಸವಿ ರಗಳೆಗಳನ್ನ ಓದಲು ಈ ತಾಣಕ್ಕೆ ಭೇಟಿ ಕೊಡಿ. http://raghavana-ragalegalu.blogspot.com/ ಖಂಡಿತ ನಿಮ್ಮ ಸಮಯ ವ್ಯರ್ಥವಾಗದು ಅನ್ನೋ ಭರವಸೆ ನಾನು ಕೊಡ್ತೀನಿ. ಸಣ್ಣ ಸಣ್ಣ ಕೀಟಲೆ ಮಾತುಗಳಿಂದಲೇ ದೊಡ್ಡ ದೊಡ್ದದ್ದನ್ನ ಅರ್ಥ ಮಾಡಿಸುತ್ತಾ ಸಾಗೋ ಅವನ ಕಲೆ ಅವನಿಗಷ್ಟೇ ಸಿದ್ಧಿ. ಯಾರ ಕಣ್ಣಿಗೂ ಬೀಳದ ಈ ಅನನ್ಯ ಪ್ರತಿಭೆ.. ಸಿಕ್ಕ ನಾಲ್ಕು ಜನರ ಪ್ರೀತಿಗ ಸದಾ ಹಾತೊರೆಯುವ ಅವನ ಹಿಡಿ ಜೀವಕ್ಕೆ.. ಅವನ ಹಂಬಲಕೆ.. ಅವನ ಸಾಗರದಾಳದ ಪ್ರೀತಿಗೆ ನಾನೇನು ಗೀಚಿದರೂ ಕಮ್ಮಿಯೇ..
 
ನಿಮ್ಮ ಅಮೂಲ್ಯ ಸಮಯ & ಸಹನೆಯ ಓದಿಗೆ ನನ್ನದೊಂದು ಸಲಾಂ. ಬ್ಲಾಗ್ ಕಡೆ ಪುನಃ ಪುನಃ ಬರ್ತಾ ಇರಿ. ಧನ್ಯವಾದಗಳು.